ಜಲಜಶಿಲೆ

ಜಲಜಶಿಲೆಗಳು - ಭೂತೊಗಟೆಯನ್ನು ರಚಿಸಿರುವ ಮೂರು ಪ್ರಧಾನ ಶಿಲಾವರ್ಗಗಳ ಪೈಕಿ ಒಂದು (ಸೆಡಿಮೆಂಟರಿ ರಾಕ್ಸ್).

ಉಳಿದ ಎರಡು ಪ್ರಧಾನ ವರ್ಗಗಳು ಅಗ್ನಿಶಿಲೆಗಳು ಮತ್ತು ರೂಪಾಂತರಿತ ಶಿಲೆಗಳು. ಜಲಜಶಿಲೆಗಳನ್ನು ಅವಸಾದನ ಶಿಲೆ, ಪ್ರಸ್ತರ ಶಿಲೆ ಎಂಬುದಾಗಿಯೂ ಕರೆಯುವುದುಂಟು. ಹೆಚ್ಚಿನ ಜಲಜಶಿಲೆಗಳು ಪದರ ಪದರವಾಗಿವೆ. ವಾಸ್ತವವಾಗಿ ಪದರಗಳು (ಇಲ್ಲವೇ ಪ್ರಸ್ತರೀಕರಣ) ಜಲಜಶಿಲೆಗಳ ಒಂದು ಮುಖ್ಯಲಕ್ಷಣ.

ಭೂತೊಗಟೆಯ ಸರಾಸರಿ ದಪ್ಪ ಸುಮಾರು 10 ಮೈಲಿಗಳು. ಇದರಲ್ಲಿ ಜಲಜಶಿಲೆಗಳು ಕೇವಲ 5% ಮಾತ್ರ ಇವೆಯಷ್ಟೆ. ಆದರೆ ಮೇಲ್ಮೈಯ ತೆರೆದುಕೊಂಡಿರುವ ಪ್ರದೇಶದಲ್ಲಿನ ಶಿಲೆಗಳ ಪೈಕಿ 75% ಕೂಡ ಜಲಜಶಿಲೆಗಳೇ. ಅಲ್ಲಿಗೆ ಭೂತೊಗಟೆಯ ತೀರ ಹೊರಕವಚದಲ್ಲಿ ಒಂದು ತೆಳು ಪದರವಾಗಿ ಜಲಜಶಿಲೆಗಳು ವ್ಯಾಪಿಸಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಪದರದ ವಿತರಣೆ ಏಕರೀತಿ ಆಗಿದೆ. ಎಂದೇನೂ ಭಾವಿಸಬೇಕಾಗಿಲ್ಲ. ಭೂಇತಿಹಾಸದ ಬೇರೆ ಬೇರೆ ಪ್ರಮುಖ ದಾಖಲೆಗಳನ್ನು ಸೆರೆಹಿಡಿದಿಟ್ಟಿರುವ (ಹೆಚ್ಚಾಗಿ ಫಾಸಿಲುಗಳ ರೂಪದಲ್ಲಿ) ಜಲಜಶಿಲೆಗಳು ವಿಜ್ಞಾನಿಗಳಿಗೆ ಅತ್ಯಂತ ಕುತೂಹಲಭರಿತ ಭೂಗ್ರಂಥಗಳಾಗಿವೆ. ಪ್ರಸ್ತರಗಳ ರಚನಾಯುಗವನ್ನು ನಿರ್ಣಯಿಸುವುದು ಸಾಧ್ಯ. ಆದ್ದರಿಂದ ಅವುಗಳಲ್ಲಿ ಲಿಖಿತವಾಗಿರುವ ಫಾಸಿಲುಗಳ ವಯಸ್ಸು ವೇದ್ಯವಾಗುವುದು: ಹೀಗಾಗಿ ಯಾವ ಯಾವ ಯುಗಗಳಲ್ಲಿ ಏನೇನು ಘಟನೆಗಳು ಸಂಭವಿಸಿದುವು ಎಂಬುದನ್ನು ಓದುವುದು ಸುಲಭ.

ಜಲಜಶಿಲೆಗಳ ನಿರ್ಮಾಣ

ಶಿಲೆಗಳು ಸಾಮಾನ್ಯವಾಗಿ ನಿರಂತರ ಶಿಥಿಲೀಕರಣಕ್ಕೆ ಒಳಗಾಗುತ್ತಿರುತ್ತವೆ. ಇದರಲ್ಲಿ ಎರಡು ವಿಧ-ಭೌತ ಮತ್ತು ರಾಸಾಯನಿಕ ಶಿಥಿಲೀಕರಣಗಳು. ಭೌತ ಶಿಥಿಲೀಕರಣದಿಂದ ಶಿಲೆಗಳು ಒಡೆದು ಪುಡಿಯಾದರೆ ರಾಸಾಯನಿಕ ಶಿಥಿಲೀಕರಣದಿಂದ ಅವುಗಳಲ್ಲಿನ ಕೆಲವು ವಸ್ತುಗಳು ನೀರಿನಲ್ಲಿ ಕರಗಿ ವಿಲೀನವಾಗುವುವು. ಶಿಥಿಲೀಕರಿಸಿದ ಪ್ರದೇಶಗಳಿಂದ ಈ ವಸ್ತುಗಳು ಗಾಳಿ, ನದಿ ಮುಂತಾದವುಗಳ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಣೆಯಾಗುತ್ತವೆ. ಹೀಗೆ ಸಾಗುತ್ತಿರುವಾಗ ನಡುವೆ ಒದಗಬಹುದಾದಂಥ ತಗ್ಗುಗಳಲ್ಲಿ, ಅಂದರೆ ಸರೋವರ ಸಮುದ್ರಗಳ ತಳದಲ್ಲಿ ಅವು ಶೇಖರವಾಗುತ್ತವೆ. ನೀರಿನಲ್ಲಿ ವಿಲೀನಗೊಂಡ ವಸ್ತುಗಳು ಸಹ ಸೂಕ್ತ ವಾತಾವರಣಗಳಲ್ಲಿ ಘನರೂಪದಲ್ಲಿ ಬೇರ್ಪಟ್ಟು ತಳದಲ್ಲಿ ಶೇಖರಗೊಳ್ಳುವುವು. ಇಂಥ ಶಿಲಾವಸ್ತುಗಳು ಕ್ರಮೇಣ ಒಟ್ಟುಗೂಡಿ ಗಟ್ಟಿಯಾಗಿ ಹೊಸ ಶಿಲೆಗಳಾಗುತ್ತವೆ. ಇವೇ ಜಲಜಶಿಲೆಗಳು. ಇವನ್ನು ದ್ವಿತೀಯತೆ ಶಿಲೆಗಳು ಎಂದೂ ಕರೆಯುವುದುಂಟು.

ಸಾಗಣೆಯ ಮಾಧ್ಯಮ ಮತ್ತು ಸಾಗಣೆಯ ಅವಧಿ-ಇವು ಶಿಲಾವಸ್ತುಗಳ ಮೇಲೆ ಪರಿಣಾಮಗಳನ್ನು ಉಂಟುಮಾಡುತ್ತವೆ.

ದೀರ್ಘಾವಧಿಯ ಸಾಗಣೆಯಿಂದ ಶಿಲಾವಸ್ತುಗಳು ಗಾತ್ರವಾರು ಮತ್ತು ಸಾಂಧ್ರತೆಗಳಿಗೆ ಅನುಗುಣವಾಗಿ ವಿಂಗಡಣೆಯಾಗುವುವು. ಸಾಗಣೆಯ ಅವಧಿ ಹೆಚ್ಚಿದಂತೆಲ್ಲ ಕಣಗಳು ಹೆಚ್ಚು ಸವೆದು ಅವುಗಳ ಗಾತ್ರ ಕಡಿಮೆಯಾಗುವುದು. ಈ ಶಿಲಾವಸ್ತುಗಳಿಗೆ ಅವುಗಳ ಗಾತ್ರಾನುಸಾರವಾಗಿ, ಗುಂಡುಗಳು (200mm. ಗಿಂತ ಹೆಚ್ಚಿನ ವ್ಯಾಸ), ನೊರಜುಗಳು (50 ರಿಂದ 200mm), ಉರುಟುಕಲ್ಲುಗಳು (10 ರಿಂದ 50mm), ಉಂಡೆಕಲ್ಲುಗಳು (2ರಿಂದ 10mm), ಮರಳು (0.25 ನಿಂದ 2mm), ಮೆಕ್ಕಲು (0.01ರಿಂದ 0.1mm.), ದೂಳು, ಮಣ್ಣು, ಜೇಡು (0.01mm. ಗಿಂತ ಹೆಚ್ಚಿನ ವ್ಯಾಸ) ಎಂದು ಮುಂತಾಗಿ ಹೆಸರಿಡಲಾಗಿದೆ. ಈ ಶಿಲಾವಸ್ತುಗಳು ಶೇಖರವಾದಾಗ ಕಣಗಳು ಬಿಡಿಯಾಗಿರುತ್ತವೆ. ಕಾಲಾನುಕ್ರಮದಲ್ಲಿ ಅವು ಸಂಘಟಿಸಿ ಗಟ್ಟಿಯಾಗುತ್ತವೆ. ಕಣಗಳ ಗಾತ್ರ ದಪ್ಪವಿದ್ದರೆ ಅವುಗಳ ಮಧ್ಯೆ ಬೇರೆ ವಸ್ತು ನಿಕ್ಷೇಪಿಸಿ, ಅವನ್ನೆಲ್ಲ ಬಂಧಿಸುತ್ತದೆ. ಶಿಲಾವಸ್ತುವು ನೀರಿನಲ್ಲಿ ವಿಲೀನವಾಗಿರುವ ಸಿಲಿಕ, ಸುಣ್ಣವಸ್ತು, ಮೆಗ್ನೀಸಿಯಮ್ ಮತ್ತು ಕೆಲವು ವೇಳೆ ಕಬ್ಬಿಣ ವಸ್ತು ಆಗಿರಬಹುದು. ಈ ರೀತಿ ರೂಪುಗೊಂಡ ಶಿಲೆಗಳಿಗೆ ಭೌತಜಲಜಶಿಲೆಗಳು ಎಂದು ಹೆಸರು. ಇವುಗಳಲ್ಲಿ ಪದರುರಚನೆ, ಪ್ರವಾಹ ಪದರು ರಚನೆ, ಅಲೆಗಳ ಗುರುತುಗಳು, ಒಣಗು ಬಿರುಕುಗಳು, ಪ್ರಾಣಿಗಳ ಜಾಡುಗಳು-ಈ ಮುಂತಾದ ಲಕ್ಷಣಗಳನ್ನು ಗುರುತಿಸಲಾಗಿದೆ.

ಭೌತಜಲಜಶಿಲೆಗಳ ವರ್ಗೀಕರಣ

ಕಣಗಾತ್ರವನ್ನು ಆಧಾರವಾಗಿಟ್ಟುಕೊಂಡು ಭೌತಜಲಜಶಿಲೆಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು.

1 ರುಡೇಸಿಯಸ್ : ಗುಂಡುಗಳು, ನೊರಜು, ಉರಟು ಮತ್ತು ಉಂಡೆ ಕಲ್ಲುಗಳು ಪ್ರಧಾನವಾಗಿರುವ ಶಿಲೆಗಳು. ಇವು ಸಿಲಿಕ, ಜೇಡು, ಸುಣ್ಣ ಅಥವಾ ಕಬ್ಬಿಣ ವಸ್ತುಗಳಿಂದ ಬಂಧಿತವಾಗಿ ಪೆಂಟೆಶಿಲೆಗಳು ಮತ್ತು ನೊರಜು ಶಿಲೆಗಳಾಗುತ್ತವೆ.

2 ಅರೆನೇಸಿಯಸ್ : ಮರಳು ಯಾವುದಾದರೊಂದು ವಸ್ತುವಿನಿಂದ ಬಂಧಿತವಾಗಿ ಆಗುವ ಶಿಲೆಗಳು, ಗ್ರೀಟ್, ಅರ್ಕೋಸ್ ಮತ್ತು ಗ್ರೆವೇಕ್‍ಗಳು ಈ ವರ್ಗದ ಶಿಲೆಗಳು. ಮರಳುಶಿಲೆಯ ಕಣಗಳು ದಪ್ಪವಿದ್ದು, ಚೂಪಾದ ಮೂಲೆಗಳಿದ್ದರೆ, ಆ ಶಿಲೆಗೆ ಗ್ರಿಟ್ ಎಂದು ಹೆಸರು. ಕಪ್ಪು ಮರಳುಶಿಲೆಗೆ ಗ್ರೆಮೆಕ್ ಎಂದು ಹೆಸರು.

3 ಮೆಕ್ಕಲು ಶಿಲೆಗಳು : ಒಂಡು, ಮೆಕ್ಕಲು ಮುಂತಾದ ಶಿಲೆಗಳು ಈ ವರ್ಗಕ್ಕೆ ಸೇರಿದವು. ಇವು ಅರೆನೇಸಿಯಸ್ ಮತ್ತು ಸರ್ಜಿಲೇಸಿಯಸ್ ವರ್ಗಗಳ ಮಧ್ಯಂತರ ಶಿಲೆಗಳು.

4 ಆರ್ಜಿಲೇಸಿಯಸ್ ಅಥವ ಜೇಡುಶಿಲೆಗಳು : ಶಿಲಾಪುಡಿಯಿಂದ ಈ ಶಿಲೆಗಳಾಗುತ್ತವೆ. ದೂಳು, ಮಣ್ಣು ಮತ್ತು ಜೇಡು-ಈ ವಸ್ತುಗಳು ಗಟ್ಟಿಯಾದಾಗ ಜೇಡು ಶಿಲೆಗಳಾಗುತ್ತವೆ.

ರಾಸಾಯನಿಕ ನಿಕ್ಷೇಪಗಳು

ಶಿಲೆಗಳ ಶಿಥಿಲೀಕರಣದಿಂದಾದ ಕೆಲವು ವಸ್ತುಗಳು ನೀರಿನಲ್ಲಿ ಕರಗಿ ವಿಲೀನವಾಗಿ ನದಿಗಳ ಮೂಲಕ ಸರೋವರ, ಸಮುದ್ರ ಮತ್ತು ಸಾಗರಗಳನ್ನು ಸೇರುವುವು. ಆ ಜಲಾಶಯಗಳಲ್ಲಿ, ಅಂದರೆ ಅಲ್ಲಿನ ಭೌತ-ರಾಸಾಯನಿಕ ವಾತಾವರಣದಲ್ಲಿ ಅನುಕೂಲ ವ್ಯತ್ಯಾಸವಾದಾಗ, ವಿಲೀನ ವಸ್ತುಗಳಲ್ಲಿ ಕೆಲವು ಘನರೂಪದಲ್ಲಿ ಪ್ರಕ್ಷೇಪಗೊಳ್ಳುತ್ತವೆ. ಕೆಲವು ವೇಳೆ ನೀರು ಅಧಿಕ ಪ್ರಮಾಣದಲ್ಲಿ ಆವಿಯಾಗುವುದರಿಂದ ನೀರಿನ ಸಾಂಧ್ರತೆ ಹೆಚ್ಚಿ ಈ ವಸ್ತುಗಳು ನಿಕ್ಷೇಪವಾಗುವುದೂ ಉಂಟು. ದ್ರಾವಣದಿಂದ ಘನರೂಪದಲ್ಲಿ ಪ್ರಕ್ಷೇಪಿಸುವ ಈ ವಸ್ತುಗಳು ಚಿಕ್ಕ ಕಣಗಳಾಗಿ ರೂಪುಗೊಳ್ಳುತ್ತವೆ. ಆವಿಯಾಗುವುದರ ಮೂಲಕ ನಿಕ್ಷೇಪವಾಗುವ ವಸ್ತುಗಳು ಕೆಲವು ವೇಳೆ ದೊಡ್ಡ ಹರಳುಗಳಾಗುವುದೂ ಉಂಟು. ರಾಸಾಯನಿಕ ನಿಕ್ಷೇಪಗಳೆಂದು ಇವುಗಳ ಹೆಸರು.

ಇವುಗಳ ರೂಪ ಹಲವು ಬಗೆ. ವಿವಿಧ ಬಗೆಯ ಸಂಯೋಜನೆಗಳಿಂದ ಮತ್ತು ಆಕಾರಗಳಿಂದ ಕೂಡಿರುವ ನಿಕ್ಷೇಪಗಳಿಗೆ ಶಿಲಾಮುದ್ದೆಗಳು (ಕಾನ್‍ಕ್ರಿಷನ್ಸ್) ಎಂದು ಹೆಸರು. ಇವು ಸಾಮಾನ್ಯವಾಗಿ ಗುಂಡು ಅಥವಾ ಗಂಟು ರೂಪದಲ್ಲಿರುವುವು. ಚಾಕಿಯಲ್ಲಿರುವ ಪ್ಲಿಂಟುಗಳು, ಸುಣ್ಣ ಶಿಲೆಗಳಲ್ಲಿರುವ ಚರ್ಟ್, ಜೇಡು ಶಿಲೆಗಳಲ್ಲಿರುವ ಸುಣ್ಣ ಅಥವಾ ಕಬ್ಬಿಣದ ಸಲ್ಫೈಡ್ ಉಂಡೆಗಳು, ಮರಳುಶಿಲೆಗಳಲ್ಲಿನ ಕಬ್ಬಿಣದ ಆಕ್ಸೈಡ್ ಉಂಡೆಗಳು ಈ ಮಾದರಿಯಲ್ಲಿ ರೂಪುಗೊಂಡಂಥವು. ಶಿಲೆಗಳಲ್ಲಿ ಟೊಳ್ಳು ಅಥವಾ ಪೊಟರೆಗಳಿರುವುದುಂಟು. ಇವುಗಳ ಒಳಮೈಗೆ ಖನಿಜ ದ್ರಾವಣ ಸಮಾಂತರವಾಗಿ ಸ್ರವಿಸಿ ನಿಕ್ಷೇಪವಾಗುತ್ತದೆ. ಜ್ವಾಲಾಮುಖಿಜ ಶಿಲೆಗಳಲ್ಲಿರುವ ಖನಿಜಗ್ರಂಥಿಗಳು ಸ್ರಾವವಸ್ತುಗಳಿಂದಾದವು. ಟೊಳ್ಳೆಯೊಳಗಿನ ಸ್ರಾವಖನಿಜಗಳು ಧಾರಕಶಿಲೆಗಳಿಗೆ ಸಂಬಂಧಿಸಿದವಾದರೆ ಅವಕ್ಕೆ ಡ್ರೂಪ್ ಎಂದು ಹೆಸರು. ಸ್ರಾವವಸ್ತುಗಳು ಸುಲಭವಾಗಿ ಬೇರ್ಪಡುವಂತಿದ್ದರೆ ಅವಕ್ಕೆ ಜಿಯೋಡ್ಸ್ ಎಂದು ಹೆಸರು. ಇವು ಸ್ರವಣಗಳು (ಸೆಕ್ರಿಷನ್ಸ್). ಸೂಕ್ಷ್ಮಕಣ ಶಿಲೆಗಳ ಬಿರುಕುಗಳು ಮತ್ತು ಜಾರು ಸೀಳುಗಳನ್ನು ಕಬ್ಬಿಣ ಮತ್ತು ಮ್ಯಾಂಗನೀಸ್ ಆಕ್ಸೈಡುಗಳು ತುಂಬುತ್ತವೆ. ಅವು ಕವಲೊಡೆದ ರೆಂಬೆಗಳಂತೆ ಸಂಚಯಿಸಿ ಪಾಚಿ ಅಥವಾ ಮರಗಳನ್ನು ಹೋಲುತ್ತವೆ. ಇದಕ್ಕೆ ವೃಕ್ಷಾಕಾರ ಸ್ರಾವ ಎಂದು ಹೆಸರು. ಇಂಥ ಸ್ರಾವಗಳಿಂದ ಕೂಡಿದ ಅಮೃತಶಿಲೆಯನ್ನು ಉಜ್ಜಿ ನಯಗೊಳಿಸಿದರೆ ಭೂದೃಶ್ಯಗಳನ್ನು ಹೋಲುವ ಚಿತ್ರಲೇಖಗಳುಂಟಾಗುವುವು. ಈ ಮಾದರಿಯ ಅಮೃತಶಿಲೆಗೆ ಭೂದೃಶ್ಯ ಅಮೃತಶಿಲೆ ಎಂದು ಹೆಸರು.

ರಾಸಾಯನಿಕ ನಿಕ್ಷೇಪಗಳ ವರ್ಗೀಕರಣ

ರಾಸಾಯನಿಕ ನಿಕ್ಷೇಪಗಳನ್ನು ಸಂಯೋಜಿಸುವ ಆಧಾರದ ಮೇಲೆ ಈ ಕೆಳಗಿನಂತೆ ವಿಭಜಿಸಲಾಗಿದೆ.

1 ಸಿಲಿಕ ನಿಕ್ಷೇಪಗಳು : ಸೈಲೀಸಿಯಸ್ ಸಿಂಟರ್, ಪ್ಲಿಂಟ್ಸ್ ಮತ್ತು ಚೆರ್ಟ್‍ಗಳು. ಚಾಕ್ ನಿಕ್ಷೇಪದಲ್ಲಿ ಬೆಣಚುವಸ್ತು ಚಿಕ್ಕ ಕಣಗಳ ರೂಪದಲ್ಲಿ ಹರಡಿರುತ್ತದೆ. ಇವೆಲ್ಲ ಒಟ್ಟುಗೂಡಿ ಮುದ್ದೆಯಾಕಾರದಲ್ಲಿ ಪುನರ್ ನಿಕ್ಷೇಪಗೊಳ್ಳುತ್ತವೆ. ಇವಕ್ಕೆ ಪ್ಲಿಂಟ್ ಎಂದು ಹೆಸರು. ಸುಣ್ಣಶಿಲೆಗಳಲ್ಲಿರುವ ಸುಣ್ಣವಸ್ತುವನ್ನು ಬೆಣಚು ಪಲ್ಲಟಿಸಿ ನಿಕ್ಷೇಪವಾಗುವುದರಿಂದ ಚೆರ್ಟ್ ಆಗುತ್ತದೆ.

2 ಕಾರ್ಬೊನೇಟ್ ನಿಕ್ಷೇಪಗಳು : ತೂಗುತೊಂಗಲುಗಳು (ಸ್ಟ್ಯಾಲ್ಯಾಕ್ ಟೈಟ್ಸ್) ಮತ್ತು ನೆಲೆತೊಂಗಲುಗಳು (ಸ್ಟ್ಯಾಲಾಗ್‍ಮೈಟ್ಸ್), ಟ್ರಾವರ್ಟೈನ್, ಕಂಕರ್, ಊಲಿಟಿಕ್ ಸುಣ್ಣಶಿಲೆಗಳು ಮತ್ತು ಡಾಲೊಮೈಟುಗಳು ಈ ಗುಂಪಿನ ನಿಕ್ಷೇಪಗಳು. ಉಷ್ಣವಲಯದ ದೇಶಗಳಲ್ಲಿ ಮಳೆಗಾಲವಾದ ಮೇಲೆ ಬರುವ ದೀರ್ಘಾವಧಿಯ ಬೇಸಿಗೆಯ ಕಾಲದಲ್ಲಿ ಅಂತರ್ಜಲದಲ್ಲಿ ವಿಲೀನವಾಗಿರುವ ಸುಣ್ಣವಸ್ತು ಸೂಕ್ಷ್ಮರಂಧ್ರಗಳ ಮೂಲಕ ಮೇಲಕ್ಕೆ ಸಾಗಿ ಮಣ್ಣು ಪದರದ ಕೆಳಗೆ ನಿಕ್ಷೇಪವಾಗುತ್ತದೆ. ಇದಕ್ಕೆ ಭಾರತದಲ್ಲಿ ಕಂಕರ್ ಎಂಬ ಹೆಸರುಂಟು. ಕೆಲವು ಸುಣ್ಣಶಿಲೆಗಳಲ್ಲಿ ಗೋಳಾಕಾರದ ಚಿಕ್ಕ ಕಣಗಳು ಇರುವುವು. ಇವು ಮೀನಿನ ಮೊಟ್ಟೆಗಳ ಗೊಂಚಲನ್ನು ಹೋಲುವುದರಿಂದ ಇವಕ್ಕೆ ಊಲಿತ್ಸ್ ಎಂದೂ ಇವುಗಳಿಂದ ಕೂಡಿರುವ ಶಿಲೆಗಳಿಗೆ ಊಲೈಟ್ ಎಂದೂ ಹೆಸರಿದೆ. ಐಲಿತ್‍ಗಳಲ್ಲಿ ಏಕಕೇಂದ್ರಿತ ವೃತ್ತರಚನೆ ಕಂಡುಬರುವುದು. ಇವನ್ನೇ ಹೋಲುವ ಆದರೆ ಗಾತ್ರದಲ್ಲಿ ದೊಡ್ಡದಾಗಿರುವವುಗಳಿಗೆ ಪಿಸೊಲಿತುಗಳೆಂದು ಹೆಸರು. ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಕಾರ್ಬೊನೇಟ್ ನಿಕ್ಷೇಪಕ್ಕೆ ಡಾಲೊಮೈಟ್ ಶಿಲೆ ಎಂದು ಹೆಸರು.

3 ಕಬ್ಬಿಣ ನಿಕ್ಷೇಪಗಳು : ಇವು ಎಲ್ಲ ಬಗೆಯ ನೀರಿನಲ್ಲಿಯೂ ವಿಲೀನವಾಗಿರುತ್ತವೆ. ಅನುಕೂಲ ವಾತಾವರಣದಲ್ಲಿ ಆಕ್ಸೈಡ್, ಹೈಡ್ರಾಕ್ಸೈಡ್, ಕಾರ್ಬೊನೇಟ್ ಮತ್ತು ಸಿಲಿಕೇಟುಗಳಾಗಿ ನಿಕ್ಷೆಪವಾಗುತ್ತವೆ. ವಿಲೀನಸ್ಥಿತಿಯಲ್ಲಿ ಕಬ್ಬಿಣ ಬೈಕಾರ್ಬೊನೇಟ್ ರೂಪದಲ್ಲಿರುವುದು ಸಾಮಾನ್ಯ. ನೀರಿನಲ್ಲಿ ಇಂಗಾಲದ ಡೈ ಆಕ್ಸೈಡಿನ ಪ್ರಮಾಣ ಕಡಿಮೆಯಾದಾಗ ಈ ನಿಕ್ಷೇಪಗಳು ಕಬ್ಬಿಣದ ಕಾರ್ಬೊನೇಟಾಗಿ ಪರಿವರ್ತಿಸುತ್ತವೆ. ವಾಯುಸಂಪರ್ಕದಿಂದ ಇವು ಕಬ್ಬಿಣದ ಹೈಡ್ರಾಕ್ಸೈಡಾಗಿ ಪರಿವರ್ತಿತವಾಗಿ ನದಿ ಮತ್ತು ಸರೋವರಗಳ ಅಂಚಿನಲ್ಲಿ ಮೃದುವಾದ, ಸರಧ್ರಂತೆಯ ಕಬ್ಬಿಣದ ಅದುರಾಗಿ ನಿಕ್ಷೇಪಗೊಳ್ಳುವುವು. ಇವಕ್ಕೆ ಜೌಗು ಕಬ್ಬಿಣದ ಅದುರು ಎಂದು ಹೆಸರು. ಸಾಕಷ್ಟು ಆಮ್ಲಜನಕ ಒದಗದ ವಾತಾವರಣದಲ್ಲಿ ಇವು ನೇರವಾಗಿ ಕಬ್ಬಿಣದ ಕಾರ್ಬೊನೇಟ್ ರೂಪದಲ್ಲಿ ನಿಕ್ಷೇಪವಾಗುತ್ತವೆ.

4 ಲವಣ ನಿಕ್ಷೇಪಗಳು: ಈ ವಿಭಾಗದಲ್ಲಿ ಕ್ಲೋರೈಡುಗಳು, ಸಲ್ಫೇಟುಗಳು, ಕಾರ್ಬೊನೇಟುಗಳು, ನೈಟ್ರೇಟುಗಳು, ಸೋಡಿಯಮ್ ಪೊಟ್ಯಾಸಿಯಮ್ ಬೋರೇಟುಗಳು ಮತ್ತು ಕ್ಯಾಲ್ಸಿಯಮ್-ಮೆಗ್ನೀಸಿಯಮ್ ಸಲ್ಫೇಟುಗಳು ಸೇರಿವೆ. ಉಪ್ಪುನೀರಿನ ಸರೋವರಗಳು ಮತ್ತು ಭೂಭಾಗಗಳೊಳಗೆ ಚಾಚಿರುವ ಸಮುದ್ರಗಳಲ್ಲಿ ಲಾಭದಾಯಕವಾದ ಕ್ಲೋರೈಡ್ ಮತ್ತು ಸಲ್ಫೈಟ್ ಲವಣಗಳು ನಿಕ್ಷೇಪವಾಗುತ್ತವೆ. ಇವು ನಿಕ್ಷೇಪವಾಗಬೇಕಾದರೆ ಸಮುದ್ರದ ನೀರು ಈ ಲವಣಾಂಶಗಳಿಂದ ಕೂಡಿರಬೇಕು. ಜೊತೆಗೆ ಯುಕ್ತ ಸನ್ನಿವೇಶವೂ ಒದಗಬೇಕು. ಸಮುದ್ರದ ಒಂದು ಭಾಗ ಬೇರ್ಪಟ್ಟು ಇಲ್ಲವೆ ಈ ಭಾಗ ತೆಟ್ಟೆ ಪ್ರದೇಶವಾಗಿ ಮಾರ್ಪಟ್ಟಾಗ ಇದು ಸಾಧ್ಯವಾಗುತ್ತದೆ. ಎರಡನೆಯದಾಗಿ ಈ ಲವಣಗಳು ನಿಕ್ಷೇಪವಾಗಲು ಸಹಕಾರಿಯಾದ ವಾಯುಗಣವಿರಬೇಕು. ಕ್ಯಾಸ್ಪಿಯನ್ ಸಮುದ್ರದ ಒಂದು ಭಾಗವಾದ ಕರಬುಗ ಖಾರಿಯಲ್ಲಿ ಇಂಥ ಸನ್ನಿವೇಶವಿರುವುದು ಗೊತ್ತಾಗಿದೆ. ಮೊದಲು ಕ್ಯಾಲ್ಸಿಯಮ್ ಲವಣಗಳು, ಅನಂತರ ಸೋಡಿಯಮ್ ಲವಣಗಳು, ಕೊನೆಗೆ ಪೊಟ್ಯಾಸಿಯಮ್ ಲವಣಗಳು ನಿಕ್ಷೇಪವಾಗುತ್ತವೆ. ಭೂ ಇತಿಹಾಸದಲ್ಲಿ ಇಂಥ ಅನೇಕ ಪ್ರಸಂಗಗಳನ್ನು ಗುರುತಿಸಲಾಗಿದೆ. ಪಂಜಾಬಿನ ಸಾಲ್ಟ್‍ರೇಂಜ್ ಪ್ರದೇಶದ ಕೇಂಬ್ರಿಯನ್ ಕಾಲದ ಲವಣ ಶಿಲಾಶ್ರೇಣಿ ಮತ್ತು ಕೋಹಟ್ ಜಿಲ್ಲೆಯ ಇಯೋಸೀನ್ ಕಾಲದ ಲವಣ ಶಿಲಾಶ್ರೇಣಿಗಳು ಇಂಥ ನಿಕ್ಷೇಪಗಳಿಗೆ ಉತ್ತಮ ಉದಾಹರಣೆಗಳು.

ಜೀವಜನಿತ ನಿಕ್ಷೇಪಗಳು

ಕೆಲವು ಸಸ್ಯಗಳು ಮತ್ತು ಪ್ರಾಣಿಗಳ ಚಟುವಟಿಕೆಗಳಿಂದ ಕೂಡ ಸರೋವರ ಮತ್ತು ಸಮುದ್ರಗಳಲ್ಲಿ ವಿಲೀನವಾಗಿರುವ ಲವಣಗಳು ನಿಕ್ಷೇಪಗೊಳ್ಳುತ್ತವೆ. ಕೆಲವು ಪ್ರಾಣಿಗಳು ಈ ಲವಣಗಳನ್ನು ಬೇರ್ಪಡಿಸಿಕೊಂಡು ತಮ್ಮ ಗೂಡುಗಳನ್ನು ಕಟ್ಟಲು ಉಪಯೋಗಿಸುತ್ತವೆ. ಇವು ಸತ್ತ ಬಳಿಕ ಇವುಗಳ ಗೂಡು ಅಥವಾ ಚಿಪ್ಪುಗಳು ಸಮುದ್ರದ ತಳದಲ್ಲಿ ಶೇಖರವಾಗಿ ನಿಕ್ಷೇಪಗಳಾಗುತ್ತವೆ. ಇವಕ್ಕೆ ಜೀವಜನಿತ ನಿಕ್ಷೇಪಗಳು ಎಂದು ಹೆಸರು.

ಭೂಇತಿಹಾಸ ನಿರೂಪಣೆಯಲ್ಲಿ ಜಲಜಶಿಲೆಗಳ ಪಾತ್ರ

ಜಲಜಶಿಲೆಗಳಲ್ಲಿ ಸಾಮಾನ್ಯವಾಗಿ ತಳಪದರ ವಯಸ್ಸಿನಲ್ಲಿ ಹಿರಿದು, ಅಲ್ಲದೆ ಪ್ರತಿಪದರವೂ ಮೇಲಣ ಪದರಕ್ಕಿಂತ ಹಿರಿದಾಗಿಯೂ ಕೆಳಗಣ ಪದರಕ್ಕಿಂತ ಕಿರಿದಾಗಿಯೂ ಉಂಟು. ಭೂಇತಿಹಾಸದ ಪ್ರಮುಖ ನಿಯಮಗಳಲ್ಲೊಂದಾದ ಶಿಲಾಪೇರಿಕೆಯ ಕ್ರಮ ಇದರ ಆಧಾರದ ಮೇಲೆ ನಿರೂಪಿತವಾಗಿದೆ. ಭೂಇತಿಹಾಸದ ಸಂಶೋಧನೆಯಲ್ಲಿ ಶಿಲಾಪರಂಪರೆಯ ಮೂಲಪೇರಿಕೆಯ ಕ್ರಮವನ್ನು ಸ್ಥಾಪಿಸುವುದು ಮೊದಲ ಕೆಲಸ. ಒಂದು ಶಿಲಾಪರಂಪರೆಯ ಪದರಗಳು ಒಂದೇ ದಿಕ್ಕಿನಲ್ಲಿ ವಾಲಿಕೊಂಡಿದ್ದರೆ ಶಿಲಾ ಓರೆಯ ಕಡೆಗೆ ಹೋದಂತೆ ಪದರುಗಳು ಕಿರಿದಾಗುತ್ತಲೂ ಅದಕ್ಕೆ ವಿರುದ್ಧ ಹೋದಂತೆ ಹಿರಿದಾಗುತ್ತಲೂ ಇರುವುವು. ಅವು ಮಡಿಕೆಗಳಾಗಿದ್ದರೆ ಶಿಲಾಪರಂಪರೆ ತಲೆಕೆಳಗಾಗಿರುತ್ತದೆ. ಬೇರೆ ಕುರುಹಗಳ ಸಹಾಯದಿಂದಲೂ ಈ ಪದರುಗಳ ವಯೋಕ್ರಮವನ್ನು ನಿರ್ಧರಿಸುವುದು ಸಾಧ್ಯ. ಒಂದು ಪ್ರದೇಶದ ಶಿಲಾಪರಂಪರೆಗೆ ಹಸ್ತಕ್ಷೇಪವಾಗಿಲ್ಲದಿದ್ದ ಪಕ್ಷಕ್ಕೆ ಆ ಶಿಲಾಪೇರಿಕೆಯ ಕ್ರಮವನ್ನು ಇತರ ಪ್ರದೇಶಗಳ ಶಿಲಾಪರಂಪರೆಯ ವಯೋನಿರ್ಧಾರದಲ್ಲಿ ಬಳಸಬಹುದು. ಹೀಗೆ ಮಾಡುವಾಗ ಆ ಪ್ರದೇಶಗಳ ಶಿಲಾಪರಂಪರೆಯಲ್ಲಿ ಸಂಯೋಜನಾ ಸಾಮ್ಯವಿರಬೇಕು. ಅವುಗಳಲ್ಲಿ ಕಣಗಾತ್ರಾನುಕ್ರಮಣ ಸಂಚಯನ ಮತ್ತು ಸಂಚಯನ ಚಕ್ರಗಳೇ ಮೊದಲಾದ ಲಕ್ಷಣಗಳಿದ್ದಲ್ಲಿ, ಆ ಪೇರಿಕೆಯ ಕ್ರಮ ಮತ್ತು ಬೆರೆತಿರುವ ರೀತಿಯನ್ನು ಗುರುತುಹಚ್ಚಬಹುದು. ಗಾತ್ರಾನುಕ್ರಮದ ದಿಕ್ಕಿನಲ್ಲಿ ಕಿರಿಯ ಪದರಗಳಿರುತ್ತವೆ. ಪ್ರವಾಹ ಪದರಗಳಲ್ಲಿ ಮಧ್ಯಪದರಗಳು ಮೇಲ್ಪದರಗಳನ್ನು ಸಂಧಿಸುವ ಕೋನ ಅವು ಕೆಳಪದರಗಳನ್ನು ಸಂಧಿಸುವ ಕೋನಕ್ಕಿಂತ ಕಡಿಮೆ ಇರುವುದಲ್ಲದೆ ಮಧ್ಯಪದರಗಳ ಮೇಲ್ಭಾಗ ತಗ್ಗಾಗಿರುತ್ತದೆ. ಅಲೆಗಳ ಗುರುತುಗಳು ಗುಂಡಾದ ತಗ್ಗುಗಳಿಂದಲೂ ಮೊನಚಾದ ಉಬ್ಬುಗಳಿಂದಲೂ ಕೂಡಿರುವುವು. ಈ ಲಕ್ಷಣಗಳು ತದ್ವಿರುದ್ಧವಾಗಿದ್ದಲ್ಲಿ ಪದರಗಳು ತಲೆಕೆಳಗಾಗಿವೆಯೆಂದು ಭಾವಿಸಬಹುದು. ಬಿಸಿಲು ಬಿರುಕುಗಳು, ಜ್ವಾಲಾಮುಖಿಜಶಿಲಾಪದರಗಳಲ್ಲಿನ ಅನಿಲರಂಧ್ರಗಳು ಮತ್ತು ದಿಂಬು ರಚನೆಗಳು ಶಿಲಾಪೇರಿಕೆಯ ಕ್ರಮನಿರ್ಧಾರದಲ್ಲಿ ಸಹಾಯಕವಾಗಿವೆ. ಜ್ವಾಲಾಮುಖಿಜ ಬೂದಿ ಪದರಗಳ ಕೆಳಗಡೆ ರೂಪಾಂತರಿಸಿರುವ ಬೆಣಚುಕಲ್ಲು ಪದರಗಳು, ಹವಳ ಮುಂತಾದ ಸ್ಥಾವರಜೀವಿಗಳು ಬೆಳೆದ ಅವಸ್ಥೆಯಲ್ಲಿಯೇ ಇರುವಿಕೆ ಮತ್ತು ಹುಳುಗಳ ಜಾಡುಗಳು-ಇವು ಪೇರಿಕೆ ಕ್ರಮವನ್ನು ನಿರ್ಧರಿಸಲು ಸಹಾಯಕವಾಗಿವೆ. ಪದರಗಳ ತಳದಲ್ಲಿರುವ ಸೊರಜು, ಬಿರುಕುಗಳು ಮುಂತಾದ ಇತರ ಅನನುರೂಪತೆಗಳು ಸಹ ಶಿಲಾಪೇರಿಕೆಯ ಕ್ರಮಸೂಚಿಗಳಾಗಿವೆ. ಎರಡು ಅಂತಸ್ಸರಣಗಳು ಅಥವಾ ಎರಡು ಸ್ತರಭಂಗಗಳು ಛೇದಿಸಿದ್ದರೆ, ಅವುಗಳಲ್ಲಿ ಕಿರಿಯದು ನೇರವಾಗಿ ಮುಂದುವರಿದಿರುವುದು. ಹಿರಿಯದು ಎರಡು ಭಾಗಗಳಾಗಿ ಬೇರ್ಪಟ್ಟಿರುತ್ತದೆ. ಜಲಜಶಿಲೆಗಳಲ್ಲಿ ಕೆಲವು ಪದರಗಳ ನಿರ್ದಿಷ್ಟ ಬಣ್ಣವನ್ನು ಹೊಂದಿ ವಿಶಾಲಪ್ರದೇಶದಲ್ಲಿ ಸಂಚಯನವಾಗಿರುತ್ತವೆ. ಇಂಥ ವಿಶಿಷ್ಟಪದರಗಳು ಪೇರಿಕೆಯ ಕ್ರಮ ನಿರ್ಧಾರದಲ್ಲಿ ಸಹಾಯವಾಗಬಲ್ಲವು. ಸ್ಲೇಟಿನ ಬೇರ್ಪಡುವ ಮೈಗಳು ಮತ್ತು ಡ್ರ್ಯಾಗ್ ಮಡಿಕೆಗಳ ಅಕ್ಷಗಳು ಮುಖ್ಯ ಮಡಿಕೆಗಳ ಅಕ್ಷಕ್ಕೆ ಸಮಾಂತರವಾಗಿರುವುವು. ಇವು ತಲೆಕೆಳಗಾಗಿದ್ದರೆ, ಶಿಲಾಪದರಗಳೂ ತಲೆಕೆಳಗಾಗಿರುವುದೆಂದು ಭಾವಿಸಬಹುದು

ಕರ್ನಾಟಕದ ಜಲಜಶಿಲಾ ಹಂಚಿಕೆ

ಧಾರವಾಡ ಪದರ ಶಿಲೆಗಳು ಕರ್ನಾಟಕದಲ್ಲಿ ಅತ್ಯಂತ ಹಿಂದಿನ ಅಂದರೆ ಆರ್ಷೇಯ ಕಲ್ಪದ ಜಲಜಶಿಲೆಗಳು. ಇವು ಹನ್ನೊಂದು ವಲಯಗಳಲ್ಲಿ ರೂಪುಗೊಂಡಿವೆ: 1 ಕ್ಯಾಸಲ್ ರಾಕ್; 2 ಧಾರವಾಡ-ಶಿವಮೊಗ್ಗ ; 3 ಗದಗ-ಡಂಬಾಲ್ ಅಥವಾ ಚಿತ್ರದುರ್ಗ-ಚಿಕ್ಕನಾಯಕನಹಳ್ಳಿ ನಾಗಮಂಗಲ ; 4 ಸಂಡೂರು ; 5 ಬಳ್ಳಾರಿ ಕುಷ್ಟಗಿ ; 6 ಪೆನ್ನೇರ್-ಹಗ್ಗರಿ ; 7 ಮಸ್ಕಿ-ಹಟ್ಟಿ; 8 ಬೊಮ್ಮನಾಳ್; 9 ಕೋಲಾರ; 10 ರಾಯಚೂರು ಮತ್ತು 11 ಗದ್ವಾಲ್. ಆದಿಜೀವಕಲ್ಪದ ಶಿಲೆಗಳು ಬೆಳಗಾಂವಿ ಜಿಲ್ಲೆಯಲ್ಲಿ ಬೆಳಗಾಂವಿ ನಗರಕ್ಕೂ ಕಾಲಡ್ಗಿಗೂ ಮಧ್ಯೆ ಹೊರಕಂಡಿವೆ. ಇವಕ್ಕೆ ಕಾಲಡ್ಗಿ ಶಿಲಾಶ್ರೇಣಿ ಎಂದು ಹೆಸರು. ಈ ಕಲ್ಪದ ಉತ್ತರಾರ್ಧಕಾಲದ ಶಿಲೆಗಳು ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಭೀಮಾನದಿಯ ಪಾತ್ರದಲ್ಲಿ ಸುಮಾರು 3,000 ಚ. ಮೈ. ಪ್ರದೇಶದಲ್ಲಿ ಹೊರಕಂಡಿವೆ. ಇವಕ್ಕೆ ಭೀಮಾ ಶಿಲಾಶ್ರೇಣಿ ಎಂದು ಹೆಸರು. ಇದರಲ್ಲಿರುವ ಸುಣ್ಣಶಿಲೆಗಳನ್ನು ಷಾಹಬಾದ್ ಸಿಮೆಂಟ್ ಕಾರ್ಖಾನೆಯಲ್ಲಿ ಉಪಯೋಗಿಸಲಾಗುತ್ತಿದೆ.

ಭಾರತ ಪರ್ಯಾಯ ದ್ವೀಪದ ಜಲಜಶಿಲೆಗಳ ಹಂಚಿಕೆ

ಈ ಪರ್ಯಾಯ ದ್ವೀಪ ಆರ್ಷೇಯ ಕಲ್ಪದ ಅನಂತರ ಸ್ಥಿರಭೂಭಾಗವಾಯಿತು. ಆದಿಜೀವಕಲ್ಪದ ಪೂರ್ವಾರ್ಧದಲ್ಲಿ ಆಂಧ್ರಪ್ರದೇಶದ ಕಡಪ ಮತ್ತು ಕರ್ನೂಲ್ ಜಿಲ್ಲೆಗಳ ಪ್ರದೇಶ, ಒರಿಸ್ಸದ ಛತ್ತೀಸಗಢ ಪ್ರದೇಶ. ಕರ್ನಾಟಕದ ಬೆಳಗಾಂವಿ ಜಿಲ್ಲೆಯ ಕಾಲಡ್ಗಿ ಪ್ರದೇಶ ಮತ್ತು ದೆಹಲಿ ಪ್ರದೇಶಗಳನ್ನು ಸಮುದ್ರಗಳು ಆಕ್ರಮಿಸಿದ್ದುವು. ಈ ಪ್ರದೇಶಗಳಿಂದ ಸಮುದ್ರಗಳು ಹಿಂಜರಿದು ಉತ್ತರಾರ್ಧದಲ್ಲಿ ವಿಂಧ್ಯಪರ್ವತ ಪ್ರದೇಶ, ಕರ್ನೂಲ್ ಜಿಲ್ಲೆ ಮತ್ತು ಭೀಮಾ ನದಿಯ ಕಣಿವೆ ಪ್ರದೇಶಗಳನ್ನು ಪುನಃ ಆಕ್ರಮಿಸಿದುವು. ಈ ಪ್ರದೇಶಗಳಲ್ಲೆಲ್ಲ ಫಾಸಿಲ್‍ರಹಿತ ಜಲಜಶಿಲೆಗಳಿವೆ. ಪ್ರಾಚೀನ ಜೀವಕಲ್ಪವನ್ನು ಪ್ರತಿನಿಧಿಸುವ ಜಲಜಶಿಲೆಗಳು ಎಲ್ಲೂ ಸಂಚಯಿಸಿಲ್ಲ. ಮಧ್ಯ ಜೀವಕಲ್ಪದ ಜುರಾಸಿಕ್ ಯುಗದಲ್ಲಿ ಕಚ್ ಮುಂತಾದ ಪ್ರದೇಶಗಳು ಸಮುದ್ರಾಕ್ರಮಣಕ್ಕೊಳಗಾಗಿ ಅಲ್ಲಿ ಫಾಸಿಲ್‍ಯುಕ್ತ ಜಲಜಶಿಲೆಗಳು ರೂಪುಗೊಂಡಿವೆ. ಕ್ರಿಟೇಷಸ್ ಯುಗದ ಮಧ್ಯಭಾಗದಲ್ಲಿ ಟೆತಿಸ್ ಸಾಗರ ನರ್ಮದಾ ಕಣಿವೆ ಪ್ರದೇಶದಲ್ಲೂ ದಕ್ಷಿಣ ಸಮುದ್ರ ತಿರುಚನಾಪಲ್ಲಿ, ವೃದ್ಧಾಚಲಮ್, ಪಾಂಡಿಚೇರಿ, ರಾಜ ಮಹೇಂದ್ರಿ ಮತ್ತು ಅಸ್ಸಾಮ್ ಪ್ರದೇಶಗಳಲ್ಲಿ ಆಕ್ರಮಣ ನಡೆಸಿದುವು. ಆಗ ಸಂಚಯಿಸಿದ ಶಿಲೆಗಳು ಆ ಪ್ರದೇಶಗಳಲ್ಲಿ ಕಂಡುಬರುತ್ತವೆ. ನವಜೀವಕಲ್ಪದ ಮಯೋಸೀನ್ ಯುಗದಲ್ಲಿ ಭಾರತ ಪರ್ಯಾಯದ್ವೀಪದ ಪೂರ್ವ ಮತ್ತು ಪಶ್ಚಿಮತೀರಗಳಲ್ಲಿ ಸಮುದ್ರಾಕ್ರಮಣವಾಗಿ ಮರಳುಶಿಲೆಗಳು ನಿಕ್ಷೇಪವಾಗಿವೆ. ಇವುಗಳಲ್ಲಿ ಕಡಲೂರು ಮರಳುಶಿಲೆಗಳು ಗಮನಾರ್ಹ, ಕಾರ್ಬಾನಿಫೆರಸ್ ಯುಗದ ಅಂತ್ಯದಿಂದ ಜುರಾಸಿಕ್ ಯುಗದ ಅಂತ್ಯದ ವರೆಗೆ ಸೋನ್‍ದಾಮೋದರ್ ಮಹಾನದಿ ಮತ್ತು ಗೋದಾವರಿ ನದಿ ಕಣಿವೆಗಳಲ್ಲೂ ಪೂರ್ವ ಮತ್ತು ಪಶ್ಚಿಮ ತೀರದ ಕೆಲವು ಸ್ಥಳಗಳಲ್ಲೂ ಸಿಹಿನೀರು ನಿಕ್ಷೇಪಗಳು ಸಂಚಯಿಸಿವೆ. ಇವಕ್ಕೆ ಗೊಂಡ್ವಾನ ಶಿಲಾಸಮುದಾಯ ಎಂದು ಹೆಸರು.

ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಜಲಜಶಿಲೆಗಳ ಹಂಚಿಕೆ

ಈ ಪ್ರದೇಶ ಇಯೊಸೀನ್ ಯುಗದ ಅಂತ್ಯದವರೆಗೆ ಟೆತಿಸ್ ಸಾಗರದ ಆಕ್ರಮಣಕ್ಕೊಳಗಾಗಿತ್ತು. ಆದ್ದರಿಂದ ಇಲ್ಲಿ ಶಿಲಾಪರಂಪರೆ ಸರಿಸುಮಾರು ಅಖಂಡವಾಗಿದೆ ಎಂದೇ ಹೇಳಬಹುದು. ಸಿಂದ್-ಬಲೂಚಿಸ್ಥಾನ್ ಪ್ರದೇಶ ಮತ್ತು ಅಸ್ಸಾಮ್ ಪ್ರದೇಶಗಳಲ್ಲಿ ಟೆತಿಸ್ ಸಾಗರ ಆಲಿಗೋಸೀನ್ ಯುಗದ ಅಂತ್ಯದವರೆಗೂ ಇತ್ತಾದ ಕಾರಣ ಅಲ್ಲಿನ ಶಿಲಾಪರಂಪರೆ ಆಲಿಗೋಸೀನ್ ಯುಗವನ್ನೂ ಪ್ರತಿನಿಧಿಸುತ್ತದೆ. ಮಯೋಸೀನ್ ಯುಗದಿಂದ ವರ್ತಮಾನ ಕಾಲದವರೆಗೆ ಇಲ್ಲಿ ಸಿಹಿನೀರು ನಿಕ್ಷೇಪಗಳು ಸಂಚಯಿಸಿವೆ. ಶಿವಾಲಿಕ್ ಶಿಲಾಸಮುದಾಯ ಮತ್ತು ಸಿಂಧೂ-ಗಂಗಾ ಮೆಕ್ಕಲು-ಇವೇ ಈ ನಿಕ್ಷೇಪಗಳು.

ಜಲಜಶಿಲೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಜಲಜಶಿಲೆ ಗಳ ನಿರ್ಮಾಣಜಲಜಶಿಲೆ ಭೌತಗಳ ವರ್ಗೀಕರಣಜಲಜಶಿಲೆ ರಾಸಾಯನಿಕ ನಿಕ್ಷೇಪಗಳುಜಲಜಶಿಲೆ ಜೀವಜನಿತ ನಿಕ್ಷೇಪಗಳುಜಲಜಶಿಲೆ ಭೂಇತಿಹಾಸ ನಿರೂಪಣೆಯಲ್ಲಿ ಗಳ ಪಾತ್ರಜಲಜಶಿಲೆ ಕರ್ನಾಟಕದ ಜಲಜಶಿಲಾ ಹಂಚಿಕೆಜಲಜಶಿಲೆ ಭಾರತ ಪರ್ಯಾಯ ದ್ವೀಪದ ಗಳ ಹಂಚಿಕೆಜಲಜಶಿಲೆ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಗಳ ಹಂಚಿಕೆಜಲಜಶಿಲೆ

🔥 Trending searches on Wiki ಕನ್ನಡ:

ಉತ್ತರ ಕನ್ನಡವಚನಕಾರರ ಅಂಕಿತ ನಾಮಗಳುಬಿ. ಆರ್. ಅಂಬೇಡ್ಕರ್ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತಆಯುರ್ವೇದತುಂಗಭದ್ರ ನದಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುದಕ್ಷಿಣ ಕನ್ನಡಶ್ರೀಕೃಷ್ಣದೇವರಾಯರೋಸ್‌ಮರಿಸಂಖ್ಯಾಶಾಸ್ತ್ರಕ್ರಿಯಾಪದನಳಂದಅಂತರರಾಷ್ಟ್ರೀಯ ಹಣಕಾಸು ಸಂಸ್ಥೆರಾಮ ಮಂದಿರ, ಅಯೋಧ್ಯೆಸಾರ್ವಜನಿಕ ಆಡಳಿತಕರ್ನಾಟಕದ ಮುಖ್ಯಮಂತ್ರಿಗಳುಸಾಹಿತ್ಯದಿಕ್ಕುಅಂತಿಮ ಸಂಸ್ಕಾರಕರ್ನಾಟಕ ಸಂಗೀತವಿಶ್ವ ಪರಂಪರೆಯ ತಾಣಕುಂ.ವೀರಭದ್ರಪ್ಪಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಬ್ಯಾಂಕ್ ಖಾತೆಗಳುಟೈಗರ್ ಪ್ರಭಾಕರ್ಕನ್ನಡ ಸಂಧಿಜಾನಪದಬೆಳಗಾವಿಹೀಮೊಫಿಲಿಯಗದ್ದಕಟ್ಟುಅಶೋಕ್ಕರ್ಬೂಜಮುರುಡೇಶ್ವರಶಿಶುನಾಳ ಶರೀಫರುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಪರಿಸರ ರಕ್ಷಣೆಅದ್ವೈತಲಾರ್ಡ್ ಕಾರ್ನ್‍ವಾಲಿಸ್ಚಿನ್ನವಾಸ್ತವಿಕವಾದಕಲ್ಯಾಣ ಕರ್ನಾಟಕಗ್ರಂಥಾಲಯಗಳುಕುರುಬಹಲಸುಜೇನು ಹುಳುಅರ್ಜುನಟಿ.ಪಿ.ಕೈಲಾಸಂರಂಗವಲ್ಲಿಭಾರತದ ಮಾನವ ಹಕ್ಕುಗಳುಬ್ಯಾಂಕ್ಜಾಗತೀಕರಣಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿನೇಮಿಚಂದ್ರ (ಲೇಖಕಿ)ಪೊನ್ನಜಂತುಹುಳುಕರ್ಕಾಟಕ ರಾಶಿಗುರುಮೈಸೂರುಆಯ್ಕಕ್ಕಿ ಮಾರಯ್ಯ೧೮೬೨ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಲಕ್ಷ್ಮಿಯೋಗ ಮತ್ತು ಅಧ್ಯಾತ್ಮಚನ್ನವೀರ ಕಣವಿಒಗಟುಅವತಾರಜಿ.ಪಿ.ರಾಜರತ್ನಂಕಾದಂಬರಿಕರ್ನಾಟಕ ಜನಪದ ನೃತ್ಯಉಪನಯನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹನುಮ ಜಯಂತಿಉಡುಪಿ ಜಿಲ್ಲೆಹಾಲಕ್ಕಿ ಸಮುದಾಯರಾವಣಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುದುರ್ಗಸಿಂಹ🡆 More