ನೈಸರ್ಗಿಕ ಆಯ್ಕೆ

ನೈಸರ್ಗಿಕ ಆಯ್ಕೆ ಎಂದರೆ ಜೀವಿಗಳ ವ್ಯಕ್ಯನಮೂನೆಯಲ್ಲಿನ ವ್ಯತ್ಯಾಸದ ಕಾರಣಕ್ಕೆ ಅವುಗಳ ಬದುಕುಳಿಯುವಿಕೆ ಮತ್ತು ಸಂತಾನೋತ್ಪತ್ತಿಯಲ್ಲಿ ಆಗುವ ವ್ಯತ್ಯಾಸ.

ಜನಸಂಖ್ಯೆಯ ಅನುವಂಶಿಕವಾಗಿ ಪ್ರಾಪ್ತವಾಗಬಲ್ಲ ಗುಣಗಳು ಕಾಲಕಳೆದಂತೆ ಬದಲಾಗುವದನ್ನು ಒಳಗೊಳ್ಳುವ ಇದು ವಿಕಾಸದ ಅತಿ ಮುಖ್ಯ ಮೆಕಾನಿಸಂ. ಚಾರ್ಲ್ಸ್ ಡಾರ್ವಿನ್ “ನೈಸರ್ಗಿಕ ಆಯ್ಕೆ”ಯನ್ನು ಜನಪ್ರಿಯಗೊಳಿಸಿದ ಮತ್ತು ಅದನ್ನು ಕೃತಕ ಆಯ್ಕೆಗೆ (ಸೆಲೆಕ್ಟಿವ್ ಬ್ರೀಡಿಂಗ್) ಹೋಲಿಸಿದ.

ಜೀವಿಗಳ ಜನಸಂಖ್ಯೆಯಲ್ಲಿ ಭಿನ್ನ ಗುಣಗಳು ಇರುತ್ತವೆ. ಇವು ಜೀವಿಯೊಂದರ ಜಿನೋಮ್‌ನಲ್ಲಿ ಹುಟ್ಟುವ ವ್ಯತ್ಯಯನ ಅಥವಾ ಮ್ಯುಟೇಶನ್‌ಗಳ ಕಾರಣಕ್ಕೆ ಭಾಗಶಹ ಉಂಟಾಗುತ್ತವೆ. ಜೀವಿಯೊಂದರ ಸಂತತಿಯು ವ್ಯತ್ಯಯನಗಳನ್ನು ಅನುವಂಶಿಕವಾಗಿ ಪಡೆಯ ಬಹುದು. ಜೀವನದಾದ್ಯಂತ ಜೀವಿಗಳ ಜಿನೋಮ್‌ಗಳು ಪರಿಸರದೊಂದಿಗೆ ಪರಸ್ಪರ ಕ್ರಿಯೆ ನಡೆಸುತ್ತವೆ ಮತ್ತು ಇದು ಗುಣಗಳಲ್ಲಿನ ವ್ಯತ್ಯಾಸಕ್ಕೆ ಕಾರಣವಾಗುತ್ತದೆ (ಜೀವಿಯ ಪರಿಸರವು ಜೀವಕೋಶದೊಳಗಿನ ಅಣ್ವಿಕ ಜೀವಶಾಸ್ತ್ರ, ಇತರ ಜೀವಕೋಶಗಳು, ಇತರ ಜೀವಿಗಳು, ಜನಸಂಖ್ಯೆ, ಆ ಜೀವಿಯ ಜೀವಸಂಕುಲ ಅಲ್ಲದೆ ಜೈವಿಕೇತರ ಪರಿಸರವನ್ನೂ ಒಳಗೊಳುತ್ತದೆ.). ನಿರ್ದಿಷ್ಟ ವ್ಯತ್ಯಾಸದ ಗುಣಗಳಿರುವ ಜೀವಿಯು ಇತರ ಯಶಸ್ವಿಯಲ್ಲದ ವ್ಯತ್ಯಾಸದ ಗುಣಗಳಿರುವ ಜೀವಿಗಿಂತ ಹೆಚ್ಚು ಕಾಲ ಬದುಕಬಹುದು ಮತ್ತು ಹೆಚ್ಚು ಸಂತಾನೋತ್ಪತ್ತಿ ಮಾಡಬಹುದು. ಆದ್ದರಿಂದ ಜನಸಂಖ್ಯೆ ವಿಕಾಸವಾಗುತ್ತದೆ. ಹಾಗೆಯೇ ಸಂತಾನೋತ್ಪತ್ತಿಯ ಯಶಸ್ಸು ಸಹ ಮುಖ್ಯ, ಈ ಅಂಶವನ್ನು ಗಣನೆಗೆ ತೆಗೆದುಕೊಂಡ ಡಾರ್ವಿನ್ ಲೈಂಗಿಕ ಆಯ್ಕೆ ಚಿಂತನೆಯನ್ನು ಅಭಿವೃದ್ಧಿ ಪಡಿಸಿದ. ಉದಾಹರಣೆಗೆ ಸಂತಾನಶಕ್ತಿಯ ಆಯ್ಕೆಯ ಬಗೆಗೆ ಅವನ ಚಿಂತನೆಗಳು. (೧೯೩೦ರ ದಶಕದಲ್ಲಿ ನೈಸರ್ಗಿಕ ಆಯ್ಕೆಯಲ್ಲಿ ಸೇರಿಸಿದಂತೆ ಲೈಂಗಿಕ ಆಯ್ಕೆಯನ್ನು ಸಾಪೇಕ್ಷಿಕವಾಗಿ ಕಡಿಮೆ ಪ್ರಾಮುಖ್ಯತೆ ಪಡೆದಿದೆ ಎಂದು ಜೀವಶಾಸ್ತ್ರಜ್ಞರು[ಯಾರು?] ಮರುವ್ಯಾಖ್ಯಾನಿಸಿದರು.)

ನೈಸರ್ಗಿಕ ಆಯ್ಕೆಯು ವ್ಯಕ್ಯನಮೂನೆಯ ಮೇಲೆ ಕೆಲಸ ಮಾಡುತ್ತದೆ ಅಥವಾ ಅವಲೋಕಿಸ ಬಹುದಾದ ಜೀವಿಯ ಗುಣಗಳ ಮೇಲೆ ಆಯ್ಕೆ ನಡೆಯುತ್ತದೆ. ಆದರೆ ಯಾವ ವ್ಯಕ್ತನಮೂನೆಗೆ ಸಂತಾನೋತ್ಪತ್ತಿಯ ಅನುಕೂಲ ಹೆಚ್ಚಿರುತ್ತದೆಯೋ ಆ ವ್ಯಕ್ತನಮೂನೆಯು ಜನಸಂಖ್ಯೆಯಲ್ಲಿ ಹೆಚ್ಚು ಸಾಮಾನ್ಯವಾಗುತ್ತದೆ (ನೋಡಿ ಅಲೆಲ್ ಸಂಭವನೀಯತೆ). ಕೆಲ ಕಾಲದ ನಂತರ ಈ ಪ್ರಕ್ರಿಯೆಯು ಜನಸಂಖ್ಯೆ ನಿರ್ದಿಷ್ಟ ಪರಿಸರದ ಸ್ಥಳಾವಕಾಶಕ್ಕೆ ಹೊಂದಿಕೊಳ್ಳುವಿಕೆ (ಮೈಕ್ರೊವಿಕಾಸ) ಮತ್ತು ಕೊನೆಯಲ್ಲಿ ಹೊಸ ಜೀವಸಂಕುಲಗಳ ಉದಯಕ್ಕೆ (ಮ್ಯಾಕ್ರೊವಿಕಾಸ) ಕಾರಣವಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ನೈಸರ್ಗಿಕ ಆಯ್ಕೆಯು ಜೀವಿಯೊಂದರ ಜನಸಂಖ್ಯೆಯು ವಿಕಾಸ ಆಗುವ ಒಂದು ಪ್ರಮುಖ ಪ್ರಕ್ರಿಯೆ (ಇದೊಂದೇ ಪ್ರಕ್ರಿಯೆಯಲ್ಲ). ನೈಸರ್ಗಿಕ ಆಯ್ಕೆಯನ್ನು ಮಾನವನು ತನ್ನ ಅಗತ್ಯಕ್ಕೆ ತಕ್ಕಂತೆ ನಿರ್ದಿಷ್ಟ ಗುಣಗಳನ್ನು ಆಯ್ದುಕೊಳ್ಳುವ (ಅವನಿಗೆ ಬೇಕಾದದು ಯಾವಾಗಲು ಸಿಗುವುದಿಲ್ಲವಾದರೂ) ಕೃತಿಮ ಆಯ್ಕೆಗೆ ಹೋಲಿಸಿ ಅವೆರಡರ ನಡುವಿನ ವ್ಯತ್ಯಾಸಗಳನ್ನು ಗುರುತಿಸ ಬಹುದು. ನೈಸರ್ಗಿಕ ಆಯ್ಕೆಯಲ್ಲಿ ಉದ್ಧೇಶ ಪೂರ್ವಕ ಆಯ್ಕೆ ಇರುವುದಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಕೃತಿಮ ಆಯ್ಕೆಗೆ ಉದ್ಧೇಶವಿದೆ ಆದರೆ ನೈಸರ್ಗಿಕ ಆಯ್ಕೆಗೆ ಉದ್ಧೇಶವಿಲ್ಲ.

ನೈಸರ್ಗಿಕ ಆಯ್ಕೆಯು ಆಧುನಿಕ ಜೀವಶಾಸ್ತ್ರದ ಅಡಿಪಾಯ. ಈ ಪರಿಕಲ್ಪನೆಯನ್ನು ಡಾರ್ವಿನ್ ಮತ್ತು ಅಲ್‌ಫ್ರೆಡ್ ರಸಲ್ ವಾಲೆಸ್ ೧೮೫೮ರಲ್ಲಿ ಪ್ರಬಂಧಗಳಾಗಿ ಮಂಡಿಸಿದರು. ನಂತರದಲ್ಲಿ ಡಾರ್ವಿನ್ ತನ್ನ ಪ್ರಭಾವಿ ೧೮೫೯ರ ಪುಸ್ತಕ ಆನ್ ದಿ ಆರಿಜನ್ ಆಫ್ ಸ್ಪೀಷೀಸ್ಸ್‌ನಲ್ಲಿ ನೈಸರ್ಗಿಕ ಆಯ್ಕೆಯನ್ನು ಮಾನವರು ಉಪಯುಕ್ತ ಗುಣಗಳುಳ್ಳ ಪ್ರಾಣಿ ಮತ್ತು ಸಸ್ಯಗಳನ್ನು ಬೆಳಸುವ ಮೂಲಕ ವ್ಯವಸ್ಥಿತವಾಗಿ ಅವುಗಳ ಸಂತಾನೋತ್ಪತ್ತಿಯ ಬಗೆಗೆ ಪಕ್ಷಪಾತ ತೋರುವ ಪ್ರಕ್ರಿಯೆಯಾದ ಕೃತಿಮ ಆಯ್ಕೆಗೆ ಹೋಲಿಸಿ ವಿವರಿಸಿದ. ನೈಸರ್ಗಿಕ ಆಯ್ಕೆಯನ್ನು ಆರಂಭದಲ್ಲಿ ಸರಿಯಾದ ಅನುವಂಶಿಕತೆಯ ಸಿದ್ಧಾಂತವು ಇಲ್ಲದಯೇ ವಿವರಿಸಲಾಗಿತ್ತು. ಡಾರ್ವಿನ್ ಸಿದ್ಧಾಂತ ರೂಪಿಸುತ್ತಿದ್ದಾಗ ಆಧುನಿಕ ಅನುವಂಶಿಕತೆಯ ಸಿದ್ಧಾಂತಗಳು ಇನ್ನೂ ಅಭಿವೃದ್ಧಿಯಾಗಿರಲಿಲ್ಲ. ಡಾರ್ವಿನ ಸಂಪ್ರದಾಯಿಕ ವಿಕಾಸ ಸಿದ್ಧಾಂತವನ್ನು ಕ್ಲಾಸಿಕಲ್ ಮತ್ತು ಅಣ್ವಿಕ ತಳಿವಿಜ್ಞಾನಗಳ ಅವಿಷ್ಕಾರಗಳೊಂದಿಗೆ ಬೆಸೆದ ಸಿದ್ಧಾಂತವನ್ನು ಆಧುನಿಕ ವಿಕಸನೀಯ ಸಂಯೋಜನೆ ಎಂದು ಕರೆಯಲಾಗಿದೆ. ಈಗಲೂ ನೈಸರ್ಗಿಕ ಆಯ್ಕೆಯು ಹೊಂದಿಕೊಂಡು ವಿಕಾಸವಾಗುವದಕ್ಕೆ ಪ್ರಾಥಮಿಕ ವಿವರಣೆಯಾಗಿ ಉಳಿದುಕೊಂಡಿದೆ.

ಸಾಮಾನ್ಯ ನಿಯಮಗಳು

ಜನಸಂಖ್ಯೆಯೊಂದರಲ್ಲಿ ಹಲವು ನೈಸರ್ಗಿಕ ವ್ಯತ್ಯಾಸಗಳಿರುವ ಜೀವಿಗಳು ಇರುತ್ತವೆ. ಜೀವಿಗಳಲ್ಲಿರುವ ಇಂತಹ ಹಲವು ವ್ಯತ್ಯಾಸಗಳು ಜೀವಿಯ ಬದುಕುವಿಕೆ ಅಥವಾ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ನಿರ್ದಿಷ್ಟ ಜೀವಿಯೊಂದರ ಕೆಲವು ವ್ಯತ್ಯಾಸಗಳು ಬದುಕಿ ಬಾಳುವುದನ್ನು ಮತ್ತು ಸಂತಾನೋತ್ಪತ್ತಿಯ ಸಂಭನೀಯತೆಯನ್ನು ಹೆಚ್ಚು ಮಾಡ ಬಹುದು. ಮೊಲವೊಂದು ವೇಗವಾಗಿ ಓಡ ಬಲ್ಲದಾಗಿದ್ದರೆ ಅದು ಪರಭಕ್ಷಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ಶೈವಲ ಅಥವಾ ಪಾಚಿಗಳಲ್ಲಿ ಸೂರ್ಯನ ಬೆಳಕಿನಿಂದ ಶಕ್ತಿಪಡೆಯುವ ಕಾರ್ಯಕ್ಷಮತೆ ಹೆಚ್ಚಾಗಿದ್ದಲ್ಲಿ ಅವು ವೇಗವಾಗಿ ಬೆಳೆಯುತ್ತವೆ. ಜೀವಿಯ ಬದುಕುವ ಅವಕಾಶ ಹೆಚ್ಚಾಗುವುದು ಹಲವು ಸಲ ಅದರ ಸಂತಾನೋತ್ಪತ್ತಿಯ ದರವನ್ನೂ ಸಹ ಒಳಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಸದ್ಯದ ಸಂತಾನೋತ್ಪತ್ತಿ ಮತ್ತು ಬದುಕುಳಿವಿಕೆಯ ನಡುವೆ ವಿನಿಮಯ ಇರುತ್ತದೆ. ಹೀಗಾಗಿ ಕೊನೆಯದಾಗಿ ಜೀವಿಯ ಒಟ್ಟಾರೆ ಜೀವಿತಾವಧಿಯ ಸಂತಾನೋತ್ಪತ್ತಿಯೇ ಮುಖ್ಯ.

ನೈಸರ್ಗಿಕ ಆಯ್ಕೆ 
ಗಂಡು ಚುಕ್ಕೆ ಪತಂಗ


ಯುನೈಟೆಡ್‌ ಕಿಂಗ್‌ಡಂಮ್‌ನಲ್ಲಿನ ಚುಕ್ಕೆ ಪತಂಗಗಳು ತಿಳಿ ಮತ್ತು ದಟ್ಟ (ಕಪ್ಪು) ಎರಡು ಬಣ್ಣಗಳಲ್ಲಿ ‌ಇವೆ. ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಈ ಪತಂಗಗಳು ಕುಳಿತಿಕೊಳ್ಳುವ ಮರಗಳು ಹೊಗೆಮಸಿಯಿಂದ ಕಪ್ಪಾದವು ಮತ್ತು ಇದು ದಟ್ಟ ಬಣ್ಣದ ಪತಂಗಗಳಿಗೆ ಅನುಕೂಲವಾಗಿ ಪರಿಣಮಿಸಿತು. ಇದು ದಟ್ಟ ಬಣ್ಣದ ಪತಂಗಗಳು ಬದುಕುಳಿಯುವ ಮತ್ತು ದಟ್ಟ ಬಣ್ಣದ ಸಂತತಿಯನ್ನು ಉತ್ಪನ್ನ ಮಾಡುವ ಅವಕಾಶವನ್ನು ಹೆಚ್ಚಾಗಿಸಿತು. ಮೊದಲ ಕಪ್ಪು ಬಣ್ಣದ ಪತಂಗವನ್ನು ಹಿಡಿದ ಐವತ್ತು ವರುಷಗಳಲ್ಲಿಯೇ ಕೈಗಾರಿಕ ಪ್ರದೇಶ ಮ್ಯಾಂಚೆಸ್ಟರ್‌ನ ಬಹುತೇಕ ಎಲ್ಲ ಪತಂಗಗಳೂ ದಟ್ಟ ಬಣ್ಣದವೇ ಆಗಿದ್ದವು. ಈ ಸಮತೋಲನ ೧೮೫೬ರ ಕ್ಲೀನ್ ಏರ್ ಆಕ್ಟ್‌ನ ಪರಿಣಾಮವಾಗಿ ವಿರುದ್ಧ ದಿಕ್ಕಿನೆಡೆ ತುಡಿಯಿತು, ನೈಸರ್ಗಿಕ ಆಯ್ಕೆಯ ಪರಿಣಾಮವಾಗಿ ಚುಕ್ಕೆ ಪಂತಗಗಳ ವಿಕಾಸವನ್ನು ಸೂಚಿಸುತ್ತಾ ಮತ್ತೆ ದಟ್ಟ ಬಣ್ಣದ ಪತಂಗಗಳು ವಿರಳವಾದವು.

ನೈಸರ್ಗಿಕ ಆಯ್ಕೆ 
ಟಿಪಿಕಾ ರೂಪದ ಮತ್ತು ಕಾರ್‌ಬೋನೇರಿಯ ರೂಪದ ಎರಡು ಚುಕ್ಕೆ ಪತಂಗಗಳು ಒಂದೇ ಮರದ ಮೇಲೆ ಕುಳಿತಿವೆ. ತಿಳಿ ಬಣ್ಣದ ಟಿಪಿಕಾ ರೂಪದ್ದನ್ನು (ತೊಗಟೆಯ ಗುರುತಿನ ಕೆಳಗೆ) ಮಾಲಿನ್ಯಕ್ಕೆ ತುತ್ತಾಗದ ಮರದ ಮೇಲೆ ಗುರುತಿಸುವುದು ಕಷ್ಟ, ಹೀಗಾಗಿ ಅದು ಪರಭಕ್ಷಕಗಳಿಂದ ಮರೆಯಾಗಿದೆ.

ಜೀವಿಗಳಿಗೆ ಸಂತಾನೋತ್ಪತ್ತಿಯ ಅನುಕೂಲವನ್ನು ಕೊಡುವ ಈ ಗುಣಗಳು ನಂತರದ ಪೀಳಿಗೆಗೆ ದತ್ತವಾಗಬಲ್ಲವು ಸಹ. ಅಂದರೆ ಜನ್ಮದಾತದಿಂದ ಸಂತತಿಗೆ ದಾಟಿಹೋಗ ಬಲ್ಲವು ಸಹ. ಇದು ನಂತರದ ಪೀಳಿಗೆಯಲ್ಲಿ ವೇಗವಾಗಿ ಓಡುವ ಮೊಲಗಳ ಅಥವಾ ಹೆಚ್ಚಿನ ಕಾರ್ಯಕ್ಷಮತೆ ಇರುವ ಪಾಚಿಗಳ ಇರುವಿಕೆಯನ್ನು ತುಸು ಹೆಚ್ಚಾಗಿಸುತ್ತದೆ. ಇದನ್ನು ಸಂತಾನೋತ್ಪತ್ತಿಯ ವ್ಯತ್ಯಾಸ ಎಂದು ಕರೆಯಲಾಗಿದೆ. ಸಂತಾನೋತ್ಪತ್ತಿಯ ಅನುಕೂಲ ಸ್ವಲ್ಪವೇ ಹೆಚ್ಚಾಗಿದ್ದಾಗಲೂ ಜನಸಂಖ್ಯೆಯಲ್ಲಿನ ಮುಂದಿನ ಸಂತತಿಗೆ ಕೊಡಲ್ಪಟ್ಟ ಗುಣ ಹಲವು ಪೀಳಿಗೆಗಳಲ್ಲಿ ಅಧಿಕ್ಯತೆ ಪಡೆಯುತ್ತದೆ. ಈ ರೀತಿ ನೈಸರ್ಗಿಕ ಪರಿಸರವು ನಿರ್ದಿಷ್ಟ ಗುಣಗಳ ಮೂಲಕ ಸಂತಾನೋತ್ಪತ್ತಿಯ ಅನುಕೂಲ ಪಡೆದ ಜೀವಿಯನ್ನು “ಆಯ್ಕೆ” ಮಾಡಿಕೊಳ್ಳುತ್ತದೆ ಮತ್ತು ನಿಧಾನವಾದ ಬದಲಾವಣೆಗಳಿಗೆ ಅಥವಾ ಜೀವಿಯ ವಿಕಾಸಕ್ಕೆ ಕಾರಣವಾಗುತ್ತದೆ. ಈ ಪರಿಣಾಮವನ್ನು ಮೊದಲು ಹೆಸರಿಸಿ, ವಿವರಿಸಿದುದು ಚಾರ್ಲ್ಸ್ ಡಾರ್ವಿನ್.

ಎಲ್ಲಾ ಜೀವಿಗಳಲ್ಲಿಯೂ ಅನುವಂಶಿಕ ಮೆಕಾನಿಸಂ ಆದ ಅನುವಂಶಿಕತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಮುಂಚೆ ನೈಸರ್ಗಿಕ ಆಯ್ಕೆ ಪರಿಕಲ್ಪನೆ ಆಸ್ತಿತ್ವಕ್ಕೆ ಬಂತು. ಆಧುನಿಕ ಅರ್ಥದಲ್ಲಿ ಆಯ್ಕೆಯು ಜೀವಿಯ ವ್ಯಕ್ತನಮೂನೆ ಅಥವಾ ಅವಲೋಕಿಸ ಬಹುದಾದ ಗುಣಗಳ ಮೇಲೆ ಕೆಲಸ ಮಾಡುತ್ತದೆ. ಆದರೆ ಜೀವಿಯ ಅನುವಂಶಿಕತೆಯ ಸಾಮಗ್ರಿ ಅಥವಾ ಜೀನ್‌ನಮೂನೆಯು ಜನ್ಮದಾತದಿಂದ ಸಂತತಿಗೆ ಕೊಡಲ್ಪಡುತ್ತದೆ. ವ್ಯಕ್ತನಮೂನೆಯು ಜೀವಿಯ ಜೀನ್‌ನಮೂನೆ ಮತ್ತು ಜೀವಿಯು ಬದುಕುವ ಪರಿಸರಗಳ ಪರಿಣಾಮವಾಗಿ ಉಂಟಾಗುತ್ತದೆ.

ಇದು ಆಧುನಿಕ ವಿಕಸನೀಯ ಸಂಯೋಜನೆ ವಿವರಿಸದಂತೆ ಆಯ್ಕೆ ಮತ್ತು ಅನುವಂಶಿಕತೆಗಳ ನಡುವಿನ ಕೊಂಡಿ. ವಾಸ್ತವದಲ್ಲಿ ವಿಕಾಸ ಸಿದ್ಧಾಂತದ ಪೂರ್ಣ ವಿವರಗಳು ಅನುವಂಶಿಕ ವ್ಯತ್ಯಾಸವು ಹೇಗೆ ಉಂಟಾಗುತ್ತದೆ (ವ್ಯತ್ಯಯನ ಮತ್ತು ಲೈಂಗಿಕ ಸಂತಾನೋತ್ಪತ್ತಿ) ಮತ್ತು ಇತರ ವಿಕಸನೀಯ ಮೆಕಾನಿಸಂಗಳನ್ನು (ಜೆನೆಟಿಕ್ ಚಲನೆ ಮತ್ತು ವಂಶವಾಹಿಗಳ ಹರಿವುನಂತಹವು) ಸಹ ಒಳಗೊಳ್ಳುತ್ತದೆ. ನೈಸರ್ಗಿಕ ಆಯ್ಕೆಯು ಪ್ರಕೃತಿಯಲ್ಲಿನ ಸಂಕೀರ್ಣ ಹೊಂದಾಣಿಕೆಗಳನ್ನು ವಿವರಿಸಬಲ್ಲ ಅತಿ ಮುಖ್ಯವಾದ ಮೆಕಾನಿಸಂ.

ಹೆಸರು ಮತ್ತು ಬಳಕೆ

ನೈಸರ್ಗಿಕ ಆಯ್ಕೆ ಎಂಬುವ ಪದವು ಭಿನ್ನ ಸಂದರ್ಭಗಳಲ್ಲಿ ತುಸು ಭಿನ್ನವಾದ ವ್ಯಾಖ್ಯಾನ ಪಡೆಯುತ್ತದೆ. ಅದನ್ನು ಬಹಳಷ್ಟು ಸಲ ಅನುವಂಶಿಕವಾಗಿ ಪ್ರಾಪ್ತವಾಗಬಲ್ಲ ಗುಣಗಳ ಮೇಲೆ ಕೆಲಸ ಮಾಡುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತದೆ ಏಕೆಂದರೆ ಈ ಗುಣಗಳು ನೇರವಾಗಿ ವಿಕಾಸದಲ್ಲಿ ಭಾಗವಹಿಸುತ್ತವೆಯಾದ್ದರಿಂದ. ಆದರೆ ನೈಸರ್ಗಿಕ ಆಯ್ಕೆ “ಕುರುಡು”. ಅಂದರೆ ವ್ಯಕ್ತನಮೂನೆಯಲ್ಲಿನ (ದೈಹಿಕ ಮತ್ತು ವರ್ತನೆಗೆ ಸಂಬಂಧಿಸಿದ ಗುಣಗಳು) ಸಂತಾನೋತ್ಪತ್ತಿಯ ಅನುಕೂಲಗಳನ್ನು ನೀಡುವ ಬದಲಾವಣೆಗಳು ಆ ಗುಣಗಳು ಅನುವಂಶಿಕವಾಗಿ ಕೊಡಲ್ಪಡಲಿ ಅಥವಾ ಕೊಡಲ್ಪಡದಿರಲಿ ಆಯ್ಕೆಯಾಗುತ್ತವೆ (ಅನುವಂಶಿಕವಾಗಿ ಕೊಡಲ್ಪಡದ ಗುಣಗಳು ಪರಿಸರದ ಅಂಶಗಳ ಅಥವಾ ಜೀವಿಯ ಬದುಕಿನ ಅನುಭವದ ಆಧಾರದ ಮೇಲೆ ಉಂಟಾದ ಪರಿಣಾಮಗಳು).

ಡಾರ್ವಿನ್‌ನ ಆರಂಭಿಕ ಬಳಕೆಯನ್ನು ಅನುಸರಿಸಿ ಈ ಪದವನ್ನು ಕುರುಡು ಆಯ್ಕೆಯ ವಿಕಸನೀಯ ಪರಿಣಾಮ ಹಾಗೂ ಅದರ ಮೆಕಾನಿಸಂ ಎರಡಕ್ಕೂ ಅನ್ವಯಿಸಲಾಗುತ್ತದೆ. ಇದು ಕೆಲವೊಮ್ಮೆ ಆಯ್ಕೆಯ ಮೆಕಾನಿಸಂ ಮತ್ತು ಅದರ ಪರಿಣಾಮಗಳ ನಡುವೆ ಸ್ಪಷ್ಟವಾಗಿ ವ್ಯತ್ಯಾಸವನ್ನು ಗುರುತಿಸಲು ಸಹಾಯಕವಾಗುತ್ತದೆ. ಈ ವ್ಯತ್ಯಾಸವು ಮುಖ್ಯವಾದಾಗ ವಿಜ್ಞಾನಿಗಳು “ನೈಸರ್ಗಿಕ ಆಯ್ಕೆಯು ಯಾವ ಮೆಕಾನಿಸಂಗಳ ಮೂಲಕ ಸಂತಾನೋತ್ಪತ್ತಿ ಮಾಡಬಲ್ಲ ಜೀವಿಗಳ ಆಯ್ಕೆಯಾಗುತ್ತದಯೋ ಅದು” ಎಂದು ವ್ಯಾಖ್ಯಾನಿಸಿದ್ದಾರೆ. ಇದು ಆಯ್ಕೆಯ ಆಧಾರವು ಅನುವಂಶಿಕವಾಗಿ ಪ್ರಾಪ್ತವಾಗುತ್ತದಯೊ ಇಲ್ಲವೊ ಎಂಬುದನ್ನು ಪರಿಗಣಿಸುವುದಿಲ್ಲ ಮತ್ತು ಇದನ್ನು ಕೆಲವೊಮ್ಮೆ “ವ್ಯಕ್ತನಮೂನೆಯ ನೈಸರ್ಗಿಕ ಆಯ್ಕೆ” ಎಂದು ಕರೆಯಲಾಗಿದೆ.

ಯಾವ ಗುಣಗಳು ಜೀವಿಯ ಹೆಚ್ಚಿನ ಸಂತಾನೋತ್ಪತ್ತಿ ಯಶಸ್ಸಿಗೆ ಕಾರಣವಾಗುತ್ತವೆಯೋ ಆ ಗುಣಗಳು ಆಯ್ಕೆಯಾಗುತ್ತವೆ ಮತ್ತು ಯಾವ ಗುಣಗಳು ಈ ಯಶಸ್ಸನ್ನು ಕಡಿಮೆ ಮಾಡುತ್ತವೆಯೋ ಆ ಗುಣಗಳು ಆಯ್ಕೆಯಾಗುವುದಿಲ್ಲ. ಗುಣವೊಂದರ ಆಯ್ಕೆಯು ಅದಕ್ಕೆ ಸಹಸಂಬಂಧ ಹೊಂದಿದ ಆದರೆ ತಮಗೆ ತಾವೇ ನೇರವಾಗಿ ಸಂತಾನೋತ್ಪತ್ತಿಯ ಅನುಕೂಲದ ಮೇಲೆ ಪರಿಣಾಮ ಬೀರದಿರುವ ಇತರ ಗುಣಗಳೂ ಆಯ್ಕೆಯಾಗ ಬಹುದು. ಇದನ್ನು ಕೆಲವೊಮ್ಮೆ ಪ್ಲಿಯೊಟ್ರೊಪಿ ಅಥವಾ ವಂಶವಾಹಿಗಳ ಲಿಂಕೇಜ್ ಎಂದು ಕರೆಯಲಾಗುತ್ತದೆ.

ಯೋಗ್ಯತೆ

ನೈಸರ್ಗಿಕ ಆಯ್ಕೆ 
ಚಾರ್ಲ್ಸ್ ಡಾರ್ವಿನ್‌ನ ಗ್ಯಾಲಾಪಗೊಸ್ ದ್ವೀಪಗಳ ಫಿಂಚ್‌ಗಳ ಕೊಕ್ಕಿನಲ್ಲಿನ ವ್ಯತ್ಯಾಸದ ಸಚಿತ್ರ ವಿವಣೆ. ಈ ದ್ವೀಪದಲ್ಲಿ ಕೊಕ್ಕಿನ ಆಕಾರದಲ್ಲಿ ಭಿನ್ನವಾದ ಹತ್ತಿರವಾಗಿ ಸಂಬಂಧಿಸಿದ ೧೩ ಜೀವಸಂಕುಲಗಳು ಇವೆ. ಪ್ರತಿ ಜೀವಸಂಕುಲದ ಕೊಕ್ಕೂ ಅವುಗಳ ಮೆಚ್ಚಿನ ಆಹಾರಕ್ಕೆ ತಕ್ಕಂತೆ ಇದ್ದು ಕೊಕ್ಕಿನ ಆಕಾರಗಳು ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸವಾಗಿವೆ ಎಂದು ಸೂಚಿಸುತ್ತಿತ್ತು.

ಯೋಗ್ಯತೆಯ ಪರಿಕಲ್ಪನೆ ನೈಸರ್ಗಿಕ ಆಯ್ಕೆಯ ಕೇಂದ್ರ ಪರಿಕಲ್ಪನೆ. ಸುಪರಿಚಿತ ನುಡಿಗಟ್ಟು “ಯೋಗ್ಯವಾದುದೇ ಉಳಿದುಕೊಳ್ಳುತ್ತದೆ” ಸೂಚಿಸುವಂತೆ ವಿಶಾಲ ಅರ್ಥದಲ್ಲಿ “ಯೋಗ್ಯವಾದ” ಜೀವಿಗಳಿಗೆ ಉಳಿದುಕೊಳ್ಳುವ ಸಾಮರ್ಥ್ಯ ಹೆಚ್ಚು. ಆದರೆ ಮೇಲೆ ನೈಸರ್ಗಿಕ ಆಯ್ಕೆ ಬಗೆಗೆ ಹೇಳಿದಂತೆ, ಈ ಪದದ ಖಚಿತ ಅರ್ಥ ಹೆಚ್ಚು ನವಿರು. ಆಧುನಿಕ ವಿಕಸನೀಯ ಸಿದ್ಧಾಂತವು ಯೋಗ್ಯತೆಯನ್ನು ಎಷ್ಟು ಕಾಲ ಜೀವಿ ಬಾಳುತ್ತದೆ ಎಂದಲ್ಲದೆ ಸಂತಾನೋತ್ಪತ್ತಿಯಲ್ಲಿ ಎಷ್ಟು ಯಶಸ್ಸುಗಳಿಸಿದೆ ಎಂಬುದರ ಮೇಲೆ ವ್ಯಾಖ್ಯಾನಿಸುತ್ತದೆ. ಜೀವಿಯೊಂದು ಅದರ ಜೀವಸಂಕುಲದ ಇತರ ಜೀವಿಗಳಿಗಿಂತ ಅರ್ಧದಷ್ಟು ಕಾಲ ಜೀವಿಸಿದ್ದಾಗ್ಯೂ ಅದು ವಯಸ್ಕರಾಗಿ ಬದುಕುವ ಎರಡರಷ್ಟು ಸಂತತಿಯನ್ನು ಹುಟ್ಟಿಸಿದರೆ ಜನಸಂಖ್ಯೆಯಲ್ಲಿ ಅದರ ‌ವಂಶವಾಹಿಗಳು ನಂತರ ಪೀಳಿಗೆಯ ವಯಸ್ಕ ಜನಸಂಖ್ಯೆಯಲ್ಲಿ ಹೆಚ್ಚು ಸಾಮಾನ್ಯವಾಗುತ್ತವೆ.

ನೈಸರ್ಗಿಕ ಆಯ್ಕೆಯು ಜೀವಿಯೊಂದರ ಮೇಲೆ ಕೆಲಸ ಮಾಡುತ್ತಿದ್ದಾಗ್ಯೂ, ಅಕಸ್ಮಿಕಗಳಿಂದ ಉಂಟಾಗುವ ಪರಿಣಾಮಗಳ ಕಾರಣಕ್ಕೆ ಯೋಗ್ಯತೆಯ ಅರ್ಥವು ಜನಸಂಖ್ಯೆಯಲ್ಲಿನ ಜೀವಿಗಳ “ಸರಾಸರಿಯ ಮೇಲೆ” ವ್ಯಾಖ್ಯಾನಿಸಲ್ಪಟ್ಟಿರುತ್ತದೆ. ನಿರ್ದಿಷ್ಟ ಜೀನ್‌ನಮೂನೆಯ ಯೋಗ್ಯತೆಯು ಆ ಜೀನ್‌ನಮೂನೆಯ ಎಲ್ಲಾ ಜೀವಿಗಳ ಸರಾಸರಿ ಪರಿಣಾಮಕ್ಕೆ ಸಂವಾದಿಯಾಗಿದೆ. ಜೀನ್‌ನಮೂಸೆಯ ತೀರ ಕಡಿಮೆ ಯೋಗ್ಯತೆಯು ಅದನ್ನು ಹೊಂದಿದ ಜೀವಿಗಳ ಸಂತಾನವು ಸರಾಸರಿಯಲ್ಲಿ ಕೆಲವೇ ಸಂತತಿ ಇರುವುದು ಅಥವಾ ಸಂತತಿ ಪೂರ್ಣವಾಗಿ ಇಲ್ಲದೆ ಇರುವುದಕ್ಕೆ ಕಾರಣವಾಗ ಬಹುದು. ಉದಾಹರಣೆಗಳು ಮಾನವರಲ್ಲಿ ಹಲವು ಸಿಸ್ಟಿಕ್ ಫೈಬ್ರೋಸಿಸ್‌ನಂತಹ ಅನುವಂಶಿಕ ಕಾಯಿಲೆಗಳನ್ನು ಒಳಗೊಂಡಿವೆ.

ಯೋಗ್ಯತೆಯು ಸರಾಸರಿ ಪ್ರಮಾಣವಾದ್ದರಿಂದ ಅನುಕೂಲ ವ್ಯತ್ಯಯನವು ಸಂಬಂಧಿಸದ ಕಾರಣಕ್ಕೆ ವಯಸ್ಕರಾಗಿ ಬದುಕದಿರುವ ಜೀವಿಗಳಲ್ಲಿಯೂ ಆಗಬಹುದು. ಯೋಗ್ಯತೆಯು ನಿರ್ಣಾಯಕವಾಗಿ ಪರಿಸರದ ಮೇಲೆ ಆಧಾರಪಟ್ಟಿರುತ್ತದೆ. ಕುಡುಗೋಲು ಜೀವಕೋಶದ ರಕ್ತಹೀನತೆಯು (ಸಿಕಲ್ ಸೆಲ್ ಅನೇಮಿಯ) ಸಾಮಾನ್ಯ ಮಾನವ ಜನಸಂಖ್ಯೆಯಲ್ಲಿ ಕಡಿಮೆ ಯೋಗ್ಯವಿರ ಬಹುದು ಆದರೆ ಕುಡುಗೋಲು ಜೀವಕೋಶ ಗುಣವು ಮಲೇರಿಯಾದಿಂದ ಪ್ರತಿರಕ್ಷೆ ಒದಗಿಸುತ್ತವೆ. ಹೀಗಾಗಿ ಮಲೇರಿಯಾ ಸೋಂಕು ತೀರ ಹೆಚ್ಚಾಗಿರುವ ಜನಸಂಖ್ಯೆಯಲ್ಲಿ ಇದು ಹೆಚ್ಚಿನ ಯೋಗ್ಯತೆಯಾಗುತ್ತದೆ.

ಆಯ್ಕೆಯ ನಮೂನೆಗಳು

ನೈಸರ್ಗಿಕ ಆಯ್ಕೆಯು ಯಾವುದೇ ಅನುವಂಶಿಕವಾಗಿ ಪ್ರಾಪ್ತವಾಗಬಲ್ಲ ವ್ಯಕ್ಯನಮೂನೆಯ ಗುಣಗಳ ಮೇಲೆ ಕೆಲಸ ಮಾಡುತ್ತದೆ. ಆಯ್ಕೆಯ ಒತ್ತಡಕ್ಕೆ ಪರಿಸರದ ಯಾವ ಅಂಶವಾದರೂ ಕಾರಣವಾಗ ಬಹುದು. ಇದು ಲೈಂಗಿಕ ಆಯ್ಕೆ ಮತ್ತು ಅದೇ ಜೀವಸಂಕುಲದ ಅಥವಾ ಇತರ ಜೀವಸಂಕುಲಗಳ ಸದಸ್ಯರ ಸ್ಪರ್ಧೆಯನ್ನೂ ಒಳಗೊಂಡಿದೆ. ಆದರೆ ಇದರ ಅರ್ಥ ನೈಸರ್ಗಿಕ ಆಯ್ಕೆ ಯಾವಾಗಲೂ ಒಂದೇ ದಿಕ್ಕಿನಲ್ಲಿ ಕೆಲಸ ಮಾಡಿ ವಿಕಾಸದ ಹೊಂದಾಣಿಕೆಗೆ ಕಾರಣವಾಗುತ್ತದೆ ಎಂದಲ್ಲ. ನೈಸರ್ಗಿಕ ಆಯ್ಕೆಯು ಕೆಲವೊಮ್ಮೆ ಕಡಿಮೆ ಯೋಗ್ಯವಾದವು ಅಳಿದು ಹೋಗುವಂತೆ ಮಾಡುವ ಮೂಲಕ ಯಧಾಸ್ಥಿತಿಯ ಮುಂದುವರೆಯುವಂತೆ ಮಾಡುತ್ತದೆ.

ನೈಸರ್ಗಿಕ ಆಯ್ಕೆ 
ಈ ಚಾರ್ಟುಗಳು ಭಿನ್ನ ನಮೂನೆಯ ಅನುವಂಶಿಕ ಆಯ್ಕೆಗಳನ್ನು ತೋರಿಸುತ್ತವೆ. ಪ್ರತ್ರಿ ಗ್ರಾಫಿನ ಎಕ್ಸ್-ಅಕ್ಷದ ಚರ ಮೊತ್ತವು (ವೇರಿಯಬಲ್) ವ್ಯಕ್ತನಮೂನೆಯ ಗುಣದ ನಮೂನೆಯನ್ನು ಮತ್ತು ವೈ-ಅಕ್ಷದ ಚರ ಮೊತ್ತವು ಜೀವಿಗಳ ಮೊತ್ತವನ್ನು ಸೂಚಿಸುತ್ತವೆ. ಗುಂಪು Aಯು ಮೂಲ ಜನಸಂಖ್ಯೆ ಮತ್ತು ಗುಂಪು Bಯು ಆಯ್ಕೆಯ ನಂತರದ ಜನಸಂಖ್ಯೆ. ಗ್ರಾಪು ೧ ನಿರ್ದೇಶಿತ ಆಯ್ಕೆಯನ್ನು ತೋರಿಸುತ್ತದೆ. ಈ ಆಯ್ಕೆಯು ವಿಪರೀತ ವ್ಯಕ್ತನಮೂನೆಗೆ ಆಸ್ಪದ ಮಾಡಿಕೊಡುತ್ತದೆ. ಗ್ರಾಪು ೨ ಸ್ಥಿರಕಾರಕ ಆಯ್ಕೆಯನ್ನು ತೋರಿಸುತ್ತದೆ. ಇದು ವಿಪರೀತ ಗುಣಗಳಿಗಲ್ಲದೆ ಮಧ್ಯವರ್ತಿ ವ್ಯಕ್ತನಮೂನೆಗೆ ಅವಕಾಶ ಮಾಡಿಕೊಡುತ್ತದೆ. ಗ್ರಾಪು ೩ ಭಂಗಕಾರಕ ಆಯ್ಕೆಯನ್ನು ತೋರಿಸುತ್ತದೆ. ಈ ಆಯ್ಕೆಯು ಮಧ್ಯವರ್ತಿ ಬದಲು ವಿಪರೀತ ವ್ಯಕ್ತನಮೂನೆಗಳ ಪರವಾಗಿ ಕೆಲಸಮಾಡುತ್ತದೆ.

ಆಯ್ಕೆಯನ್ನು ಅದು ಗುಣದ ಮೇಲೆ ಉಂಟುಮಾಡುವ ಪರಿಣಾಮದ ಆಧಾರದಲ್ಲಿ ವರ್ಗೀಕರಿಸ ಬಹುದು. ಸ್ಥಿರಕಾರಕ ಆಯ್ಕೆಯು ಅತ್ಯುತ್ತಮ ಸ್ಥಿತಿಯನ್ನು ಸ್ಥಿರವಾಗಿ ಹಿಡಿದಿಡುವ ಕೆಲಸ ಮಾಡುತ್ತದೆ. ಸರಳ ಉದಾಹರಣೆಯಲ್ಲಿ ಈ ಅತ್ಯುತ್ತಮ ಸ್ಥಿತಿಯಿಂದ ಭಿನ್ನವಾದ ಎಲ್ಲವೂ ಪ್ರತಿಕೂಲವಾಗಿರುತ್ತವೆ. ನಿರ್ದೇಶಿತ ಆಯ್ಕೆಯು ಸಂಕ್ರಮಣ ಕಾಲದಲ್ಲಿ ಆಗುತ್ತದೆ ಮತ್ತು ಈಗ ಇರುವ ಅಷ್ಟೇನು ಉತ್ತಮವಲ್ಲದ ಗುಣ ಇದ್ದಾಗ ಆ ಗುಣವನ್ನು ಒಂದು ಹೊಸ ಉತ್ತಮ ಸ್ಥಿತಿಯ ಕಡೆ ಬದಲಾಯಿಸುತ್ತದೆ. ಭಂಗಕಾರಕ ಆಯ್ಕೆಯು ಸಹ ಸಂಕ್ರಮಣ ಕಾಲದಲ್ಲಿಯೇ ಆಗುತ್ತದೆ. ಇಲ್ಲಿ ಅಷ್ಟೇನು ಉತ್ತಮವಲ್ಲದ ಗುಣಗಳು ಒಂದಕ್ಕೂ ಹೆಚ್ಚು ದಿಕ್ಕುಗಳಡೆ ಬದಲಾಗುತ್ತವೆ. ವಿಶೇಷವಾಗಿ ಒಂದೇ ಗುಣದ ವ್ಯತ್ಯಾಸವಾಗಿದ್ದು ಮತ್ತು ಆ ಗುಣವು ಗಾತ್ರ ಅಥವಾ ಪ್ರಮಾಣಕ್ಕೆ ಸಂಬಂಧಿಸಿದಾಗಿದ್ದಲ್ಲಿ ಎರಡೂ ತುದಿಯ ಕೆಳ ಮತ್ತು ಮೇಲಿನ ಮಟ್ಟಗಳು ಆಯ್ಕೆಯಾಗುತ್ತವೆ. ಭಂಗಕಾರಕ ಆಯ್ಕೆಯು ಜೀವಸಂಕುಲವಾಗುವಿಕೆಗೆ ಪೂರ್ವವರ್ತಿಯಾಗ ಬಹುದು.

ಆಯ್ಕೆಯನ್ನು ಅಲೆಲ್‌ಗಳ ಸಂಭವನೀಯತೆಯ ಅಥವಾ ಅಲೆಲ್‌ ಜನಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ದರದ ಮೇಲೆ ಉಂಟುಮಾಡುವ ಪರಿಣಾಮದ ಆಧಾರದ ಮೇಲೆ ವರ್ಗೀಕರಿಸ ಬಹುದು. ಧನಾತ್ಮಕ ಆಯ್ಕೆಯು ಅಲೆಲ್‌ಗಳ ಸಂಭವನೀಯತೆಯನ್ನು ಹೆಚ್ಚು ಮಾಡುತ್ತದೆ ಮತ್ತು ರುಣಾತ್ಮಕ (ಋಣಾತ್ಮಕ) ಆಯ್ಕೆಯು ಅಲೆಲ್‌ಗಳ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಎರಡು ಅಲೆಲ್‌ಗಳಿರುವ ನೆಲೆಯಲ್ಲಿ ಒಂದು ಅಲೆಲ್‌ನ ಧನಾತ್ಮಕ ಆಯ್ಕೆಯು ಇನ್ನೊಂದು ಅಲೆಲ್‌ನ ರುಣಾತ್ಮಕ ಆಯ್ಕೆಯಾಗುತ್ತದೆ ಎಂಬುದನ್ನು ಗಮನಿಸಿ.

ಆಯ್ಕೆಯನ್ನು ಅನುವಂಶಿಕತೆಯ ವೈವಿದ್ಯತೆಯ ಮೇಲೆ ಉಂಟುಮಾಡುವ ಪರಿಣಾಮದ ಆಧಾರದ ಮೇಲೆ ಸಹ ವರ್ಗೀಕರಿಸ ಬಹುದು. ಶುದ್ಧೀಕರಣ ಆಯ್ಕೆಯು ಜನಸಂಖ್ಯೆಯಲ್ಲಿರು ವ್ಯತ್ಯಾಸಗಳನ್ನು ಅಳಿಸಿ ಹಾಕುತ್ತದೆ (ಮತ್ತು ಇದು ನವ ವ್ಯತ್ಯಯನಗಳಿಗೆ ವಿರುದ್ಧ, ನವ ವ್ಯತ್ಯಯನಗಳು ಜನಸಂಖ್ಯೆಯಲ್ಲಿ ವ್ಯತ್ಯಾಸವನ್ನು ಒಳತರುತ್ತವೆ). ಸಮತೋಲನ ಆಯ್ಕೆಯು ಜನಸಂಖ್ಯೆಯಲ್ಲಿರುವ ವ್ಯತ್ಯಾಸಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತದೆ (ನವ ವ್ಯತ್ಯಯನಗಳು ಇಲ್ಲದಿದ್ದಾಗ್ಯೂ ಸಹ). ಈ ಮೆಕಾನಿಸಂ ರುಣಾತ್ಮಕ ಸಂಭವನೀಯತೆ ಆಧಾರದ ಆಯ್ಕೆ. (ಹೆಟರೊಜೈಗೋಟ್ ಅಥವಾ ಭಿನ್ನಯುಗ್ಮಜಗಳ ಅನುಕೂಲ ಇದರ ಒಂದು ವಿಶೇಷ ಉದಾಹರಣೆ) ಮತ್ತು ಇದು ಆಯ್ಕೆಯ ಬಲ ಮತ್ತು ದಿಕ್ಕಿನ ಪ್ರಾದೇಶಿಕ ಮತ್ತು/ಅಥವಾ ಅಲ್ಪಕಾಲಿಕ ಏರಿಳಿತಗಳನ್ನೂ ಒಳಗೊಂಡಿದೆ.

ನೈಸರ್ಗಿಕ ಆಯ್ಕೆ 
ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಗಳ ಜೀವನ ಚಕ್ರ. ನೈಸರ್ಗಿಕ ಆಯ್ಕೆಯ ಹಲವು ಭಾಗಗಳನ್ನು ಜೀವನ ಚಕ್ರದ ಪ್ರತಿ ಭಾಗದಲ್ಲಿ ಸೂಚಿಸಲಾಗಿದೆ.

ಆಯ್ಕೆಯನ್ನು ಅದು ಪರಿಣಾಮ ಬೀರುವ ಜೀವಿಯ ಜೀವನ ಚಕ್ರದ ಹಂತದ ಆಧಾರದ ಮೇಲೆ ವರ್ಗೀಕರಿಸ ಬಹುದು. ಇಲ್ಲಿಯ ಪದ ಬಳಕೆ ಭಿನ್ನವಾಗಿದೆ. ಕೆಲವರು ಎರಡು ರೀತಿಯ ಆಯ್ಕೆಗಳನ್ನಷ್ಟೇ ಗುರುತಿಸುತ್ತಾರೆ. ಬದುಕುಳಿಯುವ ಆಯ್ಕೆ: ಇದು ಜೀವಿಯು ಉಳಿದುಕೊಳ್ಳುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ ಮತ್ತು ಸಂತಾನಶಕ್ತಿಯ ಆಯ್ಕೆ (ಅಥವಾ ಸಂತಾನೋತ್ಪತ್ತಿಯ ಶಕ್ತಿ): ಇದು ಯಶಸ್ವಿಯಾಗಿ ಬದುಕಿದ ಜೀವಿಯ ಸಂತಾನೋತ್ಪತ್ತಿಯ ದರದ ಹೆಚ್ಚಳದಲ್ಲಿ ಕೊನೆಗೊಳ್ಳುತ್ತದೆ. ಇತರರು ಜೀವನ ಚಕ್ರವನ್ನು ಮುಂದೆ ಆಯ್ಕೆಗಳ ವಿಭಾಗಗಳನ್ನು ಮಾಡುತ್ತಾರೆ. ಹೀಗಾಗಿ ಉಳಿದುಕೊಳ್ಳುವಿಕೆ ಮತ್ತು ಬದುಕುಳಿಯುವ ಆಯ್ಕೆಗಳನ್ನು ಎರಡಾಗಿ ಪ್ರತ್ಯೇಕಿಸಿ ಕ್ರಮವಾಗಿ ಸಂತಾನೋತ್ಪತ್ತಿಯ ವಯಸ್ಸಿನ ಮುಂಚೆ ಮತ್ತು ನಂತರ ಬದುಕಿ ಉಳಿಯುವ ಸಾಧ್ಯತೆಯ ಸುಧಾರಣೆಯನ್ನು ಬೇರೆ ಬೇರೆಯಾಗಿ ಪರಿಗಣಿಸುತ್ತಾರೆ. ಹಾಗೆಯೇ ಸಂತಾನೋತ್ಪತ್ತಿಯ ಆಯ್ಕೆಯನ್ನು ಹೆಚ್ಚುವರಿ ಭಾಗಗಳಾಗಿ ಲೈಂಗಿಕ ಆಯ್ಕೆ, ಯುಗ್ಮಕದ ಆಯ್ಕೆ (ಅಥವಾ ಗ್ಯಾಮೇಟಿಕ್ ಸೆಲೆಕ್ಶನ್ ಯುಗ್ಮಕದ ಉಳಿಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ) ಮತ್ತು ಸಾಂಗತ್ಯದ ಆಯ್ಕೆ (ಕಂಪ್ಯಾಟಬಿಲಿಟಿ ಸೆಲೆಕ್ಶನ್) (ಯುಗ್ಮಜ ರೂಪಗೊಳ್ಳುವುದರ ಮೇಲೆ ಕೆಲಸ ಮಾಡುತ್ತದೆ) ಎಂದು ವಿಭಜಿಸುತ್ತಾರೆ.

ಆಯ್ಕೆಯನ್ನು ಅದರ ಹಂತದ ಅಥವಾ ಆಯ್ಕೆಯ ಘಟಕದ ಆಧಾರದ ಮೇಲೆ ವರ್ಗೀಕರಿಸ ಬಹುದು. ಜೀವಿಯ ಆಯ್ಕೆಯು ಜೀವಿಯ ಹಂತದಲ್ಲಿ ಆಗುತ್ತದೆ, ಅಂದರೆ ಹೊಂದಾಣಿಕೆಯು ಜೀವಿಯ ಉಪಯೋಗಕ್ಕಾಗಿ ಆಗುತ್ತದೆ ಮತ್ತು ಪರಿಣಾಮವಾಗಿ ಜೀವಿಯು ಆಯ್ಕೆಯಾಗುತ್ತದೆ. ವಂಶವಾಹಿಯ ಆಯ್ಕೆಯು ‌ವಂಶವಾಹಿಗಳ ಮಟ್ಟದಲ್ಲಿ ನಡೆಯುತ್ತದೆ. ಬಹಳಷ್ಟು ಸಲ ಇದು ಜೀವಿಯ ಆಯ್ಕೆಯನ್ನು ಬೇರೆ ರೀತಿಯಲ್ಲಿ ವಿವರಿಸುವುದೇ ಆಗುತ್ತದೆ. ಆದರೆ ಕೆಲವು ಉದಾಹರಣೆಗಳು (ಬಂಧುಗಳ ಆಯ್ಕೆ ಮತ್ತು ಜಿನೋಮ್‌ನ ಭಾಗಗಳ ನಡುವಿನ ವೈರುಧ್ಯ ಇದಕ್ಕೆ ಉದಾಹರಣೆಗಳು) ಒಳಗೊಂಡಿರುವ ಪ್ರಕ್ರಿಯೆಯನ್ನು ವಂಶವಾಹಿ ಹಂತದ ಆಯ್ಕೆಯು ಹೆಚ್ಚು ಸಮಂಜಸವಾಗಿ ವಿವರಿಸ ಬಲ್ಲದು. ಗುಂಪು ಆಯ್ಕೆಯು ಜೀವಿಗಳ ಗುಂಪಿನ ಮಟ್ಟದಲ್ಲಿ ನಡೆಯುತ್ತದೆ. ಇಲ್ಲಿಯ ಊಹೆಯ ಪ್ರಕಾರ ವಂಶವಾಹಿ ಮತ್ತು ಜೀವಿಯಂತೆಯೇ ಜೀವಿಗಳ ಗುಂಪುಗಳಲ್ಲಿಯೂ ಮರುಉತ್ಪಾದನೆ ಮತ್ತು ವ್ಯತ್ಯನಗಳು ಉಂಟಾಗುತ್ತವೆ. ಪ್ರಕೃತಿಯಲ್ಲಿ ಎಷ್ಟರ ಮಟ್ಟಿಗೆ ಗುಂಪು ಆಯ್ಕೆ ನಡೆಯುತ್ತದೆ ಎಂಬುದರ ಬಗೆಗಿನ ಚರ್ಚೆ ಇನ್ನೂ ನಿಂತಿಲ್ಲ.

ಕೊನೆಯದಾಗಿ ಯಾವ ಸಾಧನಕ್ಕಾಗಿ ಸ್ಪರ್ಧೆ ಇದೆಯೊ ಅದರ ಆಧಾರದ ಮೇಲೆ ಆಯ್ಕೆಯನ್ನು ವರ್ಗೀಕರಿಸ ಬಹುದು. ಲೈಂಗಿಕ ಆಯ್ಕೆಯಲ್ಲಿ ಜೊತೆಗಾರರಿಗಾಗಿ ಸ್ಪರ್ಧೆ ನಡೆಯುತ್ತದೆ. ಲೈಂಗಿಕ ಆಯ್ಕೆಯಲ್ಲಿ ಜನಸಂಖ್ಯೆಯ ಒಂದು ಲಿಂಗದೊಳಗೆಯೇ (ಗಂಡು ಅಥವಾ ಹೆಣ್ಣು) ಸ್ಪರ್ಧೆ ಏರ್ಪಡಬಹುದು ಅಥವಾ ಲಿಂಗಗಳ ನಡುವೆ ಸ್ಪರ್ದೆ ಏರ್ಪಡಬಹುದು (ಇಲ್ಲಿ ಒಂದು ಲಿಂಗವು ಲಭ್ಯ ಸಂಗಾತಿಗಳೊಳಗೆ ಆಯ್ಕೆ ಮಾಡಿಕೊಳ್ಳುವ ಮೂಲಕ ಸಂತಾನೋತ್ಪತ್ತಿಯನ್ನು ನಿಯಂತ್ರಿಸ ಬಹುದು). ಲೈಂಗಿಕ ಆಯ್ಕೆಯು ಸಂತಾನೋತ್ಪತ್ತಿಯ ಆಯ್ಕೆಯ ಮೂಲಕ ಆಗುತ್ತದೆ ಮತ್ತು ಕೆಲವೊಮ್ಮೆ ಇದಕ್ಕೆ ಉಳಿದುಕೊಳ್ಳುವಿಕೆ ಬೆಲೆಯಾಗುತ್ತದೆ. ಪರಿಸರದ ಆಯ್ಕೆಯು ಲೈಂಗಿಕ ಆಯ್ಕೆಯನ್ನು ಹೊರತು ಪಡಿಸಿ ಬೇರೆ ಎಲ್ಲ ರೀತಿಯ ಆಯ್ಕೆ. ಕೆಲವೊಮ್ಮೆ ನೈಸರ್ಗಿಕ ಆಯ್ಕೆಯನ್ನು ಪರಿಸರದ ಆಯ್ಕೆಯಾಗಿ ವ್ಯಾಖ್ಯಾನಿಸಲಾಗುತ್ತದೆ ಮತ್ತು ಇದರಲ್ಲಿ ಲೈಂಗಿಕ ಆಯ್ಕೆಯನ್ನು ನೈಸರ್ಗಿಕ ಆಯ್ಕೆಗಿಂತ ಭಿನ್ನವಾದ ಮೆಕಾನಿಸಂ ಎಂದು ಪರಿಗಣಿಸಲಾಗಿದೆ. ಇದು ಡಾರ್ವಿನ್‌ನ ಪದ ಬಳಕೆಗೆ ಹೊಂದಿಕೊಳ್ಳುತ್ತದೆಯಾದರೂ ಸಂಗಾತಿಗಾಗಿ ಸ್ಪರ್ಧೆ ಮತ್ತು ಸಂಗಾತಿಯ ಆಯ್ಕೆಗಳು ನೈಸರ್ಗಿಕ ಪ್ರಕ್ರಿಯೆಗಳು ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಆಯ್ಕೆಗಳ ನಮೂನೆಗಳು ಒಂದಕ್ಕೊಂದು ಹೊಂದಿಕೊಂಡು ಕೆಲಸ ಮಾಡುತ್ತವೆ ಎಂದು ಗಮನಿಸಿ. ಸ್ಥಿರಕಾರಕ ಆಯ್ಕೆಯು ವಿರಳ ಅಲೆಲ್‌ಗಳ ರುಣಾತ್ಮಕ ಆಯ್ಕೆಯೊಂದಿಗೆ ಮುಂದುವರೆದು ಶುದ್ಧೀಕರಣ ಆಯ್ಕೆಗೆ ದಾರಿಮಾಡುತ್ತದೆ. ಹಾಗೆಯೇ ನಿರ್ದೇಶಿತ ಆಯ್ಕೆಯು ಆರಂಭಿಕ ವಿರಳ ಅನುಕೂಲದ ಅಲೆಲ್‌ಗಳ ಧನಾತ್ಮಕ ಆಯ್ಕೆಯ ಮೂಲಕ ಮುಂದುವರೆಯುತ್ತದೆ.

ಪರಿಸರದ ಆಯ್ಕೆಯು ಪರಿಸರದ ಪರಿಣಾಮವಾಗಿ ಸಂಬಂದಿಗಳ (ಸಂಬಂಧಿಗಳ ಆಯ್ಕೆ, ಸ್ಪರ್ಧೆ ಮತ್ತು ಶಿಶುಹತ್ಯೆ) ಆಯ್ಕೆಯನ್ನೂ ಒಳಗೊಂಡು ಎಲ್ಲಾ ಆಯ್ಕೆಗಳ ಮೆಕಾನಿಸಂನ್ನೂ ಒಳಗೊಂಡಿದೆ.

ಲೈಂಗಿಕ ಆಯ್ಕೆ

ನೈಸರ್ಗಿಕ ಆಯ್ಕೆ 
ಹಾರುತ್ತಿರು ನವಿಲಿನ ಬಾಲ, ಲೈಂಗಿಕ ಆಯ್ಕೆಯ ಕ್ಲಾಸಿಕಲ್ ಉದಾಹರಣೆ.
ನೈಸರ್ಗಿಕ ಆಯ್ಕೆ 
ಕಡಲ ಕುದುರೆ ವರ್ಗದ ಅಲ್ಲಿಗೇಟರ್ ಕೊಳವೆಮೀನು

ಲೈಂಗಿಕ ಆಯ್ಕೆಯು ನಿರ್ದಿಷ್ಟವಾಗಿ ಸಂಗಾತಿಗಾಗಿ ನಡೆಯುವ ಸ್ಪರ್ಧೆಯನ್ನು ಸೂಚಿಸುತ್ತದೆ. ಈ ಸ್ಪರ್ಧೆಯು ಒಂದೇ ಲಿಂಗದ ನಡುವಿನ ಜೀವಿಗಳ ಬಗೆಗೆ ಇರಬಹುದು, ಉದಾಹರಣೆಗೆ ಗಂಡು-ಗಂಡು ನಡುವಿನ ಸ್ಪರ್ಧೆ, ಸ್ಪರ್ಧೆಯು ಎರಡು ಲಿಂಗಗಳ ನಡುವೆ ಇರಬಹುದು ಅಥವಾ ಒಂದು ಲಿಂಗದ ಜೀವಿಯು ತನ್ನ ಸಂಗಾತಿಯನ್ನು ಆಯ್ದುಕೊಳ್ಳ ಬಹುದು. ಕೆಲವೊಂದು ಜೀವಸಂಕುಲಗಳ ವಿಷಯದಲ್ಲಿ ಲಿಂಗದ-ಪಾತ್ರವು ಹಿಮ್ಮೊಗದ ವರ್ತನೆಯಾಗ ಬಹುದು ಮತ್ತು ಇಲ್ಲಿ ಗಂಡುಗಳು ಸಂಗಾತಿಯನ್ನು ಆಯ್ದುಕೊಳ್ಳುತ್ತವೆ. ಇಂತಹ ವರ್ತನೆಗೆ ಕಡಲ ಕುದುರೆಯ ಕುಟುಂಬ ಒಂದು ಉದಾಹರಣೆ. ಅಲ್ಲದೆ ಸಾಧ್ಯ ಉದಾಹರಣೆಗಳು ಉಭಯವಾಸಿಗಳ, ಹಕ್ಕಿಗಳ, ಸಸ್ತನಿಗಳ (ಮಾನವನನ್ನೂ ಒಳಗೊಂಡು) ಮತ್ತು ಚಿಪ್ಪುಗಳಿರುವ ಸರೀಸೃಪಗಳ (ಹಾವು, ಹಲ್ಲಿ, ಆಮೆ ಮುಂತಾದವು ಇರುವ) ಲೈಂಗಿಕ ಆಯ್ಕೆಗಳಲ್ಲಿ ಕಾಣಬರುತ್ತವೆ.

ಒಂದು ಲಿಂಗದಲ್ಲಿ ವ್ಯಕ್ತನಮೂನೆಯ ಗುಣಗಳನ್ನು ಪ್ರದರ್ಶಸಿಸ ಬಹುದು ಮತ್ತು ಅವು ಇನ್ನೊಂದು ಲಿಂಗದ ಬಯಕೆಯೂ ಆಗಬಹುದು. ಆಗ ಅದು ಫಿಶೇರಿಯನ್‌ ರನ್‌ಅವೇ ಎಂದು ಕರೆಯಲಾದ ಧನಾತ್ಮಕ ಪ್ರತ್ಯಾದಾನ (ಪಾಸಿಟಿವ್ ಫೀಡ್‌ಬ್ಯಾಕ್) ಲೂಪಿಗೆ ಕಾರಣವಾಗುತ್ತದೆ. ಉದಾಹರಣೆ: ಕೆಲವೊಂದು ಗಂಡು ಹಕ್ಕಿಗಳಲ್ಲಿ ಕಂಡು ಬರುವ ಅತಿಯಾದ ಗರಿಗಳು. ರೊನಾಲ್ಡ್ ಫಿಷರ್ ೧೯೩೦ರಲ್ಲಿ ಬದಲೀ ಸಿದ್ಧಾಂತವನ್ನು ಮುಂದಿಟ್ಟ ಅದನ್ನು ರಸಿಕ ಮಗನ ಊಹನ (ಹೈಪೋಥೀಸಿಸ್) ಎಂದು ಕರೆದ. ಇದರ ಪ್ರಕಾರ ತಾಯಂದಿರು ದೊಡ್ಡ ಸಂಖ್ಯೆಯ ಮೊಮ್ಮಕ್ಕಳನ್ನು ಪಡೆಯಲು ಬಯಸುತ್ತಾರೆ ಮತ್ತು ಹೀಗಾಗಿ ಲಂಪಟ ತಂದೆಯನ್ನು ಆಯ್ದುಕೊಳ್ಳುತ್ತಾರೆ. ಒಂದೇ ಲಿಂಗದ ಸದಸ್ಯರ ನಡುವಿನ ಆಕ್ರಮಣಕಾರಿ ಪ್ರವೃತ್ತಿಯು ಕೆಲವೊಮ್ಮೆ ವಿಶಿಷ್ಟ ಲಕ್ಷಣಗಳೊಂದಿಗೆ ಸೇರಿಕೊಂಡಿದೆ, ಉದಾಹರಣೆಗೆ ಇನ್ನೊಂದು ಕಡವೆಯೊಂದಿಗೆ (ಕವಲುಗೊಂಬು ಇರುವ ಗಂಡು ಜಿಂಕೆ) ಸೆಣಸಲು ಬಳಸುವ ಕವಲುಗೊಂಬು. ಭಿನ್ನ ಲಿಂಗಗಳ ನಡುವಿನ ಆಯ್ಕೆ ಇರುವಲ್ಲಿ ಬಹಳಷ್ಟು ಸಲ ಗಂಡುಹೆಣ್ಣುಗಳ ನಡುವೆ ದ್ವಿರೂಪತೆಯೂ ಇರುತ್ತದೆ. ಇಂತಹ ವ್ಯತ್ಯಾಸಗಳಲ್ಲಿ ಒಂದೇ ಜೀವಸಂಕುಲದ ಗಂಡು ಹೆಣ್ಣುಗಳ ನಡುವೆ ದೇಹಗಾತ್ರದ ವ್ಯತ್ಯಾಸವೂ ಸೇರಿದೆ.

ನೈಸರ್ಗಿಕ ಆಯ್ಕೆಯ ಉದಾಹರಣೆಗಳು

ನೈಸರ್ಗಿಕ ಆಯ್ಕೆ 
ಪ್ರತಿಜೀವಿಕಗಳ ನಿರೋಧವು ಪ್ರತಿಜೀವಕಗಳ ಪರಿಣಾಮಕ್ಕೆ ವಿನಾಯತಿ ಪಡೆದ ಜೀವಿಗಳ ಬದುಕುಳಿಯುವಿಕೆಯ ಮೂಲಕ ಹೆಚ್ಚಾಗುತ್ತದೆ. ಇವುಗಳ ಸಂತತಿ ನಿರೋಧವನ್ನು ಪಡೆದಿದ್ದು ಹೊಸ ನಿರೋಧಪಡೆದ ಜನಸಂಖ್ಯೆಯನ್ನು ಹುಟ್ಟುಹಾಕುತ್ತದೆ.

ಸುಪರಿಚಿತವಾದ ನೈಸರ್ಗಿಕ ಆಯ್ಕೆಯು ಕೆಲಸ ಮಾಡವುದನ್ನು ಸೂಕ್ಷ್ಮಜೀವಿಗಳಲ್ಲಿ ಪ್ರತಿಜೀವಕ ನಿರೋಧಕಶಕ್ತಿ ಬೆಳೆಯುವುದರಲ್ಲಿ ನೋಡಬಹುದು. ೧೯೨೮ರಲ್ಲಿ ಪೆನ್ಸಿಲಿನ್ ಅವಿಷ್ಕಾರದಿಂದ ಹಿಡಿದು ಆರಂಭಿಸಿ ಪ್ರತಿಜೀವಕಗಳನ್ನು ಬ್ಯಾಕ್ಟೀರಿಯ ರೋಗಗಳ ಶಮನಕ್ಕೆ ಬಳಸಲಾಗುತ್ತಿದೆ. ನೈಸರ್ಗಿಕ ಜನಸಂಖ್ಯೆಯು ಬ್ಯಾಕ್ಟೀರಿಯದ ದೊಡ್ಡ ಸಂಖ್ಯೆಯ ಜೀವಿಗಳು ಇದ್ದು ಅವುಗಳಲ್ಲಿ ಪ್ರಧಾನವಾಗಿ ವ್ಯತ್ಯಯನಗಳ ಕಾರಣಕ್ಕೆ ಅನುವಂಶಿಕತೆಯ ಪದಾರ್ಥದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಪ್ರತಿಜೀವಕಕ್ಕೆ ಬ್ಯಾಕ್ಟೀರಿಯಗಳನ್ನು ಒಡ್ಡಿದಾಗ ಅವುಗಳಲ್ಲಿ ಬಹಳಷ್ಟ ಜೀವಿಗಳು ತಕ್ಷಣವೇ ಸಾಯುತ್ತವೆ. ಆದರೆ ಅವುಗಳಲ್ಲಿ ಕೆಲವದರಲ್ಲಿ ವ್ಯತ್ಯಯನಗಳು ಇದ್ದ ಕಾರಣಕ್ಕೆ ಸ್ವಲ್ಪಮಟ್ಟಿಗೆ ಕಡಿಮೆ ಪ್ರಭಾವಕ್ಕೆ ಒಳಗಾಗ ಬಹುದು. ಪ್ರತಿಜೀವಕಗಳಿಗೆ ಒಡ್ಡುವಿಕೆ ಕಡಿಮೆ ಸಮಯದ್ದಾಗಿದ್ದಲ್ಲಿ ಇಂತಹವುಗಳು ಚಿಕಿತ್ಸೆಯಲ್ಲಿ ಉಳಿದುಕೊಳ್ಳ ಬಹುದು. ಹೀಗೆ ಹೊಂದಿಕೊಳ್ಳಲಾಗದ ಆಯ್ದ ಜೀವಿಗಳು ಜನಸಂಖ್ಯೆಯಿಂದ ಹೊರದೂಡುವುದು ನೈಸರ್ಗಿಕ ಆಯ್ಕೆ.

ಹೀಗೆ ಉಳಿದುಕೊಂಡ ಬ್ಯಾಕ್ಟೀರಿಯ ಮತ್ತೆ ಸಂತಾನೋತ್ಪತ್ತಿ ಮಾಡಿ ನಂತರ ಪೀಳಿಗೆಯನ್ನು ಉತ್ಪಾದಿಸುತ್ತವೆ. ಹೊಂದಿಕೊಳ್ಳದ ಜೀವಿಗಳು ಹಿಂದಿನ ಪೀಳಿಗೆಯಲ್ಲಿ ಹೊರಹೋದ ಕಾರಣಕ್ಕೆ ಈ ಜನಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯ ಬ್ಯಾಕ್ಟೀರಿಯಗಳಲ್ಲಿ ಸ್ವಲ್ಪ ನಿರೋಧಕ ಶಕ್ತಿಯಿರುತ್ತದೆ. ಇದೇ ಸಮಯದಲ್ಲಿ ಹೊಸ ವ್ಯತ್ಯಯನಗಳು ಉಂಟಾಗಿ ಈಗಾಗಲೇ ಇರುವ ಅನುವಂಶಿಕ ವ್ಯತ್ಯಾಸಕ್ಕೆ ಹೊಸ ಅನುವಂಶಿಕ ವ್ಯತ್ಯಾಸವು ಸೇರಿಸಲ್ಪಡುತ್ತದೆ. ಆದರೆ,ತನ್ನಷ್ಟಕ್ಕೆ ತಾನೇ ಆಗುವ ಈ ವ್ಯತ್ಯಯನ ವಿರಳವಾದುದು ಮತ್ತು ಅನುಕೂಲಕರ ವ್ಯತ್ಯಯನ ತೀರಾ ವಿರಳವಾದುದು. ಆದರೆ ಬ್ಯಾಕ್ಟೀರಿಯ ಜನಸಂಖ್ಯೆ ಕೆಲವು ಜೀವಿಗಳಲ್ಲಿ ಅನುಕೂಲಕರ ವ್ಯತ್ಯಯನಗಳಾಗುವಷ್ಟು ದೊಡ್ಡದು. ಹೊಸ ವ್ಯತ್ಯಯನದಿಂದ ಪ್ರತಿಜೀವಕದ ಪ್ರಭಾವವು ಕಡಿಮೆಯಾಗುತ್ತದೆ. ಇದರ ಪರಿಣಾಮ ಆ ಬ್ಯಾಕ್ಟೀರಿಯಗಳು ಮತ್ಮೊಮ್ಮೆ ಪ್ರತಿಜೀವಕವನ್ನು ಎದುರಿಸಿದಾಗ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಸಮಯಾವಕಾಶವಿದ್ದು ಮತ್ತು ಪ್ರತಿಜೀವಕಕ್ಕೆ ಮತ್ತೆ ಮತ್ತೆ ಒಡ್ಡುವಿಕೆ ಇದ್ದರೆ ಪ್ರತಿಜೀವಕ ನಿರೋಧಕ ಬ್ಯಾಕ್ಟೀರಿಯಗಳು ಉತ್ಪತ್ತಿಯಾಗುತ್ತವೆ. ಈ ಹೊಸ ಬದಲಾದ ಪ್ರತಿಜೀವಕ ನಿರೋಧಕ ಬ್ಯಾಕ್ಟೀರಿಯ ಜನಸಂಖ್ಯೆಯು ಅವು ವಿಕಾಸವಾದ ಸಂದರ್ಭಕ್ಕೆ ಅತ್ಯುತ್ತಮವಾಗಿ ಹೊಂದಿಕೊಂಡಿರುತ್ತವೆ. ಅದೇ ಸಮಯದಲ್ಲಿ ಹಳೆಯ ಪ್ರತಿಜೀವಕ ಮುಕ್ತ ಪರಿಸರಕ್ಕೆ ಅತ್ಯುತ್ತಮವಾಗಿ ಹೊಂದಿಕೊಂಡಿರ ಬೇಕಾದ ಅಗತ್ಯವೇನೂ ಇಲ್ಲ. ನೈಸರ್ಗಿಕ ಆಯ್ಕೆಯ ಕೊನೆಯ ಪಲಿತಾಂಶವೆಂದರೆ ಎರಡು ನಿರ್ದಿಷ್ಟ ಪರಿಸರಕ್ಕೆ ಅತ್ಯುತ್ತಮವಾಗಿ ಹೊಂದಿಕೊಡ ಜನಸಂಖ್ಯೆ ಹುಟ್ಟುತ್ತವೆ ಮತ್ತು ಒಂದು ಜನಸಂಖ್ಯೆಯು ಇನ್ನೊಂದು ಪರಿಸರದಲ್ಲಿ ಅತ್ಯುತ್ತಮವಾಗಿ ಹೊಂದಿಕೊಂಡಿರುವುದಿಲ್ಲ.

ಬಹುವ್ಯಾಪಕವಾದ ಪ್ರತಿಜೀವಕಗಳ ಬಳಕೆ ಮತ್ತು ದುರ್ಬಳಕೆ ಪ್ರಾಯೋಗಿಕ ಬಳಕೆಯಲ್ಲಿ ಪ್ರತಿಜೀವಕ ನಿರೋಧಕಶಕ್ತಿಯ ಹೆಚ್ಚಳಕ್ಕೆ ಕಾರಣವಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಮೆಥಿಲಿಸಿನ್ ನಿರೋಧಕಶಕ್ತಿಯ ಸ್ಟಾಫೈಲೊಕೊಕಸ್ ಆರೆಯುಸ್‌ನ್ನು (ಎಂಆರ್‌ಎಸ್‌ಎ) ಆರೋಗ್ಯಕ್ಕೆ ಅದು ಒಡ್ಡುವ ಅಪಾಯ ಮತ್ತು ಈಗ ಇರುವ ಔಷದಿಗಳಿಗೆ ಸಾಪೇಕ್ಷಿಪವಾಗಿ ಅದು ಮಣಿಯದ ಕಾರಣಕ್ಕೆ ಅದನ್ನು “ಸೂಪರ್‌ಬಗ್” ಎಂದು ಕರೆಯಲಾಗಿದೆ. ಇದಕ್ಕೆ ಉತ್ತರವಾದ ತಂತ್ರಗಳು ಸಾಮಾನ್ಯವಾಗಿ ಭಿನ್ನವಾದ, ಹೆಚ್ಚು ಶಕ್ತಿಯುತ ಪ್ರತಿಜೀವಿಕಗಳ ಬಳಕೆಯಾಗಿದೆ. ಆದರೆ ಹೊಸ ಎಂಆರ್‌ಎಸ್‌ಎ ತಳಿಗಳು ಈ ಔಷದಿಗಳಿಗೂ ನಿರೋಧ ಬೆಳೆಸಿಕೊಂಡಿವೆ.

ವಿಕಸನೀಯ ಶಸ್ತ್ರಾಸ್ತ್ರ ಪೈಪೋಟಿ ಎಂದು ಕರೆಯ ಬಹುದಾದ ಇದು ಒಂದು ಉದಾಹರಣೆ. ಇದರಲ್ಲಿ ಬ್ಯಾಕ್ಟೀರಿಯಗಳು ಪ್ರತಿಜೀವಕಗಳ ಕಡಿಮೆ ಪ್ರಭಾವಕ್ಕೆ ಒಳಗಾಗುವ ತಳಿಗಳನ್ನು ಹುಟ್ಟುಹಾಕಲು ತೊಡಗುತ್ತವೆ ಮತ್ತು ವೈದ್ಯಕೀಯ ಸಂಶೋಧನೆ ಅವುಗಳನ್ನು ಕೊಲ್ಲುವ ಪ್ರತಿಜೀವಕಗಳನ್ನು ಹುಟ್ಟುಹಾಕುವ ಪ್ರಯತ್ನದಲ್ಲಿ ತೊಡಗಿರುತ್ತದೆ. ಇಂತಹುದೇ ಪರಿಸ್ಥಿತಿಯು ಕ್ರಿಮಿನಾಶಕ ನಿರೋಧಕ ಸಸ್ಯಗಳು ಮತ್ತು ಕೀಟಗಳಲ್ಲಿ ಕಂಡುಬರುತ್ತದೆ. ಈ ಶಸ್ತ್ರಾಸ್ತ್ರ ಪೈಪೋಟಿ ಮಾನವನಿಂದಲೇ ಆರಂಭವಾಗ ಬೇಕೆಂದೇನೂ ಇಲ್ಲ. ಚೆನ್ನಾಗಿ ದಾಖಲಿತ ಉದಾಹರಣೆ ಸಮೋಅ ದ್ವೀಪದ ಹೈಪೊಲಿಮ್ನಸ್ ಬೊಲಿನ ಚಿಟ್ಟೆಯ ಬಗೆಗಿದೆ. ಈ ಚಿಟ್ಟೆಗಳಲ್ಲಿನ ಗಂಡು ಚಿಟ್ಟೆಗಳನ್ನು ಕೊಲ್ಲುವ ವೊಲ್‌ಬಾಕಿಯ ಬ್ಯಾಕ್ಟೀರಿಯ ಪರಭಕ್ಷಕವನ್ನು ಹತ್ತಿಕ್ಕುವ ವಂಶವಾಹಿಯು ಕೇವಲ ಐದು ವರುಷಗಳ ಕಾಲದಲ್ಲಿ ಹರಡಿದೆ.

ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸ

ನೈಸರ್ಗಿಕ ಆಯ್ಕೆಯು ಹೊಂದಾಣಿಕೆಯ ವಿಕಾಸ, ಹೊಸ ಗುಣಗಳು ಮತ್ತು ಜೀವಸಂಕುಲವಾಗಿವಿಕೆಗಳಿಗೆ ಕಾರಣವಾಗ ಬೇಕಾದಲ್ಲಿ -ಯೋಗ್ಯತೆಯ ವ್ಯತ್ಯಾಸದಲ್ಲಿ ಕೊನೆಗೊಳ್ಳುವ, ವಂಶಪಾರಂಪರ್ಯವಾಗಿ ಪ್ರಾಪ್ತವಾಗುವ ಅನುವಂಶಿಕ ವ್ಯತ್ಯಾಸಗಳು- ಪೂರ್ವಭಾವಿ ಅಗತ್ಯಗಳಾಗಿವೆ. ಅನುವಂಶಿಕ ವ್ಯತ್ಯಾಸವು ವ್ಯತ್ಯಯನಗಳು (ಮ್ಯುಟೇಶನ್), ಅನುವಂಶಿಕ ಪದಾರ್ಥದ ಮರುಜೋಡಣೆ ಮತ್ತು ಕ್ಯಾರಿಯೊಟೈಪ್‌ನಲ್ಲಿ (ವರ್ಣತಂತುಗಳ ಸಂಖ್ಯೆ, ಆಕಾರ, ಗಾತ್ರ ಮತ್ತು ಒಳವ್ಯವಸ್ಥೆಯ) ಬದಲಾವಣೆಗಳ ಕಾರಣಕ್ಕೆ ಆಗುತ್ತದೆ. ಈ ಯಾವುದೇ ಬದಲಾವಣೆಗಳು ಬಹಳ ಅನುಕೂಲ ಅಥವಾ ಬಹಳ ಅನಾನುಕೂಲಕ್ಕೆ ಕಾರಣವಾಗ ಬಹುದು ಆದರೆ ಇಂತಹ ದೊಡ್ಡ ಪರಿಣಾಮಗಳು ತೀರಾ ವಿರಳ. ಹಿಂದೆ ಅನುವಂಶಿಕ ಪದಾರ್ಥದಲ್ಲಿನ ಬಹಳಷ್ಟು ಬದಲಾವಣೆಗಳು ತಟಸ್ಥ ಅಥವಾ ತಟಸ್ಥಕ್ಕೆ ಹತ್ತಿರ ಎಂದು ಭಾವಿಸಲಾಗಿತ್ತು ಏಕೆಂದರೆ ಅವು ಸಂಕೇತಿಸದ ಡಿಎನ್ಎ ಮೇಲಾಗುತ್ತವೆ ಅಥವಾ ಅವು ಸಮಾನಾರ್ಥಕ ಬದಲಿಗಳು ಎಂದು ಪರಿಗಣಿಸಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಗಳು ಸಂಕೇತಿಸದ ಡಿಎನ್ಎನಲ್ಲಿ ನಡೆಯುವ ಹಲವು ವ್ಯತ್ಯಯನಗಳು ಕೊಂಚಮಟ್ಟಿಗೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಹೇಳುತ್ತವೆ. ವಾಸ್ತವದಲ್ಲಿ ವ್ಯತ್ಯಯನದ ದರ ಮತ್ತು ವ್ಯತ್ಯಯನದ ಸರಾಸರಿ ಯೋಗ್ಯತೆಯ ಪರಿಣಾಮಗಳೆರಡೂ ನಿರ್ದಿಷ್ಟ ಜೀವಿಯ ಮೇಲೆ ಆಧಾರ ಪಟ್ಟಿರುತ್ತದೆಯಾದರೂ ಮಾನವನ ಬಗೆಗಿನ ದತ್ತಾಂಶವು ಬಹುಸಂಖ್ಯಾತ ವ್ಯತ್ಯಯನಗಳು ತುಸುಮಟ್ಟಿಗೆ ಹಾನಿಕಾರಕ ಎಂದು ಹೇಳುತ್ತವೆ.

ನೈಸರ್ಗಿಕ ಆಯ್ಕೆ 
ವಿಪುಲವಾದ ನವಿಲಿನ ಬಾಲವು ಹೆಣ್ಣುಗಳ ಲೈಂಗಿಕ ಆಯ್ಕೆಯಿಂದ ಉಂಟಾದುದು ಎಂದು ಭಾವಿಸಲಾಗಿದೆ. ಈ ನವಿಲು ಲ್ಯುಸಿಸಂ ಪರಿಣಾಮದಿಂದ ಆಗಿದೆ. ಲ್ಯೂಸಿಸಂ ಮತ್ತು ಅಲ್ಬಿನಿಸಂಗಳು ಆಯ್ಕೆಗೆ ನಿಸರ್ಗದಲ್ಲಿ ತೀರ ವಿರೋಧವಿದೆ. ಅವು ಪರಭಕ್ಷಕಗಳಿಂದ ಬೇಗ ಗುರುತಿಸಲ್ಪಡುತ್ತವೆ ಅಥವಾ ಸಂಗಾತಿಯ ಸ್ಪರ್ಧೆಯಲ್ಲಿ ಯಶಸ್ವಿಯಾಗಿರುವುದಿಲ್ಲ.

ಯೋಗ್ಯತೆ ವ್ಯಾಖ್ಯಾನವು ಹೆಚ್ಚಿನ ಯೋಗ್ಯತೆ ಇರುವ ಜೀವಿಗಳು ನಂತರದ ಪೀಳಿಗೆಗೆ ಹೆಚ್ಚಿನ ಸಂತತಿಯನ್ನು ಕೊಡುವ ಸಾಧ್ಯತೆ ಇದೆ ಮತ್ತು ಕಡಿಮೆ ಯೋಗ್ಯತೆಯ ಜೀವಿಗಳು ಬೇಗ ಸಾಯುತ್ತವೆ ಅಥವಾ ಕಡಿಮೆ ಸಂತಾನೋತ್ಪತ್ತಿ ಮಾಡುತ್ತವೆ ಎನ್ನುತ್ತದೆ. ಇದರ ಪರಿಣಾಮವಾಗಿ ಸರಾಸರಿ ಪಲಿತಾಂಶದಲ್ಲಿ ಹೆಚ್ಚು ಯೋಗ್ಯತೆ ಇರುವ ಅಲೆಲ್‌ಗಳು ನಂತರದ ಪೀಳಿಗೆಯಲ್ಲಿ ಹೆಚ್ಚಾಗುತ್ತವೆ ಮತ್ತು ಸಾಮಾನ್ಯವಾಗಿ ಕಡಿಮೆ ಯೋಗ್ಯತೆಯನ್ನು ನೀಡುವ ಅಲೆಲ್‌ಗಳು ವಿರಳವಾಗುತ್ತವೆ. ಅದೇ ಆಯ್ಕೆಯ ಶಕ್ತಿಗಳು ಹಲವು ಪೀಳಿಗೆಗಳು ಕೆಲಸಮಾಡುತ್ತಿದ್ದಲ್ಲಿ ಅನುಕೂಲಕರವಾದ ಅಲೆಲ್‌ಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅವು ಜನಸಂಖ್ಯೆಯಲ್ಲಿ ಅಧಿಕ್ಯತೆ ಪಡೆಯುವವರೆಗೂ ಇದು ನಡೆಯುತ್ತದೆ. ಹಾಗೆಯೇ ಕಡಿಮೆ ಯೋಗ್ಯತೆಯ ಅಲೆಲ್‌ಗಳು ಕಾಣೆಯಾಗುತ್ತವೆ. ಪ್ರತಿ ಪೀಳಿಗೆಯಲ್ಲೂ ತನಗೆತಾನೇ ಆಗುವ ಹೊಸ ವ್ಯತ್ಯಯನ ಮತ್ತು ಮರುಜೋಡಣೆಗಳ ಮೂಲಕ ಹೊಸ ವ್ಯಕ್ತನಮೂನೆಗಳು ಹುಟ್ಟುತ್ತವೆ. ಆದ್ದರಿಂದ ಪ್ರತಿ ಪೀಳಿಗೆಯೂ ಅಲೆಲ್‌ಗಳ ಹೆಚ್ಚಳದಿಂದ ಶ್ರೀಮಂತವಾಗುತ್ತದೆ ಮತ್ತು ಈ ಅಲೆಲ್‌ಗಳು ಕಾರಣವಾಗುವ ಗುಣಗಳು ಆಯ್ಕೆಯಲ್ಲಿನ ಪಕ್ಷಪಾತದ ಪರಿಣಾಮವಾಗಿ ನಂತರದ ಪೀಳಿಗೆಯಲ್ಲಿ ಹೆಚ್ಚಾಗುತ್ತವೆ.

ಕೆಲವು ವ್ಯತ್ಯಯನಗಳು ‌ನಿಯಂತ್ರಕ ವಂಶವಾಹಿಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳು ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ ಏಕೆಂದರೆ ಅವು ಇತರ ಹಲವು ವಂಶವಾಹಿಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತವೆ. ಬಹಳಷ್ಟು (ಆದರೆ ಎಲ್ಲವೂ ಅಲ್ಲ) ನಿಯಂತ್ರಕ ವಂಶವಾಹಿಗಳ ವ್ಯತ್ಯಯನಗಳು ಬದುಕುಳಿಯದ ಯುಗ್ಮಜಗಳಲ್ಲಿ ಕೊನೆಗೊಳ್ಳುತ್ತವೆ. ಮಾನವನಲ್ಲಿನ ಹೆಚ್‌ಒಎಕ್ಸ್‌ವಂಶವಾಹಿಗಳ ಮಾರಕವಲ್ಲದ ನಿಯಂತ್ರಕ ವ್ಯತ್ಯಯನವು ಸೆರ್ವಿಕಲ್ ಪಕ್ಕೆಲುಬು ಅಥವಾ ಪಾಲಿಡಕ್ಟೈಲಿ -ಕೈ ಕಾಲಿನ ಬೆರಳುಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗುವುದನ್ನು ಉದಾಹರಿಸ ಬಹುದು. ಇಂತಹ ವ್ಯತ್ಯಯನಗಳು ಹೆಚ್ಚಿನ ಯೋಗ್ಯತೆಗೆ ಕಾರಣವಾದರೆ ನೈಸರ್ಗಿಕ ಆಯ್ಕೆಯು ಇಂತಹ ವ್ಯಕ್ತನಮೂನೆಯ ಪರವಾಗಿ ಪಕ್ಷಪಾತ ವಹಿಸುತ್ತವೆ ಮತ್ತು ಈ ಹೊಸ ಗುಣವು ಜನಸಂಖ್ಯೆಯಲ್ಲಿ ಹರಡುತ್ತದೆ.

ನೈಸರ್ಗಿಕ ಆಯ್ಕೆ 
ಪಾಲಿಡಕ್ಟೈಲಿ ವ್ಯಯತ್ಯಯನ ಹೊಂದಿದ ಹತ್ತು ವರುಷದ ಹುಡುಗನ ಎಡಗೈಯ ಎಕ್ಸ್‌-ರೇ.

ಸ್ಥಾಪಿತ ಗುಣಗಳು ಬದಲಾಗದೆ ಇರುವುದಿಲ್ಲ. ಒಂದು ಪರಿಸರದಲ್ಲಿ ಹೆಚ್ಚು ಯೋಗ್ಯತೆ ಎನಿಸಿದ ಗುಣಗಳು ಇನ್ನೊಂದು ಬದಲಾದ ಪರಿಸರದಲ್ಲಿ ಕಡಿಮೆ ಯೋಗ್ಯತೆಯಾಗ ಬಹುದು. ಇಂತಹ ಗುಣವು ನೈಸರ್ಗಿಕ ಆಯ್ಕೆಯ ಗೈರು ಹಾಜರಿಯಲ್ಲಿ ಹೆಚ್ಚು ಬದಲಾವಣೆಗೊಳಗಾಗಿ ಮತ್ತು ಕೆಲಕಾಲದಲ್ಲಿ ಕೆಟ್ಟುಹೋಗಿ ಆ ಗುಣದ ಕೇವಲ ಕುರುಹಾಗಿ ಉಳಿದುಕೊಳ್ಳ ಬಹುದು. ಆಗ ಇದನ್ನು ವಿಕಸನೀಯ ಗತಕಾಲದ ಗುರುತು ಎಂದು ಕರೆಯಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಕುರುಹಾಗಿ ಉಳಿದ ರಚನೆ ಮಿತಿಗೊಂಡ ಕಾರ್ಯನಿರ್ವಹಿಸ ಬಹುದು ಅಥವಾ ಬೇರೆ ಉಪಯುಕ್ತ ಗುಣವನ್ನು ಪ್ರತಿನಿಧಿಸ ತೊಡಗಬಹುದು (ಅದನ್ನು ಪ್ರಿಅಡಾಪ್ಟೇಶನ್ ಅಥವಾ ಎಕ್ಸಾಪ್ಟೇಶನ್ ಎಂದು ಕರೆಯಲಾಗುತ್ತದೆ). ಪ್ರಸಿದ್ಧ ಉದಾಹರಣೆ ಕುರುಡು ಮೋಲ್-ಇಲಿಯ ಕಣ್ಣಿನ ಕುರುಹಾಗಿ ಉಳಿದ ರಚನೆ. ಇವು ಬೆಳಕಿನ ಅವಧಿಯನ್ನು ಗ್ರಹಿಸುವ ಕಾರ್ಯವನ್ನು ಉಳಿಸಿಕೊಂಡಿವೆ ಎಂದು ಹೇಳಲಾಗಿದೆ.

ಜೀವಸಂಕುಲವಾಗಿವಿಕೆ

ಜೀವಸಂಕುಲವಾಗುವಿಕೆಗೆ (ಸ್ಪೀಷೀಯೇಷನ್) ವಂಶವಾಹಿಗಳ ಹರಿವು ನಿಂತುಬಿಡುವ ಅಗತ್ಯವಿದೆ ಮತ್ತು ಇದು ಸಂತಾನೋತ್ಪತ್ತಿ ಪ್ರತ್ಯೇಕತೆಯ ಪರಿಣಾಮವಾಗಿ ಉಂಟಾಗುತ್ತದೆ. ಕೆಲಕಾಲದ ನಂತರ ಪ್ರತ್ಯೇಕವಾದ ಉಪಗುಂಪಿನಲ್ಲಿ ತೀವ್ರವಾದ ವ್ಯತ್ಯಾಸಗಳು ಉಂಟಾಗಿ ಬೇರೆ ಜೀವಸಂಕುಲವಾಗುತ್ತದೆ. ಇದು ಬೇರೆ ಬೇರೆ ಉಪಗುಂಪುಗಳಲ್ಲಿನ ಭಿನ್ನವಾದ ಆಯ್ಕೆಯ ಒತ್ತಡದ ಕಾರಣದಿಂದಲಾಗಲಿ ಅಥವಾ ಭಿನ್ನ ಜನಸಂಖ್ಯೆಯಲ್ಲಿ ಬೇರೆ ಬೇರೆ ವ್ಯತ್ಯಯನಗಳು ಹುಟ್ಟುವ ಕಾರಣಕ್ಕಾಗಲಿ ಅಥವಾ ಸೀಸೆಯ ಕಂಠದ ಪರಿಣಾಮ ಮತ್ತು ಸ್ಥಾಪಕನ ಪರಿಣಾಮಗಳಂತಹ ಜೆನೆಟಿಕ್ ಚಲನೆ ವಿದ್ಯಮಾನಗಳ ಕಾರಣದಿಂದಾಗಿ ಆಗುತ್ತದೆ. ಕಡಿಮೆ ತಿಳಿದಿರುವ ಮೆಕಾನಿಸಂ ಸಂಕರವಾಗುವ (ಹೈಬ್ರಿಡಾಗುವುದು) ಮೂಲಕ ಜೀವಸಂಕುಲವಾಗುವಿಕೆ. ಇದು ಸಸ್ಯಗಳ ವಿಷಯದಲ್ಲಿ ಚೆನ್ನಾಗಿ ದಾಖಲಾಗಿದೆ ಮತ್ತು ಕೆಲವೊಮ್ಮೆ ಹೆಚ್ಚು ಜೀವಸಂಕುಲಗಳಿರುವ ಪ್ರಾಣಿಗಳ ಗುಂಪಿಗೆ ಸೇರುವ ಸಿಕ್ಲಿಡೇ ವಂಶದ ಮೀನುಗಳಲ್ಲಿ ಕಂಡುಬರುತ್ತದೆ. ಇಂತಹ ತೀವ್ರ ಜೀವಸಂಕುಲವಾಗುವಿಕೆಯ ಮೆಕಾನಿಸಂ ವಿಕಸನೀಯ ಬದಲಾವಣೆಯ ಮೆಕಾನಿಸಂನ್ನು ವಿರಾಮ ಸಮತೋಲನ (ಪಂಕ್ಚುಯೇಟಡ್ ಈಕ್ವಲಿಬ್ರಿಯಂ) ಎಂದು ಕರೆಯಾಲಾಗಿದೆ. ಇಲ್ಲಿಯ ವಿಕಸನೀಯ ಬದಲಾವಣೆಗಳು ಅದರಲ್ಲೂ ಮುಖ್ಯವಾಗಿ ಜೀವಸಂಕುಲವಾಗುವಿಕೆ ದೀರ್ಘ ಕಾಲದ ಸ್ತಂಭನದ ಅಥವಾ ತಡೆಹಿಡಿಯುವಿಕೆಯ ನಂತರ ವೇಗವಾಗಿ ಆಗುತ್ತದೆ.

ಗುಂಪುಗಳ ನಡುವಿನ ಅನುವಂಶಿಕತೆಯ ಬದಲಾವಣೆ ಎರಡು ಉಪಗುಂಪುಗಳ ನಡುವಿನ ಜಿನೋಮ್ (ಜೀವಿಯೊಳಗಿನ ಪೂರ್ಣ ಅನುವಂಶಿಕ ಪದಾರ್ಥದ ಮೊತ್ತ) ಹೆಚ್ಚು ಹೆಚ್ಚು ಹೋಲಿಸಲಾರದಂತೆ ಆಗುತ್ತದೆ ಹೀಗಾಗಿ ಅವುಗಳ ನಡುವೆ ವಂಶವಾಹಿಗಳ ಹರಿವು ಕಡಿಮೆಯಾಗುತ್ತದೆ. ಪ್ರತಿ ಉಪಗುಂಪಿನ ಭಿನ್ನತೆ ಸೂಚಿಸುವ ವ್ಯತ್ಯಯನಗಳು ಸ್ಥಿರವಾದಾಗ ಅವುಗಳ ನಡುವಿನ ವಂಶವಾಹಿ ಹರಿವು ಪೂರ್ತಿಯಾಗಿ ನಿಂತುಹೋಗುತ್ತದೆ. ಜೀವಸಂಕುಲವಾಗುವಿಕೆಗೆ ಕೇವಲ ಎರಡು ವ್ಯತ್ಯಯನಗಳೇ ಸಾಕಾಗ ಬಹುದು: ಅವು ಎರಡೂ ಬೇರೆ ಬೇರೆಯಾಗಿ ಕಾಣಿಸಿಕೊಂಡಾಗ ಯೋಗ್ಯತೆಯ ಮೇಲೆ ತಟಸ್ಥ ಅಥವಾ ಧನಾತ್ಮಕ ಪರಿಣಾಮ ಬೀರುತ್ತವೆ ಮತ್ತು ಜೊತೆಯಾಗಿ ಕಾಣಿಸಿಕೊಂಡಾಗ ಯೋಗ್ಯತೆಯ ಮೇಲೆ ರುಣಾತ್ಮಕ ಪರಿಣಾಮ ಉಂಟುಮಾಡುತ್ತವೆ. ನಂತರ ಈ ವಂಶವಾಹಿಗಳು ಕ್ರಮವಾಗಿ ಉಪಗುಂಪುಗಳಿಗೆ ಸ್ಥಿರವಾಗುವ ಮೂಲಕ ಎರಡು ಸಂತಾನೋತ್ಪತ್ತಿಯಲ್ಲಿ ಪ್ರತ್ಯೇಕಿಸಲಾದ ಜನಸಂಖ್ಯೆಗಳಾಗುತ್ತವೆ. ಇವೆರಡೂ ಜೀವಶಾಸ್ತ್ರದ ಪರಿಕಲ್ಪನೆಯಲ್ಲಿ ಯಾವುವನ್ನು ಭಿನ್ನ ಜೀವಸಂಕುಲಗಳು ಎನ್ನುತ್ತೇವೆಯೋ ಆ ರೀತಿಯಲ್ಲಿ ಇವು ಭಿನ್ನ ಜೀವಸಂಕುಲಗಳು.

ಐತಿಹಾಸಿಕ ಬೆಳವಣಿಗೆ

ನೈಸರ್ಗಿಕ ಆಯ್ಕೆ 
ಆಧುನಿಕ ನೈಸರ್ಗಿಕ ಆಯ್ಕೆಯ ಸಿದ್ಧಾಂತವನ್ನು ಹತ್ತೊಂಬತ್ತನೆಯ ಶತಮಾನದ ಚಾರ್ಲ್ಸ್ ಡಾರ್ವಿನ್‌ ಕೃತಿಗಳಿಂದ ಪಡೆಯಲಾಗಿದೆ.

ಡಾರ್ವಿನ್ ಮುಂಚಿನ ಸಿದ್ಧಾಂತಗಳು

ಹಲವು ಪ್ರಾಚೀನ ತತ್ತ್ವಜ್ಞಾನಿಗಳು ಪ್ರಕೃತಿಯು ದೊಡ್ಡ ಸಂಖ್ಯೆಯಲ್ಲಿ ಬೇಕಾಬಿಟ್ಟಿಯಾಗಿ (ಯಾದೃಚ್ಛಿಕವಾಗಿ) ಜೀವಿಗಳನ್ನು ಸೃಷ್ಟಿಸುತ್ತದೆ ಮತ್ತು ತಮಗೆ ತಾವು ಒದಗಿಸಿಕೊಳ್ಳಬಲ್ಲ (ಸಾಕಿಕೊಳ್ಳಬಲ್ಲ) ಮತ್ತು ಸಂತಾನೋತ್ಪತ್ತಿ ಮಾಡುವ ಜೀವಿಗಳು ಯಶಸ್ವಿಯಾಗಿ ಉಳಿದುಕೊಳ್ಳುತ್ತವೆ ಎಂಬ ಚಿಂತನೆಯನ್ನು ಮಂಡಿಸಿದ್ದರು. ಈ ಬಗೆಗಿನ ಪ್ರಖ್ಯಾತ ಉದಾಹರಣೆ ಎಮ್ಪೆಡೊಕ್ಲಸ್ ಮತ್ತು ಅವನ ಭೌದ್ಧಿಕ ವಾರಸುದಾರ ರೋಮ್‌ನ ಕವಿ ಲ್ಯೂಕ್ರೆಟಿಯಸ್. ಎಮ್ಪೆಡೊಕ್ಲಸ್‌ನ ಜೀವಿಗಳ ಬಗೆಗಿನ ಚಿಂತನೆಯು ಅವನ ಬಿಸುಪು ಮತ್ತು ತಂಡಿಗಳಂತಹ ಕಾರಣಗಳು ಕೆಲಸ ಮಾಡುವದಕ್ಕೆ ಪ್ರಾಸಂಗಿಕವಾಗಿತ್ತು ಮತ್ತು ಇದನ್ನು ಅರಿಸ್ಟಾಟಲ್ ತನ್ನ ಫಿಸಿಕ್ಸ್‌ ಬುಕ್‌ IIನಲ್ಲಿ ವಿಮರ್ಶಿಸಿದ. ಅವನು ನೈಸರ್ಗಿಕ ‘ಉದ್ಧೇಶವನ್ನು’ (ಜಡಸೃಷ್ಟಿಯ ಹಿಂದೆ ಉದ್ದೇಶ ಮತ್ತು ಸಂಕಲ್ಪವಿದೆ ಎಂದು ಭಾವಿಸುವುದು) ಅದರ ಸ್ಥಾನದಲ್ಲಿರಿಸಿದ. ಅವನು ಆಕೃತಿಯು ಒಂದು ಉದ್ಧೇಶಕ್ಕಾಗಿ ರಚಿತವಾಗಿದೆಯೆಂದು ನಂಬಿದ್ದ ಮತ್ತು ಇದಕ್ಕೆ ಜೀವಸಂಕುಲಗಳ ಅನುವಂಶಿಕತೆಯ ಕ್ರಮಬದ್ಧತೆಯನ್ನು ಪುರಾವೆಯಾಗಿ ಬಳಸಿದ. ಆದರೆ ಅವನು ಹೊಸ ನಮೂನೆಯ ಅತಿಘೋರ ಜೀವಿಗಳು ಹುಟ್ಟಬಹುದು ಆದರೆ ಅದು ತೀರ ವಿರಳ ಉದಾಹರಣೆ ಎಂದು ಭಾವಿಸಿದ (ಜನರೇಶನ್ ಆಫ್ ಅನಿಮಲ್ಸ್, ಬುಕ್ IV). ಡಾರ್ವಿನ್ ತನ್ನ ಆರಿಜನ್‌ ಆಫ್ ಸ್ಪೀಷೀಶಸ್‌ನಲ್ಲಿ (೧೮೭೨) ಉಲ್ಲೇಖಿಸಿದಂತೆ ಅರಿಸ್ಟಾಟಲ್ ಭಿನ್ನ ರೀತಿಯ ರೂಪಗಳು (ಉದಾಹರಣೆಗೆ ಹಲ್ಲುಗಳು) ಅಕಸ್ಮಿಕವಾಗಿ ಹುಟ್ಟಿರ ಬಹುದು ಆದರೆ ಉಪಯುಕ್ತ ರೂಪ ಮಾತ್ರ ಉಳಿದುಕೊಳ್ಳುತ್ತವೆ ಎಂದು ಭಾವಿಸಿದ್ದ.

ಆಸ್ತಿತ್ವಕ್ಕಾಗಿ ಹೋರಾಟವನ್ನು ನಂತರದ ಇಸ್ಲಾಮಿ ಸಂಸ್ಕೃತಿಯ ಬರಹಗಾರ ಅಲ್-ಜಹೀಜ್ ೯ನೆಯ ಶತಮಾನದಲ್ಲಿ ವಿವರಿಸಿದ.

ಹತ್ತೊಬತ್ತನೆಯ ಶತಮಾನದ ಆರಂಭದವರೆಗೆ ಪಾಶ್ಚಿಮಾತ್ಯ ಸಮಾಜಗಳಲ್ಲಿ ಇದ್ದ ಚಿಂತನೆಯ ಪ್ರಕಾರ ಜೀವಸಂಕುಲಗಳ ನಡುವಿನ ವ್ಯತ್ಯಾಸಗಳು ಪ್ಲಾಟೋನ ಆದರ್ಶವಾದ “ಸೃಷ್ಟಿಸಿದ ನಮೂನೆಗಳ” ಅನಾಸಕ್ತಿದಾಯಕ ಮಾರ್ಗಚ್ಯುತಿಗಳು. ಆದರೆ ಭೂಶಾಸ್ತ್ರದ ಏಕರೂಪ ಪ್ರಕ್ರಿಯೆವಾದ (ಯುನಿಫಾರ್ಮಟೇರಿಯನಿಸಂ) ಸಿದ್ಧಾಂತವು ಸರಳ ಮತ್ತು ಬಲಹೀನ ಶಕ್ತಿಗಳು ತೀರ ದೀರ್ಘಾವಧಿಯಲ್ಲಿ ಭೂಮಿಯ ಮೇಲ್ಮೈ ಚಿತ್ರಣವನ್ನು ತೀವ್ರವಾಗಿ ಬದಲಾಯಿಸುತ್ತವೆ ಎಂದು ವಾದಿಸುತ್ತಿತ್ತು. ಈ ಸಿದ್ಧಾಂತದ ಯಶಸ್ಸು ಭೂಗೋಳಿಕ ಕಾಲಮಾನ ಎಷ್ಟು ದೊಡ್ಡದು ಎಂಬ ಅರಿವು ಮೂಡಿಸಿತು. ಪರಿಣಾಮವಾಗಿ ಪೀಳೆಗೆಯಿಂದ ಪೀಳಿಗೆಗೆ ಉಂಟಾಗುವ ಗ್ರಹಿಸಲು ಸಾಧ್ಯವಾಗದ ಸಣ್ಣ ಪ್ರಮಾಣದ ಬದಲಾವಣೆಗಳು ಜೀವಸಂಕುಲಗಳ ನಡುವಿನ ವ್ಯತ್ಯಾಸದಷ್ಟು ದೊಡ್ಡವಾಗವುದು ಸಾಧ್ಯ ಎಂಬ ಚಿಂತನೆಯು ಆಸ್ತಿತ್ವಕ್ಕೆ ಬಂತು.

ಹತ್ತೊಂಬತ್ತನೆಯ ಶತಮಾನದ ಆರಂಭಿಕ ವಿಕಾಸವಾದಿ ಜೀನ್-ಬ್ಯಾಪ್ಟಿಸ್ಟೆ ಲೆಮಾರ್ಕ್ ವಿಕಸನೀಯ ಬದಲಾವಣೆಯ ಮೆಕಾನಿಸಂ ಆಗಿ ಗಳಿಸಿದ ಗುಣಗಳು ಅನುವಂಶಿಕವಾಗಿ ಪ್ರಾಪ್ತವಾಗುತ್ತವೆ ಎಂದು ಸೂಚಿಸಿದ. ಇದರ ಪ್ರಕಾರ ಜೀವಿಯೊಂದು ಜೀವಿತಾವಧಿಯಲ್ಲಿ ಗಳಿಸಿದ ಹೊಂದಾಣಿಕೆಯ ಗುಣಗಳು ಅವುಗಳ ಸಂತತಿಗೆ ಕೊಡಲ್ಪಡುತ್ತವೆ ಮತ್ತು ಇದರ ಪರಿಣಾಮವಾಗಿ ಜೀವಸಂಕುಲಗಳ ರೂಪಾಂತರವಾಗುತ್ತದೆ. ಲೆಮಾರ್ಕಿಸಂ ಎಂದು ಹೆಸರು ಪಡೆದ ಈ ಅನುವಂಶಿಕತೆಯ-ವಿರೋಧಿ ಚಿಂತನೆಯು ಸ್ಟ್ಯಾಲಿನ್‌ನ ಸೋವಿಯೆಟ್‌ನ ಜೀವಶಾಸ್ತ್ರಜ್ಞ ಟ್ರೊಫಿಮ್ ಲೈಸೆನ್ಕೊ ಮೇಲೆ ಪ್ರಬಾವ ಬೀರಿತು.

೧೮೩೫ ಮತ್ತು ೧೮೩೭ರ ನಡುವೆ ಪ್ರಾಣಿಶಾಸ್ತ್ರಜ್ಞ ಎಡ್ವರ್ಡ್ ಬ್ಲಿಥ್ ಸಹ ವಿಶೇಷವಾಗಿ ವ್ಯತ್ಯಾಸಗಳ ಬಗೆಗೆ, ಕೃತಿಮ ಆಯ್ಕೆಯ ಬಗೆಗೆ ಮತ್ತು ಇಂತಹುದೇ ಪ್ರಕ್ರಿಯೆ ನಿಸರ್ಗದಲ್ಲಿ ಇರುವ ಬಗೆಗಿನ ಚಿಂತನೆಗಳಿಗೆ ತನ್ನ ಕೊಡುಗೆ ಕೊಟ್ಟಿದ್ದ. ವಾಸ್ತವದಲ್ಲಿ ಚಾರ್ಲ್ಸ್ ಡಾರ್ವಿನ್ ಬ್ಲಿಥ್‌ನ ಚಿಂತನೆಗಳ ಬಗೆಗೆ ತುಂಬಾ ಗೌರಲ ಇರಿಸಿಕೊಂಡಿದ್ದ. ಅವನು ತನ್ನ ಆನ್ ದಿ ಆರಿಜನ್ ಆಫ್ ಸ್ಪೀಷೀಸ್‌ನಲ್ಲಿ ಈ ಬಗೆಗೆ ಹೀಗೆ ಬರೆದಿದ್ದಾನೆ. “ಬ್ಲಿಥ್‌, ಅವರ ವಿಶಾಲ ಮತ್ತು ಭಿನ್ನ ಆಕಾರಗಳಿಂದ ಪಡೆದ ಜ್ಞಾನದ ಆಧಾರ ಮೇಲಿನ ಅಭಿಪ್ರಾಯವನ್ನು ನಾನು ಇತರ ಎಲ್ಲರ ಅಭಿಪ್ರಾಯಕ್ಕಿಂತ ಹೆಚ್ಚು ಮೌಲ್ಯಯುತವಾದುದು ಎಂದು ಭಾವಿಸುತ್ತೇನೆ, ... ”

ಡಾರ್ವಿನ್‌ನ ಸಿದ್ಧಾಂತ

೧೬೫೯ರಲ್ಲಿ ಚಾರ್ಲ್ಸ್ ಡಾರ್ವಿನ್ ತನ್ನ ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸ ಸಿದ್ಧಾಂತವನ್ನು ಹೊಂದಾಣಿಕೆ ಮತ್ತು ಜೀವಸಂಕುಲವಾಗುವಿಕೆಗೆ ವಿವರಣೆಯಾಗಿ ಮಂಡಿಸಿದ. ಅವನು ನೈಸರ್ಗಿಕ ಆಯ್ಕೆಯನ್ನು “ಪ್ರತಿ ಸಣ್ಣ ಬದಲಾವಣೆಯೂ (ಗುಣದ) ಉಪಯುಕ್ತವಾದಲ್ಲಿ ಉಳಿದುಕೊಳ್ಳುವ ನಿಯಮ” ಎಂದು ವ್ಯಾಖ್ಯಾನಿಸಿದ. ಪರಿಕಲ್ಪನೆಯು ಸರಳವಾಗಿದ್ದಾಗ್ಯೂ ಶಕ್ತಿಯುತವಾಗಿತ್ತು. ಇದು ಪರಿಸರಕ್ಕೆ ಚೆನ್ನಾಗಿ ಹೊಂದಿಕೊಂಡ ಜೀವಿಗಳು ಬದುಕುಳಿಯುವ ಮತ್ತು ಸಂತಾನೋತ್ಪತ್ತಿ ಮಾಡುವ ಸಾಧ್ಯತೆ ಹೆಚ್ಚು ಎನ್ನುತ್ತದೆ. ಎಲ್ಲಿಯವರೆಗೆ ತುಸು ವ್ಯತ್ಯಾಸ ಅವುಗಳ ನಡುವೆ ಇರುತ್ತದೆಯೋ ಮತ್ತು ಈ ವ್ಯತ್ಯಾಸವು ಅನುವಂಶಿಕವಾಗಿ ಪ್ರಾಪ್ತವಾಗುತ್ತದೆಯೋ , ಅಲ್ಲಿ ಬಹಳ ಅನುಕೂಲಕರ ವ್ಯತ್ಯಾಸಗಳ ಆಯ್ಕೆ ನಡೆಯುತ್ತದೆ. ವ್ಯತ್ಯಾಸಗಳು ಅನುವಂಶಿಕವಾಗಿದ್ದಲ್ಲಿ ಸಂತಾನೋತ್ಪತ್ತಿಯಲ್ಲಿನ ಯಶಸ್ವೀ ವ್ಯತ್ಯಾಸವು ಜೀವಸಂಕುಲದ ನಿರ್ದಿಷ್ಟ ಜನಸಂಖ್ಯೆಯ ವಿಕಾಸದಲ್ಲಿ ಪ್ರಗತಿಯಾಗುತ್ತದೆ. ಈ ಜನಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ವಿಕಾಸವಾದಾಗ ಅದು ಭಿನ್ನ ಜೀವಸಂಕುಲವಾಗುತ್ತದೆ.

ಡಾರ್ವಿನ್‌ನ ಚಿಂತನೆಗಳು ಎರಡನೆಯ ಹೆಚ್‌ಎಂಎಸ್ ಬೀಗಲ್‌ನ ಪ್ರಯಾಣದಲ್ಲಿ (೧೮೩೧-೧೮೩೬) ತಾನು ಮಾಡಿದ ಅವಲೋಕನಗಳು ಮತ್ತು ರಾಜಕೀಯ ಅರ್ಥಶಾಸ್ತ್ರಜ್ಞನ ರೆವರೆಂಡ್ ಥಾಮಸ್ ರಾಬರ್ಟ್ ಮಾಲ್ಧಸ್‌ನ ಕೃತಿ ಏನ್ ಎಸ್ಸೆ ಆನ್ ದಿ ಪ್ರಿನ್ಸಿಪಲ್ ಆಫ್ ಪಾಪುಲೇಶನ್‌ಗಳಿಂದ (೧೭೯೮) ಸ್ಪೂರ್ತಿ ಪಡೆದಿತ್ತು. ಈ ಕೃತಿಯಲ್ಲಿ ಮಾಲ್ಥಸ್ ಜನಸಂಖ್ಯೆಯು (ಯಾವ ನಿರ್ಬಂದವೂ ಇಲ್ಲದಿದ್ದಲ್ಲಿ) ಘಾತೀಯವಾಗಿ ಮತ್ತು ಆಹಾರ ಸರಬರಾಜು ಅಂಕಗಣಿತೀಯವಾಗಿ ಬೆಳೆಯುತ್ತವೆ. ಹೀಗೆ ಸಂಪನ್ಮೂಲಗಳ ಮಿತಿಯ ಅನಿವಾರ್ಯತೆ ಜನಸಂಖ್ಯೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು “ಆಸ್ತಿತ್ವಕ್ಕಾಗಿ ಹೋರಾಟಕ್ಕೆ” ಕಾರಣವಾಗುತ್ತದೆ. ೧೮೩೮ರಲ್ಲಿ ಡಾರ್ವಿನ್ ಮಾಲ್ಥಸ್‌ನ್ನು ಓದಿದಾಗ ಆಗಲೇ ಅತ್ಯುತ್ತಮ ಪ್ರಕೃತಿಶಾಸ್ತ್ರಜ್ಞ ಎಂದು ಹೆಸರು ಗಳಿಸಿದ್ದ. ಹೀಗಾಗಿ ಪ್ರಕೃತಿಯಲ್ಲಿನ “ಆಸ್ತಿತ್ವಕ್ಕಾಗಿ ಹೋರಾಟವನ್ನು” ಅವನು ಸರಿಯಾಗಿ ಗ್ರಹಿಸಿದ ಮತ್ತು ಜನಸಂಖ್ಯೆಯು ಸಂಪೂನ್ಮೂಲಗಳನ್ನು ಮೀರಿದಾಗ “ಅನುಕೂಲಕರ ವ್ಯತ್ಯಾಸಗಳು ಉಳಿದುಕೊಳ್ಳುತ್ತವೆ ಮತ್ತು ಅನುಕೂಲವಲ್ಲದವು ನಾಶವಾಗುವುತ್ತವೆ. ಇದರ ಪರಿಣಾಮವೇ ಹೊಸ ಜೀವಸಂಕುಲದ ರೂಪಗೊಳ್ಳುವಿಕೆ.”

ಈ ಕೆಳಗೆ ಡಾರ್ವಿನ ಸ್ವಂತ ಕೊಟ್ಟಿರುವ ಅವನ ಚಿಂತನೆಗಳ ಸಾರ, ಅವನ ಆನ್‌ ದಿ ಆರಿಜನ್‌ ಆಫ್ ಸ್ಪೀಷೀಸ್‌ನ ನಾಲ್ಕನೆಯ ಅಧ್ಯಾಯದಲ್ಲಿ ಕಂಡಂತೆ:

    ದೀರ್ಘಾವಧಿಯಲ್ಲಿ ಮತ್ತು ಬದಲಾಗುವ ಬದುಕುವ ಪರಿಸ್ಥಿತಿಯಲ್ಲಿ ಜೀವಿಗಳು ಅವುಗಳ ಹಲವು ಭಾಗಗಳು ಸಂಘಟನೆಯಲ್ಲಿ ಬದಲಾಗುವುದೇ ಇಲ್ಲ ಎಂಬುದು ವಿವಾದಾಸ್ಪದವಲ್ಲ. ಪ್ರತೀ ಜೀವಸಂಕುಲವೂ ಘಾತೀಯವಾಗಿ ಹೆಚ್ಚಾಗುವ ಕಾರಣದಿಂದಾಗಿ ಯಾವುದೇ ಒಂದು ವಯಸ್ಸಿನಲ್ಲಿ, ಕಾಲದಲ್ಲಿ ಅಥವಾ ವರುಷದಲ್ಲಿ ಬದುಕಿಗಾಗಿ ತೀವ್ರ ಹೋರಾಟ ಇರುವ ಸಾಧ್ಯತೆ ಇರುತ್ತದೆ ಎಂಬುದು ಸಹ ವಿವಾದಾಸ್ಪದವಲ್ಲ. ಹೀಗಿದ್ದಲ್ಲಿ ಜೀವಿಗಳ ಒಂದಕ್ಕೊಂದು ಸಂಬಂಧಗಳ ಅನಂತ ಸಂಕೀರ್ಣತೆಯನ್ನು ಮತ್ತು ಅವುಗಳ ಇರುವಿಕೆಯ ಪರಿಸ್ಥಿತಿಯನ್ನು ಗಣೆನೆಗೆ ತೆಗೆದುಕೊಂಡು ಅನುಕೂಲಕರ ರಚನೆ, ಸಂಯೋಜನೆ ಮತ್ತು ರೂಢಿಗಳು ಕಾರಣವಾಗಿರುವುದನ್ನು ನೋಡಿದರೆ, ಅವುಗಳಲ್ಲಿ ಮಾನವನನಿಗೆ ಉಪಯುಕ್ತವಾದ ಹಲವು ವ್ಯತ್ಯಾಸಗಳು ಉಂಟಾದಂತೆ, ಪ್ರತಿಯೊಂದು ಜೀವಿಗೂ ಅದರ ಸ್ವಂತ ಅನುಕೂಲ ಒದಗಿಸುವ ಯಾವ ವ್ಯತ್ಯಾಸವೂ ಎಂದೂ ಉಂಟಾಗಿಲ್ಲವೆಂದು ಹೇಳುವುದು ತೀರಾ ಅಸಾಧಾರಣ ಸಂಗತಿಯಾಗುತ್ತದೆ. ಜೀವಿಗೆ ಅನುಕೂಲಕರವಾದ ಇಂತಹ ವ್ಯತ್ಯಾಸಗಳು ಉಂಟಾದಲ್ಲಿ, ಖಚಿತವಾಗಿ ಇಂತಹ ಗುಣ ಪಡೆದ ಜೀವಿಗೆ ಬದುಕುಳಿಯುವ ಹೋರಾಟದಲ್ಲಿ ಉಳಿದುಕೊಳ್ಳುವ ಸಾಧ್ಯತೆ ತೀರ ಹೆಚ್ಚು ಇರುತ್ತದೆ; ಮತ್ತು ಶಕ್ತಿಯುತವಾದ ಅನುವಂಶಿಕತೆಯ ನಿಯಮಗಳ ಪ್ರಕಾರ ಅಂತಹುದೇ ಗುಣವಿರುವ ಸಂತತಿಯನ್ನು ಉತ್ಪತ್ತಿ ಮಾಡುವ ಪ್ರವೃತ್ತಿ ಇರುತ್ತದೆ. ಹೀಗೆ ಉಳಿದುಕೊಳ್ಳುವ ನಿಯಮವನ್ನು ಸಂಕ್ಷಿಪ್ತವಾಗಿಸಲು ನೈಸರ್ಗಿಕ ಆಯ್ಕೆ ಎಂದು ನಾನು ಕರೆದಿದ್ದೇನೆ.

ಒಮ್ಮೆ “ಅದರ ಮೇಲೆ ಕೆಲಸ ಮಾಡಲು” ಒಂದು ಸಿದ್ಧಾಂತ ದೊರೆತ ಮೇಲೆ ಅದನ್ನು ಸಾರ್ವಜನಿಕರ ಮುಂದೆ ಇರಿಸುವ ಮೊದಲು ಡಾರ್ವಿನ್ ತನ್ನ “ಪ್ರಧಾನ ಹವ್ಯಾಸದಂತೆ” ಪುರಾವೆಗಳನ್ನು ಶೇಖರಿಸುವುದರಲ್ಲಿ ಮತ್ತು ಸಂಸ್ಕರಿಸುವುದರಲ್ಲಿ ಬಹಳ ಜಾಗರೂಕನಾಗಿದ್ದ. ಆಲ್ಪರ್ಡ್ ರಸಲ್ ವಾಲೆಸ್ ‌ಸ್ವತಂತ್ರವಾಗಿ ಈ ನಿಯಮಗಳನ್ನು ಕಲ್ಪಿಸಿಕೊಂಡು ತನ್ನ ಪ್ರಬಂಧವೊಂದರಲ್ಲಿ ವಿವರಿಸಿ ಚಾರ್ಲ್ ಲಯೆಲ್‌ಗೆ ಕೊಡಲು ಡಾರ್ವಿನ್‌ಗೆ ಕಳುಹಿಸಿದಾಗ ಡಾರ್ವಿನ್ ತನ್ನ ಸಂಶೋಧನೆಗಳನ್ನು ಮಂಡಿಸಲು “ದೊಡ್ಡ ಪುಸ್ತಕವೊಂದನ್ನು” ಬರೆಯಲು ತೊಡಗಿದ್ದ. ಜೋಸೆಪ್ ಡಾಲ್ಟನ್ ಹೂಕರ್ ವಾಲೆಸ್‌ನ ಈ ಪ್ರಬಂಧವನ್ನು (ವಾಲೆಸ್‌ನಿಗೆ ತಿಳಿಸದೆ) ಮತ್ತು ಡಾರ್ವಿನ್‌ನ ಪಕೃತಿಶಾಸ್ತ್ರಜ್ಞರಿಗೆ ಕಳುಹಿದ ಪ್ರಕಟಿತವಾಗದ ಪ್ರಬಂಧವನ್ನು ಜಂಟಿಯಾಗಿ ಪ್ರಕಟಿಸಲು ನಿರ್ಣಯಿಸಿದ. ಆನ್‌ ದಿ ಟೆಡೆನ್ಸಿ ಆಫ್ ಸ್ಪೀಷೀಸ್ ಟು ಪಾರ್ಮ್ ವೆರೈಟೀಸ್; ಅಂಡ್ ಆನ್ ದಿ ಪರ್ಪೆಚುಯೇಶನ್ ಆಫ್ ವೆರೈಟೀಸ್ ಅಂಡ್ ಸ್ಪೀಶೀಸ್ ಬೈ ನ್ಯಾಚುರಲ್ ಮೀನ್ಸ್ ಆಫ್ ಸೆಲೆಕ್ಶನ್‌ ಪ್ರಬಂಧವನ್ನು ಲಂಡನ್‌ನ ಲಿನ್ನೀಯನ್ ಸೊಸೈಟಿಯಲ್ಲಿ ಓದಲಾಯಿತು ಮತ್ತು ಜೂಲೈ ೧೮೫೮ರಲ್ಲಿ ಈ ನಿಯಮದ ಜಂಟಿ ಅವಿಷ್ಕಾರವನ್ನು ಪ್ರಕಟಿಸಲಾಯಿತು. ಡಾರ್ವಿನ್ ತನ್ನ ೧೮೫೯ರಲ್ಲಿ ಆನ್ ದಿ ಆರಿಜನ್ ಆಫ್ ಸ್ಪೀಶಿಸ್‌ನಲ್ಲಿ ಸಂಗ್ರಹಿಸಿದ ಪುರಾವೆ ಮತ್ತು ತನ್ನ ನಿರ್ಣಯಗಳ ವಿವರಗಳನ್ನು ಪ್ರಕಟಿಸಿದ. ಡಾರ್ವಿನ್ ತನ್ನ ೧೮೬೧ರ ಮೂರನೆಯ ಮುದ್ರಣದಲ್ಲಿ ಇಂತಹುದೇ ಚಿಂತನೆಗಳನ್ನು ೧೮೧೩ರಲ್ಲಿ ವಿಲಿಯಂ ಚಾರ್ಲ್ಸ್ ವೆಲ್ಸ್ ಮತ್ತು ೧೮೩೧ರಲ್ಲಿ ಪ್ಯಾಟ್ರಿಕ್ ಮ್ಯಾಥಿವ್ ಸೂಚಿಸಿದರಾದರೂ ಅದನ್ನು ಅಭಿವೃದ್ಧಿ ಪಡಿಸಲಿಲ್ಲ ಮತ್ತು ಯಾವುದೇ ಗಮನಾರ್ಹ ವೈಜ್ಞಾನಿಕ ಪ್ರಕಟಣೆಯಲ್ಲಿ ಪ್ರಕಟಿಸಲಿಲ್ಲ ಎಂಬುದರ ಬಗೆಗೆ ಗಮನ ಸೆಳೆದ.

ಡಾರ್ವಿನ್ ನೈಸರ್ಗಿಕ ಆಯ್ಕೆಯನ್ನು ತಾನು “ಕೃತಿಮ ಆಯ್ಕೆ” ಎಂದು ಕರೆದ, ರೈತರು ಬೆಳೆಗಳ ಅಥವಾ ಜಾನುವಾರಿನ ಸಂತಾನಾಭಿವೃದ್ಧಿಯನ್ನು ಹೇಗೆ ಮಾಡುತ್ತಾರೆ ಎಂಬುದಕ್ಕೆ ಹೋಲಿಸಿ ಗ್ರಹಿಸಿದ. ಅವನು ತನ್ನ ಆರಂಭಿಕ ಹಸ್ತ ಲಿಖಿತ ಪ್ರತಿಗಳಲ್ಲಿ ನಿಸರ್ಗ ಆಯ್ಕೆ ಮಾಡುತ್ತದೆ ಎನ್ನುತ್ತಾನೆ. ಅದೇ ಸಮಯದಲ್ಲಿ ಜೆನೆಟಿಕ್ ಚಲನೆಗಳಂತಹ (ಜೆನೆಟಿಕ್ ಡ್ರಿಫ್ಟ್‌) ವಿಕಾಸದ ಇತರ ಮೆಕಾನಿಸಂಗಳು ಸ್ಪಷ್ಟವಾಗಿ ರೂಪಗೊಂಡಿರಲಿಲ್ಲ. ಡಾರ್ವಿನ್ ಆಯ್ಕೆಯು ಕಥೆಯ ಒಂದು ಭಾಗ ಮಾತ್ರ ಎಂದು ನಂಬಿದ್ದ: “ನೈಸರ್ಗಿಕ ಆಯ್ಕೆಯು ಬದಲಾವಣೆಯನ್ನು ತರುವ ಒಂದು ವಿಧ ಮಾತ್ರ ಎಂದು ನನಗೆ ಮನವರಿಕೆಯಾಗಿದೆ” ಎನ್ನುತ್ತಾನೆ. ತನ್ನ ಸೆಪ್ಟಂಬರ್ ೧೮೬೦ರ ಲಯೆಲ್‌ಗೆ ಬರೆದ ಪತ್ರದಲ್ಲಿ “ನೈಸರ್ಗಿಕ ಆಯ್ಕೆ”ಯ ಪದ ಬಳಕೆಯ ಬಗೆಗೆ ವಿಷಾದಿಸಿ “ನೈಸರ್ಗಿಕ ಉಳಿದುಕೊಳ್ಳುವಿಕೆ” ಎಂದು ಬಳಸಬೇಕಾಗಿತ್ತು ಎನ್ನುತ್ತಾನೆ.

ಡಾರ್ವಿನ್ ಮತ್ತು ಅವನ ಸಮಕಾಲೀನರಿಗೆ ನೈಸರ್ಗಿಕ ಆಯ್ಕೆಯು ಸಾರದಲ್ಲಿ ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸ ಎಂಬುದರ ಸಮಾನಾರ್ಥಕವಾಗಿತ್ತು. ಆನ್ ಆರಿಜನ್‌ ಆಫ್ ಸ್ಪೀಷೀಸ್ ಪ್ರಕಟವಾದ ನಂತರ ಸುಶಿಕ್ಷಿತ ಜನರು ಸಾಮಾನ್ಯವಾಗಿ ಯಾವುದೋ ಒಂದು ರೀತಿಯ ವಿಕಾಸವು ನಡೆಯಿತು ಎಂದು ಭಾವಿಸತೊಡಗಿದ್ದರು. ಆದರೆ ಒಂದು ಮೆಕಾನಿಸಂ ಆಗಿ ನೈಸರ್ಗಿಕ ಆಯ್ಕೆಯು ವಿವಾದಾತ್ಮಕವಾಗಿತ್ತು. ಇದಕ್ಕೆ ಭಾಗಶಹ ಕಾರಣ ಬದುಕಿರುವ ಜೀವಿಗಳ ಅವಲೋಕಿತ ಗುಣಗಳ ವೈವಿಧ್ಯತೆಯ ವ್ಯಾಪ್ತಿಯನ್ನು ವಿವರಿಸಲು ಅದು ಬಲಹೀನ ವಿವರಣೆ ಎಂದು ಭಾವಿಸಲಾಗಿತ್ತು ಮತ್ತು ಭಾಗಶಹ ಕಾರಣ ಅದರ ಬೆಂಬಲಿಗರೂ ಸಹ ಅದರ “ನಿರ್ದೇಶಿತವಲ್ಲದ” ಮತ್ತು ಪ್ರಗತಿ ಪರವಲ್ಲದ ಸ್ವಭಾವವನ್ನು ವಿರೋಧಿಸಿದುದು. ಈ ವಿರೋಧಿ ಪ್ರತಿಕ್ರಿಯೆಯೇ ಚಿಂತನೆಯ ಅಂಗೀಕಾರಕ್ಕೆ ಇದ್ದ ಅತಿ ದೊಡ್ಡ ಪ್ರಮುಖ ಅಡಚಣೆಯಾಗಿತ್ತು ಎನ್ನಲಾಗಿದೆ.

ಆದರೆ ಕೆಲವು ಚಿಂತಕರು ಡಾರ್ವಿನ್‌ನ ಕೃತಿಯನ್ನು ಓದಿದ ನಂತರ ನೈಸರ್ಗಿಕ ಆಯ್ಕೆಯನ್ನು ಉತ್ಸಾಹದಿಂದ ಸ್ವಾಗತಿಸಿದರು. ಹೆರ್ಬಟ್ ಸ್ಪೆನ್ಸರ್ “ಯೋಗ್ಯವಾದುದೇ ಉಳಿದುಕೊಳ್ಳುತ್ತದೆ” ಪದವನ್ನು ಒಳತಂದ ಮತ್ತು ಇದು ಸಿದ್ಧಾಂತದ ಜನಪ್ರಿಯ ಸಾರವಾಯಿತು. ಡಾರ್ವಿನ್ ೧೮೬೯ರಲ್ಲಿ ಪ್ರಕಟವಾದ ಆನ್ ‌ದಿ ಆರಿಜನ್ ಆಫ್ ಸ್ಪೀಷೀಸ್‌ನ ಐದನೆಯ ಮುದ್ರಣದಲ್ಲಿ ಈ ನುಡಿಗಟ್ಟನ್ನು ನೈಸರ್ಗಿಕ ಆಯ್ಕೆಯ ಬದಲಿಗೆ ಬಳಸಿದ ಮತ್ತು ಹೀಗೆ ಹೇಳಿದ: “ಆದರೆ ಹೆರ್ಬಟ್ ಸ್ಪೆನ್ಸರ್ ಹಲವು ಸಲ ಬಳಸಿದ ಯೋಗ್ಯವಾದುದೇ ಉಳಿದುಕೊಳ್ಳುತ್ತದೆ ಎಂಬುದು ಹೆಚ್ಚು ನಿಖರವಾಗಿದೆ ಮತ್ತು ಕೆಲವೊಮ್ಮೆ ಅನುಕೂಲಕರವಾದುದು ಸಹ” ಎನ್ನುತ್ತಾನೆ. ಈ ನುಡಿಗಟ್ಟನ್ನು ಈಗಲೂ ಕೆಲವೊಮ್ಮೆ ಜೀವಶಾಸ್ತ್ರಜ್ಞರಲ್ಲದವರು ಬಳಸುತಿದ್ದಾಗ್ಯೂ ಆಧುನಿಕ ಜೀವಶಾಸ್ತ್ರಜ್ಞರು ಈ ನುಡಿಗಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಏಕೆಂದರೆ “ಯೋಗ್ಯವಾದುದು” ಪದವನ್ನು “ಕಾರ್ಯನಿರ್ವಹಣೆಯಲ್ಲಿ ಉತ್ತಮವಾದುದು” ಎಂದು ಗ್ರಹಿಸಿ ಮತ್ತು ಇದನ್ನು ಜನಸಂಖ್ಯೆಯ ಸರಾಸರಿ ಪ್ರಮಾಣವಾಗಿ ಪರಿಗಣಿಸದೆ ವ್ಯಕ್ತಿ ಅಥವಾ ಜೀವಿಗೆ ಅನ್ವಯಿಸುವ ಕಾರಣಕ್ಕೆ.

ಆಧುನಿಕ ವಿಕಸನೀಯ ಸಂಯೋಜನೆ

ನೈಸರ್ಗಿಕ ಆಯ್ಕೆಯು ನಿರ್ಣಾಯಕವಾಗಿ ಅನುವಂಶಿಕತೆಯ ಚಿಂತನೆಯ ಮೇಲೆ ಆಧಾರ ಪಟ್ಟಿದೆ ಆದರೆ ಅನುವಂಶಿಕತೆಯ ಮೂಲಭೂತ ಪರಿಕಲ್ಪನೆಗಳು ಬೆಳೆಯುವ ಮುಂಚೆ ಅಭಿವೃದ್ಧಿಯಾಗಿದೆ. ಆಧುನಿಕ ತಳಿವಿಜ್ಞಾನದ ಜನಕ ಗ್ರೆಗರ್ ಮೆಂಡಲ್ ಡಾರ್ವಿನ್‌ನ ಸಮಕಾಲೀನನಾದರೂ ಅವನ ಕೃತಿಗಳು ೨೦ನೆಯ ಶತಮಾನದ ಆರಂಭದ ವರೆಗೂ ಕತ್ತಲೆಯಲ್ಲಿಯೇ ಇದ್ದವು. ೨೦ನೆಯ ಶತಮಾನದಲ್ಲಿ ಗ್ರೆಗರ್ ಮೆಂಡಲ್‌ನ ಸಂಕೀರ್ಣ ಸಂಖ್ಯಾಶಾಸ್ತ್ರೀಯ ಅನುವಂಶಿಕತೆಯ ನಿಯಮಗಳ ಬೆಲೆ ಕಟ್ಟುವುದರೊಂದಿಗೆ “ಮರು ಕಂಡುಹಿಡಿದು” ಡಾರ್ವಿನನ ವಿಕಾಸ ಸಿದ್ಧಾಂತವನ್ನು ಅದರೊಂದಿಗೆ ಬೆಸದ ನಂತರವಷ್ಟೇ ವಿಜ್ಞಾನಿಗಳು ಸಾಮಾನ್ಯವಾಗಿ ನೈಸರ್ಗಿಕ ಆಯ್ಕೆಯನ್ನು ಅಂಗೀಕರಿಸಿದರು.

ರೊನಾಲ್ಡ್ ಫಿಶರ್‌ನ ಕೃತಿಗಳು (ಅಗತ್ಯ ಗಣಿತೀಯ ಪರಿಭಾಷೆಯನ್ನು ಅಭಿವೃದ್ಧಿ ಪಡಿಸಿದ ಮತ್ತು ಜೆನೆಟಿಕಲ್ ಥಿಯರಿ ಆಫ್ ನ್ಯೂಚುರಲ್ ಸೆಲ್ಕೆಶನ್ (೧೯೩೦) ಕೃತಿ ರಚಿಸಿದ), ಜೆ. ಬಿ. ಎಸ್. ಹಾಲ್ಡೇನ್ (ನೈಸರ್ಗಿಕ ಆಯ್ಕೆಯಲ್ಲಿ “ವೆಚ್ಚ" ಪರಿಕಲ್ಪನೆಯನ್ನು ಒಳತಂದ), ಸೆವಾಲ್ ವ್ರೈಟ್ (ಆಯ್ಕೆ ಮತ್ತು ಹೊಂದಾಣಿಕೆಯ ಲಕ್ಷಣವನ್ನು ವಿವರಿಸಿದ), ಥಿಯೊಡೊಸಿಯಸ್ ಡೊಬ್‌ಜನಸ್ಕಿ (ವ್ಯತ್ಯಯನಗಳು ಅನುವಂಶಿಕ ವೈವಿದ್ಯತೆಗಳನ್ನು ಹುಟ್ಟಹಾಕುವ ಮೂಲಕ ನೈಸರ್ಗಿಕ ಆಯ್ಕೆಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತವೆ ಎಂಬ ಚಿಂತನೆಯನ್ನು ಸ್ಥಾಪಿಸಿದ: ನೋಡಿ ಜೆನೆಟಿಕ್ಸ್ ಅಂಡ್ ದಿ ಆರಿಜನ್ ಆಫ್ ಸ್ಪೀಷೀಸ್(೧೯೩೭)), ವಿಲಿಯಂ ಡಿ. ಹ್ಯಾಮಿಲ್ಟನ್ (ಬಂಧುಗಳ ಆಯ್ಕೆ ಪರಿಕಲ್ಪನೆಯನ್ನು ರೂಪಿಸಿದ), ಎರ್ನಸ್ಟ್ ಮಯರ್ (ಜೀವಸಂಕುಲವಾಗುವಿಕೆಯಲ್ಲಿ ಸಂತಾನೋತ್ಪತ್ತಿಯ ಪ್ರತ್ಯೇಕತೆಯ ಪ್ರಾಮುಖ್ಯತೆಯನ್ನು ಗುರುತಿಸಿದ: ನೋಡಿ ‌ಸಿಸ್ಟಮಾಟಿಕ್ಸ್ ಅಂಡ್ ದಿ ಆರಿಜನ್ ಆಫ್ ಸ್ಪೀಷೀಸ್ (೧೯೪೨)) ಮತ್ತು ಇತರ ಹಲವರು ಜೊತೆಯಾಗಿ ಆಧುನಿಕ ವಿಕಸನೀಯ ಸಂಯೋಜನೆಯನ್ನು ರೂಪಿಸಿದರು. ಈ ಸಂಯೋಜನೆಯು ನೈಸರ್ಗಿಕ ಆಯ್ಕೆಯನ್ನು ವಿಕಾಸ ಸಿದ್ಧಾಂತದ ಆಧಾರಸ್ತಂಭವಾಗಿ ಸ್ಥಾಪಿಸಿತು, ಇಂದೂ ಸಹ ಅದು ಹಾಗೆಯೇ ಇದೆ.

ನೈಸರ್ಗಿಕ ಆಯ್ಕೆಯ ಅನುವಂಶಿಕತೆಯ ಆಧಾರ

ಅನುವಂಶಿಕತೆಯನ್ನು ಅರ್ಥಮಾಡಿಕೊಳ್ಳು ಮುಂಚೆಯೇ ನೈಸರ್ಗಿಕ ಆಯ್ಕೆಯು ಚಿಂತನೆಯು ಮುನ್ನೆಲೆಗೆ ಬಂದಿದೆ. ನೈಸರ್ಗಿಕ ಆಯ್ಕೆಯ ಆಧಾರವಾದ ಅನುವಂಶಿಕವಾಗಿ ಪ್ರಾಪ್ತವಾಗುವುದನ್ನು ಇಂದಿನ ಜೀವಶಾಸ್ತ್ರವು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಂಡಿದೆ.

ಜೀನ್‌ನಮೂನೆ ಮತ್ತು ವ್ಯಕ್ತನಮೂನೆ

ನೈಸರ್ಗಿಕ ಆಯ್ಕೆಯು ಜೀವಿಯ ವ್ಯಕ್ತನಮೂನೆ ಅಥವಾ ದೈಹಿಕ ಗುಣಗಳ ಮೇಲೆ ಕೆಲಸಮಾಡುತ್ತದೆ. ವ್ಯಕ್ತನಮೂನೆಯು ಜೀವಿಯ ಅನುವಂಶಿಕತೆಯ ಸಾಮಗ್ರಿ (ಜೀನ್‌ನಮೂನೆ) ಮತ್ತು ಜೀವಿಯು ಬದುಕುತ್ತಿರು ಪರಿಸರದಿಂದ ನಿರ್ಣಯಿತವಾಗುತ್ತದೆ. ಕೆಲವೊಮ್ಮೆ ನೈಸರ್ಗಿಕ ಆಯ್ಕೆಯು ಜೀವಿಯ ನಿರ್ದಿಷ್ಟ ಗುಣಗಳ ಮೇಲೆ ಕೆಲಸ ಮಾಡುತ್ತದೆ ಮತ್ತು ವ್ಯಕ್ತನಮೂನೆ ಮತ್ತು ಜೀನ್‌ನಮೂನೆಗಳ ಅರ್ಥಗಳನ್ನು ಈ ನಿರ್ದಿಷ್ಟ ಗುಣಗಳನ್ನು ಸೂಚಿಸುವಂತೆ ಕಿರಿದು ಮಾಡಿ ಬಳಸಲಾಗುತ್ತದೆ.

ಜನಸಂಖ್ಯೆಯಲ್ಲಿನ ಬೇರೆ ಬೇರೆ ಜೀವಿಗಳು ಒಂದು ಗುಣದ ಬಗೆಗಿನ ವಂಶವಾಹಿಯ ಭಿನ್ನ ಆವೃತ್ತಿಗಳು ಇದ್ದಲ್ಲಿ ಪ್ರತಿ ಆವೃತ್ತಿಯನ್ನೂ ಅಲೆಲ್ ಎಂದು ಕರೆಯಲಾಗುತ್ತದೆ. ಈ ಅನುವಂಶಿಕ ವ್ಯತ್ಯಾಸದಲ್ಲಿ ವ್ಯಕ್ತನಮೂನೆಯ ಗುಣವು ಅಡಕಗೊಂಡಿದೆ. ಮಾನವನ ನೀಲಿ ಕಣ್ಣುಗಳ ವ್ಯಕ್ತನಮೂನೆಗೆ ಕಾರಣವಾಗುವ ಕಣ್ಣಿನ ಬಣ್ಣದ ಬಗೆಗಿನ ನಿರ್ದಿಷ್ಟ ವಂಶವಾಹಿಗಳ ಜೋಡಣೆಗೆ ಉದಾಹರಣೆಯಾಗಿ ನೋಡಬಹುದು. (ಇದಕ್ಕೆ ಭಿನ್ನವಾಗಿ ಜನಸಂಖ್ಯೆಯಲ್ಲಿರುವ ಎಲ್ಲಾ ಜೀವಿಗಳು ನಿರ್ದಿಷ್ಟ ಗುಣದ ಬಗೆಗೆ ಒಂದೇ ಅಲೆಲ್‌ ಇದ್ದರೆ ಮತ್ತು ಈ ಸ್ಥಿತಿಯು ಕೆಲ ಕಾಲ ಸ್ಥಿರವಾಗಿದ್ದರೆ ಆ ಅಲೆಲ್‌ನ್ನು ಜನಸಂಖ್ಯೆಯೊಂದರಲ್ಲಿ ಸ್ಥಿರವಾದುದು ಎಂದು ಹೇಳಬಹುದು.)

ಕೆಲವು ಗುಣಗಳು ಒಂದೇ ವಂಶವಾಹಿಯಿಂದ ನಿರ್ದೇಶಿಸಲ್ಪಟ್ಟಿವೆ ಆದರೆ ಬಹುತೇಕ ಗುಣಗಳು ಹಲವು ವಂಶವಾಹಿಗಳ ನಡುವಿನ ಅಂತರಕ್ರಿಯೆಯಿಂದ (ಪರಸ್ಪರ ಕ್ರಿಯೆ) ಪ್ರಭಾವಿತವಾಗುತ್ತವೆ. ಈ ಹಲವು ವಂಶವಾಹಿಗಳಲ್ಲಿ ಒಂದರ ಬದಲಾವಣೆಯು ವ್ಯಕ್ತನಮೂನೆಯ ಮೇಲೆ ಸಣ್ಣ ಪ್ರಭಾವ ಉಂಟುಮಾಡ ಬಹುದು ಆದರೆ ಎಲ್ಲ ಜೊತೆಯಾಗಿ ಸಾಧ್ಯ ವ್ಯಕ್ತನಮೂನೆಯ ಮೌಲ್ಯಗಳ ಅಖಂಡಧಾರೆಯನ್ನು ಉತ್ಪತ್ತಿಮಾಡುತ್ತವೆ.

ಆಯ್ಕೆಯ ದಿಕ್ಕು

ಗುಣದ ಒಂದು ಭಾಗವು ಅನುವೆಂಶಿಕವಾಗಿದ್ದಲ್ಲಿ ಆಯ್ಕೆಯು ಭಿನ್ನ ಅಲೆಲ್‌ಗಳ ಸಂಭವನೀಯತೆಯನ್ನು ಬದಲಾಯಿಸುತ್ತದೆ ಅಥವಾ ಭಿನ್ನತೆ ಇರುವ ವಂಶವಾಹಿಗಳು ಭಿನ್ನತೆಗಳಿರುವ ಗುಣಗಳನ್ನು ಉತ್ಪತ್ತಿ ಮಾಡುತ್ತದೆ. ಆಯ್ಕೆಯನ್ನು ಅಲೆಲ್ ಸಂಭವನೀಯತೆಯ ಮೇಲೆ ಅದು ಮಾಡುವ ಪರಿಣಾಮದ ಆಧಾರದ ಮೇಲೆ ಮೂರು ವರ್ಗಗಳನ್ನಾಗಿ ಮಾಡಬಹುದು.

ನಿರ್ದೇಶಿತ ಆಯ್ಕೆಯು ನಿರ್ದಿಷ್ಟ ಅಲೆಲ್‌ಗೆ ಬೇರೆ ಅಲೆಲ್‌ಗಳಿಗಿಂತ ಹೆಚ್ಚಿನ ಯೋಗ್ಯತೆ ಇದ್ದಲ್ಲಿ ಪಲಿತಾಂಶವಾಗಿ ಆ ಅಲೆಲ್‌ನ ಸಂಭವನೀಯತೆ ಜನಸಂಖ್ಯೆಯಲ್ಲಿ ಹೆಚ್ಚಾಗುತ್ತದೆ. ಈ ಪ್ರಕ್ರಿಯೆ ಅಲೆಲ್ ಸ್ಥಿರವಾಗುವವರೆಗೆ ಮುಂದುವರೆಯುತ್ತದೆ. ಮತ್ತು ಪೂರ್ಣ ಜನಸಂಖ್ಯೆಯು ಯೋಗ್ಯತೆ ಹೆಚ್ಚಿರುವ ವ್ಯಕ್ತನಮೂನೆಯನ್ನು ಹೊಂದುತ್ತದೆ. ಪ್ರತಿಜೀವಕ ನಿರೋಧಕಶಕ್ತಿಯ ಉದಾಹರಣೆಯಲ್ಲಿ (ಮೇಲೆ ವಿವರಿಸಲಾದ) ನಿರ್ದೇಶಿತ ಆಯ್ಕೆಯನ್ನು ವಿವರಿಸಲಾಗಿದೆ.

ಬಹಳ ಸಾಮಾನ್ಯವಾಗಿ ಇರುವುದು ಸ್ಥಿರಕಾರಕ ಆಯ್ಕೆ (ಸಾಮಾನ್ಯವಾಗಿ ಶುದ್ಧೀಕರಣ ಆಯ್ಕೆಯೊಂದಿಗೆ ಇದು ಗೊಂದಲಕ್ಕೆ ಒಳಗಾಗುತ್ತದೆ). ಇದು ವ್ಯಕ್ತನಮೂನೆಯ ಮೇಲೆ ಹಾನಿಕಾರಕ ಪರಿಣಾಮ ಬೀರುವ, ಈ ಮೂಲಕ ಕಡಿಮೆ ಯೋಗ್ಯತೆಯಿರುವ ಜೀವಿಗಳನ್ನು ಉತ್ಪತ್ತಿ ಮಾಡುವ, ಅಲೆಲ್‌ಗಳ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಈ ಪ್ರಕ್ರಿಯೆ ಈ ಅಲೆಲ್ ಜನಸಂಖ್ಯೆಯಿಂದ ಹೊರಬೀಳುವವರೆಗೂ ನಡೆಯುತ್ತದೆ. ಶುದ್ಧೀಕರಣ ಆಯ್ಕೆಯು ಪ್ರೋಟೀನ್‌ ಸಂಕೇತಿಸುವ ವಂಶವಾಹಿಗಳು ಅಥವಾ ನಿಯಂತ್ರಕ ಸರಣಿಯಂತಹ ಕಾರ್ಯನಿರ್ವಹಣೆಯ ಅನುವಂಶಿಕ ಲಕ್ಷಣದ ಆಯ್ಕೆಗೆ ಸಂಬಂಧಿಸಿದ್ದು, ಹಾನಿಕಾರಕ ವ್ಯತ್ಯಾಸಗಳ ವಿರುದ್ಧವಾದ ಆಯ್ಕೆಯ ಒತ್ತಡದ ಕಾರಣಕ್ಕೆ ಸ್ವಲ್ಪ ಕಾಲದವರೆಗೆ ರಕ್ಷಿಸಲ್ಪಡುತ್ತದೆ.

ಹಲವು ರೀತಿಯ ಸಮತೋಲನ ಆಯ್ಕೆಗಳಿವೆ ಮತ್ತು ಇವುಗಳಲ್ಲಿ ವಂಶವಾಹಿ ಸ್ಥಿರವಾಗುವುದಿಲ್ಲ. ಅಲ್ಲದೆ ಅಲೆಲ್‌ಗಳನ್ನು ಜನಸಂಖ್ಯೆಯಲ್ಲಿ ಮಧ್ಯವರ್ತಿ ಸಂಭವನೀಯವಾಗಿ ಇರುವಂತೆ ನೋಡಿಕೊಳ್ಳುತ್ತವೆ. ಜೋಡಿ ವರ್ಣತಂತುಗಳಿರುವ (ತಂದೆ ಮತ್ತು ತಾಯಿಯಿಂದ ಬಂದ ಜೋಡಿ) ಜೀವಸಂಕುಲಗಳಲ್ಲಿ ಭಿನ್ನಯುಗ್ಮಜ ಜೀವಿಗಳು ಅಥವಾ ಪ್ರತಿ ವರ್ಣತಂತುವಿನ ಒಂದೇ ವಂಶವಾಹಿ ನೆಲೆಯಲ್ಲಿ ಭಿನ್ನ ಅಲೆಲ್‌ಗಳಿರುವ ಜೀವಿಗಳಲ್ಲಿ ಇದು ಆಗುತ್ತದೆ. ಇಲ್ಲಿ ಭಿನ್ನಯುಗ್ಮಜ ಜೀವಿಗಳು ಸಮಯುಗ್ಮಜ ಜೀವಿಗಳಿಗಿಂತೆ ಹೆಚ್ಚು ಯೋಗ್ಯವಾಗಿರುತ್ತವೆ. ಇದನ್ನು ಭಿನ್ನಯುಗ್ಮಜ ಅನುಕೂಲ ಅಥವಾ ಓವರ್-ಡಾಮಿನೆನ್ಸ್ ಎಂದು ಕರೆಯಲಾಗಿದ್ದು ಸುಪರಿಚಿತ ಉದಾಹರಣೆ ಮಾನವನ ಕುಡುಗೋಲು ಜೀವಕೋಶ ರಕ್ತಹೀನತೆ ವಂಶವಾಹಿಯ ಒಂದು ನಕಲು ಇದ್ದವರಲ್ಲಿನ ಮಲೇರಿಯಾದ ವಿರುದ್ಧ ನಿರೋಧಕಶಕ್ತಿ. ಅಲೆಲ್ ವ್ಯತ್ಯಾಸಗಳನ್ನು ರಕ್ಷಿಸುಕೊಂಡು ಹೋಗುವುದು ಭಂಗಕಾರಕ ಅಥವಾ ಬಹುರೂಪಗೊಳಿಸುವ ಆಯ್ಕೆ ಮೂಲಕ ಸಹ ಆಗುತ್ತದೆ. ಈ ಆಯ್ಕೆಯು ಸರಾಸರಿ ವ್ಯಕ್ತನಮೂನೆಯ ಎರಡೂ ದಿಕ್ಕಿನಲ್ಲಿ (ಇದು ಓವರ್‌-ಡಾಮಿನೆನ್ಸ್‌ಗೆ ವಿರೋಧಿ ರೀತಿ) ಪಕ್ಷಪಾತ ತೋರುತ್ತದ ಪರಿಣಾಮವಾಗಿ ಗುಣ ಮೌಲ್ಯದ ಎರಡು ರೀತಿಯ ಹಂಚಿಕೆಗೆ ಕಾರಣವಾಗ ಬಹುದು. ಕೊನೆಯದಾಗಿ ಸಮತೋಲನದ ಆಯ್ಕೆಯು ಸಂಭವನೀಯತೆಯ ಮೇಲೆ ಆಧಾರಿತವಾದ ಆಯ್ಕೆಯಾಗ ಬಹುದು. ಇಲ್ಲಿ ಒಂದು ನಿರ್ದಿಷ್ಟ ವ್ಯಕ್ತನಮೂನೆಯ ಯೋಗ್ಯತೆಯು ಜನಸಂಖ್ಯೆಯಲ್ಲಿನ ಇನ್ನೊಂದು ವ್ಯಕ್ತನಮೂನೆಯ ಹಂಚಿಕೆಯ ಮೇಲೆ ಆಧಾರಪಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿನ ಯೋಗ್ಯತೆಯ ಹಂಚಿಕೆಯನ್ನು ಅರ್ಥಮಾಡಿಕೊಳ್ಳಲು ಆಟದ ಸಿದ್ಧಾಂತದ ನಿಯಮಗಳನ್ನು ಅನ್ವಯಿಸಲಾಗುತ್ತಿದೆ, ವಿಶೇಷವಾಗಿ ಬಂಧುಗಳ ಆಯ್ಕೆ ಮತ್ತು ಅನ್ಯೂನ್ಯ ಪರಹಿತ ಅಧ್ಯಯನಗಳಲ್ಲಿ ಇದನ್ನು ಅನ್ವಯಿಸಲಾಗಿದೆ.

ಆಯ್ಕೆ ಮತ್ತು ಅನುವಂಶಿಕ ವ್ಯತ್ಯಾಸ

ಎಲ್ಲಾ ಅನುವಂಶಿಕ ವ್ಯತ್ಯಾಸದ ಒಂದು ಭಾಗವು ತಟಸ್ಥವಾಗಿದ್ದು ಇದು ವ್ಯಕ್ತನಮೂನೆಯ ಮೇಲೆ ಯಾವ ರೀತಿಯ ಪರಿಣಾಮವನ್ನೂ ಬೀರುವುದಿಲ್ಲ ಅಥವಾ ಯೋಗ್ಯತೆಯಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗುವುದಿಲ್ಲ. ಇಂತಹ ವ್ಯತ್ಯಾಸವು ಅವಲೋಕಿಸಿದ ಅನುವಂಶಿಕ ವ್ಯತ್ಯಾಸದ ಬಹುಭಾಗಕ್ಕೆ ಕಾರಣವಾಗುತ್ತದೆ ಎನ್ನುತ್ತದೆ ತಟಸ್ಥ ಅಣ್ವಿಕ ವಿಕಾಸ ಸಿದ್ಧಾಂತ ಎಂದು ಕರೆಯಲಾದ ಈ ಸಿದ್ಧಾಂತ. ಈ ಸಿದ್ಧಾಂತವನ್ನು ಮೊಟೂ ಕಿಮೂರ ಪ್ರತಿಪಾದಿಸಿದ. ಅನುವಂಶಿಕ ವ್ಯತ್ಯಾಸವು ಯೋಗ್ಯತೆಯ ವ್ಯತ್ಯಾಸಕ್ಕೆ ಕಾರಣವಾಗದಿದ್ದಲ್ಲಿ ಇಂತಹ ವ್ಯತ್ಯಾಸದ ಸಂಭವನೀಯತೆಯ ಮೇಲೆ ಆಯ್ಕೆಯು ನೇರವಾಗಿ ಪರಿಣಾಮ ಬೀರಲಾರದು. ಪರಿಣಾಮವಾಗಿ ಈ ಸ್ಥಳಗಳಲ್ಲಿ ಅನುವಂಶಿಕ ವ್ಯತ್ಯಾಸಗಳು ಇತರ ಅನುವಂಶಿಕ ವ್ಯತ್ಯಾಸವು ಯೋಗ್ಯತೆಯ ಮೇಲೆ ಪರಿಣಾಮ ಬೀರುವ ಸ್ಥಳಗಳಿಗಿಂತ ಹೆಚ್ಚು. ಆದರೆ ಹೊಸ ವ್ಯತ್ಯಯನಗಳು ಇಲ್ಲದ ಕಾಲದ ನಂತರ ಈ ಸ್ಥಳಗಳಲ್ಲಿನ ಅನುವಂಶಿಕ ವ್ಯತ್ಯಾಸವು ಜೆನೆಟಿಕ್‌ ಚಲನೆಯಲ್ಲಿ ಹೊರದೂಡಲ್ಪಡುತ್ತದೆ.

ವ್ಯತ್ಯಯನ-ಆಯ್ಕೆಯ ಸಮತೋಲನ

ನೈಸರ್ಗಿಕ ಆಯ್ಕೆಯು ಸರಿಹೊಂದಿಕೊಳ್ಳದ ಗುಣಗಳಿರುವ ಜೀವಿಗಳ ಹೊರದಬ್ಬುವಿಕೆ ಮತ್ತು ಪರಿಣಾಮವಾಗಿ ಆ ಸರಿಹೊಂದಿಕೊಳ್ಳದ ಗುಣಗಳಿಗೆ ಕಾರಣವಾಗುವ ವ್ಯತ್ಯಯನವೂ ಹೊರದೂಡಲ್ಪಡುವ ಮೂಲಕ ಅನುವಂಶಿಕ ವ್ಯತ್ಯಾಸವು ಕಡಿಮೆಯಾಗುವದಕ್ಕೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ ಹೊಸ ವ್ಯತ್ಯಯನಗಳು ಹುಟ್ಟುತ್ತವೆ ಪರಿಣಾಮವಾಗಿ ವ್ಯತ್ಯಯನ-ಆಯ್ಕೆಯ ಸಮತೋಲನ ಉಂಟಾಗುತ್ತದೆ. ಈ ಎರಡು ಪ್ರಕ್ರಿಯೆಗಳ ನಿಖರ ಪಲಿತಾಂಶವು ಯಾವ ದರದಲ್ಲಿ ವ್ಯತ್ಯಯನಗಳು ಉಂಟಾಗುತ್ತವೆ ಮತ್ತು -ವ್ಯತ್ಯಯನಗಳು ಎಷ್ಟರ ಮಟ್ಟಿಗೆ ಪ್ರತಿಕೂಲವಾಗಿವೆ ಎಂಬುದರ ಮೇಲೆ ಆಧಾರಪಟ್ಟಿರುವ- ನೈಸರ್ಗಿಕ ಆಯ್ಕೆಯ ಶಕ್ತಿ ಎರಡ ಮೇಲೂ ಆಧಾರ ಪಟ್ಟಿರುತ್ತದೆ. ಪರಿಣಾಮವಾಗಿ ವ್ಯತ್ಯಯನ ದರದ ಅಥವಾ ಆಯ್ಕೆಯ ಒತ್ತಡದ ಬದಲಾವಣೆಯ ಪರಿಣಾಮವಾಗಿ ಬೇರೆ ಬೇರೆ ವ್ಯತ್ಯಯನ-ಆಯ್ಕೆಯ ಸಮತೋಲನ ಉಂಟಾಗುತ್ತದೆ.

ಅನುವಂಶಿಕತೆಯ ಲಿಂಕ್

ಅನುವಂಶಿಕತೆಯ ಲಿಂಕ್ ಎರಡು ಅಲೆಲ್‌ಗಳ ನೆಲೆಗಳು ತಳಕು ಹಾಕಿಕೊಂಡಾಗ ಅಥವಾ ವರ್ಣತಂತುವಿನಲ್ಲಿ ಒಂದಕ್ಕೊಂದು ತೀರ ಹತ್ತಿರವಿದ್ದಾಗ ಆಗುತ್ತದೆ. ಯುಗ್ಮಕಗಳು ರೂಪಗೊಳ್ಳುವ ಸಮಯದಲ್ಲಿ ಅನುವಂಶಿಕ ಪದಾರ್ಥದ ಮರುಜೋಡಣೆಯಲ್ಲಿ ಅಲೆಲ್‌ಗಳು ಅದಲಿಬದಲಿಯಾಗುತ್ತವೆ. ಆದರೆ ಎರಡು ಅಲೆಲ್‌ಗಳ ಇಂತಹ ಅದಲಿಬದಲಿಯ ಸಾಧ್ಯತೆಯು ಆ ಅಲೆಲ್‌ಗಳ ನಡುವಿನ ದೂರದ ಮೇಲೆ ಆಧಾರಪಟ್ಟಿರುತ್ತದೆ. ಅಲೆಲ್‌ಗಳು ಒಂದಕ್ಕೊಂದು ಹತ್ತಿರವಿದಷ್ಟೂ ಅವುಗಳು ಅದಲಿಬದಲಿಯಾಗುವ ಸಾಧ್ಯತೆ ಕಡಿಮೆ. ಪರಿಣಾಮವಾಗಿ ಆಯ್ಕೆಯು ಒಂದು ಅಲೆಲ್‌ನ್ನು ಗುರಿಯಾಗಿಸಿ ಕೊಂಡರೆ ಅದು ತನಗೆತಾನೆ ಇನ್ನೊಂದು ಅಲೆಲ್‌ನ್ನೂ ಸಹ ಆಯ್ದುಕೊಳ್ಳುವುದರಲ್ಲಿ ಕೊನೆಗೊಳ್ಳುತ್ತದೆ. ಈ ಮೆಕಾನಿಸಂ ಮೂಲಕ ಆಗುವ ಆಯ್ಕೆಯು ಜಿನೋಮ್‌ನ ವ್ಯತ್ಯಾಸದ ಮಾದರಿಯನ್ನು ಬಲವಾಗಿ ಪ್ರಭಾವಿಸುತ್ತದೆ.

ಆಯ್ಕೆಯ ಕೊಚ್ಚಿಹಾಕುವಿಕೆಯು ಒಂದು ಅಲೆಲ್ ಜನಸಂಖ್ಯೆಯಲ್ಲಿ ಧನಾತ್ಮಕ ಆಯ್ಕೆಯ ಪರಿಣಾಮವಾಗಿ ಹೆಚ್ಚು ಸಾಮಾನ್ಯವಾಗುವದು. ಒಂದು ಅಲೆಲ್‌ನ ಇರುವಿಕೆ ಹೆಚ್ಚಾದರೆ ಲಿಂಕ್ ಆದ ಅಲೆಲ್‌ಗಳೂ ಅವು ತಟಸ್ಥವಾಗಿ ಅಥವಾ ಸ್ವಲ್ಪಮಟ್ಟಿಗೆ ಮಾರಕವಾಗಿದ್ದಾಗ್ಯೂ ಸಹ ಹೆಚ್ಚು ಸಾಮಾನ್ಯವಾಗುತ್ತವೆ. ಇದನ್ನು ಅನುವಂಶಿಕತೆಯ ಬಿಟ್ಟಿಪ್ರಯಾಣ (ಜೆನೆಟಿಕ್ ಹಿಚ್‌ಹೈಕಿಂಗ್) ಎಂದು ಕರೆಯಲಾಗಿದೆ. ಶಕ್ತಿಯುತವಾದ ಕೊಚ್ಚಿಹಾಕುವಿಕೆಯಲ್ಲಿ ಸಾರಭೂತವಾಗಿ ಜನಸಂಖ್ಯೆಯಲ್ಲಿ ಆಸ್ತಿತ್ವದಲ್ಲಿ ಇರುವುದು ಧನಾತ್ಮಕವಾಗಿ ಆಯ್ಕೆಯಾದ ಹ್ಯಾಪ್ಲೊಟೈಪ್‌ನ (ಅಲೆಲ್ ಮತ್ತು ಅದರ ಪಕ್ಕದವು) ಜಿನೋಮ್‌ ಪ್ರದೇಶವಷ್ಟೇ.

ಆಯ್ಕೆಯ ಕೊಚ್ಚಿಹೋಗಿವಿಕೆ ನಡೆದಿದೆಯೋ ಇಲ್ಲವೋ ಎಂದು ಲಿಂಕೇಜ್ ಅಸಮತೋಲನ ಅಥವಾ ನಿರ್ದಿಷ್ಟ ಹ್ಯಾಪ್ಲೊಟೈಪ್‌ನ್ನು ಜನಸಂಖ್ಯೆಯಲ್ಲಿ ಹೆಚ್ಚಾಗಿ ಪ್ರತಿನಿಧಿಸಲ್ಪಟ್ಟಿದೆಯೆ ಎಂಬುದನ್ನು ಅಳೆಯುವ ಮೂಲಕ ತಪಾಸಣೆ ಮಾಡಬಹುದು. ಸಾಮಾನ್ಯವಾಗಿ ಅನುವಂಶಿಕತೆಯ ಮರುಜೋಡಣೆಯು ಹ್ಯಾಪ್ಲೊಟೈಪ್‌ ಒಳಗಿನ ಭಿನ್ನ ಅಲೆಲ್‌ಗಳನ್ನು ಅದಲುಬದಲು ಮಾಡುತ್ತದೆ ಮತ್ತು ಜನಸಂಖ್ಯೆಯಲ್ಲಿ ಯಾವುದೇ ಹ್ಯಾಪ್ಲೊಟೈಪ್‌ಗಳೂ ಪ್ರಭಾವಿಯುತವಾಗಿರುವುದಿಲ್ಲ. ಆದರೆ ಆಯ್ಕೆಯ ಕೊಚ್ಚಿಹೊಗುವಿಕೆಯ ಸಮಯದಲ್ಲಿ ನಿರ್ದಿಷ್ಟ ಅಲೆಲ್‌ನ ಆಯ್ಕೆಯು ಅದರ ಪಕ್ಕದ ಅಲೆಲ್‌ಗಳ ಆಯ್ಕೆಯೂ ಆಗಿರುತ್ತದೆ. ಆದ್ದರಿಂದ ಲಿಂಕೇಜ್ ಅಸಮತೋಲನ ಇರುವ ತುಂಡಿನ ಇರುವಿಕೆಯು “ಇತ್ತೀಚಿಗೆ” ತುಂಡಿನ ಕೇಂದ್ರದಲ್ಲಿ ಆಯ್ಕೆಯ ಕೊಚ್ಚಿಹೋಗುವಿಕೆ ಆಗಿದೆಯೆಂದು ಸೂಚಿಸುತ್ತದೆ. ಇದನ್ನು ಇತ್ತೀಚೆಗೆ ಆಯ್ಕೆಯಾದ ಸ್ಥಳಗಳ ಗುರುತಿಸಿವಿಕೆಗೆ ಬಳಸಬಹುದು.

ಹಿನ್ನೆಲೆಯ ಆಯ್ಕೆಯು ಕೊಚ್ಚಿಹೋಗುವ ಆಯ್ಕೆಗೆ ವಿರುದ್ಧವಾದುದು. ನಿರ್ದಿಷ್ಟ ಭಾಗವು ಬಲವಾದ ಮತ್ತು ಸತತವಾದ ಶುದ್ಧೀಕರಣ ಆಯ್ಕೆ ಅನುಭವಿಸುತ್ತಿದ್ದಲ್ಲಿ ಲಿಂಕ್‌ ಆದ ವ್ಯತ್ಯಾಸಗಳು ಅದರೊಂದಿಗೆ ಹೊರಹೋಗುವ ಮೂಲಕ ಒಟ್ಟಾರೆ ಕಡಿಮೆ ವ್ಯತ್ಯಾಸವಿರುವ ಜಿನೋಮ್‌ಗೆ ಕಾರಣವಾಗುತ್ತದೆ. ಹಿನ್ನೆಲೆಯ ಆಯ್ಕೆಯು ಹಾನಿಕಾರಕ ಹೊಸ ವ್ಯತ್ಯಯನಗಳು ರೂಪಗೊಂಡ ಕಾರಣದಿಂದ ಆಗುವುದರಿಂದ ಅದು ಬೇಕಾಬಿಟ್ಟಿಯಾಗಿ ಯಾವ ಹ್ಯಾಪ್ಲೊಟೈಪ್‌ನಲ್ಲಿಯೂ ಆಗಬಹುದು ಮತ್ತು ಅದು ಸ್ಪಷ್ಟ ಲಿಂಕೇಜ್ ಅಸಮತೋಲನದ ತುಂಡನ್ನು ಉತ್ಪತ್ತಿ ಮಾಡುವುದಿಲ್ಲ. ಆದರೆ ಕೆಳಮಟ್ಟದ ಮರುಜೋಡಣೆಯು ಒಟ್ಟಾರೆಯಾಗಿ ಸ್ಪಲ್ಪಮಟ್ಟಿಗೆ ಧನಾತ್ಮಕ ಲಿಂಕೇಜ್ ಅಸಮತೋಲನಕ್ಕೆ ಕಾರಣವಾಗ ಬಹುದು.

ಸ್ಪರ್ಧೆ

ನೈಸರ್ಗಿಕ ಆಯ್ಕೆಯ ಸಂದರ್ಭದಲ್ಲಿ ಸ್ಪರ್ಧೆಯು ಜೀವಿಗಳ ನಡುವಿನ ಅಥವಾ ಜೀವಸಂಕುಲಗಳ ನಡುವಿನ ಅಂತರ್‌ಕ್ರಿಯೆ ಮತ್ತು ಇದರಲ್ಲಿ ಒಂದರ ಇರುವಿಕೆ ಇನ್ನೊಂದರ ಯೋಗ್ಯತೆಯನ್ನು ಕಡಿಮೆ ಮಾಡುತ್ತದೆ. ಎರಡೂ ಬಳಸುವ ಕನಿಷ್ಠ ಒಂದು ಸಂಪನ್ಮೂಲದ (ಆಹಾರ, ನೀರು, ವಾಸಿಸುವ ಪ್ರದೇಶಗಳಂಹವು) ಲಭ್ಯತೆಗೆ ಮಿತಿ ಇರಬೇಕು. ಜೀವಸಂಕುಲದ ಒಳಗೆ ಮತ್ತು ಜೀವಸಂಕುಲಗಳ ನಡುವಿನ ಸ್ಪರ್ಧೆಯು ಪರಿಸರಶಾಸ್ತ್ರದ, ಅದರಲ್ಲೂ ವಿಶೇಷವಾಗಿ ಸಮುದಾಯ ಪರಿಸರಶಾಸ್ತ್ರದ, ಪ್ರಮುಖ ವಿಷಯವಾಗಿದೆ. ಸ್ಪರ್ಧೆಯು ಸಮುದಾಯದ ರಚನೆಯನ್ನು ಪ್ರಭಾವಿಸುವ ಅಂತರಕ್ರಿಯೆ ನಡೆಸುವ ಜೈವಿಕ ಮತ್ತು ಅಜೈವಿಕ ಅಂಶಗಳಲ್ಲಿ ಒಂದು. ಸ್ಪರ್ಧೆಯು ಒಂದೇ ಜೀವಸಂಕುಲದ ಜೀವಿಗಳ ನಡುವೆ ಇದ್ದರೆ ಅದನ್ನು ಅಂತ-ನಿರ್ದಿಷ್ಟ ಸ್ಪರ್ದೆ ಎಂದು ಕರೆಯಲಾಗಿದೆ ಮತ್ತು ಸ್ಪರ್ಧೆಯು ಭಿನ್ನ ಜೀವಸಂಕುಲದ ಜೀವಿಗಳ ನಡುವೆ ಇದ್ದರೆ ಅದನ್ನು ಅಂತರ-ನಿರ್ದಿಷ್ಟ ಸ್ಪರ್ದೆ ಎಂದು ಕರೆಯಲಾಗಿದೆ. ಸ್ಪರ್ಧೆಯು ಯಾವಾಗಲೂ ಮುಚ್ಚುಮರೆಯಿಲ್ಲದೇ ಆಗಿರುವುದಿಲ್ಲ ಮತ್ತು ಅದು ನೇರವಾಗಿ ಮತ್ತು ಪರೋಕ್ಷವಾಗಿ ಎರಡೂ ರೀತಿಯಲ್ಲಿ ಇರಬಹುದು.

ಸ್ಪರ್ದೆಯ ಹೊರದೂಡುವಿಕೆ ನಿಯಮದ ಪ್ರಕಾರ ಸಂಪನ್ಮೂಲಗಳಿಗಾಗಿ ಸ್ಪರ್ಧೆಗೆ ಕಡಿಮೆ ತಕ್ಕುದಾದಲ್ಲಿ ಅದು ಹೊಂದಿಕೊಳ್ಳ ಬೇಕು ಅಥವಾ ಸಾಯಬೇಕು. ಆದರೆ ಸ್ಪರ್ಧೆಯ ಹೊರದೂಡುವಿಕೆ ಪ್ರಕೃತಿಯ ಪರಿಸರ ವ್ಯವಸ್ಥೆಯಲ್ಲಿ ತೀರಾ ವಿರಳವಾಗಿ ಕಂಡುಬರುತ್ತದೆ. ವಿಕಾಸ ಸಿದ್ಧಾಂತದ ಪ್ರಕಾರ ಈ ಒಂದೇ ಜೀವಸಂಕುಲದ ಜೀವಿಗಳ ನಡುವಿನ ಮತ್ತು ಭಿನ್ನ ಜೀವಸಂಕುಲದ ಜೀವಿಗಳ ನಡುವಿನ ಸಂಪನ್ಮೂಲಗಳಿಗಾಗಿ ಸ್ಪರ್ಧೆಯು ನೈಸರ್ಗಿಕ ಆಯ್ಕೆಯಲ್ಲಿ ಪ್ರಮುಖ ಹಾಗೂ ಪ್ರಸ್ತುತವಾದ ಪಾತ್ರ ನಿರ್ವಹಿಸುತ್ತದೆ. ಆದರೆ ಸ್ಪರ್ಧೆಯು ಒಂದೇ ಮೂಲದ ಜೀವಿಗಳ ವಿಸ್ತರಣೆಗಿಂತ ಕಡಿಮೆ ಪಾತ್ರ ವಹಿಸುತ್ತಿರ ಬಹುದು ಮತ್ತು ಇದನ್ನು ‘ಸುತ್ತಾಡಲು ಅವಕಾಶ’ ಊಹನ (‘ರೂಮ್ ಟು ರೋಮ್’ ಹೈಪೋಥೀಸಸ್ ) ಎಂದು ಕರೆಯಲಾಗಿದೆ.

ಟಿಪ್ಪಣಿಗಳು

ಉಲ್ಲೇಖಗಳು

ಗ್ರಂಥಸೂಚಿ

This article uses material from the Wikipedia ಕನ್ನಡ article ನೈಸರ್ಗಿಕ ಆಯ್ಕೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ನೈಸರ್ಗಿಕ ಆಯ್ಕೆ ಸಾಮಾನ್ಯ ನಿಯಮಗಳುನೈಸರ್ಗಿಕ ಆಯ್ಕೆ ಯ ಮೂಲಕ ವಿಕಾಸನೈಸರ್ಗಿಕ ಆಯ್ಕೆ ಐತಿಹಾಸಿಕ ಬೆಳವಣಿಗೆನೈಸರ್ಗಿಕ ಆಯ್ಕೆ ಯ ಅನುವಂಶಿಕತೆಯ ಆಧಾರನೈಸರ್ಗಿಕ ಆಯ್ಕೆ ಟಿಪ್ಪಣಿಗಳುನೈಸರ್ಗಿಕ ಆಯ್ಕೆ ಉಲ್ಲೇಖಗಳುನೈಸರ್ಗಿಕ ಆಯ್ಕೆಚಾರ್ಲ್ಸ್ ಡಾರ್ವಿನ್

🔥 Trending searches on Wiki ಕನ್ನಡ:

ಕರ್ನಾಟಕದ ಅಣೆಕಟ್ಟುಗಳುರೇಣುಕರಾಮಾಯಣಅಯೋಧ್ಯೆಸ್ಟಾರ್‌ಬಕ್ಸ್‌‌ರಾಷ್ಟ್ರೀಯ ಸೇವಾ ಯೋಜನೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಪಂಜೆ ಮಂಗೇಶರಾಯ್ಬಾಬು ಜಗಜೀವನ ರಾಮ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹುಲಿಅಂಚೆ ವ್ಯವಸ್ಥೆಹಾಗಲಕಾಯಿಮತದಾನ ಯಂತ್ರಭಾರತದ ಸ್ವಾತಂತ್ರ್ಯ ದಿನಾಚರಣೆಮಾಸಅಲಂಕಾರಸಲಿಂಗ ಕಾಮಕೈವಾರ ತಾತಯ್ಯ ಯೋಗಿನಾರೇಯಣರುರಾಧೆಪಿತ್ತಕೋಶಸಿದ್ದರಾಮಯ್ಯವಲ್ಲಭ್‌ಭಾಯಿ ಪಟೇಲ್ಉದಯವಾಣಿಕರ್ನಾಟಕದ ಶಾಸನಗಳುಜಲ ಮಾಲಿನ್ಯಮಳೆಮಣ್ಣುಕೊಪ್ಪಳಸೂಫಿಪಂಥಭಾರತದಲ್ಲಿನ ಜಾತಿ ಪದ್ದತಿಕೃಷ್ಣರಾಜಸಾಗರಇಮ್ಮಡಿ ಪುಲಕೇಶಿತ್ಯಾಜ್ಯ ನಿರ್ವಹಣೆಕನ್ನಡ ಅಭಿವೃದ್ಧಿ ಪ್ರಾಧಿಕಾರಈಸೂರುಚಪ್ಪಾಳೆಜೀವನಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರಾಮಾಚಾರಿ (ಕನ್ನಡ ಧಾರಾವಾಹಿ)ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುವೆಂಕಟೇಶ್ವರ ದೇವಸ್ಥಾನಕಾಲಾಯ ತಸ್ಮೈ ನಮಃ (ಚಲನಚಿತ್ರ)ಸುಗ್ಗಿ ಕುಣಿತಮಾಧ್ಯಮಆವಕಾಡೊಸುದೀಪ್ತೆಲುಗುನಾಗರೀಕತೆವ್ಯಾಪಾರ ಸಂಸ್ಥೆಕೆ. ಎಸ್. ನರಸಿಂಹಸ್ವಾಮಿಅಡಿಕೆಹಕ್ಕ-ಬುಕ್ಕಕನ್ನಡದಲ್ಲಿ ವಚನ ಸಾಹಿತ್ಯಪ್ರಿನ್ಸ್ (ಚಲನಚಿತ್ರ)ಗಿರೀಶ್ ಕಾರ್ನಾಡ್ಕೃಷ್ಣಾ ನದಿಹೆಚ್.ಡಿ.ದೇವೇಗೌಡಬೆಂಗಳೂರು ಗ್ರಾಮಾಂತರ ಜಿಲ್ಲೆಸಜ್ಜೆಕನ್ನಡದಲ್ಲಿ ಸಣ್ಣ ಕಥೆಗಳುಭಾಷೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಜಾಗತಿಕ ತಾಪಮಾನ ಏರಿಕೆವಿರೂಪಾಕ್ಷ ದೇವಾಲಯಪಂಜುರ್ಲಿಚಿಲ್ಲರೆ ವ್ಯಾಪಾರಜರಾಸಂಧಭಾರತ ಸಂವಿಧಾನದ ಪೀಠಿಕೆಕಳಸಮಾರ್ಕ್ಸ್‌ವಾದಇಂದಿರಾ ಗಾಂಧಿಚುನಾವಣೆದಕ್ಷಿಣ ಕನ್ನಡದ್ರೌಪದಿ ಮುರ್ಮುಕನ್ನಡ ಕಾಗುಣಿತಭಾರತದಲ್ಲಿನ ಚುನಾವಣೆಗಳುಇತಿಹಾಸಬಂಡಾಯ ಸಾಹಿತ್ಯ🡆 More