ಕಪ್ಪೆ

ಆರ್ಕಿಯೊಬಟ್ರಾಕಿಯ ಮೆಸೊಬಟ್ರಾಕಿಯ ನಿಯೊಬಟ್ರಾಕಿಯ  –

ಕಪ್ಪೆ
Temporal range:
ಆರಂಭಿಕ ಜುರಾಸಿಕ್ - ಇಂದಿನವರೆಗೆ, 200–0 Ma
PreꞒ
O
S
D
C
P
T
J
K
Pg
N
ಕಪ್ಪೆ
ಬೇರೆ ಬೇರೆ ಕಪ್ಪೆಗಳು.
Scientific classification
ಸಾಮ್ರಾಜ್ಯ:
ಪ್ರಾಣಿ
ವಿಭಾಗ:
ಕಾರ್ಡೇಟ
ವರ್ಗ:
ಉಭಯವಾಸಿ
(ಶ್ರೇಣಿಯಿಲ್ಲದ್ದು):
(ಕ್ಲಾಡ್) ಸಲಿಯೆಂಟಿಯ
ಗಣ:
ಅನುರ

ಅಂಡ್ರೆ ಮೇರಿ ಡುಮೆರಿಲ್, 1806
ಉಪಗಣಗಳು

ಕಪ್ಪೆ
ಕಪ್ಪೆಗಳ ಸ್ಥಳೀಯ ಹಂಚಿಕೆ (ಹಸಿರಿನಲ್ಲಿ)

ಕಪ್ಪೆ ಒಂದು ಉಭಯವಾಸಿ ಅನುರ ಗಣಕ್ಕೆ (ಆರ್ಡರ್) ಸೇರಿದ ಬಹುತೇಕ ಮಾಂಸಾಹಾರಿ ಜೀವಿ. ಇದಕ್ಕೆ ಬಾಲವಿರುವುದಿಲ್ಲ. ಕಪ್ಪೆಗಳು ಸಾಮಾನ್ಯವಾಗಿ ನೀರಿನಲ್ಲಿ ಮೊಟ್ಟೆ ಇಡುತ್ತವೆ ಮತ್ತು ಮೊಟ್ಟೆಗಳು ಗೊದಮೊಟ್ಟೆ ಮರಿಗಳಾಗಿ (ಟಾಡ್‌ಪೋಲ್) ಹೊರಹೊಮ್ಮುತ್ತವೆ. ಈ ಗೊದಮೊಟ್ಟೆ ಮರಿಗಳು ಕಪ್ಪೆಮರಿಗಳಾಗಿ ರೂಪಾಂತರ ಹೊಂದುವುದರೊಂದಿಗೆ ಅವುಗಳ ಜೀವನ ಚಕ್ರ ಪೂರ್ಣವಾಗುತ್ತದೆ. ಕೆಲವೊಂದು ಭೂಮಿಯ ಮೇಲೆ ಮೊಟ್ಟೆಗಳನ್ನಿಡುತ್ತವೆ.

ಕಪ್ಪೆಗಳು ಸಿಹಿನೀರಿನಲ್ಲಿ ಅಲ್ಲದೆ ನೆಲದ ಮೇಲೂ ಬದುಕುತ್ತವೆ. ಕೆಲವು ಕಪ್ಪೆಗಳು ನೆಲದಾಳದಲ್ಲಿ ಮತ್ತು ಮರಗಳಲ್ಲಿ ಬದುಕಲು ಹೊಂದಿಕೊಂಡಿವೆ. ಇವು ಶೀತರಕ್ತದ ಪ್ರಾಣಿಗಳು. ಬಿಸುಪು ಪಡೆಯಲು ಇವು ಸೂರ್ಯನ ಬೆಳಕಿಗೊ ಅಥವಾ ಬಿಸುಪಿನ ಮೇಲ್ಮೈಗೊ ಹೋಗುತ್ತವೆ. ಹೆಚ್ಚು ಬಿಸಿಯಾದಾಗ ಅವು ನೆರಳಿಗೆ ಸರಿಯುತ್ತವೆ ಅಥವಾ ಚರ್ಮದ ಕನಿಷ್ಠ ಪ್ರದೇಶವನ್ನು ಗಾಳಿಗೆ ಒಡ್ಡುವ ಮೂಲಕ ತೇವಾಂಶ ಕಳೆದುಹೋಗುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ.

ವರ್ಗೀಕರಣ

ಸುಮಾರು ಶೇ 88ರಷ್ಟು ಉಭಯವಾಸಿ ಪ್ರಭೇದಗಳು ಅನುರ ಗಣದಲ್ಲಿ ವರ್ಗೀಕರಿಸಲ್ಪಟ್ಟಿವೆ. ಈ ಗಣದಲ್ಲಿ 33 ಕುಟುಂಬಗಳಿದ್ದು ಸುಮಾರು 4810 ಪ್ರಭೇದಗಳಿವೆ. ಈ ಕುಟುಂಬಗಳಲ್ಲಿ ಲೆಪ್ಟೊಡಕ್ಟಿಲಿಡೆ (1100 ಪ್ರಭೇದಗಳು), ಹೈಲಿಡೆ (800 ಪ್ರಭೇದಗಳು) ಮತ್ತು ರನಿಡೆ (750 ಪ್ರಬೇದಗಳು) ದೊಡ್ಡವು. ಕಪ್ಪೆಗಳನ್ನು ನೆಲಗಪ್ಪೆ (ಟೋಡ್) ಮತ್ತು ಕಪ್ಪೆ ಎಂದು ವಿಭಜಿಸಲಾಗುತ್ತದೆಯಾದರೂ ಇದಕ್ಕೆ ಜೀವ ವರ್ಗೀಕರಣದಲ್ಲಿ ಮಹತ್ವ ಇಲ್ಲ. ವರ್ಗೀಕಣ ದೃಷ್ಟಿಕೋನದಿಂದ ಅನುರ ಗಣದ ಎಲ್ಲಾ ಸದಸ್ಯರೂ ಕಪ್ಪೆಗಳು ಆದರೆ ಬಫೊನಿಡೆ ಕುಟುಂಬದ ಸದಸ್ಯರು ಮಾತ್ರ "ನಿಜ ನೆಲಗಪ್ಪೆ"ಗಳು. ಈ ಅರ್ಥದಲ್ಲಿ "ಕಪ್ಪೆ" ಎಂದು ಕರೆಯುವುದು ಜಲಚರ ಅಥವಾ ಅರೆ ಜಲಚರ ಪ್ರಭೇದಗಳನ್ನು ಒಳಗೊಂಡಿದ್ದು ಅವುಗಳ ಚರ್ಮವು ನಯವಾಗಿದ್ದು ತೇವಾಂಶ ಭರಿತವಾಗಿರುತ್ತದೆ. ಆದರೆ "ನೆಲಗಪ್ಪೆ"ಗಳು ಭೂವಾಸಿಗಳಾಗಿದ್ದು ಅವುಗಳಿಗೆ ಒಣ ಚರ್ಮವಿದ್ದು ಅದರ ಮೇಲೆ ಗಂಟುಗಳಿರುತ್ತವೆ.

ಅನುರ ಗಣವನ್ನು ಅರ್ಕಿಯೊಬಟ್ರಾಕಿಯ, ಮೆಸೊಬಟ್ರಾಕಿಯ ಮತ್ತು ನಿಯೊಬಟ್ರಾಕಿಯ ಎಂದು ಮೂರು ಉಪಗಣಗಳಾಗಿ ವಿಂಗಡಿಸಲಾಗಿದೆ. ಆರ್ಕಿಯೊಬಟ್ರಾಕಿಯ ನಾಲ್ಕು ಕುಟುಂಬಗಳಿದ್ದು ಇವು ಪ್ರಾಚೀನ ಕಪ್ಪೆಗಳು. ಮೆಸೊಬಟ್ರಾಕಿಯ ಹೆಚ್ಚು ವಿಕಾಸವಾದ ಮಧ್ಯಂತರ ಕಪ್ಪೆಗಳನ್ನು ಒಳಗೊಂಡಿವೆ ಮತ್ತು ಇದರಲ್ಲಿ ಐದು ಕುಟುಂಬಗಳಿವೆ. ಇಪ್ಪತ್ನಾಲ್ಕು ಕುಂಟುಂಬಗಳಿರುವ ಅತಿದೊಡ್ಡ ಉಪಗಣ ನಿಯೊಬಟ್ರಾಕಿಯ. ಇದರಲ್ಲಿ ಇತ್ತೀಚೆಗೆ ವಿಕಾಸವಾದ ಕಪ್ಪೆಗಳು ಸೇರಿವೆ. ಉಪಗಣ ನಿಯೊಬಟ್ರಾಕಿಯವನ್ನು ಹೈಲಾಯ್ಡಿಯೇ ಮತ್ತು ರನಾಯ್ಡಿಯೇ ಎಂಬ ಎರಡು ಸೂಪರ್‌ಕುಟುಂಬಗಳಾಗಿ ವಿಭಜಿಸಲಾಗಿದೆ.

ವಿಕಾಸ

ಅಳಿದ ಮತ್ತು ಬದುಕಿರುವ ಕಪ್ಪೆಗಳ ದೈಹಿಕ ಗುಣಗಳು ಮತ್ತು ಅಣ್ವಿಕ ದತ್ತಾಂಶಗಳ ವಿಶ್ಲೇಷಣೆಯನ್ನು ಒಳಗೊಂಡ ಇತ್ತೀಚಿನ 2011ರ ಅಧ್ಯಯನವು ಲಿಸ್‌ಉಭಯವಾಸಿಗಳು {(ಈ ಗುಂಪು ಕಪ್ಪೆಗಳು, ಬೆಂಕಿಮೊಸಳೆ ಅಥವಾ ಸಾಲಮಾಂಡರ್ ಮತ್ತು ಸಿಸಿಲಿಯನ್‌ ಅಧವಾ ಹಾವಿನಂತಿರುವ ಉಭಯವಾಸಿಗಳನ್ನು ಒಳಗೊಂಡಿದೆ)} ಒಂದೇ ಮೂಲ ವಂಶದಿಂದ ಹುಟ್ಟಿದ್ದು ಕಾರ್ಬೊನಿಫೆರಸ್ ಅವಧಿಯಲ್ಲಿ (ಸುಮಾರು 290ರಿಂದ 305 ದಶಲಕ್ಷ ವರುಷಗಳ ಹಿಂದೆ) ಎನ್ನುತ್ತದೆ. {ref wiki frog r15} ಅಣ್ವಿಕ ಏಕವಂಶಮೂಲ (ಮಾಲೆಕ್ಯೂಲರ್ ಫೈಲೊಜೆನಿ) ರೈಬೋಸೋಮ್‌ ಡಿಎನ್‌ಎ ವಿಶ್ಲೇಷಣೆಯ 2005ರ ಅಧ್ಯಯನಗಳು ಬೆಂಕಿಮೊಸಳೆ ಮತ್ತು ಸಿಸಿಲಿಯನ್‌ಗಳು ಒಂದಕ್ಕೊಂದು ಕಪ್ಪೆಗಳಿಗಿಂತ ಹೆಚ್ಚು ಹತ್ತಿರ ಸಂಬಂಧಿಗಳು ಎನ್ನುತ್ತದೆ. ಈ ಬಗೆಗೆ ಚರ್ಚೆ ಮುಂದುವರೆದಿದೆ.

ತೀರ ಹಿಂದಿನ ಕಪ್ಪೆಯನ್ನೇ ಬೆಂಕಿಮೊಸಳೆಗಳಿಗಿಂತ ಹೆಚ್ಚು ಹೋಲುವ ಪಳೆಯುಳಿಕೆ ಟ್ರೈಡೊಬಾರ್ಕಟಸ್‌ ಮಸ್ಸಿನೋಟಿ 250 ದಶಲಕ್ಷ ವರುಷಗಳ ಹಿಂದಿನದು ಎಂದು ಗುರುತಿಸಲಾಗಿದ್ದು ಇದು ಇಂದಿನ ಮಡಗಾಸ್ಕರ್‌ನಲ್ಲಿ ಪತ್ತೆಯಾಗಿದೆ. ಆಧುನಿಕ ಕಪ್ಪೆಗಳಂತೆ ಅಲ್ಲದೆ ಇದಕ್ಕೆ ಸಣ್ಣ ಬಾಲವಿದೆ. ಇದರ ಮೂಳೆಗಳು ಇದಕ್ಕೆ ಇಂದಿನ ಕಪ್ಪೆಗಳಂತೆ ಜಿಗಿಯಲು ಶಕ್ಯವಿರಲಿಲ್ಲ ಎಂದು ಸೂಚಿಸುತ್ತವೆ.{ref wiki frog r21} ಆರಂಭಿಕ ಜುರಾಸಿಕ್ ಕಾಲಮಾನದ್ದು (199.6 ನಿಂದ 175 ದಶಲಕ್ಷ ವರುಷಗಳ ಹಿಂದೆ) ಎಂದು ಗುರುತಿಸಲಾದ ಪ್ರೊಸಲಿರಸ್ ಬಿಟಿಸ್ ಪಳೆಯುಳಿಕೆ ಆಧುನಿಕ ಕಪ್ಪೆಗಳನ್ನು ಹೆಚ್ಚು ಹೋಲುತ್ತದೆ. ಅದಕ್ಕೆ ಬಾಲವಿಲ್ಲ ಮತ್ತು ಜಿಗಿಯಬಲ್ಲದಾಗಿತ್ತು.

ದೈಹಿಕ ಲಕ್ಷಣಗಳು

ಕಪ್ಪೆ 
ಉದ್ದವಾದ ಕಾಲಿನ ಭಾಗಗಳು ಮತ್ತು ಹೆಚ್ಚುವರಿ ಕೀಲುಗಳನ್ನು ತೋರುವ ಗೂಳಿಕಪ್ಪೆಯ ಅಸ್ತಿಪಂಜರ. ಕಪ್ಪೆಯಲ್ಲಿ ಮೂಳೆ ಉದ್ದವಾಗಿರುವುವನ್ನು ಮತ್ತು ಚಲನಶೀಲವಾದ ಕೀಲುಗಳನ್ನು ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ. ನೀಲಿ ಬಣ್ಣವು ಮಾರ್ಪಾಡಾಗದ ಅಥವಾ ತುಸುವೇ ಮಾರ್ಪಾಡದ ಕೀಲುಗಳು ಮತ್ತು ಮೂಳೆಗಳನ್ನು ತೋರುತ್ತವೆ

ಇವುಗಳ ಗಾತ್ರವು ಪಾಪುವ ನ್ಯೂ ಗಿನಿಯಲ್ಲಿ ಇತ್ತೀಚೆಗೆ ಪತ್ತೆಯಾದ ಅತಿ ಸಣ್ಣ ಕಪ್ಪೆ (ಉದ್ದ 7.7 ಮಿಮೀ ಅಥವಾ 0.30 ಇಂಚು)ಯಿಂದ ಕ್ಯಾಮರೂನ್‌ನ 300 ಮೀಮಿ (12 ಇಂಚು) ಉದ್ದದ ಗೊಲಿಯಾತ್ ಕಪ್ಪೆಯವರೆಗೂ ಇದೆ. ಕಪ್ಪೆಗಳಿಗೆ ಮೂರು ಕಣ್ಣಿನ ರೆಪ್ಪೆಗಳಿರುತ್ತವೆ ಅದರಲ್ಲಿ ಒಂದು ಪಾರದರ್ಶಕವಾಗಿದ್ದು ನೀರಿನಲ್ಲಿದ್ದಾಗ ಅದರ ಕಣ್ಣನ್ನು ಕಾಪಾಡುತ್ತದೆ. ಅವುಗಳ ತಲೆಯ ಎರಡೂ ಕಡೆ ಟಿಂಪಾನಮ್ ಇದ್ದು ಅದು ಕೇಳುವಿಕೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಕೆಲ ಕಪ್ಪೆಗಳಲ್ಲಿ ಇದು ಚರ್ಮದಿಂದ ಆವರಿಸಿರುತ್ತದೆ. ನಿಜ ನೆಲಗಪ್ಪೆಗಳಲ್ಲಿ ಹಲ್ಲುಗಳಿರುವುದಿಲ್ಲ ಆದರೆ ಬಹಳಷ್ಟು ಕಪ್ಪೆಗಳಲ್ಲಿ ಮೇಲ್ದವಡೆ ಮತ್ತು ಬಾಯಿಯ ನೆತ್ತಿಯಲ್ಲಿ ಹಲ್ಲುಗಳಿರುತ್ತವೆ ಮತ್ತು ಕೆಳದವಡೆಯಲ್ಲಿ ಹಲ್ಲುಗಳಿರುವುದಿಲ್ಲ. ಕಪ್ಪೆಗಳು ಸಾಮಾನ್ಯವಾಗಿ ತಮ್ಮ ಆಹಾರವನ್ನು ಪೂರ್ಣವಾಗಿ ಹಾಗೆಯೇ ನುಂಗುತ್ತವೆ. ಹಲ್ಲುಗಳು ಪ್ರಮುಖವಾಗಿ ಬೇಟೆಯನ್ನು ಅದರ ಸ್ಥಾನದಲ್ಲಿರಿಸಿ ನುಂಗಲು ಸಹಾಯ ಮಾಡುತ್ತವೆ ಮತ್ತು ಈ ಪ್ರಕ್ರಿಯೆಯಲ್ಲಿ ಕಣ್ಣು ತಲೆಯೊಳಗೆ ಎಳೆದುಕೊಳ್ಳುವುದು ಸಹಾಯ ಮಾಡುತ್ತದೆ. ಸಾಕ್ಷೇಪಿಕವಾಗಿ ಇಲಿ, ಇತರ ಕಪ್ಪೆಗಳಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಆಫ್ರಿಕಾದ ಗೂಳಿಗಪ್ಪೆಯಲ್ಲಿ ಮುಂದಿನ ಮೇಲ್ದವಡೆಯಲ್ಲಿ ಶಂಕುವಿನಾಕಾರದ ಮೂಳೆಯ ಚಾಚುವಿಕೆಗಳು ಹಲ್ಲಿನಂತೆ ಕೆಲಸಮಾಡುತ್ತವೆ.

ಕಪ್ಪೆ 
ಸಾಮಾನ್ಯ ಕಪ್ಪೆಯ (ರಾನ ಟೆಂಪರೊರಿಯ) ಹಿಂಗಾಲಿನ ಪೊರೆ

ಕಾಲು ಮತ್ತು ಚಲನೆ

ಕಪ್ಪೆ 
ಫ್ರೈನೊಮ್ಯಾಂಟಿಸ್ ಬಿಫಸಿಯಾಟಸ್ ಮಟ್ಟಸ ಮೇಲ್ಮೈಯಲ್ಲಿ ನಡೆಯುತ್ತಿರುವುದು
ಕಪ್ಪೆ 
ನೇರಳೆ ಕಪ್ಪೆ ನಸಿಕಬಾಟ್ರಕಸ್ ಸಹ್ಯಾದ್ರೆನ್ಸಿಸ್
ಕಪ್ಪೆ 
ಬರ್ಮಿಸ್ಟರ್‌ನ ಎಲೆ ಕಪ್ಪೆ

ಕಪ್ಪೆಯ ಕಾಲುಗಳು ಅದು ಎಲ್ಲಿ ಜೀವಿಸುತ್ತದೆ ನೀರು, ನೆಲ, ಮರ ಮತ್ತು ಭೂಮಿಯಲ್ಲಿನ ಬಿಲ ಎಂಬುದರ ಮೇಲೆ ಬದಲಾವಣೆ ಗೊಂಡಿವೆ. ಬಹಳಷ್ಟು ಕಪ್ಪೆಗಳು ಚೆನ್ನಾಗಿ ಜಿಗಿಯಬಲ್ಲವು ಅಥವಾ ಅವುಗಳ ದೇಹ ಜಿಗಿತಕ್ಕೆ ಹೊಂದಿಕೊಡ ಅಸ್ತಿಪಂಜರ ಮತ್ತು ಸ್ನಾಯುಗಳನ್ನು ಹೊಂದಿದ ಪೂರ್ವಜನಿಂದ ವಿಕಾಸವಾಗಿದೆ. ಅದರ ಕಾಲಿನ ಹಲವು ಮೂಳೆಗಳು ಸೇರಿ ದೊಡ್ಡ ಮೂಳೆಗಳಾಗಿವೆ, ಮೂಳೆಯ ಕೀಲುಗಳು ಹಾಗೆಯೇ ಸ್ನಾಯುಗಳು ಸಹ ಬದಲಾಗಿವೆ. ಬಾಲ ಬೆನ್ನುಮೂಳೆ ಯುರೊಸ್ಟೈಲ್‌ನೊದಿಗೆ (ಕಪ್ಪೆ, ನೆಲಗಪ್ಪೆಗಳಲ್ಲಿ ಬೆನ್ನುಮೂಳೆಯ ತುದಿಯ ಒಂದು ಮೂಳೆ) ಸೇರಿ ಪೆಲ್ವಿಸ್ ಒಳಗೆ ಸೇರಿದೆ. ಇದು ಜಿಗಿತದಲ್ಲಿನ ಶಕ್ತಿಯನ್ನು ಕಾಲಿನಿಂದ ದೇಹಕ್ಕೆ ವರ್ಗಾಯಿಸುತ್ತದೆ. ಸ್ನಾಯುಗಳು ದೊಡ್ಡವಾಗಿವೆ, ಮುಖ್ಯ ಕಾಲಿನ ಸ್ನಾಯು ಒಟ್ಟು ಕಪ್ಪೆಯ ದೇಹದ ದ್ರವ್ಯರಾಶಿಯ ಶೇ 17ರಷ್ಟಿದೆ. ಕಪ್ಪೆಗಳ ಬೆರಳುಗಳ ನಡುವೆ ಪೊರೆ ಇದ್ದು ಇದು ಅವು ಎಷ್ಟರ ಮಟ್ಟಿಗೆ ನೀರಿನಲ್ಲಿರುತ್ತವೆ ಎಂಬುದರ ಮೇಲೆ ಇದ್ದು ಮರಗಪ್ಪೆಗಳಲ್ಲಿ ಈ ಪೊರೆಗಳು ಬೆರಳಿನ ಅರ್ಧ ಅಥವಾ ಕಾಲು ಭಾಗ ಪೊರೆಗಳಿರುತ್ತವೆ.

ಕಪ್ಪೆ 
ಸಾಮಾನ್ಯ ನೆಲಗಪ್ಪೆ ಬಫೊ ಬಫೊ ಈಜುತ್ತಿರುವುದು

ಬೇರೆ ಬೇರೆ ಕಪ್ಪೆಗಳು ಬೇರೆ ಬೇರೆಯ ಚಲನೆಗಳನ್ನು ಅಳವಡಿಸಿಕೊಂಡಿದ್ದು ಅವು ಜಿಗಿಯುವುದು, ಓಡುವುದು, ಈಜುವುದು, ಬಿಲ ತೋಡುವುದು, ಹತ್ತುವುದು ಮತ್ತು ಗಾಳಿಯಲ್ಲಿ ತೇಲುವುದನ್ನು (ಅಥವಾ ಗ್ಲೈಡ್‌) ಒಳಗೊಂಡಿವೆ. ಕಪ್ಪೆಗಳ ಜಿಗಿತ ವಿಶೇಷ ಗಮನ ಸೆಳೆಯುತ್ತದೆ. ಎಲ್ಲಾ ಕಶೇರುಕಗಳಲ್ಲಿ ಕಪ್ಪೆಗಳನ್ನು ವಿಶೇಷವಾಗಿ ಜಿಗಿಯುವ ಶಕ್ತಿಯಿರುವ ಪ್ರಾಣಿಗಳು ಎಂದು ಗುರುತಿಸಲಾಗಿದೆ. ಪಟ್ಟಿಯ ರಾಕೆಟ್ ಕಪ್ಪೆ ಲಿಟೊರಿಯಾ ನಸುಫ 2 ಮೀಟರ್ (6-7 ಅಡಿ) ದೂರ ಜಿಗಿಯ ಬಲ್ಲದು ಮತ್ತು ಇದು ಅದರ ದೇಹದ ಉದ್ದ 5.5 ಸೆಂಮೀ (2.2 ಇಂಚು) ಐವತ್ತರಷ್ಟು ದೂರ. ಕಪ್ಪೆಯ ಗಾತ್ರ ಹೆಚ್ಚಿದಂತೆ ಅದು ಜಿಗಿಯುವ ದೂರ ಹೆಚ್ಚುತ್ತದೆ ಆದರೆ ಅದರ ದೇಹದ ಉದ್ದಕ್ಕೆ ಹೋಲಿಸಿದಲ್ಲಿ ಸಾಕ್ಷೇಪಿಕ ಜಿಗಿಯುವ ದೂರ ಕಡಿಮೆಯಾಗುತ್ತದೆ.

ಬೊಫಿನಿಡೇ, ರೈನೇಫ್ರೈನಿಡೇ ಮತ್ತು ಮೈಕ್ರೊಹೈಲಿಡೇ ಕುಂಟುಂಬಗಳಲ್ಲಿ ಹಿಂಗಾಲುಗಳು ಸಣ್ಣವಿದ್ದು ಅವು ನಡೆಯುತ್ತವೆ. ನೀರಿನಲ್ಲಿ ಬದುಕುವ ಅಥವಾ ನೀರಿಗೆ ಹೋಗುವ ಕಪ್ಪೆಗಳಲ್ಲಿ ಶಕ್ತಿಯುತ ಹಿಂಗಾಲುಗಳು ಮತ್ತು ಪೊರೆಯ ಬೆರಳುಗಳು ಇರುತ್ತವೆ. ಬಿಲತೋಡುವ ಮತ್ತು ಭೂಮಿಯೊಳಗೆ ಬದುಕುವ ಕಪ್ಪೆಗಳಲ್ಲಿ ದುಂಡನೆಯ ದೇಹ, ಸಣ್ಣ ತಲೆ ಮತ್ತು ಬಿಲ ತೋಡಲು ಸೂಕ್ತವಾದ ಹೊಂದಾಣಿಕೆಯ ಹಿಂಗಾಲುಗಳು ಇರುತ್ತವೆ. ದಕ್ಷಿಣ ಭಾರತದ ನೇರಳೆ ಕಪ್ಪೆ (ಪರ್ಪಲ್ ಫ್ರಾಗ್- ನಸಿಕಬಾಟ್ರಕಸ್ ಸಹ್ಯಾದ್ರೆನ್ಸಿಸ್) ಬಿಲ ತೋಡುವ ಕಪ್ಪೆಗಳ ಉತ್ತಮ ಉದಾಹರಣೆ. ಅದು ಗೆದ್ದಲುಗಳ ಮೇಲೆ ಜೀವಿಸುವ ಇದು ಬಹುತೇಕ ಭೂಮಿಯೊಳಗೆ ಇರುತ್ತದೆ. ಮಳೆಗಾಲದಲ್ಲಿ ಇದು ಲೈಂಗಿಕ ಜೋಡಿಗಾಗಿ ಮತ್ತು ಮರಿ ಮಾಡಲು ಮಾತ್ರ ಹೊರ ಬರುತ್ತದೆ ಮತ್ತು ಸಣ್ಣ ತತ್ಕಾಲಿಕ ಹೊಂಡಗಳಲ್ಲಿ ಮರಿ ಮಾಡುತ್ತದೆ. ಇದರ ಪಳೆಯುಳಿಕೆಯ ಮೂಲಕ ಇದರ ಆಸ್ತಿತ್ವ ಗುರುತಿಸಿದ ನಂತರ 2003ರಲ್ಲಿ ಇದನ್ನು ಮೊದಲು ವಿವರಿಸಲಾಯಿತು. ಆದರೆ ಇದು ಸ್ಥಳೀಯ ಜನರಿಗೆ ಮೊದಲೇ ಪರಿಚಿತವಿತ್ತು.

ಕೆಲವು ಕಪ್ಪೆಗಳು ಗಿಡಗಳಲ್ಲಿಯೇ ಬದುಕುತ್ತಿದ್ದು ಬಹುತೇಕ ಎಂದೂ ಕೆಳಬರುವುದಿಲ್ಲ. "ನಿಜವಾದ" ಮರಗಪ್ಪೆಗಳು ಹೈಲಿಡೇ ಕುಟುಂಬಕ್ಕೆ ಸೇರುತ್ತವೆ ಆದರೆ ಇತರ ಕುಟುಂಬದ ಸದಸ್ಯರೂ ಸ್ವತಂತ್ರವಾಗಿ ಅಭಿಗಾಮಿ ವಿಕಾಸದ (ಕಾನ್ವರ್ಜೆಂಟ್ ಎವುಲ್ಯೂಶನ್) ಮೂಲಕ ಮರ ಜೀವನಕ್ಕೆ ಹೊಂದಾಣಿಕೆ ಮಾಡಿಕೊಂಡಿವೆ. ಇವು ಗಾಜು ಕಪ್ಪೆ (ಸೆಂಟ್ರೊಲೆನಿಡೇ ಕುಟುಂಬ), ಗಿಡ ಕಪ್ಪೆ (ಬುಶ್ ಫ್ರಾಗ್- ಹೈಪರೊಲಿಡೇ ಕುಟುಂಬ), ಕೆಲವು ಚೂಪು ಬಾಯಿಯ ಕಪ್ಪೆಗಳು (ಮೈಕ್ರೊಹೈಲಿಡೇ ಕುಟುಂಬ) ಮತ್ತು ಪೊದೆ ಕಪ್ಪೆ (ಶ್ರಬ್ ಫ್ರಾಗ್- ರಾಕೊಫೋರಿಡೆ ಕುಟುಂಬ) ಗಳನ್ನು ಒಳಗೊಂಡಿವೆ. ಬಹಳಷ್ಟು ಈ ಕಪ್ಪೆಗಳು ಉದ್ದ 10 ಸೆಂಮೀಗೂ (4 ಇಂಚು) ಕಡಿಮೆ ಇರತ್ತವೆ. ಇವುಗಳ ಕಾಲುಗಳ ಹಾಗೂ ಬೆರಳುಗಳು ಉದ್ದವಾಗಿದ್ದು ಬೆರಳಿನ ತುದಿಗೆ ಅಂಟಿಕೊಳ್ಳುವ ಮೆತ್ತೆಯ ಕೊನೆಗಳಿರುತ್ತವೆ. ಈ ಬೆರಳು ಮೆತ್ತೆಗಳ ಮೇಲೆ ಆರು ಮೂಲೆಗಳ ಹೊರ ಚರ್ಮದ ಜೀವಕೋಶಗಳು ಒತ್ತಾಗಿ ಚಪ್ಪಟೆಯಾಗಿ ಪೇರಿಸಲ್ಪಟ್ಟಿದ್ದು ಇವುಗಳ ನಡುವಿನ ಸ್ಥಳಗಳಲ್ಲಿ ಗ್ರಂಥಿಗಳು ಲೋಳೆಯ (ಅಂಟಿನಂತಹ) ಪದಾರ್ಥವನ್ನು ಜಿನುಗಿಸುತ್ತವೆ. ಈ ಬೆರಳಿನ ಮೆತ್ತೆಗಳು ಲೋಳೆಯಿಂದ ತೇವಾಂಶ ಭರಿತವಾಗಿ ನೀರಿರುವ ಅಥವಾ ಒಣ (ಗಾಜನ್ನೂ ಒಳಗೊಂಡು) ಮೇಲ್ಮೈಯನ್ನು ಹಿಡಿದುಕೊಳ್ಳುತ್ತವೆ. ಇದರಲ್ಲಿ ಬಳಕೆಯಾಗುವ ಶಕ್ತಿಗಳು ಬೆರಳ ಮೆತ್ತೆಗಳ ಹೊರ ಚರ್ಮದ ಜೀವಕೋಶಗಳು ಮತ್ತು ಮೇಲ್ಮೈ ನಡುವಿನ ಗಡಿ ಘರ್ಷಣೆ (ಬೌಂಡರಿ ಫ್ರಿಕ್ಶನ್), ಮೇಲ್ಮೈ ಎಳೆತ (ಸರ್ಫೇಸ್ ಟೆನ್ಶನ್) ಮತ್ತು ವಿಸ್ಕೊಸಿಟಿ. ಕೆಲವು ಕಪ್ಪೆಗಳಲ್ಲಿ ಕಾಲುಗಳ ಬೆರಳುಗಳು ವಿರುದ್ಧ ದಿಕ್ಕಿನಲ್ಲಿರುತ್ತವೆ. ಬಲೆ ಎಲೆ ಕಪ್ಪೆ (ರೆಟಿಕ್ಯೂಲೇಟೆಡ್ ಲೀಫ್ ಫ್ರಾಗ್ –ಫೈಲ್ಲೊಮೆಡುಸ ಅಯೆಅಯೆ)ಯಲ್ಲಿ ಎರಡು ಮುಂಗಾಲುಗಳಲ್ಲಿಯೂ ಒಂದು ಬೆರಳು ವಿರುದ್ಧ ದಿಕ್ಕಿನಲ್ಲಿರುತ್ತದೆ ಮತ್ತು ಹಿಂಗಾಲಿನ ಎರಡು ಬೆರಳುಗಳು ‌ವಿರುದ್ಧ ದಿಕ್ಕಿನಲ್ಲಿರುತ್ತವೆ. ಇದು ಈ ಕಪ್ಪೆಯು ಬದುಕುವ ನದಿ ಪಕ್ಕದ ಪ್ರದೇಶಗಳಲ್ಲಿ ಗಿಡಗಳ ಟೊಂಗೆಗಳ ಮೇಲೆ ಚಲಿಸಲು ಅನುಕೂಲ ಮಾಡಿಕೊಡುತ್ತವೆ.

ಕಪ್ಪೆಗಳ ವಿಕಾಸದ ಇತಿಹಾಸದಲ್ಲಿ ಹಲವು ಭಿನ್ನ ಗುಂಪುಗಳು ಸ್ವತಂತ್ರವಾಗಿ ಗಾಳಿಯಲ್ಲಿ ಚಲಿಸಲು ಹೊಂದಿಕೊಂಡಿವೆ. ಉಷ್ಣವಲಯದ ಮಳೆಕಾಡುಗಳಲ್ಲಿನ ಅಡವಿಯ ಅಂಗಳಕ್ಕೆ ತೇಲಿ ಇಳಿಯುವ ಅಥವಾ ಗಿಡದಿಂದ ಗಿಡಕ್ಕೆ ತೇಲುವ ಮೂಲಕ ಚಲಿಸವ ಹೊಂದಾಣಿಕೆ ಮಾಡಿಕೊಂಡಿವೆ. ಇದಕ್ಕೆ ವ್ಯಾಲೇಸ್ ಹಾರುವ ಕಪ್ಪೆ (ರಾಕೊಫೋರಸ್ ನಿಗ್ರೊಪಾಲ್ಮಟಸ್) ಒಂದು ಉದಾಹರಣೆ. ಇವುಗಳ ಬೆರಳು ತುದಿಗಳು ಚಪ್ಪಟೆಯ ತಟ್ಟೆಯಾಗಿ ಅಗಲವಾಗಿದೆ ಮತ್ತು ಬೆರಳುಗಳ ನಡುವೆ ಪೂರ್ಣವಾಗಿ ಪೊರೆಯಿದೆ. ಇವುಗಳ ಕಾಲುಗಳಿಂದ ಹಿಡಿದು ಬಾಲದ ಪ್ರದೇಶದವರೆಗೂ ಹರಡಿದ ಜೋಲು ಚರ್ಮವಿದೆ. ಬೆರಳುಗಳನ್ನು ಚಾಚಿ, ಕಾಲುಗಳನ್ನು ಹರಡಿದರೆ ಅದು ಸಾಕಷ್ಟು ದೂರ ತೇಲಬಲ್ಲದು ಆದರೆ ಹಕ್ಕಿಗಳಂತೆ ಹಾರಲಾರದು. ಇವು ಸಾಗುವ ದಿಕ್ಕನ್ನು ಬದಲಿಸ ಬಲ್ಲವು ಮತ್ತು ಮರಗಳ ನಡುವಿನ 15 ಮೀ (49 ಅಡಿ) ತೇಲಿ ಸಾಗಬಲ್ಲವು.

ಚರ್ಮ ಮತ್ತು ಉಸಿರಾಟ

ಕಪ್ಪೆಯ ಚರ್ಮವು ಉಸಿರಾಟದ ಕಾರ್ಯವನ್ನೂ ನಿರ್ವಹಿಸುತ್ತದೆ. ವಿಶೇಷವಾಗಿ ಮುಖ ಮತ್ತು ಬೆನ್ನಿನ ಚರ್ಮದ ಮೇಲೆ ಹಲವು ಗ್ರಂಥಿಗಳಿವೆ ಮತ್ತು ಹಲವು ಸಲ ಇವು ಹೇವರಿಕೆ ತರುವ ಮತ್ತು ವಿಷ ಪದಾರ್ಥಗಳನ್ನು ಶ್ರವಿಸುತ್ತವೆ. ಈ ಶ್ರವಿಸುವಿಕೆಗಳು ಅಂಟುಅಂಟಾಗಿದ್ದು ಚರ್ಮವನ್ನು ತೇವಾಂಶ ಭರಿತವಾಗಿ ಇರಿಸುತ್ತವೆ ಮತ್ತು ಬೂಜು, ಬ್ಯಾಕ್ಟೀರಿಯಗಳಿಂದ ಕಾಪಾಡುತ್ತವೆ. ಅಲ್ಲದೆ ಈ ಶ್ರವಿಸುವಿಕೆಗಳು ಜಾರುವಂತಿದ್ದು ಪರಭಕ್ಷಕಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೆ ಇವು ದೇಹದಿಂದ ನೀರು ಆವಿಯಾಗುವದನ್ನೂ ಕಡಿಮೆ ಮಾಡುತ್ತವೆ. ಕಪ್ಪೆ ಚರ್ಮವನ್ನು ಕೆಲವು ವಾರಗಳಿಗೊಮ್ಮೆ ಕಳಚುತ್ತದೆ.

ವಿಶೇಷವಾಗಿ ಅವುಗಳ ಪೆಲ್ವಿಕ್ ಪ್ರದೇಶದಲ್ಲಿ (ಹಿಂಗಾಲುಗಳು ಸೇರುವ ಬೆನ್ನಲಿಬಿನ ಕೆಳಭಾಗ) ಕಪ್ಪೆಗಳು ನೀರು ಮತ್ತು ಆಮ್ಲಜನಕವನ್ನು ನೇರವಾಗಿ ಚರ್ಮದ ಮೂಲಕ ಹಿಂಗಿಸಿಕೊಳ್ಳ ಬಲ್ಲವು. ಎದೆ ಮತ್ತು ಕಾಲುಗಳ ಮೇಲಿನ ಕೆಲವು ಗ್ರಂಥಿಗಳು ಆಂಪ್ಲೆಕ್ಸಸ್ ಎಂದು ಕರೆಯಲಾದ ಮಿಲನಕ್ಕೆ ಅಗತ್ಯವಾದ ದ್ರವವನ್ನು ಶ್ರವಿಸುತ್ತವೆ. ಛದ್ಮನೆ (ಕ್ಯಾಮೊಪ್ಲೇಜ್) ಬಹಳಷ್ಟು ನಿಶಾಚರಿ ಕಪ್ಪೆಗಳು ಹಗಲು ಬಳಸುವ ಸಾಮಾನ್ಯ ರಕ್ಷಣೆಯ ತಂತ್ರ. ಇವು ಹಗಲು ಪತ್ತೆಯಾಗದಂತಹ ಸ್ಥಳಗಳನ್ನು ಆಯ್ದುಕೊಳ್ಳುತ್ತವೆ. ಕಪ್ಪೆಗಳು ಬದಲಾಯಿಸಿಕೊಳ್ಳ ಬಹುದಾದ ಬಣ್ಣಗಳ ವ್ಯಾಪ್ತಿ ಸಣ್ಣದು.

ಕಪ್ಪೆಗಳ ಚರ್ಮ ನೀರು, ಆಮ್ಲಜನಕ, ಇಂಗಾಲ ಡೈಆಕ್ಸೈಡ್‌ಗಳಿಗೆ ಪ್ರವೇಶಸಾಧ್ಯವಿದೆ. ಚರ್ಮದ ಹತ್ತಿರವೇ ರಕ್ತನಾಳಗಳಿವೆ ಮತ್ತು ಕಪ್ಪೆ ನೀರಿನಲ್ಲಿದ್ದಾಗ ಆಮ್ಲಜನಕ ನೇರವಾಗಿ ರಕ್ತ ಸೇರುತ್ತದೆ. ನೀರಿನಲ್ಲಿ ಮುಳುಗಿರದಾಗ ಕಪ್ಪೆ ಕೆನ್ನೆಯೂದುವಿಕೆ (ಬಕ್ಕಲ್ ಪಂಪಿಂಗ್) ಎನ್ನುವ ಪ್ರಕ್ರಿಯೆ ಮೂಲಕ ಉಸಿರಾಡುತ್ತದೆ. ಆದರೆ ಎದೆಯ ಸ್ನಾಯುಗಳು ಉಸಿರಾಟ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಅಲ್ಲದೆ ಗಾಳಿಯನ್ನು ಒಳತರಲು ಮತ್ತು ಹೊರಕಳಿಸುವ ಕ್ರಿಯೆಯಲ್ಲಿ ಸಹಾಯ ಮಾಡುವ ಪಕ್ಕೆಲುಬುಗಳೂ ಮತ್ತು ವಫೆ ಇಲ್ಲ. ಇದು ಗಂಟಲಿನ ಮೂಲಕ ಗಾಳಿ ಊದಿ ಹೊಳ್ಳೆಗಳ ಮೂಲಕ ಗಾಳಿ ಎಳೆದುಕೊಳ್ಳುತ್ತದೆ. ಹಲವು ಪ್ರಭೇದಗಳಲ್ಲಿ ಈ ಸಮಯದಲ್ಲಿ ಹೊಳ್ಳೆ ಮುಚ್ಚಿಕೊಳ್ಳಲು ಕವಾಟಗಳಿವೆ. ಬಾಯಿಯ ತಳ ಒತ್ತಿದಾಗ ಗಾಳಿಯು ಶ್ವಾಸಕೋಶ ಪ್ರವೇಶಿಸುತ್ತದೆ. ಬೊರ್ನಿಯ ಚಪ್ಪಟೆ ತಲೆಯ ಕಪ್ಪೆ (ಬಾರ್‌ಬೌರುಲ ಕಲಿಮಂಟಾನೆನ್ಸಿಸ್) ಪೂರ್ಣವಾಗಿ ಶ್ವಾಶಕೋಶಗಳಲ್ಲಿವೆಂದು ಗುರುತಿಸಲಾದ ಮೊದಲ ಪ್ರಭೇದ.

ರಕ್ತಪರಿಚಲನೆ ಮತ್ತು ಹೃದಯ

ಕಪ್ಪೆ ಮತ್ತು ನೆಲಗಪ್ಪೆಗಳ ಹೃದಯ ಮಿಕ್ಕ ದ್ವಿಚರಿಗಳ ಹೃದಯಕ್ಕಿಂತ ರಚನೆಯಲ್ಲಿ ಹೆಚ್ಚು ಮುಂದುವರಿದಿದೆ. ಕಪ್ಪೆಯಲ್ಲಿ ಇರುವ ಹೃತ್ಕರ್ಣದ ಅಡ್ಡ ಭಿತ್ತಿ ಹೃತ್ಕರ್ಣವನ್ನು ಬಲ ಮತ್ತು ಎಡ ಹೃತ್ಕರ್ಣಗಳೆಂಬ ಎರಡು ಭಾಗ ಮಾಡುತ್ತದೆ. ಹೃತ್ಕರ್ಣದ ಕೆಳಗೆ ಹೃತ್ಕುಕ್ಷಿಯಿದೆ. ಇದು ದಪ್ಪ ಮಾಂಸಲ ಭಿತ್ತಿಯಿಂದಾದುದು. ಹೃದಯದ ಬೆನ್ನುಭಾಗದಲ್ಲಿರುವ ಸೈನಸ್ ವಿನೋಸಸ್ ಬಲ ಹೃತ್ಕರ್ಣ ಸೈನಸ್ ಆರಿಕ್ಯುಲಾರ್ ಕವಾಟವಿದೆ. ಇದು ಇರುವುದರಿಂದ ರಕ್ತ ಸೈನಸ್ ವಿನೋಸಸ್‌ನಿಂದ ಹೃತ್ಕರ್ಣಕ್ಕೆ ಮಾತ್ರ ಹರಿಯಲು ಸಾಧ್ಯ. ಸೈನಸ್ ವಿನೋಸಸ್ ಕೋಣೆಗೆ ಮೂರು ಅಭಿಧಮನಿಗಳು ಬಂದು ಸೇರುತ್ತವೆ. ಮುಂಭಾಗದಿಂದ ಎಡ ಮತ್ತು ಬಲ ಉನ್ನತ ಮಹಾಭಿಧಮನಿಗಳು (ಸುಪೀರಿಯರ್ ವೀನ ಕೇವ) ಮತ್ತು ಹಿಂಭಾಗದಿಂದ ಅವನತಮಹಾಭಿಧಮನಿಯೂ (ಇನ್ಫೀರಿಯರ್ ವೀನ ಕೇವ) ಸೇರುತ್ತವೆ. ಎಡ ಹೃತ್ಕರ್ಣಕ್ಕೆ ಪಲ್ಮನರಿ ಅಭಿಧಮನಿ ತೆರೆಯುತ್ತದೆ. ಹೃತ್ಕರ್ಣಗಳೆರಡೂ ಹೃತ್ಕುಕ್ಷಿಗೆ ಆರಿಕ್ಯುಲೊ ವೆಂಟ್ರಿಕ್ಯುಲಾರ್ ರಂಧ್ರದ ಮೂಲಕ ತೆರೆಯುತ್ತವೆ. ಈ ರಂಧ್ರವನ್ನು ಪಟಲಗಳಂತೆ ಇರುವ ಎರಡು ಆರಿಕ್ಯುಲೋ ವೆಂಟ್ರಿಕ್ಯುಲಾರ್ ಕವಾಟಗಳು ಮುಚ್ಚುತ್ತವೆ. ಕವಾಟದ ಮಡಿಕೆಗಳು ತಂತುಸ್ತಂಭಗಳ ಕಾರ್ಡೆ ಟೆಂಡಿನೆ ಎಂದು ಹೆಸರು. ಹೃತ್ಕುಕ್ಷಿಯ ಬುಡದ ಬಲಭಾಗದಿಂದ ಟ್ರಂಕಸ್ ಆರ್ಟೀರಿಯೋಸಸ್ ಎಂಬ ಅಪಧಮನಿ ಹೊರಡುತ್ತದೆ. ಟ್ರಂಕಸ್ ಬುಡಭಾಗವನ್ನು ಕೋನಸ್ ಆರ್ಟೀರಿಯೋಸಸ್ ಅಥವಾ ಪೈಲ್ಯಾಂಜಿಯಂ ಎಂದೂ ತುದಿ ಭಾಗವನ್ನು ಬಲ್ಬಸ್ ಅಥವಾ ಸೈನಾಂಜಿಯಂ ಭಾಗವೆಂದೂ ಕರೆಯಲಾಗುತ್ತದೆ. ಕೋನಸ್ ಹೃತ್ಕುಕ್ಷಿಯನ್ನು ಸೇರುವ ಸ್ಥಳದಲ್ಲಿ ಮೂರು ಅರ್ಧಚಂದ್ರಾಕಾರದ ಕವಾಟಗಳಿವೆ. ಕೋನಸ್ ಮತ್ತು ಬಲ್ಬಸ್ ಭಾಗಗಳ ನಡುವೆಯೂ ನಾಲ್ಕು ಕವಾಟಗಳಿವೆ. ಕೋನಸ್‌ನಲ್ಲಿ ಉದ್ದವಾದ, ಸುರುಳಿ ಸುತ್ತಿದ ಹಾಗೂ ಓರೆಯಾದ ಕವಾಟ ಉಂಟು. ಈ ಕವಾಟ ಕೋನಸನ್ನು ಅಸಮರ್ಪಕವಾದ ಎರಡು ಭಾಗಗಳನ್ನಾಗಿ ವಿಭಾಗಿಸುತ್ತದೆ. ಬಲಭಾಗಕ್ಕೆ ಕೇವಮ್ ಆಯೋರ್ಟಿಕಂ ಎಂದೂ ಎಡಭಾಗಕ್ಕೆ ಕೇವಮ್ ಪಲ್ಮೊಕ್ಯುಟೇನಿಯಂ ಎಂದೂ ಹೆಸರು. ಟ್ರಂಕಸ್ ಆರ್ಟೀರಿಯೋಸಸ್ ಎರಡು ಕವಲಾಗುತ್ತದೆ. ಪ್ರತಿಯೊಂದು ಕವಲೂ ಮತ್ತೆ ಮೂರು ಕವಲುಗಳಾಗಿ ಒಡೆಯುತ್ತದೆ. ಇವೇ ಕರೋಟಿಡ್, ಸಿಸ್ಟಮಿಕ್ ಮತ್ತು ಪಲ್ಮೊಕುಟೇನಿಯಸ್ ಅಪಧಮನಿಗಳು.

ನೋಟ

ಕಪ್ಪೆ 
ಕಪ್ಪೆಯ ತಲೆಯ ಹತ್ತಿರದ ನೋಟ, ಕಣ್ಣು, ಹೊಳ್ಳೆಗಳು, ಬಾಯಿ ಮತ್ತು ಟಿಂಪಾನಮ್ ತೋರುತ್ತದೆ

ಕಪ್ಪೆಯ ಕಣ್ಣುಗಳ ತಲೆಯ ಮೇಲೆ ಎರಡೂ ಕಡೆ ಅರ್ಧ ಗೋಲದ ಆಕೃತಿಯಲ್ಲಿ ಹೊರ ಚಾಚಿಕೊಂಡಿರುತ್ತವೆ. ಎರಡೂ ಕಣ್ಣುಗಳೂ ಒಟ್ಟು 100° ಕ್ಷೇತ್ರದ ಒಂದೇ ದೃಶ್ಯವನ್ನು ಅಥವಾ ಇಗ್ಗಣ್ಣಿನ ನೋಟ (ಬೈನಾಕುಲರ್ ವಿಶನ್) ಕೊಡುತ್ತವೆ ಮತ್ತು ಒಟ್ಟಾರೆ ದೃಷ್ಯದ ಕ್ಷೇತ್ರ ಬಹುತೇಕ 360°. ನೀರಿನಲ್ಲಿ ಕಪ್ಪೆ ಮುಳುಗಿದಾಗ ಹೊರಕಾಣುವ ಭಾಗಗಳು ಇವು ಮಾತ್ರ. ಪ್ರತೀ ಕಣ್ಣಿಗೂ ಮುಚ್ಚಿಕೊಳ್ಳ ಬಹುದಾದ ಕೆಳ ಮತ್ತು ಮೇಲ್‌ ರೆಪ್ಪೆಗಳು ಇರುತ್ತವೆ. ಇದಲ್ಲದೆ ನಿಕ್ಟಿಟೇಟಿಂಗ್ ಪದರ ಎಂದು ಕರೆಯಲಾದ ಇನ್ನೊಂದು ಪಾರದರ್ಶಕ ಅಥವಾ ಅರೆಪಾರದರ್ಶಕ ರೆಪ್ಪೆಯಿರುತ್ತದೆ ಮತ್ತು ಇದು ನೀರಿನಲ್ಲಿರುವಾಗ ವಿಶೇಷವಾಗಿ ಈಜುವಾಗ ಕಣ್ಣುಗಳಿಗೆ ರಕ್ಷಣೆ ಕೊಡುತ್ತದೆ.

ಕಪ್ಪೆಗಳು ದೂರದ ವಸ್ತುಗಳನ್ನು ಹತ್ತಿರದ ವಸ್ತುಗಳಿಗಿಂತ ಚೆನ್ನಾಗಿ ನೋಡಬಲ್ಲವು. ವಟಗುಟ್ಟುವ ಕಪ್ಪೆ ಹತ್ತಿರ ವಸ್ತುಗಳು ಬಂದರೆ ಅಥವಾ ನೆರಳು ಹತ್ತಿರ ಬಂದರೂ ಸುಮ್ಮನಾಗುತ್ತವೆ ಆದರೆ ವಸ್ತು ಹೆಚ್ಚು ಹತ್ತಿರವಾದರೆ ಸರಿಯಾಗಿ ನೋಡಲಾರವು. ಕಪ್ಪೆ ತನ್ನ ನಾಲಗೆಯನ್ನು ಚಾಚಿದಾಗ ಅದು ಸರಿಯಾಗ ನೋಡಲಾರದ ಚಲಿಸುವ ವಸ್ತುವಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಅದು ನಾಲಗೆ ಚಾಚಿದಾಗ ಕಣ್ಣು ಮುಚ್ಚಿಕೊಳ್ಳುತ್ತದೆ.

ಕೇಳುವಿಕೆ ಮತ್ತು ವಟಗುಟ್ಟುವಿಕೆ

ಕಪ್ಪೆಗಳು ಗಾಳಿಯಲ್ಲಿಯೂ ಮತ್ತು ನೀರಿನೊಳಗೆಯೂ ಕೇಳಬಲ್ಲವು. ಕಪ್ಪೆಗಳಿಗೆ ಹೊರಗಿವಿಗಳು ಇರುವುದಿಲ್ಲ. ಕಿವಿಪೊರೆ (ಟಿಂಪಾನಮ್ ಪೊರೆ) ಹೊರಕಾಣುತ್ತದೆ. ಕೆಲವು ಪ್ರಭೇದಗಳಲ್ಲಿ ಇದರ ಮೇಲೆ ಚರ್ಮವಿರುತ್ತದೆ. ಇದು ಸಾಮಾನ್ಯವಾಗಿ ಚಕ್ರಾಕಾರದಲ್ಲಿ ಕಣ್ಣಿನ ಹಿಂದೆ ಕಾಣಬರುತ್ತದೆ. ಟಿಂಪಾನಮ್‌ನ ಗಾತ್ರವು ಕಪ್ಪೆಗಳ ವಟಗುಟ್ಟುವಿಕೆ (ಲೈಂಗಿಕ ಕರೆ) ಯ ದೂರ, ಆವರ್ತನ ಮತ್ತು ಅಲೆಯುದ್ದದ ಮೇಲೆಯೂ ಆಧಾರ ಪಟ್ಟಿರುತ್ತದೆ. ಗೂಳಿಕಪ್ಪೆಯಂತಹ ಕೆಲವು ಪ್ರಭೇದಗಳಲ್ಲಿ ಇದು ಗಂಡು ಹೆಣ್ಣಿನ ನಡುವೆ ವ್ಯತ್ಯಾಸವೂ ಸಹ. ಈ ಕಪ್ಪೆಯಲ್ಲಿ ಗಂಡಿನ ಟಿಂಪಾನಮ್‌ಗಳು ಕಣ್ಣಿಗಿಂತ ದೊಡ್ಡವಿದ್ದರೆ ಹೆಣ್ಣಿನಲ್ಲಿ ಇವೆರಡೂ ಬಹುತೇಕ ಒಂದೇ ಗಾತ್ರವಿರುತ್ತವೆ. ಸದ್ದು ಟಿಂಪಾನಮ್ ಪದರ ಕಂಪಿಸುವಂತೆ ಮಾಡಿ ಸದ್ದು ಮಧ್ಯ ಮತ್ತು ಒಳಕಿವಿಗೆ ರವಾನೆಯಾಗುತ್ತದೆ. ಸದ್ದಿಗೆ ಕಪ್ಪೆಯು ಬೆದರ ಬಹುದು ಆದರೆ ಅದು ಸದ್ದಿನ ಆಕಾರವನ್ನು ಕಣ್ಣಿನಿಂದ ನೋಡಿದ ನಂತರವೇ ಕ್ರಿಯೆಗೆ ಇಳಿಯುತ್ತದೆ.

ಕಪ್ಪೆ 
ಗಂಡು ಡೆಂಡ್ರೊಫ್ಸೋಪಸ್ ಮೈಕ್ರೊಸೆಫೆಲಸ್ ಕರೆ ದನಿ ಮಾಡುತ್ತಿರುವಾಗ ಉಬ್ಬಿದ ಶಬ್ಧದ ಚೀಲ

ಕಪ್ಪೆಯ ವಟಗುಟ್ಟುವಿಕೆಯ ಕರೆ ಆ ಪ್ರಭೇದಗಳಿಗೆ ವಿಶೇಷ. ಕಪ್ಪೆ ಈ ಸದ್ದನ್ನು ಗಾಳಿಯನ್ನು ಗಂಟಲಗೂಡಿನ ಮೂಲಕ ಹಾಯಿಸುವ ಮೂಲಕ ಹೊರಡಿಸುತ್ತದೆ. ಬಹಳಷ್ಟು ಕರೆಗಳು ಒಂದು ಅಥವಾ ಹೆಚ್ಚು ಶಬ್ಧದ ಚೀಲಗಳಿಂದ, ಗಂಟಲಿನ ಕೆಳಗಿನ ಪದರಗಳಿಂದ, ಬಾಯಿಯ ಮೂಲೆಗಳಿಂದ ಹೆಚ್ಚಾಗುತ್ತವೆ. ಈ ಕ್ರಿಯೆಯಲ್ಲಿ ಹೀಗೆ ಕರೆಯನ್ನು ಹೆಚ್ಚಾಗಿಸುವ ಅಂಗಗಳು ಉಬ್ಬಿಕೊಳ್ಳುತ್ತವೆ. ಕೆಲವು ಕಪ್ಪೆಗಳ ವಟಗುಟ್ಟುವಿಕೆಯ ಕರೆಯು ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ ಒಂದು ಮೈಲು ದೂರದವರೆಗೂ ಅದನ್ನು ಕೇಳಬಹುದು. ಉತ್ತರ ಅಮೆರಿಕದ ಬೆಟ್ಟಗಳಲ್ಲಿನ ಹಳ್ಳಗಳಲ್ಲಿ ಬದುಕುವ ಕರಾವಳಿಯ ಬಾಲದ ಕಪ್ಪೆಗಳಲ್ಲಿ (ಆಸ್ಕಫಸ್ ಟ್ರುಯಿ) ವಟಗುಟ್ಟುವಿಕೆ ಕರೆಗಳು ಇಲ್ಲ.

ಗಂಡು ಕಪ್ಪೆಯ ಕರೆಯ ಪ್ರಮುಖ ಉದ್ಧೇಶ ಸಂಗಾತಿಯನ್ನು ಆಹ್ವಾನಿಸುವುದು. ಈ ಕರೆಗಳು ಒಂದೇ ಗಂಡಿನದಾಗ ಬಹುದು ಅಥವಾ ಸಂತಾನೋತ್ಪತ್ತಿಯ ಸ್ಥಳದಲ್ಲಿ ಸೇರಿದ ಹಲವು ಗಂಡುಗಳ ವಟಗುಟ್ಟುವಿಕೆಯ ಮೇಳವೇ ಆಗಬಹುದು. ಹೆಣ್ಣು ಕಪ್ಪೆಗಳು ಹೆಚ್ಚಿನ ತೀವ್ರತೆ ಮತ್ತು ಕಡಿಮೆ ಆವರ್ತನದ ಕರೆಗಳ ಗಂಡುಗಳ ಬಗೆಗೆ ಒಲವು ತೋರುತ್ತವೆ. ಇದು ಹೆಚ್ಚು ಶಕ್ತ ಮರಿಗಳನ್ನು ಕೊಡ ಬಲ್ಲ ಶಕ್ತಿಯನ್ನು ತೋರುತ್ತದೆ ಎಂದು ಅವು ಭಾವಿಸುತ್ತವೆ ಎಂಬ ತರ್ಕವನ್ನು ಇದಕ್ಕೆ ಹಚ್ಚಲಾಗಿದೆ. ಭಿನ್ನ ಸದ್ದನ್ನು ಲೈಂಗಿಕ ಸಂಬಂಧದಲ್ಲಿರುವ ಗಂಡು ಅಥವಾ ಗಂಡನ್ನು ಸ್ವೀಕರಿಲಾಗದ ಹೆಣ್ಣು ಕಪ್ಪೆಗಳು ಹೊರಡಿಸುತ್ತವೆ. ಇದು "ಚಿರುಪ್" ಅನುಕರಿಸುವ ದನಿಯಾಗಿದ್ದು, ದೇಹದ ಕಂಪನದ ಜೊತೆಗೆ ಬರುತ್ತದೆ. ಈ ಎಲ್ಲಾ ಕರೆಗಳ ಸಮಯದಲ್ಲಿಯೂ ಕಪ್ಪೆಯ ಬಾಯಿ ತೆರೆಯುವುದಿಲ್ಲ. ಅಪಾಯದಲ್ಲಿರುವಾಗಿನ ಕರೆಯು ಉತ್ಪನ್ನ ಮಾಡುವಾಗ ಕಪ್ಪೆ ಬಾಯಿ ತೆರೆದು ಸದ್ದು ಹೊರಡಿಸುತ್ತದೆ ಮತ್ತು ಇದು ಹೆಚ್ಚಿನ ಸ್ಥಾಯಿಯದಾಗಿರುತ್ತದೆ. ಇದನ್ನು ತನ್ನನ್ನು ಹಿಡಿದ ಪರಭಕ್ಷಕದ ಗಮನ ಬೇರೆಡೆ ಸೆಳೆಯುವ ಅಥವಾ ಗೊಂದಲಕ್ಕೆ ಬೀಳಿಸುವ ಮೂಲಕ ತನ್ನನ್ನು ತೊರೆಯುವಂತೆ ಮಾಡಲು ಹೀಗೆ ಮಾಡುತ್ತದೆ.

ಜಡತ್ವ

ತೀರ ತೀವ್ರ ಪರಿಸ್ಥಿತಿಗಳಲ್ಲಿ ಕಪ್ಪೆಗಳು ಜಡತ್ವದ (ಟಾರ್ಪರ್) ಸ್ಥಿತಿಯನ್ನು ತಲುಪಿ ಹಲವು ತಿಂಗಳುಗಳು ಚಟುವಟಿಕೆ ರಹಿತವಾಗಿರುತ್ತವೆ. ಚಳಿ ಪ್ರದೇಶಗಳಲ್ಲಿ ಹಲವು ಕಪ್ಪೆಗಳು ಚಳಿಗಾಲದಲ್ಲಿ ಚಳಿನಿದ್ದೆ (ಹೈಬರ್ನೇಶನ್)ಗೆ ಹೋಗುತ್ತವೆ. ಭೂಮಿಯ ಮೇಲೆ ಜೀವಿಸುವ ಅಮೆರಿಕ ನೆಲಗಪ್ಪೆಯಂತಹವು (ಬಫೊ ಅಮೆರಿಕಾನಸ್) ಅಡಗಲು ನೆಲೆವನ್ನು ಅಗೆದು ಅಲ್ಲಿ ಚಟುವಟಿಕೆ ರಹಿತವಾಗಿರುತ್ತವೆ. ಹೀಗೆ ಅಗೆಯಲು ಕಡಿಮೆ ಶಕ್ತಿ ಇರುವವು ಸಂದುಗಳಲ್ಲಿ ಅಥವಾ ಒಣ ಎಲೆಯಲ್ಲಿ ಅಡಗಿಕೊಳ್ಳುತ್ತವೆ. ಕೆಲವು ಜಲವಾಸಿ ಕಪ್ಪೆಗಳು ಸಾಮಾನ್ಯವಾಗಿ ಸರೋವರದ ತಳ ಸೇರಿ, ಕೆಲವೊಮ್ಮೆ ಮಣ್ಣಿನಲ್ಲಿ ಅರೆಹೂತು ಹೋಗಿರುತ್ತವೆ ಆದಾಗ್ಯೂ ಉಸಿರಾಡ ಬಲ್ಲವು. ಕೆಲವು ಕಪ್ಪೆಗಳು ಹಿಮಗಡ್ಡೆಯಾಗುವಿಕೆಯನ್ನೂ ತಾಳಿಕೊಳ್ಳ ಬಲ್ಲವು. ಹಿಮ ಹರಳುಗಳು ಚರ್ಮದ ಕೆಳಗೆ ಮತ್ತು ದೇಹದ ಒಳಗೆ ರೂಪಗೊಳ್ಳುತ್ತವೆ ಆದರೆ ಅಂಗಗಳು ಹೆಚ್ಚಿನ ಗ್ಲುಕೋಸ್ ಇರುವಿಕೆಯಿಂದ ರಕ್ಷಿಸಲ್ಪಡುತ್ತವೆ. ವಾಸ್ತವದಲ್ಲಿ ಜೀವರಹಿತ ಹಿಮಗಡ್ಡೆಯಾದ ಕಪ್ಪೆಗಳಲ್ಲಿ ವಾತಾವರಣ ಬಿಸಿಯೇರಿದ ಮೇಲೆ ಉಸಿರಾಟ ಮತ್ತು ಹೃದಯ ಬಡಿತ ಆರಂಭವಾಗುತ್ತದೆ.

ಸಂತಾನೋತ್ಪತ್ತಿ ಮತ್ತು ಜೀವನ ಚಕ್ರ

ಇತರ ಉಭಯವಾಸಿಗಳಂತೆಯೇ ಕಪ್ಪೆಯ ಜೀವನ ಚಕ್ರ ಮೊಟ್ಟೆಯೊಂದಿಗೆ ಆರಂಭವಾಗುತ್ತದೆ. ಈ ಮೊಟ್ಟೆಗಳು ಒಡೆದು ಯಾವುದೇ ಕೈಕಾಲುಗಳಿಲ್ಲದ, ಗಿಲ್‌ಗಳು ಇರುವ ಗೊದಮೊಟ್ಟೆ ಮರಿಯಾಗುತ್ತದೆ (ಟಾಡ್‌ಪೋಲ್). ನಂತರದಲ್ಲಿ ಅದು ಕಾಲುಗಳನ್ನು, ಶ್ವಾಶಕೋಶವನ್ನು ಬೆಳಿಸಿಕೊಂಡು, ರೂಪದಲ್ಲಿ ಬದಲಾವಣೆಗೊಂಡು, ಅಂಗಾಗಳು ಮರು ಸಂಘಟಿತಗೊಂಡು ಸಣ್ಣ ಕಪ್ಪೆಯಾಗುತ್ತದೆ.

ಸಂತಾನೋತ್ಪತ್ತಿ

ಕಪ್ಪೆ 
ಸಾಮಾನ್ಯ ನೆಲಗಪ್ಪೆಯ (ಬಫೊ ಬಫೊ) ಗಂಡು ಮತ್ತು ಹೆಣ್ಣು ಆಂಪ್ಲೆಕ್ಸಸ್ ಸ್ಥಿತಿಯಲ್ಲಿ

ಕಪ್ಪೆಗಳಲ್ಲಿ ಎರಡು ರೀತಿಯ ಸಂತಾನೋತ್ಪತ್ತಿ ಇದೆ, ಅವುಗಳನ್ನು ನಿಧಾನ ಮತ್ತು ಸ್ಫೋಟಕ ಸಂತಾನೋತ್ಪತ್ತಿ ಎಂದು ಕರೆಯಲಾಗಿದೆ. ಬಹುಸಂಖ್ಯಾತ ಪ್ರಭೇದಳಿಗೆ ಅನ್ವಯವಾಗುವ ನಿಧಾನ ಸಂತಾನೋತ್ಪತ್ತಿಯಲ್ಲಿ ವಯಸ್ಕ ಕಪ್ಪೆಗಳು ವರುಷದ ಒಂದು ನಿರ್ದಿಷ್ಟ ಕಾಲದಲ್ಲಿ ಸರೋವರ ಅಥವಾ ಹಳ್ಳದ ಸುತ್ತ ಸೇರುತ್ತವೆ. ಹಲವು ಕಪ್ಪೆಗಳು ತಾವು ಗೊದಮೊಟ್ಟೆ ಮರಿಯಾಗಿ ಬೆಳೆದ ನೀರಿನ ತಾಣಕ್ಕೆ ಹಿಂತಿರುಗುತ್ತವೆ. ಇದು ಕೆಲವೊಮ್ಮೆ ಸಾವಿರಾರು ಕಪ್ಪೆಗಳ ವಾರ್ಷಿಕ ವಲಸೆಯಾಗಿ ಮಾರ್ಪಡುತ್ತದೆ. ಇಲ್ಲಿ ಸಾಮಾನ್ಯವಾಗಿ ಗಂಡುಗಳು ಸಂತಾನೋತ್ಪತ್ತಿ ಜಾಗಕ್ಕೆ ಮೊದಲು ಬರುತ್ತವೆ. ನಂತರ ಹೆಣ್ಣುಗಳು ಬರುತ್ತವೆ ಮತ್ತು ಮೊಟ್ಟೆ ಬಿಟ್ಟ ನಂತರ ಹಿಂತಿರುಗುತ್ತವೆ. ಇದರ ಅರ್ಥವೆಂದರೆ ಗಂಡುಗಳ ಸಂಖ್ಯೆ ಹೆಣ್ಣುಗಳಿಗಿಂತ ಹೆಚ್ಚು ಇರುತ್ತದೆ. ಗಂಡುಗಳು ತಮ್ಮ ವಟಗುಟ್ಟವಿಕೆ ಕರೆಯ ಮೂಲಕ ಹೆಣ್ಣನ್ನು ಆಕರ್ಷಿಸುತ್ತವೆ ಮತ್ತು ತಮ್ಮ ಗಡಿಯನ್ನು ಇತರ ಗಂಡುಗಳಿಗೆ ಅತಿಕ್ರಮಿಸ ಬಿಡುವುದಿಲ್ಲ. ಕೆಲವು ಪ್ರಭೇದಗಳಲ್ಲಿ ಗಡಿಯನ್ನು ಗುರುತಿಸಿಕೊಳ್ಳದ ಬಿಡಿ ಗಂಡುಗಳು ಇರುತ್ತವೆ. ಇವು ಗಂಡಿನ ಕರೆಗೆ ಓಗೊಟ್ಟ ಸಾಗುತ್ತಿರುವ ಹೆಣ್ಣುಗಳೆಡೆಗೆ ಸಾಗಬಹುದು ಅಥವಾ ಯಾವುದೇ ಬೇರೆ ಗಂಡು ಇಲ್ಲದ ಪ್ರದೇಶಗಳನ್ನು ಆಕ್ರಮಿಸ ಬಹುದು. ಕೆಲವೊಮ್ಮೆ ಈ ಸ್ಥಿತಿ ಹಿಮ್ಮೊಗವಾಗ ಬಹುದು, ವಟಗುಟ್ಟಿವಿಕೆಯ ಮೂಲಕ ಕರೆಯುವ ಕಪ್ಪೆ ಬಿಡಿ ಕಪ್ಪೆಯಾಗ ಬಹುದು.

ಸ್ಫೋಟಕ ಸಂತಾನೋತ್ಪತ್ತಿಯಲ್ಲಿ ವಯಸ್ಕ ಕಪ್ಪೆಗಳು ಸಂತಾನೋತ್ಪತ್ತಿ ಪ್ರದೇಶಕ್ಕೆ ಯಾವುದಾದರೂ, ಒಣ ಪ್ರದೇಶದಲ್ಲಿ ಮಳೆಯಂತಹ, ಪ್ರಚೋದನಾ ಅಂಶದ ಆಧಾರದ ಮೇಲೆ ಬರುತ್ತವೆ. ಈ ಕಪ್ಪೆಗಳಲ್ಲಿ ಲೈಂಗಿಕ ಮಿಲನ, ಮೊಟ್ಟೆ ಇಡುವಿಕೆ ಬೇಗ ಆಗುತ್ತದೆ ಮತ್ತು ಗೊದಮೊಟ್ಟೆ ಮರಿಯ ಬೆಳವಣಿಗೆ ಹೊಂಡ ಹಿಂಗಿಹೋಗುವ ಮುಂಚೆ ಆಗುವಂತೆ ವೇಗವಾಗಿರುತ್ತದೆ. ಗಂಡುಗಳು ಮೊದಲು ಸಂತಾನೋತ್ಪತ್ತಿ ಸ್ಥಳವನ್ನು ಸಾಮಾನ್ಯವಾಗಿ, ತಾತ್ಕಾಲಿಕ ಹೊಂಡಗಳನ್ನು, ಗುರುತಿಸುತ್ತವೆ. ಇವುಗಳ ವಟಗುಟ್ಟವಿಕೆ ಕರೆ ಸಾಮಾನ್ಯವಾಗಿ ಸಾಮೂಹಿಕವಾಗಿದ್ದು ದೂರದ ವರೆಗೂ ಕೇಳುತ್ತದೆ. ಕೆಲವೊಮ್ಮೆ ಸರಿಯಾದ ಪರಿಸ್ಥಿತಿ ಇರದಿದ್ದಲ್ಲಿ ಕಪ್ಪೆಗಳು ಎರಡು ಅಥವಾ ಹೆಚ್ಚು ವರುಷಗಳು ಸಂತಾನೋತ್ಪತ್ತಿ ಮಾಡುವುದಿಲ್ಲ.

ಸಂತಾನೋತ್ಪತ್ತಿ ಸ್ಥಳದಲ್ಲಿ ಆಂಪ್ಲೆಕ್ಸಸ್ ಎಂದು ಕರೆಯಲಾದ ಲೈಂಗಿಕ ಮಿಲನದಲ್ಲಿ ಗಂಡು ಹೆಣ್ಣಿನ ಮೇಲೆ ಕುಳಿತುಕೊಳ್ಳುತ್ತದೆ. ಸಾಮಾನ್ಯವಾಗಿ ಇದು ನೀರಿನಲ್ಲಿ ಮತ್ತು ಹೆಣ್ಣು ಮೊಟ್ಟೆಗಳ ದ್ರವವನ್ನು ಸುರಿಸಿದಾಗ ಗಂಡು ರೇತಸನ್ನು ಅದರ ಮೇಲೆ ಬಿಡುತ್ತದೆ. ಇಲ್ಲಿಯ ಪಲವತ್ತಾಗುವಿಕೆ ಜೀವಿಯ ಹೊರಗೆ ಜರುಗುತ್ತದೆ.

ಜೀವನ ಚಕ್ರ

ಕಪ್ಪೆ 
ಕಪ್ಪೆತತ್ತಿ

ಕಪ್ಪೆ ಭ್ರೂಣಗಳು ಹಲವು ಪದರಗಳ ಅಂಟಾದ ಪದಾರ್ಥಗಳನ್ನು ಹೊಂದಿದ್ದು ಅದನ್ನು ಕಪ್ಪೆತತ್ತಿ (ಫ್ರಾಗ್‌ಸ್ಪಾನ್) ಎಂದು ಕರೆಯಲಾಗುತ್ತದೆ. ಈ ಜೆಲ್ಲಿ ರೀತಿಯ ಪದಾರ್ಥವು ಮೊಟ್ಟೆಗೆ ರಕ್ಷಣೆಯನ್ನೂ ಆಮ್ಲಜನಕ, ಇಂಗಾಲ ಡೈಆಕ್ಸೈಡ್ ಮತ್ತು ಅಮೋನಿಯಗಳಿಗೆ ದಾರಿಮಾಡಿಕೊಡುವ ಕೆಲಸ ಮಾಡುತ್ತದೆ. ನೀರಿನಲ್ಲಿ ಇದು ತೇವಾಂಶ ಹಿಂಗಿಕೊಂಡು ಉಬ್ಬುತ್ತದೆ. ಬಹಳಷ್ಟು ಮೊಟ್ಟೆಗಳು ಕಪ್ಪು ಅಥವಾ ಕಂದು ಬಣ್ಣದವಾಗಿದ್ದು ಸೂರ್ಯನ ಬಿಸುಪನ್ನು ಹಿಂಗಿಕೊಳ್ಳ ಬಲ್ಲವು ಮತ್ತು ಸುತ್ತಲಿನ ಕ್ಯಾಪ್ಯೂಲ್‌ ಈ ಬಿಸುಪನ್ನು ಉಳಿಯುವಂತೆ ಮಾಡುತ್ತದೆ. ಕಟ್ಟಿಗೆ ಕಪ್ಪೆಯ (ವುಡ್ ಫ್ರಾಗ್- ರಾನ ಸಿಲ್ವಾಟಿಕ) ಮೊಟ್ಟೆಗಳ ಗುಂಪಿನ ಗೊಂಚಲಿನ ಒಳಭಾಗವು ಸುತ್ತಮುತ್ತಲಿನ ನೀರಿನ ತಾಪಮಾನಕ್ಕಿಂತ 6 °ಸೆ (11 °ಎಫ್) ಹೆಚ್ಚು ಇದ್ದದು ಪತ್ತೆಯಾಗಿದೆ ಮತ್ತು ಇದು ಮರಿಯು ವೇಗವಾಗಿ ಬೆಳಯಲು ಸಹಾಯಕ. ಕೆಂಪು ಕಣ್ಣಿನ ಮರಗಪ್ಪೆಯು (ಅಗ್ಲಿಕ್ನಿಸ್ ಕಾಲ್ಲಿಡ್ರಯಾಸ್) ಕೊಳದ ಮೇಲಿನ ಎಲೆಯ ಮೇಲೆ ಮೊಟ್ಟೆಯಿಡುತ್ತದೆ ಮತ್ತು ಮೊಟ್ಟೆ ಮರಿಯಾದಾಗ ಕೆಳಗಿನ ನೀರಿಗೆ ಬೀಳುತ್ತದೆ. ಮೊಟ್ಟೆಯೊಳಗಿನ ಮರಿ ಕಣಜ ಅಥವಾ ಹಾವಿನಂತಹ ಪರಭಕ್ಷಗಳಿಂದಾಗುವ ಕಂಪನವನ್ನು ಗುರುತಿಸ ಬಲ್ಲವು ಮತ್ತು ತಿನ್ನುವುದನ್ನು ತಪ್ಪಿಸಿಕೊಳ್ಳಲು ಬೇಗ ಹೊರಬರುತ್ತವೆ.

ಕಪ್ಪೆ 
ಸಾಮಾನ್ಯ ಕಪ್ಪೆ ರಾನ ಟೆಂಪರೊರಿಯದ ಗೊದಮೊಟ್ಟೆ ಮರಿ ರೂಪಾಂತರದ ಒಂದು ದಿನ ಮುಂಚೆ

ಮೊಟ್ಟೆಯಿಂದ ಹೊರಬರುವ ಮರಿಯನ್ನು ಗೊದಮೊಟ್ಟೆ ಮರಿ ಎಂದು ಕರೆಯಲಾಗುತ್ತದೆ. ಇವುಗಳು ಅಂಡಾಕಾರದಲ್ಲಿದ್ದು, ಇವುಗಳಿಗೆ ಉದ್ದನೆಯ ಮತ್ತು ಲಂಬವಾಗಿ ಚಪ್ಪಟೆಯಾದ ಬಾಲವಿರುತ್ತದೆ. ಈ ಮರಿ ಸಾಮಾನ್ಯವಾಗಿ ಪೂರ್ಣವಾಗಿ ಜಲವಾಸಿ. ಇವುಗಳಿಗೆ ಉಸಿರಾಡಲು ಗಿಲ್‌ಗಳು ಇರುತ್ತವೆ ಮತ್ತು ಬಾಲದಿಂದ ಇವು ಈಜುತ್ತವೆ. ಗೊದಮೊಟ್ಟೆ ಮರಿಗಳು ಪೂರ್ಣವಾಗಿ ಸಸ್ಯಾಹಾರಿಗಳು ಮತ್ತು ಇವುಗಳಿಗೆ ಗಿಲ್ ಮೂಲಕ ಶೋಧಿಸಿದ ಪಾಚಿ ಅಥವಾ ಶೈವಲ ಆಹಾರ. ಕೆಲವು ಪ್ರಭೇದಗಳ ಮರಿಗಳು ಮಾಂಸಾಹಾರಿಗಳು ಮತ್ತು ಕೀಟಗಳು, ಸಣ್ಣ ಗೊದಮೊಟ್ಟೆ ಮರಿ ಮತ್ತು ಮೀನುಗಳು ಇವುಗಳ ಆಹಾರ. ಮೀನು, ಬೇಟೆಯಾಡುವ ದುಂಬಿಗಳು, ಮಿಂಚುಳ್ಳಿಗಳಿಗೆ ಇವು ಆಹಾರವಾಗುತ್ತವೆ. ಗೊದಮೊಟ್ಟೆ ಮರಿಯ ಸ್ಥಿತಿಯು ಸ್ಫೋಟಕ ಸಂತಾನೋತ್ಪತ್ತಿಗಳಲ್ಲಿ ಒಂದು ವಾರದಷ್ಟು ಕಡಿಮೆ ಇರಬಹುದು ಅಥವಾ ಒಂದು ಅಥವಾ ಹೆಚ್ಚು ಚಳಿಗಾಲಗಳನ್ನು ಕಳೆದು ವಸಂತದಲ್ಲಿ ರೂಪಾಂತರ ವಾಗಬಹುದು.

ರೂಪಾಂತರ

ಇದು ಗೊದಮೊಟ್ಟೆ ಮರಿಯ ಹಂತದ ಕೊನೆ ಮತ್ತು ಈ ಹಂತದಲ್ಲಿ ಮರಿಯು ವೇಗವಾದ ಬದಲಾವಣೆಗಳನ್ನು ಕಾಣುತ್ತದೆ. ಸಾಮಾನ್ಯವಾಗಿ ರೂಪಾಂತರ 24 ಗಂಟೆಗಳಲ್ಲಿ ಆಗುತ್ತದೆ ಮತ್ತು ಇದರ ಆರಂಭ ಥೈರೋಕ್ಸಿನ್ ಹಾರ್ಮೋನ್ ಉತ್ಪಾದನೆಯೊಂದಿಗೆ ಆರಂಭವಾಗುತ್ತದೆ. ಇದು ಬೇರೆ ಬೇರೆ ಅಂಗಾಶಗಳು ಬೇರೆ ಬೇರೆ ರೀತಿಯಲ್ಲಿ ಬೆಳೆಯಲು ಕಾರಣವಾಗುತ್ತದೆ. ಕೆಳಗಿನ ದವಡೆಯು ಮಾಂಸಾಹಾರಿಯ ದೊಡ್ಡ ದವಡೆಯ ಮೂಳೆಯಾಗಿಯೂ, ಸುರುಳಿಯ ಸಸ್ಯಹಾರಿ ಕರುಳು ಮಾಂಸಾಹಾರಿಯ ಸಣ್ಣ ಕರುಳಾಗಿ ಪರಿವರ್ತನೆಯಾಗುತ್ತವೆ. ನರಮಂಡಲವು ಕೇಳುವಿಕೆ, ಮೂರು ಆಯಾಮಗಳ ನೋಟ, ಹೊಸ ಚಲನೆ ಮತ್ತು ಆಹಾರ ಪದ್ಧತಿಗೆ ಹೊಂದಿಕೊಳ್ಳುತ್ತದೆ. ಕಣ್ಣುಗಳ ಸ್ಥಾನ ಬದಲಾಗುತ್ತದೆ, ಟಿಂಪಾನಮ್, ನಡುಗಿವಿ, ಒಳಗಿವಿ ರೂಪಗೊಳ್ಳುತ್ತವೆ. ಚರ್ಮ ದಪ್ಪವಾಗುತ್ತದೆ, ಅದರ ಗ್ರಂಥಿಗಳು ರೂಪಗೊಳ್ಳುತ್ತವೆ. ಕೊನೆಯ ಹಂತದಲ್ಲಿ ಬಾಲ ಕಾಣೆಯಾಗುತ್ತದೆ. ಕಪ್ಪೆಗಳು ರೂಪಾಂತರದ ಸಮಯದಲ್ಲಿ ಪರಭಕ್ಷಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಬಾಲ ಕಾಣೆಯಾಗುವ ಈ ಹಂತದಲ್ಲಿ ಕಾಲುಗಳಿಂದ ಚಲನೆಯು ಇನ್ನೂ ಆಗತಾನೆ ಸ್ಥಾಪಿತವಾಗಿರತ್ತದೆ.

ವಯಸ್ಕ ಕಪ್ಪೆ

ರೂಪಾಂತರದ ನಂತರ ಸಣ್ಣ ಮರಿಗಳು ಭೂಮಿಗೆ ನೆಲೆಸಲು ಹೋಗ ಬಹುದು ಅಥವಾ ನೀರಿನಲ್ಲಿಯೇ ಉಳಿದುಕೊಳ್ಳ ಬಹುದು. ಬಹುತೇಕ ಎಲ್ಲಾ ಕಪ್ಪೆಗಳೂ ಮಾಂಸಾಹಾರಿಗಳು ಅವು ಅಕಶೇರುಕ ಸಂಧಿಪದಿ, ಹುಳಗಳು, ಬಸವನ ಹುಳು, ಗೊಂಡೆಹುಳಗಳನ್ನು ಬೇಟೆಯಾಡುತ್ತವೆ. ಕೆಲವು ದೊಡ್ಡ ಕಪ್ಪೆಗಳು ಇತರ ಕಪ್ಪೆಗಳನ್ನು ಮತ್ತು ಸಸ್ತನಿ, ಮೀನುಗಳನ್ನೂ ತಿನ್ನಬಲ್ಲವು. ಕೆಲವು ಕಪ್ಪೆಗಳು ಅಂಟಾದ ನಾಲಿಗೆಯಿಂದ ವೇಗವಾಗಿ ಚಲಿಸುವ ಬೇಟೆಗಳನ್ನು ಹಿಡಿಯುತ್ತವೆ ಮತ್ತು ಇನ್ನೂ ಕೆಲವು ತಿನ್ನಲು ಅವುಗಳ ಮುಂಗಾಲಿನಿಂದ ಆಹಾರವನ್ನು ತಿನ್ನುತ್ತವೆ. ಕೆಲವೇ ಕೆಲವು ಸಸ್ಯಹಾರವನ್ನೂ ತಿನ್ನುವ ಕಪ್ಪೆಗಳಿವೆ. ಕ್ಸಿನೊಹೈಲ ಟ್ರಂಕೇಟ ಭಾಗಶಹ ಸಸ್ಯಾಹಾರಿ ಅದರ ಆಹಾರದ ದೊಡ್ಡ ಭಾಗ ಹಣ್ಣುಗಳಾಗಿವೆ. ವಯಸ್ಕ ಕಪ್ಪೆಗಳು ದೊಡ್ಡ ಬೆಂಕಿಮೊಸಳೆ, ಹಾವು, ಸ್ಕಂಕ್ ಹಲ್ಲಿ ಮತ್ತು ಇತರ ಪ್ರಾಣಿಗಳಿಗೆ ಆಹಾರವಾಗ ಬಲ್ಲವು.

ವನ್ಯ ಸ್ಥಿತಿಯಲ್ಲಿ ಕಪ್ಪೆಗಳು ಎಷ್ಟು ಕಾಲ ಬದುಕುತ್ತವೆ ಎಂದು ತಿಳಿದಿಲ್ಲ ಆದರೆ ಅವು ಹಲವು ವರುಷಗಳೇ ಜೀವಿಸ ಬಲ್ಲವು. ಸ್ಕೆಲೆಟೊಕ್ರೊನಾಲಜಿ ಅಥವಾ ಅಸ್ತಿಪಂಜರಕಾಲಗಣನೆಯ ಪದ್ಧತಿಯ ಪ್ರಕಾರ ಬೆಟ್ಟದ ಹಳಿದ ಕಾಲುಗಳ ಕಪ್ಪೆ (ರಾನ ಮ್ಯೂಕೊಸ) ಅದರ ಗೊದಮೊಟ್ಟೆಯ ಮರಿಯ ನಾಲ್ಕು ವರುಷದ ಆಯುಶ್ಯವನ್ನೂ ಗಣನೆಗೆ ತೆಗೆದುಕೊಂಡು 14 ವರುಷ ಎಂದು ಅಂದಾಜಿಸಲಾಗಿದೆ. ಸೆರೆಯ ಸ್ಥಿತಿಯಲ್ಲಿ ಕೆಲವು ಕಪ್ಪೆಗಳು 40 ವರುಷ ಬದುಕಿದ ದಾಖಲೆ ಇದೆ.

ತಂದೆತಾಯಿ ಆರೈಕೆ

ಕಪ್ಪೆ 
ಗಂಡು ಸಾಮಾನ್ಯ ಸೂಲಗಿತ್ತಿ ನೆಲಗಪ್ಪೆ ಮೊಟ್ಟೆಗಳೊಂದಿಗೆ (ಅಲೈಟಸ್ ಒಬ್‌ಸ್ಟೆಟ್ರಿಶಿಯನ್ಸ್)

ಕಪ್ಪೆಯಲ್ಲಿ ಸಂತತಿಯ ಆರೈಕೆಯ ಬಗೆಗೆ ಸರಿಯಾಗಿ ತಿಳಿಯದಿದ್ದಾಗ್ಯೂ ಶೇ 20ರಷ್ಟು ಉಭಯವಾಸಿ ಪ್ರಭೇದಗಳು ಒಂದಲ್ಲ ಒಂದು ರೀತಿಯ ಸಂತತಿಯ ಆರೈಕೆಯಲ್ಲಿ ತೊಡುಗುತ್ತವೆ. ಕಪ್ಪೆಗಳಲ್ಲಿನ ಸಂತತಿಯ ಆರೈಕೆಯ ವಿಕಾಸಕ್ಕೂ ಅವುಗಳು ಸಂತಾನಾಭಿವೃದ್ದಿ ಮಾಡುವ ಜಲರಾಶಿಯ ಗಾತ್ರಕ್ಕೂ ಸಂಬಂಧಿಸಿದೆ. ಕಡಿಮೆ ಜಲರಾಶಿಯಲ್ಲಿ ಸಂತಾನಾಭಿವೃದ್ಧಿ ಮಾಡುತ್ತಿದ್ದಲ್ಲಿ ತಂದೆತಾಯಿ ಆರೈಕೆ ವರ್ತನೆ ಹೆಚ್ಚು ಸಂಕೀರ್ಣವಾಗುತ್ತದೆ. ಪರಭಕ್ಷಗಳ ಹಾವಳಿ ದೊಡ್ಡ ಜಲರಾಶಿಯಲ್ಲಿ ಹೆಚ್ಚು ಇರುವ ಕಾರಣಕ್ಕೆ ಕೆಲವು ಕಪ್ಪೆಗಳು ನೆಲದ ಮೇಲೆ ಮೊಟ್ಟೆ ಇಡಲು ಆರಂಭಿಸಿದವು. ಇದು ಆ ಮೊಟ್ಟೆಗಳು ಬದುಕಲು ತೇವಾಂಶವನ್ನು ತಂದೆ ಅಥವಾ ತಾಯಿ ಅಥವಾ ಎರಡೂ ಒದಗಿಸ ಬೇಕಾದ ಅಗತ್ಯವನ್ನು ಉಂಟುಮಾಡಿತು.{ವಿಕಿ ರೆ139} ಅಲ್ಲದೆ ಇವು ಮರಿಯಾದ ಮೇಲೆ ಅವುಗಳನ್ನು ಜಲರಾಶಿಗೆ ವರ್ಗಾಯಿಸ ಬೇಕಾದ ಹೊಣೆಯೂ ಅವುಗಳದಾಯಿತು.

ಸಣ್ಣ ಜಲರಾಶಿಯಲ್ಲಿ ಪರಭಕ್ಷಗಳ ಸಮಸ್ಯೆ ಇಲ್ಲದಿದ್ದಾಗ್ಯೂ ಗೊದಮೊಟ್ಟೆ ಮರಿಗಳ ನಡುವೆ ಸ್ಪರ್ಧೆಯ ಮೇಲೆ ಅವುಗಳ ಬದುಕುವಿಕೆ ನಿಂತಿರುತ್ತದೆ. ಕೆಲವು ಕಪ್ಪೆಗಳ ಪ್ರಭೇದಗಳು ಇದಕ್ಕೆ ಪರಿಹಾರವಾಗಿ ಫೈಟೊಟೆಲಮೆಟ (ಭೂಸಸ್ಯಗಳ ಮೇಲಿರುವ ನೀರು) ಗಳಲ್ಲಿ ಕೆಲವು ಗೊದಮೊಟ್ಟೆ ಮರಿಗಳನ್ನು ಇಡತೊಡಗಿದವು. ಆದರೆ ಇಂತಹ ಸ್ಥಳಗಳಲ್ಲಿ ಸಾಕಷ್ಟು ಪೋಷಕಾಂಶಗಳು ತಂದೆತಾಯಿಗಳ ಸಹಾಯವಿಲ್ಲದೆ ಲಭ್ಯವಾಗುವುದಿಲ್ಲ. ಇದಕ್ಕೆ ಉತ್ತರವಾಗಿ ಕಪ್ಪೆಗಳು ಸಂತತಿಗೆ ಪೋಷಕಾಂಶಗಳಾಗಿ ಪಲವತ್ತಾಗಿರದ ಮೊಟ್ಟೆಗಳನ್ನು ಇಡತೊಡಗಿದವು. ಸ್ಟ್ರಾಬೆರ್ರಿ ವಿಷ ಸೂಜಿ ಕಪ್ಪೆ (ಉಫಗ ಪುಮಿಲಿಯೊ) ಅಡವಿಯ ಅಂಗಳದಲ್ಲಿ ಮೊಟ್ಟೆ ಇಡುತ್ತದೆ. ಗಂಡುಕಪ್ಪೆ ಅವುಗಳನ್ನು ಪರಭಕ್ಷಗಳಿಂದ ರಕ್ಷಿಸುತ್ತದೆ ಮತ್ತು ತನ್ನ ಮಲಕುಳಿಯಲ್ಲಿ ನೀರು ತಂದು ತೇವಾಂಶ ಭರಿತವಾಗಿರುಸುತ್ತದೆ. ಅವು ಮರಿಗಳಾದ ಮೇಲೆ ಹೆಣ್ಣು ಕಪ್ಪೆ ಅವುಗಳನ್ನು ತನ್ನ ಬೆನ್ನಿನ ಮೇಲೆ ಒಯ್ದು ಫೈಟೊಟೆಲಮೆಟ ನೀರಿನ ರಾಶಿಯಲ್ಲಿ ಪ್ರತಿಯೊಂದರಲ್ಲೂ ಒಂದು ಮರಿಯಂತೆ ಬಿಡುತ್ತದೆ. ಹೆಣ್ಣು ಕಪ್ಪೆ ಈ ಮರಿಗಳು ರೂಪಾಂತರ ಗೊಳ್ಳುವವರೆಗೂ ಅಲ್ಲಿಗೆ ಬೇಟಿಕೊಟ್ಟು ಒಂದು ಅಥವಾ ಎರಡು ಪಲವತ್ತಾಗಿರದ ಮೊಟ್ಟೆಗಳನ್ನು ಆಹಾರವಾಗಿ ಕೊಡುತ್ತಿರುತ್ತದೆ. ಸಾಮಾನ್ಯ ಸೂಲಗಿತ್ತಿ ನೆಲಗಪ್ಪೆಯ (ಅಲೈಟಸ್ ಒಬ್‌ಸ್ಟೆಟ್ರಿಶಿಯನ್ಸ್) ಗಂಡು ಮೊಟ್ಟೆಗಳನ್ನು ತನ್ನ ಹಿಂಗಾಲಿಗೆ ಅಂಟಿಸಿಕೊಂಡು ಓಡಾಡುತ್ತದೆ. ಒಣ ಹವಮಾನದಲ್ಲಿ ಕೆರೆಯಲ್ಲಿ ಮುಳುಗುವ ಮೂಲಕ ತೇವಾಂಶಭರಿತವಾಗಿರುವಂತೆ ನೋಡಿಕೊಳ್ಳುತ್ತದೆ ಮತ್ತು ಚೌಗು ಪ್ರದೇಶದ ಸಸ್ಯಗಳ ಮೂಲಕ ಹಾಯುವಾಗ ತೀರ ಹೆಚ್ಚು ತೇವಾಂಶವಾಗದಂತೆ ಹಿಂಬದಿಯನ್ನು ಮೇಲೆಕ್ಕೆ ಇರಿಸುತ್ತದೆ. ಮೂರರಿಂದ ಆರು ವಾರಗಳ ನಂತರ ಕೆರೆಗೆ ಹೋಗಿ ಮೊಟ್ಟೆಗಳು ಮರಿಗಳಾಗುವಂತೆ ನೋಡಿಕೊಳ್ಳುತ್ತದೆ.

ರಕ್ಷಣೆ

ಕಪ್ಪೆ 
ಸ್ವಲ್ಪ ವಿಷಯುಕ್ತ ರನಿಟೊಮೆಯ ಇಮಿಟೇಟರ್
ಕಪ್ಪೆ 
ಸ್ಟ್ರಾಬೆರ್ರಿ ವಿಷ ಸೂಜಿ ಕಪ್ಪೆ ಹಲವು ಆಲ್ಕಲಾಯ್ಡ್‌ಗಳನ್ನು ಹೊಂದಿದ್ದು ಪರಭಕ್ಷಗಳು ಇವುಗಳನ್ನು ಕಬಳಿಸಲು ಹಿಂಜರಿಯುತ್ತವೆ

ಕಪ್ಪೆಗಳು ಗಾತ್ರದಲ್ಲಿ ಸಣ್ಣವೂ, ನಿಧಾನ ಚಲನೆಯ ಜೀವಿಗಳೂ, ಮುಳ್ಳು, ಉಗುರು, ಕೊರೆಹಲ್ಲಿನಂತಹ ಯಾವುದೇ ರಕ್ಷಣೆಯಿಲ್ಲದ ಜೀವಿಗಳಂತೆ ಕಾಣುತ್ತವೆ. ಆದರೆ ಅವು ಹಲವು ರೀತಿಯ ರಕ್ಷಣೆಯ ಹೊಂದಾಣಿಕೆಗಳನ್ನು ಒಳಗೊಂಡಿವೆ. ಹಲವು ಕಪ್ಪೆಗಳು ಛದ್ಮನೆ ತಂತ್ರ ಬಳಸುತ್ತಿದ್ದು ಚಲಿಸದ ಕಪ್ಪೆಯನ್ನು ಗುರುತಿಸಲಾರದಷ್ಟು ಅವುಗಳ ಬಣ್ಣ ಸುತ್ತಲಿನ ಬಣ್ಣದಲ್ಲಿ ಕರಗಿಹೋಗಿರುತ್ತದೆ. ಕೆಲವು ದೊಡ್ಡ ಜಿಗಿತದಲ್ಲಿ ಹಾರಬಲ್ಲವು, ಬಹಳಷ್ಟು ಸಲ ತಪ್ಪಿಸಿಕೊಳ್ಳಲು ನೇರವಾಗಿ ನೀರಿಗೆ ಜಿಗಿಯ ಬಲ್ಲವು. ಇನ್ನೂ ಹಲವು ಭಿನ್ನರೀತಿಯ ಹೊಂದಾಣಿಕೆಗಳನ್ನು ಕಂಡುಕೊಂಡಿವೆ.

ಹಲವು ಕಪ್ಪೆಗಳ ಚರ್ಮವು ಸ್ವಲ್ಪಮಟ್ಟಿಗೆ ವಿಷಕಾರಿಯಾದ ಬಫೊಟಾಕ್ಸಿನ್‌ ಎಂದು ಕರೆಯಲಾದ ಪದಾರ್ಥಗಳನ್ನು ಹೊಂದಿದ್ದು ಇದು ಪರಭಕ್ಷಕಗಳಿಗೆ ಅಹಿತಕಾರಿಯಾಗಿರುತ್ತದೆ. ಬಹಳಷ್ಟು ನೆಲಗಪ್ಪೆಗಳು ಮತ್ತು ಕೆಲವು ಕಪ್ಪೆಗಳಲ್ಲಿ ತಲೆಯಲ್ಲಿ ಕಣ್ಣಿನ ಹಿಂದೆ ಪ್ಯಾರೊಟಾಯ್ಡ್ ಗ್ರಂಥಿಗಳೆಂದು ಕರೆಯಲಾದ ದೊಡ್ಡ ವಿಷ ಗ್ರಂಥಿಗಳು ಅಲ್ಲದೆ ಇತರ ಶ್ರವಿಸುವ ಗ್ರಂಥಿಗಳೂ ಇರುತ್ತವೆ. ಈ ಗ್ರಂಥಿಗಳು ಅಂಟಿನಂತಹ ಪದಾರ್ಥಗಳನ್ನೂ ಮತ್ತು ವಿಷವನ್ನೂ ಶ್ರವಿಸುತ್ತವೆ. ಅಂಟಿನ ಪದಾರ್ಥವು ಕಪ್ಪೆಗೆ ಜಾರಿ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಶ್ರವಿಸುವ ಗ್ರಂಥಿಯ ಪರಿಣಾಮ ತಕ್ಷಣವಾಗಿದ್ದರೆ ಕಪ್ಪೆ ತಪ್ಪಿಸಿಕೊಳ್ಳ ಬಹುದು ಮತ್ತು ಅದು ನಿಧಾನವಾಗಿದ್ದರೆ ಮುಂದೆ ಆ ಪರಭಕ್ಷಕ ನಿರ್ದಿಷ್ಟ ಪ್ರಭೇದವನ್ನು ಮುಂದೆ ತಿನ್ನದಂತಿರುವುದನ್ನು ಕಲಿಯ ಬಹುದು. ವಿಷಪೂರಿತ ಕಪ್ಪೆಗಳು ತಾವು ವಿಷ ಹೊಂದಿರುವುದನ್ನು ಎದ್ದು ಕಾಣುವ ಬಣ್ಣಗಳ ಮೂಲಕ ತೊರಿಸಿಕೊಳ್ಳುತ್ತವೆ. ಇದನ್ನು ಅಪೊಸೆಮಿಟಿಸಂ ಹೊಂದಾಣಿಕೆ ತಂತ್ರ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಕಪ್ಪೆಗಳು ಕೆಂಪು, ಕಿತ್ತಳೆ, ಹಳದಿ ಬಣ್ಣ ಮತ್ತು ಕೆಲವೊಮ್ಮೆ ಕಪ್ಪು ಪಟ್ಟಿಗಳನ್ನು ಹೊಂದಿರುತ್ತವೆ. ಅಲ್ಲೊಬೇಟಸ್ ಜಪಾರೊ ವಿಷಪೂರಿತವಲ್ಲ. ಆದರೆ ಅದು ಬದುಕಿರುವ ವ್ಯಾಪ್ತಿಯಲ್ಲಿನ ಎರಡು ವಿಷಪೂರಿತ ಪ್ರಭೇದಗಳ ಬಣ್ಣಗಳನ್ನು ಅನುಕರಿಸುವ ಮೂಲಕ ಪರಭಕ್ಷಗಳನ್ನು ಮೋಸಗೊಳಿಸುತ್ತದೆ. ವಿಷ ಸೂಜಿ ಕಪ್ಪೆಗಳು ವಿಶೇಷವಾಗಿ ವಿಷಪೂರಿತ. ದಕ್ಷಿಣ ಅಮೆರಿಕದ ಸ್ಥಳೀಯರು ಇವುಗಳ ವಿಷವನ್ನು ತೆಗೆದು ಬೇಟೆಗೆ ಬಳಸುತ್ತಾರೆ.

ಕೆಲವು ಕಪ್ಪೆಗಳು ರಕ್ಷಣೆಗೆ ವಂಚನೆಯನ್ನು ಬಳಸುತ್ತವೆ. ಯುರೋಪಿನ ಸಾಮಾನ್ಯ ನೆಲಗಪ್ಪೆ ತನ್ನ ದೇಹವನ್ನು ದಪ್ಪ ಮಾಡಿಕೊಂಡು, ಹಿಂಗಾಲುಗಳನ್ನು ಮೇಲಕ್ಕೆತ್ತಿ ನಿಲ್ಲುತ್ತದೆ. ಕೆಲವು ಕಪ್ಪೆಗಳು ದೊಡ್ಡ ಸದ್ದು ಮಾಡುವ ಮೂಲಕ ಪರಭಕ್ಷಕವನ್ನು ಗಾಬರಿ ಬೀಳಿಸಲು ಯತ್ನಿಸುತ್ತವೆ.

ನೋಡಿ

ಹೊರ ಲಿಂಕುಗಳು

ಉಲ್ಲೇಖಗಳು ಮತ್ತು ಟಿಪ್ಪಣಿಗಳು

ಗ್ರಂಥಸೂಚಿ

  • Beltz, Ellin (2005). Frogs: Inside their Remarkable World. Firefly Books. ISBN 1-55297-869-9.
  • Cogger, H. G.; Zweifel, R. G.; Kirschner, D. (2004). Encyclopedia of Reptiles & Amphibians (2nd ed.). Fog City Press. ISBN 1-877019-69-0.
  • Estes, R., and O. A. Reig. (1973). "The early fossil record of frogs: a review of the evidence." pp. 11–63 In J. L. Vial (Ed.), Evolutionary Biology of the Anurans: Contemporary Research on Major Problems. University of Missouri Press, Columbia.
  • Gissi, Carmela; San Mauro, Diego; Pesole, Graziano; Zardoya, Rafael (February 2006). "Mitochondrial phylogeny of Anura (Amphibia): A case study of congruent phylogenetic reconstruction using amino acid and nucleotide characters". Gene. 366 (2): 228–237. doi:10.1016/j.gene.2005.07.034. PMID 16307849.
  • Holman, J. A. (2004). Fossil Frogs and Toads of North America. Indiana University Press. ISBN 0-253-34280-5.
  • San Mauro, Diego; Vences, Miguel; Alcobendas, Marina; Zardoya, Rafael; Meyer, Axel (May 2005). "Initial diversification of living amphibians predated the breakup of Pangaea". American Naturalist. 165 (5): 590–599. doi:10.1086/429523. PMID 15795855.
  • Tyler, M. J. (1994). Australian Frogs A Natural History. Reed Books. ISBN 0-7301-0468-0.
ಕಪ್ಪೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕಪ್ಪೆ ವರ್ಗೀಕರಣಕಪ್ಪೆ ವಿಕಾಸಕಪ್ಪೆ ದೈಹಿಕ ಲಕ್ಷಣಗಳುಕಪ್ಪೆ ಸಂತಾನೋತ್ಪತ್ತಿ ಮತ್ತು ಜೀವನ ಚಕ್ರಕಪ್ಪೆ ತಂದೆತಾಯಿ ಆರೈಕೆಕಪ್ಪೆ ರಕ್ಷಣೆಕಪ್ಪೆ ನೋಡಿಕಪ್ಪೆ ಹೊರ ಲಿಂಕುಗಳುಕಪ್ಪೆ ಉಲ್ಲೇಖಗಳು ಮತ್ತು ಟಿಪ್ಪಣಿಗಳುಕಪ್ಪೆ ಗ್ರಂಥಸೂಚಿಕಪ್ಪೆ

🔥 Trending searches on Wiki ಕನ್ನಡ:

ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವಚನಕಾರರ ಅಂಕಿತ ನಾಮಗಳುಇತಿಹಾಸಮೊಘಲ್ ಸಾಮ್ರಾಜ್ಯಬಿ. ಆರ್. ಅಂಬೇಡ್ಕರ್ಚಾಲುಕ್ಯದೆಹಲಿ ಸುಲ್ತಾನರುಯಜಮಾನ (ಚಲನಚಿತ್ರ)ಭಾರತೀಯ ಮೂಲಭೂತ ಹಕ್ಕುಗಳುಕಾದಂಬರಿಕನ್ನಡದಲ್ಲಿ ಗದ್ಯ ಸಾಹಿತ್ಯಹೈನುಗಾರಿಕೆಅರ್ಥಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತದ ವಿಜ್ಞಾನಿಗಳುಪದಬಂಧಕರ್ನಾಟಕದ ಇತಿಹಾಸದುಂಡು ಮೇಜಿನ ಸಭೆ(ಭಾರತ)ಸಂಚಿ ಹೊನ್ನಮ್ಮಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕನ್ನಡ ಸಾಹಿತ್ಯ ಸಮ್ಮೇಳನಕನ್ನಡ ಗಣಕ ಪರಿಷತ್ತುಕರ್ನಾಟಕದ ಶಾಸನಗಳುಭಾರತೀಯ ಭೂಸೇನೆಗಾಂಧಿ ಜಯಂತಿಚಾವಣಿಶಬ್ದಭಾರತ ಬಿಟ್ಟು ತೊಲಗಿ ಚಳುವಳಿಬಹಮನಿ ಸುಲ್ತಾನರುಭಗತ್ ಸಿಂಗ್ಆದಿಪುರಾಣಬಂಗಾರದ ಮನುಷ್ಯ (ಚಲನಚಿತ್ರ)ಭಾರತದ ರಾಜಕೀಯ ಪಕ್ಷಗಳುಮಯೂರಶರ್ಮಹರಿಹರ (ಕವಿ)ಸಜ್ಜೆಆದಿ ಶಂಕರಸರ್ಕಾರೇತರ ಸಂಸ್ಥೆಸೂಫಿಪಂಥಒಡೆಯರ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುರಂಗಭೂಮಿನಾಲಿಗೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಮುಟ್ಟು ನಿಲ್ಲುವಿಕೆಜೋಳಶಿವಮೊಗ್ಗಭಾರತ ಸಂವಿಧಾನದ ಪೀಠಿಕೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಬ್ಯಾಡ್ಮಿಂಟನ್‌ಧರ್ಮರಾಯ ಸ್ವಾಮಿ ದೇವಸ್ಥಾನಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತದ ರಾಷ್ಟ್ರಪತಿನಾಡ ಗೀತೆಅಕ್ಬರ್ಅರಣ್ಯನಾಶಸಮುದ್ರನಾಗಚಂದ್ರರಾವಣಗೂಗಲ್ವಾಣಿಜ್ಯ(ವ್ಯಾಪಾರ)ಭಾರತೀಯ ಭಾಷೆಗಳುವಿದುರಾಶ್ವತ್ಥಎಮ್.ಎ. ಚಿದಂಬರಂ ಕ್ರೀಡಾಂಗಣಬಾಲಕೃಷ್ಣಬುಧಕನ್ನಡ ವ್ಯಾಕರಣಜೇನು ಹುಳುಸಂತೆಪು. ತಿ. ನರಸಿಂಹಾಚಾರ್ಜಾನಪದಹರಪ್ಪನಾಯಿಪ್ರೀತಿರವಿಚಂದ್ರನ್🡆 More