ಜವಾಬ್ದಾರಿ ಸರ್ಕಾರ

ಜವಾಬ್ದಾರಿ ಸರ್ಕಾರ - ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುವ ಅಥವಾ ಉತ್ತರವಾದಿಯಾಗಿರುವ ಸರ್ಕಾರ (ರೆಸ್ಪಾನ್ಸಿಬಲ್ ಗವರ್ನ್‍ಮೆಂಟ್).

ಅರ್ಥ

ವಸಾಹತಿನ ವಿದೇಶಾಂಗ ನೀತಿ, ರಕ್ಷಣೆ ಮುಂತಾದ ಕೆಲವು ಅಧಿಕಾರಗಳನ್ನು ಸಾಮ್ರಾಜ್ಯ ಸರ್ಕಾರ ಉಳಿಸಿಕೊಂಡು ಆಂತರಿಕ ಆಡಳಿತವನ್ನು ವಸಾಹತಿನವರಿಗೇ ನೀಡುವುದನ್ನೆ ಹಿಂದಿನ ಬ್ರಿಟಿಷ್ ಸಾಮ್ರಾಜ್ಯದ ಕಾಲದಲ್ಲಿ ಜವಾಬ್ದಾರಿ ಸರ್ಕಾರ ಎಂದು ಕರೆಯಲಾಗಿತ್ತು. ಈ ಬಗೆಯ ವ್ಯವಸ್ಥೆಯನ್ನು ಉತ್ತರ ಅಮೆರಿಕದಲ್ಲಿ ಈಗಿನ ಕೆನಡದ ಪ್ರದೇಶಕ್ಕೆ ನೀಡಬೇಕೆಂಬುದಾಗಿ ಸಲಹೆ ಬಂದಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಾರಂಭ ಕಾಲದಲ್ಲಿ ಈ ಬಗೆಯ ಸರ್ಕಾರವನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ವರಾಜ್ಯವೆಂದಿತು; ಸಾಮ್ರಾಜ್ಯದೊಂದಿಗೆ ಯಾವ ಸಂಪರ್ಕವೂ ಇಲ್ಲದೆ ಸ್ವತಂತ್ರ ರಾಷ್ಟ್ರವಾಗಿರುವ ಸ್ಥಿತಿಯನ್ನು ಪೂರ್ಣಸ್ವರಾಜ್ಯವೆಂದು ಕರೆಯಲಾಗಿತ್ತು.

ಆಧುನಿಕ ರಾಜಕೀಯ ವ್ಯವಸ್ಥೆಯಲ್ಲಿ ಜವಾಬ್ದಾರಿ ಸರ್ಕಾರಕ್ಕೆ ಮೂರು ಅರ್ಥಗಳಿವೆ:

  1. ಸಾರ್ವಜನಿಕ ಅಭಿಪ್ರಾಯಕ್ಕೆ ಹೊಣೆಯುಳ್ಳ ಸರ್ಕಾರ ಪದ್ಧತಿ. ಈ ಅರ್ಥದಲ್ಲಿ ಜವಾಬ್ದಾರಿ ಸರ್ಕಾರ ಪ್ರಜಾಭಿಪ್ರಾಯವನ್ನು ಪಡೆಯಲು ಬದ್ಧವಾಗಿರುವ ಪ್ರಜಾಸತ್ತಾತ್ಮಕ ಸರ್ಕಾರಕ್ಕೂ ನಿರಂಕುಶ ಪ್ರಭುವಿನ ಅಧಿಕಾರಕ್ಕೆ ವ್ಯಕ್ತಿಯ ಹಕ್ಕುಗಳು ಒಳಪಟ್ಟಿರುವ ಸರ್ವಾಧಿಕಾರಕ್ಕೂ ಭಿನ್ನವಾದ್ದು.
  2. ಸಾರ್ವಜನಿಕರ ಹಿತಕ್ಕಾಗಿ ಸರ್ಕಾರ ನಿರ್ವಹಿಸುವ ಕೆಲಸ ಮತ್ತು ಆ ಬಗ್ಗೆ ಅದರ ನೈತಿಕ ಜವಾಬ್ದಾರಿ. ರಾಷ್ಟ್ರೀಯ ಹಿತಾಸಕ್ತಿ ಸಾರ್ವಜನಿಕ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದರೆ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಯನ್ನೇ ಪ್ರಧಾನವೆಂದು ಪರಿಗಣಿಸಬೇಕು. ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿದ ಒಂದು ಸರ್ಕಾರ ತನ್ನನ್ನು ನೇಮಿಸಿದವರಿಗೆ ಮತ್ತು ತನ್ನನ್ನು ಅಧಿಕಾರದಲ್ಲಿರಿಸಿದವರಿಗೆ, ಒಬ್ಬ ನೇಮಕಗೊಂಡ ಪ್ರತಿನಿಧಿ ತನ್ನ ಯಜಮಾನನಿಗೆ ಜವಾಬ್ದಾರನಾಗಿರುವಂತೆ, ಜವಾಬ್ದಾರಿ ಹೊಂದಿರುವುದಲ್ಲದೆ ಒಂದು ಸ್ವತಂತ್ರ ಸಂಸ್ಥೆಯೂ ಆಗಿರುತ್ತದೆಂದು ಎಲ್.ಎಸ್. ಅಮೆರಿ ಅಭಿಪ್ರಾಯಪಟ್ಟಿದ್ದ. ಇಂಥ ಸ್ವತಂತ್ರ ಸಂಸ್ಥೆ ಅಧಿಕಾರಕ್ಕೆ ಬಂದ ಮೇಲೆ ತನ್ನ ಸ್ವಂತ ವಿವೇಚನೆ ಮತ್ತು ಆತ್ಮಸಾಕ್ಷಿಗೆ ಅನುಸಾರವಾಗಿ ಸಂಸತ್ತಿಗೆ ಮತ್ತು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊತ್ತಿದೆಯೆಂದು ಆತ ಹೇಳಿದ.
  3. ಜನರಿಂದ ಚುನಾಯಿತವಾದ ಸಭೆಗೆ ಸರ್ಕಾರ ಮತ್ತು ಸರ್ಕಾರದ ಪ್ರತಿಯೊಬ್ಬ ಮಂತ್ರಿಯೂ ಹೊಣೆ ಎಂಬ ಅರ್ಥದಲ್ಲಿ ಜವಾಬ್ದಾರಿ ಸರ್ಕಾರ ಎಂಬ ಪರಿಭಾಷೆ ಈಗ ಬಳಕೆಯಲ್ಲಿದೆ. ಸಂಸದೀಯ ಪದ್ಧತಿ ಇರುವ ಎಲ್ಲ ದೇಶಗಳಲ್ಲೂ ಈ ಪದ್ಧತಿ ರೂಢಿಯಲ್ಲಿದೆ. ಸರ್ಕಾರದ ಕಾರ್ಯನೀತಿಯ ಬಗ್ಗೆ ಮಂತ್ರಿಮಂಡಲ ಸಾಮೂಹಿಕವಾಗಿ ಮತ್ತು ತನ್ನ ಇಲಾಖೆಗೆ ಸಂಬಂಧಪಟ್ಟಂತೆ ಮಂತ್ರಿ ಮಂಡಲದ ಪ್ರತಿಯೊಬ್ಬ ಮಂತ್ರಿಯೂ ವೈಯಕ್ತಿಕವಾಗಿ ಸಂಸತ್ತಿಗೆ ಹೊಣೆಯಾಗಿರಬೇಕು. ಈ ಸರ್ಕಾರ ಪದ್ಧತಿಯಲ್ಲಿ ಚುನಾಯಿತ ಸಭೆ ವಾಸ್ತವಿಕವಾಗಿ ಪರಮಾಧಿಕಾರವುಳ್ಳ ಸಂಸ್ಥೆ

ಜವಾಬ್ದಾರಿ ಸರ್ಕಾರದ ಈ ಮೂರು ಪರಿಕಲ್ಪನೆಗಳಲ್ಲಿ ಸೂಚಿತವಾದ ಉದ್ದೇಶಗಳು ಪರಸ್ಪರ ಸಂಗತವಾಗಿರದಿದ್ದರೂ ಅವು ಪ್ರಜಾಸತ್ತಾತ್ಮಕ ರಾಜ್ಯಕ್ಕೆ ಅನ್ವಯಿಸುತ್ತವೆ. ಉದಾಹರಣೆಗೆ ಸಾರ್ವಜನಿಕ ಅಭಿಪ್ರಾಯವು ಯುಕ್ತವಾದ ಇಲ್ಲವೆ ವಾಸ್ತವಿಕವಾದ ವಿಚಾರಗಳ ಬಗ್ಗೆ ಎಲ್ಲ ಕಾಲಗಳಲ್ಲಿ ಒಂದೇ ರೀತಿ ಇರಲಾರದು. ಸಾರ್ವಜನಿಕ ಅಭಿಪ್ರಾಯದಿಂದ ಮಾರ್ಗದರ್ಶನ ಪಡೆಯುವ ಸರ್ಕಾರ ವ್ಯತಿರಿಕ್ತ ಕಾರ್ಯನೀತಿಗಳನ್ನು ಅನುಸರಿಸುವ ಸಾಧ್ಯತೆಯುಂಟು. ಪರಸ್ಪರ ವಿರುದ್ಧವಾದ ಉದ್ದೇಶಗಳ ವಿಷಯದಲ್ಲಿ ಯುಕ್ತಸಾಮರಸ್ಯವನ್ನು ತಂದುಕೊಂಡು ಆಡಳಿತ ವಹಿಸುವುದೇ ಸರ್ಕಾರಕ್ಕಿರುವ ಉತ್ತಮ ಮಾರ್ಗ. ಈ ಪ್ರಕ್ರಿಯೆಯಲ್ಲಿ ಪ್ರಾತಿನಿಧ್ಯ ಪದ್ಧತಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಪ್ರಾತಿನಿಧ್ಯ ಪದ್ಧತಿಯನ್ನು ಪರಿಗಣಿಸದೆ ಯಾವ ರೂಪದಲ್ಲೇ ಆಗಲಿ ಜವಾಬ್ದಾರಿ ಸರ್ಕಾರವನ್ನು ರೂಢಿಗೆ ತರಲು ಸಾಧ್ಯವಿಲ್ಲ. ಎ.ಎಚ್. ಬರ್ಚ್ ಹೇಳುವಂತೆ, ಪ್ರಜೆಗಳ ಬೇಡಿಕೆಗಳು ಪ್ರಾತಿನಿಧ್ಯ ಪದ್ಧತಿಯ ಮೂಲಕ ವ್ಯಕ್ತವಾಗಿ, ಚರ್ಚೆಯಲ್ಲಿ ಒಂದಿಷ್ಟು ಬದಲಾವಣೆಗೊಂಡು ಸರ್ಕಾರದ ಪರಿಶೀಲನೆಗೆ ಬರುತ್ತವೆ. ರಾಜಕೀಯ ಪಕ್ಷಗಳು ಚರ್ಚಾಸ್ಪದ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಗ್ರಹಿಸಿ ಅವನ್ನು ಆಯ್ಕೆಮಾಡಿಕೊಳ್ಳಬಹುದಾದ ಹಲವಾರು ಕಾರ್ಯನೀತಿಗಳ ರೂಪಕ್ಕೆ ಇಳಿಸುತ್ತವೆ. ರಾಜಕೀಯ ಮುಖಂಡರು ಪಕ್ಷ ಸಭೆಗಳ ಮತ್ತು ಚುನಾವಣಾ ಪ್ರಚಾರ ಸಭೆಗಳ ಮೂಲಕ ತಮ್ಮ ಕಾರ್ಯಕ್ರಮಗಳಿಗೆ ಜನರ ಬೆಂಬಲ ಪಡೆದುಕೊಳ್ಳುತ್ತಾರೆ.

ಕರ್ನಾಟಕದಲ್ಲಿ

ಈಗ ಕರ್ನಾಟಕಾಂತರ್ಗತವಾಗಿರುವ ಹಳೆಯ ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆಯ ರೂಪದಲ್ಲಿ ಜವಾಬ್ದಾರಿ ಸರ್ಕಾರದ ಬೀಜವನ್ನು ಬಿತ್ತಿದವರು ದಿವಾನ್ ರಂಗಾಚಾರ್ಲು(1881). 1800ರಿಂದಲೂ ಮೈಸೂರು ಸಂಸ್ಥಾನದಲ್ಲಿ ಒಳಾಡಳಿತದಲ್ಲಿ ಪ್ರಜೆಗಳಿಗೆ ಅವಕಾಶವಿರಲಿಲ್ಲ. 1807ರಲ್ಲಿ ಮೊದಲ ಬಾರಿಗೆ ನ್ಯಾಯವಿಧಾಯಕ ಸಭೆ ರಚಿತವಾಯಿತು. ಅದಕ್ಕೆ ಶಾಸನ ರಚನೆಯ ಅಧಿಕಾರವಿತ್ತು. ಅದು ದಿವಾನ್, ಸಚಿವರು ಹಾಗೂ ಸರ್ಕಾರದಿಂದ ನೇಮಕಗೊಂಡ 15 ಮಂದಿ ಸದಸ್ಯರಿಂದ ಕೂಡಿತ್ತು. ಪ್ರಜಾಪ್ರತಿನಿಧಿ ಸಭೆ 1881ರಲ್ಲಿ ಸ್ಥಾಪಿತವಾದ ಮೇಲೆ, 50ರೂ.ಗಳಿಂದ 500 ರೂ.ಗಳ ವಾರ್ಷಿಕ ಕಂದಾಯ ಸಲ್ಲಿಸುವವರು ಆ ಸಭೆಗೆ ನಾಮನಿರ್ದೇಶನಗೊಳ್ಳಬಹುದಾಗಿತ್ತು. ಸದಸ್ಯರ ನಾಮನಿರ್ದೇಶನಕ್ಕೆ ಬದಲಾಗಿ ಅವರು ಜನರಿಂದ ಚುನಾಯಿತರಾಗಬೇಕೆಂಬ ಒತ್ತಾಯ 1889ರಲ್ಲಿ ರಂಗ ದಾಸಪ್ಪನವರಿಂದ ಬಂತು. 1890ರಲ್ಲಿ ದಿವಾನ್ ಕೆ. ಶೇಷಾದ್ರಿ ಐಯರ್ ಅದನ್ನು ಒಪ್ಪಿದರು. ಆಗಿನ ಪ್ರಜಾಪ್ರತಿನಿಧಿ ಸಭೆ ಕೇವಲ ಸಮಾಲೋಚಕ ಸಭೆಯಾಗಿತ್ತೇ ಹೊರತು ಆಡಳಿತದ ಮೇಲೆ ಅದಕ್ಕೆ ನಿಯಂತ್ರಣಾಧಿಕಾರವಿರಲಿಲ್ಲ. ಶಾಸನ ರಚನೆಯ ಬಗ್ಗೆ ನಿರ್ಣಯ ಕೈಗೊಳ್ಳಲು ಸಹ ಅದಕ್ಕೆ ಅಧಿಕಾರವಿರಲಿಲ್ಲ. ದಿವಾನ್ ವಿಶ್ವೇಶ್ವರಯ್ಯನವರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಿಗೆ ಆಯವ್ಯಯ ಪತ್ರದ ಮೇಲೆ ಚರ್ಚೆಮಾಡುವ ಜವಾಬ್ದಾರಿಯನ್ನು ನೀಡಲಾಯಿತು (1911). ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯವಿಧಾಯಕ ಸಭೆಗಳಲ್ಲಿ ಪ್ರಶ್ನೆ ಕೇಳುವ ಅಧಿಕಾರ ಸದಸ್ಯರಿಗೆ ಇತ್ತು. ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯಾಗಬೇಕೆಂಬ ಕೇಳಿಕೆ 1919ರ ಹೊತ್ತಿಗೆ ಹೆಚ್ಚಾಯಿತು. 1921ರಲ್ಲಿ ದಿವಾನ್ ಮತ್ತು ಇತರ ಸಚಿವರಿಂದ ಕೂಡಿದ, ಮಹಾರಾಜರಿಗೆ ಜವಾಬ್ದಾರವಾದ ಪರಿಷತ್ತಿನ ರಚನೆಯಾಯಿತು. ಪ್ರಜಾಪ್ರತಿನಿಧಿ ಮತ್ತು ನ್ಯಾಯವಿಧಾಯಕ ಸಭೆಗಳ ಸ್ಥಾನಮಾನಗಳು ಹೆಚ್ಚಿದವು. ಈ ವೇಳೆಗೆ ಕಾಂಗ್ರೆಸ್ ಹೂಡಿದ ಸ್ವಾತಂತ್ರ್ಯ ಹೋರಾಟ ಭಾರತದ ದೇಶೀಯ ಸಂಸ್ಥಾನಗಳಿಗೂ ವ್ಯಾಪಿಸಿತು. 1935ರ ಭಾರತ ಸರ್ಕಾರದ ಅಧಿನಿಯಮದ ಪ್ರಕಾರ ಬ್ರಿಟಿಷ್ ಪ್ರಾಂತ್ಯಗಳಲ್ಲಿ ಪ್ರಜಾಪ್ರತಿನಿಧಿಗಳಿಂದ ಕೂಡಿದ ವಿಧಾನಸಭೆಗಳು ರಚಿತವಾದಾಗ, ದೇಶೀಯ ಸಂಸ್ಥಾನಗಳಲ್ಲೂ ಪ್ರಜೆಗಳಿಗೆ ಆ ಬಗೆಯ ಅಧಿಕಾರ ಲಭಿಸಬೇಕೆಂಬ ಒತ್ತಡ ಹೆಚ್ಚಿತು. 1937ರಲ್ಲಿ ಪಟ್ಟಾಭಿ ಸೀತಾರಾಮಯ್ಯ ಮತ್ತು ಬಲವಂತರಾಯ ಮೆಹತಾ ಇವರು ಮೈಸೂರು ಸಂಸ್ಥಾನದ ನಾನಾ ಭಾಗಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ, ಮೈಸೂರು ಸಂಸ್ಥಾನದಲ್ಲಿ ಜನಪ್ರ್ರಿಯ ಸರ್ಕಾರ ಸ್ಥಾಪಿತವಾಗಬೇಕೆಂದು ಅಭಿಪ್ರಾಯಪಟ್ಟರು.

ಮೈಸೂರಿನ ಜವಾಬ್ದಾರಿ ಸರ್ಕಾರ ಸ್ಥಾಪನೆಯ ಇತಿಹಾಸ ಕಾಂಗ್ರೆಸ್ ಇತಿಹಾಸದೊಂದಿಗೆ ಹಾಸುಹೊಕ್ಕಾಗಿದೆ. ಬ್ರಿಟಿಷರು ಭಾರತದ ಆಡಳಿತದ ಜವಾಬ್ದಾರಿಯನ್ನು ಭಾರತೀಯರಿಗೆ ವರ್ಗಾಯಿಸಿದ ಮೇಲೆ 1947ರ ಅಕ್ಟೋಬರ್ 24ರಂದು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯಾಗಿ ಹೊಸ ಮಂತ್ರಿಮಂಡಲ ರಚನೆಯಾಯಿತು. 1950ರ ಭಾರತ ಸಂವಿಧಾನದ ಪ್ರಕಾರ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲೂ ಕೇಂದ್ರದಲ್ಲೂ ವಿಧಾನ ಮಂಡಲ ಅಥವಾ ಸಂಸತ್ತಿಗೆ ಹೊಣೆಯಾದ ಸಂಪುಟ ಸರ್ಕಾರಗಳು ಆಡಳಿತ ನಿರ್ವಹಿಸುತ್ತಿವೆ. ಇವು ಜವಾಬ್ದಾರಿ ಸರ್ಕಾರಗಳು.

ಭಾರತದಲ್ಲಿ

ಭಾರತದ ಸ್ವಾತಂತ್ರ ಹೋರಾಟದ ಪ್ರಾರಂಭದಲ್ಲಿ ಬ್ರಿಟಿಷ್ ವಸಾಹತುಗಳಲ್ಲಿದ್ದ ಮಾದರಿಯ ಸ್ವಯಮಾಡಳಿತವನ್ನು ಸ್ಥಾಪಿಸುವುದೇ ತಮ್ಮ ಗುರಿಯೆಂದು 1906ರ ಕಾಂಗ್ರೆಸ್ ಅಧಿವೇಶನದಲ್ಲಿ ಮುಖಂಡರು ಸಾರಿದರು. ಕಾಂಗ್ರೆಸ್ಸಿನ ಅಧ್ಯಕ್ಷರು ಆಗ ಈ ಸ್ವಯಮಾಡಳಿತವನ್ನು ಸ್ವರಾಜ್ಯ ಎಂದು ಕರೆದರು. 1909ರ ಮಾರ್ಲೆ-ಮಿಂಟೊ ರಾಜಕೀಯ ಸುಧಾರಣೆಗಳಿಂದಾಗಿ ಭಾರತದಲ್ಲಿ ಪ್ರಾತಿನಿಧ್ಯ ಸರ್ಕಾರಕ್ಕೆ ಅವಕಾಶವಾಯಿತು. ಆದರೆ ಸಂಸದೀಯ ಸರ್ಕಾರವನ್ನು ಭಾರತಕ್ಕೆ ನೀಡಲಿಲ್ಲ. ಭಾರತದ ಆಡಳಿತದ ಪ್ರತಿಯೊಂದು ಶಾಖೆಯಲ್ಲೂ ಭಾರತೀಯರಿಗೆ ಪ್ರಾತಿನಿಧ್ಯ ನೀಡಿ, ಸ್ವಯಮಾಡಳಿತ ಸರ್ಕಾರಕ್ಕೆ ಉತ್ತೇಜನಕೊಟ್ಟು, ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿರುವಂತೆ ಜವಾಬ್ದಾರಿ ಸರ್ಕಾರವನ್ನು ಅವರಿಗೆ ಕಾಲಕ್ರಮದಲ್ಲಿ ನೀಡುವುದು ಬ್ರಿಟಿಷ್ ಸರ್ಕಾರದ ಉದ್ದೇಶವೆಂದು 1917ರ ಆಗಸ್ಟ್ 20ರಂದು ಇಂಗ್ಲೆಂಡಿನ ಭಾರತ ಕಾರ್ಯದರ್ಶಿ ಎಡ್ವಿನ್ ಮಾಂಟೆಗ್ಯೂ ಸಾರಿದ. ಆ ತರುವಾಯ ಮಾಂಟೆಗ್ಯೂ-ಚೆಮ್ಸ್‍ಫರ್ಡ್ ವರದಿ 1919ರ ಭಾರತ ಸರ್ಕಾರದ ಅಧಿನಿಯಮಕ್ಕೆ ಆಧಾರವಾಯಿತು. ಈ ಅಧಿನಿಯಮದ ಪ್ರಕಾರ ಶಾಸಕಾಂಗದಲ್ಲಿ ಗವರ್ನರ್-ಜನರಲನಿಗೆ ಪರಮಾಧಿಕಾರ. ಪ್ರಜಾಪ್ರತಿನಿಧಿಗಳಿಗೆ ಆಡಳಿತದ ಪರಿಮಿತ ಕ್ಷೇತ್ರಗಳಲ್ಲಿ ಮಾತ್ರ ಜವಾಬ್ದಾರಿ ಸರ್ಕಾರದ ಲಕ್ಷಣಗಳಿದ್ದ ಅಧಿಕಾರಗಳಿದ್ದವು. 1930ರಮೇ ತಿಂಗಳಲ್ಲಿ ಪ್ರಕಟವಾದ ಸೈಮನ್ ಆಯೋಗದ ವರದಿ ಭಾರತದ ಪ್ರಾಂತ್ಯಗಳಿಗೆ ಜವಾಬ್ದಾರಿ ಸರ್ಕಾರ ನೀಡಿತು. ಪೋಲೀಸ್ ಮತ್ತು ನ್ಯಾಯಾಡಳಿತದಂಥ ಮುಖ್ಯ ಇಲಾಖೆಗಳನ್ನು ಸಹ ಶಾಸಕಾಂಗಕ್ಕೆ ಜವಾಬ್ದಾರಿ ಹೊತ್ತ ಮಂತ್ರಿಗಳಿಗೆ ವರ್ಗಾಯಿಸಲಾಯಿತು. ಆದರೆ ಕೇಂದ್ರದಲ್ಲಿ ಪೂರ್ಣ ಬ್ರಿಟಿಷ್ ಅಧಿಕಾರ ಮತ್ತು ನಿಯಂತ್ರಣಗಳು ಇದ್ದೇ ಇದ್ದುವು. ಆದ್ದರಿಂದ ಕಾಂಗ್ರೆಸ್ ಅದನ್ನು ನಿರಾಕರಿಸಿತು. 1930-31ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದ ಫಲವಾಗಿ 1935ರ ಭಾರತ ಸರ್ಕಾರ ಅಧಿನಿಯಮ ಜಾರಿಗೆ ಬಂತು. ಈ ಅಧಿನಿಯಮದ ಪ್ರಕಾರ ಭಾರತದ ಪ್ರಾಂತ್ಯಗಳಲ್ಲಿ ಸ್ವಯಮಾಡಳಿತ ಏರ್ಪಟ್ಟು 1937ರ ಜುಲೈ ಹೊತ್ತಿಗೆ ಕಾಂಗ್ರೆಸ್ ಮಂತ್ರಿಮಂಡಲಗಳು ರಚಿತವಾದುವು. ಎರಡನೆಯ ಮಹಾಯುದ್ಧದ ಅನಂತರ 1945ರಲ್ಲಿ ಲಾರ್ಡ್ ವೇವೆಲ್ ಭಾರತಕ್ಕೆ ಸ್ವರಾಜ್ಯ ನೀಡುವ ಬ್ರಿಟಿಷ್ ಸರ್ಕಾರದ ಅಪೇಕ್ಷೆಯನ್ನು ಪ್ರಕಟಿಸಿದರು. 1947ರಲ್ಲಿ ಜವಾಬ್ದಾರರಾದ ಭಾರತೀಯರಿಗೆ ಇಡೀ ದೇಶದ ಆಡಳಿತವನ್ನು ವರ್ಗಾಯಿಸುವ ಘೋಷಣೆಯಾಯಿತು.

ಜಾಗತಿಕ ಇತಿಹಾಸದಲ್ಲಿ

ಉತ್ತರ ಮತ್ತು ದಕ್ಷಿಣ ಕೆನಡದಲ್ಲಿ ಬ್ರಿಟಿಷ್ ವಸಾಹತುಗಳಲ್ಲಿ (ಈಗಿನ ಆಂಟೀರಿಯೊ ಮತ್ತು ಕ್ವಿಬೆಕ್ ಪ್ರಾಂತ್ಯಗಳು) 1837ರಲ್ಲಿ ದಂಗೆಗಳಾದಾಗ, ವಸಾಹತುಗಳ ಪರಿಸ್ಥಿತಿಯನ್ನು ಪರೀಕ್ಷಿಸಿ ಅವುಗಳಿಗೆ ಯಾವ ಮಾದರಿಯ ಸರ್ಕಾರ ಇರಬೇಕೆಂಬ ಬಗ್ಗೆ ವರದಿ ನೀಡಬೇಕೆಂದು ಬ್ರಿಟಿಷ್ ಸರ್ಕಾರ ಉತ್ತರ ಅಮೆರಿಕದ ವಸಾಹತುಗಳ ಗವರ್ನರ್-ಜನರಲ್ ಆಗಿದ್ದ ಲಾರ್ಡ್ ಡರ್ಹಾಮನನ್ನು ನೇಮಿಸಿತು. ಅವನು 1839ರಲ್ಲಿ ಒಂದು ವರದಿ ಒಪ್ಪಿಸಿ, ಆ ಪ್ರದೇಶದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸಬೇಕೆಂದು ಸಲಹೆ ಮಾಡಿದ. ಉತ್ತರ ಮತ್ತು ದಕ್ಷಿಣ ಕೆನಡ ಪ್ರಾಂತ್ಯಗಳು ಮತ್ತು ಇತರ ಪ್ರದೇಶಗಳಿಗೆ ಜವಾಬ್ದಾರಿ ಸರ್ಕಾರದ ಮೂಲಕ ಸ್ಥಳೀಯ ವ್ಯವಹಾರಗಳ ಆಡಳಿತ ವಹಿಸಬಹುದೆಂಬುದು ಅವನ ಶಿಫಾರಸು. ಪ್ರತಿ ವಸಾಹತಿನಲ್ಲೂ ವಿಧಾನ ಮಂಡಲದ ಬಹುಮತ ಪಡೆದ ವ್ಯಕ್ತಿಗಳಿಂದ ಕೂಡಿದ ಕಾರ್ಯನಿರ್ವಾಹಕ ಪರಿಷತ್ತು ಆಡಳಿತ ನಡೆಸಬೇಕೆಂದೂ ಅವರು ವಿಧಾನಮಂಡಲದ ವಿಶ್ವಾಸವನ್ನು ಕಳೆದುಕೊಂಡಾಗ ರಾಜೀನಾಮೆ ನೀಡಬೇಕೆಂದೂ ಅವನು ಸೂಚಿಸಿದ. ಇಂಗ್ಲೆಂಡಿನಲ್ಲಿದ್ದಂತೆ ಅಲ್ಲೂ ಹೊಣೆಗಾರ ಸಂಪುಟ ವ್ಯವಸ್ಥೆ ಏರ್ಪಡಿಸಬೇಕೆಂಬುದು ಅವನ ಅಭಿಪ್ರಾಯ. ವಸಾಹತಿನ ರಾಜ್ಯಪಾಲ ಎಲ್ಲ ಸ್ಥಳೀಯ ವಿಚಾರಗಳಲ್ಲೂ ಕಾರ್ಯನಿರ್ವಾಹಕ ಪರಿಷತ್ತಿನ ಸಲಹೆಯನ್ನು ಅನುಸರಿಸಬೇಕೆಂದೂ ಹೇಳಿದ.

ಜವಾಬ್ದಾರಿ ಸರ್ಕಾರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಜವಾಬ್ದಾರಿ ಸರ್ಕಾರ ಅರ್ಥಜವಾಬ್ದಾರಿ ಸರ್ಕಾರ ಕರ್ನಾಟಕದಲ್ಲಿಜವಾಬ್ದಾರಿ ಸರ್ಕಾರ ಭಾರತದಲ್ಲಿಜವಾಬ್ದಾರಿ ಸರ್ಕಾರ ಜಾಗತಿಕ ಇತಿಹಾಸದಲ್ಲಿಜವಾಬ್ದಾರಿ ಸರ್ಕಾರ

🔥 Trending searches on Wiki ಕನ್ನಡ:

ನಗರೀಕರಣಶ್ರೀ ಸಿದ್ಧಲಿಂಗೇಶ್ವರನವೋದಯಪಾಲಕ್ಜೈನ ಧರ್ಮದಶಾವತಾರಯುವರತ್ನ (ಚಲನಚಿತ್ರ)ನಿರಂಜನಶಾಲೆಭಾರತೀಯ ಧರ್ಮಗಳುಚಾವಣಿಮೆಂತೆದಿಯಾ (ಚಲನಚಿತ್ರ)ಕನ್ನಡ ಗಣಕ ಪರಿಷತ್ತುಗಿಡಮೂಲಿಕೆಗಳ ಔಷಧಿಬೆಳಕುಕನ್ನಡದ ಉಪಭಾಷೆಗಳುಬಾಲ್ಯ ವಿವಾಹಜಾತ್ರೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಶಬ್ದಷಟ್ಪದಿಚಾಲುಕ್ಯಬೌದ್ಧ ಧರ್ಮಜಿ.ಎಸ್.ಶಿವರುದ್ರಪ್ಪಪುನೀತ್ ರಾಜ್‍ಕುಮಾರ್ಪ್ರಬಂಧವಿಕ್ರಮಾರ್ಜುನ ವಿಜಯದಲಿತಮಂಜುಳಬಾಬರ್ಬಿ. ಆರ್. ಅಂಬೇಡ್ಕರ್ಶ್ಯೆಕ್ಷಣಿಕ ತಂತ್ರಜ್ಞಾನರಮ್ಯಾಹನುಮ ಜಯಂತಿಗೋವಿಂದ ಪೈಕನ್ನಡ ಚಿತ್ರರಂಗಕೊಪ್ಪಳಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಡಿ.ವಿ.ಗುಂಡಪ್ಪಹವಾಮಾನಮಧ್ವಾಚಾರ್ಯಮದುವೆಭೂಕಂಪಪೊನ್ನಫಿರೋಝ್ ಗಾಂಧಿಯೂಟ್ಯೂಬ್‌ಅಳಿಲುವಾರ್ಧಕ ಷಟ್ಪದಿಮಾಸಜಯಮಾಲಾರಾಷ್ಟ್ರಕೂಟಜಯಚಾಮರಾಜ ಒಡೆಯರ್ಕರ್ನಾಟಕದ ಹಬ್ಬಗಳುಮತದಾನಹರಕೆನರೇಂದ್ರ ಮೋದಿಭಾರತೀಯ ಸಮರ ಕಲೆಗಳುಶಿವಮೊಗ್ಗದೇವತಾರ್ಚನ ವಿಧಿಲೋಕಸಭೆಭತ್ತಹೈನುಗಾರಿಕೆಕರ್ಣಾಟ ಭಾರತ ಕಥಾಮಂಜರಿಕೃಷ್ಣಾ ನದಿಕರ್ನಾಟಕ ಲೋಕಸೇವಾ ಆಯೋಗಜ್ಯೋತಿಷ ಶಾಸ್ತ್ರಗೋಪಾಲಕೃಷ್ಣ ಅಡಿಗಬಿಜು ಜನತಾ ದಳಬಿ.ಎಫ್. ಸ್ಕಿನ್ನರ್ರಂಗಭೂಮಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಸಾರಾ ಅಬೂಬಕ್ಕರ್ಜುಂಜಪ್ಪಕನ್ನಡ ಕಾವ್ಯರೈತ🡆 More