ದಲೈ ಲಾಮಾ

ದಲೈ ಲಾಮಾ ಎಂಬುದು ಟಿಬೆಟಿಯನ್ ಬೌದ್ಧ ಧರ್ಮ ಗುರುಪರಂಪರೆಗೆ ಸಂದ ಒಂದು ಪೂಜನೀಯ ಹೆಸರು.

'ದಲೈ' ಎಂದರೆ ಸಾಗರವೆಂದೂ 'ಬ್ಲಾಮಾ' ಎಂಬ ಪದದಲ್ಲಿ 'ಬ' ಗೌಣವಾಗಿ ಲಾಮಾ ಎಂದು ಉಚ್ಚರಿಸಲಾಗುತ್ತದೆ'. ಹಾಗೆಂದರೆ ಗುರು ಎಂದರ್ಥ. ಈ ಪಂಥವನ್ನು ೧೩೫೭-೧೪೧೯ರ ಕಾಲಮಾನದಲ್ಲಿ ಜೀವಿಸಿದ್ದ ತ್ಸೋಂಗೋಥಾಪಾ ಎಂಬ ಬೌದ್ಧ ಬಿಕ್ಷುಗಳೊಬ್ಬರು ಆಚರಣೆಗೆ ತಂದರು.

ಮೊದಲನೇ ದಲೈ ಲಾಮಾ
ದಲೈ ಲಾಮಾ
ದಲೈ ಲಾಮಾ
೧೪ನೇ ದಲೈ ಲಾಮಾ 'ಟೆನ್ಸಿನ್ ಗ್ಯಾಟ್ಸೊ' ೨೦೦೭ರ ವರ್ಷದಲ್ಲಿ

೧೪ನೇ ದಲೈಲಾಮ

ದಲೈಲಾಮ ಎಂದು ಈಗಿನ ವಿಶ್ವಜನತೆಗೆ ಪರಿಚಿತರಾದ ಹದಿನಾಲ್ಕನೆ ಹಾಗೂ ಪ್ರಸಕ್ತದ ದಲೈಲಾಮ. ಅವರ ಧಾರ್ಮಿಕ ಹೆಸರು ಟೆನ್ಸಿನ್ ಗ್ಯಾಟ್ಸೊ ಎಂದು. ಅವರ ಹುಟ್ಟು ಹೆಸರು ಲ್ಹಾಂಬೋ ಡಾನ್ಡ್ರುಬ್ ಎಂದು. ಈ ದಲೈಲಾಮ ಅವರು ಜನಿಸಿದ ದಿನ ಜುಲೈ ೬, ೧೯೩೫.

ನಮಗೆಲ್ಲಾ ತಿಳಿದಿರುವ ಹಾಗೆ ದಲೈಲಾಮಾ ೧೯೫೯ರಲ್ಲಿ ಚೀನಾದಿಂದ ಭಾರತಕ್ಕೆ ವಲಸೆ ಬಂದು ಧರ್ಮಶಾಲಾ ಎಂಬಲ್ಲಿ ನೆಲೆಸಿದ್ದಾರೆ. ಚೀನಾ ದೇಶ ಆಕ್ರಮಿಸಿಕೊಂಡಿರುವ ಟಿಬೆಟ್ ಪ್ರದೇಶದಲ್ಲಿರುವ ಮತ್ತು ಅಲ್ಲಿಂದ ಹೊರಗೆ ಹರಡಿಕೊಂಡಿರುವ ಟಿಬೆಟಿಯನ್ ಜನಾಂಗದ ಪ್ರವರ್ತಕರಾಗಿ ಎಲ್ಲ ತರಹದ ವೈರುದ್ಧ್ಯಗಳ ಪ್ರವಾಹಗಳ ನಡುವೆಯೂ ನಗುನಗುತ್ತಲೇ ವಿಶ್ವದೆಲ್ಲೆಡೆಯ ಜನರ ಗಮನ ಸೆಳೆದಿದ್ದಾರೆ. ಅವರಿಗೆ ೧೯೮೯ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಸಂದಿದೆ. ಜೊತೆಗೆ ವಿಶ್ವದೆಲ್ಲೆಡೆಯ ಜನ ಅವರ ನಗೆಮೊಗ, ಚಿಂತನ, ಮಾನವೀಯ ಮೌಲ್ಯಗಳ ಭೋಧನೆ ಮತ್ತು ಬದುಕಿನ ರೀತಿಗಳಿಗೆ ಮಾರುಹೋಗಿದ್ದಾರೆ.ಅವರ ಪುಸ್ತಕಗಳಾದ ‘ಸಂತೋಷವೆಂಬ ಕಲೆ (Art of Happiness)’ ಮತ್ತು ಆತ್ಮಚರಿತ್ರೆಗಳನ್ನು ಓದಿದಾಗ ನಮ್ಮ ಮನಸ್ಸುಗಳು ಅರಳಿದಂತಹ ಹೃದ್ಭಾವ ತೆರೆದುಕೊಳ್ಳುತ್ತದೆ.

ಕಷ್ಟಗಳು ಬಂದಾಗ ಒಬ್ಬ ಮನುಷ್ಯ ಹೇಗಿರುತ್ತಾನೆ ಎಂಬುದು ಆತನ ಬಗ್ಗೆ ಸಮಸ್ತವಾಗಿ ಹೇಳುತ್ತದೆ. ದಲೈಲಾಮ ಕಷ್ಟಗಳ ನಡುವೆಯೇ ತಮ್ಮನ್ನು ಬೆಳೆಸಿಕೊಂಡವರು. ಕಷ್ಟಗಳನ್ನು ಮೀರಿ ಹೆಮ್ಮರವಾಗಿ ಬೆಳೆದುನಿಂತವರು.

ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ದಲೈಲಾಮ ಅವರ ಕುರಿತು ‘ದಿ ಟೈಮ್ಸ್’ ಪತ್ರಿಕೆ ಹೀಗೆ ಬರೆಯುತ್ತದೆ-‘ಇವರು ಯಾವುದೇ ಧಾರ್ಮಿಕ ಮುಖಂಡ, ರಾಜಕೀಯ ನಾಯಕ, ಸಿನಿಮಾನಟನಿಗಿಂತ ಸೂಜಿಗಲ್ಲಿನಂತೆ ಜನರನ್ನು ಸೆಳೆಯುತ್ತಾರೆ. ಇವರು ಜೀವನವನ್ನು ನಮ್ಮೆಲ್ಲರಿಗಿಂತ ಭಿನ್ನವಾಗಿ ನೋಡುವುದರಿಂದ ಆಪ್ತರಾಗುತ್ತಾರೆ. ಉಳಿದವರು ಉಪದೇಶ ಮಾಡುತ್ತಾರೆ. ಆದರೆ ಇವರು ದೇಶ (ಜೀವನ) ತೋರಿಸುತ್ತಾರೆ. ಎಷ್ಟು ಮಂದಿಗೆ ಆ ಭಾಗ್ಯ ಸಿಕ್ಕಿದೆಯೋ ಗೊತ್ತಿಲ್ಲ, ಆದರೆ ದಲೈಲಾಮ ಜತೆ ಮಾತುಕತೆಗೆ ಕುಳಿತುಕೊಂಡರೆ, ನಾವು ನಮ್ಮ ಬದುಕನ್ನು ಆಪ್ತಭಾವದಿಂದ ಬದುಕಲು ಪ್ರಾರಂಭಿಸ ತೊಡಗುತ್ತೇವೆ’.

ವೃತ್ತಿಪರ ನಗೆಗಾರ

ತಮ್ಮ ಆತ್ಮ ಚರಿತ್ರೆಯಲ್ಲಿ ದಲೈಲಾಮ ತಮ್ಮನ್ನು ವೃತ್ತಿಪರ ನಗೆಗಾರ ಎಂದು ಕರೆದುಕೊಳ್ಳುತ್ತಾರೆ. ಅವರು ಹಾಗೇಕೆ ತಮ್ಮನ್ನು ಕರೆದುಕೊಳ್ಳುತ್ತಾರೆ ಎಂಬುದನ್ನುಅವರ ಮಾತುಗಳಲ್ಲೇ ಕೇಳಬೇಕು.

ಯಾಕೆ ಹೀಗಾಯಿತೋ ಗೊತ್ತಿಲ್ಲ. ಬದುಕಿನಲ್ಲಿ ನನಗೆ ಪದೇಪದೆ ಒಂದಲ್ಲ ಒಂದು ಸಂಕಟ ಎದುರಾಗುತ್ತಿತ್ತು. ಇದೇ ಸಂದರ್ಭದಲ್ಲಿ ನನ್ನ ದೇಶವೂ ರಾಜಕೀಯ, ಧಾರ್ಮಿಕ ಸಂಕಷ್ಟಗಳಿಗೆ ಸಿಲುಕಿಕೊಂಡಿತ್ತು. ಸಾಕಪ್ಪಾ ಈ ಬದುಕು ಎನ್ನಿಸುವಂಥ ಕ್ಷಣಗಳವು. ಅಂಥ ಸಂಕಟದ ಸಂದರ್ಭದಲ್ಲಿಯೂ ನಾನು ನಗುನಗುತ್ತಾ ಬದುಕುತ್ತಿದ್ದೆ. ಅಡ್ಡಾಡಿ ಬಂದ ಕಡೆಯಲ್ಲೆಲ್ಲ ನನ್ನ ‘ನಗುಮುಖ’ ಸುದ್ದಿ ಮಾಡಿತು. ನನ್ನನ್ನು, ನನಗೆ ಎದುರಾಗುವ ಸಂಕಟಗಳನ್ನು ತುಂಬಾ ಹತ್ತಿರದಿಂದ ಕಂಡಿದ್ದ ಜನ ಈ ಸಂದರ್ಭದಲ್ಲಿ ಕೇಳಿಯೇಬಿಟ್ಟರು: ಕಣ್ಮುಂದೆ ಸಾವಿರ ಸಂಕಟವಿದ್ದರೂ ಇಷ್ಟೊಂದು ಸಹಜವಾಗಿ, ಮುಕ್ತವಾಗಿ ನಗುತ್ತೀರಲ್ಲ, ಅದು ಹೇಗೆ ಸಾಧ್ಯ? ಅಂಥ ಸಂದರ್ಭದಲ್ಲಿ- ‘ನಾನು ನಿರಂತರ ನಗೆಗಾರ’. ಹಾಗಾಗಿ ಎಂಥ ಸಂದರ್ಭದಲ್ಲೂ ಖುಷಿಯಿಂದ ನಗುವುದು ನನಗೆ ಅಭ್ಯಾಸ ಆಗಿಬಿಟ್ಟಿದೆ ಅನ್ನುತ್ತೇನೆ.

ಸದಾ ನಗುನಗುತ್ತಾ ಇರುವುದು ಟಿಬೆಟಿಯನ್ನರಿಗೆ ಒಂದು ಅಭ್ಯಾಸ, ಚಟ. ನಗೆ ಎಂಬುದು ಟಿಬೆಟಿಯನ್ನರಿಗೆ ಐಡೆಂಟಿಟಿ ಇದ್ದ ಹಾಗೆ. ಬೇಕಿದ್ದರೆ ಸೂಕ್ಷ್ಮವಾಗಿ ಗಮನಿಸಿ ನೋಡಿ: ಟಿಬೆಟಿಯನ್ನರು ಮುಖ ಗಂಟಿಕ್ಕಿಕೊಂಡ ಭಂಗಿಯಲ್ಲಿ ಕಾಣಿಸುವುದಿಲ್ಲ. ಕೆಲವೊಮ್ಮೆ ವಿನಾಕಾರಣ ಸಿಟ್ಟಾಗುವ ಭಾರತೀಯರು ಅಥವಾ ಜಪಾನಿಯರಂತೆ ಟಿಬೆಟ್‌ನ ಜನ ವರ್ತಿಸುವುದಿಲ್ಲ. ಇಟಾಲಿಯನ್ನರ ಥರ ಅವರು ಸದಾ ಉಲ್ಲಾಸದಿಂದ ಇರುತ್ತಾರೆ.

ಸದಾ ನಗುನಗುತ್ತಾ ಇರುವ ಗುಣ ನನಗೆ ಒಂದು ರೀತಿಯಲ್ಲಿ ವಂಶಪಾರಂಪರ್ಯವಾಗಿ ಬಂದ ಬಳುವಳಿ ಅನ್ನಬಹುದು. ನಾನು ಪುಟ್ಟದೊಂದು ಕುಗ್ರಾಮದಿಂದ ಬಂದವನು. ನನ್ನ ಬಾಲ್ಯ ಸಹಜತೆಗೆ ತುಂಬ ಹತ್ತಿರವಿತ್ತು. ನನ್ನ ಜತೆಗಿದ್ದವರ ಮಾತು, ವರ್ತನೆಯಲ್ಲಿ ಕಪಟವಿರಲಿಲ್ಲ. ಕುಹಕವಿರಲಿಲ್ಲ. ನಾಟಕವಿರಲಿಲ್ಲ. ನಾವು ದಿನಾಲೂ ಪರಸ್ಪರರನ್ನು ರೇಗಿಸುತ್ತಾ, ಗೇಲಿ ಮಾಡುತ್ತಾ, ಆಗೊಮ್ಮೆ ಈಗೊಮ್ಮೆ ಜಗಳವನ್ನೂ ಮಾಡುತ್ತಾ ಬದುಕಿಬಿಟ್ಟೆವು. ಹೀಗೆ ಜೀವಿಸುವುದು ನಮ್ಮ ಬದುಕಿನ ಭಾಗವೇ ಆಗಿಹೋಯಿತು.

ಅದರರ್ಥ, ಬಾಲ್ಯದ ಬಡತನದ ಬದುಕಿನಲ್ಲಿ ಸಂಕಟಗಳು ಇರಲೇ ಇಲ್ಲ ಎಂದಲ್ಲ. ಈಗಿರುವಂತೆ ಅಥವಾ ಅದನ್ನೂ ಮೀರಿದಂಥ ಕಷ್ಟಗಳು ಇದ್ದೇ ಇದ್ದವು. ಆದರೆ, ಕಷ್ಟ ಎಂದುಕೊಂಡು ಧೈರ್ಯ ಕಳೆದುಕೊಂಡರೆ ಅದರಿಂದ ಯಾವ ಪ್ರಯೋಜನವೂ ಆಗುತ್ತಿರಲಿಲ್ಲ. ಅಳುಮುಖ ಮಾಡಿಕೊಂಡು ಅಥವಾ ಯೋಚಿಸುತ್ತಾ ಕೂರುವುದರಿಂದ ಸಮಸ್ಯೆ ಬಗೆಹರಿಯುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಯ್ಯೋ ಹೀಗಾಗಿಬಿಡ್ತಲ್ಲ ಎಂದು ಯೋಚಿಸುತ್ತಾ ಕೂತರೆ ಒಂದಿಡೀ ದಿನ ಅಥವಾ ಒಂದು ವಾರದ ನೆಮ್ಮದಿಯೇ ಕೈಬಿಟ್ಟು ಹೋಗುವ ಸಂಭವವಿತ್ತು.

ನನ್ನ ಅನುಭವದ ಪ್ರಕಾರ ಹೇಳುವುದಾದರೆ, ಪ್ರತಿಯೊಂದು ಸಂದರ್ಭದಲ್ಲೂ ನಾವು ಧನಾತ್ಮಕವಾಗಿಯೇ ಯೋಚಿಸಲು ಮುಂದಾಗಬೇಕು. ಒಂದು ಸಂಕಟ ಎದುರಾದಾಗ ಓಹ್, ಬದುಕಿನ್ನು ಮುಗಿದೇ ಹೋಯ್ತು ಎಂದುಕೊಳ್ಳುವ ಬದಲು ಈ ಕಷ್ಟವನ್ನು ಎದುರಿಸುವ ನೆಪದಲ್ಲಿ ನಾವು ಏನೆಲ್ಲಾ ಪಾಠ ಕಲಿಯಬಹುದು ಎಂದು ಯೋಚಿಸಿದರೆ, ಅಷ್ಟರಮಟ್ಟಿಗೆ ನಮ್ಮ ಭಯ ಕಡಿಮೆಯಾಗುತ್ತದೆ. ಬಾಳಹಾದಿಯಲ್ಲಿ ನಾನು ಈ ಮಾರ್ಗವನ್ನೇ ಅನುಸರಿಸಿದೆ. ಪ್ರತಿ ಕ್ಷಣವನ್ನೂ ಶಾಂತಿಯಿಂದಲೇ ಎದುರುಗೊಂಡೆ. ಸದಾ ನಗುತ್ತಿರು, ಎಂಥ ಸಂದರ್ಭದಲ್ಲೂ ಎದೆಗುಂದದಿರು, ಒಳ್ಳೆಯತನಕ್ಕೆ ಎಂದೆಂದಿಗೂ ಜಯ ಎಂಬ ಮಾತಿನಲ್ಲಿ ನಂಬಿಕೆಯಿಡು ಎಂಬ ಬೌದ್ಧಧರ್ಮದ ತತ್ವ ಹಾಗೂ ಬಾಲ್ಯದಲ್ಲಿ ದೊರೆತ ಅನುಭವವೇ ನನ್ನ ಇಂದಿನ ಶಾಂತಮನೋಭಾವಕ್ಕೆ ಕಾರಣ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ.

ಎಲ್ಲರಿಗೂ ಗೊತ್ತಿರುವಂತೆ, ಐವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ನನಗೆ ವಾಸಕ್ಕೊಂದು ಮನೆಯಿಲ್ಲ. ನನ್ನ ದೇಶದೊಳಗೆ ಪ್ರವೇಶವಿಲ್ಲ. ನಿಜ ಹೇಳುತ್ತೇನೆ. ಇದು ಒಂದು ಕೊರತೆ ಎಂದು ನನಗೆ ಖಂಡಿತ ಅನಿಸಿಲ್ಲ. ನನಗೆ ನನ್ನದೆನ್ನುವ ಸ್ವಂತ ಮನೆ ಇಲ್ಲದಿದ್ದರೆ ಏನಂತೆ? ಜಗತ್ತಿನ ಹತ್ತಾರು ದೇಶಗಳ ಜನರ ಮನೆ-ಮನದಲ್ಲಿ ನನಗೆ ಮುಕ್ತ ಸ್ವಾಗತವಿದೆ. ಅಮೆರಿಕ, ಯುರೋಪ್, ಥೈವಾನ್, ಏಷ್ಯಾ ದೇಶಗಳಲ್ಲಿರುವ ಧಾರ್ಮಿಕ ಮುಖಂಡರು, ಉದ್ಯಮಿಗಳು, ಪೋಪ್‌ಗಳು ನನ್ನನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ನನ್ನೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಸಲಹೆ ಕೇಳುತ್ತಾರೆ. ನನ್ನ ಹೋರಾಟದ ಬದುಕಿನ ಬಗ್ಗೆ ಮೆಚ್ಚುಗೆಯ ಮಾತಾಡುತ್ತಾರೆ.

ಇವೆಲ್ಲದರ ಮಧ್ಯೆಯೂ, ಒಮ್ಮೆ ಹಿಂತಿರುಗಿ ನೋಡಿದರೆ, ನನ್ನದು ನತದೃಷ್ಟ ಬದುಕು ಎಂಬ ಭಾವ ನನ್ನನ್ನು ಕಾಡುತ್ತದೆ. ಆದರೆ ಅಂಥ ಸಂದರ್ಭದಲ್ಲೆಲ್ಲ ನನ್ನನ್ನು ನಾನೇ ಸಮಾಧಾನಿಸಿಕೊಳ್ಳುತ್ತೇನೆ. ಗೃಹಬಂಧನವಿಲ್ಲ, ಹೀಗೇ ಬದುಕಬೇಕು ಎಂಬ ಶಿಷ್ಟಾಚಾರದ ಹಂಗಿಲ್ಲ. ಇಂಥ ಕಡೆಯೇ ಅಡ್ಡಾಡಬೇಕು ಎಂಬ ನಿರ್ಬಂಧವೂ ಇಲ್ಲ. ಹಾಗಾಗಿ ಈ ಬದುಕಲ್ಲೂ ಒಂದು ಸ್ವಾರಸ್ಯವಿದೆ, ಸಂಭ್ರಮವಿದೆ ಅಂದುಕೊಳ್ಳುತ್ತೇನೆ. ಇಂಥದೊಂದು ಭಾವ ಜತೆಯಾದ ಕೂಡಲೇ ಮನಸ್ಸು ಹಗುರಾಗುತ್ತದೆ. ಮೊಗದಲ್ಲಿ ನಗೆಯ ಹೂ ಅರಳುತ್ತದೆ…

ಉಲ್ಲೇಖಗಳು

ಮಾಹಿತಿ ಕೃಪೆ

  • ದಲೈಲಾಮ ಅವರ ಸ್ವಂತ ಮಾತುಗಳು ವಿಶ್ವೇಶ್ವರ ಭಟ್ಟರು ತಮ್ಮ ‘ಜನಗಳ ಮನ’ ಅಂಕಣದಲ್ಲಿ ದಲೈಲಾಮ ಅವರ ಆತ್ಮಚರಿತ್ರೆಯಿಂದ ಮೂಡಿಸಿರುವ ‘ದಲೈಲಾಮ ಎಂಬ ನಿರಂತರ ನಗೆಗಾರ’ದಲ್ಲಿ ಮೂಡಿಬಂದಿದೆ.

Tags:

ದಲೈ ಲಾಮಾ ೧೪ನೇ ದಲೈಲಾಮದಲೈ ಲಾಮಾ ವೃತ್ತಿಪರ ನಗೆಗಾರದಲೈ ಲಾಮಾ ಉಲ್ಲೇಖಗಳುದಲೈ ಲಾಮಾ ಮಾಹಿತಿ ಕೃಪೆದಲೈ ಲಾಮಾಗುರು

🔥 Trending searches on Wiki ಕನ್ನಡ:

ಶಬ್ದಮಣಿದರ್ಪಣಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜ್ಯೋತಿಷ ಶಾಸ್ತ್ರಜನಪದ ಕಲೆಗಳುಜಾಗತೀಕರಣರಾಮಾಯಣಕಾವ್ಯಮೀಮಾಂಸೆನಕ್ಷತ್ರಮಣ್ಣಿನ ಸವಕಳಿಇತಿಹಾಸಸಾಮ್ರಾಟ್ ಅಶೋಕಹಂಪೆಮಹಾತ್ಮ ಗಾಂಧಿಮಂಡಲ ಹಾವುಅಲಂಕಾರಕಂಪ್ಯೂಟರ್ವಚನಕಾರರ ಅಂಕಿತ ನಾಮಗಳುರಾಜಕೀಯ ವಿಜ್ಞಾನವಿಷ್ಣುವರ್ಧನ್ (ನಟ)ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ರಾವಣಕರ್ನಾಟಕ ಲೋಕಸೇವಾ ಆಯೋಗಮಂಕುತಿಮ್ಮನ ಕಗ್ಗಶೈಕ್ಷಣಿಕ ಮನೋವಿಜ್ಞಾನದಾವಣಗೆರೆಟಿ. ವಿ. ವೆಂಕಟಾಚಲ ಶಾಸ್ತ್ರೀವಿಜಯನಗರಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಜ್ಜೆಪಂಪಗ್ರೀನ್ ಮಾರ್ಕೆಟಿಂಗ್ಮಾನವ ಅಸ್ಥಿಪಂಜರಮಹಾವೀರಶಾತವಾಹನರುಕುದುರೆಒಗಟುಗೌತಮಿಪುತ್ರ ಶಾತಕರ್ಣಿಬರಗೂರು ರಾಮಚಂದ್ರಪ್ಪಭಾರತದ ರಾಷ್ಟ್ರೀಯ ಚಿನ್ಹೆಗಳುದಾಳಿಂಬೆಖೊಖೊನಾಮಪದಸ್ತ್ರೀವಿದ್ಯಾರ್ಥಿಇಮ್ಮಡಿ ಪುಲಕೇಶಿಅಕ್ಷಾಂಶ ಮತ್ತು ರೇಖಾಂಶರಾಮ ಮನೋಹರ ಲೋಹಿಯಾಸಿಂಹತಾಳಗುಂದ ಶಾಸನಚಂದ್ರ (ದೇವತೆ)ಅರಳಿಮರಎಚ್.ಎಸ್.ಶಿವಪ್ರಕಾಶ್ಶ್ಯೆಕ್ಷಣಿಕ ತಂತ್ರಜ್ಞಾನಅವರ್ಗೀಯ ವ್ಯಂಜನಚಾಲುಕ್ಯಸ್ನೇಹಿತರು (ಚಲನಚಿತ್ರ)ಆದಿ ಕರ್ನಾಟಕಸಂಧಿಬಿಸುಬಿ. ಆರ್. ಅಂಬೇಡ್ಕರ್ಕನ್ನಡ ಸಾಹಿತ್ಯ ಸಮ್ಮೇಳನಹೂಡಿಕೆಲಿಂಗಾಯತ ಪಂಚಮಸಾಲಿಹೊಯ್ಸಳ ವಾಸ್ತುಶಿಲ್ಪಮಲಬದ್ಧತೆಇಸ್ರೇಲ್ದ್ವಿರುಕ್ತಿಭಾರತೀಯ ರಿಸರ್ವ್ ಬ್ಯಾಂಕ್ಸಂಸ್ಕೃತ ಸಂಧಿಕೃಷ್ಣದೇವರಾಯವಿಜಯ ಕರ್ನಾಟಕಭಾರತದಲ್ಲಿನ ಜಾತಿ ಪದ್ದತಿಬೆಳಗಾವಿಹಸ್ತ ಮೈಥುನಸ್ವಾಮಿ ವಿವೇಕಾನಂದ🡆 More