ಆಚರಣೆ

ಮತಧರ್ಮಗಳಿಗೆ ಸಂಬಂಧಿಸಿದಂತೆ, ಅಗೋಚರ ದೈವಶಕ್ತಿಗಳ ಪ್ರೀತ್ಯರ್ಥವಾಗಿ ಮಾನವ ನಡೆಸುತ್ತ ಬಂದಿರುವ ಮತಾಚಾರಗಳಿಗೆ, ಕರ್ಮವಿಧಿಗಳಿಗೆ ಈ ಹೆಸರಿದೆ.

ಇತಿಹಾಸ

(ರಿಚುಅಲ್). ಮತಸಂಬಂಧವಾದ ಆಚಾರ (ನೋಡಿ- ಆಚಾರ), ಆಚಾರ್ಯ (ನೋಡಿ- ಆಚಾರ್ಯ) ಇವು ಪ್ರತ್ಯೇಕ ವಿಷಯಗಳಾಗಿವೆ. ಮನುಷ್ಯ ಸತ್ತಮೇಲೆ ಅವನಿಗೆ ನಡೆಸುವ ಉತ್ತರ ಕ್ರಿಯಾದಿಗಳೂ ಒಂದು ರೀತಿಯ ಕರ್ಮವೇ. ಅದನ್ನು ಸಂಸ್ಕಾರ ಎನ್ನಲಾಗಿದೆ. ತದನಂತರ ಮೃತರ ಬಗ್ಗೆ ಮಾಡುವ ಶ್ರಾದ್ಧ ಪಿತೃಪಕ್ಷಗಳ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಇಲ್ಲಿ ದೈವೀಸಂಬಂಧವಾದ ಆಚರಣೆಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ.ಕ್ರಮವತ್ತಾದ ವಿಧಿಪೂರ್ವಕವಾದ, ಪರಂಪರಾನುಗತವಾಗಿ ನಡೆದು ಬಂದ ರೀತಿಯಲ್ಲಿ ನಡೆಸುವ ಇಂಥ ಕ್ರಿಯೆಗಳ ಹಿನ್ನೆಲೆಯಲ್ಲಿ ನಂಬಿಕೆ ಆಳವಾಗಿ ಬೇರು ಬಿಟ್ಟಿರುತ್ತದೆ, ಧರ್ಮ ಇದರ ಅಡಿಗಲ್ಲು. ಧಾರ್ಮಿಕ ವಿಧಿಗಳಿಂದ ತಾನು ನಂಬಿದ ಪವಿತ್ರವಸ್ತುಗಳ ಪ್ರೀತಿಯನ್ನು ಸಂಪಾದಿಸಬಹುದೆಂಬ ಮನುಷ್ಯ ಎಣಿಸುತ್ತಾನೆ. ಇದು ಕ್ರಮವತ್ತಾದ ಅರ್ಚನಾಕ್ರಮವೂ ಹೌದು (ನೋಡಿ- ಅರ್ಚನೆ), ಲೌಕಿಕ ಹಿನ್ನೆಲೆಗಳಲ್ಲಿ ಸಂಪ್ರದಾಯನಿಷ್ಠ ರೀತಿಯಲ್ಲಿ ನಡೆಸುವ ಒಂದು ಕ್ರಿಯೆಯೂ ಹೌದು. ನಂಬಿಕೆ ಮತ್ತು ಆಚರಣೆ ಪರಸ್ಪರ ಪೂರಕವಾದರೂ ಅನೇಕ ಸಂದರ್ಭಗಳಲ್ಲಿ ಊಹೆಗೆ ನಿಲುಕದ ರೀತಿಯಲ್ಲಿ ಅವು ತಮ್ಮ ಸಂಬಂಧವನ್ನು ಕಳೆದುಕೊಂಡಿರುತ್ತವೆ. ದೈತ್ಯ ಸಾಧನೆಗಳಿಗೆ ಮಕ್ಕಳನ್ನು ಬಲಿಕೊಡುವ ಒಂದು ಆಚರಣೆ ಐರೋಪ್ಯ ದೇಶಗಳಲ್ಲಿ ಮೊದಲಿಗೆ ಕಂಡುಬರುತ್ತಿತ್ತು. ಅನೇಕ ದೊಡ್ಡ ದೊಡ್ಡ ಕಟ್ಟಡಗಳನ್ನು ಕೆಡವಿ ಅಡಿಪಾಯವನ್ನು ಶೋಧಿಸಿದಾಗ ಎಲುಗೂಡು ದೊರೆತ ಅನೇಕ ನಿದರ್ಶನಗಳಿವೆ. ಆಚರಣೆಗೆ ಪ್ರೇರಕವಾದ ನಂಬಿಕೆ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಹೀಗೆಯೇ ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಕೊಂಡೊಯ್ಯುವಾಗ ತಲೆಬಾಗುವ ಪದ್ಧತಿ ಪಾಶ್ಚಾತ್ಯರಲ್ಲಿ ಬೆಳೆದುಬಂದಿದೆ. ನಿಜವಾದ ಆಚರಣೆ ಶವವನ್ನು ವಂದಿಸುವುದಲ್ಲ, ಮೊದಲಿಗೆ ಇಂಥ ಮೆರವಣಿಗೆಯ ಮುಂದೆ ಶಿಲುಬೆಯ ಗುರುತನ್ನು ಕೊಂಡೊಯ್ಯುವ ಆಚರಣೆ ಇದ್ದು ಅದಕ್ಕೆ ವಂದಿಸುವ ಪದ್ಧತಿ ಇತ್ತು. ಆ ನಂಬಿಕೆ ಈ ರೂಪದಲ್ಲಿ ಉಳಿದಿದೆ. ಆಚರಣೆ ಮಾತ್ರ ಮರೆತುಹೋಗಿದೆ.

ದೈಹಿಕ ಅವಶ್ಯಕತೆಗಳು

ದೈಹಿಕ ಅವಶ್ಯಕತೆಗಳಿಗನುಗುಣವಾಗಿ ನಡೆಸುವ ನೈಸರ್ಗಿಕ ಕ್ರಿಯೆಗಳು ಆಚರಣೆಗಳಾಗುವುದಿಲ್ಲ. ದೇಹಶುದ್ಧಿಗಾಗಿ ಮೀಯುವುದಕ್ಕೂ ಪವಿತ್ರ ಉದ್ದೇಶಕ್ಕಾಗಿ ಮಾಡುವ ದಿವ್ಯಸ್ನಾನಕ್ಕೂ ಅಂತರವನ್ನು ಗುರುತಿಸಿ ಧಾರ್ಮಿಕ ಆಚರಣೆಯನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಆಧುನಿಕ ಮತಗಳು ನಂಬಿಕೆ ಮತ್ತು ಆಚರಣೆಗಳ ಮೇಲೆಯೇ ನಿಂತಿವೆ. ಹಳೆಯ ಮತಗಳಲ್ಲಿ ಪುರಾಣಗಳು, ಐತಿಹ್ಯಗಳು ನಂಬಿಕೆಯ ಸ್ಥಾನದಲ್ಲಿ ನಿಲ್ಲುತ್ತವೆ. ಆಚರಣೆಗಳು ಒಂದು ರೀತಿಯಲ್ಲಿ ಪುರಾಣಗಳ ಹುಟ್ಟಿಗೆ ಮೂಲಕಾರಣವೆನಿಸಿದರೆ, ಅನೇಕ ಪುರಾಣಗಳ ಆಧಾರದ ಮೇಲೆ ಆಚರಣೆಗಳು ಹುಟ್ಟಿಕೊಳ್ಳಲೂಬಹುದು. ವೈಯಕ್ತಿಕವಾಗಿ ನಡೆಸುವ ಆಚರಣೆಗಳು ಕೆಲವಾದರೆ, ಸಾಮೂಹಿಕವಾಗಿ ನಡೆಸುವ ಆಚರಣೆಗಳೂ ಇವೆ. ಧಾರ್ಮಿಕ ಮುಖಂಡರಿಂದ ಪೂಜಾರಿ ಪುರೋಹಿತರಿಂದ ವಂಶಪಾರಂಪರ್ಯವಾದ ಹಕ್ಕನ್ನು ಪಡೆದವರಿಂದ ನಡೆಸುವ ಆಚಾರಗಳೂ ಕೆಲವಿವೆ. ಧಾರ್ಮಿಕ ಪಾವಿತ್ರ್ಯದ ಜೊತೆಗೆ ಅತಿಮಾನುಷ ಶಕ್ತಿಗಳ ಭಯವೂ ಮಿಗಿಲಾದುದೇ. ಆದುದರಿಂದ ಆಚರಣೆಗಳನ್ನು ಅತ್ಯಂತ ಶ್ರದ್ಧೆಯಿಂದ ನಡೆಸಲಾಗುತ್ತದೆ. ನುಡಿಯಲ್ಲಿ ನಡೆಯಲ್ಲಿ ಸಣ್ಣ ತಪ್ಪಾದರೂ ಅನರ್ಥವಾದೀತೆಂಬ ಅಂಜಿಕೆ ಪ್ರತಿಯೊಂದು ಆಚರಣೆಯ ಹಿನ್ನೆಲೆಯಲ್ಲೂ ಇದ್ದೇ ಇರುತ್ತದೆ. ಉಪವಾಸವಿರುವುದು, ಮೀಸಲು ವಸ್ತುಗಳನ್ನು ತೆಗೆದಿಡುವುದು, ಹಿಂದಿನಿಂದ ನಡೆದು ಬಂದ ಪದ್ಧತಿಯಲ್ಲಿ ಸ್ವಲ್ಪವೂ ಲೋಪಬರದಂತೆ ಎಚ್ಚರ ವಹಿಸುವುದು, ಸಂಬಂಧಪಟ್ಟ ವ್ಯಕ್ತಿಯಿಂದಲೇ ಕ್ರಿಯೆಗಳನ್ನು ನಡೆಸುವುದು-ಈ ಮುಂತಾದ ಕ್ರಮಗಳನ್ನು ಗಮನಿಸಿದಾಗ ಮತದ ಬಾಹ್ಯಾಚರಣೆಗಳಾದ ಇವು ಬದುಕಿನಲ್ಲಿ ಎಷ್ಟು ಪ್ರಮುಖಪಾತ್ರವಹಿಸುತ್ತವೆ ಎಂಬುದು ವೇದ್ಯವಾಗುತ್ತದೆ. ವೈಯಕ್ತಿಕವಾಗಿ ನಡೆಸುವ ಧ್ಯಾನ, ತಪಸ್ಸುಗಳೇ ಬೇರೆ. ಇತರರಂತೆ ನಡೆಸುವ ಬಾಹ್ಯವಾದ ಆಚರಣೆಗಳೇ ಬೇರೆ. ದೈವದ ಪ್ರತಿನಿಧಿಗಳು ನಿಂತು ನಡೆಸುವ ಆಚರಣೆಗಳು ಬೇರೆ. ಅನಂತರ ಒಂದೊಂದು ಧರ್ಮಕ್ಕೂ ಮತಕ್ಕೂ ಪಂಥಕ್ಕೂ ಇಂಥ ಹರಿಕಾರರು ಕಾಣಿಸಿಕೊಳ್ಳುತ್ತಾರೆ. ನೀಲಗಾರರು, ಗುಡ್ಡರು, ಗೊಂದಲಿಗರು, ಗೊರವರು, ದಾಸಯ್ಯಗಳು, ಜೋಗಿಗಳು ಹುಟ್ಟಿಕೊಂಡದ್ದು ಹೀಗೆ. ಆಯಾ ದೈವಕ್ಕೆ ಸಂಬಂಧಿಸಿದ ಆಚರಣೆಗಳನ್ನು ಗೊತ್ತಾದ ಭಕ್ತರೇ ನಡೆಸಬೇಕು. ಅದಕ್ಕೆ ಸಂಬಂಧಪಟ್ಟಂಥ ವಿಶಿಷ್ಟ ಸಾಧನ, ಹಾಡು, ಕಥೆ, ಮಂತ್ರಗಳೆಲ್ಲ ಉಂಟು. ದಾಸಯ್ಯನ ಜಾಗಟೆ, ಭವನಾಶಿ, ಶಂಖ, ಗರುಡಗಂಬಗಳು, ಜೋಗಿಯ ಸಿಂಗನಾದ, ಗುಡ್ಡನ ಕಂಸಾಳೆ, ಗೊರವನ ಡಮರುಗ, ಗೊಂದಲಿಗನ ಚೌಟಿಕೆ-ಇವೆಲ್ಲ ಪವಿತ್ರ ವಸ್ತುಗಳು, ಅವರು ನಡೆಸುವ ಆಚರಣೆಯ ಸಾಧನಸಲಕರಣೆಗಳು. ದಾಳಹಾಕುವುದು, ಮಣೀವು ಹಾಕುವುದು, ಗೊಂದಲ ಹಾಕುವುದು, ಕೋಲುಪೂಜುವುದು ಮುಂತಾದುವು ಪವಿತ್ರ ಆಚರಣೆಗಳು.

ಆಚರಣೆಯ ವಿವಿಧಗಳು

ವೈಯಕ್ತಿವಾಗಿ ನಡೆಸುವ ಆಚರಣೆಗಳಿಗೆ ಈ ಪ್ರತಿನಿಧಿಗಳ ಆವಶ್ಯಕತೆಯಿಲ್ಲ. ಮನೆಯಲ್ಲಿ, ಹೊಲದಲ್ಲಿ ಬಯಲಲ್ಲಿ ನಡೆಸುವ ಕ್ರಿಯೆಗಳಲ್ಲಿ ಧಾರ್ಮಿಕ ವಸ್ತುಗಳನ್ನು ಮಾತ್ರ ಬಳಸಬಹುದು. ಇಂಥ ಸಾಧನಸಲಕರಣಗಳು ಸಾಮಾನ್ಯವಾಗಿ ನಿತ್ಯೋಪಯೋಗಕ್ಕೆ ಬಳಸಲು ಬಾರದ ರೀತಿಯಲ್ಲೇ ಸಿದ್ಧವಾದುವು. ಆದರೆ ಕಲಾತ್ಮಕವಾಗಿ ರಚಿತವಾಗಿ ಆಕರ್ಷಕವಾಗಿರಬಹುದು. ಕಂಚಿನ ಕಳಸಗಳೂ ಧೂಪ ದೀಪಾರತಿಯ ಸಾಧನಗಳೂ ಮಂಗಳಾರತಿಯ ತಟ್ಟೆಗಳೂ ಈ ದೃಷ್ಟಿಯಿಂದ ಗಮನಾರ್ಹವಾದುವು. ಮಾನವಶಾಸ್ತ್ರಜ್ಞರು ಆಚರಣೆಗಳನ್ನು ಮೂರು ಮುಖ್ಯ ವಿಭಾಗಗಳನ್ನಾಗಿ ಮಾಡಿಕೊಳ್ಳುತ್ತಾರೆ. 1 ಧಾರ್ಮಿಕ ಆಚರಣೆ. 2 ಮಾಂತ್ರಿಕ ಆಚರಣೆ. 3 ಮಾಟ, ಮೋಡಿ ಇತ್ಯಾದಿ. ಈ ಮೂರು ಬಗೆಗಳೂ ಒಂದೇ ಸಂಸ್ಕøತಿಯಲ್ಲಿ ಕಂಡುಬರಬಹುದು. ಜನತೆಯ ಜೀವನದೃಷ್ಟಿ, ನಂಬಿಕೆ, ಆಶೋತ್ತರಗಳು ಸ್ಪಷ್ಟವಾಗಿ ಈ ಆಚರಣೆಗಳಲ್ಲಿ ಕಂಡು ಬರುತ್ತವೆ. ಮಾನವನ ಬದುಕಿಗೆ ಸಂಬಂಧಿಸಿದಂತೆ ನಾಲ್ಕು ವರ್ಗಗಳಲ್ಲಿ ಇವುಗಳನ್ನು ವಿಭಾಗಿಸಿಕೊಳ್ಳಬಹುದು. 1 ಮಾನವನ ಬದುಕಿಗೆ ಅವನ ಭಾವ ಪ್ರಪಂಚಕ್ಕೆ ಸಂಬಂಧಿಸಿದ ಆಚರಣೆಗಳು. 2 ನೈಸರ್ಗಿಕಕ್ರಿಯೆಗಳಿಗೆ ಸಂಬಂಧಿಸಿದ ಆಚರಣೆಗಳು. 3 ಆರ್ಥಿಕಚಟುವಟಿಕೆಗೆ ಸಂಬಂಧಿಸಿದ ಆಚರಣೆಗಳು. 4 ಸಾಮಾಜಿಕ ರಚನೆಗೆ ಸಂಬಂಧಿಸಿದ ಆಚರಣೆಗಳು.

ಮಾನವ ಒಂದೇ ದೈವದ ಕಟ್ಟಿಗೆ ಒಳಗಾಗಬೇಕಾದ ಅಗತ್ಯವಿಲ್ಲ. ದೇವಮಹಾದೇವರುಗಳ ಸಾಲಿನಲ್ಲಿ ಅನೇಕ ಕ್ಷುದ್ರದೇವತೆಗಳನ್ನೂ ಶಕ್ತಿಗಳನ್ನೂ ಅರ್ಚಿಸುವ ಸ್ವಾತಂತ್ರ್ಯ ಅವನಿಗಿದೆ. ಈ ಸಂಬಂಧವಾದ ಅನೇಕ ಆಚರಣೆಗಳನ್ನು ಆತ ನಡೆಸುತ್ತಾನೆ. ಪರಸೇವೆ, ಹರಿಸೇವೆಗಳನ್ನು ಮಾಡುವಂತೆಯೇ ಸಣ್ಣ ಪುಟ್ಟ-ದೇವತೆಗಳ ಹೆಸರಿನಲ್ಲಿ ಅನೇಕ ಆಚರಣೆಗಳನ್ನು ನಡೆಸುತ್ತಾನೆ. ಹರಕೆಯ ಮರಿಗಳನ್ನು ಕಡಿಯುತ್ತಾನೆ. ಮಾನವ ಬಲಿಯೂ ಇದ್ದಿತೆನ್ನುವುದಕ್ಕೆ ಆಧಾರಗಳಿವೆ.

ಮಾನವನ ಬದುಕಿನಲ್ಲಿ ಹುಟ್ಟು, ಪ್ರೌಢಾವಸ್ಥೆ, ಮದುವೆ, ಮರಣಗಳಿಗೆ ಸಂಬಂಧಿಸಿದ ಆಚರಣೆಗಳೂ ಅನೇಕ ಬಗೆಯಲ್ಲಿವೆ. ಬಸುರಿ, ಬಾಣಂತಿಯರಿಗೆ ನಡೆಸುವ ಶಾಸ್ತ್ರಗಳೆಲ್ಲ ಆಚರಣೆಗಳೇ. ಗುಣಿಗಿಕ್ಕುವಶಾಸ್ತ್ರ, ಹೆಸರಿಡುವ ಶಾಸ್ತ್ರಗಳಂತೆಯೆ ಋತುಮತಿಯಾದ ಹೆಣ್ಣು ಮಗಳಿಗೆ ಮಾಡುವ ಗುಡಿಲುಕೂಡುವ ಶಾಸ್ತ್ರ, ಮದುವೆಯಲ್ಲಿ ನಡೆಯುವ ಶಾಸ್ತ್ರ, ನೀರು ತರುವ ಶಾಸ್ತ್ರ, ಭತ್ತಕುಟ್ಟುವ, ಭೂತ ಉಣ್ಣುವ, ಬಾಗಿಲು ತಡೆಯುವ, ಹೂವಿನ ಚೆಂಡಾಡುವ ಶಾಸ್ತ್ರಗಳೆಲ್ಲ ಬಗೆಬಗೆಯ ಆಚರಣೆಗಳೇ. ಶವಸಂಸ್ಕಾರಗಳಲ್ಲೂ ಅನೇಕ ಆಚರಣೆಗಳನ್ನು ಕಾಣಬಹುದು. ಹೂಳುವ, ಸುಡುವ, ಕಲ್ಲಿಗೆಸೆಯುವ ಸಂಪ್ರದಾಯಗಳ ಹಿನ್ನೆಲೆಯಲ್ಲಿ ನಡೆಸುವ ಆಚರಣೆಗಳು ಅನೇಕವಾಗಿವೆ. ಮಳೆಯಾಗದಿದ್ದರೆ ಹೂತ ಹೆಣವನ್ನು ಹೊರ ತೆಗೆದು ನಡೆಸುವ ಕ್ರಿಯೆಗಳು, ಸುಟ್ಟಬೂದಿ, ಸತ್ತವರೊಡನೆ ಹೂತವಸ್ತ್ರ, ಆಭರಣ, ವಸ್ತುವಿಶೇಷಗಳನ್ನು ಪಡೆಯುವ ಆಚರಣೆಗಳು ಜನಾಂಗದಿಂದ ಜನಾಂಗಕ್ಕೆ ಅನೇಕ ವಿಧವಾಗಿ ಹಬ್ಬಿವೆ.

ಕಾಡುಗೊಲ್ಲರಲ್ಲಿ ಋತುಮತಿಯಾದ ಹೆಣ್ಣುಮಕ್ಕಳನ್ನೂ ಬಾಣಂತಿಯರನ್ನೂ ಹಟ್ಟಿಗೆ ದೂರವಾಗಿ ಬೆಟ್ಟದ ತಪ್ಪಲಲ್ಲಿ ಗುಡಿಸಲುಹಾಕಿ ಬಿಡುವ ಆಚರಣೆ ವಿಚಿತ್ರವಾದುದು. ಅಂಥ ಹೆಣ್ಣಿಗೆ ಊಟವನ್ನು ಕೊಡಬೇಕಾದರೂ ದೊಡ್ಡ ಗಳುವಿನಿಂದ ಒಳಗೆ ನೂಕುವ ಪದ್ಧತಿಯಿದೆ. ಯೂರೋಪಿನಲ್ಲಿ ಬಾಣಂತಿ ಗೊತ್ತಾದ ದಿನಗಳಲ್ಲಿ ಚರ್ಚಿಗೆ ಹೋಗಿ ಶುದ್ಧಳಾಗಿ ಬರದಿದ್ದರೆ ಅಪವಿತ್ರಳು. ಆ ಮಧ್ಯೆ ಅನೇಕ ಅನರ್ಥಗಳು ಸಂಭವಿಸಬಹುದು. ಕಿನ್ನರಿಯರು ಬಂದು ಅವಳನ್ನು ಹೊತ್ತುಕೊಂಡು ಹೋಗಬಹುದು. ಹೀಗೆ ಬಿಟ್ಟರೆಂದು ಭಾವಿಸಲಾದ ಅನೇಕ ಸಂದರ್ಭಗಳಲ್ಲಿ ಹಸುಳೆಗಳಿಗೆ ಕ್ರೂರ ಹಿಂಸೆಯನ್ನು ಕೊಟ್ಟು ನ್ಯಾಯಾಲಯಕ್ಕೆ ದೂರುಹೊತ್ತ ಪ್ರಸಂಗಗಳೂ ಇವೆ. ತಾಯಿ ಶುದ್ಧಳಾಗಲು ನಡೆಸುವ ಆಚರಣೆ ಬಹು ಮುಖ್ಯವಾದುದು.

ಮರ, ನೀರು, ಗಾಳಿ, ಆಕಾಶಗಳಲ್ಲಿ ಅನೇಕ ಶಕ್ತಿಗಳಿರಬಹುದು. ಸಾಂಸ್ಕøತಿಕವೀರರು, ಧಾರ್ಮಿಕಪುರುಷರು, ಮಹಿಮಾವಂತರು, ಪ್ರಾಣಿವಿಶೇಷಗಳು ಅನೇಕ ವ್ಯಕ್ತಿವಿಶೇಷಗಳಿಗೆ ಸಂಬಂಧಿಸಿದಂತೆ ಆಚರಣೆಗಳು ನಡೆಯಬಹುದು. ಬಸವನಪೂಜೆ, ಸೀಗೆಗೌರಿ ಪೂಜೆ, ತಿಂಗಳುಮಾವನ ಪೂಜೆ, ಕೊಂತಿಪೂಜೆಗಳು ವಿಶಿಷ್ಟ ಆಚರಣೆಗಳು: ಧಾರ್ಮಿಕ ಪುರುಷರು, ಕೆಲವು ಪ್ರಭುಗಳು, ಆಹಾರ, ಬದುಕು, ನಿದ್ರೆ, ಲೈಂಗಿಕಕ್ರಿಯೆ ಇವುಗಳಿಗೆ ಸಂಬಂಧಿಸಿದಂತೆ ಕ್ರಮಬದ್ಧ ಆಚರಣೆಗಳಿಗೊಳಪಡುತ್ತಾರೆ. ಕೆಲವರಿಗೆ ಸ್ವಾಭಾವಿಕಮರಣ ಇಲ್ಲ. ಕೆಲವರನ್ನು ಉತ್ತರಾಧಿಕಾರಿ ಕ್ರಮದಂತೆ ಕೊಲ್ಲಬಹುದು. ವಂಶಪಾರಂಪರ್ಯವಾಗಿ ನೇಮಕಗೊಂಡ ಕಟುಕರು ಆ ಕಾರ್ಯವನ್ನು ಮಾಡಬಹುದು. ಸಜೀವ ಸಮಾಧಿಯಾದ ಅನೇಕ ಧಾರ್ಮಿಕಪುರುಷರು ನಿದರ್ಶನಗಳು ಇಂದಿಗೂ ಇವೆ. ಈ ಕ್ರಿಯೆಗಳ ಹಿನ್ನೆಲೆಯಲ್ಲಿ ವಿಶಿಷ್ಟವಾದ ಆಚರಣೆಗಳಿವೆ.

ಬೇಟೆ, ಮೀನುಗಾರಿಕೆ, ವ್ಯವಸಾಯ, ತೋಟಗಾರಿಕೆ, ಕಟ್ಟಡ, ಯುದ್ಧ, ಕಳ್ಳತನ ಮುಂತಾದುವಕ್ಕೆ ಹೊರಡುವ ಸಂದರ್ಭದಲ್ಲೂ ಉತ್ತಮ ಆಚರಣೆಗಳಿವೆ. ಅತಿಮಾನುಷ ಶಕ್ತಿಗಳು ತಮ್ಮ ಕಾರ್ಯದಲ್ಲಿ ಜಯವನ್ನು ಕೊಡಲೆಂದು ಹರಸಿಕೊಳ್ಳುವುದಷ್ಟೇ ಅಲ್ಲದೆ ಉತ್ತಮ ಆಚರಣೆಗಳನ್ನು ನಡೆಸುವ ಪದ್ಧತಿಯೂ ಇದೆ.

ಆಚರಣೆಯ ಸಂದರ್ಭದಗಳು

ಆಚರಣೆಯ ಸಂದರ್ಭದಲ್ಲಿ ಕತ್ತಿ, ಭಲ್ಲೆ, ಬೆತ್ತ, ತ್ರಿಶೂಲ, ಖಂಡೆಯ (ಕಂಡಾಯ) ಮುಂತಾದ ಗೊತ್ತಾದ ವಸ್ತುಗಳು ಆಯುಧವಿಶೇಷಗಳೂ ಹೌದು, ಆಚರಣೆಯ ಸಾಧನಗಳೂ ಹೌದು. ಅವನ್ನು ಪೂಜಿಸದೆ ಆ ಶಕ್ತಿಯ ಆವಿಷ್ಕಾರವಿಲ್ಲ. ಕಾಡುಗೊಲ್ಲರ ಗಣಿಯನ್ನು ನುಡಿಸಿದಾಗ ವಿಶಿಷ್ಟ ಪೀಠಗಳನ್ನೇರಿದಾಗ ದೇವಿ ಮೈಮೇಲೆ ಬರಬಹುದು, ಇಲ್ಲವೆ ಕ್ರಮವತ್ತಾದ ಪೂಜೆ ಮಾಡಿದ್ದರೆ ಬಲಗಡೆ ಹೂ ಕೊಡಬಹುದು. ಮುಖವಾಡಗಳೂ ಈ ಸಂದರ್ಭದಲ್ಲಿ ಬಳಕೆಯಾಗುತ್ತವೆ. ಸಾಮಾನ್ಯವಾಗಿ ಮೂರು ಮುಖವಾಗಿ ನಡೆಯುವ ಆಚರಣೆಯಲ್ಲಿ ಮೂರು ಮಜಲುಗಳನ್ನು ಕಾಣಬಹುದು. 1 ಪ್ರಾರ್ಥನೆ. 2 ಅರ್ಪಣೆ, ಬಲಿ, 3 ದೈಹಿಕ ಸಂಜ್ಞೆಗಳು ಮತ್ತು ಇತರ ಕ್ರಿಯೆಗಳು.ಹಣ್ಣು ಕಾಯಿ, ಬೇಟೆಯ ವಸ್ತು, ಕಳವಿನ ವಸ್ತು ಮುಂತಾದುವು ದೈವಕ್ಕೆ ಅರ್ಪಿತವಾಗುವ ವಸ್ತುಗಳು. ನಾನಾರೀತಿಯ ನೃತ್ಯಗಳೂ ಆಚರಣೆಗೆ ಸಂಬಂಧಿಸಿದಂತೆ ನಡೆಯಬಹುದು. ಭೂತನೃತ್ಯ, ಸೋಮನಕುಣಿತ, ಪಕ್ಷಿ ಕುಣಿತ, ರಂಗದ ಕುಣಿತ, ವೀರಗಾಸೆ ಕುಣಿತ. ಲಿಂಗದವೀರರ ಕುಣಿತ, ಗುಡ್ಡರ ಕುಣಿತ ಗೊರವರ ಕುಣಿತ, ಪೂಜಾಕುಣಿತ, ಕರಗಕುಣಿತ-ಇವೆಲ್ಲವೂ ಈ ದೃಷ್ಟಿಯಿಂದ ಗಮನಾರ್ಹ ನೃತ್ಯಗಳು.

ಮಾಟ, ಮೋಡಿಗಳು ಸಾಮಾನ್ಯವಾಗಿ ವಿರೋಧಿಗಳನ್ನು ದೃಷ್ಟಿಯಲ್ಲಿಟ್ಟು ನಡೆಸುವ ಆಚರಣೆಗಳು. ಅನೇಕ ಸಂದರ್ಭಗಳಲ್ಲಿ ಮಾಟ ತಿರುಗಿ ಮನೆ ಹಾಳಾದ ಪ್ರಸಂಗಗಳೂ ಇವೆ. ಮಾಟವನ್ನು ಮುರಿಯುವ ಆಚರಣೆಗಳೂ ವಿಶೇಷವಾಗಿವೆ. ಅನಾರೋಗ್ಯ ಆಕಸ್ಮಿಕಮರಣಗಳಿಗೂ ಸಂಬಂಧಿಸಿದಂತೆ ಆಚರಣೆಗಳಿವೆ. ಅನೇಕ ರೋಗಗಳ ರೂಪದಲ್ಲಿ ಕೆಲವು ದೇವತೆಗಳು ಕಾಣಿಸಿಕೊಳ್ಳಬಹುದು. ರೋಗಗಳನ್ನು ತರುವ ಬಗೆ ಮೂರು ತೆರನಾಗಿದೆ.

1 ರೋಗಿಯಿಂದಲೊ, ಅವನ ಬಂಧುವಿನಿಂದಲೊ ಏನೋ ತಪ್ಪು ನಡಾವಳಿಯಾಗಿರಬೇಕು. 2 ಎರಡನೆಯ ವ್ಯಕ್ತಿ ತಾನೇ ದುಷ್ಟಶಕ್ತಿಗಳನ್ನು ಹರಿಯ ಬಿಟ್ಟಿರಬಹುದು. 3 ಇನ್ನಾವುದೋ ಶಕ್ತಿಯ ಕೈವಾಡವಿರಬಹುದು. ಹರಕೆಯನ್ನೊ ಪೂಜೆಯನ್ನೊ ನಿಲ್ಲಿಸಿರಬಹುದು. ಇಂಥ ಸಂದರ್ಭಗಳಲ್ಲಿ ದೇವತೆಗಳನ್ನು ಬಿಡಿಸಿಕೊಳ್ಳಲು, ಅವರನ್ನು ಸಂತೃಪ್ತಿಗೊಳಿಸಲು ಅನೇಕ ಆಚರಣೆಗಳಿವೆ. ಪ್ಲೇಗಿನಮಾರಿ, ಕಾಲರಾಮಾರಿ, ಸಿಡುಬಿನ ಮಾರಿಯರಿಗೂ ಆಚರಣೆಗಳು ಹುಟ್ಟಿಕೊಂಡಿವೆ.

ಕ್ಷಾಮಡಾಮರಗಳನ್ನು ನಿವಾರಿಸಿಕೊಳ್ಳಲು ಗಡಿಯಿಂದ ಗಡಿಗೆ ಸಾಗಿರುವ ಬರಗಲ್ಲು ಊರಿನ ಕೊಳೆ ಕಸವನ್ನೆಲ್ಲ ದೂರ ಸಾಗಿಸಲು ಉಡುಗೋಲಜ್ಜಿ-ಹೀಗೆ ಅನೇಕ ಬಗೆಯ ಆಚರಣೆಯನ್ನು ಗುರುತಿಸಬಹುದು.

ಮನೆಕಟ್ಟುವಿಕೆ, ವ್ಯಾಪಾರ, ವ್ಯವಸಾಯ ಮುಂತಾದುವುಗಳಿಗೆ ಅಡಚಣೆಗಳು ಬರದಂತೆ ಅನೇಕ ಆಚರಣೆಗಳನ್ನು ನಡೆಸುತ್ತಾರೆ. ಆರ್ಥಿಕಹಿನ್ನೆಲೆಯ ಆಚರಣೆಗಳೆಂದು ಪರಿಗಣಿಸಲ್ಪಡುವ ಅಪಾರ ಸಂಖ್ಯೆಯ ಕ್ರಿಯೆಗಳು ಈಗಲೂ ಜೀವಂತವಾಗಿವೆ. ಗೊತ್ತಾದ ದಿವಸಗಳಲ್ಲಿ, ಋತುಗಳಲ್ಲಿ ಬದುಕಿನ ವಿಶಿಷ್ಟ ಘಟ್ಟಗಳಲ್ಲಿ, ರೋಗ, ಭಯ, ಕ್ಷಾಮ ಇತ್ಯಾದಿಗಳ ನಿವಾರಣಾರ್ಥವಾಗಿ, ದೈವಾನುಗ್ರಹಕ್ಕಾಗಿ ನಡೆಯುವ ಆಚರಣೆಗಳ ಶಾಸ್ತ್ರೀಯ ಅಭ್ಯಾಸ ನಾಡಿನಲ್ಲಿ ಇನ್ನೂ ಆಗಬೇಕಾಗಿದೆ. ಹೆಚ್ಚಿನ ವಿವರಗಳಿಗೆ. (ನೋಡಿ- ಆದಿವಾಸಿಗಳು) (ಜೆ.ಎಸ್.ಪಿ.)

ಉಲ್ಲೇಖಗಳು

Tags:

ಆಚರಣೆ ಇತಿಹಾಸಆಚರಣೆ ದೈಹಿಕ ಅವಶ್ಯಕತೆಗಳುಆಚರಣೆ ಯ ವಿವಿಧಗಳುಆಚರಣೆ ಯ ಸಂದರ್ಭದಗಳುಆಚರಣೆ ಉಲ್ಲೇಖಗಳುಆಚರಣೆ

🔥 Trending searches on Wiki ಕನ್ನಡ:

ಹರಪ್ಪಭಾರತದ ಪ್ರಧಾನ ಮಂತ್ರಿಗಳ ಪಟ್ಟಿಗಾದೆಸುಮಲತಾಮೋಡಜೀವಸತ್ವಗಳುಮೊದಲನೇ ಅಮೋಘವರ್ಷಕೊರೋನಾವೈರಸ್ಚಂದನಾ ಅನಂತಕೃಷ್ಣಅರವಿಂದ ಘೋಷ್ಕುದುರೆಮುಖಸರ್ಪ ಸುತ್ತುಹಾಕಿಕರ್ನಾಟಕದಲ್ಲಿ ಪಂಚಾಯತ್ ರಾಜ್ಶಾಲೆಲೋಕದ.ರಾ.ಬೇಂದ್ರೆಹಳೆಗನ್ನಡಕನ್ನಡದಲ್ಲಿ ವಚನ ಸಾಹಿತ್ಯರಾಶಿಗೋಳನೈಸರ್ಗಿಕ ವಿಕೋಪವಾಲಿಬಾಲ್ಮಳೆಗಾಲದಕ್ಷಿಣ ಭಾರತದ ನದಿಗಳುಕಾನೂನುರಾಷ್ಟ್ರೀಯ ಸೇವಾ ಯೋಜನೆವಿವರಣೆಮಂಡ್ಯಯೋಗ ಮತ್ತು ಅಧ್ಯಾತ್ಮಹಾಗಲಕಾಯಿಸಮಾಜ ವಿಜ್ಞಾನರಷ್ಯಾಸಾರಾ ಅಬೂಬಕ್ಕರ್ಪನಾಮ ಕಾಲುವೆಸೂರ್ಯ ಗ್ರಹಣಜವಹರ್ ನವೋದಯ ವಿದ್ಯಾಲಯಚಂದ್ರಾ ನಾಯ್ಡುಆರ್ಥಿಕ ಬೆಳೆವಣಿಗೆನಾಗಚಂದ್ರಮಹೇಶ್ವರ (ಚಲನಚಿತ್ರ)ಮೀರಾಬಾಯಿಭಾರತದ ಮಾನವ ಹಕ್ಕುಗಳುಹರಿಹರ (ಕವಿ)ಪ್ರೀತಿಭಾರತದ ಮುಖ್ಯ ನ್ಯಾಯಾಧೀಶರುಗುರುರಾಜ ಕರಜಗಿಪ್ರಜಾಪ್ರಭುತ್ವಸಂಯುಕ್ತ ಕರ್ನಾಟಕಗೃಹರಕ್ಷಕ ದಳಭಾರತದ ತ್ರಿವರ್ಣ ಧ್ವಜಶರಣಬಸವೇಶ್ವರ ದೇವಸ್ಥಾನ ಕಲಬುರಗಿಡಿ.ಆರ್. ನಾಗರಾಜ್ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕರ್ನಾಟಕದ ಹಬ್ಬಗಳುಜಾತಿಕಲಾವಿದಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಹೋಲೋಕಾಸ್ಟ್ಮಹಮದ್ ಬಿನ್ ತುಘಲಕ್ತಾಳಗುಂದ ಶಾಸನನಿರ್ವಹಣೆ ಪರಿಚಯಭಾರತದಲ್ಲಿ ಮೀಸಲಾತಿಜಾತ್ರೆಅಲಂಕಾರದುಂಬಿಕೈಗಾರಿಕೆಗಳುಪ್ರವಾಸಿಗರ ತಾಣವಾದ ಕರ್ನಾಟಕಆ ನಲುಗುರು (ಚಲನಚಿತ್ರ)ಬಡತನಯುಗಾದಿಸಂಸ್ಕಾರಪ್ರಲೋಭನೆಹಲ್ಮಿಡಿವಚನಕಾರರ ಅಂಕಿತ ನಾಮಗಳುಇಮ್ಮಡಿ ಪುಲಕೇಶಿ🡆 More