ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ

ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ವಿಜಯನಗರ ಸಾಮ್ರಾಜ್ಯವು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಧಾರ್ಮಿಕ ರಕ್ಷಣೆಯನ್ನು ಕೊಟ್ಟ ಕರ್ನಾಟಕದ ರಾಜಮನೆತನ.

ಎಲ್ಲ ಕಲೆಗಳಂತೆ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯೂ ಈ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ವಿಜಯನಗರ ಕಾಲದ ದೇವಾಲಯಗಳು ದಕ್ಷಿಣ ಭಾರತದ ತುಂಬೆಲ್ಲಾ ಹರಡಿಕೊಂಡಿವೆ. ಹೊಸದಾಗಿ ದೇವಾಲಯಗಳನ್ನು ಕಟ್ಟಿಸುವುದರ ಜೊತೆಗೆ ಹಳೆಯ ದೇವಾಲಯಗಳ ಪುನುರುಜ್ಜೀವನ ಕಾರ್ಯವನ್ನು ಈ ಕಾಲದಲ್ಲಿ ನೆಡೆಸಲಾಗಿದೆ. ಕರ್ನಾಟಕದ ಬಹುತೇಕ ದೇವಾಲಯಗಳ ನವೀಕರಣ ಕಾರ್ಯದಲ್ಲಿ ವಿಜಯನಗರ ಸಾಮ್ರಾಜ್ಯ ದ ಶೈಲಿ ಎದ್ದು ಕಾಣುತ್ತದೆ.

ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
ವಿರೂಪಾಕ್ಷ ದೇವಾಲಯದ ರಾಜಗೋಪುರ. ಹಂಪಿ.
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
Early 14th century Shiva temples on Hemakuta hill built during the rule of Harihara Raya I incorporates the stepped Kadamba style nagara sikhara (superstructure)
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
೧೪ ನೆಯ ಶತಮಾನದ ನಡುವೆ ಕಟ್ಟಲಾದ ಶೃಂಗೇರಿಯ ವಿದ್ಯಾಶಂಕರ ದೇವಾಲಯ
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
ಹಂಪಿಯ ಹಜಾರ ರಾಮ ದೇವಾಲಯ
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
A typical Vijayanagara style pillared maha mantapa (main hall) at Someshvara temple at Kolar
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
Pillared open mantapa incorporating Hoysala style "staggered square" layout at Vittala temple in Hampi
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
Typical large open pillared hall at Ananthasayana temple in Ananthasayanagudi, Bellary district, Karnataka
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
Kudure gombe (horse doll) pillars in a mantapa at Hampi
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ
An open mantapa with yali columns at the Vittala temple in Hampi

ಶೈಲಿ::: ವಿಜಯನಗರ ಕಾಲದ ದೇವಾಲಯಗಳಲ್ಲಿ ಕಾಣುವುದು ದ್ರಾವಿಡ ಶೈಲಿಯ ಮುಂದುವರೆದ ರೂಪ. ಚೋಳರ ಕಾಲದ ದೇವಾಲಯಗಳಂತೆ ದೊಡ್ಡ ಆಕಾರದ ಒಂದೇ ಕಟ್ಟಡಕ್ಕೆ ಬದಲಾಗಿ ಸಾಮಾನ್ಯ ಆಕಾರದ ಅನೇಕ ಕಟ್ಟಡಗಳ ಸಮುದಾಯ ಈ ಕಾಲದ ದ್ರಾವಿಡ ಶೈಲಿಯ ವೈಶಿಷ್ಟ್ಯ. ಮುಖ್ಯ ದೇವಾಲಯವು ಮಧ್ಯದಲ್ಲಿದ್ದು ಅದರ ಸುತ್ತ ಕೈಸಾಲೆಗಳು , ಮಂಟಪಗಳು ಇರುತ್ತಿದ್ದವು. ಪೂಜಾ ವಿಧಾನದಲ್ಲಾದ ಬದಲಾವಣೆ ಮತ್ತು ಮಹೋತ್ಸವಗಳ ಆಚರಣೆಯು ಕಟ್ಟಡದಲ್ಲಾದ ಬದಲಾವಣೆಗೆ ಮುಖ್ಯ ಕಾರಣವೆಂದು ವಿದ್ವಾಂಸರು ಹೇಳುತ್ತಾರೆ. ಹೊಸ ಆವಶ್ಯಕತೆ ಗನುಗುಣವಾಗಿ ದೇವಾಲಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಸ್ತರಿಸಿದ್ದಾರೆ.

ಸೌಂದರ್ಯ/ಸಂಕೀರ್ಣತೆ

  • ಈ ಕಾಲದ ದೇವಾಲಯಗಳ ಸೌಂದರ್ಯ ಮತ್ತು ಸಂಕೀರ್ಣತೆ ಇರುವುದು ಕಂಬಗಳಲ್ಲಿ ಮತ್ತು ಅವುಗಳ ಚಾಚು ಪೀಠಗಳಲ್ಲಿ. ಹೊಯ್ಸಳರ ಶೈಲಿಯ ಕಂಬಗಳಿಗಿಂತ ಭಿನ್ನವಾದ ಕಂಬಗಳಿವು. ಕಂಬಗಳ ಕೆತ್ತೆನೆಯಲ್ಲಿ ಮುಖ್ಯವಾಗಿ ಎರಡು ಮೂರು ಬಗೆಗಳನ್ನು ಕಾಣಬಹುದು. ಕಂಬಗಳಲ್ಲಿ ಮತ್ತಷ್ಟು ಚಿಕ್ಕ ಚಿಕ್ಕ ಕಂಬಗಳನ್ನು ಕೊರೆದು ಒಟ್ಟಿ ಸೌಂದರ್ಯಕ್ಕೆ ಕಾರಣವಾಗುವುದು ಒಂದು ರೀತಿ.
  • ಇನ್ನೊಂದು ರೀತಿಯ ಕಂಬಗಳಲ್ಲಿ ಕೆನೆಯುತ್ತಿರುವ ಕುದುರೆಯನ್ನೋ ಅಥವಾ ಶಾರ್ದೂಲವನ್ನೋ ತೋರಿಸಿ ಅದರ ಸುತ್ತ ಕೆತ್ತನೆ ಕೆಲಸವನ್ನು ಮಾಡಿರುವುದು ಕಂಡುಬರುತ್ತದೆ. ಚಿಕ್ಕ ಚಿಕ್ಕ ಗೋಪುರಗಳ ಮೂಲಕ ಕಂಬಗಳನ್ನು ಅಲ್ಂಕರಿಸಿರುವುದೂ ಉಂಟು. ಎಂಟು ಅಥವಾ ಹದಿನಾರು ಮೂಲೆಗಳುಳ್ಳ ಕಂಬಗಳೂ ಕಾಣಸಿಗುತ್ತವೆ.
  • ಇತರ ದ್ರಾವಿಡ ದೇವಾಲಯಗಳಲ್ಲಿ ಕಾಣುವಂತೆ ಬೋದಿಗಳೂ, ಚಾಚು ಪೀಠಗಳೂ ಅವುಗಳ ಮೇಲೆ ಅಲಂಕಾರವೂ ಉಂಟು. ಸಾಮಾನ್ಯವಾಗಿ ಚಾಚು ಪೀಠಗಳು ಬಾಗಿದ ಕಮಲದ ಮೊಗ್ಗಿನ ಆಕಾರದಲ್ಲಿದ್ದು ವಿಜಯನಗರ ವಾಸ್ತುಶಿಲ್ಪಕ್ಕೆ ಹೆಚ್ಚಿನ ಅಂದವನ್ನು ತಂದುಕೊಟ್ಟಿವೆ ಎನ್ನಬಹುದು.

ಬದಲಾವಣೆಗಳು

ಈ ಕಾಲದಲ್ಲಿ ದೇವಾಲಯಗಳ ವಿನ್ಯಾಸದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲಾಯಿತು. ಅವುಗಳೆಂದರೆ,

ಗೋಪುರಗಳು

  • ಈ ಕಾಲದ ವಾಸ್ತುಶಿಲ್ಪವು ದ್ರಾವಿಡ ಶೈಲಿಯದ್ದೇ ಆದರೂ ವ್ಯಾವಹಾರಿಕವಾಗಿ ಕೆಲವು ಬದಲಾವಣೆಗಳನ್ನು ಮಾಡಿರುವುದನ್ನು ನಾವು ಗಮನಿಸಬಹುದಾಗಿರುತ್ತದೆ. ದೇವಾಲಯಗಳ ಮುಂಭಾಗದಲ್ಲಿ ದೊಡ್ಡ ಗೋಪುರಗಳನ್ನು ನಿರ್ಮಿಸುವ ಕಲ್ಪನೆಯು ಈ ಕಾಲದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿತು. ಹೊಯ್ಸಳರ ಕಾಲದಲ್ಲಿ ಶಿಖರಗಳನ್ನು ನಿರ್ಮಿಸಿದ್ದರೂ ಗೋಪುರದ ಕಲ್ಪನೆ ಇರಲಿಲ್ಲ.
  • ಈ ಗೋಪುರಗಳು ದೇವಾಲಯದ ಅಂದವನ್ನು ಹೆಚ್ಚಿಸುವುದರ ಜೊತೆಗೆ ದೂರದಿಂದಲೇ 'ಅಲ್ಲೊಂದು ದೇವಾಲಯವಿದೆ' ಎಂದು ಗುರುತಿಸಲು ಸಹಾಯಕವಾಗುತ್ತಿತ್ತು. ಈ ಗೋಪುರಗಳ ತುದಿಯಲ್ಲಿ ಮೂರು, ಐದು, ಏಳು, ಒಂಬತ್ತು ಹೀಗೆ ಬೆಸ ಸಂಖ್ಯೆಯಲ್ಲಿ ಕಲಶಗಳನ್ನೂ ನಿರ್ಮಿಸ ಲಾಗುತ್ತಿತ್ತು. ಈ ಕಲಶಗಳನ್ನು ಕಲ್ಲಿನಲ್ಲಿ ನಿರ್ಮಿಸುವ ಪಧ್ಧತಿಯಿತ್ತು. ಸಾಮ್ರಾಜ್ಯವು ಹೆಚ್ಚು ಉನ್ನತಿಗೆ ಬಂದಂತೆಲ್ಲಾ ಕಲ್ಲಿನ ಕಲಶದ ಬದಲಿಗೆ ಬಂಗಾರ, ಬೆಳ್ಳಿ, ಕಂಚು ಮತ್ತು ಪಂಚಲೋಹದಿಂದ ಮಾಡಲ್ಪಟ್ಟ ಕಲಶಗಳನ್ನು ಕೂರಿಸುವ ಆಚರಣೆಯೂ ಬಂದಿತು.
  • ಈ ಗೋಪುರಗಳು ದೊಡ್ಡ ಬಾಗಿಲನ್ನು ಹೊಂದಿರುತ್ತಿತ್ತು. ಭದ್ರವಾದ ತಳಪಾಯದೊಂದಿಗೆ ಹಸುವಿನ ಮುಖದ ಆಕಾರದಲ್ಲಿ ಕಾಣುವ ಈ ಗೋಪುರಗಳೂ ಸಹ ಮೂರು, ಐದು, ಏಳು ಈ ರೀತಿ ಬೆಸ ಸಂಖ್ಯೆಯಲ್ಲೇ ಅಂತಸ್ತುಗಳನ್ನು ಹೊಂದಿರುತ್ತವೆ. ಮೇಲಕ್ಕೆ ಹೋದಂತೆಲ್ಲಾ ಚಿಕ್ಕದಾಗುತ್ತಾ ಬಂದು ತುದಿಯಲ್ಲಿ ಹಸುವಿನ ಕೊಂಬಿನಾಕಾರದ ರಚನೆಯೊಂದಿಗೆ ಮುಕ್ತಾಯವಾಗುತ್ತದೆ.
  • ಎರಡು ಕೊಂಬಿನ ರಚನೆಗಳ ನಡುವೆ ಕಲಶಗಳನ್ನು ಕೂರಿಸಲಾಗಿರುತ್ತದೆ. ಇವುಗಳನ್ನು ರಾಜಗೋಪುರ ಎಂದು ಕರೆಯುವ ವಾಡಿಕೆಯೂ ಇದೆ. ಇಂದು ಅನೇಕ ದೇವಾಲಯಗಳಲ್ಲಿ ನಾವು ಕಾಣುವ ಗೋಪುರಗಳು ಬಹುಮಟ್ಟಿಗೆ ವಿಜಯನಗರದ ನಾಯಕರ ಕಾಲದ ನಿರ್ಮಾಣಗಳೇ ಆಗಿವೆ.
ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ 
ಹಂಪಿಯ ವಿಠಲ ಮಂದಿರದಲ್ಲಿರುವ ಕಂಬಗಳ ಸಾಲಿನ ಮಂಟಪ

ಪಾಕಶಾಲೆ/ಧ್ವಜಸ್ಥಂಭ

  • ವಿಜಯನಗರದ ಪೂರ್ವಕಾಲದಲ್ಲಿಯೂ ದೇವಾಲಯದಲ್ಲಿ ಅನ್ನದಾನ-ದಾಸೋಹಗಳು ನೆಡೆಯುತ್ತಿದ್ದವು. ಇದಲ್ಲದೆ ದೇವರಿಗೆ ನಿತ್ಯ ನೈವೇದ್ಯಕ್ಕಾಗಿ ವಿವಿಧ ಅಡುಗೆಗಳೂ ತಯಾರಾಗುತ್ತಿದ್ದವು. ಹೀಗೆ ಅಡಿಗೆಯ ತಯಾರಿಕೆಗೆ ದೇವಾಲಯದ ಆವರಣದಲ್ಲೇ ಅಡಿಗೆಮನೆ ಅಥವಾ ಪಾಕಶಾಲೆಗಳು ಆಗ ಇದ್ದಂತೆ ಕಂಡುಬರುವುದಿಲ್ಲ. ಆದರೆ, ವಿಜಯನಗರದ ಕಾಲದಲ್ಲಿ ಆಲಯದ ಪ್ರಾಕಾರದಲ್ಲೇ ಆಗ್ನೇಯ ಮೂಲೆಯಲ್ಲಿ ಅಡಿಗೆಮನೆಯನ್ನು ನಿರ್ಮಿಸುವ ಪದ್ಧತಿಯು ಆರಂಭವಾಯಿತೆನ್ನಬಹುದು.
  • ನೈವೇದ್ಯ ಹಾಗೂ ಅನ್ನದಾನಗಳಿಗೆ ಇಲ್ಲೇ ಅಡಿಗೆಯು ತಯಾರಾಗುತ್ತಿತ್ತು. ಇಂದಿಗೂ ಅನೇಕ ದೇವಾಲಯಗಳಲ್ಲಿ ವಿಜಯನಗರ ಕಾಲದ ಪಾಕಶಾಲೆಗಳನ್ನು ಕಾಣಬಹುದು. ಹೊಯ್ಸಳರ ಕಾಲದಲ್ಲಿ ವಾಹನಮಂಟಪವನ್ನು ನಿರ್ಮಿಸುವ ಪಧ್ಧತಿಯಿದ್ದರೂ ಅದೇ ವಾಹನದ ಹೆಸರಿನಲ್ಲಿ ಕಂಬವನ್ನು ನಿರ್ಮಿಸಿರುತ್ತಿರಲಿಲ್ಲ. ಆದರೆ, ವಿಜಯನಗರದ ಅರಸರ ಕಾಲದಲ್ಲಿ ಎತ್ತರದ ಧ್ವಜಸ್ಥಂಭಗಳನ್ನು ನಿರ್ಮಿಸುವ ಪದ್ಧತಿಯು ರೂಢಿಗೆ ಬಂದಿತು.
  • ವಿಷ್ಣು ದೇವಾಲಯಗಳಲ್ಲಿ ಗರುಡಗಂಬ ವೂ ಶಿವನ ಆಲಯಗಳಲ್ಲಿ ನಂದಿಧ್ವಜ ಸ್ಥಂಭವೂ ನಿರ್ಮಾಣವಾಯಿತು. ಈ ಸ್ಥಂಭಗಳು ದೇವಾಲಯದ ಎತ್ತರಕ್ಕೆ ಸಮನಾಗಿ ಅಥವಾ ಗೋಪುರದ ಎತ್ತರಕ್ಕೆ ಸಮನಾಗಿದ್ದು ಗುಡಿ ಮತ್ತು ಗೋಪುರದ ನಡುವಿನ ಜಾಗದಲ್ಲಿ ಸ್ಥಾಪನೆಯಾಗಿರುತ್ತದೆ. ಸ್ಥಂಭದ ಪೀಠದಲ್ಲಿ ಗರುಡ, ನಂದಿ ಅಥವಾ ಸಂಬಂಧಪಟ್ಟ ದೇವರ ವಾಹನದ ಚಿಕ್ಕ ಚಿತವನ್ನು ಬಿಡಿಸಲಾಗಿರುತ್ತದೆ.
  • ತುದಿಯಲ್ಲಿ ಚಿಕ್ಕ ಕಲಶದ ಮಾದರಿಯ ರಚನೆಯನ್ನು ಮಾಡಿ ಧ್ವಜವನ್ನು ಕಟ್ಟುವುದಕ್ಕೆ ಕೋಲುಗಳಂತಹ ರಚನೆಯನ್ನು ಮಾಡಲಾಗಿರುತ್ತದೆ. ಆಗಮ ಶಾಸ್ತ್ರಗಳ ಪ್ರಕಾರ ಈ ಸ್ಥಂಭಗಳನ್ನು ಕಲ್ಲಿನಿಂದ ನಿರ್ಮಿಸಿ ಕಾಯಂ ಆಗಿ ಸ್ಥಾಪಿಸಬಹುದು ಮತ್ತು ಬಿದಿರಿನ ಬೊಂಬನ್ನು ಬಳಸಿ ಕೊಂಡು ನಿರ್ಮಿಸಿ ತಾತ್ಕಾಲಿಕವಾಗಿಯೂ ಸ್ಥಾಪಿಸಿಕೊಳ್ಳಬಹುದು. ದೇವಾಲಯಗಳಲ್ಲಿ ವಾರ್ಷಿಕ ಮಹೋತ್ಸವಗಳು ಆರಂಭವಾಗುವ ಮೊದಲನೆಯ ದಿವಸ ಈ ಸ್ಥಂಭಗಳ ಮೇಲೆ ಬಟ್ಟೆಯಿಂದ ಮಾಡಿದ ನಂದಿಧ್ವಜ(ಗೂಳಿಯ ಚಿತ್ರವಿರುವ) ಅಥವಾ ಗರುಡ ಧ್ವಜವನ್ನು ಹಾರಿಸಲಾಗುತ್ತದೆ. *ಇದನ್ನು ಧ್ವಜಾರೋಹಣ ಮಹೋತ್ಸವ ಎನ್ನಲಾಗುತ್ತದೆ. ಮೈಸೂರು ಒಡೆಯರ ಕಾಲದಲ್ಲಿ ಬಟ್ಟೆಯ ಧ್ವಜದ ಬದಲಿಗೆ ಬೆಳ್ಳಿ, ಬಂಗಾರ, ಪಂಚಲೋಹದ ಧ್ವಜವನ್ನು ಕಟ್ಟುವ ರೂಢಿಯೂ ಬಂದಿತು. ದೇವಾಲಯದ್ಲ್ಲಿ ಧ್ವಜಾರೋಹಣವಾಗಿದೆ ಎಂದರೆ ಅಲ್ಲಿ ಮಹೋತ್ಸವಗಳು ನೆಡೆಯುತ್ತಿವ ಎಂದೇ ಅರ್ಥ.

ಪ್ರಾಕಾರ/ಮಂಟಪಗಳು/ಬಲಿಪೀಠಗಳು

  • ಮೂಲ ಆಲಯದ ಅನತಿ ದೂರದಲ್ಲಿ ಗೋಪುರಗಳು ನಿರ್ಮಾಣವಾಗುತ್ತಿದ್ದಿದರಿಂದ ಅದಕ್ಕೆ ಹೊಂದಿಕೊಂಡಂತೆ ಸುತ್ತಲೂ ಪ್ರಾಕಾರ ಅಥವಾ ಕಲ್ಲಿನ ಕೋಟೆಯಂತಹ ದೊಡ್ಡ ಗೋಡೆಯನ್ನು ನಿರ್ಮಿಸಲಾಗುತ್ತಿತ್ತು. ಈ ಗೋಡೆಗಳು ೧೫ ರಿಂದ ೨೦ ಅಡಿ ಎತ್ತರವಿರುತ್ತಿದ್ದವು. ಗೋಡೆಗಳನ್ನು ಆಧಾರವಾಗಿಟ್ಟುಕೊಂಡು ಒಳಭಾಗದಲ್ಲಿ ಮಂಟಪಗಳನ್ನು ನಿರ್ಮಿಸಲಾಗುತ್ತಿತ್ತು. ಈಗಲೂ ಬೇಲೂರು , ಸೋಮನಾಥಪುರ ಮುಂತಾದ ಅನೇಕ ದೇವಾಲಯಗಳಲ್ಲಿ ವಿಜಯನಗರ ಕಾಲದ ಪ್ರಾಕಾರ ಮಂಟಪಗಳನ್ನು ಕಾಣಬಹುದು.
  • ಈ ಮಂಟಪಗಳಲ್ಲಿ ದೇವರ ಉತ್ಸವವಾಹನಗಳನ್ನು ಇರಿಸಲಾಗುತ್ತಿತ್ತು. ಪರಿವಾರ ದೇವರುಗಳ ಪುಟ್ಟ ಗುಡಿಗಳನ್ನೂ ಇಲ್ಲೇ ನಿರ್ಮಿಸಲಾಗುತ್ತಿತ್ತು. ಚಾಲುಕ್ಯ. ಹೊಯ್ಸಳ ರ ಕಾಲದಲ್ಲಿ ಶಿವ, ವಿಷ್ಣು, ಲಕ್ಷ್ಮಿ, ಪಾರ್ವತಿ ಹೀಗೆ ಒಂದೊಂದೇ ಮುಖ್ಯ ದೇವರುಗಳಿರುತ್ತಿದ್ದ ಆಲಯಗಳಲ್ಲಿ ಅಮ್ಮನವರ ಆಲಯಗಳನ್ನು ಪ್ರತ್ಯೇಕವಾಗಿ ನಿರ್ಮಿಸುವ ರೂಢಿಯೂ ಜಾರಿಗೆ ಬಂದಿತು.
  • ಇಂದು ಬೇಲೂರು ಪಟ್ಟಣದ ಚನ್ನಕೇಶವ ದೇವಾಲಯ ದಲ್ಲಿರುವ ಸೌಮ್ಯನಾಯಕಿ ಮತ್ತು ರಂಗನಾಯಕಿ ಅಮ್ಮನವರ ದೇವಾಲಯಗಳು ವಿಜಯನಗರ ನಾಯಕರ ಕಾಲದಲ್ಲಿ ನಿರ್ಮಿಸಲ್ಪಟ್ಟವು. ದೇವರಿಗೆ ನೈವೇದ್ಯವು ಆದ ನಂತರ ಆ ಅಡಿಗೆಯ ಸ್ವಲ್ಪ ಭಾಗವನ್ನು ಆಲಯದ ಮುಂದೆ ಮತ್ತು ಆಲಯದ ಸುತ್ತ ಎಂಟು ದಿಕ್ಕುಗಳಲ್ಲಿ ಹಾಕುವ ಬಲಿಪ್ರದಾನ ಶಾಸ್ತ್ರವು ಈ ಕಾಲದಲ್ಲಿ ಜಾರಿಗೆ ಬಂದಿತೆನ್ನಬಹುದು.
  • ಈ ಕಾಲಕ್ಕೂ ಮುಂಚೆಯೇ ಈ ಪಧ್ಧತಿಯಿದ್ದರೂ ಸಹ ಆಗಿನ ಕಾಲದಲ್ಲಿ ಬಲಿಪ್ರದಾನ(ಅನ್ನವನ್ನು ಹಾಕಲು) ಮಾಡಲು ಸ್ಥಾಪಿಸಿರುತ್ತಿದ್ದ ಬಲಿಕಲ್ಲುಗಳು ಹೆಚ್ಚು ದೊರೆತಿಲ್ಲ. ದೊಡ್ದ ಬಲಿಕಲ್ಲನ್ನು ಧ್ವಜಸ್ಥಂಭದ ಮುಂದೆ ಇರಿಸಲಾಗಿರುತ್ತದೆ. ಚಿಕ್ಕ ಕಲ್ಲುಗಳನ್ನು ಆಲಯದ ಸುತ್ತಲೂ ಎಂಟು ದಿಕ್ಕಿನಲ್ಲಿ ಸ್ಥಾಪಿಸಲಾಗಿರುತ್ತದೆ.
  • ಈ ಕಲ್ಲುಗಳ ಮೇಲೆ ಅಷ್ಟದಿಕ್ಪಾಲಕರನ್ನು ಒಳಗೊಂಡು ಕ್ಷೇತ್ರಪಾಲ ಮುಂತಾದ ಪರಿವಾರ ದೇವತೆಗಳಿಗೆ ಬಲಿ ಅನ್ನವನ್ನು ಹಾಕಲಾಗುತ್ತದೆ. ಪ್ರಾಣಿವಧೆಯನ್ನು ನಿಲ್ಲಿಸಿದ ನಂತರ ಅದರ ಸಾತ್ವಿಕ ರೂಪವಾಗಿ ಈ ಪಧ್ಧತಿಯು ಜಾರಿಗೆ ಬಂದಿದೆ ಎನ್ನಬಹುದು. ಈ ಕಾಲದಲ್ಲಿ ಪೂಜಾವಿಧಾನಗಳಲ್ಲೂ ಸಹ ಗಮನಿಸುವಂತಹ ಬದಲಾವಣೆಗಳನ್ನು ಮಾಡಲಾಯಿತು. ಆಗಮ ಶಾಸ್ತ್ರೋಕ್ತ ನೀತಿ ನಿಯಮಗಳನ್ನು ಜಾರಿಗೆ ತರಲಾಯಿತು.

ಮುಖ್ಯ ನಿರ್ಮಾಣಗಳು

ವಿಜಯನಗರ ಕಾಲದ ಮುಖ್ಯ ವಾಸ್ತುಶಿಲ್ಪ ನಿರ್ಮಾಣಗಳು ಕಾಣುವುದು ಇಂದಿನ ಹಂಪಿಯಲ್ಲಿಯೆ. ಈ ಊರು ಅರಸರ ರಾಜಧಾನಿಯಾಗಿದ್ದುದೇ ಇದಕ್ಕೆ ಕಾರಣ. ಹಂಪಿ ಅಥವಾ ವಿಜಯನಗರದಲ್ಲಿ ನಿರ್ಮಾಣವಾಗಿರುವ ಮುಖ್ಯ ಆಲಯಗಳು ಹೀಗಿವೆ

  1. ವಿಜಯ ವಿಠಲ ದೇವಸ್ಥಾನ
  2. ಹಜಾರ ರಾಮಸ್ವಾಮಿ ದೇವಸ್ಥಾನ
  3. ಪಂಪಾ ವಿರೂಪಾಕ್ಷ ದೇವಸ್ಥಾನ (ನವೀಕರಣ)
  4. ಸಾಸಿವೆ ಗಣಪತಿ
  5. ಯೋಗ ನರಸಿಂಹ
  6. ಕಲ್ಲಿನ ರಥ
  7. ಕಮಲ್ ಮಹಲ್

ಮುಂತಾದವುಗಳ ಜೊತೆಗೆ ಅರಮೆನೆಯ ಅವಶೇಷಗಳು, ಕಮಲ ಮಹಲ್, ರಾಣಿಯ ಸ್ನಾನದ ಮನೆ ಮುಂತಾದ ರಾಜಭವನದ ಕಟ್ಟಡಗಳೂ ಕಂಡುಬರುತ್ತದೆ. ಇವುಗಳಲ್ಲಿ ಇಂಡೊ-ಅರೇಬಿಕ್ ಶೈಲಿಯ ಮಿಶ್ರಣವಿರುವುದನ್ನು ನೋಡಬಹುದು. ವಿಜಯ ವಿಠಲ ಮಂದಿರದಲ್ಲಿರುವ ಕಲ್ಲಿನ ರಥ ಮತ್ತು ಸಂಗೀತ ಕಂಬಗಳು ಈ ಕಾಲದ ವಾಸ್ತುಶಿಲ್ಪದ ವೈಶಿಷ್ಟ್ಯ. ಈ ಕಾಲದ ಬಹುತೇಕ ದೇವಾಲಯಗಳು ಗಟ್ಟಿಕಲ್ಲು (ಗ್ರಾನೈಟ್)ಗಳಿಂದಲೇ ನಿರ್ಮಾಣವಾಗಿರುವಂತಹವುಗಳು.

  • ಈ ಕಾಲದಲ್ಲಿ ಮತ್ತು ಶೈಲಿಯಲ್ಲಿ ವಿಜಯನಗರದ ಹೊರಗೆ ನಿರ್ಮಾಣವಾದ ಮುಖ್ಯ ದೇವಾಲಯಬೆಂದರೆ ಲೇಪಾಕ್ಷಿಯ ಶಿವನ ದೇವಾಲಯ ಮತ್ತು ಶೃಂಗೇರಿವಿದ್ಯಾಶಂಕರ ದೇವಾಲಯ. ಈ ದೇವಾಲಯದ ವಿನ್ಯಾಸವು ಅನನ್ಯವಾಗಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಶ್ರೀ ಕೃಷ್ಣದೇವರಾಯನ ಕಾಲವು ವಿಜಯನಗರದ ಇತಿಹಾಸದಲ್ಲಿ ಸುವರ್ಣಯುಗವೆಂದು ಹೇಳಲ್ಪಟ್ಟಿದೆ.

ಜೀರ್ಣೋದ್ಧಾರ/ಮಾರ್ಪಾಡುಗಳು

  • ಹೊಯ್ಸಳ ರ ಕಾಲದ ಅನೇಕ ದೇವಾಲಯಗಳನ್ನು ವಿಜಯನಗರದ ಅರಸರು ಪುನರುಜ್ಜೀವನಗೊಳಿಸಿದ್ದಾರೆ. ಶಿಥಿಲವಾಗುತ್ತಿದ್ದ ಬೇಲೂರು ಚೆನ್ನಕೇಶವ ದೇವಾಲಯವನ್ನು ದುರಸ್ಥಿಗೊಳಿಸಿ ಗೋಪುರ, ಪ್ರಾಕಾರ, ಮಂಟಪಗಳನ್ನು ಈ ಕಾಲದ ಗುಂಡಪ್ಪ ನಾಯಕ ಎನ್ನುವ ದಂಡನಾಯಕನು ನಿರ್ಮಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ವಿಜಯನಗರದ ಪುರಾತನ ಕಾಲದ ಮತ್ತು ಊರಿನ ಅಧಿದೇವತೆಯಾದ ಪಂಪಾ ವಿರೂಪಾಕ್ಷನ ದೇವಾಲಯವನ್ನು ಭವ್ಯ ಮಂದಿರವನ್ನಾಗಿ ಮಾರ್ಪಡಿಸಿದ ಕೀರ್ತಿಯೂ ಈ ಕಾಲದ ಅರಸರಿಗೆ ಸಲ್ಲುತ್ತದೆ. *ಹಳೇಬೀಡು ದೇವಾಲಯದ ಜೀರ್ಣೋದ್ಧಾರ, ಸೋಮನಾಥಪುರ ದ ಆಲಯಕ್ಕೆ ಮಂಟಪಗಳ ನಿರ್ಮಾಣವಾದುದು ಈ ಕಾಲದಲ್ಲೇ. ಇದಲ್ಲದೆ ಕನ್ನಡನಾಡಿನ ಹೊರಗೆ , ತಿರುಪತಿ, ತಾಡಪತ್ರಿ, ಕಾಂಚಿ, ಶ್ರೀರಂಗ ಮುಂತಾದ ದೇವಾಲಯಗಳಿಗೆ ಭವ್ಯವಾದ ಗೋಪುರಗಳನ್ನು ನಿರ್ಮಿಸಿದ ಕೀರ್ತಿ ಈ ಅರಸರದ್ದು. ಕಂಚಿಯ ಏಕಾಂಬರನಾಥ(ಕಾಮಾಕ್ಷಿ) ದೇವಾಲಯಕ್ಕೆ ೧೮೮ ಅಡಿ ಎತ್ತರದ ಗೋಪುರವನ್ನು ನಿರ್ಮಿಸಿದ್ದ ಕೃಷ್ಣದೇವರಾಯನೆಂದು ಶಾಸನಗಳು ಹೇಳುತ್ತವೆ.
  • ಮಧುರೈನ ಮೀನಾಕ್ಷಿ ದೇವಾಲಯದ ವಸಂತ ಮಂಟಪ ಮತ್ತು ಪುದು ಮಂಟಪ ವನ್ನೂ ಕೃಷ್ಣದೇವರಾಯನೆ ಕಟ್ಟಿಸಿದ್ದಾನೆ. ಚಿದಂಬರಂ ನ ನಟರಾಜ ದೇವಾಲಯಕ್ಕೆ ದೊಡ್ಡ ಗೋಪುರವನ್ನೂ ಈತನೇ‌ ನಿರ್ಮಿಸಿದ್ದಾನೆಂದು ಅಲ್ಲಿಯ ಶಾಸನಗಳಲ್ಲಿ ಉಲ್ಲೇಖವಿದೆ. ಕನ್ನಡನಾಡಿನಲ್ಲಿ ವಿಜಯನಗರದ ಅರಸರು ಜೀರ್ಣೋದ್ಧಾರ ಮಾಡದ ದೇವಾಲಯಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಕಾಣಿಕೆಯನ್ನಿತ್ತಿದ್ದಾರೆ.

ಉಲ್ಲೇಖನಗಳು

  • ಮಾಹಿತಿಯ ಮೂಲ
  1. ಕರ್ಣಾಟಕ ಸಂಸ್ಕೃತಿ ಸಮೀಕ್ಷೆ. ಡಾ. ಎಚ್. ತಿಪ್ಪೇರುದ್ರಸ್ವಾಮಿ
  2. ಎಪಿಗ್ರಾಫಿಕಾ ಕರ್ನಾಟಕ
  • ಚಿತ್ರಕೃಪೆ

Tags:

ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ಸೌಂದರ್ಯಸಂಕೀರ್ಣತೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ಬದಲಾವಣೆಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ಮುಖ್ಯ ನಿರ್ಮಾಣಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ಜೀರ್ಣೋದ್ಧಾರಮಾರ್ಪಾಡುಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ಉಲ್ಲೇಖನಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪವಿಜಯನಗರವಿಜಯನಗರ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಭಾರತತತ್ಪುರುಷ ಸಮಾಸಭಾರತೀಯ ಭಾಷೆಗಳುಪಠ್ಯಪುಸ್ತಕಸಲಗ (ಚಲನಚಿತ್ರ)ಗರಗಸಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳುದಿಕ್ಕುಹುಲಿಕರ್ಣಮದಕರಿ ನಾಯಕಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಸಂಸ್ಕೃತಿಹಸ್ತ ಮೈಥುನಜೇನು ಹುಳುರಾಮಕೃಷ್ಣ ಮಿಷನ್ಹೂವುಚಿಕ್ಕ ದೇವರಾಜರೇಡಿಯೋಜೀನ್-ಜಾಕ್ವೆಸ್ ರೂಸೋಅಂಬಿಗರ ಚೌಡಯ್ಯಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭ್ರಷ್ಟಾಚಾರಹಣ್ಣುಪಂಜೆ ಮಂಗೇಶರಾಯ್ಜಾತ್ರೆರಾಮ್ ಮೋಹನ್ ರಾಯ್ಉಪನಯನಭಗವದ್ಗೀತೆದಿಯಾ (ಚಲನಚಿತ್ರ)ರಾಮಾಚಾರಿ (ಕನ್ನಡ ಧಾರಾವಾಹಿ)ರಾಮಶುಕ್ರವಿಶ್ವ ಪರಂಪರೆಯ ತಾಣಮಾಟ - ಮಂತ್ರನವೋದಯಸಾರ್ವಜನಿಕ ಹಣಕಾಸುವಾಲ್ಮೀಕಿಶಾಸನಗಳುಐಹೊಳೆದ.ರಾ.ಬೇಂದ್ರೆರೋಸ್‌ಮರಿಹನುಮಂತಗೌತಮಿಪುತ್ರ ಶಾತಕರ್ಣಿಎಸ್.ಎಲ್. ಭೈರಪ್ಪಪಂಚ ವಾರ್ಷಿಕ ಯೋಜನೆಗಳುಗುಪ್ತಗಾಮಿನಿ (ಧಾರಾವಾಹಿ)ಭಾರತದ ಉಪ ರಾಷ್ಟ್ರಪತಿಪ್ಯಾರಾಸಿಟಮಾಲ್ಗ್ರಾಹಕರ ಸಂರಕ್ಷಣೆಜಯಪ್ರದಾಉತ್ತರ ಕರ್ನಾಟಕಕರ್ನಾಟಕ ಸ್ವಾತಂತ್ರ್ಯ ಚಳವಳಿವಿಜಯಪುರ ಜಿಲ್ಲೆಮಲಾವಿಧರ್ಮ (ಭಾರತೀಯ ಪರಿಕಲ್ಪನೆ)ಕೆ. ಎಸ್. ನರಸಿಂಹಸ್ವಾಮಿಉಡುಪಿ ಜಿಲ್ಲೆಕ್ಯಾರಿಕೇಚರುಗಳು, ಕಾರ್ಟೂನುಗಳುಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಬೆಂಗಳೂರುತ. ರಾ. ಸುಬ್ಬರಾಯಭಾರತದಲ್ಲಿನ ಚುನಾವಣೆಗಳುರಾಶಿಕೃಷಿತಾಳಗುಂದ ಶಾಸನವಿಜಯನಗರ ಸಾಮ್ರಾಜ್ಯಪ್ರೀತಿಏಡ್ಸ್ ರೋಗಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾರತದ ವಿಜ್ಞಾನಿಗಳುತತ್ತ್ವಶಾಸ್ತ್ರಅಲಂಕಾರಜ್ಯೋತಿಬಾ ಫುಲೆಮಹಾತ್ಮ ಗಾಂಧಿನಿರುದ್ಯೋಗಪರ್ಯಾಯ ದ್ವೀಪಜೀನು🡆 More