ಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (ಅನುವಾದ: ಉದಾರ ಮನಸ್ಸಿನವನು ವಧುವನ್ನು ಕರೆದೊಯ್ಯುವನು) (ಡಿಡಿಎಲ್‍ಜೆ ಎಂಬ ಆದ್ಯಕ್ಷರ ಗುಚ್ಛದಿಂದಲೂ ಪರಿಚಿತವಾಗಿದೆ) ಒಂದು ಹಿಂದಿ ಪ್ರಣಯಪ್ರಧಾನ ಚಲನಚಿತ್ರವಾಗಿದೆ.

ಇದನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದಾರೆ (ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ) ಮತ್ತು ಅವರ ತಂದೆ ಯಶ್ ಚೋಪ್ರಾ ನಿರ್ಮಾಣ ಮಾಡಿದ್ದಾರೆ ಮತ್ತು ಜಾವೇದ್ ಸಿದ್ದೀಕಿ ಹಾಗೂ ಆದಿತ್ಯ ಚೋಪ್ರಾ ಬರೆದಿದ್ದಾರೆ. ೨೦ ಅಕ್ಟೋಬರ್ ೧೯೯೫ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕಾಜೊಲ್ ನಟಿಸಿದ್ದಾರೆ. ಕಥೆಯು ತಮ್ಮ ಮಿತ್ರರೊಂದಿಗೆ ಯೂರೋಪ್‍ನ ಕೊನೆಯಿಂದ ಕೊನೆಯವರೆಗಿನ ರಜಾಕಾಲದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸುವ ಇಬ್ಬರು ಯುವ ಅನಿವಾಸಿ ಭಾರತೀಯರ ಮೇಲೆ ಕೇಂದ್ರೀಕರಿಸುತ್ತದೆ. ತಾವಿಬ್ಬರೂ ಮದುವೆಯಾಗಲು ರಾಜ್ ಸಿಮ್ರನ್ ಕುಟುಂಬದ ಮನವೊಲಿಸಲು ಪ್ರಯತ್ನಿಸುತ್ತಾನೆ, ಆದರೆ ಸಿಮ್ರನ್‍ನ ತಂದೆ ಬಹಳ ಹಿಂದೆಯೇ ಅವಳ ಮದುವೆಯನ್ನು ತನ್ನ ಗೆಳೆಯನ ಮಗನೊಂದಿಗೆ ಗೊತ್ತುಮಾಡಿರುತ್ತಾನೆ. ಈ ಚಿತ್ರವನ್ನು ಭಾರತ, ಲಂಡನ್ ಮತ್ತು ಸ್ವಿಟ್ಜರ್ಲ್ಯಾಂಡ್‍ನಲ್ಲಿ ಸೆಪ್ಟೆಂಬರ್ ೧೯೯೪ ಮತ್ತು ಆಗಸ್ಟ್ ೧೯೯೫ರ ನಡುವೆ ಚಿತ್ರೀಕರಿಸಲಾಗಿತ್ತು.

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ
ಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಆದಿತ್ಯ ಚೋಪ್ರಾ
ನಿರ್ಮಾಪಕಯಶ್ ಚೋಪ್ರಾ
ಚಿತ್ರಕಥೆಆದಿತ್ಯ ಚೋಪ್ರಾ
ಕಥೆಆದಿತ್ಯ ಚೋಪ್ರಾ
ಪಾತ್ರವರ್ಗಶಾರುಖ್ ಖಾನ್
ಕಾಜೋಲ್
ಸಂಗೀತಜತಿನ್-ಲಲಿತ್
ಛಾಯಾಗ್ರಹಣಮನ್‍ಮೋಹನ್ ಸಿಂಗ್
ಸಂಕಲನಕೇಶವ್ ನಾಯ್ಡು
ಸ್ಟುಡಿಯೋಯಶ್ ರಾಜ್ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
  • 20 ಅಕ್ಟೋಬರ್ 1995 (1995-10-20) (India)
ಅವಧಿ189 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಂಡವಾಳ40 ದಶಲಕ್ಷ
ಬಾಕ್ಸ್ ಆಫೀಸ್ಅಂದಾಜು 1.06 ಶತಕೋಟಿ

ಭಾರತದಲ್ಲಿ ₹1.06 ಶತಕೋಟಿಯಷ್ಟು ಗಳಿಸಿದ ಮತ್ತು ವಿದೇಶದಲ್ಲಿ 160 ಶತಕೋಟಿಯಷ್ಟು ಹಣಗಳಿಸಿದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಆ ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಬಾಲಿವುಡ್ ಚಲನಚಿತ್ರವಾಯಿತು, ಮತ್ತು ಇತಿಹಾಸದಲ್ಲಿನ ಅತ್ಯಂತ ಯಶಸ್ವಿ ಭಾರತೀಯ ಚಲನಚಿತ್ರಗಳಲ್ಲಿ ಒಂದೆನಿಸಿಕೊಂಡಿತು. ಇದು ೧೦ ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಹಿತಕರ ಮನೋರಂಜನೆ ನೀಡುವ ಅತಿ ಜನಪ್ರಿಯ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ಇದರ ಧ್ವನಿವಾಹಿನಿಯು ೧೯೯೦ರ ದಶಕದ ಅತ್ಯಂತ ಜನಪ್ರಿಯ ಧ್ವನಿವಾಹಿನಿಗಳಲ್ಲಿ ಒಂದೆನಿಸಿಕೊಂಡಿತು.

ಏಕಕಾಲಿಕವಾಗಿ ಪ್ರಬಲ ಕೌಟುಂಬಿಕ ಮೌಲ್ಯಗಳನ್ನು ಪ್ರೋತ್ಸಾಹಿಸುವ ಮತ್ತು ತಮ್ಮ ಸ್ವಂತ ಮನಸ್ಸನ್ನು ಅನುಸರಿಸುವ ಮೂಲಕ ಸಮಾಜದ ವಿಭಿನ್ನ ಭಾಗಗಳೊಂದಿಗೆ ಸಂಬಂಧ ಕಲ್ಪಿಸಿಕೊಂಡ ಈ ಚಿತ್ರವನ್ನು ಅನೇಕ ವಿಮರ್ಶಕರು ಪ್ರಶಂಸಿಸಿದರು. ಇದರ ಯಶಸ್ಸಿನಿಂದ ಇತರ ಚಿತ್ರ ತಯಾರಕರು ಅನಿವಾಸಿ ಭಾರತೀಯ ಪ್ರೇಕ್ಷಕರನ್ನು ಗುರಿಮಾಡುವುದಕ್ಕೆ ಕಾರಣವಾಯಿತು, ಏಕೆಂದರೆ ಇದು ಅವರಿಗೆ ಹೆಚ್ಚು ಲಾಭದಾಯಕವೆಂದು ಭಾವಿಸಲಾಯಿತು. ಇದು ಇದರ ಕಥೆ ಮತ್ತು ಶೈಲಿಯ ಅನೇಕ ಅನುಕರಣೆಗಳು, ಮತ್ತು ನಿರ್ದಿಷ್ಟ ದೃಶ್ಯಗಳಿಗೆ ಗೌರವಾರ್ಪಣೆಗಳನ್ನು ಹುಟ್ಟುಹಾಕಿತು. ಇದು ಭಾರತೀಯ ಸಿನಿಮಾದ ಇತಿಹಾಸದಲ್ಲಿ ಅತಿ ಹೆಚ್ಚು ಓಡಿದ ಚಲನಚಿತ್ರವಾಗಿದೆ. ಮುಂಬಯಿಯ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ೨೦ ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಿರಂತರವಾಗಿ ಪ್ರದರ್ಶನಗೊಳ್ಳುತ್ತಿದೆ.

ಕಥಾವಸ್ತು

ರಾಜ್ ಮಲ್ಹೋತ್ರಾ (ಶಾರುಖ್ ಖಾನ್) ಮತ್ತು ಸಿಮ್ರನ್ ಸಿಂಗ್ (ಕಾಜೋಲ್) ಲಂಡನ್ನಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರಾಗಿರುತ್ತಾರೆ (ಎನ್ಆರ್‌ಐ). ಸಿಮ್ರನ್‌ಳನ್ನು ಅವಳ ಕಟ್ಟುನಿಟ್ಟಾದ ಸಂಪ್ರದಾಯವಾದಿ ತಂದೆ ಬಲ್‍ದೇವ್ ಸಿಂಗ್ (ಅಮ್ರೀಶ್ ಪುರಿ) ಬೆಳೆಸಿರುತ್ತಾನೆ. ರಾಜ್‍ನ ತಂದೆ ಧರಮ್‍ವೀರ್ ಮಲ್ಹೋತ್ರಾ (ಅನುಪಮ್ ಖೇರ್) ಬಹಳ ಉದಾರವಾಗಿರುತ್ತಾನೆ. ಸಿಮ್ರನ್ ಯಾವಾಗಲೂ ತನ್ನ ಆದರ್ಶ ಸಂಗಾತಿಯನ್ನು ಭೇಟಿಯಾಗುವ ಕನಸು ಕಾಣುತ್ತಿರುತ್ತಾಳೆ; ಕನಸುಗಳು ಒಳ್ಳೆಯವು, ಆದರೆ ಅವು ನನಸಾಗುತ್ತವೆಂದು ಒಬ್ಬರು ಕುರುಡಾಗಿ ನಂಬಬಾರದು ಎಂದು ಹೇಳಿ ಅವಳ ತಾಯಿ ಇದರ ವಿರುದ್ಧ ಅವಳಿಗೆ ಎಚ್ಚರಿಕೆ ನೀಡುತ್ತಾಳೆ. ಒಂದು ದಿನ, ಬಲ್‍ದೇವ್ ಸಿಂಗ್‍ಗೆ ಪಂಜಾಬ್‍ನಲ್ಲಿ ವಾಸಿಸುತ್ತಿರುವ ಅವನ ಗೆಳೆಯ ಅಜೀತ್‍ನಿಂದ (ಸತೀಶ್ ಶಾ) ಪತ್ರ ಬರುತ್ತದೆ. ಅಜಿತ್ ತಾನು ಮತ್ತು ಬಲ್‍ದೇವ್ ಪರಸ್ಪರ ಮಾಡಿಕೊಂಡ ವಚನವನ್ನು ಉಳಿಸಿಕೊಳ್ಳಲು ಬಯಸುತ್ತಾನೆ. ಅದೆಂದರೆ ಸಿಮ್ರನ್ ತನ್ನ ಮಗ ಕುಲ್‍ಜೀತ್‍ನನ್ನು (ಪರ್ಮೀತ್ ಸೇಠಿ) ಮದುವೆಯಾಗುವುದು. ಸಿಮ್ರನ್ ತಾನು ಎಂದೂ ಭೇಟಿಯಾಗದವನನ್ನು ಮದುವೆಯಾಗಲು ಬಯಸದಿದ್ದರಿಂದ ಅವಳಿಗೆ ದುಃಖವಾಗುತ್ತದೆ.

ಒಂದು ಸಂಜೆ, ಬಿಯರ್‌ನ್ನು ಖರೀದಿಸಲು ಮುಚ್ಚುವ ವೇಳೆಯ ನಂತರ ರಾಜ್ ಬಲ್‍ದೇವ್‍ನ ಅಂಗಡಿಯನ್ನು ಪ್ರವೇಶಿಸುತ್ತಾನೆ. ಬಲ್‍ದೇವ್ ನಿರಾಕರಿಸುತ್ತಾನೆ, ಆದರೆ ರಾಜ್ ಬಿಯರ್‌ನ ಒಂದು ಪೆಟ್ಟಿಗೆಯನ್ನು ಥಟ್ಟನೆ ಸೆಳೆದುಕೊಂಡು, ಮುಂಗಟ್ಟೆಯ ಮೇಲೆ ಹಣವನ್ನು ಎಸೆದು ಓಡಿಹೋಗುತ್ತಾನೆ. ಬಹಳ ಸಿಟ್ಟಾದ ಬಲ್‍ದೇವ್ ರಾಜ್ ಭಾರತಕ್ಕೆ ಒಂದು ಕಳಂಕವೆಂದು ಹೇಳುತ್ತಾನೆ. ಈ ನಡುವೆ, ಯೂರೋಪ್‍ನಾದ್ಯಂತ ತನ್ನ ಗೆಳೆಯರೊಂದಿಗೆ ಟ್ರೇನ್ ಪ್ರವಾಸದಲ್ಲಿ ಹೋಗುವ ಅವನ ವಿನಂತಿಗೆ ರಾಜ್‍ನ ತಂದೆ ಒಪ್ಪುತ್ತಾನೆ. ಸಿಮ್ರನ್‍ಳ ಗೆಳತಿಯರು ಅದೇ ಪ್ರವಾಸಕ್ಕೆ ಹೋಗಲು ಅವಳನ್ನು ಆಹ್ವಾನಿಸಿರುತ್ತಾರೆ. ತನ್ನ ಮದುವೆಯ ಮುನ್ನ ವಿಶ್ವವನ್ನು ನೋಡುವ ಅವಕಾಶ ಕೊಡಬೇಕು ಎಂದು ಸಿಮ್ರನ್ ತನ್ನ ತಂದೆಯನ್ನು ಕೇಳಿಕೊಳ್ಳುತ್ತಾಳೆ. ಅವನು ಇಷ್ಟವಿಲ್ಲದಿದ್ದರೂ ಒಪ್ಪುತ್ತಾನೆ.

ಪಯಣದಲ್ಲಿ, ರಾಜ್ ಮತ್ತು ಸಿಮ್ರನ್ ಭೇಟಿಯಾಗುತ್ತಾರೆ. ರಾಜ್ ನಿರಂತರವಾಗಿ ಸಿಮ್ರನ್‍ಳೊಂದಿಗೆ ಚೆಲ್ಲಾಟವಾಡುತ್ತಾನೆ. ಇದು ಅವಳಿಗೆ ಬಹಳ ಕಿರಿಕಿರಿ ಉಂಟುಮಾಡುತ್ತದೆ. ಇಬ್ಬರೂ ಜ಼್ಯೂರಿಕ್‍ಗೆ ಹೋಗುವ ತಮ್ಮ ಟ್ರೇನನ್ನು ತಪ್ಪಿಸಿಕೊಂಡು ತಮ್ಮ ಸ್ನೇಹಿತರಿಂದ ಬೇರ್ಪಡುತ್ತಾರೆ. ಆದರೆ ಇಬ್ಬರೂ ಒಟ್ಟಾಗಿ ಪ್ರಯಾಣಿಸಲು ಆರಂಭಿಸಿ ಸ್ನೇಹಿತರಾಗುತ್ತಾರೆ. ಪ್ರವಾಸದ ವೇಳೆ, ರಾಜ್ ಸಿಮ್ರನ್‍ಳನ್ನು ಪ್ರೀತಿಸತೊಡಗುತ್ತಾನೆ. ಲಂಡನ್‍ನಲ್ಲಿ ಅವರಿಬ್ಬರೂ ಬೇರ್ಪಟ್ಟಾಗ, ತಾನೂ ಅವನನ್ನು ಪ್ರೀತಿಸುತ್ತಿದ್ದೇನೆಂದು ಸಿಮ್ರನ್‍ಗೆ ಅರಿವಾಗುತ್ತದೆ. ಮನೆಯಲ್ಲಿ, ಸಿಮ್ರನ್ ತನ್ನ ಅಮ್ಮನಿಗೆ ಪ್ರಯಾಣದಲ್ಲಿ ತಾನು ಭೇಟಿಯಾದ ಹುಡುಗನ ಬಗ್ಗೆ ಹೇಳುತ್ತಾಳೆ; ಬಲ್‍ದೇವ್ ಸಂಭಾಷಣೆಯನ್ನು ಕೇಳಿಸಿಕೊಂಡು ತನ್ನ ಮಗಳ ಮೇಲೆ ಸಿಟ್ಟಾಗುತ್ತಾನೆ. ಮರುದಿನ ಕುಟುಂಬವು ಭಾರತಕ್ಕೆ ಸ್ಥಳಾಂತರಗೊಳ್ಳುವುದು ಎಂದು ಹೇಳುತ್ತಾನೆ. ಈ ನಡುವೆ, ರಾಜ್ ತನ್ನ ಅಪ್ಪನಿಗೆ ಸಿಮ್ರನ್ ಬಗ್ಗೆ ಮತ್ತು ಅವಳು ಬೇಗನೇ ಮದುವೆಯಾಗುವಳು ಎಂದು ಹೇಳುತ್ತಾನೆ. ಸಿಮ್ರನ್ ಕೂಡ ತನ್ನನ್ನು ಪ್ರೀತಿಸುತ್ತಾಳೆಂದು ತಾನು ನಂಬಿದ್ದೇನೆಂದು ರಾಜ್ ಹೇಳಿದಾಗ, ಅವನ ತಂದೆ ಅವಳನ್ನು ಬೆಂಬತ್ತಿ ಹೋಗುವಂತೆ ಪ್ರೋತ್ಸಾಹಿಸುತ್ತಾನೆ.

ಭಾರತದಲ್ಲಿ, ಬಲ್‍ದೇವ್ ತನ್ನ ಸಂಬಂಧಿಕರು ಮತ್ತು ಸ್ನೇಹಿತ ಅಜೀತ್‍ನೊಂದಿಗೆ ಮತ್ತೆ ಕೂಡುತ್ತಾನೆ. ದುಃಖಿತಳಾದ ಸಿಮ್ರನ್ ಮತ್ತು ಅವಳ ತಂಗಿ ಚುಟ್ಕಿ (ಪೂಜಾ ರೂಪಾರೇಲ್) ಸಿಮ್ರನ್‍ಳ ನಿಶ್ಚಿತ ವರ ಕುಲ್‍ಜೀತ್‍ನನ್ನು ಅವನ ದುರಹಂಕಾರದ ಕಾರಣ ತತ್‍ಕ್ಷಣದಿಂದಲೇ ಇಷ್ಟಪಡದಿರಲು ಆರಂಭಿಸುತ್ತಾರೆ. ಸಿಮ್ರನ್ ರಾಜ್‍ನಿಗಾಗಿ ಕೊರಗುತ್ತಾಳೆ. ಆದರೆ ಬಲ್‍ದೇವ್ ಅವರ ಸಂಬಂಧವನ್ನು ಎಂದೂ ಒಪ್ಪುವುದಿಲ್ಲವೆಂದು ಗೊತ್ತಾಗಿ ಅವಳ ತಾಯಿ ಅವನನ್ನು ಮರೆತು ಬಿಡುವಂತೆ ಅವಳಿಗೆ ಹೇಳುತ್ತಾಳೆ. ಮರುದಿನ ಬೆಳಿಗ್ಗೆ, ಸಿಮ್ರನ್ ಇರುವ ಮನೆಯ ಹೊರಗೆ ರಾಜ್ ಆಗಮಿಸುತ್ತಾನೆ ಮತ್ತು ಅವರಿಬ್ಬರು ಮತ್ತೆ ಒಂದಾಗುತ್ತಾರೆ. ಅವನು ತನ್ನೊಡನೆ ಓಡಿಹೋಗುವಂತೆ ಅವಳು ಬೇಡಿಕೊಳ್ಳುತ್ತಾಳೆ. ಆದರೆ ರಾಜ್ ನಿರಾಕರಿಸಿ ಅವಳ ತಂದೆಯ ಒಪ್ಪಿಗೆಯ ನಂತರವೇ ಅವಳನ್ನು ಮದುವೆಯಾಗುವೆನೆಂದು ಹೇಳುತ್ತಾನೆ. ರಾಜ್ ಕುಲ್‍ಜೀತ್‍ನ ಸ್ನೇಹಬೆಳೆಸಿ ಬೇಗನೇ ಎರಡೂ ಕುಟುಂಬಗಳಿಂದ ಸ್ವೀಕರಿಸಲ್ಪಡುತ್ತಾನೆ. ಆಮೇಲೆ, ಅವನ ತಂದೆ ಭಾರತಕ್ಕೆ ಆಗಮಿಸಿ ಅವನೂ ಸಿಮ್ರನ್ ಮತ್ತು ಕುಲ್‍ಜೀತ್‍ರ ಕುಟುಂಬದ ಸ್ನೇಹಬೆಳೆಸುತ್ತಾನೆ. ಸಿಮ್ರನ್ ಯೂರೋಪ್‍ನಲ್ಲಿ ಪ್ರೀತಿಸತೊಡಗಿದ ಹುಡುಗ ರಾಜ್‍ನೇ ಎಂದು ಅಂತಿಮವಾಗಿ ಲಜ್ಜೊ ಮತ್ತು ಚುಟ್ಕಿಗೆ ಗೊತ್ತಾಗುತ್ತದೆ. ಲಜ್ಜೊ ಕೂಡ ರಾಜ್ ಮತ್ತು ಸಿಮ್ರನ್‍ರಿಗೆ ಒಡಿಹೋಗುವಂತೆ ಹೇಳುತ್ತಾಳೆ. ಆದರೆ ಅವನು ಆಗಲೂ ನಿರಾಕರಿಸುತ್ತಾನೆ. ಬಲ್‍ದೇವ್ ರಾಜ್‍ನನ್ನು ಬಿಯರ್ ಘಟನೆಯಿಂದ ಗುರುತಿಸಿದರೂ ಅಂತಿಮವಾಗಿ ಅವನನ್ನು ಸ್ವೀಕರಿಸುತ್ತಾನೆ. ಆದರೆ ಅವನಿಗೆ ಯೂರೋಪ್‍ನಲ್ಲಿ ರಾಜ್ ಮತ್ತು ಸಿಮ್ರನ್ ಒಟ್ಟಿಗಿದ್ದ ಒಂದು ಭಾವಚಿತ್ರ ಸಿಕ್ಕ ನಂತರ, ಅವನ ಕಪಾಳಕ್ಕೆ ಹೊಡೆದು ಅವನನ್ನು ಅವಮಾನಗೊಳಿಸಿ ಹೊರಟುಹೋಗುವಂತೆ ಹೇಳುತ್ತಾನೆ.

ರಾಜ್ ಮತ್ತು ಅವನ ತಂದೆ ರೇಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಸಿಮ್ರನ್‍ಳಿಗಾಗಿ ರಾಜ್‍ನ ಪ್ರೀತಿಯ ಬಗ್ಗೆ ತಿಳಿದು ಸಿಟ್ಟಾದ ಕುಲ್‍ಜೀತ್ ತನ್ನ ಮಿತ್ರರೊಂದಿಗೆ ಆಗಮಿಸಿ ಅವರ ಮೇಲೆ ಹಲ್ಲೆ ಮಾಡುತ್ತಾನೆ. ಅಂತಿಮವಾಗಿ, ಬಲ್‍ದೇವ್ ಮತ್ತು ಅಜೀತ್ ಆಗಮಿಸಿ ಹೊಡೆದಾಟವನ್ನು ನಿಲ್ಲಿಸುತ್ತಾರೆ, ಮತ್ತು ರಾಜ್ ತನ್ನ ತಂದೆಯೊಂದಿಗೆ ಹೊರಡುತ್ತಿರುವ ಟ್ರೇನನ್ನು ಹತ್ತುತ್ತಾನೆ. ನಂತರ ಸಿಮ್ರನ್ ತನ್ನ ತಾಯಿ ಮತ್ತು ತಂಗಿಯೊಂದಿಗೆ ಆಗಮಿಸುತ್ತಾಳೆ; ಅವಳು ಟ್ರೇನ್‍ನಲ್ಲಿ ರಾಜ್‍ನನ್ನು ಸೇರಿಕೊಳ್ಳಲು ಪ್ರಯತ್ನಿಸಿದಾಗ ಬಲ್‍ದೇವ್ ಅವಳನ್ನು ತಡೆಯುತ್ತಾನೆ. ತಾನು ರಾಜ್ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂದು ಹೇಳಿ ಸಿಮ್ರನ್ ತನಗೆ ಹೋಗಲು ಬಿಡುವಂತೆ ಬೇಡಿಕೊಳ್ಳುತ್ತಾಳೆ. ರಾಜ್ ಪ್ರೀತಿಸುವಂತೆ ಯಾರೂ ತನ್ನ ಮಗಳನ್ನು ಪ್ರೀತಿಸುವುದಿಲ್ಲ ಎಂದು ಬಲ್‍ದೇವ್‍ಗೆ ಅರಿವಾಗಿ ಅವಳನ್ನು ಹೋಗಲು ಬಿಡುತ್ತಾನೆ. ಅವಳು ಓಡಿ ಟ್ರೇನ್ ಹೊರಟು ಹೋಗುವಷ್ಟರಲ್ಲಿ ಅದನ್ನು ಹಿಡಿಯುತ್ತಾಳೆ.

ಪಾತ್ರವರ್ಗ

  • ರಾಜ್ ಮಲ್ಹೋತ್ರಾ ಪಾತ್ರದಲ್ಲಿ ಶಾರುಖ್ ಖಾನ್
  • ಸಿಮ್ರನ್ ಸಿಂಗ್ ಪಾತ್ರದಲ್ಲಿ ಕಾಜೋಲ್
  • ಚೌಧರಿ ಬಲ್ದೇವ್ ಸಿಂಗ್ ಪಾತ್ರದಲ್ಲಿ ಅಮರೀಶ್ ಪುರಿ
  • ಲಾಜ್ವಂತಿ "ಲಜ್ಜೊ" ಸಿಂಗ್ ಪಾತ್ರದಲ್ಲಿ ಫ಼ರೀದಾ ಜಲಾಲ್
  • ಅಜೀತ್ ಸಿಂಗ್ ಪಾತ್ರದಲ್ಲಿ ಸತೀಶ್ ಶಾ
  • ಸಿಮ್ರನ್‍ಳ ಅಜ್ಜಿಯ ಪಾತ್ರದಲ್ಲಿ ಅಚಲಾ ಸಚ್‍ದೇವ್
  • ಕಮ್ಮೊ ಕೌರ್ ಪಾತ್ರದಲ್ಲಿ ಹಿಮಾನಿ ಶಿವ್‍ಪುರಿ
  • ರಾಜೇಶ್ವರಿ "ಚುಟ್ಕಿ" ಸಿಂಗ್ ಪಾತ್ರದಲ್ಲಿ ಪೂಜಾ ರೂಪಾರೇಲ್
  • ಧರಮ್‍ವೀರ್ ಮಲ್ಹೋತ್ರಾ ಪಾತ್ರದಲ್ಲಿ ಅನುಪಮ್ ಖೇರ್
  • ಕುಲ್‍ಜೀತ್ ಸಿಂಗ್ ಪಾತ್ರದಲ್ಲಿ ಪರ್ಮೀತ್ ಸೇಠಿ
  • ಪ್ರೀತಿ ಸಿಂಗ್ ಪಾತ್ರದಲ್ಲಿ ಮಂದಿರಾ ಬೇದಿ
  • ಶೀನಾ ಪಾತ್ರದಲ್ಲಿ ಅನೈತಾ ಶ್ರಾಫ಼್ ಅಡಜಾನಿಯಾ
  • ರಾಕಿ ಮತ್ತು ರಾಬಿ ಪಾತ್ರದಲ್ಲಿ ಕರನ್ ಜೋಹರ್ ಮತ್ತು ಅರ್ಜುನ್ ಸಬ್ಲೋಕ್

ತಯಾರಿಕೆ

ಮೂಲ ಮತ್ತು ಚಿತ್ರಕಥೆ ತಯಾರಿಕೆ

ಆದಿತ್ಯ ಚೋಪ್ರಾ ಕೆಲವು ಚಿತ್ರಗಳ ತಯಾರಿಕೆಯ ವೇಳೆ ತಮ್ಮ ತಂದೆ, ನಿರ್ದೇಶಕ ಮತ್ತು ನಿರ್ಮಾಪಕ ಯಶ್ ಚೋಪ್ರಾರಿಗೆ ನೆರವಾದರು. ಈ ಸಮಯದಲ್ಲಿ, ಆದಿತ್ಯ ತಮ್ಮದೇ ಸ್ವಂತದ ಹಲವಾರು ಚಿತ್ರಕಥೆಗಳನ್ನು ಬರೆದರು. ಮುಂದೆ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವಾದದುದರ ಕಥೆಯ ಮೇಲೆ ಅವರು ಕೆಲಸ ಮಾಡಿದರು. ನಂತರ ಅದನ್ನು ನಿರ್ದೇಶಿಸಲು ತಮ್ಮ ತಂದೆಯ ಬಳಿ ಹೋದರು. ಯಶ್ ತಾವು ನಿರ್ದೇಶಿಸಲು ಬಯಸದೇ ಆದಿತ್ಯ ಸ್ವಂತವಾಗಿ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದರು. ಚಿತ್ರಕಥೆಗೆ ಕಲ್ಪನೆಗಳನ್ನು ಅವರು ರೂಪಿಸುತ್ತಿರುವಾಗ, ಆದಿತ್ಯರಿಗೆ ಕಥೆಯ ಹೊಸ ಕಲ್ಪನೆಯೊಂದು ಹೊಳೆಯಿತು. ಆಗ ಅವರು ಸ್ವಂತವಾಗಿ ಆ ಚಿತ್ರವನ್ನು ನಿರ್ದೇಶಿಸುವ ಸಾಧ್ಯತೆಯ ಬಗ್ಗೆ ಉತ್ತೇಜನಗೊಂಡರು. ಕಥೆಯನ್ನು ಓದಿ ತಮ್ಮ ತಾಯಿ ಪಮೇಲಾ ಚೋಪ್ರಾ ಒಪ್ಪಿದ ಮೇಲೆ, ಅವರು ತಮ್ಮ ಚೊಚ್ಚಲ ಚಿತ್ರವನ್ನು ನಿರ್ದೇಶಿಸಲು ನಿರ್ಧರಿಸಿದರು. ಜನರು ಮತ್ತೆಮತ್ತೆ ನೋಡಬಹುದಾದಂಥ ಉತ್ತಮ ಚಿತ್ರವನ್ನು ಮಾಡಬೇಕೆಂದು ಆದಿತ್ಯ ಬಯಸಿದರು. ಆ ಕಾಲದಲ್ಲಿ ಸಾಮಾನ್ಯವಾಗಿದ್ದ ಕಥಾಪಥದಿಂದ ಬೇರೆಯಾಗಿದ್ದ ಕಥೆಯೊಂದನ್ನು ಬರೆಯಲು ಬಯಸಿದ್ದರು.

ಮೇ ೧೯೯೪ರಲ್ಲಿ, ಆದಿತ್ಯ ಚಿತ್ರಕಥೆಯ ಮೊದಲ ಕರಡನ್ನು ಯಶ್ ರಾಜ್ ಫ಼ಿಲ್ಮ್ಸ್‌ನ ಹಲವು ಸದಸ್ಯರ ಮುಂದೆ ಓದಿದರು. ಅವರು ಪ್ರಭಾವಿತರಾಗಲಿಲ್ಲವಾದರೂ ಆದಿತ್ಯ ತಮ್ಮ ಕಲ್ಪನೆಗಳಿಗೆ ಬದ್ಧವಾಗಿದ್ದರು. ನಿರ್ಮಾಪಕರಾಗಿದ್ದ ಅವರ ತಂದೆ ಅವರಿಗೆ ಸಂಪೂರ್ಣ ಸಂಕಲನದ ನಿಯಂತ್ರಣವನ್ನು ನೀಡಿದರು ಮತ್ತು ಆದಿತ್ಯ ತಮ್ಮ ಸ್ವಂತದ ರುಚಿಗಳು ಹಾಗೂ ಸಂವೇದನಾಶೀಲತೆಗಳ ಪ್ರಕಾರ ಚಿತ್ರವನ್ನು ತಯಾರಿಸಿದರು. ಯುವವೆನಿಸುವಂಥ ಶಬ್ದಗಳನ್ನು ಅಭಿವೃದ್ಧಿಗೊಳಿಸಲು ಆದಿತ್ಯ ಬಹಳ ಕಷ್ಟಪಟ್ಟರು. ಅಂತಿಮ ಚಿತ್ರಕಥೆಯ ಬಗೆಗಿನ ಬರವಣಿಗೆಯ ಉಲ್ಲೇಖದ ಸಂಬಂಧವಾಗಿ ವೈಯಕ್ತಿಕ ಜಗಳಗಳಾದವು. ಇವರಲ್ಲಿ ಹನಿ ಇರಾನಿ ಮತ್ತು ಜಾವೇದ್ ಸಿದ್ದೀಕಿ ಸೇರಿದ್ದರು. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ನಂತರ ಇವರಿಬ್ಬರು ಮತ್ತೆಂದೂ ಯಶ್ ರಾಜ್ ಫಿಲ್ಮ್ಸ್‌ನೊಂದಿಗೆ ಕೆಲಸ ಮಾಡಲಿಲ್ಲ. ಚಿತ್ರಕಥೆಯನ್ನು ಯಶ್ ಒಪ್ಪಿದ ಮೇಲೆ, ಚಿತ್ರದ ಹಾಡುಗಳ ಸಂಬಂಧವಾಗಿ ಆದಿತ್ಯ ಯಶ್‍ರ ಸಲಹೆಯನ್ನು ಕೇಳಿದರು. ಆದರೆ ಅವರು ಸೃಜನಾತ್ಮಕ ಪ್ರಕ್ರಿಯೆಯನ್ನು ಬಹುತೇಕವಾಗಿ ತಮ್ಮ ಮಗನಿಗೆ ಬಿಟ್ಟುಕೊಟ್ಟರು. ಯಶ್ ಒಂದೂ ಬಿಡಿಚಿತ್ರವನ್ನು ಚಿತ್ರೀಕರಿಸಲಿಲ್ಲ, ಮತ್ತು ಚಿತ್ರವು ಬಹುತೇಕ ಮುಗಿಯುವವರೆಗೂ ಕೆಲವು ಭಾಗಗಳನ್ನು ನೋಡಲಿಲ್ಲ.

ಪಾತ್ರ ನಿರ್ಧಾರಣ

ಮೂಲತಃ ಆದಿತ್ಯ ಚಿತ್ರವು ಒಬ್ಬ ಭಾರತೀಯ ಮತ್ತು ಒಬ್ಬ ಅಮೇರಿಕನ್ ನಡುವಿನ ಸಂಬಂಧದ ಬಗ್ಗೆ ಆಗಿರಬೇಕೆಂದು ಬಯಸಿದ್ದರು. ಹಾಗಾಗಿ ಪಾತ್ರಕ್ಕೆ ವಿದೇಶಿ ತಾರೆಯನ್ನು ಬಯಸಿದ್ದರು ಆದರೆ ಯಶ್ ಅದನ್ನು ತಡೆದರು. ತಮ್ಮ ಪಾತ್ರಗಳು ಅನಿವಾಸಿ ಭಾರತೀಯರಾಗಿರುವರು (ಎನ್ಆರ್‌ಐ) ಎಂದು ನಿರ್ಧರಿಸಿದರು. ರಾಜ್ ಪಾತ್ರ ಮಾಡಲು ಆದಿತ್ಯ ಮೊದಲು ಶಾರುಖ್‍ರ ಬಳಿ ಮಾತನಾಡಿದರು. ಖಳ ಪಾತ್ರಗಳನ್ನು ಮಾಡಿ ಯಶಸ್ಸು ಗಳಿಸಿದ್ದ ಶಾರುಖ್ ಆರಂಭದಲ್ಲಿ ಪಾತ್ರದ ಪ್ರಣಯಾತ್ಮಕ ಸ್ವರೂಪದ ಕಾರಣ ಆಸಕ್ತಿ ಹೊಂದಿರಲಿಲ್ಲ. ಹಾಗಾಗಿ ಆದಿತ್ಯ ಇತರ ನಟರನ್ನು ಸಂಪರ್ಕಿಸಿದರು. ಯಾರೂ ಒಪ್ಪದಿದ್ದ ಕಾರಣ ಆದಿತ್ಯ ಶಾರುಖ್‍ರನ್ನು ಹಿಂಬಾಲಿಸುವುದನ್ನು ಮುಂದುವರಿಸಿದರು. ಆದಿತ್ಯ ಮತ್ತು ಶಾರುಖ್ ಹಲವಾರು ವಾರಗಳು ಕೆಲವು ಸಲ ಭೇಟಿಯಾದರು; ಆದಿತ್ಯ ಅಂತಿಮವಾಗಿ ಶಾರುಖ್‍ರ ಮನವೊಲಿಸಿದರು.

ಸಿಮ್ರನ್‍ಳ ಪಾತ್ರವಹಿಸುವುದಕ್ಕೆ ಕಾಜೋಲ್ ಮೊದಲ ಆಯ್ಕೆಯಾಗಿದ್ದರು, ಮತ್ತು ಅವರು ಬೇಗನೇ ಒಪ್ಪಿಕೊಂಡರು. ಒಂದು ಯಶಸ್ವಿ ಚಿತ್ರಾಭಿನಯ ಪರೀಕ್ಷೆಯ ನಂತರ ಪರ್ಮೀತ್ ಸೇಠಿಯನ್ನು ಕುಲ್‍ಜೀತ್ ಸಿಂಗ್‍ನ ಪಾತ್ರಕ್ಕಾಗಿ ಆಯ್ಕೆ ಮಾಡಲಾಯಿತು. ಶರ್ಮಿಷ್ಠ ರಾಯ್ ಚಿತ್ರದ ಕಲಾ ನಿರ್ದೇಶಕರಾಗಿದ್ದರು ಮತ್ತು ಮನೀಶ್ ಮಲ್ಹೋತ್ರಾ ವಸ್ತ್ರ ವಿನ್ಯಾಸಕರಾಗಿದ್ದರು.

ಚಿತ್ರೀಕರಣ

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವನ್ನು ಸೆಪ್ಟೆಂಬರ್ ೧೯೯೪ ಮತ್ತು ಆಗಸ್ಟ್ ೧೯೯೫ರ ನಡುವೆ ಸ್ವಿಟ್‍ಜ಼ರ್ಲಂಡ್, ಇಂಗ್ಲಂಡ್ ಮತ್ತು ಗುರ್‌ಗಾಂವ್‍ನಲ್ಲಿ ಚಿತ್ರೀಕರಿಸಲಾಯಿತು.

ತಯಾರಿಕೆಯ ಬಹುತೇಕ ವೇಳೆ ಸರೋಜ್ ಖಾನ್ ನೃತ್ಯ ನಿರ್ದೇಶಕರಾಗಿದ್ದರು, ಆದರೆ ಆದಿತ್ಯ ಮತ್ತು ಅವರ ನಡುವೆ ಹಲವಾರು ವಿವಾದಗಳ ನಂತರ, ಚಿತ್ರೀಕರಣದ ಅಂತ್ಯದ ವೇಳೆ ಅವರ ಬದಲಿಗೆ ಫ಼ರಾ ಖಾನ್‍ರನ್ನು ತರಲಾಯಿತು. ಮತ್ತೆಂದೂ ಸರೋಜ್ ಖಾನ್ ಆದಿತ್ಯರೊಂದಿಗೆ ಕೆಲಸ ಮಾಡಲಿಲ್ಲ. ಫ಼ರಾ "ರುಕ್ ಜಾ ಓ ದಿಲ್ ದೀವಾನೆ" ಹಾಡಿನ ನೃತ್ಯವನ್ನು ನಿರ್ದೇಶಿಸಿದರು. ಚಿತ್ರದ ಶೀರ್ಷಿಕೆಯನ್ನು ನಟಿ ಕಿರಣ್ ಖೇರ್ ಸೂಚಿಸಿದರು.

ವಿಷಯಗಳು

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವು ಕುಟುಂಬ, ಪ್ರಣಯ ಮತ್ತು ಮದುವೆಯ ಮಾಮೂಲಿನ ಸಂಪ್ರದಾಯವಾದಿ ಪಟ್ಟಿಯನ್ನು ಪುನರಾವರ್ತಿಸುತ್ತದೆ. ಆದರೆ ಭಾರತೀಯ ಕೌಟುಂಬಿಕ ಮೌಲ್ಯಗಳು ವಾಸದ ದೇಶವನ್ನು ಲೆಕ್ಕಿಸದೆ ಎತ್ತಿಹಿಡಿಯಬಹುದಾದ ಒಯ್ಯಬಲ್ಲ ಆಸ್ತಿಗಳಾಗಿವೆ ಎಂದು ಈ ಚಿತ್ರವು ಪ್ರಸ್ತಾಪಿಸುತ್ತದೆ. ಈ ಚಿತ್ರದಲ್ಲಿ, ಎನ್ಆರ್‌ಐಗಳನ್ನು ಸಂಭಾವ್ಯ ಆದರ್ಶ ಭಾರತೀಯ ನಾಗರೀಕರೆಂದು ಮಾನ್ಯಮಾಡಲಾಗಿದೆ.

ಈ ಚಿತ್ರದ ಕಥೆಯು ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳು ಮತ್ತು ವ್ಯಕ್ತಿಸ್ವಾತಂತ್ರ್ಯ ತತ್ತ್ವದ ಆಧುನಿಕ ಮೌಲ್ಯದ ನಡುವಿನ ಹೋರಾಟವನ್ನು ಸೆರೆಹಿಡಿಯುವ ಗುರಿಹೊಂದಿದೆ. ಈ ಕಥೆಯಲ್ಲಿ ಮತ್ತು ಇತರ ಭಾರತೀಯ ಕಥೆಗಳಲ್ಲಿ, ಅಂತಿಮವಾಗಿ ಪ್ರಣಯಾತ್ಮಕ ಕಥಾವಸ್ತುವಿಗಿಂತ ಕೌಟುಂಬಿಕ ಮೌಲ್ಯಗಳನ್ನು ಹೆಚ್ಚು ಮುಖ್ಯವೆಂದು ಪರಿಗಣಿಸಲಾಗುತ್ತದೆ. ವೈಯಕ್ತಿಕ ಬಯಕೆಗಳಿಗಿಂತ ನೈತಿಕ ಮೌಲ್ಯಗಳು ಮತ್ತು ನಡತೆಯ ನಿಯಮಗಳ ಆದ್ಯತೆ ಹೆಚ್ಚಾಗಿದೆ. "ಭಾರತೀಯತೆ"ಯನ್ನು ಕೌಟುಂಬಿಕ ಜೀವನದ ಮಹತ್ವದಿಂದ ವ್ಯಾಖ್ಯಾನಿಸಬಹುದು ಎಂದು ಈ ಚಿತ್ರವು ಸೂಚಿಸುತ್ತದೆ; ಸ್ವದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಭಾರತದ ಕೌಟುಂಬಿಕ ವ್ಯವಸ್ಥೆಯನ್ನು ಭಾರತೀಯ ಗುರುತನ್ನು ಅತಿ ಹೆಚ್ಚು ವ್ಯಾಖ್ಯಾನಿಸುವ ಸಾಮಾಜಿಕ ಪದ್ಧತಿಯಾಗಿ ಗುರುತಿಸಲಾಗುತ್ತದೆ.

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದಲ್ಲಿ ಮಹಿಳೆಯರ ಪಾವಿತ್ರ್ಯವನ್ನು ರಾಷ್ಟ್ರದ ಪಾವಿತ್ರ್ಯಕ್ಕೆ ಸಂಬಂಧಿಸಲಾಗಿದೆ. ಇದು ಭಾರತೀಯ ವಲಸಿಗರೊಂದಿಗೆ ಮಾತನಾಡಿ ತಮ್ಮ ಮೌಲ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ಅಗತ್ಯವನ್ನು ಮತ್ತು ಭಾರತೀಯ ಮಹಿಳೆಯ ಲೈಂಗಿಕ ಪಾವಿತ್ರ್ಯವನ್ನು ಕಾಪಾಡುವಲ್ಲಿ ಪುರುಷನ ಜವಾಬ್ದಾರಿಯನ್ನು ವ್ಯಕ್ತಪಡಿಸುತ್ತದೆ.

ಚಿತ್ರದ ಜನಪ್ರಿಯತೆಯು ಸಮಾಜದ ವಿಭಿನ್ನ ಭಾಗಗಳಿಗೆ ಇಷ್ಟವಾಗುವ ಎರಡು ವಿರುದ್ಧ ವಿಷಯಗಳನ್ನು ಪರಿಣಾಮಕಾರಿಯಾಗಿ ತಿಳಿಹೇಳಿವ ಸಾಮರ್ಥ್ಯದಲ್ಲಿದೆ ಎಂದು ಸ್ಕಾಟ್ ಜಾರ್ಡನ್ ಹ್ಯಾರಿಸ್ ಹೇಳುತ್ತಾರೆ. ಮದುವೆಯನ್ನು ತಂದೆತಾಯಿಗಳು ಮತ್ತು ಮಕ್ಕಳ ನಡುವಿನ ತಿಳಿವಳಿಕೆಯಾಗಿ ಪ್ರಸ್ತುತಪಡಿಸಿದ್ದಕ್ಕಾಗಿ ಚಿತ್ರವು ಮುಖ್ಯವಾಗಿದೆ ಎಂದು ರೇಚಲ್ ಡ್ವೈಯರ್ ಹೇಳಿದರು. ನಿಶ್ಚಿತ ಮದುವೆಯ ಹಳೆಯ ಸಂಪ್ರದಾಯದ ವಿರುದ್ಧ ಸೆಣಸುತ್ತಲೆ, ಇದು ಜೊತೆಗೆ ಪ್ರೇಮವಿವಾಹಕ್ಕಾಗಿಯೂ ಹೆತ್ತವರ ಒಪ್ಪಿಗೆಯನ್ನು ಪಡೆಯುವ ಮಹತ್ವವನ್ನು ಪ್ರೋತ್ಸಾಹಿಸಿತು.

ಸಂಗೀತ

ಜತಿನ್ ಲಲಿತ್ (ಜತಿನ್ ಪಂಡಿತ್ ಮತ್ತು ಲಲಿತ್ ಪಂಡಿತ್ ಸಹೋದರರು) ಸಂಯೋಜಿಸಿದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಧ್ವನಿವಾಹಿನಿಯಲ್ಲಿ ಏಳು ಹಾಡುಗಳಿವೆ. ಆನಂದ್ ಬಕ್ಷಿ ಗೀತೆಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಕುಮಾರ್ ಸಾನು, ಅಭಿಜೀತ್ ಭಟ್ಟಾಚಾರ್ಯ ಮತ್ತು ಉದಿತ್ ನಾರಾಯಣ್ ಹಾಡುಗಳನ್ನು ಹಾಡಿದರು. ಇದು ಯಶ್ ರಾಜ್ ಫ಼ಿಲ್ಮ್ಸ್‌ನೊಂದಿಗೆ ಜತಿನ್ ಲಲಿತ್‍ರ ಮೊದಲ ಸಹಯೋಗವಾಗಿತ್ತು. ಯಶ್‍ರಿಗಾಗಿ "ಮೆಹಂದಿ ಲಗಾ ಕೇ ರಖನಾ" ಹಾಡನ್ನು ಹಾಡಿದ ಮೇಲೆ ಅವರು ಕೆಲಸವನ್ನು ಪಡೆದುಕೊಂಡರು. ಕೆಲವು ಹಾಡುಗಳಿಗೆ ಪಂಜಾಬಿ ಮಾಧುರ್ಯವನ್ನು ನೀಡುವ ಸಲುವಾಗಿ ರಾಗಗಳು ಮತ್ತು ವಾದ್ಯಗಳನ್ನು ಆಯ್ಕೆ ಮಾಡಲು ಪಮೇಲಾ ಚೋಪ್ರಾ ಸಹಾಯ ಮಾಡಿದರು.

ಈ ಧ್ವನಿವಾಹಿನಿಯು ಆ ವರ್ಷದ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿ ಆಯಿತು. ಎಚ್ಎಮ್‍ವಿ ೧೨ ದಶಲಕ್ಷ ಘಟಕಗಳನ್ನು ಮಾರಾಟಮಾಡಿತು. ಅಕ್ರಮ ಪ್ರತಿಗಳು ಸೇರಿದಂತೆ ಅಂದಾಜು ಮಾರಾಟಗಳ ಒಟ್ಟು ಸಂಖ್ಯೆ ೨೫ ದಶಲಕ್ಷದಿಂದ ೧೦೦ ದಶಲಕ್ಷಕ್ಕಿಂತ ಹೆಚ್ಚಿನವರೆಗೆ ವ್ಯಾಪಿಸುತ್ತವೆ.

ಆನಂದ್ ಬಕ್ಷಿ ಈ ಚಿತ್ರಕ್ಕಾಗಿ ಎರಡು ಫಿಲ್ಮ್‌ಫೇರ್ ನಾಮನಿರ್ದೇಶನಗಳನ್ನು ಪಡೆದು ಒಂದು ಗೀತೆಗೆ ತಮ್ಮ ಮೂರನೇ ಫಿಲ್ಮ್‌ಫೇರ್ ಅತ್ಯುತ್ತಮ ಗೀತಸಾಹಿತಿ ಪ್ರಶಸ್ತಿಯನ್ನು ೧೪ ವರ್ಷಗಳ ನಂತರ ಗೆದ್ದರು. ಚಿತ್ರದ ಮದುವೆಯ ಹಾಡಾದ "ಮೆಹಂದಿ ಲಗಾ ಕೇ ರಖನಾ" ಸಾರ್ವಕಾಲಿಕ ಹಿಟ್ ಆಯಿತು; ಇದನ್ನು ದಕ್ಷಿಣ ಏಷ್ಯಾದ ವಲಸಿಗರ ಮದುವೆಗಳಲ್ಲಿ ನುಡಿಸಲಾಗುತ್ತದೆ. ಹಾಡುಗಳ ಪಟ್ಟಿ ಈ ಕೆಳಗಿನಂತಿದೆ.

ಸಂ.ಹಾಡುಗಾಯಕರುಸಮಯ
1."ಘರ್ ಆಜಾ ಪರ್ದೇಸಿ"ಮನ್‍ಪ್ರೀತ್ ಕೌರ್, ಪಮೇಲಾ ಚೋಪ್ರಾ7:32
2."ಮೇರೆ ಖ್ವಾಬ್ಞೋ ಮೇ"ಲತಾ ಮಂಗೇಶ್ಕರ್4:18
3."ಜ಼ರಾ ಸಾ ಝೂಮ್ ಲ್ಞೂ ಮೇ"ಆಶಾ ಭೋಂಸ್ಲೆ, ಅಭಿಜೀತ್ ಭಟ್ಟಾಚಾರ್ಯ5:55
4."ತುಝೆ ದೇಖಾ ತೊ"ಲತಾ ಮಂಗೇಶ್ಕರ್, ಕುಮಾರ್ ಸಾನು5:05
5."ಮೆಹಂದಿ ಲಗಾ ಕೆ ರಖನಾ"ಲತಾ ಮಂಗೇಶ್ಕರ್, ಉದಿತ್ ನಾರಾಯಣ್4:51
6."ರುಕ್ ಜಾ ಓ ದಿಲ್ ದಿವಾನೆ"ಉದಿತ್ ನಾರಾಯಣ್5:14
7."ಹೋ ಗಯಾ ಹೇ ತುಝ್‍ಕೋ"ಲತಾ ಮಂಗೇಶ್ಕರ್, ಉದಿತ್ ನಾರಾಯಣ್5:51

ಬಿಡುಗಡೆ

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ೨೦ ಅಕ್ಟೋಬರ್ ೧೯೯೫ ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು.. ಈ ಚಿತ್ರವನ್ನು ನಿವಾಸಿ ಭಾರತೀಯರು ಮತ್ತು ಎನ್ಆರ್‌ಐಗಳು ಇಬ್ಬರೂ ಇಷ್ಟಪಟ್ಟರು. ಯುಕೆಯಲ್ಲಿ, ಈ ಚಿತ್ರವು ಒಂದು ವರ್ಷಕ್ಕಿಂತ ಹೆಚ್ಚು ಕಾಲ ನಡೆಯಿತು, ಮತ್ತು ೨೦೧೭ರ ವೇಳೆಗೆ, ಮುಂಬಯಿಯಲ್ಲಿನ ಮರಾಠಾ ಮಂದಿರ್ ಚಿತ್ರಮಂದಿರವು ಇದನ್ನು ೨೨ ವರ್ಷಗಳಿಗಿಂತ ಹೆಚ್ಚು ಕಾಲದಿಂದ ಪ್ರದರ್ಶಿಸುತ್ತಿದೆ.

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

ಬಾಕ್ಸ್ ಆಫ಼ಿಸ್

ಈ ಚಲನಚಿತ್ರವು ಭಾರತದಲ್ಲಿ ₹1.06 ಶತಕೋಟಿಯಷ್ಟು ಗಳಿಸಿತು ಮತ್ತು ವಿದೇಶದಲ್ಲಿ 160 ದಶಲಕ್ಷದಷ್ಟು ಹಣಗಳಿಸಿತು; ಇದು ಆ ವರ್ಷದ ಅತ್ಯಂತ ಹೆಚ್ಚು ಹಣ ಗಳಿಸಿದ ಬಾಲಿವುಡ್ ಚಿತ್ರವಾಯಿತು. ಇದು ವಿಶ್ವಾದ್ಯಂತ 1 ಶತಕೋಟಿಗಿಂತ ಹೆಚ್ಚು ಹಣಗಳಿಸಿದ ಎರಡನೇ ಭಾರತೀಯ ಚಲನಚಿತ್ರವಾಗಿತ್ತು.

ವಿಮರ್ಶಾತ್ಮಕ ಪ್ರತಿಕ್ರಿಯೆ

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವು ಅನೇಕ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.

ಪ್ರಶಸ್ತಿ ಗೌರವಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಹಿತಕರ ಮನೋರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ - ಗೆಲುವು

ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಚಲನಚಿತ್ರ - ಗೆಲುವು
  • ಅತ್ಯುತ್ತಮ ನಿರ್ದೇಶಕ - ಆದಿತ್ಯ ಚೋಪ್ರಾ - ಗೆಲುವು
  • ಅತ್ಯುತ್ತಮ ನಟ - ಶಾರುಖ್ ಖಾನ್ - ಗೆಲುವು
  • ಅತ್ಯುತ್ತಮ ನಟಿ - ಕಾಜೋಲ್ - ಗೆಲುವು
  • ಅತ್ಯುತ್ತಮ ಪೋಷಕ ನಟಿ - ಫ಼ರೀದಾ ಜಲಾಲ್ - ಗೆಲುವು
  • ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - ಅನುಪಮ್ ಖೇರ್ - ಗೆಲುವು
  • ಅತ್ಯುತ್ತಮ ಗೀತಸಾಹಿತಿ - ಆನಂದ್ ಬಕ್ಷಿ ("ತುಝೆ ದೇಖಾ ತೋ") - ಗೆಲುವು
  • ಅತ್ಯುತ್ತಮ ಚಿತ್ರಕಥೆ - ಆದಿತ್ಯ ಚೋಪ್ರಾ - ಗೆಲುವು
  • ಅತ್ಯುತ್ತಮ ಸಂಭಾಷಣೆ - ಆದಿತ್ಯ ಚೋಪ್ರಾ, ಜಾವೇದ್ ಸಿದ್ದೀಕಿ - ಗೆಲುವು
  • ಅತ್ಯುತ್ತಮ ಹಿನ್ನೆಲೆ ಗಾಯಕ - ಉದಿತ್ ನಾರಾಯಣ್ (ಮೆಹಂದಿ ಲಗಾ ಕೇ ರಖನಾ) - ಗೆಲುವು
  • ಅತ್ಯುತ್ತಮ ಪೋಷಕ ನಟ - ಅಮ್ರೀಶ್ ಪುರಿ - ನಾಮನಿರ್ದೇಶನ
  • ಅತ್ಯುತ್ತಮ ಸಂಗೀತ ನಿರ್ದೇಶಕ - ಜತಿನ್ ಲಲಿತ್ - ನಾಮನಿರ್ದೇಶನ
  • ಅತ್ಯುತ್ತಮ ಹಿನ್ನೆಲೆ ಗಾಯಕ - ಕುಮಾರ್ ಸಾನು ("ತುಝೆ ದೇಖಾ ತೊ") - ನಾಮನಿರ್ದೇಶನ
  • ಅತ್ಯುತ್ತಮ ಗೀತಸಾಹಿತಿ - ಆನಂದ್ ಬಕ್ಷಿ ("ಹೋ ಗಯಾ ಹೇ ತುಝ್‍ಕೊ ತೊ ಪ್ಯಾರ್ ಸಜನಾ") - ನಾಮನಿರ್ದೇಶನ

ಚಿತ್ರದ ಕೊಡುಗೆ

ಐತಿಹಾಸಿಕ ಬಾಕ್ಸ್ ಆಫ಼ಿಸ್ ಓಟ

ಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ 
೨೦೧೪ರಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ೧೦೦೦ ವಾರಗಳ ನಿರಂತರ ಪ್ರದರ್ಶನವನ್ನು ಆಚರಿಸುತ್ತಿರುವುದು

೨೦೦೧ ರಲ್ಲಿ, ಮಿನರ್ವಾ ಚಿತ್ರಮಂದಿರದಲ್ಲಿ ಐದು ವರ್ಷಗಳಿಗಿಂತಲೂ ಹೆಚ್ಚು ಕಾಲ ಓಡಿದ್ದ ಶೋಲೆಯನ್ನು (೧೯೭೫) ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಹಿಂದಿಕ್ಕಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ದೀರ್ಘ ಕಾಲ ಓಡಿದ ಚಲನಚಿತ್ರವಾಯಿತು. ಪ್ರೇಕ್ಷಕರಲ್ಲಿ ಹಲವುವೇಳೆ ಈ ಚಿತ್ರವನ್ನು ೫೦ ಅಥವಾ ಹೆಚ್ಚು ಸಲ ನೋಡಿದ್ದರೂ, ಈಗಲೂ ಚಪ್ಪಾಳೆ ತಟ್ಟಿ, ಜಯಕಾರ ಮಾಡಿ, ಸಂಭಾಷಣೆಗಳನ್ನು ಉಚ್ಚರಿಸಿ ಹಾಡುಗಳ ಜೊತೆಗೆ ಹಾಡುವ ಜನರಿರುತ್ತಾರೆ.

ಡಿಸೆಂಬರ್ ೨೦೧೪ರಲ್ಲಿ ಈ ಚಿತ್ರವು ೧,೦೦೦ ವಾರಗಳು ಓಡಿದ ಸಾಧನೆ ಮಾಡಿತು. ಈ ಘಟನೆಯನ್ನು ಸ್ಮೃತಿಯಲ್ಲಿರುವಂತೆ ಮಾಡಲು, ಶಾರುಖ್ ಖಾನ್, ಕಾಜೋಲ್, ಅನುಪಮ್ ಖೇರ್, ಫ಼ರಿದಾ ಜಲಾಲ್, ಮಂದಿರಾ ಬೇದಿ ಮತ್ತು ಪೂಜಾ ರೂಪಾರೇಲ್ ಸೇರಿದಂತೆ ಪಾತ್ರವರ್ಗದ ಸದಸ್ಯರು ಒಂದು ದೂರದರ್ಶನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಶಾರುಖ್ ಖಾನ್, ಕಾಜೋಲ್ ಮತ್ತು ನಿರ್ದೇಶಕ ಆದಿತ್ಯ ಚೋಪ್ರಾ ಅಭಿಮಾನಿಗಳೊಂದಿಗಿನ ನೇರ ಸಂವಾದದಲ್ಲಿ ಕೂಡ ಭಾಗವಹಿಸಿದರು. ಚಿತ್ರದ ತಯಾರಿಕೆಯ ಬಗ್ಗೆ ಒಂದು ಕಾಫ಼ಿ ಟೇಬಲ್ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. ಮಾರ್ಚ್ ೧೬, ೨೦೨೦ ರ ದಿನದವರೆಗೆ, ಈ ಚಿತ್ರವು ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ೧೨೫೧ ವಾರಗಳಿಂದ ಪ್ರದರ್ಶಿತವಾಗುತ್ತಿದೆ (24 ವರ್ಷಗಳು).

ಪ್ರಭಾವ

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಕಥೆ ಮತ್ತು ಶೈಲಿಯನ್ನು, ವಿಶೇಷವಾಗಿ ೧೯೯೦ರ ದಶಕದಾದ್ಯಂತ, ಅನೇಕರು ಅನುಕರಣೆ ಮಾಡಿದರು. ಇದು ಮತ್ತು ಕೆಲವು ಇತರ ಚಿತ್ರಗಳು ಹಾಗೂ ಯುವ ನಿರ್ದೇಶಕರು "ವಿನ್ಯಾಸಕ" ಚಿತ್ರಗಳ ಪ್ರವೃತ್ತಿಯನ್ನು ಆರಂಭಿಸಿದವು/ಆರಂಭಿಸಿದರು.

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವು ಕಥೆಯ ಅವಿಭಾಜ್ಯ ಅಂಗಗಳಾಗಿ ವಿದೇಶದ ಸ್ಥಳಗಳನ್ನು ಹೊಂದಿರುವ, ಭಾರತೀಯ ವಲಸಿಗರಿಗೆ ಇಷ್ಟವಾಗಲು ವಿನ್ಯಾಸಗೊಳಿಸಲಾದ ಚಲನಚಿತ್ರಗಳ ಪ್ರವೃತ್ತಿಯನ್ನು ಆರಂಭಿಸಿತು. ಪಾತ್ರಗಳು ಸ್ವತಃ ತಾವೇ ವಲಸಿಗರಾಗಿದ್ದು ಭಾರತ ಮತ್ತು ಪಾಶ್ಚಾತ್ಯದ ನಡುವೆ ಸುಲಭವಾಗಿ ಚಲಿಸಲು ಸಾಧ್ಯವಿರುವ ಪ್ರವೃತ್ತಿಯನ್ನು ಹೊಂದಿರುತ್ತವೆ. ನಂತರದ ಕೆಲವು ಚಲನಚಿತ್ರಗಳು ಈ ಪ್ರವೃತ್ತಿಯನ್ನು ಅನುಸರಿಸಿದವು. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಮುಖ್ಯ ಪಾತ್ರಗಳಾಗಿ ಎನ್ಆರ್‌ಐಗಳನ್ನು ಹೊಂದಿದ್ದ ಮೊದಲ ಹಿಂದಿ ಬ್ಲಾಕ್‍ಬಸ್ಟರ್ ಚಲನಚಿತ್ರವೆನಿಸಿಕೊಂಡಿತು. ಈ ಚಿತ್ರವು ವಲಸಿಗರ ಮಾರುಕಟ್ಟೆಯನ್ನು ಉದ್ಯಮಕ್ಕೆ ಆದಾಯದ ಪ್ರಮುಖ ಮೂಲವಾಗಿ ಸ್ಥಾಪಿಸಲು ನೆರವಾಯಿತು; ಆ ಮಾರುಕಟ್ಟೆಯನ್ನು ದೇಸಿ ಮಾರುಕಟ್ಟೆಗಿಂತ ಹೆಚ್ಚು ಸುರಕ್ಷಿತ ಹಣಕಾಸು ಹೂಡಿಕೆ ಎಂದು ಕಾಣಲಾಯಿತು.

ನಂತರದ ಹಲವು ಚಲನಚಿತ್ರಗಳು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರಕ್ಕೆ ಗೌರವ ಸಲ್ಲಿಸಿವೆ. ಕೆಲವು ಚಲನಚಿತ್ರಗಳು ಈ ಚಿತ್ರದ ಪರಾಕಾಷ್ಠೆಯ ಟ್ರೇನ್ ದೃಶ್ಯಭಾಗವನ್ನು (ಇದರಲ್ಲಿ ಒಂದು ಚಲಿಸುತ್ತಿರುವ ಟ್ರೇನ್‍ನ್ನು ಹಿಡಿಯಲು ಓಡುತ್ತಿರುವ ಮಹಿಳೆಗೆ ಹತ್ತಲು ಒಬ್ಬ ಕೈಚಾಚಿದ ಪುರುಷನ್ನು ಸಹಾಯ ಮಾಡುತ್ತಾನೆ) ಹೋಲುವ ದೃಶ್ಯಗಳನ್ನು ಒಳಗೊಂಡಿವೆ.

ಪರಿಣಾಮ

ಪ್ರೇಕ್ಷಕರು ಪರದೆ ಮೇಲೆ ಶಾರುಖ್ ಖಾನ್ ಮತ್ತು ಕಾಜೋಲ್‍ರ ನಡುವಿನ ಸೌಹಾರ್ದದ ಸಂಬಂಧವನ್ನು ಶ್ಲಾಘಿಸಿದರು. ಇವರಿಬ್ಬರು ನಂತರ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ಒಟ್ಟಾಗಿ ಕೆಲಸಮಾಡಿದರು. ಇವರನ್ನು ಹಲವುವೇಳೆ ಭಾರತೀಯ ಸಿನಿಮಾದ ಅತಿ ಪ್ರೀತಿಸಲ್ಪಡುವ ಪರದೆ ಮೇಲಿನ ದಂಪತಿ ಎಂದು ಕರೆಯಲಾಗುತ್ತದೆ.

ಅನಿರೀಕ್ಷಿತ ದೀರ್ಘ ವಿಳಂಬದ ನಂತರ, ಯಶ್ ರಾಜ್ ಫ಼ಿಲ್ಮ್ಸ್ ಚಿತ್ರವನ್ನು ಡಿವಿಡಿಯಲ್ಲಿ ೨೦೦೨ರಲ್ಲಿ ಬಿಡುಗಡೆ ಮಾಡಿತು.

2006 ರಲ್ಲಿ, ಚಿತ್ರದ ಬಿಡುಗಡೆಯ ೫೦೦ನೇ ವಾರವನ್ನು ಆಚರಿಸುವ ಒಂದು ಊಟದ ಕಾರ್ಯಕ್ರಮದಲ್ಲಿ ಚಿತ್ರ ತಂಡದ ಸದಸ್ಯರನ್ನು ಗೌರವಿಸಲಾಯಿತು.

ಉಲ್ಲೇಖಗಳು

ಗ್ರಂಥಸೂಚಿ

 

ಹೆಚ್ಚಿನ ಓದಿಗಾಗಿ

  • Chopra, Aditya; Kabir, Nasreen Munni (12 December 2014). Aditya Chopra Relives ... (Dilwale Dulhania Le Jayenge: As Told to Nasreen Munni Kabir). Yash Raj Films. ISBN 978-93-5196-188-8.
  • "Gender, Nation, and Globalization in Monsoon Wedding and Dilwale Dulhania Le Jayenge". Meridians: Feminism, Race, Transnationalism. 6 (1): 58–81. 2005. doi:10.1353/mer.2005.0032.

ಹೊರಗಿನ ಕೊಂಡಿಗಳು


Tags:

ಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಕಥಾವಸ್ತುಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಪಾತ್ರವರ್ಗಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ತಯಾರಿಕೆಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ವಿಷಯಗಳುಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಂಗೀತಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಬಿಡುಗಡೆಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಪ್ರಶಸ್ತಿ ಗೌರವಗಳುಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಕೊಡುಗೆಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಉಲ್ಲೇಖಗಳುಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಗ್ರಂಥಸೂಚಿಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಹೆಚ್ಚಿನ ಓದಿಗಾಗಿಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಹೊರಗಿನ ಕೊಂಡಿಗಳುಚಲನಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಕಾಜೊಲ್ಯಶ್ ಚೋಪ್ರಾಶಾರುಖ್ ಖಾನ್ (ಹಿಂದಿ ನಟ)ಸ್ವಿಟ್ಜರ್ಲ್ಯಾಂಡ್

🔥 Trending searches on Wiki ಕನ್ನಡ:

ವಿಕಿಪೀಡಿಯಕುರುಬಚಕ್ರವರ್ತಿ ಸೂಲಿಬೆಲೆಕರ್ನಾಟಕದ ಅಣೆಕಟ್ಟುಗಳುಕೃಷ್ಣರಾಜಸಾಗರಶ್ರೀವಿಜಯಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಅಲಾವುದ್ದೀನ್ ಖಿಲ್ಜಿಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಕನ್ನಡ ವ್ಯಾಕರಣಖಾಸಗೀಕರಣಮೊದಲನೆಯ ಕೆಂಪೇಗೌಡವಿಶ್ವ ಕನ್ನಡ ಸಮ್ಮೇಳನಫ್ರೆಂಚ್ ಕ್ರಾಂತಿಕ್ಯಾನ್ಸರ್ಹುಲಿಬೆಂಗಳೂರು ಕೋಟೆಯಕ್ಷಗಾನರಂಜಾನ್ವಾಣಿಜ್ಯ(ವ್ಯಾಪಾರ)ಮಾದಿಗಲಕ್ನೋಮಫ್ತಿ (ಚಲನಚಿತ್ರ)ಮೌರ್ಯ ಸಾಮ್ರಾಜ್ಯಜೋಗಪ್ರೇಮಾಚಂದ್ರಶೇಖರ ಕಂಬಾರಗಾಂಧಿ ಮತ್ತು ಅಹಿಂಸೆದುರ್ಯೋಧನಧರ್ಮಸ್ಥಳಜಾಗತೀಕರಣಕರ್ನಾಟಕಗಾಂಧಿ ಜಯಂತಿಸೂರ್ಯ (ದೇವ)ತತ್ಸಮ-ತದ್ಭವಎಚ್ ನರಸಿಂಹಯ್ಯಡಿ.ವಿ.ಗುಂಡಪ್ಪಶ್ರೀ ಭಾರತಿ ತೀರ್ಥ ಸ್ವಾಮಿಗಳುಬಿ. ಎಂ. ಶ್ರೀಕಂಠಯ್ಯಕನ್ಯಾಕುಮಾರಿರಷ್ಯಾಸ್ವಚ್ಛ ಭಾರತ ಅಭಿಯಾನಮೂಲಸೌಕರ್ಯನರೇಂದ್ರ ಮೋದಿರಚಿತಾ ರಾಮ್ಜಯಮಾಲಾಚಿತ್ರದುರ್ಗಎಸ್. ಶ್ರೀಕಂಠಶಾಸ್ತ್ರೀಜಲ ಮಾಲಿನ್ಯಜನಪದ ಕರಕುಶಲ ಕಲೆಗಳುಭರತೇಶ ವೈಭವಸಂಶೋಧನೆವಿಮರ್ಶೆಷಟ್ಪದಿಕೆ. ಎಸ್. ನರಸಿಂಹಸ್ವಾಮಿಸರಸ್ವತಿಮಕ್ಕಳ ದಿನಾಚರಣೆ (ಭಾರತ)ಭಾರತದಲ್ಲಿನ ಜಾತಿ ಪದ್ದತಿಕಾವೇರಿ ನದಿರಾಗಿಮಳೆಗಾಲತಿಂಥಿಣಿ ಮೌನೇಶ್ವರಕುವೆಂಪುಬರಗೂರು ರಾಮಚಂದ್ರಪ್ಪಮಳೆನೀರು (ಅಣು)ಸಾಮಾಜಿಕ ಸಮಸ್ಯೆಗಳುಪ್ರಬಂಧಬೆಂಗಳೂರುಸಂತಾನೋತ್ಪತ್ತಿಯ ವ್ಯವಸ್ಥೆಏಣಗಿ ಬಾಳಪ್ಪಕನಕದಾಸರುಸಂಸ್ಕೃತ ಸಂಧಿಗಣೇಶ ಚತುರ್ಥಿಹೂವುಯೇಸು ಕ್ರಿಸ್ತಶ್ರೀರಂಗಪಟ್ಟಣ🡆 More