ವಿಶ್ವ ಸಂಗೀತ ದಿನ

ಎಲ್ಲೆಲ್ಲು ಸಂಗೀತವೇ ಕೇಳುವ ಕಿವಿಯಿರಲು....

ಜೂನ್ 21 ವಿಶ್ವ ಸಂಗೀತ ದಿನ. ಸಂಗೀತ ಪ್ರಿಯರಿಗೊಂದು ಹಬ್ಬ. ಹೇಳಿಕೇಳಿ ಸಂಗೀತಕ್ಕೆ ಮರುಳಾಗದವರಿಲ್ಲ. ಒಂದಲ್ಲ ಒಂದು ವಿಧದಲ್ಲಿ ಸಂಗೀತವೆಂದರೆ ಎಲ್ಲರಿಗೂ ಅಪ್ಯಾಯಮಾನ, ಮನಸ್ಸಿಗೆ ಸಮಾಧಾನ.

ವಿಶ್ವ ಸಂಗೀತ ದಿನದ ಆರಂಭ

ವಿಶ್ವ ಸಂಗೀತ ದಿನ 'ಫೆಟೆ ಡಿ ಲಾ ಮ್ಯೂಸಿಕೆ' ಆರಂಭಗೊಂಡದ್ದು 1982ರ ವೇಳೆ ಫ್ರಾನ್ಸ್ ದೇಶದಲ್ಲಿ. ಅಲ್ಲಿನ ಸಂಸ್ಕೃತಿ ಸಚಿವರಾಗಿದ್ದ ಜ್ಯಾಕ್‌ ಲಾಂಗ್‌ ಅವರಿಗೆ ಇದು ಹೊಳೆದಿದ್ದು, ಜೂನ್ 21ನ್ನು ಸಂಗೀತ ದಿನವನ್ನಾಗಿ ಆಚರಿಸಲು ನಿರ್ಧರಿಸಿದರು. ಅದರಂತೆ ಮೊದಲಬಾರಿಗೆ ಅಮೆರಿಕನ್‌ ಸಂಗೀತಗಾರ ಜೋಯೆಲ್‌ ಕೊಹೆನ್‌ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ವಿಶ್ವ ಸಂಗೀತ ದಿನಕ್ಕೆ ನಾಂದಿ ಹಾಡಿದರು. ನಂತರದಲ್ಲಿ ಸಂಗೀತದ ದಿನದ ಆಚರಣೆ ವಿಶ್ವದ 32 ದೇಶಗಳಿಗೆ ಹಬ್ಬಿತ್ತು. ಇದೀಗ, ವಿಶ್ವದ ಬಹುತೇಕ ದೇಶಗಳು, ವಿಶ್ವ ಸಂಗೀತದ ಹೆಸರಿನಲ್ಲಿ ದೇಶವಾರು ಶೈಲಿಯ ಸಂಗೀತದ ಮೂಲಕ ಸಂಗೀತದಿನವನ್ನು ಆಚರಿಸುತ್ತಿವೆ.

ಸಂಗೀತದಲ್ಲಿ ವೈವಿಧ್ಯಗಳು

ಹೆಸರೇ ಹೇಳುವಂತೆ ವಿಶ್ವ ಸಂಗೀತದಲ್ಲಿ ಪ್ರಪಂಚದ ಎಲ್ಲಾ ಸಂಗೀತ ವಿಧಗಳನ್ನು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯೇತರ ಎಂಬ ಶೈಲಿಗ‌ಳು ಇದರಲ್ಲಿವೆ. ‘ಜಪಾನಿನ ಕೋಟೋ’, ‘ಭಾರತದಲ್ಲಿ ರಾಗ, ಭಾವ ಪ್ರಧಾನವಾಗಿರುವ ಹಿಂದೂಸ್ತಾನಿ, ಕರ್ನಾಟಕಿ ಶೈಲಿಯ ಸಂಗೀತ’, ‘ದಕ್ಷಿಣ ಆಫ್ರಿಕಾದ ಟೌನ್‌ಶಿಪ್‌’ ಶೈಲಿಗಳು ಶಾಸ್ತ್ರೀಯ ಸಂಗೀತ ಶೈಲಿಗೆ ಸೇರಿದವುಗಳು.

ಭಾರತವಂತೂ ಸಂಗೀತದ ತವರೂರಿನಂತೆ. ಹಲವಾರು ಶೈಲಿಗಳನ್ನು ಹೊಂದಿದೆ. ಹಿಂದೂಸ್ತಾನಿ, ಕರ್ನಾಟಕಿ ಶಾಸ್ತ್ರೀಯ ಶೈಲಿಯೇ ಅಲ್ಲದೆ, ಭಾಂಗ್ರಾ, ಭಜನೆ, ಭಕ್ತಿಗೀತೆ, ಗಝಲ್‌, ಕವ್ವಾಲಿ, ಇಂಡಿ-ಪಾಪ್‌, ಜನಪದ, ಸಿನೆಮಾ ಹಾಡುಗಳು, ಸುಗಮ ಸಂಗೀತ, ರಿಮಿಕ್ಸ್‌, ಫ್ಯೂಶನ್‌ ಮುಂತಾದ ವೈವಿಧ್ಯಮಯ ಶೈಲಿಗಳೂ ಇವೆ. ಹಾಗೆಯೇ ಪಾಶ್ಚಿಮಾತ್ಯ ಪ್ರಾಕಾರಗಳಾದ ಮೆಟಲ್‌, ರಾಕ್‌, ಹಿಪ್‌ ಹಾಪ್‌, ಆಲ್ಟರ್‌ ನೇಟಿವ್‌, ಏಕ್ಸ್ಪೆರಿಮೆಂಟಲ್, ಕಂಟ್ರಿ, ಡಿಸ್ಕೋ, ಫೂಂತಕ್‌, ಕ್ಲಾಸಿಕಲ್, ಪ್ರೋಗ್ರೆಸ್ಸಿವ್‌, ಟ್ರಾನ್ಸ್‌, ಟೆಕ್ನೋ, ರೆಗ್ಗೆ ಮುಂತಾದ ಸಂಗೀತಗಳೂ ಇವೆ.

ಪ್ರಕೃತಿಯಲ್ಲಿ ಸಂಗೀತ

ಸಂಗೀತಕ್ಕೆ ಪ್ರಕೃತಿಯೇ ತಾಯಿ ಎಂದು ಹೇಳಲಾಗುತ್ತದೆ. ಜೋರು ಮಳೆ ಹುಯ್ಯುತ್ತಿದ್ದರೆ, ಸುಮ್ಮನೆ ಕಿವಿಗೊಟ್ಟು ಕೇಳಿದಲ್ಲಿ ಅಲ್ಲೂ ಒಂದು ಸಂಗೀತವಿದೆ. ಹಕ್ಕಿಗಳ ಇಂಚರದಲ್ಲಿ, ಸಾಹಿತ್ಯದಲ್ಲಿ ಸಂಗೀತವಿದೆ. ಎದೆಬಡಿತದ ಮಿಡಿತದಲ್ಲಿ ಸಂಗೀತದ ಸ್ಪರ್ಶವಿದೆ. ಹಾಗಾಗಿ ಕವಿ ಹೇಳುತ್ತಾರೆ

ಹರಿಯುವ ನೀರಲಿ

ಕಲ ಕಲರವವೂ

ಕೋಗಿಲೆ ಕೊರಳಿನ ಸುಮಧುರ ಸ್ವರವೂ

ಹರಿಯುವ ನೀರಲಿ ಕಲ ಕಲರವವು

ಕೋಗಿಲೆ ಕೊರಳಿನ ಸುಮಧುರ ಸ್ವರವೂ

ಭ್ರಮರದ ಝೇಂಕಾರ

ಮುನಿಗಳ ಓಂಕಾರ

ಈ ಜಗ ತುಂಬಿದೆ ಮಾಧುರ್ಯದಿಂದಾ

ಎಲ್ಲೆಲ್ಲು ಸಂಗೀತವೇ

ಪ್ರಸಿದ್ಧ ಸಂಗೀತಗಾರರಾದ ಉಸ್ತಾದ್ ಅಮ್ಜದ್ ಆಲಿಖಾನ್ ಅವರು ಹೇಳುತ್ತಾರೆ. “ಎರಡು ಸ್ವರೂಪದ ಸಂಗೀತಗಳಿವೆ. ಮೊದಲನೆಯದು ಶಬ್ಧಾತೀತವಾದದ್ದು. ಅದು ಪ್ರಕೃತಿಯಲ್ಲಿ ಅಂತರ್ಗತವಾಗಿರುವ ಸಂಗೀತ. ಅದು ಅತ್ಯಂತ ಶುಭ್ರವಾದ ಸಂಗೀತದ ಸ್ವರೂಪ. ಎರಡನೆಯದು ನಮ್ಮ ಧ್ವನಿಯಿಂದ ಹೊರಡುವ ಸಂಗೀತ.”

ಸಂಗೀತದ ಕುರಿತು ಭಾರತೀಯ ಚಿಂತನೆಗಳು

ಸಂಗೀತವನ್ನು ಗಾಂಧರ್ವವೇದ ಎನ್ನುತ್ತಾರೆ. ಗಂಧರ್ವರ ವಿದ್ಯೆಯಾದುದರಿಂದ ಇದಕ್ಕೆ ಈ ಹೆಸರು. ‘ಗಾಂಧರ್ವ ವಿದ್ಯೆ’ ಎಂದರೆ ‘ಗಾನವಿದ್ಯೆ’ ಅಥವಾ ಸಂಗೀತ ಎಂದರ್ಥ. ‘ಸಂಗೀತ’ ಎಂಬ ಪದಕ್ಕೆ ‘ಸುಷ್ಟಗೀತಂ ಸಂಗೀತಂ’ ಅಥವಾ ‘ಸಮ್ಯಕ್ ಗೀತಂ ಸಂಗೀತಂ’ ಅಥವಾ ‘ಸಂಗೀತಂ ಸಂಗೀತಂ’ ಎಂಬ ಅರ್ಥವೂ ಇದೆ. ಅಂದರೆ ಕರ್ಣಾನಂದ ಉಂಟು ಮಾಡುವ ಗೀತೆಯೇ ಸಂಗೀತ. ಪರಮಾತ್ಮನ ಧ್ಯಾನೋಪಾಸನೆಯಲ್ಲಿ ಈಶ್ವರ ಪ್ರಣೀತ ಧ್ಯಾನಕ್ಕೆ ಸಾಧನವಾಗಿದ್ದ ಧಾರ್ಮಿಕ ಸಂಗೀತವೇ ‘ಗಾಂಧರ್ವವೇದ’. ಇದಕ್ಕೆ ಸಾಮವೇದವೇ ಮೂಲ. ಪರಮಾತ್ಮನಿಗೂ ಈ ಸಂಗೀತವುಳ್ಳ ಸಾಮವೇದವೆಂದರೆ ಪ್ರಾಣ. ಹಾಗಾಗಿ ಭಗವದ್ಗೀತೆಯಲ್ಲಿ ‘ವೇದಾನಾಂ ಸಾಮವೇದೋಸ್ಮಿ’ – ವೇದಗಳಲ್ಲಿ ನಾನು ಸಾಮವೇದ ಎಂಬ ಭಗವಂತನ ಉಕ್ತಿಯಿದೆ.

ಸಂಗೀತದಲ್ಲಿ ‘ಧಾರ್ಮಿಕ’ ಮತ್ತು ‘ಲೌಕಿಕ’ ಎಂದು ಎರಡು ಬಗೆ. ಧಾರ್ಮಿಕ ಸಂಗೀತವು ಭಕ್ತಿ ಪ್ರೇರಿತವಾಗಿ ದೇವರ ಸ್ತುತಿಯಲ್ಲಿ ಮೈ ತಾಳಿದೆ. ಈ ಧಾರ್ಮಿಕ ಸಂಗೀತವನ್ನೇ ‘ಮಾರ್ಗ ಸಂಗೀತ’ವೆಂತಲೂ ‘ಗಾಂಧರ್ವ’ವೆಂತಲೂ ‘ಶಾಸ್ತ್ರೀಯ’ವೆಂತಲೂ ‘ಶಾಸ್ತ್ರೀಯ ಸಂಗೀತ’ವೆಂದೂ ಕರೆಯುತ್ತಾರೆ. ನಮ್ಮ ಪ್ರತಿಯೊಂದು ವಿದ್ಯೆಯೂ ಕೈವಲ್ಯವನ್ನು ಹೊಂದಲೆಂದೇ ಮೊದಲು ಆವಿರ್ಭಾವವಾಯಿತು. ಆದ್ದರಿಂದಲೇ ಸಂಗೀತವನ್ನು ‘ದೈವೀಕ ಸಂಗೀತ’ವೆಂದು ಕರೆಯುವುದು ವಾಡಿಕೆಯಾಗಿದೆ.

‘ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನ ರಸಂಫಣೀ’ ಎನ್ನುತ್ತಾರೆ ವಾಲ್ಮೀಕಿ ಮಹರ್ಷಿ. ಅಂದರೆ ಮಕ್ಕಳು, ಪ್ರಾಣಿಗಳೂ, ಸರೀಸೃಪವಾದ ಹಾವೂ ಸಹ ಸಂಗೀತರಸ ಮಾಧುರ್ಯವನ್ನು ಸವಿಯುತ್ತವೆ. ಮಾನವರೇ ಏಕೆ ದೇವತೆಗಳೂ ಸಹ ಸಂಗೀತ ಪ್ರಿಯರೇ. ಕೃಷ್ಣನ ಪ್ರಿಯ ವಾದ್ಯ ಕೊಳಲು, ಶಿವನದು ಡಮರುಗ, ಸರಸ್ವತಿಯದು ವೀಣೆ, ನಾರದರದು ತಂಬೂರಿ ಇತ್ಯಾದಿಗಳ ಕುರಿತಾಗಿ ಸಾಕಷ್ಟು ಪೌರಾಣಿಕ ಕಥೆಗಳು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ.

ಮಾನವನ ಸ್ವಭಾವಗಳ ಮೇಲೆ ಸಂಗೀತವು ಪ್ರಭಾವ ಬೀರುತ್ತದೆಂದು ದೃಢಪಟ್ಟಿದೆ. ಅನೇಕ ರೋಗಗಳು ಸಂಗೀತದಿಂದ ಗುಣವಾಗುತ್ತದೆ ಎಂಬುದು ಅನೇಕರ ಅನುಭವ. ಸಂಗೀತಾಭ್ಯಾಸವು ಒಬ್ಬ ವ್ಯಕ್ತಿಯನ್ನು ಒಳ್ಳೆಯ ಪೌರನನ್ನಾಗಿ ಬೆಳಸಲು ಸಹಾಯ ಮಾಡುತ್ತದೆ. ಸಂಗೀತದ ಮಾಧುರ್ಯವು ಮಾನವನಲ್ಲಿರುವ ಸಂಕುಚಿತ ಸ್ವಭಾವವನ್ನು ಹೋಗಲಾಡಿಸಿ ಹೃದಯ ವೈಶಾಲ್ಯವನ್ನುಂಟು ಮಾಡುತ್ತದೆ.

‘ವೀಣಾವಾದನ ತತ್ವಜ್ಞ: ಶ್ರುತಿ ಜಾತಿ ವಿಶಾರದಃ

ತಾಳಜ್ಞಸ್ಯಾ ಪ್ರಯಾಸೇನ ಮೋಕ್ಷಮಾರ್ಗಂ ಪ್ರಯಚ್ಛಸಿ’

ಅಂದರೆ ಯಾರು ವೀಣಾ ವಾದನದಲ್ಲಿ ನಿಪುಣರೋ, ಶ್ರುತಿಗಳ ವಿಂಗಡನೆಯಲ್ಲಿ ಪಂಡಿತರೋ, ತಾಳದಲ್ಲಿ ನಿಪುಣರೊ ಅಂಥವರು ಮೋಕ್ಷ ಹೊಂದುತ್ತಾರೆ ಎಂಬ ಉಕ್ತಿ ಪ್ರಸಿದ್ಧವಾಗಿದೆ. ಹಾಗಾಗಿ ಭಾರತೀಯ ಪರಂಪರೆಯಲ್ಲಿ ಸಂಗೀತವೆಂಬುದು ಮುಕ್ತಿಮಾರ್ಗ ಅಥವಾ ಮೋಕ್ಷಮಾರ್ಗವೂ ಹೌದು. ಆದುದರಿಂದಲೇ ಸಂಗೀತವು ‘ನಾದಯೋಗ’ ವೆಂದೂ ಪ್ರಸಿದ್ಧ.

‘ಶ್ರುತಿಸ್ಮೃತಾದಿ ಸಾಹಿತ್ಯ ನಾನಾಶಾಸ್ತ್ರವಿದೋಪಿಚ

ಸಂಗೀತಂ ಯೋ ನಜಾನಂತಿ ದ್ವಿಪದಾಸ್ತೇ ಮೃಗಾಸ್ಮೃತಾಃ’

“ಅಂದರೆ ಒಬ್ಬನು ಶ್ರುತಿ, ಸ್ಮೃತಿ, ಸಾಹಿತ್ಯ ಹಾಗೂ ಅನೇಕ ಶಾಸ್ತ್ರಗಳಲ್ಲಿ ಎಷ್ಟೇ ವಿದ್ವಾಂಸನಾಗಿದ್ದರೂ, ಅವನಿಗೆ ಸಂಗೀತವನ್ನು ಆಸ್ವಾದಿಸುವ ಗುಣಹೊಂದಿಲ್ಲದಿದ್ದಲ್ಲಿ ಆತ ಮೃಗಗಳಿಗೆ ಸಮಾನ” ಎಂಬ ಮಾತಿನ ಈ ಶ್ಲೋಕವು . ಸಂಗೀತವು ಪೂರ್ವಜನ್ಮ ಸಂಸ್ಕಾರದಿಂದ ಬರುವ ವಿದ್ಯೆ. ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಕಡೆಯ ಪಕ್ಷ ಸಂಗೀತವನ್ನು ಕೇಳಿ ಆನಂದಪಡುವ ಸಹೃದಯತೆಯನ್ನಾದರೂ ಪಡೆದಿರಬೇಕೆಂಬುದು ಈ ಶ್ಲೋಕದ ಆಂತರ್ಯ.

ಸಂಗೀತವು ಅಕಾಲಿಕ ವಿದ್ಯೆಯೆಂಬುದನ್ನು ಈ ಕೆಳಗಿನ ನಿದರ್ಶನಗಳಿಂದ ಸಾಧಿಸಬಹುದು, ಶ್ರೀ ತ್ಯಾಗರಾಜರು ‘ನಾ ಜೀವಾಧಾರಾ’ ಎಂಬ ಬಲಹರಿ ರಾಗದ ಕೃತಿಯನ್ನು ಹಾಡಿ ಮೃತ ವ್ಯಕ್ತಿಗೆ ಪ್ರಾಣದಾನ ಮಾಡಿದರು, ಶ್ರೀ ರಾಮಸ್ವಾಮಿ ದೀಕ್ಷಿತರು ಸಂಗೀತವನ್ನು ಹಾಡಿ ತಮ್ಮ ಮಗನ ‘ದೃಷ್ಟಿಹೀನತೆ’ಯನ್ನು ಹೋಗಲಾಡಿಸಿದರು ಎಂಬ ಪ್ರತೀತಿಯಿದೆ. ಕೋಪಾವಿಷ್ಟನಾದವನ ಕೋಪವು ಸಂಗೀತದಿಂದ ಶಮನವಾಗುತ್ತದೆ. ಗಾನವನ್ನು ಕೇಳುತ್ತಾ ಅದರ ಆನಂದವನ್ನು ಸವಿಯುತ್ತಾ ಹಸುವು ಹೆಚ್ಚು ಹಾಲನ್ನು ಕೊಡುತ್ತದಂತೆ. ಶ್ರೀ ಕೃಷ್ಣನು ತನ್ನ ವೇಣುವಾದನದ ಆಕರ್ಷಣೆಯಿಂದಲೇ ಹಸುಗಳನ್ನು ಕಾಯುತ್ತಿದ್ದನು. ಈಗಲೂ ಸಹ ಗೊಲ್ಲನು ಕೊಳಲನ್ನು ಊದುವ ಪರಂಪರೆಗಳಿವೆ. ಒಳ್ಳೆಯ ಸಂಗೀತವನ್ನು ಕೇಳುವುದರ ಮೂಲಕ ಸಸ್ಯಗಳು ಹೆಚ್ಚಿನ ಫಲವನ್ನು ಕೊಡುತ್ತವಂತೆ. ರಾಗಗಳನ್ನು ಮೀಟಿ ಮಳೆ ಸುರಿಸಿದ ಕಥೆಗಳನ್ನೂ ನಾವು ಕೇಳಿ ಬೆಳೆದಿದ್ದೇವೆ. ಅಷ್ಟೇಕೆ ನಮ್ಮ ಶಿಲ್ಪ ಕಲೆಗಳು ಕಲ್ಲುಗಳಲ್ಲೂ ಸಂಗೀತವನ್ನು ಹೊರಹೊಮ್ಮಿಸಿರುವುದನ್ನು ನಮ್ಮ ನಾಡಿನ ಐತಿಹಾಸಿಕ ಶಿಲ್ಪಗಳು ಇಂದಿಗೂ ತೋರಿಸಿಕೊಡುತ್ತಿವೆ.

ಸಂಗೀತ ಎಂದಿಗು ಸುರಗಂಗೆಯಂತೆ

ಸಂಗೀತ ಎಂದಿಗು ರವಿಕಾಂತಿಯಂತೆ

ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ

ಆ ದೈವ ಸುಧೆಯಿಂದ ಪರಮಾರ್ಥವಂತೆ

ಎಲ್ಲೆಲ್ಲು ಸಂಗೀತವೇ, ಎಲ್ಲೆಲ್ಲು ಸೌಂದರ್ಯವೇ

ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು

ಎಲ್ಲೆಲ್ಲು ಸಂಗೀತವೇ


ಸಂಗೀತ ನಾಟ್ಯ ಸಂಸ್ಕೃತಿಗಳ ಅನುಭಾವ ಇಡೀ ವಿಶ್ವ ಜನಾಂಗವನ್ನು ಅನಾದಿಕಾಲದಿಂದಲೂ ಆವರಿಸುತ್ತ ಬಂದಿದೆ. ಒಂದು ಕಾಲದಲ್ಲಿ ದೇಗುಲಗಳೇ ಸಂಗೀತ ಸಂಸ್ಕೃತಿಗಳನ್ನು ಪಸರಿಸುವ ಕೇಂದ್ರಗಳಾಗಿದ್ದವು. ದೇವತೆಗಳ ನಿರೂಪಣೆ, ಚಿತ್ರಣಗಳಲ್ಲೂ ಸಂಗೀತ ನಾಟ್ಯಗಳ ಪ್ರಭಾವವೇ ಎದ್ದುಕಾಣುತ್ತದೆ. ಪ್ರಶಾಂತ ಸಂಗೀತವನ್ನು ಆಲಿಸಿದವನ ಮನಸ್ಸು ಅದೆಷ್ಟು ಕಟುತನದ ಹಿನ್ನೆಲೆ ಹೊಂದಿದ್ದಾಗ್ಯೂ ಪ್ರಶಾಂತತೆಯನ್ನು ಅನುಭಾವಿಸುತ್ತಿರುತ್ತದೆ. ಆತನ ಮನಸ್ಸು ಸಂಗೀತ ಲೋಕದಲ್ಲಿ ಮುಳುಗಿದ್ದಾಗ ಪ್ರೇಮಮಯ ಮೃದುತ್ವವನ್ನು ಹೊಂದಿರುತ್ತದೆ. ಇಂದಿನ ಒತ್ತಡದ ಪ್ರಾಪಂಚಿಕ ಬದುಕಿನಲ್ಲಿ ಸಂಗೀತವೆಂಬುದೊಂದೇ ನಮಗೆ ಸುಲಭವಾಗಿ ದಕ್ಕುವ ವಿಶ್ರಾಂತ ತಾಣ. ಈ ಸಂಗೀತವನ್ನು ಸಮಾಜಕ್ಕೆ ದಯಪಾಲಿಸಿದ ನಮ್ಮ ಅನಾದಿ ಪರಂಪರೆಗೆ, ಇಂದಿಗೂ ಸಂಗೀತವನ್ನು ಭಕ್ತಿ ಶ್ರದ್ಧೆಗಳಿಂದ ಕಲಿತು ಎಲ್ಲೆಲ್ಲೂ ಗಾನ ಗಂಗೆಯನ್ನು ಹರಿಸುತ್ತಿರುವ ಆಚಾರ್ಯ ಪರಂಪರೆಗೆ, ಕಲಾವಿದ ಪರಂಪರೆ ಮತ್ತು ಕಲಾರಸಿಕ ಪರಂಪರೆಗಳಿಗೆ ಧನ್ಯವಾದ ಹೇಳುವ ಸಮಯ ಈ ವಿಶ್ವ ಸಂಗೀತ ದಿನ. ಇವೆಲ್ಲದರ ಜೊತೆಗೆ ನಮ್ಮ ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತ ನಮ್ಮ ಬದುಕಿನಿಂದ ಕಳೆದುಹೋಗದಂತೆ ಎಚ್ಚರವಹಿಸಿ ನಮ್ಮ ಮತ್ತು ಮುಂದಿನ ತಲೆಮಾರುಗಳ ಬದುಕು ಸಂಗೀತವೆಂಬ ಶ್ರೇಷ್ಠತೆಯನ್ನು ಎಂದೆಂದೂ ಅನುಭಾವಿಸುವ ಅವಕಾಶವನ್ನು ಜೀವಂತವಾಗಿರಿಸಲು ಪ್ರಯತ್ನವನ್ನು ಸಹಾ ಈ ಆಚರಣೆ ಪ್ರೇರೇಪಿಸುವಂತದ್ದಾಗಿದೆ..

ಎಲ್ಲ ಸಂಗೀತ ಶ್ರೇಷ್ಠರಿಗೂ, ಕಲಾವಿದರಿಗೂ, ಸಂಗೀತ ಪ್ರೇಮಿಗಳಿಗೂ ವಿಶ್ವ ಸಂಗೀತ ದಿನ ಗೌರವ ಸೂಚಕವೆಂದು ಭಾವಿಸಲಾಗಿದೆ. ‘ಎಂದರೋ ಮಹಾನುಭಾವುಲು ಅಂದರೀಕಿ ವಂದನಮುಲು' ಎಂಬ ತ್ಯಾಗರಾಜರ ಗೀತೆಯ ಆಂತರ್ಯ – ವಂದನೆ ಸಾಷ್ಟಾಂಗ ವಂದನೆ ಸಕಲ ಕಾರ್ಯ ಕಾರಣರಾದ ಮಹಾನುಭಾವರುಗಳಿಗೆ ಎಂಬುದು ಈ ಆಚರಣೆಯ ಹಿಂದಿರುವ ಆಂತರ್ಯವಾಗಿದೆ.

Tags:

ವಿಶ್ವ ಸಂಗೀತ ದಿನ ದ ಆರಂಭವಿಶ್ವ ಸಂಗೀತ ದಿನ ಸಂಗೀತದಲ್ಲಿ ವೈವಿಧ್ಯಗಳುವಿಶ್ವ ಸಂಗೀತ ದಿನ ಪ್ರಕೃತಿಯಲ್ಲಿ ಸಂಗೀತವಿಶ್ವ ಸಂಗೀತ ದಿನ ಸಂಗೀತದ ಕುರಿತು ಭಾರತೀಯ ಚಿಂತನೆಗಳುವಿಶ್ವ ಸಂಗೀತ ದಿನ

🔥 Trending searches on Wiki ಕನ್ನಡ:

ಭಾರತೀಯ ಜನತಾ ಪಕ್ಷಭಗವದ್ಗೀತೆರಾಮಾಯಣಭಾರತದ ನದಿಗಳುಭಾರತದ ಮುಖ್ಯಮಂತ್ರಿಗಳುಬೆಂಗಳೂರುಕ್ರೈಸ್ತ ಧರ್ಮ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಛತ್ರಪತಿ ಶಿವಾಜಿರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಇಮ್ಮಡಿ ಪುಲಿಕೇಶಿಪುರಂದರದಾಸಶಿವರಾಮ ಕಾರಂತಕರ್ನಾಟಕದ ಏಕೀಕರಣಬ್ಯಾಡ್ಮಿಂಟನ್‌ಕರ್ಬೂಜನುಗ್ಗೆಕಾಯಿಶಾಸನಗಳುಖ್ಯಾತ ಕರ್ನಾಟಕ ವೃತ್ತಅಶೋಕನ ಶಾಸನಗಳುಜಗನ್ನಾಥದಾಸರುಹೊಂಗೆ ಮರಓಂ ನಮಃ ಶಿವಾಯವಿಶ್ವದ ಅದ್ಭುತಗಳುವಿದ್ಯಾರಣ್ಯಕಂದದ್ಯುತಿಸಂಶ್ಲೇಷಣೆಪಂಪ ಪ್ರಶಸ್ತಿಸುಧಾ ಮೂರ್ತಿಅವ್ಯಯರಾಯಲ್ ಚಾಲೆಂಜರ್ಸ್ ಬೆಂಗಳೂರುಕನ್ನಡ ರಂಗಭೂಮಿಸಂವಿಧಾನರಾಜ್ಯಸಭೆಇನ್ಸ್ಟಾಗ್ರಾಮ್ಸಂಪ್ರದಾಯವ್ಯಾಪಾರಪಾಕಿಸ್ತಾನಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಗೋಕಾಕ್ ಚಳುವಳಿದುಶ್ಯಲಾಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಶುಕ್ರಬಿ.ಜಯಶ್ರೀಅಂಟುರಾವಣಮಾನಸಿಕ ಆರೋಗ್ಯಅಸ್ಪೃಶ್ಯತೆಬ್ಯಾಂಕ್ಮಧುಮೇಹಪಂಚ ವಾರ್ಷಿಕ ಯೋಜನೆಗಳುಬೀಚಿಜಶ್ತ್ವ ಸಂಧಿವಿಧಾನಸೌಧನಚಿಕೇತಭಾರತದ ಮುಖ್ಯ ನ್ಯಾಯಾಧೀಶರುಇಸ್ಲಾಂ ಧರ್ಮಬಿಳಿಗಿರಿರಂಗನ ಬೆಟ್ಟಭಾರತದ ರಾಷ್ಟ್ರಪತಿಗಳ ಪಟ್ಟಿಸ್ವಾಮಿ ವಿವೇಕಾನಂದವೆಂಕಟೇಶ್ವರ ದೇವಸ್ಥಾನಕಲ್ಯಾಣ್ಅವತಾರಕರ್ನಾಟಕದ ಮುಖ್ಯಮಂತ್ರಿಗಳುಕರ್ನಾಟಕ ಹೈ ಕೋರ್ಟ್ಮೊಘಲ್ ಸಾಮ್ರಾಜ್ಯಊಟನುಡಿ (ತಂತ್ರಾಂಶ)ಜಾಗತಿಕ ತಾಪಮಾನಹನುಮ ಜಯಂತಿಎಂ. ಕೆ. ಇಂದಿರಅರಬ್ಬೀ ಸಾಹಿತ್ಯಕರ್ನಾಟಕದ ಸಂಸ್ಕೃತಿಶ್ಚುತ್ವ ಸಂಧಿರಾಮ ಮಂದಿರ, ಅಯೋಧ್ಯೆ🡆 More