ಚಂದೇಲರು

ಚಂದೇಲರು ಕ್ರಿ.ಶ.

9ನೆಯ ಶತಮಾನದಲ್ಲಿ ಪ್ರತೀಹಾರ ಚಕ್ರಾಧಿಪತ್ಯದ ಪತನದ ಅನಂತರ ಉತ್ತರ ಭಾರತದ ಮಧ್ಯಭಾಗದಲ್ಲಿ ಪ್ರಸಿದ್ಧಿ ಪಡೆದ ಒಂದು ರಾಜಮನೆತನದವರು. ಇವರು ಬುಂದೇಲಖಂಡದವರು. ತಾವು ಚಂದ್ರವಂಶಕ್ಕೆ ಸೇರಿದ ಋಷಿ ಚಂದ್ರಾತ್ರೇಯನಿಂದ ಜನಿಸಿದವರೆಂದು ಚಂದೇಲರು ಹೇಳಿಕೊಂಡಿದ್ದಾರೆ. 36 ಪ್ರಸಿದ್ಧ ರಾಜಪುತ್ರ ವಂಶಗಳಲ್ಲಿ ಚಂದೇಲರದೂ ಒಂದು ಎಂದು ಅವರ ಆಸ್ಥಾನ ಕವಿಗಳು ಹೇಳಿದ್ದಾರೆ. ಅವರ ಅತಿಪ್ರಾಚೀನವೆನಿಸಿದ, 954ರ ಶಾಸನದಲ್ಲಿ ಈ ಅರಸರು ಚಂದ್ರಾತ್ರೇಯ ವಂಶದವರೆಂದು ಹೇಳಿದೆ. 1098ರ ಕೀರ್ತಿವರ್ಮನ ದೇವಗಢದ ಶಾಸನದಲ್ಲಿ ಚಂದೆಲ್ಲ ಎಂಬ ಹೆಸರೂ ಕಾಣಸಿಗುತ್ತದೆ. ಚಂದೇಲರು ಆಳುತ್ತಿದ್ದ ಪ್ರದೇಶವನ್ನು ಜೇಜಭುಕ್ತಿ, ಜೇಜಕಭುಕ್ತಿ, ಜೇಜಕಭುಕ್ತಿ ಮಂಡಲ ಎಂದು ಶಾಸನಗಳಲ್ಲಿ ಹೆಸರಿಸಿದೆ. ಇದು ಅನಂತರ ಬುಂದೇಲಖಂಡವೆನಿಸಿಕೊಂಡಿತು. 10ನೆಯ ಶತಮಾನದಿಂದ 13ನೆಯ ಶತಮಾನದವರೆಗೆ ಇವರ ಈ ರಾಜ್ಯ ಖಜುರಾಹೊ, ಕೌಲಂಜರ, ಮಹೊಬಾ ಹಾಗೂ ಅಜಯಾಗಢಗಳನ್ನೊಳಗೊಂಡಿತ್ತು.

ರಾಜ್ಯದ ಸ್ಥಾಪನೆ

ಕ್ರಿ.ಶ 9ನೆಯ ಶತಮಾನದ ಆದಿಭಾಗದಲ್ಲಿ ನನ್ನುಕ ಚಂದೇಲನೆಂಬವನು ಖಜುರಾಹೊ ಎಂಬಲ್ಲಿ ಚಂದೇಲರಾಜ್ಯದ ಸ್ಥಾಪನೆ ಮಾಡಿದ. ಬಹುಶಃ ಚಂದ್ರವರ್ಮನೆಂಬ ಬಿರುದನ್ನು ಹೊಂದಿದ್ದ ಈತ ಪ್ರತೀಹಾರ ನಾಗಭಟನ ಸಾಮಂತನಾಗಿ ಆಳಿದ. ಈತನ ಅನಂತರ ಅಧಿಕಾರಕ್ಕೆ ಬಂದ ವಾಕ್ಪತಿ, ಆತನ ಇಬ್ಬರು ಮಕ್ಕಳಾದ ಜಯಶಕ್ತಿ ಮತ್ತು ವಿಜಯಶಕ್ತಿ, ವಿಜಯಶಕ್ತಿಯ ಮಗ ರಾಹಿಲ-ಇವರು ಪ್ರತೀಹಾರರಿಗೆ ಸಾಮಂತರಾಗಿ ಆಳುತ್ತಿದ್ದರು.

ಹರ್ಷ

ರಾಹಿಲನ ಮಗ ಹರ್ಷನ (900-925) ಕಾಲದಲ್ಲಿ ಚಂದೇಲ ರಾಜ್ಯಶಕ್ತಿ ಬೆಳೆಯಿತು. ರಾಷ್ಟ್ರಕೂಟರ 3ನೆಯ ಇಂದ್ರನಿಂದ ಪದಚ್ಯುತಗೊಳಿಸಲ್ಪಟ್ಟ ಪ್ರತೀಹಾರ ಮಹೀಪಾಲ ತನ್ನ ಸಿಂಹಾಸನವನ್ನು ಮರಳಿ ಪಡೆಯಲು ಹರ್ಷ ಸಹಾಯ ಮಾಡಿದ.

ಯಶೋವರ್ಮ

ಹರ್ಷನ ಮಗನಾದ ಯಶೋವರ್ಮನ ಕಾಲದಲ್ಲಿ ಪ್ರತೀಹಾರರು ತಮ್ಮೆಲ್ಲ ಶಕ್ತಿಯನ್ನೂ ಕಳೆದುಕೊಂಡು ಹೆಸರಿಗೆ ಮಾತ್ರ ಅರಸರಾಗಿ ಉಳಿದಿದ್ದರು. ಎಂತಲೇ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನಿಂದ ಇನ್ನೊಮ್ಮೆ ಪ್ರತೀಹಾರ ರಾಜ್ಯವನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಯಶೋವರ್ಮ ಕಾಲಂಜರ ಮುಂತಾದ ಕೋಟೆಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡ. ಇದಲ್ಲದೆ ಈತ ಕಳಚುರಿ ವಂಶದ ಯುವರಾಜದೇವನನ್ನು, ಪರಮಾರ ಮನೆತನದ ಸೀಯಕನನ್ನು ಮತ್ತು ಬಂಗಾಲದ ಪಾಲಮನೆತನದ ವಿಗ್ರಹಪಾಲನನ್ನು ಸೋಲಿಸಿ ಕೀರ್ತಿಗಳಿಸಿದ. ಯಶೋವರ್ಮ ದಕ್ಷ ಸೇನಾಪತಿಯಾಗಿದ್ದಂತೆ ದೈವಭಕ್ತನೂ ಆಗಿದ್ದ. ಇವನ ಕಾಲದಲ್ಲಿ ಕಟ್ಟಲು ಆರಂಭಿಸಲಾದ ಖಜುರಾಹೋದ ಚತುರ್ಭುಜ ದೇವಾಲಯ ಧಂಗನ ಆಳ್ವಿಕೆಯ ಕಾಲದಲ್ಲಿ ಪುರ್ಣಗೊಂಡಿತು.

ಧಂಗ

ಯಶೋವರ್ಮನ ಮಗನಾದ ಧಂಗ (950-1008) ಚಂದೇಲರ ಪ್ರಸಿದ್ಧ ಅರಸರಲ್ಲಿ ಒಬ್ಬನೆಂದು ಎಣಿಸಲ್ಪಟ್ಟಿದ್ದಾನೆ. ಪ್ರತೀಹಾರ ಅರಸರೊಡನೆ ಎಲ್ಲ ಸಂಬಂಧಗಳನ್ನೂ ಕಡಿದುಕೊಂಡು ಸ್ವತಂತ್ರನಾಗಿ ಆಳಿದ ಈತ ಕಾಲಂಜರ ಕೋಟೆಯನ್ನಲ್ಲದೆ, ಗೋಪಗಿರಿ (ಗ್ವಾಲಿಯರ್), ಕೌಶಿಕ (ವಾರಾಣಸಿ) ಹಾಗೂ ಪ್ರಯಾಗಗಳನ್ನು ತನ್ನ ಅಧೀನಕ್ಕೆ ತಂದುಕೊಂಡಿದ್ದ. ಇದರಿಂದ ಉತ್ತರಭಾರತದಲ್ಲಿ ಪ್ರತೀಹಾರರು ಪಡೆದಿದ್ದ ಸಾರ್ವಭೌಮತ್ವ ಈಗ ಚಂದೇಲರದಾಯಿತು. ಅಂಗ (ಉತ್ತರಬಂಗಾಳ), ರಾಧ (ಬಂಗಾಲದ ಬದಾರ್ವ್ನ್ ಹಾಗೂ ಬೀರ್ಭುಮ್ ಜಿಲ್ಲೆಗಳು), ಕೋಸಲ, ಆಂಧ್ರ, ಕುಂತಲ ಮತ್ತು ಸಿಂಹಲ ದೇಶಾಧೀಶ್ವರರೊಡನೆ ಇವನು ಹೋರಾಡಿದನೆಂದು ಖಜುರಾಹೊ ಶಾಸನವೊಂದು ತಿಳಿಸುತ್ತದೆಯಾದರೂ ಇದರಲ್ಲಿ ಸ್ವಲ್ಪಮಟ್ಟಿನ ಉತ್ಪ್ರೇಕ್ಷೆ ಇದೆ. ಅದರಲ್ಲಿಯೂ ಆಂಧ್ರ, ಸಿಂಹಲ ಹಾಗೂ ಕುಂತಲ ದೇಶದ ಅರಸರೊಡನೆ ಈತ ಕದನಹೂಡಿದನೆಂಬ ಹೇಳಿಕೆ ಸಂದೇಹಾಸ್ಪದವಾಗಿದೆ. ಭಟಿಂಡದ ಷಾಹಿ ಅರಸರಾದ ಜಯಪಾಲ ಹಾಗೂ ಆನಂದಪಾಲರು ಕ್ರಮವಾಗಿ ಸುಲ್ತಾನ ಸಬಕ್ತಗೀನ ಮತ್ತು ಸುಲ್ತಾನ ಮಹಮ್ಮದನನ್ನು ಯುದ್ಧರಂಗದಲ್ಲಿ ಎದುರಿಸಬೇಕಾಗಿ ಬಂದ ಸಂದರ್ಭದಲ್ಲಿ ಧಂಗ ಸಹ ಅವರಿಬ್ಬರಿಗೆ ನೆರವಾಗಿ ನಿಂತಂತೆ ತೋರುತ್ತದೆ. ಆದರೆ 989 ಹಾಗೂ 1008 ರಲ್ಲಿ ನಡೆದ ಈ ಎರಡೂ ಕದನಗಳು ಫಲಪ್ರದವಾಗಲಿಲ್ಲ. ಧಂಗ ತನ್ನ ರಾಜ್ಯದಲ್ಲಿ ನೂರಾರು ದೇವಾಲಯಗಳನ್ನು ಕಟ್ಟಿಸಿದ. ನ್ಯಾಯಶಾಸ್ತ್ರ ಪ್ರವೀಣನಾದ ಪ್ರಭಾಸ ಇವನ ಮುಖ್ಯಮಂತ್ರಿಯಾಗಿದ್ದ. ಸುಮಾರು 60 ವರ್ಷಗಳ ಕಾಲ ಆಳಿದ, 100 ವರ್ಷಗಳ ಕಾಲ ಬದುಕಿದ ಈತ ಪ್ರಯಾಗದಲ್ಲಿ ಜಲಸಮಾಧಿ ಹೊಂದಿದನೆಂದು ಅನಂತರದ ಶಾಸನವೊಂದು ತಿಳಿಸುತ್ತದೆ.

ವಿದ್ಯಾಧರ

ಇವನ ಅನಂತರ ಇವನ ಮಗ ಮತ್ತು ಮೊಮ್ಮಗ ವಿದ್ಯಾಧರರು ಕ್ರಮವಾಗಿ 9 ಹಾಗೂ 12 ವರ್ಷಗಳ ಕಾಲ ಆಳಿದರು. ವಿದ್ಯಾಧರನ ಆಳ್ವಿಕೆಯಲ್ಲಿ ಭಾರತದ ಮೇಲೆ ಘಜ್ನಿ ಮಹಮ್ಮದನ ದಂಡಯಾತ್ರೆಗಳು ನಡೆದುವು. ಪ್ರತೀಹಾರ ಮನೆತನದ ರಾಜ್ಯಪಾಲ ಮಹಮೂದನೊಡನೆ ಯುದ್ಧ ಮಾಡದೆ ಶರಣಾಗತನಾದನೆಂಬ ಕಾರಣದಿಂದ ಅವನನ್ನು ಕೊಂದು ಅವನ ಮಗ ತ್ರಿಲೋಚನಪಾಲನನ್ನು ಪಟ್ಟಕ್ಕೇರಿಸಿದ. ಕನೌಜಿನ ಷಾಹಿ ಅರಸನಾದ ಆನಂದಪಾಲನ ಮಗ ತ್ರಿಲೋಚನಪಾಲನನ್ನು ಅವನ ಪುರ್ವಜರ ರಾಜ್ಯದಲ್ಲಿ ನೆಲೆಗೊಳಿಸಲು ಸಹಾಯ ಮಾಡುವುದಾಗಿ ಒಪ್ಪಿದ. ಇವುಗಳಿಂದ ಕ್ರುದ್ಧನಾದ ಘಜ್ನಿ ಮಹಮೂದ ಕಾಲಿಂಜರದ ಮೇಲೆ 1019 ಮತ್ತು 1022 ರಲ್ಲಿ ಏರಿ ಬಂದಾಗ ಅವನೊಡನೆ ಯುದ್ಧ ಮಾಡುವುದು ವಿನಾಶಕರವೆಂದು ತಿಳಿದ ವಿದ್ಯಾಧರ ಮುಹಮೂದನಿಗೆ ಹಣ ಕೊಟ್ಟು ಸಂಧಿ ಮಾಡಿಕೊಂಡ. ಕಚ್ಫಪಘಾತ ಮನೆತನದ ಅರ್ಜುನ, ವಿದ್ಯಾಧರನ ಸಾಮಂತನಾಗಿ, ಪ್ರತೀಹಾರ ರಾಜ್ಯಪಾಲನನ್ನು ಕೊಲ್ಲುವುದರಲ್ಲಿ ಆತನಿಗೆ ಸಹಾಯ ಮಾಡಿದ. ಪರಮಾರ ಭೋಜ ಮತ್ತು ಕಳಚುರಿಯ ಗಾಂಗೇಯ ದೇವ, ಇವರು ಸಹ ವಿದ್ಯಾಧರನ ಸಾರ್ವಭೌಮತ್ವವನ್ನು ಒಪ್ಪಿಕೊಂಡಂತೆ ತೋರುತ್ತದೆ.

ನಂತರದ ಅರಸರು

ವಿದ್ಯಾಧರನ ಮಗ ವಿಜಯಪಾಲ 1030ರಿಂದ ಸುಮಾರು 20 ವರ್ಷಗಳ ಕಾಲ ಆಳಿದ. ಅನಂತರ ಆತನ ಮಗ ದೇವವರ್ಮ 1060ರ ವರೆಗೂ ಆ ಬಳಿಕ ಆತನ ಸೋದರ ಕೀರ್ತಿವರ್ಮ 1100ರ ವರೆಗೂ ಕ್ರಮವಾಗಿ ಆಳಿದರು. ಇವರ ಕಾಲದಲ್ಲಿ ಚಂದೇಲರ ಪ್ರಾಬಲ್ಯ ಕ್ಷೀಣಿಸಿತು. ವಿಜಯಪಾಲ ಆಳುವಾಗ ಕಳಚುರಿ ಗಾಂಗೇಯ ಚಂದೇಲರ ಸಾರ್ವಭೌಮತ್ವನವನ್ನು ಕಿತ್ತೊಗೆದು ಅವರಿಂದ ಪ್ರಯಾಗವನ್ನು ಕಸಿದುಕೊಂಡ. ಕಚ್ಚಪಘಾತರೂ ಸ್ವತಂತ್ರರಾದರು. ವಿಜಯಪಾಲನ ಅನಂತರ ದೇವವರ್ಮ ಹಾಗೂ ಕೀರ್ತಿವರ್ಮರ ನಡುವೆ ಸಿಂಹಾಸನಕ್ಕಾಗಿ ಕಲಹಗಳುಂಟಾದುವು. ದೇವವರ್ಮನನ್ನು ಕಳಚುರಿ ಲಕ್ಷ್ಮೀಕರ್ಣ ಸೋಲಿಸಿದ. ಅನಂತರ ಆಳತೊಡಗಿದ ಕೀರ್ತಿವರ್ಮ ತನ್ನ ಸಾಮಂತನಾದ ಗೋಪಾಲನ ಸಹಾಯದಿಂದ ಕರ್ಣನನ್ನು ಸೋಲಿಸಿ ರಾಜ್ಯವನ್ನು ಉಳಿಸಿಕೊಂಡ. ಚಂದೇಲ ಅರಸರೊಡನೆ ಪರಮಾರ ಚೌಳುಕ್ಯ, ಪಾಲ ಮತ್ತು ಚಾಳುಕ್ಯ ಅರಸರೂ ಕೂಡಿ ಕರ್ಣನ ಶೌರ್ಯವನ್ನು ಮುರಿದಂತೆ ತೋರುತ್ತದೆ. ಇದರಿಂದ ಚಂದೇಲರು ಪುನಃ ಚೇತರಿಸಿಕೊಂಡರು. ಪ್ರಬೋಧಚಂದ್ರೋದಯವೆಂಬ ಕಾವ್ಯ ಬರೆಯಲ್ಪಟ್ಟದ್ದು ಈತನ ಕಾಲದಲ್ಲೇ. ಈತನ ಮಗ ಸಲ್ಲಕ್ಷಣವರ್ಮ 5 ವರ್ಷಗಳ ಆಳ್ವಿಕೆಯ ಬಳಿಕ ಸಿಂಹಾಸನವನ್ನು ತನ್ನ ಚಿಕ್ಕಪ್ಪನಿಗೆ ಬಿಟ್ಟುಕೊಟ್ಟ. ಪೃಥ್ವೀವರ್ಮ ಸುಮಾರು 10 ವರ್ಷಗಳ ಕಾಲ ಆಳಿದ ಮೇಲೆ ಅವನ ಮಗ ಮದನವರ್ಮ ಪಟ್ಟಕ್ಕೆ ಬಂದ (1129-62). ಈತ ಮಾಳವೆಯ ಭಿಲಸಾ ಪ್ರದೇಶವನ್ನು ಗೆದ್ದನಲ್ಲದೆ, ಚೇದಿ ಅರಸರನನ್ನು ಸೋಲಿಸಿ, ತನ್ನ ಮೇಲೆ ಯುದ್ಧಕ್ಕೆ ಬಂದ ಗುಜರಾತಿನ ಜಯಸಿಂಹ-ಸಿದ್ಧರಾಜನಿಂದ ಬುಂದೇಲಖಂಡವನ್ನು ರಕ್ಷಿಸಿದ. ಇವನ ಬಳಿಕ ಬಹುಶಃ ಒಂದೆರಡು ವರ್ಷಗಳ ಕಾಲ ಈತನ ಮಗ ಯಶೋವರ್ಮ ಅಧಿಕಾರದಲ್ಲಿದ್ದ. ಅನಂತರ ಅವನ ಮಗ ಪರಮರ್ದಿ (1165-1202) ಪಟ್ಟಕ್ಕೆ ಬಂದ. ಚಂದೇಲದಲ್ಲಿ ಇವನೊಬ್ಬ ಪ್ರಸಿದ್ಧ ಅರಸ. ಇವನು ವೀರಯೋಧನಾಗಿದ್ದ; ಗುಜರಾತಿನ ಚೌಳುಕ್ಯ ಅರಸರಿಂದ ದಶಾರ್ಣವನ್ನು (ಭಿಲಸಾ) ತಿರುಗಿ ಗೆದ್ದುಕೊಂಡ. ಆದರೆ 1182ರಲ್ಲಿ 3ನೆಯ ಪೃಥ್ವೀರಾಜನಿಂದಲೂ 1202ರಲ್ಲಿ ಘೋರಿ ಮಹಮದನ ಸೇನಾಪತಿ ಕುತ್ಬ್-ಉದ್-ದೀನನಿಂದಲೂ ಸೋಲಿಸಲ್ಪಟ್ಟ. ಮುಸ್ಲಿಮರೊಡನೆ ಸಂಧಿ ಮಾಡಿಕೊಂಡನೆಂದು ಪರಮರ್ದಿಯನ್ನು ಅವನ ಮಂತ್ರಿ ಅಜಯದೇವ ಕೊಂದ. ಕುತ್ಬ್-ಉದ್-ದೀನ್ ಮತ್ತೆ ಬುಂದೇಲಖಂಡದ ಮೇಲೆ ದಾಳಿ ಮಾಡಿ ಕಾಲಿಂಜರ, ಮಹೋಬಾ ಪಟ್ಟಣಗಳನ್ನು ಲೂಟಿ ಮಾಡಿ, ಒಬ್ಬ ಮುಸ್ಲಿಮ್ ಸರದಾರನನ್ನು ರಾಜ್ಯಪಾಲನನ್ನಾಗಿ ನೇಮಿಸಿದ. ಸ್ವಲ್ಪ ಕಾಲದಲ್ಲೇ ಪರಮರ್ದಿಯ ಮಗ ತ್ರೈಲೋಕ್ಯಮಲ್ಲ ಮುಸ್ಲಿಮರನ್ನು ಸೋಲಿಸಿ, ಸಮಗ್ರ ಬುಂದೇಲಖಂಡವನ್ನು ತಿರುಗಿ ಗೆದ್ದುಕೊಂಡ. ಈತ ಸುಮಾರು 10 ವರ್ಷಗಳ ಕಾಲ (1202-86) ಆಳಿದ. ಅನಂತರ ಈತನ ಮಗ ವೀರವರ್ಮ ಸಿಂಹಾಸನಾರೂಢನಾದ. ಈತ ಸುಮಾರು 35 ವರ್ಷಗಳ ಕಾಲ, ಪ್ರ.ಶ. ಸು.1250-86.ರಲ್ಲಿ ಆಳಿದ. ವೀರವರ್ಮನ ಬಳಿಕ ಅನುಕ್ರಮವಾಗಿ ಭೋಜವರ್ಮ ಹಾಗೂ ಹಮ್ಮೀರವರ್ಮರು ಆಳಿದರು. ಅಲ್ಲಿಂದ ಮುಂದೆ ಚಂದೇಲ ರಾಜ್ಯ ಅನೇಕ ಮುಸ್ಲಿಂ ದಾಳಿಗಳಿಗೆ ಸಿಕ್ಕಿ ಪತನದ ಹಾದಿ ಹಿಡಿಯಿತು. ಕಾಲಕ್ರಮದಲ್ಲಿ ಚಂದೇಲರು ತಮ್ಮ ಪ್ರಭುತ್ವ ಶಕ್ತಿಯನ್ನು ಕಳೆದುಕೊಂಡು ಕಣ್ಮರೆಯಾದರು. ಹಮ್ಮೀರವರ್ಮನ ಅನಂತರವೂ ಕಾಲಿಂಜರ ಪ್ರದೇಶದಲ್ಲಿ ಚಂದೇಲರು ಆಳುತ್ತಿದ್ದರೆಂದು ಹೇಳಬಹುದಾದರೂ ಉತ್ತರ ಭಾರತದ ಇತಿಹಾಸದಲ್ಲಿ ಅವರಿಗೆ ಯಾವ ಗಣನೀಯ ಸ್ಥಾನವೂ ಇಲ್ಲದೆ ಹೋಯಿತು.

ಗ್ರಂಥಸೂಚಿ

  • Harihar Vitthal Trivedi (1991). Inscriptions of the Paramāras (Part 2). Corpus Inscriptionum Indicarum Volume VII: Inscriptions of the Paramāras, Chandēllas, Kachchapaghātas, and two minor dynasties. Archaeological Survey of India.
  • Om Prakash Misra (2003). Archaeological Excavations in Central India: Madhya Pradesh and Chhattisgarh. Mittal Publications. ISBN 978-81-7099-874-7.
  • Peter Jackson (2003). The Delhi Sultanate: A Political and Military History. Cambridge University Press. ISBN 978-0-521-54329-3.
  • R. K. Dikshit (1976). The Candellas of Jejākabhukti. Abhinav. ISBN 9788170170464.
  • Romila Thapar (2013). The Past Before Us. Harvard University Press. ISBN 978-0-674-72651-2.
  • Sisirkumar Mitra (1977). The Early Rulers of Khajurāho. Motilal Banarsidass. ISBN 9788120819979.
  • Sushil Kumar Sullerey (2004). Chandella Art. Aakar Books. ISBN 978-81-87879-32-9.
ಚಂದೇಲರು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಚಂದೇಲರು ರಾಜ್ಯದ ಸ್ಥಾಪನೆಚಂದೇಲರು ಹರ್ಷಚಂದೇಲರು ಯಶೋವರ್ಮಚಂದೇಲರು ಧಂಗಚಂದೇಲರು ವಿದ್ಯಾಧರಚಂದೇಲರು ನಂತರದ ಅರಸರುಚಂದೇಲರು ಗ್ರಂಥಸೂಚಿಚಂದೇಲರು

🔥 Trending searches on Wiki ಕನ್ನಡ:

ಹಾಗಲಕಾಯಿಧನಂಜಯ್ (ನಟ)ಜೋಡು ನುಡಿಗಟ್ಟುವೀರಗಾಸೆಭಾರತೀಯ ಸಂವಿಧಾನದ ತಿದ್ದುಪಡಿಪ್ರಾಣಾಯಾಮಪ್ರೀತಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕಾಲ್ಪನಿಕ ಕಥೆವಾಲ್ಮೀಕಿಕನ್ನಡ ಸಾಹಿತ್ಯ ಪರಿಷತ್ತುಮಂಗಳೂರುಬಾಳೆ ಹಣ್ಣುಬಿದಿರುಅಹಲ್ಯೆಬರಗೂರು ರಾಮಚಂದ್ರಪ್ಪಭಾರತದ ಪ್ರಧಾನ ಮಂತ್ರಿನಾಗಠಾಣ ವಿಧಾನಸಭಾ ಕ್ಷೇತ್ರಹೆಳವನಕಟ್ಟೆ ಗಿರಿಯಮ್ಮಕಬ್ಬುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕನ್ನಡ ವಿಶ್ವವಿದ್ಯಾಲಯಮಲೈ ಮಹದೇಶ್ವರ ಬೆಟ್ಟಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಧಾರವಾಡಆಗಮ ಸಂಧಿಕನಕದಾಸರುಮಹಾಭಾರತಬಾಹುಬಲಿಮಾರಾಟ ಪ್ರಕ್ರಿಯೆಔರಂಗಜೇಬ್ಸಂಯುಕ್ತ ಕರ್ನಾಟಕಕೊರೋನಾವೈರಸ್ ಕಾಯಿಲೆ ೨೦೧೯ಜನತಾ ದಳ (ಜಾತ್ಯಾತೀತ)ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುವಾಟ್ಸ್ ಆಪ್ ಮೆಸ್ಸೆಂಜರ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪೊನ್ನಿಯನ್ ಸೆಲ್ವನ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಚನ ಸಾಹಿತ್ಯಕನ್ನಡಪ್ರಭಭಾಷೆಶೂನ್ಯ ಛಾಯಾ ದಿನತುಳಸಿಹೊಯ್ಸಳಲೋಪಸಂಧಿರನ್ನಸಂಗೊಳ್ಳಿ ರಾಯಣ್ಣತೆರಿಗೆರಾಯಲ್ ಚಾಲೆಂಜರ್ಸ್ ಬೆಂಗಳೂರುಸಮಾಜಶಾಸ್ತ್ರನವಣೆವಿರಾಟ್ ಕೊಹ್ಲಿಗಾಂಡೀವಸಮಾಜ ಸೇವೆಕ್ರೀಡೆಗಳುಚಂದ್ರ (ದೇವತೆ)ಉತ್ತಮ ಪ್ರಜಾಕೀಯ ಪಕ್ಷಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಕರ್ನಾಟಕದ ಮಹಾನಗರಪಾಲಿಕೆಗಳುಲಿನಕ್ಸ್ಶಾಸನಗಳುಮಂಗಳ (ಗ್ರಹ)ಎಚ್. ತಿಪ್ಪೇರುದ್ರಸ್ವಾಮಿದ್ರೌಪದಿ ಮುರ್ಮುಭಾರತದ ರಾಜಕೀಯ ಪಕ್ಷಗಳುಐಹೊಳೆಯು.ಆರ್.ಅನಂತಮೂರ್ತಿಸರ್ವಜ್ಞಭಾರತದ ಇತಿಹಾಸಶ್ರೀ ರಾಮಾಯಣ ದರ್ಶನಂವೇದವ್ಯಾಸಭಾರತೀಯ ರೈಲ್ವೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತೀಯ ಕಾವ್ಯ ಮೀಮಾಂಸೆಷಟ್ಪದಿ🡆 More