ಔಚಿತ್ಯ

ತಕ್ಕುದಾದ ಅಥವಾ ಸರಿಹೊಂದುವ ಎಂಬ ಅರ್ಥವನ್ನು ಕೊಡುವ ಉಚಿತ ಎಂಬುದರ ಭಾವ.

ಇದರ ರೂಪಾಂತರ ಔಚಿತೀ. ಔಚಿತ್ಯದ ವ್ಯಾಪ್ತಿ ಅಪಾರವಾದುದು. ಸಂಸ್ಕೃತ ಸಾಹಿತ್ಯ ವಿಮರ್ಶೆಯಲ್ಲಿ ಅಲಂಕಾರಿಕರು ಇದನ್ನು ವಿಶೇಷವಾಗಿ ಗಮನಿಸಿದ್ದಾರೆ. ಸಾಮಾನ್ಯವಾಗಿ ವಸ್ತು, ಪಾತ್ರ ಮುಂತಾದುವುಗಳಲ್ಲಿ ಇರಲೇಬೇಕಾದ ಪರಸ್ಪರ ಸಮನ್ವಯದ ವಿಚಾರದಿಂದ ಅಲ್ಲಿ ಪ್ರಾರಂಭವಾಗಿ ಕಾವ್ಯಜೀವಿತವೆಂಬ ಪ್ರತಿಪಾದನೆಯ ಹಂತವನ್ನು ಕಡೆಯಲ್ಲಿ ಮುಟ್ಟುತ್ತದೆ.

ಚರಿತ್ರೆ

ಕವಿವರ್ಮಕ್ಕೆ ಸಂಬಂಧಪಟ್ಟಂತೆ ಭಾಷೆ, ಪದಗಳು, ರಚನೆ ಮುಂತಾದುವುಗಳಲ್ಲಿರ ಬೇಕಾದ ಔಚಿತ್ಯದ ಅರಿವು ಅಲಂಕಾರಿಕರಲ್ಲಿ ಬಹು ಹಿಂದಿನಿಂದಲೂ ಉಂಟಾಗಿ ಬೆಳೆದು ಬಂದಿದೆ; ಭರತಮುನಿಯಿಂದ ರಚಿತವಾದ ಮತ್ತು ಸಂಸ್ಕೃತಸಾಹಿತ್ಯ ಮೀಮಾಂಸೆಯಲ್ಲಿ ಆದಿಗ್ರಂಥವೆನೆಸಿಕೊಂಡಿರುವ ನಾಟ್ಯಶಾಸ್ತ್ರದಲ್ಲಿ ಇದರ ಅವಶ್ಯಕತೆ ಪ್ರಾಮುಖ್ಯಗಳ ಸೂಚನೆ ಇದೆ. ಆನಂತರ ಬಂದ ಭಾಮಹ, ದಂಡಿ, ರುದ್ರಟರಲ್ಲಿ ಇದರ ಅಭಿಪ್ರಾಯ ರೂಪುಗೊಳ್ಳುತ್ತದೆ.

ವ್ಯಾಖ್ಯಾನ

ಸುಪ್ರಸಿದ್ಧ ಅಲಂಕಾರಿಕರಾದ ಆನಂದವರ್ಧನ ಮತ್ತು ಅಭಿನವಗುಪ್ತರ ಆಳವಾದ ಕಾವ್ಯತತ್ತ್ವ ಪರಿಶೀಲನೆಯಲ್ಲಿ ಇದಕ್ಕೆ ಬಹು ಮುಖ್ಯವಾದ ಸ್ಥಾನ ದೊರಕುತ್ತದೆ.

    ಅನೌಚಿತ್ಯಾದೃತೇ ನಾನ್ಯದ್ರಸಭಂಗಸ್ಯ ಕಾರಣಮ್ |
    ಪ್ರಸಿದ್ಧೌಚಿತ್ಯ ಬಂದಸ್ತು ರಸಸ್ಯೋಪನಿಷತ್ಪರಾ ||

(ಅನೌಚಿತ್ಯ ಹೊರತು ಬೇರೆ ಯಾವುದೂ ರಸಭಂಗಕ್ಕೆ ಕಾರಣವಲ್ಲ. ಔಚಿತ್ಯದ ಪ್ರಸಿದ್ಧ ನಿಯಮಗಳ ಅನುಸರಣೆಯೇ ರಸದ ಪರಮ ರಹಸ್ಯ) ಎಂದು ಆನಂದವರ್ಧನ ಇದನ್ನು ತನ್ನ ಧ್ವನ್ಯಾಲೋಕದಲ್ಲಿ ಮನೋಜ್ಞವಾಗಿ ಪ್ರತಿಪಾದಿಸಿದ್ದಾನೆ. ತನ್ನ ಧ್ವನಿತತ್ತ್ವದಲ್ಲಿ ರಸಕ್ಕೇ ಪ್ರಾಧಾನ್ಯಕೊಡುವ ಆನಂದವರ್ಧನ ವಿಷಯ, ವಾಚ್ಯ, ವಾಚಕ ಮುಂತಾದುವು ರಸಕ್ಕನು ಗುಣವಾಗಿರಬೇಕಾದ ಔಚಿತ್ಯವನ್ನು ಸಾಕಷ್ಟು ವಿಸ್ತಾರವಾಗಿ ನಿರೂಪಿಸಿದ್ದಾನೆ. ರಸವಿದ್ದಲ್ಲಿ ಔಚಿತ್ಯದೃಷ್ಟಿ ಇರಲೇಬೇಕೆಂದು ಅಭಿನವಗುಪ್ತನ ಮತ; ಅದರಂತೆ ರಸ ಧ್ವನಿ ಔಚಿತ್ಯಗಳು ಕಾವ್ಯಜೀವಾಳದ ಮೂರು ಅಂಶಗಳೆನಿಸಿಕೊಂಡು ರಸೌಚಿತ್ಯದ ಸಿದ್ಧಾಂತ ಸ್ಥಾಪಿತವಾಗುತ್ತದೆ. ಕ್ರಮೇಣ ಕುಂತಕ, ಭೋಜ ಇವರು ಇದನ್ನು ಕಾವ್ಯತತ್ತ್ವದ ಒಂದು ಮೂಲಭೂತ ವಿಚಾರವೆಂದು ಪರಿಗಣಿಸಿದ್ದಾರೆ.

ಕ್ಷೇಮೇಂದ್ರನ ಔಚಿತ್ಯ ವಿಚಾರ

ರಸಕ್ಕನ್ವಯಿಸುವಂತೆ ಪ್ರತಿಪಾದಿತವಾದ ಔಚಿತ್ಯ ಕ್ರಮೇಣ ಮಹಿಮಭಟ್ಟನ ಒಪ್ಪಿಗೆಯನ್ನು ಪಡೆದು ಆನಂತರ ಬಂದ ಕ್ಷೇಮೇಂದ್ರನ ಔಚಿತ್ಯವಿಚಾರ ಚರ್ಚಾ ಎಂಬ ಗ್ರಂಥದಲ್ಲಿ ವ್ಯಾಪ್ತಿವೈಶಾಲ್ಯದಿಂದ ಕೂಡಿದ ಒಂದು ಸಿದ್ಧಾಂತವಾಗಿ ಪರಿಣಮಿಸಿತು. ಇದನ್ನು ವಿಶ್ಲೇಷಿಸಿ ನಿರೂಪಿಸಲು ಹೊರಟ ಕ್ಷೇಮೇಂದ್ರ ಮೊದಲು ಇದರ ಸಾಮಾನ್ಯಲಕ್ಷಣವನ್ನು

    ಉಚಿತಂ ಪ್ರಾಹುರಾಚಾರ್ಯಾಂ ಸದೃಶಂ ಕಿಲ ಯಸ್ಯ ಯತ್ |
    ಉಚಿತಸ್ಯ ಚ ಯೋ ಭಾವಸ್ತದೌಚಿತ್ಯಂ ಪ್ರಚಕ್ಷತೇ ||

ಯಾವುದು ಯಾವುದಕ್ಕೆ ಅದನ್ನು ತಕ್ಕುದಾಗಿರುವುದೋ ಅದನ್ನು ವಿದ್ವಾಂಸರು ಉಚಿತವೆಂದಿದ್ದಾರೆ; ಉಚಿತದ ಭಾವವನ್ನು ಔಚಿತ್ಯವೆನ್ನುತ್ತಾರೆ-ಎಂಬ ಮಾತುಗಳಲ್ಲಿ ಹೇಳಿದ್ದಾರೆ. ಆನಂದವರ್ಧನ, ಅಭಿನವಗುಪ್ತರ ರಸದೃಷ್ಟಿಯನ್ನೊಪ್ಪಿಕೊಂಡಿರುವ ಕ್ಷೇಮೇಂದ್ರನಿಗೆ ಇದು ಸೌಂದರ್ಯಸ್ವಾದನೆಯಲ್ಲಿ ಚಮತ್ಕಾರಕಾರಿಯೂ ರಸಕ್ಕೆ ಪ್ರಾಣಸ್ವರೂಪವೂ ಆಗಿದೆ; ಅವನ ಅಭಿಪ್ರಾಯದಲ್ಲಿ ಇದು ರಸಸಿದ್ಧವಾದ ಕಾವ್ಯಕ್ಕೆ ಸ್ಥಿರವಾದ ಜೀವ

    ಔಚಿತ್ಯಸ್ಯ ಚಮತ್ಕಾರಕಾರಿಣಶ್ಚಾರುಚರ್ಮಣೇ |
    ರಸಜೀವಿತ ಭೂತಸ್ಯ ವಿಚಾರಂ ಕುರುತೇಧನಾ ||
    ಅಲಂಕಾರಾಸ್ತ್ವಲಂಕಾರಾ ಗುಣಾ ಏವ ಗುಣಾಃ ಸದಾ |
    ಔಚಿತ್ಯಂ ರಸಸಿದ್ಧಸ್ಯ ಸ್ಥಿರಂ ಕಾವ್ಯಸ್ಯ ಜೀವಿತಮ್ ||

ಕ್ಷೇಮೇಂದ್ರನ ಪ್ರಕಾರ ಕಾವ್ಯಶರೀರಕ್ಕೆ ಇವು ಜೀವವಾಗಿರುವ ಇದರ ವಿಂಗಡಣೆ ಈ 27 ಪ್ರಕಾರಗಳಿಗೆ ಸಂಬಂಧಪಟ್ಟಿದೆ; ಪದ, ವಾಕ್ಯ, ಪ್ರಬಂಧಾರ್ಥ, ಗುಣ, ಅಲಂಕಾರ, ರಸ, ಕ್ರಿಯಾಪದ, ಕಾರಕ, ಲಿಂಗ, ವಚನ, ವಿಶೇಷಣ, ಉಪಸರ್ಗ, ನಿಪಾತ, ಕಾಲ, ದೇಶ, ಕುಲ, ವ್ರತ, ತತ್ತ್ವ, ಸತ್ವ, ಅಭಿಪ್ರಾಯ, ಸ್ವಭಾವ, ಸಾರಸಂಗ್ರಹ, ಪ್ರತಿಭೆ, ಅವಸ್ಥೆ, ವಿಚಾರ, ಹೆಸರು, ಅಶಂಸನೆ. ಈ ಎಲ್ಲ ಕಾವ್ಯಾಂಗಗಳಲ್ಲಿ ವ್ಯಾಪ್ತಿಯಾದ, ಜೀವಾಳವೇ ಔಚಿತ್ಯ. ಅವನ್ನು ಉದಾಹರಣೆ ಪ್ರತ್ಯುದಾಹರಣೆಗಳ ಮೂಲಕ ವಿವರಿಸಿ ಕಾವ್ಯದ ಒಂದೊಂದು ಅಂಶದಲ್ಲೂ ಅವುಗಳ ಪರಸ್ಪರ ಹೊಂದಿಕೆಯಲ್ಲೂ ಸಹೃದಯಶ್ಲಾಘವೂ ರಸಯುಕ್ತವೂ ಆದಕಾವ್ಯತ್ತ್ವ ಸಿದ್ಧಿಗೆ ಪ್ರಾಣಪ್ರದ ಔಚಿತ್ಯವಿರಬೇಕೆಂಬುದನ್ನು ಕ್ಷೇಮೇಂದ್ರ ತನ್ನ ಗ್ರಂಥದಲ್ಲಿ ವಿಶದಪಡಿಸಿದ್ದಾನೆ. ಇಂಥ ಪ್ರಯತ್ನ ಸಂಸ್ಕೃತ ಸಾಹಿತ್ಯಮೀಮಾಂಸೆಯಲ್ಲಿ ಅಪುರ್ವವಾದ ಒಂದು ಪ್ರಾಯೋಗಿಕ ವಿಮರ್ಶೆಯಾಗಿರುವುದಲ್ಲದೆ ಅಭಿಪ್ರಾಯಗಳ ಸ್ಪಷ್ಟತೆಯಿಂದ ಕೂಡಿ ಮಹತ್ತ್ವಪಡೆದಿದೆ.

ಕುಪ್ಪುಸ್ವಾಮಿಶಾಸ್ತ್ರಿ ವಿಚಾರ

ಒಂದು ವಸ್ತುವಿನ ಭಾಗಗಳಲ್ಲಿ ಮತ್ತು ಒಂದು ವಸ್ತುವಿಗೂ ಇನ್ನೊಂದಕ್ಕೂ ಇರಬೇಕಾದ ಪರಸ್ಪರ ಸಮನ್ವಯವೆಂಬ ಸಾಮಾನ್ಯಾರ್ಥವುಳ್ಳ ಔಚಿತ್ಯ ಅಲಂಕಾರಶಾಸ್ತ್ರದಲ್ಲಿ ಮೊದಮೊದಲು ವಸ್ತು, ಪಾತ್ರ ಮುಂತಾದುವುಗಳ ಸಮನ್ವಯದ ಸೂಚಕವಾಗಿದ್ದು ಕಡೆಯಲ್ಲಿ ಕಾವ್ಯತತ್ತ್ವನಿರೂಪಣೆಯ ದೃಷ್ಟಿಯಿಂದ ಕಾವ್ಯ ಜೀವಿತವೆಂಬ ಸಿದ್ಧಾಂತವಾಗಿ ಪರಿಣಮಿಸುತ್ತದೆ. ಹಿಂದಿನ ಪಂಥಗಳಾದ ಅಲಂಕಾರ, ಗುಣ, ರೀತಿ, ವಕ್ರೋಕ್ತಿ, ರಸ, ಧ್ವನಿ, ಅನುಮಾನ ಇವೆಲ್ಲವನ್ನೂ ಅಳವಡಿಸಿಕೊಂಡು ವ್ಯಾಪಕವಾಗಿರುವುದೇ ಇದರ ವೈಶಿಷ್ಟ್ಯ. ಪ್ರಾಚೀನ ಆಲಂಕಾರಿಕರು ಶಬ್ದಾರ್ಥಗಳ ಸಂಯೋಜನೆಯ ಬಾಹ್ಯಸ್ವರೂಪ ವಿಶ್ಲೇಷಣೆಯಲ್ಲಿ ಆಸಕ್ತರಾಗಿ ಇದರ ಕೆಲವು ಧರ್ಮಗಳಾದ ಅಲಂಕಾರ, ಗುಣ, ರೀತಿಗಳನ್ನು ಬೇರೆ ಬೇರೆಯಾಗಿ ಪ್ರತಿಪಾದಿಸಿದರು; ಆದರೆ ನವೀನರು ಇವೆಲ್ಲಕ್ಕೂ ವಕ್ರೋಕ್ತಿ ವ್ಯಾಪಕವೆಂಬ ಮರ್ಮವನ್ನು ತಿಳಿದು, ಮುಂದೆ ರಸ ಧ್ವನಿ ಅನುಮಾನಗಳೆಂಬ ಸಿದ್ಧಾಂತಗಳಿಗೆ ಔಚಿತ್ಯ ವ್ಯಾಪಕವೆಂದು ನಿರ್ಣಯಿಸಿದುದಲ್ಲದೆ ಇದರಲ್ಲಿ ಮೇಲ್ಕಂಡ ಅಲಂಕಾರಾದಿಕಾವ್ಯತತ್ತ್ವಗಳು ಐಕ್ಯವಾಗಬಹುದಾದ ಸ್ಥಿತಿಯನ್ನೂ ಅರಿತುಕೊಂಡರು. ಈ ವಿಚಾರವನ್ನು ಎಸ್.ಕುಪ್ಪುಸ್ವಾಮಿಶಾಸ್ತ್ರಿಗಳು ಅರ್ಥಗರ್ಭಿತವಾದ ಶ್ಲೋಕವೊಂದರ ಮೂಲಕ ಹೀಗೆ ಪ್ರತಿಪಾದಿಸಿದ್ದಾರೆ:

    ಔಚಿತೀಮನುಧಾವಂತಿ ಸರ್ವೇ ಧ್ವನಿರಸೋನ್ನಯಾ: |
    ಗುಣಾಲಂಕೃತಿರೀತೀನಾಂ ನಯಾಶ್ಚಾನೃಜುವಾಙ್ಮಯಾಃ ||

ಧ್ವನಿ ರಸ ಅನುಮಾನಗಳೂ ಗುಣ ಅಲಂಕಾರ ರೀತಿ ವಕ್ರೋಕ್ತಿಗಳೂ ಔಚಿತ್ಯವನ್ನೇ ಅನುಸರಿಸುತ್ತವೆ. ಕಾವ್ಯತ್ವದ ಅತಿಮುಖ್ಯವಾದ ಒಂದು ಧರ್ಮವೆಂದು ಗೋಚರವಾದ ಔಚಿತ್ಯಕ್ಕೆ ಸಂಸ್ಕೃತಕಾವ್ಯಮೀಮಾಂಸೆಯಲ್ಲಿ ಹಿರಿದಾದ ಸ್ಥಾನವಿದೆ. ಇದು ಕಾವ್ಯತತ್ತ್ವಕ್ಕೆ ಮೂಲಭೂತವಾದ ಅಂಶವೆಂಬ ಪ್ರತಿಪಾದನೆ ಅಲ್ಲಿ ಉದ್ದಕ್ಕೂ ಕಂಡುಬರುತ್ತದೆ. ಕಡೆಕಡೆಗೆ ಆ ಅಂಶವೇ ಪುಷ್ಟಿಗೊಂಡು ಎಲ್ಲ ಕಾವ್ಯಾಂಗಗಳಿಗೂ ಇರಬಹುದಾದ ಪ್ರಾಮುಖ್ಯದ ದೃಷ್ಟಿಯಿಂದ ನಡೆಸಿದ ವಿಶೇಷ ಪರಿಶೀಲನೆಯ ಫಲವೇ ಔಚಿತ್ಯ-ಎಂಬ ಕಲ್ಪನೆ ಪ್ರಬಲಗೊಳ್ಳುತ್ತದೆ.

Tags:

ಔಚಿತ್ಯ ಚರಿತ್ರೆಔಚಿತ್ಯ ವ್ಯಾಖ್ಯಾನಔಚಿತ್ಯ ಕ್ಷೇಮೇಂದ್ರನ ವಿಚಾರಔಚಿತ್ಯ ಕುಪ್ಪುಸ್ವಾಮಿಶಾಸ್ತ್ರಿ ವಿಚಾರಔಚಿತ್ಯ

🔥 Trending searches on Wiki ಕನ್ನಡ:

ಪತ್ರಇಮ್ಮಡಿ ಪುಲಿಕೇಶಿಸರ್ಕಾರೇತರ ಸಂಸ್ಥೆರಾಸಾಯನಿಕ ಗೊಬ್ಬರಪಿತ್ತಕೋಶಜಯಚಾಮರಾಜ ಒಡೆಯರ್ರತ್ನಾಕರ ವರ್ಣಿಧನಂಜಯ್ (ನಟ)ಎಲೆಕ್ಟ್ರಾನಿಕ್ ಮತದಾನಪ್ರಜಾಪ್ರಭುತ್ವಕರ್ನಾಟಕದಲ್ಲಿ ವನ್ಯಜೀವಿಧಾಮಗಳುಸತ್ಯ (ಕನ್ನಡ ಧಾರಾವಾಹಿ)ಕಾರ್ಲ್ ಮಾರ್ಕ್ಸ್ವಿಭಕ್ತಿ ಪ್ರತ್ಯಯಗಳುಬೌದ್ಧ ಧರ್ಮದೇವನೂರು ಮಹಾದೇವಕರ್ಕಾಟಕ ರಾಶಿಜನ್ನಗಿಡಮೂಲಿಕೆಗಳ ಔಷಧಿಸಂಕಲ್ಪಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಹೊಂಗೆ ಮರಒಡೆಯರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕಾವೇರಿ ನದಿಭಾರತದಲ್ಲಿ ಮೀಸಲಾತಿಮ್ಯಾಕ್ಸ್ ವೆಬರ್ಮನರಂಜನೆಶಿವಆದಿ ಶಂಕರಮಾಸಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಕವಿರಾಜಮಾರ್ಗಅಕ್ಕಮಹಾದೇವಿರಶ್ಮಿಕಾ ಮಂದಣ್ಣಇಮ್ಮಡಿ ಪುಲಕೇಶಿವಿವಾಹಮಹಮ್ಮದ್ ಘಜ್ನಿಮಧ್ವಾಚಾರ್ಯಭೂಕುಸಿತಶನಿ (ಗ್ರಹ)ಎಸ್.ನಿಜಲಿಂಗಪ್ಪಭಾಮಿನೀ ಷಟ್ಪದಿಒಂದನೆಯ ಮಹಾಯುದ್ಧದೇವರಾಜ್‌ಸವದತ್ತಿಹುಬ್ಬಳ್ಳಿತಿಂಥಿಣಿ ಮೌನೇಶ್ವರಜನಪದ ಕಲೆಗಳುಜ್ಞಾನಪೀಠ ಪ್ರಶಸ್ತಿನಾಮಪದಸುಮಲತಾಕರ್ನಾಟಕ ವಿಧಾನ ಪರಿಷತ್ಸರ್ವಜ್ಞಮಧುಮೇಹಮದುವೆರಾಜ್ಯಸಭೆಕನ್ನಡ ರಾಜ್ಯೋತ್ಸವಶಿವರಾಜ್‍ಕುಮಾರ್ (ನಟ)ಮಾನ್ವಿತಾ ಕಾಮತ್ರಮ್ಯಾ ಕೃಷ್ಣನ್ಚಿನ್ನರಚಿತಾ ರಾಮ್ರಾಷ್ತ್ರೀಯ ಐಕ್ಯತೆಸರಸ್ವತಿ ವೀಣೆಮಂಡ್ಯಆಯುರ್ವೇದಹನುಮಂತಕುಮಾರವ್ಯಾಸದಲಿತಅಮೇರಿಕ ಸಂಯುಕ್ತ ಸಂಸ್ಥಾನಚಿಪ್ಕೊ ಚಳುವಳಿದ್ರೌಪದಿ ಮುರ್ಮುಸೀತೆಶರಣಬಸವೇಶ್ವರ ದೇವಸ್ಥಾನ ಕಲಬುರಗಿರೇಣುಕಹಣಭಾರತದ ಜನಸಂಖ್ಯೆಯ ಬೆಳವಣಿಗೆ🡆 More