ಸೀತಾ ರಾಮಚಂದ್ರಸ್ವಾಮಿ ದೇವಾಲಯ

ಶ್ರೀ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನವು ವಿಷ್ಣುವಿನ ಪ್ರಖ್ಯಾತ ಅವತಾರನಾದ ರಾಮನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ .

ಇದು ಭಾರತದ ತೆಲಂಗಾಣ ರಾಜ್ಯದ ಪೂರ್ವದಲ್ಲಿರುವ ಭದ್ರಾಚಲಂ ಪಟ್ಟಣದಲ್ಲಿ ಗೋದಾವರಿ ನದಿಯ ದಡದಲ್ಲಿದೆ. ಈ ದೇವಾಲಯವನ್ನು ಗೋದಾವರಿಯ ದಿವ್ಯ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ದಕ್ಷಿಣ ಅಯೋಧ್ಯೆ ಎಂದೂ ಭಾವಿಸಲಾಗುತ್ತದೆ.

ಸೀತಾ ರಾಮಚಂದ್ರಸ್ವಾಮಿ ದೇವಾಲಯ

ಸ್ವಯಂ ಪ್ರಕಟವಾದದ್ದು ಎಂದು ನಂಬಲಾದ ಕೇಂದ್ರ ವಿಗ್ರಹವು ನಾಲ್ಕು ತೋಳುಗಳ ವೈಕುಂಠ ರಾಮನನ್ನು ತೋರಿಸುತ್ತದೆ. ಇದೇ ರೂಪದಲ್ಲಿ ವಿಷ್ಣುವು ಭದ್ರನ ಪ್ರಾರ್ಥನೆಗಳಿಗೆ ಉತ್ತರಿಸಲು ಕಾಣಿಸಿಕೊಂಡನು. ರಾಮನ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣ ಕೇಂದ್ರ ವಿಗ್ರಹದ ಭಾಗವಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಕಥೆಗಳ ಪ್ರಕಾರ ಭದ್ರಾಚಲಂ ದೇವಾಲಯವನ್ನು ಭದ್ರಾಚಲ ರಾಮದಾಸು ಎಂದೂ ಕರೆಯಲ್ಪಡುತ್ತಿದ್ದ 17 ನೇ ಶತಮಾನದ ಸುಪ್ರಸಿದ್ಧ ಭಕ್ತಿ ಸಂತ ಕಂಚೆರ್ಲಾ ಗೋಪಣ್ಣ ನಿರ್ಮಿಸಿದನು. ಇತರ ಕಥೆಗಳ ಪ್ರಕಾರ ಅವನು ಇದನ್ನು ದುರಸ್ತಿ ಮಾಡಿಸಿದನು. ಗೋಪನ ಗೋಲ್ಕೊಂಡದ ಕೊನೆಯ ಸುಲ್ತಾನ ಅಬುಲ್ ಹಸನ್ ಕುತುಬ್ ಷಾ (ತಾನಾ ಶಾ) ಆಳ್ವಿಕೆಯಲ್ಲಿ ಭದ್ರಾಚಲಂನ ಕಂದಾಯ ಅಧಿಕಾರಿಯಾಗಿದ್ದರು. ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನವನ್ನು ನಿರ್ಮಿಸಲು ಸುಲ್ತಾನರ ಖಜಾನೆಗೆ ಮೀಸಲಾದ ಹಣವನ್ನು ಬಳಸಿದ ಆರೋದ ಮೇಲೆ ಗೋಪನನನ್ನು ಬಂಧಿಸಲಾಯಿತು. ಅವನು 12 ವರ್ಷಗಳ ಕಾಲ ಸೆರೆಮನೆಯಲ್ಲಿ ಕಳೆದನು. ಅಲ್ಲಿ ಅವನು ರಚಿಸಿದ ಭಕ್ತಿಗೀತೆಗಳನ್ನು ಈ ದೇವಾಲಯದಲ್ಲಿ ಇನ್ನೂ ಹಾಡಲಾಗುತ್ತದೆ. ಗೋಪನನ ಬಿಡುಗಡೆಗಾಗಿ ಸುಲ್ತಾನನು ಬೇಡಿದ ಚಿನ್ನದ ನಾಣ್ಯಗಳನ್ನು ಪಾವತಿಸಲು ಲಕ್ಷ್ಮಣನೊಂದಿಗೆ ಭಗವಾನ್ ರಾಮನು ತಾನೇ ಕಾಣಿಸಿಕೊಂಡನು. ಗೋಪನನು ನಂತರ ಈ ದೇವಾಲಯದಲ್ಲಿ ರಾಮನಿಗೆ ಅರ್ಪಿತವಾದ ಕವಿತೆಗಳನ್ನು ರಚಿಸುವುದನ್ನು ಮುಂದುವರೆಸಿದನು.

ಗೋಪಣ್ಣನ ನಂತರ ತುಮು ಲಕ್ಷ್ಮೀ ನರಸಿಂಹ ದಾಸು ಮತ್ತು ವರದ ರಾಮದಾಸು ದೇವಸ್ಥಾನದ ವಿಧಿವಿಧಾನಗಳನ್ನು ನೋಡಿಕೊಂಡರು. ಭದ್ರಾಚಲಂ ವೈಷ್ಣವ ಪಂಚರಾತ್ರ ಆಗಮ ಸಂಪ್ರದಾಯವನ್ನು ಅನುಸರಿಸುತ್ತದೆ ಮತ್ತು ಶ್ರೀರಂಗಂನಲ್ಲಿರುವ ರಂಗನಾಥಸ್ವಾಮಿ ದೇವಾಲಯದ ಮಾದರಿಯಲ್ಲಿ ಇದರ ಪೂಜಾ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಾಲಯವು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ; ರಾಜಗೋಪುರವು ಉತ್ತರದ ಪ್ರವೇಶದ್ವಾರದಲ್ಲಿದೆ. ಇದನ್ನು ವೈಕುಂಠ ದ್ವಾರಂ ಎಂದು ಕರೆಯಲಾಗುತ್ತದೆ. ದೇವಾಲಯವು ಹಲವಾರು ಉಪ-ದೇಗುಲಗಳನ್ನು ಮತ್ತು ಕೆಲವು ಮಂಟಪಗಳನ್ನು ಹೊಂದಿದೆ.

ಗೋಪಣ್ಣನು ವೈಷ್ಣವ ಸಂಪ್ರದಾಯದ ಬಗ್ಗೆ ಅರಿವು ಮೂಡಿಸಲು ಭಜನಾ ಸಂಪ್ರದಾಯದ ಕೇಂದ್ರವಾಗಿ ಭದ್ರಾಚಲಮ್ಮನ್ನು ಬಳಸಿಕೊಂಡನು. ವಾರ್ಷಿಕ ಬ್ರಹ್ಮೋತ್ಸವವು ಭದ್ರಾಚಲಂನಲ್ಲಿ ಆಚರಿಸಲಾಗುವ ದೊಡ್ಡ ಉತ್ಸವವಾಗಿದೆ; ಪ್ರಮುಖ ಕಾರ್ಯಕ್ರಮವೆಂದರೆ ಶ್ರೀ ಸೀತಾರಾಮ ತಿರುಕಲ್ಯಾಣ ಮಹೋತ್ಸವಂ, ಅಥವಾ ರಾಮ ನವಮಿಯ ಮುನ್ನಾದಿನದಂದು ರಾಮ ಮತ್ತು ಸೀತೆಯ ವಿವಾಹ. ಭದ್ರಾಚಲಂನಲ್ಲಿ ಆಚರಿಸಲಾಗುವ ಇತರ ಪ್ರಮುಖ ಹಬ್ಬಗಳೆಂದರೆ ವೈಕುಂಠ ಏಕಾದಶಿ, ವಸಂತೋತ್ಸವ ಮತ್ತು ವಿಜಯದಶಮಿ .

ದೇವಾಲಯ

ಸೀತಾ ರಾಮಚಂದ್ರಸ್ವಾಮಿ ದೇವಾಲಯ 
ಭದ್ರಾಚಲಮ್‍ನ ಯೋಗಾನಂದ ನರಸಿಂಹ ದೇವಸ್ಥಾನದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ದೇವತೆಗಳ ವರ್ಣಚಿತ್ರ

ದೇವಾಲಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಭದ್ರನ ಶಿರವೆಂದು ನಂಬಲಾಗಿದೆ. ಅಲ್ಲಿ ಅವನಿಗೆ ಒಂದು ದೇವಾಲಯವನ್ನು ಸಮರ್ಪಿಸಲಾಗಿದೆ. ಒಳಗೆ, ಕಲ್ಲಿನ ರಚನೆಯ ಮೇಲೆ, ರಾಮನ ಪಾದದ ಗುರುತುಗಳನ್ನು ಕಾಣಬಹುದು. ತಿರುನಾಮಮ್ (ಬಿಳಿ ಜೇಡಿಮಣ್ಣು) ಅನ್ನು ಬಂಡೆಗೆ ಲೇಪಿಸಲಾಗುತ್ತದೆ. ಇದರಿಂದ ಭೇಟಿ ನೀಡುವವರು ಅದನ್ನು ಭದ್ರನ ತಲೆ ಎಂದು ಗುರುತಿಸಬಹುದು. ದೇವಾಲಯದ ಎರಡನೇ ಭಾಗವು ಗರ್ಭಗುಡಿಯಾಗಿದ್ದು, ಅಲ್ಲಿ ಕೇಂದ್ರ ವಿಗ್ರಹವು ಭದ್ರನ ಹೃದಯಕ್ಕೆ ಸಮಾನವೆಂದು ಪರಿಗಣಿಸಲಾಗಿರುವ ಸ್ಥಳದ ಮೇಲೆ ನೆಲೆಸಿದೆ. ಮೂರನೆಯ ಭಾಗವು ರಾಜಗೋಪುರ (ಮುಖ್ಯ ಗೋಪುರ), ಇದು ಭದ್ರನ ಪಾದದಲ್ಲಿದೆ.

ದೇವಾಲಯವು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ; ಮುಖ್ಯ ದ್ವಾರವನ್ನು ತಲುಪಲು 50 ಮೆಟ್ಟಿಲುಗಳನ್ನು ಹತ್ತಬೇಕು. 1974 ರಲ್ಲಿ, ಭೇಟಿ ನೀಡುವ ಭಕ್ತರ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವೈಕುಂಠ ದ್ವಾರಂ ಎಂಬ ಹೆಸರಿನ ಬೃಹತ್ ಬಾಗಿಲನ್ನು ನಿರ್ಮಿಸಲಾಯಿತು. ಗರ್ಭಗುಡಿಗೆ ಎದುರಾಗಿ ಚಿನ್ನದ ಲೇಪಿತ ದ್ವಜಸ್ತಂಭ ಇದೆ. ಇದು ಪಂಚಲೋಹದಿಂದ ಮಾಡಲ್ಪಟ್ಟಿದೆ. ಇದರ ಮೇಲೆ ವಿಷ್ಣುವಿನ ವಾಹನವಾದ ಗರುಡನ ಚಿತ್ರಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ವಿಮಾನದ ಮೇಲ್ಭಾಗದಲ್ಲಿ ಸಾವಿರ ಮೂಲೆಗಳಿರುವ ಎಂಟು ಮುಖದ ಸುದರ್ಶನ ಚಕ್ರವಿದೆ. ಇದನ್ನು ಗೋಪಣ್ಣ ಕೆತ್ತನೆ ಮಾಡಿದನು. ಅವನು ಇದನ್ನು ಗೋದಾವರಿ ನದಿಯ ನೀರಿನಲ್ಲಿರುವುದನ್ನು ಕಂಡುಕೊಂಡನು. ವಿಮಾನದ ಮೇಲೆ, ದೇವಾಲಯದ ದೇವತೆಯ ಸಣ್ಣ ಪ್ರತಿಕೃತಿಯನ್ನು ಕಾಣಬಹುದು.ಗರ್ಭಗುಡಿಯ ಬಲಭಾಗದಲ್ಲಿರುವ ಪ್ರದೇಶದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ಉತ್ಸವ ಮೂರ್ತಿಗಳಿವೆ. ಇವುಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ.

ಸೀತಾ ರಾಮಚಂದ್ರಸ್ವಾಮಿ ದೇವಾಲಯ 
ಭದ್ರಾಚಲಂನ ಕೇಂದ್ರ ಗರ್ಭಗುಡಿ, ಮೇಲ್ಭಾಗದಲ್ಲಿ ಸುದರ್ಶನ ಚಕ್ರ ಮತ್ತು ದೇವಾಲಯದ ದೇವತೆಯ ಸಣ್ಣ ಪ್ರತಿಕೃತಿ.

ಗರ್ಭಗುಡಿಯಲ್ಲಿ ಇರಿಸಲಾಗಿರುವ ಕೇಂದ್ರ ವಿಗ್ರಹವು ಸ್ವಯಂಭೂ (ಸ್ವಯಂ-ವ್ಯಕ್ತ) ಎಂದು ಪರಿಗಣಿತವಾಗಿದೆ. ರಾಮನು ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದಾನೆ, ಸೀತೆ ಅವನ ಮಡಿಲಲ್ಲಿ ಕುಳಿತಿದ್ದಾಳೆ. ರಾಮನ ನಾಲ್ಕು ಕೈಗಳು ಶಂಖ, ಚಕ್ರ, ಬಿಲ್ಲು ಮತ್ತು ಬಾಣಗಳನ್ನು ಹಿಡಿದಿವೆ. ಲಕ್ಷ್ಮಣ ಅವನ ಎಡಕ್ಕೆ ನಿಂತಿದ್ದಾನೆ.

ಹೆಚ್ಚು ಎತ್ತರದ ಬೆಟ್ಟದ ಮೇಲೆ, ಗೋಪಣ್ಣ ದಕ್ಷಿಣಕ್ಕೆ ಮುಖ ಮಾಡಿರುವ ವಿಷ್ಣುವಿನ ಒರಗುವ ರೂಪವಾದ ರಂಗನಾಥನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದನು. ಈ ಸ್ಥಳವು ರಂಗನಾಯಕುಲ ಗುಟ್ಟ (ರಂಗನಾಥನ ಬೆಟ್ಟ) ಎಂದು ಜನಪ್ರಿಯವಾಗಿದೆ. ರಂಗನಾಥ ಗರ್ಭಗುಡಿಯ ಎದುರು ಅವನ ಪತ್ನಿ ಲಕ್ಷ್ಮಿ ತಾಯರ್‌ಗೆ ಸಮರ್ಪಿತವಾದ ದೇವಾಲಯವಿದೆ. ಶ್ರೀರಂಗಂ ರಂಗನಾಥಸ್ವಾಮಿ ದೇವಸ್ಥಾನದ ಸಂಪ್ರದಾಯವನ್ನು ಅನುಸರಿಸಲು ಗೋಪಣ್ಣ ಈ ಎರಡು ದೇವಾಲಯಗಳನ್ನು ಸೇರಿಸಿದನು. ದೇವಾಲಯವು ಹಲವಾರು ಇತರ ದೇವಾಲಯಗಳನ್ನು ಹೊಂದಿದೆ. ದೇವಾಲಯದಲ್ಲಿ ಹನುಮಂತನಿಗೆ ಎರಡು ಗುಡಿಗಳಿವೆ: ನದಿ ದಂಡೆಯಲ್ಲಿರುವ ಅಭಯಾಂಜನೇಯ ದೇವಾಲಯ ಮತ್ತು ಭದ್ರಾಚಲಂನ ತಿರುವೀಧಿಯಲ್ಲಿ (ದೈವಿಕ ಮಾರ್ಗ) ದಾಸಾಂಜನೇಯ ದೇವಾಲಯ. ದೇವಾಲಯದ ರಾಜವೀಧಿಯಲ್ಲಿ (ರಾಯಲ್ ಹಾದಿ) ಗೋವಿಂದರಾಜ ಸ್ವಾಮಿಯ (ವಿಷ್ಣುವಿನ ಒಂದು ರೂಪ) ದೇವಾಲಯವನ್ನು ಕಾಣಬಹುದು, ಅಲ್ಲಿ ಭದ್ರಾಚಲಂನ ಉತ್ಸವದ ಪ್ರತಿಮೆಗಳು ತಿರುವೀಧಿ ಉತ್ಸವದ ಮೆರವಣಿಗೆಯಲ್ಲಿ ಸ್ವಲ್ಪ ಸಮಯವನ್ನು ಕಳೆಯುತ್ತವೆ. ನದಿ ದಡದಿಂದ ಮುಖ್ಯ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಯೋಗಾನಂದ- ನರಸಿಂಹರಿಗೆ ಒಂದು ಗುಡಿಯನ್ನು ಸಮರ್ಪಿಸಲಾಗಿದೆ. ಈ ವಿಗ್ರಹವು ಸ್ವಯಂಭೂ ಮತ್ತು ಅತ್ಯಂತ ಶಕ್ತಿಶಾಲಿ ಎಂದು ನಂಬಲಾಗಿದೆ.

ಲಕ್ಷ್ಮಿ ಥಾಯರ್ ದೇವಸ್ಥಾನದ ಪಕ್ಕದಲ್ಲಿ ಋಷ್ಯ ಮೂಖಂ ಪ್ರದರ್ಶನ ಕೇಂದ್ರವಿದೆ. ಮಧ್ಯದಲ್ಲಿ ಷಾಗೆ ನೀಡಲಾದ ರಾಮ ಮದ ನಾಣ್ಯಗಳು, ಗೋಪಣ್ಣ ದೇವತೆಗಳಿಗೆ ತಯಾರಿಸಿದ ಆಭರಣಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಇಡಲಾಗಿದೆ. ಆಭರಣಗಳು ಚಿಂತಾಕು ಪಟಕಮ್ (ಮಾಣಿಕ್ಯಗಳನ್ನು ಕೂಡಿಸಿದ ಕಂಠಹಾರ), ಕಿರೀಟಗಳು, ಜಡೆಯ ಅಲಂಕಾರಗಳು ಮತ್ತು ಮುತ್ಯಾಲ ಹರಮು (ಮುತ್ತುಗಳ ಸರಪಳಿ) ಒಳಗೊಂಡಿರುತ್ತದೆ. ದೇವಾಲಯದ ಹೊರಭಾಗದ ಸಂಚಾರ ಮಾರ್ಗದಲ್ಲಿ, ರಾಮ ಮತ್ತು ಸೀತೆಯ ವಿವಾಹ ಮಹೋತ್ಸವವನ್ನು ನಡೆಸಲು ಉದ್ದೇಶಿತವಾದ ನಿತ್ಯಕಲ್ಯಾಣ ಮಂಟಪ ಅಥವಾ ಕಲ್ಯಾಣ ಮಂಟಪ ಎಂಬ ಸಭಾಂಗಣವಿದೆ. ರಂಗನಾಯಕುಲ ಗುಟ್ಟದ ಮೇಲೆ ರಾಮಲಿಂಗೇಶ್ವರಸ್ವಾಮಿ ಎಂದು ಪೂಜಿಸಲ್ಪಡುವ ಶಿವನಿಗೆ ಸಮರ್ಪಿತವಾದ ದೇವಾಲಯವಿದೆ. ಕಲ್ಯಾಣ ಮಂಟಪದ ಬಳಿ ಗೋವಿಂದಸ್ವಾಮಿ ಮಠ ಎಂಬ ಹೆಸರಿನ ಆಶ್ರಮವಿದೆ. ಇಲ್ಲಿ ಹಿಂದೆ ಅನೇಕ ಸಂತರು ತಂಗಿದ್ದರು. ನರಸಿಂಹ ದಾಸು ಪೂಜಿಸಿದ ಪ್ರತಿಮೆಗಳನ್ನು ದೇವಾಲಯದ ದಕ್ಷಿಣ ತುದಿಯಲ್ಲಿರುವ ಅಂಬಾಸತ್ರದಲ್ಲಿ ಇರಿಸಲಾಗಿದೆ. ಇಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.

ಧಾರ್ಮಿಕ ಆಚರಣೆಗಳು

ಸೀತಾ ರಾಮಚಂದ್ರಸ್ವಾಮಿ ದೇವಾಲಯ 
ಭದ್ರಾಚಲಂ ದೇವಾಲಯದ ಪ್ರವೇಶದ್ವಾರ

ರಾಮಾಯಣ ಮತ್ತು ಇತರ ಪವಿತ್ರ ಪಠ್ಯಗಳ ಪ್ರಕಾರ, ರಂಗನಾಥನು ರಾಮನ ಕುಲದ ಇಕ್ಷ್ವಾಕು ರಾಜವಂಶದ ಕುಲದೇವತೆ (ರಕ್ಷಕ ದೇವತೆ) ಆಗಿದ್ದನು. ಆದ್ದರಿಂದ, ಈ ದೇವಾಲಯವು ರಂಗನಾಥನಿಗೆ ಸಮರ್ಪಿತವಾದ ಶ್ರೀರಂಗಂ ದೇವಾಲಯದ ಎಲ್ಲಾ ಸಂಪ್ರದಾಯಗಳು ಮತ್ತು ಮಾರ್ಗಸೂಚಿಗಳನ್ನು ಜಾರಿಗೆ ತರಬೇಕೆಂದು ಗೋಪಣ್ಣ ಬಯಸಿದ್ದನು. ಇದೇ ಕಾರಣಕ್ಕೆ ಪಂಚರಾತ್ರ ಆಗಮ ಸಂಪ್ರದಾಯಗಳನ್ನು ತಿಳಿದಿದ್ದ ಶ್ರೀರಂಗದ ಐದು ಕುಟುಂಬಗಳನ್ನು ಭದ್ರಾಚಲಂಗೆ ಕರೆಸಿಕೊಂಡನು. ಅವರ ನೆರವಿನಿಂದ ಶ್ರೀರಂಗಂ ದೇವಸ್ಥಾನದಲ್ಲಿ ಅನುಸರಿಸಲಾಗುತ್ತಿದ್ದ ಪೂಜಾ ಪದ್ಧತಿಯನ್ನು ಇಲ್ಲಿಯೂ ಜಾರಿಗೆ ತರಲಾಯಿತು. ನರಸಿಂಹ ದಾಸು ನಂತರ ದಶವಿಧೋತ್ಸವಗಳನ್ನು (ಹತ್ತು ವಿಧದ ಆಚರಣೆಗಳು) ಪರಿಚಯಿಸಿದರು, ಇದರಲ್ಲಿ ನಿತ್ಯ ಕೈಂಕರ್ಯಂಗಳು (ದೈನಂದಿನ ಆಚರಣೆಗಳು), ವಾರೋತ್ಸವಗಳು (ಸಾಪ್ತಾಹಿಕ ಆಚರಣೆಗಳು), ಪಕ್ಷೋತ್ಸವಗಳು (ಪಾಕ್ಷಿಕ ಆಚರಣೆಗಳು), ಮತ್ತು ಪುನರ್ವಸು ಉತ್ಸವಂ ( ಪುನರ್ವಸು ದಿನದ ಆಚರಣೆಗಳು) ಸೇರಿವೆ.

ಮುಖ್ಯ ಗರ್ಭಗುಡಿಯಲ್ಲಿ ಅಭಿಷೇಕವನ್ನು ಭದ್ರನ ದೇವಾಲಯದ ಕಲ್ಲಿನ ರಚನೆಯ ಮೇಲೆ ರಾಮನ ಪಾದಗಳಿಗೆ ಮಾತ್ರ ಮಾಡಲಾಗುತ್ತದೆ.ದೇವಾಲಯದಲ್ಲಿ ವಾರ್ಷಿಕ ಆಚರಣೆಗಳನ್ನು ಹೊರತುಪಡಿಸಿ ಸಾಪ್ತಾಹಿಕ, ಮಾಸಿಕ ಮತ್ತು ಪಾಕ್ಷಿಕ ಆಚರಣೆಗಳಿವೆ. ಕಲ್ಯಾಣಂ (ಮದುವೆ) ಮತ್ತು ತಿರುವೀಧಿ ಉತ್ಸವವನ್ನು (ಮೆರವಣಿಗೆ ಉತ್ಸವ) ಪ್ರತಿ ವರ್ಷ ರಂಗನಾಯಕುಲ ಗುಟ್ಟದಲ್ಲಿ ಅದರ ಪ್ರಧಾನ ದೇವರಾದ ರಂಗನಾಥನಿಗೆ ನಡೆಸಲಾಗುತ್ತದೆ.

ಹಬ್ಬಗಳು

ವೈಕುಂಠ ಏಕಾದಶಿ

ಸೀತಾ ರಾಮಚಂದ್ರಸ್ವಾಮಿ ದೇವಾಲಯ 
(ಎಡದಿಂದ ಬಲಕ್ಕೆ) ಭದ್ರಾಚಲಮ್‍ನಲ್ಲಿರುವ ಹನುಮಂತ, ಲಕ್ಷ್ಮಣ, ರಾಮ ಮತ್ತು ಸೀತೆಯರ ಉತ್ಸವ ಮೂರ್ತಿಗಳು

ವೈಕುಂಠ ಏಕಾದಶಿಯ ಆಚರಣೆಗಳು ಶ್ರೀರಂಗಮ್‍ನಲ್ಲಿ ಅನುಸರಿಸಲಾದ ಸಂಪ್ರದಾಯಗಳನ್ನು ಆಧರಿಸಿವೆ. ಬ್ರಹ್ಮ ಪುರಾಣದಲ್ಲಿ ಭದ್ರಾದ್ರಿ ಕ್ಷೇತ್ರ ಮಹಾತ್ಯಂ (ಭದ್ರಾದ್ರಿಯ ಮಹತ್ವ) ಪ್ರಕಾರ, ವೈಕುಂಠ ಏಕಾದಶಿಯ ವಾರ್ಷಿಕ ಉತ್ಸವದ ದಿನದಂದು ವೈಕುಂಠ ರಾಮನ ಆಶೀರ್ವಾದವನ್ನು ಪಡೆಯುವ ಭಕ್ತರು ಮೋಕ್ಷವನ್ನು ಪಡೆಯುತ್ತಾರೆ. ಪರಮಪುರುಷ ಸಂಹಿತಾ ಎಂಬ ಆಗಮ ಗ್ರಂಥವು ಭಕ್ತರು ತಮ್ಮ ಮೋಕ್ಷವನ್ನು ಪಡೆಯುವ ಬಯಕೆಯನ್ನು ಪೂರೈಸಿಕೊಳ್ಳಲು ಉತ್ತರ ದ್ವಾರದಿಂದ ಸಾಗುವ ಗರುಡನ ಮೆರವಣಿಗೆಯ ವಾಹನದ ಮೇಲೆ ಕುಳಿತಿರುವ ವಿಷ್ಣುವನ್ನು ವೀಕ್ಷಿಸಬೇಕು ಎಂದು ಹೇಳುತ್ತದೆ.

ವೈಕುಂಠ ಏಕಾದಶಿಗೆ ಪೂರ್ವಭಾವಿಯಾಗಿ, ತೆಪ್ಪೋತ್ಸವವನ್ನು (ತೇಲುವ ಹಬ್ಬ) ಆಚರಿಸಲಾಗುತ್ತದೆ. ಈ ಸಮಯದಲ್ಲಿ ಹಂಸವಾಹನಂ ಎಂಬ ಹೆಸರಿನ ಹಂಸಾಕಾರದ ದೋಣಿಯನ್ನು ಗೋದಾವರಿ ನದಿಯ ನೀರಿನಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಗಾಗಿ ಬಳಸಲಾಗುತ್ತದೆ. ರಾತ್ರಿ ವಿದ್ಯುತ್ ದೀಪಾಲಂಕಾರ ಹಾಗೂ ಪಟಾಕಿಗಳ ಬೆಳಕಿನಲ್ಲಿ ತೆಪ್ಪೋತ್ಸವ ನಡೆಯುತ್ತದೆ. ದೋಣಿಯು ನೀರಿನಲ್ಲಿ ಐದು ವೃತ್ತಾಕಾರದ ಸುತ್ತುಗಳನ್ನು ಹಾಕುತ್ತದೆ, ಮತ್ತು ಸುಮಾರು 26 ಜನರು ಮೆರವಣಿಗೆಯಲ್ಲಿ ವಿಗ್ರಹಗಳೊಂದಿಗೆ ಜೊತೆಗಿರುತ್ತಾರೆ. ವೈಕುಂಠ ಏಕಾದಶಿಯ ದಿನದಂದು, ರಾಮ, ಸೀತೆ ಮತ್ತು ಲಕ್ಷ್ಮಣರ ಉತ್ಸವ ಮೂರ್ತಿಗಳನ್ನು ಗರುಡವಾಹನದಲ್ಲಿ ಕೂರಿಸಲಾಗುತ್ತದೆ ಮತ್ತು ಭಕ್ತರು ವೈಕುಂಠ ದ್ವಾರದ ಮೂಲಕ ಸಾಗಿ ಹೋಗುತ್ತಾರೆ. ಗೋದಾ ಕಲ್ಯಾಣಂ ಮತ್ತು ರಥೋತ್ಸವ 21-ದಿನದ ಆಚರಣೆಗಳ ಇತರ ಪ್ರಮುಖ ಚಟುವಟಿಕೆಗಳಾಗಿವೆ; ಎರಡನೆಯದು ಮಕರ ಸಂಕ್ರಾಂತಿ ಹಬ್ಬದ ಕಾಲದಲ್ಲಿ ನಡೆಯುತ್ತದೆ.

ವಸಂತೋತ್ಸವಂ

ವಾರ್ಷಿಕ ಬ್ರಹ್ಮೋತ್ಸವದ ತಯಾರಿಯ ಪ್ರಾರಂಭವನ್ನು ಗುರುತಿಸಲು ವಸಂತೋತ್ಸವವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಹೋಳಿಯ ದಿನದಂದು ನಡೆಯುತ್ತದೆ ಮತ್ತು ಮುತ್ಯಾಲ ತಾಳಂಬ್ರಲು (ಮುತ್ತುಗಳು ಮತ್ತು ಅಕ್ಕಿಯಿಂದ ಮಾಡಿದ ತಾಳಂಬ್ರಲು ; ಇದು ದಕ್ಷಿಣ-ಭಾರತೀಯ ವಿವಾಹ ವಿಧಿಗಳಲ್ಲಿ ಬಳಸಲಾಗುವ ಅಕ್ಕಿ ಮತ್ತು ಅರಿಶಿನದ ಮಿಶ್ರಣವಾಗಿದೆ). ನೈಸರ್ಗಿಕ ಮುತ್ತುಗಳನ್ನು ಅಕ್ಕಿ ಧಾನ್ಯಗಳೊಂದಿಗೆ ಬೆರೆಸಲಾಗುತ್ತದೆ. ಇವುಗಳ ಹೊಟ್ಟುಗಳನ್ನು ಉಗುರುಗಳಿಂದ ತೆಗೆದುಹಾಕಿರಲಾಗುತ್ತದೆ ಮತ್ತು ಅರಿಶಿನ ಪುಡಿಯನ್ನು ಸೇರಿಸಲಾಗಿರುತ್ತದೆ. ಈ ಸಂಪೂರ್ಣ ಮಿಶ್ರಣವನ್ನು ಕೈಯಿಂದ ಸಂಸ್ಕರಿಸಲಾಗುತ್ತದೆ. ಸುಗಂಧಯುಕ್ತ ಪದಾರ್ಥಗಳ ಸೇರ್ಪಡೆಯಿರುವ ಈ ಮಿಶ್ರಣವನ್ನು ಗೋಟಿ ತಾಳಂಬ್ರಲು (ಉಗುರುಗಳಿಂದ ನಯಗೊಳಿಸಲಾದ ತಾಳಮರಾಲು) ಎಂದು ಕರೆಯಲಾಗುತ್ತದೆ.

ಒಂಬತ್ತು ಖಂಡಗಳ ಅರಿಶಿನ ಪುಡಿ ಮತ್ತು ಇತರ ಸುಗಂಧಯುಕ್ತ ಪದಾರ್ಥಗಳನ್ನು ಬಳಸಿ ರಾಮನ ವಿಗ್ರಹವನ್ನು ಅಲಂಕರಿಸಲಾಗುತ್ತದೆ. ಅರ್ಚಕರು ಮಹಾ ಕುಂಭಪ್ರೋಕ್ಷಣೆ (ದೇವಾಲಯದ ಪವಿತ್ರೀಕರಣ) ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಬಳಸಿದ ನೀರನ್ನು ವಸಂತ ತೀರ್ಥಂ ಎಂದು ಕರೆಯಲಾಗುತ್ತದೆ, ನಂತರ ಹೋಳಿ ಆಚರಿಸುವ ಭಕ್ತರ ಮೇಲೆ ಇದನ್ನು ಚಿಮುಕಿಸಲಾಗುತ್ತದೆ. ಡೋಲೋತ್ಸವವನ್ನು (ಜೋಕಾಲಿಯ ಆಚರಣೆ) ವಸಂತೋತ್ಸವವನ್ನು ಮುಕ್ತಾಯಗೊಳಿಸಲು ಉತ್ಸವ ಮೂರ್ತಿಗಳನ್ನು ಚಿನ್ನದ ತೊಟ್ಟಿಲಿನಲ್ಲಿ ಇರಿಸುವ ಮೂಲಕ ಮತ್ತು ಲಾಲಿಹಾಡುಗಳನ್ನು ಹಾಡುವ ಮೂಲಕ ನಡೆಸಲಾಗುತ್ತದೆ.

ಬ್ರಹ್ಮೋತ್ಸವ

ಸೀತಾ ರಾಮಚಂದ್ರಸ್ವಾಮಿ ದೇವಾಲಯ 
ವಾರ್ಷಿಕ ಶ್ರೀ ಸೀತಾರಾಮ ತಿರುಕಲ್ಯಾಣ ಮಹೋತ್ಸವವನ್ನು ಆಚರಿಸುವ ಮಿಥಿಲಾ ಸ್ಟೇಡಿಯಮ್‍ನ ಪ್ರವೇಶದ್ವಾರ

ಮುಖ್ಯ ದೇವಾಲಯ ಉತ್ಸವವೆಂದರೆ ಹನ್ನೆರಡು ದಿನಗಳ ವಾರ್ಷಿಕ ಬ್ರಹ್ಮೋತ್ಸವಂ ಉತ್ಸವ (ವಸಂತ ಪಕ್ಷ ಪ್ರಯುಕ್ತ ಶ್ರೀರಾಮ ನವಮಿ ಬ್ರಹ್ಮೋತ್ಸವಂ), ಮಾರ್ಚ್ — ಏಪ್ರಿಲ್‍ನಲ್ಲಿ ಆಚರಿಸಲಾಗುತ್ತದೆ. ರಾಮನ ಜನ್ಮದಿನವಾದ ರಾಮ ನವಮಿಯು ಬ್ರಹ್ಮೋತ್ಸವದ ಪ್ರಮುಖ ಕಾರ್ಯಕ್ರಮವಾಗಿದೆ. ಪಂಚರಾತ್ರ ಆಗಮ ನಿಯಮಗಳ ಪ್ರಕಾರ, ಸೀತೆಯೊಂದಿಗೆ ರಾಮನ ವಿವಾಹವು ಈ ದಿನ ನಡೆಯುತ್ತದೆ; ಪುನರ್ವಸು ಮತ್ತು ಅಭಿಜಿತ್ ನಕ್ಷತ್ರಗಳ ಉಪಸ್ಥಿತಿಯನ್ನು ಸೂಚಿಸುವ ಸಮಯದಲ್ಲಿ ಮದುವೆಯನ್ನು ನಡೆಸಲಾಗುತ್ತದೆ. ಈ ಹಬ್ಬವನ್ನು ಔಪಚಾರಿಕವಾಗಿ ಶ್ರೀ ಸೀತಾರಾಮ ತಿರುಕಲ್ಯಾಣ ಮಹೋತ್ಸವ ಎಂದು ಕರೆಯಲಾಗುತ್ತದೆ.

ಉತ್ಸವ ಮೂರ್ತಿಗಳ ವಿಶೇಷ ಸ್ನಾಪನಂ (ವಿಶೇಷ ಶುದ್ಧೀಕರಣ) ನಂತರ ಅಂಕುರಾರ್ಪಣಂ (ಔಪಚಾರಿಕ ಆರಂಭ), ಪಂಚಾಂಗಂ ಉಕ್ತಲೇಖನವನ್ನು ಆಲಿಸುವುದು ಮತ್ತು ತಿರುವೀಧಿ ಉತ್ಸವವನ್ನು ನೆರವೇರಿಸುವ ಮೂಲಕ ಬ್ರಹ್ಮೋತ್ಸವವನ್ನು ಪ್ರಾರಂಭಿಸಲಾಗುತ್ತದೆ. ಗರುಡನ ಚಿತ್ರವಿರುವ ಬಿಳಿ ಬಟ್ಟೆಯಿಂದ ಮಾಡಿದ ಧ್ವಜವಾದ ದ್ವಜಪಟ ಭದ್ರಕ ಮಂಡಲ ಲೇಖನಂ ನ್ನು ತಯಾರಿಸಲಾಗುತ್ತದೆ ಮತ್ತು ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಗರುಡನ ಚಿತ್ರದಲ್ಲಿನ ಕಣ್ಣುಗಳು ಮೇಣದಿಂದ ಮುಚ್ಚಲ್ಪಟ್ಟಿದೆ, ಅದರಲ್ಲಿ ಐದು ಬಣ್ಣಗಳಿವೆ. ಧ್ವಜವನ್ನು ಗರುಡನ್ಯಾಸಂ ಮತ್ತು ಗರುಡ ಧ್ಯಾನಂ ಮುಂತಾದ ಸ್ತೋತ್ರಗಳಿಂದ ಪೂಜಿಸಲಾಗುತ್ತದೆ. ದೇವಾಲಯದ ಕೇಂದ್ರ ವಿಗ್ರಹದ ಪಾದದಲ್ಲಿ ಧ್ವಜವನ್ನು ಇರಿಸಿದ ನಂತರ, ಅದನ್ನು ವೇದಿಗೆ (ಅಗ್ನಿಪೀಠ) ತೆಗೆದುಕೊಂಡು ಹೋಗಿ ಅಕ್ಕಿಯ ರಾಶಿಯ ಮೇಲೆ ಇರಿಸಲಾಗುತ್ತದೆ. ಪವಿತ್ರ ನೀರನ್ನು ಹೊಂದಿರುವ ಹದಿನಾರು ಕಲಶಗಳೊಂದಿಗೆ ಧ್ವಜಕ್ಕೆ ಅಭಿಷೇಕ (ವಿಮೋಚನೆ) ಮಾಡುವ ಮೂಲಕ ಕಾರ್ಯವಿಧಾನವನ್ನು ಪೂರ್ಣಗೊಳಿಸಲಾಗುತ್ತದೆ. ಈ ಆಚರಣೆಯನ್ನು ಗರುಡಾಧಿವಾಸಂ (ಗರುಡನನ್ನು ಆಹ್ವಾನಿಸುವುದು) ಎಂದು ಕರೆಯಲಾಗುತ್ತದೆ.

ಸೀತಾ ರಾಮಚಂದ್ರಸ್ವಾಮಿ ದೇವಾಲಯ 
2011 ರಲ್ಲಿ ಭದ್ರಾಚಲಂನಲ್ಲಿ ಶ್ರೀ ಸೀತಾರಾಮ ತಿರುಕಲ್ಯಾಣ ಮಹೋತ್ಸವ ಆಚರಣೆ. ಒಬ್ಬ ಪುರೋಹಿತರು ಗೋಪಣ್ಣ ಒದಗಿಸಿದ ಮೂರು ಚಕ್ರಗಳಿರುವ ಮಂಗಳ ಸೂತ್ರವನ್ನು ಹಿಡಿದಿದ್ದಾರೆ.

ಗರುಡಧಿವಸಂನ ನಂತರ, ಪುರೋಹಿತರು ದ್ವಜಾರೋಹಣವನ್ನು ಮಾಡುತ್ತಾರೆ ಮತ್ತು ವಿಶೇಷ ಅಗ್ನಿ ಆಚರಣೆಯನ್ನು ಪ್ರಾರಂಭಿಸುತ್ತಾರೆ. ಬ್ರಹ್ಮೋತ್ಸವವು ಮದುವೆಗೆ ಮುಂದುವರಿಯುವ ಮುನ್ನ ಎದುರುಕೋಲು (ಮದುಮಗನನ್ನು ಸ್ವಾಗತಿಸುವ) ಕಾರ್ಯಕ್ರಮದೊಂದಿಗೆ ಮುಂದುವರಿಯುತ್ತದೆ. ಷಾ, ಗೋಪಣ್ಣನನ್ನು ಕಾರಾಗೃಹದಿಂದ ಬಿಡುಗಡೆ ಮಾಡಿದ ನಂತರ, ದೇವಾಲಯದಲ್ಲಿ ಮದುವೆಯ ಮುನ್ನಾದಿನದಂದು ರಾಮ ಮತ್ತು ಸೀತೆಗೆ ಉಡುಗೊರೆಯಾಗಿ ಮುತ್ತುಗಳು ಮತ್ತು ರೇಷ್ಮೆ ನಿಲುವಂಗಿಯನ್ನು ಕಳುಹಿಸುವ ಸಂಪ್ರದಾಯವನ್ನು ಪ್ರಾರಂಭಿಸಿದನು. ಈ ಸಂಪ್ರದಾಯವು ಕುತುಬ್ ಶಾಹಿ ಆಳ್ವಿಕೆಯ ಉದ್ದಕ್ಕೂ, ಮತ್ತು ಎಲ್ಲಾ ನಂತರದ ಸರ್ಕಾರಗಳುದ್ದಕ್ಕೆ ಅಡೆತಡೆಯಿಲ್ಲದೆ ಮುಂದುವರೆಯಿತು. ತಿರುಕಲ್ಯಾಣ ಮಹೋತ್ಸವದಲ್ಲಿ ಗೋಟಿ ತಾಳಂಬ್ರಗಳ ಜೊತೆಗೆ ಈ ಮುತ್ತುಗಳನ್ನು ಬಳಸಲಾಗುತ್ತದೆ.

ಈ ಮದುವೆ ಸಮಾರಂಭದಲ್ಲಿ ಬಳಸಲಾಗುವ ಮಂಗಳ ಸೂತ್ರದ ಕಂಠಹಾರವು ಮೂರು ನಾಣ್ಯ ಗಾತ್ರದ ಚಿನ್ನದ ಬಿಲ್ಲೆಗಳನ್ನು ಹೊಂದಿರುತ್ತದೆ. ತೆಲುಗು ಸಂಪ್ರದಾಯದ ಪ್ರಕಾರ, ಒಂದು ಬಿಲ್ಲೆಯು ರಾಮನ ತಂದೆ ದಶರಥನಿಗೆ ಮತ್ತು ಎರಡನೆಯದು ಸೀತೆಯ ತಂದೆಯಾದ ಜನಕನಿಗೆ ಸಂಬಂಧಿಸಿದೆ. ಮೂರನೆಯದು ಸೀತೆಯನ್ನು ತನ್ನ ಮಗಳೆಂದು ಪರಿಗಣಿಸಿದ ಗೋಪಣ್ಣನಿಗೆ ಸಂಬಂಧಿಸಿದೆ. ಗೋಪಣ್ಣ ಒದಗಿಸಿದ ಈ ಮೂರು ಬಿಲ್ಲೆಗಳ ಮಂಗಳಸೂತ್ರವು ಭದ್ರಾಚಲಂನಲ್ಲಿ ಮಾತ್ರ ಲಭ್ಯವಿದ್ದು ಇಂದಿಗೂ ಬಳಕೆಯಲ್ಲಿದೆ. ಮದುವೆ ಸಮಾರಂಭ ಮುಗಿದ ನಂತರ ಮಹಾಪಟ್ಟಾಭಿಷೇಕ (ಪಟ್ಟಾಭಿಷೇಕ ಸಮಾರಂಭ) ಮತ್ತು ತೆಪ್ಪೋತ್ಸವ ನಡೆಯುತ್ತದೆ. ಶ್ರೀಪುಷ್ಪಯಾಗ (ಹೂವಿನ ಪೂಜೆ) ಮುಕ್ತಾಯದೊಂದಿಗೆ ಬ್ರಹ್ಮೋತ್ಸವವು ಕೊನೆಗೊಳ್ಳುತ್ತದೆ.

ವಿಜಯದಶಮಿ

ಹತ್ತು ದಿನಗಳ ದಸರಾ ಭದ್ರಾಚಲಂನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಯಜ್ಞದ ಆಚರಣೆಯಲ್ಲಿ ಪ್ರತಿದಿನ ಸೇರಿದಂತೆ ಹತ್ತು ದಿನಗಳ ಕಾಲ ರಾಮಾಯಣವನ್ನು ಓದಲಾಗುತ್ತದೆ, ಇದು ಹತ್ತನೇ ದಿನದಂದು ಕೊನೆಗೊಳ್ಳುತ್ತದೆ ಮತ್ತು ಇದನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಪಂಚರಾತ್ರ ಆಗಮ ನಿಯಮಗಳ ಪ್ರಕಾರ ಲಕ್ಷ್ಮಿ ತಾಯರ್ ದೇವಸ್ಥಾನದಲ್ಲಿ ಆಚರಣೆಗಳನ್ನು ನಡೆಸಲಾಗುತ್ತದೆ. ವಿಜಯದಶಮಿಯಂದು, ಲಕ್ಷ್ಮಿ ತಾಯರ್‌ನ ನಿಜರೂಪ ದರ್ಶನಂ (ನಿಜವಾದ ರೂಪ ದರ್ಶನ) ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಬೆಳಿಗ್ಗೆ, ಲಕ್ಷ್ಮೀ ತಾಯರ್‌ಗೆ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆ (ಸಾವಿರ ಗುಣಗಳ ಪಠಣ) ಮಾಡಲಾಗುತ್ತದೆ.

ದಸರಾ ಆಚರಣೆಯ ಪ್ರಮುಖ ಕಾರ್ಯಕ್ರಮಗಳೆಂದರೆ ರಾಮನ ಮದುವೆ ಹಾಗೂ ಪಟ್ಟಾಭಿಷೇಕ ಮತ್ತು ನಂತರ ಅವನ ಆಯುಧಗಳು ಮತ್ತು ಶಮಿ ವೃಕ್ಷಕ್ಕೆ ವಿಶೇಷ ಪ್ರಾರ್ಥನೆಗಳು. ಯಜ್ಞ ಮುಗಿದ ನಂತರ, ರಾಮನ ಮೂರ್ತಿಗೆ ಚಕ್ರವರ್ತಿಯಂತೆ ಉಡುಪು ಹಾಕಲಾಗುತ್ತದೆ ಮತ್ತು ಗಜ (ಆನೆ) ಹಾಗೂ ಅಶ್ವ (ಕುದುರೆ) ವಾಹನಗಳ ಮೇಲೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಆಯುಧ ಪೂಜೆಯ ಅಂಗವಾಗಿ ರಾಮನ ಶಂಖ, ಚಕ್ರ, ಬಿಲ್ಲು, ಮತ್ತು ಗದೆಗಳನ್ನು ಬಳಸಲಾಗುತ್ತದೆ. ವೈದಿಕ ದೇವತೆಗಳಾದ ಇಂದ್ರ, ಯಮ, ವರುಣ ಮತ್ತು ಕುಬೇರರ ಶಕ್ತಿಗಳನ್ನು ಪ್ರತಿನಿಧಿಸುವ ಬಾಣಗಳನ್ನು ಸಹ ಪೂಜೆಯ ಭಾಗವಾಗಿ ಮಾಡಲಾಗುತ್ತದೆ. ರಾತ್ರಿಯ ಸಾಂಪ್ರದಾಯಿಕ ರಾಮಲೀಲಾ ಸಮಾರಂಭದ ಆಚರಣೆಯೊಂದಿಗೆ ಕಾರ್ಯಕ್ರಮವು ಕೊನೆಗೊಳ್ಳುತ್ತದೆ.

ಇತರ ಹಬ್ಬಗಳು

ಭದ್ರಾಚಲಮ್‍ನಲ್ಲಿ ಆಚರಿಸಲಾಗುವ ಇತರ ಪ್ರಮುಖ ಹಬ್ಬಗಳೆಂದರೆ ಹನುಮ ಜಯಂತಿ, ಶಬರಿ ಸ್ಮೃತಿ ಯಾತ್ರೆ ಮತ್ತು ಧಮ್ಮಕ್ಕ ಸೇವಾ ಯಾತ್ರೆ. ಹನುಮ ಜಯಂತಿಯನ್ನು ದಾಸಂಜನೇಯ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ, ಎಲೆ ಪೂಜೆ ಮತ್ತು ತಿರುವೀದಿ ಉತ್ಸವವು ಇದರ ಮುಖ್ಯ ಕಾರ್ಯಕ್ರಮಗಳಾಗಿವೆ. ಭಕ್ತರು ತಮ್ಮ ಹನುಮಾನ್ ದೀಕ್ಷೆಯ ಮುಕ್ತಾಯವನ್ನು ರಾಮನ ಮುಂದೆ ಇರುಮುಡಿಯನ್ನು (ಪವಿತ್ರ ಕಟ್ಟು) ಬಿಚ್ಚಿ ದಾಸಂಜನೇಯ ದೇವಸ್ಥಾನದಲ್ಲಿ ಅರ್ಪಿಸುತ್ತಾರೆ. ಶಬರಿ ಸ್ಮೃತಿ ಯಾತ್ರೆಗಾಗಿ, ಸ್ಥಳೀಯ ಬುಡಕಟ್ಟುಗಳ ಸದಸ್ಯರು ವಿಶಿಷ್ಟವಾದ ಶಿರಸ್ತ್ರಾಣ ಮತ್ತು ಉಡುಪುಗಳನ್ನು ಧರಿಸುತ್ತಾರೆ. ಅವರು ಡೋಲು ಬಡಿತಗಳಿಗೆ ಹಾಡಿ ನರ್ತಿಸುತ್ತಾರೆ ಮತ್ತು ತಮ್ಮ ಬಿಲ್ಲುಗಾರಿಕೆ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ.

ಧಮ್ಮಕ್ಕ ಸೇವಾ ಯಾತ್ರೆಯ ಪ್ರಮುಖ ಕಾರ್ಯಕ್ರಮವೆಂದರೆ ಗೋವಿಂದರಾಜ ಸ್ವಾಮಿ ಮತ್ತು ಅವನ ಪತ್ನಿಯರ ವಿವಾಹ. ಭದ್ರಾಚಲಂ ಸುತ್ತಮುತ್ತಲಿನ 29 ಮಂಡಲಗಳ ಬುಡಕಟ್ಟು ಸದಸ್ಯರ ಪೈಕಿಯ ವಿಶೇಷ ಸಾಧಕರು ಧಮ್ಮಕ್ಕನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಅವರು ಹೂವು ಮತ್ತು ಹಣ್ಣುಗಳ ಜೊತೆಗೆ ದೇವರಿಗೆ ತಾಳಂಬರಗಳನ್ನು ಅರ್ಪಿಸುತ್ತಾರೆ ಮತ್ತು ಸಾಂಪ್ರದಾಯಿಕ ನೃತ್ಯಗಳನ್ನು ಮಾಡುತ್ತಾರೆ. ಇವುಗಳಲ್ಲದೆ, ಗೋಪಣ್ಣ ಮತ್ತು ನರಸಿಂಹ ದಾಸು ಅವರ ಜಯಂತಿ ಉತ್ಸವವನ್ನು (ಹುಟ್ಟುಹಬ್ಬ) ವಾರ್ಷಿಕವಾಗಿ ಆಚರಿಸಲಾಗುತ್ತದೆ.

ಧಾರ್ಮಿಕ ಮಹತ್ವ

ಸೀತಾ ರಾಮಚಂದ್ರಸ್ವಾಮಿ ದೇವಾಲಯ 
2015 ರಲ್ಲಿ ಭದ್ರಾಚಲಮ್‍ನಲ್ಲಿ ಮಹಾ ಪುಷ್ಕರಂ

ರಾಮನ ವೈಕುಂಠ ರಾಮ ರೂಪದ ಮೂರ್ತಿಶಿಲ್ಪವು ಅದ್ವಿತೀಯವಾಗಿದ್ದು ದೇಶದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಬ್ರಹ್ಮ ಪುರಾಣವು ದೇವಾಲಯದ ಮಹತ್ವವನ್ನು ವಿಶೇಷವಾಗಿ ಉಲ್ಲೇಖಿಸುತ್ತದೆ ಮತ್ತು ವೈಕುಂಠ ರಾಮನು ಭದ್ರಾಚಲಂನಲ್ಲಿ ತನ್ನನ್ನು ಪೂಜಿಸುವವರಿಗೆ ಜ್ಞಾನವನ್ನು ನೀಡಲು ಸಮರ್ಥನಾಗಿದ್ದಾನೆ ಎಂದು ಸೇರಿಸುತ್ತದೆ. ನದಿಯ ಪುಷ್ಕರಂ ಮತ್ತು ಮಹಾ ಪುಷ್ಕರಮ್‍ಗಳನ್ನು ಕ್ರಮವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಮತ್ತು 144 ವರ್ಷಗಳಿಗೊಮ್ಮೆ ಇತರವುಗಳೊಂದಿಗೆ ಇಲ್ಲಿ ಆಚರಿಸಲಾಗುತ್ತದೆ.

ದಂತಕಥೆಯ ಪ್ರಕಾರ, ರಾಮನ ಭಕ್ತನಾಗಿದ್ದ ಮುಸ್ಲಿಂ ಸಂತ ಕಬೀರನಿಗೆ ಒಮ್ಮೆ ಅರ್ಚಕರು ದೇವಾಲಯದ ಪ್ರವೇಶವನ್ನು ನಿರಾಕರಿಸಿದರು. ದೇವಾಲಯದ ವಿಗ್ರಹಗಳು ಕ್ಷಣಮಾತ್ರಕ್ಕೆ ಮಾಯವಾದವು. ಅಲ್ಲಿದ್ದ ರಾಮದಾಸನು ಸಂತರನ್ನು ದೇವಾಲಯದ ಒಳಗೆ ಬಿಡುವಂತೆ ಅರ್ಚಕರಿಗೆ ಮನವಿ ಮಾಡಿದನು. ನಂತರ ವಿಗ್ರಹಗಳು ಮತ್ತೆ ಕಾಣಿಸಿಕೊಂಡವು.

ಗೋಪಣ್ಣನು ಮೂಡಿಸಿದ ವೈಷ್ಣವ ಸಂಪ್ರದಾಯದ ಅರಿವು, ಅಂತಿಮವಾಗಿ ತೆಲುಗು ಮಾತನಾಡುವ ರಾಜ್ಯಗಳಲ್ಲಿ, ವಿಶೇಷವಾಗಿ ಹಳ್ಳಿಗಳಲ್ಲಿ ರಾಮ ಮಂದಿರಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಗೋಪಣ್ಣನವರ ಹಾಡುಗಳು ಭಾರತೀಯ ಕರ್ನಾಟಕ ಸಂಗೀತದಲ್ಲಿ ಹಲವಾರು ಹಾಡುಗಳನ್ನು ರಚಿಸಿದ ರಾಮನ ಇನ್ನೊಬ್ಬ ಭಕ್ತ ತ್ಯಾಗರಾಜರಿಗೆ ಸ್ಫೂರ್ತಿ ನೀಡಿತು. ತ್ಯಾಗರಾಜರು ಗೋಪಣ್ಣನನ್ನು ತಮ್ಮ "ನಾಯಕ" ಎಂದು ಗೌರವಿಸಿದರು. ಅವರು ವೈಕುಂಠ ರಾಮನನ್ನು ಸ್ತುತಿಸಿ ಗೋಪಣ್ಣ ಬರೆದ ಹಾಡುಗಳ ಮಾದರಿಯಲ್ಲಿ ಹಲವಾರು ಹಾಡುಗಳನ್ನು ರಚಿಸಿದರು. ರಾಮನ ಮದುವೆಯ ದಿನದಂದು ಮುತ್ತುಗಳು ಮತ್ತು ರೇಷ್ಮೆ ವಸ್ತ್ರಗಳನ್ನು ನೀಡುವ ವಾರ್ಷಿಕ ಸಂಪ್ರದಾಯವನ್ನು ಈ ದೇವರಿಗೆ ಸಮರ್ಪಿತವಾದ ಇತರ ಅನೇಕ ಸಣ್ಣ ದೇವಾಲಯಗಳಲ್ಲಿ ನಕಲು ಮಾಡಲಾಗಿದೆ.

ಭದ್ರಾಚಲಂ ಪ್ರದೇಶದಲ್ಲಿ ರಾಮಾಯಣ ಮಹಾಕಾವ್ಯಕ್ಕೆ ಸಂಬಂಧಿಸಿದ ಹಲವಾರು ಹಿಂದೂ ದೇವಾಲಯಗಳಿವೆ.

ಉಲ್ಲೇಖಗಳು

ಗ್ರಂಥಸೂಚಿ

ಹೊರಗಿನ ಕೊಂಡಿಗಳು

Tags:

ಸೀತಾ ರಾಮಚಂದ್ರಸ್ವಾಮಿ ದೇವಾಲಯ ದೇವಾಲಯಸೀತಾ ರಾಮಚಂದ್ರಸ್ವಾಮಿ ದೇವಾಲಯ ಧಾರ್ಮಿಕ ಆಚರಣೆಗಳುಸೀತಾ ರಾಮಚಂದ್ರಸ್ವಾಮಿ ದೇವಾಲಯ ಹಬ್ಬಗಳುಸೀತಾ ರಾಮಚಂದ್ರಸ್ವಾಮಿ ದೇವಾಲಯ ಧಾರ್ಮಿಕ ಮಹತ್ವಸೀತಾ ರಾಮಚಂದ್ರಸ್ವಾಮಿ ದೇವಾಲಯ ಉಲ್ಲೇಖಗಳುಸೀತಾ ರಾಮಚಂದ್ರಸ್ವಾಮಿ ದೇವಾಲಯ ಗ್ರಂಥಸೂಚಿಸೀತಾ ರಾಮಚಂದ್ರಸ್ವಾಮಿ ದೇವಾಲಯ ಹೊರಗಿನ ಕೊಂಡಿಗಳುಸೀತಾ ರಾಮಚಂದ್ರಸ್ವಾಮಿ ದೇವಾಲಯಅಯೋಧ್ಯೆಅವತಾರಗೋದಾವರಿತೆಲಂಗಾಣಭದ್ರಾಚಲಂರಾಮವಿಷ್ಣುಹಿಂದೂ ದೇವಸ್ಥಾನ

🔥 Trending searches on Wiki ಕನ್ನಡ:

ಶನಿ (ಗ್ರಹ)ಹೆಚ್.ಡಿ.ಕುಮಾರಸ್ವಾಮಿಅಲಾವುದ್ದೀನ್ ಖಿಲ್ಜಿ೧೬೦೮ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತೀಯ ಭಾಷೆಗಳುಭೂಕಂಪಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಎಚ್ ೧.ಎನ್ ೧. ಜ್ವರಬಿ. ಎಂ. ಶ್ರೀಕಂಠಯ್ಯದಾಸ ಸಾಹಿತ್ಯಗ್ರಾಮ ಪಂಚಾಯತಿನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಗಿರೀಶ್ ಕಾರ್ನಾಡ್ದಯಾನಂದ ಸರಸ್ವತಿಕದಂಬ ರಾಜವಂಶಪಗಡೆತೆರಿಗೆಅದ್ವೈತಖಂಡಕಾವ್ಯಗಾಂಧಿ ಜಯಂತಿಕಾದಂಬರಿಶಾತವಾಹನರುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೂಲಧಾತುಪ್ರೇಮಾಸುಮಲತಾಚಂದ್ರಯಾನ-೩ಹೊಯ್ಸಳಮೆಕ್ಕೆ ಜೋಳಕನ್ನಡ ಸಾಹಿತ್ಯ ಪರಿಷತ್ತುಮೂಲಭೂತ ಕರ್ತವ್ಯಗಳುಭಾರತೀಯ ಸಂಸ್ಕೃತಿಚಿನ್ನದ್ವಿರುಕ್ತಿಮಾರುಕಟ್ಟೆಸಿಂಧನೂರುಮಾನ್ವಿತಾ ಕಾಮತ್ಚೋಮನ ದುಡಿ (ಸಿನೆಮಾ)ಶಾಂತಲಾ ದೇವಿಎಳ್ಳೆಣ್ಣೆಕರ್ನಾಟಕದ ತಾಲೂಕುಗಳುಕರ್ನಾಟಕದ ಮಹಾನಗರಪಾಲಿಕೆಗಳುಮತದಾನ (ಕಾದಂಬರಿ)ಚೋಳ ವಂಶಹಾಸನ ಜಿಲ್ಲೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುನೇಮಿಚಂದ್ರ (ಲೇಖಕಿ)ಮಹಾಭಾರತಶ್ರೀಕೃಷ್ಣದೇವರಾಯಅಮ್ಮಡಿ.ವಿ.ಗುಂಡಪ್ಪಅಂಬಿಗರ ಚೌಡಯ್ಯಭಾರತೀಯ ಕಾವ್ಯ ಮೀಮಾಂಸೆತತ್ಪುರುಷ ಸಮಾಸಭಾರತದ ಸಂವಿಧಾನಮೋಕ್ಷಗುಂಡಂ ವಿಶ್ವೇಶ್ವರಯ್ಯಮಾನವ ಹಕ್ಕುಗಳುಹುಲಿಊಟಬೆಟ್ಟದ ನೆಲ್ಲಿಕಾಯಿಧರ್ಮನೀತಿ ಆಯೋಗಹನಿ ನೀರಾವರಿಹನುಮಾನ್ ಚಾಲೀಸಹಲಸುವಾದಿರಾಜರುಭಾರತದ ಸರ್ವೋಚ್ಛ ನ್ಯಾಯಾಲಯಭಾರತೀಯ ಸ್ಟೇಟ್ ಬ್ಯಾಂಕ್ಕೇಶಿರಾಜಗಾಳಿ/ವಾಯುಕೂಡಲ ಸಂಗಮಭಾರತೀಯ ರಿಸರ್ವ್ ಬ್ಯಾಂಕ್ಕನ್ನಡದಲ್ಲಿ ಗಾದೆಗಳುರಮ್ಯಾದಂತಿದುರ್ಗಮೊದಲನೆಯ ಕೆಂಪೇಗೌಡಕೃಷ್ಣರಾಜಸಾಗರ🡆 More