ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.ಯವರ ಪದ್ಯ ಪುಸ್ತಕ.

ಇದು ಕನ್ನಡದ ಭಗವದ್ಗೀತೆ ಎಂದೂ ಕೆಲವರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಡಿ.ವಿ.ಜಿ.ಯವರು ಜೀವನದ ವಿಶಿಷ್ಟ ಆಯಾಮಗಳನ್ನು,ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. ಇದನ್ನು ಕನ್ನಡಿಗರ ಭಗವದ್ಗೀತೆ ಸಹ ಎನ್ನಬಹುದು, ಆದರೆ ಡಿ.ವಿ.ಜಿ.ಯವರಿಗೆ ಇದರ ರಚನೆಗಾಗಿಯಾಗಲಿ, ಈ ಪುಸ್ತಕಕ್ಕಾಗಲಿ ಅವರ ಜೀವಿತ ಕಾಲದಲ್ಲಿ ತಕ್ಕ ಪ್ರಚಾರ ಹಾಗೂ ಗೌರವ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯೆಂದು ಸಾಹಿತ್ಯಾಸಕ್ತರು ಪ್ರತಿಪಾದಿಸುತ್ತಾರೆ. ಈ ಪುಸ್ತಕದ ಉಲ್ಲೇಖಗಳನ್ನು ಕನ್ನಡಿಗರ ಉಪನ್ಯಾಸಗಳಲ್ಲಿ ಹಾಗೂ ಪುರಾಣದ ಚರ್ಚೆಗಳಲ್ಲಿ ಧೀಮಂತ ಜನರು ಉಪಯೋಗಿಸುತ್ತಾರೆ.ಈ ಪುಸ್ತಕವು ಇಂಗ್ಲಿಷ್, ಫ್ರೆಂಚ್ ಹಾಗೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿದೆ.

ಮಂಕುತಿಮ್ಮನ ಕಗ್ಗ
ಲೇಖಕರುಡಿ.ವಿ.ಗುಂಡಪ್ಪ
ಮೂಲ ಹೆಸರುಮಂಕುತಿಮ್ಮನ ಕಗ್ಗ ಭಾಗ ೧
ದೇಶಭಾರತ
ಭಾಷೆಕನ್ನಡ
ಸರಣಿಮಂಕುತಿಮ್ಮನ ಕಗ್ಗ
ಪ್ರಕಾಶಕರುಕಾವ್ಯಾಲಯ, ಮೈಸೂರು
ಮಾಧ್ಯಮ ಪ್ರಕಾರಪೇಪರ್ ಬ್ಯಾಕ್
ಪುಟಗಳು೨೭೯

ಪದ್ಯ ಶೈಲಿ

ನಾಲ್ಕು ಸಾಲುಗಳುಳ್ಳ ವಿಶಿಷ್ಟ ಶೈಲಿಯಲ್ಲಿ ಪದ್ಯಗಳನ್ನು ಬರೆಯಲಾಗಿದೆ, ಅಂಕಿತನಾಮ ಶೈಲಿಯಲ್ಲಿ ಮಂಕುತಿಮ್ಮ ಎಂದು ಸಂಬೋಧಿಸಲಾಗಿದೆ. ಮಂಕುತಿಮ್ಮ ಎಂದು ಕವಿಯು ಸಂಬೋಧಿಸಿದ್ದು ಜೀವನದ ತಿರುಳನರಿಯಬಯಸಿದ ಓದುಗರನ್ನು.

    ಉದಾಹರಣೆ ;-
      ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
      ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||
      ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
      ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||
      ಜೀವ ಜಡರೂಪ ಪ್ರಪಂಚವನದಾವುದೋ|
      ಆವರಿಸಿಕೊಂಡುಮೊಳನೆರೆದುಮಿಹುದಂತೆ||
      ಭಾವಕೊಳಪಡದಂತೆ ಅಳತೆಗಳವಡದಂತೆ|
      ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||
      ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
      ಮಹಿಮೆಯಿಂ ಜಗವಾಗಿ ಜೀವವೇಷದಲಿ||
      ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
      ಗಹನ ತತ್ವಕೆ ಶರಣೊ - ಮಂಕುತಿಮ್ಮ||

ಕಗ್ಗದ ಖ್ಯಾತಿ?

  • ಡಿ.ಎ. ಶಂಕರ್‌;15 Jan, 2017;
  • ಜೀವನದಲ್ಲಿ ನಾನು, ಇನ್ನು ಉಳಿದವರಂತೆ, ಅನೇಕ ಆಶ್ಚರ್ಯಗಳನ್ನು ಕಂಡಿದ್ದೇನೆ; ಪರಮಾಶ್ಚರ್ಯ ಎನ್ನುವ ಸಂಗತಿಗಳಿಗೂ ಹಲವಾರು ಬಾರಿ ಸಾಕ್ಷಿಯಾಗಿದ್ದೇನೆ. ಆದರೆ ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ದ ಅಗಾಧ ಜನಪ್ರಿಯತೆ ನಾನು ಕಂಡಿರುವ ಪರಮಾಶ್ಚರ್ಯಗಳಲ್ಲಿ ಒಂದು ಪರಮ ಪರಮಾಶ್ಚರ್ಯ. ಈ ಕೃತಿ ಅನೇಕ ಮರು ಮುದ್ರಣಗಳನ್ನು ಕಂಡಿದೆ. ನನ್ನ ಬಳಿ ಈಗಿರುವ ಪ್ರತಿಯೇ 2005ರ ಹದಿನಾರನೇ ಮುದ್ರಣ! ಇತ್ತೀಚೆಗೆ ಇದು ಇನ್ನೂ ಹಲವಾರು ಮುದ್ರಣಗಳನ್ನು ಕಂಡಿದ್ದರೆ ನನಗೆ ಆಶ್ಚರ್ಯವೇನೂ ಅನ್ನಿಸುವುದಿಲ್ಲ. ಇದು ಹಿಂದಿಗೆ ಅನುವಾದವಾಗಿದೆ; ಇಂಗ್ಲಿಷ್‌ಗೂ ಅನುವಾದವಾಗಿದೆ.
  • ‘ಮಂಕುತಿಮ್ಮನ ಕಗ್ಗ’ದ ಜನಪ್ರಿಯತೆ ಕೇವಲ ಮುದ್ರಣ, ಮರು ಮುದ್ರಣ, ಅನುವಾದಗಳ ಚೌಕಟ್ಟಿನಲ್ಲಿ ನಿಂತಿಲ್ಲ. ಈಗ ಅನೇಕರು ಅದನ್ನು ವೇದೋಪನಿಷತ್ತು, ಗೀತೆಗಳಂತೆ ಕಂಡು ಅದಕ್ಕೆ ಭಾಷ್ಯ ವ್ಯಾಖ್ಯಾನ, ವಿವರಣೆ ಕೊಟ್ಟಿದ್ದಾರೆ. ಇನ್ನೂ ಅನೇಕರು ಗಮಕ, ಸುಗಮ ಸಂಗೀತದಂಥ ಸಾಧನಗಳ ಮುಖಾಂತರ ಅದರ ಜನಪ್ರಿಯತೆಯನ್ನು ಇನ್ನಷ್ಟು ಸದೃಢಗೊಳಿಸಿದ್ದಾರೆ. ಅನೇಕರ ಭಾಷಣಗಳಲ್ಲಿ ಇದರ ಅನೇಕ ಸಾಲುಗಳು ಸಾಮಾನ್ಯವಾಗಿ ಪದೇ ಪದೇ ಉದ್ಧೃತವಾಗುತ್ತವೆ. ಒಂದೊಂದು ಪದ್ಯವೂ ವೇದದ ಒಂದೊಂದು ಋಕ್ ಇದ್ದಂತೆ ಎನ್ನುವವರೂ ಇದ್ದಾರೆ. ಇದನ್ನೂ ನಾನಿಲ್ಲಿ ದಾಖಲಿಸಬಹುದು. ‘ಕನ್ನಡದ ಅತ್ಯುತ್ತಮ ಕವಿ ಯಾರು?’ ಎಂದು ಯಾರೋ ಶಿವರಾಮ ಕಾರಂತ ಅವರನ್ನು ಕೇಳಿದಾಗ ಅವರು ರೆಪ್ಪೆ ಬಡಿಯದೆ, ನಮ್ಮ ನವ್ಯಕವಿಗಳು ಪರಮಾಶ್ಚರ್ಯಪಡುವಂತೆ, ‘ಡಿವಿಜಿ’ ಎಂದರಂತೆ.
  • ‘ಜನಂ’ನ ಅನುಸ್ವಾರ, ಮಾತ್ರಾಗಣದ ಲೆಕ್ಕಾಚಾರ ಪ್ರಪಂಚಕ್ಕೆ ಸೇರಿದ್ದು. ಇಲ್ಲಿನ ಕನ್ನಡ ಇಪ್ಪತ್ತನೆ ಶತಮಾನದ್ದಲ್ಲ. ದ್ವಿತೀಯಾಕ್ಷರ ಪ್ರಾಸ, ಅನುಸ್ವಾರದ ಭಾರದಿಂದ ಬಳಲುವ ಹಳಗನ್ನಡ, ನಡುಗನ್ನಡದ ಮಿಶ್ರಣವಾದ, ಇದು ಯಾವ ಕಾಲದ ಕನ್ನಡ? ಎಂದು ಕೇಳುವಂತೆ ಮಾಡುತ್ತದೆ. ಮಾಸ್ತಿಯಂಥವರು ಅವರ ಕಾಲಕ್ಕೇ ಈ ತೊಡರುಗಳನ್ನೆಲ್ಲ ನಿವಾರಿಸಿಕೊಂಡು ಬರೆಯುವ ಪದ್ಧತಿಯನ್ನು ತಂದಿದ್ದರು. ಹಾಗಿದ್ದೂ ಡಿವಿಜಿ ಏಕೆ ಈ ಕಷ್ಟವನ್ನು ಆಹ್ವಾನಿಸುತ್ತಾರೆ? ಕಾವ್ಯ ವಿಮರ್ಶೆಯಲ್ಲಿ ‘ಶಯ್ಯೆ’ ಎನ್ನುವುದುಂಟು. ಅದು ಪದಮೈತ್ರಿಗೆ ಸಂಬಂಧಿಸಿದ್ದು. ಇಲ್ಲಿ ಅದೇ ಇಲ್ಲ. ಮತ್ತೆ, ಪದಪ್ರಯೋಗ ನೋಡಿ ಈ ಕವನದ ಸಾಲುಗಳ ಕಾಲನಿರ್ಣಯವೂ ಕಷ್ಟವೇ. ಸಲೀಸಾದ, ಸುಭಗ ಓದಿಗೇ ಇಲ್ಲಿ ಸಂಚಕಾರ ಬಂದಿದೆ.
  • ಜನಪ್ರಿಯತೆಯಲ್ಲಿ ಕನ್ನಡದಲ್ಲಿ ಲಕ್ಷ್ಮೀಶನ ‘ಜೈಮಿನಿ ಭಾರತ’, ಕನಕ ದಾಸರ ‘ನಳ ಚರಿತ್ರೆ’ಗಳಿಗೆ ವಿಶಿಷ್ಟ ಸ್ಥಾನವಿದೆ; ಜನರ ನಾಲಗೆಯ ಮೇಲಿವೆ ಇವು. ಕಗ್ಗ ಉಳಿದಿರುವುದು ಕೆಲವು ಶಿಷ್ಟ ಓದುಗ ವರ್ಗದಿಂದ ಮಾತ್ರ. ಅನೇಕರಿಗೆ ಅದೊಂದು ರೀತಿಯ ಬೌದ್ಧಿಕ ವ್ಯಾನಿಟಿ ಬ್ಯಾಗ್. ಬೌದ್ಧಿಕ ಪೌರೋಹಿತ್ಯಕ್ಕೆ ಅನುಕೂಲಕರವಾದ ಒಣ ಸಮಿತ್ತು. ಇದೇ ಅದರ ಗುಟ್ಟಿರಬಹುದೇ?

ಮಂಕುತಿಮ್ಮನ ಕಗ್ಗದ ಖ್ಯಾತಿಯ ಗುಟ್ಟೇನು?’ ಅಭಿಪ್ರಾಯಗಳು

  • 22 Jan, 2017;
  • ಕಾವ್ಯವನ್ನೂ ಒಳಗೊಂದಂತೆ ಯಾವುದೇ ಕಲಾ ಮೀಮಾಂಸೆಯಲ್ಲಿ ಮುಖ್ಯವಾಗುವ ರಸ, ಧ್ವನಿ, ವಕ್ರೋಕ್ತಿ, ಔಚಿತ್ಯಗಳ ಪ್ರಸ್ತಾಪ ಲೇಖಕರ ವಿಶ್ಲೇಷಣೆಯಲ್ಲಿ (2017 ಜ. 15ರ ಪ್ರಜಾವಾಣಿ) ಇಲ್ಲವೇ ಇಲ್ಲ. ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ ಕವಿತೆಯ ಪರಿಕರಗಳಲ್ಲಿ ಬಹುಮುಖ್ಯ ಎನ್ನಲಾಗಿರುವ ವ್ಯುತ್ಪತ್ತಿ ಮತ್ತು ಪ್ರತಿಭೆ – ಇವಾವುವೂ ಲೇಖಕರಿಗೆ ಕಾವ್ಯದ ಬಗೆಯನ್ನು ಬಗೆಯುವಲ್ಲಿ ಮುಖ್ಯವೆನಿಸಿದಂತಿಲ್ಲ. ಹಾಗೆಯೇ, ಲೇಖಕರ ದೃಷ್ಟಿಯಲ್ಲಿ ಕಗ್ಗಕ್ಕಿಂತಲೂ ಹೆಚ್ಚು ಜನಪ್ರಿಯವಾಗಿರುವ ಲಕ್ಷ್ಮೀಶನ ‘ಜೈಮಿನಿ ಭಾರತ’ ಮತ್ತು ಕನಕದಾಸರ ‘ನಳ ಚರಿತ್ರೆ’ಗಳಿಗೆ ವಿಶಿಷ್ಟ ಸ್ಥಾನವಿರುವುದು ಯಾವ ಕಾರಣಕ್ಕೆ ಎನ್ನುವುದು ಲೇಖನದಲ್ಲಿ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಅಲ್ಲಿನ ಭಾಷೆ ಕಗ್ಗಕ್ಕಿಂತ ಯಾವ ರೀತಿಯಲ್ಲಿ ಸಲೀಸು ಮತ್ತು ಸುಭಗ ಎನ್ನುವುದನ್ನು ಅವರು ತಿಳಿಸಿಲ್ಲ.
  • ‘ನಗುವು ಸಹಜದ ಧರ್ಮ… ’(917), ‘ಹುಲ್ಲಾಗು ಬೆಟ್ಟದಡಿ…’(789), ‘ಗಗನನೀಲಿಮೆಯೆನ್ನ ಕಣ್ಗೆ...’ (52), ‘ಪುಸ್ತಕದಿ ದೊರೆತರಿವು...’(65), ‘ಗ್ರೀಸಿನಾ ಕಬ್ಬಗಳನೋದುವರು...’(60), ‘ರಾಮನಡಿಯಿಟ್ಟ ನೆಲ...’ (120), ‘ಪರದ ಮೇಲ್ಕಣ್ಣಿಟ್ಟು...’ (256), ‘ಸರ್ವರುಂ ಸಾಧುಗಳೆ...’(275), ‘ಧಾರುಣೀಸುತೆಯವೊಲು ದೃಢಮನಸ್ಕರದಾರು...’ (277), ‘ನರರ ಸ್ವಭಾವ ವಕ್ರಗಳನೆಣಿಸುವುದೇಕೆ?...’‘ (287), ‘ಇಳೆಯಿಂದ ಮೊಳಕೆಯೊಗೆವಂದು...’ (661), ‘ಗೌರವಿಸು ಜೀವನವ...’ (475), ‘ಹೊಸ ಚಿಗುರು ಹಳೆ ಬೇರು...’ (522) , ‘ಅಕ್ಕಿಯೊಳಗನ್ನವನು ಮೊದಲಾರು...’ (655), ಮುಂತಾದ ಪದ್ಯಗಳನ್ನು ಅವಲೋಕಿಸಿದರೆ ಕಗ್ಗದ ಪದ್ಯಗಳು ಶಾಸ್ತ್ರಾಧ್ಯಯನ ಮಾತ್ರವಲ್ಲದೆ ಗಾಢವಾದ ಜೀವನಾನುಭವದಿಂದ ಡಿವಿಜಿಯವರಿಗೆ ದಕ್ಕಿರುವ ಸ್ವೋಪಜ್ಞ ಚಿಂತನೆಗಳೆನ್ನುವ ಅರಿವು ತಾನಾಗಿಯೇ ಮೂಡುತ್ತದೆ. ಸ್ವಾರಸ್ಯವೆಂದರೆ ಉದಾಹರಿಸಿರುವ ಈ ಎಲ್ಲ ಪದ್ಯಗಳೂ ಸಾಮಾನ್ಯ ಜನರಿಗೂ ಸುಲಭಗ್ರಾಹ್ಯವಾಗಿದ್ದು, ಅಲ್ಲಿನ ಭಾಷೆಯು ಕಾವ್ಯಾಲಂಕಾರ ಸೌಂದರ್ಯದ ದೃಷ್ಟಿಯಿಂದಲೂ ತತ್ತ್ವ ವಿಚಾರಗಳಿಂದಲೂ ಅನನ್ಯವಾಗಿವೆ. ನಾನು ಗಮನಿಸಿದಂತೆ ಕಗ್ಗದ ಜನಪ್ರಿಯತೆಗೆ ಕಾರಣವಾಗಿರುವುದು ಇಂತಹ ಪದ್ಯಗಳೇ ಹೊರತು ಕ್ಲಿಷ್ಟತೆಯಿಂದ ಕೂಡಿದವಲ್ಲ..

ತನ್ನ ನಂಬಿಕೆಯ ನೆಯ್ದ ಕೃತಿ

  • ಕಗ್ಗ ಹುಟ್ಟಿದ್ದು ತಮ್ಮ ಚಿಂತನೆಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಆರ್ದ್ರಭಾವದಿಂದ.
    ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ।
    ಲೋಕತಾಪದಿ ಬೆಂದು ತಣಿಪನೆಳಸಿದವಂ।।
    ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು।
    ಸ್ವೀಕರಿಕೆ ಬೇಳ್ವವರು - ಮಂಕುತಿಮ್ಮ।।
  • ಎಂದು ಡಿವಿಜಿ, ಕಗ್ಗದ ಉದ್ದೇಶವನ್ನು ಸ್ಪಷ್ಟವಾಗಿಯೇ ತಿಳಿಸಿದರು. ತನ್ನ ಕೃತಿಯಲ್ಲಿ ಕುಂದು ಕಂಡುಬಂದರೆ ‘ತಿದ್ದಿಕೊಳೆ ಮನಸುಂಟು, ಇಂದಿಗೀ ಮತವುಚಿತ’ ಎಂಬ ನಿಸ್ಪೃಹನುಡಿಯೂ ಅವರದೇ.
  • ಕಗ್ಗದ ಖ್ಯಾತಿಗೆ ನಿರ್ದಿಷ್ಟ ಕಾರಣಗಳನ್ನು ಹೇಳುವುದು ಕಷ್ಟ. ‘ಕಂಗೊಳಿಸುವ ಹಸುರಿನ ಸೊಬಗಿಗೆ ಕಾರಣವೇನು? ಬೇರು? ಮಣ್ಣು? ಬೆಳಕು? ಯಾವುದು ಕಾರಣ’ ಎನ್ನುವ ಡಿವಿಜಿಯವರ ಮಾತನ್ನೇ ಪುನರುಚ್ಚರಿಸಬೇಕಾಗುತ್ತದೆ.
  • ಕಗ್ಗ, ಪ್ರಖ್ಯಾತಿಗಾಗಿ, ಪ್ರಶಸ್ತಿಗಾಗಿ ಮೂಡಿಬಂದ ಕೃತಿಯಲ್ಲ. ‘...ಮಸ್ತಕಕ್ಕಿಟ್ಟು ಗಂಭೀರವಾದೆ, ನಿನ್ನ ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ’ ಎಂದು ಕಗ್ಗದ ಬಗ್ಗೆ ಕುವೆಂಪು ಹಾಡಿದರೆ, ಅ ಮಟ್ಟದ ಅರಿವಿನಿಂದ ಕಗ್ಗವನ್ನು ಕಾಣದ ‘ಜ್ಞಾನಪೀಠ’ ಅದನ್ನು ನಮ್ಮ ಹೃದಯಪೀಠದಲ್ಲೇ ಇಂದಿಗೂ ನಿಲ್ಲಿಸಿದೆ.

ಕಗ್ಗ - ಬಹು ಸಾಮಾನ್ಯರಿಗೆ

  • ಡಾ. ಎಸ್‌.ಎಲ್‌. ಶ್ರೀನಿವಾಸ ಮೂರ್ತಿ:
  • ಮನೆಯ ಹಿರಿಯರ ಮಾರ್ಗದರ್ಶನ, ಸಮಾಜದ ಮುಖಂಡರ ಆದರ್ಶ, ನೊಂದಾಗ ಸಾಂತ್ವನಗೊಳಿಸುವ ಆಪ್ತರ ಆತ್ಮೀಯತೆ ಇದಾವುವೂ ಇರದ ನಿರ್ಭಾಗ್ಯರಾದ ಇಂದಿನ ಮಧ್ಯವಯಸ್ಸಿನ ಮಧ್ಯಮ ವರ್ಗ ‘ಕಗ್ಗ’ವನ್ನು ಅಪ್ಪಿ ಆರಾಧಿಸುತ್ತಿದೆ. ಅವರಿಗೆ ‘ಬಾಳಿಗೊಂದು ನಂಬಿಕೆ’ ಬೇಕು. ಹಾಗಾಗಿ ಅವರಿಗೆ ಈ ಅಲಂಬನದ ಅವಶ್ಯಕತೆಯಿದೆ. ಜಾತಿ, ಮತ, ಪಂಥ, ಇಸಂಗಳನ್ನು ಮೀರಿದ ಜನಗಳ ಆಪ್ತಕೃತಿಯಿದು.
    ಬಿನದದ ಕಥೆಯಲ್ಲ ಹೃದ್ರಸದ ನಿಝರಿಯಲ್ಲ ।
    ಮನ ನಾನು ಸಂಧಾನ ಕಾದುದೀ ಕಗ್ಗ ।।
    ನೆನಯುತೊಂದೊಂದು ಪದ್ಯವನದೊಮ್ಮೊಮ್ಮೆ ।
    ಅನುಭವಿಸಿ ಚಪ್ಪರಿಸೋ – ಮರುಳ ಮುನಿಯ ।।
  • ಎಂದು ಡಿವಿಜಿ ಅವರು ನೀಡಿರುವ ಸೂಚನೆಯನ್ನು ಕನ್ನಡ ಜನತೆ ತಮ್ಮದಾಗಿಸಿಕೊಂಡಿದ್ದಾರೆ. ಹಾಗಾಗಿಯೇ ಇಲ್ಲಿಯ ಪದ್ಯಗಳು ಅವರ ಬಾಳ ಬೆಳಕಾಗಿವೆ. ‘ಇದು ಪಂಡಿತರನ್ನೂ ಪ್ರಸಿದ್ಧರನ್ನೂ ಪುಷ್ಟರನ್ನೂ ಉದ್ದೇಶಿಸಿದ್ದಲ್ಲ. ಬಹು ಸಾಮಾನ್ಯರಾದವರ ಮನೆಯ ಬೆಳಕಿಗೆ ಇದು ಒಂದು ತೊಟ್ಟಿನಷ್ಟು ಎಣ್ಣೆಯಂತಾದರೆ ನನಗೆ ತೃಪ್ತಿ’ ಎಂಬ ಮುನ್ನುಡಿಯ ಮಾತುಗಳು ಡಿವಿಜಿಯವರ ಆಶಯವೂ ಇದೇ ಆಗಿತ್ತು ಎಂಬುದನ್ನು ಸಾರಿ ಹೇಳುತ್ತವೆ.
  • ಪಾಶ್ಚಾತ್ಯ ಚಿಂತನೆಗಳ ಕಡೆಗೆ ಒಲಿದರೂ ಈ ನೆಲದ ಸಂಸ್ಕಾರ, ಸಂಸ್ಕೃತಿಗಳಿಗೆ ಸಂಪೂರ್ಣವಾಗಿ ಎಳ್ಳು–ನೀರು ಬಿಟ್ಟಿರದ ಅತಿದೊಡ್ಡ ಸಮುದಾಯವಿದು. ಹಿಂದಿನ ತಲೆಮಾರುಗಳಿಗಿದ್ದ ಸಂಸ್ಕೃತಜ್ಞಾನವಾಗಲೀ ವೇದ–ಉಪನಿಷತ್ತು ಅಥವಾ ಗೀತೆಗಳ ಅವಲಂಬನವಾಗಲೀ ಇವರಿಗಿಲ್ಲ. ಇತ್ತ ಹಿಂದಿನ ಗ್ರಾಮೀಣ ಜೀವನದ ಜ್ಞಾನಗಂಗೆಗಳಾದ ತತ್ವಪದಗಳ, ಸರ್ವಜ್ಞನ ವಚನಗಳ – ಅಷ್ಟೇಕೆ, ಗಾದೆ, ಒಗಟುಗಳ ಊರುಗೋಲೂ ಇಲ್ಲ.

ಸೋಪಜ್ಞತೆ

  • ‘ಸ್ವೋಪಜ್ಞ ಇಲ್ಲ. ಡಿವಿಜಿಯವರದೇ ಎನ್ನಬಹುದಾದ ಒಂದೇ ಒಂದು ಸ್ವತಂತ್ರ ಆಲೋಚನೆಯೂ ಇಲ್ಲಿಲ್ಲ’ ಎಂಬುದು ಶಂಕರ್‌ ಆರೋಪ. ಈ ಮಾತಿಗೂ ಡಿವಿಜಿಯವರಲ್ಲೇ ಉತ್ತರವಿದೆ.
    ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ ।
    ಅವನರಿವಿಗೆಟುಕುವ ವೊಲೊಂದಾತ್ಮನಯವ ।।
    ಹವಣಿಸಿದನು ಪಾಮರ ಜನದ ಮಾತಿನಲಿ ।
    ಕವನ ನೆನಪಿಗೆ ಸುಲಭ – ಮಂಕುತಿಮ್ಮ ।।
  • ‘ನಾಹಂ ಕರ್ತಾ ಹರಿಃ ಕಾರ್ತಾ’, ‘ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ’ ಎಂಬ ಪರಂಪರೆಯಲ್ಲಿ ಬಂದವರು ಡಿವಿಜಿ.
  • (ಯಾವುದನ್ನು ಸೋಪಜ್ಞತೆ ಎನ್ನಬೇಕು ಎಂದು ನಿರ್ಧರಿಸುವುದು ಕಷ್ಟ; (S.M.Panikkar says in his Determining Periods of Indian History “We are what they have made us!- ಪೂರಾ ಸ್ವಂತದ್ದು ಎನ್ನುವುದು ಯಾರದ್ದಿದೆ)

ಜೀವನದ ಒತ್ತಡದ ನಿರ್ವಣೆ ಕಗ್ಗದ ಜನಪ್ರಿಯತೆಗೆ ಕಾರಣ

  • ಡಾ. ಟಿ.ಎನ್. ವಾಸುದೇವಮೂರ್ತಿ, ಬೆಂಗಳೂರು
  • ‘ಮಂಕುತಿಮ್ಮನ ಕಗ್ಗ’ದಲ್ಲಿ ಈ ಕೌಶಲ್ಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ, ಒತ್ತಡದ ನಿರ್ವಹಣೆ ಮುಂತಾದ ವಿಷಯಗಳ ಮೂಲಧಾತುಗಳು ಹುದುಗಿವೆ. ಅಂದಮೇಲೆ ಅದರ ಜನಪ್ರಿಯತೆ ಹೆಚ್ಚಲು ಜಾತಿಮೋಹಕ್ಕಿಂತ ಮಿಗಿಲಾಗಿ ಆಧುನಿಕ ಬದುಕಿನ ಪಲ್ಲಟಗಳು ಮತ್ತು ಜೀವನಶೈಲಿಗಳೂ ಕಾರಣವಾಗಿರಬಹುದು. ಆದ್ದರಿಂದ ಸಿದ್ಧ ಮಾನದಂಡಗಳನ್ನು ಅನಾಮತ್ತಾಗಿ ತೆಗೆದುಕೊಂಡು ಓದುಗರನ್ನು ಜಾತಿವಾರು ವಿಂಗಡಿಸುವ ಕೆಲಸ ಎಷ್ಟೋ ಸಲ ದಾರಿ ತಪ್ಪಿಸುತ್ತದೆ.
  • ಕಗ್ಗದಲ್ಲಿ ಕಂಡುಬರುವ ಭಾಷಾಶೈಲಿ ನವೋದಯ ಕಾಲದ ಬಹುತೇಕ ಎಲ್ಲ ಕವಿಗಳೂ ಒಪ್ಪಿದ್ದ ಮತ್ತು ಅಳವಡಿಸಿಕೊಂಡಿದ್ದ ಶೈಲಿ. ತನ್ನ ಸಾಹಿತ್ಯದ ವಸ್ತುನಿರ್ವಹಣೆಗೆ ಒಂದು ನಿರ್ದಿಷ್ಟವಾದ ಅಥವಾ ಒಂದು ವಿಲಕ್ಷಣವಾದ ಶೈಲಿ ಅತ್ಯಗತ್ಯ ಎಂದು ಕವಿಗೆ ಅನ್ನಿಸಿರಬಹುದು ಅಥವಾ ಖಯಾಲಿಗೂ ಹಾಗೆ ಪ್ರಯೋಗಿಸಿರಬಹುದು. ತಾನು ಹಳೆಯ ವಿಚಾರಗಳನ್ನೇ ಪುನರುಚ್ಚರಿಸುತ್ತಿರುವ ಕಾರಣ ಹಳೆಯ ಶೈಲಿಯೇ ಸೂಕ್ತವೆಂದು ಕವಿಗೆ ತೋರಿರಬಹುದು.
  • ಅಷ್ಟಕ್ಕೂ ಹೊಸದಾಗಿ ಹೇಳಲು ಏನು ತಾನೇ ಉಳಿದಿದೆ? ಬೇಂದ್ರೆ ತಮ್ಮ ಒಂದು ಪದ್ಯದಲ್ಲಿ ‘ಹಳೆಯದನ್ನೆ ಮತ್ತೆ ಮತ್ತೆ ಹೊಸಯಿಸಿ ನೀ ಹೇಳುವೆ’ (’ಜಿಜ್ಞಾಸೆ’, ‘ಗಂಗಾವತರಣ’) ಎಂದು ಹಾಡಿರುವರು. ಆದ್ದರಿಂದ ಇಂತಹ ಪ್ರಯೋಗಗಳನ್ನು ಆಕ್ಷೇಪಾರ್ಹವೆಂದು ಏಕಾಏಕಿ ತೀರ್ಮಾನಿಸಲು ಬರುವುದಿಲ್ಲ. ಅವರ ಲೇಖನ ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯ ಚರಿತ್ರೆಗಷ್ಟೇ ಸೀಮಿತಗೊಂಡಿರುವ ಕಾರಣ ಶ್ರೀಯುತರಿಗೆ ಹಾಗೆನ್ನಿಸುವುದು ಸಹಜ.

ನಿನ್ನ ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ

  • ಅಧ್ಯಾತ್ಮ, ಪುರಾಣ, ಸಂಸ್ಕೃತಿ, ಸಮಾಜ ಮುಂತಾದ ನಾನಾ ಜ್ಞಾನಶಾಖೆಗಳನ್ನು ಒಳಗೊಂಡಿರುವ ಕಗ್ಗವನ್ನು ಸಾಹಿತ್ಯಿಕ ದೃಷ್ಟಿಯಿಂದಷ್ಟೇ ಕಂಡು ತೀರ್ಮಾನಿಸಲು ಹೊರಡುವ ವಿಮರ್ಶಕ ಆ ಕೃತಿಯ ಬೇರೆ ಹಲವು ಮುಖಗಳಿಗೆ ಕುರುಡನಾಗಲೇಬೇಕಾಗುತ್ತದೆ.
  • ಬಹು ಹಿಂದೆ ಕುವೆಂಪು ಸಹ ಹೀಗೆಯೇ ಯೋಚಿಸಿದ್ದರೆನಿಸುತ್ತದೆ. ಮಂಕುತಿಮ್ಮನ ಕಗ್ಗದಂತೆಯೇ ದ್ವಿತೀಯ ಪ್ರಾಸದ, ನಾಲ್ಕು ಗಣ ಮತ್ತು ನಾಲ್ಕು ಸಾಲುಗಳ ಛಂದೋಬಂಧದಲ್ಲಿ ಕುವೆಂಪು ಕಗ್ಗಕ್ಕೆ ಪ್ರತಿಕ್ರಿಯಿಸಿ ಹಾಡಿರುವ ಜನಪ್ರಿಯ ಸಾಲುಗಳು ಹೀಗಿವೆ:
    ಹಸ್ತಕ್ಕೆ ಬರಿ ನಕ್ಕೆ ಓದುತ್ತ ಓದುತ್ತ
    ಮಸ್ತಕಕ್ಕಿಟ್ಟು ಗಂಭೀರನಾದೆ ।
    ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ
    ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ ।।
  • ಶಂಕರ್‌ ಅವರ ಲೇಖನ ಈ ಮೇಲಿನ ಕವಿತೆಯ ಮೊದಲ ಸಾಲಿಗೆ ಬರೆದ ವಿಸ್ತಾರವಾದ ವ್ಯಾಖ್ಯಾನದಂತಿದೆ. ಆದರೆ ಅವರ ವಿಮರ್ಶೆ ಆ ಮೊದಲ ಸಾಲಿನ ವ್ಯಾಖ್ಯಾನದೊಂದಿಗೇ ಪರಿಸಮಾಪ್ತಿಯಾಗಿರುವುದು ವಿಷಾದನೀಯ. ಆ ಬರಹ ಇನ್ನೂ ಮುಂದುವರಿದು ಉಳಿದ ಮೂರು ಸಾಲುಗಳ ವ್ಯಾಖ್ಯಾನವನ್ನೂ ಒಳಗೊಂಡು ಒಂದು ಸಮಗ್ರ ವಿಮರ್ಶಾ ಲೇಖನದ ರೂಪ ತಾಳಿದ್ದರೆ ಆಗ ಅದು ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.
  • ಶ್ರೀಯುತರು ಡಿವಿಜಿ ಅವರದೇ ಎನ್ನಬಹುದಾದ ಒಂದೇ ಒಂದು ಸ್ವತಂತ್ರ ಆಲೋಚನೆಯೂ ಇಲ್ಲಿ ಇಲ್ಲ. ಬಹುಪಾಲು ಪದ್ಯಗಳು ವೇದೋಪನಿಷತ್ತುಗಳ, ಗೀತೆಯ, ವಿಸ್ತಾರ ಓದಿನಿಂದ ಎರವು ಪಡೆದುಕೊಂಡವು ಎಂದಿದ್ದಾರೆ. ಕಗ್ಗದ ನಿರೂಪಕ ಒಬ್ಬ ಸಾಧಕನ ನೆಲೆಯಲ್ಲಿ ಕೃತಿರಚನೆ ಮಾಡಿರುವ ಕಾರಣ, ಶಾಸ್ತ್ರ ಪ್ರಾಮಾಣ್ಯವನ್ನು ಅಲಕ್ಷಿಸಿ ಅವನು ಏನನ್ನೂ ನುಡಿಯಲಾರ.
  • ಶಾಸ್ತ್ರ ಪ್ರಾಮಾಣ್ಯವನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ಸ್ವತಂತ್ರವಾಗಿ ವಿಶಿಷ್ಟ ಒಳನೋಟಗಳನ್ನು ನೀಡಿರುವ ಬುದ್ಧ, ನಾಗಾರ್ಜುನ, ಅಲ್ಲಮ ಮುಂತಾದವರ ಸಾಹಿತ್ಯದ (ಬೋಧನೆಗಳ) ಪರಿಚಯವಿರುವವರಿಗೆ ಸಹಜವಾಗಿಯೆ ಇಲ್ಲಿ ಸ್ವೋಪಜ್ಞ ಎನ್ನುವ ಬರವಣಿಗೆ ಕಾಣಿಸದಿರಬಹುದು. ಆದರೆ ಬಹುಸಂಖ್ಯಾತ ಓದುಗರು, ಜಿಜ್ಞಾಸುಗಳು ಶಾಸ್ತ್ರ ಪ್ರಮಾಣಕ್ಕೆ ನೀಡುವ ಮಾನ್ಯತೆಯನ್ನು ವ್ಯಕ್ತಿಯ ಅಂತರಂಗದ ಒಳನೋಟಕ್ಕೆ ನೀಡಲಾರರು ಎಂಬುದನ್ನು ನಾವು ನೆನಪಿಡಬೇಕು. (ಒಬೊಬ್ಬರ ಕಾಣ್ಕೆ ಒಂದೊಂದು ಬಗೆ - ಯಾವುದು ಸರಿ?; ಯಾವುದು ಸತ್ಯ?)

ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಹೊರ ಸಂಪರ್ಕ

ಅನುವಾದಗಳು

ನೋಡಿ

ಉಲ್ಲೇಖ

Tags:

ಮಂಕುತಿಮ್ಮನ ಕಗ್ಗ ಪದ್ಯ ಶೈಲಿಮಂಕುತಿಮ್ಮನ ಕಗ್ಗ ಕಗ್ಗದ ಖ್ಯಾತಿ?ಮಂಕುತಿಮ್ಮನ ಕಗ್ಗ ದ ಖ್ಯಾತಿಯ ಗುಟ್ಟೇನು?’ ಅಭಿಪ್ರಾಯಗಳುಮಂಕುತಿಮ್ಮನ ಕಗ್ಗ ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಮಂಕುತಿಮ್ಮನ ಕಗ್ಗ ಹೊರ ಸಂಪರ್ಕಮಂಕುತಿಮ್ಮನ ಕಗ್ಗ ಅನುವಾದಗಳುಮಂಕುತಿಮ್ಮನ ಕಗ್ಗ ನೋಡಿಮಂಕುತಿಮ್ಮನ ಕಗ್ಗ ಉಲ್ಲೇಖಮಂಕುತಿಮ್ಮನ ಕಗ್ಗಕಗ್ಗಡಿ.ವಿ.ಜಿ.ಮಹಾಭಾರತರಾಮಾಯಣ

🔥 Trending searches on Wiki ಕನ್ನಡ:

ಉಡುಪಿ ಜಿಲ್ಲೆಕೃಷ್ಣಕರ್ನಾಟಕ ವಿದ್ಯಾವರ್ಧಕ ಸಂಘಛತ್ರಪತಿ ಶಿವಾಜಿಜನಪದ ನೃತ್ಯಗಳುಅಕ್ಕಮಹಾದೇವಿಉತ್ತರ ಕರ್ನಾಟಕಚಿತ್ರದುರ್ಗಭಾರತದ ಸಂಸತ್ತುವಿಕ್ರಮಾರ್ಜುನ ವಿಜಯಮಧ್ವಾಚಾರ್ಯಅವತಾರಭಾರತೀಯ ಧರ್ಮಗಳುಗುಣ ಸಂಧಿಶ್ರವಣಬೆಳಗೊಳಕಲ್ಯಾಣಿಬಹುಸಾಂಸ್ಕೃತಿಕತೆಜೋಡು ನುಡಿಗಟ್ಟುದಿನೇಶ್ ಕಾರ್ತಿಕ್ವ್ಯಕ್ತಿತ್ವಸೌಂದರ್ಯ (ಚಿತ್ರನಟಿ)ವಿಷ್ಣುಭಾರತದ ಸರ್ವೋಚ್ಛ ನ್ಯಾಯಾಲಯಭಾರತದಲ್ಲಿ ಬಡತನಕುಮಾರವ್ಯಾಸಒಗಟುಕರ್ನಾಟಕದಲ್ಲಿ ಪಂಚಾಯತ್ ರಾಜ್ಗದ್ದಕಟ್ಟುಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆನದಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬೇಸಿಗೆಪರಿಸರ ರಕ್ಷಣೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಗೊರೂರು ರಾಮಸ್ವಾಮಿ ಅಯ್ಯಂಗಾರ್ಎಂ. ಕೆ. ಇಂದಿರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೌತಮಿಪುತ್ರ ಶಾತಕರ್ಣಿಫ.ಗು.ಹಳಕಟ್ಟಿಸುಭಾಷ್ ಚಂದ್ರ ಬೋಸ್ಮೈಸೂರುಸಿಂಧನೂರುಮೈಸೂರು ಅರಮನೆಬಾಳೆ ಹಣ್ಣುಅಥರ್ವವೇದಬಿ. ಎಂ. ಶ್ರೀಕಂಠಯ್ಯಜೋಗಿ (ಚಲನಚಿತ್ರ)ನಗರೀಕರಣಗೋಪಾಲಕೃಷ್ಣ ಅಡಿಗನೀತಿ ಆಯೋಗಧರ್ಮಮಾಸಹೊಯ್ಸಳಅಲೆಕ್ಸಾಂಡರ್ಖ್ಯಾತ ಕರ್ನಾಟಕ ವೃತ್ತಗೋವಿಂದ ಪೈಕಂಪ್ಯೂಟರ್ಕರ್ಮಧಾರಯ ಸಮಾಸಮೌರ್ಯ ಸಾಮ್ರಾಜ್ಯಕಾಂತಾರ (ಚಲನಚಿತ್ರ)ಪುಟ್ಟರಾಜ ಗವಾಯಿಕನ್ನಡ ಸಾಹಿತ್ಯ ಪ್ರಕಾರಗಳುಎ.ಎನ್.ಮೂರ್ತಿರಾವ್ಜಾಹೀರಾತುಸಿಂಧೂತಟದ ನಾಗರೀಕತೆಶಾಸನಗಳುಕರ್ಕಾಟಕ ರಾಶಿಕಲ್ಪನಾಯಕೃತ್ತುಭಾರತೀಯ ಸಂಸ್ಕೃತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕೆ. ಅಣ್ಣಾಮಲೈಪಂಚತಂತ್ರಜನ್ನಮಾಧ್ಯಮಸಿದ್ಧಯ್ಯ ಪುರಾಣಿಕರಾಷ್ಟ್ರಕವಿ🡆 More