೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ

೧೯೮೪ರ ಸಿಖ್ ಹತ್ಯಾಕಾಂಡ, ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ತನ್ನ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾಗಿದ್ದಕ್ಕೆ ಪ್ರತಿಕಾರವಾಗಿ, ಭಾರತದಲ್ಲಿ ಸಿಖ್ಖರ ವಿರುದ್ಧ ನಡೆದ ಸಂಘಟಿತ ಹತ್ಯಾಕಾಂಡಗಳ ಸರಣಿಯಾಗಿದೆ.

ಅಂದಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಈ ಹತ್ಯಾಕಾಂಡದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿತ್ತು ಎಂಬ ಆರೋಪವಿದೆ. ಸರ್ಕಾರಿ ಮೂಲಗಳ ಅಂದಾಜಿನ ಪ್ರಕಾರ, ದೆಹಲಿಯಲ್ಲಿ ಸುಮಾರು ೨೮೦೦ ಮಂದಿ ಮತ್ತು ರಾಷ್ಟ್ರವ್ಯಾಪಿ ೩೩೫೦ ಮಂದಿ ಸಿಖ್ಖರು ಪ್ರಾಣ ಕಳೆದುಕೊಡರು. ಸ್ವತಂತ್ರ ಮೂಲಗಳಿಂದ ಸಿಕ್ಕ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ ಸುಮಾರು ೮೦೦೦ದಿಂದ ೧೭೦೦೦ ಮಂದಿ ತಮ್ಮ ಪ್ರಾಣ ಕಳೆದುಕೊಂಡರು.

೧೯೮೪ರ ಸಿಖ್ ಹತ್ಯಾಕಾಂಡ
ದಿನಾಂಕ೩೧ನೇ ಅಕ್ಟೋಬರ್ - ೩ನೇ ನವಂಬರ್
ಸ್ಥಳಪಂಜಾಬ್, ದೆಹಲಿ ಮತ್ತು ದೇಶದ ಇತರ ಭಾಗಗಳು
ಕಾರಣಗಳುಇಂದಿರಾಗಾಂಧಿಯವರ ಹತ್ಯೆ
ವಿಧಾನಗಳುಸಂಘಟಿತ ಹತ್ಯಾಕಾಂಡ, ಸಾಮೂಹಿಕ ಹತ್ಯೆ, ಅತ್ಯಾಚಾರ, ಆಸ್ತಿಪಾಸ್ತಿ ಹಾನಿ
Casualties
ಸಾವು(ಗಳು)೩೩೫೦(ಸರಕಾರಿ ವರದಿ), ೮೦೦೦-೧೭೦೦೦(ಸ್ವತಂತ್ರ ಮೂಲಗಳ ಪ್ರಕಾರ)

ಹಿನ್ನೆಲೆ

  • ಹತ್ಯಾಕಾಂಡಕ್ಕೆ ತತ್‌ಕ್ಷಣದ ಕಾರಣ

ಪ್ರತ್ಯೇಕತಾವಾದಕ್ಕೆ ಅನುವು ಮಾಡಿಕೊಡುತ್ತದೆ ಎಂದು ಪರಿಗಣಿಸಿ, ರಾಜ್ಯ ಸರ್ಕಾರವು ಆನಂದಪುರ ಸಾಹೀಬ್ ನಿರ್ಣಯವನ್ನು ತಿರಸ್ಕರಿಸಿದ್ದೂ ಅಲ್ಲದೆ, ಸಿಖ್ ಪ್ರತ್ಯೇಕತಾವಾದಿಗಳನ್ನು ಗುರುದ್ವಾರದ ಸಂಕೀರ್ಣದಿಂದ ಹೊರದಬ್ಬಲು ಕೇಂದ್ರದ ಕಾಂಗ್ರೇಸ್ ಸರಕಾರವು ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಬೇಕಾಯಿತು. ಇದರಿಂದಾಗಿ ಗುರುದ್ವಾರಕ್ಕೆ ಹೆಚ್ಚಿನ ಹಾನಿ ಆಗುವುದರ ಜೊತೆಗೆ, ಸಿಖ್ಖರ ಧಾರ್ಮಿಕ ಭಾವನೆಗಳಿಗೂ ತೀವ್ರವಾದ ಘಾಸಿ ಉಂಟಾಯಿತು. ನಿರ್ಣಯ ತಿರಸ್ಕೃತವಾಗಿದ್ದು ಮತ್ತು ತಮ್ಮ ಧಾರ್ಮಿಕ ಕೇಂದ್ರದ ಮೇಲೆ ಸರ್ಕಾರವು ನಡೆಸಿದ ಮಿಲಿಟರಿ ಕಾರ್ಯಾಚರಣೆ- ಈ ಎರಡು ವಿಷಯಗಳಿಗೆ ಸಂಬಂಧಿಸಿ ಸಿಖ್ಖ್ ಜನಸಮುದಾಯದ ಮನಸಿನಲ್ಲಿ ಇದ್ದ ಆಕ್ರೋಶ ಸಿಖ್ ಅಂಗರಕ್ಷಕರು ಪ್ರಧಾನಿ ಇಂದಿರಾಗಾಂಧಿಯವರನ್ನು ಹತ್ಯೆಗೈಯ್ಯುವ ಮೂಲಕ ಪ್ರಕಟವಾಯಿತು.

  • ದೀರ್ಘಕಾಲೀನ ಹಿನ್ನೆಲೆ

೧೯೭೨ರಲ್ಲಿ ಪಂಜಾಬ್ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತು ಮತ್ತು ಅಕಾಲಿದಳ ಪಕ್ಷ ಸೋಲನ್ನು ಅನುಭವಿಸಿತು. ೧೯೭೩ರಲ್ಲಿ, ಅಕಾಲಿದಳವು ಪಂಜಾಬ್‌ಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಸಲುವಾಗಿ ಆನಂದಪುರ ಸಾಹಿಬ್ ನಿರ್ಣಯವನ್ನು ಮಂಡಿಸಿತು. ಮತ್ತು ಅಧಿಕಾರವನ್ನು ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಹಂಚಬೇಕು ಎಂದು ಅದು ಒತ್ತಾಯಿಸಿತು. ಆದರೆ ಕಾಂಗ್ರೆಸ್ ಸರ್ಕಾರವು, ಈ ನಿರ್ಣಯವು ಪ್ರತ್ಯೇಕತಾವಾದಕ್ಕೆ ಅನುವು ಮಾಡಿಕೊಡುತ್ತದೆ ಎಂದು ಪರಿಗಣಿಸಿ ನಿರ್ಣಯವನ್ನು ತಿರಸ್ಕರಿಸಿತು.

ಆಗಸ್ಟ್ ೧೯೮೨ರಲ್ಲಿ, ಹರ್‌ಚರಣ್ ಸಿಂಗ್ ಲೋಂಗೋವಾಲ್ ಅವರ ನೇತೃತ್ವದಲ್ಲಿ, ಅಕಾಲಿದಳವು ಆನಂದಪುರ ಸಾಹಿಬ್ ನಿರ್ಣಯದ ಮುಖಾಂತರ ಪಂಜಾಬ್‌ಗೆ ಹೆಚ್ಚಿನ ಸ್ವಾಯತ್ತತೆಯನ್ನು ತರುವ ಸಲುವಾಗಿ, ಧರಂ ಯುಧ್ ಮೋರ್ಚಾ ಅನ್ನು ಪ್ರಾರಂಭಿಸಿತು. ಈ ಮಧ್ಯೆ ಅಕಾಲಿದಳದೊಂದಿಗೆ ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆಯೂ ಸೇರಿಕೊಂಡ. ಮೊದಲಿನಿಂದಲೂ ಭಿಂದ್ರಾನ್‍ವಾಲೆಗೆ ಅಕಾಲಿದಳದ ಬಗ್ಗೆ ಅಷ್ಟೆನೂ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಆದಾಗ್ಯೂ, ಭಿಂದ್ರನ್‍ವಾಲೆ ಹೆಚ್ಚು ಪ್ರಭಾವಶಾಲಿಯಾಗುತ್ತಿದ್ದಂತೆ, ಪಕ್ಷವು ಒಲ್ಲದ ಮನಸಿನಿಂದ ಭಿಂದ್ರನ್‍ವಾಲೆ ಮತ್ತು ಆತನ ಸಂಗಡಿಗರನ್ನು ಸೇರಿಸಿಕೊಳ್ಳಲು ನಿರ್ಧರಿಸಿತು. ಇದರೊದಿಗೆ ಭಿಂದ್ರನ್‍ವಾಲೆ ಸಿಖ್ ರಾಜಕೀಯ ವಲಯದಲ್ಲಿ ಪ್ರಾಮುಖ್ಯತೆ ಪಡೆದನು. ಅಕಾಲಿದಳದ ಹೆಚ್ಚಿನ ಸದಸ್ಯರು ಪಂಜಾಬಿಗೆ ಸ್ವಾಯತ್ತತೆ ಕೊಡುವ ಬಗ್ಗೆ ಯೋಚಿಸುತ್ತಿದ್ದರೆ, ಭಿಂದ್ರನ್‍ವಾಲೆ ಉಗ್ರವಾದದ ಮೂಲಕ ಪ್ರತ್ಯೇಕ ಖಲಿಸ್ಥಾನ್ ರಾಷ್ಟ್ರವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿದ್ದ!

೧೯೮೦ರ ಸುಮಾರಿಗೆ ಜರ್ನೈಲ್‌ಸಿಂಗ್ ಭಿಂದ್ರನ್‌ವಾಲೆ ತನ್ನ ಉಗ್ರವಾದಿ ಪ್ರತಿಪಾದನೆಯಿಂದ ಸಾಕಷ್ಟು ಪ್ರಚಲಿತಕ್ಕೆ ಬಂದಿದ್ದ. ಖಲಿಸ್ತಾನದ ಹೆಸರಿನಲ್ಲಿ ಹೋರಾಟವನ್ನು ಪ್ರಾರಂಭಿಸಿ ಸ್ಥಳೀಯ ಯುವಕರ ಕಣ್ಮಣಿಯಾಗಿದ್ದ. ಅಲ್ಲದೆ ಪಂಜಾಬಿನಲ್ಲಿ ಪ್ರತ್ಯೇಕತಾವಾದಿಗಳ ಗುಂಪನ್ನು ಕಟ್ಟಿಕೊಂಡು, ಹಿಂದೂಗಳಿಂದ ಸಿಖ್ ಸಮುದಾಯದ ಮೇಲಾಗುವ ಸಾಮಾಜಿಕ ಆಕ್ರಮಣದ ಬಗ್ಗೆ ಭಿಂದ್ರನ್‌ವಾಲೆ ಪ್ರಚೋದಿತ ಭಾಷಣಗಳನ್ನು ಮಾಡಿ, ಸಿಖ್ ಸಮುದಾಯವನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುತ್ತಿದ್ದ.

ಗಲಭೆ

೧೯೮೩ರ ಹೊತ್ತಿಗೆ ಪಂಜಾಬ್‌ನಲ್ಲಿ ಪರಿಸ್ಥಿತಿ ಮಿತಿಮೀರಿತ್ತು. ಅಕ್ಟೋಬರ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ಗುಂಪು ಬಸ್ ಒಂದನ್ನು ನಿಲ್ಲಿಸಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಹಿಂದೂ ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದರು. ಅದೇ ದಿನ, ಸಿಖ್ ಪ್ರತ್ಯೇಕತಾವಾದಿಗಳ ಮತ್ತೊಂದು ಗುಂಪು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸರಕಾರಿ ಅಧಿಕಾರಿಗಳನ್ನು ಕೊಂದುಹಾಕಿತು. ಆಪರೇಷನ್ ಬ್ಲೂಸ್ಟಾರ್‌ ಕಾರ್ಯಾಚರಣೆ(ಸ್ವರ್ಣಮಂದಿರ ಸಂಕೀರ್ಣದಲ್ಲಿ ಅಡಗಿದ್ದ ಶಸ್ತ್ರಸಜ್ಜಿತ ಸಿಖ್ ಪ್ರತ್ಯೇಕತಾವಾದಿಗಳನ್ನು ಕಿತ್ತೊಗೆಯಲು ನಡೆಸಿದ ಮಿಲಿಟರಿ ಕಾರ್ಯಾಚರಣೆ) ನಡೆಯುವ ಐದು ತಿಂಗಳ ಮೊದಲು, ಅಂದರೆ ೧೯೮೪ರ ಜನವರಿ ೧ರಿಂದ ಜೂನ್ ೩ರವರೆಗೆ, ಪಂಜಾಬ್‌ನಾದ್ಯಂತ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ೨೯೮ ಮಂದಿ ಸಾವನ್ನಪ್ಪಿದ್ದರು. ಇದಲ್ಲದೆ, ಧರಂ ಯುಧ್ ಮೋರ್ಚಾದ ಆರಂಭದಿಂದ ಹಿಡಿದು, ಆಪರೇಷನ್ ಬ್ಲೂಸ್ಟಾರ್‌ ಕಾರ್ಯಾಚರಣೆ ನಡೆದ ದಿನದ ನಡುವೆ ಒಟ್ಟು ೧೬೫ ಮಂದಿ ಹಿಂದೂಗಳು ಮತ್ತು ಭಿಂದ್ರನ್‌ವಾಲೆಯ ಉಗ್ರವಾದವನ್ನು ವಿರೋಧಿಸಿದ ೩೯ ಮಂದಿ ಸಿಖ್ಖರೂ ಸಾವನ್ನಪ್ಪಿದ್ದರು. ಈ ಮಧ್ಯೆ ಪೋಲೀಸರಿಂದ ತಪ್ಪಿಸಿಕೊಳ್ಳಲು, ಭಿಂದ್ರನ್‌ವಾಲೆ ತನ್ನ ಉಗ್ರಗಾಮಿ ಕಾರ್ಯಕರ್ತರೊಂದಿಗೆ ಸ್ವರ್ಣಮಂದಿರ ಸಂಕೀರ್ಣದ ಒಳಗಿದ್ದ ಸಿಖ್ ದೇವಾಲಯ ಅಕಾಲ್‌ತಖ್ತ್ ಅನ್ನು ಆಕ್ರಮಿಸಿಕೊಂಡನು. ಬೇರೆ ದಾರಿ ಕಾಣದೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಪಂಜಾಬ್ ರಾಜ್ಯಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಹೇರಿತು.

ಮಿಲಿಟರಿ ಕಾರ್ಯಾಚರಣೆ

ಸ್ವರ್ಣಮಂದಿರ ಸಂಕೀರ್ಣದಲ್ಲಿ ಅಡಗಿದ್ದ ಶಸ್ತ್ರಸಜ್ಜಿತ ಭಿಂದ್ರನ್‌ವಾಲೆ ಮತ್ತು ಉಗ್ರರ ಗುಂಪನ್ನು ಅಲ್ಲಿಂದ ಕಿತ್ತೊಗೆಯಲು ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚಾರಣೆಯನ್ನು ನಡೆಸಲು ಕೇಂದ್ರವು ಅನುಮತಿ ನೀಡಿತು. ಉಗ್ರರೊಂದಿಗಿನ ಮಾತುಕತೆ ವಿಫಲವಾದ ನಂತರ ೧ ಜೂನ್ ೧೯೮೪ರಂದು, ಪ್ರಧಾನಿ ಇಂದಿರಾಗಾಂಧಿ ಆಪರೇಷನ್ ಬ್ಲೂಸ್ಟಾರ್ ಅನ್ನು ಪ್ರಾರಂಭಿಸಲು ಸೈನ್ಯಕ್ಕೆ ಆದೇಶಿಸಿದರು. ೩ನೇ ಜೂನ್ ೧೯೮೪ರಂದು ಸೇನೆಯ ವಿವಿಧ ಘಟಕಗಳು ಮತ್ತು ಅರೆಸೈನಿಕ ಪಡೆಗಳು ದೇವಾಲಯದ ಸಂಕೀರ್ಣವನ್ನು ಸುತ್ತುವರಿದವು. ಉಗ್ರರು ತಾವಾಗಿ ಶರಣಾಗುವಂತೆ ಸೈನ್ಯವು ಧ್ವನಿವರ್ಧಕದ ಮೂಲಕ ತಿಳಿಸಿತು. ಅಲ್ಲದೆ ಮಂದಿರದೊಳಗೆ ಸಿಕ್ಕಿಬಿದ್ದಿರುವ ಯಾತ್ರಾರ್ಥಿಗಳನ್ನು ಬಿಡುಗಡೆ ಮಾಡುವಂತೆಯೂ ತಿಳಿಸಲಾಯಿತು. ಜೂನ್ ೫ರ ಸಂಜೆ ೭ರವರೆಗೂ ಯಾರೂ ಶರಣಾಗಲಿಲ್ಲ ಮತ್ತು ಒಳಗೆ ಸಿಕ್ಕಿಬಿದ್ದಿದ್ದ ಯಾತ್ರಾರ್ಥಿಗಳನ್ನು ಬಿಡುಗಡೆಗೊಳಿಸಲೂ ಇಲ್ಲ. ಬೇರೆ ದಾರಿ ಕಾಣದೆ ಸೈನ್ಯವು ಸಶಸ್ತ್ರ ಕಾರ್ಯಾಚರಣೆಯನ್ನು ಆರಂಭಿಸಲೇಬೇಕಾಯಿತು. ಜೂನ್ ೧ರಿಂದ ಜೂನ್ ೮ರವರೆಗೆ ಈ ಕಾರ್ಯಾಚರಣೆ ನಡೆಯಿತು. ಮಂದಿರದೊಳಗೆ ಅಡಗಿದ್ದ ಭಿಂದ್ರನ್‌ವಾಲೆ ಜೂನ್ ೬ರಂದು ತೀರಿಕೊಂಡನು.

ಸೈನ್ಯದ ಮೂಲಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ೮೯ ಮಂದಿ ಮಂದಿ ಸಾವನ್ನಪ್ಪಿದರು ಮತ್ತು ೨೪೯ ಮಂದಿ ಗಾಯಗೊಂಡರು. ಸರಕಾರದ ಅಧೀಕೃತ ಮಾಹಿತಿಗಳ ಪ್ರಕಾರ, ೧೫೯೨ ಮಂದಿ ಸಿಖ್ ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಯಿತು. ಮಂದಿರದ ಒಳಗಿದ್ದ ಯಾತ್ರಾರ್ಥಿಗಳು ಮತ್ತು ಉಗ್ರರು ಸೇರಿ ಒಟ್ಟು ೪೯೩ರಷ್ಟು ಮಂದಿ ಸಾವಿಗೀಡಾದರು. ದೇವಾಲಯದೊಳಗೆ ಸಿಕ್ಕಿಬಿದ್ದ ಯಾತ್ರಾರ್ಥಿಗಳನ್ನು ಉಗ್ರರು ಮಾನವ ಗುರಾಣಿಗಳಾಗಿ ಬಳಸಿದ್ದರಿಂದ ಕೆಲವು ಯಾತ್ರಾರ್ಥಿಗಳೂ ಸಹ ಸಾವನ್ನಪ್ಪಬೇಕಾಯಿತು.

ಇಂದಿರಾ ಗಾಂಧಿ ಅವರ ಹತ್ಯೆ

ಮಂದಿರದಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯು ಪ್ರತ್ಯೇಕತಾವಾದಿಗಳು ಮಾತ್ರವಲ್ಲ, ಖಲಿಸ್ತಾನ ಚಳುವಳಿಯಿಂದ ಅಂತರ ಕಾಪಾಡಿಕೊಂಡಿದ್ದ ಇತರ ಸಿಖ್ಖರಲ್ಲಿಯೂ ಆಕ್ರೋಶ ಹೆಚ್ಚಲು ಕಾರಣವಾಯಿತು. ಮತ್ತು ಖಲಿಸ್ತಾನ್ ಚಳವಳಿಗೆ ಮತ್ತಷ್ಟು ಬೆಂಬಲವನ್ನು ನೀಡಲು ಪ್ರೇರೇಪಿಸಿತು. ಮಿಲಿಟರಿ ಕಾರ್ಯಾಚರಣೆಯು ನಡೆದ ನಾಲ್ಕು ತಿಂಗಳ ನಂತರ, ಅಕ್ಟೋಬರ್ ೩೧, ೧೯೮೪ರಂದು, ಇಂದಿರಾ ಗಾಂಧಿಯವರನ್ನು ಅವರ ಇಬ್ಬರು ಸಿಖ್ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬೀಯಾಂತ್ ಸಿಂಗ್ ಹತ್ಯೆ ಮಾಡಿದರು. ಬೀಯಾಂತ್ ಸಿಂಗ್‌ನನ್ನು ಗಾಂಧಿಯ ಇತರ ಅಂಗರಕ್ಷಕರು ಸ್ಥಳದಲ್ಲೇ ಗುಂಡು ಹಾರಿಸಿ ಕೊಂದರು. ಸತ್ವಂತ್ ಸಿಂಗ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ಕೊನೆಗೆ ಮರಣದಂಡನೆ ವಿಧಿಸಲಾಯಿತು.

ಸಿಖ್ ವಿರೋಧೀ ಗಲಭೆ

ಇಂದಿರಾಗಾಂಧಿಯವರ ಹತ್ಯೆ ನಡೆದ ಮರುದಿನ ಸಿಖ್ ವಿರೋಧಿ ಗಲಭೆಗಳು ಭುಗಿಲೆದ್ದು ದೆಹಲಿಯ ಹಲವು ಪ್ರದೇಶಗಳಿಗೆ ವ್ಯಾಪಿಸಿತು. ನವದೆಹಲಿಯಲ್ಲಿಯೇ ೩೦೦೦ಕ್ಕೂ ಹೆಚ್ಚು ಸಿಖ್ಖರನ್ನು ಕೊಲ್ಲಲಾಯಿತು. ದೆಹಲಿಯ ಸುಲ್ತಾನ್‍ಪುರಿ, ಮಂಗೋಲ್‍ಪುರಿ, ತ್ರಿಲೋಕ್‌ಪುರಿ ಮತ್ತು ಪೂರ್ವ ದೆಹಲಿಯ ಪ್ರದೇಶಗಳು ಗಲಭೆಯ ದಳ್ಳುರಿಗೆ ಬಲಿಯಾಗಬೇಕಾಯಿತು. ಭಾರತದ ವಿವಿಧ ೪೦ ನಗರಗಳಲ್ಲಿನ ಅಂದಾಜು ೮೦೦೦- ೧೭೦೦೦ ಅಥವಾ ಅದಕ್ಕಿಂತ ಹೆಚ್ಚಿನ ಸಿಖ್ ಸಮುದಾಯದ ಜನರನ್ನು ಹುಡುಕಿ ಹುಡುಕಿ ಕೊಲ್ಲಲಾಯಿತು. ಕನಿಷ್ಠ ೫೦೦೦೦ ಸಿಖ್ಖರನ್ನು ಸ್ಥಳಾಂತರಿಸಲಾಯಿತು.

ಅಕ್ಟೋಬರ್ ೩೧ರ(ಇಂದಿರಾ ಹತ್ಯೆ ನಡೆದ ದಿನ) ರಾತ್ರಿ ಮತ್ತು ಮಾರನೆಯ ನವೆಂಬರ್ ೧ರ ಬೆಳಿಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಸಿಖ್ ವಿರೋಧಿ ಗಲಭೆಗಳನ್ನು ನಡೆಸಲು ಸ್ಥಳೀಯ ಬೆಂಬಲಿಗರನ್ನು ಭೇಟಿಯಾಗಿ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ವಿತರಿಸಿದರು. ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್(ಸಧ್ಯ ಜೈಲುವಾಸಿ) ಮತ್ತು ಆಗಿನ ಟ್ರೇಡ್ ಯೂನಿಯನ್ ಮುಖಂಡ ಲಲಿತ್ ಮಾಕೆನ್ ಹಣ ಮತ್ತು ಮದ್ಯದ ಬಾಟಲಿಗಳನ್ನು ಹಲ್ಲೆಕೋರರಿಗೆ ನೀಡಿದರು. ಸಿಖ್ಖರ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಸಲುವಾಗಿ ಸೀಮೆಎಣ್ಣೆಯನ್ನು ಪೂರೈಸಲಾಯಿತು. ಸೀಮೆಎಣ್ಣೆ ಮಾರುವ ಅಂಗಡಿಗಳ ಮಾಲಿಕರಾಗಿದ್ದ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಈ ದುಷ್ಕೃತ್ಯಕ್ಕೆ ಸಹಾಯ ಮಾಡಿದರು. ದುಷ್ಕರ್ಮಿಗಳು ಕಬ್ಬಿಣದ ಸರಳುಗಳು, ಚಾಕುಗಳು, ದೊಣ್ಣೆಗಳೊಂದಿಗೆ ಮತ್ತು ದಹನಕಾರಿ ವಸ್ತುಗಳಾದ ಸೀಮೆಎಣ್ಣೆ ಮತ್ತು ಪೆಟ್ರೋಲ್ ಡಬ್ಬಿಗಳನ್ನು ಹಿಡಿದುಕೊಂಡು ನೆರೆಹೊರೆಯ ಸಿಖ್ ಕುಟುಂಬಗಳಿರುವ ಮನೆಗಳನ್ನು ಪ್ರವೇಶಿಸಿ, ಸಿಖ್ಖರನ್ನು ಮನೆಯಿಂದ ಹೊರಗೆಳೆದು ನಿರ್ದಾಕ್ಷಿಣ್ಯವಾಗಿ ಇರಿದು ಕೊಲ್ಲಲಾರಂಭಿಸಿದರು. ಸಿಖ್ಖರ ಮನೆಗಳಿಗೆ, ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಯಿತು. ಸಂಚರಿಸುತ್ತಿದ್ದ ಬಸ್ಸು ರೈಲುಗಳನ್ನು ನಿಲ್ಲಿಸಿ, ಸಿಖ್ಖರನ್ನು ಹೊರಗೆಳೆದು ಕೊಲ್ಲಲಾರಂಭಿಸಿದರು. ಕೆಲವರನ್ನು ಜೀವಂತವಾಗಿ ದಹಿಸಲಾಯಿತು. ಮನೆಮನೆಗೆ ನುಗ್ಗಿ ಸಿಖ್ ಮಹಿಳೆಯರ ಮೇಲೆ ಮಾನಭಂಗವೆಸಗಲಾಯಿತು. ವಿರೋಧಿಸಲು ಬಂದವರ ಮೇಲೆ ಆಸಿಡ್‌ ಎರಚಲಾಯಿತು.

ನವೆಂಬರ್ ೧ರ ಬೆಳಿಗ್ಗೆ, ಸಜ್ಜನ್‌ಕುಮಾರ್, ದೆಹಲಿಯ ನೆರೆಹೊರೆಗಳಾದ ಪಾಲಂ ಕಾಲೋನಿ, ಕಿರಣ್ ಗಾರ್ಡನ್ಸ್, ಮತ್ತು ಸುಲ್ತಾನಪುರಿ ಮುಂತಾದ ಪ್ರದೇಶಗಳಲ್ಲಿ ರ್‍ಯಾಲಿಯನ್ನು ನಡೆಸಿ ದುಷ್ಕರ್ಮಿಗಳನ್ನು ಸಿಖ್ಖರ ವಿರುದ್ಧ ದಾಳಿ ಎಸಗುವಂತೆ ಪ್ರೇರೇಪಿಸಿದನು. ಗಲಭೆಯ ಕುರಿತಂತೆ ತನಿಖೆ ನಡೆಸಿದ ಕೇಂದ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ "ಒಬ್ಬನೇ ಒಬ್ಬ ಸಿಖ್ ಕೂಡ ಬದುಕಿರಬಾರದು" ಎಂದು ಸಜ್ಜನ್ ಕುಮಾರ್ ದುಷ್ಕರ್ಮಿಗಳಿಗೆ ಅಜ್ಞಾಪಿಸಿದ್ದ!

ಸರಕಾರಿ ದಾಖಲೆಗಳ ದುರುಪಯೋಗ

ಗಲಭೆಕೋರರು ಸಿಖ್ಖರನ್ನು, ಅವರ ಮನೆಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿ, ಶಾಲಾ ನೋಂದಣಿ ದಾಖಲೆಗಳು ಮತ್ತು ಪಡಿತರ ಇಲಾಖೆಯ ದಾಖಲೆಗಳನ್ನು ದಾಳಿಕೋರರಿಗೆ ಪೂರೈಸಿತು ಎಂಬ ಆರೋಪವಿದೆ. ಸ್ವತಃ ಕಾಂಗ್ರೆಸ್‌ ಮುಖಂಡರೇ ಈ ದಾಖಲೆಗಳನ್ನು ಗಲಭೆಕೋರರಿಗೆ ನೀಡಿದರು. ಅಕ್ಟೋಬರ್ ೩೧ರ(ಇಂದಿರಾಗಾಂಧಿ ಹತ್ಯೆ ನಡೆದ ದಿನ) ರಾತ್ರಿ ದುಷ್ಕರ್ಮಿಗಳು ಈ ಸರಕಾರಿ ದಾಖಲೆಗಳ ಸಹಾಯದಿಂದ ಸಿಖ್ಖರ ಮನೆ, ಅಂಗಡಿಗಳನ್ನು ಗುರುತು ಮಾಡಿಟ್ಟುಕೊಂಡರು. ಸಿಖ್ಖರ ಮನೆಬಾಗಿಲಿನ ಮೇಲೆ ದೊಡ್ಡದಾಗಿ X ಎಂದು ಗುರುತಿಸಿದರು.

ಗಲಭೆಯ ನಂತರ

ಸಿಖ್ ಹತ್ಯಾಕಾಂಡ ನಡೆದ ಕೆಲವು ದಿನಗಳ ನಂತರ, ಗಲಭೆಯಿಂದ ಪಾರಾದ ಹಲವು ಸಿಖ್ ಯುವಕರು ತಮ್ಮದೇ ಆದ ಖಲಿಸ್ತಾನ್ ಕಮಾಂಡೋ ಫೋರ್ಸ್ ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್‌ನಂತಹ ಉಗ್ರವಾದಿ ಗುಂಪುಗಳನ್ನು ಕಟ್ಟಿಕೊಂಡರು. ಮರೆತುಹೋದಂತೆ ಇದ್ದ ಖಲಿಸ್ತಾನ್ ಚಳುವಳಿ ಮತ್ತೆ ಮುನ್ನೆಲೆಗೆ ಬಂತು. ಜೊತೆಗೆ ಈ ಸಂಘಟನೆಗಳು, ಸಿಖ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಹಲವಾರು ಕಾಂಗ್ರೆಸ್ ಮುಖಂಡರನ್ನು ಹತ್ಯೆಗೈದರು. ೩೧ನೇ ಜುಲೈ ೧೯೮೫ ರಂದು, ಖಲಿಸ್ತಾನ್ ಕಮಾಂಡೋ ಫೋರ್ಸ್‌ನ ಹರ್ಜಿಂದರ್ ಸಿಂಗ್ ಜಿಂದಾ, ಸುಖದೇವ್ ಸಿಂಗ್ ಸುಖಾ ಮತ್ತು ರಂಜಿತ್ ಸಿಂಗ್ ಗಿಲ್ ಅವರು ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ಲಲಿತ್ ಮಾಕೆನ್‌ ಮತ್ತು ಅರ್ಜುನ್‍ದಾಸ್‌ರನ್ನು ಗಲಭೆಗೆ ಪ್ರತೀಕಾರವಾಗಿ ಹತ್ಯೆ ಮಾಡಿದರು.

ತನಿಖೆ

ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಒಟ್ಟು ೪೫೦ ಮಂದಿ ಗಲಭೆಕೋರರ ಅಪರಾಧ ಸಾಬೀತಾಗಿ, ದೇಶದ ವಿವಿಧ ಭಾಗದಲ್ಲಿನ ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಯಿತು. ಅವರಲ್ಲಿ ೪೯ ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಇತರರಿಗೆ ೩ರಿಂದ ೧೦ ವರ್ಷಗಳ ಜೈಲುವಾಸಕ್ಕೆ ಗುರಿಪಡಿಸಲಾಯಿತು. ಗಲಭೆಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಆರು ಮಂದಿ ದೆಹಲಿ ಪೊಲೀಸ್ ಅಧಿಕಾರಿಗಳನ್ನು ನೌಕರಿಯಿಂದ ವಜಾಗೊಳಿಸಿ ಶಿಕ್ಷೆಗೆ ಗುರಿಪಡಿಸಲಾಯಿತು. ಏಪ್ರಿಲ್ ೨೦೧೩ರಲ್ಲಿ, ತಮ್ಮ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿದ ಮೂರು ಜನರ ಮನವಿಯನ್ನು ಭಾರತದ ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಅದೇ ತಿಂಗಳು ತಿಂಗಳು, ದೆಹಲಿಯ ಕಾರ್ಕಾರ್ದುಮಾ ಜಿಲ್ಲಾ ನ್ಯಾಯಾಲಯವು, ದೆಹಲಿ ಕಂಟೋನ್ಮೆಂಟ್‌ನಲ್ಲಿ ಸಿಖ್ಖರ ವಿರುದ್ಧ ಗಲಭೆಕೋರರನ್ನು ಪ್ರಚೋದಿಸಿದ್ದಕ್ಕಾಗಿ ಬಲ್ವಾನ್ ಖೋಕರ್ (ಮಾಜಿ ಕೌನ್ಸಿಲರ್), ಮಹೇಂದರ್ ಯಾದವ್ (ಮಾಜಿ ಶಾಸಕ), ಕಿಶನ್ ಖೋಕರ್, ಗಿರ್ಧಾರಿ ಲಾಲ್ ಮತ್ತು ಕ್ಯಾಪ್ಟನ್ ಭಾಗ್ಮಲ್ ಎಂಬ ಐದು ಮಂದಿಯನ್ನು ಶಿಕ್ಷೆಗೊಳಪಡಿಸಿತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್‌ನನ್ನು ಖುಲಾಸೆಗೊಳಿಸಿತು.

ಫೆಬ್ರವರಿ ೧೨, ೨೦೧೫ ರಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡವು ಈ ಪ್ರಕರಣವನ್ನು ಮತ್ತೆ ಮರುತನಿಖೆಗೆ ಒಳಪಡಿಸಿತು. ತಂಡವು ತನಿಖೆಯನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿತು. ವಿಶೇಷ ತನಿಖಾ ದಳದ ಮರುತನಿಖೆಯಿಂದಾಗಿ, ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಮೊದಲ ಬಾರಿಗೆ ಇಬ್ಬರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ೧ ನವೆಂಬರ್ ೧೯೮೪ ರಂದು ದೆಹಲಿಯ ಮಹಿಪಾಲಪುರ ಪ್ರದೇಶದಲ್ಲಿ, ೨೪ ವರ್ಷದ ಹರ್ದೇವ್ ಸಿಂಗ್ ಮತ್ತು ೨೬ ವರ್ಷದ ಅವತಾರ್ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳನ್ನು ಕೊಲೆ ಮಾಡಿದ ಆರೋಪದಲ್ಲಿ ಯಶ್ಪಾಲ್ ಸಿಂಗ್ ಎಂಬಾತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಜಯ್ ಪಾಂಡೆ, ಅಪರಾಧ ನಡೆದ ೩೪ ವರ್ಷಗಳ ನಂತರ ನವೆಂಬರ್ ೨೦ರಂದು ತೀರ್ಪು ಪ್ರಕಟಿಸಿದರು. ಪ್ರಕರಣದ ಎರಡನೇ ಅಪರಾಧಿ ನರೇಶ್ ಸೆಹ್ರಾವತ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ೬೮ ವರ್ಷ ವಯಸ್ಸಿನ ಸೆಹ್ರಾವತ್‌ಗೆ ನ್ಯಾಯಾಲಯವು ಶಿಕ್ಷೆಯಲ್ಲಿ ಸ್ವಲ್ಪಮಟ್ಟಿಗೆ ರಿಯಾಯಿತಿಯನ್ನು ನೀಡಿತು. ಅಲ್ಲದೆ, ಈ ಹಿಂದೆ ಸಾಕ್ಷ್ಯಾಧಾರಗಳ ಕೊರತೆಯಿಂದ, ಸ್ಥಳೀಯ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದ ಕಾಂಗ್ರೆಸ್ ಮುಖಂಡ ಸಜ್ಜನ್‌ಕುಮಾರ್‌ನಿಗೆ ಆಜೀವ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಲಾಯಿತು.

ತನಿಖಾ ಆಯೋಗಗಳು

ಸಿಖ್ ವಿರೋಧಿ ಗಲಭೆಯ ತನಿಖೆಗಾಗಿ ಹತ್ತು ಆಯೋಗಗಳು ಅಥವಾ ಸಮಿತಿಗಳನ್ನು ರಚಿಸಲಾಯಿತು. ಅವುಗಳನ್ನು ಕೆಳಗೆ ಕಾಲಾನುಕ್ರಮದಲ್ಲಿ ಪಟ್ಟಿ ಮಾಡಲಾಗಿದೆ. ವಿಚಾರಣೆಯ ನಂತರ ಅನೇಕ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.

  • ಮಾರ್ವಾ ಆಯೋಗ

ಹೆಚ್ಚುವರಿ ಪೊಲೀಸ್ ಆಯುಕ್ತ ವೇದ್ ಮಾರ್ವಾ ಅವರ ಅದ್ಗ್ಯಕ್ಷತೆಯಲ್ಲಿ ಮಾರ್ವಾ ಆಯೋಗವನ್ನು ೧೯೮೪ರ ನವೆಂಬರ್‌ನಲ್ಲಿ ಸ್ಥಾಪಿಸಲಾಯಿತು. ಗಲಭೆಯ ಸಂದರ್ಭದಲ್ಲಿ ಪೊಲೀಸರ ಪಾತ್ರದ ಬಗ್ಗೆ ವಿಚಾರಿಸುವ ಸಲುವಾಗಿ ಈ ಆಯೋಗವನ್ನು ಸ್ಥಾಪಿಸಲಾಯಿತು. ದೆಹಲಿ ಪೊಲೀಸ್ ಅಧಿಕಾರಿಗಳಲ್ಲಿ ಅನೇಕರನ್ನು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ೧೯೮೫ರ ಮಧ್ಯದಲ್ಲಿ ಮಾರ್ವಾ ಆಯೋಗವು ವಿಚಾರಣೆಯನ್ನು ಇನ್ನೇನು ಮುಗಿಸುವ ಹಂತದಲ್ಲಿ ಇದ್ದಾಗ ಕೇಂದ್ರ ಗೃಹ ಸಚಿವಾಲಯವು ವಿಚಾರಣೆಯನ್ನು ನಿಲ್ಲಿಸುವಂತೆ ಮಾರ್ವಾ ಅವರಿಗೆ ನಿರ್ದೇಶನ ನೀಡಿತು. ಅಲ್ಲದೆ, ಆಯೋಗದ ವಿಚಾರಣಾ ದಾಖಲೆಗಳನ್ನು ಸರ್ಕಾರವು ಸ್ವಾಧೀನಪಡಿಸಿಕೊಂಡು ಅದನ್ನು ನಂತರ ಮಿಶ್ರಾ ಆಯೋಗಕ್ಕೆ ವರ್ಗಾಯಿಸಲಾಯಿತು. ಆದಾಗ್ಯೂ, ಪ್ರಮುಖ ಮಾಹಿತಿಯನ್ನು ಒಳಗೊಂಡ, ದಾಖಲೆಯ ಬಹುಮುಖ್ಯ ಭಾಗವಾದ ಶ್ರೀ ವೇದ ಮರ್ವಾ ಅವರ ಕೈಬರಹದ ಟಿಪ್ಪಣಿಗಳನ್ನು ಮಿಶ್ರಾ ಆಯೋಗಕ್ಕೆ ವರ್ಗಾಯಿಸಲಿಲ್ಲ.

  • ಮಿಶ್ರಾ ಆಯೋಗ

ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ರಂಗನಾಥ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಮಿಶ್ರಾ ಆಯೋಗವನ್ನು ರಚಿಸಲಾಯಿತು. ಗಲಭೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಮುಗಿಸಿದ ಮಿಶ್ರಾ ಆಯೋಗವು ಆಗಷ್ಟ್ ೧೯೮೬ರಂದು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ತನ್ನ ವರದಿಯಲ್ಲಿ ಮಿಶ್ರಾ ಆಯೋಗವು ಗಲಭೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯನ್ನು ಗುರುತಿಸುವುದು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿತು. ಈ ವರದಿಯನ್ನು ಸಾರ್ವಜನಿಕರಿಗಾಗಿ ಫೆಬ್ರುವರಿ ೧೯೮೭ರಂದು ಬಹಿರಂಗಪಡಿಸಲಾಯಿತು.

ಮಿಶ್ರಾ ಆಯೋಗ ಮತ್ತು ಅದರ ವರದಿಯು ಪಕ್ಷಪಾತದಿಂದ ಕೂಡಿದೆ ಎಂದು, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆ ಮತ್ತು ಭಾರತೀಯ ಮಾನವ ಹಕ್ಕು ಆಯೋಗವು ಟೀಕಿಸಿತು. ಭಾರತೀಯ ಮಾನವ ಹಕ್ಕು ಆಯೋಗದ ಅಭಿಪ್ರಾಯದ ಪ್ರಕಾರ,

ಗಲಭೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗವಹಿಸಿದ ಯಾವುದೇ ವ್ಯಕ್ತಿಯ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಶಿಫಾರಸು ಮಾಡಿಲ್ಲ ಮತ್ತು ಈ ಹತ್ಯಾಕಾಂಡದಲ್ಲಿ ಕೈವಾಡವಿರುವ ಉನ್ನತಮಟ್ಟದ ಅಧಿಕಾರಿಗಳನ್ನು ಆಯೋಗವು ಖುಲಾಸೆಗೊಳಿಸಿದೆ. ಆಯೋಗವು ತನ್ನ ತನಿಖೆಯಲ್ಲಿ ಕಂಡುಕೊಂಡಂತೆ, ಸ್ಥಳೀಯ ಪೊಲೀಸರಿಂದ ಬೆದರಿಕೆಗಳನ್ನು ಸ್ವೀಕರಿಸುವ ಮೊದಲು ಗಲಭೆ ಸಂತೃಸ್ತರಾದ ಅನೇಕರು, ಗಲಭೆಯ ಬಗ್ಗೆ ಸಾಕ್ಷ್ಯ ನುಡಿದಿದ್ದಾರೆ. ಇನ್ನು ಪೋಲೀಸರ ಕಡೆಯಿಂದಲೂ ವ್ಯಾಪಕವಾದ ವೈಫಲ್ಯವು ಸಂಭವಿಸಿದೆ. ಗಲಭೆಯ ಸಂದರ್ಭದಲ್ಲಿ ಪೋಲೀಸರು ತುಂಬಾ ಉದಾಸೀನರಾಗಿ ವರ್ತಿಸಿದ್ದರು ಮತ್ತು ಗಲಭೆಗೆ ಬಲಿಯಾದವರ ಬಗೆಗೆ ತೀವ್ರವಾದ ಅಸಡ್ಡೆಯ ಭಾವನೆಯನ್ನು ಹೊಂದಿದ್ದು ಸ್ಪಷ್ಟವಾಗುತ್ತದೆ. 

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆಯು, ಮಿಶ್ರಾ ಆಯೋಗವು ಸಂತ್ರಸ್ತರ ಹೆಸರು ಮತ್ತು ವಿಳಾಸಗಳನ್ನು ಬಹಿರಂಗಪಡಿಸುವಾಗ ಆರೋಪಿಗಳ ಮಾಹಿತಿಯನ್ನು ಮರೆಮಾಚಿದೆ ಎಂದು ಟೀಕಿಸಿತು.

  • ಕಪೂರ್-ಮಿತ್ತಲ್ ಸಮಿತಿ

ಮಿಶ್ರಾ ಆಯೋಗದ ಶಿಫಾರಸಿನ ಮೇರೆಗೆ, ಗಲಭೆಗೆ ಸಂಬಂಧಿಸಿದಂತೆ ಪೊಲೀಸರ ಪಾತ್ರವನ್ನು ವಿಚಾರಿಸಲು ಕಪೂರ್ ಮಿತ್ತಲ್ ಸಮಿತಿಯನ್ನು ಫೆಬ್ರವರಿ ೧೯೮೭ರಲ್ಲಿ ನೇಮಿಸಲಾಯಿತು. ನ್ಯಾಯಮೂರ್ತಿ ದಲಿಪ್ ಕಪೂರ್ ಮತ್ತು ಉತ್ತರ ಪ್ರದೇಶದ ನಿವೃತ್ತ ಕಾರ್ಯದರ್ಶಿ ಕುಸುಮ್ ಮಿತ್ತಲ್ ಅವರನ್ನು ಒಳಗೊಂಡ ಈ ಸಮಿತಿಯು, ಗಲಭೆಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ೧೯೯೦ರಲ್ಲಿ ಸರಕಾರಕ್ಕೆ ಸಲ್ಲಿಸಿತು. ಗಲಭೆಯ ಸಂದರ್ಭದಲ್ಲಿ ನಿರ್ಲಕ್ಶ್ಯದ ನಡವಳಿಕೆಗಾಗಿ ಒಟ್ಟು ೭೨ ಮಂದಿ ಪೋಲಿಸ್ ಅಧಿಕಾರಿಗಳನ್ನು ತಪ್ಪಿತಸ್ತರು ಎಂದು ತನ್ನ ವರದಿಯಲ್ಲಿ ಗುರುತಿಸಿತು. ಆ ೭೨ ಮಂದಿಯಲ್ಲಿ ೩೦ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲು ಶಿಫಾರಸು ಮಾಡಿತು. ಆದರೆ ಈ ವರದಿಯನ್ನು ಸರಕಾರವು ಗಣನೆಗೆ ತೆಗೆದುಕೊಳ್ಳಲಿಲ್ಲ. ಮತ್ತು ಯಾವೊಬ್ಬ ಪೋಲಿಸ್ ಅಧಿಕಾರಿಗೂ ಶಿಕ್ಷೆಯಾಗಲಿಲ್ಲ.

  • ಜೈನ್ ಬ್ಯಾನರ್ಜಿ ಸಮಿತಿ

ಸಿಖ್ ಗಲಭೆಗೆ ಸಂಬಂಧಿಸಿ ತನಿಖೆ ನಡೆಸಲು ಸ್ಥಾಪಿಸಲಾದ ಇನ್ನೊಂದು ಆಯೋಗವೆಂದರೆ ಜೈನ್ ಬ್ಯಾನರ್ಜಿ ಆಯೋಗ. ಈ ಸಮಿತಿಯು ದೆಹಲಿಯ ಮಾಜಿ ಹೈಕೋರ್ಟ್ ನ್ಯಾಯಾಧೀಶ ಎಂ. ಎಲ್. ಜೈನ್ ಮತ್ತು ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಎ. ಕೆ. ಬ್ಯಾನರ್ಜಿ ಅವರನ್ನು ಒಳಗೊಂಡಿತ್ತು. ಗಲಭೆಕೋರರ ವಿರುದ್ಧ ದಾಖಲಾದ ಪ್ರಕರಣಗಳ ಬಗ್ಗೆ ಪರಿಶೀಲಿಸಲು ಈ ಆಯೋಗವನ್ನು ರಚಿಸಲಾಯಿತು. ಮಿಶ್ರಾ ಆಯೋಗವು ತನ್ನ ವರದಿಯಲ್ಲಿ, ಹಲವಾರು ಪ್ರಮುಖ ಪ್ರಕರಣಗಳು (ಮುಖ್ಯವಾಗಿ ಗಲಭೆಯಲ್ಲಿ ಶಾಮೀಲಾದ ರಾಜಕೀಯ ಮುಖಂಡರು ಅಥವಾ ಪೊಲೀಸ್ ಅಧಿಕಾರಿಗಳ ವಿರುದ್ಧದ ಪ್ರಕರಣಗಳು) ದಾಖಲಾಗಿಲ್ಲ ಎಂದು ಹೇಳಿತು. ೧೯೮೭ರ ಆಗಸ್ಟ್‌ನಲ್ಲಿ ಸಜ್ಜನ್ ಕುಮಾರ್ ಮತ್ತು ಬ್ರಹ್ಮಾನಂದ್ ಗುಪ್ತಾ ವಿರುದ್ಧ ಪ್ರಕರಣಗಳನ್ನು ನೋಂದಾಯಿಸಲು ಜೈನ್ ಬ್ಯಾನರ್ಜಿ ಸಮಿತಿ ಶಿಫಾರಸು ಮಾಡಿತಾದರೂ, ಯಾವುದೇ ಪ್ರಕರಣಗಳನ್ನು ದಾಖಲಿಸಲಿಲ್ಲ.

ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಆರೋಪಿಗಳಲ್ಲಿ ಒಬ್ಬನಾದ ಬ್ರಹ್ಮಾನಂದ ಗುಪ್ತಾ, ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದನು ಮತ್ತು ಆಯೋಗವು ತನ್ನ ವಿರುದ್ಧ ವಿಚಾರಣೆ ಮುಂದುವರಿಸದಂತೆ ತಡೆಯಾಜ್ಞೆಯನ್ನು ತಂದನು. ಈ ತಡೆಯಾಜ್ಞೆಯನ್ನು ರದ್ದುಮಾಡುವಂತೆ ಕೋರಿ, ನಾಗರಿಕ ನ್ಯಾಯ ಸಮಿತಿಯು ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯವು ೧೯೮೯ರಂದು ಪ್ರಕಟಿಸಿದ ತನ್ನ ತೀರ್ಪಿನಲ್ಲಿ ದೆಹಲಿ ಪೊಲೀಸ್ ಕಾಯ್ದೆ ಮತ್ತು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ನಡುವಿನ ಸಂಘರ್ಷದ ಆಧಾರದ ಮೇಲೆ ದೆಹಲಿ ಹೈಕೋರ್ಟ್ ಸಮಿತಿಯ ನೇಮಕವನ್ನು ರದ್ದುಪಡಿಸಿತು.

  • ಪೊಟ್ಟಿ ರೋಷಾ ಸಮಿತಿ

ಪೊಟ್ಟಿ ರೋಷಾ ಸಮಿತಿಯನ್ನು ೧೯೯೦ರ ಮಾರ್ಚ್‌ನಲ್ಲಿ ವಿ.ಪಿ.ಸಿಂಗ್ ಸರ್ಕಾರವು ಜೈನ ಬ್ಯಾನರ್ಜಿ ಸಮಿತಿಯ ಉತ್ತರಾಧಿಕಾರಿಯಾಗಿ ನೇಮಿಸಿತು. ಆಗಸ್ಟ್ ೧೯೯೦ರಲ್ಲಿ, ಸಮಿತಿಯು ಸಲ್ಲಿಸಿದ ವರದಿಯಲ್ಲಿ, ಹಿಂಸಾಚಾರಕ್ಕೆ ಬಲಿಯಾದವರು ಸಲ್ಲಿಸಿದ ಅಫಿಡವಿಟ್‌ಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಲು ಶಿಫಾರಸು ಮಾಡಿತು; ಸಜ್ಜನ್ ಕುಮಾರ್ ವಿರುದ್ಧ ಒಂದು ಪಂದ್ಯವಿತ್ತು. ಆರೋಪಗಳನ್ನು ಸಲ್ಲಿಸಲು ಸಿಬಿಐ ತಂಡ ಕುಮಾರ್ ಅವರ ಮನೆಗೆ ಹೋದಾಗ, ಅವರ ಬೆಂಬಲಿಗರು ಕುಮಾರ್ ಅವರನ್ನು ಹಿಂಬಾಲಿಸುವುದನ್ನು ಮುಂದುವರಿಸಿದರೆ ಅವರನ್ನು ಹಿಡಿದು ಬೆದರಿಕೆ ಹಾಕಿದರು. ಸಮಿತಿಯ ಅವಧಿ ೧೯೯೦ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಾಗ, ಪೊಟ್ಟಿ ಮತ್ತು ರೋಶಾ ತಮ್ಮ ವಿಚಾರಣೆಯನ್ನು ಕೊನೆಗೊಳಿಸಲು ನಿರ್ಧರಿಸಿದರು.

  • ಜೈನ್ ಅಗರ್‌ವಾಲ್ ಸಮಿತಿ

ಜೈನ್ ಅಗರ್‌ವಾಲ್ ಸಮಿತಿಯನ್ನು ೧೯೯೦ರ ಡಿಸೆಂಬರ್‌ನಲ್ಲಿ ಪೊಟ್ಟಿ ರೋಷಾ ಸಮಿತಿಯ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು. ಇದರಲ್ಲಿ ನ್ಯಾಯಮೂರ್ತಿ ಜೆ. ಡಿ. ಜೈನ್ ಮತ್ತು ನಿವೃತ್ತ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಡಿ. ಕೆ. ಅಗರ್ವಾಲ್ ಇದ್ದರು. ಸಮಿತಿಯು ತನ್ನ ಶಿಫಾರಸಿನಲ್ಲಿ ಎಚ್.ಕೆ.ಎಲ್. ಭಗತ್, ಸಜ್ಜನ್ ಕುಮಾರ್, ಧರ್ಮದಾಸ್ ಶಾಸ್ತ್ರಿ ಮತ್ತು ಜಗದೀಶ್ ಟೈಟ್ಲರ್ ವಿರುದ್ಧ ಪ್ರಕರಣಗಳನ್ನು ನೋಂದಾಯಿಸಲು ಸೂಚಿಸಿತು. ಅಲ್ಲದೆ, ದಂಗೆಯ ಬಗೆಗಿನ ತನಿಖೆಗಾಗಿ ಪೊಲಿಸ್ ಉಪಕಮಿಷನರ್ ಅವರು ಮುಖ್ಯಸ್ಥರಾಗಿದ್ದು ಹೆಚ್ಚುವರಿ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ಎರಡು ಅಥವಾ ಮೂರು ವಿಶೇಷ ತನಿಖಾ ತಂಡಗಳನ್ನು ಮತ್ತು ಸ್ಥಾಪಿಸಲು ಸೂಚಿಸಲಾಯಿತು. (ಹೆಚ್ಚುವರಿ ಪೋಲಿಸ್ ಆಯುಕ್ತರು ತಮ್ಮ ವರದಿಯನ್ನು ಸಿಐಡಿಗೆ ಸಲ್ಲಿಸಬೇಕಿತ್ತು) ಈ ಸಮಿತಿಯನ್ನು ಆಗಸ್ಟ್ ೧೯೯೩ರಲ್ಲಿ ವಿಸರ್ಜಿಸಲಾಯಿತು. ಆದರೆ ಸಮಿತಿಯು ಶಿಫಾರಸು ಮಾಡಿದ ಪ್ರಕರಣಗಳನ್ನು ಪೊಲೀಸರು ದಾಖಲಿಸಲಿಲ್ಲ.

  • ಅಹುಜಾ ಸಮಿತಿ

ಮಿಶ್ರಾ ಆಯೋಗ ಶಿಫಾರಸು ಮಾಡಿದ ಮೂರನೇ ಸಮಿತಿ ಅಹುಜಾ ಸಮಿತಿ. ದಂಗೆಯ ಕಾರಣದಿಂದ ದೆಹಲಿಯಲ್ಲಿ ಎಷ್ಟು ಜನರು ಸಾವಿಗೀಡಾದರು ಎಂದು ನಿರ್ಣಯಿಸಲು ಈ ಸಮಿತಿಯನ್ನು ರಚಿಸಲಾಯಿತು. ಇದು ಆಗಸ್ಟ್ ೧೯೮೭ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು, ದೆಹಲಿಯೊಂದರಲ್ಲೇ ೨೭೩೩ ಮಂದಿ, ಮತ್ತು ದೇಶಾದ್ಯಂತ ೩೩೨೫ರಷ್ಟು ಮಂದಿ ಕೊಲೆಗೀಡಾದರು ಎಂದು ತನ್ನ ವರದಿಯಲ್ಲಿ ತಿಳಿಸಿತು.

  • ಧಿಲ್ಲೋನ್ ಸಮಿತಿ

ಗುರ್‌ದಯಾಳ್ ಸಿಂಗ್ ಧಿಲ್ಲಾನ್ ಅವರ ನೇತೃತ್ವದ ಧಿಲ್ಲೋನ್ ಸಮಿತಿಯನ್ನು ೧೯೮೫ರಲ್ಲಿ ನೇಮಿಸಲಾಯಿತು. ಗಲಭೆಯಿಂದ ಸಂತ್ರಸ್ತರಿಗಾಗಿ ಕೈಗೊಂಡ ಪುನರ್ವಸತಿ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವುದು ಈ ಸಮಿತಿಗೆ ವಹಿಸಿದ ಜವಾಬ್ದಾರಿಯಾಗಿತ್ತು. ಸಮಿತಿಯು ವರ್ಷದ ಕೊನೆಯಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಸಮಿತಿಯು ಮಾಡಿದ ಒಂದು ಪ್ರಮುಖ ಶಿಫಾರಸು ಏನೆಂದರೆ, ದಂಗೆಯಲ್ಲಿ ಹಾನಿಗೊಳಗಾದ ಅಂಗಡಿ, ಉದ್ದಿಮೆಗಳು ವಿಮಾ ರಕ್ಷಣೆಯನ್ನು ಹೊಂದಿದ್ದರೆ, ಸರಕಾರಿ ನಿರ್ದೇಶನಗಳ ಪ್ರಕಾರ ಪರಿಹಾರವನ್ನು ಪಡೆಯಬಹುದಾಗಿದೆ.

ಗಲಭೆ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ಪಾವತಿಸುವಂತೆ ವಿಮಾ ಕಂಪನಿಗಳಿಗೆ ಆದೇಶಿಸಲು ಸಮಿತಿ ಶಿಫಾರಸು ಮಾಡಿತು. "ಗಲಭೆಗಳು" ವಿಮಾ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ತಾಂತ್ರಿಕ ಆಧಾರದ ಮೇಲೆ ವಿಮಾ ಕಂಪನಿಗಳು ಪರಿಹಾರ ನೀಡಲು ನಿರಾಕರಿಸಿದ್ದವು. ಅಲ್ಲದೆ, ಸರ್ಕಾರವೂ ಸಹ ಸಮಿತಿಯ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಮತ್ತು ಯಾವುದೇ ರೂಪದ ಪರಿಹಾರ ಮೊತ್ತವನ್ನು ಗಲಭೆ ಸಂತ್ರಸ್ತರಿಗೆ ಪಾವತಿಸಲಿಲ್ಲ.

  • ನರುಲಾ ಸಮಿತಿ

ನರುಲಾ ಸಮಿತಿಯನ್ನು ೧೯೯೩ರ ಡಿಸೆಂಬರ್‌ನಲ್ಲಿ ಮದನ್ ಲಾಲ್ ಖುರಾನಾ ನೇತೃತ್ವದ ಬಿಜೆಪಿ ಸರ್ಕಾರವು ನೇಮಿಸಿತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿದ್ದ ಆರ್ ಎಸ್ ನರೂಲಾ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದರು.

೧೯೯೪ರ ಮಧ್ಯಭಾಗದಲ್ಲಿ ಖುರಾನಾ ಅವರು ಈ ವಿಷಯವನ್ನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ನಿರ್ಧರಿಸಿದರು. ಆದರೆ ಈ ವಿಷಯವು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ ಕೇಂದ್ರ, ಪ್ರಕರಣವನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ವರ್ಗಾಯಿಸಿತು. ವಿಪರ್ಯಾಸವೆಂದರೆ ಈ ಗಲಭೆ ಪ್ರಕರಣದ ಚರ್ಚೆಯು ತನ್ನ ವ್ಯಾಪ್ತಿಗೆ ಬರುವ ಬಗ್ಗೆ ನಿರ್ಧರಿಸಲು ಪಿವಿ ನರಸಿಂಹರಾವ್ ಅವರ ಸರಕಾರ ತೆಗೆದುಕೊಂಡದ್ದು ಬರೋಬ್ಬರಿ ಎರಡು ವರ್ಷಗಳು! ನರೂಲಾ ಸಮಿತಿಯು ೧೯೯೪ರ ಜನವರಿಯಲ್ಲಿ ಎಚ್.ಕೆ.ಎಲ್. ಭಗತ್ ಮತ್ತು ಸಜ್ಜನ್ ಕುಮಾರ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಶಿಫಾರಸು ಮಾಡಿ ತನ್ನ ವರದಿಯನ್ನು ಸಲ್ಲಿಸಿತು. ಕೇಂದ್ರ ಸರ್ಕಾರದ ವಿಳಂಬದ ಹೊರತಾಗಿಯೂ, ಸಿಬಿಐ ೧೯೯೪ರ ಡಿಸೆಂಬರ್‌ನಲ್ಲಿ ತನ್ನ ಚಾರ್ಜ್‌ಶೀಟ್ ಸಲ್ಲಿಸಿತು.

  • ನಾನಾವತಿ ಆಯೋಗ

ರಾಜ್ಯಸಭೆಯಲ್ಲಿ ಅಂಗೀಕರಿಸಿದ ಸರ್ವಾನುಮತದ ನಿರ್ಣಯದ ಮೂಲಕ ನಾನಾವತಿ ಆಯೋಗವನ್ನು ನೇಮಿಸಲಾಯಿತು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದರು.

ತನಿಖೆಯ ನಂತರ ನಾನಾವತಿ ಆಯೋಗವು ಆಯೋಗವು ಭಗತ್, ಕುಮಾರ್, ಶಾಸ್ತ್ರಿ ಮತ್ತು ಟೈಟ್ಲರ್ ಅವರಿಗೆ ನೋಟಿಸ್ ಜಾರಿಮಾಡಿದ್ದಲ್ಲದೆ, ಗಲಭೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗವಹಿಸಿದ ಕೆಲವರ ಹೆಸರನ್ನು ಸಹ ಹೆಸರಿಸಿತು.

ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಿಖ್ಖರ ಮೇಲೆ ಆಕ್ರಮಣ ಮಾಡಲು ದಾಳಿಕೋರರನ್ನು ಪ್ರಚೋದಿಸಿದ್ದಾರೆ ಅಥವಾ ಸಹಾಯ ಮಾಡಿದ್ದಾರೆ ಎಂದು ಹೆಚ್ಚಿನ ಸಂಖ್ಯೆಯ ಅಫಿಡವಿಟ್‌ಗಳಿಂದ ತಿಳಿದುಬರುತ್ತದೆ. ದಂಗೆಯು ಹೆಚ್ಚು ಪಸರಿಸುವಂತೆ ಮಾಡಲು, ಅನೇಕ ಸ್ಥಳಗಳಿಗೆ ಪೊಲೀಸರು ತಮ್ಮ ಆಯುಧಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ತೋರಿಸಲು ಸಾಕಷ್ಟು ದಾಖಲೆಗಳಿವೆ. ಗಲಭೆಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ನಿಷ್ಕ್ರಿಯರಾಗಿದ್ದೂ ಅಲ್ಲದೆ, ಅಮಾಯಕರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಲಿಲ್ಲ. 

೨೦೦೪ರ ಫೆಬ್ರುವರಿಯಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಆಯೋಗವು ತನ್ನ ವರದಿಯಲ್ಲಿ ರಾಜೀವ್ ಗಾಂಧಿ ವಿರುದ್ಧ ಮಾಡಲಾದ ಆರೋಪಗಳನ್ನು ಆಯೋಗವು ತಳ್ಳಿಹಾಕಿತು. ಆದರೆ, ಸಿಖ್ಖರ ಮೇಲೆ ದಾಳಿಗಳನ್ನು ಸಂಘಟಿಸುವಲ್ಲಿ ಜಗದೀಶ್ ಟೈಟ್ಲರ್ ಅವರ ಕೈವಾಡವಿದೆ ಎಂದು ಅಭಿಪ್ರಾಯಪಟ್ಟಿತು. ಈ ರೀತಿಯ ದಂಗೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ರಾಜಕೀಯ ಪ್ರಭಾವದಿಂದ ಮುಕ್ತವಾದ, ಗಲಭೆ-ವಿರೋಧಿ ಪೊಲೀಸ್ ಪಡೆಯೊಂದನ್ನು ಸ್ಥಾಪಿಸಲು ಆಯೋಗವು ಶಿಫಾರಸು ಮಾಡಿತು. ಅಲ್ಲದೆ, ಮುಚ್ಚಿಹಾಕಿದ ನಾಲ್ಕು ಪ್ರಕರಣಗಳನ್ನು ಪುನಃ ತೆರೆದು ಮರುತನಿಖೆಗೆ ನಡೆಸುವಂತೆ ಅದು ಶಿಫಾರಸು ಮಾಡಿತು.

  • ಮಾಥೂರ್ ಸಮಿತಿ

ಮಾಥೂರ್ ಸಮಿತಿಯನ್ನು ೨೦೧೪ರ ಡಿಸೆಂಬರ್‌ನಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಿ.ಪಿ.ಮಾಥೂರ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು. "ಗಲಭೆ ಸಂಬಂಧಿ ಅಪರಾಧಗಳ ಬಗ್ಗೆ ಸರಿಯಾದ ತನಿಖೆ ನಡೆಸಲಾಗಿಲ್ಲ ಮತ್ತು ತನಿಖೆಯ ದಿಕ್ಕು ಬದಲಿಸುವ ಸಲುವಾಗಿ ನೀಡಲು ಹಲವು ಮೋಸದ ಪ್ರಯತ್ನಗಳನ್ನು ಮಾಡಲಾಗಿದೆ" ಎಂದು ಸಮಿತಿ ಅಭಿಪ್ರಾಯಪಟ್ಟಿತು. ಪೊಲೀಸರು ಮುಚ್ಚಿದ ಇತರ ಪ್ರಕರಣಗಳನ್ನು ಮತ್ತೆ ತೆರೆಯುವ ಅಗತ್ಯವಿದೆಯೇ ಎಂದು ಪರೀಕ್ಷಿಸುವ ಸಲುವಾಗಿ ಎಸ್‌ಐಟಿ(ವಿಶೇಷ ತನಿಖಾ ಸಂಸ್ಥೆ) ಒಂದನ್ನು ಸ್ಥಾಪಿಸಲು ಸಮಿತಿ ಶಿಫಾರಸು ಮಾಡಿತು.

ಕೇಂದ್ರ ಸರಕಾರದ ವಿಶೇಷ ತನಿಖಾ ಸಂಸ್ಥೆ

ಕೇಂದ್ರ ಸರ್ಕಾರ ೨೦೧೫ರ ಫೆಬ್ರವರಿಯಲ್ಲಿ ಮಾಥುರ್ ಸಮಿತಿಯ ಶಿಫಾರಸನ್ನು ಜಾರಿಗೆ ತಂದಿತು ಮತ್ತು ವಿಶೇಷ ತನಿಖಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ತಂಡದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಪ್ರಮೋದ್ ಅಸ್ತಾನಾ, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್ ಕಪೂರ್ ಮತ್ತು ಆಗಿನ ದೆಹಲಿ ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ಕುಮಾರ್ ಜ್ಞಾನೇಶ್ ಇದ್ದರು. ಹಲವಾರು ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಲು ಮತ್ತೆ ತೆರೆಯಲಾಯಿತು. ೬ನೇ ಡಿಸೆಂಬರ್ ೨೦೧೭ರಂದು, ವಿಶೇಷ ತನಿಖಾ ಸಂಸ್ಥೆಯು ೧೮೬ ಪ್ರಕರಣಗಳನ್ನು ಯಾವುದೇ ತನಿಖೆಯಿಲ್ಲದೆ ಮುಚ್ಚಲಾಯಿತು. ವಿಶೇಷ ತನಿಖಾ ಸಂಸ್ಥೆಯ ತನಿಖೆಯ ಬಗ್ಗೆ ಅಸಂತೃಪ್ತವಾದ ಸುಪ್ರೀಂ ಕೋರ್ಟ್ ೧೦ ಜನವರಿ ೨೦೧೮ರಂದು ನಡೆದ ವಿಚಾರಣೆಯಲ್ಲಿ, ತನ್ನದೇ ಆದ ಎಸ್‌ಐಟಿಯನ್ನು ಸ್ಥಾಪಿಸಲು ನಿರ್ಧರಿಸಿತು.

ಸರ್ವೋಚ್ಛ ನ್ಯಾಯಲಯದ ವಿಶೇಷ ತನಿಖಾ ಸಂಸ್ಥೆ

ಕೇಂದ್ರ ಸರ್ಕಾರದ ಎಸ್‌ಐಟಿಯಿಂದ ಮುಚ್ಚಲ್ಪಟ್ಟ ೧೮೬ ಪ್ರಕರಣಗಳ ಮರುತನಿಖೆಗಾಗಿ, ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಸುಪ್ರೀಂ ಕೋರ್ಟ್‌ನಡಿಯಲ್ಲಿ ಎಸ್‌ಐಟಿ ಸ್ಥಾಪಿಸಲು ಆದೇಶಿಸಿತು. ಮೂವರು ಸದಸ್ಯರ ಎಸ್‌ಐಟಿಯ ಅಧ್ಯಕ್ಷರನ್ನಾಗಿ ದೆಹಲಿಯ ಮಾಜಿ ಹೈಕೋರ್ಟ್ ನ್ಯಾಯಾಧೀಶ ಎಸ್.ಎನ್. ಧಿಂಗ್ರಾ ಅವರನ್ನು ನೇಮಿಸಲಾಯಿತು, ಜೊತೆಗೆ ೨೦೦೬ರ ಸಾಲಿನ ಐಪಿಎಸ್ ತಂಡದ ಅಧಿಕಾರಿ ಅಭಿಷೇಕ್ ದುಲಾರ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ರಾಜ್‌ದೀಪ್ ಸಿಂಗ್ ಅವರನ್ನು ಈ ತನಿಖಾ ತಂಡದಲ್ಲಿ ಸೇರಿಸಿಕೊಳ್ಳಲಾಯಿತು. ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ತನಿಖಾ ತಂಡಕ್ಕೆ ಸೂಚಿಸಲಾಯಿತು. ಆದರೆ ತನಿಖೆಗೆ ಸಂಬಂಧಿಸಿ ಇದುವರೆಗೆ ಯಾವುದೇ ವರದಿ ಸಲ್ಲಿಕೆಯಾಗಿಲ್ಲ.

ಗಲಭೆಯಲ್ಲಿ ಜಗದೀಶ್ ಟೈಟ್ಲರ್ ಪಾತ್ರ

ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯನ್ನು ಮುಂದೊಡ್ಡಿ, ಕೇಂದ್ರೀಯ ತನಿಖಾ ದಳವು ೨೦೦೭ರ ನವೆಂಬರ್‌ನಲ್ಲಿ ಜಗದೀಶ್ ಟೈಟ್ಲರ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟಿತು. ಇಂದಿರಾ ಗಾಂಧಿಯವರ ಹತ್ಯೆ ನಡೆದ ನಂತರ, ಸಿಖ್ಖರ ವಿರುದ್ಧ ಗಲಭೆ ನಡೆಸಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪ ಟೈಟ್ಲರ್ ಮೇಲಿತ್ತು. ೧೯೮೪ರ ದಂಗೆಯ ಸಮಯದಲ್ಲಿ ಟೈಟ್ಲರ್ ಗಲಭೆಕೋರರಿಗೆ ನಿರ್ದೇಶನ ನೀಡಿದ್ದನೆಂಬುದನ್ನು ದೃಢೀಕರಿಸಲು ಯಾವುದೇ ಪುರಾವೆಗಳು ಅಥವಾ ಸಾಕ್ಷಿಗಳು ಕಂಡುಬಂದಿಲ್ಲ ಎಂದು ಕೇಂದ್ರೀಯ ತನಿಖಾ ದಳವು ದೆಹಲಿ ನ್ಯಾಯಾಲಯಕ್ಕೆ ತಿಳಿಸಿತು. ಇದರಿಂದ ಅಸಂತೃಪ್ತವಾದ ನ್ಯಾಯಾಲಯ, ಟೈಟ್ಲರ್ ವಿರುದ್ಧದ ಪ್ರಕರಣವನ್ನು ಮತ್ತೆ ಮರುತನಿಖೆ ನಡೆಸಬೇಕೆಂದು ದೆಹಲಿ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಜೀವ್ ಜೈನ್ ಡಿಸೆಂಬರ್ ೧೮, ೨೦೦೭ರಂದು ಸಿಬಿಐಗೆ ಆದೇಶಿಸಿದರು.

ಡಿಸೆಂಬರ್ ೨೦೦೮ರಲ್ಲಿ, ಇಬ್ಬರು ಸದಸ್ಯರ ಸಿಬಿಐ ತಂಡವು ಇಬ್ಬರು ಪ್ರತ್ಯಕ್ಷದರ್ಶಿಗಳಾದ ಜಸ್ಬೀರ್ ಸಿಂಗ್ ಮತ್ತು ಸುರಿಂದರ್ ಸಿಂಗ್ ಅವರ ಹೇಳಿಕೆಗಳನ್ನು ದಾಖಲಿಸಲು ನ್ಯೂಯಾರ್ಕ್‌ಗೆ ತೆರಳಿತು. ತಮ್ಮ ಸುರಕ್ಷತೆಯ ಕಾರಣದಿಂದ ತಮಗೆ ಸ್ವದೇಶಕ್ಕೆ ಮರಳಲು ಇಷ್ಟವಿಲ್ಲ ಎಂದು ಸಾಕ್ಷಿಗಳು ತಿಳಿಸಿದರು. ಸಿಖ್ ಹತ್ಯಾಕಾಂಡದ ಕುರಿತಂತೆ, ಸಿಬಿಐ ನ್ಯಾಯಯುತವಾಗಿ ವಿಚಾರಣೆ ನಡೆಸಿಲ್ಲ ಮತ್ತು ಜಗದೀಶ್ ಟೈಟ್ಲರ್‌ನನ್ನು ಸಿಬಿಐ ರಕ್ಷಿಸಲು ಯತ್ನಿಸುತ್ತಿದೆ ಎಂದು ಅವರು ದೂರಿದರು.

ಉಲ್ಲೇಖಗಳು

ಹೆಚ್ಚಿನ ಓದಿಗೆ

Tags:

೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಹಿನ್ನೆಲೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಗಲಭೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಮಿಲಿಟರಿ ಕಾರ್ಯಾಚರಣೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಇಂದಿರಾ ಗಾಂಧಿ ಅವರ ಹತ್ಯೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಸಿಖ್ ವಿರೋಧೀ ಗಲಭೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಸರಕಾರಿ ದಾಖಲೆಗಳ ದುರುಪಯೋಗ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಗಲಭೆಯ ನಂತರ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ತನಿಖೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ತನಿಖಾ ಆಯೋಗಗಳು೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಕೇಂದ್ರ ಸರಕಾರದ ವಿಶೇಷ ತನಿಖಾ ಸಂಸ್ಥೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಸರ್ವೋಚ್ಛ ನ್ಯಾಯಲಯದ ವಿಶೇಷ ತನಿಖಾ ಸಂಸ್ಥೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಗಲಭೆಯಲ್ಲಿ ಜಗದೀಶ್ ಟೈಟ್ಲರ್ ಪಾತ್ರ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಉಲ್ಲೇಖಗಳು೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ ಹೆಚ್ಚಿನ ಓದಿಗೆ೧೯೮೪ರ ಸಿಖ್ ವಿರೋಧೀ ಗಲಭೆ ಸಿಖ್ ಹತ್ಯಾಕಾಂಡ

🔥 Trending searches on Wiki ಕನ್ನಡ:

ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಗ್ರಹಸಾಮಾಜಿಕ ಸಮಸ್ಯೆಗಳುನಡುಕಟ್ಟುಪತ್ರಿಕೋದ್ಯಮಚಂದ್ರಶೇಖರ ಕಂಬಾರಕರ್ನಾಟಕದ ತಾಲೂಕುಗಳುಬಾರ್ಲಿಶಾಸಕಾಂಗರಗಳೆಋತುಯೋಗವಾಹನಕ್ಷತ್ರಗೋಪಾಲಕೃಷ್ಣ ಅಡಿಗಕರಗಪಂಚತಂತ್ರಕನ್ನಡ ರಂಗಭೂಮಿಹಸ್ತ ಮೈಥುನಮುಹಮ್ಮದ್ಟಿಪ್ಪು ಸುಲ್ತಾನ್ರಾಯಚೂರು ಜಿಲ್ಲೆಕಯ್ಯಾರ ಕಿಞ್ಞಣ್ಣ ರೈಪ್ರಾಚೀನ ಈಜಿಪ್ಟ್‌ವಾರ್ಧಕ ಷಟ್ಪದಿಅಕ್ಬರ್ಭಾರತೀಯ ಸಶಸ್ತ್ರ ಪಡೆಕರ್ನಾಟಕ ಪೊಲೀಸ್ರತ್ನತ್ರಯರುಟೈಗರ್ ಪ್ರಭಾಕರ್ಒಲಂಪಿಕ್ ಕ್ರೀಡಾಕೂಟಕರ್ನಾಟಕದ ಸಂಸ್ಕೃತಿವೀರಗಾಸೆಕರಾವಳಿ ಚರಿತ್ರೆಕರ್ನಾಟಕದ ಜಿಲ್ಲೆಗಳುಅಂಬರ್ ಕೋಟೆಕಾಡ್ಗಿಚ್ಚುಉಡಸತಿ ಪದ್ಧತಿಚಾಲುಕ್ಯಸ್ವಚ್ಛ ಭಾರತ ಅಭಿಯಾನಭಾರತದಲ್ಲಿನ ಚುನಾವಣೆಗಳುವಿಜಯಾ ದಬ್ಬೆಪೌರತ್ವಕನ್ನಡ ಚಂಪು ಸಾಹಿತ್ಯವೀರೇಂದ್ರ ಹೆಗ್ಗಡೆಲೋಕಸಭೆಶ್ರೀಪಾದರಾಜರುತ್ಯಾಜ್ಯ ನಿರ್ವಹಣೆಜೈನ ಧರ್ಮವ್ಯಾಸರಾಯರುಬುದ್ಧಕರ್ನಾಟಕಗ್ರಾಹಕರ ಸಂರಕ್ಷಣೆಬ್ರಿಟಿಷ್ ಆಡಳಿತದ ಇತಿಹಾಸಕೆರೆಗೆ ಹಾರ ಕಥನಗೀತೆಬಾರ್ಬಿದೆಹಲಿ ಸುಲ್ತಾನರುಮಾರ್ಕ್ಸ್‌ವಾದಹೆಣ್ಣು ಬ್ರೂಣ ಹತ್ಯೆಕರ್ಮಧಾರಯ ಸಮಾಸಕದಂಬ ರಾಜವಂಶಚಿಕ್ಕಮಗಳೂರುವಿಶ್ವ ರಂಗಭೂಮಿ ದಿನಸವದತ್ತಿರಾಜ್ಯಸಭೆಆಗಮ ಸಂಧಿಇತಿಹಾಸನೀರು (ಅಣು)ಶಬ್ದಅರುಣಿಮಾ ಸಿನ್ಹಾಚಂದ್ರಶೇಖರ ವೆಂಕಟರಾಮನ್ರೈತವಾರಿ ಪದ್ಧತಿಕ್ರಿಕೆಟ್ಶ್ರೀಕೃಷ್ಣದೇವರಾಯಹೈದರಾಲಿಹಿಂದಿಸಂಸ್ಕೃತ ಸಂಧಿಮಾನವನಲ್ಲಿ ರಕ್ತ ಪರಿಚಲನೆಎಸ್.ಎಲ್. ಭೈರಪ್ಪ🡆 More