ಮಾವು: ಒಂದು ಹಣ್ಣು

ಮಾವು ಉತ್ತರ ಆಮ್ರಾ(ಮ್ಯಾಂಗಿಫೆರ ಇಂಡಿಕ) ಉಷ್ಣವಲಯದಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಕಂಡು ಬರುವ ಮರ.

ಇದರ ದಾರುವಿಗಿಂತ ಹಣ್ಣೇ ಪ್ರಸಿದ್ಧ. ಇದರ '೩೦'ಕ್ಕಿಂತಲೂ ಹೆಚ್ಚು ತಳಿಗಳು ಪ್ರಚಲಿತವಿದೆ. ಇದು ಸುಮಾರು ೪೦೦೦ ವರ್ಷಗಳಿಂದಲೂ ಭಾರತದ ವ್ಯವಸಾಯದಲ್ಲಿದ್ದು, ಸುಮಾರು ೧೭ ಮತ್ತು ೧೮ನೇ ಶತಮಾನದಲ್ಲಿ ಯುರೋಪ್‍ನ ಪ್ರವಾಸಿಗರು ಇದನ್ನು ಪಶ್ಚಿಮದ ಉಷ್ಣವಲಯ ದೇಶಗಳಲ್ಲಿ ಪ್ರಸರಿಸಿದರು.

ಮಾವು: ಸಸ್ಯಶಾಸ್ತ್ರೀಯ ವರ್ಗೀಕರಣ, ಇತಿಹಾಸ, ವ್ಯಾಪ್ತಿ
ಮಾವಿನ ಹಣ್ಣು
ಮಾವು: ಸಸ್ಯಶಾಸ್ತ್ರೀಯ ವರ್ಗೀಕರಣ, ಇತಿಹಾಸ, ವ್ಯಾಪ್ತಿ
A mango tree in full bloom in Kerala, India

ಸಸ್ಯಶಾಸ್ತ್ರೀಯ ವರ್ಗೀಕರಣ

ಮಾವು ಗೋಡಂಬಿ, ಕರಿಗೇರು, ಅಮಟೆ ಮುಂತಾದ ಉಪಯುಕ್ತ ಸಸ್ಯಗಳನ್ನು ಒಳಗೊಂಡಿರುವ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ್ದು, ಇದರ ಸಸ್ಯಕುಲ ಮ್ಯಾಂಗಿಫೆರಾ ಆಗಿರುತ್ತದೆ. ಭಾರತದಲ್ಲಿ ವ್ಯಾಪಕವಾಗಿರುವ ತಳಿಯ ಸಸ್ಯನಾಮ ಮ್ಯಾಂಗಿಫೆರ ಇಂಡಿಕ ಆಗಿದೆ.

ಇತಿಹಾಸ

ಸುಮಾರು 4000 ವರ್ಷಗಳಿಂದಲೂ ಭಾರತದಲ್ಲಿ ಮಾವಿನ ಬೇಸಾಯ ಇದೆ ಎನ್ನಲಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮಾವು ಅಸ್ಸಾಮ್-ಬರ್ಮ-ಥಾಯ್ಲೆಂಡ್ ವಲಯದಲ್ಲಿ ಉಗಮಿಸಿತು. ಈ ದೇಶಗಳ ಕಾಡುಗಳಲ್ಲಿ ಇಂದು ಜನಪ್ರಿಯವಾಗಿರುವ ಇಂಡಿಕ ಪ್ರಭೇದದ ಹಾಗೂ ಸಿಲ್ವೇಟಿಕ ಪ್ರಭೇದದ ಕಾಡು ಪ್ರರೂಪಗಳು ಕಾಣದೊರೆಯುತ್ತಿದ್ದು ಮಾವು ಇವೆರಡು ಪ್ರಭೇದಗಳ ನಡುವೆ ಸಂಭವಿಸಿತೆನ್ನಲಾದ ಸಹಜ ಸಂಕರದಿಂದ ಹುಟ್ಟಿದ್ದು ಎಂಬ ಅಭಿಪ್ರಾಯ ಇದೆ.

ವ್ಯಾಪ್ತಿ

ಭಾರತಾದ್ಯಂತ, ಉಷ್ಣ ಹಾಗೂ ಉಪೋಷ್ಣ ವಲಯ ಬೆಟ್ಟಗಳ ಕಾಡುಗಳಲ್ಲಿ ಪ್ರಧಾನವಾಗಿ ಹಳ್ಳ ತೊರೆಗಳ ಸನಿಹದಲ್ಲಿ ಮಾವು ಕಾಡುಮರವಾಗಿ ಕಾಣದೊರೆಯುತ್ತದೆ. ಹಿಮಾಲಯ ಪರ್ವತ ಶ್ರೇಣಿಯ ತಪ್ಪಲು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳು, ಮಧ್ಯಪ್ರದೇಶ, ಬಿಹಾರ, ಒರಿಸ್ಸ, ಅಸ್ಸಾಮ್ ಮತ್ತು ಅಂಡಮಾನ್ ದ್ವೀಪಗಳ ಕಾಡುಗಳಲ್ಲೂ ಇದು ಸಾಮಾನ್ಯ. ಅಲ್ಲದೆ ಮಾವಿನ ಮರವನ್ನು ತೋಪುಗಳಲ್ಲೂ ಮನೆಯ ಹಿತ್ತಲಿನಲ್ಲೂ ಕೃಷಿ ಜಮೀನಿನ ಅಂಚುಗಳಲ್ಲೂ ರಸ್ತೆಯ ಬದಿಗಳಲ್ಲೂ ಬೆಳೆಸುವುದೂ ಇದೆ.

ಹಣ್ಣು ಕೊಡುವ ಸಸ್ಯಗಳ ಬೇಸಾಯದ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ 60ರಷ್ಟು ಭಾಗ ಮಾವಿನ ಕೃಷಿಗೆ ವಿನಿಯೋಗವಾಗಿದೆ. (ಒಟ್ಟು 2 ದಶಲಕ್ಷ ಎಕರೆ) ಇವುಗಳ ಪೈಕಿ ಉತ್ತರ ಪ್ರದೇಶ ಮೊದಲನೆಯದು (767,690 ಎಕರೆ). ಎರಡನೆಯ ಸ್ಥಾನ ಬಿಹಾರ ರಾಜ್ಯದ್ದು (217,517 ಎಕರೆ). ಮಾವಿನ ತೋಟಗಾರಿಕೆಗೆ ಹೆಸರಾಂತ ಉಳಿದ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಒರಿಸ್ಸ. ಕರ್ನಾಟಕವೂ ಸಾಕಷ್ಟು ಪ್ರಸಿದ್ಧವಾಗಿದೆ.

ಪ್ರಪಂಚದ ಇನ್ನಿತರ ದೇಶಗಳಲ್ಲೂ ಮಾವಿನ ಬೇಸಾಯ ಉಂಟು. ದಕ್ಷಿಣ ಚೀನ, ಮಲಯ, ಫಿಲಿಪೀನ್ಸ್, ಹವಾಯಿ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯದ ಉಷ್ಣಪ್ರದೇಶಗಳು, ಮಡಗಾಸ್ಕರ್, ಆಫ್ರಿಕದ ಕರಾವಳಿ, ಉತ್ತರ ಅಮೆರಿಕದ ಫ್ಲಾರಿಡ ಮತ್ತು ಕ್ಯಾಲಿಫೋರ್ನಿಯ ರಾಜ್ಯಗಳಲ್ಲಿ ಮಾವನ್ನು ಕೃಷಿ ಮಾಡಲಾಗುತ್ತಿದೆ.

ಸಸ್ಯ/ಗುಣ/ಲಕ್ಷಣಗಳು

ಮಾವು: ಸಸ್ಯಶಾಸ್ತ್ರೀಯ ವರ್ಗೀಕರಣ, ಇತಿಹಾಸ, ವ್ಯಾಪ್ತಿ 
ಮಾವಿನ ಹೂವು
ಮಾವು: ಸಸ್ಯಶಾಸ್ತ್ರೀಯ ವರ್ಗೀಕರಣ, ಇತಿಹಾಸ, ವ್ಯಾಪ್ತಿ 
ಮಾವಿನ ಮರದ ತೊಗಟೆ

ಮಾವು 10-45 ಮೀ ಎತ್ತರಕ್ಕೆ ಬೆಳೆಯುವ ದೊಡ್ಡ ಗಾತ್ರದ ನಿತ್ಯಹರಿದ್ವರ್ಣ ಮರ. ಸಾಮಾನ್ಯವಾಗಿ ನೇರವಾಗಿ ದೃಢವಾಗಿ ಬೆಳೆಯುವಂಥ ಪ್ರಧಾನ ಕಾಂಡ, ಗುಮ್ಮಟದಾಕಾರದ ಚೆಲುವಾದ ಹಂದರ ಇದರ ಮುಖ್ಯ ಲಕ್ಷಣಗಳು. ಕಾಂಡ ಒರಟಾದ, ಮಂದವಾದ, ಕಡುಬೂದಿ ಬಣ್ಣದ ತೊಗಟೆಯಿಂದ ಆವೃತವಾಗಿದೆ. ಹಚ್ಚ ಹಸಿರಿನ ದಟ್ಟವಾದ ಎಲೆಗಳು ಇದ್ದು, ಇದು ತೇವಾಂಶವಿರುವ ಮಿಶ್ರಪರ್ಣಪಾತಿ (Mixed Deciduous) ಹಾಗೂ ಅರೆ ನಿತ್ಯಹರಿದ್ವರ್ಣ (Semi evergreen) ಕಾಡುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎಲೆಗಳು 10-30 ಸೆಂಮೀ ಉದ್ದ. 2-9 ಸೆಂಮೀ ಅಗಲ ಇರುವಂಥ ಈಟಿ ಮೊನೆಯಾಕಾರದವಾಗಿವೆ. ಇಂತಹ ಕಾಡುಗಳಲ್ಲಿ ಬೆಳೆಯುವ ಮಾವು ಎತ್ತರವಾಗಿ ಸುಮಾರು ೬೦ ಅಡಿಗಳವರೆಗೂ ಬೆಳೆಯುತ್ತದೆ. ಇದರ ದಾರುವು ಮೃದುವಾಗಿದ್ದು ಮರಗೆಲಸಕ್ಕೆ ಸುಲಭವಾಗಿರುತ್ತದೆಯಾದರೂ ಬಾಳಿಕೆಯುತವಲ್ಲ. ಇದನ್ನು ಪದರ ಹಲಗೆ (plywood) ತಯಾರಿಕೆಯಲ್ಲಿ, ಕೆಲವು ತಾತ್ಕಾಲಿಕ ಉಪಯೋಗದ ಕೆಲಸಗಳಿಗೆ ಹಲಗೆಗಳಾಗಿ ಉಪಯೋಗಿಸಬಹುದು. ಕಸಿ ಮಾಡಲ್ಪಟ್ಟ ಅನೇಕ ತಳಿಗಳು ಕೇವಲ ರುಚಿಕರ ಹಣ್ಣಿಗಾಗಿ ಬೆಳೆಸಲ್ಪಡುತ್ತವೆ.

ಎಲೆಗಳನ್ನು ಹೊಸಕಿದರೆ ವಿಶಿಷ್ಟವಾದ ವಾಸನೆ ಹೊರಬರುತ್ತದೆ. ಹೂಗಳು ಚಿಕ್ಕಗಾತ್ರದವು; ಸಹಸ್ರ ಸಂಖ್ಯೆಯಲ್ಲಿ ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೇ ಮರದಲ್ಲಿ ಗಂಡು ಮತ್ತು ದ್ವಿಲಿಂಗಿ ಹೂಗಳೆರಡೂ ಇರುವುವು. ಕಾಯಿ ಅಷ್ಟಿ ಫಲ (ಡ್ರೂಪ್) ಮಾದರಿಯದು. ಮಾವಿನ ವಿಭಿನ್ನ ಬಗೆಗಳಲ್ಲಿ ಕಾಯಿಯ ಗಾತ್ರ ಮತ್ತು ಆಕಾರಗಳು ಬೇರೆ ಬೇರೆಯಾಗಿರುವುವು. ಕಾಯಿಯ ಸಿಪ್ಪೆ ಮಂದ ಇಲ್ಲವೆ ತೆಳು ಚರ್ಮಿಲವಾಗಿದೆ. ಕಾಯಿ ಎಳೆಯದಿರುವಾಗ ಹಸುರಾಗಿದ್ದು ಬಲಿತು ಮಾಗಿದಂತೆ ಹಳದಿ ಅಥವಾ ಕೆಂಪು ಬಣ್ಣವನ್ನು ತಳೆಯುತ್ತದೆ. ಸಿಪ್ಪೆಯಲ್ಲಿ ಗ್ರಂಥಿಗಳುಂಟು. ತಿರುಳು ತಿಳಿಹಳದಿ, ಹಳದಿ, ಕಿತ್ತಳೆ ಮುಂತಾದ ವಿಭಿನ್ನ ವರ್ಣದ್ದಾಗಿದ್ದು ಗಟ್ಟಿಯಾಗಿರಬಹುದು ಅಥವಾ ಮೃದು ಹಾಗೂ ರಸಭರಿತವಾಗಿರಬಹುದು. ಕೆಲವು ಬಗೆಗಳಲ್ಲಿ ಇದಕ್ಕೆ ಹುಳಿ ರುಚಿಯಿದ್ದರೆ ಇನ್ನು ಕೆಲವಲ್ಲಿ ಸಿಹಿಯಾಗಿ ಮಾಧುರ್ಯದಿಂದ ಕೂಡಿರುತ್ತದೆ. ಅಂತೆಯೇ ಕೆಲವು ತೆರನ ಮಾವುಗಳು ನಾರು ನಾರಾಗಿರುವುದೂ ಉಂಟು. ಒಳಗೆ ಒಂದೇ ಒಂದು ಅಂಡಾಕಾರದ ಬೀಜ ಇದೆ. ಇದರ ಸುತ್ತ ಪೆಡಸಾದ, ನಾರಿನಿಂದ ರಚಿತವಾದ ಕವಚ ಉಂಟು; ಇದೇ ಓಟೆ.

ಬೇಸಾಯ

ಮಾವು ಪ್ರಧಾನವಾಗಿ ಉಷ್ಣವಲಯದ ಬೆಳೆ. 80oF ಸರಾಸರಿ ಉಷ್ಣತೆ ಇರುವಂಥ ಹಾಗೂ ವರ್ಷದಲ್ಲಿ ಜೂನ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಮಾತ್ರ ಸು. 75-250 ಸೆಂಮೀ ಮಳೆ ಬೀಳುವಂಥ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೂ ಅರಳುವ ಸಮಯದಲ್ಲಿ ಮಳೆಗಾಳಿ, ಮಂಜು, ಮೋಡ ಮುಸುಕಿದ ವಾತಾವರಣ ಇರಬಾರದು. ಹಣ್ಣುಗಳು ಬಲಿತು ಮಾಗುವ ವೇಳೆಯಲ್ಲೂ ಮಳೆ ಬೀಳಬಾರದು. ಮಾವು ಕಡುಚಳಿಯನ್ನು ಸಹಿಸದು. ಆಳವಾದ ಮತ್ತು ನೀರು ಚೆನ್ನಾಗಿ ಬಸಿದು ಹೋಗುವಂಥ ಮಣ್ಣು ಇದರ ಬೆಳೆವಣಿಗೆಗೆ ಉತ್ತಮ, ಮೆಕ್ಕಲು ಮಣ್ಣು ಅತ್ಯುತ್ತಮ. ನೆಲ ಕ್ಷಾರೀಯವಾಗಿಯಾಗಲಿ ಶಿಲಾಮಯವಾಗಿಯಾಗಲಿ ಇರಬಾರದು.

ಮಾವನ್ನು ಬೀಜಗಳ ಮುಖಾಂತರ ಸುಲಭವಾಗಿ ಬೆಳೆಸಬಹುದಾದರೂ ಹೀಗೆ ಬೆಳೆಸಲಾರದ ಮರಗಳು ಏಕರೀತಿಯ ಗುಣಮಟ್ಟದ ಫಲ ಕೊಡುವುದು ಖಚಿತ ಅಲ್ಲವಾದ್ದರಿಂದ, ಕಸಿಮಾಡಿ ಬೆಳೆಸುವುದೇ ವಾಡಿಕೆ.

ಕಸಿಮಾಡಿದ ಮಾವಿನ ಸಸಿಗಳನ್ನು ಜುಲೈ-ಡಿಸೆಂಬರ್ ತಿಂಗಳುಗಳ ಅವಧಿಯಲ್ಲಿ ಬೇಕೆನಿಸಿದ ಕಡೆ 60-90 ಸೆಂ.ಮೀ ಆಳದ ಗುಂಡಿಗಳನ್ನು ತೋಡಿ ಕೊಟ್ಟಿಗೆ ಗೊಬ್ಬರ, ಬೂದಿ, ಮಣ್ಣು ಇವುಗಳ ಮಿಶ್ರಣವನ್ನು ಹಾಕಿ, ನೆಡಲಾಗುತ್ತದೆ. ಸಸಿಗಳ ನಡುವಣ ಅಂತರ ಅವುಗಳ ಬೆಳೆವಣಿಗೆಯ ತೀವ್ರತೆ, ಸ್ವಭಾವವನ್ನನುಸರಿಸಿ 10.5ರಿಂದ 18 ಮೀಟರಿನವರೆಗೆ ವ್ಯತ್ಯಾಸವಾಗುವುದು.

ಸಸಿ ನೆಟ್ಟ ಮೊದಲ 3-4 ವರ್ಷಗಳ ಕಾಲ ಗಿಡಗಳಿಗೆ ನೀರು ಹಾಯಿಸುವುದು ಕ್ರಮ. ಅನಂತರ ಮಳೆ ಸರಿಯಾಗಿದ್ದರೆ ನೀರು ಹಾಕುವುದು ಅನಗತ್ಯ. ಅಂತೆಯೇ ಗಿಡಗಳು ಸಣ್ಣ ವಯಸ್ಸಿನವಾಗಿರುವಾಗ ಕೊಟ್ಟಿಗೆ ಗೊಬ್ಬರ, ಮೂಳೆ ಗೊಬ್ಬರ, ಬೂದಿ, ಹರಳು ಹಿಂಡಿ, ಅಮೋನಿಯಮ್ ಸಲ್ಫೇಟ್ ಮುಂತಾದವುಗಳ ಮಿಶ್ರಣವನ್ನು ಹಾಕಲಾಗುತ್ತದೆ. ಮರ ದೊಡ್ಡದಾದ ಮೇಲೆ ಗೊಬ್ಬರ ಹಾಕುವ ಕ್ರಮ ಇಲ್ಲ.

ಕಡುಚಳಿಯಿಂದಲೂ ಬೇಸಗೆಯಲ್ಲಿ ಬಿಸಿಗಾಳಿಯಿಂದಲೂ ಮರಗಳಿಗೆ ಹಾನಿಯುಂಟಾಗುವುದರಿಂದ ಇದನ್ನು ತಡೆಯಲು ಮಾವಿನತೋಟದ ಸುತ್ತ ಹಿಪ್ಪು ನೇರಳೆ, ಬಿರಡಿ, ಗಾಳಿಮರ, ಹಾಲವಾಣ, ರಕ್ತಚಂದನ ಮುಂತಾದ ಮರಗಳನ್ನು ಬೆಳೆಸುವುದಿದೆ.

ಮಾವಿನಮರ ವರ್ಷಕ್ಕೊಮ್ಮೆ, ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಹೂಬಿಡುತ್ತದೆ. ಚಳಿ ಹೆಚ್ಚಾಗಿರುವಂಥ ಉತ್ತರ ಭಾರತದಲ್ಲಿ ಹೂ ಅರಳುವ ಶ್ರಾಯ ಫೆಬ್ರುವರಿ-ಮಾರ್ಚ್. ಸುಮಾರು 6-8 ವಾರ ಮರದಲ್ಲಿ ಹೂ ಅರಳಿರುವುವು. ಕಾಯಿ ಕಚ್ಚಿ, ಹಣ್ಣು ಪಕ್ವಸ್ಥಿತಿಗೆ ಬರಲು ಸುಮಾರು 4-5 ತಿಂಗಳು ಕಾಲ ಹಿಡಿಯುವುದು.

ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಾವಿನ ಮರಗಳು ಪ್ರತಿವರ್ಷ ಹೂ ಬಿಡುವುವಾದರೂ ವಯಸ್ಸಾದ ಮರಗಳು ವರ್ಷ ಬಿಟ್ಟು ವರ್ಷ ಹೂ ಅರಳಿಸಿ ಫಲ ಕೊಡುವುವು. ಇದಕ್ಕೆ ಕಾರಣ ಹಲವಾರು : ಹವೆ, ನೆಲದಲ್ಲಿಯ ಆರ್ದ್ರತೆ, ರೋಗರುಜಿನಗಳು ಇತ್ಯಾದಿ. ಹೂಗೊಂಚಲಿನ ಎಲ್ಲ ಹೂಗಳೂ ಕಾಯಿಕಚ್ಚವು. ಕಾಯಿಯಾಗುವ ಹೂಗಳ ಸಂಖ್ಯೆ ವಿವಿಧ ಬಗೆಗಳಲ್ಲಿ ಬೇರೆ ಬೇರೆಯಾಗಿವೆ.

ಮಾವಿನಮರಕ್ಕೆ ಹಲವಾರು ರೀತಿಯ ರೋಗಗಳು, ಕೀಟ ಪಿಡುಗುಗಳು ಹಾನಿ ಎಸಗುವುದುಂಟು. ಬೂಷ್ಟು ರೋಗಗಳ ಪೈಕಿ ಪೌಡರಿ ಮಿಲ್‌ಡ್ಯೂ, ಆಂತ್ರಕ್ನೋಸ್ ಮತ್ತು ಹೂಮಂಜರಿಯ ಕುಚ್ಚುಗಟ್ಟುವಿಕೆ ಮುಖ್ಯವೆನಿಸಿವೆ. ಮೊದಲ ರೀತಿಯ ರೋಗ ಹೂ ಮತ್ತು ಕಾಯಿಗಳಿಗೆ ಅಂಟುವ ಜಾಡ್ಯ. ಗಂಧಕವನ್ನು ಸಿಂಪಡಿಸುವುದರ ಮೂಲಕ ಇದನ್ನು ತಡೆಗಟ್ಟಬಹುದು.

ಆಂತ್ರಕ್ನೋಸ್ ರೋಗದ ಲಕ್ಷಣ ಎಂದರೆ ಎಳೆಯ ಕುಡಿಗಳು, ಎಲೆ ಹಾಗೂ ಹೂಗಳ ಮೇಲೆ ಕಪ್ಪುಚುಕ್ಕೆಗಳು ಕಾಣಿಸಿಕೊಳ್ಳುವುದು. ಕಾಯಿ ಎಳೆಯವಾಗಿದ್ದರೆ ಬಿದ್ದುಹೋಗುವುವು. ಬಲಿತ ಅಥವಾ ಮಾಗಿದ ಹಣ್ಣುಗಳಾದರೆ ಸಿಪ್ಪೆಯ ಮೇಲೆ ಕಪ್ಪುಚುಕ್ಕೆಗಳು ಮೂಡುವುದಲ್ಲದೆ ಒಳಗಿನ ತಿರುಳು ಗಡುಸಾಗುತ್ತದೆ. ಬೋರ್ಡೊ ಮಿಶ್ರಣದ ಸಿಂಪಡಿಕೆಯಿಂದ ರೋಗವನ್ನು ನಿಯಂತ್ರಿಸಬಹುದು.

ಕುಚ್ಚು ರೋಗದ ಕಾರಣ ಖಚಿತವಾಗಿ ತಿಳಿದಿಲ್ಲ. ರೋಗಪೀಡಿತ ಹೂ ಮಂಜರಿಗಳನ್ನು ಕತ್ತರಿಸಿ ಸುಟ್ಟು ಹಾಕುವುದೇ ಈ ರೋಗವನ್ನು ಹತೋಟಿಯಲ್ಲಿಡುವ ಮಾರ್ಗ.

ಜಾಸಿಡ್ ಜಿಗಿಕೀಟ, ಕಾಂಡ ಕೊರಕ, ಸೊಂಡಿಲು ಕೀಟ, ಶಲ್ಕ ಕೀಟ, ಮಕಮಲ್ ತಿಗಣೆ, ಕೆಂಪಿರುವೆ ಮುಂತಾದವು ಮಾವಿನಮರಕ್ಕೆ ಹಾನಿಯುಂಟು ಮಾಡುವ ಕೀಟಗಳ ಪೈಕಿ ಕೆಲವು, ಡಿಡಿಟಿ, ಬಿಎಚ್‌ಸಿ, ಫಾಲಿಡಾಲ್, ಗೆಸರೋಲ್ ಮುಂತಾದ ಕೀಟನಾಶಕಗಳ ಬಳಕೆಯಿಂದ ಕೀಟಗಳನ್ನು ನಿಯಂತ್ರಿಸಬಹುದು.

ಮಾವಿನ ಇಳುವರಿ

ಕಸಿ ಮಾವಿನ ಮರಗಳು 4ನೆಯ ವರ್ಷದಿಂದ ಫಲಕೊಡಲು ಪ್ರಾರಂಭಿಸುವುವು. ಮೊದಮೊದಲು ಇಳುವರಿ ತುಂಬ ಕಡಿಮೆ. ಕಾಯಿಗಳ ಸಂಖ್ಯೆ ಮೊದಲು ಮರಕ್ಕೆ 10-15 ಇರುತ್ತಿದ್ದು 6ನೆಯ ವರ್ಷಕ್ಕೆ 50-75 ಆಗಿ 16ನೆಯ ವರ್ಷಕ್ಕೆ  300-500ಕ್ಕೇರುತ್ತದೆ. 20ರಿಂದ 40 ವರ್ಷ ವಯಸ್ಸಿನ ಮರಗಳು ತಲಾ 1000-3000 ಹಣ್ಣುಗಳನ್ನು ಕೊಡುವುದುಂಟು. ಲಂಗರಾ, ದಸೆರಿ, ರಸಪೂರಿ, ನೀಲಮ್, ತೋತಾಪುರಿ (ಬ್ಯಾಂಗಲೂರ), ಸುವರ್ಣರೇಖ ಮುಂತಾದ ಬಗೆಗಳು ಅಧಿಕ ಇಳುವರಿ ಕೊಡುವವೆಂದು ಹೆಸರಾಗಿದ್ದರೆ (800-3000 ಹಣ್ಣುಗಳು), ಜಹಾಂಗೀರ್ ಬಗೆ ಕೇವಲ 200-250 ಹಣ್ಣುಗಳನ್ನು ಮಾತ್ರ ಕೊಡುತ್ತದೆ.

ಮಾವಿನಹಣ್ಣಿನ ಸುಗ್ಗಿ ದಕ್ಷಿಣ ಭಾರತದಲ್ಲಿ ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಮೇ ವೇಳೆಗೆ ಮುಗಿಯುತ್ತದಾದರೆ ಉತ್ತರ ಭಾರತದಲ್ಲಿ ಜೂನ್ ಸಮಯಕ್ಕೆ ಆರಂಭವಾಗಿ ಆಗಸ್ಟ್ ಕೊನೆಯ ತನಕ ಇರುತ್ತದೆ.

ಕಾಯಿಗಳು ಪೂರ್ಣ ಬಲಿತಾಗ ಆದರೆ ಇನ್ನೂ ಹಸುರಾಗಿರುವಾಗ ಕೊಯ್ಲು ಆರಂಭವಾಗುತ್ತದೆ. ಚೆನ್ನಾಗಿ ಬಲಿತ ಕಾಯಿಗಳನ್ನು ಸಂಗ್ರಹ ಕೋಣೆಗಳಲ್ಲಿ ಬತ್ತದ ಒಣಹುಲ್ಲು ಇಲ್ಲವೆ ಗೋದಿ ತೌಡಿನ ಹಾಸಿನ ಮೇಲಿರಿಸಿ ಒಂದು ವಾರ ಕಾಲ ಇರಿಸಿ ಮಾಗಲು ಬಿಡಲಾಗುತ್ತದೆ. ಬಿದಿರಿನ ಬುಟ್ಟಿಗಳಲ್ಲಿ ಇಲ್ಲವೆ ಮರದ ಪೆಟ್ಟೆಗೆಗಳಲ್ಲಿ ಹಣ್ಣುಗಳನ್ನು ಇರಿಸಿ ಮಾರುಕಟ್ಟೆಗೆ ಕಳಿಸಲಾಗುತ್ತದೆ.

ಉಪಯೋಗಗಳು

ಮಾವಿನ ಹಣ್ಣು ಅತ್ಯಂತ ರುಚಿಕರವಾಗಿದ್ದು, ಪ್ರಪಂಚದಾದ್ಯಂತ ಬೇಡಿಕೆಯಲ್ಲಿದೆ. ಕೆಲವು ತಳಿಗಳು ಪಾನೀಯ ತಯಾರಿಕೆಗೆ ಉಪಯುಕ್ತ. ಕಾಡು ಮಾವಿನ ಜಾತಿಗಳಲ್ಲಿ ಅಪ್ಪೆ ಮತ್ತು ಕೆಲವು ಉಪ್ಪಿನಕಾಯಿ ತಯಾರಿಕೆಗೆ ಬಳಸಲ್ಪಡುತ್ತಿದೆ. ಎಳೆಯ ಮತ್ತು ಮಾಗದ ಕಾಯಿಗಳನ್ನು ಉಪ್ಪಿನಕಾಯಿ, ಚಟ್ನಿ ಮುಂತಾದ ರೂಪಗಳಲ್ಲಿ ಮತ್ತು ವಿವಿಧ ತಿನಿಸುಗಳ ಜೊತೆಯಲ್ಲಿ ಬಳಸಲಾಗುತ್ತದೆ. ಮಾಗಿದ ಹಣ್ಣುಗಳನ್ನು ರಸ, ಜಾಮ್, ಜೆಲ್ಲಿ, ಮುರಬ್ಬ, ಮಾವಿನಹಪ್ಪಳ (ಆಮ್ ಪಾಪಡ್) ಇತ್ಯಾದಿ ರೂಪಗಳಲ್ಲಿ ಸೇವಿಸಲಾಗುತ್ತದೆ.

ಜಾವ, ಫಿಲಿಪೀನ್ಸ್ ದೇಶಗಳಲ್ಲಿ ಮಾವಿನ ಎಳೆಯ ಚಿಗುರನ್ನು ತರಕಾರಿಯಾಗಿ ಉಪಯೋಗಿಸುವುದಿದೆ. ಎಲೆತೊಪ್ಪಲು ದನಗಳಿಗೆ ಮೇವು ಕೂಡ. ಎಲೆಗಳನ್ನು ಸುಟ್ಟು ಪಡೆಯುವ ಬೂದಿಯನ್ನು ಸುಟ್ಟಗಾಯ ವಾಸಿಮಾಡಲು ಬಳಸುವುದುಂಟು. ಒಣಗಿಸಿದ ಮಾವಿನ ಹೂಗಳು ಅತಿಸಾರ, ಆಮಶಂಕೆಗಳಿಗೆ ಒಳ್ಳೆಯ ಮದ್ದು ಎನಿಸಿವೆ. ಮಾವಿನ ತೊಗಟೆಯಲ್ಲಿ ಟ್ಯಾನಿನ್ ಇದೆಯಾಗಿ ಚರ್ಮಹದಗೊಳಿಸಲೂ ಪ್ರತಿಬಂಧಕವಾಗಿಯೂ ಇದು ಬಳಕೆಯಾಗುತ್ತದೆ. ತೊಗಟೆಯಿಂದ ಪಡೆಯುವ ರಂಗನ್ನು ಹತ್ತಿ, ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳಿಗೆ ತಿಳಿಹಳದಿ ಬಣ್ಣ ಕೊಡಲು ಉಪಯೋಗಿಸುವರು. ಮಾವಿನಮರದಿಂದ ಸಾಕಷ್ಟು ಒಳ್ಳೆಯ ಗೋಂದು ಲಭಿಸುತ್ತದೆ.

ಮಾವಿನಮರದ ಚೌಬೀನೆ ಸಾಕಷ್ಟು ದೃಢವಾದುದು ಗಟ್ಟಿಯಾದುದೂ ಆಗಿರುವುದರಿಂದ ಹಲವಾರು ತೆರನ ಮರಗೆಲಸಗಳಿಗೆ ಒದಗುತ್ತದೆ.

ಮಾವಿನಹಣ್ಣಿನ ಸಾರ

  • ಮಾವಿನ ಹಣ್ಣು , ಹಣ್ಣುಗಳ ರಾಜ ಎಂದು ಪರಿಗಣಿಸಲ್ಪಟ್ಟಿದೆ.
  • ಮಾವಿನ ಹಣ್ಣಿನ ಆಲ್ಫಾನ್ಸೋ ಜಾತಿಯ ೧೦೦ ಗ್ರಾಂ ಹಣ್ಣಿನಲ್ಲಿ ಇರುವ (ಅಂದಾಜು) ಸಾರ;
  1. ನೀರು -೮೧.೬ ಗ್ರಾಂ.
  2. ಪ್ರೋಟೀನ್ ----೦.೯ಗ್ರಾಂ.
  3. ಕೊಬ್ಬು -----೦.೪ ಗ್ರಾಂ.
  4. ಕಾರ್ಬೋಹೈಡ್ರೇಟ್ (ಸಕ್ಕರೆ) -೧೬.೩ಗ್ರಾಂ
  5. ನಾರು - ೦.೪ ಗ್ರಾಂ.
  6. ಸುಣ್ಣ -೦.೪೦ ಮಿ ಗ್ರಾಂ.
  7. ರಂಜಕ - ೧೬.೦ ಮಿ ಗ್ರಾಂ.
  8. ಪೊಟ್ಯಾಸಿಯಂ -೨೦೦೦.೦ಮಿ ಗ್ರಾಂ.
  9. ಸೋಡಿಯಂ -೯.೦ ಮಿಗ್ರಾಂ.
  10. ವಿಟಮಿನ್ (ಅನ್ನಾಂಗ) ಎ - ೨೦,೦೦೦ ಐ.ಯು.
  11. ವಿಟಮಿನ್ (ಅನ್ನಾಂಗ) ಬಿ ೧ - ೦.೦೮ಮಿ ಗ್ರಾಂ.
  12. ವಿಟಮಿನ್ (ಅನ್ನಾಂಗ)ಬಿ ೨ -೦.೦೯ ಮಿಗ್ರಾಂ
  13. ವಿಟಮಿನ್ (ಅನ್ನಾಂಗ) ಸಿ -- ೧೨೫.೦ ಮಿ ಗ್ರಾಂ.
  14. ನಿಯಾಚಿನ್ -- ೪.೧ ಮಿ ಗ್ರಾಂ.
  15. ಕ್ಯಾಲರೀಗಳು ---೫೦
  • ವಿಟಮಿನ್'ಎ' ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳಲಾಗಿದೆ. ತೊಳೆಯದ, ಅತಿ ಗಳಿತ(ಕೊಳೆ ಆರಂಭದ) ಹಣ್ಣು, ಅರ್ಧ ಮಾಗಿದ ಹಣ್ಣು ಅತಿಸಾರಕ್ಕೆ ಕಾರಣವಾಗಬಹುದು. ಮಾಗಿದ ಹಣ್ಣು ಆರೋಗ್ಯಕ್ಕೆ ಒಳ್ಳೆಯದು.
  • ಮಾಗಿದ ಹಣ್ಣಿನಲ್ಲಿ ಇರುವ ಮುಖ್ಯ ಸಕ್ಕರೆಗಳೆಂದರೆ ಸ್ಯೂಕ್ರೋಸ್, ಗ್ಲೂಕೋಸ್ ಮತ್ತು ಫ್ರಕ್ಟೋಸ್. ಇನ್ನೂ ಕಾಯಿ ಹಂತದಲ್ಲಿರುವಾಗ ಸಿಟ್ರಿಕ್, ಮ್ಯಾಲಿಕ್, ಆಕ್ಸಾಲಿಕ್, ಸಕ್ಸಿನಿಕ್ ಆಮ್ಲಗಳೂ ಗುರುತಿಸಲಾಗದ ಇನ್ನೆರಡು ಆಮ್ಲಗಳೂ ಇರುವುವು. ಮಾಗುತ್ತ ಬಂದಂತೆ ಆಮ್ಲತೆ ಕಡಿಮೆಯಾಗಿ ಸಕ್ಕರೆ ಅಂಶ ಹೆಚ್ಚಾಗುತ್ತ ಹೋಗುತ್ತದೆ.

ಕರ್ನಾಟಕದಲ್ಲಿ ಮಾವಿನ ಹಣ್ಣು

  • ಮಾವಿನ ಹಣ್ಣು ಒಂದು ವರ್ಷ ಉತ್ತಮ ಬೆಳೆ ಬಂದರೆ ಮಾರನೇ ವರ್ಷ ಕಡಿಮೆ ಬೆಳೆ ಬರುವುದು.
  • ಕರ್ನಾಟಕದ ಮಾವಿನ ಹಣ್ಣುಗಳು ಪುಣೆಗೆ ಹೋಗಿ ಅಲ್ಲಿಂದ ವಿದೇಶಗಳಿಗೆ ರಫ್ತಾಗುತ್ತವೆ. ಕರ್ನಾಟಕದ ಆಲ್ಫಾನ್ಸೋ ಹಣ್ಣುಗಳು ಮಹಾರಾಷ್ಟ್ರ ಸೇರಿ ಅಲ್ಲಿಂದ ರತ್ನಗಿರಿ (ಬ್ರ್ಯಾಂಡ್ ನೇಮ್) ಹೆಸರಿನಲ್ಲಿ ಹೊರದೇಶಕ್ಕೆ ಹೋಗುತ್ತವೆ. ಆದ್ದರಿಂದ ಕರ್ನಾಟಕದಿಂದ ಎಷ್ಟು ರಫ್ತಾಗುವುದೆನ್ನುವ ಲೆಕ್ಕ ಸಿಗುವುದಿಲ್ಲ.ಮಹಾರಾಷ್ಟ್ರದಲ್ಲಿ ಬೆಳೆಯುವ ರತ್ನಗಿರಿ ಹಣ್ಣಿಗಿಂತ ಕರ್ನಾಟಕದ ಆಲ್ಫಾನ್ಸೋ ಹೆಚ್ಚು ರುಚಿಯುಳ್ಳದ್ದು ಆದರೆ ಅದರ ಹೆಸರು ವಿದೇಶದಲ್ಲಿ ಇಲ್ಲ.
  • ಕಾರಣ ಅದು ಮಹಾರಾಷ್ಟ್ರದ ರತ್ನಗಿರಿ ಹೆಸರಿನಲ್ಲಿ ಮಾರಾಟವಾಗುವುದು ಮತ್ತು ರಫ್ತಾಗುವುದು. ಈಗ ಕರ್ನಾಟಕದಲ್ಲಿ ಮಾವಿನ ಹಣ್ಣಿನ ರಕ್ಷಣೆಗಾಗಿ ತಂಪು ಉಗ್ರಾಣಗಳು ತಯಾರಾಗುತ್ತಿವೆ. ಅದಾದ ನಂತರ ರಫ್ತಿಗೂ ಅನುಕೂಲವಾಗಿ ಉತ್ತಮ ಬೆಲೆ ರೈತರಿಗೆ ಸಿಗಬಹುದು.

ಮಾವಿನ ಬೆಳೆ ಮತ್ತು ನಿರ್ಯಾತ

  • ಭಾರತದಿಂದ ವಾರ್ಷಿಕ ರಪ್ತಾಗುವ ಮಾವಿನ ಹಣ್ಣಿನ ಪ್ರಮಾಣ ಸುಮಾರು ೬೦ಸಾವಿರ (60,000- 2013-2014) ಅದರಲ್ಲಿ ಸುಮಾರು 3500 ಟನ್ ಯೂರೋಪಿಗೆ ಅದರಲ್ಲಿ ಬ್ರಿಟನ್ನಿಗೇ 3000ಟನ್ ರಫ್ತಾದರೆ ಉಳಿದದ್ದು ಅರಬ್ ದೇಶಗಳಿಗೆ ಅಥವಾ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುತ್ತದೆ.
  • ಭಾರತ ಮಾವು ಬೆಳೆಯಲ್ಲಿ ಜಗತ್ತಿನ ಮೊದಲ ಸ್ಥಾನ ಹೊಂದಿದೆ. ಜಗತ್ತಿನಲ್ಲಿ ಸುಮಾರು 1,300(೧೩೦೦) ತಳಿಗಳಿವೆ ಅವುಗಳಲ್ಲಿ ಬಾರತದಲ್ಲಿ ಸುಮಾರು ಸಾವಿರ ತಳಿಗಳ ಮಾವು ಬೆಳೆಯುತ್ತಿದೆ. ನಮ್ಮ ದೇಶದಲ್ಲಿ ಸುಮಾರು 15.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, 95 ಲಕ್ಷ ಮೆಟ್ರಿಕ್ ಟನ್ ಇಳುವರಿ ಪಡೆಯಲಾಗುತ್ತಿದೆ. ಆಂಧ್ರಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ ಒಟ್ಟು ಮಾವು ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಬೆಳೆಯುವುದು. ಅದರಲ್ಲಿ ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶ ದೇಶದ ಮಾವು ಉತ್ಪಾದನೆಯಲ್ಲಿ ಅರ್ಧದಷ್ಟನ್ನು ಪೂರೈಸುತ್ತವೆ. ಕರ್ನಾಟಕದಲ್ಲಿ ಮಾವು ಸುಮಾರು 1.30 ಲಕ್ಷ ಹೆಕ್ಟೇರ್ ಪ್ರದೇಶ ಆವರಿಸಿದ್ದು, 14 ಲಕ್ಷ ಟನ್ ಉತ್ಪಾದನೆ ಮಾಡಲಾಗುತ್ತಿದೆ (2013-2014).
  • ಕೋಲಾರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದ್ದು, 40,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವುದು. ರಾಮನಗರದಲ್ಲಿ 20,000 ಹೆಕ್ಟೇರ್, ಉಳಿದಂತೆ ಧಾರವಾಡ, ಹಾವೇರಿ, ಬೆಳಗಾವಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ತುಮಕೂರು, ಧಾರವಾಡ, ಗದಗ, ಬೆಳಗಾವಿ, ಕೊಡಗು ಮೊದಲಾದ ಜಿಲ್ಲೆಗಳಲ್ಲೂ ಬೆಳೆಯಲಾಗುತ್ತದೆ.
  • ರಾಜ್ಯದ ತಳಿ:ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ. ರಫ್ತಾಗುವ ಮಾವು: ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಮಲ್ಗೋವಾ.ಸುಮಾರು 100 ಮಾವಿನ ತಳಿಗಳಿರುವ ದೇಶದ ಪುಟ್ಟ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 12 ತಳಿಯ ಮಾವನ್ನು ಬೆಳೆಯಲಾಗುತ್ತಿದೆ. ರಾಜಗಿರಿ, ರಸಪುರಿ, ಮಲಗೋವಾ, ಬಾದಾಮಿ, ಬೇನಿಷಾ, ಮಲ್ಲಿಕಾ, ನೀಲಂ, ತೋತಾಪುರಿ, ಕುದೂಸ್‍, ಕಾಲಾಪಾಡ್‍, ಆಮ್ಲೆಟ್‍, ನಾಟಿ ತಳಿಗಳ ವಹಿವಾಟು ನಡೆಯುತ್ತಿದೆ.ಮಹಾರಾಷ್ಟ್ರ, ಗುಜರಾತ್‍, ರಾಜಸ್ತಾನ, ಮಧ್ಯಪ್ರದೇಶ, ನವದೆಹಲಿ, ಪಂಜಾಬ್‍, ಹರಿಯಾಣ ರಾಜ್ಯಗಳಿಗೆ ಈ ತಾಲ್ಲೂಕಿನ ಮಾವು ರವಾನೆಯಾಗುತ್ತದೆ. ಕೊಯ್ಲು ಅವಧಿ: ಏಪ್ರಿಲ್‌– ಜೂನ್‌.
  • ಭಾರತ 2010–11ರಲ್ಲಿ Rs.164 ಕೋಟಿ, 2012–13ರಲ್ಲಿ Rs.267 ಕೋಟಿಯ ಮಾವು ರಫ್ತು ಮಾಡಿದೆ. ಭಾರತದ ಮಾವಿನ ದೊಡ್ಡ ಗ್ರಾಹಕ ರಾಷ್ಟ್ರ ಅರಬ್ ಸಂಯುಕ್ತ ಒಕ್ಕೂಟ.
  • 2012–13ರ ಹಣಕಾಸು ವರ್ಷದಲ್ಲಿ 46,500 ಟನ್‌ ಮಾವಿನ ಹಣ್ಣು ರಫ್ತು ಮಾಡಲಾಗಿತ್ತು. ಗುಣಮಟ್ಟ ಕಾಪಾಡುವುದು ಕಷ್ಟವಾಗಿ ರಪ್ತು ಪ್ರಮಾಣ ಕಡಿಮೆಯಾಗುತ್ತಿದೆ.(ಕೃಷಿ ಮತ್ತು ಸಂಸ್ಕರಿಸಿದ ಆಹಾರ ಪದಾರ್ಧಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ವರದಿ)
  • ಆದರೆ ಯೂರೋಪ‍ ರಾಷ್ಟ್ರಗಳು ಬಿಸಿನೀರಿನಲ್ಲಿ ಸಂಸ್ಕರಿಸಿದ ಮಾವನ ಹಣ್ಣನ್ನು ಬಯಸುವುದರಿಂದ ರಪ್ತುಮಾಡುವ ಮಾವಿನ ಹಣ್ಣುಗಳನ್ನು 45 ಡಿಗ್ರಿ ಸೆಲ್ಸಿಯಸ್ ಬಿಸಿನೀರಿನಲ್ಲಿ ಅದ್ದಿ ಸಂಸ್ಕರಿಸಬೇಕು. ಅದಕ್ಕಾಗಿ ಬಿಸಿನೀರಿನ ಸಂಸ್ಕರಣಾ ಕೇಂದ್ರಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ.

ಕರ್ನಾಟಕದಲ್ಲಿ

ಕರ್ನಾಟಕ ರಾಜ್ಯದಲ್ಲಿ ಮಾವು ಇಳುವರಿ ಪ್ರಮಾಣ

ವರ್ಷ ಇಳುವರಿ ಪ್ರಮಾಣ/ಟನ್
2009 ಪೂರ್ಣ 7,95,000
2010 ಅಲ್ಪ 2,60,000
2011 ಪೂರ್ಣ 8,50,000
2012 ಅಲ್ಪ 2,75,000

ಕರ್ನಾಟಕ ಸೇರಿದಂತೆ ಭಾರತದಲ್ಲಿ ಮಾವಿನ ಬೆಳೆ ವಿವರ

  • ರಫ್ತು ಮಾಡುವ ದೇಶಗಳು ಮತ್ತು ಪ್ರಮಾಣ:
ದೇಶ ಟನ್
ಅಮೇರಿಕಾ 5000 ಟನ್
ಬ್ರಿಟನ್ 3000
ಮಲೇಷ್ಯಾ 3000
ಅರಬ್ ರಾಷ್ಟ್ರ 3000
ಆಸ್ಟ್ರೇಲಿಯಾ 3000
ಪ್ರದೇಶ ಬೆಳೆಯುವ ಪ್ರದೇಶ- ಲಕ್ಷ ಹೆಕ್ಟೇರ್ ಇಳುವರಿ ಲಕ್ಷ ಟನ್
ಭಾರತ 15.2 95
ಕರ್ನಾಟಕ 2 12-14
ಕರ್ನಾಟಕದ ಜಿಲ್ಲೆಗಳು
ಕೋಲಾರ 40000ಹೆ. 4
ರಾಮನಗರ 20000ಹೆ. 20.5
ಧಾರವಾಡ 20000 2
ಚಿಕ್ಕಬಳ್ಳಾಪುರ 15000 2.25
ಹಾವೇರಿ 15000 1.75
ಬೆಳಗಾವಿ 15000 1.75

ಮಾವಿನ ಬಗೆಗಳು

ಮಾವಿನಲ್ಲಿ ಬೀಜದಿಂದ ವೃದ್ಧಿಸಲಾಗುವ ಮತ್ತು ಕಸಿ ವಿಧಾನದಿಂದ ವೃದ್ಧಿಸಲಾಗುವ ಎಂದು ಎರಡು ಪ್ರಧಾನ ಗುಂಪುಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ ಬೆಳೆಯಲಾಗುತ್ತಿರುವ ಮಾವಿನ ವಿವಿಧ ಬಗೆಗಳ ಪೈಕಿ ಮುಕ್ಕಾಲು ಪಾಲು ಮೊದಲನೆಯ ಗುಂಪಿಗೆ ಸೇರಿವೆಯಾದರೂ ಇವು ವಾಣಿಜ್ಯ ದೃಷ್ಟಿಯಿಂದ ಮುಖ್ಯವೆನಿಸಿಲ್ಲ. ಏಕೆಂದರೆ ಇವು ಪುಷ್ಕಳವಾಗಿ ಫಲ ಬಿಡುವುವಾದರೂ ಪ್ರತಿವರ್ಷ ಒಂದೇ ರೀತಿ ಫಲ ಕೊಡುವುವು ಎಂದು ಹೇಳುವಂತಿಲ್ಲ. ಇವುಗಳಲ್ಲಿ ಏಕಭ್ರೂಣೀಯ ಮತ್ತು ಬಹುಭ್ರೂಣೀಯ ಎಂಬ ಎರಡು ಬಗೆಗಳುಂಟು. ಭಾರತದ ಮಾವಿನ ಬಗೆಗಳ ಪೈಕಿ ಬಹುಪಾಲು ಮೊದಲನೆಯ ಗುಂಪಿನವು. ಕೇರಳದ ಕೆಲವಡೆಗಳಲ್ಲಿ ಮಾತ್ರ ಎರಡನೆಯ ಬಗೆಯ ಮಾವು ಕಂಡುಬರುತ್ತದೆ. ಉದಾಹರಣೆಗೆ ಓಲೂರು ಮತ್ತು ಚಂದ್ರಕರಣ. ಆಗ್ನೇಯ ಏಷ್ಯದ ಆರ್ದ್ರಕಾಡುಗಳಲ್ಲಿ ಬೆಳೆಯುವಂಥ ಹೆಚ್ಚಿನ ಪಾಲು ಮಾವುಗಳು ಬಹು ಭ್ರೂಣೀಯ ಗುಂಪಿನವಾಗಿವೆ. ಇಂಡೊಚೀನ ಪ್ರದೇಶದಲ್ಲಿ ಬೆಳೆಯುವ ಕಾಂಬೋಡಿಯಾನ, ಫಿಲಿಪೀನ್ಸ್‌ನಲ್ಲಿ ಬೆಳೆಯುವ ಕ್ಯಾರಬಾವೊ ಮತ್ತು ಪೈಕೊ ಬಗೆಗಳು ಈ ಗುಂಪಿನವು.

ಒಂದು ಅಂದಾಜಿನ ಪ್ರಕಾರ ದೇಶದ ವಿವಿಧ ಭಾಗಗಳಲ್ಲಿ ಸುಮಾರು 1000ಕ್ಕೂ ಹೆಚ್ಚಿನ ಮಾವಿನ ಬಗೆಗಳು ಕಾಣದೊರೆಯುತ್ತವೆ. ಇವುಗಳಿಗೆ ಒಂದೊಂದಕ್ಕೂ ವಿಶಿಷ್ಟವಾದ ರುಚಿ, ಸ್ವಾದ, ತಿರುಳಿನ ರಚನೆ ಇವೆಯೆನ್ನಲಾಗಿದೆ. ಆದರೆ ಈ ತೆರನ ವರ್ಗೀಕರಣಕ್ಕೆ ವೈಜ್ಞಾನಿಕ ಆಧಾರಗಳಿಲ್ಲವಾದ್ದರಿಂದ ಕಾಯಿಗಳ ಗಾತ್ರ, ಆಕಾರ ಗುಣಮಟ್ಟ, ಮರದ ಬೆಳೆವಣಿಗೆ ಮುಂತಾದ ಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ಮಾವಿನ ಬೇರೆ ರೂಪಭೇದಗಳನ್ನು, ಬಗೆಗಳನ್ನು ಹೆಸರಿಸಲು ಪ್ರಯತ್ನ ನಡೆಸಲಾಗಿದೆ. ಇದರ ಫಲವಾಗಿ ಒಟ್ಟು 77 ಭಾರತೀಯ ಬಗೆಗಳನ್ನೂ 24 ವಿದೇಶೀ ಬಗೆಗಳನ್ನೂ ಗುರುತಿಸಲಾಗಿದೆ. ಇವುಗಳ ಪೈಕಿ ವಾಣಿಜ್ಯದೃಷ್ಟಿಯಿಂದ ಅತಿಮುಖ್ಯವೆನಿಸಿರುವ ಕೆಲವು ಬಗೆಗಳನ್ನೂ ಅವುಗಳ ಕೃಷಿಗೆ ಪ್ರಸಿದ್ಧವಾಗಿರುವ ರಾಜ್ಯಗಳನ್ನೂ ಹೆಸರಿಸಲಾಗಿದೆ: ಆಲಂಪುರ್ ಬನೆಷನ್ (ಆಂಧ್ರ ಪ್ರದೇಶ, ತಮಿಳುನಾಡು), ಆಲ್‌ಫೊನ್ಸೊ (ಬಾದಾಮಿ, ಆಪೂಸ್ ಇತ್ಯಾದಿ; ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರ), ಬ್ಯಾಂಗಲೂರ (ತೋತಾಪುರಿ, ಕಿಳಿಮುಕ್ಕು; ಆಂಧ್ರ, ತಮಿಳುನಾಡು, ಕರ್ನಾಟಕ), ಬಂಗನ ಪಲ್ಲೆ (ಆಂಧ್ರ), ದಸೆರಿ (ಉತ್ತರ ಪ್ರದೇಶ, ಪಂಜಾಬ್, ದೆಹಲಿ), ಗುಲಾಬ್ ಖಾಸ್ (ಬಿಹಾರ), ಲಂಗರಾ (ಉತ್ತರಪ್ರದೇಶ, ಬಿಹಾರ), ಮಲ್‌ಗೋವ (ಆಂಧ್ರ, ಮಹಾರಾಷ್ಟ್ರ, ಕರ್ನಾಟಕ), ನೀಲಮ್ (ತಮಿಳುನಾಡು, ಆಂಧ್ರ), ಓಲೂರು (ಕೇರಳ), ಪೈರಿ-ರಸಪೂರಿ (ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಕೇರಳ), ರುಮಾನಿ (ತಮಿಳುನಾಡಿನ ಪೂರ್ವ ಜಿಲ್ಲೆಗಳು), ರಾಜಾಪುರಿ (ಗುಜರಾತ್), ಸುವರ್ಣರೇಖ (ಆಂಧ್ರ), ವನರಾಜ (ಗುಜರಾತಿನ ವಡೋದರ ಭಾಗ), ಫಜ್ಲಿ (ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಬಿಹಾರ), ಜರ್ದಾಲು (ಬಿಹಾರ, ಉತ್ತರ ಪ್ರದೇಶ), ಸಫೇದ (ಲಕ್ನೊ, ಉತ್ತರ ಪ್ರದೇಶ).

ಇತರ ಬಗೆಗಳು

ನೋಡಿ

ಆಧಾರ

  1. ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ಉಲ್ಲೇಖಗಳು

ಹೆಚ್ಚಿನ ಓದಿಗೆ

ಹೊರಗಿನ ಕೊಂಡಿಗಳು

ಮಾವು: ಸಸ್ಯಶಾಸ್ತ್ರೀಯ ವರ್ಗೀಕರಣ, ಇತಿಹಾಸ, ವ್ಯಾಪ್ತಿ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಮಾವು ಸಸ್ಯಶಾಸ್ತ್ರೀಯ ವರ್ಗೀಕರಣಮಾವು ಇತಿಹಾಸಮಾವು ವ್ಯಾಪ್ತಿಮಾವು ಸಸ್ಯಗುಣಲಕ್ಷಣಗಳುಮಾವು ಬೇಸಾಯಮಾವು ಮಾವಿನ ಇಳುವರಿಮಾವು ಉಪಯೋಗಗಳುಮಾವು ಮಾವಿನಹಣ್ಣಿನ ಸಾರಮಾವು ಕರ್ನಾಟಕದಲ್ಲಿ ಮಾವಿನ ಹಣ್ಣುಮಾವು ಮಾವಿನ ಬೆಳೆ ಮತ್ತು ನಿರ್ಯಾತಮಾವು ಕರ್ನಾಟಕದಲ್ಲಿಮಾವು ಕರ್ನಾಟಕ ಸೇರಿದಂತೆ ಭಾರತದಲ್ಲಿ ಮಾವಿನ ಬೆಳೆ ವಿವರಮಾವು ಮಾವಿನ ಬಗೆಗಳುಮಾವು ನೋಡಿಮಾವು ಆಧಾರಮಾವು ಉಲ್ಲೇಖಗಳುಮಾವು ಹೆಚ್ಚಿನ ಓದಿಗೆಮಾವು ಹೊರಗಿನ ಕೊಂಡಿಗಳುಮಾವುಭಾರತಮರಯುರೋಪ್ಹಣ್ಣು

🔥 Trending searches on Wiki ಕನ್ನಡ:

ವೇದಒಡ್ಡರು / ಭೋವಿ ಜನಾಂಗಕರ್ನಾಟಕದ ಜಾನಪದ ಕಲೆಗಳುನ್ಯೂಟನ್‍ನ ಚಲನೆಯ ನಿಯಮಗಳುಡಿ. ದೇವರಾಜ ಅರಸ್ಸಂಸ್ಕೃತಬಾರ್ಲಿಗಣೇಶಜೋಡು ನುಡಿಗಟ್ಟುರಾಮ ಮಂದಿರ, ಅಯೋಧ್ಯೆಹರ್ಡೇಕರ ಮಂಜಪ್ಪಪರಿಸರ ವ್ಯವಸ್ಥೆವಿಜಯನಗರ ಸಾಮ್ರಾಜ್ಯಹೈನುಗಾರಿಕೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತಆದಿ ಶಂಕರಖಾಸಗೀಕರಣಕರ್ನಾಟಕದ ಇತಿಹಾಸಚೋಳ ವಂಶಚೀನಾಸ್ಟಾರ್‌ಬಕ್ಸ್‌‌ಸಾರಾ ಅಬೂಬಕ್ಕರ್ಲೋಹಕಾಫಿರ್ಸುಧಾ ಚಂದ್ರನ್ಆದಿಪುರಾಣಭಾರತದ ಜನಸಂಖ್ಯೆಯ ಬೆಳವಣಿಗೆಕೂಡಲ ಸಂಗಮಭಾರತದ ಮುಖ್ಯ ನ್ಯಾಯಾಧೀಶರುಹರಪ್ಪಭಾವನಾ(ನಟಿ-ಭಾವನಾ ರಾಮಣ್ಣ)ಅಂಶಗಣಮೈಸೂರು ಸಂಸ್ಥಾನಸಾಸಿವೆಕನ್ನಡಪ್ರಭಅಶೋಕನ ಶಾಸನಗಳುಕರ್ಣಟಿಪ್ಪು ಸುಲ್ತಾನ್ಬಾದಾಮಿ ಗುಹಾಲಯಗಳುಭಾರತದ ಇತಿಹಾಸಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಜಿಪುಣಈರುಳ್ಳಿಸಾರ್ವಭೌಮತ್ವಕದಂಬ ಮನೆತನವಿಜ್ಞಾನವೀರಗಾಸೆಭಾರತದ ರಾಜಕೀಯ ಪಕ್ಷಗಳುಬೆಸಗರಹಳ್ಳಿ ರಾಮಣ್ಣಭಾರತದ ಸಂವಿಧಾನದ ೩೭೦ನೇ ವಿಧಿಕೇಂದ್ರ ಲೋಕ ಸೇವಾ ಆಯೋಗಮಾಧ್ಯಮಕುರುಬಇಮ್ಮಡಿ ಪುಲಿಕೇಶಿಮಲೆನಾಡುಭದ್ರಾವತಿರಾಷ್ಟ್ರೀಯತೆಸರ್ವಜ್ಞಕೆಂಬೂತ-ಘನಬ್ಯಾಡ್ಮಿಂಟನ್‌ಪೂರ್ಣಚಂದ್ರ ತೇಜಸ್ವಿಕನ್ನಡ ಗುಣಿತಾಕ್ಷರಗಳುತುಳಸಿರಾಮಾಯಣತಲಕಾಡುಡಾ ಬ್ರೋಕಾರ್ಯಾಂಗಜೈನ ಧರ್ಮಮುಪ್ಪಿನ ಷಡಕ್ಷರಿಭರತನಾಟ್ಯಅಕ್ರಿಲಿಕ್ಸೌರಮಂಡಲದ್ವಂದ್ವ ಸಮಾಸಮಾನವನ ವಿಕಾಸಪರ್ವತ ಬಾನಾಡಿಗುಣ ಸಂಧಿತೆನಾಲಿ ರಾಮಕೃಷ್ಣಭಾರತ ಸಂವಿಧಾನದ ಪೀಠಿಕೆ🡆 More