ಇ-ಜ್ಞಾನ

ಕನ್ನಡಪ್ರಭ ದಿನಪತ್ರಿಕೆಗೆ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಬರೆಯುತ್ತಿದ್ದ ಸಾಪ್ತಾಹಿಕ ಅಂಕಣ.

ಅಂಕಣದ ಒಂದು ಸ್ಯಾಂಪಲ್ ಬರಹ ಇಲ್ಲಿದೆ. ವಿಕಿರಣ ಮಾಪಕ - ಚಿಕಿತ್ಸೆ ಪಡೆಯುವವರ ಆಶಾ ದ್ಯೋತಕ! - '''ಹಾಲ್ದೊಡ್ಡೇರಿ ಸುಧೀಂದ್ರ'''

‘ವಿಕಿರಣ’ ಎಂದೊಡನೆ ಬೆಚ್ಚಿ ಬೀಳುವಂತಾಗುತ್ತದೆ. ಕಾರಣ, ಪರಮಾಣು ವಿದ್ಯುತ್ ಸ್ಥಾವರಗಳಿಂದ ಚಿಮ್ಮುವ ವಿಕಿರಣವು ದೇಹಕ್ಕೆ ಊಹಿಸಿಕೊಳ್ಳಲೂ ಆಗದಂಥ ತೊಂದರೆಗಳನ್ನು ಮಾಡುತ್ತದೆಂಬ ಭೀತಿ. ಕೆಲವೊಮ್ಮೆ ವಿಕಿರಣಕ್ಕೆ ಹೆಚ್ಚು ಕಾಲ ಒಡ್ಡಿಕೊಂಡರೆ ಆ ವ್ಯಕ್ತಿಯ ‘ವಂಶವಾಹಿ - ಜೀನ್’ಗಳಲ್ಲಿ ಬದಲಾವಣೆಗಳಾಗಬಹುದು. ಇದರಿಂದ ನ್ಯೂನತೆಗಳು ಆನುವಂಶಿಕವಾಗಿ ಹರಡಬಹುದು. ಆದರೆ ಕ್ಯಾನ್ಸರ್ ಸೇರಿದಂತೆ ಅನೇಕ ಪೂರ್ಣ ವಾಸಿ ಮಾಡಲಾಗದ ನ್ಯೂನತೆ ಅಥವಾ ಕಾಯಿಲೆಗಳಿಗೆ ವಿಕಿರಣ ಚಿಕಿತ್ಸೆಯೇ (ರೇಡಿಯೇಶನ್ ಥೆರಪಿ) ಪರಿಹಾರ. ಹಾಗೆಯೇ ಕೆಲವೊಂದು ತಪಾಸಣಾ ಕಾರ್ಯಗಳಿಗೂ ಸಹಾ ಎಕ್ಸ್-ಕಿರಣ‍ಗಳಂಥ ವಿಕಿರಣಗಳನ್ನು ಬಳಸಲೇ ಬೇಕಾದ ಅನಿವಾರ್ಯವಿದೆ. ದೇಹವೊಂದು ಎಷ್ಟು ತೀವ್ರತೆಯ ವಿಕಿರಣವನ್ನು ಎದುರಿಸಬಲ್ಲದು ಎಂದು ನಿರ್ಧರಿಸುವ ಮಾನಕಗಳಿವೆ. ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಹೊರಸೂಸುವ ವಿಕಿರಣ ಮಟ್ಟದ ಬಗ್ಗೆ ಸತತವಾಗಿ ನಿಗಾ ವಹಿಸಲಾಗುತ್ತದೆ.

ಕ್ಯಾನ್ಸರ್ ಗಡ್ಡೆಗಳಿಗೆ ಸತತವಾಗಿ ವಿಕಿರಣ ಚಿಕಿತ್ಸೆ ನೀಡಬೇಕಾಗುತ್ತದೆ. ಎಷ್ಟೇ ನಿಗಾ ವಹಿಸಿದರೂ ಗಡ್ಡೆಯೊಂದು ಒಟ್ಟಾರೆ ಎಷ್ಟು ವಿಕಿರಣವನ್ನು ಸ್ವೀಕರಿಸಿದೆ ಎಂದು ನಿಖರವಾಗಿ ಅಳೆಯಲು ಸಾಧ್ಯವಿಲ್ಲ. ಜತೆಗೆ ಗಡ್ಡೆಯ ಸುತ್ತಮುತ್ತಲ ಅಂಗಾಂಶಗಳಿಗೆ (ಟಿಶ್ಯೂ) ವಿಕಿರಣ ಬೀಳದಂತೆ ನೋಡಿಕೊಳ್ಳಲಾಗುವುದಿಲ್ಲ. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲಿ ಅಮೆರಿಕದ ಪರ್‌ಡ್ಯೂ ವಿಶ್ವವಿದ್ಯಾಲಯದ ಎಂಜಿನೀರ್‌ಗಳು ಸೂಚಿಸಿರುವ ಪರಿಹಾರ ಕ್ಯಾನ್ಸರ್ ತಜ್ಞರಿಗೆ ಒಪ್ಪಿಗೆಯಾಗಿದೆ.

ದೊಡ್ಡದೊಂದು ಸಿರಿಂಜ್ ಮೂಲಕ ದೇಹದ ನಿರ್ದಿಷ್ಟ ಭಾಗಕ್ಕೆ ಕಳುಹಿಸಬಹುದಾದ ಚಿಕಿತ್ಸಾ ಸಾಧನದ ಗಾತ್ರ ಅತ್ಯಂತ ಕಿರಿದಾಗಿದೆ. ಎರಡೂವರೆ ಮಿಲಿಮೀಟರ್ ವ್ಯಾಸ ಹಾಗೂ ಎರಡು ಸೆಂಟಿಮೀಟರ್ ಉದ್ದದ ಕೊಳವೆಯೊಳಗೆ ಪುಟಾಣಿ ‘ಡೋಸಿಮೀಟರ್’ ಒಂದು ಕುಳಿತಿರುತ್ತದೆ. ಚಿತ್ರದಲ್ಲಿ ತೋರಿಸಿರುವ ಚಿಮಟದ ತುದಿಯಲ್ಲಿ ಸಾಧನವನ್ನು ಕಾಣಬಹುದು. (ಗಾತ್ರದ ಮನವರಿಕೆಗಾಗಿ ನಾಣ್ಯವೊಂದನ್ನು ಜತೆಗೇ ಇಡಲಾಗಿದೆ). ಡೋಸಿಮೀಟರ್ ಎಂದರೆ ದೇಹಕ್ಕೆ ವಿಕಿರಣದ ‘ಡೋಸ್’ (ಪ್ರಮಾಣ) ಎಷ್ಟು ಮುಟ್ಟಿದೆ ಎಂದು ಅಳೆಯಬಲ್ಲ ಸಾಧನ. ಸಾಮಾನ್ಯವಾಗಿ ವಿಕಿರಣ ಹೆಚ್ಚು ಸೂಸುವ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ತಾಯಿತದಂತೆ ಇಂಥ ಸಾಧನಗಳನ್ನು ಕಟ್ಟಲಾಗುತ್ತದೆ. ನಿತ್ಯವೂ ಈ ಮೀಟರ್‌ನಲ್ಲಿ ದಾಖಲಾಗಿರುವ ಅಳತೆಯನ್ನು ಕಂಪನಿಯ ದಾಖಲೆಗಳಲ್ಲಿ ಸೇರಿಸಲಾಗುತ್ತದೆ. ವಿಕಿರಣ ಸ್ವೀಕೃತಿ ಅಪಾಯದ ಮಟ್ಟವನ್ನು ಮುಟ್ಟುತ್ತಿರುವ ಸೂಚನೆ ಸಿಕ್ಕೊಡನೆ ಎಚ್ಚರಿಕೆಯನ್ನೂ ನೀಡುತ್ತದೆ.

ಮಹಿಳೆಯರಿಗೆ ತಗಲುವ ಸ್ತನ ಕ್ಯಾನ್ಸರ್ ಹಾಗೂ ಪುರುಷರನ್ನು ಕಾಡುವ ಪ್ರೋಸ್ಟೇಟ್ ಗ್ರಂಥಿ ಕ್ಯಾನ್ಸರ್‌ಗಳಿಗೆ ಪರಿಹಾರವಿರುವುದು ಸತತವಾದ ವಿಕಿರಣ ಚಿಕಿತ್ಸೆ. ಇಂಥ ಸಂದರ್ಭಗಳಲ್ಲಿ ಪರ್‌ಡ್ಯೂ ತಜ್ಞರು ರೂಪಿಸಿರುವ ವಿಕಿರಣ ಮಾಪಕವನ್ನು ಕ್ಯಾನ್ಸರ್ ತಗಲಿರುವ ಪ್ರದೇಶದಲ್ಲಿ ಹುದುಗಿಸಿಟ್ಟರೆ, ಅದು ವೈದ್ಯ ವಿಜ್ಞಾನಿಗಳಿಗೆ ಒಟ್ಟಾರೆ ಸ್ವೀಕೃತವಾಗಿರುವ ವಿಕಿರಣದ ಮಟ್ಟವನ್ನು ತಿಳಿಸಬಲ್ಲದು.

ಕ್ಯಾನ್ಸರ್‌ಗೆ ಶಸ್ತ್ರಕ್ರಿಯೆ, ರಾಸಾಯನಿಕ ಶುಶ್ರೂಷೆಯೂ ಸೇರಿದಂತೆ ಹಲವು ಪರಿಹಾರಗಳಿವೆ. ಆದರೂ ಪೂರಕ ಚಿಕಿತ್ಸೆಯಾಗಿ ವಿಕಿರಣಕ್ಕೆ ಒಡ್ಡುವ ಮೂಲಕ ಕ್ಯಾನ್ಸರ್ ಗಡ್ಡೆಗಳನ್ನು ಪೂರ್ಣವಾಗಿ ಕರಗಿಸಲೇಬೇಕಾಗುತ್ತದೆ. ಸಾಮಾನ್ಯವಾಗಿ ವಿಕಿರಣ ಚಿಕಿತ್ಸೆ ನೀಡುವಾಗ ಅದರ ತೀವ್ರತೆಯನ್ನು ಹೆಚ್ಚಿಸಲು ಹಲವು ದಿಕ್ಕುಗಳಿಂದ ಪ್ರಬಲ ಕಿರಣಗಳನ್ನು ಕೇಂದ್ರೀಕರಿಸಲಾಗುತ್ತದೆ. ಇವೆಲ್ಲವೂ ನೀಡಬಲ್ಲ ಒಟ್ಟಾರೆ ವಿಕಿರಣ ಮಟ್ಟವನ್ನು ಅಳೆದು ದಾಖಲಿಸಿಕೊಳ್ಳಲಾಗುತ್ತದೆ. ಆದರೂ ಈ ಅಳತೆ ಪ್ರಮಾಣಬದ್ಧವಾಗಿದೆಯೇ ಎಂದು ಪರಿಶೀಲಿಸಬೇಕಾದ ಕರ್ತವ್ಯ ಚಿಕಿತ್ಸಕರದು. ಈ ನಿಟ್ಟಿನಲ್ಲಿ ದೇಹದಲ್ಲೇ ಹುದುಗಿಸಬಹುದಾದ ಮಾಪಕ ನೆರವು ನೀಡಬಹುದೆಂಬ ನಿರೀಕ್ಷೆ ವೈದ್ಯ-ವಿಜ್ಞಾನಿಗಳದು.

ಈಗ ರೂಪಿಸಲಾದ ಸಾಧನವು ಇನ್ನೊಂದು ವರ್ಷದಲ್ಲಿ ಅಮೆರಿಕದ ಆಸ್ಪತ್ರೆಗಳಲ್ಲಿ ಬಳಕೆಗೆ ಬರಬಹುದು. ಈ ಸಾಧನವನ್ನು ರೂಪಿಸಿದ ತಂಡದ ಪ್ರಧಾನ ವಿಜ್ಞಾನಿ ಬಬಾಕ್ ಝಿಯಾಯ್ ಅವರು ಅದರ ಗಾತ್ರವನ್ನು ಕನಿಷ್ಟ ಅರ್ಧದಷ್ಟು ಇಳಿಸುವ ಆಲೋಚನೆಯಲ್ಲಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಸವಾಲನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಹೊಂದಿದ್ದಾರೆ. [೧೦ನೇ ಮೇ ೨೦೦೮]

Tags:

ಕನ್ನಡಪ್ರಭಸುಧೀಂದ್ರ ಹಾಲ್ದೊಡ್ಡೇರಿ

🔥 Trending searches on Wiki ಕನ್ನಡ:

ಪಂಚಾಂಗಕನ್ಯಾಕುಮಾರಿಡಿ.ವಿ.ಗುಂಡಪ್ಪಸಂವಿಧಾನಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ದ್ರವ್ಯಬಹುವ್ರೀಹಿ ಸಮಾಸಬಾನು ಮುಷ್ತಾಕ್ಬಿ.ಜಯಶ್ರೀಗುರುರಾಜ ಕರಜಗಿನವಿಲುಕೋಸುಉತ್ತರ ಕನ್ನಡವ್ಯಕ್ತಿತ್ವಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಜಾಗತಿಕ ತಾಪಮಾನ ಏರಿಕೆಭರತೇಶ ವೈಭವಸಂಖ್ಯಾಶಾಸ್ತ್ರಮಯೂರಶರ್ಮಗುರುನಾನಕ್ಕೃಷಿಶಾಂತಕವಿಜೈಮಿನಿ ಭಾರತಬುಡಕಟ್ಟುಮೂಲಧಾತುಗಳ ಪಟ್ಟಿಭಾರತದಲ್ಲಿನ ಶಿಕ್ಷಣರಾಣೇಬೆನ್ನೂರುಶಂ.ಬಾ. ಜೋಷಿಕೊಳ್ಳೇಗಾಲಆಮ್ಲಜನಕಕರ್ನಾಟಕ ವಿಧಾನ ಸಭೆರಾಷ್ಟ್ರಕವಿಸೋಮೇಶ್ವರ ಶತಕಶ್ರೀ ರಾಘವೇಂದ್ರ ಸ್ವಾಮಿಗಳುಬಾರ್ಲಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಕುಮಾರವ್ಯಾಸಸುಬ್ಬರಾಯ ಶಾಸ್ತ್ರಿಉಮಾಶ್ರೀತೆಲುಗುಟಿಪ್ಪು ಸುಲ್ತಾನ್ಕರ್ನಾಟಕದ ಜಿಲ್ಲೆಗಳುಮಳೆಗಾಲಜೋಡು ನುಡಿಗಟ್ಟುಶಬ್ದ ಮಾಲಿನ್ಯವೇದಬಿ.ಎಸ್. ಯಡಿಯೂರಪ್ಪನೀರುಪೆರಿಯಾರ್ ರಾಮಸ್ವಾಮಿಕಿರುಧಾನ್ಯಗಳುಎಚ್ ನರಸಿಂಹಯ್ಯಕರ್ನಾಟಕ ಲೋಕಸೇವಾ ಆಯೋಗಟಿ. ವಿ. ವೆಂಕಟಾಚಲ ಶಾಸ್ತ್ರೀದೆಹಲಿದೀಪಾವಳಿರೋಮನ್ ಸಾಮ್ರಾಜ್ಯಕಾಳ್ಗಿಚ್ಚುಧನಂಜಯ್ (ನಟ)ರಾಣಿ ಅಬ್ಬಕ್ಕವಿಜಯಾ ದಬ್ಬೆರಾಮ ಮನೋಹರ ಲೋಹಿಯಾರಾಮಾಯಣಗಣರಾಜ್ಯೋತ್ಸವ (ಭಾರತ)ಉಡುಪಿ ಜಿಲ್ಲೆಫ್ರೆಂಚ್ ಕ್ರಾಂತಿಕುಂದಾಪುರಭಾರತ ಸಂವಿಧಾನದ ಪೀಠಿಕೆನಾಗೇಶ ಹೆಗಡೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸರಸ್ವತಿರಸ(ಕಾವ್ಯಮೀಮಾಂಸೆ)ಬಂಡಾಯ ಸಾಹಿತ್ಯಸಾರಾ ಅಬೂಬಕ್ಕರ್ಒಟ್ಟೊ ವಾನ್ ಬಿಸ್ಮಾರ್ಕ್ಗಣೇಶ ಚತುರ್ಥಿಭಾರತದ ರಾಷ್ಟ್ರಪತಿಗಳ ಪಟ್ಟಿಭಾರತ ರತ್ನಹಾ.ಮಾ.ನಾಯಕವಚನಕಾರರ ಅಂಕಿತ ನಾಮಗಳು🡆 More