ಮೀನು

ಮೀನು ಎಂದರೆ ಬೆರಳುಗಳಿಂದ ಕೂಡಿದ ಅವಯವಗಳು ಇಲ್ಲದಿರುವ ಎಲ್ಲ ಕಿವಿರು ಹೊಂದಿರುವ ಜಲವಾಸಿ ತಲೆಬುರುಡೆಯಿರುವ ಪ್ರಾಣಿಗಳನ್ನು ಒಳಗೊಂಡಿರುವ ಪ್ಯಾರಫ಼ೈಲೆಟಿಕ್ ಜೀವಿಗಳ ಗುಂಪಿನ ಯಾವುದೇ ಸದಸ್ಯ.

ಈ ವ್ಯಾಖ್ಯಾನದಲ್ಲಿ ಜೀವಂತ ಹ್ಯಾಗ್‍ಫಿಶ್, ಲ್ಯಾಂಪ್ರೀಗಳು, ಮತ್ತು ಮೃದ್ವಸ್ಥಿ ಹೊಂದಿರುವ ಹಾಗು ಎಲುಬು ಹೊಂದಿರುವ ಮೀನು, ಜೊತೆಗೆ ವಿವಿಧ ನಿರ್ನಾಮವಾದ ಸಂಬಂಧಿತ ಗುಂಪುಗಳನ್ನು ಒಳಗೊಂಡಿವೆ. ವಿಶಾಲಾರ್ಥದಲ್ಲಿ ಯಾವುದೇ ಜಲವಾಸಿ ಪ್ರಾಣಿಗೆ-ಕಶೇರುಕ ಅಥವಾ ಅಕಶೇರುಕ-ಅನ್ವಯವಾಗುವ ಹೆಸರು ಮೀನು, ಉದಾಹರಣೆಗೆ ಗೆಂಡೆಮೀನು, ನಕ್ಷತ್ರಮೀನು, ಅಂಬಲಿಮೀನು, ಕಟಲ್ ಮೀನು ಇತ್ಯಾದಿ. ಆದರೆ ನಿಷ್ಕೃಷ್ಟ ಅರ್ಥದಲ್ಲಿ ಈ ಹೆಸರು ನೀರಿನಲ್ಲಿ ಮಾತ್ರ ಜೀವಿಸುವಂಥ ಕಶೇರುಕ ಪ್ರಾಣಿಗಳಿಗೆ ಅನ್ವಯವಾಗುತ್ತದೆ. ಬಹುತೇಕ ಮೀನುಗಳು ಸುತ್ತಲಿನ ಉಷ್ಣಾಂಶ ಬದಲಾದಂತೆ ತಮ್ಮ ದೇಹದ ಉಷ್ಣಾಂಶ ಬದಲಾಗಲು ಅನುವು ಮಾಡಿಕೊಡುವ ಶೀತರಕ್ತದ ಜೀವಿಗಳು, ಆದರೆ ದೊಡ್ಡ ಸಕ್ರಿಯ ಈಜುಗಾರ ಮೀನುಗಳ ಪೈಕಿ ಬಿಳಿ ಶಾರ್ಕ್ ಮತ್ತು ಟ್ಯೂನಾದಂತಹ ಕೆಲವು, ಹೆಚ್ಚಿನ ಆಂತರಿಕ ಉಷ್ಣಾಂಶವನ್ನು ಹಿಡಿದಿಟ್ಟುಕೊಳ್ಳಬಹುದು.

ಮೀನು
Fossil range: 535–0 Ma
PreꞒ
O
S
D
C
P
T
J
K
Pg
N
Middle Cambrian – Recent
ಷಾರ್ಕುಗಳು, ಸ್ಟಿಂಗ್‍ರೇಗಳು, ಮೂಳೆ ಮೀನುಗಳು, ದವಡೆಯಿಲ್ಲದ ಮೀನುಗಳು ಮತ್ತು ಸೀಲಕ್ಯಾಂತ್‍ಗಳು ಸೇರಿದಂತೆ ವಿವಿಧ ಮೀನುಗಳ ವಿಭಿನ್ನತೆ.
ಷಾರ್ಕುಗಳು, ಸ್ಟಿಂಗ್‍ರೇಗಳು, ಮೂಳೆ ಮೀನುಗಳು, ದವಡೆಯಿಲ್ಲದ ಮೀನುಗಳು ಮತ್ತು ಸೀಲಕ್ಯಾಂತ್‍ಗಳು ಸೇರಿದಂತೆ ವಿವಿಧ ಮೀನುಗಳ ವಿಭಿನ್ನತೆ.
Scientific classification
Included groups
    ದವಡೆಯಿಲ್ಲದ ಮೀನು
    ಕಾಪು ಹೊದಿಕೆಯ ಮೀನು
    ಮುಳ್ಳುಗಳುಳ್ಳ ಷಾರ್ಕುಗಳು
    ಮೃದ್ವಸ್ಥಿಯುಳ್ಳ ಮೀನು
    ಮೂಳೆ ಮೀನು
      ಮೂಳೆಗಳಿರುವ ಈಜುರೆಕ್ಕೆಗಳುಳ್ಳ ಮೀನು
      ಲೋಬ್ ಈಜುರೆಕ್ಕೆಗಳುಳ್ಳ ಮೀನು
Excluded groups
    ಚತುಷ್ಪಾದಿಗಳು

ಈ ಪ್ರಾಣಿಗಳು ನೀರಿನಲ್ಲಿ ಕರಗಿರುವ ಆಕ್ಸಿಜನ್ನನ್ನು ಬಳಸಲು ಸಮರ್ಥವಾಗಿರುವುದರ ಜೊತೆಗೆ, ಈಜು ರೆಕ್ಕೆಗಳಾಗಿ ಮಾರ್ಪಾಟಾಗಿರುವ ಚಲನಾವಯವಗಳನ್ನೂ ಸಾಮಾನ್ಯವಾಗಿ ಕದಿರಿನಾಕಾರದ ಮತ್ತು ಶಲ್ಕ ಅಥವಾ ಹುರುಪೆಗಳಿಂದ (ಸ್ಕೇಲ್ಸ್) ಆವೃತವಾಗಿರುವ ದೇಹವನ್ನೂ ದೇಹದ ಹಿಂತುದಿಯಲ್ಲಿ ಬಾಲದ ಈಜುರೆಕ್ಕೆಯನ್ನೂ ಪಡೆದಿರುವುವು. ಹಳೆಯ ವರ್ಗೀಕರಣಗಳ ಪ್ರಕಾರ ಇವು ಪಿಸೀಸ್ ವರ್ಗಕ್ಕೆ ಸೇರಿವೆಯಾದರೆ ಆಧುನಿಕ ವರ್ಗೀಕರಣ ಪದ್ಧತಿಗಳ ಅನುಸಾರ ಮೀನುಗಳು ಸೈಕ್ಲೊಸ್ಟೋಮಟ, ಇಲ್ಯಾಸ್ಮೊಬ್ರಾಂಕಿಯೈ, ಹಾಲೊಸೆಫಲೈ, ಡಿಪ್ನಾಯ್ ಮತ್ತು ಟೀಲಿಯೊಸ್ಟೋಮೈ (ಆಸ್ಟಿಕ್ತಿಯೀಸ್) ವರ್ಗಗಳಿಗೆ ಸೇರಿವೆ.

ಮೀನಿನ ಆಕಾರ

ಮೀನುಗಳ ದೇಹ ರಚನೆ ಜನಜೀವನಕ್ಕೆ ಬಹಳ ಅನುಕೂಲವಾಗಿ ಹೊಂದಿಕೊಂಡಿದೆ. ಮೀನುಗಳ ಈಜುವ ವೇಗವನ್ನೂ ರೂಪದ ಚೆಲುವನ್ನೂ ನೋಡಿದಲ್ಲಿ ಈ ಹೊಂದಾಣಿಕೆ ಸ್ಪಷ್ಟವಾಗುತ್ತದೆ. ಹೆಚ್ಚು ಶ್ರಮವಾಗಲೀ ಹೆಚ್ಚು ಶಕ್ತಿವಿಕ್ರಯವಾಗಲೀ ಆಗದೆ ಸರಾಗವಾಗಿ ಈಜಾಡಲು ಸಹಕಾರಿಯಾಗಿ ಮೀನಿನ ಆಕಾರ ಕದಿರು ಅಥವಾ ಚುಟ್ಟಾ ಇದ್ದಂತೆ ದೇಹದ ಎರಡು ತುದಿಗಳೂ ಮೊನಚಾಗಿ ರೂಪುಗೊಂಡಿವೆ. ಭೂಚರ ಕಶೇರುಕ ಪ್ರಾಣಿಗಳಲ್ಲಿ ಇರುವಂತೆ ಮೀನುಗಳಲ್ಲಿ ಸ್ಪಷ್ಟವಾದ ಕತ್ತು ಅಥವಾ ಕೊರಳು ಇಲ್ಲ. ಮೂತಿ ಮೊನಚಾಗಿದ್ದು ದವಡೆ ಒತ್ತಿಕೊಂಡು ಮೀನಿನ ತಲೆ ಒಪ್ಪಾದ ಆಕೃತಿಯನ್ನು ತಾಳಿದೆ. ಮೇಲ್ದರ್ಜೆಯ ಪ್ರಾಣಿಗಳಲ್ಲಿ ಇರುವ ಕಣ್ಣುಗೂಡು ಅಥವಾ ಕುಳಿಗಳು ಮೀನುಗಳಲ್ಲಿ ಇಲ್ಲ. ಇದರಿಂದಾಗಿ ಕಣ್ಣು ದೇಹದ ಮೇಲ್ಮೈಗೆ ಸಮಮಟ್ಟದಲ್ಲಿರುವಂತಾಗಿದೆ. ಮೀನುಗಳ ಕಿವಿರಿನ ಮುಚ್ಚಳ ಹೊರಚಾಚಿರದೆ ದೇಹಕ್ಕೆ ಒತ್ತಿಕೊಂಡಂತಿದೆ. ಚರ್ಮದ ಮೇಲಿನ ಶಲ್ಕ ಅಥವಾ ಫಲಕಗಳು (ಸ್ಕೇಲ್ಸ್) ಒಂದರ ಮೇಲೊಂದು ಹಂಚು ಹೊದಿಸಿದ ರೀತಿಯಲ್ಲಿ ಜೋಡಣೆಯಾಗಿರುವುದರಿಂದ ಮೀನಿನ ದೇಹ ನಯವಾಗಿರುವಂತೆ ಭಾಸವಾಗುತ್ತದೆ. ನೀರಿನಲ್ಲಿ ಈಜುವಾಗ ಪ್ರತಿರೋಧ ಕಡಿಮೆಯಾಗಲು ಮೀನಿನ ದೇಹದ ಹೊರಭಾಗವೆಲ್ಲ ಲೋಳೆಯಿಂದ ಆವೃತವಾಗಿದೆ. ಬಂಗಡೆ ಮ್ಯಾಕರೆಲ್ ಜಾತಿಯ ಕಡಲು ಮೀನಿನ ಆಕಾರ ಮೀನು ವರ್ಗದ ಮಾದರಿ ಆಕಾರ ಆಥವಾ ಸ್ವರೂಪವೆನ್ನಬಹುದು.

ಎಲ್ಲ ಮೀನುಗಳಲ್ಲೂ ಈ ಆಕಾರವೇ ಇರುತ್ತದೆ ಎಂದಲ್ಲ. ಸನ್ನಿವೇಶಕ್ಕೆ, ಸ್ವಭಾವಕ್ಕೆ ಮತ್ತು ಜೀವನಕ್ರಮಕ್ಕೆ ತಕ್ಕಂತೆ ಕದಿರಿನ ಆಕಾರದಲ್ಲಿ ಬದಲಾವಣೆಗಳು ರೂಪಾಂತರಗಳು ಕಾಣಬರುತ್ತವೆ. ಈ ಆಕಾರ ವ್ಯತ್ಯಾಸ ವೈವಿಧ್ಯಗಳಲ್ಲಿ ಬಹುಮುಖ್ಯವಾದ ಕೆಲವು ಇಂತಿವೆ:

ಮೀನುಗಳ ಗುಂಪನ್ನು ಸ್ಥೂಲವಾಗಿ ಮೂರು ವರ್ಗ ಅಥವಾ ವಿಭಾಗಗಳಾಗಿ ವಿಂಗಡಿಸಬಹುದು.

  1. ಇಲ್ಯಾಸ್ಮೊಬ್ರಾಂಕೈ: ಗಟ್ಟಿಯಾದ ಮೂಳೆಗಳ ಬದಲು ಮೃದ್ವಸ್ಥಿ ಕಂಕಾಲವುಳ್ಳ ಮೀನುಗಳು. ಗೊಮ್ಮೆಸೊರಕೆ, ಹುಲಿ ಬಳಿಯಾರ್, ಬುಗ್ಗೆ ತಟ್ಟೆ ಮುಂತಾದವು.
  2. ಟೀಲಿಯೊಸ್ಟೋಮೈ: ಗಟ್ಟಿ ಎಲುಬುಳ್ಳ ಆಧುನಿಕ ಕಾಲದ ಮೀನುಗಳು-ಎರಬಾಯ್, ಬೊಯ್ಗೆ, ಪಲಿಯ, ಕೋಲಮಂಗು ಮುಂತಾದ ಮೂಳೆಮೀನುಗಳು.
  3. ಡಿಪ್ನಾಯ್: ಫುಪ್ಪುಸಯುಕ್ತ ಮೀನುಗಳು. ಆಸ್ಟ್ರೇಲಿಯ, ಆಫ್ರಿಕ, ದಕ್ಷಿಣ ಅಮೆರಿಕದ ಜೌಗುಪ್ರದೇಶಗಳಲ್ಲಿ ವಾಸಿಸುವಂಥವು.

ಮೀನಿನ ರಚನೆ ಮತ್ತು ಆಕಾರಗಳ ವೈವಿಧ್ಯವನ್ನು ತಿಳಿಯಲು ಈ ವರ್ಗಗಳ ಕೆಲವು ಮೀನುಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಮೃದ್ವಸ್ಥಿ ಮೀನುಗಳು: ಇಲ್ಯಾಸ್ಮೊಬ್ರಾಂಕೈ ಗುಂಪಿನ ಮೀನುಗಳಲ್ಲಿ, ದೇಹ ಸಾಮಾನ್ಯವಾಗಿ ಚಪ್ಪಟೆಯಾಗಿರುತ್ತದೆ. ಷಾರ್ಕ್ (ಸೊರಕೆ, ಬಳಿಯಾರ್ ಮುಂತಾದವು) ಮೀನುಗಳ ದೇಹದ ಆಕಾರ, ಈಜುವಾಗ ನೀರಿನ ಪ್ರತಿರೋಧವನ್ನು ಆದಷ್ಟು ಕಡಿಮೆ ಮಾಡಲು ಅನುಕೂಲವಾಗಿದೆ. ರೇ ಮೀನು ಅಥವಾ ಗಿಟಾರು ಮೀನುಗಳಲ್ಲಿ ದೇಹ ಬಹಳ ಅಗಲವಾಗಿಯೂ, ಚಪ್ಪಟೆಯಾಗಿಯೂ ಇದೆ. ಉದಾಹರಣೆಗೆ ರೈನೊಬೇಟಸ್ ಗ್ರಾನ್ಯುಲೇಟಸ್ ಎಂಬ ಸ್ಕೇಟ್ ಮೀನು-ಎತ್ತಿ ಬಳಿಯಾರ್.

ಸುತ್ತಿಗೆತಲೆ ಷಾರ್ಕುಗಳಲ್ಲಿ ತಲೆ ಸುತ್ತಿಗೆಯ ಆಕಾರದಲ್ಲಿದ್ದು ಕಣ್ಣುಗಳು ತಲೆಯ ತುದಿ ಭಾಗದಲ್ಲಿ ಸ್ಥಿತವಾಗಿವೆ. ಉದಾಹರಣೆಗೆ ತಟ್ಟೆಬಳಿಯಾರ್-ಸ್ಫಿರ್ನ ಜ಼ೈಗೀನ.

ಮೂಳೆ ಮೀನುಗಳು: ಮೂಳೆ ಮೀನುಗಳು ಸಾಮಾನ್ಯವಾಗಿ ದೇಹ ಪಾರ್ಶ್ವಸ್ಥವಾಗಿ ಚಪ್ಪಟೆಯಾಗಿ ಇರುತ್ತವೆ. ಆದರೆ ಪ್ಲೂರೋನೆಕ್ಟಿಫಾರ್ಮೀಸ್ ಗಣದ ಮೀನುಗಳಲ್ಲಿ (ನಂಗುಮೀನುಗಳು) ದೇಹ ಚಪ್ಪಟೆಯಾಗಿರುವುದಲ್ಲದೆ ತಗ್ಗಿಯೂ ಇರುತ್ತದೆ. ಮೀನಿನ ಎರಡು ಕಣ್ಣುಗಳೂ ಒಂದೇ ಪಕ್ಕದಲ್ಲಿರುತ್ತವೆ. ಉದಾಹರಣೆಗೆ ಸೈನೊಗ್ಲಾಸಸ್ ಸೆಮಿಫ್ಯಾಸಿಯೇಟಸ್.

ಟೆಟ್ರೊಡಾಂಟಿಫಾರ್ಮೀಸ್ ಎಂಬ ಗಣಕ್ಕೆ ಸೇರಿದ ಬುರುಡೆಮೀನು, ಉಬ್ಬು ಮೀನುಗಳಲ್ಲಿ ದೇಹ ಮೋಟಾಗಿಯೂ ದುಂಡಾಗಿಯೂ ಇರುತ್ತದೆ. ಇವು ತಮ್ಮ ದೇಹವನ್ನು ಬಲೂನಿನಂತೆ ಹಿಗ್ಗಿಸಿಕೊಳ್ಳಬಲ್ಲವು. ಉದಾಹರಣೆಗೆ ಟೆಟ್ರೊಡಾನ್ ಪಟೋಕ.

ದೇಹದ ಇತರ ವಿಪರೀತ ಮಾರ್ಪಾಡುಗಳನ್ನು ಹಾವುಮೀನುಗಳಲ್ಲಿ (ಈಲ್ - ಅಂಗ್ವಿಲಿಫಾರ್ಮೀಸ್) ಕಾಣಬಹುದು. ಇವುಗಳ ದೇಹ, ಹಾವಿನಂತೆ ನೀಳವಾಗಿ ದುಂಡಾಗಿ ಇರುತ್ತದೆ. ಉದಾಹರಣೆಗೆ ಅಂಗ್ವಿಲ ಬೆಂಗಾಲೆನ್ಸಿಸ್ (ಬಂಗಾಲದ ಹಾವು ಮೀನು).

ಸಿನ್ನಾಥಿಫಾರ್ಮಿಸ್ ಗಣದ ಕಡಲಕುದುರೆಗಳಲ್ಲಿ (ಸೀ ಹಾರ್ಸ್) ತಲೆ ಮುಂದಕ್ಕೆ, ದೇಹಕ್ಕೆ ಲಂಬವಾಗಿ ಬಾಗಿರುತ್ತದೆ, ಕತ್ತು ಸ್ಪಷ್ಟವಾಗಿರುತ್ತದೆ. ಬಾಲ ಕಪ್ಟರು ಶುಂಠಿಯಂತೆ ಸುರುಳಿಸುತ್ತಿ ಇತರ ವಸ್ತುಗಳನ್ನು ಹಿಡಿದುಕೊಳ್ಳಲು ಅನುವಾಗುವಂತಿದೆ. ಇದನ್ನು ಲಂಗರು ಹಾಕಿ ನಿಲ್ಲುವಂತೆ ಒಂದೇ ಸ್ಥಳದಲ್ಲಿ ನಿಲ್ಲಲು ಬಳಸಿಕೊಳ್ಳುತ್ತದೆ. ಉದಾಹರಣೆಗೆ ಹಿಪೊಕ್ಯಾಂಪಸ್ ಜಾತಿ.

ಹೀಗೆ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ, ಜೀವನಕ್ರಮಕ್ಕೆ ಅನುವಾಗುವಂತೆ ಮೀನುಗಳ ದೇಹಾಕೃತಿ ವಿಕಾಸಗೊಂಡು ವಿವಿಧ ರೂಪಗಳನ್ನು ತಾಳಿದೆ.

ಆದಿಮೀನುಗಳು, ಮುಂಡದ ಅಥವಾ ಬಾಲದ ಮಾಂಸಖಂಡಗಳ ಸಂಕೋಚನೆ ಅಥವಾ ಮಿಡಿತದಿಂದ ನೀರಿನಲ್ಲಿ ಸಾಗುತ್ತಿದ್ದವು. ಈಗಲೂ ಅನೇಕ ಮೀನುಗಳು ಈ ಪುರಾತನ ವಿಧಾನವನ್ನೇ ಉಳಿಸಿಕೊಂಡು ಬಂದಿವೆ. ಇವುಗಳ ದೇಹದ ಮಾಂಸಖಂಡ ಅಥವಾ ಸ್ನಾಯುಗಳು (ಮೈಯೊಮೀರ್‌ಗಳು) ಜೊತೆ ಜೊತೆಯಾಗಿ ಒಂದರ ಹಿಂದೆ ಒಂದು ಜೋಡಣೆಗೊಂಡಿವೆ. ಇವುಗಳ ಮಧ್ಯೆ ತಡಕೆಗಳುಂಟು. ಮೀನುಗಳಿಗೂ ಇತರ ಭೂಚರ ಕಶೇರುಗಳಿಗೂ ಇರುವ ವ್ಯತ್ಯಾಸಗಳಲ್ಲಿ ಇದೂ ಒಂದು. ಈ ಉಚ್ಚಪ್ರಾಣಿಗಳಲ್ಲಿ ಮಾಂಸಖಂಡಗಳು (ಚಲನೆಯಲ್ಲಿ ಬಳಕೆಯಾಗುವ ಮಾಂಸಖಂಡಗಳು) ಕೇಂದ್ರೀಕೃತವಾಗಿರುವುದು ಮುಂಗಾಲು ಹಿಂಗಾಲುಗಳಲ್ಲಿ ಮಾತ್ರ. ಮೈಯೊಮೀರ್ ಸ್ನಾಯುಗಳ ಮಿಡಿತ, ರೆಕ್ಕೆಗಳ (ಈಜುರೆಕ್ಕೆ) ಬಡಿತ ಮತ್ತು ಕಿವಿರುಗಳ ಮೂಲಕ ನೀರನ್ನು ರಭಸದಿಂದ ಹೊರ ಒಯ್ಯುವಿಕೆ-ಈ ಮೂರು ಕಾರಣಗಳಿಂದ ಮೀನುಗಳು ಚಲಿಸುತ್ತವೆ.

ಮೀನಿನ ಸರಾಸರಿ ವೇಗ, ಗಂಟೆಗೆ ಸುಮಾರು 11ಕಿ.ಮೀ. ಇತರ ಮೀನುಗಳನ್ನು ಆಥವಾ ಹಡಗಿನ ಆಥವಾ ದೋಣಿಯ ಮರವನ್ನು ಕೊರೆಯಬಲ್ಲ ಹರಿತವಾದ ಚಾಚಿರುವ ಮೇಲ್ದವಡೆಯುಳ್ಳ ಕತ್ತಿಮೀನು ಗಂಟೆಗೆ 96 ಕಿಮೀ ವೇಗದಲ್ಲಿ ಸಾಗಬಲ್ಲದು. ಕೇದಾರ ಮೀನಿನ ವೇಗ ಗಂಟೆಗೆ 80 ಕಿಮೀ. ಬಹಳ ಮಂದಗಾಮಿ ಮೀನೆಂದರೆ ಕಡಲಕುದುರೆ.

ಎಲ್ಲ ಜಾತಿಯ ಮೀನುಗಳಿಗೂ ನೀರಿನಲ್ಲಿ ಸಪಾಟವಾಗಿ ಸಮಮಟ್ಟದಲ್ಲಿ ಈಜಲು ಅನುಕೂಲವಾದ ದೇಹಾಕೃತಿ ಮತ್ತು ದೇಹರಚನೆ ಇರುತ್ತದೆ. ಆದರೂ ಈ ತೆರದ ಸಾಮಾನ್ಯ ಚಲನೆಗೆ ಕೆಲವು ಅಪವಾದಗಳು ಇಲ್ಲದೆ ಇಲ್ಲ. ಕೆಲವು ಹಾರಬಲ್ಲವು ಕೆಲವು ನಡೆಯಬಲ್ಲವು ಮತ್ತೆ ಕೆಲವು ಮೂಷಕಗಳಂತೆ ನೆಲವನ್ನು ಕೊರೆಯಬಲ್ಲವು.

ಕಡಲಕುದುರೆ ಲಂಬವಾಗಿ ಈಜಬಲ್ಲುದಾದರೆ ಸೂಜಿಮೀನುಗಳು ತಮ್ಮ ಸೂಚಿಸೊಂಡಿಲನ್ನು ಕೆಳಮುಖವಾಗಿ ತಿರುಗಿಸಿ ಲಂಬವಾಗಿ ಈಜಬಲ್ಲವು. ಈಜಿಪ್ಟಿನ ನೈಲ್‌ನದಿಯಲ್ಲಿ ಸಿಗುವ ಒಂದು ಬಗೆಯ ಮೀಸೆಮೀನು ಹೊಟ್ಟೆ ಮೇಲುಮಾಡಿಕೊಂಡು ಅಂಗಾತವಾಗಿ ಈಜುತ್ತದೆ.

ಮೀನಿನ ದೇಹದ ಹೊರಭಾಗಗಳು

ಕಿವಿರುಗಳು

ಮೀನು 
ತಲೆಯೊಳಗೆ ಟ್ಯೂನ ಮೀನಿನ ಕಿವಿರುಗಳು

ಮೀನುಗಳು ನೇರವಾಗಿ ವಾಯುವಿನಲ್ಲಿರುವ ಆಕ್ಸಿಜನ್ನನ್ನು ಉಚ್ಚ ಪ್ರಾಣಿಗಳಂತೆ ಹೀರಿಕೊಳ್ಳಲಾರವು. ಬದಲಿಗೆ ನೀರಿನಲ್ಲಿ ಕರಗಿರುವ ಆಕ್ಸಿಜನ್ನನ್ನು ಮಾತ್ರ ಉಪಯೋಗಿಸಬಲ್ಲವು. ಹೀರಿಕೆ ನಡೆಯುವುದು ಕಿವಿರುಗಳಿಂದ. ಉಚ್ಚಪ್ರಾಣಿಗಳಲ್ಲಿರುವ ಫುಪ್ಫುಸಗಳು ಮೀನುಗಳಲ್ಲಿ ಇಲ್ಲ.

ಕಿವಿರುಗಳು ಜೀರ್ಣಾಂಗದ ಮೇಲ್ಭಾಗದಲ್ಲಿರುವ ಫ್ಯಾರಿಂಕ್ಸ್ (ಗಂಟಲು) ಪ್ರದೇಶದಲ್ಲಿ ಸ್ಥಿತವಾಗಿವೆ. ಷಾರ್ಕುಗಳಲ್ಲಿ ಸಾಮಾನ್ಯವಾಗಿ 5 ಕಿವಿರುಗಳಿರುತ್ತವೆ. ಕೆಲವಲ್ಲಿ 6 ಅಥವಾ 7 ಕಿವಿರುಗಳು ಇರುವುದೂ ಉಂಟು. ಕಿವಿರುಗಳಲ್ಲಿ ಎಳೆ ಅಥವಾ ತಂತುಗಳು ಇರುತ್ತವೆ. ಇವನ್ನು ಬ್ರ್ಯಾಂಕಿಯಲ್ ಲಮೆಲ್ಲೆ ಎನ್ನುತ್ತಾರೆ. ಈ ತಂತುಗಳ ಒಂದು ಏಣು ಬಿಡಿಯಾಗಿದ್ದು ಕಿವಿರಿನ ಸಂಚಿಯೊಳಕ್ಕೆ ಚಾಚಿಕೊಂಡಿರುತ್ತವೆ. ಕಿವಿರಿನ ತೆರಪುಗಳೂ ಕೂಡ ಪ್ರತ್ಯೇಕವಾಗಿರುತ್ತವೆ.

ಮೂಳೆಮೀನುಗಳಲ್ಲಿ ಕಿವಿರುಗಳು ಪ್ರತ್ಯೇಕವಾಗಿ ತೆರೆದಿರದೆ ಜಲಶ್ವಾಸಾಂಗದ ಗೂಡಿನೊಳಗೆ ತೆರೆದಿರುತ್ತದೆ. ಇದರ ಹೊರಭಿತ್ತಿಯಲ್ಲಿ ಚಲಿಸಬಲ್ಲ ಮುಚ್ಚಳ ಅಥವಾ ತೆರೆ ಪಟ್ಟಿ ಇರುತ್ತದೆ. ಇದಕ್ಕೆ ಒಪರ್‌ಕ್ಯುಲಮ್ ಎಂದು ಹೆಸರು.

ಮೀನು ಉಸಿರೆಳೆದಾಗ, ಕಿವಿರಿನ ಕಮಾನು ಹಿಗ್ಗುವುದರ ಮೂಲಕ ಗಂಟಲು ದೊಡ್ಡದಾಗುತ್ತದೆ. ಹೀಗಾದಾಗ ನೀರು ಒಳಸರಿಯುತ್ತದೆ. ಆಗ ಕಿವಿರಿನ ಹೊರತೆರಪು ಅಥವಾ ಕಂಡಿ ಮುಚ್ಚಿರುತ್ತದೆ. ನಿಶ್ವಾಸಕ್ರಿಯೆಯಲ್ಲಿ ಮೊದಲು ಬಾಯಿ ಮುಚ್ಚಿ ಗಂಟಲು ಕಿರಿದಾಗುತ್ತದೆ. ಆಗ ಅದರೊಳಗಿದ್ದ ನೀರು ಕಿವಿರುಗಳ ಮೇಲೆ ಹರಿದು ಹೊರಹೋಗುತ್ತದೆ. ಕಿವಿರಿನ ತಂತುಗಳು ತೆಳುವಾಗಿವೆ. ಇವುಗಳ ಒಳಗೆ ರಕ್ತ ಹರಿಯುತ್ತಲೇ ಇರುತ್ತದೆ. ಈ ತಂತುಗಳ ಮೇಲೆ ನೀರು ಹಾದುಹೋದಾಗ, ನೀರಿನಲ್ಲಿ ಕರಗಿರುವ ಆಕ್ಸಿಜನ್ ರಕ್ತದಲ್ಲಿರುವ ಕಾರ್ಬನ್ ಡೈಆಕ್ಸೈಡ್ ವಿನಿಮಯವಾಗುತ್ತವೆ. ಆಕ್ಸಿಜನ್ ರಕ್ತವನ್ನು ಸೇರಿದರೆ ಕಾರ್ಬನ್ ಡೈಆಕ್ಸೈಡ್ ಹೊರಹೋಗುತ್ತದೆ.

ಉಸಿರಾಟದ ದರದಲ್ಲಿ ಮೀನುಗಳಲ್ಲಿ ವ್ಯತ್ಯಾಸಗಳುಂಟು. ಮಿನಿಟಿಗೆ 12 ಬಾರಿಯಿಂದ 150 ಬಾರಿ ಉಸಿರಾಡುವ ಮೀನುಗಳಿವೆ.

ಮೀನು ಜಾತಿಗಳಲ್ಲಿ ಬಹುಪಾಲು, ನೀರಿನ ಹೊರಗೆ ಬಹಳ ಕಾಲ ಜೀವಿಸಲಾರವು. ಅದರೆ ಮೀಸೆ ಮೀನು, ಕುಚ್ಚು ಮೀನು, ಕಲ್ಲು, ಗಿಡಗಳನ್ನು ಏರಬಲ್ಲ, ಕ್ಲೈಂಬಿಂಗ್ ಪರ್ಚ್ ಮುಂತಾದವುಗಳಲ್ಲಿ ತಲೆಯ ಎರಡು ಕಡೆಯೂ ವಿಶೇಷ ಶ್ವಾಸಾಂಗಗಳು ಇರುವುದರಿಂದ ಇವು ಹೆಚ್ಚು ಕಾಲ ನೀರಿನಿಂದ ಹೊರಗೆ ಜೀವಿಸಬಲ್ಲವು. ಗಾಳಿಯನ್ನು ಜಲಶ್ವಾಸಾಂಗದ ಗೂಡುಗಳಲ್ಲಿ ಹಿಡಿದಿಡುವ ವ್ಯವಸ್ಥೆ ಉಂಟು. ಪ್ರತಿಯೊಂದು ಗೂಡೂ, ಹೂಕೋಸಿನ ಆಕಾರದ ಸ್ನಾಯುಯುಕ್ತ ಅಂಗ.

ಮೀನುಗಳಲ್ಲಿ ಶ್ವಾಸಾಂಗಗಳಲ್ಲದೆ (ಕಿವಿರು) ಸಹಾಯಕ (ಆನುಷಂಗಿಕ) ಶ್ವಾಸಾಂಗಗಳೂ ಉಂಟು. ಇವು ಫುಪ್ಫುಸದಂತೆ ಕಾಣುವ ಚೀಲಗಳಾಗಿದ್ದು ದೇಹದ ಕುಳಿಯಲ್ಲಿ, ಬೆನ್ನು ಮೂಳೆಯ ಕೆಳಗೆ ಇವೆ. ಇವುಗಳ ಆಕಾರ ಮತ್ತು ಗಾತ್ರ ಎಲ್ಲ ಮೀನುಗಳಲ್ಲೂ ಒಂದೇ ಬಗೆಯಾಗಿ ಇರುವುದಿಲ್ಲ. ಇದು ಜಲ ಸಮಸ್ಥಿತಿಯನ್ನು ಏರ್ಪಡಿಸುವ ಅಂಗ. ಕೆಲವು ಮೀನುಗಳಲ್ಲಿ ಇದರಿಂದ ಶಬ್ದ ಉತ್ಪತ್ತಿಯಾಗುವುದೂ ಉಂಟು. ಮತ್ತೆ ಕೆಲವು ಮೀನುಗಳಲ್ಲಿ ಇದು ಶಬ್ದಗ್ರಾಹಿ ಅಂಗವಾಗಿದೆ. ಉಚ್ಚಪ್ರಾಣಿಗಳಲ್ಲಿ ಫುಪ್ಪುಸನಾಳಕ್ಕೂ ಅನ್ನನಾಳಕ್ಕೂ ಸಂಪರ್ಕವಿರುವಂತೆ ಈ ಅಂಗಕ್ಕೂ ಮೀನಿನ ಜೀರ್ಣಾಂಗಗಳಿಗೂ ಸಂಪರ್ಕವಿದೆ. ಡಿಪ್ನಾಯಿಸ್ಟಿ ಎಂಬ ಫುಪ್ಪುಸಮೀನುಗಳಲ್ಲಿ ಈ ಅಂಗ ನಿಜವಾದ ಫುಪ್ಪುಸವಾಗಿ ರೂಪುಗೊಂಡಿದೆ.

ಈಜುರೆಕ್ಕೆಗಳು

ಮೀನು 
ಲ್ಯಾಂಪಾನಿಕ್ಟೋಡಿಸ್ ಹೆಕ್ಟೋರಿಸ್‍ನ ಅಂಗರಚನೆ (1) ಓಪರ್‌ಕ್ಯುಲಮ್ (ಕಿವಿರಿನ ಮುಚ್ಚಳ), (2) ಪಾರ್ಶ್ವರೇಖೆ, (3) ಬೆನ್ನುರೆಕ್ಕೆ, (4) ದಪ್ಪರೆಕ್ಕೆ, (5) ಬಾಲದ ಪೆಡಂಕಲ್, (6) ಬಾಲದ ರೆಕ್ಕೆ, (7) ಗುದರೆಕ್ಕೆ, (8) ಫೋಟೋಫೋರ್‌ಗಳು, (9) ಸೊಂಟರೆಕ್ಕೆಗಳು (ಜೋಡಿ), (10) ಎದೆರೆಕ್ಕೆಗಳು (ಜೋಡಿ)

ಈಜುರೆಕ್ಕೆಗಳು ಮೀನಿನ ವಿಲಕ್ಷಣವಾದ ವಿಶಿಷ್ಟ ಚಲನಾಂಗಗಳು. ಇವುಗಳ ಸಹಾಯದಿಂದ ಮೀನು ನೀರಿನಲ್ಲಿ ಸ್ಥಿರವಾಗಿ ಚಲಿಸಬಲ್ಲದು. ವಾಲಿ ಹೊರಳಿ ಬೀಳದಂತೆ, ಸಮವಾಗಿ ತೇಲಬಲ್ಲದು. ಈಜುವಾಗ ತಿರುಗಲು ಅಥವಾ ದಿಕ್ಕು ಬದಲಾಯಿಸಲು ಸಾಧ್ಯವಿರುವುದು. ಈ ಚುಕ್ಕಾಣಿಗಳಿಂದಲೇ, ಸ್ಥಿರತೆ ಸಮತೋಲನ ಮತ್ತು ದಿಕ್ಕು ಬದಲಾವಣೆಗೆ ಅನುಕೂಲವಾಗುವಂತೆ ಈ ರೆಕ್ಕೆಗಳು ವಿಕಾಸಗೊಂಡಿವೆ. ಈಜುರೆಕ್ಕೆಗಳಲ್ಲಿ ಎರಡು ಬಗೆ: ಮಧ್ಯರೆಕ್ಕೆ (ಮೀಡಿಯನ್) ಮತ್ತು ಜೋಡಿರೆಕ್ಕೆ.

ಬೆನ್ನಿನ ಮೇಲೆ ಒಂದು ಒಂಟಿ ಬೆನ್ನುರೆಕ್ಕೆ, ಗುದದ್ವಾರದ ಹಿಂದೆ ಹೊಟ್ಟೆಯ ಮೇಲೆ ಮತ್ತೊಂದು ಗುದರೆಕ್ಕೆ ಮತ್ತು ಇನ್ನೊಂದು ಒಂಟಿ ರೆಕ್ಕೆ ಬಾಲದ ಭಾಗದಲ್ಲಿ. ಬಾಲದ ರೆಕ್ಕೆಗಳು ಮಧ್ಯರೆಕ್ಕೆಗಳಾದರೆ ಜೊತೆರೆಕ್ಕೆಗಳು ಒಂದು ಜೊತೆ ಹೆಗಲಿನ ಬಳಿ-ತೋಳುರೆಕ್ಕೆ, ಮತ್ತೊಂದು ಜೊತೆ ಸೊಂಟದ ಬಳಿ-ಸೊಂಟದ ರೆಕ್ಕೆಗಳಾಗಿವೆ. ಇವನ್ನು ಉಚ್ಚಪ್ರಾಣಿಗಳ ಕೈಕಾಲುಗಳಿಗೆ ಹೋಲಿಸಬಹುದು.

ಬೆನ್ನು ರೆಕ್ಕೆಯ ಮಾರ್ಪಾಡು: ಸ್ಟಿಂಗ್‌ರೇ ಮೀನುಗಳಲ್ಲಿ ಬೆನ್ನುರೆಕ್ಕೆಗಳೇ ಇಲ್ಲ. ಕೆಲವು ಷಾರ್ಕ್ ಮೀನುಗಳಲ್ಲಿ ಈ ಬೆನ್ನುರೆಕ್ಕೆಯ ಮುಂದೆ ಬಹಳ ಬಲವಾದ ಚೂಪಾದ ಮುಳ್ಳುಗಳಿವೆ. ಹೀರು ಸಿಂಬಿಮೀನುಗಳಲ್ಲಿ (ರೆಮೋರ ರೆಮೋರ) ಈ ರೆಕ್ಕೆ, ತಲೆಯ ಅಗಲವಾದ ಚಪ್ಪಟೆಯಾದ ಜಾಗದಲ್ಲಿ ಸಿಂಬಿಯಾಕಾರದ ಹೀರು ತಟ್ಟೆಯಾಗಿ ಮಾರ್ಪಾಡಾಗಿದೆ.

ಗುದರೆಕ್ಕೆಯಲ್ಲಿ ಮಾರ್ಪಾಡುಗಳು: ಹಾವುಮೀನುಗಳಲ್ಲಿ (ಈಲ್ ಮೀನುಗಳು) ಈಜುರೆಕ್ಕೆ ಬಹಳ ಉದ್ದವಾಗಿದೆ. ಸೈಪ್ರಿನೋಡಾಂಟಿಫಾರ್ಮೀಸ್ ಗಣದ ಮೀನುಗಳಲ್ಲಿ (ಸಾಸಲು, ಅಗಸಗಿತ್ತಿ ಮೀನು, ಜೀಬ್ರಮೀನು, ಕೆಮ್ಮೀನು ಮುಂತಾದವು) ಈ ರೆಕ್ಕೆ ಸಂಭೋಗದ ಅಂಗವಾಗಿ ಮಾರ್ಪಾಡಾಗಿದೆ.

ಬಾಲದ ರೆಕ್ಕೆಯ ಕಾರ್ಯವೂ ವಿಭಿನ್ನವಾಗಿರುವುದುಂಟು. ಕಡಲಕುದುರೆಯಲ್ಲಿ ಬಾಲ ಹಿಡಿಯುವ ಅಂಗವಾಗಿರುವುದರಿಂದ ಈ ರೆಕ್ಕೆಯೇ ಇರುವುದಿಲ್ಲ.

ಕೆಲವು ಮೀನುಗಳಲ್ಲಿ ತೋಳರೆಕ್ಕೆಗಳ ಹೊರಅಂಚು ದಪ್ಪ ಮುಳ್ಳುಗಳಾಗಿ ರೂಪುಗೊಂಡಿದೆ. ಹಾರುಮೀನುಗಳಲ್ಲಿ ಇವು ವಿಸ್ತಾರವಾಗಿದ್ದು ಇವುಗಳ ಸಹಾಯದಿಂದ ಈ ಮೀನುಗಳು ಹಾರಬಲ್ಲವು.

ಸೊಂಟದ ರೆಕ್ಕೆಗಳಲ್ಲೂ ಅವು ದೇಹಕ್ಕೆ ಸೇರುವ ಜಾಗದಲ್ಲೂ ರೂಪದಲ್ಲೂ ವೈವಿಧ್ಯವಿದೆ. ಷಾರ್ಕುಗಳಲ್ಲಿ ಸೊಂಟದ ರೆಕ್ಕೆಯ ಹಿಂಭಾಗ ತಬ್ಬಿಕೊಳ್ಳುವುದಕ್ಕೆ ಅನುಕೂಲವಾಗಿ ಮಾರ್ಪಾಡಾಗಿದೆ. ಗರ್ಭಾದಾನ ಕ್ರಿಯೆಗೆ ಇದು ಸಹಾಯಕ. ಕಲ್ಲುಕುರಿ ಮುಂತಾದ ಹೊಳೆ ಮೀನುಗಳಲ್ಲಿ ಈ ರೆಕ್ಕೆ ಹೀರುಸಿಂಬಿಯಂತೆ ರೂಪಿತವಾಗಿದೆ. ಇದರಿಂದ ಈ ಮೀನುಗಳು ಕಲ್ಲುಬಂಡೆಗಳನ್ನು ಕಚ್ಚಿಕೊಳ್ಳಬಲ್ಲವು. ಹಾವು ಮೀನುಗಳಲ್ಲಿ ಸೊಂಟದ ರೆಕ್ಕೆಗಳಿಲ್ಲ.

ಚರ್ಮ, ಶಲ್ಕ (ಹುರುಪೆ)

ಮೀನಿನ ಚರ್ಮ ಎರಡು ಪದರಗಳಿಂದ ಕೂಡಿದೆ: ಹೊರಚರ್ಮ ಮತ್ತು ಒಳಚರ್ಮ. ಹೊರಚರ್ಮದಲ್ಲಿ ಲೋಳೆಯನ್ನು ಸೂಸುವ ಲೋಳೆಗ್ರಂಥಿಗಳಿದೆ. ಇವು ಉತ್ಪತ್ತಿ ಮಾಡುವ ಬಂಕೆ (ಅಂಟು), ಮೀನಿನ ದೇಹದ ಮೇಲೆಲ್ಲ ಹರಡಿರುತ್ತದೆ. ಈ ಹೊರಚರ್ಮದ ಹೊರಪದರದಲ್ಲೇ ಅನೇಕ ಮೀನುಗಳಲ್ಲಿ ಫಲಕ ಅಥವಾ ಶಲ್ಕಗಳಿವೆ. ಇವು ಮೀನಿನ ಚರ್ಮದ ಉತ್ಪನ್ನ. ಇವುಗಳಲ್ಲಿ ಸುಣ್ಣದ ಲವಣಗಳುಂಟು. ಶಲ್ಕಗಳ ಆಕಾರ ಮುಂತಾದ ಲಕ್ಷಣಗಳಲ್ಲಿ ವೈವಿಧ್ಯವಿದೆ.

ಇಲ್ಯಾಸ್ಮೊಬ್ರಾಂಕ್ ಮೀನುಗಳಲ್ಲಿ ಶಲ್ಕಗಳು ಚರ್ಮದಿಂದ ಹೊರಹೊರಟು ಸಣ್ಣ ಹಲ್ಲುಗಳಂತೆ ಇವೆ. ಇವಕ್ಕೆ ಪ್ಲಕಾಯಡ್ ಫಲಕಗಳೆಂದು ಹೆಸರು. ದಂತಭಾಗದ ಮುಳ್ಳುಗಳ ಮೇಲೆ ಎನಾಮಲ್ ವಸ್ತುವಿನ ಗಟ್ಟಿ ಹೊದಿಕೆಯಿದೆ.

ಈ ಶಲ್ಕಗಳಲ್ಲೂ ಮಾರ್ಪಾಡುಗಳು ಇರುವುದುಂಟು. ಸ್ಟಿಂಗ್‌ರೇ ಮೀನುಗಳಲ್ಲಿ (ಪುಚಿಬಳಿಯಾರ್ ಕೊಟ್ಟಿರ ತೊರಕೆ) ಇವು ಒಟ್ಟಾಗಿ ಕೂಡಿ ಬೆಳೆದು ಬಾಲದ ಮುಳ್ಳಾಗಿ ರೂಪುಗೊಂಡಿದೆ.

ರಂಪದ ಮೀನುಗಳಲ್ಲಿ (ಪ್ರಿಸ್ಟಿಡೀ) ಇರುವ ಉದ್ದವಾದ, ಚಪ್ಪಟೆಯಾದ ಗರಗಸದಂತಿರುವ ಅಲಗು ಕೂಡ ಈ ಚರ್ಮದಂತಗಳ ರೂಪಾಂತರವೇ.

ಮೂಳೆಮೀನುಗಳಲ್ಲಿ ಹುರುಪೆಗಳು ಚರ್ಮದಿಂದ ರೂಪಿತವಾಗಿವೆ. ಇವುಗಳ ಮೇಲೆ ಎನಾಮಲ್ ವಸ್ತುವಿರುವುದಿಲ್ಲ. ಈ ಬಗೆಯ ಮೀನುಗಳ ಪೂರ್ವಜ ಪ್ರಾಣಿಗಳಲ್ಲಿ ದೇಹದ ಮೇಲೆಲ್ಲ ಹೊಳೆಯುವ ಎಲುಬಿನ ಫಲಕಗಳು ಇದ್ದುವೆನ್ನಲಾಗಿದೆ. ಇವು ಶತ್ರುಗಳನ್ನು ಎದುರಿಸುವ ಅಥವಾ ಅವುಗಳಿಂದ ಪಾರಾಗುವ ಗುರಾಣಿಯಂತೆ. ಈ ಫಲಕಗಳನ್ನು ಗ್ಯಾನಾಯಿಡ್ ಹುರುಪೆಗಳೆಂದು ಕರೆಯಲಾಗುತ್ತದೆ.

ಹುರುಪೆಗಳ ಜೋಡಣೆಯನ್ನು ತಿಳಿಯಲು ಕಾರ್ಪುಗಳನ್ನು (ಸಿಹಿನೀರಿನಲ್ಲಿ ವಾಸಮಾಡುವ ಸಾಸಲು, ಕೆಮ್ಮೀನು, ತಾರಿಮೀನು ಮುಂತಾದವು) ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇವುಗಳಲ್ಲಿ ಈ ಹುರುಪೆಗಳು ತಲೆ ವಿನಹ ದೇಹದ ಇತರ ಎಲ್ಲ ಭಾಗಗಳ ಮೇಲೂ ಸಾಲುಸಾಲಾಗಿ ಇರುತ್ತವೆ. ತೆಳ್ಳಗಿರುವ ಇವನ್ನು ಸೈಕ್ಲಾಯಿಡ್ ಹುರುಪೆಗಳು ಎನ್ನುತ್ತಾರೆ.

ಒಂದೊಂದು ಹುರುಪೆಯಲ್ಲೂ ಮುಂಭಾಗದ ತುದಿ ಚರ್ಮದಡಿ ಇರುವ ಒಂದು ಚೀಲದಲ್ಲಿ ಸೇರಿರುತ್ತದೆ: ಹಿಂಭಾಗ ಸ್ವತಂತ್ರವಾಗಿರುತ್ತದೆ. ಹಿಂಭಾಗದಲ್ಲಿ ಹಲ್ಲಿನಂಥ ಮುಳ್ಳುಗಳ ಸಾಲು ಇದ್ದರೆ ಇವನ್ನು ಟೀನಾಯಡ್ ಹುರುಪೆಗಳೆಂದು ಕರೆಯುವುದಿದೆ. ಇವು ಪೊರೆ, ಮುಳ್ಳು, ಗುಬಟು ಅಥವಾ ಗಳಲೆ ಇತ್ಯಾದಿ ರೀತಿಯಾಗಿಯೂ ರೂಪಾಂತರವಾಗಬಹುದು.

ಅನೇಕ ಮೀನುಗಳಲ್ಲಿ ಹುರುಪೆಗಳ ಜೋಡಣೆ ಕ್ರಮಬದ್ಧವಾಗಿರುತ್ತದೆ. ಒಂದೊಂದು ನಿರ್ದಿಷ್ಟ ವಂಶದಲ್ಲೂ ಇವುಗಳ ಗಾತ್ರ, ಸಂಖ್ಯೆ, ವಿನ್ಯಾಸ ಏಕಪ್ರಕಾರವಾಗಿರುತ್ತದೆ.

ಪಾರ್ಶ್ವರೇಖೆ

ಮೀನಿನ ದೇಹದ ಮೇಲೆ ಎರಡೂ ಪಕ್ಕೆಗಳಲ್ಲಿ ಒಂದು ರೀತಿಯ ಕಾಲುವೆ ಉಂಟು. ಇದೇ ಪಾರ್ಶ್ವರೇಖೆ. ಇದರ ಅಡಿಯಲ್ಲಿ ವಿಶೇಷವಾದ ಜ್ಞಾನೇಂದ್ರಿಯಗಳುಂಟು. ಹುರುಪೆಗಳ ಒಳಗಿರುವ ರಂಧ್ರಗಳ ಮೂಲಕ ಈ ಕಾಲುವೆಯಲ್ಲಿ ಒಂದು ಭಾಗಕ್ಕೂ ಮತ್ತೊಂದು ಭಾಗಕ್ಕೂ ಸಂಪರ್ಕ ಏರ್ಪಟ್ಟಿದೆ.

ಮೀನಿನ ವಯಸ್ಸನ್ನು ಅಂದಾಜಿಸುವುದು: ಕೆಲವು ಮೀನು ಗುಂಪುಗಳಲ್ಲಿ ಮೀನಿನ ವಯಸ್ಸನ್ನು ಹುರುಪೆಗಳ ಮೇಲಿರುವ ಗೀಚು ಅಥವಾ ಗೆರೆಗಳಿಂದ ಅಂದಾಜು ಮಾಡಬಹುದು. ಮೀನಿನ ಜೀವಪರ್ಯಂತ ಹುರುಪೆಗಳು ಬೆಳೆಯುತ್ತಿದ್ದು ಹುರುಪೆಗಳ ಮೇಲೆ ಗೆರೆಗಳು ಮೂಡುತ್ತವೆ. ವರ್ಷದ ನಾನಾ ಋತುಗಳಲ್ಲಿ ನಡೆದ ಮೀನಿನ ವೃದ್ಧಿಯ ದಾಖಲೆಗಳು ಅಥವಾ ಸೂಚಕಗಳು ಇವು. ವಸಂತ ಮತ್ತು ಗ್ರೀಷ್ಮದಲ್ಲಿ ಅನೇಕ ಗೆರೆಗಳು ಸೇರಿ ಹುರುಪೆಗಳು ಬೆಳೆಯುತ್ತವೆ. ಈ ಗೆರೆ ಅಥವಾ ರೇಖೆಗಳ ಮಧ್ಯದ ಅಂತರ ಸ್ಪಷ್ಟವಾಗಿರುತ್ತದೆ. ಚಳಿಗಾಲದಲ್ಲಿ ಗೆರೆಗಳ ಬೆಳೆವಣಿಗೆ ನಿಧಾನ. ಆದ್ದರಿಂದ ಗೆರೆಗಳ ಹುರುಪೆಗಳ ಸಂಖ್ಯೆಯೂ ಕಡಿಮೆ; ಗೆರೆಗಳೂ ಒತ್ತಾಗಿರುತ್ತವೆ. ಹೀಗೆ ಚಳಿಗಾಲದಲ್ಲಿ ಮೀನಿನ ಬೆಳೆವಣಿಗೆ ಮತ್ತು ಗೆರೆಗಳಲ್ಲಿ ಆಗುವ ತಡೆ ಮೀನಿನ ವಯಸ್ಸನ್ನು ನಿರ್ಧರಿಸಲು ನೆರವಾಗುತ್ತವೆ.

ಬಾಯಿ

ಇಲ್ಯಾಸ್ಮೊಬ್ರಾಂಕ್ ಮೀನುಗಳಲ್ಲಿ ಬಾಯಿ ತಲೆಯ ಆದಿಭಾಗದಲ್ಲಿದ್ದು ಅರ್ಧಚಂದ್ರಾಕೃತಿಯಲ್ಲಿರುತ್ತದೆ. hello ಮೂಳೆಮೀನುಗಳಲ್ಲಾದರೆ ಬಾಯಿ ತಲೆಯ ತುದಿಯಲ್ಲಿ ಸ್ಥಿತವಾಗಿದೆ. ಆಹಾರದ ಬಗೆ ಆಹಾರವನ್ನು ತಿನ್ನುವ ರೀತಿ ಇದಕ್ಕೆ ಅನುಗುಣವಾಗಿ ಬಾಯಿಯ ಗಾತ್ರ ಮತ್ತು ಸ್ಥಾನಗಳಲ್ಲಿ ವೈವಿಧ್ಯ ಕಾಣಬರುತ್ತದೆ.

ದವಡೆ, ಹಲ್ಲುಗಳು: ಹೆಮಿರ‍್ಯಾಂಫಿಡೀ (ಕಂಡೆ ಮೀನಿನ ಕುಲ) ಗುಂಪಿನ ಮೀನುಗಳಲ್ಲಿ ಕೆಳದವಡೆ ಮೇಲ್ದವಡೆಗಿಂತ ಉದ್ದ. ಬಿಲೋನಿಡೀ (ಕೊಂಟೆಮೀನುಗಳ ಕುಲ) ಗುಂಪಿನವಲ್ಲಿ ಎರಡು ದವಡೆಗಳೂ ಮುಂದೆ ಚಾಚಿ ಕೊಕ್ಕಿನ ರೂಪತಾಳಿವೆ. ಕತ್ತಿಮೀನಿನಲ್ಲಿ ಮೇಲಿನ ದವಡೆ ಮಾತ್ರ ಮುಂದೆ ಚಾಚಿದೆ. ಕಾರ್ಪುಮೀನುಗಳ ಪೈಕಿ ಕೆಲವು ಬಗೆಗಳು ಬೇಕಾದಾಗ ಬಾಯನ್ನು ಉದ್ದಕ್ಕೆ ಚಾಚಬಲ್ಲವು. ಇಲ್ಯಾಸ್ಮೊಬ್ರಾಂಕ್ ಮೀನುಗಳಲ್ಲಿ ಹಲ್ಲುಗಳು ಮಾರ್ಪಾಟುಹೊಂದಿದ ದಂತರಚನೆಗಳಾಗಿದ್ದು ದವಡೆಯಲ್ಲಿ ಮಾತ್ರ ಇವೆ. ಮೂಳೆಮೀನುಗಳಲ್ಲಿ ಸಣ್ಣ ಹಲ್ಲುಗಳು, ನಾಲಗೆಯ ಮೇಲೂ ಬಾಯಿಯ ಅಂಗುಳದಲ್ಲೂ ಇರುವುದುಂಟು. ಬಿಳಿಮೀನಿನಲ್ಲಿ ಗಂಟಲಿನಲ್ಲೂ ಇರುವುದುಂಟು. ಹಲ್ಲುಗಳ ಗಾತ್ರದಲ್ಲಿ, ಆಕಾರದಲ್ಲಿ ಅನೇಕ ವ್ಯತ್ಯಾಸಗಳನ್ನು ಕಾಣಬಹುದು.

ವಿಷಗ್ರಂಥಿಗಳು: ಇಲ್ಯಾಸ್ಮೊಬ್ರಾಂಕಿ ಉಪವರ್ಗದ ಡೇಸಿಯಾಚಿಡೀ ಕುಟುಂಬಕ್ಕೆ ಸೇರಿದ ಸ್ಟಿಂಗ್‌ರೇ ಮತ್ತು ಮಿಲಿಯೊಬ್ಯಾಟಿಡೀ ಕುಟುಂಬಕ್ಕೆ ಸೇರಿದ ಈಗಲ್ ರೇ ಮೀನುಗಳಲ್ಲಿ ವಿಷಗ್ರಂಥಿಗಳಿವೆ. ಮೂಳೆಮೀನುಗಳಲ್ಲಿ ಈ ಗ್ರಂಥಿಗಳ ರಚನೆ ಸ್ವಲ್ಪ ಜಟಿಲವಾಗಿಯೇ ಇದೆ. ಮೀಸೆಮೀನು ಮತ್ತು ಚೇಳುಮೀನುಗಳಲ್ಲಿ ವಿಷಗ್ರಂಥಿಗಳು ಹರಿತವಾದ ಮುಳ್ಳುಗಳ ಜೊತೆಗೆ ಇದ್ದು, ಸ್ವರಕ್ಷಣೆಗಾಗಿ ಇಲ್ಲವೆ ಇತರ ಪ್ರಾಣಿಗಳ ವಿರುದ್ಧ ಬಳಸಿಕೊಳ್ಳುವ ಸಾಧನಗಳಾಗಿವೆ.

ಕೆಲವು ಬಗೆಯ ಮೀನುಗಳಲ್ಲಿ ವಿಷಗ್ರಂಥಿಗಳು ಇಲ್ಲದಿದ್ದರೂ ಅವುಗಳ ಸ್ನಾಯುಗಳಲ್ಲಿ ವಿಷವಸ್ತುಗಳು ವ್ಯಾಪಿಸಿರುತ್ತದೆ. ಇಂಥ ಮೀನುಗಳನ್ನು ತಿಂದಲ್ಲಿ ದೇಹಕ್ಕೆ ಅಪಾಯವೂ ಕೆಲವು ವೇಳೆ ಸಾವೂ ಆಗಬಹುದು. ಟೆಟ್ರೊಡಾಂಟಿಡೀ ಕುಟುಂಬದ ಬುರುಡೆಮೀನುಗಳು ಇವುಗಳ ಪೈಕಿ ಕೆಲವು.

ವಿದ್ಯುತ್ ಉತ್ಪತ್ತಿ ಸಾಮರ್ಥ್ಯ: ಕೆಲವು ಮೀನುಗಳು ವಿದ್ಯುತ್ತನ್ನು ಉತ್ಪತ್ತಿಮಾಡಬಲ್ಲವು. ಇವನ್ನು ಮುಟ್ಟಿದೊಡನೆಯೆ ವಿದ್ಯುತ್ ಆಘಾತ ಉಂಟಾಗುತ್ತದೆ. ಉದಾಹರಣೆಗೆ ಟಾರ್ಪಿಡೊ, ಸ್ಕೇಟ್ ಮತ್ತು ರೇ ಮೀನುಗಳು. ಟಾರ್ಪಿಡಿನಿಡೀ ಕುಟುಂಬದ ಮೀನುಗಳಲ್ಲಿ ತಲೆಗೂ, ಉಬ್ಬಿರುವ ಸೊಂಟದ ರೆಕ್ಕೆಗಳಿಗೂ ಮಧ್ಯೆ ದೇಹದ ಎರಡು ಪಕ್ಕಗಳಲ್ಲೂ ಸಿಂಬಿಯಂತಿರುವ ಎರಡು ವಿದ್ಯುಜ್ಜನಕ ಅಂಗಗಳಿವೆ. ಅಂಗದ ಮೇಲ್ಭಾಗ ಧನವಿದ್ಯುತ್ತನ್ನೂ ತಳಭಾಗ ಋಣವಿದ್ಯುತ್ತನ್ನೂ ಹೊತ್ತಿರುತ್ತದೆ.

ಮೂಳೆಮೀನುಗಳ ಪೈಕಿ ಎಲೆಕ್ಟ್ರಿಕ್ ಈಲ್ (ಒಂದು ಬಗೆಯ ಹಾವು ಮೀನು) ಮತ್ತು ಎಲೆಕ್ಟ್ರಿಕ್ ಚೇಳುಮೀನುಗಳಲ್ಲಿ ಈ ತೆರನ ವಿಶಿಷ್ಟ ಅಂಗಗಳುಂಟು. ಆಹಾರ ಪ್ರಾಣಿಗಳನ್ನು ಕೊಲ್ಲುವುದಕ್ಕೂ ನಿಶ್ಚೇತನಗೊಳಿಸುವುದಕ್ಕೂ ಇವನ್ನು ಬಳಸಿಕೊಳ್ಳುತ್ತದೆ.

ಬೆಳಕು ಉತ್ಪತ್ತಿಮಾಡುವ ಸಾಮರ್ಥ್ಯ: ಕೆಲವು ಬಗೆಯ ಮೀನುಗಳಲ್ಲಿ ಬೆಳಕನ್ನು ಉತ್ಪಾದಿಸುವ ಸ್ಫುರಸಂದೀಪ್ತ ಅಂಗಗಳಿವೆ. ಇವು ಕೇವಲ ಸರಳ ಜೀವಕೋಶಗಳಾಗಿರಬಹುದು ಇಲ್ಲವೆ ಜಟಿಲ ರಚನೆಯುಳ್ಳ ಅಂಗಗಳಾಗಿರಬಹುದು. ಬೊಂಬ್ಲಿ (ಬಾಂಬೆ ಡಕ್-ಹಾರ್ಪೊಡಾನ್, ಹಾರ್ಪೊಡಾನ್ ನೆಹೀರಿಯಸ್) ಮೀನನ್ನು ಹಿಡಿದ ಕ್ಷಣದಲ್ಲಿ ಉಜ್ವಲವಾಗಿ ಮಿನುಗುತ್ತಿರುತ್ತದೆ. ಈ ಮೀನಿನಲ್ಲಿ ಬೆಳಕು ಉತ್ಪಾದಿಸುವ ವಿಶೇಷ ಅಂಗವಿಲ್ಲವಾದರೂ ಅದರ ಮೈಮೇಲಿರುವ ಕೆಲವು ಸ್ಫುರಸಂದೀಪ್ತ ಬ್ಯಾಕ್ಟೀರಿಯಗಳಿಂದಾಗಿ ಈ ಗುಣವನ್ನು ತೋರುತ್ತದೆ. ಇಲ್ಯಾಸ್ಮೊಬ್ರಾಂಕಿ ಗುಂಪಿನ ಕೆಲವು ಷಾರ್ಕುಗಳಲ್ಲಿ ಬೆಳಕನ್ನು ಉತ್ಪತ್ತಿಮಾಡುವ ಸಾಮರ್ಥ್ಯವಿದೆ. ಮೂಳೆಮೀನುಗಳ ಪೈಕಿ ಆಳ ಸಾಗರವಾಸಿಗಳಾದ ಕೆಲವು ಪ್ರಭೇದಗಳಲ್ಲಿ ಫೋಟೊಫೋರ್ಸ್ ಎಂಬ ಬೆಳಕು ಬೀರುವ ವಿಶೇಷ ಅಂಗವಿದೆ.

ಲ್ಯಾಟಿನು ಮೀನುಗಳಲ್ಲಿ ಫೋಟೊಫೋರ್ಸ್ ಅಂಗಗಳು ಉದ್ದವಾಗಿಯೂ ಹೆಚ್ಚು ಪ್ರಕಾಶಯುತವಾಗಿಯೂ ಇದೆ.

ಶಬ್ದ ಉತ್ಪಾದಿಸುವ ಸಾಮರ್ಥ್ಯ: ಮೀನುಗಳು ಶಬ್ದವನ್ನು ಉತ್ಪತ್ತಿ ಮಾಡುವುದಿಲ್ಲವೆಂಬುದು ಸಾಮಾನ್ಯ ನಂಬಿಕೆ. ಇದು ನಿಜವಲ್ಲ. ಅನೇಕ ಮೂಳೆಮೀನುಗಳು ಕೆಲವು ವಿಶೇಷ ಅಂಗಗಳ ಮೂಲಕ ಶಬ್ದವನ್ನು ಉತ್ಪತ್ತಿ ಮಾಡುತ್ತವೆ. ಈ ಅಂಗಗಳು ಗಾಳಿಬುರುಡೆ, ಮುಳ್ಳು ಮತ್ತು ಕಶೇರುಗಳೊಡನೆ ಲಗತ್ತಾಗಿರುವುವು. ನಳ್ಳಿ ಮೀನುಗಳು (ಲೋಚಸ್), ಕಾರ್ಪುಗಳು ಮತ್ತು ಮೀಸೆಮೀನುಗಳು ಶಬ್ದವನ್ನು ಉತ್ಪಾದಿಸುವ ಮೀನುಗಳ ಪೈಕಿ ಕೆಲವೆನಿಸಿವೆ.

ಒಳಅಂಗಗಳು

ಒಳಅಂಗಗಳು ಮೀನಿನ ಕಂಕಾಲ, ಜೀರ್ಣಾಂಗ ಮಂಡಲ, ರಕ್ತಪರಿಚಲನಾಂಗ ಮಂಡಲ, ನರಮಂಡಲ ಇತ್ಯಾದಿ ಅಂಗಗಳನ್ನು ಒಳಗೊಂಡಿವೆ.

ಕಂಕಾಲ

ಕಂಕಾಲದಲ್ಲಿ ಮೂರು ಭಾಗಗಳುಂಟು- ತಲೆಯೋಡು ಅಥವಾ ಕಪಾಲ, ಕಶೇರುಕಂಬ ಅಥವಾ ಬೆನ್ನುಹುರಿ ಮತ್ತು ಈಜುರೆಕ್ಕೆಗಳು.

ಕಪಾಲದಲ್ಲಿ ಎರಡು ಭಾಗ:

  1. ಮಿದುಳು ಮತ್ತು ಜ್ಞಾನೇಂದ್ರಿಯಗಳನ್ನು ಆವರಿಸಿರುವ ಕ್ರೇನಿಯಮ್ (ಮಿದುಳುಕೋಶ)
  2. ದವಡೆ ಮತ್ತು ಕಿವಿರುಗಳನ್ನು ಒಳಗೊಂಡ ಅಂತರ ಅವಯವಗಳ ಕಮಾನು.

ಮೂಳೆಮೀನುಗಳ ಕಪಾಲದಲ್ಲಿ, ದವಡೆಗೆ ಸಂಬಂಧಪಟ್ಟಂತೆ ವಿನಹ ಹೆಚ್ಚು ಮಾರ್ಪಾಡುಗಳಿರುವುದಿಲ್ಲ.

ಕಶೇರುಕಂಬ ಆಥವಾ ಬೆನ್ನುಹುರಿ ಕಶೇರುಗಳಿಂದ ರೂಪಿತವಾಗಿದೆ. ಒಂದೊಂದು ಕಶೇರುಮಣಿಯೂ ಹಲವು ಘಟಕಗಳಿಂದ ಕೂಡಿದ ಸಂಕೀರ್ಣ ಕಟ್ಟು. ಕಶೇರುಗಳ ಸಂಖ್ಯೆಯ ಆಧಾರದ ಮೇಲೆ ಮೀನುಗಳ ವರ್ಗೀಕರಣ ಮಾಡುತ್ತಾರೆ.

ಸ್ನಾಯು: ಮೀನಿನ ಸ್ನಾಯು ರಚನೆ ಸರಳವಾದದ್ದು. ಸ್ನಾಯು ಖಂಡಗಳ ಸಂಖ್ಯೆ ಕಶೇರುವಿನ ಸಂಖ್ಯೆಗೆ ಅನುಗುಣವಾಗಿದೆ. ಮಾಂಸಖಂಡಗಳ ಬಣ್ಣ ಬಿಳಿ ಆಥವಾ ನಸುಗೆಂಪು. ಕೆಲವು ವೇಳೆ ಮಾಂಸಖಂಡ ಎಣ್ಣೆಯಿಂದ ಕೂಡಿದ್ದು ಕಿತ್ತಳೆ ಬಣ್ಣಕ್ಕಿರುವುದುಂಟು.

ಜೀರ್ಣಾಂಗ ಮಂಡಲ

ಬಹುಪಾಲು ಮೀನುಗಳಲ್ಲಿ ಜೀರ್ಣಾಂಗಮಂಡಲ ಸರಳವಾಗಿದೆ. ಗಂಟಲು, ಅನ್ನನಾಳ, ಜಠರ, ಕರುಳು ಮತ್ತು ಗುದನಾಳ ಇವೇ ಜೀರ್ಣಾಂಗ ಮಂಡಲದ ಪ್ರಧಾನ ಅಂಗಗಳು.

ಉನ್ನತ ಕಶೇರುಕ ಪ್ರಾಣಿಗಳಲ್ಲಿರುವಂತೆ ಮೀನಿನಲ್ಲಿ ಚಾಚಬಲ್ಲ ನಾಲಗೆಯಾಗಲಿ, ಜೊಲ್ಲುರಸವನ್ನು ಸೂಸುವ ಜೊಲ್ಲು ಗ್ರಂಥಿಗಳಾಗಲಿ ಇಲ್ಲ. ಅನ್ನನಾಳಕ್ಕಿಂತ ಜಠರ ದೊಡ್ಡದು. ಅನೇಕ ಮೂಳೆಮೀನುಗಳಲ್ಲಿ ಜಠರದ ಪ್ರವೇಶಭಾಗದ ಬಳಿ ಕೆಲವು ಕುರುಡು ಸಂಚಿಗಳಿವೆ. ಇವಕ್ಕೆ ಮುಂಗರುಳುನಾಳಕೋಶ (ಪೈಲೋರಿಕ್ ಸೀಕೆ) ಎಂದು ಹೆಸರು. ಇವು ಉಚ್ಚ ಪ್ರಾಣಿಗಳಲ್ಲಿ ಕಾಣವು. ಈ ಚೀಲಗಳ ಸಂಖ್ಯೆಯಲ್ಲಿ ವರ್ಗ ವರ್ಗಕ್ಕೂ ವ್ಯತ್ಯಾಸವುಂಟು.

ಮೀನಿನ ಕರುಳು ಒಂದು ಸರಳ ನಾಳ. ಇದರ ಗಾತ್ರ ಮತ್ತು ಉದ್ದ ಮೀನಿನ ಆಕಾರಕ್ಕೆ ತಕ್ಕಂತೆ ಇರುತ್ತದೆ. ಮಾಂಸಾಹಾರಿ ಮೀನುಗಳಲ್ಲಿ ಈ ನಾಳ ಚಿಕ್ಕದು. ಸಸ್ಯಾಹಾರಿ ಮೀನುಗಳಲ್ಲಾದರೂ ಉದ್ದವಾಗಿದ್ದು ಸುರುಳಿ ಸುತ್ತಿಕೊಂಡಿರುತ್ತದೆ.

ಮೀನಿನ ಯಕೃತ್ ನಿರ್ದಿಷ್ಟ ಆಕಾರವಿಲ್ಲದ ಅಂಗಾಂಶದ ಮುದ್ದೆ. ಇದರ ಗಾತ್ರವೂ ವಿಭಿನ್ನವಾಗಿರುತ್ತದೆ. ಪಿತ್ತಕೋಶ ಈ ಅಂಗಕ್ಕೆ ಅಂಟಿಕೊಂಡಿದೆ. ಮೇದೋಜೀರಕ ಗ್ರಂಥಿ ಕೂಡ ಅಡಕವಾದ ಅಂಗವಾಗಿರದೆ ಹರಡಿರುತ್ತದೆ.

ಮೀನಿನ ಗುದದ್ವಾರ ನೇರವಾದ ಕೊಳವೆ. ಷಾರ್ಕು ಮುಂತಾದ ಕೆಲವು ಮೀನುಗಳಲ್ಲಿ ಸುರುಳಿಯಾಕಾರದ ಕವಾಟವುಂಟು.

ರಕ್ತಪರಿಚಲನಾಂಗ ಮಂಡಲ

ಮೀನು 
ಮೀನಿನ ಹೃದಯದ ಶಿಕ್ಷಣಾತ್ಮಕ ಮಾದರಿ

ಪರಸ್ಪರ ಸಂಪರ್ಕವಿರುವ ಶುದ್ಧ ಮತ್ತು ಮಲಿನ ರಕ್ತನಾಳಗಳ ಮೂಲಕ ರಕ್ತ ಹರಿದು ದೇಹದ ಪ್ರತಿಯೊಂದು ಭಾಗದ ಜೀವಕೋಶಕ್ಕೂ ಪೋಷಣೆಯನ್ನು ಒದಗಿಸುತ್ತದೆ. ಹೃದಯ 4 ಭಾಗಗಳಿಂದ ಕೂಡಿದೆ. ಕೋಶಾಕಾರದ ಪೊಳ್ಳು ಹೃತ್ಕರ್ಣ, ಹೃತ್ಕಕ್ಷಿ ಮತ್ತು ಬಲ್ಬು. ಮೀನಿನಲ್ಲಿರುವ ರಕ್ತದ ಮೊತ್ತ, ಉನ್ನತ ವರ್ಗದ ಪ್ರಾಣಿಗಳ ದೇಹಗಳಲ್ಲಿರುವುದಕ್ಕಿಂತ ಬಹಳ ಕಡಿಮೆ. ಅಲ್ಲದೆ ಅದರ ಬಣ್ಣ ಕಗ್ಗೆಂಪಲ್ಲ; ಬಿಳಿಚಿರುತ್ತದೆ, ರಕ್ತಪರಿಚಲನೆ ಕೂಡ ಮಂದಗತಿಯದು; ಮೀನಿನ ರಕ್ತದ ಉಷ್ಣತೆ ಸುತ್ತಲಿನ ನೀರಿನ ಉಷ್ಣತೆಗಿಂತ ಸ್ವಲ್ಪ ಮಾತ್ರ ಹೆಚ್ಚು.

ಚಕ್ರಾಸ್ಯಮೀನುಗಳಲ್ಲಿ ಬಹಳ ಸರಳವಾದ ಮತ್ತು ಮೂಲ ರಚನೆಯನ್ನು ತೋರುವ ಹೃದಯವನ್ನು ಕಾಣಬಹುದು. ಇದರಲ್ಲಿ ನಾಲ್ಕು ಕೋಣೆಗಳಿದ್ದರೂ ಪ್ರಮುಖವಾದವು ಎರಡು ಮಾತ್ರ-ಹೃತ್ಕರ್ಣ ಮತ್ತು ಹೃತ್ಕುಕ್ಷಿ. ಹೃತ್ಕರ್ಣ ತೆಳುಭಿತ್ತಿಯ ಕೋಣೆ. ದೇಹದ ನಾನಾಭಾಗಗಳಿಂದ ಬರುವ ಮಲಿನ ರಕ್ತ ಮೊದಲು ಈ ಭಾಗಕ್ಕೆ ಬರುತ್ತದೆ. ಹೀಗೆ ರಕ್ತವನ್ನು ಸಂಗ್ರಹಿಸಿ ತಂದು ಹೃತ್ಕರ್ಣಕ್ಕೆ ಸೇರಿಸುವ ಕ್ರಿಯೆಯಲ್ಲಿ ಸೈನಸ್ ವಿನೋಸಸ್ ಎಂಬ ಇನ್ನೊಂದು ಕೋಣೆ ಪಾತ್ರವಹಿಸುತ್ತದೆ. ಹೃತ್ಕರ್ಣದಿಂದ ರಕ್ತ ಮಾಂಸಲವಾದ ಹೃತ್ಕುಕ್ಷಿಗೆ ಹೋಗುತ್ತದೆ. ಅಲ್ಲಿಂದ ಕೋನಸ್ ಎಂಬ ಇನ್ನೊಂದು ಕೋಣೆಯ ಮೂಲಕ ದೇಹದ ವಿವಿಧ ಭಾಗಗಳಿಗೆ ಹರಿಯುತ್ತದೆ. ಹೃದಯದ ಸುತ್ತ ಸೀಲೋಮಿನಿಂದ ಉದ್ಭವಿಸಿದ ಪೆರಿಕಾರ್ಡಿಯಂ ಎಂಬ ಆವರಣವಿದೆ. ಇದನ್ನು ತೆಳುವಾದ ಭಿತ್ತಿಯೊಂದು ಸುತ್ತುವರಿದಿದೆ. ಪೆರಿಕಾರ್ಡಿಯಮಿನಲ್ಲಿ ಒಂದು ರೀತಿಯ ದ್ರವ ಉಂಟು. ಅದು ಮೃದುಚಾಲಕದ ರೀತಿಯಲ್ಲಿ ವರ್ತಿಸುತ್ತದೆ.

ಮೀನುಗಳಲ್ಲಿ ಮೇಲೆ ತಿಳಿಸಿದ ನಾಲ್ಕು ಕೋಣೆಗಳೂ ಇದ್ದು ಕೇವಲ ಮಲಿನ ರಕ್ತ ಮಾತ್ರ ಹೃದಯಕ್ಕೆ ಬರುತ್ತದೆ. ಇದಕ್ಕೆ ಮಲಿನ ರಕ್ತದ ಹೃದಯ ಎಂದು ಹೆಸರು. ಮೀನುಗಳಲ್ಲಿ ಏಕ ರಕ್ತಾಭಿಸರಣಿ ಮಾತ್ರ ಕಂಡುಬರುತ್ತದೆ. ಸೈನಸ್ ವಿನೋಸಸ್ ಮತ್ತು ಹೃತ್ಕರ್ಣ ಮಧ್ಯೆ ತೆಳುವಾದ ಅಪೂರ್ಣ ಮಾಂಸಲ ಭಿತ್ತಿ ಇದೆ. ಇವೆರಡರ ನಡುವೆ ಇರುವ ದ್ವಾರದಲ್ಲಿ ಕವಾಟಗಳಿವೆ. ಸ್ವಲ್ಪ ಒತ್ತಡದಿಂದಲೇ ರಕ್ತ ಹೃತ್ಕರ್ಣದಿಂದ ಹೃತ್ಕುಕ್ಷಿಗೆ ಹರಿಯುತ್ತದೆ. ಹೃತ್ಕುಕ್ಷಿಯ ಮುಂದೆ ಕೋನಸ್ ಆರ್ಟೀಯೋಸಸ್ ಕೋಣೆ ವೆಂಟ್ರಲ್ ಅಯೋರ್ಟ (ವೆಂಟ್ರಲ್ ಮಹಾಪಧಮನಿ) ಅಥವಾ ಬಲ್ಬಸ್ ಆರ್ಟೀರಿಯೋಸಸ್‌ಗೆ ತರೆಯುವುದು. ಬಲ್ಬಸ್ ಆರ್ಟೀರಿಯೋಸಸ್ ಟೀಲಿಯಾಸ್ಟ್ ಮೀನುಗಳಲ್ಲಿ ಮಾತ್ರ ಇವೆ. ಆದ್ದರಿಂದ ಈ ಮೀನುಗಳಲ್ಲಿ ಕೋನಸ್ ಮತ್ತು ಅದರಲ್ಲಿನ ಕವಾಟಗಳು ಕಣ್ಮರೆಯಾಗಿವೆ. ಅಪೂರ್ಣ ಅಡ್ಡ ಭಿತ್ತಿಯೊಂದು ಹೃತ್ಕರ್ಣವನ್ನು ವಿಭಾಗಿಸಿವೆ. ಇದರ ಎಡಭಾಗ ಬಲಭಾಗಕ್ಕಿಂತ ಚಿಕ್ಕದು. ಇಲ್ಲಿಗೆ ಈಜುಕೋಶದಿಂದ ಬಂದ ರಕ್ತ ಸೇರುತ್ತದೆ. ಈ ದೃಷ್ಟಿಯಿಂದ ಪುಪ್ಪುಸ ಮೀನುಗಳ ಹೃದಯ ಯೂರೊಡಿಲ್ ದ್ವಿಚರಿಗಳ ಹೃದಯವನ್ನು ಹೋಲುತ್ತದೆ.

ಇವಲ್ಲದೆ ಮೀನಿನ ಇತರ ಒಳ ಅಂಗಗಳು ಯಾವುವೆಂದರೆ ಮೂತ್ರಪಿಂಡ, ಜನನೇಂದ್ರಿಯಗಳು, ಗಾಳಿಬುರುಡೆ, ಥೈರಾಯಿಡ್, ಥೈಮಸ್ ಮತ್ತು ಸುಪ್ರಾರೀನಲ್ ಗ್ರಂಥಿಗಳು.

ನರಮಂಡಲ

ಮೀನು 
ರೇನ್‍ಬೋ ಟ್ರೌಟ್‍ನ ಮಿದುಳಿನ ಹಿಂಬದಿಯ ನೋಟ

ಮಿದುಳು, ಮಿದುಳುಬಳ್ಳಿ (ಬೆನ್ನುಹುರಿ) ಮತ್ತು ನರಗಳನ್ನು ನರಮಂಡಲ ಒಳಗೊಂಡಿದೆ. ಇಲ್ಯಾಸ್ಮೊಬ್ರಾಂಕಿ ಮೀನುಗಳಲ್ಲಿ ಒಂದು ಜೊತೆ ಟೊಳ್ಳುಗೂಡಿನಂಥ ಘ್ರಾಣಹಾಲೆಗಳುಂಟು (Olfactory lobe). ಮೂಳೆಮೀನುಗಳಲ್ಲಿ ಇವು ಕಿರಿದಾಗಿರುತ್ತವೆ.

ಮಿದುಳಿನ ಇತರ ಮುಖ್ಯಭಾಗಗಳು: ಮುಮ್ಮಿದುಳಿನ ಎರಡು ಅರ್ಧಗೋಳಗಳು, ದೃಷ್ಟಿಕೋಶಕಗಳು ಮತ್ತು ಹಿಮ್ಮಿದುಳು. ಮಿದುಳುಬಳ್ಳಿ ದೇಹದ ಉದ್ದಕ್ಕೂ ಏಕಕಪ್ರಕಾರವಾಗಿದೆ. ನರಗಳನ್ನು ಬೆನ್ನು ಹುರಿಯ ನರಗಳು ಮತ್ತು ಕಪಾಲದ ನರಗಳು ಎಂಬ ಎರಡು ಗುಂಪುಗಳಾಗಿ ವಿಭಾಗಿಸಬಹುದು.

ಜ್ಞಾನೇಂದ್ರಿಯಗಳು

ಮೀನಿನ ಜ್ಞಾನೇಂದ್ರಿಯಗಳು ಘ್ರಾಣ, ದೃಷ್ಟಿ, ಶ್ರವಣ, ರುಚಿ ಮತ್ತು ಸ್ಪರ್ಶಕ್ಕೆ ಸಂಬಂಧಪಟ್ಟವು. ಘ್ರಾಣೇಂದ್ರಿಯ ಮೂಗಿನ ಹೊಳ್ಳೆಗಳ ಒಳಗಿರುತ್ತದೆ. ಮೀನುಗಳಲ್ಲಿ ಈ ಇಂದ್ರಿಯ ಬಹಳ ತೀಕ್ಷ್ಣವಾದದ್ದು.

ಮೀನಿನ ಕಣ್ಣು ನೀರಿನಲ್ಲಿ ನೋಡಲು ಅನುಕೂಲವಾಗಿರುವಂತೆ ಮಾರ್ಪಾಡಾಗಿದೆ. ಕಣ್ಣಿನ ಮಸೂರ ಗೋಳಾಕಾರದ್ದು. ಕನೀನಿಕೆ ಉಚ್ಚಪ್ರಾಣಿಗಳಲ್ಲಿ ದೊಡ್ಡದಾಗಬಹುದು ಇಲ್ಲವೆ ಚಿಕ್ಕದಾಗಬಹುದು. ಆದರೆ ಈ ಸಾಮರ್ಥ್ಯ ಮೀನಿನ ಕನೀನಿಕೆಗೆ ಇಲ್ಲ. ಅಲ್ಲದೆ ಕೆಲವು ವೇಳೆ ಇದು ಬಣ್ಣದಿಂದ ಕೂಡಿರಬಹುದು.

ಮೀನಿನ ಕಣ್ಣುಗಳು ತಲೆಯ ಎರಡು ಪಕ್ಕಗಳಲ್ಲಿ ಸ್ಥಿತವಾಗಿರುವುದರಿಂದ ಮೀನಿನ ದೃಷ್ಟಿ ಏಕಪಾರ್ಶ್ಚನೋಟ ಅಥವಾ ಒಕ್ಕಣ್ಣು ನೋಟ. ಮತ್ತೊಂದು ವಿಶೇಷವೇನೆಂದರೆ ಮೀನುಗಳಲ್ಲಿ ಕಣ್ಣಿನ ರೆಪ್ಪೆಯಾಗಲೀ ಕಣ್ಣೀರು ಸುರಿಸುವ ಗ್ರಂಥಿಗಳಾಗಲೀ ಇಲ್ಲದಿರುವುದು.

ಶ್ರವಣೇಂದ್ರಿಯ: ಮೀನಿನ ಶ್ರವಣೇಂದ್ರಿಯ ಮುಖ್ಯವಾಗಿ ಒಳಕಿವಿ. ಇದರಲ್ಲಿ ಒಂದು ತೆಳುವಾದ ಪಟಲವುಂಟು. ಇದಕ್ಕೆ ವೆಸ್ಟಿಬ್ಯೂಲ್ ಎಂದು ಹೆಸರು. ಇದು ತಲೆಬುರುಡೆಯ ಎರಡು ಪಕ್ಕಗಳಲ್ಲಿರುವ ಗೂಡುಗಳಲ್ಲಿ ಸ್ಥಿತವಾಗಿದೆ. ಇದರ ಕೆಲಸ ಎರಡು ತೆರನಾದ್ದು. ಒಂದು ಶಬ್ದವನ್ನು ಕೇಳುವುದು. ಇನ್ನೊಂದು ದೇಹದ ಸಮತೋಲನವನ್ನು ಕಾಪಾಡುವುದು. ಮೀನುಗಳಲ್ಲಿ ನಡುಗಿವಿಯಾಗಲೀ ಹೊರಕಿವಿಯಾಗಲೀ ಇಲ್ಲ. ಯುಟ್ರಿಕ್ಯುಲಸ್ ಅಥವಾ ಮೇಲ್ಗೂಡು ಮತ್ತು ಸ್ಯಾಕ್ಯುಲಸ್ ಎಂಬ ಕೆಳಗೂಡುಗಳಿಂದ ವೆಸ್ಟಿಬ್ಯೂಲ್ ರಚಿತವಾಗಿದೆ. ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುವ ಅರೆವೃತ್ತಾಕಾರದ ಮೂರು ಕಾಲುವೆಗಳುಂಟು. ಈ ಕಾಲುವೆಗಳ ಒಂದು ತುದಿ ಊದಿಕೊಂಡಿದ್ದು ಇದನ್ನು ಅಂಪುಲ ಎಂದು ಕರೆಯಲಾಗುತ್ತದೆ.

ಕೆಲವು ಮೀನುಗಳಲ್ಲಿ ಗಾಳಿಬುರುಡೆಗೂ ಒಳಕಿವಿಗೂ ನಿಕಟ ಸಂಬಂಧವುಂಟು. ಸೈಪ್ರಿನಿಡ್ (ಸಾಸಲು, ಅಗಸಗಿತ್ತಿಮೀನು ಮುಂತಾದವು) ಮತ್ತು ಸೈಲ್ಯುರಿಡ್ (ಮೀಸೆಮೀನು) ಮೀನುಗಳಲ್ಲಿ ಎಲುಬಿನ ವಿಶಿಷ್ಟ ಅಂಗವೊಂದುಂಟು. ಇದನ್ನು ವೆಬಿರಿಯನ್ ಆಸಿಕಲ್ಸ್ ಎನ್ನುತ್ತಾರೆ. ಇವು ಗಾಳಿಬುರುಡೆಗೂ ಒಳಕಿವಿಗೂ ಸಂಪರ್ಕವನ್ನು ಏರ್ಪಡಿಸುತ್ತವೆ. ಇವು ಸಿಹಿನೀರಿನಲ್ಲಿ ವಾಸಿಸುವ ಮೀನುಗಳಲ್ಲಿ ಮಾತ್ರವಿರುತ್ತವೆ. ಬಹುಶಃ ಇವು ಶಬ್ದತರಂಗಗಳ ಕಂಪನವನ್ನು ತೀವ್ರಗೊಳಿಸುವುವು.

ಪಾರ್ಶ್ವರೇಖೆ ಕೂಡ ನೀರಿನಲ್ಲಿ ಉಂಟಾಗುವ ಕಂಪನಗಳನ್ನು ಗುರುತಿಸಲು ಸಹಾಯಕವಾಗಿದೆ.

ರಸನೇಂದ್ರಿಯ: ರಸನೇಂದ್ರಿಯ ಮೀನುಗಳಲ್ಲಿ ವಿಕಾಸಗೊಂಡಿಲ್ಲ. ಸಾಮಾನ್ಯವಾಗಿ ಮೀನುಗಳು ಆಹಾರವನ್ನು ಅಗಿಯದೆ ನುಂಗುವುದರಿಂದ ರಸನೇಂದ್ರಿಯದ ಅವಶ್ಯಕತೆ ಕಡಿಮೆ.

ಸ್ಪರ್ಶೇಂದ್ರಿಯ: ಮೀನುಗಳಲ್ಲಿ ಸ್ಪರ್ಶೇಂದ್ರಿಯ ಬಹುಮಟ್ಟಿಗೆ ವಿಕಾಸಗೊಂಡಿದ್ದು ಇದಕ್ಕೆ ಸಂಬಂಧಪಟ್ಟಂತೆ ಕೆಲವು ವಿಶೇಷಾಂಗಗಳು ಬೆಳೆದಿರುತ್ತವೆ. ಮೀನಿನ ಹೊರಚರ್ಮದ ಮೇಲೆಲ್ಲ ಬಾರ್ಬೆಲ್ ಎಂಬ ಸಣ್ಣ ಸ್ಪರ್ಶಾಂಗಗಳಿವೆ. ಇವು ಸಾಮಾನ್ಯವಾಗಿ ಬಾಯಿಯ ಹತ್ತಿರವೇ ಹೆಚ್ಚು. ಮೀಸೆಮೀನುಗಳಲ್ಲಿ ಇವು ಜೋಡಿಗಳಲ್ಲಿ ಬಾಯಿ ಸುತ್ತಲೂ ಜೋಡಣೆಗೊಂಡಿರುವುವು. ಆಹಾರವನ್ನು ಹುಡುಕುವುದರಲ್ಲಿ ಇವು ಸಹಾಯಕ.

ವರ್ಣವಿನ್ಯಾಸ

ಸಾಮಾನ್ಯವಾಗಿ ಮೀನುಗಳು ತಾವು ವಾಸಿಸುವ ಪರಿಸರಕ್ಕೆ ಹೊಂದಿಕೊಳ್ಳುವಂತೆ ವಿವಿಧ ವರ್ಣಗಳನ್ನು ಪಡೆದಿವೆ. ಉಷ್ಣವಲಯದ ಮೀನುಗಳ ಬಣ್ಣ ಉಜ್ವಲ. ಚಪ್ಪಟೆಮೀನುಗಳಲ್ಲಿ ಮೈಬಣ್ಣ ಗೋಸುಂಬೆಯದರಂತೆ ಸನ್ನಿವೇಶ ತಕ್ಕಂತೆ ಬದಲಾವಣೆಗೊಳ್ಳುತ್ತದೆ. ಕೆಲವು ವಂಶಗಳಲ್ಲಿ ಎಳೆಯ ಮೀನಿನ ಬಣ್ಣ ಅದು ಬೆಳೆದಂತೆ ಮಾಯವಾಗುತ್ತದೆ. ಉದಾಹರಣೆ: ಕುಚ್ಚುಮೀನು (ಚಾನ ಸ್ಟ್ರಯೇಟಸ್). ಅನೇಕ ಮೀನುಗಳಲ್ಲಿ ಹೆಣ್ಣು ಮತ್ತು ಗಂಡಿನ ಬಣ್ಣಗಳು ಬೇರೆಬೇರೆಯಾಗಿರುವುವು.

ಸಂತಾನಕ್ರಿಯೆ

ಮೀನು 
ಮೀನಿನ ಅಂಡಾಶಯ

ಅನೇಕ ಮೀನುಗಳಲ್ಲಿ ಜನನಾಂಗಗಳು ಆಕಾರದಲ್ಲಿ ನೀಳವಾಗಿಯೂ ಜೊತೆ ಜೊತೆಯಾಗಿಯೂ ಇರುವುವು. ಲಿಂಗಗಳು ಪ್ರತ್ಯೇಕ. ಗರ್ಭಧಾರಣ ದೇಹದ ಹೊರಗೆ ನಿರ್ದಿಷ್ಟ ಶ್ರಾಯ ಅಥವಾ ಋತುವಿನಲ್ಲಿ ನಡೆಯುತ್ತದೆ. ಹೆಣ್ಣಿನಿಂದ ಅಂಡವೂ ಗಂಡಿನಿಂದ ವೀರ್ಯವೂ ನೀರೊಳಗೆ ಹೊರಬಿದ್ದ ತರುವಾಯ ಬೆರೆತು ಆಮೇಲೆ ಗರ್ಭ ಬೆಳೆಯುತ್ತದೆ. ಈ ವಿಧಿಗೆ ಕೆಲವು ಸೈಪ್ರಿನೋಡಾಂಟ್ (ಕುಡಬಡ್ಡು, ಕುಡಿಯೂನ್, ಮಲೇರಿಯ ಮೀನು ಇತ್ಯಾದಿ ಮೀನುಗಳು) ಅಪವಾದವೆನಿಸಿವೆ. ಈ ಬಗೆಯ ಮೀನುಗಳಲ್ಲಿ ಗಂಡಿನ ವೀರ್ಯ ಹೆಣ್ಣಿನೊಳಕ್ಕೆ ಸೇರಿ ದೇಹದ ಒಳಗೂಡಿನಲ್ಲಿ ಗರ್ಭ ಬೆಳೆಯುತ್ತದೆ. ಹೀಗಾಗುವುದರಿಂದ ಇವು ಮೊಟ್ಟೆಯಿಡುವುದರ ಬದಲು ಜೀವಂತಮರಿಗಳನ್ನು ಹೆರುತ್ತವೆ. ಉದಾಹರಣೆ: ಗಾಂಬೂಸಿಯ ಮೀನು ಮತ್ತು ಎಲ್ಲ ಬಗೆಯ ಇಲ್ಯಾಸ್ಮೊಬ್ರಾಂಕ್‌ಗಳು. ಇಂಥ ಗಂಡುಮೀನುಗಳಲ್ಲಿ ಸಂಭೋಗ ಅಂಗಗಳಿವೆ. ಸೈಕ್ಲಿಡ್ ಜಾತಿಯ ಹಲವಾರು ಮೀನುಗಳಲ್ಲಿ ಗಂಡುಮೀನು ಒಂದು ಬಗೆಯ ಮರಿಮಾಡುವ ಗೂಡನ್ನು ಕಟ್ಟುತ್ತದೆ. ಲ್ಯಾಬಿರಿಂತಿಯೈ ಮೀನುಗಳಲ್ಲಿ ಅನೇಕವು ಗಾಳಿಗುಳ್ಳೆಗಳನ್ನು ರಚಿಸಿ ಇಂಥ ಗೂಡುಗಳನ್ನು ನಿರ್ಮಿಸುತ್ತವೆ. ಉದಾಹರಣೆ: ಪ್ಯಾರಡೈಸ್ ಮೀನು (ಮ್ಯಾಕ್ರೊಪೋಡಸ್ ಕುಪಾನಸ್), ಕುಂಬಳಬೀಜಮೀನು. ಈ ಗುಳ್ಳೆಗಳು ಒಂದಕ್ಕೊಂದು ಅಂಟಿಕೊಂಡು ನೊರೆರಾಶಿಯಂತೆ ತೇಲಾಡುತ್ತವೆ. ಈ ಮೀನುಗಳು ಮೊಟ್ಟೆಯನ್ನು ಹೊತ್ತು ರಕ್ಷಿಸುವುದುಂಟು. ಕಡಲಕುದುರೆಯಲ್ಲಿ ಬಾಲದ ಕೆಳಗೆ ಒಂದು ಚೀಲವಿದೆ. ಇದರೊಳಗೆ ಮೊಟ್ಟೆಗಳು ಸಂಗ್ರಹಗೊಂಡು ಒಡೆಯುವ ತನಕ ಅಲ್ಲೇ ಇರುತ್ತವೆ. ಕೆಲವು ಬಗೆಗಳಲ್ಲಿ ಗಂಡುಮೀನು ಮೊಟ್ಟೆಗಳನ್ನು ತನ್ನ ಬಾಯಿಯಲ್ಲೇ ಮರಿಗಳಾಗುವ ತನಕ ಇರಿಸಿಕೊಂಡು ಕಾಪಾಡುತ್ತದೆ. ಉದಾಹರಣೆ: ಟೈಲಾಪಿಯ.

ಹೀಗೆ ಪ್ರಣಯಾಚರಣೆ, ಸಂಭೋಗ ಮತ್ತು ಮರಿಗಳ ರಕ್ಷಣೆ ಮುಂತಾದ ಕಾರ್ಯಗಳನ್ನು ವಿವಿಧ ಮೀನು ಜಾತಿಗಳು ವಿವಿಧ ರೀತಿಯಲ್ಲಿ ನಡೆಸಿ ತೋರುತ್ತವೆ. ಒಂದು ವಿಶೇಷ ಬಗೆಯ ಲಿಂಗಸಂಬಂಧವನ್ನು ಸಿರಾಟಾಯಿಡ್ ಅಂಗ್ಲರ್ ಎಂಬ ಮೀನುಗಳಲ್ಲಿ ಕಾಣಬಹುದು. ಇದರಲ್ಲಿ ಗಂಡುಮೀನು ಹೆಣ್ಣಿನ ಮೇಲೆ ಪರೋಪಜೀವಿಯಂತೆ ಸ್ಥಿರವಾಗಿ ಅಂಟಿಕೊಂಡು ಬಾಳುತ್ತದೆ. ಈ ಗುಂಪಿನಲ್ಲಿ ಈಜುವ ಪ್ರಾಯದ ಮೀನುಗಳೆಲ್ಲ ಹೆಣ್ಣು ಮೀನುಗಳೇ. ಇವು ಸಾಗರಗಳ ಪಾತಾಳದಲ್ಲಿ ನೆಲಸುವುದರಿಂದ ಮತ್ತು ಒಂಟಿ ಜೀವನಕ್ರಮವನ್ನು ಅನುಸರಿಸುವುದರಿಂದ ಹೆಣ್ಣುಮೀನು ಗಂಡಿನ ಸಂಪರ್ಕಕ್ಕೆ ಬರುವ ಸಂಭವ ಅತಿ ವಿರಳ. ಈ ಪರಿಸ್ಥಿತಿ ಅಥವಾ ಇಕ್ಕಟ್ಟನ್ನು ಎದುರಿಸಲು ಗಂಡುಮೀನುಗಳು ಮೊಟ್ಟೆಯಿಂದ ಹೊರಬಂದ ಕೂಡಲೆ ಹೆಣ್ಣುಮೀನುಗಳಿಗೆ ಅಂಟಿಕೊಳ್ಳುತ್ತವೆ. ಹೀಗೆ ಅಂಟಿಕೊಂಡ ಮೇಲೆ ಗಂಡು ತನ್ನ ಬಾಯಿ, ದವಡೆ, ರೆಕ್ಕೆ ಮತ್ತು ಕಿವಿರುಗಳನ್ನು (ಅಂದರೆ ಸಂತಾನಕ್ರಿಯೆಗೆ ಸಹಾಯವಾಗುವ ಅಂಗಗಳು) ವಿನಾ ಇತರ ಅಂಗಗಳನ್ನು ಕಳೆದುಕೊಳ್ಳುತ್ತದೆ. ಗಂಡಿನ ದೇಹಪೋಷಣೆ ಹೆಣ್ಣಿನ ರಕ್ತದ ಮೂಲಕ ನಡೆಯುತ್ತದೆ.

ಇಲ್ಯಾಸ್ಮೊಬ್ರಾಂಕ್ ಮೀನುಗಳು ಮೊಟ್ಟೆಗಳನ್ನು ಇಡುವುದಲ್ಲದೆ ಮರಿಗಳನ್ನೂ ಹಾಕುತ್ತವೆ. ಮೊಟ್ಟೆ ಒಡೆಯಲು ನಾಲ್ಕೂವರೆ ತಿಂಗಳಿನಿಂದ ಹದಿನೈದು ತಿಂಗಳ ಕಾಲ ಹಿಡಿಯುವುದುಂಟು. ಮೊಟ್ಟೆಗಳು ಪೊರೆ ಚೀಲಗಳಿಂದ ಆವೃತವಾಗಿರುತ್ತವೆ. ಮೂಳೆ ಮೀನುಗಳಲ್ಲಿ ಎರಡು ವಿವಿಧ ಮೊಟ್ಟೆಗಳುಂಟು: ಪೆಲಾಜಿಕ್ (ತೇಲುಮೊಟ್ಟೆ) ಮತ್ತು ಡೆಮರ್ಸಲ್ (ಮುಳುಗುಮೊಟ್ಟೆ). ಸಿಹಿನೀರು ಮೀನುಗಳ ಮೊಟ್ಟೆಗಳು ಸಾಗರದ ಮೀನುಗಳ ಮೊಟ್ಟೆಗಿಂತ ದೊಡ್ಡವು. ಬೆಳೆಯುವಾಗ ಮೀನಿನ ಭ್ರೂಣದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಮಳಗುಮೀನು (ಈಲ್), ತಟ್ಟೆಮೀನುಗಳ ಭ್ರೂಣವೃದ್ಧಿಯಲ್ಲಿ ದೇಹದ ರೂಪರಚನೆಗಳಲ್ಲಿ ಪರಿವರ್ತನೆಯುಂಟು.

ಸಾಗರದ ಮೀನುಗಳು

ಸಾಗರಗಳಲ್ಲಿ ಮೀನುಗಳ ವ್ಯಾಪ್ತಿ ನೀರಿನ ಉಷ್ಣತೆ, ಸಾಗರಪ್ರವಾಹಗಳ ವೇಗ ಮತ್ತು ದಿಕ್ಕು, ಸಮುದ್ರತೀರದ ಲಕ್ಷಣ, ನೀರಿನ ಲವಣಾಂಶ, ಸಮುದ್ರತಳದ ಏರುಪೇರುಗಳು, ಆಹಾರದ ಲಭ್ಯತೆ ಮುಂತಾದ ಅಂಶಗಳಿಗೆ ಅನುಗುಣವಾಗಿರುತ್ತದೆ. ಆದರೆ ಸಿಹಿನೀರು ಮೀನುಗಳ ವ್ಯಾಪ್ತಿ ಭೂಕಶೇರುಕ ಪ್ರಾಣಿಗಳ ವ್ಯಾಪ್ತಿಯನ್ನು ನಿರ್ಧರಿಸುವ ಅಂಶಗಳಿಗೆ ಅಧೀನವಾಗಿರುತ್ತದೆ.

ಸಮುದ್ರದ ಮೀನುಗಳಲ್ಲಿ ಎರಡು ಮುಖ್ಯ ಗುಂಪುಗಳಿವೆ:

  1. ಸಾಗರವಾಸಿ ಮೀನುಗಳು
  2. ಕರಾವಳಿ ಮೀನುಗಳು.

ಸಾಗರವಾಸಿ ಮೀನುಗಳು ಮೂರು ವಲಯಗಳಲ್ಲಿ ಕಾಣದೊರೆಯುವುವು:

  1. ಸಮುದ್ರಮಟ್ಟದಿಂದ 150 ಮೀಟರ್ ಆಳದ ವಲಯ.
  2. 150 ರಿಂದ 500 ಮೀಟರ್ ಆಳವಿರುವ ವಲಯ.
  3. ಸಾಗರ ಪಾತಾಳ (ಬೇತಿಪೆಲಾಜಿಕ್) ವಲಯ.

ಕರಾವಳಿ ಮೀನುಗಳು ಸಮುದ್ರ ದಡದ ಹತ್ತಿರ ವಾಸಿಸುತ್ತವೆ. ಸಾರ್ಡಿನ್ (ಪೇಡಿ, ಬೊಯ್ಗೆ, ಸಿರಿಯಂಡೆ ಮುಂತಾದವು), ಮ್ಯಾಕೆರೆಲ್ (ಬಂಗಡೆ) ಮುಂತಾದ ಮೀನುಗಳೂ, ಸಮುದ್ರ ತಳದಲ್ಲಿ ಪ್ಲೇಸ್, ಗುರ್‌ನಾರ್ಡ್ ಮುಂತಾದ ಮೀನುಗಳೂ ನೆಲಸಿವೆ. ಈ ಮೀನುಗಳಲ್ಲಿ ಸಾಗರ ಮೀನುಗಳಿಗಿಂತ ಹೆಚ್ಚು ವೈವಿಧ್ಯ ಇರುತ್ತದೆ. ಪೆಲಾಜಿಕ್ ಮೀನುಗಳ ವ್ಯಾಪ್ತಿ ನೀರಿನ ಉಷ್ಣತೆಗೆ ನಿಕಟವಾಗಿ ಹೊಂದಿಕೊಂಡಿದೆ. ಇದರಿಂದ ಪ್ರಪಂಚವನ್ನು ಮೀನುವಲಯಗಳನ್ನಾಗಿ ವಿಭಾಗಿಸಲು ಸಾಧ್ಯ.

ಮೀನುವಲಯಗಳು

  1. 200 ಸಮಉಷ್ೞತೆಯ ರೇಖೆಯೊಳಗಿರುವ ಉಷ್ಣವಲಯ.
  2. ಇದರ ಉತ್ತರ ಮತ್ತು ದಕ್ಷಿಣ ರೇಖೆಯ 60 ಅ ತನಕ ಇರುವ ಸಮಶೀತೋಷ್ಣವಲಯ ಮತ್ತು
  3. ಇದಕ್ಕಿಂತ ತಂಪಾಗಿರುವ ಶೀತವಲಯ. ಉಷ್ಣವಲಯದಲ್ಲಿ ಉಳಿದ ವಲಯಗಳಿಗಿಂತ ಹೆಚ್ಚು ಜಾತಿಯ ಮೀನುಗಳಿವೆ.

ಕರಾವಳಿಯ ಮೀನುಗಳಲ್ಲಿ ಎರಡು ಮುಖ್ಯ ಗುಂಪುಗಳುಂಟು: ಇಂಡೋಫೆಸಿಫಿಕ್ ಕರಾವಳಿಯವು ಮತ್ತು ಅಟ್ಲಾಂಟಿಕ್ ಕರಾವಳಿಯವು. ಅಟ್ಲಾಂಟಿಕ್ ವಲಯದಲ್ಲಿರುವುದಕ್ಕಿಂತ ಹೆಚ್ಚು ಮೀನುಜಾತಿ ಮತ್ತು ವಂಶಗಳನ್ನು ಇಂಡೋಫೆಸಿಫಿಕ್ ವಲಯದಲ್ಲಿ ಕಾಣಬಹುದು. ಶೀತವಲಯಗಳಲ್ಲಿ (ಆರ್ಕ್ಟಿಕ್ ಹಾಗೂ ಅಂಟಾರ್ಕ್ಟಿಕ್) ಆ ವಲಯಕ್ಕೆ ನಿರ್ದಿಷ್ಟವೆನಿಸುವ ಮೀನುಗಳಿವೆ. ಇವುಗಳಲ್ಲಿ ಅನೇಕವು ನೋಟೋಥೆನಿಡ್ ಗುಂಪಿಗೆ ಸೇರಿದವು.

ಮೀನುಗುಂಪುಗಳು ಸಾಗರಗಳಲ್ಲಿ ನಿರ್ದಿಷ್ಟ ಭೌಗೋಳಿಕ ಮಿತಿ ಅಥವಾ ಎಲ್ಲೆಯಲ್ಲಿ ವಾಸಿಸುತ್ತವೆ. ಅವು ವಲಸೆ ಹೋಗುವುದಾದರೂ ಈ ಪ್ರದೇಶದ ಎಲ್ಲೆಯೊಳಗೆ ಆಹಾರಾನ್ವೇಷಣೆಗಾಗಿ ಅಥವಾ ಮೊಟ್ಟೆಗಳನ್ನು ಇಡುವ ಉದ್ದೇಶದಿಂದ ಇವು ವಲಸೆ ಹೋಗುವುವು.

ಟನ್ನಿ, ಮ್ಯಾಕರಲ್, ಸಾರ್ಡೀನ್, ಈಲ್ (ಮಳಗು ಮೀನುಗಳು), ಸ್ಯಾಲ್ಮನ್ ಮುಂತಾದ ಮೀನುಗಳು ಸಾಗರಗಳಿಂದ ತೀರಪ್ರದೇಶಗಳಿಗೂ ಅಲ್ಲಿಂದ ವಾಪಸು ಕಡಲುಗಳಿಗೂ ಕೆಲವು ಋತುಗಳಲ್ಲಿ ವಲಸೆ ಹೋಗುವ ವಿಷಯ ಬಲು ಪರಿಚಿತ.

ಬಹುಶಃ ಸಮುದ್ರವೇ ಆ ಮೀನುಗಳ ಆದಿ ನೆಲೆಯಾಗಿದ್ದಿರಬಹುದು. ಈಗ ನದಿಗಳಲ್ಲಿ, ಹಳ್ಳಗಳಲ್ಲಿ, ಸರೋವರಗಳಲ್ಲಿ ನೆಲಸಿರುವ ಅನೇಕ ಬಗೆಯ ಮೀನುಗಳು ಸಾಗರ ಮೀನುಗಳಿಂದ ಉಗಮಿಸುದುವಾಗಿ ಕಾಲಕ್ರಮೇಣ ಇವು ಸಿಹಿ ನೀರು ಮೀನಿನ ಸ್ಪಷ್ಟವಂಶಗಳಾಗಿ ವಿಕಸಿಸಿದುವು.

ಸಿಹಿನೀರು ಮೀನುಗಳು

ಸಿಹಿನೀರು ಮೀನುಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಬಹುದು:

  1. ತಮ್ಮ ಜೀವನದ ಒಂದು ಹಂತವನ್ನು ಸಮುದ್ರದಲ್ಲಿ ಕಳೆಯುವ ಮೀನುಗಳು. ಮ್ಯುಜಿಲಿಡೀ ಕುಟುಂಬದ ಗ್ರೇ ಮಲೆಟ್ ಮತ್ತು ಕಾಮನ್ ಈಲ್ (ಸಾಮಾನ್ಯ ಮಳಗು ಮೀನು) ಹಾಗೂ ಸ್ಯಾಲ್ಮನುಗಳು ಮೊದಲನೆಯ ಗುಂಪಿಗೆ ಸೇರಿದವು.
  2. ಯಾವತ್ತೂ ಸಿಹಿನೀರಿನಲ್ಲೇ ವಾಸಮಾಡುವ ಮೀನುಗಳು.

ಬಹುಪಾಲು ಸಿಹಿನೀರು ಮೀನುಗಳನ್ನು ಒಳಗೊಂಡಿರುವ ಆಸ್ಟೇರಿಯೊಫೈಸೀ ಮೇಲುಗಣದ ವ್ಯಾಪ್ತಿ ಖಂಡಗಳ ಭೂಚರಿತ್ರೆಯನ್ನು ಅರಿಯಲು ಸಹಾಯವಾಗುತ್ತದೆ. ಈ ಸಿಹಿ ನೀರಿನ ಮೀನುಗಳ ವ್ಯಾಪ್ತಿಯನ್ನು ಅಧ್ಯಯನ ಮಾಡಲು ಭೂಮಿಯನ್ನು 7 ಪ್ರಾಣಿ ಭೌಗೋಳಿಕ ಪ್ರದೇಶಗಳನ್ನಾಗಿ ವಿಂಗಡಿಸಬಹುದು: 1 ಆಸ್ಟ್ರೇಲಿಯ ಪ್ರದೇಶ, 2 ಮಡಗಾಸ್ಕರ್, 3 ನವೋಷ್ಣವಲಯ (ನಿಯೊಟ್ರಾಪಿಕಲ್), 4 ಆಫ್ರಿಕ, 5 ಇಂಡಿಯ, 6 ಪ್ರಾಚೀನ ಶೀತವಲಯ (ಪೇಲಿಯಾರ್ಕ್ಟಿಕ್), 7 ನವಶೀತವಲಯ (ನಿಯೊಆರ್ಕ್ಟಿಕ್)

ಆಸ್ಟ್ರೇಲಿಯಾದಲ್ಲಿ

ಆಸ್ಟ್ರೇಲಿಯ ಪ್ರದೇಶದಲ್ಲಿ ಶುದ್ಧ ಸಿಹಿನೀರು ಮೀನುಗಳಿಲ್ಲ. ಸಮುದ್ರವಾಸಿ ಮೀನುಗಳ ಸಂಬಂಧಿಗಳಾದ ಗೋಬಿಗಳು, ಸೀಪರ್ಚುಗಳು, ಗ್ರೇ ಮಲೆಟ್‌ಗಳು ಮುಂತಾದ ಸಿಹಿನೀರು ಮೀನುಗಳು ಮಾತ್ರ ಇಲ್ಲಿ ಕಾಣದೊರೆಯುತ್ತವೆ. ನಿರ್ದಿಷ್ಟವಾದ ಸಿಹಿನೀರು ವಂಶಗಳು ಎರಡು ಮಾತ್ರ - ಆಸ್ಟ್ರೇಲಿಯದ ಲಂಗ್‌ಫಿಷ್ (ಎಪಿಸಿರಾಟೋಡಸ್) ಮತ್ತು ಆಸ್ಟಿಯೊಗ್ಲಾಸಿಡ್ (ಸ್ಕ್ಲೆರೊಪ್ಲೇಜಿಸ್). ಆಸ್ಟೇರಿಯೊಫೈಸೀ ಗುಂಪಿಗೆ ಸೇರಿದ ಯಾವ ಮೀನುಗಳೂ ಈ ಪ್ರದೇಶದಲ್ಲಿಲ್ಲ.

ಮಡಗಾಸ್ಕರ್ ಮತ್ತು ನವೋಷ್ಣವಲಯದಲ್ಲಿ

ಮಡಗಾಸ್ಕರ್ ಪ್ರದೇಶ ಆಸ್ಟ್ರೇಲಿಯ ಪ್ರದೇಶವನ್ನು ನಿಕಟವಾಗಿ ಹೋಲುತ್ತದೆ. ಈ ಪ್ರದೇಶದಲ್ಲೂ ಶುದ್ಧ ಸಿಹಿನೀರು ಮೀನಿನ ವಂಶಗಳಿಲ್ಲ. ನವೋಷ್ಣಪ್ರದೇಶದಲ್ಲಿ ಎರಡು ಜಲ ಹರವುಗಳು ಒಂದಕ್ಕೊಂದು ಸೇರಿದ್ದರೂ ಉತ್ತರ ಅಮೆರಿಕದ ಮೀನುಗಳೇ ಬೇರೆ ದಕ್ಷಿಣ ಅಮೆರಿಕದ ಮೀನುಗಳೇ ಬೇರೆ. ದಕ್ಷಿಣ ಅಮೆರಿಕದ ಮೀನುಗಳು ಆಫ್ರಿಕದ ಮೀನುಗಳನ್ನು ಹೆಚ್ಚು ಹೋಲುತ್ತವೆ. ಜಾರ್ಸಿಲ್ ಎಂಬ ಮೀನುಗಳು ಮಾತ್ರ ಎರಡು ಖಂಡಗಳಲ್ಲಿಯೂ ಇದೆ.

ಆಫ್ರಿಕಾ ಮತ್ತು ಇಂಡಿಯಾದಲ್ಲಿ

ಆಫ್ರಿಕ ಮತ್ತು ಇಂಡಿಯ ಪ್ರದೇಶಗಳು ಮೀನುಗಳ ವ್ಯಾಪ್ತಿಯ ದೃಷ್ಟಿಯಲ್ಲಿ ಬಹುಪಾಲು ಒಂದೇ ಬಗೆಯವು. ಆಸ್ಟೇರಿಯೊಫೈಸೀ ಮೀನು ಗುಂಪು ಈ ಪ್ರದೇಶದಲ್ಲೇ ವಿಕಾಸವಾಗಿರಬೇಕು. ಸೈಪ್ರಿನಿಡೀ ಗುಂಪಿನ ಸಾಸಲು, ಕೆಮ್ಮೀನು ಇತ್ಯಾದಿ ಮೀನುಗಳು ಕೂಡ ವಿಕಾಸವಾಗಿದ್ದು ಇಲ್ಲಿಯೇ. ಈ ಪ್ರದೇಶಕ್ಕೆ ವಿಶಿಷ್ಟವೆಂದು ಕರೆಯುವ ಮೀನುಗಳು ಇಲ್ಲ. ಆದರೆ ಅನೇಕ ಬಗೆಯ ಕಾರ್ಪು, ಸಕರ್, ಲೋಚು ಇತ್ಯಾದಿ ಮೀನುಗಳನ್ನು ಇಲ್ಲಿ ಕಾಣಬಹುದು.

ಪ್ರಾಚೀನ ಮತ್ತು ನವಶೀತವಲಯಗಳಲ್ಲಿ

ಹಾಗೆಯೇ ಪ್ರಾಚೀನ ಮತ್ತು ನವಶೀತವಲಯಗಳ ಮೀನುಗಳಲ್ಲೂ ಹೋಲಿಕೆಯಿದೆ. ಕಾರ್ಪು, ಪೈಕ್, ಯಡ್‌ಫಿಷ್ (ಬುರುಡೆ ಮೀನು) ಮತ್ತು ಪರ್ದ್‌ಗಳು ಎರಡು ಪ್ರದೇಶಗಳಲ್ಲಿಯೂ ಇವೆ. ಆಸ್ಟೇರಿಯೊಫೈಸೀ ಮೀನುಗಳ ಗುಂಪು ಈ ಪ್ರದೇಶದಲ್ಲಿ ಚೆನ್ನಾಗಿ ಪ್ರತಿನಿಧಿಸಲ್ಪಟ್ಟಿದೆ.

ವರ್ಗೀಕರಣ

ಮೀನುಗಳನ್ನು ಇಲ್ಯಾಸ್ಮೊಬ್ರಾಂಕಿಯೈ, ಟೀಲಿಯೊಸ್ಟೋಮೈ ಮತ್ತು ಡಿಪ್ನಾಯ್ ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಇಲ್ಯಾಸ್ಮೊಬ್ರಾಂಕಿಯೈ ಮೀನುಗಳು ಎಲುಬಿನ ಕಂಕಾಲವುಳ್ಳವು ಮತ್ತು ಈಚಿನ ಕಾಲದವು. ಡಿಪ್ನಾಯ್ ಗುಂಪಿನವು ಫುಪ್ಫುಸಯುಕ್ತ. ಇವು ಆಸ್ಟ್ರೇಲಿಯ, ಆಫ್ರಿಕ ಮತ್ತು ದಕ್ಷಿಣ ಅಮೆರಿಕದ ಜೌಗುಭೂಮಿಯಲ್ಲಿ ಕಾಣದೊರೆಯುತ್ತವೆ.

ಭಾರತದಲ್ಲಿನ ಮೀನುಗಳು

ಭಾರತದ ಜಲಪ್ರದೇಶಗಳಲ್ಲಿ ಸಾವಿರಕ್ಕಿಂತ ಹೆಚ್ಚು ಮೀನು ವಂಶಗಳಿವೆ. ಇವುಗಳ ಪೈಕಿ ಸುಮಾರು 370 ವಂಶಗಳು ಆರ್ಥಿಕ ದೃಷ್ಟಿಯಿಂದ ಮುಖ್ಯವೆನಿಸಿವೆ. ಇವುಗಳ ವಿವರಣೆ ಈ ರೀತಿಯಾಗಿದೆ.

ವರ್ಗ 1 ಇಲ್ಯಾಸ್ಮೊಬ್ರಾಂಕಿಯೈ: ಮೃದ್ವಸ್ಥಿಪಂಜರವುಳ್ಳ ಮೀನುಗಳು. ಎಲುಬುಗಳು ಇಲ್ಲ. ಕೆಲವನ್ನುಳಿದು ಸಾಮಾನ್ಯವಾಗಿ ಗರ್ಭಧಾರಣೆ ದೇಹದೊಳಗೆ. ಇವು ಜರಾಯುಜಗಳು. ಅಂದರೆ ಮೊಟ್ಟೆಗೆ ಬದಲಾಗಿ ಮರಿಗಳನ್ನು ಹಾಕುವ ಮೀನುಗಳು. ಕಿವಿರು ಕಂಡಿಯೊಳಗೆ ಕಿವಿರಿದೆ. ಈ ಕಂಡಿ ಹೊರಕ್ಕೆ ತೆರೆದಿರುತ್ತದೆ. ಸಾಮಾನ್ಯವಾಗಿ ಸಿಹಿನೀರಿನಲ್ಲಿ ಇವು ಕಾಣದೊರೆಯವು. ಉದಾ. ಷಾರ್ಕುಗಳು, ರೇ. ಭಾರತದಲ್ಲಿ ಈ ವರ್ಗದ 28 ಪ್ರಭೇದಗಳು ಆರ್ಥಿಕ ದೃಷ್ಟಿಯಿಂದ ಮುಖ್ಯವಾಗಿವೆ.

ಲ್ಯಾಮ್ನಿಫಾರ್ಮೀಸ್ ಗಣ - ಷಾರ್ಕುಗಳು

ಗಣ: ಲಾಮ್ನಿಫಾರ್ಮಿಸ್ 5 ಕಿವಿರು ತೆರಪುಗಳು, 2 ಬೆನ್ನಿನ ರೆಕ್ಕೆ ಮತ್ತು ಒಂದು ಗುದರೆಕ್ಕೆಗಳಿವೆ.

ಕುಟುಂಬ 1 ಒರೆಕ್ಟೊಲೋಬಿಡೀ - ಮಾರ್ಜಾಲ ಷಾರ್ಕುಗಳು, ತಿಮಿಂಗಿಲ ಷಾರ್ಕುಗಳು: ದೊಡ್ಡಬಾಲ ಸಣ್ಣಕಣ್ಣುಗಳುಳ್ಳ ಇವು ಆಳವಾದ ನೀರಿನಲ್ಲಿ ವಾಸಮಾಡುವುವು. ಉದಾಹರಣೆಗೆ ಕೈಲೊಸಿಲ್ಲಿಯೆಮ್ ಗ್ರಿಸಿಯಮ್ (ಗೊಮ್ಮೆಸೋರಕ), ಸ್ಟೀಗೊಸ್ಟೋಮ ವೇರಿಯಸ್, ಹುಲಿ ಬಳಿಯಾರ್ (ಟೈಗರ್ ಷಾರ್ಕ್) ಮತ್ತು ರಿಂಕೊಡಾನ್ ಟೈಪಸ್ - ಗೊಮ್ಮೆಸೊರಕೆ (ತಿಮಿಂಗಿಲ ಷಾರ್ಕು). ಇದು ತುಂಬ ಉದ್ದವಾದ ಮೀನು; 15.2 ಮೀಟರ್ ಉದ್ದ ಬೆಳೆಯಬಲ್ಲದು.

ಕುಟುಂಬ 2 ಸ್ಫಿರ್ನಿಡೀ: ಸುತ್ತಿಗೆತಲೆ ಷಾರ್ಕುಗಳನ್ನು ಒಳಗೊಂಡಿದೆ. ಇವುಗಳ ತಲೆ ಮುಂಭಾಗದಲ್ಲಿ ಚಪ್ಪಟೆಯಾಗಿದ್ದು, ಆಚೀಚೆ ಸುತ್ತಿಗೆಯ ಆಕಾರದಲ್ಲಿ ಉಬ್ಬಿಕೊಂಡಿದೆ. ಉದಾಹರಣೆಗೆ ತಟ್ಟೆ ಬಳಿಯಾರ್ (ಸ್ಫಿರ್ನ ಜೈಗೀನ) - ಇದು 2.7 ಮೀ. ಉದ್ದಕ್ಕೆ ಬೆಳೆಯುತ್ತದೆ. ಇದರ ಯಕೃತ್ತಿನಿಂದ ಪಡೆಯಲಾಗುವ ಎಣ್ಣೆಯೇ ಷಾರ್ಕ್ ಲಿವರ್ ಎಣ್ಣೆ.

ಕುಟುಂಬ 3 ಕ್ಯಾರ್ಕಾರೈನಿಡೀ: ಬೂದುಬಣ್ಣದ (ಗ್ರೇ) ಷಾರ್ಕುಗಳೂ ಇದಕ್ಕೆ ಸೇರಿವೆ. ಕಣ್ಣಿನಲ್ಲಿ ಮೂರನೆಯ ರೆಪ್ಪೆ (ನಿಕ್ಟಿಟೇಟಿಂಗ್ ಮೆಂಬ್ರೇನ್) ಉಂಟು. ಉದಾಹರಣೆಗೆ ಪಿಲ್‌ತಟ್ಟೆ (ಟೈಗರ್ ಶಾರ್ಕ್ - ಗೇಲಿಯೊಸಿರಾಡೊ ಟೈಗ್ರಿನಸ್), ಬಳಿಯಾರ್ (ಸ್ಕೋಲಿಯೊಡಾನ್ ಸರಕೋವ), ಬುಗ್ಗೆ ತಟ್ಟೆ (ಕಾರ್ಕಾರೈನಸ್ ಲಿಂಬೇಟಸ್), ನೈಕಪ್ಲ ತಟ್ಟೆ ಅಥವಾ ಕಪ್ಪುರೆಕ್ಕೆ ಷಾರ್ಕ್ (ಕಾರ್ಕಾರೈನಸ್ ಮೆಲನಾಪ್ಟಿರಸ್), ಮತ್ತು ಬಗ್ಗಾರ್ ಕಾರುವೆ (ಕಾರ್ಕಾರೈನಸ್ ಗ್ಯಾಂಜೆಟಿಕಸ್). ಕೊನೆಯಲ್ಲಿ ಉಲ್ಲೇಖಿಸಿರುವ ಷಾರ್ಕು ನದಿಗಳಿಗೆ ವಲಸೆ ಹೋಗುತ್ತದೆ.

ಕುಟುಂಬ 4 ಓಡಂಟಾಸ್ಪಿಡಿಡೀ: ಉದಾಹರಣೆಗೆ ಕಾರ್ಕಾರಿಯಾಸ್ ಟ್ರೈಕಸ್ಪಿಡೇಟಸ್

ರ‍್ಯಾಜಿಫಾರ್ಮೀಸ್ ಗಣ

ಇದು ಸಾಮಾನ್ಯವಾಗಿ ಚಪ್ಪಟೆ ದೇಹವುಳ್ಳ ಸ್ಕೇಟುಗಳು, ರೇ ಮೀನುಗಳು ಮತ್ತು ರಂಪದ ಮೀನುಗಳನ್ನು (ಸಾಫಿಶ್) ಒಳಗೊಂಡಿದೆ. ಇದರಲ್ಲಿ ಐದು ಕುಟುಂಬಗಳುಂಟು. ಇವು ಇಂತಿವೆ:

  1. ಪ್ರಿಸ್ಟಿಡೀ: ಈ ಕುಟುಂಬದ ಮೀನುಗಳ ಮೂತಿ ಉದ್ದವಾಗಿ ಗರಗಸದಂತೆ ಚಾಚಿಕೊಂಡಿದೆ. ಉದಾಹರಣೆ: ಪ್ರಿಸ್ಟಿಸ್ ಕಸ್ಪಿಡೇಟಸ್ (ಎಟ್ಟೆ ತೊರಕೆ). ಇದು ಸುಮಾರು 6 ಮೀ ಉದ್ದ ಬೆಳೆಯುತ್ತದೆ.
  2. ರೈನೊಬ್ಯಾಟಿಡೀ (ಗಿಟಾರು ಮೀನುಗಳು): ಚಪ್ಪಟೆ ದೇಹ, ಮೊನಚು ಮೂತಿ, ಪಟ್ಟೆಗಳ ರೀತಿ ಜೋಡಣೆಗೊಂಡ ಹಲ್ಲುಗಳು ಈ ಮೀನುಗಳ ವಿಶೇಷ ಲಕ್ಷಣಗಳು. ಉದಾಹರಣೆ ರೈನೋಬೇಟಸ್ ಗ್ರ್ಯಾನ್ಯುಲೇಟಸ್ (ಎತ್ತಿ ಬಳಿಯಾರ್).
  3. ಡ್ಯಾಸಿಯಾಟಿಡೀ (ಸ್ಟಿಂಗ್ ರೇ ಮೀನುಗಳು): ಇವುಗಳಲ್ಲಿ ಬೆನ್ನಿನ ರೆಕ್ಕೆ ಇಲ್ಲ. ಬಾಲ ಕಿರಿಯಗಲದ ಚೂಪಾದ ಚಾವಟಿಯಂತಿದೆ. ಇದರ ಮೇಲೆ ವಿಷಯುಕ್ತ ಮುಳ್ಳು ಉಂಟು. ಉದಾಹರಣೆ: ಡಸಿಯಾಟಿಸ್ ಉವರ್‌ನಾಕ್ (ಪುಷ್ಟಿ ಬಳಿಯಾರ್) ಮತ್ತು ಡಸಿಯಾಟಿಸ್ ಸೆಫೆನ್ (ಕೊಟ್ಟರ ತೊರಕೆ).
  4. ರೈನಾಪ್ಟರಿಡೀ (ಕೌ ರೇ ಮೀನುಗಳು ): ತಲೆ ದೇಹದ ಪ್ರಧಾನ ಅಂಗವಾಗಿದ್ದು ಇದರ ಮಧ್ಯೆ ಆಳವಾದ ಹಳ್ಳ ಇರುವುದರಿಂದ ಎರಡು ಉರುಟು ಹೊಳುಗಳಂತೆ ಕಾಣತ್ತದೆ. ಉದಾಹರಣೆ ರೈನಾಪ್ಟೆರ ಜವಾನಿಕ.
  5. ಮಿಲಿಯೊಬ್ಯಾಟಿಡೀ (ಈಗಲ್ ರೇ ಮೀನುಗಳು): ಅಗಲವಾದ ಮುಮ್ಮೂಲೆಯಾಕಾರದ ರೆಕ್ಕೆಗಳನ್ನೂ ಚೂಪುಮುಳ್ಳಿನಿಂದ ಕೂಡಿದ ಚಾವಟಿಯಂಥ ಬಾಲವನ್ನೂ ಪಡೆದಿರುವ ಮೀನುಗಳಿವು. ಇವುಗಳ ತಲೆ ಮೇಲ್ಮುಖವಾಗಿ ಉಬ್ಬಿರುವುದರಿಂದ ಕಣ್ಣುಗಳು ಪಾರ್ಶ್ಚಸ್ಥವಾಗಿವೆ. ಉದಾಹರಣೆ: ಈಟೊಮೈಲಸ್ ನಿಕೋಫಿಯೈ (ಕಪ್ಪು ತೊರಕೆ) ಮತ್ತು ಈಟೊಬ್ಯಾಟಸ್ ಫ್ಲಾಜೆಲಮ್.

ಟಾರ್ಪೆಡಿನೀಫಾರ್ಮೀಸ್ ಗಣ

ಹಾವುಮೀನುಗಳನ್ನು (ಈಲ್) ಹೋಲುತ್ತವೆ. ವಿದ್ಯುತ್ ಉತ್ಪಾದಕ ಅಂಗಗಳುಂಟು. ಮೃದುವಾದ ಚಿಪ್ಪಿಲ್ಲದ ಚರ್ಮವೂ ಮುಳ್ಳುರಹಿತ ಬಾಲವೂ ಇವೆ. ಇದರಲ್ಲಿ ಟಾರ್ಪೆಡಿನಿಡೀ ಎಂಬ ಕುಟುಂಬವುಂಟು (ಎಲೆಕ್ಟ್ರಿಕ್ ರೇ ಮೀನುಗಳು). ಉದಾಹರಣೆ: ಟಾರ್ಪೆಡೊ ಮಾರ್ಮರೇಟ, ನಾರ್ಸಿನ್ ಬ್ರುನಿಯ ಮತ್ತು ನಾರ್ಕೆ ಡಿಪ್ಟರೀಜಿಯ.

ವರ್ಗ ೨ ಟೀಲಿಯೊಸ್ಟೋಮೈ: ಈ ವರ್ಗದ ಮೀನುಗಳಲ್ಲಿ ಮೂಳೆಯಿಂದ ರಚಿತವಾದ ಕಂಕಾಲವುಂಟು. ಚರ್ಮದ ಮೇಲೆ ಒಂದರ ಮೇಲೊಂದು ಹೊದಿಸಿದಂತಿರುವ ಹುರುಪೆಗಳಿವೆ. ಕಿವಿರುಗಳ ಮೇಲೆ ಮೂಳೆಯಿಂದ ಕೂಡಿದ ಮುಚ್ಚಳ (ಒಪರ್‌ಕ್ಯುಲಮ್) ಇದೆಯಲ್ಲದೆ ಕಿವಿರು ಕಂಡಿ ಒಂದೇ ಒಂದು ಬಾಹ್ಯ ತೆರಪಿನಿಂದ ಹೊರತೆರೆಯುತ್ತದೆ. ಈ ಮೀನುಗಳು ಸಾಮಾನ್ಯವಾಗಿ ಮೊಟ್ಟೆಯಿಡುವುದರ ಮೂಲಕ ಮರಿ ಮಾಡುತ್ತವೆ.

ಈ ವರ್ಗದಲ್ಲಿ ಈ ಮುಂದಿನ ಗಣಗಳು ಸೇರಿವೆ.

ಕ್ಲೂಪಿಯಿಫಾರ್ಮೀಸ್ ಗಣ (Clupeiformes)

ಇದಕ್ಕೆ ಸೇರಿದ ಮೀನುಗಳು ಕಡಲ ನೀರಿನಲ್ಲೂ ಸಿಹಿನೀರು ತಾಣಗಳಲ್ಲೂ ಕಾಣ ದೊರೆಯುತ್ತವೆ. ಮುಳ್ಳುಗಳಿಲ್ಲದ ಬೆನ್ನಿನ ಹಾಗೂ ಗುದದ ಈಜು ರೆಕ್ಕೆಗಳನ್ನು ಪಡೆದಿವೆ. ಈ ಗಣದಲ್ಲಿ ಎಲೋಪಿಡೀ, ಮೆಗಲೋಪಿಡೀ, ಅಲ್ಬುಲಿಡೀ, ಕ್ಲೂಪಿಯಿಡೀ, ಎನ್‌ಗ್ರಾಲಿಡೀ, ಕೈರೊಸೆಂಟ್ರಿಡೀ, ಚಾನಿಡೀ, ಸಾಲ್ಮನಿಡೀ ಮತ್ತು ನೋಟಾಪ್ಟರಿಡೀ ಎಂಬ ಒಂಬತ್ತು ಕುಟುಂಬಗಳುಂಟು. ಇವುಗಳ ಪೈಕಿ ವಾಣಿಜ್ಯ ದೃಷ್ಟಿಯಿಂದ ಮುಖ್ಯವೆನಿಸುವಂಥವು: ಕ್ಲೂಪಿಯಿಡೀ, ಎನ್‌ಗ್ರಾಲಿಡೀ, ಚಾನಿಡೀ ಮತ್ತು ಸಾಲ್ಮನಿಡೀಗಳು. ಭಾರತದ ಮೀನುಗಾರಿಕೆಯಲ್ಲಿ ಕ್ಲೂಪಿಯಿಡೀ ಕುಟುಂಬಕ್ಕೆ ಸೇರಿದ ಹೆರಿಂಗ್ ಮತ್ತು ಸಾರ್ಡೀನ್ ಮೀನುಗಳ ಪಾತ್ರ ಹಿರಿದು. ಉದಾಹರಣೆಗೆ ಎಟ್ಟಿ ಎರೆಟಾಯ್ (ಸಾರ್ಡಿನೆಲ್ಲ ಅಲ್ಬೆಲ್ಲ), ಪೇಡಿ (ಸಾರ್ಡಿನೆಲ್ಲ ಫಿಂಬ್ರಿಯೇಟ), ಬೊಯ್ಗೆ (ಸಾರ್ಡಿನೆಲ್ಲ ಲಾಂಜಿಸೆಪ್ಸ್), ಎರೆಬಾಚೀ (ಸಾರ್ಡಿನೆಲ್ಲ ಗಿಬ್ಬೋಸ), ಸ್ವಾದಿ (ಕೊವಾಲ ಕೊವಲ್), ಪಲಿಯ (ಹಿಲ್ಸ ಇಲಿಷ), ಕಡಲ ಸ್ವಾದಿ (ಹಿಲ್ಸ ಕನಗುರ್ತ). ಅಂತೆಯೇ ಎನ್‌ಗ್ರಾಲಿಡೀ ಕುಟುಂಬದ ಆಂಚೊವಿಗಳು, ಮನಗು ಮೀನುಗಳು (ತ್ರಿಸೂಕ್ಲಿಸ್) ಮತ್ತು ಚಾನಿಡೀ ಕುಟುಂಬದ ಹೂಮೀನು (ಚನೋಸ್), ಸಾಲ್ಮನಿಡೀ ಕುಟುಂಬದ ಸಾಲ್ಮನ್ ಮತ್ತು ಟ್ರೌಟ್ ಮೀನುಗಳು ಕೂಡ ಬಲು ಮುಖ್ಯ ಜಾತಿಗಳಾಗಿವೆ.

ಸ್ಕೊಪೆಲಿಫಾರ್ಮೀಸ್ ಗಣ

ಆಳ ಸಮುದ್ರದ ಮೀನುಗಳಿವು. ಬೆಳಕು ಸೂಸುವ ಅಂಗಗಳನ್ನು ಪಡೆದಿವೆ. ಬೆನ್ನಿನ ಈಜುರೆಕ್ಕೆಯಲ್ಲಾಗಲಿ ಗುದದ ಈಜು ರೆಕ್ಕೆಯಲ್ಲಾಗಲಿ ಮುಳ್ಳುಗಳಿಲ್ಲ. ಈ ಗಣದ ಸೈನೊಡಾಂಟಿಡೀ ಕುಟುಂಬಕ್ಕೆ ಸೇರಿದ ಬೊಂಬ್ಲಿ (ಹಾರ್ಪೊಡಾನ್ ನೆಹೀರಿಯಸ್ - ಬಾಂಬೆ ಡಕ್) ಮೆಚ್ಚಿನ ಖಾದ್ಯ ಯೋಗ್ಯ ಮೀನಾಗಿದ್ದು ಭಾರತದ ಪಶ್ಚಿಮ ಕರಾವಳಿಯ ಮೀನುಗಾರಿಕೆಯಲ್ಲಿ ಮುಖ್ಯವೆನಿಸಿದೆ. ಇದು ಮುಕ್ತ ಕಡಲಿನಲ್ಲಿ ಗುಂಪುಗುಂಪಾಗಿ ಕಾಣದೊರೆಯುತ್ತದೆ.

ಸೈಪ್ರಿನಿಫಾರ್ಮೀಸ್ ಗಣ

ಇದು ಮೀನುಗಳ ಗುಂಪಿನ ಅತಿ ದೊಡ್ಡ ವಿಭಾಗ; ಇದಕ್ಕೆ ಸೇರಿದ ಸೈಪ್ರಿನಿಡೀ ಕುಟುಂಬ ಇನ್ನೂರಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡಿದೆ. ಸಿಹಿನೀರಿನಲ್ಲಿ ಸಿಗುವ ಮೀನುಗಳ ಪೈಕಿ ಆರ್ಥಿಕ ದೃಷ್ಟಿಯಿಂದ ಬಲುಮುಖ್ಯವಾಗಿರುವ ಜಾತಿಗಳು ಇಂತಿವೆ: ಸಾಸಲು (ಆಕ್ಸಿಗ್ಯಾಸ್ಟರ್ ಆರ್ಜೆಂಟೆಯ), ಅಗಸಗಿತ್ತಿ ಮೀನು (ಬೆರಿಲಿಯಸ್ ಬೆಂಡೆಲೆಸಿಸ್), ಪಕ್ಕೆ (ಎಸೋಮಸ್ ಡ್ಯಾನ್ರಿಕಸ್), ಪಂಡಿಪಕ್ಕೆ ಕಳ್ಮುರ (ಗ್ಯಾರಾ ಲಮ್ಟ), ಕುರಿಮೀನು (ಲೇಬಿಯೊ ಕಲ್ಬಾಸು), ಕೆಮ್ಮೀನು (ಲೇಬಿಯೊ ಫಿಂಬ್ರಿಯೇಟಸ್), ರೋಹು (ಲೇಬಿಯೊ ರೋಹಿಟ), ಅರ್ಜ (ಸಿರೈನಸ್ ಸಿರೋಸಸ್ - ಹ್ವೈಟ್ ಕಾರ್ಪ್), ಮೃಗಾಲ (ಸಿರೈನ ಮೃಗಾಲ), ತರಿ ಮೀನು (ಸಿರೈನಸ್ ರೀಬ), ನಾಗೇಂದ್ರಮ್ (ಆಸ್ಟಿಯೊಕೈಲಸ್ ತಾಮಸೈ), ಕಾಟ್ಲ (ಕಾಟ್ಲ ಕಾಟ್ಲ), ಕಾವೇರಿ ಗಂಡೆ (ಪಂಟಿಯಸ್ ಕರ್ನಾಟಿಕಸ್), ಪಂದಿಮೀನು (ಪಂಟಿಯಸ್ ಡೂಬಿಯಸ್), ಗೆಂಡೆ (ಪಂಟಿಯಸ್ ಸರಾನ), ಬಿಳಿಮೀನು ಅಥವಾ ಮಹಸೀರ್ (ಬಾರ್ಬಸ್ ಟೋರ್).

ಈ ಗಣದ ಇತರ ಕುಟುಂಬಗಳೂ ಅದಕ್ಕೆ ಸೇರಿದ ಮೀನು ಜಾತಿಗಳೂ ಈ ಮುಂದಿನಂತಿವೆ: ಕೋಬಿಟೈಯಿಡೀ - ಲೆಪಿಡೊಸಿಫ್ಯಾಲಿಕ್‍ತಿಸ್ ತರ್ಮ್ಯಾಲಿಸ್; ಹೋಮಲೋಪ್ಟರಿಡೀ - ಬ್ಯಾಲಿಟೋರ ಬ್ರೂಸಿಯೈ; ಟ್ಯಾಕಿಸೂರಿಡೀ - ಟ್ಯಾಕಿಸೂರಸ್ ಡಸ್ಸುಮಿಯರಿ (ಮೊಂಗದ್ ಶೇಡೆ); ಕ್ಲಾರೈಯಿಡೀ - ಕ್ಲಾರಿಯಸ್ ಬಟ್ರಾಕಸ್ (ಆನೆ ಮೀನು); ಹೆಟರಾಪ್‍ನ್ಯೂಸ್ಟಿಡೀ - ಹೆಟರಾಪ್‍ನ್ಯೂಸ್ಟಸ್ ಫಾಸಿಲಿಸ್ (ಚೇಳುಮೀನು); ಸೈಲ್ಯೂರಿಡೀ - ಓಂಪಾಕ್ ಬೈಮ್ಯಾಕ್ಯುಲೇಟಸ್ (ಗೊಡ್ಲೆ), ವಲಾಗೊ ಆಟ್ಟು (ಬಾಳೆ ಮೀನು); ಪ್ಲೋಟೊಸಿಡೀ - ಪ್ಲೋಟೊಸಸ್ ಅಂಗ್ವಿಲೇರಿಸ್; ಚಾಸಿಡೀ - ಚಾಕ ಚಾಕ; ಶಿಲ್‌ಬೈಯಿಡೀ - ಪಂಗೇಸಿಯಸ್ ಪಂಗೇಸಿಯಸ್; ಸಿಸೋರಿಡೀ - ಬಗೇರಿಯಸ್ ಬಗೇರಿಯಸ್ (ದೊಮ್ಮೆ) ಮತ್ತು ಬಾಗ್ರಿಡೀ - ಮಿಸ್ಟಸ್ ಆಯೊರ್ (ಶೇಡೆ, ತೊರವಿ), ಮಿಸ್ಟಸ್ ಸಿಂಗಾಲ.

ಅಂಗ್ವಿಲಿಫಾರ್ಮೀಸ್ ಗಣ (Anguilliformes)

ಉದ್ದ ಹಾವಿನಂಥ ದೇಹವುಳ್ಳ ಮೀನುಗಳ ಗಣ; ಹುರುಪೆಗಳಿಲ್ಲ. ಸೊಂಟದ ಈಜುರೆಕ್ಕೆಗಳೂ ಇಲ್ಲ. ವಲಸೆಹೋಗುವ ಸ್ವಭಾವದ ಮೀನುಗಳಿವು. ಇದರಲ್ಲಿ ಆಂಗ್ವಿಲಿಡೀ (ಮಳಗು ಮೀನುಗಳು), ಮ್ಯುರೀನಿಸಾಸಿಡೀ (ಕಡಲ ಮಳಗು ಮೀನುಗಳು), ಆಫಿಕ್ತಿಯಿಡೀ (ಹಾವುಬತ್ತಿಮೀನುಗಳು); ಮ್ಯುರೀನಿಡೀ (ಮೊರೇ ಹಾವು ಮೀನುಗಳು) ಎಂಬ ನಾಲ್ಕು ಕುಟುಂಬಗಳುಂಟು.

ಬೆಲೋನಿಫಾರ್ಮೀಸ್ ಗಣ (Beloniformes)

ಪ್ರಧಾನವಾಗಿ ಕಡಲುಗಳಲ್ಲಿ ವಾಸಿಸುವ ಮೀನುಗಳಾದ ಇವು ನೀಳವಾದ ದೇಹವುಳ್ಳಂಥವು. ಒಳ್ಳೆಯ ಆಹಾರದ ಮೀನುಗಳೆಂದು ಹೆಸರು ಗಳಿಸಿವೆ. ಈ ಗಣದಲ್ಲಿ ಬೆಲೋನಿಡೀ (ಉದಾಹರಣೆ: ಸೂಜಿಮೀನುಗಳು. ಗಾರ್‌ಮೀನುಗಳು, ಸ್ಟ್ರಾಂಗೈಲ್ಯೂರ ಸ್ಟ್ರಾಂಗೈಲ್ಯೂರಸ್ - ಕೆಂತೆ), ಹೆಮಿರ‍್ಯಾಂಫಿಡೀ (ಹಾಫ್ ಬೀಕ್ ಮೀನು), ಎಕ್ಸೊಸೀಟಿಡೀ (ಹಾರುವ ಮೀನಗಳು, ಸೈಪ್ಸೆಲ್ಯೂರಸ್ ಬಾಹಿಯೆನ್ಸಿಸ್ - ಹಾಯಿಮೀನು) ಎಂಬ ಮೂರು ಕುಟುಂಬಗಳಿವೆ.

ಗ್ಯಾಡಿಫಾರ್ಮೀಸ್ ಗಣ

ಇವು ಸಮಶೀತೋಷ್ಣವಲಯ ಪ್ರದೇಶಗಳ ಸಾಗರವಾಸಿ ಮೀನುಗಳನ್ನು ಒಳಗೊಂಡಿರುವ ಗಣ. ಇದರ ಬ್ರೆಗ್ಮಸಿರೋಟಿಡೀ ಕುಟುಂಬಕ್ಕೆ ಸೇರಿದ ಒಂದೇ ಒಂದು ಜಾತಿಯ ಮೀನು ಭಾರತದ ಕಾರವಾರ ಹಾಗೂ ರತ್ನಗಿರಿ ಪ್ರದೇಶದಲ್ಲಿ ಕಾಣದೊರೆಯುತ್ತದೆ.

ಸಿನ್‌ಗ್ನಾತಿಫಾರ್ಮೀಸ್ ಗಣ

ವಿಶೇಷ ರೀತಿಯ ದೇಹವುಳ್ಳ ಕಡಲವಾಸಿ ಮೀನುಗಳಿವು. ಮೂತಿ ಕೊಳವೆಯಂತೆ ಚಾಚಿದೆ. ದೇಹದ ಸುತ್ತ ಎಲುಬಿನ ಕವಚ ಉಂಟು. ಇದರಲ್ಲಿ ಸಿನ್‌ಗ್ನಾತಿಡೀ ಎಂಬ ಒಂದೇ ಒಂದು ಕುಟುಂಬ ಇದ್ದು ಪೈಪ್ ಮೀನು ಹಾಗೂ ಕಡಲ ಕುದುರೆಗಳನ್ನು (ಹಿಪೊಕ್ಯಾಂಪಸ್) ಒಳಗೊಂಡಿದೆ.

ಸೈಪ್ರಿನೊಡಾಂಟಿಫಾರ್ಮೀಸ್ ಗಣ

ಈ ಗಣದ ಮೀನುಗಳೆಲ್ಲ ಕೀಟಾಹಾರಿಗಳು. ಸಣ್ಣ ಗಾತ್ರದವು. ಅಲ್ಲದೆ ಜನಪ್ರಿಯ ಮೀನುತೊಟ್ಟಿ ಬಗೆಗಳೆನಿಸಿವೆ. ಇದಕ್ಕೆ ಸೇರಿದ ಕುಟುಂಬಗಳೂ ಜಾತಿಗಳೂ ಇಂತಿವೆ.

  1. ಸೈಪ್ರಿನೊಡಾಂಟಿಡೀ: ಕಾರ್ಪುಗಳನ್ನೂ ಮಿನೋಗಳನ್ನೂ ಒಳಗೊಂಡಿದೆ. ಉದಾಹರಣೆ: ಒರೈಜಿಯಾಸ್ ಮೆಲಸ್ಟಿಗ್ಮಾ - ಕುಡು ಬಡ್ಡು, ಆಪ್ಲೊಕೈಲಸ್ ಲೈನಿಯೇಟಮ್ - ಕುಡ್ಡಿಯನ್.
  2. ಪೋಸಿಲೈಯಿಡೀ: ಉದಾಹರಣೆ: ಗ್ಯಾಂಬೂಸಿಯ ಅಫಿಸಿಸ್ - ಮಲೇರಿಯ ಮೀನು.

ಮ್ಯೂಜಿಲಿಫಾರ್ಮೀಸ್ ಗಣ

ಮುಳ್ಳುಗಳಿಂದ ಹಾಗೂ ಎರಡು ಪ್ರತ್ಯೇಕ ರೀತಿಯ ಬೆನ್ನುರೆಕ್ಕೆಗಳಿರುವ ಮೀನುಗಳನ್ನು ಒಳಗೊಂಡಿದೆ. ಇದರಲ್ಲಿ ಸ್ಫೈರೀನಿಡೀ (ಬಾರಕೂಡ), ಮ್ಯೂಜಿಲಿಡೀ (ಗ್ರೇ ಮಲೆಟ್ - ಮ್ಯೂಜಿಲ್ ಜಾತಿ) ಹಾಗೂ ಆತೆರಿನಿಡೀ ಎಂಬ ಮೂರು ಕುಟುಂಬಗಳಿವೆ.

ಪಾಲಿನೆಮಿಫಾರ್ಮೀಸ್ ಗಣ

ಈ ಗಣಕ್ಕೆ ಸೇರಿದ ಮೀನುಗಳು ಕಡಲಿನಲ್ಲೂ ಅಳಿವೆ ನೀರಿನಲ್ಲೂ ಕಾಣದೊರೆಯುತ್ತವೆ. ಇದರ ಏಕೈಕ ಕುಟುಂಬವಾದ ಪಾಲಿನೆಮಿಡೀ ಅತ್ಯುತ್ತಮ ಖಾದ್ಯಮೀನಾದ ಇಂಡಿಯನ್ ಸ್ಯಾಲ್ಮನ್ (ವಾಮೀನು - ಎಲ್ಯೂಥರೊನೀಮ ಟೆಟ್ರಡ್ಯಾಕ್ಟಿಲಸ್) ಎಂಬುದನ್ನು ಒಳಗೊಂಡಿದೆ.

ಓಫಿಯೊಸಿಫ್ಯಾಲಿಫಾರ್ಮೀಸ್ ಗಣ

ಇದಕ್ಕೆ ಸೇರಿದ ಮೀನುಗಳು ಹಾವಿನ ತಲೆಯಂಥ ತಲೆಯುಳ್ಳವು. ಗಾಳಿಯನ್ನು ನೇರವಾಗಿ ಉಸಿರಾಡುತ್ತವೆ. ಮಾಂಸಾಹಾರಿಗಳು. ಸಿಹಿನೀರಿನಲ್ಲಿ ವಾಸಮಾಡುತ್ತವೆ. ಉದಾಹರಣೆ ಚಾನ ಪಂಕ್ಟೇಟಸ್ (ಕೊರವ, ಬಿಳಿಕೊರವ), ಚಾನ ಮರೂಲಿಯಸ್ (ಹೂಮೀನು), ಚಾನ ಗಚುವ (ಮಹಾಕೊರವ), ಚಾನ ಸ್ಟ್ರಯೇಟಸ್ (ಕುಚ್ಚುಮೀನು).

ಸಿನ್‍ಬ್ರಾಂಕಿಫಾರ್ಮೀಸ್ ಗಣ

ಹಾವಿನಾಕಾರದ ಸಿಹಿನೀರು ಮೀನುಗಳನ್ನು ಈ ಗಣದಲ್ಲಿ ಸೇರಿಸಲಾಗಿದೆ. ಜೋಡಿ ಈಜುರೆಕ್ಕೆಗಳಿಲ್ಲ. ಹುರುಪೆಗಳು ಅತಿ ಚಿಕ್ಕವು ಅಥವಾ ಇಲ್ಲವೇ ಇಲ್ಲ. ಉದಾಹರಣೆ: ಸಿನ್‍ಬ್ರಾಂಕಿಡೀ ಕುಟುಂಬದ ಪಿಗ್ಮಿ ಈಲುಗಳು (ಸಿನ್‍ಬ್ರಾಂಕಸ್ ಬೆಂಗಾಲೆನ್ಸಿಸ್) ಮತ್ತು ಆಂಫಿಪ್ನಾಯ್ಡೀ ಕುಟುಂಬದ ಕೆಸರು ಈಲುಗಳು (ಆಂಫಿಪ್ನಸ್ ಕೂಚಿಯ).

ಪರ್ಸಿಫಾರ್ಮೀಸ್ ಗಣ

ಇದಕ್ಕೆ ಸೇರಿದ ಮೀನುಗಳೆಲ್ಲವೂ ಮೂಳೆ ಮೀನುಗಳು. ಗಾಳಿಚೀಲ ಮುಚ್ಚಿದ ಬಗೆಯದು. ಕೆನ್ನೆಯ ಮೇಲೂ ಕಿವಿರು ಮುಚ್ಚಳದ ಮೇಲೂ ಹುರುಪೆಗಳಿವೆ. ಬೆನ್ನುರೆಕ್ಕೆ ಮುಳ್ಳುಗಳಿಂದ ಕೂಡಿದೆ. ಇದರಲ್ಲಿ 38 ಕುಟುಂಬಗಳಿವೆ. ಇವುಗಳು ಪೈಕಿ ಅತಿ ಮುಖ್ಯವಾದವು: ಸೆಂಟ್ರೊಪೋಮಿಡೀ - ಲ್ಯಾಟಿಸ್ ಕ್ಯಾಲ್‌ಕ್ಯಾರಿಫರ್ (ಕೊಳಜಿ), ಫಾರ್ಮಿಯೋನಿಡೀ - ಫಾರ್ಮಿಯೊ ನೈಜರ್ (ಚಂದ್ರಾತ್ಯ), ಸೈಯೀನಿಡೀ - ಸೈಯೀನ (ಕೊಲ್ಲರ್, ಬಲ್ಡೆ), ಸ್ಪಾರಿಡೀ - ಸ್ಪಾರಸ್ ಬೆರಡೆ (ಯೆರಿ), ಸ್ಕಾಟೊಫೇಗಿಡೀ - ಸ್ಕಾಟೊಫೇಗಸ್ ಆರ್ಗಸ್ (ಹುಚ್ಚ ಮೀನು), ಸ್ಕಾಂಬ್ರಿಡೀ - ರಾಸ್ಟ್ರೆಲಿಜರ್ ಕನಗುರ್ತ (ಬಂಗಡೆ), ಸ್ಟ್ರೋಮಾಟೈಯಿಡೀ (ಪಾಂಫ್ರೆಟ್ಸ್-ತೊಂಡ್ರೊಟ್ಟೆ, ಬಿಳಿಮಾಂಜಿ), ಅನಾಬ್ಯಾಂಟಿಡೀ (ಕ್ಲೈಂಬಿಂಗ್ ಪರ್ಚ್) ಮತ್ತು ಗೋಬಿಯಿಡೀ (ಗೋಬಿ ಮೀನುಗಳು) - ಗ್ಲಾಸೊಗೋಬಿಯಸ್ (ನೆತ್ತಿಕೊರವ).

ಟನ್ನಿಫಾರ್ಮೀಸ್ ಗಣ

ಆಳ ಸಾಗರದ ಮೀನುಗಳಿವು. ದೇಹದ ಉಷ್ಣತೆ ಹೆಚ್ಚು ಕಡಿಮೆ ಏಕ ರೀತಿಯದಾಗಿರುತ್ತದೆ. ಉದಾಹರಣೆ: ಟನ್ನಿಡೀ ಕುಟುಂಬದ ಟನ್ನಸ್ ಹಾಗೂ ಯೂತಿನ್ನಸ್ (ಕೇದಾರ್).

ಪ್ಲೂರೊನೆಕ್ಟಿಫಾರ್ಮೀಸ್ ಗಣ

ಈ ಗಣದ ಮೀನುಗಳು ಸಾಗರ ತಳದಲ್ಲಿ ಜೀವಿಸುವಂಥವು. ಚಪ್ಪಟೆಯಾಗಿರುತ್ತವೆ. ಎರಡು ಕಣ್ಣುಗಳು ಸಹ ದೇಹದ ಒಂದು ಪಾರ್ಶ್ವದಲ್ಲಿ (ಮೇಲ್ಭಾಗದಲ್ಲಿ) ಸ್ಥಿತವಾಗಿರುತ್ತವೆ. ಉದಾಹರಣೆ ದೊಡ್ಡ ನಂಗಿ, ಫ್ಲೌಂಡರುಗಳು, ನಂಗು ಮೀನುಗಳು.

ಮ್ಯಾಸ್ಟೊಸೆಂಬೆಲಿಫಾರ್ಮೀಸ್ ಗಣ

ಇವು ಕೂಡ ಹಾವಿನಾಕಾರದ ಮೀನುಗಳು. ಬಲು ರುಚಿಯಾದ ಮೀನುಗಳೆಂದು ಹೆಸರಾಗಿವೆ. ಉದಾಹರಣೆ: ಮ್ಯಾಸ್ಟೊಸೆಂಬಲಸ್ ಆರ್ಮೇಟಸ್.

ಎಕಿನೈಫಾರ್ಮೀಸ್ ಗಣ

ಷಾರ್ಕುಗಳ, ಟನ್ನಿಗಳ ಮತ್ತಿತರ ಬಗೆಯ ಸಾಗರವಾಸಿ ಮೀನುಗಳ ದೇಹದ ತಳಭಾಗಕ್ಕೆ ಅಂಟಿ ಜೀವನ ಸಾಗಿಸುವಂಥ ಹೀರುಬಟ್ಟಲು ಮೀನುಗಳಿವು (ಸಕರ್ ಫಿಶ್). ಇವುಗಳ ಪೈಕಿ ಅತ್ಯಂತ ಪ್ರಸಿದ್ಧವಾದ್ದು ರೆಮೋರ.

ಟೆಟ್ರಡಾಂಟಿಫಾರ್ಮೀಸ್ ಗಣ

ಇವು ಕೂಡ ಸಾಗರವಾಸಿ ಮೀನುಗಳು. ಇದರಲ್ಲಿ ಬ್ಯಾಲಿಸ್ಟಿಡೀ (ಟ್ರಿಗರ್ ಮೀನುಗಳು), ಆಸ್ಟ್ರಸೈಯಿಡೀ (ಟ್ರಂಕ್ ಮೀನುಗಳು), ಟೆಟ್ರಡಾಂಟಿಡೀ (ಗ್ಲೋಬ್ ಮೀನುಗಳು), ಡೈಯೊಡಾಂಟಿಡೀ (ಪಾರ್ಕ್ಯುಪೈನ್ ಮೀನುಗಳು) ಮತ್ತು ಮೋಲಿಡೀ (ಸನ್ ಮೀನುಗಳು) ಎಂಬ ಐದು ಕುಟುಂಬಗಳಿವೆ.

ಚಿತ್ರಸಂಪುಟ

ಉಲ್ಲೇಖಗಳು

ಹೆಚ್ಚಿನ ಓದಿಗೆ

ಹೊರಗಿನ ಕೊಂಡಿಗಳು

ಮೀನು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೀನು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಮೀನು ಮೀನಿನ ಆಕಾರಮೀನು ಮೀನಿನ ದೇಹದ ಹೊರಭಾಗಗಳುಮೀನು ಒಳಅಂಗಗಳುಮೀನು ವರ್ಣವಿನ್ಯಾಸಮೀನು ಸಂತಾನಕ್ರಿಯೆಮೀನು ಸಾಗರದ ಗಳುಮೀನು ಸಿಹಿನೀರು ಗಳುಮೀನು ವರ್ಗೀಕರಣಮೀನು ಭಾರತದಲ್ಲಿನ ಗಳುಮೀನು ಚಿತ್ರಸಂಪುಟಮೀನು ಉಲ್ಲೇಖಗಳುಮೀನು ಹೆಚ್ಚಿನ ಓದಿಗೆಮೀನು ಹೊರಗಿನ ಕೊಂಡಿಗಳುಮೀನುen:Cuttlefishen:Hagfishen:Jellyfishen:Lampreyಅಕಶೇರುಕಅವಯವಕಶೇರುಕಕಿವಿರುಗಳುಗೆಂಡೆ ಮೀನುಟ್ಯೂನ ಮೀನುತಲೆಬುರುಡೆನಕ್ಷತ್ರ ಮೀನುನೀರುಪ್ರಾಣಿಮೂಳೆಮೃದ್ವಸ್ಥಿಶೀತರಕ್ತ ಪ್ರಾಣಿ

🔥 Trending searches on Wiki ಕನ್ನಡ:

ನವ್ಯಪಿತ್ತಕೋಶಭಾರತದ ಬುಡಕಟ್ಟು ಜನಾಂಗಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಚಾಣಕ್ಯಅಷ್ಟ ಮಠಗಳುಭಾರತೀಯ ಭಾಷೆಗಳುಕನ್ನಡ ಸಾಹಿತ್ಯ ಸಮ್ಮೇಳನಅನುನಾಸಿಕ ಸಂಧಿಮುಹಮ್ಮದ್ಗೋತ್ರ ಮತ್ತು ಪ್ರವರತ್ರಿಪದಿಅರ್ಥಶಾಸ್ತ್ರನಯಸೇನದುರ್ಗಸಿಂಹಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಶ್ರೀಲಂಕಾ ಕ್ರಿಕೆಟ್ ತಂಡಕನ್ನಡ ವ್ಯಾಕರಣಪಾಪಬ್ಯಾಡ್ಮಿಂಟನ್‌ಕರ್ಕಾಟಕ ರಾಶಿರಾಷ್ಟ್ರೀಯ ಜನತಾ ದಳಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕೃತಕ ಬುದ್ಧಿಮತ್ತೆಚಾಲುಕ್ಯತಿಗಳಾರಿ ಲಿಪಿಕನ್ನಡದಲ್ಲಿ ಸಣ್ಣ ಕಥೆಗಳುನಂಜನಗೂಡುಸ್ತ್ರೀವಾದಭಾರತದಲ್ಲಿನ ಜಾತಿ ಪದ್ದತಿವಿಜಯಪುರಖ್ಯಾತ ಕರ್ನಾಟಕ ವೃತ್ತನದಿಯೋಗಚಿನ್ನಉಗುರುತಂತ್ರಜ್ಞಾನಆಸ್ಪತ್ರೆಭಾರತದ ರಾಜಕೀಯ ಪಕ್ಷಗಳುವಡ್ಡಾರಾಧನೆಬಿ.ಎಲ್.ರೈಸ್ಸುದೀಪ್ಪೆಟ್ರೋಮ್ಯಾಕ್ಸ್ (ಚಲನಚಿತ್ರ)ರಾಷ್ಟ್ರೀಯ ಉತ್ಪನ್ನಶಿಕ್ಷಕಕನ್ನಡ ರಂಗಭೂಮಿಕರ್ನಾಟಕದ ಶಾಸನಗಳುಜಗತ್ತಿನ ಅತಿ ಎತ್ತರದ ಪರ್ವತಗಳುಜನ್ನಬಿ. ಆರ್. ಅಂಬೇಡ್ಕರ್ಶೂದ್ರ ತಪಸ್ವಿಪಾಲಕ್ಸಂಸ್ಕೃತ ಸಂಧಿಜಿಪುಣಶತಮಾನಕೇಸರಿಬಾರ್ಲಿಸರ್ಪ ಸುತ್ತುವಿದುರಾಶ್ವತ್ಥಮಾನವನ ವಿಕಾಸಸ್ವಾಮಿ ವಿವೇಕಾನಂದಜಾನಪದಆಂಡಯ್ಯಶ್ರೀವಿಜಯಗುರುರಾಜ ಕರಜಗಿಪರಿಣಾಮಆದಿವಾಸಿಗಳುಚುನಾವಣೆಶಿವರಾಮ ಕಾರಂತಶ್ರೀ ರಾಮಾಯಣ ದರ್ಶನಂಪ್ರಾಚೀನ ಈಜಿಪ್ಟ್‌ಕ್ರೀಡೆಗಳುಕರಡಿಹಸ್ತಪ್ರತಿಗುಪ್ತ ಸಾಮ್ರಾಜ್ಯಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅಂಬಿಗರ ಚೌಡಯ್ಯಜಯಚಾಮರಾಜ ಒಡೆಯರ್🡆 More