ಕರ್ನಾಟಕ ಜನಪದ ನೃತ್ಯ

ಕರ್ನಾಟಕ ಜನಪದ ನೃತ್ಯ : ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ- ಈ ಪ್ರದೇಶಗಳಲ್ಲಿ ವೈಶಿಷ್ಟ್ಯ ಪಡೆದಿರುವ ನೃತ್ಯಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ.

ಪ್ರಮುಖ ಜನಪದ ನೃತ್ಯಗಳು

ಲಂಬಾಣಿಯರ ಜನಪದ ನೃತ್ಯಗಳು

ಗುಡ್ಡಬೆಟ್ಟಗಳಲ್ಲಿ ವಾಸಿಸುವ ಲಂಬಾಣಿಯರ ಜನಪದ ನೃತ್ಯಗಳು ರಮಣೀಯವಾಗಿವೆ. ಕಸೂತಿ, ಮಣಿ, ಕನ್ನಡಿಗಳಿಂದ ಹೊಲೆದಿರುವ ಬಣ್ಣದ ಲಂಗ, ಕುಪ್ಪಸಗಳನ್ನು ತೊಟ್ಟುಕೊಂಡು, ಕಾಲುಬೆರಳುಗಳಿಂದ ತಲೆಯ ಕೂದಲಿನವರೆಗೂ ಆಭರಣಗಳನ್ನು ಧರಿಸಿ, ಕೈಗಳನ್ನು ಜೋತುಹಾಕಿ ಸಾಮೂಹಿಕವಾಗಿ ಕುಣಿಯುವಾಗ ಈ ನೃತ್ಯದ ಚಲನೆಗಳ ಲಾಲಿತ್ಯ ಎದ್ದುಕಾಣುತ್ತದೆ.

ಕೋಲಾಟ

  • ಕರ್ನಾಟಕದ ಎಲ್ಲ ಕಡೆಗಳಲ್ಲೂ ಕೋಲಾಟಗಳು ಆಕರ್ಷಣೀಯವಾಗಿರುತ್ತವೆ. ಅವುಗಳಲ್ಲಿ ವೀರರಸ ಹೆಚ್ಚು. ಸೊಗಸಾದ ಗೀತೆಗಳನ್ನು ಹಾಡುತ್ತ ನರ್ತಕರು ಕೋಲು ಹಿಡಿದು ಚಕ್ರಾಕಾರವಾಗಿ ನಿಂತು ಹಾಡಿಗೆ ಸರಿಯಾಗಿ ಗೆಜ್ಜೆಕಾಲಿನ ಹೆಜ್ಜೆಗಳನ್ನು ಹಾಕುತ್ತ, ಕೋಲು ಹೊಯ್ಯುತ್ತ ಕುಣಿಯುತ್ತಾರೆ. ನೃತ್ಯ ಸಾಗಿದಂತೆ ಪದ್ಮ, ಚಕ್ರ, ಕೋಟೆ, ಜಡೆ ಮುಂತಾದ ಆಕೃತಿಗಳಲ್ಲಿ ನರ್ತಿಸುತ್ತಾರೆ. ಪದವನ್ನು ಚೆನ್ನಾಗಿ ಹಾಡುವವನೇ ಮುಖಂಡ.
  • ದಿನವೆಲ್ಲ ದುಡಿದುಸೋತ ರೈತರು ಸುಗ್ಗಿಯ ದಿನಗಳ ರಾತ್ರಿ ಬೆಳದಿಂಗಳಲ್ಲಿ ಕೋಲುಗಳನ್ನು ಕುಟ್ಟುತ್ತ ಪದವನ್ನು ಹಾಡುತ್ತ ಗುಂಪುಗುಂಪಾಗಿ ಕೋಲಾಟವಾಡುತ್ತಾರೆ. ಈ ಕೋಲು ಪದ್ಯಗಳ ಸಾಹಿತ್ಯ ಬಹಳ ಸೊಗಸು. ಈ ಪದಗಳಲ್ಲಿ ಉತ್ಸಾಹ ಆನಂದ ರಸಗಳೇ ಪ್ರಧಾನ. ಗಂಡಸರೇ ಹೆಚ್ಚಾಗಿ ನಡೆಸುವ ಈ ಕೋಲಾಟಗಳನ್ನು ಕೆಲವೆಡೆ ಹೆಂಗಸರೂ ಆಡುತ್ತಾರೆ. ಕೋಲಾಟಗಳಲ್ಲಿ- ಒಂಟಿಕೋಲು, ಜೋಡಿಕೋಲು, ತೊಟ್ಟಿಲುಕೋಲು, ಸುತ್ತುಕೋಲು ಇತ್ಯಾದಿ ವಿಧಗಳಿವೆ. ಕೋಲಾಟವಾದ ಮೇಲೆ ಕೋಲುಗಳನ್ನು ಭೂಮಿತಾಯಿಗೆ ಒಪ್ಪಿಸುವುದರಲ್ಲೂ ಒಂದು ರೀತಿ ಇದೆ.

ಸುಗ್ಗಿಯ ಕುಣಿತ

ಸುಗ್ಗಿಯ ಕುಣಿತ ಅನೇಕ ಕಡೆಗಳಲ್ಲಿ ಪ್ರಚಾರದಲ್ಲಿದೆ. ಅದರಲ್ಲಿ ರಂಗದ ಕುಣಿತ, ಮಾರಿ ಕುಣಿತ ಎಂಬ ವಿಧಾನಗಳಿವೆ. ಸುಗ್ಗಿಯ ಸಂತೋಷ ದುಡಿದ ರೈತನಿಗಲ್ಲದೆ ಇನ್ನಾರಿಗೆ ತಿಳಿದೀತು ? ಅವನ ಕಷ್ಟ, ಶ್ರಮ, ಜಾಗರಣೆ, ಮಳೆಯ ಹಂಬಲ, ಇವೆಲ್ಲ ಕಾಳಿನ ರಾಶಿಯನ್ನು ನೋಡುವಾಗ ಮಾಯವಾಗುತ್ತವೆ. ಹಾಡು, ಕುಣಿತಗಳಲ್ಲಿ ಅವನ ಸಂತೋಷ ಹೊರಹೊಮ್ಮುತ್ತದೆ. ಒಂದು ತಮಟೆಯ ತಾಳಕ್ಕೆ ನಾಲ್ಕಾರು ಜನ ಸಾಲಾಗಿ ನಿಂತು ಹೆಜ್ಜೆಹಾಕಲು ಆರಂಭಿಸುತ್ತಾರೆ. ಒಂದು ಕೈಯಲ್ಲಿ ಬಣ್ಣದ ಚೌಕ ಹಿಡಿದು ಇನ್ನೊಂದು ಕೈಯನ್ನು ಸೊಂಟದ ಮೇಲಿಟ್ಟು ಬಳುಕುತ್ತ, ಕುಪ್ಪಳಿಸುತ್ತ ಕುಣಿಯುತ್ತಾರೆ. ಹಳ್ಳಿಯ ಗುಡಿಯ ಹೊರಾಂಗಣದಲ್ಲಿ ಉರಿಹಾಕಿ ತಮಟೆ ಬಾರಿಸಿ ಕೇಕೆ ಹಾಕುತ್ತಿರುವಾಗ ಹಳ್ಳಿಯ ಜನರೆಲ್ಲ ಸೇರಿ ಇದರಲ್ಲಿ ಭಾಗವಹಿಸುತ್ತಾರೆ. ಹೀಗೆಯೇ ಅನೇಕ ಬಗೆಯ ನೃತ್ಯಗಳು ಕರ್ನಾಟಕದಲ್ಲಿ ಲಭ್ಯವಾಗುತ್ತವೆ.

ವೀರಭದ್ರ ಕುಣಿತ

ವೀರಭದ್ರ ಕುಣಿತ, ವೀರಮಕ್ಕಳ ಕುಣಿತಗಳು ಮೈಸೂರಿನಲ್ಲಿವೆ. ವೀರಕುಣಿತ ವೀರರಿಗೆ ಸಾಧ್ಯ. ಕಾಳಗಕ್ಕೆ ಮುಂಚೆಯೋ ಬೇಟೆಯ ಕೊನೆಯಲ್ಲೋ ಹುಮ್ಮಸ್ಸು ಹುರುಪುಗಳನ್ನು ಹೊರ ಸೂಸುವ ಈ ವೀರಕುಣಿತ ಆವೇಶಭರಿತವಾದುದು. ಕುಣಿವಾಗಿನ ಈ ವೀರರ ಕೇಕೆ ಹಲವಾರು ಮೈಲಿಗಳವರೆಗೆ ಕೇಳುತ್ತಿರುತ್ತದೆ.

ಕಂಸಾಳೆ

ಹಳೆಯ ಮೈಸೂರಿನ ಬೀಸುಕಂಸಾಳೆ ನೃತ್ಯಗಳಲ್ಲಿ ಕಂಸಾಳೆಯ ಗತ್ತಿಗನುಸಾರವಾಗಿರುವ ಹಿನ್ನಲೆ ಸಂಗೀತಕ್ಕೆ ಹೊಂದುವಂತೆ ನೃತ್ಯಗಾರರು ಆಕರ್ಷಣೀಯವಾಗಿ ಕುಣಿಯುತ್ತಾರೆ. ಕಂಸಾಳೆ ಕುಣಿತದಲ್ಲಿ ಒಂದು ಕಂಚಿನ ಬಟ್ಟಲು ಮತ್ತು ತಾಳಗಳನ್ನು ಉಪಯೋಗಿಸುತ್ತಾರೆ. ಕಂಸಾಳೆ ಪದ ಲಾವಣಿ ರೂಪದ ಹಾಡು. ನೃತ್ಯಗಾರರ ಜೊತೆಗೆ ಇಬ್ಬರು ಕಂಸಾಳೆ ಬಾರಿಸುತ್ತ ಪಲ್ಲವಿ ಹಾಡುತ್ತಾರೆ. ಒಬ್ಬ ಕಂಸಾಳೆಯನ್ನು ಬಡಿಯುತ್ತ ಬಾಗಿ ಬಳುಕಿ ಕುಣಿಯುತ್ತಾನೆ.

ನಂದಿಕಂಬದ ಕುಣಿತ

ನಂದಿಕಂಬದ ಕುಣಿತವನ್ನು (ನಂದಿಕೋಲು) ಸಾಮಾನ್ಯವಾಗಿ ಮೆರವಣಿಗೆಗಳಲ್ಲಿ ಕಾಣಬಹುದು. ಯಾವುದಾದರೂ ವಿಜೃಂಭಣೆಯ ಮೆರವಣಿಗೆ ಹೊರಟಾಗ ಅಲಂಕೃತವಾದ 30-40 ಅಡಿ ಎತ್ತರದ ಕಂಬವನ್ನು ನೃತ್ಯಕಾರರು ಹೊಟ್ಟೆಗೆ ಜೋತುಹಾಕಿಕೊಂಡು ತಮ್ಮಟೆಯ ತಾಳಕ್ಕೆ ಸರಿಯಾಗಿ ಕುಣಿಯುತ್ತ ಕೋಲನ್ನು ನೆಟ್ಟಗೆ ನಿಲ್ಲಿಸುವುದು ಆಶ್ಚರ್ಯಕರ.

ಕರಗದ ಕುಣಿತ

ಕರಗದ ಕುಣಿತ ಮೈಸೂರಿನ ವಿಶೇಷ ಜನಪದ ನೃತ್ಯ. ಅಲಂಕೃತ ಕರಗವನ್ನು ತಲೆಯ ಮೇಲೆ ಧರಿಸಿ, ಭಕ್ತಿಪರವಶನಾದ ಒಬ್ಬ ನೃತ್ಯಗಾರ ವಿವಿಧ ರೀತಿಯ ಕೈಚಲನೆ, ಕಾಲುಚಲನೆಗಳಿಂದ ನರ್ತಿಸುತ್ತಾನೆ. ವಾದ್ಯಗೋಷ್ಠಿಯ ನಾದಕ್ಕೆ ಸ್ಫೂರ್ತಿಗೊಂಡು ದಿಗ್ಭ್ರಾಂತನಂತೆ ಕುಣಿದರೂ ಆತನ ತಲೆಯ ಮೇಲಿನ ಕರಗ ಒಂದಿಷ್ಟೂ ಅಲುಗಾಡುವುದಿಲ್ಲ, ತುಳುಕುವುದಿಲ್ಲ. ಜೊತೆಗೆ ಖಡ್ಗ ಹಿಡಿದು ಅವನನ್ನು ಹಿಂಬಾಲಿಸುವ ಪಂಗಡ ಆ ದೃಶ್ಯಕ್ಕೆ ಕಳೆ ಕೊಡುತ್ತದೆ. ಜಡೆ ಮತ್ತು ಚಿತ್ರಗೋಪುರ ಎಂಬವು ಕರಗದ ಇತರ ವಿಧಗಳು. ಇವುಗಳಲ್ಲದೆ ಡೊಳ್ಳುಕುಣಿತ, ಬಣಜದ ತಾಂಡ ಕುಣಿತ, ಕುದುರೆ ಕುಣಿತ, ಪುಜಾ ಕುಣಿತ, ವೀರಗಾಸೆ ಕುಣಿತ, ಪಟ್ಟಾ ಕುಣಿತ, ಮುಂತಾದ ಹಲವಾರು ಕುಣಿತಗಳಿವೆ.

ಕೊಡಗಿನ ಜನಪದ ನೃತ್ಯಗಳು

ಕೊಡಗಿನ ಹುತ್ತರಿ ನೃತ್ಯ ಮತ್ತು ಬೊಳ್ಕಾಟ ನೃತ್ಯಗಳು ಜನಪ್ರಿಯವಾದುವು. ದೇವರ ಪುಜಾವಿಧಾನವಾದ ಈ ನೃತ್ಯವನ್ನು ಧಾರ್ಮಿಕ ಸಂದರ್ಭಗಳಲ್ಲಿ ಗಂಡಸರು ಮಾಡುತ್ತಾರೆ. ಸುಗ್ಗಿಯ ಕಾಲದಲ್ಲಿ, ಉತ್ಸವ, ಮದುವೆ ಸಮಾರಂಭಗಳಲ್ಲಿ ಕೊಡವರು ಕಪ್ಪು ಬಣ್ಣದ ಉದ್ದ ನಿಲುವಂಗಿ, ಧೋತಿ ಧರಿಸಿ, ತಲೆಗೆ ರುಮಾಲು ಸುತ್ತಿ, ಪೀಚ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆನಂದದಿಂದ ನರ್ತಿಸುತ್ತಾರೆ. ಹಾಡುಗಾರಿಕೆಯ ಜೊತೆಗೆ ಚರ್ಮವಾದ್ಯ ಬಾರಿಸುವವರು ಮಧ್ಯದಲ್ಲಿ ನಿಂತು ತಾಳವನ್ನು ಕೊಡುತ್ತಿರಲು ಸುತ್ತಲೂ ನೃತ್ಯಗಾರರು ಡಮರು ನಾದಕ್ಕೆ ಚಾಮರಗಳನ್ನು ಬೀಸಿ ನರ್ತಿಸುವ ದೃಶ್ಯ ಮೋಹಕವಾದುದು.

ತುಳುನಾಡಿನ ಜನಪದ ನೃತ್ಯಗಳು

  • ತುಳುನಾಡಿನಲ್ಲಿ ಅನೇಕ ವಿಧದ ಜನಪದ ನೃತ್ಯಗಳು ರೂಢಿಯಲ್ಲಿವೆ. ಅಲ್ಲಿನ ಹರಿಜನರು ಲೇ ಲೇ ಲೇ ಲೋ ಎಂಬ ಪಲ್ಲವಿ ಹಾಡುತ್ತ ದುಡಿಯ ತಾಳಕ್ಕೆ ಕುಣಿಯುತ್ತಾರೆ. ಒಬ್ಬಾತ ದುಡಿಯನ್ನು ಬಾರಿಸುತ್ತಾನೆ. ಹೆಂಗಸರು ಬಳುಕಿ, ಬಾಗಿ, ಕೈ ಅಲುಗಿಸಿ ಹಿಂದೆ ಮುಂದೆ ಸರಿದು ಕೂಟ ನೃತ್ಯದಲ್ಲಿ ಭಾಗವಹಿಸುತ್ತಾರೆ. ಕುಂದಾಪುರ, ಉಡುಪಿಯ ಹರಿಜನರಲ್ಲಿ 5-6 ಯುವಕರು ಚಿಕ್ಕ ಕೋಲುಗಳನ್ನು ಹಿಡಿದು ಸರಳವಾಗಿ ಹೆಜ್ಜೆ ಹಾಕಿ ಕುಣಿಯುತ್ತಾರೆ.
  • ಹಿನ್ನೆಲೆ ಸಂಗೀತಕ್ಕೆ ಇಬ್ಬರು ಚರ್ಮವಾದ್ಯದವರು, ಒಬ್ಬ ಕೊಳಲು ಬಾರಿಸುವವನು ಇರುತ್ತಾರೆ. ಹೆಂಗಸೊಬ್ಬಳು ದೊಡ್ಡ ತಾಳಗಳನ್ನು ಬಾರಿಸುತ್ತಾಳೆ. ಸಂಗೀತದ ಲಯ ಹೆಚ್ಚಾದಂತೆ ನೃತ್ಯಗಾರರ ಆವೇಶ ಹೆಚ್ಚಾಗುತ್ತದೆ. ಪುತ್ತೂರು ತಾಲ್ಲೂಕಿನ ಮೇರಾ ಜನರಲ್ಲಿ ಹೆಂಗಸರು ಮಾಡುವ ಕೂಟನೃತ್ಯಗಳಿವೆ. ಇಬ್ಬರು ಗಂಡಸರು ದುಡಿಬಡಿದಂತೆ ಬಿಳಿ ಸೀರೆ ಉಟ್ಟ ಹೆಂಗಸರು ಕೈಚಪ್ಪಾಳೆಗಳಿಂದ ಹಿಂದೆಮುಂದೆ ಬಳುಕಿ ಬಾಗಿ ವಾದ್ಯಗಾರರ ಸುತ್ತಲೂ ಕುಣಿಯುತ್ತಾರೆ.
  • ಅವರ ಸರಳ ಲಲಿತ ಚಲನೆಗಳಲ್ಲಿ ಸ್ನೇಹಪರವಶತೆಯ ಆನಂದ ಉಕ್ಕಿ ಹರಿಯುತ್ತದೆ. ರಾಣಿಯಾರ್ ಪಂಗಡದವರು ಭಕ್ತಿ ಶಕ್ತಿಗಳಿಂದ ಕೋಲಾಟ ಮಾಡುವಾಗ ಅವರ ಕೋಲುಗಳೂ ಕಾಲುಗೆಜ್ಜೆಗಳೂ ಮಾತನಾಡುವಂತೆ ಭಾಸವಾಗುತ್ತದೆ. ಕಾರ್ಕಳ ತಾಲ್ಲೂಕಿನ ಕುಡುಬಿಯರಲ್ಲಿ ಸುಂದರ ಕೂಟ ನೃತ್ಯವಿದೆ. ಗಂಡಸರು ಬಿಳಿ ಬಟ್ಟೆಯುಟ್ಟು ಕೆಂಪು ರುಮಾಲು ಸುತ್ತಿ, ಕೈಯಲ್ಲಿ ಮಣ್ಣಿನ ವಾದ್ಯ ಹಿಡಿದು ಎರಡು ಸಾಲಾಗಿ ನಿಂತು ಹಾಡುತ್ತ ಸಂಭಾಷಣೆ ನಡೆಸುತ್ತಾರೆ.

ದೈವರಾಧನೆ

  • ಪಶ್ಚಿಮ ಘಟ್ಟದ ಮಲೆಕುಡಿಯರ ಪಂಗಡಗಳಲ್ಲಿ ವಿಶೇಷ ತರಹದ ಒಂದು ಭೂತನೃತ್ಯವಿದೆ. ಮೂವರು ಯುವಕರು ಖಡ್ಗಾಯುಧರಾಗಿ ಕಹಳೆ-ಕೊಂಬು ವಾದ್ಯಕ್ಕೆ ಹೊಂದಿದಂತೆ ಮೈಮರೆತು ಕುಣಿಯುತ್ತಾರೆ. ಈ ನೃತ್ಯ ಅನಾಗರಿಕರ ಯುದ್ಧನೃತ್ಯವನ್ನು ಹೋಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳ ಕುಣಿತ ಹೆಸರಾದುದು. ಬೇರೆ ಬೇರೆ ಜನರು ಬೇರೆ ಬೇರೆ ಭೂತಗಳನ್ನು ನಂಬಿ ಪುಜಿಸುತ್ತಾರೆ. ವರ್ಷದ ನಾನಾಕಾಲಗಳಲ್ಲಿ ಈ ದೆವ್ವಗಳಿಗೆ ಜಾತ್ರೆ ನಡೆಯುತ್ತದೆ. ದೆವ್ವದ ಆವೇಶ ಪಡೆಯುವವರ ಜಾತಿಯೇ ಬೇರೊಂದಿದೆ. ಈ ನೃತ್ಯಗಳೆಲ್ಲ ಭಕ್ತಿಪ್ರಧಾನವಾದುವು. *ಭಕ್ತರು ತಾವು ನಂಬುವ ಭೂತಗಳ ತೃಪ್ತಿಗಾಗಿ ಅವನ್ನು ಆಹ್ವಾನಿಸಿ, ಉಣಿಸುವರು. ಭೂತದ ಆವೇಶ ಪಡೆಯುವ ಪುಜಾರಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಬಣ್ಣ ಲೇಪಿಸಿಕೊಂಡು ವೀರಾವೇಶದಿಂದ ಕುಣಿದು ತನ್ನನ್ನೇ ಮರೆಯುತ್ತಾನೆ. ಆತನ ಬಾಯಿಂದ ಬರುವ ಮಾತುಗಳು ಭೂತದ ಮಾತುಗಳೆಂಬ ಭ್ರಾಂತಿ ಜನರಲ್ಲಿ ಮೂಡುತ್ತದೆ. ಬೇರೆ ಬೇರೆ ಭೂತಗಳಿಗೆ ತಕ್ಕ ನಡೆ, ನೃತ್ಯ, ವೇಷ, ಕಿರೀಟ, ಭೂಷಣಗಳಿರುತ್ತವೆ.
  • ಸಾಮಾನ್ಯವಾಗಿ ಭೂತಗಳ ಉಗ್ರಸ್ವರೂಪ ಆಯಾ ವೇಷದಲ್ಲಿ ವ್ಯಕ್ತವಾಗುತ್ತದೆ. ಇಂಥ ನೃತ್ಯ ಸಂಪ್ರದಾಯದಲ್ಲಿ ನಾಗನೃತ್ಯ ವಿಚಿತ್ರವಾದುದು. ವೈದ್ಯರೆಂಬ ಪುಜಾರಿಗಳ ಈ ನೃತ್ಯಕ್ಕೆ ನಾಗಮಂಡಲವೆನ್ನುತ್ತಾರೆ. ರಂಗಮಂಟಪದಲ್ಲಿ ಮಹಾಶೇಷನ ರಂಗೋಲಿಯನ್ನು ಹಾಕಿಸುತ್ತಾರೆ. ಪುಜಾರಿ ಕೆಂಪು ರೇಷ್ಮೆಯನ್ನುಟ್ಟು ಚದುರಿದ ಕೂದಲನ್ನು ಬಿಟ್ಟು ಸುಬ್ಬರಾಯನಾಗಿ ಬಂದು ನಿಲ್ಲುತ್ತಾನೆ. ಅವನ ಮುಂದೆ ಪ್ರಕೃತಿ ಪುರುಷ ಸೂಚಕವಾಗಿ ಅರ್ಧ ಗಂಡಸಿನ ಅರ್ಧ ಹೆಂಗಸಿನ ಉಡುಪನ್ನು ಧರಿಸಿದ ನೃತ್ಯಗಾರ ನಿಂತಿರುತ್ತಾನೆ.
  • ಹಿಮ್ಮೇಳದ ಗಾಯಕರು ದೇವರ ಲೀಲೆಗಳನ್ನು ಹಾಡುತ್ತಾರೆ. ಒಂದು ಡಮರು, ಒಂದು ಜೊತೆ ತಾಳಕ್ಕೆ ಅನುಗುಣವಾಗಿ ನಾಗದ ಆವೇಶ ತಂದುಕೊಂಡು ದೇಹಕ್ಕೆ ಮೂಳೆಗಳೇ ಇಲ್ಲವೆಂಬಂತೆ ನಾಗನರ್ತನ ನರ್ತಿಸುವಾಗ ಅದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿ ಪರಿಣಮಿಸುತ್ತದೆ. ನಾಗಬ್ರಹ್ಮನೇ ಪ್ರತ್ಯಕ್ಷವಾಗಿ ಎದುರಿಗೆ ಬಂದಂತೆ ಭಾಸವಾಗುತ್ತದೆ.

ಯಕ್ಷಗಾನ ಬಯಲಾಟ

  • ಕನ್ನಡ ನಾಡಿನ ಯಕ್ಷಗಾನ ಬಯಲಾಟದ ಪರಂಪರೆ ಆ ಸಂಸ್ಕೃತಿಯ ಅತ್ಯಂತ ಸುಂದರವಾದ ಅಂಗವಾಗಿದೆ. ಯಕ್ಷಗಾನ ಬಯಲಾಟ ಪ್ರೇಕ್ಷಣೀಯ ನೃತ್ಯ ಸಂಪ್ರದಾಯ. ಮಹಾಭಾರತ ರಾಮಾಯಣಾದಿ ಕಥಾನಕಗಳಲ್ಲಿ ಬರುವ ಪಾತ್ರಗಳು ಅತಿಮಾನುಷ ವೇಷಭೂಷಣ, ಕಿರೀಟ, ಬಣ್ಣಲೇಪನಗಳಿಂದ ಕೂಡಿದ್ದು ಪ್ರೇಕ್ಷಕರನ್ನು ಮೈಮರೆಸುತ್ತಾರೆ. ತಾಳ ನೃತ್ಯಕ್ಕೂ ಸಂಗೀತಕ್ಕೂ ಹೊಂದಿಕೊಂಡು ಭಾವಾವೇಶವನ್ನೂ ಸ್ಫೂರ್ತಿಯನ್ನೂ ಒದಗಿಸುತ್ತದೆ.
  • ಸಾಹಿತ್ಯ ಪಂಡಿತ ಪಾಮರರನ್ನು ರಂಜಿಸುವಂತಿರುತ್ತದೆ. ಭಾಗವತರು ಚಂಡೆ, ಮದ್ದಳೆ, ಶ್ರುತಿ, ತಾಳಗಳೊಡನೆ ಕಥೆಯನ್ನು ಆರಂಭಿಸುತ್ತಾರೆ. ಇಬ್ಬರು ಎತ್ತಿಹಿಡಿದ ಪರದೆಯ ಹಿಂದಿನಿಂದ ಅದ್ಭುತವೇಷಧಾರಿಗಳು ನೃತ್ಯಕ್ಕೆ ಸಿದ್ಧರಾಗುತ್ತಾರೆ. ಪಾತ್ರಧಾರಿಗಳು ನರ್ತಿಸುತ್ತಿರಲು ಭಾಗವತರು ಜಾಗಟೆ ಕೋಲುಗಳಿಂದ ತಾಳ ಸೂಚಿಸುತ್ತ ಪ್ರಸಂಗದ ಸಾಹಿತ್ಯವನ್ನು ಹಾಡಿ ಸಭಿಕರಾಗಿ ಹಾಸ್ಯಗಾರರಾಗಿ ಕಥಾಸರಣಿಯನ್ನು ಮುಂದುವರಿಸುತ್ತಾರೆ. ಯಕ್ಷಗಾನ ವೀರರಸ ಪ್ರಧಾನವಾದದ್ದು.
  • ಅಲ್ಲಿನ ವೇಷಗಳ ಅಲಂಕಾರಾದಿಗಳಲ್ಲಿ ಚಿತ್ರಕಲಾಪ್ರೌಢಿಮೆಯಿದೆ; ಧರ್ಮವಿಷಯವನ್ನು ಸರಳ ಮಾತಿನಲ್ಲಿ ಉದಾಹರಣೆ ಸಹಿತ ಕಥಾರೂಪಕವಾಗಿ ಬೋಧಿಸುವ ಮಧುರ ಸಂಭಾಷಣೆಯಿದೆ. ವೇದೋಪನಿಷತ್ತುಗಳ ತತ್ತ್ವಾರ್ಥವನ್ನು ಯಕ್ಷಗಾನ ಸುಲಭವಾಗಿ ತಿಳಿಸುತ್ತದೆ. ದೇದೀಪ್ಯಮಾನರಾದ ಪುರಾಣವ್ಯಕ್ತಿಗಳ ಪಾತ್ರಧಾರಿಗಳು ರಂಗಸ್ಥಳದ ಎತ್ತರವಾದ ಕಾಲು ದೀಪಗಳ, ದೀವಟಿಗೆಗಳ ಬೆಳಕಿನಲ್ಲಿ ಸಂಜೆಯಿಂದ ಮುಂಜಾನೆಯವರೆಗೆ ನರ್ತಿಸುವಾಗ ಪ್ರೇಕ್ಷಕರು ತನ್ಮಯರಾಗುತ್ತಾರೆ. ಯಕ್ಷಗಾನ ಬಯಲಾಟ ಅವರನ್ನು ಮಾಯೆಯ ಸುಂದರ ಕಲಾಜಗತ್ತಿಗೆ ಕೊಂಡೊಯ್ಯುತ್ತದೆ.

ಗೊಂಬೆ ಕುಣಿತಗಳು

ಗಾರುಡಿ ಗೊಂಬೆ

ಮೆರವಣಿಗೆಯ ಒಂದು ಸಾಲಿನಲ್ಲಿ ಮೊದಲು ಕಾಣುವುದು ದೊಡ್ಡ ಗೊಂಬೆಗಳು- ಒಂದು ಹೆಣ್ಣು, ಒಂದು ಗಂಡು. ಅವುಗಳ ಮೈ ಬಿದಿರ ಬುಟ್ಟಿಗಳದ್ದು. ಮೇಲಿನ ಹೊದಿಕೆ ಹರಕು ಸೀರೆ, ತಲೆಗೆ ಒಂದು ಮಡಕೆ. ರಂಗಕ್ಕೆ ಸಿದ್ಧವಾದ ಮೇಲೆ ಅವಕ್ಕೆ ಗಾರುಡಿಗತನದ ಆವೇಶ ಬರುತ್ತದೆ. ಅವುಗಳ ಜಡ ದೇಹದಲ್ಲಿ ಜೀವ ಸುಳಿದಾಡುತ್ತದೆ. ಅವಕ್ಕೆ ಹೀಗೆ ಜೀವ ಕೊಡುವವ ಅವನ್ನು ಕುಣಿಸುವಾತ; ಬೊಂಬೆಯ ಬಟ್ಟೆಯೊಳಗೆ ಸೇರಿಕೊಂಡು ನರ್ತಿಸುವ ಮನುಷ್ಯ !

ಸೂತ್ರದ ಗೊಂಬೆ

ಈ ಆಟ ಯಕ್ಷಗಾನದ ಇನ್ನೊಂದು ಪದ್ಧತಿ. ಗೊಂಬೆಗಳನ್ನು ಕುಣಿಸುವ ಆಟಗಾರರು ಪರದೆಯ ಹಿಂದೆ ನಿಂತು, ಅಲಂಕೃತ ಗೊಂಬೆಗಳನ್ನು ಪರದೆಯ ಮುಂದೆ ಬಿಟ್ಟು ಪ್ರೇಕ್ಷಕರಿಗೆ ಕಾಣದಂತೆ ಇದ್ದು ದಾರಗಳಿಂದ ಅವನ್ನು ಆಡಿಸುತ್ತಾರೆ. ಅವು ಕುಣಿದಂತೆ ಹಿಂದೆ ನಿಂತವರು ಹಾಡುತ್ತಾರೆ; ಅವುಗಳ ಅಂಗಾಂಗಗಳ ಚಲನೆಗನುಸಾರವಾಗಿ ಮಾತನಾಡುತ್ತಾರೆ. ಕಥೆ ಸಾಗುತ್ತ ಪ್ರೇಕ್ಷಕರು ಆಟಗಾರನ ಕೈಗೊಂಬೆಗಳಾಗುತ್ತಾರೆ. ಈ ಕೌಶಲ ಅದ್ಭುತವಾದುದು. ಕಥೆಯ ಪಾತ್ರಧಾರಿಗಳಲ್ಲಿ ಹುಟ್ಟುವ ನವರಸಗಳೆಲ್ಲವೂ ಗೊಂಬೆಗಳ ಚಲನೆಗಳ ಮೂಲಕ ಪ್ರೇಕ್ಷಕನಲ್ಲಿ ಉದ್ಭವಿಸಿ ಮಾಯೆಯ ವಾತಾವರಣವನ್ನು ಕಲ್ಪಿಸುತ್ತವೆ.

ತೊಗಲು ಗೊಂಬೆಯಾಟ

  • ಈ ಗೊಂಬೆಗಳು ಕಾಗದದಂತೆ ತೆಳ್ಳಗಿರುವ ಹದ ಮಾಡಿದ ಚರ್ಮದವು. ಹಿಂದೆ ಪ್ರಕಾಶವಾದ ಬೆಳಕಿಟ್ಟರೆ ಅವು ಪರದೆಯ ಮೇಲೆ ಕಾಣುತ್ತವೆ. ಅವಕ್ಕೆ ಬಣ್ಣ ಹಾಕಿರುತ್ತಾರೆ. ತೆಳ್ಳನೆ ಪರದೆಯ ಹಿಂದೆ ಪ್ರಕಾಶವಾದ ಒಂದು ದೀಪವನ್ನು ಕೊಂಚ ಪಕ್ಕಕ್ಕೆ ನೇತುಹಾಕಿರುತ್ತಾರೆ. ಆಟಗಾರನ ಇಡೀ ಸಂಸಾರವೇ ಈ ಆಟದಲ್ಲಿ ಭಾಗವಹಿಸುತ್ತದೆ. ಒಂದೊಂದಾಗಿ ಗೊಂಬೆಗಳನ್ನು ತೆಗೆದು ಕೊಡುವುದು, ಅವನ್ನು ಕ್ರಮವಾಗಿ ಜೋಡಿಸುವುದು ಮುಂತಾದ ಕೆಲಸವನ್ನು ಹೆಂಡತಿ ಮಕ್ಕಳು ನಿರ್ವಹಿಸುತ್ತಾರೆ.
  • ಗೊಂಬೆಗಳ ಕೈಕಾಲುಗಳಿಗೆ ಕಡ್ಡಿಗಳನ್ನು ಸಿಕ್ಕಿಸಿ, ತನ್ನ ನೆರಳು ಪರದೆಯ ಮೇಲೆ ಬೀಳದಂತೆ ಬೆಳಕಿನ ಹಿಂದೆ ನಿಂತು ಅವನ್ನು ಯಜಮಾನ ಪರದೆಗೆ ಅಂಟಿಸುತ್ತಾನೆ. ಅವುಗಳ ಕೈಕಾಲು ಆಡಿಸಿ ಅದಕ್ಕೆ ಸರಿಯಾಗಿ ಮಾತನಾಡುತ್ತಾನೆ. ಹೆಣ್ಣು ಗೊಂಬೆಗೆ ಹೆಂಡತಿಯ ಸ್ವರ ಸೇರುತ್ತದೆ. ಗೊಂಬೆಗಳು ಕುಣಿಯುವಾಗ ಮಕ್ಕಳ ಹಾಡುಗಳು, ಗೆಜ್ಜೆಶಬ್ದ, ಗಡಸು ಗಂಡಸಿನ ಮಾತುಗಳಿಗೆ ಗಂಡಿನ ಕಂಠ- ಹೀಗೆ ಈ ತೊಗಲು ಗೊಂಬೆಯ ಆಟ ಮೂಕ ಚಲನಚಿತ್ರಕ್ಕೆ ಶಬ್ದ ಜೋಡಿಸಿದಂತಿರುತ್ತದೆ.

ಜನಪದ ನೃತ್ಯ ಗೀತೆಗಳು

ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಗೀತೆಗಳಿವೆ. ಇವಕ್ಕೆ ಕೆಲವು ಗಾನನೃತ್ಯಗಳೂ ಇವೆ. ಶಿವಶರಣರ ವಚನಗಳು, ಭಾರತ ವಾಚನ, ಹರಿಕಥೆ, ಶಿವಕಥೆ, ಕೀರ್ತನೆ ಇವುಗಳೆಲ್ಲ ಜನತೆಯಲ್ಲಿ ಜ್ಞಾನ ಪ್ರಸಾರಮಾಡಲು ರೂಢಿಯಲ್ಲಿದ್ದ ವಿಧಾನಗಳು. ಇವುಗಳಲ್ಲಿ ಸಂಗೀತ, ಸಾಹಿತ್ಯ, ನಾಟ್ಯ, ಅಭಿನಯ ಇವುಗಳೆಲ್ಲ ಹದವಾಗಿ ಕೂಡಿಕೊಂಡಿದ್ದು ಪಂಡಿತ ಪಾಮರರೆಂಬ ಭೇದಭಾವವಿಲ್ಲದೆ ಎಲ್ಲರಿಗೂ ಮನರಂಜಕವಾಗಿ ವಿಷಯಬೋಧಕವಾಗಿವೆ. ಈಚೆಗೆ ಆಧುನಿಕ ರೀತಿಯ ನಾಟಕ ಚಲನಚಿತ್ರಗಳು ಬಂದು ಹಳೆಯ ಜನಪದ ನೃತ್ಯ ನಾಟಕಾದಿಗಳು ಹಿಂದೆ ಬಿದ್ದಿವೆ. (ಯು.ಎಸ್.ಕೆ.)

ಲಾವಣಿ

ಗರಡಿಯ ಅಂಗಸಾಧನೆಯಲ್ಲಿ ಪರಿಶ್ರಮ ಹೊಂದಿದ ಆಸಾಮಿಗಳು ಗಮ್ಮತ್ತಿನಿಂದ ಲಾವಣಿ ಹಾಡುತ್ತಾರೆ. ಯುದ್ಧ ಬಂದಾಗ ಜನರನ್ನು ಜಾಗೃತಿಗೊಳಿಸಿ, ಹೋರಾಡಲು ಹುರುಪುಗೊಳಿಸುವ ಸಮ್ಮೋಹನಾಸ್ತ್ರವಿದು. ಪಶ್ಚಿಮದ ಜನಪದ ಸಾಹಿತ್ಯದ ಬ್ಯಾಲಡ್ ರಚನೆಗೆ ಇದನ್ನು ಹೋಲಿಸಬಹುದು. ಈಗಲೂ ಧಾರವಾಡ, ಹುಬ್ಬಳ್ಳಿ ಕಡೆ ತಲೆಗೆ ರಂಗಿನ ಮುಂಡಾಸು ಕಟ್ಟಿಕೊಂಡು, ಕಾಲಿಗೆ ಗೆಜ್ಜೆಕಟ್ಟಿಕೊಂಡು, ಕಡ ಹಿಡಿದುಕೊಂಡು ಲಾವಣಿಕಾರನಾದವ ತನ್ನ ಜೊತೆಗೆ ಮತ್ತೊಬ್ಬ ಅದೇ ರೀತಿ ಹಾಡುವವನನ್ನು ನಿಲ್ಲಿಸಿಕೊಂಡು ಬಲುಮೋಜಿನಿಂದ ಹಾಡುವುದುಂಟು. ಈ ಜಾತಿಯಲ್ಲಿ ತುರಾಯಿಲಾವಣಿ ಮತ್ತು ಕಲ್ಗಿಲಾವಣಿ ಎಂಬ ಭೇದವುಂಟು. ತುರಾಯಿಯವ ತಾಳಹಾಕುವ ಕಡಕ್ಕೆ ಹೂವಿನ ಅಲಂಕಾರ ಮಾಡುತ್ತಾನೆ. ಕಲ್ಗಿಯವ ಮಣಿಯನ್ನೋ ನವಿಲುಗರಿಯನ್ನೋ ತೊಡಿಸುತ್ತಾನೆ. ತುರಾಯಿಯವ ಹರಿಭಕ್ತನಾದರೆ ಕಲ್ಗಿಯವ ಶಿವ ಹಾಗೂ ಪರಾಶಕ್ತಿಯ ಭಕ್ತ. ಚೆನ್ನಾಗಿ ಹಾಡಿದಲ್ಲಿ ಲಾವಣಿ ಮಂದಿಯ ಮನಸ್ಸನ್ನು ಹೊಡೆದು ಜಎಬ್ಬಿಸುವುದರಲ್ಲಿ ಸಂದೇಹವಿಲ್ಲ. (ನೋಡಿ-ಕಲ್ಗಿ - ತುರಾಯಿ )

ಪಿರಿಯಾಪಟ್ಟಣದ ಕಾಳಗದ ಲಾವಣಿ ಚಾರಿತ್ರಿಕ ಲಾವಣಿಗೊಂದು ಉತ್ತಮ ನಿದರ್ಶನ. ವೀರರಾಜನಿಗೂ ಮೈಸೂರಿನ ದಳವಾಯಿಗೂ ನಡೆದ ಯುದ್ಧವನ್ನಿದು ವರ್ಣಿಸುತ್ತದೆ.

ಪಿರಿಯಾಪಟ್ಟಣದ ಜಗಳವ ಹೇಳುತೀನಿ ಕೇಳಿರಣ್ಣ ನೀವ್ ಸಭೆಯಲ್ಲಾ
ಅರಿಯದ ಹಸುಮಗ ದಳವಾಯ್ ಹೊಂಟರು ಮಾಡಲಿಕೆ ಹಲ್ಲಾ || ಪ ||
ಎಂಥ ಮಾತನು ಬರದೋ ರಣಹೇಡಿ ನಾಚಿಕೆಯಿಲ್ಲವೇ ನಿನಗೆ,
ಮತ್ತೆ ಮದ್ದುಗುಂಡು ಸಾಲದೆ ಹೋದರೆ ಕೊಡತೀನಿ ನಿನಗೆ,
ವ್ಯರ್ಥ ಹಮ್ಮು ನೀ ಮಾಡಿ ಕೆಡಬೇಡ ಬಾರೊ ರಣಾಗ್ರದೊಳಗೆ ||
ಸಮಸಾಟಿಯಾಗಿ ಎರಡು ಕೂಡಿತು ದಂಡು ಬೈಲಿನಾಗೆ
ಜಮಾಯಿಸಿ ಜಗಳ ಹತ್ತಿತು ನೋಡೊ ಕರ್ನ ಪಾರ್ಥರೀಗೆ
ನೇಮದಿ ಕಾದಿರುವಳು ಪೆರಿಯಪಟ್ಟಣದ ಮಾರಿ ಹೀಗೆ
ವೀರರಾಜಭೂಪಾಲನ ಅಗಲದೆ ಬೆನ್ಮ್ಯಾಗೆ
ತಮಾಂ ದಂಡು ಉರುಳಿ ಹೋಯಿತು ಮೂರು ಪಟಾಲಂ ದಳವಾಯ್ ಕಡೆಗೆ ||
ಹಲಗಲಿ ಬಂಟರ ಹತಾರದ ಕದನದ ಲಾವಣಿಯಿಂದ ಆರಿಸಿದ್ದು ಈ ಮುಂದಿನದು :
ಹೊತ್ತು ಬಂದಿತು ಮತ್ತ ನೋಡಿರಿ ಕತ್ತಿಹಿಡಿಯುವ ಜನಕ
ಸಿಟ್ಟಿನ ಮಂದಿ ಹಲಗಲಿ ಬಂಟರು ಮುಟ್ಟಲಿಲ್ಲೊ ದಡಕ ||
ವಿಲಾಯಿತಿಯಿಂದ ಹುಕುಮ ಕಳಿಸಿತು ಕುಂಪಣಿ ಸರಕಾರ
ಎಲ್ಲ ಜನರಿಗೆ ಜೋರಮಾಡಿ ಕಸಿದುಕೊಳ್ಳಿರಿ ಹತಾರ |
ಕಾರಸಾಹೇಬ ಬೆಂಕಿ ಚೂರಾದ ಲೂಟ್ ಮಾಡಂತನೋ ಊರಾ
ಸಿಟ್ಟಲೆ ಹೊಡೆದರು ಸಿಡಿಲ ಸಿಡಿದ್ಹಾಂಗ ಗುಂಡು ಸುರಿದಾದ ಭರಪುರಾ |
ರಾಮನ ಕಡಿದ ವಿಪರೀತಾ ಕಾಲುವೆ ಹರಿತೊ ರಕ್ತಾ
ಸಾವಿರ ಆಳಿಗೆ ಒಬ್ಬ ಕೂಗತಾನೊ ಕಡಿ ಕಡಿರಿ ಅಂತ ಮತ್ತಾ
ಊರು ಊರೆ ಇಲ್ಲದಾಯ್ತು ಊರಾಗಾಯ್ತು ಅಂತ ಲೂಟಾ
ಮನಿಮನಿ ಹೊಕ್ಕು ದಂಡು ಹುಡಿಕಿತು, ದನಕರ ಸಹಿತ ಲೂಟಾ
ಕೂಸುಕುನ್ನಿ ಹೋದಾವ ಸತ್ತು, ಬೆಂಕಿ ಹಚ್ಯಾರೊ ಕೂತ
ಬೂದಿ ಮಾಡ್ಯಾರೊ ಹಲಗಲಿ ಸುಟ್ಟು ಗುರುತುಳಿಯಲಿಲ್ಲ ಎಳ್ಳಷ್ಟು
ಹಾಳಾಗಿ ಹೋಯಿತೋ ! ಅತ್ತು ವರ್ಣಿಸಿ ಹೇಳಲಿನಾನೆಷ್ಟು.
ಲಾವಣಿಪದಗಳಲ್ಲಿ ದೇವತಾಸ್ತುತಿ, ದೇಶಪ್ರೇಮ, ಜನತೆಯ ಡೊಂಕನ್ನು ತಿದ್ದುವ ನೀತಿ, ಶೃಂಗಾರ, ವೀರ- ಇವೆಲ್ಲ ಉಂಟು.
ಅಂಬಾ ನಿನ್ನ ನಂಬಿದೆನು ಸಂಭ್ರಮದಿ ಸಲಹುವೆ ಕುಂಭಿಣಿಯೊಳೆಡಬಿಡದೆ
ಅಂಬಾ ತಾಯಿ | ಹಂಬಲಿಸಿ ಅಸುರರ ಕಂದರನ ಕೈಹಿಡಿದು ಸಲಹುವೆ
ಶಾಂಭವಿ ಸತಿ ಮಾಯಿ | ಅರುಣ ಕಿರಣವುಳ್ಳ ಧರಣಿ ಚಾಮುಂಡಿ ನಿನ್ನ
ಚರಣ ಶೃಂಗಾರವ ಪೇಳುವೆನು- ಇದು ಸ್ತುತಿ.
ಇದು ಬಹು ಗಮ್ಮತ್ತಿನ ಶ್ರೀರಂಗಪಟ್ಟಣದ ಲಾವಣಿ :
ಬೇಷಕ್ ತಮಾಷಾ ಟೈಗರ್ ನಿಶಾನಾ ಟೀಪುಸುಲ್ತಾನನ ಬಿರುದಾಯ್ತು
ಮಸಲತ್ ಮಾಡಿದ ಮೀರ್ಸಾದಕನಿಗೆ ದೇಶದ್ರೋಹಿ ಎಂದ್ಹೆಸರಾಯ್ತು || ಪ ||
ಚಾಲ್
ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ್ ರಣಾಗ್ರಕ್ಹೊರಟನು ರೋಷದಲಿ
ಪರಂಗಿ ಸೋಲ್ಜರ್ ಮಧ್ಯದಿ ತುರಂಗಬಿಟ್ಟನು ತತ್ವದಲಿ |
ಪರಂಪರ ವಿರೋಧಿ ಫೌಜನು ಕುರಿಗಳಂದದಿ ಖಡ್ಗದಲಿ
ಸರಾಸರಿ ಇಲ್ ಬರೆಯಲು ಸಾಗದು ತರಿದನು ಎಷ್ಟೋ ಶಿಬಿರದಲಿ
ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ
ಪರಂಗಿ ಫೌಜಿನ ತರಂಗ ನುಗ್ಗಿತು ಶ್ರೀರಂಗಧಾಮನ ಪಟ್ನದಲಿ.

ಲಾವಣಿಗಳಲ್ಲಿ ಪಲ್ಲವಿ, ಚಾಲ್ ಉಡಾನ್, ಚಿಕ್ಕಉಡಾನ್, ಶ್ಲೋಕಗಳು ಅಡಕವಾಗಿರುತ್ತವೆ. ಆದಿ ಝಂಪ, ಚಾಪು ತಾಳಗಳನ್ನು ಸರಾಗವಾಗಿ ಉಪಯೋಗಿಸಲಾಗುತ್ತದೆ. ಜನಸಾಮಾನ್ಯರಲ್ಲಿ ಬಳಕೆಯಾದ ರಾಗಗಳನ್ನೇ ಇಲ್ಲಿ ಕಾಣಬಹುದು. ಉದಾ: ಯಮನ್, ಪೀಲು ಸಿಂಧುಭೈರವಿ, ಶಂಕರಾಭರಣ, ಮಧ್ಯಮಾವತಿ, ಮೋಹನ, ಇತ್ಯಾದಿ. ಹಾಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು. ಶ್ಲೋಕಕ್ಕೆ ತಾಳವಿಲ್ಲ. ಮಿಕ್ಕ ಚಾಲ್ ಉಡಾನ್ಗಳಿಗೆ ತಾಳದ ಗತಿ ಉಂಟು. ಸರ್ಜಪ್ಪನಾಯಕನ ಲಾವಣಿಯೂ ಪ್ರಸಿದ್ಧವಿದೆ. ಐದುನೂರು ಪಾಳೆಯಗಾರರ ಕುರಿತು ಲಾವಣಿಗಳಿವೆ.

ಕೋಲಾಟದ ಪದ

ಕೋಲು ಹಾಕಲು ಕನಿಷ್ಠ ಆರು ಜನ ಬೇಕು. ಹನ್ನೆರಡಿದ್ದರೆ ದೊಡ್ಡ ಗುಂಪು. ಕಾಲಿಗೆ ಗೆಜ್ಜೆಕಟ್ಟಿಕೊಂಡು, ಭಾಗವಹಿಸುವ ಎಲ್ಲ ಮಂದಿ ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು ಕೋಲಿನ ತಾಳಕ್ಕೆ ಸರಿಯಾಗಿ ಹಾಡುತ್ತ ಕುಣಿಯುತ್ತಾರೆ. ಮೊದಲು ಪ್ರಾರಂಭಕ್ಕೆ, ಮತ್ತೆ ಮುಕ್ತಾಯಕ್ಕೆ ಸರಿಯಾಗಿ ಕಲಿಸಿದವನ ಸಂಕೇತ ಉಂಟು. ಬಗೆಬಗೆಯ ನಡಿಗೆ, ತಿರುಗುವಿಕೆ, ದನಿಯ ಏರು ಇಳಿತ ಮಂದಗತಿ, ತೀವ್ರ ಗತಿಗಳ ವಿನ್ಯಾಸ ಉಂಟು. ಚಿಕ್ಕ ಕೋಲಾಟ, ಜಡೆಕೋಲಾಟಗಳ ಮಾದರಿಗಳು ಬೇರೆ ಬೇರೆ. ಒಬ್ಬ ಸೊಲ್ಲು ಹೇಳಿಕೊಟ್ಟಂತೆ ಮಿಕ್ಕವರು ಹಾಡುವರು. ಸಪ್ತತಾಳಗಳೂ ಜನಪ್ರಿಯವಾದ ನವರಾಗಗಳೂ ಬಳಕೆಯಲ್ಲುಂಟು. ಕೋಲು ರನ್ನದಾ ಕೋಲನ್ನ-ಏಕೋಲು ಕೋಲು ಕೋಲನ್ನ ಅಥವಾ ತಾನು ತಾನಂದನೋ ತಂದನೋ ತಾನಾನು ತಂದನಾನೋ- ಎಂದು ತಾಳದ ಗತಿಗೆ ಹಾಡಿಕೊಳ್ಳುತ್ತಿರುವಂತೆ ಕೋಲಾಟ ಮೊದಲಾಗುತ್ತದೆ. ಉದಾ.-ಮಾತಾಡ್ ಮಾತಾಡ್ ಮಲ್ಲಿಗೆ-ಶಾವಂತಿಗೆ ಇರುವಂತಿಗೆ. ತ್ರಿಪದಿಗಳನ್ನೂ ಕೋಲಿಗೆ ಸರಿಪಡಿಸಿಕೊಳ್ಳುತ್ತಾರೆ.

ಮೂಡಲ್ ಕುಣಿಗಲುಕೆರೆ ನೋಡೋಕ್ ಒಂದೈಭೋಗ
ಮೂಡೀ ಬರ್ತಾನೆ ಚಂದಿರಾಮಾ-ತಾನಂದನೋ
ಮೂಡೀ ಬರ್ತಾನೆ ಚಂದಿರಾಮಾ
ಬಾಳೇಯ ಹಣ್ಣಂತೆ ಬಾಗಿದ್ ಕುಣಿಗಲ್ಕೆರೆ
ಭಾವ ತಂದನೆ ಬಣ್ಣದ್ ಸೀರೆ-ತಾನಂದನೋ
ಭಾವ ತಂದನೆ ಬಣ್ಣದ್ ಸೀರೆ ||

ಬಂಡಿಯ ಪದ

ಗಾಡಿಯನ್ನು ಹೊಡೆಯುತ್ತ ಎತ್ತಿಗೆ ಕಟ್ಟಿದ ಗೆಜ್ಜೆಗಳ ಹಾಗೂ ಬಂಡಿಯ ಚಕ್ರದ ದನಿಯನ್ನು ಮೀರಿ ಎತ್ತರದ ದನಿಯಲ್ಲಿ ಒಬ್ಬನೇ ‘ಬೇಲೂರ ಹೆಣ್ಣೆ ಬೇಗನೆ ರಾಗಿ ಮಾಡೆ | ಕೂರಿಗೆ ನಿಂತಾವೆ ಹೊಲದಾಗೆ ಎಲೆ ಹೆಣ್ಣೆ ಜಾಣ ನಿಂತವ್ನೆ ಬಿಸುಲಾಗೆ’- ಎಂದು ಹಾಡಿ ಕೇಕೆ ಹಾಕಿದಾಗ ಮುಗಿಲು ಮಾರ್ದನಿಸುವುದು. ಬಂಡಿಪದ ಹಾಡಲು, ಹಾಗೇ ಕಪಿಲೆ ನೀರೆತ್ತುವಾಗ ಹಾಡಲು ಎಂಟು ಎದೆ ಬೇಕಾದೀತು. ಬ್ರಹ್ಮಾಂಡಕ್ಕೆ ದನಿಮುಟ್ಟುವಂತೆ ಹಾಡಿ ಕೇಕೆ ಹಾಕುವುದು ಬಂಡಿ ಪದ ಹಾಡುವವರ ಗತ್ತು.

ಕಿನ್ನರಿ ಪದ

ಕಿನ್ನರಿವಾದ್ಯ ಹಿಡಿದು, ಮಧ್ಯಮ ಶೃತಿಯಲ್ಲಿ ತಂತಿಮೀಟುತ್ತ ದನಿಗೂಡಿಸಿ ಬಹಳ ಇಂಪಾಗಿ ಹಾಡುವ ಪದಗಳಿವು.

ಚೆಲುವಯ್ಯ ಚೆಲುವೋ - ತಾನಿತಂದನ್ನಾ | ಚಿನ್ಮಾಯಾರೂಪೇ ಕೋಲೆನ್ನ ಕೋಲೇ
ಬೆಟ್ಟದ ಮ್ಯಾಗಳ ಜಲ್ಲೇಬಿದಿರು - ಬೇಲಿ ಮ್ಯಾಗಳ್ ಸೋರೆ ಬುರುಡೆ
ಲೋಲುಕಿನ್ನುರಿ ನುಡಿಸೋನ್ ಯಾರಯ್ಯ -

ಎಂದು ಹಾಡು ಮೊದಲಾಗುತ್ತದೆ.

ಕಂಸಾಳೆ ಪದ

ಕೈಯಲ್ಲಿ ಕಂಚಿನ ಬಟ್ಟಲು; ಅದಕ್ಕೊಂದು ಮುಚ್ಚಳ ಹಿಡಿದುಕೊಂಡು ತಾಳ ಬಾರಿಸಿಕೊಂಡು ಬೆಟ್ಟದ ಮಾದೇಶ್ವರನ ಮೇಲೆ ಪದಗಳನ್ನು ಹೇಳುವವರು ಉದ್ದಕ್ಕೂ ಸಾಹಿತ್ಯ ಜೋಡಿಸಿಕೊಂಡು ಒಂದೇ ರಾಗದಲ್ಲಿ ಹಾಡುತ್ತಾರೆ. ಕನಿಷ್ಠವೆಂದರೆ ಮೇಳದಲ್ಲಿ ಮೂರು ಮಂದಿ ಗಂಡಸರಿರುವರು. ಒಬ್ಬಾತ ತ್ರಿಶೂಲಕ್ಕೆ ಹೂವಿನ ಅಲಂಕಾರ ಮಾಡಿ ಹಿಡಿದುಕೊಂಡಿರುತ್ತಾನೆ ; ಮತ್ತಿಬ್ಬರು ಹಾಡುತ್ತಾರೆ. ಕೊಡಗರ ಬೊಳ್ಕಾಟ: ಕೊಡಗಿನಲ್ಲಿ ಗಂಡಸರು ಮಂಗಲದ ಸಮಯದಲ್ಲಿ ಹಾಗೂ ಹುತ್ತರಿ ಹಬ್ಬದ ಸಮಯದಲ್ಲಿ ಹತ್ತಾರು ಜನ ಸೇರಿಕೊಂಡು ಕುಣಿಯುವರು ; ಕರಿನಿಲುವಂಗಿ, ಜರತಾರಿ ನಡುಕಟ್ಟು, ತಲೆಗೆ ಬಿಳಿಜರತಾರಿ ರುಮಾಲು, ಸೊಂಟದಲ್ಲಿ ಕತ್ತಿ, ಒಂದು ಕೈಯಲ್ಲಿ ಚವರಿ- ಹೀಗೆ ತಮ್ಮ ಪಂಗಡದ ವಿಶೇಷ ಅಲಂಕಾರಗಳಲ್ಲಿರುವ ಅವರನ್ನು ಆಗ ನೋಡಲು ಸೊಗಸೆನಿಸುತ್ತದೆ. ದುಡಿಯ ದನಿಗೆ ಸರಿಯಾಗಿ ವೃತ್ತಾಕಾರದಲ್ಲಿ ನಿಂತು ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಳುಕಾಡುವರು. ಇದೇ ಇವರ ನೃತ್ಯ. ಕೊಡಗಿನ ಭಾಷೆಯ ಬಾಳೋ ಬಾಳೋ ಎಂಬ ಪಾಟು ಹಾಡುವರು. ದೂರಕ್ಕೆ ಆ ದನಿ ದುಂಬಿ ಗುನುಗುಟ್ಟುವಂತೆ, ಪುಂಗಿ ಬಾರಿಸಿದಂತೆ ಕೇಳುವುದು. ಪುನ್ನಾಗವರಾಳಿ, ನಾದನಾಮಕ್ರಿಯ ಮಿಶ್ರವಾಗಿರುವುದಲ್ಲದೆ ತಾಳಗತಿಯಲ್ಲಿ ತಧಿತ್ತಯ್ಯಾ, ತಧಿತ್ತಯ್ಯಾ, ತಧಿತ್ತಯ್ಯಾ ತಧಿತ್ತಾವ ಎಂಬಂತೆ ಹಾಡು ಮುಂದುವರಿಯುವುದು. ಈ ಕುಣಿತ, ಹಾಡುಗಾರಿಕೆ, ದುಡಿಯ ಬಳಕೆ ಗಂಟೆಗಟ್ಟಲೆ ನಡೆಯುವುದು.

ಬಾಳೋ ಬಾಳೋ ನಂಗಡಾ, ಬಾಳೋ ಬಾಳೋ ಮಾದೇವ
ಪಾಡಿ ನೋಡಿ ಕಂಡಲ್ಲಿ ಪೊರ್ಮಾಲೆ ಕೊಡುದೇಶ
ಆದಿಮೂಲಾ ಲೇ ಲೇ ಲೋ || - ಇದು ಒಂದು ಹಾಡಿನ ಪಲ್ಲವಿ.

ಗೀಗೀಪದ

ಏಕನಾದದ ಶೃತಿಗೆ ಕಥನಕವನವನ್ನೋ ಸಂತರ, ವೀರರ ಕಥೆಯ ಹಾಡನ್ನೋ ಇಬ್ಬರು ಕೂಡಿ ಹಾಡುವರು. ಪ್ರತಿ ಚರಣ ಮುಗಿದೊಡನೆ ಗೀಗೀ ಗೀಗೀ ಎಂದು ತಾಳಕ್ಕೆ ಸರಿಯಾಗಿ ಶೃತಿಗೂಡಿಸುವರು. ತೆಲುಗಿನಲ್ಲಿ ತಂದ ನಾನು ತಂದಾನುತಾನಾ ಎನ್ನುವರು. ಇಡೀ ರಾತ್ರಿ, ಮಲೆನಾಡಿನ ಅಡಕೆತೋಟದ ಪ್ರದೇಶಗಳಲ್ಲಿ ಮನೋರಂಜನೆಯಾಗಿ ಈ ಪದ ಹಾಡುವುದು ವಾಡಿಕೆ. ಮರಾಠಿಯಲ್ಲೂ ಇಂಥ ಪದಗಳಿವೆ.

ಗೊಂದಲ

  • ಮಲೆನಾಡಿನಲ್ಲಿ ಹಾಗೂ ಉತ್ತರ ಕರ್ನಾಟಕದ ಕರೆನಾಡಲ್ಲಿ ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವ ವಾಡಿಕೆಯಿದೆ. ಅಂಬಾ ಭವಾನಿ ಪೂಜೆ ನಡೆದಾಗ ಇಡೀ ರಾತ್ರಿ ಗೊಂದಲ ನಡೆಸುವರು. ಗೊಂದಲದವರ ಪಕ್ಕವಾದ್ಯ ಚೌಡಿಕೆಯಂತಿರುತ್ತದೆ. ತಾಮ್ರದ ಕೊಳಗಕ್ಕೆ ನರದ ತಂತಿ ಕಟ್ಟಿ ಅದನ್ನು ಥೊಯ್ ಥೊಯ್ ಎಂದು ಮೀಟುತ್ತ ದೇವಿಯ ಸ್ತುತಿರೂಪವಾದ ಪದಗಳನ್ನು ಅವರು ಹಾಡುತ್ತಾರೆ.
  • ಗೊಂದಲ ಹಾಕುವವರು ಗಂಡಸರು. ಕಂಬಳಿ ಹೊದ್ದು ಕವಡೆ ಹಾರ ಹಾಕಿಕೊಂಡು, ಮುಖಕ್ಕೆ ಭಂಡಾರ ಕುಂಕುಮ ಹಚ್ಚಿಕೊಂಡು, ತಲೆಗೆ ಕರಡಿ ಚರ್ಮದ ಟೊಪ್ಪಿಗೆ ಹಾಕಿಕೊಂಡು ಸಿದ್ಧರಾಗುವ ಗೊಂದಲದವರ ವೇಷ ವಿಚಿತ್ರವಾಗಿರುತ್ತದೆ. ಗೊಂದಲ ಮರಾಠಿ ಭಜನೆಯನ್ನು ಹೋಲುತ್ತದೆ. ವಾದ್ಯದ ನಾದ, ಪದಗಳ ಗುಂಗು, ತಾಳ, ಕುಣಿತ- ಎಲ್ಲ ಸೇರಿದಾಗ ಹಾಡುವವರಿಗೂ ನೋಡುವವರಿಗೂ ಭಕ್ತಿಯ ಆವೇಶ ಬಂದಂತಾಗುತ್ತದೆ.

ಪಾಡ್ದನ ಮತ್ತು ಓಬೇಲೆ ಪದ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಯಲ್ಲಿ ಭೂತನನ್ನು ಕುರಿತು ಹಾಡುವ ಪದಗಳಿವು. ಸಾವಿನ ಸಮಯದಲ್ಲೂ ಹಾಡುವುದಿದೆ. ಹಾಡುವವರು ಭೂತ ಮೈಮೇಲೆ ಬಂದಂತೆ ಭಯಾನಕವಾಗಿ ಕುಣಿಯುತ್ತ ದನಿ ಗೈಯ್ಯುವರು. ಓಬೇಲೆ ಪದಗಳನ್ನು ನೇಜಿ (ನೆಲ್ಲು) ನೆಡುವಾಗ ಹೆಣ್ಣು ಮಕ್ಕಳು ಹಾಡುವ ವಾಡಿಕೆ. ದೋಣಿ ನಡೆಸುವಾಗಲೂ ಬಂದರಿನಲ್ಲಿ ಸಾಮಾನು ಹೊರುವಾಗಲೂ ಓಬೇಲೆ ಹಾಗೂ ಐಸಾ ಪದಗಳನ್ನು ಸಾಮಾನ್ಯವಾಗಿ ಹಾಡುತ್ತಿರುತ್ತಾರೆ.

ತ್ರಿಪದಿ

ಹಳ್ಳಿಯ ಪದಗಳಲ್ಲಿ ತ್ರಿಪದಿಯ ಸ್ಥಾನ ಮಹತ್ತ್ವದ್ದು. ಹೆಣ್ಣು ಮಕ್ಕಳ ಹಾಡುಗಳಲ್ಲಿ ಬಹುಭಾಗ ಈ ಮಟ್ಟಿನಲ್ಲಿದೆ. ಹಾಲು ಜೇನು ಸುರಿದಂತೆ ಇದರ ಸವಿ. ಮಲ್ಲಿಗೆ ಮೊಗ್ಗು ಅರಳಿದಂತೆ ಇದರ ಪರಿಮಳ. ಮೂರೇ ಪಾದಗಳು ಕಂಡರೂ ಹಾಡುವಾಗ ನಡುವಿನ ಪಾದದ ಪುನರಾವರ್ತನೆಯಿಂದ ತ್ರಿಪದಿಗೆ ನಾಲ್ಕು ಪಾದಗಳಾಗುತ್ತವೆ. ಕುಟ್ಟುವಾಗ, ಬೀಸುವಾಗ, ಜೋಗುಳ ಹಾಡುವಾಗ, ಪೂಜೆ ಮಾಡುವಾಗ, ಜೀವನದ ರಸಸಮಯಗಳಲ್ಲಿ ತ್ರಿಪದಿಯ ಹಾಡುಗಳನ್ನು ಜನ ಬಳಸುತ್ತಾರೆ. ಒಬ್ಬರೋ ಇಬ್ಬರೋ ಹಲವರೋ ಹಾಡುವುದು ಉಂಟು. ರಾಗಗಳು ಒಂದೊಂದು ಕಡೆ ಒಂದೊಂದು ರೀತಿಯವಾಗಿರುತ್ತವೆ. ದಕ್ಷಿಣಾದಿ ಸಂಗೀತದ ಮಧ್ಯಮಾವತಿ, ಕಾಂಭೋಧಿ, ಆನಂದ ಭೈರವಿ, ನಾದನಾಮಕ್ರಿಯೆ, ನವರೋಜು ರಾಗಗಳು ಬಳಕೆಯಲ್ಲಿವೆ. ಆದರೂ ಎಲ್ಲಿಯೂ ಶಾಸ್ತ್ರೀಯ ಸಂಗೀತದ ಛಾಯೆ ಕಾಣದು. ದನಿಯಲ್ಲಿ ಎಳೆತದಲ್ಲಿ ತಾಳಲಯಗಳಲ್ಲಿ ದೇಸಿಯ ಸೊಗಡೇ ಹೆಚ್ಚು. ಇಡೀ ಕನ್ನಡ ನಾಡಿನಲ್ಲೆಲ್ಲ ತ್ರಿಪದಿಯ ಬೆಳೆ ಹುಲುಸಾಗಿ ಹಬ್ಬಿದೆ. ನಾಡು ನುಡಿ ಒಂದೇ ಎಂಬುದಕ್ಕೆ ತ್ರಿಪದಿಯೂ ಒಂದು ಆಧಾರ. ಇದರ ಸಾಹಿತ್ಯ ಮತ್ತು ಸಂಗೀತ ಹಿಂದಿನ ಮತ್ತು ಇಂದಿನ ಉತ್ತಮ ಕವಿಗಳಿಗೆ ಸ್ಫೂರ್ತಿ ಕೊಟ್ಟಿದೆ.

ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ
ಮೊಗ್ಗಾಗಿ ಕಣ್ಣ ತೆರದಾನ- ಲಿಂಗಯ್ಯನ
ನೋಡುತಲೆ ನಿದ್ದಿ ಬಯಲಾದೊ||

ಮುಂಗೋಳಿ ಕೂಗ್ಯಾವು ಮೂಡುಕೆಂಪೇರ್ಯಾವು
ನಾರಾಯಣಸಾಮಿ ರಥವೇರಿ-ಬರುವಾಗ
ನಾವೆದ್ದು ಕೈಯಾ ಮುಗಿದೇವು||

ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪನಿನ ಗುಡಿಗೆ ಬರುವೇನು-ಮಾದಯ್ಯ
ಮುತ್ತಿನ ಬಾಗಿಲ ತೆರದೀರು.||

ಮದುವೆಯ ಹಾಡುಗಳು

ಮದುವೆಯ ಸಂದರ್ಭದಲ್ಲಿನ ಎಣ್ಣೆಯೊತ್ತುವ ಹಾಡು, ಉರುಟಣೆ ಹಾಡು, ಸೋಬಾನೆ ಪದ, ಬೀಗಿತ್ತಿ ಹಾಸ್ಯದ ಪದಗಳು, ಆರತಿ ಪದಗಳು ಹೇರಳವಾಗಿ ಬಳಕೆಯಲ್ಲಿವೆ. ಇವಕ್ಕೆ ಒಂದೊಂದು ಉದಾಹರಣೆ ನೋಡಬಹುದು.

ಎಣ್ಣೆಯೊತ್ತುವ ಪದ

ಎಣ್ಣೆಯನ್ನೊತ್ತಿದರು-ರಘುಕುಲತಿಲಕಗೆ
ದಶರಥ ಸುತನಿಗೆ-ಧರ್ಮ ಪರಿಪಾಲನಿಗೆ
ನಿರ್ಮಲರೂಪ ಶ್ರೀರಾಮಚಂದ್ರನಿಗೆ

ಉರುಟಣೆ ಹಾಡು

ಉರುಟಾಣೆ ಹೇಳೊ ಹರಿಯೆ ಉರಗಶಯನದೊರೆಯೆ
ನಂದಗೋಪಿ ಕುಮಾರ, ನತ ಜಗದುದ್ಧಾರ
ನಂದನಂದನ ಸಿಂಧುಶಯನ ನೀಬಾರೊ
ಬಂದಿರುವೆನು ಮಂಟಪದೊಳು-ಮರದಿಂದಲಿ

ಸೋಬಾನೆ ಪದ

ಬಾಳೆಯಾ ಮರದ ಕೆಳಗೆ ಬಾವನ ಮಗಳು ಮೈನೆರೆದಳು
ನಿಂಬಿಯ ಮರದ ಕೆಳಗೆ ರಂಭೆ ಮೈನೆರೆದಳು
ಸೋಬಾನವೇ ಸೋಬಾನವೇ.

ತಿಂಗಳುಮಾವನ ಪದ

ಹುಣ್ಣಿಮೆ ಹಬ್ಬದ ರಾತ್ರಿ ಬೆಳುದಿಂಗಳ ಆನಂದದಲ್ಲಿ ಕೂಡಿಕೊಂಡು ಹೆಣ್ಣುಮಕ್ಕಳು ಕೈ ಕೈ ಹಿಡಿದುಕೊಂಡು ಗರಗರನೆ ಸುತ್ತು ತಿರುಗುತ್ತ ಈ ಪದಗಳನ್ನು ಹಾಡುವರು.

ತಿಂಗಳು ತಿಂಗಳಿಗೆ ತಿಂಗಳು ಮಾವನ ಪೂಜೆ
ಗರುಡನ ಪೂಜೆ ಗನಪೂಜೆ-ಕೋಲು ಮಲ್ಲಿಗೆ ಕೋಲೆ
ತಿಂಗಳು ಮಾವನಿಗೆ ನಿನ ಪೂಜೆ ಗಂಗೆ ದಡದಾಗೆ
ತಿಂಗಳು ಮಾವನ ತಂಗೇರೇಳು ಮಂದಿ
ಬಂಗಾರದೋಲೆ ಬಳೆಯೋರು-ಕೋಲು ಮಲ್ಲಿಗೆ ಕೋಲೆ
ಹೊಂದೇರ್ ಹಕ್ಕಿ ಬಂದಾವಕ್ಕ ಗರಗರನಾಡಿ ನಿಂದಾವಕ್ಕ
ಕಾಮಾನೂರಾ ಹೊಳೆಯಿಂದಾ ಕುಂತು ನಿಂತು ಬರುತ್ತಿದ್ದ
ಕಾಮನ್ ಯಾರೇ ತಡೆದೋರು
ಭೀಮನ್ ಯಾರೇ ತಡೆದೋರು
ಬಾರಯ್ಯ ಬೆಳುದಿಂಗಳೇ ನಮ್ಮೂರ ಹಾಲಿನಂಥ ಬೆಳುದಿಂಗಳೇ.

ಮಾನವಮಿ ಪದ

ನವರಾತ್ರಿ ನಾಡಹಬ್ಬದಲ್ಲಿ ಮಕ್ಕಳು ಹರಕೆ ಪದ ಹಾಡುವ ಸಂಪ್ರದಾಯ ಹಿಂದಿನಿಂದ ಬಂದಿದೆ. ಚೌಪದಿಯಲ್ಲಿ ನಾಲ್ಕು ಸಾಲು ಬರುತ್ತದೆ.

ಆಶ್ವೀಜ ಶುದ್ಧ ಮಾನವಮಿ ಬರಲೆಂದು
ಲೇಸಾಗಿ ಹರಿಸಿದೆವು ಬಾಲಕರು ಬಂದು
ಈಶ ನಿಮಗಧಿಕ ಸೌಖ್ಯ ಕೊಡಲೆಂದು
ಶಾಶ್ವತದಿ ಹರಸಿದೆವು ನಾವಿಂದು ಬಂದು.
ಮಳೆ ಹೊಯ್ದು ಬೆಳೆಬೆಳೆದು ಇಳೆ ತಣಿಯಲೆಂದು
ತಿಳಿಗೊಳಗಳುಕ್ಕಿ ಗೋಗಳು ಕರೆಯಲೆಂದು
ನಳಿನಮುಖಿಯರು ಸುಪುತ್ರರ ಪಡೆಯಲೆಂದು
ಇಳೆಯೊಳಗೆ ಹರಿಸಿದೆವು ಬಾಲಕರು ಬಂದು

ಅಂತೂ ಲಾವಣಿ, ತ್ರಿಪದಿಗಳು ಹಳ್ಳಿಯ ಹಾಡಿನಲ್ಲಿ ಮಹತ್ತ್ವದ ಸ್ಥಾನ ಪಡೆದಿವೆ. ಹೀಗೆಯೆ ಸಾಂಗತ್ಯ ಮತ್ತು ರಗಳೆಗಳಿಗೂ ಜನಪದ ಸಂಗೀತವೇ ಮೂಲವಾಗಿದ್ದಿರಬಹುದು. ಅಲ್ಲದೆ ಶ್ರಮಜೀವಿಗಳ ಹಾಡುಗಳು, ಹಂತಿ ಪದ, ಡೊಳ್ಳು ಪದ, ಮದುವೆ ಹಾಡು, ಜುಂಜಪ್ಪನ ಪದ, ಸುವ್ವಿ ಪದ, ಲಾಲಿ ಪದ, ಉತ್ತರೆ ಮಳೆ ಹಾಡು, ಕೊರವಂಜಿ ಹಾಡು, ಕಣಿ ಹೇಳೋ ಹಾಡು, ಹಚ್ಚೆ ಕಟ್ಟಿಸಿಕೊಳ್ಳುವ ಹಾಡು- ಈ ಮೊದಲಾದವೂ ಇವೆ. ಜಾತ್ರೆ ಮತ್ತು ಪರಿಷೆಯ ಮಹಾಮೇಳಗಳಲ್ಲಿ ಕೊಂಬು, ಕಹಳೆ, ಉರುಮೆ, ಡೊಳ್ಳು, ಮದ್ದಲೆ, ಕರಡೆ ವಾದ್ಯಗಳ ಸೊಲ್ಲು ಮುಗಿಲು ಮುಟ್ಟುತ್ತದೆ. ಅವಕ್ಕೆ ಅನುಸರಿಸಿ ಜನ ಹಾಡುತ್ತಾರೆ, ಕುಣಿಯುತ್ತಾರೆ ; ನಂದಿಕೋಲು ಕುಣಿಸುತ್ತಾರೆ; ಮನಬಂದಂತೆ ಪದ ಹಾಡುತ್ತಾರೆ ; ಜಯಕಾರ ಮೊಳಗಿಸುತ್ತಾರೆ.

ಕಥನಗೀತಗಳು

ನಾಡಿನ ವೀರಾಗ್ರಣಿಗಳ ಹಾಗೂ ವೀರಮಾತೆಯರ ಮಹಾತ್ಯಾಗಜೀವಿಗಳ ಚರಿತೆಯನ್ನು ಸುಲಭವಾಗಿ ಹಾಡುವಂತೆ ರಚನೆ ಮಾಡಿದ್ದಾರೆ. ಅದರಲ್ಲಿ ಕೆರೆಗೆ ಹಾರ ಎಂಬ ನೀಳ್ಗವನದಲ್ಲಿ ಕರುಣರಸ ಮಡುಗಟ್ಟಿ ನಿಂತಿದೆ. ಒಂದು ಹಳ್ಳಿಯ ಮಲ್ಲನಗೌಡರು ಕೆರೆ ಕಟ್ಟಿಸಿದಾಗ ನೀರು ನಿಲ್ಲಲಿಲ್ಲ. ಬಲಿ ಕೊಡಬೇಕೆಂದು ಜೋಯಿಸರು ಸಲಹೆ ಕೊಟ್ಟರು. ಕಿರಿಯ ಸೊಸೆ ಭಾಗೀರಥಿ ಮುಂದೆ ಬಂದು ಕೆರೆಗೆ ಆಹಾರವಾಗುತ್ತಾಳೆ. ಗಂಗೆ ಒಡಮೂಡುತ್ತಾಳೆ. ಅಂಥ ಹೆಂಡತಿಯನ್ನು ಕಳೆದುಕೊಂಡ ಗಂಡನೂ ಪ್ರಾಣಾರ್ಪಣೆ ಮಾಡುತ್ತಾನೆ.

ಸಾವಿರ ಕೊಟ್ಟರೂ ಸಿಗಲಾರದ ಸತಿ ನೀನು
ಬಿಟ್ಟನು ಕಣ್ಣೀರ, ಹಾರಿದ ಕೆರೆ ನೀರಿನಾಗ.

ಈ ಪದ ಖಂಡಜಾತಿ ಚಾಪು ತಾಳದಲ್ಲಿದೆ. ಏಕನಾದದ ಜೊತೆಯಲ್ಲಿ ಹಾಡಿದರೆ ಬಹು ಸ್ವಾರಸ್ಯವಾಗಿರುತ್ತದೆ. ಕೆರೆಗೆ ಹಾರದಂತೆಯೇ ಗೋವಿನ ಕಥೆ ಮತ್ತೊಂದು ಅಮರವಾದ ಪದ-

ಧರಣಿ ಮಂಡಲ ಮಧ್ಯದೊಳಗೆ, ಮೆರೆಯುತಿಹ ಕರ್ನಾಟದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು
ಕೊಟ್ಟ ಭಾಷೆಗೆ ತಪ್ಪಲಾರೆನು | ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ | ಕಟ್ಟಕಡೆಗಿದು ಖಂಡಿತ
ಸತ್ಯವೆಂಬುದು ತಾಯಿ ತಂದೆ, ಸತ್ಯವೆಂಬುದು ಬಂಧುಬಳಗವು
ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು.
ಪುಣ್ಯಕೋಟಿ ಎಂಬ ಗೋವು ಹುಲಿರಾಯನಿಗೆ ಭಾಷೆ ಕೊಟ್ಟು, ಅದರಂತೆ ನಡೆದು ಹುಲಿರಾಯನನ್ನು ಸೋಲಿಸಿದ ಕಥೆಯಿದು.

ದಾಸರಪದ ಮತ್ತು ವಚನಗಳೂ ಜನಪ್ರಿಯವಾಗಿ ನಾಡಿನಲ್ಲೆಲ್ಲ ಹಬ್ಬಿವೆ ; ವೇದ, ಪುರಾಣಗಳ ತಿರುಳನ್ನು ತಿಳಿಗನ್ನಡದಲ್ಲಿವು ಸಾರಿವೆ. ಹಾಡಿಕೊಳ್ಳಲು ಯೋಗ್ಯವಾಗಿವೆ. ಇವುಗಳ ಹಾಡುಗಾರಿಕೆಯೇ ಒಂದು ಬಗೆಯ ಸಂಪ್ರದಾಯವಾಗಿದೆ. ರಾಗ, ಭಾವ, ಲಯ ಪ್ರಧಾನವಾದ ಇವಕ್ಕೆ ಸಂಗೀತದಲ್ಲೂ ಸಾಹಿತ್ಯದಲ್ಲೂ ಹಿರಿಯ ಸ್ಥಾನವೇರ್ಪಟ್ಟಿದೆ.

ಆವ ಕುಲವಾದರೇನು ಆವನಾದರೇನು
ಆತ್ಮಭಾವ ಅರಿತಮೇಲೆ ಮನುಜಾ|

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕ್ಕೆ ಸಂಶಯ ಬೇಡ|

ದಯವಿಲ್ಲದ ಧರ್ಮ ಆವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯ||

ಯಕ್ಷಗಾನ

  • ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಒಂದು ಪ್ರದರ್ಶನ ಕಲೆಯಿದು. ರಾಮಾಯಣ, ಭಾರತ, ಭಾಗವತ, ಪುರಾಣಗಳಿಂದ ಆರಿಸಿದ ಸಂದರ್ಭಗಳನ್ನು ಪ್ರಸಂಗಗಳಿಗೆ ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಸಂಗೀತ, ನೃತ್ಯಗಳೇ ಹೆಚ್ಚು. ಮಾತುಗಾರಿಕೆಯೂ ಉಂಟು. ಸಂಗೀತ, ಕುಣಿತ, ವಚನಗಳು-ಪ್ರಸಂಗದ ಮೂರು ಮುಖ್ಯ ಅಂಶಗಳು. ದಕ್ಷಿಣಾದಿ ಸಂಗೀತಶಾಸ್ತ್ರ ಸಂಪ್ರದಾಯದ ಘನರಾಗಗಳನ್ನೇ ಹೆಚ್ಚಾಗಿ ಬಳಸುವರು.
  • ನಾಟಿ, ಮೋಹನ, ಆನಂದಭೈರವಿ, ಶಂಕರಾಭರಣ, ಬೇಹಾಗ್, ಬೇಗಡೆ, ಕಾನಡ, ಸುರಟಿ, ಕೇದಾರಗೌಳ, ಸಿಂಧುಭೈರವಿ, ನಾದನಾಮ ಕ್ರಿಯ, ಮುಖಾರಿ ಮೊದಲಾದ ರಾಗಗಳು ಬಳಕೆಯಲ್ಲಿವೆ. ಬೇರೆ ಬೇರೆ ಪ್ರದೇಶಗಳಲ್ಲಿ ಶೈಲಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಪ್ರಸಂಗದಲ್ಲಿ ಭಾಗವತರು ಬಹಳ ಮುಖ್ಯ. ಅವರೇ ಪ್ರಸಂಗವನ್ನು ನಡೆಸಿಕೊಡುವ ಸೂತ್ರಧಾರರು.
  • ನಾಂದಿ ಹಾಡುಗಳು, ಭರತವಾಕ್ಯ- ಎಲ್ಲ ಅವರವೇ. ಜಾಗಟೆ ಬಡಿದು ಅವರು ಹಾಡಿನ ಗತಿ ತೋರಿಸುತ್ತಾರೆ. ಮದ್ದಲೆಯವನು ಮದ್ದಲೆ ಬಾರಿಸುತ್ತಾನೆ. ಹಿಂದೆ ಶೃತಿಗೆ ಚಿಟ್ಮೇಳ, ಪುಂಗಿಗಳನ್ನು ಉಪಯೋಗಿಸುತ್ತಿದ್ದರು. ಈಗ ಹಾರ್ಮೋನಿಯಂ ಪೆಟ್ಟಿಗೆ ಇಟ್ಟುಕೊಳ್ಳುತ್ತಾರೆ. ಇಡೀ ರಾತ್ರಿ ಯಕ್ಷಗಾನ ಪ್ರಸಂಗ ನಡೆಯುತ್ತದೆ. ಅರುಣೋದಯಕ್ಕೆ ಸರಿಯಾಗಿ ಮಂಗಳ ಹಾಡುತ್ತಾರೆ. ಯಕ್ಷಗಾನ ಕಲೆಗೊಂದು ಶಾಸ್ತ್ರೀಯ ಬುನಾದಿ ಉಂಟು.
  • ಹತ್ತಾರು ವರ್ಷ ಅದನ್ನು ಅಭ್ಯಾಸ ಮಾಡುವವರಿದ್ದಾರೆ. ಕಲೆಗಳಲ್ಲೆಲ್ಲ ಇದು ಬಹು ತೂಕವಾದುದೆಂಬುದು ನಿರ್ವಿವಾದವಾದ ಅಂಶ.

ಯಕ್ಷಗಾನದ ಒಂದು ರೂಪವಾದ ತಾಳ ಮದ್ದಲೆಯಲ್ಲಿ ಪಾತ್ರಧಾರಿಗಳು ರಂಗಮಂಟಪದಲ್ಲಿ ಕುಳಿತು ವೇಷಭೂಷಣ ಮತ್ತು ನೃತ್ಯಗಳಲ್ಲದೆ ಪ್ರಸಂಗವನ್ನು ಮಾತ್ರ ನಡೆಸಿಕೊಡುವರು. ಭಾಗವತರು, ಹಿಮ್ಮೇಳದವರು ಬಯಲಾಟದಲ್ಲಿನಂತೆ ಇರುವರು ; ಅರ್ಥಧಾರಿಗಳು ಸಮಯಸ್ಫೂರ್ತಿಯಿಂದ ಮಾತಾಡುವರು. ಅನೇಕ ಕಡೆ ಪಾತ್ರಧಾರಿಗಳ ಬುದ್ಧಿವಂತಿಕೆ ಎದ್ದು ಕಾಣುವುದು. ವಾಕ್ಚಾತುರ್ಯ, ಆಶುಭಾಷಣಗಳೂ ಉಂಟು. ಹಲವೇಳೆ ವಾಗ್ಯುದ್ಧಗಳಾಗುತ್ತವೆ. ಈ ಕಲೆ ಸಾವಿರ ವರ್ಷದಿಂದಲೂ ಬೆಳೆದುಬಂದಿದೆ.

ಹಾಸ್ಯದ ಪದ

ಅಸಂಬದ್ಧ ಪ್ರಲಾಪವಾದಾಗ ನಗು ಸಹಜ. ಹೀಗೆ ನಗು ಉಕ್ಕಿಸುವ ಹಾಡುಗಳಿಗೆ ಜನಪದ ಸಾಹಿತ್ಯದಲ್ಲಿ ಕೊರತೆಯೇನಿಲ್ಲ.

ಸುಳ್ಳೂ ನಮ್ಮಲಿಲ್ಲ ಸುಳ್ಳೇ ನಮ್ಮನಿ ದೇವರು
ಗೊದ್ದ ಗೋಡೆ ಹಾಕಿದ್ ಕಂಡೆ ; ಬೆಕ್ಕು ರೊಟ್ಟಿ ತಟ್ಟಿದ್ ಕಂಡೆ ;
ಮೆಣಸಿಕಾಯಿ ಕಂಡೆ ನಕ್ಕ ಮನಸ್ ತೋರಾವಾ
ಕೋಳಿ ಕೋಟೆ ಗೆದ್ದದ್ ಕಂಡೆ ; ಹಕ್ಕಿ ಕಂಬ್ಳಿ ನೇಯೋದ್ ಕಂಡೆ ;
ಅವರೆ ಕಂಡೇನಕ್ಕ ಆನೇಗಾತ್ರವಾ ;
ಮತ್ತೆ ಪಾರಿವಾಣ ಕೋರಿ ಹುಳು ಚಿಕ್ಕಾಟನ ಮೇಲ್
ಸಬರ್ಹಾಕಿ ಮಲೆನಾಡು ಮಲದೇಶ ತಿರುಗಿ ತಾನು ತಂದು ಕೊಟ್ಟಿತು ಸಣ್ಣಕ್ಕಿ
ಹಾಳಿಹದ್ದು ಬಂದು ಹೋಳಿಗಿ ಮಾಡಿತು ಬಹಳ ಬಹಳ ಹೂರಣಹಾಕಿ
ಮೀನು ಬಂದು ಖರುಬಾನ ಬಸ್ತಿತು. ನೊಣ ಬಂದು ಅರಸಿಣ ಹಚ್ಚಿತು.
ಬೆಕ್ಕು ಬಾಸಿಂಗ ಕಟ್ಟಿತು; ಕಟ್ಟಿರುವೆ ಕಂಕಣ ಕಟ್ಟಿತು.
ಇರುವೆ ಬಂದು ನೀರ ಬಡಿಸಿತು; ಇಲಿ ಬಂದು ಎಲೆ ಅಡಿಕೆ ಕೊಟ್ಟಿತು.
ಮತ್ತೊಂದು ಪದದಲ್ಲಿ ಕಿವುಡನ ಕೂಡೆ ಸರಸದ ಒಂದು ಪ್ರಸಂಗ ಬರುತ್ತದೆ :
ಚಪ್ಪರದೊಳಗೊಬ್ಬ ಕೆಪ್ಪನ ನೋಡಿ ತಪ್ಪದೆ ಮಾತಾಡಿದ ದನಿಗೂಡಿ
ನಾಮಾಂಕಿತವೇನಯ್ಯ, ನಿಮಗೆ ? ಸೋಮವಾರ ಒಪ್ಪತ್ತಯ್ಯ ನಮಗೆ.
ಅವಧಾನಂಗಳಿಗಾವೂರಾಯ್ತು ? ದವಸವು ನಮ್ಮಲಿ ಬಹು ಬೆಲೆಯಾಯ್ತು.
ಹೆಂಡರುಮಕ್ಕಳು ಎಲ್ಲಿದ್ದಾರೆ ? ಪಂಡಿತರಾಸ್ತಿಗೆ ಕ್ರಯಗಳೆ ಬೇರೆ.
ಎಣ್ಣೂರಿಗೆ ತರಿಸಲೆ ನಿಮಗೆ ? ಕನ್ನಿಕೆ ನೆರೆದೊ ಚಿನ್ನದ ಹಾಗೆ.
ಚೆನ್ನಾಗಿದೆಯ ಹುಣಸೆ ಸಾರು ? ಚನ್ನಯ್ಯನ ಅಂಗಡೀಲ್ ಕಡಿಮೆ ಸೇರು.
ಬಾಳೆಹಣ್ಣಿನ ಸೀಕರಣೆ ಬೇಕೆ ? ಸೂಳೇರಾಟ ಇನ್ಯಾತಕೆ ನಮಗೆ ?
ಕೆಪ್ಪರ ಕೂಟ ಮಾತೇ ಹೀಗೆ !

ಮಕ್ಕಳ ಹಾಡು

ಶಿಶುಸಾಹಿತ್ಯದ ರಚನೆ ಬಹಳ ಕಷ್ಟ. ಹಾಡೂ ಅಷ್ಟೆ. ಸಣ್ಣದಾಗಿರಬೇಕು. ಕಂಠಪಾಠ ಮಾಡುವಂತಿರಬೇಕು, ಮಹಾಪ್ರಾಣಾಕ್ಷರಗಳು, ಒತ್ತಕ್ಷರಗಳು ಹೆಚ್ಚಿಗಿರಬಾರದು. ಅವರು ಆನಂದಪಟ್ಟು ಕುಣಿಯುತ್ತ ಹಾಡುವಂತಿರಬೇಕು. ಇದರಲ್ಲೂ ಹಳ್ಳಿಯವರು ಹಿಂದೆ ಬಿದ್ದಿಲ್ಲ.

ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣದಿಂದಲೆ ಕಾಯೊ ಗಣನಾಯ್ಕ ;
ಎಳ್ಳುಂಡೆ ಜೇನುತುಪ್ಪ ಗಣನಾಯ್ಕ
ನಮ್ಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ

ಎಂಬ ಗಣಪತಿಯ ಕೋಲಾಟದ ಪದವನ್ನು ಯಾವ ಮಗುತಾನೆ ಹಾಡಲು ಒಲ್ಲೆ ಅನ್ನುತ್ತದೆ !

ಆಂಗ್ಲರ ಶಿಶು ಪ್ರಾಸ

ಈ ಪ್ರಾಸಕ್ಕೆ (ನರ್ಸರಿ ರೈಮ್) ಸಮನಾದ ಮತ್ತೊಂದು ಪದ : ಇದು ಕುಟ್ಟುವಾಗ ಹೇಳುವ ಹಾಡಾದರೂ ಶಿಶುಗಳಿಗೆ ಪ್ರಿಯವಾಗಿದೆ.

ಎಂದೂ ಬಾರದ ಮಳೆ ಬಂದಿತಣ್ಣ.
ಮಳೆ ಬಂದಿದ್ದ ಕಂಡು ಚಿಗುರೊಡೆದಿದ್ದಿತಣ್ಣ.
ಚಿಗುರೊಡೆದಿದ್ದ ಕಂಡು ಬೀರಪ್ಪ ಕುರಿಗಳ ಬಿಟ್ಟನಣ್ಣ.
ಬೀರಪ್ಪ ಕುರಿಗಳ ಬಿಟ್ಟಿದ್ದ ಕಂಡು ಮಾಳವ್ವ ಹಿಟ್ಟಿನ್ ಮುದ್ದೆ ಹೊತ್ತಳಣ್ಣ ;
ಮಾಳವ್ವ ಹಿಟ್ಟಿನ್ ಮುದ್ದೆ ಹೊತ್ತಿದ್ದ ಕಂಡು ಬೀರಪ್ಪ ಉಣ್ಣಲಿಕೆ ಕುಂತನಣ್ಣ ;
ಬೀರಪ್ಪ ಉಣ್ಣಲಿಕೆ ಕುಂತಿದ್ದ ಕಂಡು ತೋಳಪ್ಪ ಕುರಿಗಳ ಕದ್ದನಣ್ಣ.
ತೋಳಪ್ಪ ಕುರಿಗಳ ಕದ್ದಿದ್ದ ಕಂಡು ಬೀರಪ್ಪ ದೊಣ್ಣೆ ತೆಕ್ಕೊಂಡು ಹೊಂಟನಣ್ಣ ;
ಬೀರಪ್ಪ ದೊಣ್ಣೆ ತಕೊಂಡು ಹೊಂಟಿದ್ದ ಕಂಡು ನಾಯಪ್ಪ ಹಿಟ್ಟಿನ್ ಮುದ್ದೆ ತಿಂದನಣ್ಣ ;
ನಾಯಪ್ಪ ಹಿಟ್ಟಿನ್ ಮುದ್ದೆ ತಿಂದಿದ್ದ ಕಂಡು ಬೀರಪ್ಪ ಬಿಕ್ಕಿ ಬಿಕ್ಕಿ ಅತ್ತನಣ್ಣ ;
ಬೀರಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದ ಕಂಡು ಮಾಳವ್ವ ಕಿಸಿಕಿಸಿ ನಕ್ಕಳಣ್ಣ !

ಮತ್ತೊಂದು ನವಿಲಿನ ಹಾಡು ; ಕೂಲಿಗಾರರು ಭಾರ ಎತ್ತುವಾಗ ಇದನ್ನು ಹಾಡುತ್ತಾರೆ, ಮಕ್ಕಳಿಗೆ ಚೆನ್ನಾಗಿದೆ.

ನವ್ವಾಲೆ ಬಂದಿತ್ತು ನವ್ವಾಲೆ ಸೋಗೇರಿ ಬಣ್ಣದ ನವ್ವಾಲೆ
ಬರಗನೆ ಮೇಯದು ನವ್ವಾಲೆ ಬರಗದ್ಹೂವನೆ ಮೇಯದು ನವ್ವಾಲೆ ||
ಬರಗದ ಒಡಿಕಾಡು ಬೆನ್ಹತ್ತಿ ಬರುವಾಗ ಬರಬರನೆ ಓಡಿತು ನವ್ವಾಲೆ
ರಾಗೀಯ ಮೇಯೊದು ನವ್ವಾಲೆ ರಾಗಿ ಹೂವನೆ ಮೇಯೋದು ನವ್ವಾಲೆ
ರಾಗೀಯ ಒಡಿಕಾಡು ಬೆನ್ಹತ್ತಿಬರುವಾಗ ರಾಗವ ಪಾಡಿತು ನವ್ವಾಲೆ
ಬತ್ತವ ಮೇಯದು ನವ್ವಾಲೆ ಬತ್ತದ್ಹೂವನೆ ಮೇಯದು ನವ್ವಾಲೆ
ಬತ್ತವ ಒಡಿಕಾಡು ಬೆನ್ಹತ್ತಿ ಬರುವಾಗ ರೆಕ್ಕೆಯನುದುರಿಸಿತು ನವ್ವಾಲೆ.

ಇನ್ನೂ ಒಂದು ಸೊಗಸಾದ ಹಾಡು- ಮಲ್ಲಿಗೆ ಹಾಡು.

ಮಲ್ಲೀಗೆ ಮಲ್ಲಿಗೆ ಬಾಡದಿರುವ ಮಲ್ಲಿಗೆ
ಬಾಡಿದರ ಶಿವನಾ ಪಾದದಾಣೆ ಮಲ್ಲಿಗೆ
ದುಂಡು ದುಂಡು ಮಲ್ಲಿಗೆ ಕೋಲು ಕೋಲುಮಲ್ಲಿಗೆ
ಏಳುಸುತ್ತಿನ್ ಮಲ್ಲಿಗೆ | ಕಾಕಡಾ ಮಲ್ಲಿಗೆ |
ಬಾಲೇರ್ ಮುಡಿಯಾ ಮಲ್ಲಿಗೆ | ಗರತೇರ್ ಮುಡಿಯಾ ಮಲ್ಲಿಗೆ |
ಮಿತ್ರೇರ್ ಮುಡಿಯಾ ಮಲ್ಲಿಗೆ | ರಂಭೇರ್ ಮುಡಿಯಾ ಮಲ್ಲಿಗೆ |
ಬಂಗಾರದ ಮಲ್ಲಿಗೆ | ಸಿಂಗಾರದ ಮಲ್ಲಿಗೆ
ಮೈಸೂರು ಮಲ್ಲಿಗೆ | ಕರುನಾಡ ಮಲ್ಲಿಗೆ ||

ಹಳ್ಳಿಯ ಪದಗಳು

ಸಂಗೀತ, ನೃತ್ಯಗಳ ಜೊತೆಗೆ ಉತ್ತಮ ಸಾಹಿತ್ಯ ಜನಪದ ಸಂಗೀತದಲ್ಲಿ ಹುಲುಸಾಗಿ ಮೂಡಿದೆ. ಮಾಣಿಕ್ಯದಂಥ ಮಾತುಗಳು ನೂರಾರು ಹಳ್ಳಿಯ ಪದಗಳಲ್ಲಿ ಸಿಗುತ್ತವೆ :

ಮಲ್ಲಯ್ಯ ನೀನಡಸು ಸರುವೆಲ್ಲ ;
ಬಂಗಾರದ ಬಿಸಿಲು ಒಡೆದಾದ ;

ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾದಿ ;
ಹಡದವ್ವ ನೀ ಕೊಟ್ಟ ಮನೆಗೆ ಹೆಸರಾದೆ;

ಹಡದವ್ವ ನೀ ಇದ್ದರೆ ನಮಗೆ ಸರಿರಾಜ್ಯ ;
ಅಡವ್ಯಾಗ ವಸತಿ ಇಳಿದಾಂಗ ;

ಜೋಡಕಿನ್ನರಿ ನುಡಿದಾಂಗ;
ಗಂಜೀಯ ಕುಡಿದರು ಗಂಡನ ಮನೆ ಲೇಸು ;

ಅಣ್ಣಯ್ಯನ ಕುಣಸ್ಯಾಡುತಾಳ ಅತ್ತೀಗಿ;
ನಮ್ಮಣ್ಣ ಬಂದರೆ ನಿಚ್ಚ ದೀವಳಿಗಿ ಮನಿಯಾಗ ;

ಕುಲವೆರಡು ನಮ್ಮ ಮನವೊಂದು ;
ಗುಣಕ ಕಟ್ಟೀನಿ ಗೆಳೆತನ ;

ಆಕಿ ಮಾತು ಬೆಣ್ಯಾಗ ಮುಳ್ಳು ಮುರಿದ್ಹಾಂಗ.
ಗಂಡಹೆಂಡಿರ ಜಗಳ ಗಂಧ ತೀಡೀಧಾಂಗ.
ಮಡದೀನ ಬಡಿದಾನ ಮನದಾಗ ಮರುಗ್ಯಾನ ;
ಸೆರಗ ಹಿಡಿಯೂತ ಕೇಳ್ಯಾನ -
ನಾ ಹೆಚ್ಚೊ ನಿನ್ನ ತವರ್ಹೆಚ್ಚೊ.

ಎಲ್ಲಾ ರೂಪವು ತಾನಂತೆ ಎಲ್ಲೆಲ್ಲಿಯೂ ತಾನಿಹನಂತೆ-

ಎಂಬ ನಾಡಪದದಂತೆ ಹಳ್ಳಿಹಾಡು ಹುಲ್ಲು ಬೆಳೆಯಂತೆ ಇಡೀ ನಾಡಿನಲ್ಲಿ ಸಹಜವಾಗಿ ಬೆಳೆದು ಅಲ್ಲಿನ ಭೂಮಿಯನ್ನೆಲ್ಲ ಆಕ್ರಮಿಸಿದೆ. ಹಳ್ಳಿಹಳ್ಳಿಯಲ್ಲೂ ವಿಧವಿಧವಾದ ಪದಗಳು ಸಿಗುತ್ತವೆ. ಅವನ್ನು ಶೇಖರಿಸಿ ಅಚ್ಚು ಮಾಡಿಸುವ ಕೆಲಸ ಮೊದಲು ಆಗಬೇಕು. ಅಷ್ಟೇ ಸಾಲದು. ಹಾಗೆ ಮುದ್ರಿಸಿದಾಗಲೂ ಅವನ್ನು ಹಾಡುವ ಕ್ರಮ ಎಲ್ಲರಿಗೂ ಗೊತ್ತಾಗದು. ಹಳ್ಳಿಗರ ಹಾಡಿನ ಗತ್ತುಗಳನ್ನು ಧ್ವನಿಮುದ್ರಣ ಮಾಡಬೇಕು. ಹಾಗೆ ಮಾಡಿದಲ್ಲಿ ಗಾಯಕರು ಮನಸ್ವಿ ಹಾಡಿ ಅವುಗಳ ರೀತಿ ನೀತಿಗಳನ್ನು ಕೆಡಿಸುವ ಸಂಭವವಿದೆ. ಈಚೆಗೆ ಅಲ್ಲಲ್ಲಿ ಈ ಕೆಲಸವೂ ನಡೆಯುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದವರು ಆಸ್ಥೆಯಿಂದ ಧ್ವನಿಮುದ್ರಣದ ಕಾರ್ಯವನ್ನು ಕೈಗೊಂಡಿದ್ದಾರೆ. ಬೆಂಗಳೂರಿನ ಆಕಾಶವಾಣಿಯವರೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯವರೂ ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಶಿವರಾಮ ಕಾರಂತರು ಯಕ್ಷಗಾನದ ಸಂಗೀತದ ಒಳಹೊರಗನ್ನು ಶಾಸ್ತ್ರೀಯವಾಗಿ ವಿಮರ್ಶಿಸಿದ್ದಾರೆ. ಒಟ್ಟಿನಲ್ಲಿ ಜಾನಪದದ ಬಹು ಮುಖ್ಯ ಅಂಗವಾದ ಜನಪದ ಸಂಗೀತ ಈಚೆಗೆ ನಾಡಿನ ಹಿರಿಯರ, ವಿದ್ವಾಂಸರ ಗಮನ ಸೆಳೆದ ವಿಷಯವಾಗಿದೆ.(ಆರ್.ಬಿ.ಎಸ್.)

ನೋಡಿ

ಉಲ್ಲೇಖ

Tags:

ಕರ್ನಾಟಕ ಜನಪದ ನೃತ್ಯ ಪ್ರಮುಖ ಜನಪದ ನೃತ್ಯಗಳುಕರ್ನಾಟಕ ಜನಪದ ನೃತ್ಯ ಕೊಡಗಿನ ಜನಪದ ನೃತ್ಯಗಳುಕರ್ನಾಟಕ ಜನಪದ ನೃತ್ಯ ತುಳುನಾಡಿನ ಜನಪದ ನೃತ್ಯಗಳುಕರ್ನಾಟಕ ಜನಪದ ನೃತ್ಯ ಯಕ್ಷಗಾನ ಬಯಲಾಟಕರ್ನಾಟಕ ಜನಪದ ನೃತ್ಯ ಗೊಂಬೆ ಕುಣಿತಗಳುಕರ್ನಾಟಕ ಜನಪದ ನೃತ್ಯ ಜನಪದ ನೃತ್ಯ ಗೀತೆಗಳುಕರ್ನಾಟಕ ಜನಪದ ನೃತ್ಯ ಲಾವಣಿಕರ್ನಾಟಕ ಜನಪದ ನೃತ್ಯ ಕೋಲಾಟದ ಪದಕರ್ನಾಟಕ ಜನಪದ ನೃತ್ಯ ಬಂಡಿಯ ಪದಕರ್ನಾಟಕ ಜನಪದ ನೃತ್ಯ ಕಿನ್ನರಿ ಪದಕರ್ನಾಟಕ ಜನಪದ ನೃತ್ಯ ಕಂಸಾಳೆ ಪದಕರ್ನಾಟಕ ಜನಪದ ನೃತ್ಯ ಗೀಗೀಪದಕರ್ನಾಟಕ ಜನಪದ ನೃತ್ಯ ತ್ರಿಪದಿಕರ್ನಾಟಕ ಜನಪದ ನೃತ್ಯ ಮದುವೆಯ ಹಾಡುಗಳುಕರ್ನಾಟಕ ಜನಪದ ನೃತ್ಯ ತಿಂಗಳುಮಾವನ ಪದಕರ್ನಾಟಕ ಜನಪದ ನೃತ್ಯ ಮಾನವಮಿ ಪದಕರ್ನಾಟಕ ಜನಪದ ನೃತ್ಯ ಕಥನಗೀತಗಳುಕರ್ನಾಟಕ ಜನಪದ ನೃತ್ಯ ಯಕ್ಷಗಾನಕರ್ನಾಟಕ ಜನಪದ ನೃತ್ಯ ಹಾಸ್ಯದ ಪದಕರ್ನಾಟಕ ಜನಪದ ನೃತ್ಯ ಮಕ್ಕಳ ಹಾಡುಕರ್ನಾಟಕ ಜನಪದ ನೃತ್ಯ ಹಳ್ಳಿಯ ಪದಗಳುಕರ್ನಾಟಕ ಜನಪದ ನೃತ್ಯ ನೋಡಿಕರ್ನಾಟಕ ಜನಪದ ನೃತ್ಯ ಉಲ್ಲೇಖಕರ್ನಾಟಕ ಜನಪದ ನೃತ್ಯಉತ್ತರ ಕನ್ನಡ ಜಿಲ್ಲೆಉತ್ತರ ಕರ್ನಾಟಕಕರ್ನಾಟಕಕೊಡಗುದಕ್ಷಿಣ ಕನ್ನಡ ಜಿಲ್ಲೆದಕ್ಷಿಣ ಕರ್ನಾಟಕ

🔥 Trending searches on Wiki ಕನ್ನಡ:

ಹೊಯ್ಸಳ ವಿಷ್ಣುವರ್ಧನಭೋವಿವಿಧಾನಸೌಧಎ.ಪಿ.ಜೆ.ಅಬ್ದುಲ್ ಕಲಾಂದಲಿತಕಲೆವಿಷ್ಣುವರ್ಧನ್ (ನಟ)ಬಾಲಕಾರ್ಮಿಕಭಾರತದ ಸ್ವಾತಂತ್ರ್ಯ ದಿನಾಚರಣೆಜಾಗತಿಕ ತಾಪಮಾನ ಏರಿಕೆಶ್ರವಣಬೆಳಗೊಳಒಟ್ಟೊ ವಾನ್ ಬಿಸ್ಮಾರ್ಕ್ಶ್ರೀ ರಾಮಾಯಣ ದರ್ಶನಂಕರ್ನಾಟಕದ ತಾಲೂಕುಗಳುಖ್ಯಾತ ಕರ್ನಾಟಕ ವೃತ್ತಟಾವೊ ತತ್ತ್ವಮಕ್ಕಳ ದಿನಾಚರಣೆ (ಭಾರತ)ಜೀವನರಾಷ್ಟ್ರೀಯತೆರಾಗಿಮಾದಿಗಉಡಭಾರತದ ಸಂಸತ್ತುಪೀನ ಮಸೂರಬಾಲ್ಯ ವಿವಾಹಕೆರೆಗೆ ಹಾರ ಕಥನಗೀತೆಚನ್ನಬಸವೇಶ್ವರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸುಬ್ಬರಾಯ ಶಾಸ್ತ್ರಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕೇಟಿ ಪೆರಿಬರಗೂರು ರಾಮಚಂದ್ರಪ್ಪಭಾರತದ ಸರ್ವೋಚ್ಛ ನ್ಯಾಯಾಲಯಬಾಲ ಗಂಗಾಧರ ತಿಲಕವಿನಾಯಕ ಕೃಷ್ಣ ಗೋಕಾಕವಂದನಾ ಶಿವಸವರ್ಣದೀರ್ಘ ಸಂಧಿತಲಕಾಡುಡಿ.ವಿ.ಗುಂಡಪ್ಪಡಿ.ಎಸ್.ಕರ್ಕಿವಾಣಿಜ್ಯ(ವ್ಯಾಪಾರ)ಮೂಢನಂಬಿಕೆಗಳುಕಟ್ಟುಸಿರುವಿಧಾನ ಸಭೆಪರಿಸರ ವ್ಯವಸ್ಥೆಗೋವಿಂದ ಪೈಸಂಯುಕ್ತ ರಾಷ್ಟ್ರ ಸಂಸ್ಥೆನೀರು (ಅಣು)ಉಡುಪಿ ಜಿಲ್ಲೆಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಟಿ. ವಿ. ವೆಂಕಟಾಚಲ ಶಾಸ್ತ್ರೀಸತೀಶ ಕುಲಕರ್ಣಿವಿಜ್ಞಾನದೇವನೂರು ಮಹಾದೇವಕರ್ನಾಟಕ ಲೋಕಸೇವಾ ಆಯೋಗನಾಲ್ವಡಿ ಕೃಷ್ಣರಾಜ ಒಡೆಯರುವಲ್ಲಭ್‌ಭಾಯಿ ಪಟೇಲ್ಗೋಲ ಗುಮ್ಮಟನಕ್ಷತ್ರಕರ್ನಾಟಕದ ಜಿಲ್ಲೆಗಳುಪಂಚಾಂಗಬಿ.ಎಸ್. ಯಡಿಯೂರಪ್ಪಪೌರತ್ವಕರ್ನಾಟಕ ಪತ್ರಿಕೋದ್ಯಮ ಇತಿಹಾಸನೀರುಖೊಖೊಪಾರ್ವತಿಶ್ರೀಕೃಷ್ಣದೇವರಾಯಶ್ರೀ ಭಾರತಿ ತೀರ್ಥ ಸ್ವಾಮಿಗಳುಒನಕೆ ಓಬವ್ವಉಮಾಶ್ರೀವಾಲಿಬಾಲ್ತತ್ಸಮ-ತದ್ಭವಬಿ. ಎಂ. ಶ್ರೀಕಂಠಯ್ಯನಾಗವರ್ಮ-೧ಮೂಲಧಾತುಗಳ ಪಟ್ಟಿಸುಭಾಷ್ ಚಂದ್ರ ಬೋಸ್ಸಿದ್ದರಾಮಯ್ಯಅರುಣಿಮಾ ಸಿನ್ಹಾ🡆 More