ಖಾದ್ಯ ಉಪ್ಪು

ಉಪ್ಪು ಪ್ರಾಣಿಜೀವನಕ್ಕೆ ಅವಶ್ಯಕವಾದ ಒಂದು ಖನಿಜ.

ಖಾದ್ಯ ಉಪ್ಪು ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ ಅನ್ನು ಒಳಗೊಂಡಿರುತ್ತದೆ. ೮೦೪º ಸೆಂ.ಗ್ರೇ. ಉಷ್ಣತೆಯಲ್ಲಿ ಕರಗುತ್ತದೆ. ದ್ರವಿತವಸ್ತು ೧೪೧೩º ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುತ್ತದೆ. ಮಾನವನು ಆಹಾರದಲ್ಲಿ ಬಳಸುವ ಉಪ್ಪು ಹಲವು ಬಗೆಯಲ್ಲಿ ತಯಾರಾಗುತ್ತವೆ. ಇವುಗಳಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು (ಟೇಬಲ್ ಸಾಲ್ಟ್)ಮತ್ತು ಅಯೊಡಿನ್ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪು ಬಿಳಿ, ತೆಳು ಗುಲಾಬಿ ಅಥವಾ ತೆಳುಗಪ್ಪು ಬಣ್ಣದ ಹರಳು. ಉಪ್ಪನ್ನು ಸಾಮಾನ್ಯವಾಗಿ ಸಮುದ್ರನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ. ಬಂಡೆಗಳಿಂದ ಪಡೆಯುವ ಉಪ್ಪು ತನ್ನಲ್ಲಿರುವ ಇತರ ಖನಿಜಗಳ ಕಾರಣದಿಂದಾಗಿ ಮಾಸಲು ಕಪ್ಪು ಬಣ್ಣ ಹೊಂದಿರಬಹುದು.

ಖಾದ್ಯ ಉಪ್ಪು
ಚೀನಾದಲ್ಲಿ ಲವಣಶಿಲೆಯ ರಸವನ್ನು ಕುದಿಸಿ ಶುದ್ಧ ಉಪ್ಪಿನ ತಯಾರಿಕೆ.

ಉಪ್ಪಿನ ಮೂಲ ಧಾತುಗಳಾದ ಸೋಡಿಯಮ್ ಮತ್ತು ಕ್ಲೋರಿನ್‍ಗಳೆರಡೂ ಮಾನವನೂ ಸೇರಿದಂತೆ ಎಲ್ಲ ಜೀವಿಗಳ ಉಳಿವಿಗೆ ಅವಶ್ಯವಾಗಿವೆ. ಉಪ್ಪು ಶರೀರದ ಜಲಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಆದರೆ ಈ ಎರಡು ಧಾತುಗಳನ್ನು ಉಪ್ಪಿನ ರೂಪದಲ್ಲಿಯೇ ಸೇವಿಸಬೇಕಾದ ಪ್ರಮೇಯವೇನಿಲ್ಲ. ಇತರ ಆಹಾರ ಪದಾರ್ಥಗಳ ಮೂಲಕ ಸಹ ಇವೆರಡು ಧಾತುಗಳನ್ನು ಮಾನವನು ಪಡೆಯಬಹುದಾಗಿದೆ. ವಿಶ್ವದ ಕೆಲವೆಡೆ ಹಲವು ಮೂಲನಿವಾಸಿಗಳು ಉಪ್ಪನ್ನು ಬಲು ಕಡಿಮೆ ಪ್ರಮಾಣದಲ್ಲಿ ಬಳಸುವುದು ಕಂಡು ಬಂದಿದೆ.

ಉಪ್ಪು ಆಹಾರದ ಮೂಲ ರುಚಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಹಲವು ಬಾರಿ ಸಿದ್ಧ ಆಹಾರವನ್ನು ಕೆಡದಂತೆ ರಕ್ಷಿಸುವಲ್ಲಿ ಉಪ್ಪನ್ನು ಬಳಸಲಾಗುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆ ಶರೀರಕ್ಕೆ ಹಾನಿಯುಂಟುಮಾಡಬಲ್ಲುದು. ಅತಿ ರಕ್ತದೊತ್ತಡದಂತಹ ಆರೋಗ್ಯದ ಸಮಸ್ಯೆಗಳನ್ನು ಉಪ್ಪು ಉಂಟುಮಾಡುತ್ತದೆ.

ಸಾಮಾನ್ಯವಾಗಿ ಸಮುದ್ರದ ನೀರು ಲವಣಯುಕ್ತವಾಗಿರುವ ಪ್ರಮುಖ ಕಾರಣ ಸೋಡಿಯಂ ಕ್ಲೋರೈಡ್ ಆಗಿದೆ. ಹಲವಾರು ಬಹುಕೋಶೀಯ ಜೀವಿಗಳಲ್ಲಿ ಇರುವ ಸಹಕೋಶೀಯ ದ್ರಾವಣವಾಗಿದೆ. ಇದನ್ನು ಸಾಮಾನ್ಯವಾಗಿ ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕಾರ್ಯಕ್ಕಾಗಿ ಹಾಗೂ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹಲವಾರು ಕೈಗಾರಿಕೆಗಳ ಪ್ರಕ್ರಿಯೆಗಳಲ್ಲಿ ಸೋಡಿಯಂ ಕ್ಲೋರೈಡ್ ನ್ನು ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ರಾಸಾಯನಿಕ ವಿಶ್ಲೇಷಣೆಗೆ ಪೂರಕವಾಗಿ ಸೋಡಿಯಂ ಕ್ಲೋರೈಡ್‍ನ್ನು ಬಳಸಲಾಗುತ್ತದೆ. ಹಿಮಚ್ಛಾದಿತ ಪ್ರದೇಶಗಳಲ್ಲಿ ರಸ್ತೆಯಲ್ಲಿ ಜಮೆಯಾಗಿರುವ ಮಂಜನ್ನು ಕರಗಿಸಲು ಉಪ್ಪನ್ನು ಪ್ರಮುಖವಾಗಿ ಬಳಸುತ್ತಾರೆ.

ಇತಿಹಾಸ

ಆಹಾರವನ್ನು ಕೆಡದಂತೆ ಕಾಪಾಡುವ ಉಪ್ಪಿನ ಗುಣವು ಮಾನವ ನಾಗರಿಕತೆಯ ಪ್ರಾರಂಭದಲ್ಲಿಯೇ ಕಂಡುಕೊಳ್ಳಲ್ಪಟ್ಟಿತು. ಇದರಿಂದಾಗಿ ಆಯಾ ಋತುಗಳಲ್ಲಿ ದೊರೆಯುವ ಆಹಾರವನ್ನು ಮಾತ್ರ ಸೇವಿಸಬೇಕಾದ ಅಸಹಾಯಕತೆಯನ್ನು ನಿವಾರಿಸಲಾಯಿತು. ಜೊತೆಗೆ ದೀರ್ಘಪ್ರಯಾಣವನ್ನು ಕೈಗೊಳ್ಳುವಾಗ ಉಂಟಾಗುತ್ತಿದ್ದ ಆಹಾರದ ಸಮಸ್ಯೆ ಸಹ ಇಲ್ಲವಾಯಿತು. ಅಂದಿನ ಕಾಲದಲ್ಲಿ ಉಪ್ಪು ಬಲು ವಿರಳವಾಗಿ ದೊರೆಯುತ್ತಿದ್ದ ವಸ್ತುವಾದ್ದರಿಂದ ಬಹುಮೂಲ್ಯ ವಸ್ತುವಾಗಿದ್ದಿತು. ಇತಿಹಾಸದುದ್ದಕ್ಕೂ ಉಪ್ಪು ಪ್ರಮುಖ ಮತ್ತು ಬೆಲೆಬಾಳುವ ವ್ಯಾಪಾರಿ ಸರಕಾಗಿತ್ತು. ೧೯ನೆ ಶತಮಾನದವರೆಗೆ ಉಪ್ಪು ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸುವ ಮತ್ತು ಯುದ್ಧಗಳನ್ನು ಸಹ ಹುಟ್ಟುಹಾಕುವ ವಸ್ತುವಾಗಿದ್ದಿತು. ಅಂದಿನ ಕಾಲದಲ್ಲಿ ಉಪ್ಪಿನ ಮೇಲೆ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು.

ಕೃತಕವಾಗಿ ಶೈತೀಕರಣಕ್ಕಾಗಿ, ಆಹಾರವನ್ನು ಸಂರಕ್ಷಿಸಲು -ವಿಶೇಷವಾಗಿ ಮಾಂಸವನ್ನು ಸಂರಕ್ಷಿಸಲು, ಸಾವಿರಾರು ವರ್ಷಗಳಿಂದ ಉಪ್ಪನ್ನು ಬಳಸಲಾಗುತ್ತಿದೆ. ಕ್ರಿಸ್ತಪೂರ್ವ ೬೦೫೦ಕ್ಕೂ ಮುಂಚೆ ನವಶಿಲಾಯುಗದ ಮಾನವನು ಉಪ್ಪನ್ನು ಉತ್ಪಾದಿಸುತ್ತಿದ್ದ ಕುರಿತು ರೋಮಾನಿಯಾ ದೇಶದಲ್ಲಿನ ಉತ್ಖನನದಲ್ಲಿ ತಿಳಿದುಬಂದಿದೆ. ಚೀನಾ ದೇಶದ ಶಾಂಘೈ ಬಳಿಯ ಕ್ಷೇಚೀ ಸರೋವರ(Xiechi Lake) ಕ್ರ.ಪೂ ೬೦೦೦ ವರ್ಷಗಳ ಹಿಂದೆ ಉಪ್ಪಿನ ಉತ್ಪಾದನೆ ಇದ್ದ ಕುರಿತ ಸಾಕ್ಷ್ಯಗಳು ದೊರೆತಿವೆ.

ಸಸ್ಯ ಜನ್ಯವಾದುದಕ್ಕಿಂತ ಪ್ರಾಣಿಜನ್ಯವಾದ ಮಾಂಸ, ರಕ್ತ ಹಾಗೂ ಹಾಲಿನಲ್ಲಿ ಉಪ್ಪಿನ ಅಂಶವು ಹೆಚ್ಚಾಗಿರುತ್ತದೆ. ಆದುದರಿಂದ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸುವವರು ಉಪ್ಪನ್ನು ಹೆಚ್ಚುವರಿಯಾಗಿ ಬಳಸಲೇಬೇಕಾಗುತ್ತದೆ.

ಕ್ರಿ. ಪೂ. ೪೦೦೦ದ ಸುಮಾರಿಗೆ ಉಪ್ಪಿನ ಬಳಕೆ ಚಾಲ್ತಿಯಲ್ಲಿತ್ತೆಂದು ತಿಳಿದುಬಂದಿದೆ. ಪ್ರಾಚೀನ ರೋಮ್ ಸಾಮ್ರಾಜ್ಯದಲ್ಲಿ ಉಪ್ಪನ್ನು ಹಣವಾಗಿ ಬಳಸಲಾಗುತ್ತಿತ್ತು. "ಸಂಬಳ" ಎನ್ನುವುದರ ಆಂಗ್ಲ ರೂಪವಾದ "ಸ್ಯಾಲರಿ" ಪದದ ಮೂಲವು ಉಪ್ಪಿನ ಮೂಲಕ ನೀಡಲಾದದ್ದು ಎಂಬರ್ಥ ಕೊಡುವ "ಸಲಾರಿಯಮ್" ಎಂಬ ಲ್ಯಾಟಿನ್ ಭಾಷೆಯ ಶಬ್ದ. ರೋಮ್‍ನ ಸೈನಿಕರು ಮತ್ತು ಕೆಲಸಗಾರರಿಗೆ ಸಂಬಳವನ್ನು ಉಪ್ಪಿನ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಈ ರೀತಿ ಪಡೆದ ಉಪ್ಪನ್ನು ಕಾಪಾಡಿಕೊಳ್ಳುವುದು ಮಾತ್ರ ಸಾಕಷ್ಟು ತ್ರಾಸದಾಯಕವಾಗಿದ್ದಿತು. ಅಂದಿನ ಕಾಲದಲ್ಲಿ ವರದಕ್ಷಿಣೆಯ ರೂಪದಲ್ಲಿ ಸಹ ಉಪ್ಪನ್ನು ನೀಡಲಾಗುತ್ತಿತ್ತು.

ಪ್ರಾಚೀನ ಮಾಲಿ ಸಾಮ್ರಾಜ್ಯದಲ್ಲಿ ೧೨ನೆಯ ಶತಮಾನದ ಕಾಲದಲ್ಲಿ ವ್ಯಾಪಾರಿಗಳು ಚಿನ್ನವನ್ನು ನೀಡಿ ಉಪ್ಪನ್ನು ಕೊಳ್ಳುತ್ತಿದ್ದರು. ನಂತರ ಈ ಉಪ್ಪನ್ನು ಹೇರಳ ಬೆಲೆಗೆ ಯುರೋಪಿಗೆ ರಫ್ತು ಮಾಡಿ ಅಗಾಧ ಸಂಪತ್ತನ್ನು ಗಳಿಸುತ್ತಿದ್ದರು. ಈ ವಾಣಿಜ್ಯ ಕ್ರಮದಿಂದಾಗಿ ಮಾಲಿಯ ಟಿಂಬಕ್ಟು ಜಗತ್ತಿನ ಅತಿ ಸಿರಿವಂತ ನಗರವಾಗಿ ಮೆರೆಯಿತು.

ಫಿನೀಷಿಯನ್ ಕಾಲದಿಂದಲೂ ಸಮುದ್ರದ ನೀರಿನಿಂದ ಉಪ್ಪನ್ನು ತಯಾರಿಸುತ್ತಿದ್ದ ಬಗ್ಗೆ ಪುರಾವೆಗಳು ದೊರೆತಿವೆ. ಇವರು ಉಪ್ಪನ್ನು ಇತರ ನಾಗರಿಕ ಸಮಾಜಗಳಿಗೆ ರಫ್ತು ಸಹ ಮಾಡುತ್ತಿದ್ದರು. ಕ್ರಮೇಣ ಸಮುದ್ರದಿಂದ ಉಪ್ಪಿನ ತಯಾರಿಕೆ ವ್ಯಾಪಕವಾಗುತ್ತಿದ್ದಂತೆ ಉಪ್ಪಿನ ಲಭ್ಯತೆ ಹೆಚ್ಚತೊಡಗಿ ಅದರ ಬೆಲೆ ಮತ್ತು ಪ್ರಾಮುಖ್ಯ ಕುಸಿಯತೊಡಗಿತು. ಅಂದು ಸಮುದ್ರದ ನೀರನ್ನು ಭೂಪ್ರದೇಶಕ್ಕೆ ಹಾಯಿಸಿ ಒಣಗಲು ಬಿಡುತ್ತಿದ್ದರು. ನೀರು ಒಣಗಿದ ನಂತರ ಉಳಿಯುತ್ತಿದ್ದ ಉಪ್ಪಿನ ಹರಳುಗಳನ್ನು ಸಂಗ್ರಹಿಸಿ ಉಪಯೋಗಿಸುತ್ತಿದ್ದರು.

ಭಾರತದಲ್ಲಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವೊಂದನ್ನು ನಡೆಸಿದರು. ಇದು ದಂಡಿ ಯಾತ್ರೆಯೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಘನ ಸೋಡಿಯಂ ಕ್ಲೋರೈಡ್‍ನ ಗುಣಗಳು

ಘನ ಸೋಡಿಯಂ ಕ್ಲೋರೈಡ್‍ಗಳಲ್ಲಿ ಪ್ರತಿಯೊಂದು ಅಯಾನುಗಳು ಆರು ವಿಲೋಮ ಅಯಾನುಗಳಿಂದ ಬಂಧಿತವಾಗಿರುತ್ತದೆ. ಸಮ ಅಷ್ಟಮುಖಿ ಮಾದರಿಯ ಶೃಂಗಗಳಲ್ಲಿ ಈ ಅಯಾನುಗಳು ಹತ್ತಿರ ಹತ್ತಿರ ಸೇರಿರುತ್ತವೆ. ಈ ವಿನ್ಯಾಸವನ್ನು ರೋಕ್ ಸಾಲ್ಟ್ ಕ್ರಿಸ್ಟಲ್ ಸ್ಟ್ರಕ್ಚರ್ (rock-salt crystal structure) ಎಂದು ಕರೆಯಲಾಗಿದೆ.

ಉಪ್ಪು ಘನಾಕೃತಿಯ, ಬಣ್ಣವಿಲ್ಲದ ಹರಳು. ನೀರಿನಲ್ಲಿ ವಿಲೀನವಾದರೂ ಮದ್ಯಸಾರದಲ್ಲಿ ವಿಲೀನವಾಗದು. ಇದರ ದ್ರಾವಣತೆ (ಸಾಲ್ಯುಬಿಲಿಟಿ) ಉಷ್ಣತೆಯ ವ್ಯತ್ಯಾಸದಿಂದಾಗಿ ಅಷ್ಟೇನೂ ಹೆಚ್ಚಾಗುವುದಿಲ್ಲ. ಉದಾಹರಣೆಗೆ, ೧೦೦ ಗ್ರಾ. ನೀರನ್ನು ಪರ್ಯಾಪ್ತಗೊಳಿಸಲು ೦º ಸೆಂ.ಗ್ರೇ.ನಲ್ಲಿ ೩೫.೭ ಗ್ರಾ. ಮತ್ತು ೧೦೦º ಸೆಂ.ಗ್ರೇ.ನಲ್ಲಿ ಕೇವಲ ೩೯.೮ ಗ್ರಾ. ಉಪ್ಪು ಸಾಕು.

ಘನ ಸೋಡಿಯಂ ಕ್ಲೋರೈಡ್ ನ ದ್ರವನ ಬಿಂದು ೮೦೧ °ಸೆ. ಆಗಿರುತ್ತದೆ.

ಉಪ್ಪನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ಕಾಯಿಸಿದಾಗ ಹೈಡ್ರೊಜನ್ ಕ್ಲೋರೈಡ್, ಮ್ಯಾಂಗನೀಸ್‌ ಡೈಆಕ್ಸೈಡ್, ಇದ್ದರೆ ಕ್ಲೋರಿನ್ ಅನಿಲವೂ ಬಿಡುಗಡೆಯಾಗುತ್ತದೆ. ಕೈಗಾರಿಕಾ ಪ್ರಮಾಣದಲ್ಲಿ ಹೈಡ್ರೋಜನ್ ಕ್ಲೋರೈಡ್ ತಯಾರಿಸುವುದು ಹೀಗೆಯೇ. ದ್ರವಿತ ಉಪ್ಪನ್ನು ವಿದ್ಯುದ್ವಿಭಜನೆಗೆ ಒಳಪಡಿಸಿದರೆ ಧನ ಧ್ರುವದಲ್ಲಿ ಕ್ಲೋರಿನ್ ಋಣಧ್ರುವದಲ್ಲಿ ಸೋಡಿಯಂ ಲೋಹ ಬರುತ್ತದೆ. ಇದಕ್ಕೆ ಡೌನ್ ವಿಧಾನವೆನ್ನುವರು. ಪಾದರಸದ ಋಣಧ್ರುವವನ್ನು ಬಳಸಿ, ಸೋಡಿಯಂ ಕ್ಲೋರೈಡ್ ಕ್ಷಾರವೂ ಜಲಜನಕ (ಹೈಡ್ರೊಜನ್) ಮತ್ತು ಕ್ಲೋರಿನ್ ಉಪ ವಸ್ತುಗಳೂ ದೊರೆಯುತ್ತವೆ.

ಲವಣದ ದ್ರಾವಣ

ಸೋಡಿಯಂ(Na+) ಮತ್ತು ಕ್ಲೋರಿನ್(Cl−) ಈ ಅಯಾನುಗಳ ನಡುವಿನ ಆಕರ್ಷಣೆಯಯು ಘನಸ್ಥಿತಿಯಲ್ಲಿ ಗರಿಷ್ಟವಾಗಿದ್ದು, ನೀರಿನಂತಹ ಧ್ರುವೀಯ ದ್ರಾವಣಗಳು ಮಾತ್ರ ಕರಗುವಂತೆ ಮಾಡಬಲ್ಲವು. ವಿವಿಧ ದ್ರಾವಣಗಳಲ್ಲಿ ಸೋಡಿಯಂ ಕ್ಲೋರೈಡ್ ನ ಕರಗುವಿಕೆಯು ಈ ಕೆಳಗಿನಂತಿದೆ. 25° ಸೆಂಟಿಗ್ರೇಡ್ ವಾತಾವರಣದಲ್ಲಿ ಒಂದು ಲೀಟರ್ ನೀರು ಪ್ರತಿ ೧ ಗ್ರಾಂ NaCl ಆಗಿರುತ್ತದೆ.

ದ್ರಾವಣದ ಹೆಸರು ಕರಗುವಿಕೆಯ ಪ್ರಮಾಣ
ನೀರು ೩೬೦
ಗ್ಲೀಸರಿನ್ ೮೩
ಅಮೋನಿಯಾ ದ್ರಾವಣ ೩೦.೨
ಪಾರ್ಮಿಕ್ ಎಸಿಡ್ ೫೨
ಅಸಿಟೋನ್ ೦೦೦೦೪೨
ಪೋರ್ಮಾಮೈಡ್ ೯೪
ಮೆಥನಾಲ್ ೧೪
ಎಥನಾಲ್ ೦.೬೫
ಡೈಮಿಥೈಲ್ ಪಾರ್ಮಾಮೈಡ್ ೦.೪

ಸೋಡಿಯಂ ಕ್ಲೋರೈಡ್ ನೀರಿನಲ್ಲಿ ಕರಗಿದಾಗ Na+ ಮತ್ತುCl− ಅಯಾನುಗಳಾಗಿ ವಿಘಟನೆ ಹೊಂದುತ್ತದೆ. ಈ ಅಯಾನುಗಳು ಧ್ರುವೀಯ ಅಯಾನುಗಳೊಂದಿಗೆ ಸುತ್ತುವರೆಯುತ್ತವೆ. ಈ ದ್ರಾವಣವು ಲೋಹದ ಧಾತುವನ್ನೊಳಗೊಂಡ ಸಂಕೀರ್ಣ [Na(H2O)8]+ ಆಗಿರುತ್ತದೆ. ಪ್ರತಿಯೊಂದು ಕ್ಲೋರೀನ್ ಅಯಾನ್ ಗಳು ೬ ನೀರಿನ ಕಣಗಳೊಂದಿಗೆ ಸುತ್ತುವರಿದಂತೆ ಕಂಡುಬರುತ್ತವೆ. ಸೋಡಿಯಂ ಕ್ಲೋರೈಡ್ ದ್ರಾವಣದ ಗುಣಲಕ್ಷಣಗಳು ಶುದ್ಧ ನೀರಿನ ದ್ರಾವಣಕ್ಕಿಂತ ಭಿನ್ನವಾಗಿರುತ್ತದೆ. ಇದರ ಘನೀಭವನ ಬಿಂದು ೨೩.೩೧ ಆಗಿದೆ. ಪರ್ಯಾಪ್ತ ದ್ರಾವಣದ ಕುದಿಯುವ ಬಿಂದು 108.7 °C (227.7 °F).

ಉತ್ಪಾದನೆ

ಸುಮಾರು ೮೦೦೦ ವರ್ಷಗಳ ಹಿಂದೆ ಉಪ್ಪು ತಯಾರಿಸುತ್ತಿದ್ದ ಉಲ್ಲೇಖಗಳು ಲಭ್ಯ ಇವೆ. ರೋಮಾನಿಯಾದಲ್ಲಿ ಖನಿಜಯುಕ್ತ ಕೆರೆಗಳ ನೀರನ್ನು ಕುದಿಸಿ ಉಪ್ಪು ಪಡೆಯುತ್ತಿದ್ದ ಉಲ್ಲೇಖಗಳಿವೆ. ಪ್ರಾಚೀನ ಚೀನಾದಲ್ಲಿ, ಗ್ರೀಕರು, ರೋಮನ್ನರು, ಈಜಿಪ್ಟ್‌ನ ಇತಿಹಾಸದಲ್ಲಿ ಕೂಡಾ ಉಪ್ಪು ತಯಾರಿಕೆಯ ಉಲ್ಲೇಖಗಳಿವೆ. ಮೇಡಿಟರೇನಿಯನ್ನ ಸಾಗರದಲ್ಲಿ ದೋಣಿಗಳಲ್ಲಿ ಉಪ್ಪನ್ನು ಸಾಗಿಸಿರುವುದು, ಸಹಾರಾ ಮರುಭೂಮಿಗಳಲ್ಲಿ ಒಂಟೆಗಳ ಮೇಲೆ ಉಪ್ಪನ್ನು ಸಾಗಿಸಿರುವುದು ಹಾಗೂ ಉಪ್ಪು ಸಾಗಿಸುವ ಮಾರ್ಗಗಳೇ ರೂಪುಗೊಂಡಿರುವ ಉಲ್ಲೇಖಗಳು ಇತಿಹಾಸದ ಪುಟದಲ್ಲಿವೆ. ಉಪ್ಪಿಗಾಗಿ ಯುದ್ಧಗಳು ಸಂಭವಿಸಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಉಪ್ಪು ವಿಶೇಷವಾದ ಸ್ಥಾನವನ್ನು ಪಡೆದಿದೆ.

ಉಪ್ಪಿನ ಗಣಿಗಳಿಂದ ಉಪ್ಪನ್ನು ಉತ್ಪಾದಿಸುವುದು, ಸಮುದ್ರದ ನೀರನ್ನು ಭಾಷ್ಪೀಕರಿಸಿ ಉಪ್ಪನ್ನು ಪಡೆಯುವುದು ಖನಿಜಯುಕ್ತ ಕೆರೆಗಳಲ್ಲಿನ ನೀರಿನ ಮೂಲಕ ಉಪ್ಪು ಉತ್ಪಾದಿಸುವುದು ಪ್ರಮುಖವಾದ ವಿಧಾನಗಳಾಗಿವೆ. ಇದರ ಪ್ರಮುಖವಾದ ಕೈಗಾರಿಕಾ ಉತ್ಪನ್ನಗಳೆಂದರೆ ಕಾಸ್ಟಿಕ್ ಸೋಡಾ ಹಾಗೂ ಕ್ಲೋರಿನ್. ಪಾಲಿವಿನೈಲ್ ಕ್ಲೋರೈಡ್, ಪ್ಲಾಸ್ಟಿಕ್, ಪೇಪರ್ ಪಲ್ಪ್ ಮುಂತಾದವುಗಳ ಉತ್ಪಾದನೆಯಲ್ಲಿಯೂ ಉಪ್ಪಿನ ಬಹಳವಾದ ಬಳಕೆಯಿದೆ. ಸುಮಾರು ೨೦೦ ಮಿಲಿಯನ್ ಟನ್ ಪ್ರತಿವರ್ಷ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಕೇಲವ ೬ ಶೇಕಡಾದಷ್ಟು ಉಪ್ಪು ಮನುಷ್ಯನ ಬಳಕೆಗಾಗಿ ವಿನಿಯೋಗವಾಗುತ್ತದೆ. ಉಳಿದಂತೆ ರಸ್ತೆಗಳಲ್ಲಿ ಮಂಜು ಕರಗಿಸುವುದು, ಕೃಷಿ ಕ್ಷೇತ್ರ, ಮತ್ಸ್ಯ ಕ್ಷೇತ್ರದಲ್ಲಿ ಬಳಕೆಯಾಗುತ್ತದೆ. ಮನುಷ್ಯನ ಆಹಾರದಲ್ಲಿ ಬಳಕೆಯಾಗುವ ಉಪ್ಪು ಹರಳು ಉಪ್ಪು ರೂಪದಲ್ಲಿರುತ್ತದೆ. ಇತ್ತೀಚೆಗೆ ಅಯೋಡಿನ್ ಕೊರತೆಯನ್ನು ಹೋಗಲಾಡಿಸಲು ಅಯೋಡೈಸ್ಡ್ ಉಪ್ಪಿನ ಬಳಕೆ ಜನಪ್ರಿಯವಾಗುತ್ತಿದೆ. ಉಪ್ಪು ಹಲವಾರು ಸಂಸ್ಕರಿತ ಆಹಾರದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತಿದೆ.

ಸಮುದ್ರದ ನೀರಿನಿಂದ: ಸಮುದ್ರತೀರದಲ್ಲಿ ಅದರ ಹಿನ್ನೀರಿಗೆ ಹೊಂದಿಕೊಂಡಂತೆ ಅನುಕೂಲವಾದ ಪ್ರದೇಶವನ್ನು ಆಯ್ಕೆಮಾಡಿಕೊಂಡು ಮಣ್ಣಿನ ಅಡ್ಡಗಟ್ಟೆಗಳನ್ನು ಹಾಕಿ, ವಿವಿಧ ಮಟ್ಟದ ಕೊಳಗಳನ್ನು ನಿರ್ಮಿಸಲಾಗುವುದು. ಇವುಗಳ ನಡುವೆ ಕಾಲುವೆಗಳ ಮೂಲಕ ಸಂಪರ್ಕವಿರುತ್ತದೆ. ಸಮುದ್ರದ ನೀರನ್ನು ಹೆಚ್ಚು ಆಳವಾಗಿರುವ ಕೊಳಗಳಿಗೆ ಹಾಯಿಸಲಾಗುವುದು. ಈ ಕೊಳಗಳಲ್ಲಿ ಹಲವು ದಿನಗಳವರೆಗಿರುವ ನೀರು ಸೂರ್ಯನ ತಾಪದಿಂದ ಭಾಗಶಃ ಆವಿಯಾಗಿ, ಉಪ್ಪಿನ ದ್ರಾವಣ ಸಾಂದ್ರೀಕರಿಸುತ್ತದೆ. ಅನಂತರ ಈ ದ್ರಾವಣವನ್ನು ಒಳಭಾಗದ ಅಷ್ಟು ಆಳವಲ್ಲದ ಕಟ್ಟೆಗಳಿಗೆ ರವಾನಿಸುತ್ತಾರೆ. ಕಾಲಕ್ರಮದಲ್ಲಿ ಉಪ್ಪು ಹರಳಿನ ರೂಪದಲ್ಲಿ ಹೊರಬೀಳುತ್ತದೆ. ಹರಳುಗಳನ್ನು ಕೆರೆದು, ಹೊರತೆಗೆದು, ಜರಡಿ ಹಿಡಿದು, ದಪ್ಪ ಮತ್ತು ಸಣ್ಣ ಹರಳುಗಳಾಗಿ ವಿಂಗಡಿಸಿ ಅನಂತರ ಮಾರಾಟಕ್ಕಿಡುತ್ತಾರೆ. ಅಡಿಗೆಗೆಂದು ನಾವು ಬಳಸುವ ಉಪ್ಪಿನ ೬೦%ರಷ್ಟು ಹೀಗೆ ಒದಗುತ್ತದೆ. ಫ್ರಾನ್ಸ್, ಇಟಲಿ, ಸ್ಪೇನ್, ಪೋರ್ಚುಗಲ್ ಮತ್ತು ಚೀನ ದೇಶಗಳಲ್ಲೂ ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲೂ ಈ ವಿಧಾನ ರೂಢಿಯಲ್ಲಿದೆ. ಶೀತ ಪ್ರದೇಶಗಳಾದ ರಷ್ಯ ಮತ್ತು ಇಂಗ್ಲೆಂಡ್‌ನಲ್ಲಿ ಸಮುದ್ರದ ನೀರನ್ನು ಹೆಪ್ಪುಗಟ್ಟಿಸುವ ವಿಧಾನ ಬಳಕೆಯಲ್ಲಿದೆ. ಈ ಕ್ರಮದಿಂದಾಗಿ ಉಪ್ಪಿನ ಸಾಂದ್ರದ್ರಾವಣ ದೊರೆಯುತ್ತದೆ. ಇದನ್ನು ಇಂಗಿಸಿ ಉಪ್ಪಿನ ಹರಳುಗಳನ್ನು ಪಡೆಯುತ್ತಾರೆ.

ಉಪ್ಪಿನ ಗಣಿಗಳಿಂದ: ಈ ವಿಧಾನದಿಂದ ತಯಾರಾಗುವ ಉಪ್ಪಿನ ಪ್ರಮಾಣ ೧೦%. ತೈಲಯಂತ್ರದಿಂದ (ಆಯಿಲ್ ಎಂಜಿನ್) ಚಲಿಸುವ ಗಾಳಿಯ ಅದುಮು ಯಂತ್ರಗಳು ಲವಣ ಸಂಗ್ರಹವನ್ನು ಕೊರೆದು ಉಪ್ಪನ್ನು ಮೇಲೆತ್ತುತ್ತವೆ. ಉಪ್ಪಿನ ಹೆಂಟೆಗಳನ್ನು ಪುಡಿಮಾಡಿ, ಜರಡಿ ಹಿಡಿದು, ಹರಳುಗಳ ಗಾತ್ರಾನುಸಾರ ವಿಂಗಡಿಸಿದ ಅನಂತರವೇ ಮಾರುಕಟ್ಟೆಗೆ ಕಳುಹಲಾಗುವುದು. ಇಂಗ್ಲೆಂಡಿನ ಚೆಪೈರಿನಲ್ಲಿರುವಂತೆ, ಉಪ್ಪಿನ ಸಂಗ್ರಹ ಭೂಮಟ್ಟಕ್ಕಿಂತ ಕೆಳಗಿದ್ದರೆ ಯಂತ್ರ ನಿರ್ಮಿತ ರಂಧ್ರದ ಮೂಲಕ ನೀರನ್ನು ಹಾಯಿಸಿ, ದ್ರಾವಣರೂಪದಲ್ಲಿ ಉಪ್ಪನ್ನು ಮೇಲೆತ್ತಿ, ಅನಂತರ ಇಂಗಿಸಿ, ಹರಳಿನ ರೂಪಕ್ಕೆ ತರಬಹುದು.

ಶುದ್ಧೀಕರಣ

ಮಳೆಗಾಲದಲ್ಲಿ ಉಪ್ಪು ಕರಗಿಹೋಗುವ ಸಂಭವ ಹೆಚ್ಚು. ಅಶುದ್ಧ ಉಪ್ಪಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕ್ಲೋರೈಡ್-Hygroscopic ಇವುಗಳೇ ಇದಕ್ಕೆ ಕಾರಣ. ಶುದ್ಧ ಉಪ್ಪಿಗೆ ನೀರನ್ನಾಕರ್ಷಿಸುವ ಗುಣವಿಲ್ಲ. ಆದ್ದರಿಂದ ಅಶುದ್ಧ ಉಪ್ಪನ್ನು ಅಲ್ಪಪ್ರಮಾಣದ ನೀರಿನಲ್ಲಿ ವಿಲೀನ ಮಾಡಿ ಶೋಧಿಸಿದರೆ ಅದ್ರಾವ್ಯ ವಸ್ತುಗಳಿಂದ ಉಪ್ಪು ದೂರವಾಗುತ್ತದೆ. ಹೈಡ್ರೊಜನ್ ಕ್ಲೋರೈಡ್ ಅನಿಲವನ್ನು ದ್ರಾವಣದೊಳಕ್ಕೆ ಅದು ಹೀರುವಷ್ಟು ಕಾಲ ಹಾಯಿಸಿದರೆ, ಶುದ್ಧ ಸೋಡಿಯಂ ಕ್ಲೋರೈಡ್ ಒತ್ತರಿಸುವುದು. ಅನಂತರ ಶೋಧಿಸುವುದರಿಂದ ಉಪ್ಪಿನ ಹರಳುಗಳು ಬೇರ್ಪಡುತ್ತದೆ. ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲದಿಂದ ತೊಳೆದು, ಒಣಗಿಸಿ, ಕಾಯಿಸಿದರೆ, ದ್ರಾವಣದಲ್ಲಿನ ಅಲ್ಪಸ್ವಲ್ಪ ಹೈಡ್ರೊಜನ್‌ಕ್ಲೋರೈಡ್ ಶೇಷಾಂಶವೂ ಹೋಗಿ, ಶುದ್ಧ ಉಪ್ಪು ಉಳಿಯುತ್ತದೆ.

ಭಾರತದಲ್ಲಿ

ಮದ್ರಾಸ್ ಮತ್ತು ಬೊಂಬಾಯಿ-ಇವುಗಳೇ ಭಾರತದ ಪ್ರಮುಖ ಉಪ್ಪುತಯಾರಿಕಾ ಕೇಂದ್ರಗಳು. ಭಾರತದಲ್ಲಿ ಇದರ ವಾರ್ಷಿಕ ಉತ್ಪಾದನೆ ಸುಮಾರು ೫ ಲಕ್ಷ ಟನ್ನುಗಳು. ತೇವವಾದ ಹವೆ ಮತ್ತು ಗಂಗ, ಬ್ರಹ್ಮಪುತ್ರ, ಇರವಾಡಿ ನದಿಗಳು ಸಮುದ್ರಕ್ಕೆ ಒಯ್ಯುವ ಹೊಸ ಹಾಗೂ ಸಿಹಿ ನೀರಿನ ದೆಸೆಯಿಂದಾಗಿ ಬಂಗಾಳ ಮತ್ತು ಬರ್ಮಾಗಳಲ್ಲಿ ಉಪ್ಪಿನ ಕೈಗಾರಿಕೆ ಸಾಧ್ಯವಾಗಿಲ್ಲ. ಇತರ ಉಷ್ಣ ದೇಶಗಳಂತೆ ಭಾರತದಲ್ಲೂ ಸಮುದ್ರದ ನೀರನ್ನು ಸೂರ್ಯನ ಶಾಖದಿಂದ ಇಂಗಿಸಿ ಉಪ್ಪನ್ನು ಪಡೆಯಲಾಗುತ್ತದೆ. ಭಾರತ ದೇಶದ ಉಪ್ಪಿನ ೩೦% ಭಾಗ ಉಪ್ಪಿನ ಸರೋವರಗಳಿಂದ ಮತ್ತು ಭೂಗತ ನೀರಿನ ವಿಧಾನದಿಂದ ತಯಾರಾಗುತ್ತದೆ. ಕಚ್ (ರನ್-ಆಫ಼್-ಕಚ್) ಪ್ರದೇಶದ ಲವಣ ಸಂಗ್ರಹದ ಮೇಲೆ ಹಿಂದೆ ವೇಗವಾಗಿ ಬೀಸಿದ ಗಾಳಿಯೊಡನೆ ತೂರಿಬಂದ ಉಪ್ಪಿನ ಧೂಳು ರಾಜಾಸ್ಥಾನದ ಮರಳುಗಾಡಿನಲ್ಲಿ ಶೇಖರವಾದಂತೆ ತೋರುತ್ತದೆ. ಇಲ್ಲಿರುವ ಸಾಂಬಾರ್ ಲವಣಸರೋವರದ ವಿಸ್ತೀರ್ಣ ಮಳೆಗಾಲದಲ್ಲಿ ಸುಮಾರು ೯೦ ಚ.ಮೈ. ಆಗುತ್ತದೆ. ಇದೇ ರಾಜ್ಯದ ಪಚ್‌ಬಿದ್ರ ಎಂಬಲ್ಲಿ ಭೂಗತ ಉಪ್ಪುನೀರನ್ನು ಮೇಲೆತ್ತಿ ಉಪ್ಪಿಗಾಗಿ ಸಾಂದ್ರೀಕರಿಸುತ್ತಾರೆ. ಈ ವಿಧಾನದಲ್ಲಿನ ಬಾಷ್ಪೀಕರಣಕ್ಕೆ ನಾನಾ ಬಗೆಯ ಪರಿಣಾಮತಂತ್ರವನ್ನಾಗಲೀ (ಮಲ್ಟಿಪಲ್ ಇಫೆಕ್ಟ್ ಟೆಕ್ನಿಕ್) ಅಥವಾ ಕಲ್ಲಿದ್ದಲಿನಿಂದ ಕಾಯಿಸಿದ ದೊಡ್ಡ ಬೋಗುಣಿಗಳನ್ನಾಗಲೀ ಉಪಯೋಗಿಸುವುದು ಪದ್ಧತಿ.

ಉಪ್ಪಿನ ರೂಪಗಳು

ಖಾದ್ಯ ಉಪ್ಪು 
ಸೆನೆಗಾಲ್ ನ ರೆಬ್ಟಾ ಸರೋವರದಿಂದ ಉಪ್ಪಿನ ಸಂಗ್ರಹಣೆ.

ನೈಸರ್ಗಿಕ ಉಪ್ಪು ಹಲವು ಬಗೆಯಲ್ಲಿದ್ದು ವಿಭಿನ್ನ ರುಚಿಗಳನ್ನು ಸಹ ಹೊಂದಿರುತ್ತದೆ. ಇದಕ್ಕೆ ಉಪ್ಪಿನಲ್ಲಿ ಸೋಡಿಯಮ್ ಕ್ಲೋರೈಡಿನ ಜೊತೆಗೆ ಮಿಶ್ರವಾಗಿರುವ ಇತರ ಖನಿಜಗಳು ಕಾರಣ. ಸಮುದ್ರದ ನೀರಿನಿಂದ ತಯಾರಾಗುವ ಉಪ್ಪು ಸಹ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಸಮುದ್ರದ ನೀರಿನಿಂದ ಪಡೆಯುವ ಪೂರ್ಣ ಕಚ್ಚಾ ಉಪ್ಪು ಗಣನೀಯ ಪ್ರಮಾಣದಲ್ಲಿ ಮ್ಯಾಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಸಂಯುಕ್ತಗಳನ್ನು ಹೊಂದಿದ್ದು ಇವು ಉಪ್ಪಿಗೆ ಕೊಂಚಮಟ್ಟದ ಕಟುವಾದ ರುಚಿಯನ್ನು ನೀಡುತ್ತವೆ. ಇಂದು ಇಂತಹ ಪೂರ್ಣ ಕಚ್ಚಾ ಉಪ್ಪನ್ನು ನೇರವಾಗಿ ಆಹಾರದಲ್ಲಿ ಬಳಸುವುದು ಬಲು ಕಡಿಮೆ. ಆದರೆ ಕೆಲ ತಜ್ಞರು ಇಂತಹ ಉಪ್ಪಿನಲ್ಲಿರುವ ಇತರ ಖನಿಜ ವಸ್ತುಗಳು ಆರೋಗ್ಯಕ್ಕೆ ಪೂರಕವೆಂದು ವಾದಿಸಿದರೆ ಇನ್ನು ಕೆಲವರು ಇಂತಹ ಉಪ್ಪಿನಲ್ಲಿ ಅಯೊಡಿನ್ ಸಂಯುಕ್ತಗಳು ಬಲು ವಿರಳವಾಗಿರುವುದರಿಂದ ಇದು ಶರೀರಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಅಯೊಡಿನ್ ಪೂರೈಸಲಾರದೆಂದು ವಾದಿಸುತ್ತಾರೆ.

ನೈಸರ್ಗಿಕವಾಗಿ ಉಪ್ಪು ಸ್ಪಟಿಕ ರೂಪದಲ್ಲಿರುತ್ತದೆ. (crystalline) ಈ ಖನಿಜವನ್ನು ರೋಕ್ ಸಾಲ್ಟ್ (ಘನ ಲವಣ) ಅಥವಾ ಹೆಲೈಟ್ ಎಂದು ಹೆಸರಿಸಲಾಗಿದೆ. ಸಮುದ್ರದ ನೀರಿನಲ್ಲಿ ಉಪ್ಪು ಅಗಾಧವಾದ ಪ್ರಮಾಣದಲ್ಲಿದೆ ಮತ್ತು ಇದೇ ಪ್ರಮುಖವಾದ ಭಾಗವಾಗಿರುತ್ತದೆ; ಮುಕ್ತ ಸಾಗರದಲ್ಲಿ ಸುಮಾರು ೩೫ ಗ್ರಾಂ ಪ್ರತಿ ಲೀಟರ್ ಇರುತ್ತದೆ. ಜೀವಶಾಸ್ತ್ರದಲ್ಲಿ ಸೋಡಿಯಂನ ಪಾತ್ರವಿದ್ದು ಪ್ರತಿ ಪ್ರಾಣಿಯ ಜೀವಕ್ಕೆ ಈ ಲವಣ ಅಗತ್ಯವಿದೆ, ಮತ್ತು ಉಪ್ಪುತನವು ಒಂದು ಮುಖ್ಯವಾದ ರುಚಿ ಕಣವಾಗಿದೆ.

ಶುದ್ಧೀಕೃತ ಉಪ್ಪು

ಖಾದ್ಯ ಉಪ್ಪು 
ಬೊಲಿವಿಯದಲ್ಲಿ ಉಪ್ಪಿನ ಗುಡ್ಡೆಗಳು.

ಇಂದು ಆಹಾರದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಶುದ್ಧೀಕೃತ ಉಪ್ಪು ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ ಆಗಿದೆ. ಇಂತಹ ಉಪ್ಪನ್ನು ಸಮುದ್ರದ ನೀರಿನಿಂದ ಪಡೆಯುವುದಿಲ್ಲ. ಬದಲಾಗಿ ಇದು ಕಾರ್ಖಾನೆಗಳಲ್ಲಿ ತಯಾರಿಸಲ್ಪಡುತ್ತದೆ. ಹೀಗೆ ಉತ್ಪಾದಿಸಲಾಗುವ ಉಪ್ಪಿನ ಸಣ್ಣ ಪಾಲು ಮಾತ್ರವೇ ಆಹಾರಪದಾರ್ಥವಾಗಿ ಮಾರುಕಟ್ಟೆಗೆ ಬರುತ್ತದೆ. ಹೆಚ್ಚಿನಂಶವು ಇತರ ಕೈಗಾರಿಕೆಗಳಲ್ಲಿ ಬಳಸಲ್ಪಡುವುದು. ಈ ಉಪ್ಪು ಅನೇಕ ಕೈಗಾರಿಕೋದ್ಯಮಗಳಲ್ಲಿ ಒಂದು ಪ್ರಮುಖ ಕಚ್ಚಾ ವಸ್ತುವಾಗಿದ್ದು ಕಾಗದ ಮತ್ತು ಕಾಗದದ ತಿರುಳಿನ ತಯಾರಿಕೆಯಲ್ಲಿ, ಬಟ್ಟೆಗಳ ಮೇಲೆ ಬಣ್ಣ ಕೂರಿಸುವಲ್ಲಿ ಮತ್ತು ಸಾಬೂನುಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ.

ಇಂದು ಹೆಚ್ಚಿನ ರಿಫೈನ್ಡ್ ಉಪ್ಪನ್ನು ಉಪ್ಪಿನ ಬಂಡೆ (ಲವಣಶಿಲೆ) ಗಳಿಂದ ತಯಾರಿಸಲಾಗುತ್ತದೆ. ಈ ಲವಣಶಿಲೆಗಳು ಪ್ರಾಚೀನಕಾಲದಲ್ಲಿದ್ದ ಉಪ್ಪಿನ ಸರೋವರಗಳು ಬತ್ತಿ ಒಣಗಿಹೋದಾಗ ರೂಪುಗೊಂಡಿವೆ. ಈ ಶಿಲೆಗಳನ್ನು ಅಗೆದು ಪುಡಿಮಾಡಿ ಉಪ್ಪನ್ನು ತೆಗೆದು ಶುದ್ಧಮಾಡಲಾಗುತ್ತದೆ. ಅಥವಾ ಈ ಶಿಲೆಗಳೊಳಗೆ ನೀರು ಹಾಯಿಸಿ ಕರಗಿ ಹರಿಯುವ ಮಂದ ದ್ರವವನ್ನು ಒಣಗಿಸಿ ಶುದ್ಧಗೊಳಿಸಿ ಉಪ್ಪನ್ನು ಪಡೆಯಲಾಗುತ್ತದೆ.

ಖಾದ್ಯ ಉಪ್ಪು 
ಯು.ಎಸ್.ಎ.ದ ಮೃತ್ಯುಕಣಿವೆಯಲ್ಲಿನ ನೈಸರ್ಗಿಕ ಉಪ್ಪಿನ ಕೊಂಬುಗಳು.

ಹೀಗೆ ಕಚ್ಚಾ ಉಪ್ಪನ್ನು ಶಿಲೆಗಳಿಂದ ಪಡೆದ ಮೇಲೆ ಅದನ್ನು ಸಂಸ್ಕರಿಸಿ ಶುದ್ಧಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯಯಲ್ಲಿ ಉಪ್ಪನ್ನು ಮತ್ತೊಮ್ಮೆ ಹರಳುಗಟ್ಟಿಸಲಾಗುವುದು. ಕರಗಿಸಿದ ಕಚ್ಚಾ ಉಪ್ಪಿನ ದ್ರಾವಣಕ್ಕೆ ಸೂಕ್ತ ರಾಸಾಯನಿಕ ಸಂಯುಕ್ತಗಳನ್ನು ಬೆರೆಸಿ ಸೋಡಿಯಮ್ ಕ್ಲೋರೈಡ್ ಹೊರತಾಗಿ ಉಪ್ಪಿನಲ್ಲಿರುವ ಇತರ ಲವಣಗಳನ್ನು ಬೇರ್ಪಡಿಸಲಾಗುತ್ತದೆ. ಈ ಕ್ರಿಯೆಯನ್ನು ಹಲವು ಘಟ್ಟಗಳಲ್ಲಿ ಸಾಗಿಸಿ ಕೊನೆಯಲ್ಲಿ ಉಳಿಯುವ ಶುದ್ಧ ಸೋಡಿಯಮ್ ಕ್ಲೋರೈಡ್‍ನ ಹರಳುಗಳನ್ನು ಒಣಗಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಲವಣಶಿಲೆಗಳಿಂದ ಮೇಲ್ಕಾಣಿಸಿದ ರೀತಿಯಲ್ಲಿ ಪಡೆಯಲಾದ ಉಪ್ಪು ಮುದ್ದೆಯಾಗದಂತೆ ಮತ್ತು ಹರಳುಗಳು ಒಂದೇ ರೀತಿಯಾಗಿರುವಂತೆ ಮಾಡಲು ಟ್ರೈಕ್ಯಾಲ್ಸಿಯಮ್ ಫಾಸ್ಫೇಟ್, ಸೋಡಿಯಮ್ ಹೆಕ್ಸಸ್ಯಾನೋಫೆರ್ರೇಟ್‌ನಂತಹ ಸಂಯುಕ್ತಗಳನ್ನು ಬಳಸಲಾಗುತ್ತದೆ.

ಟೇಬಲ್ ಸಾಲ್ಟ್ ಮತ್ತು ಅಯೊಡೈಸ್ಡ್ ಉಪ್ಪು

ಖಾದ್ಯ ಉಪ್ಪು 
ಟಿಂಬಕ್ಟುವಿನ ಉಪ್ಪಿನ ಹಲಗೆಗಳು

ಟೇಬಲ್ ಸಾಲ್ಟ್ ೯೯% ಶುದ್ಧ ಸೋಡಿಯಮ್ ಕ್ಲೋರೈಡ್. ಇದರ ಜೊತೆಗೆ ಹರಳುಗಳು ಒಂದಕ್ಕೊಂದು ಅಂಟಿ ಮುದ್ದೆಯಾಗದಂತೆ ತಡೆಯುವ ಸೋಡಿಯಮ್ ಸಿಲಿಕೋಅಲ್ಯುಮಿನೇಟ್ ಯಾ ಮ್ಯಾಗ್ನೀಸಿಯಮ್ ಕಾರ್ಬೊನೇಟ್ ಸಹ ಕೊಂಚ ಪ್ರಮಾಣದಲ್ಲಿರುತ್ತದೆ. ಟೇಬಲ್ ಸಾಲ್ಟ್‌ಗೆ ಅತ್ಯಲ್ಪ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಅಯೊಡೈಡ್ ಅಥವಾ ಸೋಡಿಯಮ್ ಅಯೊಡೈಡ್ ಅನ್ನು ಬೆರೆಸಿ ಅಯೊಡೈಸ್ಡ್ ಉಪ್ಪನ್ನು ತಯಾರಿಸಲಾಗುತ್ತದೆ. ದೇಹದಲ್ಲಿ ಅಯೊಡಿನ್‌ನ ಕೊರತೆಯನ್ನು ನೀಗಿಸಲು ಈ ಅಯೊಡೈಸ್ಡ್ ಉಪ್ಪನ್ನು ಬಳಸಲಾಗುವುದು. ಅಯೊಡಿನ್‌ನ ಕೊರತೆ ಮಾನವನಲ್ಲಿ ಗಳಗಂಡದಂತಹ ಹಲವು ರೋಗಗಳನ್ನುಂಟುಮಾಡುತ್ತದೆ. ಅಯೊಡೈಸ್ಡ್ ಉಪ್ಪು ಇವನ್ನು ತಡೆಯುವಲ್ಲಿ ಬಲು ಪರಿಣಾಮಕಾರಿಯಾಗಿದೆ. ಇಂದು ಹಲವು ರಾಷ್ಟ್ರಗಳಲ್ಲಿ ಅಯೊಡೈಸ್ಡ್ ಉಪ್ಪನ್ನು ತಯಾರಿಸುವುದು ಕಡ್ಡಾಯ ಮಾಡಲಾಗಿದೆ.

ಉಪಯೋಗಗಳು

ಅನುದಿನದ ಆಹಾರದಲ್ಲಿ ಉಪ್ಪಿನ ಅವಶ್ಯಕತೆ ಅತ್ಯಧಿಕ. ನಿತ್ಯಬಳಕೆಯ ಅಡಿಗೆ ಉಪ್ಪಿನಲ್ಲಿರುವ ಇತರ ಪೌಷ್ಟಿಕಾಂಶಗಳ ವಿವರ ಹೀಗಿದೆ: ೧% ಕ್ಯಾಲ್ಸಿಯಂ ಸಿಲಿಕೇಟ್ ಅಥವಾ ಮೆಗ್ನೀಸಿಯಂ ಕಾರ್ಬೊನೇಟ್. ಅಯೋಡೀನ್ ಕೊರತೆಯನ್ನು ನಿವಾರಿಸಲು ೦.೦೦೧% ಪೊಟ್ಯಾಸಿಯಂ ಅಯೊಡೈಡ್ ಸೇರಿಸುತ್ತಾರೆ. ಇದರಲ್ಲಿರುವ ಅಯೊಡೀನ್ ಅಂಶವನ್ನು ಕಾಪಾಡಲು ೦.೧% ಸೋಡಿಯಂ ಕಾರ್ಬೊನೇಟ್ ಮತ್ತು ಸೋಡಿಯಂ ಥಯೋಸಲ್ಫೇಟ್ ಸೇರಿಸುತ್ತಾರೆ. ಪ್ರಾಣಿಗಳಿಗೂ ಉಪ್ಪಿನ ಅಗತ್ಯವುಂಟು. ವನ್ಯಮೃಗ ಸಂರಕ್ಷಣಾರಣ್ಯಗಳಲ್ಲಿ (ಗೇಮ್ ಸ್ಯಾಂಕ್ಚುಅರಿ) ವಾಸಿಸುವ ಕಾಡುಪ್ರಾಣಿಗಳ ಸಲುವಾಗಿ ಆಗಿಂದಾಗ್ಗೆ ನಿಯೋಜಿತ ಸ್ಥಳಗಳಲ್ಲಿ ಉಪ್ಪನ್ನು ಚೆಲ್ಲುತ್ತಾರೆ. ಉಪ್ಪಿನಲ್ಲಿಟ್ಟ ಮೀನು, ಮಾಂಸ ಮತ್ತು ಬೆಣ್ಣೆ ಬಹುಕಾಲ ಕೆಡುವುದಿಲ್ಲ. ಅಡಿಗೆ ಸೋಡಾ (ಬೇಕಿಂಗ್ ಪೌಡರ್ ಅಥವಾ ಸೋಡಿಯಂ ಬೈಕಾರ್ಬೊನೇಟ್) ಮತ್ತು ವಾಷಿಂಗ್ ಸೋಡಾ (ಸೋಡಿಯಂ ಕಾರ್ಬೊನೇಟ್) ತಯಾರಿಸುವುದು ಉಪ್ಪಿನಿಂದಲೇ. ಸೋಡಿಯಂ ಪರ್ಮುಟೈಟ್ ಎಂಬ ರಾಸಾಯನಿಕ ವಸ್ತು ಗಡಸುನೀರನ್ನು ಮೆದುಗೊಳಿಸಿ ತಾನು ನಿಷ್ಕ್ರಿಯವಾಗುತ್ತದೆ. ಮತ್ತೆ ಉಪ್ಪಿನ ಪ್ರಬಲ ದ್ರಾವಣದಿಂದ ತೊಳೆದರೆ ಪುನಶ್ಚೇತನಗೊಳ್ಳುತ್ತದೆ. ವನಸ್ಪತಿ ತೈಲಗಳೊಡನೆ (ಹೈಡ್ರೊಜಿನೇಟಿಡ್ ಆಯಿಲ್) ಸೋಡಿಯಂ ಹೈಡ್ರಾಕ್ಸೈಡನ್ನು ಬೆರೆಸಿ ಕುದಿಸಿದರೆ ಸಾಬೂನು ಲಭಿಸುತ್ತದೆ. ಅದಕ್ಕೆ ಉಪ್ಪನ್ನು ಸೇರಿಸದ ಹೊರತು ಸಾಬೂನು ಒತ್ತರಿಸುವುದಿಲ್ಲ. ಸಂಶೋಧನೆಯೇ ಮೊದಲಾದ ವೈಜ್ಞಾನಿಕ ಪ್ರಯೋಗಗಳಲ್ಲಿ ಉಪ್ಪು ಮತ್ತು ಮಂಜುಗೆಡ್ಡೆಯ ಶೈತ್ಯ ಮಿಶ್ರಣ ಬಳಕೆಯಾಗುತ್ತದೆ. ಪಿಂಗಾಣಿ ಮತ್ತು ಇತರ ಮಣ್ಣಿನ ಪಾತ್ರೆ, ಕೊಳಾಯಿ, ಜಾಡಿ-ಇತ್ಯಾದಿಗಳಿಗೆ ಹೊಳಪು ಕೊಡಲು, ವೈದ್ಯದಲ್ಲಿ, ರಾಸಾಯನಿಕ ವಿಶ್ಲೇಷಣೆಯಲ್ಲಿ, ಗಾಜು, ಚರ್ಮ, ಕಾಗದ ಮತ್ತು ಬಟ್ಟೆ ಉದ್ಯಮಗಳಲ್ಲಿ ಉಪ್ಪಿನ ಬಳಕೆ ವ್ಯಾಪಕವಾಗಿದೆ.

ಆರೋಗ್ಯ ಮತ್ತು ಉಪ್ಪು

ಸೋಡಿಯಮ್ ಶರೀರದ ಮೂಲಭೂತ ಎಲೆಕ್ಟ್ರೊಲೈಟ್‌ಗಳಲ್ಲಿ ಒಂದು. ಶರೀರದಲ್ಲಿನ ಎಲ್ಲ ನಾಲ್ಕು ಋಣಾತ್ಮಕ (ಕ್ಯಾಟಯಾನಿಕ್) ಎಲೆಕ್ಟ್ರೊಲೈಟ್‌ಗಳಾದ ಸೋಡಿಯಮ್, ಪೊಟ್ಯಾಸಿಯಮ್, ಮ್ಯಾಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್‌ಗಳೆಲ್ಲವೂ ಕಚ್ಚಾ ಉಪ್ಪಿನಲ್ಲಿವೆ. ಉಪ್ಪಿನ ಅತಿಯಾದ ಸೇವನೆ ಅಥವಾ ಅತಿ ಕಡಿಮೆಯಾದ ಸೇವನೆಗಳು ದೇಹದ ಆರೋಗ್ಯದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುವುವು. ಸ್ನಾಯುಗಳ ಸೆಳೆತ, ತಲೆಸುತ್ತುವಿಕೆ ಮತ್ತು ನರಸಂಬಂಧಿ ಖಾಯಿಲೆಗಳು ತೋರುವ ಸಾಧ್ಯತೆಗಳಿವೆ.

ಉಪ್ಪಿನ ಅತಿಯಾದ ಸೇವನೆ ಕೆಳಕಂಡ ದೈಹಿಕ ತೊಂದರೆಗಳನ್ನುಂಟುಮಾಡಬಹುದಾಗಿದೆ. ಆದರೆ ಎಲ್ಲರಲ್ಲೂ ಇವು ಕಾಣಿಸುವುದು ನಿಶ್ಚಿತವಲ್ಲ.

ನಮ್ಮ ದೇಹಕ್ಕೆಷ್ಟು ಉಪ್ಪು ಬೇಕು?

ನಾನಾ ದೇಶಗಳ ಆರೋಗ್ಯ ಸಂಸ್ಥೆಗಳು ಮಾನವನಿಗೆ ದಿನವಹಿ ಬೇಕಾದ ಉಪ್ಪಿನ ಪ್ರಮಾಣವನ್ನು ಅಂದಾಜು ಮಾಡಿ ಆ ಬಗ್ಗೆ ಶಿಫಾರಸುಗಳನ್ನು ಹೊರತಂದಿವೆ. ಸಾಮಾನ್ಯವಾಗಿ ೧ ಗ್ರಾಂ ಸೋಡಿಯಮ್‌ಅನ್ನು ಪಡೆಯಲು ೨.೫ ಗ್ರಾಮ್ ಉಪ್ಪನ್ನು ಸೇವಿಸಬೇಕಾಗುತ್ತದೆ. ಯು.ಕೆ. ಯಲ್ಲಿ ಪ್ರತಿ ಪ್ರೌಢನು ದಿನಕ್ಕೆ ೪ ರಿಂದ ೬ ಗ್ರಾಮ್ ಉಪ್ಪನ್ನು ಸೇವಿಸಬಹುದೆಂದು ಶಿಫಾರಸು ಮಾಡಿದ್ದರೂ ಇದರ ೩ ರಷ್ಟನ್ನು ಸೇವಿಸಲಾಗುತ್ತಿದೆ.

ವಯೋಮಾನಕ್ಕನುಗುಣವಾಗಿ ಮಕ್ಕಳ ಶರೀರಕ್ಕೆ ದಿನವಹಿ ಬೇಕಾದ ಉಪ್ಪಿನ ಪ್ರಮಾಣ ಕೆಳಕಂಡಂತಿದೆ.

  • ೦-೬ ತಿಂಗಳು : ದಿನಕ್ಕೆ ೧ ಗ್ರಾಮ್‌ಗಿಂತ ಕಡಿಮೆ
  • ೭-೧೨ ತಿಂಗಳು : ದಿನಕ್ಕೆ ೧ ಗ್ರಾಮ್
  • ೧-೩ ವರ್ಷಗಳು : ದಿನಕ್ಕೆ ೨ ಗ್ರಾಮ್
  • ೪-೬ ವರ್ಷಗಳು : ದಿನಕ್ಕೆ ೩ ಗ್ರಾಮ್
  • ೭-೧೦ ವರ್ಷಗಳು : ದಿನಕ್ಕೆ ೫ ಗ್ರಾಮ್
  • ೧೧-೧೪ ವರ್ಷಗಳು : ದಿನಕ್ಕೆ ೬ ಗ್ರಾಮ್

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಖಾದ್ಯ ಉಪ್ಪು ಇತಿಹಾಸಖಾದ್ಯ ಉಪ್ಪು ಘನ ಸೋಡಿಯಂ ಕ್ಲೋರೈಡ್‍ನ ಗುಣಗಳುಖಾದ್ಯ ಉಪ್ಪು ಲವಣದ ದ್ರಾವಣಖಾದ್ಯ ಉಪ್ಪು ಉತ್ಪಾದನೆಖಾದ್ಯ ಉಪ್ಪು ಉಪ್ಪಿನ ರೂಪಗಳುಖಾದ್ಯ ಉಪ್ಪು ಶುದ್ಧೀಕೃತ ಉಪ್ಪುಖಾದ್ಯ ಉಪ್ಪು ಟೇಬಲ್ ಸಾಲ್ಟ್ ಮತ್ತು ಅಯೊಡೈಸ್ಡ್ ಉಪ್ಪುಖಾದ್ಯ ಉಪ್ಪು ಉಪಯೋಗಗಳುಖಾದ್ಯ ಉಪ್ಪು ಆರೋಗ್ಯ ಮತ್ತು ಉಪ್ಪುಖಾದ್ಯ ಉಪ್ಪು ನಮ್ಮ ದೇಹಕ್ಕೆಷ್ಟು ಉಪ್ಪು ಬೇಕು?ಖಾದ್ಯ ಉಪ್ಪು ಉಲ್ಲೇಖಗಳುಖಾದ್ಯ ಉಪ್ಪು ಬಾಹ್ಯ ಸಂಪರ್ಕಗಳುಖಾದ್ಯ ಉಪ್ಪುಅಯೊಡಿನ್ಕಲ್ಲುಪ್ಪುಖನಿಜನೀರುಸಮುದ್ರ

🔥 Trending searches on Wiki ಕನ್ನಡ:

ಭೂಮಿಚಾಲುಕ್ಯಥಿಯೊಸೊಫಿಕಲ್ ಸೊಸೈಟಿಗೊರೂರು ರಾಮಸ್ವಾಮಿ ಅಯ್ಯಂಗಾರ್ನೈಸರ್ಗಿಕ ಸಂಪನ್ಮೂಲವರ್ಣತಂತು ನಕ್ಷೆಮೌರ್ಯ ಸಾಮ್ರಾಜ್ಯಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಆಸ್ಟ್ರೇಲಿಯಸಾರಜನಕಬೃಂದಾವನ (ಕನ್ನಡ ಧಾರಾವಾಹಿ)ಕರ್ನಾಟಕದ ಜಲಪಾತಗಳುಗುಣ ಸಂಧಿಮಾರುಕಟ್ಟೆಜೋಗಿ (ಚಲನಚಿತ್ರ)ಭೌಗೋಳಿಕ ಲಕ್ಷಣಗಳುಪಂಪಸರೀಸೃಪತೇಜಸ್ವಿನಿ ಗೌಡಚಂದನಾ ಅನಂತಕೃಷ್ಣದಾಸ ಸಾಹಿತ್ಯಕಬಡ್ಡಿಸಸ್ಯರಕ್ತಚಂದನತ್ಯಾಜ್ಯ ನಿರ್ವಹಣೆಭಾರತದ ಸಂವಿಧಾನಮಾಧ್ಯಮಭಾರತೀಯ ಭೂಸೇನೆಡಿಜಿಲಾಕರ್ಮಾವಂಜಿರುಮಾಲುಡಿ.ವಿ.ಗುಂಡಪ್ಪಎನ್ ಆರ್ ನಾರಾಯಣಮೂರ್ತಿಕಪ್ಪೆಭಾರತದ ಚುನಾವಣಾ ಆಯೋಗಆಹಾರ ಸಂರಕ್ಷಣೆಸಸ್ಯ ಜೀವಕೋಶಶಿವರಾಮ ಕಾರಂತಬಿ. ಆರ್. ಅಂಬೇಡ್ಕರ್ಗ್ರಂಥ ಸಂಪಾದನೆಶಾಸನಗಳುಹುಲಿಕರ್ನಾಟಕ ಯುದ್ಧಗಳುಕನ್ನಡ ರಾಜ್ಯೋತ್ಸವ21ನೇ ಶತಮಾನದ ಕೌಶಲ್ಯಗಳುಅಯಾನುಚಿತ್ರದುರ್ಗಜನ್ನಶಿರಾಕುಮಾರವ್ಯಾಸದೇವನೂರು ಮಹಾದೇವಋಗ್ವೇದರಚಿತಾ ರಾಮ್ಕನ್ನಡ ಸಾಹಿತ್ಯ ಪ್ರಕಾರಗಳುಬಿ.ಎಫ್. ಸ್ಕಿನ್ನರ್ಸುಧಾ ಮೂರ್ತಿಎಚ್ ನರಸಿಂಹಯ್ಯಪರಮಾಣುರಾಷ್ಟ್ರೀಯ ಸೇವಾ ಯೋಜನೆಪೆರಿಯಾರ್ ರಾಮಸ್ವಾಮಿಕಾಲಾಯ ತಸ್ಮೈ ನಮಃ (ಚಲನಚಿತ್ರ)ವಿಜ್ಞಾನರಾಷ್ಟ್ರಕವಿರಂಗಭೂಮಿಕರ್ನಾಟಕದಲ್ಲಿ ಬ್ಯಾಂಕಿಂಗ್ಪೆಟ್ರೋಲಿಯಮ್ಯುರೇನಿಯಮ್ಶ್ರೀ ರಾಮಾಯಣ ದರ್ಶನಂಕಲ್ಲಿದ್ದಲುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಗೌತಮಿಪುತ್ರ ಶಾತಕರ್ಣಿಬಂಡೀಪುರ ರಾಷ್ಟ್ರೀಯ ಉದ್ಯಾನವನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕಾವ್ಯಮೀಮಾಂಸೆ🡆 More