ಪಂಜಾಬಿ ಚಿತ್ರರಂಗ

ಸಾಮಾನ್ಯವಾಗಿ ಪಾಲಿವುಡ್ ಎಂದು ಗುರುತಿಸಲ್ಪಡುವ ಪಂಜಾಬಿ ಚಿತ್ರರಂಗವು ಭಾರತ ಮತ್ತು ಪಾಕಿಸ್ತಾನ ದೇಶಗಳ ಪಂಜಾಬ್ ರಾಜ್ಯಗಳಲ್ಲಿ ಕೇಂದ್ರಿತವಾಗಿದೆ.

೨೦ನೇ ಶತಮಾನದಲ್ಲಿ ಪಾಕಿಸ್ತಾನದ ಪಂಜಾಬಿ ಚಿತ್ರರಂಗ ಜನಪ್ರಿಯತೆಯ ಉತ್ತುಂಗದಲ್ಲಿದ್ದರೆ ೨೧ನೆಯ ಶತಮಾನದಲ್ಲಿ ಭಾರತೀಯ ಪಂಜಾಬಿ ಚಿತ್ರರಂಗವು ತನ್ನ ಉತ್ತಮ ಗುಣಮಟ್ಟದ ಚಿತ್ರಗಳ ತಯಾರಿಕೆಯಿಂದ ಜನಪ್ರಿಯವಾಗಿದೆ.

೭೦ರ ದಶಕದಲ್ಲಿ ವರ್ಷಂಪ್ರತಿ ಬಿಡುಗಡೆಗೊಂಡ ಪಂಜಾಬಿ ಚಲನಚಿತ್ರಗಳ ಸರಾಸರಿ ೯ರಷ್ಟಿದ್ದರೆ ೮೦ರ ದಶಕದಲ್ಲಿ ಸರಾಸರಿ ೮ಕ್ಕೆ ಕುಸಿಯಿತು. ೯೦ರ ದಶಕದಲ್ಲಂತೂ ವರ್ಷಂಪ್ರತಿ ಬಿಡುಗಡೆಗೊಂಡ ಚಲನಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದರ ಮೂಲಕ ಪಂಜಾಬಿ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ೨೦೦೦ದ ನಂತರ ಪಂಜಾಬ್ ಸರ್ಕಾರ ಮತ್ತು ಚಿತ್ರರಂಗದ ಪಂಡಿತರ ಸಂಘಟಿತ ಪ್ರಯತ್ನದಿಂದ ಪುನರುಜ್ಜೀವನಗೊಂಡ ಭಾರತೀಯ ಪಂಜಾಬಿ ಚಿತ್ರರಂಗ ದೊಡ್ಡ ಬಂಡವಾಳ ಹೂಡಿಕೆಯ ಯಶಸ್ವಿ ಚಿತ್ರಗಳನ್ನು ತಯಾರಿಸುತ್ತಿದೆ. ವರ್ಷಂಪ್ರತಿ ಬಿಡುಗಡೆಯಾಗುವ ಚಲನಚಿತ್ರಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ೨೦೦೯ರಂತೆ ಬಿಡುಗಡೆಯಾದ ಪಂಜಾಬಿ ಚಲನಚಿತ್ರಗಳ ಒಟ್ಟು ಸಂಖ್ಯೆ ಸುಮಾರು ೧೦೦೦ವನ್ನು ದಾಟಿದೆ.

ಪ್ರಥಮ ಚಿತ್ರ

ಪಂಜಾಬಿ ಭಾಷೆಯಲ್ಲಿ ತಯಾರಾದ ಮೊದಲ ವಾಕ್ಚಿತ್ರ ಕೆ.ಡಿ.ಮೆಹ್ತಾ ನಿರ್ದೇಶನದ ಪಿಂಡ್ ದೇ ಕುಡಿ(೧೯೩೫). ಈ ಚಿತ್ರದ ಮೂಲಕ ನಂತರದ ಜನಪ್ರಿಯ ಗಾಯಕಿ ಮತ್ತು ನಟಿ ನೂರ್ ಜೆಹಾನ್ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟಿದ್ದರು. ಕೋಲ್ಕತ್ತಾದಲ್ಲಿ ತಯಾರಿಸಲ್ಪಟ್ಟ ಈ ಚಿತ್ರ ಲಾಹೋರಿನಲ್ಲಿ ತೆರೆಕಂಡು ಅಪಾರ ಯಶಸ್ಸು ಗಳಿಸಿತ್ತು.

ಪಂಜಾಬ್ ವಿಭಜನೆಯ ಪೂರ್ವದ ಚಿತ್ರರಂಗ

ದೊಡ್ಡ ಸಂಖ್ಯೆಯ ಪಂಜಾಬಿ ಭಾಷಿಕರು ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ಮತ್ತು ಆಸುಪಾಸಿನಲ್ಲಿದ್ದುದರಿಂದ ಲಾಹೋರ್ ಸಹಜವಾಗಿ ಪಂಜಾಬಿ ಭಾಷೆಯ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿತು. ಲಾಹೋರನ್ನು ಕೇಂದ್ರವಾಗಿಟ್ಟುಕೊಂಡು ಪಂಜಾಬಿ ಭಾಷಾ ಚಲನಚಿತ್ರಗಳ ನಿರ್ಮಾಣ ಹೆಚ್ಚಾಯಿತು. ಮುಂಬಯಿ ಮತ್ತು ಕೋಲ್ಕತ್ತಾದಲ್ಲಿದ್ದ ಅನೇಕ ಪಂಜಾಬಿ ಭಾಷಾ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರು ಲಾಹೋರ್ಗೆ ವಲಸೆ ಹೋದರು. ಇವರಲ್ಲಿ ಪ್ರಮುಖರೆಂದರೆ ಶಾಂತಾ ಅಪ್ಟೆ, ಮೋತಿಲಾಲ್, ಹೀರಾಲಾಲ್ ಮತ್ತು ಮುಮ್ತಾಜ್ ಶಾಂತಿ. ಜನಪ್ರಿಯ ನಿರ್ದೇಶಕರಾದ ಬಿ.ಆರ್.ಚೋಪ್ರಾ ಮತ್ತು ರಮಾನಂದ್ ಸಾಗರ್ ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ಲಾಹೋರಿನಲ್ಲಿಯೇ. ಬಿ.ಆರ್.ಚೋಪ್ರಾ ತಮ್ಮದೇ ಆದ ಸಿನೆ ಹೆರಾಲ್ಡ್ ಎಂಬ ಪತ್ರಿಕೆಯನ್ನು ನಡೆಸಿದ್ದರೆ ರಮಾನಂದ್ ಸಾಗರ್ ಅವರು ಈವನಿಂಗ್ ನೀವ್ಸ್ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು.

ಪಂಜಾಬ್ ವಿಭಜನೆಯ ನಂತರದ ಚಿತ್ರರಂಗ

೧೯೪೭ರಲ್ಲಿ ಸ್ವಾತಂತ್ರ್ಯ ಹೊಂದಿದ ಅವಿಭಜಿತ ಭಾರತ ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗಿ ಭಾರತ ಮತ್ತು ಪಾಕಿಸ್ತಾನಗಳಾಗಿ ಇಬ್ಭಾಗವಾಯಿತು. ಇದರ ಪರಿಣಾಮವಾಗಿ ಪಂಜಾಬ್ ಪ್ರಾಂತ್ಯದ ಪೂರ್ವ ಭಾಗ ಭಾರತದಲ್ಲೂ ಪಶ್ಚಿಮ ಭಾಗ ಪಾಕಿಸ್ತಾನದಲ್ಲೂ ಸೇರಿಕೊಂಡಿತು. ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ಪಾಕಿಸ್ತಾನಕ್ಕೆ ಸೇರಿದ್ದರಿಂದ ನೂರ್ ಜೆಹಾನ್ ಸೇರಿದಂತೆ ಅನೇಕ ಜನಪ್ರಿಯ ಮುಸ್ಲಿಂ ತಾರೆಯರು ಲಾಹೋರಿನಲ್ಲಿ ನೆಲೆಸಿದ್ದರಿಂದ ಭಾರತೀಯ ಪಂಜಾಬಿ ಚಿತ್ರರಂಗ ತೀವ್ರ ಹಿನ್ನಡೆ ಅನುಭವಿಸಿತು. ಚಿತ್ರ ತಯಾರಿಕೆಗೆ ಬೇಕಾದ ಸ್ಟೂಡಿಯೋ ಮುಂತಾದ ಮೂಲಸೌಕರ್ಯಗಳು ಲಾಹೋರ್ನಲ್ಲಿದ್ದುದರಿಂದ ಭಾರತೀಯ ಪಂಜಾಬಿ ಚಿತ್ರರಂಗ ದೂರದ ಬಾಂಬೆಯನ್ನು ನೆಚ್ಚಿಕೊಳ್ಳಬೇಕಾಯಿತು. ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪಂಜಾಬಿ ಚಿತ್ರ ಚಮನ್(೧೯೪೮). ಮೀನಾ ಶೌರಿ, ಕರಣ್ ದಿವಾನ್, ಕುಲದೀಪ್ ಕೌರ್, ಮಂಜು ಮುಂತಾದ ಕಲಾವಿದರು ಅಭಿನಯಿಸಿದ್ದರು.

೧೯೫೦ ಮತ್ತು ೧೯೬೦ರ ದಶಕಗಳು

ದುಸ್ಥಿತಿಗೆ ತಲುಪಿದ್ದ ಭಾರತೀಯ ಪಂಜಾಬಿ ಚಿತ್ರರಂಗವನ್ನು ಜೀವಂತವಾಗಿರಿಸಲು ಅನೇಕ ಪ್ರಯತ್ನಗಳು ನಡೆದವು. ಈ ಪೈಕಿ ಪ್ರಮುಖ ಚಿತ್ರಗಳೆಂದರೆ ೧೯೫೦ರ ದಶಕದಲ್ಲಿ ತೆರೆಗೆ ಬಂದ ಪೋಸ್ತಿ(೧೯೫೦), ಭೈಸಾಕಿ(೧೯೫೧), ಜುಗ್ನಿ(೧೯೫೨) ಕೌಡೆ ಷಾ(೧೯೫೨), ನಿಕ್ಕಿ(೧೯೫೨) ಮತ್ತು ಭಾಂಗ್ರಾ(೧೯೫೯) ಮುಂತಾದವು. ಶ್ಯಾಮಾ, ಮನೋರಮಾ, ಅಮರನಾಥ್, ರಣಧೀರ್ ಮತ್ತು ಮಂಜು ಮುಂತಾದವರ ಅಭಿನಯವಿದ್ದ ಹಾಸ್ಯಮಯ ಚಿತ್ರ ಪೋಸ್ತಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಹಾಸ್ಯನಟ ಮಂಜು ತಮ್ಮ ಅಭಿನಯದಿಂದ ಪಂಜಾಬಿ ಚಿತ್ರರಸಿಕರ ಮನೆಮಾತಾದರು. ಈ ಚಿತ್ರದ ಯಶಸ್ಸಿನಿಂದ ಪ್ರೇರಿತರಾದ ನಿರ್ಮಾಪಕರು ಅನೇಕ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ಮಿಸಿದರು. ಈ ದಿಸೆಯಲ್ಲಿ ಪ್ರಮುಖವಾಗುವ ಚಿತ್ರವೆಂದರೆ ರಾಜ್ ಭಕ್ರಿ ಅವರ ಭಾಂಗ್ರಾ. ಸುಂದರ್ ಮತ್ತು ನಿಶಿ ಅಭಿನಯದ ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಹನ್ಸರಾಜ್ ಬೆಹ್ಲ್ ಅವರ ಸಂಗೀತವಿದ್ದ ಈ ಚಿತ್ರದಲ್ಲಿ ಶಂಶಾದ್ ಬೇಗಂ ಮತ್ತು ರಫಿ ಮುಂತಾದ ಜನಪ್ರಿಯ ಗಾಯಕರು ಹಾಡಿದ ಗೀತೆಗಳು ಜನಪ್ರಿಯವಾಗಿವೆ.

೧೯೬೦ರ ದಶಕದಲ್ಲಿ ಪ್ರೇಮ್ ಚೋಪ್ರಾ, ಮದನ್ ಪುರಿ, ಕೃಷ್ಣ ಕುಮಾರಿ ಮತ್ತು ಸುಂದರ್ ಅಭಿನಯದ ಚೌಧರಿ ಕರ್ನೈಲ್ ಸಿಂಗ್(೧೯೬೦) ಚಿತ್ರದ ಮೂಲಕ ಆರಂಭವಾದ ಯಶಸ್ಸಿನ ಪಯಣ ಇಂದಿರಾ ಬಿಲ್ಲಿ, ಸುಂದರ್ ಅಭಿನಯದ ಯಮ್ಲಾ ಜಟ್ಟ್(೧೯೬೦), ಜಗದೀಶ್ ಸೇಠಿ, ಇಂದಿರಾ ಬಿಲ್ಲಿ, ಮದನ್ ಪುರಿ ಅಭಿನಯದ ಕಿಕ್ಲಿ(೧೯೬೦), ಇಂದಿರಾ ಬಿಲ್ಲಿ, ಕೃಷ್ಣ ಕುಮಾರಿ, ದಲ್ಜಿತ್ ಅಭಿನಯದ ದೋ ಲಚ್ಚಿಯಾ(೧೯೬೦), ನಿಶಿ, ಕರಣ್ ದಿವಾನ್ ಅಭಿನಯದ ಗುಡ್ಡಿ(೧೯೬೧) ಮತ್ತು ಜಾನಿ ವಾಕರ್ ಅಭಿನಯದ ವಿಲಯತಿ ಬಾಬು(೧೯೬೧) ಚಿತ್ರಗಳವರೆಗೂ ಮುಂದುವರೆಯಿತು. ಪ್ರೇಮ್ ಚೋಪ್ರಾ ಸಪ್ನಿ(೧೯೬೩) ಮತ್ತು ಏ ಧರ್ತಿ ಪಂಜಾಬಿ ದಿ(೧೯೬೩) ಚಿತ್ರಗಳ ಮೂಲಕ ಪ್ಂಜಾಬಿ ಚಿತ್ರರಸಿಕರ ಮನರಂಜಿಸಿದರು. ಇಂದಿರಾ ಬಿಲ್ಲಿ ನಾಯಕಿಯಾಗಿ ರವೀಂದರ್ ಕಪೂರ್ ಅವರೊಂದಿಗೆ ಅಭಿನಯಿಸಿದ ಸಟ್ ಸಾಲಿಯಾ(೧೯೬೪) ಮತ್ತು ದಾರಾ ಸಿಂಗ್ ಅವರೊಂದಿಗೆ ಅಭಿನಯಿಸಿದ ಜಗ್ಗ(೧೯೬೪) ಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದವು. ಈ ದಶಕದಲ್ಲಿ ಬಹಳ ದೊಡ್ಡ ಹೆಸರು ಮಾಡಿದ ಚಿತ್ರ ಬಾಲರಾಜ್ ಸಾಹ್ನಿ ಮತ್ತು ನಿಶಿ ಅಭಿನಯದ ಸಟ್ಲಜ್ ದೇ ಕಂದೆ(೧೯೬೪). ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಯಶಸ್ಸು ಗಳಿಸಿದ್ದಲ್ಲದೇ ಅತ್ತ್ಯುತ್ತಮ ಚಿತ್ರಕ್ಕಾಗಿ ಕೊಡಮಾಡುವ ರಾಷ್ಟ್ರಪ್ರಶಸ್ತಿಯನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಹನ್ಸರಾಜ್ ಬಹ್ಲ್ ಅವರ ಸಂಗೀತ ನಿರ್ದೇಶನವಿದ್ದ ಈ ಚಿತ್ರವನ್ನು ನಿರ್ದೇಶಿಸಿದವರು ಪದಮ್ ಪ್ರಕಾಶ್ ಮಹೇಶ್ವರಿ.

ಈ ಕಾಲಘಟ್ಟದಲ್ಲಿ ಪ್ರೇಕ್ಷಕರ ಮನರಂಜಿಸಿದ ಪ್ರಮುಖ ಪಂಜಾಬಿ ನಟರೆಂದರೆ ಸುಂದರ್, ರವೀಂದರ್ ಕಪೂರ್, ಮನೋಹರ್ ದೀಪಕ್. ಹಿಂದಿ ಚಿತ್ರರಂಗದ ಮದನ್ ಪುರಿ ಮತ್ತು ಪ್ರೇಮ್ ಚೋಪ್ರಾ ಕೆಲವು ಚಿತ್ರಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಜನಮನ್ನಣೆಗಳಿಸಿದ್ದಾರೆ. ೧೯೬೦ರ ದಶಕದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪ್ರಮುಖ ನಟಿಯರಾದ ನಿಶಿ ಮತ್ತು ಇಂದಿರಾ ಬಿಲ್ಲಿ ಅನೇಕ ಹಿಂದಿ ಚಿತ್ರಗಳಲ್ಲೂ ನಾಯಕಿಯಾಗಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ.

ಮಹತ್ವದ ತಿರುವು

ಪಂಜಾಬಿ ಭಾಷೆಯ ಮೊದಲ ವರ್ಣಚಿತ್ರ ನಾನಕ್ ನಾಮ್ ಜಹಾಜ್ ಹೈ(೧೯೬೯). ರಾಮ್ ಮಹೇಶ್ವರಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಥ್ವಿರಾಜ್ ಕಪೂರ್, ಸೋಮ್ ದತ್, ನಿಶಿ, ವಿಮಿ, ವೀಣಾ ಮುಂತಾದ ಜನಪ್ರಿಯ ಕಲಾವಿದರು ಅಭಿನಯಿಸಿದ್ದರು. ಸ್ವಾತಂತ್ರ್ಯೋತ್ತರ ಭಾರತದ ಅತಿ ದೊಡ್ಡ ಮಟ್ಟಿಗಿನ ಯಶಸ್ಸು ಗಳಿಸಿದ ಪಂಜಾಬಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಪಡೆದು ಇಡೀ ದೇಶವೇ ಪಂಜಾಬಿ ಚಿತ್ರರಂಗದೆಡೆದೆ ತಿರುಗು ನೋಡುವಂತೆ ಮಾಡಿತು. ಕುಂಟುತ್ತಾ ಸಾಗಿದ್ದ ಪಂಜಾಬಿ ಚಿತ್ರರಂಗದ ಚೇತರಿಕೆಗೆ ಕಾರಣವಾಯಿತು. ದೊಡ್ಡ ಸಂಖ್ಯೆಯಲ್ಲಿ ಚಿತ್ರ ನಿರ್ಮಿಸಲು ನಿರ್ಮಾಪಕರು ಮುಂದಾದರು.

೧೯೭೦ರ ದಶಕ

ನಾನಕ್ ನಾಮ್ ಜಹಾಜ್ ಹೈ ಚಿತ್ರದ ಯಶಸ್ಸು ಪಂಜಾಬಿ ಮೂಲದ ಜನಪ್ರಿಯ ಹಿಂದಿ ಕಲಾವಿದರು ಪಂಜಾಬಿ ಚಿತ್ರದೆಡೆಗೆ ಆಸಕ್ತಿ ಹೊಂದುವಂತೆ ಮಾಡಿತು. ಧರ್ಮೇಂದ್ರ ಮತ್ತು ಆಶಾ ಪಾರೇಖ್ ಅಭಿನಯದ ಕಂಕಣ್ ದೇ ಓಲೆ(೧೯೭೦), ದಾರಾ ಸಿಂಗ್ ಮತ್ತು ಬಾಲರಾಜ್ ಸಾಹ್ನಿ ಅಭಿನಯದ ನಾನಕ್ ದುಖಿಯಾ ಸಬ್ ಸಂಸಾರ್(೧೯೭೦), ಪ್ರಥ್ವಿರಾಜ್ ಕಪೂರ್ ಮತ್ತು ದಾರಾ ಸಿಂಗ್ ಅಭಿನಯದ ಮೆಲೆ ಮಿತ್ರನ್ ದೇ(೧೯೭೨), ಸುನಿಲ್ ದತ್ ಮತ್ತು ರಾಧಾ ಸಲುಜಾ ಅಭಿನಯದ ಮನ್ ಜೀತೆ ಜಗ್ ಜೀತ್(೧೯೭೩), ಧರ್ಮೇಂದ್ರ ಮತ್ತು ರಾಜೇಂದ್ರ ಕುಮಾರ್ ಅಭಿನಯದ ದೋ ಶೇರ್(೧೯೭೪), ಫಿರೋಜ್ ಖಾನ್ ಮತ್ತು ದಾರಾ ಸಿಂಗ್ ಅಭಿನಯದ ಭಗತ್ ಧನ್ನಾ ಜಟ್ಟ್(೧೯೭೪) ಮತ್ತು ರಾಧಾ ಸಲುಜಾ ಮತ್ತು ಶಮೀಂದರ್ ಸಿಂಗ್ ಅಭಿನಯದ ದುಖ್ ಭಂಜನ್ ತೇರಾ ನಾಮ್(೧೯೭೪) ಮುಂತಾದ ಚಿತ್ರಗಳು ೭೦ರ ದಶಕದ ಮೊದಲಾರ್ಧದಲ್ಲಿ ಬಿಡುಗಡೆಗೊಂಡ ಯಶಸ್ವಿ ಚಿತ್ರಗಳು.

ತೇರಿ ಮೇರಿ ಇಕ್ ಜಿಂದ್ರಿ(೧೯೭೫) ಚಿತ್ರದ ಮೂಲಕ ಧರ್ಮೇಂದ್ರ ಅವರ ಸೋದರಸಂಬಂಧಿ ವೀರೇಂದ್ರ ಅವರು ಬೆಳ್ಳಿತೆರೆಗೆ ಪರಿಚಿತರಾದರು. ಅ ನಂತರದಲ್ಲಿ ಒಂದು ದಶಕದ ಕಾಲ ಅನೇಕ ಯಶಸ್ವಿ ಪಂಜಾಬಿ ಚಿತ್ರಗಳ ಮೂಲಕ ಚಿತ್ರರಸಿಕರ ಮನರಂಜಿಸಿದ್ದಾರೆ. ದಾರಾ ಸಿಂಗ್ ಅಭಿನಯದ ಸಾವಾ ಲಾಖ್ ಸೆ ಏಕ್ ಲಡೌನ್(೧೯೭೬), ಸುನಿಲ್ ದತ್ ಮತ್ತು ಶತ್ರುಘ್ನ ಸಿನ್ಹಾ ಅಭಿನಯದ ಸತ್ ಶ್ರೀ ಅಕಾಲ್(೧೯೭೭) ಹಣಗಳಿಕೆಯಲ್ಲಿ ಭಾರಿ ಹೆಸರು ಮಾಡಿದವು. ೧೯೭೭ರಲ್ಲಿ ಬಿಡುಗಡೆಯಾದ ಜಹೀರಾ ಮುಖ್ಯ ಭೂಮಿಕೆಯಲ್ಲಿದ್ದ ಸಾಲ್ ಸೋಲ್ವಾ ಚಾಡ್ಯಾ ಚಿತ್ರದಲ್ಲಿ ಖ್ಯಾತ ಹಿಂದಿ ಚಲನಚಿತ್ರನಟಿ ರೇಖಾ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡರು. ಸಿಮಿ ಗರೆವಾಲ್ ಅಭಿನಯದ ಉಡೀಕನ್(೧೯೭೭) ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ೧೯೬೧ರಲ್ಲಿ ಜಾನಿ ವಾಕರ್ ಅಭಿನಯದಲ್ಲಿ ತೆರೆಗೆ ಬಂದ ವಿಲಯತಿ ಬಾಬು ೧೯೭೮ರಲ್ಲಿ ಅದೇ ಹೆಸರಿನಲ್ಲಿ ಪುನರ್ ನಿರ್ಮಾಣಗೊಂಡು ಯಶಸ್ವಿಯಾಯಿತು. ಮೆಹರ್ ಮಿತ್ತಲ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಪ್ರಖ್ಯಾತ ಹಿಂದಿ ಚಿತ್ರನಟ ಅಮಿತಾಭ್ ಬಚ್ಚನ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ ಚಿತ್ರರಂಗದ ಮೇರು ನಟ ರಾಜೇಶ್ ಖನ್ನ ಅವರು ನಾಯಕರಾಗಿ ಅಭಿನಯಿಸಿದ ಟಿಲ್ ಟಿಲ್ ದ ಲೇಖ(೧೯೭೮) ಚಿತ್ರ ೫೦ ವಾರಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ಸುವರ್ಣ ಮಹೋತ್ಸವ ಆಚರಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇನ್ನೋರ್ವ ಪ್ರಸಿದ್ಧ ಹಿಂದಿ ನಟ ಮನೋಜ್ ಕುಮಾರ್ ಜಟ್ಟ್ ಪಂಜಾಬ್(೧೯೭೮) ಎಂಬ ಚಿತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ೧೯೭೨ರಲ್ಲಿ ತೆರೆಗೆ ಬಂದ ರೂಪ್ ಶೌಕೀನ ದಾ ಚಿತ್ರದ ಮೂಲಕ ಸತೀಶ್ ಕೌಲ್ ಮತ್ತು ದಲ್ಜಿತ್ ಕೌರ್ ಎಂಬ ಹೊಸ ತಲೆಮಾರಿನ ತಾರೆಯರ ಉಗಮವಾಯಿತು.

ಪ್ರಖ್ಯಾತ ಹಿಂದಿ ನಟರಾದ ರಾಜೇಶ್ ಖನ್ನಾ, ಧರ್ಮೇಂದ್ರ, ಸುನಿಲ್ ದತ್, ದಾರಾ ಸಿಂಗ್ ಮತ್ತು ಶತ್ರುಘ್ನ ಸಿನ್ಹಾ ಮುಂತಾದವರು ಪಂಜಾಬಿ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ೧೯೭೦ರ ದಶಕದಲ್ಲಿ ವೀರೇಂದ್ರ, ಧೀರಜ್ ಕುಮಾರ್ ಮತ್ತು ಮೆಹರ್ ಮಿತ್ತಲ್ ಮುಂತಾದ ಪಂಜಾಬಿ ನಟರು ಜನಪ್ರಿಯರಾಗಿದ್ದರು. ಹಿಂದಿಯ ಜನಪ್ರಿಯ ನಟಿಯರಾದ ಆಶಾ ಪಾರೇಖ್, ಸಿಮಿ ಗರೆವಾಲ್, ರೀನಾ ರಾಯ್ ಮುಂತಾದವರು ಬೆರಳೆಣಿಕೆಯ ಪಂಜಾಬಿ ಚಿತ್ರಗಳಲ್ಲಿ ನಾಯಕಿಯರಾಗಿ ಮಿಂಚಿದ್ದರು. ಯೋಗಿತಾ ಬಾಲಿ, ಜಹೀರಾ, ಅರುಣಾ ಇರಾನಿ, ಮೀನಾ ರಾಯ್ ಮತ್ತು ರಾಧಾ ಸಲುಜಾ ೭೦ರ ದಶಕದ ಬೇಡಿಕೆಯ ನಟಿಯರಾಗಿದ್ದರು.

೧೯೮೦ರ ದಶಕ

೧೯೮೧ರಲ್ಲಿ ಬಿಡುಗಡೆಯಾದ ರಾಜ್ ಬಬ್ಬರ್, ರಮಾ ವಿಜ್, ಅಮರೀಶ್ ಪುರಿ ಮತ್ತು ಓಂ ಪುರಿ ಅಭಿನಯದ ಚನ್ನ್ ಪರ್ದೇಸಿ ವಾಣಿಜ್ಯಿಕವಾಗಿ ಯಶಸ್ವಿಯಾದುದಲ್ಲದೇ ಅತ್ತ್ಯುತ್ತಮ ಪಂಜಾಬಿ ಚಿತ್ರ ರಾಷ್ಟ್ರಪ್ರಶಸ್ತಿಗೆ ಭಾಜನವಾಯಿತು. ಜನಪ್ರಿಯ ಹಿಂದಿ ನಟ ಸಂಜೀವ್ ಕುಮಾರ್ ಫೌಜಿ ಚಾಚಾ(೧೯೮೦) ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೇಳೆದರು. ಜಟ್ಟಿ ಎಂಬ ಹೆಸರಿನಲ್ಲಿ ಪುನರ್ನಿರ್ಮಾಣಗೊಂಡ ಭಾಂಗ್ರಾ(೧೯೫೯) ಚಿತ್ರ ಮತ್ತೆ ಯಶಸ್ವಿಯಾಯಿತು. ಜನಪ್ರಿಯ ನಟ ವೀರೇಂದ್ರ ಅಭಿನಯದ ಬಲ್ಭೀರೊ ಭಾಬಿ(೧೯೮೧), ಯಾರಿ ಜಟ್ಟಿ ದೀ(೧೯೮೪), ಸರಪಂಚ್(೧೯೮೫), ವೈರಿ(೧೯೮೫), ಪಟೋಲಾ(೧೯೮೭) ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದವು. ೧೯೮೫ರಲ್ಲಿ ಬಿಡುಗಡೆಗೊಂಡ ಭಕ್ತಿಪ್ರಧಾನ ಚಿತ್ರ ಉಚಾ ದರ್ ಬಬೆ ನಾನಕ್ ದಾ ಗಾಯಕ ಮತ್ತು ನಟ ಗುರ್ದಾಸ್ ಮನ್ ಅವರ ತಾರಾಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿತು. ಗುರ್ದಾಸ್ ಅವರು ರಾಜ್ ಬಬ್ಬರ್ ಮತ್ತು ಓಂ ಪುರಿಯವರೊಂದಿಗೆ ಅಭಿನಯಿಸಿದ ಲೋಂಗ ಯಾ ಲಿಷ್ಖಾರ್(೧೯೮೬) ವಾಣಿಜ್ಯಿಕ ಯಶಸ್ಸು ಗಳಿಸಿತು. ಜಟ್ಟ್ ತೇ ಜಮೀನ್(೧೯೮೮) ಚಿತ್ರದ ಚಿತ್ರೀಕರಣದ ಸಂಧರ್ಭದಲ್ಲಿ ಜನಪ್ರಿಯ ನಟ ವೀರೇಂದ್ರ ಹತ್ಯೆಗೊಳಗಾದದ್ದು ಪಂಜಾಬಿ ಚಲನಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿತು. ಇದರಿಂದ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಯೋಗರಾಜ್ ಸಿಂಗ್ ಮತ್ತು ಗುಗ್ಗು ಗಿಲ್ ನಾಯಕ ನಟರಾಗಿ ಭಡ್ತಿ ಪಡೆಯುವಂತಾಯಿತು.

ರಾಜ್ ಬಬ್ಬರ್' ಮತ್ತು ದೀಪ್ತಿ ನೇವಲ್ ಅಭಿನಯದ ಮಾರ್ಹಿ ದಾ ದೀವ(೧೯೮೯) ವಿಮರ್ಶಕರಿಂದ ಹೊಗಳಿಕೆಗೆ ಪಾತ್ರವಾಯಿತು.

ರಾಜ್ ಬಬ್ಬರ್, ವೀರೇಂದ್ರ, ಸತೀಶ್ ಕೌಲ್, ರಾಜ಼ ಮುರಾದ್, ಗುರ್ದಾಸ್ ಮನ್ ಮುಂತಾದ ನಟರು ಬಹಳ ಬೇಡಿಕೆಯಲ್ಲಿದ್ದ ೮೦ರ ದಶಕದಲ್ಲಿ ದಲ್ಜಿತ್ ಕೌರ್, ಪ್ರೀತಿ ಸರ್ಪು, ಭಾವನಾ ಭಟ್ ಮತ್ತು ಅರ್ಪಣಾ ಚೌಧರಿ ನಾಯಕಿಯರಾಗಿ ಉತ್ತುಂಗದಲ್ಲಿದ್ದರು.

೧೯೯೦ರ ದಶಕ

ಜನಪ್ರಿಯ ಅಭಿನೇತ್ರಿ ಪ್ರೀತಿ ಸರ್ಪು ತಾವೇ ನಿರ್ದೇಶಿಸಿ ಧರ್ಮೇಂದ್ರ, ರಾಜ್ ಬಬ್ಬರ್, ಗುಗ್ಗು ಗಿಲ್ ಮತ್ತು ಯೋಗರಾಜ್ ಸಿಂಗ್ ಅವರೊಂದಿಗೆ ಅಭಿನಯಿಸಿದ ಕುರ್ಬಾನಿ ಜಟ್ಟ್ ದಿ(೧೯೯೦) ವಾಣಿಜ್ಯಿಕ ಯಶಸ್ಸು ಗಳಿಸಿತು. ವೀರೇಂದ್ರ ಅಭಿನಯದ ಕೊನೆಯ ಚಿತ್ರ ದುಷ್ಮನಿ ದಿ ಅಗ್(೧೯೯೦), ದಲ್ಜಿತ್ ಕೌರ್ ಮತ್ತು ಗುಗ್ಗು ಗಿಲ್ ಅಭಿನಯದ ಆಂಖ್ ಜಟ್ಟನ್ ದಿ(೧೯೯೦) ಯಶಸ್ವಿಯಾದರೆ ಗುಗ್ಗು ಗಿಲ್ ಅಭಿನಯದ ಬದ್ಲಾ ಜಟ್ಟಿ ದಾ(೧೯೯೧) ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತು. ಉಡೀಕನ್ ಸೌ ದಿಯಾ(೧೯೯೦) ಮತ್ತು ವೈಸಾಕಿ(೧೯೯೧) ವಿಮರ್ಶಕರಿಂದ ಮೆಚ್ಚುಗೆ ಪಡೆದರೂ ವ್ಯಾಪಾರಿ ನೆಲೆಯಲ್ಲಿ ಸೋತವು. ಯೋಗರಾಜ್ ಸಿಂಗ್ ಮತ್ತು ನೀನಾ ಸಂಧು ಅಭಿನಯದ ಜಟ್ಟ್ ಸಚ್ಚಾ ಸಿಂಗ್ ಸೂರ್ಮ್(೧೯೯೩), ಗುಗ್ಗು ಗಿಲ್ ಅಭಿನಯದ ಮಿರ್ಜಾ ಸಾಹಿಬಾ(೧೯೯೩) ಸಾಧಾರಣ ಯಶಸ್ಸು ಗಳಿಸಿದರೆ ಪ್ರೀತಿ ಸರ್ಪು ಅವರ ಮೆಹಂದಿ ಶಗ್ನನ್ ದಿ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು. ಗುರ್ದಾಸ್ ಮನ್ ಅವರ ಕಛೇರಿ(೧೯೯೪) ವಾಣಿಜ್ಯಿಕ ಯಶಸ್ಸಿನೊಂದಿಗೆ ರಾಷ್ಟ್ರಪ್ರಶಸ್ತಿ ಪಡೆಯಿತು. ಕಿಮಿ ವರ್ಮಾ ಅಭಿನಯದ ನಸೀಬು(೧೯೯೫) ವಿಮರ್ಶಕರಿಂದ ಹೊಗಳಿಸಿಕೊಂಡರೂ ವಾಣಿಜ್ಯಿಕವಾಗಿ ಗೆಲ್ಲಲಿಲ್ಲ. ಗುಗ್ಗು ಗಿಲ್, ಗುರ್ದಾಸ್ ಮನ್, ಪ್ರೀತಿ ಸರ್ಪು ಮತ್ತು ದಾರಾ ಸಿಂಗ್ ಅಭಿನಯದ ಪ್ರತಿಗ್ಯಾ(೧೯೯೫) ಯಶಸ್ವಿಯಾಯಿತು. ೧೯೯೦ರ ದಶಕದ ಕೊನೆಯಾರ್ಧದಲ್ಲಿ ಬಂದ ಬಹುತೇಕ ಚಿತ್ರಗಳು ಹೀನಾಯ ಸೋಲು ಅನುಭವಿಸಿದವು. ಸಾಲು ಸಾಲು ಚಿತ್ರಗಳ ಸೋಲಿನಿಂದ ಚಿತ್ರರಂಗ ಅವನತಿಯತ್ತ ಸಾಗಿತ್ತು. ಈ ಸಮಯದಲ್ಲಿ ಬಂದ ಬೆರಳೆಣಿಕೆಯ ಯಶಸ್ವಿ ಚಿತ್ರಗಳೆಂದರೆ ಮಹೋಲ್ ಠೀಕ್ ಹೈ(೧೯೯೮), ಶಹೀದ್ ಎ ಮೊಹಬ್ಬತ್ ಬೂಟಾ ಸಿಂಗ್(೧೯೯೯) ಮತ್ತು ಶಹೀದ್ ಉದ್ದಮ್ ಸಿಂಗ್(೧೯೯೯).

೧೯೯೦ರ ದಶಕದ ಜನಪ್ರಿಯ ನಟ ನಟಿಯರೆಂದರೆ ಯೋಗರಾಜ್ ಸಿಂಗ್, ಗುಗ್ಗು ಗಿಲ್, ನೀನಾ ಸಂಧು ಮತ್ತು ಉಪಾಸನಾ ಸಿಂಗ್.

೨೦೦೦ ಮತ್ತು ೨೦೧೦ರ ದಶಕಗಳು

೨೦೦೦ದಲ್ಲಿ ತೆರೆಗೆ ಬಂದ ಉಪಾಸನಾ ಸಿಂಗ್ ಅಭಿನಯದ ದರ್ದ್ ಪರ್ದೇಸ್ ದೆ ಚಿತ್ರ ಪಂಜಾಬಿನಲ್ಲಿ ಯಶಸ್ವಿಯಾಗದಿದ್ದರೂ ವಿದೇಶದಲ್ಲಿ ಭಾರಿ ಯಶಸ್ಸು ಗಳಿಸಿತು. ಗಾಯಕ ಮತ್ತು ನಟ ಹರ್ಭಜನ್ ಮನ್ ಅಭಿನಯದ ಮನಮೋಹನ್ ಸಿಂಗ್ ನಿರ್ದೇಶನದ ಅಪಾರ ಬಂಡವಾಳ ಹೂಡಿಕೆಯಿದ್ದ ಜೀ ಆಯನ್ ನು(೨೦೦೨) ಚಿತ್ರ ಯಶಸ್ವಿಯಾಗುವುದರೊಂದಿಗೆ ತನ್ನ ಅಸ್ಥಿತ್ವ ಕಳೆದುಕೊಳ್ಳುವ ಭಯದಲ್ಲಿದ್ದ ಪಂಜಾಬಿ ಚಿತ್ರರಂಗಕ್ಕೆ ಮರುಹುಟ್ಟು ಪಡೆದುಕೊಂಡಿತು. ೨೦೦೦ನೇ ದಶಕದ ಮಧ್ಯದಲ್ಲಿ ಪಂಜಾಬಿ ಚಿತ್ರರಂಗ ವಿದೇಶಿ ಮಾರುಕಟ್ಟೆಯಲ್ಲೂ ನೆಲೆಕಂಡುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಪಂಜಾಬಿ ಭಾಷಿಕರು ಅನೇಕ ಸಂಖ್ಯೆಯಲ್ಲಿದ್ದ ಕೆನಡಾದಲ್ಲಿ ಪಂಜಾಬಿ ಚಿತ್ರಗಳು ಭಾರಿ ಯಶಸ್ಸು ಗಳಿಸಲಾರಂಭಿಸಿದವು. ದೇಶ್ ಹೋ ಯಾ ಪರ್ದೇಸ್(೨೦೦೫), ದಿಲ್ ಅಪನಾ ಪಂಜಾಬಿ(೨೦೦೬), ಏಕ್ ಜಿಂದ್ ಏಕ್ ಜಾನ್(೨೦೦೬), ಮನ್ನತ್(೨೦೦೬), ರುಸ್ತುಂ ಎ ಹಿಂದ್(೨೦೦೭) ಮತ್ತು ಮಿಟ್ಟಿ ವಜನ್ ಮರ್ದಿ(೨೦೦೭) ಈ ದಶಕದಲ್ಲಿ ತೆರೆಕಂಡ ಗಮನಾರ್ಹ ಯಶಸ್ವಿ ಚಿತ್ರಗಳು. ಜಿಮ್ಮಿ ಶೇರ್ಗಿಲ್ ಅಭಿನಯದ ತೇರಾ ಮೇರಾ ಕಿ ರಿಶ್ತಾ(೨೦೦೯) ಮತ್ತು ಮುಂಡೆ ಯು.ಕೆ. ದೆ(೨೦೦೯) ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದವು. ಈ ಪೈಕಿ ಮುಂಡೆ ಯು.ಕೆ. ದೆ ಹಣಗಳಿಕೆಯಲ್ಲಿ ಹಿಂದಿನ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿತು.

ಜಿಮ್ಮಿ ಶೇರ್ಗಿಲ್ ಮತ್ತು ಗಿಪ್ಪಿ ಗ್ರೇವಾಲ್ ಅಭಿನಯದ ಮೇಲ್ ಕರಾದೆ ರಬ್ಬಾ(೨೦೧೦) ೧೧೫ ಮಿಲಿಯನ್ ಲಾಭ ಗಳಿಸುವ ಮೂಲಕ ಪಂಜಾಬಿ ಚಲನಚಿತ್ರ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತು. ೨೦೧೧ರಲ್ಲಿ ತೆರೆಗೆ ಬಂದ ಗಿಪ್ಪಿ ಗ್ರೇವಾಲ್, ದಿಲ್ಜಿತ್ ದೋಸಾಂಜ್ ಮತ್ತು ನೀರೂ ಬಾಜ್ವ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಜಿಸ್ನೆ ಮೇರಾ ದಿಲ್ ಲೂಟೆಯಾ ಗಲ್ಲಾಪೆಟ್ಟಿಗೆಯಲ್ಲಿ ೧೨೫ ಮಿಲಿಯನ್ ಸಂಪಾದಿಸುವ ಮೂಲಕ ಪಂಜಾಬಿ ಚಿತ್ರರಂಗವನ್ನು ಹೊಸ ಹಂತಕ್ಕೆ ಕೊಂಡೊಯ್ದಿತು. ೨೦೧೨ರಲ್ಲಿ ತೆರೆಗೆ ಬಂದ ದಿಲ್ಜಿತ್ ದೋಸಾಂಜ್ ಮತ್ತು ನೀರೂ ಬಾಜ್ವ ಅಭಿನಯದ ಜಟ್ಟ್ ಅಂಡ್ ಜ್ಯೂಲಿಯಟ್ ಭಾರತದಲ್ಲಲ್ಲದೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಭೂತಪೂರ್ವ ಯಶಸ್ಸು ಗಳಿಸಿತು. ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ದಿಲ್ಜಿತ್ ದೋಸಾಂಜ್ ಮತ್ತು ನೀರೂ ಬಾಜ್ವ ಅವರ ತಾರಾಮೌಲ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದಿತು. ದಿಲ್ಜಿತ್ ದೋಸಾಂಜ್ ೨೦೧೦ನೇ ದಶಕದ ಅತ್ಯಂತ ಯಶಸ್ವಿ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹನಿಸಿಂಗ್ ಮತ್ತು ಗ್ರಿಪ್ಪಿ ಗ್ರೇವಾಲ್ ಅಭಿನಯದ ಮಿರ್ಜಾ ದಿ ಅನ್ಟೋಲ್ಡ್ ಸ್ಟೋರಿ(೨೦೧೨) ಮತ್ತು ಕ್ಯಾರಿ ಆನ್ ದಿ ಜಟ್ಟ(೨೦೧೨) ಪ್ರಮುಖ ಯಶಸ್ವಿ ವಾಣಿಜ್ಯಿಕ ಚಿತ್ರಗಳು. ೨೦೧೩ರಲ್ಲಿ ತೆರೆಕಂಡ ದಿಲ್ಜಿತ್ ದೋಸಾಂಜ್ ಮತ್ತು ನೀರೂ ಬಾಜ್ವ ಜಟ್ಟ್ ಅಂಡ್ ಜ್ಯೂಲಿಯಟ್ ೨ ಚಿತ್ರ ಹಣಗಳಿಕೆಯಲ್ಲಿ ಮೊದಲ ಭಾಗವನ್ನು ಹಿಂದಿಕ್ಕಿ ಅದ್ಭುತ ಯಶಸ್ಸು ಗಳಿಸಿತು. ಗಿಪ್ಪಿ ಗ್ರೇವಾಲ್ ಅಭಿನಯದ ಭಾಜಿ ಇನ್ ಪ್ರಾಬ್ಲಂ, ದಿಲ್ಜಿತ್ ದೋಸಾಂಜ್ ಅಭಿನಯದ ಸಾದಿ ಲವ್ ಸ್ಟೋರಿ ಮತ್ತು ರೋಷನ್ ಪ್ರಿನ್ಸ್ ಅಭಿನಯದ ಫರ್ ಮಾಮಿಯಾ ಗಡಬಡ್ ಗಡಬಡ್ ೨೦೧೩ರ ಇನ್ನಿತರ ಗಮನಾರ್ಹ ಚಿತ್ರಗಳು. ೨೦೧೪ರಲ್ಲಿ ಬಿಡುಗಡೆಯಾದ ೪೨ ಚಿತ್ರಗಳ ಪೈಕಿ ೮೦ ಪ್ರತಿಶತ ಚಿತ್ರಗಳು ಹಾಸ್ಯಪ್ರಧಾನ ಚಿತ್ರಗಳಾಗಿವೆ. ೨೦೧೪ರಲ್ಲಿ ತೆರೆಗೆ ಬಂದ ಐತಿಹಾಸಿಕ ಚಿತ್ರ ಚಾರ್ ಸಹಿಬ್ಜಾದೆ ಪ್ಂಜಾಬಿ ಭಾಷೆಯ ಮೊದಲ 3D ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತಲ್ಲದೇ ಗಲ್ಲಾಪೆಟ್ಟಿಗೆಯಲ್ಲಿ ೭೦ ಕೋಟಿ ಗಳಿಸುವ ಮೂಲಕ ಭಾರಿ ಸುದ್ದಿ ಮಾಡಿತು. ೨೦೧೪ರ ಇನ್ನಿತರ ಯಶಸ್ವಿ ಚಿತ್ರಗಳೆಂದರೆ ಗಿಪ್ಪಿ ಗ್ರೇವಾಲ್ ಅಭಿನಯದ ಜಟ್ಟ್ ಜೇಮ್ಸ್ ಬಾಂಡ್, ಧರ್ಮೇಂದ್ರ ಮತ್ತು ಪೂನಮ್ ಧಿಲ್ಲೋನ್ ಅಭಿನಯದ ಡಬಲ್ ದಿ ಟ್ರಬಲ್, ದಿಲ್ಜಿತ್ ದೋಸಾಂಜ್ ಅವರ ಪಂಜಾಬ್ ೧೯೮೪,ಡಿಸ್ಕೋ ಸಿಂಗ್ ಮತ್ತು ಮಿಸ್ಟರ್ ಅಂಡ್ ಮಿಸೆಸ್ ೪೨೦. ಸಂಪೂರ್ಣವಾಗಿ ಕೆನಡಾದಲ್ಲಿ ತಯಾರಿಸಿದ ಪ್ರಥಮ ಪಂಜಾಬಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವರ್ಕ್ ವೆದರ್ ವೈಫ್(೨೦೧೪) ಚಿತ್ರವು ೮೭ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕೆನಡಾವನ್ನು ಪ್ರತಿನಿಧಿಸಿತ್ತು.

ದಿಲ್ಜಿತ್ ದೋಸಾಂಜ್ ಮತ್ತು ನೀರೂ ಬಾಜ್ವ ಅಭಿನಯದ ಸರ್ದಾರ್ಜಿ ೨೦೧೫ರಲ್ಲಿ ತೆರೆಕಂಡ ಅತ್ಯಂತ ಯಶಸ್ವಿ ಚಿತ್ರವೆನಿಸಿಕೊಂಡಿತು. ಅಂಗ್ರೇಜ್, ದಿಲ್ದಾರಿಯಾ, ಹೀರೊ ನಾಮ್ ಯಾದ್ ರಖಿ ಮತ್ತು ಮುಂಡೆ ಕಮಾಲ್ ದೆ ೨೦೧೫ರ ಪ್ರಮುಖ ಚಿತ್ರಗಳು. ೨೦೧೬ರಲ್ಲಿ ಬಿಡುಗಡೆಗೊಂಡ ಅಂಬರ್ಸಾರಿಯಾ, ಲವ್ ಪಂಜಾಬ್ ಮತ್ತು ಅರ್ದಾಸ್ ಚಿತ್ರಗಳು ಭಾರತದಲ್ಲಲ್ಲದೇ ವಿದೇಶದಲ್ಲೂ ಯಶಸ್ಸು ಗಳಿಸಿವೆ.

೨೧ನೆ ಶತಮಾನದ ಆರಂಭದ ಪಂಜಾಬಿ ಚಿತ್ರರಂಗದ ಜನಪ್ರಿಯ ನಟರೆಂದರೆ ಜಿಮ್ಮಿ ಶೇರ್ಗಿಲ್, ಗಿಪ್ಪಿ ಗ್ರೇವಾಲ್, ಹರ್ಭಜನ್ ಮನ್ ಮತ್ತು ದಿಲ್ಜಿತ್ ದೋಸಾಂಜ್. ಜನಪ್ರಿಯ ನಟಿಯರೆಂದರೆ ನೀರೂ ಬಾಜ್ವ, ಸುರ್ವೀನ್ ಚಾವ್ಲಾ ಮತ್ತು ಕುಲ್ರಾಜ್ ರಾಂಧವ.

ಸಮಾಂತರ ಚಿತ್ರಗಳು

೧೯೮೯ರಲ್ಲಿ ತಯಾರಾದ ಆರ್ಥಿಕ ಅಸಮಾನತೆ ಮತ್ತು ಪಂಜಾಬಿನ ದಲಿತ ಕಾರ್ಮಿಕರ ಸಾಮಾಜಿಕ ಸ್ಥಿತಿಯನ್ನು ಎತ್ತಿ ತೋರಿಸಿದ್ದ ಮಾರಿ ದಾ ದೀವಾ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗಳಿಸಿತ್ತು. ದಲಿತರ ಜೀವನದ ಕುರಿತಾಗಿದ್ದ ಅನ್ಹೆ ಗೋರೆ ದಾ ದನ್(೨೦೧೧) ರಾಷ್ಟ್ರಪ್ರಶಸ್ತಿಯನ್ನು ಗಳಿಸಿದ್ದಲ್ಲದೇ ಅನೇಕ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿದ ಮೊದಲ ಪಂಜಾಬಿ ಚಿತ್ರವೆನಿಸಿಕೊಂಡಿತು. ೬೮ನೆಯ ವೆನಿನ್ಸ್ ಚಲನಚಿತ್ರೋತ್ಸವದಲ್ಲಿ ಆಯ್ಕೆ ಮಂಡಳಿಯ ವಿಶೇಷ ಪ್ರಶಸ್ತಿ ಗಳಿಸಿದ ಚಿತ್ರ ಅಬುದಾಭಿಯ ಚಿತ್ರೋತ್ಸವದಲ್ಲಿ ೫೦,೦೦೦ ರೂ ನಗದು ಬಹುಮಾನ ಪಡೆಯಿತು. ೪೩ನೇ ಅಂತರಾಷ್ಟ್ರೀಯ ಭಾರತೀಯ ಚಿತ್ರೋತ್ಸವದಲ್ಲಿ ಗೋಲ್ಡನ್ ಪಿಕಾಕ್ ಪ್ರಶಸ್ತಿಯನ್ನು ಪಡೆದ ಈ ಚಿತ್ರ ೫೫ನೇ ಬಿ.ಎಫ್.ಐ. ಲಂಡನ್ ಚಿತ್ರೋತ್ಸವ, ೪೯ನೇ ನ್ಯೂಯಾರ್ಕ್ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಹೆಸರು ಮಾಡಿದೆ. ೨೦೦೩ರಲ್ಲಿ ತೆರೆಗೆ ಬಂದ ಕಿರಣ್ ಖೇರ್ ಅಭಿನಯದ ಕಾಮೋಶಿ ಪಾನಿ ಕೂಡ ಗಮನ ಸೆಳೆದ ಸಮಾಂತರ ಅಲೆಯ ಪಂಜಾಬಿ ಚಿತ್ರ.

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು

  • ಚೌಧರಿ ಕರ್ನೈಲ್ ಸಿಂಗ್(೧೯೬೦)
  • ಸಟ್ಲಜ್ ದೇ ಕಂದೆ(೧೯೬೪)
  • ಸಸ್ಸಿ ಪುನ್ನು(೧೯೬೪)
  • ಜಗ್ಗ(೧೯೬೪)
  • ನಾನಕ್ ನಾಮ್ ಜಹಾಜ್ ಹೈ(೧೯೬೯)
  • ಚನ್ನ್ ಪರ್ದೇಸಿ(೧೯೮೦)
  • ಮಾರಿ ದಾ ದೀವಾ(೧೯೮೯)
  • ಶಹೀದ್ ಎ ಮೊಹಬ್ಬತ್ ಬೂಟಾ ಸಿಂಗ್(೧೯೯೯)
  • ಶಹೀದ್ ಉದ್ದಮ್ ಸಿಂಗ್(೨೦೦೦)
  • ದೇಶ್ ಹೋ ಯಾ ಪರ್ದೇಸ್(೨೦೦೫)
  • ವಾರಿಸ್ ಷಾ:ಇಷ್ಕ್ ದಾ ವಾರಿಸ್(೨೦೦೬)
  • ಅನ್ಹೆ ಗೋರೆ ದಾ ದನ್(೨೦೧೧)
  • ಪಂಜಾಬ್ ೧೯೮೪(೨೦೧೪)

ಚಲನಚಿತ್ರ ತರಬೇತಿ ಸಂಸ್ಥೆಗಳು

  • ಮೊಹಾಲಿ ಚಲನಚಿತ್ರ ತರಬೇತಿ ಸಂಸ್ಥೆ(ನಿರ್ಮಾಣದ ಹಂತದಲ್ಲಿದೆ)

ಉಲ್ಲೇಖಗಳು

Tags:

ಪಂಜಾಬಿ ಚಿತ್ರರಂಗ ಪ್ರಥಮ ಚಿತ್ರಪಂಜಾಬಿ ಚಿತ್ರರಂಗ ಪಂಜಾಬ್ ವಿಭಜನೆಯ ಪೂರ್ವದ ಚಿತ್ರರಂಗಪಂಜಾಬಿ ಚಿತ್ರರಂಗ ಪಂಜಾಬ್ ವಿಭಜನೆಯ ನಂತರದ ಚಿತ್ರರಂಗಪಂಜಾಬಿ ಚಿತ್ರರಂಗ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳುಪಂಜಾಬಿ ಚಿತ್ರರಂಗ ಚಲನಚಿತ್ರ ತರಬೇತಿ ಸಂಸ್ಥೆಗಳುಪಂಜಾಬಿ ಚಿತ್ರರಂಗ ಉಲ್ಲೇಖಗಳುಪಂಜಾಬಿ ಚಿತ್ರರಂಗಪಾಕಿಸ್ತಾನಭಾರತರಾಜ್ಯ

🔥 Trending searches on Wiki ಕನ್ನಡ:

ಕರ್ಮಜನ್ನಭಾರತೀಯ ಸ್ಟೇಟ್ ಬ್ಯಾಂಕ್ಹೊಯ್ಸಳ ವಾಸ್ತುಶಿಲ್ಪಭಾರತದ ಇತಿಹಾಸಕರಗ (ಹಬ್ಬ)ದ್ರೌಪದಿ ಮುರ್ಮುಸಿದ್ದಲಿಂಗಯ್ಯ (ಕವಿ)ಭತ್ತಕಾವೇರಿ ನದಿಕರ್ನಾಟಕದ ಮುಖ್ಯಮಂತ್ರಿಗಳುಆಮ್ಲಗಳು ಮತ್ತು ಪ್ರತ್ಯಾಮ್ಲಗಳುನಿರುದ್ಯೋಗಮತದಾನ ಯಂತ್ರಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಕ್ಬರ್ಜೀವಕೋಶಇತಿಹಾಸರವೀಂದ್ರನಾಥ ಠಾಗೋರ್ಗುಡಿಸಲು ಕೈಗಾರಿಕೆಗಳುಬುಧಮಂಕುತಿಮ್ಮನ ಕಗ್ಗಕರ್ನಾಟಕ ಲೋಕಸೇವಾ ಆಯೋಗತ್ರಿವೇಣಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿರೂಪಾಕ್ಷ ದೇವಾಲಯಹೆಚ್.ಡಿ.ಕುಮಾರಸ್ವಾಮಿರಾಹುಲ್ ಗಾಂಧಿತತ್ಪುರುಷ ಸಮಾಸಮಂಜುಳಬಾದಾಮಿ ಶಾಸನಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಜೋಗಿ (ಚಲನಚಿತ್ರ)ಪರೀಕ್ಷೆಡಾ ಬ್ರೋದೇವತಾರ್ಚನ ವಿಧಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದ ಸಂಸತ್ತುಕಲ್ಪನಾಪಿತ್ತಕೋಶವೃದ್ಧಿ ಸಂಧಿಆರತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಓಂ (ಚಲನಚಿತ್ರ)ಬಹುವ್ರೀಹಿ ಸಮಾಸಅರವಿಂದ ಘೋಷ್ರೋಮನ್ ಸಾಮ್ರಾಜ್ಯಅರಬ್ಬೀ ಸಾಹಿತ್ಯಬಿ. ಶ್ರೀರಾಮುಲುಸುಧಾ ಮೂರ್ತಿರಸ(ಕಾವ್ಯಮೀಮಾಂಸೆ)ಶ್ರೀಕೃಷ್ಣದೇವರಾಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಉದಯವಾಣಿಊಟಅಶೋಕನ ಶಾಸನಗಳುಕನ್ನಡ ಸಾಹಿತ್ಯ ಸಮ್ಮೇಳನಇನ್ಸ್ಟಾಗ್ರಾಮ್ಕಾಂತಾರ (ಚಲನಚಿತ್ರ)ಭಾರತದ ರಾಷ್ಟ್ರಗೀತೆಡೊಳ್ಳು ಕುಣಿತಸೂಫಿಪಂಥಕೇಶಿರಾಜಯಕ್ಷಗಾನಸಿದ್ದಪ್ಪ ಕಂಬಳಿಸಜ್ಜೆ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಕರ್ನಾಟಕದಲ್ಲಿ ಪಂಚಾಯತ್ ರಾಜ್ಶ್ಚುತ್ವ ಸಂಧಿಅಂತರಜಾಲಡ್ರಾಮಾ (ಚಲನಚಿತ್ರ)ಯು.ಆರ್.ಅನಂತಮೂರ್ತಿಅನುರಾಗ ಅರಳಿತು (ಚಲನಚಿತ್ರ)ಕ್ಯಾನ್ಸರ್ಗುರುರಾಜ ಕರಜಗಿಚನ್ನಬಸವೇಶ್ವರಪಠ್ಯಪುಸ್ತಕ🡆 More