ಉಸಿರಾಟದ ಮಂಡಲದ ಅಂಗರಚನೆ

ಸ್ಥೂಲವಾಗಿ ಗಾಳಿ ಸಂಚರಿಸುವ ಮಾರ್ಗಗಳು, ಪುಪ್ಫುಸಗಳು ಮತ್ತು ಅವುಗಳಲ್ಲಿ ಗಾಳಿಯನ್ನು ತುಂಬುವ ಇತರ ಅವಯವಗಳು: ವಿವರವಾಗಿ(ಮೂಗು, ಗಂಟಲು, ಗಂಟಲುಕುಳಿ (ಫ್ಯಾರಿಂಕ್ಸ್), ಧ್ವನಿನಾಳ (ಲ್ಯರಿಂಕ್ಸ್), ಉಸಿರ್ನಾಳ (ಟ್ರೆಕಿಯಾ), ವಾಸನಾಂಗಗಳು, ಉಸಿರ್ನಾಳದ ಕವಲುಗಳು, ಗಾಳಿಯ ಗೂಡುಗಳು (sಪಲ್ಮೊನರಿ ಆಲ್ವಿಯೋಲೈ) ಪುಪ್ಫುಸಗಳು, ತಿದಿಯಂತಿರುವ ಎದೆಗೂಡು (ತೊರ್ಯಾಕ್ಸ್), ಕತ್ತು ಇದೆ ಹೊಟ್ಟೆಗಳ ಸ್ನಾಯುಗಳು ಮತ್ತು ವಪೆ, ಸ್ನಾಯುಗಳನ್ನು ನಿಯಂತ್ರಿಸುವ ಮಿದುಳ ಕಾಂಡ (ಮೆಡ್ಯುಲ ಆಬ್ಲಾಂಗೇಟ)(ಇವಿಷ್ಟರ ಸಮುದಾಯ (ಅನಾಟಮಿ ಆಫ್ ದಿ ರೆಸ್ಟಿರೇಟರಿ ಸಿಸ್ಟಂ).

ವಪೆ ಸ್ನಾಯುಗಳ ಕುಗ್ಗುವಿಕೆಯಿಂದ ಎದೆ ಗೂಡು ಹಿಗ್ಗಿ ಮೂಗಿನ ಮೂಲಕ ಗಾಳಿ ನುಗ್ಗಿ ಪುಪ್ಫುಸಗಳನ್ನು ಉಬ್ಬಿಸುತ್ತವೆ. ಸ್ನಾಯುಗಳು ಸಡಿಲವಾದಾಗ ಎದೆಗೂಡು ಕುಗ್ಗಿ ಪುಪ್ಫುಸಗಳಲ್ಲಿರುವ ಗಾಳಿ ಹೊರಹೋಗುತ್ತದೆ.

ಉಸಿರಿನ ಮಾರ್ಗಗಳು

1 ಮೂಗು (ನೇಸಲ್ ಕ್ಯಾವಿಟಿ): ಮೂಗಿನ ಒಳಭಾಗ ತಳದಲ್ಲಿ (ಬಾಯಂಗಳದ ಮೇಲೆ) 5 ಸೆಂ.ಮೀ. ಉದ್ದ 5 ಸೆಂ.ಮೀ. ಅಗಲವಾಗಿದೆ. ಮೇಲ್ಭಾಗದ ಅಗಲ 5. ಮಿ.ಮೀ. ಇದರ ಮಧ್ಯೆ ತೆಳು ಮೂಳೆಗಳು ಮತ್ತು ಮೃದ್ವಸ್ಥಿ (ಕಾರ್ಟಿಲೇಜ್) ಇರುವ ತಡಿಕೆ (ಸೆಪ್ಟಂ) ಇದೆ. ಪಕ್ಕಗಳಲ್ಲಿ ಸ್ವಲ್ಪ ಮಡಚಿಕೊಂಡ ಸುರಳಿ ತೆಳುಮೂಳೆಗಳಿವೆ. (ಶಂಖ), ಮೂಗಿಗೆ ಸೇರಿದ ಮೂಳೆಗಳು ಒಟ್ಟು 11. ಇವನ್ನು ಬೆಚ್ಚಗಿರುವ ಕೆಂಪು ಲೋಳೆಪೊರೆ ಮುಚ್ಚಿದೆ. ಕೆಳಸುರುಳಿ ಮೂಳೆಗಳ ಮೇಲಿರುವ ಪೊರೆ ಹೆಚ್ಚು ರಕ್ತನಾಳಗಳಿಂದ ದಪ್ಪವಾಗಿದೆ ಮೂಗಿನಲ್ಲಿ ಹೆಚ್ಚು ರಕ್ತನಾಳಗಳಿವೆ. ಇವುಗಳಲ್ಲಿ ಚಲಿಸುವ ಬಿಸಿರಕ್ತದಿಂದ ಉಚ್ಛ್ವಾಸದ ಗಾಳಿ ಬಿಸಿಯಾಗುತ್ತದೆ. ಅದಕ್ಕೆ ಹಬೆಯ ಅಂಶವೂ ಸೇರುತ್ತದೆ. ಲೋಳೆಪೊರೆಯ ಅಂಚಿನಲ್ಲಿ ಮತ್ತು ಹೊಳ್ಳೆಗಳಲ್ಲಿರುವ ಕೂದಲಲ್ಲಿ ದೂಳು ಮತ್ತು ಕ್ರಿಮಿಗಳು ಅಂಟಿಕೊಂಡು ಗಾಳಿ ಬಿಸಿಯಾಗುತ್ತದೆ. ಅದಕ್ಕೆ ಹಬೆಯ ಅಂಶವೂ ಸೇರುತ್ತದೆ. ಲೋಳೆಪೊರೆಯ ಅಂಚಿನಲ್ಲಿ ಮತ್ತು ಹೊಳ್ಳಗಳಲ್ಲಿರುವ ಕೂದಲಲ್ಲಿ ದೂಳು ಮತ್ತು ಕ್ರಿಮಿಗಳು ಅಂಟಿಕೊಂಡು ಗಾಳಿ ಶೋಧನೆಗೊಳ್ಳುತ್ತದೆ. ಮೂಗಿನ ಪಕ್ಕ ಮೂಳೆಗಳಲ್ಲಿ ಗಾಳಿಗೂಡುಗಳು (ಪ್ಯಾರಾನೇಸಲ್ ಏರ್ ಸೈನಸೆಸ್) ಧ್ವನಿ ವರ್ಧಕವಾಗಿ ಮೂಳೆಗಳನ್ನು ಹಗುರವಾಗಿಸಿ ಉಸಿರಿನ ಕಾವು ಹೆಚ್ಚಲು ಸಹಾಯಕವಾಗಿವೆ. ನೆಗಡಿಯಾದಾಗ ಈ ಗೂಡುಗಳಲ್ಲಿ ಕಫ ತುಂಬಿಕೊಂಡರೆ ಧ್ವನಿ ಕುಗ್ಗುವುದು. ಘ್ರಾಣೇಂದ್ರಿಯ ಗಾಳಿಯ ಪ್ರವಾಹದಲ್ಲಿಲ್ಲ; ಬದಲು ಮೇಲುಗಡೆ ಸುರಕ್ಷಿತವಾಗಿದೆ. ಗಾಳಿಯನ್ನು ಸ್ವಲ್ಪ ವೇಗದಿಂದ ತೆಗೆದುಕೊಂಡರೆ ವಾಸನೆ ಹೆಚ್ಚು ಚೆನ್ನಾಗಿ ತಿಳಿಯುತ್ತದೆ.

2 ಗಂಟಲು (ಫ್ಯಾರಿಂಕ್ಸ್

ಇದು ಆಹಾರ ಮತ್ತು ಗಾಳಿಗಳ ಮಾರ್ಗ ನುಂಗುವಾಗ ಉಸಿರು ನಿಲ್ಲುತ್ತದೆ. ಉಸಿರಾಡುವಾಗ ನುಂಗಲಾಗುವುದಿಲ್ಲ. ಗಂಟಲಿನಲ್ಲಿ ಮೂಗು ಬಾಯಿ ಮತ್ತು ಧ್ವನಿನಾಳಗಳು ತೆರೆಯುತ್ತವೆ.

3 ಧ್ವನಿನಾಳ (ಲ್ಯಾರಿಂಕ್ಸ್)

ಇದು ಕೂಗು ಕೊಳವೆ. ಇದರ ಭಿತ್ತಿಯಲ್ಲಿ ಮೃದ್ವಸ್ಥಿಗಳಿರುವುದರಿಂದ ಕೊಳವೆ ಚಪ್ಪಟೆಯಾಗದೆ ಗಾಳಿ ಸಲೀಸಾಗೆ ಓಡಾಡುವುದು. ಇದರೊಳಗೆ ಬಲ ಮತ್ತು ಎಡ ಧ್ವನಿ ತಂತುಗಳಿವೆ (ವೋಕಲ್ ಕಾಡ್ರ್ಸ್). ಧ್ವನಿ ಹೊರಡಬೇಕಾದಾಗ ಇವು ಒಂದುಗೂಡಿ ಒಂದು ಚಿಕ್ಕ ಕಿಂಡಿಯ (ಗ್ಲಾಟಿಸ್) ಮೂಲಕ ಗಾಳಿ ಹೊರಕ್ಕೆ ಒತ್ತಡದಿಂದ ಬರಬೇಕು. ಆಗ ಇವು ಕಂಪಿಸಿ ಹುಟ್ಟುತ್ತದೆ. ಮಾತಾಡುವಾಗ ಧ್ವನಿನಾಳವನ್ನು ಮುಟ್ಟಿದರೆ ಒಳಗೆ ಅದು ಕಂಪಿಧ್ವನಿಸುವುದು ಗೊತ್ತಾಗುತ್ತದೆ. ಹೆಡೆಯಂತಿರುವ ಕಿರು ನಾಲಗೆ (ಎಪಿಗ್ಲಾಟಿಸ್) ಗಂಟಲಲ್ಲಿ ಗೋಮಾಳೆಯ (ಆಡಾಮ್ಸ್ ಆಪಲ್) ಮೇಲಿದೆ.

4 ಉಸಿರ್ನಾಳ

ಇದು ಧ್ವನಿನಾಳದಿಂದ ಕೆಳಕ್ಕೆ ಮುಂದುವರಿಯುತ್ತದೆ. ಗಂಟಲಿನ ಮಧ್ಯೆ ಕೆಳಭಾಗದಲ್ಲಿ ಎದೆಚೆಕ್ಕೆಯ ಮೇಲೆ ಮೃದ್ವಸ್ಥಿ ಉಂಗುರಗಳು ಕೈಗೆ ಸಿಗುತ್ತವೆ. ಸ್ವಲ್ಪ ಅಮುಕಿದರೆ ಕೆಮ್ಮು ಹುಟ್ಟಬಹುದು. ಸುಮಾರು 14 ಮೃದ್ವಸ್ಥಿಯ ಉಂಗುರುಗಳಿರುವುದರಿಂದ ನಾಳ ಮುಚ್ಚಿ ಕೊಳ್ಳುವುದಿಲ್ಲ: ತಡೆಯಿಲ್ಲದೆ ಓಡಾಡುತ್ತದೆ. ಉಸಿರ್ನಾಳ ಸಡಿಲವಾಗಿರುವುದರಿಂದ ಅಕ್ಕಪಕ್ಕಕ್ಕೆ ಆಡಬಲ್ಲುದು. ಸ್ನಾಯುಗಳಿಂದ ಉದ್ದವಾಗಿ ಸಣ್ಣಗಾಗಬಲ್ಲುದು ಅಥವಾ ಕುರುಚಾಗಬಲ್ಲುದು. ಗಂಟಲಿನಲ್ಲಿ ಇದರ ಉದ್ದ 2.5 ಸೆಂ.ಮೀ. ಮತ್ತು ಎದೆಯಲ್ಲಿ 7.5 ಸೆಂ.ಮೀ. ವ್ಯಾಸ ಗಂಡಸಿನಲ್ಲಿ 2 ಸೆಂ.ಮೀ. ಹೆಂಗಸಿನಲ್ಲಿ 1.5 ಸೆಂ.ಮೀ. ಇದರ ಮೇಲೆ ಕಿವಿಯಿಟ್ಟು ಅಥವಾ ಕೊಳವೆಯ ಮೂಲಕ ಆಲಿಸಿದರೆ ಉಸಿರಾಡುವುದನ್ನು ಕೇಳಬಹುದು. ಗಾಳಿಯಲ್ಲಿ ಬತ್ತದ ಪೈರು ಆಡುವಂತೆ ಸಣ್ಣ ಕೂದಲಂತಿರುವ ಭಾಗಗಳು ಇದರ ಲೋಳೆಪೊರೆಯ ಮೇಲೆ ಕಫದೊಡನೆ ಧೂಳನ್ನು ಮೇಲಕ್ಕೆ ತಳ್ಳುತ್ತವೆ.ಮಹಾಧಮನಿ (ಅಯೋರ್ಟ) ಎಂಬ ದೊಡ್ಡ ರಕ್ತನಾಳ ಸಾಮಾನ್ಯವಾಗಿ ಸಿಫಿಲಿನ್ ಎಂಬ ಮೇಹರೋಗದಿಂದ ಉಬ್ಬಿ ಗಾಳಿಕೊಳವೆಯನ್ನು ಅದುಮುವುದರಿಂದ ಉಸಿರಾಟ ಕಷ್ಟವಾಗುವುದು ಅನ್ನನಾಳವನ್ನು ಅದುಮುವುದರಿಂದ ನುಂಗುವುದು ಕಷ್ಟವಾಗುವುದು ಮತ್ತು ರೆಕೆರೆಂಟ್ ಲ್ಯಾರಿಂಜಿಯಲ್ ನರ್ವ್ ಎಂಬ ಧ್ವನಿನಾಳದ ನರವನ್ನು ಅದುಮುವುದರಿಂದ ಧ್ವನಿ ಸರಿಯಾಗಿ ಹುಟ್ಟದೆ ಗಂಟಲು ಕಟ್ಟಿದಂತಾಗುವುದು.

5 ಉಸಿರ್ನಾಳದ ಶಾಖೆಗಳು (ಬ್ರೋಂಖೈ)

ಎದೆಯ ಭಾಗದ ಉಸಿರ್ನಾಳ 7.5 ಸೆಂ.ಮೀ. ಇದೆ. ಇದು ಮೊದಲ ಬಲ ಮತ್ತು ಎಡಶಾಖೆಗಳಾಗಿ (ಪ್ರೈಮರಿ ಬ್ರೋಂಖೈ) ಒಡೆಯುತ್ತದೆ. ಬಲ ಶಾಖೆ ಬಲಪುಪ್ಫುಸದಲ್ಲೂ ಎಡಶಾಖೆ ಎಡಪುಪ್ಫುಸದಲ್ಲೂ ಎರಡೆರಡಾಗಿ 20-25 ಸಲ ಕವಲೊಡೆಯುತ್ತವೆ.

ಪುಪ್ಫುಸಗಳು (ಶ್ವಾಸಕೋಶಗಳು; ಲಂಗ್ಸ್)

ಬಲ ಮತ್ತು ಎಡ ಎಂದು ಎರಡು ಎದೆಯ ಇಕ್ಕೆಲಗಳಲ್ಲಿವೆ. ಉಸಿರೆಳೆದಾಗ ಗಾಳಿ ತುಂಬುವುದರಿಂದ ಇವು ಉಬ್ಬುತ್ತವೆ. ಉಸಿರ್ನಾಳದ ಪ್ರತಿ ಸಣ್ಣ ಕೊನೆಯ ಶಾಖೆಗೆ ಹಲವು ಸಣ್ಣ ಗಾಳಿ ಬುಡ್ಡೆಗಳು ಸೇರಿಕೊಂಡಿವೆ. ಬುಡ್ಡೆಗಳ ಮೇಲೆ ಸೂಕ್ಷ್ಮ ರಕ್ತನಾಳಗಳ ಬಲೆಯಿದೆ. ಬಲೆಯ ಕಣ್ಣುಗಳು ನಾಳಗಳಿಗಿಂತ ಚಿಕ್ಕವು. ಬಲೆಯನ್ನು ತೆಳುವಾಗಿ ಹರಡಿದ್ದೇ ಆದರೆ ಅದರ ವಿಸ್ತೀರ್ಣ ಸಾವಿರಾರು ಚದರಡಿಗಳಷ್ಟೆಂದು ಲೆಕ್ಕ ಹಾಕಲಾಗಿದೆ. ಅಂದರೆ ರಕ್ತ ಬಹಳ ತೆಳುವಾಗಿಯೂ ವಿಶಾಲವಾಗಿಯೂ ಪುಪ್ಫುಸಗಳಲ್ಲಿ ಹರಡಲ್ಪಟ್ಟು ಗಾಳಿಗೆ ಒಡ್ಡಲಾಗುತ್ತದೆ. ಗಾಳಿಗೂ ರಕ್ತಕ್ಕೂ ನಡುವೆ ಇರುವ ಪೊರೆ ಬಲು ತೆಳು. ಇದರ ಮೂಲಕ ಪುಪ್ಫುಸಕ್ಕೆ ಬರುವ ಮಲಿನ ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ (ಇಂಗಾಲಾಮ್ಲ, ಅಔ2) ಮತ್ತು ಉಷ್ಣ ಕ್ಷಣದಲ್ಲಿ ಗಾಳಿಯನ್ನು ಸೇರಿ ಗಾಳಿಯಲ್ಲಿ ಹೆಚ್ಚಿರುವ ಆಕ್ಸಿಜನ್ (ಆಮ್ಲಜನಕ, ಔ2) ರಕ್ತವನ್ನು ಸೇರುತ್ತದೆ. ರಕ್ತ ಹೃದಯದ (ಹಾರ್ಟ್) ಬಲಹೃತ್ಕುಕ್ಷಿಯಿಂದ (ರೈಟ್ ವೆಂಟ್ರಿಕಲ್) ಹೊರಟು ಪುಪ್ಫುಸಗಳಲ್ಲಿ ಕಲ್ಮಷಗಳನ್ನು ಕಳೆದುಕೊಂಡು ಆಕ್ಸಿಜನ್ನನ್ನು ಪಡೆದು ಎಡಹೃತ್ಕರ್ಣ ಮತ್ತು ಅಲ್ಲಿಂದ ಎಡಹೃತ್ಕಕ್ಷಿ ಸೇರಿ ಮಹಾಧಮನಿಯ (ಅಯೋರ್ಟ) ಶಾಖೆಗಳಲ್ಲಿ ದೇಹದ ಎಲ್ಲ ಭಾಗಗಳಿಗೂ ಹೋಗಿ ಬಲಹೃತ್ಕರ್ಣಕ್ಕೆ ಹಿಂತಿರುಗುತ್ತದೆ.ಬಲ ಪುಪ್ಫುಸದಲ್ಲಿ ಹತ್ತು ಮತ್ತು ಎಡ ಪುಪ್ಫುಸದಲ್ಲಿ ಒಂಬತ್ತು ಉಸಿರ್ನಾಳಗಳ ಗೊಂಚಲುಗಳಿವೆ (ಬ್ರೋಂಖೋ ಪಲ್ಮನರಿ ಸೆಗ್ಮೆಂಟ್ಸ್). ಹಲವು ವೇಳೆ ಕ್ರಿಮಿರೋಗ ಒಂದು ಗೊಂಚಲಿನಲ್ಲೇ ಇರುವುದರಿಂದ ಅಷ್ಟನ್ನು ಮಾತ್ರ ಶಸ್ತ್ರಕ್ರಿಯೆಯಿಂದ ತೆಗೆದುಹಾಕಲು ಸಾಧ್ಯ. ದೊಡ್ಡ ಗೊಂಚಲುಗಳ ಸ್ಥಾನಗಳು ಪುಪ್ಫುಸಗಳ ಮೇಲೆ ಕಾಣುವುದಿಲ್ಲ. ಆದರೆ ಅವನ್ನು ಗುರುತಿಸಬಹುದು.ಪುಪ್ಫುಸದ ಮೇಲ್ಭಾಗ ಸಣ್ಣಗಿದೆ. ಕೆಳಭಾಗ ಅಗಲವಾಗಿದೆ. ಇದು ಉಬ್ಬಿ ಕುಗ್ಗಲು ಇದರ ಸುತ್ತಲೂ 2 ಪದರಗಳ ಅಳ್ಳೆಪೊರೆಯ ಚೀಲವಿದೆ (ಪ್ಲೂರಲ್ ಸ್ಯಾಕ್). ಹೊರಪೊರೆ ಎದೆಯ ಭಿತ್ತಿಗೆ ಮತ್ತು ಮಧ್ಯ ತಡಿಕೆಗೆ ಅಂಟಿಕೊಂಡಿದೆ. ಒಳಪೊರೆ ಪುಪ್ಫುಸಕ್ಕೆ ಅಂಟಿಕೊಂಡಿದೆ. ಪೊರೆಗಳ ನಡುವೆ ತೆಳುವಾಗಿ ಹರಡಿದ ಅಂಟು ನೀರಿದೆ. ಇದರಿಂದ ಒಳಪೊರೆ ಹೊರಪೊರೆಯ ಮೇಲೆ ನುಣ್ಣಗೆ ಉಜ್ಜಲು ಅನುಕೂಲವಾಗುತ್ತದೆ.ಬಲಪುಪ್ಫುಸದಲ್ಲಿ ಮೂರು ಮತ್ತು ಎಡಪುಪ್ಫುಸದಲ್ಲಿ ಎರಡು ಹಾಲೆಗಳಿವೆ (ಲೋಬ್ಸ್). ಪುಪ್ಫುಸದ ಹೊರಪಕ್ಕ ಉಬ್ಬಿದೆ. ಒಳಪಕ್ಕ ಸುಮಾರಾಗಿ ಚಪ್ಪಟೆಯಾಗಿ ಹೃದಯ, ಅನ್ನನಾಳ, ಉಸಿರ್ನಾಳ ಮತ್ತು ದೊಡ್ಡ ರಕ್ತನಾಳಗಳಿರುವ ಎದೆಯ ಮಧ್ಯದ ತಡಿಕೆಯ (ಮೀಡಿಯಾಸ್ಟೈನಂ) ಮೇಲೆ ನುಣ್ಣಗೆ ಉಜ್ಜುತ್ತದೆ. ಒಳಪಕ್ಕದ ಮಧ್ಯೆಯಿರುವ ಪುಪ್ಫುಸನಾಭಿಯಲ್ಲಿ (ಹೈಲಂ ಆಫ್ ಲಂಗ್) ಉಸಿರ್ನಾಳದ ಬಲ ಅಥವಾ ಎಡಶಾಖೆ ಶುದ್ಧ ಮತ್ತು ಮಲಿನ ರಕ್ತನಾಳಗಳು ಹಾಯುತ್ತವೆ. ಪುಪ್ಫುಸದ ತಳ ವಪೆಯ ಮೇಲೆ ಆಡುತ್ತದೆ. ನಾಭಿಯ ಮಟ್ಟದಿಂದ ಕೆಳಕ್ಕೆ ಉಸಿರ್ನಾಳಗಳ ⅔ ಭಾಗದಷ್ಟಿದೆ.

ಪುಪ್ಫುಸಗಳಲ್ಲಿ ರೋಗವಿರುವ ಸ್ಥಳಗಳನ್ನು ಈಗಿನ ಮೂರು ವಿಧಾನಗಳಿಂದ ಕಂಡುಹಿಡಿಯಬಹುದು

(i) ಎದೆಯ ಎಕ್ಸ್‍ಕಿರಣಚಿತ್ರಗಳನ್ನು ಪರೀಕ್ಷಿಸುವುದು. (ii) ಬ್ರಾಂಕೋ ಸ್ಕೋಪ್ ಎಂಬ ಕೊಳವೆಯಂತಿರುವ ದುರ್ಬೀನಿನ ಮೂಲಕ ಉಸಿರ್ನಾಳಗಳ ಬಾಯಿಗಳನ್ನು ನೇರವಾಗಿ ಕಣ್ಣಿನಿಂದ ನೋಡುವುದು. (iii) ಬ್ರಾಂಕೋಗ್ರಾಮ್ ಉಸಿರ್ನಾಳಗಳಲ್ಲಿ ಎಕ್ಸ್‍ಕಿರಣಗಳು ಕೂರಲಾಗದ ವಿಶೇಷದ್ರವವನ್ನು (ಸಾಧಾರಣವಾಗಿ ಸ್ವಲ್ಪ ಅಯೋಡೀನನ್ನು ಕರಗಿಸಿದ ಗಸಗಸೆ ಎಣ್ಣೆ) ತುಂಬಿ ಎದೆಯ ಎಕ್ಸ್‍ಕಿರಣ ಚಿತ್ರಗಳನ್ನು ತೆಗೆದು ಪರೀಕ್ಷಿಸುವುದು.

ಪುಪ್ಫುಸಗಳ ಸೂಕ್ಷ್ಮರಚನೆ

ಉಸಿರ್ನಾಳಗಳ ಕೊನೆಯ ಶಾಖೆಗಳ (ಟರ್ಮಿನಲ್ ಬ್ರೊಂಖಿಯೋಲ್ಸ್. ಸುಮಾರು 20ನೆಯ ಸಲ ಕವಲೊಡೆದವು) ವ್ಯಾಸ 0.2-0.7 ಸೆಂ.ಮೀ. ಇವುಗಳ ಲೋಳ್ಪೊರೆಯ ಮೇಲೆ ಆಡುವ ಸಣ್ಣ ಕೂದಲು ಇರುವ ಜೀವಕಣಗಳ ಪೊರೆ ಇದೆ (ಸ್ಯೂಡೋಸ್ಟ್ರಾಟಿಫೈಡ್ ಸೈಲಿಯೇಟೆಡ್ ಕಾಲಮ್ನರ್ ಎಪಿಥೇಲಿಯಂ). ಇವುಗಳ ಭಿತ್ತಿಯಲ್ಲಿ ಮೃದ್ವಸ್ಥಿಯ ತುಣುಕುಗಳಿವೆ. ರಕ್ತಕ್ಕೂ ಗಾಳಿಗೂ ನಡುವೆ ದಪ್ಪ ಪೊರೆಯಿರುವುದರಿಂದ ಇವುಗಳಲ್ಲಿ ಅನಿಲಗಳ ವಿನಿಮಯವಾಗುವುದಿಲ್ಲ. ಇವು ಸಣ್ಣಗಾಗಲು ಭಿತ್ತಿಯಲ್ಲಿ ಸ್ನಾಯುಜಾಲವಿದೆ. ಸ್ನಾಯುಗಳು ಸೆಟೆದುಕೊಂಡರೆ ಗೂರಲು ಉಂಟಾಗುತ್ತದೆ. ಇವು 3-4 ಬಾರಿ ಎರಡೆರಡಾಗಿ ಕವಲೊಡೆದ ಮೇಲೆ ಉಸಿರ್ನಾಳಗಳಾಗುತ್ತವೆ. (ರೆಸ್ಪಿರೇಟರಿ ಬ್ರೋಂಖಿಯೋಲ್ಸ್). ಉಸಿರ್ನಾಳಗಳ ಭಿತ್ತಿಯಲ್ಲಿ ಮೃದ್ವಸ್ಥಿಯಿಲ್ಲ. ಇವುಗಳ ಪೊರೆ ಕೂದಲಿಲ್ಲದ ಘನಜೀವಕಣಗಳ ಪೊರೆ (ಕ್ಯೂಬಾಯಿಡಲ್ ಎಪಿಥೇಲಿಯಂ). ಪ್ರತಿ ಉಸಿರ್ನಾಳ ಕವಲೊಡೆಯುವುದರಿಂದ ಉಸಿರ್ನಾಳ ಗೊಂಚಲಾಗುತ್ತದೆ. ಪ್ರತಿ ಉಸಿರ್ನಾಳದಿಂದ 2-11 ಬುಡ್ಡೆಕೊಳವೆಗಳು (ಆಲ್ವಿಯೋಲಾರ್ ಡಕ್ಟ್ಸ್) ಹೊರಟುಕೊಳ್ಳುತ್ತವೆ. ಪ್ರತಿ ಬುಡ್ಡೆ ಕೊಳವೆಗೆ 5-6 ಬುಡ್ಡೆಚೀಲಗಳು (ಆಲ್ವಿಯೊಲಾರ್‍ಸೇಕ್ಸ್) ಅಂಟಿಕೊಂಡಿವೆ. ಪ್ರತಿ ಬುಡ್ಡೆಚೀಲದ ಮೇಲೆ ಹಲವು ಬಹುಫಲಕ (ಪಾಲಿ ಹೆಡ್ರಲ್) ಬುಡ್ಡೆಗಳಿವೆ. ಹೀಗೆ ಒಂದು ಪುಪ್ಫುಸದಲ್ಲಿ 30-40 ಕೋಟಿ ಬುಡ್ಡೆಗಳು (ಸಣ್ಣ ಗಾಳಿಗೂಡು) ಇವೆಯೆಂದು ಲೆಕ್ಕಹಾಕಲಾಗಿದೆ. ಪ್ರತಿ ಬುಡ್ಡೆಯ ವ್ಯಾಸ 1/5-1/4 ಮಿ. ಮೀ. ಇದು ಬಲು ತೆಳುವಾದ ಜೀವಕಣಗಳ ಪೊರೆಯಿಂದಾದುದು. ಇದರ ಮೇಲೆ ಸೂಕ್ಷ್ಮ ರಕ್ತನಾಳಗಳ ಒತ್ತಾರ ಬಲೆಯಿದೆ : ರಕ್ತಕ್ಕೂ ಗಾಳಿಗೂ ನಡುವೆ ಇರುವ ಪೊರೆಯ ದಪ್ಪ ಒಂದು ಮಿಲಿಮೀಟರಿನ 2500 ಭಾಗಗಳಲ್ಲಿ ಒಂದರಷ್ಟಿದೆ.ನೂರಾರು ಉಸಿರ್ನಾಳಗಳ ಗೊಂಚಲಿನ ಗಾತ್ರ 1-21/2 ಸೆಂ.ಮೀ. ಇದು ಪುಪ್ಫುಸದ ಮೇಲೆ ವಕ್ರ ಬಹುಭುಜದಂತೆ (ಇರ್ರೆಗ್ಯುಲರ್ ಪಾಲಿಗನ್) ಕಾಣುತ್ತದೆ. ಹೀಗೆ ಕೊನೆಯ ಶಾಖೆಗಳ ಗೊಂಚಲುಗಳು ಹೇರಳವಾಗಿದ್ದರೂ ಪುಪ್ಫುಸದ ಅತಿ ತೆಳುವಾದ ಚೂರು ಸೂಕ್ಷ್ಮದರ್ಶಿನಿಯಲ್ಲಿ ಗಾಳಿಗೂಡುಗಳಿಂದ ಸೂಕ್ಷ್ಮಬಲೆಯಂತೆ ಕಾಣುತ್ತದೆ. ಪುಪ್ಫುಸದ ಮೇಲೆ ಅದರ ನಾಭಿಯನ್ನು ಬಿಟ್ಟು ಮಿಕ್ಕೆಲ್ಲ ಭಾಗಗಳಲ್ಲೂ ತೆಳುವಾದ ಪಾರದರ್ಶಕ ಪೊರೆ ಇದೆ (ಪಲ್ಮನರಿ ಪ್ಲೂರ). ಇದರ ಕೆಳಗೆ ನಾರು ಮಾಂಸದ ಕವಚವಿದೆ. ನಾರು ಮಾಂಸದಲ್ಲಿ ಸ್ಥಿತಿಸ್ಥಾಪಕತೆ ಇರುವ ತಂತುಗಳೂ ಇವೆ. ಉಸಿರ್ನಾಳಗಳ ನಡುವೆಯೂ ಸ್ಥಿತಿಸ್ಥಾಪಕ ತಂತುಗಳ ನಡುವೆಯೂ ಈ ನಾರಿನ ಮಾಂಸವಿದೆ. ಸ್ಥಿತಿಸ್ಥಾಪಕ ತಂತುಗಳಿಂದ ಪುಪ್ಫುಸ ರಬ್ಬರ್ ಬಲೂನಿನಂತೆ ಯಾವಾಗಲೂ ಸಣ್ಣಗಾಗಲು ಪ್ರಯತ್ನಿಸುತ್ತಿರುತ್ತದೆ. ಪುಪ್ಫುಸದಲ್ಲಿ ಉಸಿರ್ನಾಳಗಳೊಡನೆ ರಕ್ತನಾಳಗಳೂ ಕವಲೊಡೆಯುತ್ತವೆ. ಹೃದಯದಿಂದ ಬರುವ ರಕ್ತನಾಳ ಕವಲೊಡೆದು ಗಾಳಿಯ ಗೂಡುಗಳ ಮೇಲೆ ಸೂಕ್ಷ್ಮ ರಕ್ತನಾಳಗಳ ಒತ್ತಾದ ಬಲೆಯಾಗುತ್ತದೆ. ಶುದ್ಧಗೊಂಡು ಆಕ್ಸಿಜನ್ನನ್ನು ಪಡೆದ ರಕ್ತ ಶುದ್ಧ ರಕ್ತನಾಳಗಳ ಮೂಲಕ ಎಡಹೃತ್ಕರ್ಣವನ್ನು ಸೇರುತ್ತದೆ. ದುಗ್ಧನಾಳಗಳ ಕವಲುಗಳೂ ಒಂದುಗೂಡುತ್ತ ಗಾಳಿ ಕೊಳವೆ ಕವಲೊಡೆಯುವ ಸ್ಥಳದಲ್ಲಿರುವ ಗ್ರಂಥಿಗಳನ್ನು (ಬ್ರೋಂಖೋ ಪಲ್ಮನರಿ ಲಿಂಫ್ ನೋಡ್ಸ್) ಸೇರುತ್ತವೆ.

ಪುಪ್ಫುಸದ ಬೆಳೆವಣಿಗೆ

ಗರ್ಭಾವಸ್ಥೆಯ 25ನೆಯ ದಿವಸದ ಹೊತ್ತಿಗೆ ಭ್ರೂಣ ಸುಮಾರು 4 ಮಿ.ಮೀ. ಉದ್ದವಿರುವಾಗ ಅದರ ಗಂಟಲಿನ ತಳದಲ್ಲಿ ಒಂದು ಸಣ್ಣ ಕಾಲುವೆಯಾಗಿ (ಧ್ವನಿನಾಳ ಉಸಿರ್ನಾಳದ ಕಾಲುವೆ ; ಲ್ಯಾರಿಂಗೊಟ್ರೆಕಿಯಲ್ ಗ್ರೂವ್) ಒಂದೆರಡು ದಿವಸಗಳಲ್ಲಿ ಇದರ ಪಕ್ಕಗಳಲ್ಲಿ ಎರಡು ಉಬ್ಬುಗಳಾಗಿ ಪುಪ್ಫುಸಗಳ ಮೂಲ ರೂಪಗಳು (ಲಂಗ್‍ಬಡ್ಸ್) ಕಾಣಿಸಿಕೊಳ್ಳುತ್ತವೆ. ಇದೇ ನಿರ್ಧಾರಕಾಲ. ಒಂದು ಕಡೆ ಉಬ್ಬು ಆಗದಿದ್ದಲ್ಲಿ ಆ ಕಡೆ ಪುಪ್ಫುಸ ಬೆಳೆಯುವುದಿಲ್ಲ. ತಾಯಿ ಇಲಿಗಳಿಗೆ ಜೀವಾತು ಎ ಇಲ್ಲದಿರುವ ಆಹಾರವನ್ನು ಕೊಡುವುದರಿಂದ ಅವುಗಳ ಮರಿಗಳಲ್ಲಿ ಹೀಗಾಗುವುದನ್ನು ಪ್ರಯೋಗಶಾಲೆಗಳಲ್ಲಿ ನೋಡಬಹುದು. 31ನೆಯ ದಿವಸದ ಹೊತ್ತಿಗೆ ಬಲ ಮತ್ತು ಎಡ ಪುಪ್ಪುಸಾಂಕುರಗಳಿಂದ ಶಾಖೆಗಳು ಬೆಳೆಯುತ್ತವೆ. ಈ ಕಾಲದಲ್ಲಿ ಧ್ವನಿನಾಳ ಗಂಟಲಿನಿಂದಲೂ ಉಸಿರ್ನಾಳ ಅನ್ನನಾಳದಿಂದಲೂ ಬೇರ್ಪಡುತ್ತವೆ. ಬಲಗಡೆ 10 ಶಾಖೆಗಳು ಎಡಗಡೆ 9 ಶಾಖೆಗಳು ಎರಡೆರಡಾಗಿ ಕವಲೊಡೆಯುತ್ತ 36ನೆಯ ದಿವಸದ ಹೊತ್ತಿಗೆ ಬಲದಲ್ಲಿ 10 ದೊಡ್ಡ ಗೊಂಚಲುಗಳು ಮತ್ತು ಎಡಗಡೆ 9 ಆಗಿ ಪುಪ್ಫುಸಗಳ ಮೇಲೆ ಸಣ್ಣ ಗುಳ್ಳೆಗಳಂತೆ ಕಾಣುತ್ತವೆ. 40ನೆಯ ದಿವಸಕ್ಕೆ ಇನ್ನೂ ಹೆಚ್ಚು ಕವಲುಗಳಾಗಿ ದ್ರಾಕ್ಷಿಯ ದೊಡ್ಡ ಗೊಂಚಲುಗಳಂತಾಗುತ್ತವೆ. ನಾಲ್ಕನೆಯ ತಿಂಗಳ ಕೊನೆಯವರೆಗೂ ಶಾಖೆಗಳಾಗುವುದು ಮುಂದುವರಿಯುತ್ತದೆ. ಇದುವರೆಗೂ ಗ್ರಂಥಿಕಾಲ (ಗ್ರ್ಯಾಂಡ್ಯುಲರ್ ಪೀರಿಯಡ್). ಏಕೆಂದರೆ ಶಾಖೆಗಳ ಜೀವಕಣಗಳು ದೊಡ್ಡದಾಗಿ ಒಳಗೆ ಸ್ಥಳ ಕಡಿಮೆಯಿರುತ್ತದೆ. ಕವಲೊಡೆಯುವುದು ಸುಮಾರು 17 ಸಲ ನಡೆಯುತ್ತದೆ. ಕೊನೆಯ ಎಂಟು ಸಲ ಆದವುಗಳಲ್ಲಿ ಫೆನ(ಕ್ಯೂಬಾಯಿಡಲ್) ಜೀವಕಣಗಳ ತೆಳುವಾದ ಪೊರೆಯಿರುತ್ತದೆ. ಮೊದಲು ಆದವುಗಳಲ್ಲಿ ಜೀವಕಣಗಳು ಉದ್ದವಾಗಿರುತ್ತವೆ (ಕಾಲಮ್ನರ್ ಎಪಿಥೇಲಿಯಂ). 4 ರಿಂದ 6ನೆಯ ತಿಂಗಳವರೆಗೆ ನಾಳಗಳ ಕಾಲ (ಕೆನಾಲಿಕ್ಯುಲರ್ ಪೀರಿಯಡ್). ಇದರಲ್ಲಿ ಕೊನೆಯ ಶಾಖೆಗಳಲ್ಲಿ ಸೂಕ್ಷ್ಮನಾಳಗಳು ಬೆಳೆಯುತ್ತವೆ. ಇವೇ ಜನನದ ಅನಂತರ ಗಾಳಿ ತುಂಬಿಕೊಳ್ಳುವ ಸಣ್ಣ ಬುಡ್ಡೆಗಳಾಗುವುವು. 6 ತಿಂಗಳಿಗೇ ಮಗು ಹುಟ್ಟಿದರೆ ಅದು ಉಸಿರಾಡಿ ಜೀವಿಸಲು ಈ ಸೂಕ್ಷ್ಮನಾಳಗಳಿಂದ ಸಾಧ್ಯ. 7ನೆಯ ತಿಂಗಳಿಂದ ಪ್ರಸವದ ಬುಡ್ಡೆಗಳ ಕಾಲ (ಆಲ್ವಿಯೋಲಾರ್ ಪೀರಿಯಡ್). ಇದರಲ್ಲಿ ಸೂಕ್ಷ್ಮರಕ್ತನಾಳಗಳು ಬುಡ್ಡೆಗಳ ಮೇಲೆ ಬೆಳೆಯುತ್ತವೆ. ಈ ಕಾಲದಲ್ಲಿ ಹುಟ್ಟಿದ ಮಗು ಬದುಕಬಲ್ಲುದು. ಜನನ ಇನ್ನೊಂದು ಪರ್ವಕಾಲ. ಮೊದಲನೆಯ ಉಸಿರಿನಿಂದ ಪುಪ್ಫುಸವೆಲ್ಲ ಪೂರ್ತಿ ಅರಳುವುದಿಲ್ಲ. ಇದಕ್ಕೆ ಕೆಲವು ದಿವಸಗಳು ಅಥವಾ ವಾರಗಳು ಬೇಕಾಗುವುವು. ಕೆಲವು ವೇಳೆ ಪುಪ್ಫುಸದ ಕೆಲವು ಭಾಗಗಳು ಅರಳದೇ ವಯಸ್ಸಾದ ಮೇಲೂ ಗಾಳಿ ತುಂಬಿಕೊಳ್ಳದಿರಬಹುದು. ಪೂರ್ಣಗರ್ಭಕ್ಕೆ ಮೊದಲೇ ಹುಟ್ಟುವ ಅಥವಾ ತಾಯಿಯ ಹೊಟ್ಟೆ ಕೊಯ್ದು ತೆಗೆದ ಮಕ್ಕಳ ಗಾಳಿಬುಡ್ಡೆಗಳಲ್ಲಿ ಕೆಲವೇಳೆ ಲೋಳೆ ಪೊರೆಯಿದ್ದು ಉಸಿರಾಡುವುದು ಸಾಧ್ಯವಾಗದಿರಬಹುದು. ಹೀಗಾಗುವುದು ಮಗು ಗರ್ಭಕೋಶದ ಒಳಗಿನ ನೀರನ್ನು ಕುಡಿಯುವುದರಿಂದಲೇ ಅಥವಾ ಯಾವುದೋ ಕಾರಣದಿಂದಲೇ ಎಂಬುದು ಇನ್ನೂ ತಿಳಿದಿಲ್ಲ. ಜನನದ ಅನಂತರ ಉಸಿರ್ನಾಳಗಳು ತೆಳುವಾಗಿ ಉದ್ದವಾಗುವುದರಿಂದಲೂ ಶಾಖೆಗಳು ಹೆಚ್ಚುವುದರಿಂದಲೂ ಗಾಳಿ ಬುಡ್ಡೆಗಳು ದೊಡ್ಡವಾಗುವುದರಿಂದಲೂ ಪುಪ್ಫುಸ ಬೇಗ ಬೆಳೆಯುತ್ತದೆ. ಜನನದ ಹೊತ್ತಿಗೆ 17 ಸಲ ಕವಲೊಡೆದ ಉಸಿರ್ನಾಳಗಳು ಪ್ರಾಯದ ಹೊತ್ತಿಗೆ ಒಟ್ಟು 25 ಸಲ ಕವಲೊಡೆದಿರುತ್ತವೆ. ಇದು ಹೇಗಾಗುತ್ತದೆಂಬುದನ್ನು ತಿಳಿಯಲು ಇನ್ನೂ ಸಾಧ್ಯವಾಗಿಲ್ಲ.

ಪುಪ್ಫುಸಗಳಲ್ಲಿ ಗಾಳಿಯನ್ನು ತುಂಬುವ ಉಸಿರಾಟದ ಅಂಗಗಳು

1. ಎದೆಯ ಎಲುಬಿನ ಗೂಡು (ಥೊರಾಸಿಕ್ ಕೇಜ್) : ಹಿಂದೆ 12 ಬೆನ್ನೆಲುಬುಗಳು (ಥೊರಾಸಿಕ್ ವರ್ಟಿಬ್ರೇ), ಮುಂದೆ ಎದೆಚಕ್ಕೆ (ಸ್ಟೆರ್ನಂ) ಮತ್ತು ಪಕ್ಕಗಳಲ್ಲಿ 12 ಜೊತೆ ಪಕ್ಕೆಲುಬುಗಳಿಂದ (ರಿಬ್ಸ್) ಎದೆಯ ಗೂಡು ಆಗಿದೆ. ಇದರಲ್ಲಿ ಮುಖ್ಯವಾಗಿ ಪುಪ್ಫುಸಗಳು ಹೃದಯ ಮತ್ತು ದೊಡ್ಡ ರಕ್ತನಾಳಗಳು ರಕ್ಷಣೆ ಹೊಂದಿವೆ. ಪಕ್ಕೆಲುಬುಗಳ ಹಿಂದಿನ ಕೊನೆಗಳು ಮತ್ತು ಬೆನ್ನೆಲುಬುಗಳ ನಡುವೆ ಕೀಲುಗಳಿದ್ದು ಪಕ್ಕೆಲುಬುಗಳು ಹಿಂದಿನಿಂದ ಕೆಳಕ್ಕೆ ಓರಿಯಾಗಿ ಮತ್ತು ಪಕ್ಕಕ್ಕೆ ಬಾಗಿರುವುದರಿಂದ ಅವನ್ನು ಸ್ನಾಯುಗಳು ಮೇಲಕ್ಕೆತ್ತಿದಾಗ ಅವುಗಳ ಮುಂದಿನ ಕೊನೆಗಳು ಎದೆ ಚಕ್ಕೆಯನ್ನು ಮೇಲಕ್ಕೆ ಮತ್ತು ಮುಂದಕ್ಕೆ ಒಯ್ಯುತ್ತವೆ. ಹೀಗಾದಾಗ ಗೂಡು ಹಿಗ್ಗಿ ಹಿಂದುಮುಂದಿನ ಮತ್ತು ಪಕ್ಕಪಕ್ಕದ ವ್ಯಾಸಗಳು ಹೆಚ್ಚುತ್ತವೆ. ಆಗ ಹೊರಗಿನ ಗಾಳಿ ಎಲ್ಲ ದಿಕ್ಕುಗಳಿಂದಲೂ ಒಳಗಿನ ಶೂನ್ಯವನ್ನು ಆಕ್ರಮಿಸಲು ಯತ್ನಿಸಿ ಇರುವ ಒಂದೇ ದಾರಿಯಾದ ಮೂಗು, ಗಂಟಲು, ಗಾಳಿಕೊಳವೆಗಳ ಮಾರ್ಗವಾಗಿ ಪುಪ್ಫುಸಗಳೊಳಕ್ಕೆ ನುಗ್ಗಿ ಅವನ್ನು ಹಿಗ್ಗಿಸುತ್ತದೆ. ಹೀಗೆ ಉಸಿರಾಟದಲ್ಲಿ ಪದೇ ಪದೇ ಆಗುವುದರಿಂದ ಪುಪ್ಫುಸಗಳಲ್ಲಿರುವ ಗಾಳಿ ಒಳಕ್ಕೆ ನುಗ್ಗಿದ ಹೊರಗಾಳಿಯೊಡನೆ ಬೆರೆತು ಸ್ವಲ್ಪ ಸ್ವಲ್ಪವಾಗಿ ಆಚೆಹೋಗಿ ಇಂಗಾಲದ ಡೈ ಆಕ್ಸೈಡ್, ಆವಿ ಮತ್ತು ಉಷ್ಣಗಳನ್ನು ಕಳೆದುಕೊಂಡು ಪುಪ್ಫುಸಗಳಲ್ಲಿ ಓಡುತ್ತಿರುವ ರಕ್ತ ಹೀರುತ್ತಿರುವುದರಿಂದ ಖರ್ಚಾಗುತ್ತಿರುವ ಆಕ್ಸಿಜನ್ನನ್ನು ತುಂಬಿಕೊಳ್ಳುತ್ತದೆ.

2. ವಪೆ (ಡಯಾಫ್ರಂ)

ಸಸ್ತನಿಗಳಲ್ಲಿ ಮಾತ್ರ ಇರುವ ಸ್ನಾಯು. ಇದು ಎದೆ ಹೊಟ್ಟೆಗಳ ನಡುವೆ ಇರುವ ತಡಿಕೆ. ಪುಪ್ಫುಸಗಳು ತಮ್ಮ ಸಹಜ ಸ್ಥಿತಿಸ್ಥಾಪಕ ಶಕ್ತಿಯಿಂದ ಸಣ್ಣಗಾಗಲು ಯಾವಾಗಲೂ ಯತ್ನಿಸುತ್ತಿರುವುದರಿಂದ ಹೊರಗಾಳಿಯ ಒತ್ತಡಕ್ಕಿಂತ ಎದೆಯೊಳಗೆ ಒತ್ತಡ ಕಡಿಮೆಯಾಗಿದೆ. ಇದರಿಂದ ಹೊರಗಾಳಿ ಉದರವನ್ನು ಒತ್ತಿ ಉದರಾಂಗಗಳನ್ನು ವಪೆಯೊಡನೆ ಎದೆಯ ಗೂಡಿನೊಳಕ್ಕೆ ಸದಾ ತಳ್ಳುತ್ತಿರುತ್ತದೆ. ವಪೆಯ ಸ್ನಾಯು ಕುಗ್ಗಿದಾಗ ಉದರಾಂಗಗಳು ಕೆಳಕ್ಕೆ ತಳ್ಳಲ್ಪಟ್ಟು ಹೊಟ್ಟೆಯುಬ್ಬಿ ಎದೆಯಗೂಡಿನ ಆಳ ಹೆಚ್ಚಿ ಹೊರಗಾಳಿ ಮೂಗಿನ ಮೂಲಕ ಪುಪ್ಫುಸಗಳನ್ನು ಉಬ್ಬಿಸುತ್ತದೆ. ಉಸಿರಾಟದಲ್ಲಿ ವಪೆಯ ಪಾತ್ರವೇ ಹೆಚ್ಚು. ಇದು ಸೆಟೆದಾಗ ಎದೆಯ ಆಳವನ್ನು ಮಾತ್ರ ಹೆಚ್ಚಿಸುವುದಲ್ಲದೆ ಕೆಳಗಿನ ಪಕ್ಕೆಲುಬುಗಳ ಮುಂದಿನ ಕೊನೆಗಳನ್ನು ಮೇಲಕ್ಕೆತ್ತುವುದರಿಂದ ಎದೆಯ ವ್ಯಾಸಗಳನ್ನೂ ಹೆಚ್ಚಿಸುವುದು.

3. ಪಕ್ಕೆಲುಬುಗಳ ನಡುವೆ ಇರುವ ಸ್ನಾಯುಗಳು (ಇಂಟರ್‍ಕೋಸ್ಟಲ್ ಮಸಲ್ಸ್) ಪಕ್ಕೆಲುಬುಗಳನ್ನು ಮೇಲಕ್ಕೆತ್ತಿ ಎದೆಯ ವ್ಯಾಸಗಳನ್ನು ಹೆಚ್ಚಿಸುತ್ತವೆ.

4. ಮಿದುಳಿನ ಭಾಗವಾದ ಮೆಡುಲ ಆಬ್ಲಾಂಗೇಟ ಎಂಬುದರಲ್ಲಿರುವ ಉಸಿರಾಟಿಕೆಯ ಕೇಂದ್ರ. ಶ್ವಾಸಸ್ನಾಯುಗಳ ಕಾರ್ಯಗಳು ವ್ಯಕ್ತಿಯ ಅರಿವಿಲ್ಲದೆ ತಾಳಹಾಕಿದಂತೆ ನಿರಂತರವಾಗಿ ಸಾಗುವಂತೆ ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಇದು ಉಸಿರಾಟದ ವೇಗವನ್ನೂ ಅವಶ್ಯಕವಾದಂತೆ ಹೆಚ್ಚು ಕಡಿಮೆ ಮಾಡುತ್ತದೆ. ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡಿನ ಅಂಶ ಹೆಚ್ಚಿದರೆ (ಉದಾಹರಣೆಗೆ, ದೇಹಶ್ರಮದಲ್ಲಿ) ಇದು ಉಸಿರಾಟದ ವೇಗವನ್ನೂ ಆಳವನ್ನೂ ಹೆಚ್ಚಿಸುತ್ತದೆ. ಆಕ್ಸಿಜನ್ ಅಂಶ ಕಡಿಮೆಯಾದರೆ (ಉದಾಹರಣೆಗೆ, ನಿದ್ರೆಯಲ್ಲಿ) ವೇಗವನ್ನು ತಗ್ಗಿಸುತ್ತದೆ.

5. ವಿಶೇಷ ಉಸಿರಾಟದ ಸ್ನಾಯುಗಳು (ಮಸಲ್ಸ್ ಆಫ್ ಎಕ್ಸ್‍ಟ್ರಾಆರ್ಡಿನರಿ ರೆಸ್ಪಿರೇಶನ್) ಮಾತಾಡುವುದು, ಕೆಮ್ಮುವುದು, ಸೀನುವುದು, ಮುಕ್ಕುವುದು, ವಾಂತಿ ಮಾಡುವುದು ಮುಂತಾದ ಕಾರ್ಯಗಳಲ್ಲಿ ಹೊಟ್ಟೆ ಎದೆಗಳಲ್ಲಿ ಒತ್ತಡ ಹೆಚ್ಚುವಂತೆಯೂ ಬಿರುಸಿನಿಂದ ಉಸಿರನ್ನು ತೆಗೆದುಕೊಳ್ಳುವಾಗ ಎದೆಹೊಟ್ಟೆಗಳ ಒತ್ತಡ ಬಹಳ ಕಡಿಮೆಯಾಗುವಂತೆಯೂ ಮಾಡುತ್ತವೆ. ಒತ್ತಡವನ್ನು ಹೆಚ್ಚಿಸುವುದರಲ್ಲಿ ಉದರ ಸ್ನಾಯುಗಳ ಪಾತ್ರ ಹೆಚ್ಚು. ಒತ್ತಡವನ್ನು ತಗ್ಗಿಸುವುದರಲ್ಲಿ ವಪೆಯ ಪಾತ್ರ ಹೆಚ್ಚು.

ಉಲ್ಲೇಖಗಳು

Tags:

ಉಸಿರಾಟದ ಮಂಡಲದ ಅಂಗರಚನೆ ಉಸಿರಿನ ಮಾರ್ಗಗಳುಉಸಿರಾಟದ ಮಂಡಲದ ಅಂಗರಚನೆ 2 ಗಂಟಲು (ಫ್ಯಾರಿಂಕ್ಸ್ಉಸಿರಾಟದ ಮಂಡಲದ ಅಂಗರಚನೆ 3 ಧ್ವನಿನಾಳ (ಲ್ಯಾರಿಂಕ್ಸ್)ಉಸಿರಾಟದ ಮಂಡಲದ ಅಂಗರಚನೆ 4 ಉಸಿರ್ನಾಳಉಸಿರಾಟದ ಮಂಡಲದ ಅಂಗರಚನೆ 5 ಉಸಿರ್ನಾಳದ ಶಾಖೆಗಳು (ಬ್ರೋಂಖೈ)ಉಸಿರಾಟದ ಮಂಡಲದ ಅಂಗರಚನೆ ಪುಪ್ಫುಸಗಳು (ಶ್ವಾಸಕೋಶಗಳು; ಲಂಗ್ಸ್)ಉಸಿರಾಟದ ಮಂಡಲದ ಅಂಗರಚನೆ ಪುಪ್ಫುಸಗಳಲ್ಲಿ ರೋಗವಿರುವ ಸ್ಥಳಗಳನ್ನು ಈಗಿನ ಮೂರು ವಿಧಾನಗಳಿಂದ ಕಂಡುಹಿಡಿಯಬಹುದುಉಸಿರಾಟದ ಮಂಡಲದ ಅಂಗರಚನೆ ಪುಪ್ಫುಸಗಳ ಸೂಕ್ಷ್ಮರಚನೆಉಸಿರಾಟದ ಮಂಡಲದ ಅಂಗರಚನೆ ಪುಪ್ಫುಸದ ಬೆಳೆವಣಿಗೆಉಸಿರಾಟದ ಮಂಡಲದ ಅಂಗರಚನೆ ಪುಪ್ಫುಸಗಳಲ್ಲಿ ಗಾಳಿಯನ್ನು ತುಂಬುವ ಉಸಿರಾಟದ ಅಂಗಗಳುಉಸಿರಾಟದ ಮಂಡಲದ ಅಂಗರಚನೆ 2. ವಪೆ (ಡಯಾಫ್ರಂ)ಉಸಿರಾಟದ ಮಂಡಲದ ಅಂಗರಚನೆ ಉಲ್ಲೇಖಗಳುಉಸಿರಾಟದ ಮಂಡಲದ ಅಂಗರಚನೆ

🔥 Trending searches on Wiki ಕನ್ನಡ:

ಕ್ರಿಯಾಪದಜಗ್ಗೇಶ್ಭಾರತೀಯ ಭಾಷೆಗಳುಉಳ್ಳಾಲಕರ್ನಾಟಕದ ಕಲೆ ಮತ್ತು ಸಂಸ್ಕೃತಿಕ್ರಿಕೆಟ್ವಿಜಯ ಕರ್ನಾಟಕಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶಿವರಾಜ್‍ಕುಮಾರ್ (ನಟ)ಅರ್ಜುನಎರಡನೇ ಮಹಾಯುದ್ಧವ್ಯಂಜನಓಂ ನಮಃ ಶಿವಾಯವಿಜಯನಗರ ಸಾಮ್ರಾಜ್ಯಕರ್ನಾಟಕದ ತಾಲೂಕುಗಳುಕಡಲೆಜವಾಹರ‌ಲಾಲ್ ನೆಹರುಸೌರಮಂಡಲಕನ್ನಡ ಅಕ್ಷರಮಾಲೆಬೃಂದಾವನ (ಕನ್ನಡ ಧಾರಾವಾಹಿ)ಕರ್ನಾಟಕದ ಪ್ರಸಿದ್ಧ ದೇವಾಲಯಗಳುಬಿ.ಟಿ.ಲಲಿತಾ ನಾಯಕ್ಏಕರೂಪ ನಾಗರಿಕ ನೀತಿಸಂಹಿತೆಲೀಲಾವತಿಕಂಪ್ಯೂಟರ್ಹಂಪೆಕೊಪ್ಪಳಕರ್ಣಸಿಂಧನೂರುಪ್ರಬಂಧ ರಚನೆಬರಗೂರು ರಾಮಚಂದ್ರಪ್ಪಶಬ್ದ ಮಾಲಿನ್ಯಲಕ್ಷ್ಮೀಶಕೇಂದ್ರ ಸಾಹಿತ್ಯ ಅಕಾಡೆಮಿಚಾಣಕ್ಯಎಂ. ಎಂ. ಕಲಬುರ್ಗಿಜಿ.ಎಸ್.ಶಿವರುದ್ರಪ್ಪದಿನೇಶ್ ಕಾರ್ತಿಕ್ಚಾಲುಕ್ಯಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಬಾಗಲಕೋಟೆಮೊದಲನೆಯ ಕೆಂಪೇಗೌಡಭಾರತೀಯ ಧರ್ಮಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಜೈಜಗದೀಶ್ನಿರುದ್ಯೋಗಸಂಚಿ ಹೊನ್ನಮ್ಮಸುಮಲತಾಮೆಕ್ಕೆ ಜೋಳಕೊಡಗಿನ ಗೌರಮ್ಮಕರ್ನಾಟಕ ಐತಿಹಾಸಿಕ ಸ್ಥಳಗಳುವ್ಯಕ್ತಿತ್ವತೀರ್ಥಕ್ಷೇತ್ರಚೋಳ ವಂಶಕೇಶಿರಾಜಎಸಳುಕಾಂತಾರ (ಚಲನಚಿತ್ರ)ಮ್ಯಾಕ್ಸ್ ವೆಬರ್ಡೊಳ್ಳು ಕುಣಿತನವೋದಯರನ್ನಜಾಗತೀಕರಣಫ.ಗು.ಹಳಕಟ್ಟಿಟಿ.ಪಿ.ಅಶೋಕಬಹಮನಿ ಸುಲ್ತಾನರುಪು. ತಿ. ನರಸಿಂಹಾಚಾರ್ಮಂಗಳ (ಗ್ರಹ)ಮಲ್ಟಿಮೀಡಿಯಾತಿರುಪತಿಕೃಷ್ಣದೇವರಾಯಎಸ್.ಎಲ್. ಭೈರಪ್ಪಊಳಿಗಮಾನ ಪದ್ಧತಿಇರಾನ್ಜಕಣಾಚಾರಿನರೇಂದ್ರ ಮೋದಿಸಂಸ್ಕಾರತೋಟಗಾರಿಕೆ🡆 More