ಕಿತ್ತೂರು: ಭಾರತ ದೇಶದ ಗ್ರಾಮಗಳು

ಕಿತ್ತೂರು ಬೆಳಗಾವಿ ಜಿಲ್ಲೆಯ ಒಂದು ಊರು.ಇಂದು ಇದು ಸಣ್ಣ ಗ್ರಾಮವಾಗಿದ್ದರೂ ಹಿಂದೆ ಕನ್ನಡನಾಡಿನ ಮಹಾನಗರಗಳಲ್ಲೊಂದಾಗಿತ್ತು.

12ನೆಯ ಶತಮಾನದಿಂದ ಕಿತ್ತೂರು ಎಂಬ ಹೆಸರು ಬಳಕೆಯಲ್ಲಿದೆ ಬೈಲಹೊಂಗಲದಿಂದ ೨೬ ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡ-ಬೆಳಗಾವಿ ನಡುವೆ ಇದೆ. ೧೨ನೆಯ ಶತಮಾನದ ಹೊತ್ತಿಗೇ ಈ ಊರು ಇದ್ದುದು ಇಲ್ಲಿನ ಬಸವೇಶ್ವರ ದೇವಾಲಯದ ಶಾಸನವೊಂದರಿಂದ ತಿಳಿದುಬರುತ್ತದೆ. ಗೋವೆಯ ಕದಂಬರ ವೀರ ಜಯಕೇಶಿಯ ೧೫ನೆಯ ಆಳ್ವಿಕೆಯ ವರ್ಷಕ್ಕೆ ಸೇರಿದ ಈ ಶಾಸನದಲ್ಲಿ ಕಿತ್ತೂರನ್ನು ಹೆಸರಿಸಿದೆ. ಆಗ ಇಲ್ಲಿ ಭವ್ಯವಾದ ದೇವಾಲಯವನ್ನು ಕಟ್ಟಿಸಿ, ಅದಕ್ಕೆ ದತ್ತಿ ಬಿಟ್ಟ ವಿಷಯವನ್ನು ಆ ಶಾಸನ ತಿಳಿಸುತ್ತದೆ.

Kittur
ಕಿತ್ತೂರು
ಗ್ರಾಮ
ಕಿತ್ತೂರು ಚೆನ್ನಮ್ಮನ ಪ್ರತಿಮೆ
ಕಿತ್ತೂರು ಚೆನ್ನಮ್ಮನ ಪ್ರತಿಮೆ
Nickname: 
Kitturu
Countryಕಿತ್ತೂರು: ಚರಿತ್ರೆ, ಸ್ವಾತಂತ್ರ್ಯ ಸಮರ, ಸ್ವಾತಂತ್ರ್ಯಾನಂತರ ಭಾರತ
StateKarnataka
DistrictBelgaum
DemonymKitturunivaru
Language
 • OfficialKannada
Time zoneUTC+5:30 (IST)
PIN
591115
Vehicle registrationKA-24
Nearest cityBelgaum

ಚರಿತ್ರೆ

ಕಿತ್ತೂರು ಪ್ರಸಿದ್ಧಿಗೆ ಬಂದುದು ೧೬ನೆಯ ಶತಮಾನದಿಂದೀಚೆಗೆ. ಯೂಸುಫ್ ಖಾನನ ಜಹಗೀರಿಯಲ್ಲಿ ಸೇರಿದ್ದ ಈ ಊರು ೧೬ನೆಯ ಶತಮಾನದ ಕಡೆಯ ಹೊತ್ತಿಗೆ ಒಂದು ಪುಟ್ಟ ಸಂಸ್ಥಾನದ ಮುಖ್ಯ ಪಟ್ಟಣವಾಗಿ ಬೆಳೆಯಿತು. ಇಲ್ಲಿಗೆ ಬಿಜಾಪುರದ ಸೈನ್ಯದೊಡನೆ ಬಂದ ಹಿರೇಮಲ್ಲ, ಬಿಜಾಪುರದ ಸುಲ್ತಾನರಿಂದ ಕಿತ್ತೂರು ಸಂಸ್ಥಾನವನ್ನು ದತ್ತಿ ಪಡೆದು ಕಿತ್ತೂರು ದೇಸಾಯರ ಮನೆತನವನ್ನು ಸ್ಥಾಪಿಸಿದ. 1586ರ ಸುಮಾರಿನಿಂದ ಇಲ್ಲಿ ದೇಸಾಯರ ಆಡಳಿತ ಪ್ರಾರಂಭವಾಯಿತು. ಈಮನೆತನದ ಸ್ಥಾಪಕರಾದ ಹಿರೇಮಲ್ಲ ಮತ್ತು ಚಿಕ್ಕಮಲ್ಲ ಮಲೆನಾಡಿನ ಗೌಡ ಕುಲಕ್ಕೆ ಸೇರಿದ ಸಹೋದರರು. ಇವರು ಬಿಜಾಪುರದ ಸೈನ್ಯದೊಂದಿಗೆ ಇಲ್ಲಿಗೆ ಬಂದು ಸಂಪಗಾವ್ ಎಂಬಲ್ಲಿ ನೆಲೆಸಿದರು. ಕಾಲಕ್ರಮದಲ್ಲಿ ದೊಡ್ಡಮಲ್ಲ ಬಿಜಾಪುರ ಸೈನ್ಯಕ್ಕೆ ಸಲ್ಲಿಸಿದ ಅಮೋಘ ಸೇವೆಯಿಂದ ಸರದೇಶಮುಖಿ ದತ್ತಿಯನ್ನು ಪಡೆದ. ಬಿಜಾಪುರದ ಸುಲ್ತಾನರ ಅವನತಿಯ ಅನಂತರ ಕಿತ್ತೂರು ಸವಣೂರಿನ ನವಾಬರ ಅಧೀನವಾಯಿತು. ಆದರೆ 1746ರಲ್ಲಿ ಸವಣೂರಿನ ನವಾಬ ಕಿತ್ತೂರನ್ನು ಮರಾಠರ ವಶಕ್ಕೆ ಕೊಡಬೇಕಾಗಿತ್ತು. 1778ರಲ್ಲಿ ಹೈದರಾಲಿ ಕಿತ್ತೂರು ದೇಸಾಯಿಯನ್ನು ಸೋಲಿಸಿ ಅವನಿಂದ ಕಪ್ಪಕಾಣಿಕೆಯನ್ನು ವಸೂಲಿ ಮಾಡಿದರೂ ಮುಂದಿನ ವರ್ಷದಲ್ಲಿ ಪರಶುರಾಮಭಾವು ಅದನ್ನು ವಶಪಡಿಸಿಕೊಂಡು ದೇಸಾಯಿಯನ್ನು ಸೆರೆಹಿಡಿದ. ಇತ್ತಕಡೆಯಿಂದ ಟಿಪ್ಪೂಸುಲ್ತಾನ್ ಕಿತ್ತೂರಿನ ಮೇಲೆ ಯುದ್ಧ ಮಾಡಿ ಆಗಿನ ದೇಸಾಯಿ ಮಲ್ಲ ಸರ್ಜನನ್ನು ಬಂಧಿಸಿ ಕಿತ್ತೂರಿನಲ್ಲಿ ಮೈಸೂರಿನ ಸೈನ್ಯದ ಭಾಗವೊಂದನ್ನು ಇರಿಸಿದ. ಕಾಲಕ್ರಮದಲ್ಲಿ ಕಿತ್ತೂರು ಮರಾಠರ ವಶವಾಯಿತು. ಪರಶುರಾಮಭಾವು ಕಿತ್ತೂರಿನಲ್ಲಿ ಮಮ್ಲತ್‍ದಾರನನ್ನು ನಿಯಮಿಸಿ ಅದನ್ನು ಧಾರವಾಡಕ್ಕೆ ಅಧೀನವನ್ನಾಗಿ ಮಾಡಿದ. 1802ರಲ್ಲಿ ಮಲ್ಲಸರ್ಜ ಪೇಷ್ವೆಗಳಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದರೂ ವೆಲೆಸ್ಲಿಯ ಮೈತ್ರಿಯನ್ನು ಬೆಳೆಸಿಕೊಂಡು ಮರಾಠರಿಂದ ಸ್ವತಂತ್ರನಾಗಲು ಯೋಚಿಸಿ ವೆಲೆಸ್ಲಿಯ ಯುದ್ಧಗಳಲ್ಲಿ ಸಹಾಯಮಾಡಿದ. ಇದರಿಂದ ಸಂತೋಷಗೊಂಡ ವೆಲೆಸ್ಲಿ ಮರಾಠರಿಗೂ ಮಲ್ಲಸರ್ಜನಿಗೂ ಮೈತ್ರಿ ಏರ್ಪಡಿಸಿದ. ಇದರ ಪ್ರಕಾರ ಮಲ್ಲಸರ್ಜ ಸ್ವತಂತ್ರವಾಗಿ ಆಳಿದರೂ ಪೇಷ್ವೆಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಬೇಕಾಯಿತು. ಆದರೆ ಸ್ವಲ್ಪ ಸಮಯದಲ್ಲಿಯೇ ಮಲ್ಲಸರ್ಜ ಮರಾಠರಿಂದ ಸೆರೆಯಾಗಿ ಪುಣೆಯ ಕಾರಾಗೃಹದಲ್ಲಿ ಬಂಧಿಯಾದ. 1816ರಲ್ಲಿ ಬಂಧಮುಕ್ತನಾದ ಮಲ್ಲಸರ್ಜ ಕಿತ್ತೂರಿಗೆ ಹಿಂದಿರುಗುವ ಮಾರ್ಗದಲ್ಲಿ ಮೃತನಾದ. ಕಿತ್ತೂರಿನ ಅರಸರಲ್ಲಿ ಮಲ್ಲಸರ್ಜನೇ ಅತ್ಯಂತ ಮುಖ್ಯನಾದವ.

ಮಲ್ಲಸರ್ಜನ ಅನಂತರ ಅವನ ಜ್ಯೇಷ್ಠಪುತ್ರ ಶಿವಲಿಂಗರುದ್ರಸರ್ಜ ದೊರೆಯಾದ. ಇವನ ಕಾಲದಲ್ಲಿ ಬ್ರಿಟಿಷರಿಗೂ ಮರಾಠರಿಗೂ ವೈಮನಸ್ಯ ವೃದ್ಧಿಯಾಗಿ, 1818ರಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಶಿವಲಿಂಗರುದ್ರಸರ್ಜ ಬ್ರಿಟಿಷರಿಗೆ ವಿಶೇಷವಾಗಿ ಸಹಾಯ ಮಾಡಿದ. ಇದರಿಂದ ಸಂತೋಷಗೊಂಡ ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರನ್ನು ಜಹಗೀರಿಯಾಗಿ ಕೊಟ್ಟರು. ಶಿವಲಿಂಗರುದ್ರಸರ್ಜ ಬ್ರಿಟಿಷರೊಡನೆ ಮೈತ್ರಿಯಿಂದಿದ್ದು 1824 ರವರೆಗೆ ರಾಜ್ಯವಾಳಿದ. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ಶಿವಲಿಂಗಪ್ಪನೆಂಬ ಬಾಲಕನನ್ನು ದತ್ತು ಸ್ವೀಕಾರಮಾಡಿದರೂ ಅವನು ಸಂಸ್ಥಾನದ ರಾಜನಾಗಲು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಒಪ್ಪಲಿಲ್ಲ. ಮಲ್ಲಸರ್ಜನ ವಿಧವೆ ಚೆನ್ನಮ್ಮನೂ ಇತರರೂ ಬ್ರಿಟಿಷ್ ಅಧಿಕಾರಿಗಳನ್ನು ಬಹುವಾಗಿ ಪ್ರಾರ್ಥಿಸಿದರೂ ಅದರಿಂದ ಉಪಯೋಗವಾಗಲಿಲ್ಲ. ಥ್ಯಾಕರೆಯ ಕುತಂತ್ರವನ್ನು ಗವರ್ನರ್ ಎಲ್‍ಫಿನ್‍ಸ್ಟನನೂ ಅರ್ಥಮಾಡಿಕೊಳ್ಳಲಿಲ್ಲ. ಸಂತತಿಹೀನವಾದ ಕಿತ್ತೂರು ಸಂಸ್ಥಾನ ಬ್ರಿಟಿಷರ ಆಳ್ವಿಕೆಗೆ ಒಳಪಡಬೇಕೆಂದು ಬ್ರಿಟಿಷರು ಹಠಹಿಡಿದರು. ಕಿತ್ತೂರಿನ ಅಭಿಮಾನಿ ಪ್ರಜೆಗಳು ತಮ್ಮ ಸಂಸ್ಥಾನ ಬ್ರಿಟಿಷರಿಗೆ ಸೇರುವುದನ್ನು ತಪ್ಪಿಸಲು ಚೆನ್ನಮ್ಮನ ನೇತೃತ್ವದಲ್ಲಿ ಪ್ರಾಣಾರ್ಪಣೆ ಮಾಡಲು ಸಿದ್ಧರಾದರು. ಚೆನ್ನಮ್ಮನ ನೇತೃತ್ವದಲ್ಲಿ ಬ್ರಿಟಿಷರಿಗೂ ಕಿತ್ತೂರು ಸೈನ್ಯಕ್ಕೂ 1824ರ ಅಕ್ಟೋಬರ್ 23ರಂದು ಯುದ್ಧ ನಡೆಯಿತು. ಯೋಧರು ಥ್ಯಾಕರೆಯನ್ನೂ ಅವನ ಸಹಾಯಕರನ್ನೂ ಕೊಂದರು. ನೂರಾರು ಬ್ರಿಟಿಷ್ ಸೈನಿಕರು ಸೆರೆ ಸಿಕ್ಕಿದರು. ಇದರಿಂದ ಕ್ರೋಧಗೊಂಡ ಬ್ರಿಟಿಷರು ಹೇಗಾದರೂ ಚೆನ್ನಮ್ಮನನ್ನು ಸೋಲಿಸಿ, ಕಿತ್ತೂರನ್ನು ವಶಮಾಡಿಕೊಳ್ಳಲು ನಿರ್ಧರಿಸಿದರು. ಮೈಸೂರು, ಶೋಲಾಪುರ ಮತ್ತು ಇತರ ದಂಡು ಪ್ರದೇಶಗಳಿಂದ ಬ್ರಿಟಿಷ್ ಸೈನ್ಯಗಳು ಬಂದು ಕಿತ್ತೂರಿನಲ್ಲಿ ಸೇರಿಕೊಂಡವು. ಶೂರಳಾದರೂ ಶಾಂತಿಪ್ರಿಯಳಾದ ಚೆನ್ನಮ್ಮ ರಕ್ತಪಾತವನ್ನು ನಿಲ್ಲಿಸುವ ಸಲುವಾಗಿ ಗವರ್ನರ್ ಎಲ್‍ಫಿನ್‍ಸ್ಟನನಿಗೆ ಪತ್ರ ಬರೆದು ಥ್ಯಾಕರೆಯ ಕುತಂತ್ರವನ್ನು ವಿವರಿಸಿದಳು. ಪ್ರಯೋಜನವಾಗಲಿಲ್ಲ. ಕಮಿಷನರಾಗಿದ್ದ ಚಾಪ್ಲಿನನ ಮೋಸದ ಮಾತನ್ನು ನಂಬಿ, ಸೆರೆಯಲ್ಲಿದ್ದ ಬ್ರಿಟಿಷ್‍ಯೋಧರನ್ನೆಲ್ಲ ಚೆನ್ನಮ್ಮ ವಿಮೋಚನೆಗೊಳಿಸಿದಳು. ಚಾಪ್ಲಿನ್ ಚೆನ್ನಮ್ಮನ ಮೇಲೆ ಯುದ್ಧ ಹೂಡಿದ. ಬ್ರಿಟಿಷ್ ಸೈನ್ಯಕ್ಕೂ ಕಿತ್ತೂರಿನ ಸೈನ್ಯಕ್ಕೂ ನಡೆದ ಘೋರ ಕದನದಲ್ಲಿ ಸ್ವತಃ ಚೆನ್ನಮ್ಮನೇ ಸೇನಾಧಿಪತ್ಯವನ್ನು ವಹಿಸಿಕೊಂಡು ಯುದ್ಧವನ್ನು ಎಚ್ಚರಿಕೆಯಿಂದ ನಿರ್ದೇಶಿಸಿದಳು. ದೇಶಾಭಿಮಾನಿಗಳೂ ಯೋಧರೂ ಆದ ಕಿತ್ತೂರಿನ ಸೈನಿಕರು ತಾಯಿನಾಡಿನ ರಕ್ಷಣೆಗೋಸ್ಕರ ಕಾದಾಡಿದರೂ ಹೆಚ್ಚು ಸಂಖ್ಯೆಯಲ್ಲಿದ್ದ ಮತ್ತು ಒಳ್ಳೆಯ ಆಯುಧಗಳನ್ನು ಹೊಂದಿದ್ದ ಬ್ರಿಟಿಷ್ ಸೈನ್ಯದ ಮುಂದೆ ಸೋತರು. ಕೊನೆಗೆ ಡಿಸೆಂಬರ್ 3ನೆಯ ದಿನಾಂಕದಂದು ಕಿತ್ತೂರು ಕೋಟೆ ಬ್ರಿಟಿಷರ ವಶವಾಯಿತು. ರಾಣಿ ಚೆನ್ನಮ್ಮ ಮತ್ತು ಅವಳ ಬಂಧುಗಳು ಬ್ರಿಟಿಷರ ಬಂಧಿಗಳಾದರು. ಅವಳನ್ನು ಬೈಲಹೊಂಗಲದ ಕಾರಗೃಹದಲ್ಲಿಡಲಾಯಿತು.

ಸ್ವಾತಂತ್ರ್ಯ ಸಮರ

ಕಿತ್ತೂರಿನ ಪ್ರಜೆಗಳಲ್ಲಿ ಅಡಗಿದ್ದ ದೇಶಾಭಿಮಾನ ನಶಿಸಿಹೋಗದೆ ಮತ್ತೊಂದು ಸ್ವಾತಂತ್ರ್ಯ ಸಮರಕ್ಕೆ ಎಡೆಮಾಡಿಕೊಟ್ಟಿತು. ಸಂಗೊಳ್ಳಿ ರಾಯಣ್ಣನೆಂಬ ಸಾಮಾನ್ಯ ಪ್ರಜೆ ಇದರ ಮುಖಂಡ. ತನ್ನ ಶೂರಮಿತ್ರರ ಸಹಾಯದಿಂದ ಒಂದು ಸಣ್ಣ ಸೈನ್ಯವನ್ನು ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ಧನಾದ. ದೇಸಾಯಿಯ ದತ್ತುಪುತ್ರ ಶಿವಲಿಂಗಪ್ಪನನ್ನು ಕಿತ್ತೂರಿನ ರಾಜನಾಗಿ ಮಾಡುವ ಉದ್ದೇಶವನ್ನು ಸಾರಿ ಬ್ರಿಟಿಷರ ಸರ್ಕಾರಿ ಕಟ್ಟಡಗಳನ್ನು ಸುಟ್ಟುಹಾಕಿ, ಕೈಗೆ ಸಿಕ್ಕಿದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದ. ಜನಪ್ರಿಯ ರಾಯಣ್ಣ ಸುಮಾರು ನಾಲ್ಕು ತಿಂಗಳುಗಳ ಕಾಲ ಬ್ರಿಟಿಷರ ಕಣ್ಣಿಗೆ ಬೀಳದೆ ವಿಧ್ವಂಸಕ ಕಾರ್ಯಗಳಲ್ಲಿ ತೊಡಗಿದ. ಇದರಿಂದ ಬ್ರಿಟಿಷರು ತತ್ತರಿಸಿದರು. ಆದರೆ ಹಣದ ಆಸೆಯಿಂದ ರಾಯಣ್ಣನನ್ನು ಪತ್ತೆ ಹಚ್ಚುವುದರಲ್ಲಿ ಕೆಲವರು ಸಹಾಯ ಮಾಡಿದರು. ರಾಯಣ್ಣ ಸೆರೆ ಸಿಕ್ಕಿದಾಗ ಬ್ರಿಟಿಷರು ರಾಯಣ್ಣನನ್ನು ದೇಶದ್ರೋಹಿಯೆಂದು ಗಲ್ಲಿಗೇರಿಸಿದರು. ಕಿತ್ತೂರು ಬ್ರಿಟಿಷರ ವಶವಾಯಿತು.

ಸ್ವಾತಂತ್ರ್ಯಾನಂತರ

ಬ್ರಿಟಿಷರು ಆಕ್ರಮಿಸಿಕೊಂಡ ಅನಂತರ ಬಹುಮಟ್ಟಿಗೆ ಖಿಲವಾಗಿದ್ದ ಈ ಊರು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ ಮತ್ತೆ ಪ್ರಾಮುಖ್ಯತೆ ಪಡೆಯುತ್ತಿದೆ. ತಕ್ಕಷ್ಟು ದೊಡ್ಡದಾಗಿರುವ ಈ ಗ್ರಾಮದ ಜನರ ಮುಖ್ಯ ಕಸಬು ನೇಯ್ಗೆ. ಇಲ್ಲಿನ ರೇಷ್ಮೆ ಬಟ್ಟೆಗಳು ಪ್ರಸಿಧ್ಧವಾಗಿವೆ. ವೀರ ರಾಣಿ ಚೆನ್ನಮ್ಮನ ನೆನಪಿಗಾಗಿ ಮಹಿಳೆಯರ ಸೈನಿಕ ಶಾಲೆ ಇಲ್ಲಿ ಆರಂಭವಾಗಿವೆ. ದೇಸಾಯರ ಕಾಲದ ಜನ ಜೀವನ ಮತ್ತು ಪ್ರಾಚೀನ ಕಾಲದ ಶಿಲ್ಪ ವೈಖರಿಯನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯ ರೂಪಗೊಂಡಿದೆ. ಈಗ ಕಿತ್ತೂರಿನಲ್ಲಿ ಪ್ರಾಥಾಮಿಕ ಮತ್ತು ಪ್ರೌಢ ಶಾಲೆಗಳಿವೆ. ಈ ಊರು ವ್ಯಾಪಾರ ಕೇಂದ್ರವೂ ಹೌದು.

ಕಿತ್ತೂರು ಇದು ಸಣ್ಣ ಗ್ರಾಮವಾಗಿದ್ದರೂ ಚೆನ್ನಮ್ಮ, ರಾಯಣ್ಣ ಮುಂತಾದ ವೀರರ ಕಥೆಯನ್ನು ಹೇಳಲು ಅಲ್ಲಿ ಪಾಳುಬಿದ್ದಿರುವ ಭವ್ಯ ಕೋಟೆಯ ಅವಶೇಷಗಳು ಇಂದಿಗೂ ನಿಂತಿವೆ. ಕೋಟೆಯ ಮಣ್ಣಿನ ಗೋಡೆ ಏಳು ಅಡಿ ದಪ್ಪವಿದೆ. ಎತ್ತರದ ದಿಬ್ಬದ ಮೇಲಿರುವುದರಿಂದ ಕೋಟೆ ಅನೇಕ ಮೈಲಿಗಳವರೆಗೆ ಎದ್ದು ಕಾಣುತ್ತದೆ. ಕೋಟೆ ಚೆನ್ನಾಗಿದ್ದ ಕಾಲದಲ್ಲಿ ಇದೊಂದು ಅಸಾಧಾರಣವಾದ ದುರ್ಗವಾಗಿದ್ದಿರಬಹುದೆಂದು ಬ್ರಿಟಿಷ್ ಚರಿತ್ರಕಾರರು ಒಪ್ಪಿದ್ದಾರೆ. ಈ ಕೋಟೆಗೆ ಬಹು ಸಮೀಪದಲ್ಲಿಯೇ ದೇಸಾಯರ ಅರಮನೆಯಿದ್ದ ಸ್ಥಳವಿದೆ. ಅರಮನೆಯ ಬಹುಭಾಗ ನಾಶವಾಗಿದ್ದರೂ ಅದರ ಭವ್ಯತೆ ಇನ್ನೂ ಎದ್ದುಕಾಣುತ್ತದೆ. ಅದರ ಹೊರ ಅಂಗಳದ ಉದ್ದ ಸುಮಾರು 100' ಅಗಲ 30' ತೇಗದ ಮರದ ಕಂಬಗಳ ಮೇಲಣ ಕೆತ್ತನೆಯ ಕೆಲಸ ನಾಜೂಕಾದುದು. ದಿಮ್ಮಿಗಳನ್ನೇ ಛಾವಣಿಗಾಗಿ ಬಳಸಿದ್ದಾರೆ. ಇವೂ ಕೆತ್ತನೆಯ ಕೆಲಸದಿಂದ ಕೂಡಿವೆ. ನೆಲಕ್ಕೆ ಹಾಸಲು ಉಪಯೋಗಿಸಿದ್ದ ಹೊಳಪುಳ್ಳ ಮತ್ತು ನಯಮಾಡಿದ ಕಲ್ಲು ಚಪ್ಪಡಿಗಳು ಅಲ್ಲಲ್ಲಿ ಬಿದ್ದಿವೆ. ಇವು ಆಗಿನ ಕಾಲದ ಶ್ರೀಮಂತಿಕೆ, ಕಲಾವಂತಿಕೆಗಳ ಮೂಕ ಸಾಕ್ಷಿಗಳಾಗಿವೆ.

ಈಗ ಕಿತ್ತೂರಿನಲ್ಲಿ ಉಳಿದು ಬಂದಿರುವ ಪ್ರಾಚೀನ ಅವಶೇಷಗಳಲ್ಲಿ ಮುಖ್ಯವಾದುದು ಹೊಂಡದ ಗುಂಡಿ ಎಂದು ಕರೆಯುವ ಈಶ್ವರ ದೇವಾಲಯ. ೧೨ನೆಯ ಶತಮಾನದ ಚಾಳುಕ್ಯ ರೀತಿಯಲ್ಲಿ ನಿರ್ಮಿತವಾಗಿದ್ದ ಈ ದೇವಾಲಯ ಈಗ ಪೂರ್ತಿಯಾಗಿ ಪುನರ್ನಿರ್ಮಾಣಗೊಂಡಿದೆ. ಇಲ್ಲಿಯ ನವರಂಗದ ಕಂಬಗಳು, ನಂದಿ, ಗಣೇಶ, ಮಹಿಷಾಸುರಮರ್ದಿನಿ ಮೊದಲಾದ ಮೂರ್ತಿಗಳು ದೇವಾಲಯದ ತಳಹದಿಯ ಅಷ್ಟಪಟ್ಟಿಕೆಗಳು ಚಾಳುಕ್ಯ ರೀತಿಯ ಉತ್ತಮ ಮಾದರಿಯಾಗಿವೆ. ಉನ್ನತವಾದ ದಿಬ್ಬವೊಂದರ ಮೇಲೆ ದೇಸಾಯರು ಕಟ್ಟಿಸಿದ್ದ ಕೋಟೆ ಈಗ ಪಾಳು ಬಿದ್ದಿದೆ. ಎತ್ತರವಾದ ಇದರ ಮಣ್ಣಿನ ಗೋಡೆಗಳಲ್ಲಿ ಅಲ್ಲಲ್ಲಿ ಕಿರುಗಲ್ಲಿನ ಮುಖವರಿಸೆಗಳು ಉಳಿದುಬಂದಿವೆ. ಗುಂಡಾದ ಈ ಕೋಟೆಯ ಸುತ್ತಲೂ ಆಳವೂ ಅಗಲವೂ ಆದ ಕಂದಕವಿದ್ದು ಗೋಡೆಗೆ ಅಲ್ಲಲ್ಲಿ ಬುರುಜಗಳಿದ್ದ ಗುರುತುಗಳಿವೆ. ಕೋಟೆಯೊಳಗೆ ಈಶಾನ್ಯಭಾಗದಲ್ಲಿ ದೇಸಾಯರ ಭವ್ಯವಾದ ಸೌಧವಿತ್ತು. ಅದರ ಬಹು ಭಾಗ ಪಾಳು ಬಿದ್ದು ಈಗ ಕೆಲವು ಗೋಡೆಗಳು ಮಾತ್ರ ನಿಂತಿವೆ. ಈ ಕಟ್ಟಡದ ಭಗ್ನಾವಶೇಷಗಳನ್ನು ಇತ್ತೀಚೆಗೆ ಬಿಡಿಸಿದ್ದು ಅದರ ತಳವಿನ್ಯಾಸ ಬೆಳಕಿಗೆ ಬಂದಿರುವುದಲ್ಲದೆ ಅದರಲ್ಲಿನ ಕೋಣೆಗಳು, ಪಾಕಶಾಲೆಗಳು, ಸ್ನಾನಗೃಹಗಳು, ಬಾವಿಗಳು, ಪ್ರತಿ ಕೋಣೆಗೂ ಗೋಡೆಯೊಳಗೇ ಸಾಗುತ್ತಿದ್ದ ನೀರಿನ ಕೊಳಾಯಿಗಳು, ಹೊಗೆಯ ಗೂಡುಗಳು, ಇವೆಲ್ಲಕ್ಕಿಂತ ಮಿಗಿಲಾಗಿ ಧ್ರುವ ನಕ್ಷತ್ರವನ್ನು ಒಳಗಿನಿಂದಲೇ ಕಾಣಬಹುದಾದ ವೀಕ್ಷಣಾಕಿಂಡಿ - ಇವುಗಳನ್ನು ಈಗಲೂ ಗುರುತಿಸಬಹುದು. ಅರಮನೆಯ ಮುಂದೆ ದೊಡ್ಡದಾದ ಸಭಾಂಗಣವಿದೆ. ಅದರ ದಪ್ಪ ಮರದ ಕಂಬಗಳೂ ನೆಲಕ್ಕೆ ಹಾಸಿದ್ದ ಹೊಳಪುಗಲ್ಲುಗಳೂ ಈಗ ಉಳಿದುಬಂದಿಲ್ಲ. ಕೋಟೆಯ ನಡುವೆ ಉನ್ನತವಾದ ವೀಕ್ಷಣಾಗೋಪುರವೊಂದಿದ್ದು ಅದರ ಬುಡದಲ್ಲಿ ಆಂಜನೇಯನ ಗುಡಿ ಇದೆ. ಇದಲ್ಲದೆ ಕೋಟೆಯ ಪಶ್ಚಿಮ ದ್ವಾರದ ಬಳಿ ಒಂದು ಚಿಕ್ಕ ದೇವಾಲಯ ಸಹ ಇದೆ. ಉಳಿದ ಕಟ್ಟಡಗಳು ನೆಲಸಮವಾಗಿವೆ. ವಸ್ತು ಸಂಗ್ರಹಾಲಯದ ಕಟ್ಟಡ ಕೋಟೆಯೊಳಗೆ ನಿರ್ಮಿತವಾಗಿದೆ. ಇಲ್ಲಿ ಒಂದು ಸುಂದರವಾದ ಉದ್ಯಾನವೂ ರೂಪುಗೊಂಡಿದೆ.

ಕೋಟೆಯಿಂದ ಪಶ್ಚಿಮಕ್ಕೆ ಎತ್ತರವಾದ ಸ್ಥಳದಲ್ಲಿ ಕಿತ್ತೂರು ದೇಸಾಯರ ಕೆಲವು ಸಮಾಧಿ ಕಟ್ಟಡಗಳಿವೆ. ಭಾರತೀಯ ಇಸ್ಲಾಮೀ ಶೈಲಿಯಲ್ಲಿ ಕಟ್ಟಿರುವ ಈ ಕಟ್ಟಡಗಳು ಭವ್ಯವಾಗಿವೆ. ಇಲ್ಲಿನ ಕಟ್ಟಡಗಳಲ್ಲಿ ಈಗ ಶಾಲೆಗಳನ್ನು ನಡೆಸಲಾಗುತ್ತಿದೆ. ಈಗ ಊರು ಕೋಟೆಯ ದಕ್ಷಿಣಕ್ಕೂ ಹರಡಿಕೊಂಡಿದೆ.

ಕಿತ್ತೂರಿನ ಜನಗಳ ಸ್ವಾತಂತ್ರ್ಯಾಕಾಂಕ್ಷೆಗಳಿಂದ, ಚೆನ್ನಮ್ಮನ ಧೀರೋದಾತ್ತವಾದ ಹೋರಾಟದಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಈ ಊರು ಮೊದಲ ಹೆಜ್ಜೆ ಇಟ್ಟಿತೆಂಬ ಖ್ಯಾತಿ ಪಡೆದಿದೆ. ಹಲವು ಯುದ್ಧಗಳನ್ನು ಕಂಡು ವೀರಭೂಮಿಯಾಗಿದೆ. ಕಿತ್ತೂರಿನ ಕಥೆ ಲಾವಣಿಯಾಗಿ, ಕತೆಯಾಗಿ ನಾನಾಮುಖವಾಗಿ ಪ್ರಚುರಗೊಂಡು ಖ್ಯಾತವಾಗಿದೆ.

ಇವನ್ನೂ ನೋಡಿ

ಬಾಹ್ಯ ಸಂಪರ್ಕಗಳು

ಕಿತ್ತೂರು: ಚರಿತ್ರೆ, ಸ್ವಾತಂತ್ರ್ಯ ಸಮರ, ಸ್ವಾತಂತ್ರ್ಯಾನಂತರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕಿತ್ತೂರು ಚರಿತ್ರೆಕಿತ್ತೂರು ಸ್ವಾತಂತ್ರ್ಯ ಸಮರಕಿತ್ತೂರು ಸ್ವಾತಂತ್ರ್ಯಾನಂತರಕಿತ್ತೂರು ಇವನ್ನೂ ನೋಡಿಕಿತ್ತೂರು ಬಾಹ್ಯ ಸಂಪರ್ಕಗಳುಕಿತ್ತೂರುಧಾರವಾಡಪುಣೆಬೆಂಗಳೂರುಬೆಳಗಾವಿಬೈಲಹೊಂಗಲ

🔥 Trending searches on Wiki ಕನ್ನಡ:

ಸಿದ್ಧಯ್ಯ ಪುರಾಣಿಕನ್ಯೂಟನ್‍ನ ಚಲನೆಯ ನಿಯಮಗಳುಮನುಸ್ಮೃತಿಬ್ಯಾಂಕಿಂಗ್ ವ್ಯವಸ್ಥೆಕಲಬುರಗಿಮೌರ್ಯ ಸಾಮ್ರಾಜ್ಯಕನ್ನಡದಲ್ಲಿ ವಚನ ಸಾಹಿತ್ಯಕಾಜೊಲ್ಉತ್ಪಾದನೆಜೋಗಿ (ಚಲನಚಿತ್ರ)ಭಗತ್ ಸಿಂಗ್ಬೆಳ್ಳುಳ್ಳಿಭರತನಾಟ್ಯತತ್ಸಮ-ತದ್ಭವಇಮ್ಮಡಿ ಪುಲಿಕೇಶಿಹಸಿರು ಕ್ರಾಂತಿಅಲಂಕಾರಆಯತ (ಆಕಾರ)ಜವಹರ್ ನವೋದಯ ವಿದ್ಯಾಲಯಅಲನ್ ಶಿಯರೆರ್ತಾಳಗುಂದ ಶಾಸನರಾಷ್ಟ್ರೀಯತೆನಾಗವರ್ಮ-೧ಚಂದ್ರಶೇಖರ ಕಂಬಾರಉತ್ತರ ಕರ್ನಾಟಕಹಣಕೃಷಿಮೈಸೂರು ಅರಮನೆಜ್ಞಾನಪೀಠ ಪ್ರಶಸ್ತಿಭಾರತದಲ್ಲಿನ ಶಿಕ್ಷಣಕಳಿಂಗ ಯುದ್ದ ಕ್ರಿ.ಪೂ.261ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಚೋಳ ವಂಶಬಾದಾಮಿ ಶಾಸನಕನ್ನಡದಲ್ಲಿ ನವ್ಯಕಾವ್ಯಪು. ತಿ. ನರಸಿಂಹಾಚಾರ್ಮೈಟೋಕಾಂಡ್ರಿಯನ್ಅರ್ಜುನಮಹಾತ್ಮ ಗಾಂಧಿಹೊಯ್ಸಳ ವಾಸ್ತುಶಿಲ್ಪಧೂಮಕೇತುಕೆ. ಎಸ್. ನಿಸಾರ್ ಅಹಮದ್ಸವರ್ಣದೀರ್ಘ ಸಂಧಿದಿಯಾ (ಚಲನಚಿತ್ರ)ಹುಲಿಮಾಹಿತಿ ತಂತ್ರಜ್ಞಾನಮಗುಕನ್ನಡ ಪತ್ರಿಕೆಗಳುಪಂಪಉತ್ತರ ಪ್ರದೇಶಪಟ್ಟದಕಲ್ಲುಪುಸ್ತಕಸಜ್ಜೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭೀಮಸೇನ ಜೋಷಿಪ್ರಾಚೀನ ಈಜಿಪ್ಟ್‌ಚಂದ್ರಗುಪ್ತ ಮೌರ್ಯಕೇಶಿರಾಜಮೆಕ್ಕೆ ಜೋಳನಿರುದ್ಯೋಗತತ್ತ್ವಶಾಸ್ತ್ರಯು.ಆರ್.ಅನಂತಮೂರ್ತಿಕರ್ನಾಟಕದ ಜಿಲ್ಲೆಗಳುನಾಗರೀಕತೆಬ್ಯಾಂಕ್ ಖಾತೆಗಳುಶುಷ್ಕಕೋಶ (ಡ್ರೈಸೆಲ್)ಜಾತ್ರೆಕೋಗಿಲೆಜನಪದ ಕಲೆಗಳುಹರಿದಾಸಪ್ರಜಾಪ್ರಭುತ್ವಗಂಗ (ರಾಜಮನೆತನ)ಕಾನೂನುಭಂಗ ಚಳವಳಿಶಿವಮೊಗ್ಗಹರಪ್ಪಇಮ್ಮಡಿ ಪುಲಕೇಶಿಆಸ್ಟ್ರೇಲಿಯ🡆 More