ಪಂಢರಪುರ

ಪಂಢರಪುರ (ಮರಾಠಿ: पंढरपूर) ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯಲ್ಲಿ ಭೀಮಾ ನದಿಯ ತಟದಲ್ಲಿರುವ ಒಂದು ಪ್ರಮುಖ ಹಿಂದೂ ಪವಿತ್ರ ಸ್ಥಾನ.

ಪಂಢರಪುರದಲ್ಲಿ ಭೀಮಾ ನದಿಯು ಅರ್ಧಚಂದ್ರಾಕಅರದಲ್ಲಿ ಹರಿಯುವುದರಿಂದ ಅದನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರೆ. ಇಲ್ಲಿರುವ ವಿಠ್ಠಲನ ದೇವಾಲಯ ಆಶಾಢ ಮಾಸದಲ್ಲಿ ನಡೆಯುವ ಯಾತ್ರೆಯಲ್ಲಿ ಸುಮಾರು ೫ ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.

Pandharpur
पंढरपूर
City
The chief gate of Vithoba's temple
The chief gate of Vithoba's temple
Nickname(s): 
Pandhari, Pandaripuram
Countryಪಂಢರಪುರ India
Stateಮಹಾರಾಷ್ಟ್ರ
Districtಸೊಲ್ಲಾಪುರ
Government
 • TypeCity
Area
 • Total೨೫ km (೧೦ sq mi)
 • Rank9
Elevation
೪೫೮ m (೧,೫೦೩ ft)
Languages
 • Officialಕನ್ನಡ ಮರಾಠಿ
Time zoneUTC+5:30 (IST)
ಪಂಢರಪುರ
ಪಂಢರಪುರ
city
Population
 (೨೦೦೧)
 • Total೯೧,೩೮೧

ಇತಿಹಾಸ

ಪಂಢರಪುರ - ಒಂದು ಪ್ರಾಚೀನ ತೀರ್ಥಕ್ಷೇತ್ರ. ವಿಟ್ಠಲ ಅಥವಾ ಪಾಂಡುರಂಗ ಇಲ್ಲಿನ ಅಧಿದೇವತೆ. ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯಲ್ಲಿ ಭೀಮಾನದಿಯ ದಡದಲ್ಲಿದೆ. ಸೋಲಾಪುರದಿಂದ ಸುಮಾರು 64 ಕಿ.ಮೀ. ಕುರ್ಡವಾಡಿ ರೈಲ್ವೆ ನಿಲ್ದಾಣದಿಂದ ಸುಮಾರು 52 ಕಿ.ಮೀ. ಗಳ ಅಂತರದಲ್ಲಿ ಮೀರಜ್-ಕುರ್ಡವಾಡಿ ರೈಲುಮಾರ್ಗದಲ್ಲಿದೆ. ಪಂಡರಪೂರ, ಫಂಡರಿ, ಪಾಂಡುರಂಗಪುರ, ಪಂಢರೀಪುರ, ಫಾಗನೀಪುರ, ಪಂಡರಂಗೆ, ಪಂಡರಗೆ, ಪಾಂಡೊರಂಗಪಲ್ಲಿ, ಪಂಡರಂಗಪಲ್ಲಿ, ಪಂಡರಾದ್ರಿ, ಪಾಂಡರೀಕಕ್ಷೇತ್ರ ಮುಂತಾಗಿ ಇದಕ್ಕೆ ಅನೇಕ ರೂಪಗಳಿವೆ. ಪಂಡರಂಗೆ ಎಂಬುದೇ ಕನ್ನಡ ಶಬ್ದವೆಂದು ಕೆಲವರ ಮತ. ಆದರೆ ಪಂಡರಾದ್ರಿ ರಂಗ ಪಾಂಡುರಾದ್ರೀರಂಗ ಎಂಬುದು ಬಿಳಿಗಿರಿರಂಗ ಎಂಬುದರ ಸಂಸ್ಕøತ ರೂಪವಾಗಿದ್ದು ಆ ಶಬ್ದ ಆಕುಂಚನಗೊಂಡು ಪಾಂಡುರಂಗ ಆಯಿತೆಂದು ಒಂದು ಅಭಿಪ್ರಾಯ. ಪಾಂಡುರಂಗನಪುರವೇ ಫಂಡರಪುರ ಎಂದಾಯಿತು ಎಂದು ಆರ್.ಜಿ. ಭಂಡಾರ್ಕರ್ ಈ ಶಬ್ದದ ವ್ಯುತ್ಪತ್ತಿಯನ್ನು ಹೇಳಿದ್ದಾರೆ.

ಪಂಢರಪುರ ಸಹ್ಯಾದ್ರಿಯ ಒಂದು ಶ್ರೇಣಿ ಮಹದೇವಗಿರಿಯಿಂದ ಪೂರ್ವದಲ್ಲಿದೆ. ಭೀಮಾನದಿಯನ್ನು ಇಲ್ಲಿ ಚಂದ್ರಭಾಗಾ, ಭಿವರಾ ಎಂದು ಮುಂತಾಗಿ ಹೇಳುತ್ತಾರೆ. ನದಿ ಅರ್ಧಚಂದ್ರಾಕೃತಿಯಲ್ಲಿ ಹರಿದಿರುವುದರಿಂದ ಚಂದ್ರಭಾಗಾ ಎಂದು ಹೆಸರನ್ನು ಪಡೆದಿದೆ. ಈ ನದಿಗೆ ಇಲ್ಲಿ ಕೆಲ ಉಪನದಿಗಳು ಬಂದು ಸೇರಿ ಕೆಲವು ಸಂಗಮಗಳಾಗಿವೆ. ಪಂಢರಪುರ ಕ್ಷೇತ್ರಮಹಾತ್ಮ್ಯೆ ಪಂಢರೀಮಹಾತ್ಮ್ಯಂ ಎಂದು ಸಂಸ್ಕøತದಲ್ಲಿದೆ. ಅದನ್ನು ಸ್ಕಾಂದಪುರಾಣಾಂತರ್ಗತವೆನ್ನಲಾಗಿದೆ. ಅದರ ಪ್ರಕಾರ ಭೀಮಾತೀರದಲ್ಲಿ ಪ್ರಸಿದ್ಧ ಪೌಂಡರೀಕ ಕ್ಷೇತ್ರವಿದೆ. ಅಲ್ಲಿಯ ಅಧಿದೇವತೆ ಪಾಂಡುರಂಗನೆಂಬ ದೇವತೋತ್ತಮ. ಆ ನಗರ ಅರ್ಧಯೋಜನ ಉದ್ದ ಹಾಗೂ ಕಾಲುಯೋಜನ ಅಗಲ ಅಳತೆಯನ್ನು ಹೊಂದಿದೆ.

ದ್ವಾರಗಳು

ಪಂಢರಪುರಕ್ಕೆ ನಾಲ್ಕು ದ್ವಾರಗಳು : ಭೀಮಾ ಹಾಗೂ ಶಿಶುಮಾಲಾನದಿಗಳ ಸಂಗಮಸ್ಥಾನದಲ್ಲಿ ಪೂರ್ವದ್ವಾರ; ಅಲ್ಲಿ ಸಂಧ್ಯಾವಳಿ ದೇವಿಯ ಸನ್ನಿಧಿ; ಮಾನಸೂರದಲ್ಲಿ ದಕ್ಷಿಣದ್ವಾರ; ಅಲ್ಲಿ ಸಿದ್ಧೇಶ್ವರನ ದೇವಸ್ಥಾನ. ಭೀಮಾ ಹಾಗೂ ಪುಷ್ಪವತಿ ನದಿಗಳ ಸಂಗಮ ಸ್ಥಾನದಲ್ಲಿ ಪಶ್ಚಿಮದ್ವಾರ; ಅಲ್ಲಿ ಭುವನೇಶ್ವರಿಯ ಅಧಿಷ್ಠಾನ. ಭೀಮಾ ಹಾಗೂ ಭರಣೀ ನದಿಯ ಸಂಗಮಸ್ಥಾನದಲ್ಲಿ ಉತ್ತರದ್ವಾರ; ಅಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ. ಈ ಊರಿನಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಮುಖ್ಯವಾದವು :

ವಿಟ್ಠಲ ಮಂದಿರ

ಊರಿನ ಮಧ್ಯದಲ್ಲಿದೆ. ಇದರ ಮಹಾದ್ವಾರ ಪೂರ್ವಾಭಿಮುಖವಾಗಿದೆ. 350 ಪೂರ್ವಪಶ್ಚಿಮ ಮತ್ತು 170 ದಕ್ಷಿಣೋತ್ತರ ಇದರ ವಿಸ್ತಾರ. ಮಹಾದ್ವಾರವನ್ನು ನಾಮದೇವದ್ವಾರವೆಂದೂ ಹೇಳಲಾಗುತ್ತದೆ. ನಾಮದೇವ ಇಲ್ಲಿ ಸಮಾಧಿಸ್ಥನಾದುದರಿಂದ ಇದಕ್ಕೆ ಈ ಹೆಸರು. ನಾಮದೇವನ ಪಾದಗಳೂ ಇಲ್ಲಿವೆ. ಸಮಾಧಿಯ ಹತ್ತಿರ ಒಂದು ವಟವೃಕ್ಷ ಅದರ ಪಕ್ಕದಲ್ಲಿ ಮೂವತ್ತುಮೂರು ಕೋಟಿ ದೇವತೆಗಳ ಮಂದಿರ. ಅದಾದ ಮೇಲೆ ಮುಕ್ತಿಮಂಟಪ. ಇದು ಒಂದು ದೊಡ್ಡ ಮಂಟಪ; ಕಮಾನುಗಳಿವೆ. ಮಂಟಪದ ಹತ್ತಿರ ಗಣಪತಿಯ ಮೂರ್ತಿಯಿದೆ. ಕೆಲವರ ಹೇಳಿಕೆಯ ಪ್ರಕಾರ ಪ್ರಾಚೀನ ಕಾಲದಲ್ಲಿ ವಿಟ್ಠಲನ ಮೂರ್ತಿ ಈ ಗಣಪತಿಯ ಹತ್ತಿರವೇ ಇದ್ದಿತಂತೆ. ಸದ್ಯ ಇಲ್ಲಿ ನಗಾರಖಾನೆಯಿದೆ. ಇಲ್ಲಿಂದ ಅನತಿದೂರದಲ್ಲೆ ಒಂದು ಕಲ್ಲುಹಾಸಿಗೆಯ ಮಂಟಪ, ಅದರ ಪಕ್ಕದಲ್ಲೇ ಸಂತ ಪ್ರಹ್ಲಾದಬುವಾ ಬಡವೆ ಹಾಗೂ ಕಾನೋಬಾ ಇವರ ಸಮಾಧಿಗಳಿವೆ. ಇವುಗಳಿಗೆ ಹತ್ತಿರದಲ್ಲಿ ಎರಡು ದೀಪಮಾಲೆ, ಗರುಡ ಮತ್ತು ಸಂತರಾಮದಾಸರು ಸ್ಥಾಪಿಸಿದ ಮಾರುತಿಯ ಮೂರ್ತಿಯಿದೆ. ಇದಾದ ಮೇಲೆ 16 ಕಂಬದ ಮಂಟಪ; ಇದಕ್ಕೆ ಮೂರುಬಾಗಿಲುಗಳು; ಮಧ್ಯದ ಬಾಗಿಲಿಗೆ ಹಿತ್ತಾಳೆಯ ಚೌಕಟ್ಟು. ಈ ಮಂಟಪದಲ್ಲಿನ ಕಂಬಗಳ ಮೇಲೆ ಕೃಷ್ಣಲೀಲೆಯನ್ನೂ ದಶಾವತಾರದ ಚಿತ್ರಗಳನ್ನೂ ಕಮನೀಯವಾಗಿ ಕೊರೆದಿದ್ದಾರೆ. ಈ ಮಂಟಪದಲ್ಲಿ ಬೆಳ್ಳಿಯ ರೇಕನ್ನು ಕುಂದಣಿಸಿದ ಕಂಬವೊಂದಿದೆ. ಇದನ್ನು ಗರುಡಕಂಬವೆಂದೂ ಪುರಂದರದಾಸರ ಕಂಬವೆಂದೂ ಹೇಳುತ್ತಾರೆ. ಈ ಕಂಬವನ್ನು ಆಲಂಗಿಸಿದ ಅನಂತರವೇ ವಿಟ್ಠಲನ ದರ್ಶನ. ಈ ಮಂಟಪದಲ್ಲೇ ಪಾಂಡುರಂಗ ಬಾದಶಹನಿಗೆ ದಾಮಾಜಿಪಂತನ ವಿನಂತಿಯ ಮೇರೆಗೆ ಮಹಾರ್‍ನ (ಚಂಡಾಲ) ವೇಷದಲ್ಲಿ ದರ್ಶನವಿತ್ತ ಸ್ಮರಣಾರ್ಥವಾಗಿ ಎರಡು ಪಾದುಕೆಗಳಿವೆ.

ಮಂಟಪ

ತರುವಾಯ ಒಂದು ಚೌಖಂಬಾ ಮಂಟಪ. ಇದರ ದಕ್ಷಿಣದಲ್ಲಿ ಹಸ್ತಿದ್ವಾರ. ಇಲ್ಲಿ ಎರಡು ದೊಡ್ಡ ಕಲ್ಲಾನೆಗಳಿವೆ. ಈ ಮಂಟಪದ ಪಕ್ಕದಲ್ಲಿ ಪಾಂಡುರಂಗಶಯ್ಯಾಗೃಹ. ಇಲ್ಲಿ ರೂಪಾಯಿಗಳನ್ನು ಕೀಲಿಸಿಕಟ್ಟಿದ ಮಂಚವಿದೆ. ಚೌಖಂಬಾ ಮಂಟಪದ ತರುವಾಯ ಒಂದು ಕಮಾನು. ಅದಕ್ಕೆ ಆತುಕೊಂಡು ಗರ್ಭಗೃಹ. ಇಲ್ಲಿನ ಭಿತ್ತಿಯನ್ನೂ ಬಾಗಿಲನ್ನೂ ಬೆಳ್ಳಿಯ ರೇಕಿನಿಂದ ಅಲಂಕರಿಸಿದ್ದಾರೆ. ಬಾಗಿಲು ದಾಟಿದ ಕೂಡಲೆ ಇಟ್ಟಗಿಯ ಮೇಲ ನಿಂತಿದ್ದಾನೆ, ವಿಠೋಭ. ಮೂರ್ತಿಯನ್ನು ದಕ್ಷಣಾಪಥದ ಬಸಾಲ್ವ್ ಶಿಲೆಯಲ್ಲಿ ಕೆತ್ತಿದೆ. ಮೂರ್ತಿ ಬಹು ಸುಂದರ, ಆಕರ್ಷಣೀಯ. ಶಿಲ್ಪಶಾಸ್ತ್ರದ ಅತ್ಯಂತ ನಿಷ್ಠುರ ನಿಬಂಧಗಳು ಇದಕ್ಕಿಲ್ಲ. 1884ರಲ್ಲಿ ಪ್ರಕಟವಾದ ಸೋಲಾಪುರ ಜಿಲ್ಲೆಯ ಗೆಜೆಟಿಯರಿನಲ್ಲಿ ಭಗವಾನ್‍ಲಾಲ್ ಇಂದ್ರಾಜಿ ಈ ಮೂರ್ತಿ ಗುಪ್ತರ ಕಾಲದ್ದೆಂದು ವಿವರಿಸಿದ್ದಾರೆ. ಮೂರ್ತಿ ಎರಡೂ ಕೈಗಳನ್ನು ಟೊಂಕಕ್ಕೆ ಆನಿಸಿಕೊಂಡಿದೆ. ಎಡಗೈಯಲ್ಲಿ ಶಂಖ ಹಾಗೂ ಬಲಗೈಯಲ್ಲಿ ನಾಳಸಮೇತ ಪದ್ಮ ಕಂಗೊಳಿಸುತ್ತವೆ. ಪಾದಗಳಲ್ಲಿ ಛಿದ್ರಗಳಿದ್ದು ಅವುಗಳಲ್ಲಿ ಭಕ್ತರು ಸಾಯುಜ್ಯ ಪದವಿಯನ್ನು ಪಡೆಯುತ್ತಾರೆಂದು, ಹಿಂದೆ ಭಕ್ತರು ಪಡೆದಿದ್ದಾರೆಂದು, ಅರ್ಚಕರು ವಿವರಿಸುತ್ತಾರೆ. ಮುಕ್ತಾಬಾಯಿ (ಸಂತ ಜ್ಞಾನೇಶ್ವರನ ಸೋದರಿ) ತನ್ನ ಸೌಂದರ್ಯಕ್ಕಿಂತಲೂ ವಿಟ್ಠಲನ ಮೂರ್ತಿಯ ಸೌಂದರ್ಯ ಹಿರಿದು ಎಂದು ಶರಣು ಹೋದಳಂತೆ. ಮೂರ್ತಿಯಂತೆ ದೇವಾಲಯದ ಶಿಖರವೂ ನಾಗರಶೈಲಿಯಲ್ಲಿದ್ದು ಮನೋಜ್ಞವಾಗಿದೆ.

ವಿಠ್ಠಲನ ಮುಂದಿನ 16 ಕಂಬದ ಮಂಟಪವನ್ನು ದಾಟಿದ ಕೂಡಲೆ ದಕ್ಷಿಣದಲ್ಲಿ ಅಂಬಾಬಾಯಿ, ನಾರದ, ಪರಶುರಾಮ, ಬಲಸೊಂಡೆ ಹಾಗೂ ಎಡಸೊಂಡೆಯ ಗಣಪತಿಗಳು ಹಾಗೂ ವೆಂಕಟೇಶನ ಮಂದಿರಗಳಿವೆ. ಮಂದಿರದ ಆಚೆ ಬಾಜಿರಾಯನ ಓವರಿಯಿದೆ. ಇದರ ಎದುರಿನಲ್ಲೇ ಲಕ್ಷ್ಮಿಯ ಮಂದಿರ, ಇಲ್ಲಿ ಸೂರ್ಯ, ಗಣಪತಿ, ಖಂಡೋಬ (ಮೈಲಾರ) ಮತ್ತು ನಾಗರಾಜ- ಇತ್ಯಾದಿ ಪ್ರತಿಮೆಗಳಿವೆ.

ಮಂದಿರಗಳು

ರುಕ್ಮಿಣೀ ಮಂದಿರ : ಗರ್ಭಗೃಹ, ಮಧ್ಯಗೃಹ, ಮುಖ್ಯಮಂಟಪ ಮತ್ತು ಸಭಾಮಂಟಪ — ಎಂದು ನಾಲ್ಕು ಭಾಗಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ರುಕ್ಮಿಣಿಯ ಮೂರ್ತಿ ಪೂರ್ವಾಭಿಮುಖವಾಗಿ ನಿಂತಿದೆ. ಈ ಮಂದಿರದಲ್ಲೆ ಸತ್ಯಭಾಮೆಗೂ ಒಂದು ಸಣ್ಣ ಮಂದಿರವಿದೆ. ಈ ಮಂದಿರದ ಅನಂತರದಲ್ಲಿ ಕಾಶೀ ವಿಶ್ವನಾಥ, ರಾಮಲಕ್ಷ್ಮಣ, ಕಾಲಭೈರವ, ರಾಮೇಶ್ವರಲಿಂಗ, ದತ್ತ ಮತ್ತು ನರಸೋಬಾ ಮಂದಿರಗಳಿವೆ. ಇಲ್ಲಿಂದ 16 ಕಂಬದ ಮಂಟಪಕ್ಕೆ ಹೋಗಲು ಒಂದು ಪ್ರತ್ಯೇಕ ದ್ವಾರವಿದೆ. ಇಲ್ಲಿಯೆ 84 ಲಕ್ಷ ಯೋನಿಗಳಿಂದ ಮುಕ್ತಗೊಳಿಸುವ ಪ್ರಸಿದ್ಧ ಶಿಲಾಲೇಖವಿದೆ. ಜನರ ಹಸ್ತ ಸ್ಪರ್ಶನದಿಂದ ಕಲ್ಲುಸವೆದು ನುಣಪಾಗಿದೆ; ಶಾಸನಸ್ಥ ವಿಷಯ ಅಳಿಸಿ ಮಾಯವಾಗಿಹೋಗಿದೆ.

ವಿಟ್ಠಲ ಹಾಗು ರುಕ್ಮಿಣೀ ಮಂದಿರಗಳಲ್ಲಿ ನಿತ್ಯ ಹಾಗೂ ನೈಮ್ತಿತ್ತಿಕ ಎಂಬ ಎರಡು ಬಗೆಯ ಪೂಜಾವಿಧಾನಗಳಿವೆ. ನವರಾತ್ರಿ, ದೀಪಾವಳಿ, ಯುಗಾದಿಯ ಹಬ್ಬಗಳಲ್ಲಿ ವಿಶೇಷ ಆಭರಣಗಳ ಅಲಂಕಾರವೂ ನಡೆಯುತ್ತದೆ.

ಪುಂಡಲೀಕ ಮಂದಿರ : ಇಲ್ಲಿ ಪುಂಡಲೀಕ, ತುಕಾರಾಮನ ವಂಶಜ ಬಾಹುಸಾಹೆಬ್ ದೇಹೂಕರ್, ಗೋವಿಂದ ಬುವಾ ಅಮಳನೇರ್‍ಕರ್, ಗೋವಿದಂಬುವಾ ಚೋಪಡೇಕರ್, ಭಾನುದಾಸ ಮಹಾರಾಜ ವೇಲಾಪುರಕರ್ ಮೊದಲಾದವರ ಸಮಾಧಿಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಇದರ ಮೇಲೆ ಪುಂಡಲೀಕನ ಮುಖವಾಡವನ್ನು ಇಟ್ಟಿರುತ್ತಾರೆ. ಇಲ್ಲಿ ಸುಮಾರು ಹನ್ನೊಂದು ಘಾಟ್‍ಗಳನ್ನು ಕಟ್ಟಿಸಿದ್ದಾರೆ. ಪುಂಡಲೀಕನ ಮಂದಿರದ ಎದುರಿನಲ್ಲಿ ನಿತ್ಯಾನಂದ ಪ್ರಭುವಿನ ಸಮಾಧಿಯಿದೆ. ಅದರಿಂದ ಕಿಂಚಿತ್ ದೂರದಲ್ಲಿ ಮಾಧ್ವಸಂಪ್ರದಾಯದವರ ಮಠವಿದೆ.

ವಿಷ್ಣು ಪದ : ಪುಂಡಲೀಕಮಂದಿರದಿಂದ ಸುಮಾರು 1ಮೈಲಿಯ ಅಂತರದಲ್ಲಿದೆ. ಇಲ್ಲಿ ಶ್ರೀಕೃಷ್ಣ ಪುಂಡಲೀಕನ ಜೊತೆ ಬಂದಿದ್ದು ಭೋಜನ ಮಾಡಿದುದಾಗಿಯೂ ಗೋವುಗಳನ್ನು ಮೇಯಿಸಿದುದಾಗಿಯೂ ಹೇಳುತ್ತಾರೆ.

ಗೋಪಾಲಪುರ : ಇಲ್ಲೊಂದು ಗೋಪಾಲಕೃಷ್ಣನ ದೇವಸ್ಥಾನವಿದೆ. ಇಲ್ಲಿಯ ವೇಣುಗೊಪಾಲನ ಮೂರ್ತಿ ಬಹುಸುಂದರವಾಗಿದೆ. ಈ ದೇವಾಲಯ ಪುಷ್ಪವತೀ ತೀರದಲ್ಲಿದೆ. ಕಾರ್ತೀಕಮಾಸದಲ್ಲಿ ಇಲ್ಲಿ ಜಾತ್ರೆ ಆಗುತ್ತದೆ. ಇಲ್ಲಿಯೇ ಭೀಮಕರಾಜನ ದೇವಗೃಹ ಹಾಗೂ ಜನಾಬಾಯಿಯ ಗುಹೆಗಳಿರುವುದು.

ಪದ್ಮತೀರ್ಥ : ಪದ್ಮಾವತಿಯ ದೇವಸ್ಥಾನವಿದೆ. ನಾಮದೇವ ಜ್ಞಾನೇಶ್ವರನನ್ನು ಭೇಟಿಯಾದದ್ದು ಇಲ್ಲಿಯೆಂದು ವದಂತಿ. ಪಾಂಡುರಂಗ ಅವರಿಬ್ಬರ ಕೈಯನ್ನೂ ಇಲ್ಲಿ ಕೂಡಿಸಿದುದಾಗಿ ಒಂದು ಅಭಂಗವಿದೆ.

ದಿಂಡೀರವನ : ಪಾಂಡುರಂಗ ಹಾಗೂ ರುಕ್ಮಿಣಿಯರ ಪ್ರೇಮಕಲಹ ಹಾಗೂ ಸಂಗಮಗಳ ಒಂದು ಪೌರಾಣಿಕ ಕಥೆಯನ್ನು ಈ ಕ್ಷೇತ್ರ ಸೂಚಿಸುತ್ತದೆ. ಇಲ್ಲಿ ಜನಾಬಾಯಿ ಗೋವುಗಳನ್ನು ಸಾಕಿದ್ದಳೆಂದೂ ಹೇಳುತ್ತಾರೆ.

ವ್ಯಾಸನಾರಾಯಣನ ಮಂದಿರ : ದಿಂಡೀರವನದಿಂದ ಸ್ವಲ್ಪ ಉತ್ತರಕ್ಕೆ ಹೋದರೆ ಈ ಮಂದಿರ ದೊರೆಯುತ್ತದೆ. ಇದನ್ನು ಜ್ಯೋತಿಪಂತ ದಾದಾ ಮಹಾಭಾಗವತ ಕಟ್ಟಿಸಿದ್ದಾನೆ. ಇಲ್ಲಿ ಭಾಗವತ ಪಾರಾಯಣ ಮಾಡುತ್ತಿದ್ದರಂತೆ.

ಕುಂಡಲತೀರ್ಥ : ದೈತ್ಯರೊಂದಿಗೆ ವಿಷ್ಣು ಯುದ್ಧ ಮಾಡುವ ಪ್ರಸಂಗದಲ್ಲಿ ಇಲ್ಲಿ ತನ್ನ ಕರ್ಣಕುಂಡಲಗಳನ್ನು ಕಳಚಿ ಇಟ್ಟುದೇ ಇದಕ್ಕೆ ಈ ಹೆಸರು ಬರಲು ಕಾರಣವಾಯಿತಂತೆ. ಇಲ್ಲಿ ನೃಸಿಂಹ ಮಂದಿರವೊಂದಿದೆ.

ವಾರಕಾರಿ

ಪೂರ್ವದಲ್ಲಿ ಪಂಢರಪುರದ ತೀರ್ಥಯಾತ್ರೆಯನ್ನು ವಾರಕಾರಿ ಎಂಬ ಭಕ್ತ ಜನಾಂಗ ಮಾಡಿಸುತ್ತಿತ್ತು. ಇಲ್ಲಿನ ಜಾತ್ರೆ ಬೃಹತ್ ಪ್ರಮಾಣದಲ್ಲಿ ಆಷಾಢ ಹಾಗೂ ಕಾರ್ತೀಕ ಮಾಸಗಳಲ್ಲಿ ನಡೆಯುತ್ತದೆ. ಆ ಸಂದರ್ಭದಲ್ಲಿ ಇಲ್ಲಿ ಸರ್ವ ಹಿಂದೂ ಜಾತಿಗಳ ಭಕ್ತಜನ ಸೇರುತ್ತಾರೆ. ಅಂತೆಯೆ ಇದೊಂದು ಸಮನ್ವಯಕ್ಷೇತ್ರವಾಗಿ ರಾರಾಜಿಸುತ್ತದೆ. ವಿಟ್ಠಲನ ಭಕ್ತರಲ್ಲೂ ಅನೇಕ ಜಾತಿಯವರಿದ್ದಾರೆ. ಮರಾಠೀ ಕನ್ನಡ ಮುಂತಾಗಿ ಹಲವು ಭಾಷೆಗಳ ಭಕ್ತರ ಸಂಗಮವನ್ನು ಇಲ್ಲಿ ಕಾಣಬಹುದು. ಜ್ಞಾನೇಶ್ವರ, ನಿವೃತ್ತಿನಾಥ, ತುಕಾರಾಮ, ನಾಮದೇವ, ರಾಮದಾಸ ಮುಂತಾದ ಮಹಾರಾಷ್ಟ್ರದ ಸಂತರು ಶ್ರೀಪಾದರಾಯರು, ವ್ಯಾಸರಾಯರು, ವಾದಿರಾಜಸ್ವಾಮಿಗಳು, ಪುರಂದರದಾಸರು, ವಿಜಯದಾಸರು, ಜಗನ್ನಾಥದಾಸರು ಮುಂತಾಗಿ ಕರ್ನಾಟಕದ ಭಕ್ತಶಿರೋಮಣಿಗಳೂ ಚೌಂಡರಸ ಮೊದಲಾದ ಕೆಲ ಕವಿಗಳೂ ವಿಟ್ಠಲನ ಉಪಾಸಕರು. ಚಾಂಡರದ ತನ್ನೆರಡೂ ಕೃತಿಗಳಲ್ಲಿ (ಅಭಿನವ ದಶಕುಮಾರ ಚರಿತೆ, ನಳಚಂಪೂ) ಅಭಂಗವಿಟ್ಠಲನನ್ನು ಆರಾಧ್ಯದೈವವೆಂದು ಸ್ತುತಿಮಾಡಿದ್ದಾನೆ. ತನ್ನನ್ನು ಪ್ರಸನ್ನ ಶ್ರೀಮದಭಂಗವಿಟ್ಠಲ ಪದಾಂಭೋಜ ಮತ್ತಮಧುಕರ ಎಂದೂ ಹೇಳಿಕೊಂಡಿದ್ದಾನೆ. ಕರ್ನಾಟಕದ ದಾಸಸಾಹಿತ್ಯದ ಮೂಲಸೆಲೆ ಈ ಅಭಂಗವಿಟ್ಠಲ.

ಭಕ್ತಿಸಂಪ್ರದಾಯ

ಪಂಢರಪುರ, ಮಹಾರಾಷ್ಟ್ರದಲ್ಲಿ ಭಕ್ತಿಸಂಪ್ರದಾಯದ ಆದ್ಯಪೀಠವೆನಿಸಿದೆ. ಇದರ ಅತಿಪ್ರಾಚೀನ ಉಲ್ಲೇಖ ಮಾನಪುರದ ರಾಷ್ಟ್ರಕೂಟ ಅರಸು ಮನೆತನದ 6ನೆಯ ಶತಮಾನದ ಅವಿಧೇಯನ ಪಾಂಡುರಂಗಪಲ್ಲಿ ದತ್ತಿ ಶಾಸನದಲ್ಲಿ ಬಂದಿದೆ. ಈ ಶಾಸನದಲ್ಲಿ ವಸುಧಾಧಿಪತಿ ರಙ್ಗ ಎಂಬ ಆರಂಭದ ಸ್ವಸ್ತಿವಾಕ್ಯ 15ನೆಯ ಪಂಕ್ತಿಯಲ್ಲಿ ಬಂದಿರುವ ಜಯದ್ವಿಟ್ಠ, 19ನೆಯ ಪಂಕ್ತಿಯಲ್ಲಿ ಬಂದಿರುವ ಪಾಂಡೊರಂಗಪಲ್ಲಿ ಮತ್ತು 29ನೆಯ ಪಂಕ್ತಿಯಲ್ಲಿ ಬಂದಿರುವ ಪಂಡರಾದ್ರೀಶೇನ ಎಂಬ ಶಬ್ದಗಳು ಗಮನಾರ್ಹ. 1189ರ ಶಿಲಾಲೇಖವೊಂದರಲ್ಲಿ ಮಂದಿರಕ್ಕೆ ಪೀಡೆ ಕೊಡುವವರಿಗೆ ಹಾಗೆ ಕೊಡದಂತೆ ವಿಟ್ಠಲನ ಆಣೆ ಇಟ್ಟಿದೆ.

1236ರ ಹೊಯ್ಸಳ ಸೋಮೇಶ್ವರನ ಶಾಸನದಲ್ಲಿ ಭೀಮರಥೀ ನದೀತೀರ ಸಂನಿವಿಷ್ಟ ಪಂಡರಗೆ ನಾಮಾನಂ ಮಹಾಗ್ರಾಮ ಮಧಿವಸತೇ ಪುಂಡರೀಕ ಮನಃಕುಮುದ ವಿಕಸ ಸುಧಾಕರಾಯ ಭಗವತೇ ಶ್ರೀ ವಿಟ್ಠಲದೇವಾಲಯ ಹಿರಿಯಗರಂಜ ಸಂಜ್ಞಕ ಮಹಾಗ್ರಹಾರವನ್ನು ದತ್ತಿಬಿಟ್ಟುದಾಗಿ ಬರೆದಿದೆ. ಈ ಶಾಸನ, ಕನ್ನಡ ಹಾಗೂ ಸಂಸ್ಕತ ಎರಡೂ ಭಾಷೆಗಳಲ್ಲಿದೆ. 1273ರ ದೇವಗಿರಿಯ ಯಾದವ ಚಕ್ರವರ್ತಿ ರಾಮಚಂದ್ರನ ಶಾಸನವೊಂದರಲ್ಲಿ ಆತನೂ ಆತನ ಕರಣಾಧಿಪ ಹೇಮಾದ್ರಿಪಂಡಿತನೂ ದೇವರ ದರ್ಶನ ತೆಗೆದುಕೊಂಡು ದೇವಸ್ಥಾನದ ಪೂಜೆ ಪುರಸ್ಕಾರಗಳಿಗಾಗಿ ವ್ಯವಸ್ಥೆಮಾಡಿದುದಾಗಿ ಬರೆದಿದೆ. ವಿಟ್ಠಲ ಮಂದಿರದ ಬಳಿಯಲ್ಲಿರುವ ಚೋಖಾಮೇಳನ ಸಮಾಧಿಯ ಹತ್ತಿರವಿರುವ 1311ರ ಶಾಸನದಲ್ಲಿ ಪಂಢರೀಪುರ, ವಿಟ್ಠಲ ಹಾಗೂ ವಿಠಲಗಳ ಉಲ್ಲೇಖವಿದೆ. ವಿಜಯನಗರ, ವ್ಮರಾಠಾ, ಮುಸಲ್ಮಾನ ಮೊದಲಾದ ಅರಸುಮನೆತನಗಳ ಸಂಬಂಧವೂ ಈ ದೇವಸ್ಥಾನಕ್ಕಿದ್ದುದು ಕಂಡುಬರುತ್ತದೆ. ಇತಿಹಾಸದಲ್ಲಿ ವಿಷ್ಣು ಎಂಬ ಪದ ವಿಟ್ಠಲ, ವಿಠಲ ಆದುದು ಸ್ಪಷ್ಟವಿದೆ. ಪಂಢರಪುರ ಭಾಗವತ ಧರ್ಮದ ಅನಾದಿಕಾಲದ ಒಂದು ಕೇಂದ್ರವೆಂಬುದೂ ಅಷ್ಟೇ ನಿಚ್ಚಳವಾಗಿದೆ.

Tags:

ಪಂಢರಪುರ ಇತಿಹಾಸಪಂಢರಪುರ ದ್ವಾರಗಳುಪಂಢರಪುರ ವಿಟ್ಠಲ ಮಂದಿರಪಂಢರಪುರ ಮಂಟಪಪಂಢರಪುರ ಮಂದಿರಗಳುಪಂಢರಪುರ ವಾರಕಾರಿಪಂಢರಪುರ ಭಕ್ತಿಸಂಪ್ರದಾಯಪಂಢರಪುರಆಶಾಢಭೀಮಾಭೀಮಾ ನದಿಮರಾಠಿಮಹಾರಾಷ್ಟ್ರವಿಠ್ಠಲಸೊಲ್ಲಾಪುರ

🔥 Trending searches on Wiki ಕನ್ನಡ:

ಐಹೊಳೆಬ್ರಿಟಿಷ್ ಆಡಳಿತದ ಇತಿಹಾಸಅ. ರಾ. ಮಿತ್ರಪಂಪಪೂರ್ಣಚಂದ್ರ ತೇಜಸ್ವಿಜಯದೇವಿತಾಯಿ ಲಿಗಾಡೆಹಿಮಾಲಯಕರ್ನಾಟಕದ ಜಾನಪದ ಕಲೆಗಳುಚಂದ್ರಶೇಖರ ಕಂಬಾರವಿಜಯನಗರ ಸಾಮ್ರಾಜ್ಯಮೈಸೂರು ಅರಮನೆಜಯಂತ ಕಾಯ್ಕಿಣಿಸೋನು ಗೌಡಶಿವನ ಸಮುದ್ರ ಜಲಪಾತರಾಣಿ ಅಬ್ಬಕ್ಕರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಶುಕ್ರಕರ್ನಾಟಕ ಸ್ವಾತಂತ್ರ್ಯ ಚಳವಳಿಸುಭಾಷ್ ಚಂದ್ರ ಬೋಸ್ಗುರುರಾಜ ಕರಜಗಿವ್ಯಾಸರಾಯರುಸಾಮವೇದಭಾರತದಲ್ಲಿ ಪರಮಾಣು ವಿದ್ಯುತ್ಅವಾಹಕವಂದನಾ ಶಿವಭಾರತದ ಸ್ವಾತಂತ್ರ್ಯ ದಿನಾಚರಣೆಕುರುಬಬಾಗಲಕೋಟೆಭರತ-ಬಾಹುಬಲಿಗೋವಹಿಪ್ಪಲಿಭಾವಗೀತೆಕನ್ನಡದ ಉಪಭಾಷೆಗಳುಯಶವಂತರಾಯಗೌಡ ಪಾಟೀಲಶೂದ್ರ ತಪಸ್ವಿತೋಟಕರ್ನಾಟಕದ ತಾಲೂಕುಗಳುಏಕಲವ್ಯರತ್ನತ್ರಯರುಶ್ರೀಪಾದರಾಜರುಯೂಟ್ಯೂಬ್‌ಭಾರತೀಯ ಮೂಲಭೂತ ಹಕ್ಕುಗಳುಕನಕದಾಸರುಶಾಂತಕವಿಅಂಬರ್ ಕೋಟೆರಂಜಾನ್ದೆಹಲಿ ಸುಲ್ತಾನರುಬಸವರಾಜ ಬೊಮ್ಮಾಯಿಕ್ರಿಕೆಟ್ವಿವರಣೆಭಾರತದ ಸಂಯುಕ್ತ ಪದ್ಧತಿಏಣಗಿ ಬಾಳಪ್ಪಬಂಡಾಯ ಸಾಹಿತ್ಯಕಲ್ಯಾಣ ಕರ್ನಾಟಕಸ್ವಾಮಿ ವಿವೇಕಾನಂದಸೂಪರ್ (ಚಲನಚಿತ್ರ)ಮಂಡಲ ಹಾವುಸುಧಾ ಮೂರ್ತಿಮೂಲಭೂತ ಕರ್ತವ್ಯಗಳುಹನುಮಾನ್ ಚಾಲೀಸಚಿಪ್ಕೊ ಚಳುವಳಿಮೊದಲನೆಯ ಕೆಂಪೇಗೌಡಮೇರಿ ಕೋಮ್1935ರ ಭಾರತ ಸರ್ಕಾರ ಕಾಯಿದೆಚಾಮುಂಡರಾಯಇರುವುದೊಂದೇ ಭೂಮಿಭಾರತದ ಇತಿಹಾಸಮುಹಮ್ಮದ್ವಿವಾಹರತ್ನಾಕರ ವರ್ಣಿಕರಗದಿಕ್ಕುನಾಗರಹಾವು (ಚಲನಚಿತ್ರ ೧೯೭೨)ಶ್ರೀ ರಾಮ ನವಮಿಕಲ್ಯಾಣಿವಿಧಾನ ಸಭೆಬ್ಯಾಬಿಲೋನ್ಮಾಲಿನ್ಯ🡆 More