ಜಾತಕ ಕಥೆಗಳು

ಜಾತಕ ಕಥೆಗಳು ಗೌತಮ ಬುದ್ಧನ ಪೂರ್ವಜನ್ಮಗಳಿಗೆ ಸಂಬಂಧಿಸಿದ ಕಥೆಗಳು.

ಜಾತಕ ಎಂದರೆ ಜನ್ಮಕ್ಕೆ ಸಂಬಂಧಪಟ್ಟದ್ದು ಎಂದರ್ಥ. ಬೌದ್ಧ ಸಾಹಿತ್ಯದಲ್ಲಿ ಇವು ವಿಶಿಷ್ಟ ಸ್ಥಾನ ಪಡೆದಿವೆ. ಪಾಳೀ ತ್ರಿಪಿಟಿಕ ವಾಙ್ಮಯದಲ್ಲಿ ಬುದ್ಧಕನಿಕಾಯದಲ್ಲಿ ಈ ಕಥೆಗಳು ಬರುತ್ತವೆ. ಬುದ್ಧ ತನಗೆ ಸಂಬೋಧಿ ಒದಗಿ ನಿರ್ವಾಣ ಪ್ರಾಪ್ತವಾಗುವ ಮುನ್ನ ಹಲವಾರು ಜನ್ಮಗಳನ್ನೆತ್ತಿ ಪಾರಮಿತಗಳನ್ನು ಪೂರೈಸಿ ಲೋಕಸಂಗ್ರಹ ಮಾಡಿದನೆಂಬ ಕಲ್ಪನೆ ಈ ಕಥೆಗಳ ಮೂಲ. ನಿರ್ವಾಣ ಪಡೆಯುವ ಮುಂಚೆ ಗೌತಮ ಬೋಧಿಸತ್ತ್ವನೆನಿಸಿಕೊಳ್ಳುತ್ತಾನೆ. ಈ ಭಾಗದಲ್ಲಿ 547 ಕಥೆಗಳನ್ನು ಇಪ್ಪತ್ತೆರಡು ನಿಪಾತಗಳಲ್ಲಿ ಅಳವಡಿಸಲಾಗಿದೆ. ಇಲ್ಲಿ ಕಥೆಗಳು, ಕಥನಗಳು, ಪ್ರಸಂಗಗಳು ಇತಿವೃತ್ತಗಳು ಜನಪದ ರೀತಿಯ ಕಥೆಗಳು, ನೀತಿಕಥೆಗಳು ಎಲ್ಲವೂ ಇವೆ ; ದೇವತೆಗಳು, ಯಕ್ಷರು, ನಾಗರು, ಕಿನ್ನರರು, ಪಿಶಾಚಿಗಳು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಎಲ್ಲರೂ ಬರುತ್ತಾರೆ. ಈ ಕಥೆಗಳ ಶೈಲಿ ಗದ್ಯ, ಗಾಹೆ, ಸಂವಾದ, ಕಥನಗಳ ಮಣಿಪ್ರವಾಳ. ಪ್ರತಿಜಾತಕದಲ್ಲೂ ಸಂದರ್ಭನಿರೂಪಣೆ (ಪಚ್ಚುಪ್ಪನ್ನವತ್ಥು), ಹಿಂದಿನ ಕಥೆ (ಅತೀತವತ್ಥು), ಗಾಹೆಗಳು (ಅಭಿಸಂಬುದ್ಧಗಾಥಾ), ಗಾಹೆಗಳಿಗೆ ತಾತ್ಪರ್ಯಕಥನ (ವೈಯ್ಯಾಕರಣ), ವ್ಯಕ್ತಿ ನಿರ್ದೇಶನ (ಸಮೋಧಾನ) ಎಂಬ ಭಾಗಗಳಿರುತ್ತವೆ. ಜಾತಕಕ್ಕೆ ಪ್ರಾಚೀನವಾದ ಜಾತಕಟ್ಠ ಕಥಾ ಎಂಬ ಟೀಕೆಯಿದೆ.

ಪಾಳಿ ಭಾಷೆಯಲ್ಲಿ ರಚಿತವಾಗಿರುವ ಈ ಕಥೆಗಳ ಬಹುಭಾಗ ಗದ್ಯದಲ್ಲಿದೆ. ಸಂಭಾಷಣೆಯ ಕೆಲವು ಪ್ರಮುಖ ಭಾಗಗಳು ಪದ್ಯರೂಪದಲ್ಲಿವೆ. ಮೊದಲಲ್ಲಿ ಪೂರ್ವಜನ್ಮದ ಕಥೆಯನ್ನು ಹೇಳುವ ಸಂದರ್ಭ ಬರುವ ಚಾರಿತ್ರಿಕ ಬುದ್ಧನ ಜೀವನದ ಒಂದು ಘಟನೆ ಬರುತ್ತದೆ. ಅನಂತರ ಪೂರ್ವಜನ್ಮದಲ್ಲಿ ಬರುವ ಪಾತ್ರಗಳಿಗೂ ವರ್ತಮಾನದ ವ್ಯಕ್ತಿಗಳಿಗೂ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಅಂತ್ಯದಲ್ಲಿ ಸಾರ್ವತ್ರಿಕ ನೀತಿಯಾಗಲಿ ಬೌದ್ಧಮತದ ವಿಶಿಷ್ಟ ತತ್ತ್ವವಾಗಲಿ ನಿರೂಪಣಗೊಂಡಿರುತ್ತದೆ.

ಇತಿಹಾಸ ಮತ್ತು ಜಾತಕ ಕಥೆಗಳು

ಇತಿಹಾಸ ದೃಷ್ಟಿಯಿಂದ ಇಲ್ಲಿನ ಕಥೆಗಳು ತುಂಬ ಹಿಂದಿನ ಕಾಲಕ್ಕೆ ಸಂಬಂಧಿಸಿದುವು. ಇಲ್ಲಿನ ಗದ್ಯಶೈಲಿ, ಗಾದೆಗಳ ಭಾಷೆ ಸಂವಾದದ ರೂಪಗಳನ್ನು ಪರಿಶೀಲಿಸಿದರೆ ವೈದಿಕ ವಾಙ್ಮಯದ ಕಾಲದವರೆಗೂ ಇವುಗಳ ವ್ಯಾಪ್ತಿಯಿದೆ ಎನ್ನಬಹುದು. ಇವು ಬೌದ್ಧರ ಕಾಲಕ್ಕೂ ಮುಂಚಿನವೆಂಬುದು ನಿರ್ವಿವಾದ. ಪ್ರಾಚೀನವಾದ ಕಥೆಗಳಿಗೆ ಬೌದ್ಧಧರ್ಮದ ಸಂಸ್ಕಾರ ಮಾಡಿ ನಿಲ್ಲಿಸಿದ್ದಾರಷ್ಟೆ. ಹಲವು ವೇಳೆ ಕಥಾನಾಯಕ ಬೋಧಿಸತ್ತ್ವನೆಂಬುದಷ್ಟೇ ಬೌದ್ಧವಿವರ. ಜಾತಕಗಳಲ್ಲಿ ಪ್ರಾಚೀನ ಭಾರತ, ಸಂಪ್ರದಾಯಗಳು, ಆಚಾರವ್ಯವಹಾರಗಳು, ವಿಧಿನಿಷೇಧಗಳು, ದೇಶಾಚಾರ ಕುಲಾಚಾರಗಳು-ಇವುಗಳ ಬಗ್ಗೆ ವಿಪುಲವಾದ ವಿವರಗಳು ದೊರೆಯುತ್ತವೆ. ಕ್ರಿಸ್ತಪೂರ್ವಯುಗಗಳಲ್ಲಿ ಪ್ರವೃತ್ತವಾಗಿದ್ದ ಭಾರತೀಯ ಸಂಸ್ಕೃತಿಯ ಹಲವು ಪ್ರಕಾರಗಳು ಜಾತಕ ಕಥೆಗಳ ಪರಿಶೀಲನೆಯಿಂದ ಸ್ಪಷ್ಟವಾಗುತ್ತವೆ. ಜಾತಕಗಳಲ್ಲಿ ಐತಿಹಾಸಿಕ ರಾಜರಾದ ನಂದ, ಮೌರ್ಯ, ಗುಪ್ತರ ಉಲ್ಲೇಖವಿಲ್ಲ. ಅರ್ಧಮರ್ಧ ಪೌರಾಣಿಕ ವ್ಯಕ್ತಿಗಳೇ ಇಲ್ಲಿ ಓಡಿಯಾಡುತ್ತಾರೆ. ಕಾಶಿಯ ರಾಜರಾದ ಬ್ರಹ್ಮದತ್ತ, ಮಹಾಪಿಂಗಳ, ಕುರುರಾಜನಾದ ಯುದಿಟ್ಠಿಲ (ಮಹಾಭಾರತದ ಯುಧಿಷ್ಠಿರ) ಕುರುರಾಜನ ಮಂತ್ರಿ ವಿಧುರ ಪಂಡಿತ, ಒಕ್ಕಾಕ (ಇಕ್ಷ್ವಾಕು) ರಾಜನಾದ ಕುಶ, ಮದ್ರರಾಜಪುತ್ರಿಯಾದ ಪ್ರಭಾವತಿ, ದಶರಥ ಜಾತಕದಲ್ಲಿನ ರಾಮಪಂಡಿತ, ಲಕ್ಖಣಕುವಾರ, ಘಟಜಾತಕದಲ್ಲಿ ಬರುವ ಕಣ್ಣ (ಕೃಷ್ಣ), ನರಭಕ್ಷಕರಾಜನಾದ ಕಲ್ಮಾಷಪಾದ, ವಿದೇಹದ ರಾಜ ಜನಕ, ಶಿಬಿ, ಸುತಸೋಮರಾಜ ಇತ್ಯಾದಿ. ರಾಮಾಯಣದ ಕಥೆಯ ಪ್ರಾಚೀನ ಪಾಠ ದಶರಥ ಜಾತಕದಲ್ಲೂ ಭಾಗವತದ ಕಲ್ಪನೆಗೆ ಮೂಲ ಘಟಕಜಾತಕದಲ್ಲೂ ಉಪನಿಷತ್ತಿನ ದ್ರಷ್ಟಾರನಾದ ಶ್ವೇತಕೇತುವಿನ ವೃತ್ತಾಂತ ಎರಡು ಜಾತಕಗಳಲ್ಲೂ ಕಾಣುತ್ತವೆಂದು ವಾದಿಸುವವರಿದ್ದಾರೆ.

ಇತರ ಕಥೆಗಳ ಆಕರವಾಗಿ

ಭಾರತದ, ಜಗತ್ತಿನ, ಕಥಾಪ್ರಪಂಚದಲ್ಲಿ ಪ್ರಚಲಿತವಾಗಿರುವ ಸಾವಿರಾರು ಕಥೆಗಳಲ್ಲಿ ನೂರಾರು ಜಾತಕದಿಂದಲೇ ಆಯ್ದುಕೊಂಡವು. ಇಲ್ಲಿ ಬರುವ ಪ್ರಾಣಿಕಥೆಗಳು, ನೀತಿಕಥೆಗಳು ಮುಂದೆ ರೂಪತಳೆದ ತಂತ್ರಾಖ್ಯಾಯಿಕೆ (ಪಂಚತಂತ್ರ), ಹಿತೋಪದೇಶ, ಬೃಹತ್ಕಥೆಗಳಲ್ಲಿ ಇಳಿದು ಬಂದುವು. ಸಿಂಹ ಗೂಳಿಗಳ ಮಿತ್ರಭೇದದ ಕಥೆ, ಮೊಸಳೆಯ ಕಥೆ, ಸಿಂಹದ ಚರ್ಮ ಹೊದೆದ ಕತ್ತೆಯ ಕಥೆ, ಮೀನುಗಳನ್ನು ಬೇರೆ ಕೊಳಕ್ಕೆ ಒಯ್ದ ಕೊಕ್ಕರೆಯ ಕಥೆ, ಕಾಗೆಯ ಮಧುರ ಕಂಠವನ್ನು ಮೆಚ್ಚಿಕೊಂಡ ನರಿಯ ಕಥೆ-ಹೀಗೆ ನೂರಾರು ಕಥೆಗಳಿಗೆ ಜಾತಕವೇ ಆಕರ. ಕಾಲಕ್ರಮದಲ್ಲಿ ಬೌದ್ಧರಿಗೂ ಹೊರದೇಶೀಯರಗೂ ವಿಶೇಷ ಸಂಪರ್ಕವಿದ್ದುದರಿಂದ ಈ ಕಥೆಗಳು ಪ್ರಪಂಚದಲ್ಲೆಲ್ಲ ಹರಡಿದುವು. ಈಸೋಪನ ಕಥೆಗಳಿಗೆ ಜಾತಕದ ನೀತಿಕಥೆಗಳೇ ಮಾರ್ಗದರ್ಶಿ ಎಂಬುದು ಸಿದ್ಧವಾಗಿದೆ. ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ವಿಶ್ವದ ಕಥಾಸಾಹಿತ್ಯಕ್ಕೆ ಜಾತಕ ವಿಪುಲವಾದ ಸಾಮಗ್ರಿಯನ್ನು ಒದಗಿಸಿದೆಯೆಂಬುದು ನಿರ್ವಿವಾದ.

ಶಿಲ್ಪದಲ್ಲಿ ಜಾತಕ ಕಥೆಗಳು

ಜಾತಕದ ಕಥೆಗಳನ್ನು ಶಿಲ್ಪದಲ್ಲಿ ಮೂಡಿಸಿರುವುದೊಂದು ವಿಶೇಷ. ಕ್ರಿಸ್ತ ಪೂರ್ವ ಮೂರು, ಎರಡನೆಯ ಶತಮಾನಗಳಲ್ಲಿ ರೂಪತಳೆದ ಬಾರ್ಹುತ್ ಮತ್ತು ಸಾಂಚಿಸ್ತೂಪಗಳಲ್ಲಿ ತೋರಣಶಿಲ್ಪ, ಭಿತ್ತಿ ಶಿಲ್ಪಗಳಲ್ಲಿ ಹಲವಾರು ಜಾತಕದ ಕಥಗಳಿವೆ. ಬಾರ್ಹುತ್‍ಸ್ತೂಪದ ಶಿಲ್ಪದಲ್ಲೇ ಸುಮಾರು ಮೂವತ್ತು ಜಾತಕದ ಕಥೆಗಳನ್ನು ಆಯ್ದುಕೊಂಡು ಅವುಗಳ ಪ್ರಮುಖ ಪ್ರಸಂಗಗಳನ್ನು ನಿರೂಪಿಸಿದ್ದಾರೆ. ಈ ಶಿಲ್ಪಗಳಲ್ಲಿ ಕೆಲವಕ್ಕೆ ಜಾತಕದ ಹೆಸರುಗಳನ್ನು ನಿರ್ದೇಶಿಸಿ ಅಲ್ಲೇ ಕಡೆದಿದ್ದಾರೆ. ಕ್ರಿಸ್ತಾಬ್ದ ಎರಡನೆಯ ಶತಮಾನದ ಅಮರಾವತೀ ಸ್ತೂಪದಲ್ಲಿಯೂ ಅಜಂತ ಗುಹಾಂತರ್ದೇವಾಲಯಗಳಲ್ಲಿಯೂ ಜಾತಕ ಕಥೆಗಳನ್ನು ಶಿಲ್ಪದಲ್ಲಿ, ವರ್ಣಚಿತ್ರದಲ್ಲಿ ಮೂಡಿಸಿದ್ದಾರೆ. ಒಂಬತ್ತನೆಯ ಶತಮಾನದಲ್ಲಿ ಜಾವದ ಬೊರೋಬುದೂರಿನಲ್ಲಿ ನಿರ್ಮಿತವಾದ ಸ್ತೂಪಮಂದಿರಗಳಲ್ಲಿಯೂ ಹದಿಮೂರನೆಯ ಶತಮಾನದಲ್ಲಿ ಬರ್ಮದ ಪಾಗನ್ ದೇವಾಲಯಗಳಲ್ಲಿಯೂ ಮುಂದಿನ ಶತಮಾನದಲ್ಲಿ ಸಯಾಮಿನ ಸುಖೋದಯ ಮಂದಿರದಲ್ಲಿಯೂ ಜಾತಕ ಕಥೆಗಳ ಸಂದರ್ಭಗಳನ್ನು ಶಿಲ್ಪದಲ್ಲಿ ಕಡೆದಿದ್ದಾರೆ. ಬೊರೋಬುದೂರಿನಲ್ಲಂತೂ ನೂರಾರು ಕಥೆಗಳು ರೂಪತಳೆದಿವೆ. ಶಿಲ್ಪ ಮಾತ್ರವಲ್ಲ, ಕ್ರಿಸ್ತಾಬ್ದ 412 ರಲ್ಲಿ ಸಿಂಹಳಯಾತ್ರೆ ಕೈಗೊಂಡ ಚೀನೀಯಾತ್ರಿಕ ಫಾಹಿಯಾನನು ಅಭಯಗಿರಿಯಲ್ಲಿ ಉತ್ಸವವೊಂದರ ಸಂದರ್ಭದಲ್ಲಿದ್ದಾಗ ಉತ್ಸವ ಬರುವ ದಾರಿಯ ಇಕ್ಕೆಲಗಳಲ್ಲೂ ಐನೂರು ಜಾತಕ ಕಥೆಗಳ ವರ್ಣಚಿತ್ರಗಳನ್ನು ಬಿಡಿಸಿಟ್ಟಿದ್ದರಂತೆ. ಯುವಾನ್‍ಛ್ವಾಂಗನೂ ಜಾತಕ ಕಥೆಗಳ ಚಿತ್ರಣವನ್ನೂ ಪ್ರಸ್ತಾಪಿಸುತ್ತಾನೆ. ಈ ವರ್ಣಚಿತ್ರಗಳೇನೂ ಈಗ ಉಳಿದಿಲ್ಲ.

ಜಾತಕ ಕಥೆಗಳನ್ನು ಪರಿಶೀಲಿಸಿದರೆ ಪಾಳೀವಾಙ್ಮಯ ಸಿದ್ದವಾಗುವುದಕ್ಕೆ ಮುಂಚಿನ ಭಾರತದ ರಾಜಕೀಯ, ಸಾಮಾಜಿಕ, ಆರ್ಥಿಕ ಧಾರ್ಮಿಕ ಪರಿಸ್ಥಿತಿಗಳು ಸ್ಪಷ್ಟವಾಗುವಂತೆ, ಈ ಶಿಲ್ಪಗಳಿಂದ ಆ ಕಾಲದ ಹಲವಾರು ವಿವರಗಳು ತಿಳಿದುಬರುತ್ತವೆ. ಆ ಕಾಲದ ವೇಷಭೂಷಣ, ಅಲಂಕರಣ, ಶಿರೋಪಟ್ಟ, ಕೇಶವಿನ್ಯಾಸ, ಉಪಕರಣಗಳು, ಆಸನಾದಿ ಸಾಮಗ್ರಿಗಳು ಮುಂತಾದ ನೂರಾರು ಸಾಂಸ್ಕøತಿಕ ಪ್ರಕಾರಗಳು ಬೆಳಕಿಗೆ ಬರುತ್ತವೆ. ಅಷ್ಟು ಮಾತ್ರವಲ್ಲ, ಅಲೆಗ್ಸಾಂಡರನ ಅನಂತರ ಭಾರತಕ್ಕೆ ಬಂದ ಗ್ರೀಕ್, ಯವನ, ಗಾಂಧಾರ ಶಿಲ್ಪಿಗಳು ಜಾತಕ ಕಥೆಗಳಿಂದ ಪ್ರಭಾವಿತರಾಗಿ ಅವನ್ನು ಶಿಲ್ಪದಲ್ಲಿ ನಿಲ್ಲಿಸಲು ಯತ್ನಿಸಿದರಾಗಿ ಭಾರತೀಯ ಶಿಲ್ಪ ಬೆಳೆದು ಪ್ರಸಂಗ ನಿರೂಪಣೆಯ ಪದ್ಧತಿ ದೃಢವಾಯಿತು.

ಪ್ರಾಚೀನ ಭಾರತಕ್ಕೆ ತೋರುದೀಪವಾಗಿ

ಸಾರಸ್ವತ ಸಂಪತ್ತು ಎನಿಸಿದ ಜಾತಕ ಕಥೆಗಳಲ್ಲಿ ಪ್ರಾಚೀನ ಭಾರತದ ಕಲ್ಪನೆಗಳು ಉಳಿದು ಬಂದಿವೆ. ಭಾರತೀಯ ಪರಂಪರೆ ಮತ್ತು ಇತಿಹಾಸ ಎನ್ನಲ್ಪಡುವ ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳ ಕಥೆಗಳಿಂದ ಜಾತಕ ಕತೆಗಳು ಬಹು ಪ್ರಭಾವಿತವಾದಂತೆ ಸ್ಪಷ್ಟವಾಗಿ ತೋರುತ್ತವೆ.ಅಂದಿನ ಭಾರತದ ಸ್ಥಿತಿಗತಿಗಳ ಬಗ್ಗೆ ಜಾತಕ ಸಾಹಿತ್ಯ ದೊಡ್ಡ ದೀಪವೊಂದನ್ನು ಹಿಡಿಯುತ್ತದೆ. ಅಂದಿನ ಜನರ ಮನೋಧರ್ಮ ರಾಮ ಲಕ್ಷ್ಮಣರ ವನವಾಸದ ಕಥೆ (ದಶರಥ ಜಾತಕ), ದ್ರೌಪದಿ (ಕೃಷ್ಣೆ) ಐವರು ಗಂಡಂದಿರಿಗೂ ಸಂಸಾರದಲ್ಲಿ ಜುಗುಪ್ಸೆ ಬರುವಂತೆ ಮಾಡಿದ ಕಥೆ (ಕುಣಾಲ ಜಾತಕ) ಮುಂತಾದ ಪ್ರಸಂಗಗಳಿಂದ ಸ್ಪಷ್ಟವಾಗುತ್ತದೆ. ಭಾರತದಲ್ಲಿ ಪಾನಪದ್ಧತಿ ಆರಂಭವಾದ ಬಗೆಯನ್ನು ಒಂದು ಜಾತಕ ವಿವರಿಸುತ್ತದೆ. ರಾಜರೂ ಸಾಮಾನ್ಯ ಜನರೂ ವಿರಕ್ತಿ ತಳೆದು ಭಿಕ್ಷುಗಳಾಗುವ ಸಂಪ್ರದಾಯ ಎಷ್ಟು ಪ್ರಾಚೀನವೆಂಬುದು ಹಲವಾರು ಜಾತಕಗಳಿಂದ ವ್ಯಕ್ತವಾಗುತ್ತದೆ. ವರ್ಣಾಶ್ರಮ ವ್ಯವಸ್ಥೆಯ ಉಗಮವೂ ಇಲ್ಲಿ ಸ್ಪಷ್ಟವಾಗುತ್ತದೆ. ಭಾರತದಲ್ಲಿ ಧರ್ಮದ ಹೆಚ್ಚಳ, ಅಹಿಂಸೆಯ ವೈಶಿಷ್ಟ್ಯ, ವಿರಕ್ತಿಯ ಪ್ರಕಾರಗಳನ್ನು ಜಾತಕ ಕಥೆಗಳು ಮೂಡಿಸಿವೆ.

ಮೂಲ ಪಾಠಗಳು, ಅನುವಾದಗಳು

ಕಳೆದ ಶತಮಾನಗಳಲ್ಲಿ ಡೆನ್ಮಾರ್ಕ್ ದೇಶದ ಫಾಜಬೋಲ್ ಎಂಬ ವಿದ್ವಾಂಸ ಸಮಸ್ತ ಜಾತಕ ಕಥೆಗಳ ಮೂಲಪಾಠವನ್ನು ಪರಿಶ್ರಮದಿಂದ ಪರಿಶೋಧಿಸಿ ರೋಮನ್ ಲಿಪಿಯಲ್ಲಿ ಹಲವು ಸಂಪುಟಗಳಲ್ಲಿ ಪ್ರಕಟಿಸಿದ; ಕೆಲವು ಕಥೆಗಳನ್ನೂ ಅನುವಾದ ಮಾಡಿದ. ಅನಂತರ ಅನೇಕ ವಿದ್ವಾಂಸರು ಇಂಗ್ಲಿಷ್ ಮುಂತಾದ ಪಾಶ್ಚಾತ್ಯ ಭಾಷೆಗಳಿಗೆ ಅನುವಾದಿಸಿದರು. ಕನ್ನಡದಲ್ಲಿ ಜಾತಕ ಕಥೆಗಳ ಅನುವಾದವನ್ನು ಕೈಗೊಂಡವರಲ್ಲಿ ಜಿ.ಪಿ. ರಾಜರತ್ನಂ ಮೊದಲಿಗರು ಹಾಗೂ ಪ್ರಮುಖರು.

ಬಾಹ್ಯ ಸಂಪರ್ಕಗಳು

ಜಾತಕ ಕಥೆಗಳು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಜಾತಕ ಕಥೆಗಳು ಇತಿಹಾಸ ಮತ್ತು ಜಾತಕ ಕಥೆಗಳು ಇತರ ಕಥೆಗಳ ಆಕರವಾಗಿಜಾತಕ ಕಥೆಗಳು ಶಿಲ್ಪದಲ್ಲಿ ಜಾತಕ ಕಥೆಗಳು ಪ್ರಾಚೀನ ಭಾರತಕ್ಕೆ ತೋರುದೀಪವಾಗಿಜಾತಕ ಕಥೆಗಳು ಮೂಲ ಪಾಠಗಳು, ಅನುವಾದಗಳುಜಾತಕ ಕಥೆಗಳು ಬಾಹ್ಯ ಸಂಪರ್ಕಗಳುಜಾತಕ ಕಥೆಗಳುಗೌತಮ ಬುದ್ಧ

🔥 Trending searches on Wiki ಕನ್ನಡ:

ಡೊಳ್ಳು ಕುಣಿತಆಮ್ಲಗಳು ಮತ್ತು ಪ್ರತ್ಯಾಮ್ಲಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಂಖ್ಯಾಶಾಸ್ತ್ರಜಯಚಾಮರಾಜ ಒಡೆಯರ್ಜ್ವರಹಿಂದೂ ಮಾಸಗಳುಪರಿಸರ ರಕ್ಷಣೆಲೋಕಸಭೆಕಪ್ಪೆ ಅರಭಟ್ಟಕಬಡ್ಡಿಪ್ರಶಸ್ತಿಗಳುಗಂಗ (ರಾಜಮನೆತನ)ಹನುಮಂತಚಿತ್ರದುರ್ಗಬಾರ್ಲಿಬಿ.ಜಯಶ್ರೀಮತದಾನರಸ(ಕಾವ್ಯಮೀಮಾಂಸೆ)ಶಿಲೀಂಧ್ರಸಿಂಧನೂರುಶಾಂತಲಾ ದೇವಿಕೇಂದ್ರ ಲೋಕ ಸೇವಾ ಆಯೋಗಭಾರತದಲ್ಲಿ ಮೀಸಲಾತಿಯೋನಿಮಾನವನ ಪಚನ ವ್ಯವಸ್ಥೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ವಸಾಹತುಕುಟುಂಬಭಾರತದ ರಾಷ್ಟ್ರೀಯ ಉದ್ಯಾನಗಳುಮೈಸೂರು ರಾಜ್ಯದಿನೇಶ್ ಕಾರ್ತಿಕ್ತ್ರಿವೇಣಿಉಡುಪಿ ಜಿಲ್ಲೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಿಜಯ ಕರ್ನಾಟಕರಾಜ್ಯಸಭೆಜಲ ಮಾಲಿನ್ಯಹರಿಹರ (ಕವಿ)ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಖ್ಯಾತ ಕರ್ನಾಟಕ ವೃತ್ತಭಾರತದಲ್ಲಿನ ಜಾತಿ ಪದ್ದತಿಕರ್ಬೂಜಭೂಕಂಪಮೇಯರ್ ಮುತ್ತಣ್ಣಅಂಬಿಗರ ಚೌಡಯ್ಯಮಳೆಪಂಪ ಪ್ರಶಸ್ತಿಮೂಲಧಾತುಓಂ ನಮಃ ಶಿವಾಯಕರ್ನಾಟಕ ಹೈ ಕೋರ್ಟ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗೋವಭಾರತದಲ್ಲಿ ಬಡತನವಿಧಾನಸೌಧರಾಮಾಚಾರಿ (ಕನ್ನಡ ಧಾರಾವಾಹಿ)ಸಮುಚ್ಚಯ ಪದಗಳುಭಾರತದ ವಿಶ್ವ ಪರಂಪರೆಯ ತಾಣಗಳುಕರ್ನಾಟಕ ಸಂಗೀತಮಧ್ವಾಚಾರ್ಯಕಾವ್ಯಮೀಮಾಂಸೆಸಮಾಜಶಾಸ್ತ್ರಕ್ರೀಡೆಗಳುಕ್ರಿಕೆಟ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಎಚ್ ಎಸ್ ಶಿವಪ್ರಕಾಶ್ಜೋಡು ನುಡಿಗಟ್ಟುದಾಳಿಂಬೆಮಳೆನೀರು ಕೊಯ್ಲುಹರಕೆಪುರೂರವಸ್ಸಾವಯವ ಬೇಸಾಯಕೊಪ್ಪಳಎಕರೆಜಿ.ಎಚ್.ನಾಯಕಛತ್ರಪತಿ ಶಿವಾಜಿಹೂವು🡆 More