ಕರ್ನಾಟಕದ ಇತಿಹಾಸ

ಕರ್ನಾಟಕದ ಇತಿಹಾಸದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು.

ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.

ಇತಿಹಾಸ-ಪೂರ್ವ

ಕರ್ನಾಟಕದ ಇತಿಹಾಸ 
ಬದಾಮಿಯ ಹಳೆಯ ಗುಹೆಯೋಳಗಿನ ವಿಗ್ರಹ

ಕರ್ನಾಟಕದ ಇತಿಹಾಸ ಪೂರ್ವದ ಅಥವಾ ಪೂರ್ವೇತಿಹಾಸದ ವಿಸ್ತಾರವಾದ ಅಧ್ಯಯನ ಪ್ರಾರಂಭ ಮಾಡಿದ ಹೆಗ್ಗಳಿಕೆ ರಾಬರ್ಟ್ ಬ್ರೂಸ್ ಫೂಟ್ ಅವರದು. ಇವರ ಈ ಕಾರ್ಯವನ್ನು ನಂತರ ಬೇರೆ ವಿದ್ವಾಂಸರು ಮುಂದುವರಿಸಿದರು. ಕರ್ನಾಟಕ (ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ) ಇತಿಹಾಸ ಪೂರ್ವ ಸಂಸ್ಕೃತಿಯನ್ನು 'ಕೈ-ಕೊಡಲಿ'(hand-axe) ಸಂಸ್ಕೃತಿಯೆಂದು ಕರೆಯಲಾಗುತ್ತದೆ. ಉತ್ತರ ಭಾರತದ ಸಂಸ್ಕೃತಿಯನ್ನು 'ಸೋಹನ್ ಸಂಸ್ಕೃತಿ'ಯೆನ್ನಲಾಗುತದೆ. ಪೂರ್ವಶಿಲಾಯುಗದ ಬೆಣಚಿಯ ಉರುಳುಗಲ್ಲು ಆಕಾರದ ಕೈ ಕೊಡಲಿ ಹಾಗು ತಡಕತ್ತಿ ಚಿಕ್ಕಮಗಳೂರುನ ಲಿಂಗದಹಳ್ಳಿ ಹಾಗು ಗುಲ್ಬರ್ಗಾದ ಹುಣಸಿಗಿ ಯಲ್ಲಿ ಕಂಡು ಬಂದಿದೆ ಹಾಗು ತುಮಕೂರಿನ ಕಿಬ್ಬನಹಳ್ಳಿಯಲ್ಲಿ ಮರದ ಕತ್ತಿ ಸಿಕ್ಕಿರುವುದು ಹಳೆ ಕಲ್ಲುಯುಗದ ಸಾಮಗ್ರಿಯ ಉದಾಹರಣೆಗಳು. ರಾಯಚೂರಿನ ಲಿಂಗಸೂಗೂರಿನಲ್ಲಿ ನುಣುಪಾದ ಕಲ್ಲು ಕೊಡಲಿ ಸಿಕ್ಕಿರುವ ವರದಿ ಕೂಡ ಬಂದಿದೆ. ಹೊಸ ಶಿಲಾಯುಗದ ಉದಾಹರಣೆ. ರಾಯಚೂರು ಜಿಲ್ಲೆಯ ಮಸ್ಕಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮುಂತಾದವು. ಮನುಷ್ಯ ಪ್ರಾಣಿಗಳನ್ನು (ಹಸು,ನಾಯಿ ಹಾಗು ಕುರಿ) ಪಳಗಿಸಲು ಆರಂಭಿಸಿರುವ ಹಾಗು ತಾಮ್ರದ ಹಾಗು ಕಂಚಿನ ಆಯುಧಗಳನ್ನು ಬಳಸಿರುವ ಬಳೆ, ಉಂಗುರ, ಮಣಿಗಳ ಸರ ಹಾಗು ಕಿವಿ ಓಲೆ ಧರಿಸಿರುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ ಮತ್ತು ಸಮಾಧಿಗಳು ಕೂಡ ಕಂಡು ಬಂದಿವೆ. ನವಶಿಲಾಯುಗದ ಕೊನೆಯಲ್ಲಿ, ಬೃಹತ್ ಶಿಲೆಯಯುಗದಲ್ಲಿ, ಕರ್ನಾಟಕದಲ್ಲಿ ಜನರು ಕಬ್ಬಿಣದ ಅಯುಧಗಳನ್ನು ದೊಡ್ಡ ಖಡ್ಗಗಳು, ಕುಡುಗೋಲು, ಕೊಡಲಿ, ಸುತ್ತಿಗೆ, ತೆನೆ, ಉಳಿ ಹಾಗು ಬಾಣಗಳನ್ನು ಉಪಯೋಗಿಸಲು ಆರಂಭಿಸಿದರು. ಹಳೆಯ ಮೈಸೂರು ಪ್ರದೇಶದ ಚಿತ್ರದುರ್ಗ ಜಿಲ್ಲೆಯ ತಾಳ್ಯ, ಜ್ಯಾಂಕಲ್, ಶಿವಮೊಗ್ಗ ಜಿಲ್ಲೆಯ ನ್ಯಾಮತಿ, ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿ ಮುಂತಾದೆಡೆಗಳಲ್ಲಿ ರಾಬರ್ಟ್‌ ಬ್ರೂಸ್ಫುಟ್ ಕೆಲವು ಪೂರ್ವ ಶಿಲಾಯುಧಗಳನ್ನು ಶೇಖರಿಸಿದ್ದರು. ಶೇಷಾದ್ರಿಯವರು ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯ ಬಳಿಯಲ್ಲಿ ಈ ಸಂಸ್ಕೃತಿಯ ನೆಲೆಯೊಂದನ್ನು ಗುರುತಿಸಿದ್ದಾರೆ. ಇದು ಬಾಣಸಂದ್ರ ಬೆಟ್ಟಗಳ ಶ್ರೇಣಿಯ ಬುಡದಲ್ಲಿದೆ. ಹಳೆಯ ಮೈಸೂರು ಪ್ರದೇಶದಲ್ಲಿ ಇದೇ ಅತಿಮುಖ್ಯವೂ ವಿಸ್ತಾರವೂ ಆದ ನೆಲೆ. ರೋಸ್ಟ್ರೋಕ್ಯಾರಿನೇಟ್ ಎಂಬ ಬಹಳ ಹಳೆಯ ರೀತಿಯ ಉಪಕರಣಗಳಿಂದ ಹಿಡಿದು ಅಬ್ಬೆವಿಲಿಯನ್ ಮತ್ತು ಮುಂದುವರಿದ ಅಷ್ಯೂಲಿಯನ್ ಹಂತದ ಕೈಗೊಡಲಿಗಳ ಹಾಗೂ ಕೊಕ್ಕಿನಂತೆ ಮೊನೆಯುಳ್ಳ ಕ್ಲಾಕ್ಟನ್ ರೀತಿಯ ಚಕ್ಕೆಕಲ್ಲಿನ ಉಪಕರಣಗಳವರೆಗೆ ಹಲವಾರು ಉಪಕರಣಗಳು ಇಲ್ಲಿ ದೊರಕಿವೆ. ಆ ಕಾಲದಲ್ಲಿ ಮರಗೆಲಸಕ್ಕೆ ಉಪಯೋಗಿಸುತ್ತಿದ್ದ ಡೊಂಕಾದ ಒರೆಯುವ ಆಯುಧಗಳು ಹೆಚ್ಚು ಸಂಖ್ಯೆಯಲ್ಲಿ ದೊರಕಿವೆ. ಆದ್ದರಿಂದ ಆಗ ಮರದ ಉಪಕರಣಗಳು ಹೆಚ್ಚಾಗಿ ಬಳಕೆಯಲ್ಲಿದ್ದುವೆಂದು ಭಾವಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಹಲಕುಂಡಿ, ಕುರಿಕುಪ್ಪ, ಗಾದಿಗನೂರು, ದಾರೋಜಿ ಮತ್ತು ಅಂಗೂರುಗಳಲ್ಲೂ ರಾಬರ್ಟ್ ಬ್ರೂಸ್ಫುಟ್ ಪೂರ್ವ ಶಿಲೋಪಕರಣಗಳನ್ನು ಸಂಗ್ರಹಿಸಿದ್ದ. ಜೋಷಿಯವರು ಉತ್ತರ ಕರ್ನಾಟಕದ ಮಲಪ್ರಭಾ ಘಟಪ್ರಭಾ ನದೀ ಕಣಿವೆಗಳಲ್ಲಿ ಈ ಸಂಸ್ಕೃತಿಯ ಹಲವಾರು ನೆಲೆಗಳನ್ನು ಬೆಳಕಿಗೆ ತಂದಿದ್ದಾರೆ. ಮಲಪ್ರಭಾ ದಂಡೆಯ ೨೧ ನೆಲೆಗಳಲ್ಲಿ ಮೆಣಸ್ಗಿ ಮತ್ತು ಖ್ಯಾಡ್ ಮುಖ್ಯವಾದವು. ಖ್ಯಾಡ್ ನೆಲೆಯಲ್ಲಿ ಅಷ್ಯೂಲಿಯನ್ ಸಂಸ್ಕೃತಿಯ ಅಂತ್ಯಕಾಲಕ್ಕೆ ಸೇರುವ, ಚಕ್ಕೆ ಕಲ್ಲಿನ ಉತ್ತಮ ಕೆಲಸಗಾರಿಕೆಯ ಕೈಗೊಡಲಿಗಳೂ ಕ್ಲೀವರ್ ರೀತಿಯ ಕೈಗೊಡಲಿಗಳೂ ಗಮನಾರ್ಹ. ಘಟಪ್ರಭಾ ನದೀ ದಂಡೆಯಲ್ಲಿ ನಿಕ್ಷಿಪ್ತವಾದ ಗುಂಡುಕಲ್ಲುಗಳ ಪದರದಲ್ಲಿ ಮರಳುಕಲ್ಲಿನಲ್ಲಿ ಮಾಡಿದ ಅಬ್ಜೆವಿಲಿಯನ್-ಅಷ್ಯೂಲಿಯನ್ ಹಂತದ ಉಪಕರಣಗಳು ಹೇರಳವಾಗಿ ದೊರಕಿವೆ. ಅಷ್ಯೂಲಿಯನ್ ಹಂತದ ಅಂತ್ಯಭಾಗಕ್ಕೆ ಸೇರುವ ಉಪಕರಣಗಳು ಸಹ ಅಲ್ಪಸಂಖ್ಯೆಯಲ್ಲಿ ಕಂಡುಬಂದಿವೆ. ಕರ್ನಾಟಕದಲ್ಲಿ ಆದಿಮಾನವ ಕಷ್ಟಜೀವಿಯಾಗಿದ್ದು, ಬೇಟೆ ಮತ್ತು ಮೀನುಗಾರಿಕೆಯಿಂದ ತನ್ನ ಮತ್ತು ತನ್ನವರ ಜೀವನ ನಿರ್ವಹಣೆ ಮಾಡುತ್ತಿದ್ದನೆಂಬುದು ಮೇಲಿನ ವಿವರಗಳಿಂದ ತಿಳಿದು ಬರುತ್ತದೆ. ಪಾಂಡಿತ್ಯಪೂರ್ಣ ಸಿದ್ಧಾಂತ ಊಹೆ ಪ್ರಕಾರ ೩೦೦೦ ಕ್ರಿ.ಪೂ ದಲ್ಲೇ ಹರಪ್ಪದ ಸಿಂಧೂ ಕಣಿವೆ ನಗರಗಳು ಹಾಗೂ ಲೋಥಾಲ್‍ನ ನಡುವೆ ಸಂಪರ್ಕ ಇರುವುದಾಗಿ ಹಾಗು ಇದಕ್ಕೆ ಪುರಾವೆ ಹರಪ್ಪದ ತಾಣಗಳಲ್ಲಿ ಸಿಕ್ಕಿರುವ ಬಂಗಾರ ಕರ್ನಾಟಕದ ಗಣಿಗಳಿಂದ ತರಿಸಲ್ಪಟ್ಟಿತು ಎನ್ನಲಾಗುತ್ತದೆ.

ಆಧುನಿಕ ಕರ್ನಾಟಕದಲ್ಲಿ ನವಶಿಲಾಯುಗ ವಸತಿಯಿದ್ದ ಹಾಗು ಕ್ರಿ.ಪೂ ೨ನೆಯ ಶತಮಾನದ ಪ್ರಾಚೀನ ಕಾಲದ ಕಲ್ಲಿನ ಅಥವಾ ಲೋಹದ ಆಯುಧಗಳನ್ನೂ ಮೊದಲಿಗೆ ೧೮೭೨ರಲ್ಲಿ ಶೋಧಿಸಲಾಯಿತು. ವರದಿಗಳ ಪ್ರಕಾರ ಕಲ್ಲು ಕೊಡಲಿಗಳು ರಾಯಚೂರು ಜಿಲ್ಲೆಯ ಲಿಂಗಸೂಗೂರನಲ್ಲಿ ಸಿಕ್ಕಿವೆ; ಆದರೆ ಈ ವರದಿಯನ್ನು ಖಚಿತ ಪಡಿಸಲು ಇನ್ನೂ ಆಗಿಲ್ಲ. ಬೃಹತ್ ಶಿಲೆಯ ರಚನೆಗಳು ಹಾಗು ಸಮಾದಿಗಳನ್ನೂ ೧೮೬೨ರಲ್ಲಿ ಕೊಡಗು ಹಾಗು ಮೂರೆಯ್ ಬೆಟ್ಟದಲ್ಲಿ ಶೋಧಿಸಲಾಗಿದೆ, ಹಾಗೆಯೇನವಶಿಲಾಯುಗದ ತಾಣಗಳು ಉತ್ತರ ಕರ್ನಾಟಕದಲ್ಲಿ ಸಿಕ್ಕಿವೆ.

ಮಧ್ಯ ಶಿಲಾಯುಗ

ಆಹಾರ ಸಂಗ್ರಹಣೆಯ ಪೂರ್ವಶಿಲಾಯುಗ ಮತ್ತು ಆಹಾರೋತ್ಪಾದನೆಯ ನವಶಿಲಾಯುಗಗಳ ಮಧ್ಯೆ ಯುರೋಪ್ ಮತ್ತಿತರೆಡೆಗಳಲ್ಲಿ ಮಧ್ಯಶಿಲಾಯುಗಕ್ಕೆ ಸೇರಿದ ಸಂಸ್ಕೃತಿಯ ಅವಶೇಷಗಳು ಕಂಡುಬಂದಿವೆ. ಭಾರತದಲ್ಲಿ ಆ ಹಂತದ ಸಂಸ್ಕೃತಿ ಇರಲಿಲ್ಲವೆಂದು ಇದುವರೆಗೂ ಭಾವಿಸಲಾಗಿದ್ದರೂ ಇತ್ತೀಚೆಗೆ ಹಲವೆಡೆಗಳಲ್ಲಿ ಆ ಕಾಲಕ್ಕೆ ನಿಯೋಜಿಸಬಹುದಾದ ಅವಶೇಷಗಳು ದೊರಕಿರುವುದು ಗಮನಾರ್ಹ. ಬಿಜಾಪುರ ಜಿಲ್ಲೆಯ ಸಾಲ್ವಡಗಿಯಲ್ಲಿ ದೊರಕಿರುವ ಸೂಕ್ಷ್ಮ ಶಿಲಾಯುಧಗಳಲ್ಲಿ ಒರೆಯುವ ಮತ್ತು ಕೊರೆಯುವ ಉಪಕರಣಗಳೂ ಚಕ್ಕೆ ಕಲ್ಲಿನ ಚಾಕುಗಳೂ ಅಲ್ಲದೆ ಹರಪ್ಪ ಸಂಸ್ಕೃತಿಯ ವಿಶಿಷ್ಟ ಅಂಶವಾದ ಉದ್ದನೆಯ ಚಕ್ಕೆ ಕಲ್ಲಿನ ಪಟ್ಟಿಕೆಗಳೂ ಇರುವುದರಿಂದ ಇಲ್ಲಿಯ ಸಂಸ್ಕೃತಿಯೊಂದಿಗೆ ತಾಮ್ರಶಿಲಾಯುಗ ಸಂಸ್ಕೃತಿಯ ಸಂಪರ್ಕವಿದ್ದಿರಬಹುದೆಂದೂ ಊಹಿಸಿದ್ದಾರೆ.

ನವಶಿಲಾಯುಗ

ನವಶಿಲಾಯುಗ ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರತದ ಇತರ ಪ್ರದೇಶಗಳಿಗಿಂತ ಹೇರಳವಾಗಿ ದೊರಕಿರುವುದರಿಂದ ನವಶಿಲಾಯುಗ ಕಾಲದಲ್ಲಿ ಕರ್ನಾಟಕ ಮಾನವನ ಪ್ರಮುಖ ಕಾರ್ಯಕ್ಷೇತ್ರವಾಗಿತ್ತೆಂದು ಹೇಳಬಹುದಾಗಿದೆ. ಈ ಸಂಸ್ಕೃತಿಗೆ ಸೇರಿದ ಕೊಡಲಿ, ಬಾಚಿ ಮತ್ತು ಇತರ ಆಯುಧಗಳನ್ನು ಮಾಡಲು ಪ್ರಮುಖವಾಗಿ ಉಪಯೋಗಿಸುತ್ತಿದ್ದ ಟ್ರಾಪ್ ಶಿಲೆಗಳು ಹೆಚ್ಚಾಗಿ ಸಿಕ್ಕುತ್ತಿದ್ದುದೂ ಪಶುಸಂಗೋಪನೆ, ಬೇಟೆ ಮತ್ತು ಪ್ರಾರಂಭದೆಶೆಯ ವ್ಯವಸಾಯ ವೃತ್ತಿಗಳಿಗೆ ಬೇಕಾದ ಸೌಲಭ್ಯಗಳು ಇಲ್ಲಿದ್ದುದರಿಂದಲೂ ನವಶಿಲಾಯುಗದ ಮಾನವ ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸಿದ್ದಿರಬಹುದು. ಉಪಕರಣಗಳ ಅಂಚುಗಳನ್ನು ಉಜ್ಜಿ ನಯಗೊಳಿಸಲು ಉಪಯೋಗಿಸಿದ ಹಳ್ಳಗಳು ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಹಲವೆಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಳ್ಳಾರಿಯ ಉತ್ತರ ಬೆಟ್ಟದಲ್ಲಿ, ಕಂಡುಬಂದಿವೆ. ಈ ಜನರು ಕೇವಲ ಅಂಚುಗಳನ್ನು ಅಥವಾ ಇಡೀ ಉಪಕರಣವನ್ನು ಬಂಡೆಗಳ ಮೇಲೆ ಉಜ್ಜಿ ನಯಗೊಳಿಸಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತಿದ್ದುದರಿಂದ ಈ ಸಂಸ್ಕೃತಿಗೆ ನಯಗೊಳಿಸಿದ ಶಿಲೋಪಕರಣ ಸಂಸ್ಕೃತಿಯೆಂದೂ ಹೆಸರಿದೆ. ಈ ಸಂಸ್ಕೃತಿಯಲ್ಲಿ ಕೊಡಲಿ, ಬಾಚಿ, ಉಳಿ, ಸುತ್ತಿಗೆಕಲ್ಲುಗಳು, ಮಧ್ಯದಲ್ಲಿ ರಂಧ್ರವಿದ್ದು ಅಗೆಯುವ ಮರದ ಕೋಲುಗಳಿಗೆ ಭಾರವನ್ನೊದಗಿಸುತ್ತಿದ್ದ ಚಕ್ರಾಕಾರದ ಕಲ್ಲುಗಳು ಮತ್ತು ಚಕ್ಕೆಕಲ್ಲುಗಳನ್ನು ಮುಖ್ಯ ಉಪಕರಣಗಳಾಗಿ ಉಪಯೋಗಿಸಲಾಗುತ್ತಿತ್ತು. ಪಶುಪಾಲನೆ, ಬೇಟೆ, ಮೀನು ಹಿಡಿಯುವಿಕೆ, ಮೂಲಭೂತ ಅಥವಾ ಹಿಂದುಳಿದ ವ್ಯವಸಾಯ- ಇವು ಈ ಜನರ ಮುಖ್ಯ ವೃತ್ತಿಗಳಾಗಿದ್ದುವು. ತಮ್ಮ ಆಹಾರಧಾನ್ಯಗಳನ್ನು ಹಿಟ್ಟು ಮಾಡಲು ಅವರು ಬೀಸುವ-ಅರೆಯುವ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಮೊತ್ತಮೊದಲಿಗೆ ಈ ಜನರು ಮಣ್ಣಿನ ಪಾತ್ರೆಗಳನ್ನು ಉಪಯೋಗಿಸಲಾರಂಭಿಸಿ, ನಯಗೊಳಿಸಿದ ಬೂದುಬಣ್ಣದ ಮಡಕೆ-ಕುಡಿಕೆಗಳನ್ನು ಕೈಯಿಂದಲೇ ರೂಪಿಸಿ ಅನಂತರ ಸುಡುತ್ತಿದ್ದರು. ಕ್ರಮೇಣ ಈ ಸಂಸ್ಕೃತಿಯ ಅಂತ್ಯಕಾಲದ ಹೊತ್ತಿಗೆ ನಿಧಾನವಾಗಿ ಸುತ್ತುವ ಮಣಿ ಅಥವಾ ಚಕ್ರಗಳನ್ನು ಮಣ್ಣಿನ ಪಾತ್ರೆಗಳನ್ನು ಮಾಡಲು ಉಪಯೋಗಿಸಿರಬಹುದಾದರೂ ಈಗ ಉಪಯೋಗದಲ್ಲಿರುವ ಕುಂಬಾರಚಕ್ರ ಬಳಕೆಗೆ ಬಂದಿದ್ದಂತೆ ಕಾಣುವುದಿಲ್ಲ. ಮೇಲೆ ಹೇಳಿದ ಬೂದು ಬಣ್ಣದ ಮಡಕೆಗಳಲ್ಲದೆ ಕ್ರಮೇಣ ಕಂದು, ಕೆಂಪು ಮತ್ತು ಕಪ್ಪು ಬಣ್ಣದ ಮಡಕೆಗಳು ಉಪಯೋಗಕ್ಕೆ ಬಂದವು. ಈ ಸಂಸ್ಕೃತಿಯ ಕೊನೆಗಾಲದಲ್ಲಿ ದೊರಕುವ ಮಡಕೆಗಳ ಆಕಾರ ಮತ್ತು ಅಲಂಕಾರ ವಿಧಾನಗಳಿಂದ ಮಧ್ಯ ಭಾರತದ ತಾಮ್ರ-ಶಿಲಾಯುಗ ಸಂಸ್ಕೃತಿಯೊಂದಿಗೆ ಸಂಪರ್ಕ ಬೆಳೆದುಬಂದಿತ್ತೆಂದೂ ತಿಳಿದುಬಂದಿದೆ. ಈ ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ದೊರಕಿವೆ. ಉತ್ಖನನದ್ವಾರಾ ಶೋಧಿಸಲಾಗಿರುವ ನೆಲೆಗಳಲ್ಲಿ ಬ್ರಹ್ಮಗಿರಿ, ಸಂಗನಕಲ್ಲು, ಪಿಕ್ಲಿಹಾಳ್, ಮಸ್ಕಿ, ತೆಕ್ಕಲಕೋಟೆ ಮತ್ತು ತಿರುಮಕೂಡಲ ನರಸೀಪುರ ಮುಖ್ಯವಾದವು. ತಾಮ್ರ-ಶಿಲಾಯುಗ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ಇರಲಿಲ್ಲವೆಂಬ ವಾದ ನಿಜವಲ್ಲ. ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಅನಂತರದಲ್ಲಿ ಸಂಶೋಧಿಸಲಾದ ತೆಕ್ಕಲಕೋಟೆ, ಹಳ್ಳೂರು ಮುಂತಾದೆಡೆಗಳಲ್ಲಿ ನವಶಿಲಾಯುಗದ ಉತ್ತರಾರ್ಧದಲ್ಲಿ ತಾಮ್ರ-ಶಿಲಾಯುಗ ಸಂಸ್ಕೃತಿಯ ಪ್ರಭಾವ ತಾಮ್ರ ಮತ್ತು ಕಂಚು, ಕಪ್ಪು ಬಣ್ಣದಿಂದ ಚಿತ್ರಿತವಾದ ಕೆಂಪು ಮಡಕೆಗಳು ಮತ್ತು ಕಲ್ಲುಪಟ್ಟಿಕೆಗಳ ಬಳಕೆಯಿಂದ ಕಂಡುಬರುತ್ತದೆ. ಕರ್ನಾಟಕದಲ್ಲಿ ಈ ಸಂಸ್ಕೃತಿ ಮಧ್ಯ ಮತ್ತು ಪಶ್ಚಿಮ ಭಾರತ ಅಥವಾ ಸಿಂಧೂನದಿ ಪ್ರದೇಶಗಳಲ್ಲಿದ್ದಷ್ಟು ಪ್ರಬಲವಾಗಿಲ್ಲದಿದ್ದರೂ, ವಾಣಿಜ್ಯ ಸಂಪರ್ಕಗಳ ಪ್ರಭಾವದಿಂದ ಲೋಹದ ಬಳಕೆ, ಕುಂಬಾರಚಕ್ರದ ಉಪಯೋಗ, ಮುಂದುವರಿದ ವ್ಯವಸಾಯ ಪದ್ಧತಿ ಮತ್ತು ಗ್ರಾಮೀಣ ಜೀವನ ರೀತಿಗಳನ್ನು ಕ್ರಮೇಣ ಅಳವಡಿಸಿಕೊಂಡುದಕ್ಕೆ ಸಾಕಷ್ಟು ಪುರಾವೆಗಳು ದೊರಕಿವೆ. ಕೇಂದ್ರಸರ್ಕಾರದ ಪ್ರಾಕ್ತನಶಾಸ್ತ್ರ ಇಲಾಖೆಯ ಆಶ್ರಯದಲ್ಲಿ ನಡೆದ ಸಂಶೋಧನೆಗಳಿಂದ ಬಿಜಾಪುರ, ಧಾರವಾಡ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಈ ಸಂಸ್ಕೃತಿಯ ಹದಿಮೂರಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ. ತಾಮ್ರ-ಶಿಲಾಯುಗದ ಅನಂತರ ಕರ್ನಾಟಕದಲ್ಲಿ ಕಬ್ಬಿಣಯುಗದ ಸಂಸ್ಕೃತಿಗೆ ಸೇರುವ ಬೃಹತ್ ಶಿಲಾಸಮಾಧಿ ಸಂಸ್ಕೃತಿ ಪ್ರಾಮುಖ್ಯ ಪಡೆಯಿತು. ಮೆಡಿಟರೇನಿಯನ್ ಸಮುದ್ರ ಪ್ರದೇಶದಲ್ಲಿ ಪ್ರ.ಶ.ಪು. ಸು. ೪ನೆಯ ಸಹಸ್ರಮಾನದಲ್ಲಿ ಹುಟ್ಟಿ, ಕ್ರಮೇಣ ಯುರೋಪ್, ಆಫ್ರಿಕ ಮತ್ತು ಪಶ್ಚಿಮ ಏಷ್ಯಗಳಲ್ಲಿ ಹರಡಿ, ವಿವಿಧ ಸಂಸ್ಕೃತಿಗಳು ಮತ್ತು ಪ್ರಾದೇಶಿಕ ಹಿನ್ನೆಲೆಗಳಿಂದ ಪ್ರಭಾವಿತವಾಗಿ ದಕ್ಷಿಣ ಭಾರತವನ್ನು ತಲಪುವ ವೇಳೆಗೆ ಕಬ್ಬಿಣಯುಗೀನ ಸಂಸ್ಕೃತಿಯ ಹಂತವನ್ನು ಮುಟ್ಟದ್ದೇ ಅಲ್ಲದೆ, ಅನೇಕ ಆಂತರಿಕ ಬದಲಾವಣೆಗಳಿಗೂ ಒಳಗಾಗಿ ದಕ್ಷಿಣ ಭಾರತದ ಆದ್ಯ ಐತಿಹಾಸಿಕ ಸಂಸ್ಕೃತಿಯಾಗಿ ರೂಪುಗೊಂಡಿತು. ಕರ್ನಾಟಕದಲ್ಲಿ ನವಶಿಲಾ-ತಾಮ್ರಶಿಲಾಯುಗಗಳ ಅನಂತರ ತ್ವರಿತಗತಿಯಲ್ಲಿ ಪ್ರಭಾವಶಾಲಿಯಾಗಿ ಹಬ್ಬಿದ ಈ ಸಂಸ್ಕೃತಿಯ ಮುಖ್ಯ ಲಕ್ಷಣಗಳೆಂದರೆ, ಸತ್ತವರ ಅವಶೇಷಗಳನ್ನು ದೊಡ್ಡ ಕಲ್ಲುಗಳಿಂದ ರಚಿತವಾದ ಸಮಾಧಿಗಳಲ್ಲಿ ಹೂಳುವುದು, ಉಪಕರಣಗಳಿಗೆ ಕಬ್ಬಿಣವನ್ನು ಉಪಯೋಗಿಸುವುದು, ಮೇಲ್ಭಾಗದಲ್ಲಿ ಕೆಂಪು ಅಥವಾ ಕಂದಾಗಿಯೂ ತಳ ಮತ್ತು ಒಳಭಾಗಗಳಲ್ಲಿ ಕಪ್ಪಾಗಿಯೂ ಇರುವ (ಕಪ್ಪು ಮತ್ತು ಕೆಂಪು) ಮಡಕೆಗಳನ್ನು ಉಪಯೋಗಿಸುವುದು, ನೀರಾವರಿಯ ಸಹಾಯದಿಂದ ಪ್ರಗತಿಪರ ವ್ಯವಸಾಯ, ನಗರೀಕರಣಕ್ಕೆ ಪೂರ್ವಭಾವಿಯಾದ ವಿಶಾಲ ಗ್ರಾಮೀಣ ಜೀವನ ಮುಂತಾದವು. ಈ ಸಂಸ್ಕೃತಿಯ ಪ್ರಾರಂಭದಿಂದ ದಕ್ಷಿಣ ಭಾರತದಲ್ಲಿ ಚಾರಿತ್ರಿಕ ಯುಗದ ಆರಂಭವಾಯಿತೆಂದು ಹೇಳಬಹುದು. ಈ ಸಂಸ್ಕೃತಿಯ ನಿರ್ಮಾತೃಗಳಾದ, ದ್ರಾವಿಡ ಭಾಷೆಯನ್ನು ಬಳಸುತ್ತಿದ್ದ, ಜನ ಈ ಸಮಯದಲ್ಲಿ ದಕ್ಷಿಣ ಭಾರತಕ್ಕೆ ಬಂದು ನೆಲಸಿದುದಾಗಿ ತಿಳಿದುಬರುತ್ತದೆ. ಚೇರ, ಪಾಂಡ್ಯ, ಚೋಳರಾಜ್ಯಗಳು ದಕ್ಷಿಣದಲ್ಲೂ ಸಾತವಾಹನ ಚಕ್ರಾಧಿಪತ್ಯ ದಖನ್ ಪ್ರಸ್ಥಭೂಮಿಪ್ರದೇಶದಲ್ಲೂ ಶೀಘ್ರದಲ್ಲಿಯೇ ಸ್ಥಾಪಿತವಾಗಿ ಚಾರಿತ್ರಿಕ ಯುಗ ನೆಲೆಗೊಂಡಿತು. ಈ ಸಂಸ್ಕೃತಿಯ ಅವಶೇಷಗಳು ಅನೇಕ ನೆಲೆಗಳಲ್ಲಿ ಕಂಡುಬಂದಿದ್ದರೂ ವೈಜ್ಞಾನಿಕ ಸಂಶೋಧನೆಗಳು ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಜಡಿಗೇನಹಳ್ಳಿ ಮುಂತಾದೆಡೆಗಳಲ್ಲಿ ಮಾತ್ರ ನಡೆದಿವೆ.

ಬೃಹತ್ ಶಿಲಾಯುಗ

ಭಾರತೀಯ ದಖ್ಫನ್ ಪ್ರಸ್ಥ ಭೂಮಿಯಲ್ಲಿ ಸು.೩೦೦೦ ಕ್ಕಿಂತಲೂ ಹೆಚ್ಚಿನ ಬೃಹತ್ ಶಿಲಾಯುಗ ಸಮಾಧಿ ನೆಲೆಗಳು ಮತ್ತು ವಸತಿ ನೆಲೆಗಳು ವರದಿಯಾಗಿವೆ. ಕ್ರಿ.ಶ. ೧೮೧೭ರಲ್ಲಿ ಕರ್ನ್ಲಲ್ ಕಾಲಿನ್ ಮೆಕೆಂಜಿ ಅವರಿಂದ ಬೃಹತ್ ಶಿಲಾಯುಗ ನೆಲೆಗಳ ಆಕಸ್ಮಿಕ ಶೊಧನೆಯಿಂದ ಶುರುವಾದ್ ಅಧ್ಯಯನವು ಇಂದಿನವರೆಗೂ ನಡೆಯುತ್ತಿವೆ. ಕೊಚ್ಛಿನ್, ಚಿತ್ತೂರು, ಹೈದರಬಾದ್ ಹಾಗೂ ಅಮಾರವತಿ ಭಾಗಗಳಲ್ಲಿ ಶೋಧಿತವಾದ ಈ ನೆಲೆಗಳು ಮೆಕೆಂಜಿಯ ಶೋಧನೆಯಿಂದ ಭಾರತದಲ್ಲಿ ಮೊದಲು ಕಂಡು ಬಂದ ನೆಲೆಗಳೆಂದು ಕೆ.ಪದ್ದಯ್ಯ ಅವರು ವರದಿ ಮಾಡಿರುತ್ತಾರೆ . ಮೆಕೆಂಜಿಯ ನಂತರ ಬ್ಯಾಬಿಂಗ್ಟನ್ ರು ೧೮೨೩ರಲ್ಲಿ ನೀಲಗಿರಿಯ ಮಲಬಾರ್ ಪ್ರದೇಶದಲ್ಲಿ ಬೃಹತ್ ಶಿಲಾಯುಗ ನೆಲೆಗಳನ್ನು ಪತ್ತೆಹಚ್ಚಿದರು. ಈ ಮೆಗಾಲಿಥಿಕ್ ಸಮಾಧಿಗಳ ಶೋಧನೆಯ ಪ್ರಾರಂಭವನ್ನು ದಕ್ಷಿಣ ಭಾರತದ ಮೆಗಾಲಿತ್‌ಗಳ ಸಂಶೋಧನೆಯ ಪ್ರಾರಂಭವೆಂದು ಪರಿಗಣಿಸಲಾಗಿದೆ.[೧]

ಕರ್ನಾಟಕದ ಹುತ್ರಿದುರ್ಗ ಕಬ್ಬಿಣದ ಯುಗದ ಅವಶೇಷಗಳು

  • ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಬ್ಬಿಣ ಯುಗಕ್ಕೆ ಸೇರಿರಬಹುದಾದ ಸಮಾಧಿಯ ಅವಶೇಷಗಳು ಕುಣಿಗಲ್ ತಾಲೂಕಿನ ಹುತ್ರಿದುರ್ಗ ಕೋಟೆ ಸಮೀಪ ಪತ್ತೆಯಾಗಿವೆ.(ಜುಲೈ ೧೨, ೨೦೧೪)
  • ಕೆಂಪೇಗೌಡರ ಕಾಲದ ಇತಿಹಾಸ ಪ್ರಸಿದ್ಧ ಕೋಟೆಗಳಲ್ಲಿ ಹುತ್ರಿದುರ್ಗ ಕೋಟೆಯೂ ಒಂದು.
  • ಸೀಗೆಹಳ್ಳಿಯ ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಹಂ.ಗು. ರಾಜೇಶ್ ಮತ್ತು ಡಾ.ಪುಟ್ಟರಾಜು ಅವರು ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯ ಸಮಯದಲ್ಲಿ ಇವುಗಳು ಪತ್ತೆಯಾಗಿವೆ.
  • ಹುತ್ರಿದುರ್ಗ ಕೋಟೆಯ ಪೂರ್ವ ದಿಕ್ಕಿನ ಮಾಗಡಿ ದ್ವಾರ ಮುಚ್ಚಾಲಮ್ಮನ ಗುಡಿ ಮುಂಭಾಗದಿಂದ ಅಲ್ಲಿಯ ಬಿಸಿಲು-ಬಸವಣ್ಣ ಮಂಟಪದವರೆಗಿನ ಸರ್ವೆ ನಂ.59ರಲ್ಲಿ ಈ ಅವಶೇಷಗಳು ಕಂಡುಬಂದಿವೆ.
  • ಕಬ್ಬಿಣಯುಗದ ಈ ಸಮಾಧಿಗಳು ವೃತ್ತಾಕಾರದಲ್ಲಿ ಜೋಡಿಸಿದ ಕಪ್ಪು ಮತ್ತು ಗ್ರಾನೈಟ್ ಶಿಲೆಗಳಿಂದ ಕೂಡಿದ್ದು, ಶಿಲಾವೃತ್ತಗಳು ೧೨ ಅಡಿ ವ್ಯಾಸ ಹೊಂದಿವೆ. ಈ ಸಮಾಧಿಗಳಲ್ಲಿ ಪ್ರಾಚೀನ ಕಾಲದ ಮಾನವರ ದೇಹ/ಅಸ್ಥಿ ಪಂಜರಗಳನ್ನು ಇರಿಸಿ ಅವುಗಳ ಜತೆಗೆ ಮುಂದಿನ ಜನ್ಮಕ್ಕೆ ಉಪಯೋಗವಾಗಲಿ ಎಂಬ ನಂಬಿಕೆಯಿಂದ ಅವರು ಬಳಸಿದ ಪಾತ್ರೆ, ಮಡಕೆ, ಕುಡಿಕೆ ಮತ್ತು ಆಯುಧಗಳನ್ನು ಸಮಾಧಿಯಲ್ಲಿ ಇರಿಸುತ್ತಿದ್ದರು. ಈ ಸಮಾಧಿಗಳು ಅತ್ಯಂತ ಪ್ರಾಚೀನವಾಗಿದ್ದು, ಹುತ್ರಿದುರ್ಗದ ಇತಿಹಾಸವನ್ನು ಸುಮಾರು 3 ಸಾವಿರ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ.
  • ಮಾಗಡಿ ಮತ್ತು ಹುತ್ರಿದುರ್ಗದ ಪರಿಸರದಲ್ಲಿ 'ಕಲ್ಲುಸೇವೆ' ಎಂಬ ವಿಶಿಷ್ಟ ಶವಸಂಸ್ಕಾರ ಪದ್ಧತಿಯೊಂದಿತ್ತು. ಶವಗಳನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡದೆ ಬೆಟ್ಟದ ಬಂಡೆಗಳ ಮೇಲೆ ಇರಿಸಿ ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿಸಲಾಗುತ್ತದೆ. ಕೆಲ ದಿನಗಳ ನಂತರ ಗ್ರಾಮದವರು ಅಳಿದುಳಿದ ಮೂಳೆಗಳನ್ನು ಸಂಗ್ರಹಿಸಿ ಶವ ಸಂಸ್ಕಾರದ ಪದ್ಧತಿಯಂತೆ ಹೂಳುತ್ತಿದ್ದರು. ಹುತ್ರಿದುರ್ಗದಲ್ಲಿ ಹಿಂದೆ ಇಂತಹ ಪದ್ಧತಿ ಆಚರಣೆಯಲ್ಲಿತ್ತು ಎಂಬುದು ಸ್ಥಳೀಯರಿಂದ ತಿಳಿಯುತ್ತದೆ. ಈ ರೀತಿಯ ಕಲ್ಲುಸೇವೆ ನಡೆಯುತ್ತಿದ್ದ ಬೆಟ್ಟದ ಪಕ್ಕದಲ್ಲಿಯೇ ಕಬ್ಬಿಣ ಯುಗದ ಸಮಾಧಿಗಳು ದೊರೆತಿರುವುದು ವಿಶೇಷ.
  • ಕಬ್ಬಿಣ ಯುಗದ ಶವ ಸಂಸ್ಕಾರ ಪದ್ಧತಿಗೂ, ಕಲ್ಲುಸೇವೆ ಶವ ಸಂಸ್ಕಾರ ಪದ್ಧತಿಗೂ ಸಾಮ್ಯತೆಗಳಿರುವುದರಿಂದ ಕಲ್ಲುಸೇವೆಯೂ ಸುಮಾರು ೩ ಸಾವಿರ ವರ್ಷಗಳ ಹಿಂದಿನ ಪದ್ಧತಿಯ ಮುಂದುವರಿಕೆಯಾಗಿರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್ತು (ಐಸಿಎಚ್‌ಆರ್) ಉಪನಿರ್ದೇಶಕಿ ಡಾ.ಎಸ್.ಕೆ. ಅರುಣಿ ಅವರು "ಹುತ್ರಿದುರ್ಗ ಐತಿಹಾಸಿಕ ಸ್ಥಳ. ನಾಡಪ್ರಭು ಕೆಂಪೇಗೌಡರ ಕಾಲದ ೧೫೩೪ರ ಶಾಸನವಿರುವ ಕೋಟೆ ಇಲ್ಲಿದೆ. ಅಲ್ಲದೆ, ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಬ್ರಿಟಿಷರ ವಿರುದ್ಧ ಹೋರಾಡಲು ಬಳಸಿಕೊಂಡಿದ್ದ. ಈ ಬಗೆಯ ಅನೇಕ ಐತಿಹಾಸಿಕ ದಾಖಲೆಗಳಿರುವ ಈ ಕೋಟೆ ಪಕ್ಕದಲ್ಲಿ ಯುವ ಸಂಶೋಧಕರು ಕಬ್ಬಿಣಯುಗದ ಅವಶೇಷಗಳನ್ನು ಪತ್ತೆ ಮಾಡಿರುವುದು ಬಹಳ ಮಹತ್ವದ್ದಾಗಿದೆ," ಎಂದು ಹೇಳಿದ್ದಾರೆ 40,. ([೨] ವರದಿ ವಿಜಯ ಕರ್ನಾಟಕ ಜುಲೈ ೧೨, ೨೦೧೪, )

ಪುರಾಣೇತಿಹಾಸ ಕಾಲದಲ್ಲಿ ಕರ್ನಾಟಕ

ದಕ್ಷಿಣಭಾರತಕ್ಕೆ ಆರ್ಯರ ಪ್ರವೇಶವಾದ ಕಾಲದಿಂದ ಈ ಪ್ರದೇಶದ ಇತಿಹಾಸ ಆರಂಭವಾಗುತ್ತದೆ. ಅಗಸ್ತರು ದಕ್ಷಿಣದಲ್ಲಿ ಆರ್ಯ ಸಂಸ್ಕೃತಿ ಹರಡಿದರೆಂಬ ಸಂಗತಿ ಕಾವ್ಯ ಪುರಾಣಗಳಲ್ಲಿ ವಿಸ್ತೃತವಾಗಿದೆ. ಮಹಾಭಾರತದ ರೀತ್ಯಾ ಅಗಸ್ತ್ಯರು ಕರ್ನಾಟಕದ ಉತ್ತರಭಾಗದಲ್ಲಿದ್ದ ವಾತಾಪಿ ಇಲ್ವಲರೆಂಬ ಆರ್ಯಕುಲದ್ವೇಷಿಗಳಾದ ದೈತ್ಯಸೋದರರಲ್ಲಿ ಕಿರಿಯನಾದ ಇಲ್ವಲನನ್ನು ಭಂಜಿಸಿ ವಾತಾಪಿಯ ಗರ್ವಭಂಗ ಮಾಡಿದರು. ಚಾಳುಕ್ಯ ರಾಜಧಾನಿಯಾದ ವಾತಾಪಿ (ಈಗಿನ ಬಾದಾಮಿ) ಈ ದೈತ್ಯಸೋದರರ ಸ್ಥಳವಾಗಿತ್ತೆಂದು ಇತಿಹಾಸಕಾರರ ನಂಬಿಕೆ. ಜಮದಗ್ನಿ ಪುತ್ರ ಪರಶುರಾಮರು ಕ್ಷತ್ರಿಯ ನಿಗ್ರಹದ ಅನಂತರ ಇಡೀ ಭೂಮಿಯನ್ನು ಬ್ರಾಹ್ಮಣರಿಗೆ ದಾನಮಾಡಿ ಅನಂತರ ತನ್ನ ವಾಸಕ್ಕಾಗಿ ವರುಣದೇವನ ಪ್ರಸಾದದ ಫಲವಾಗಿ ಸಮುದ್ರದವರೆಗಿನ ಪಶ್ಚಿಮ ಕರಾವಳಿ ಕ್ಷೇತ್ರವನ್ನು ಪಡೆದರಂತೆ.. ಇದು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಐತಿಹ್ಯ. ೧೨ನೆಯ ಶತಮಾನದ ಈ ಪ್ರದೇಶದ ಶಾಸನಗಳಲ್ಲೂ ಇದು ಉಕ್ತವಾಗಿದೆ.

ರಾಮಾಯಣದ ದಂಡಕಾರಣ್ಯ ಪ್ರದೇಶವೇ ಅನಂತರದ ಕರ್ನಾಟಕದ ಭೂಭಾಗ. ವಾನರಪ್ರಭುಗಳಾದ ವಾಲಿ- ಸುಗ್ರೀವರ ಕಿಷ್ಕಿಂಧಾರಾಜ್ಯ ತುಂಗಭದ್ರಾ ತೀರದ ಈಗಿನ ಹಂಪೆಯ ಬಳಿಯಿರುವ ಪಂಪಾಸರೋವರದ ಪ್ರದೇಶವೆಂದು ಹೇಳಲಾಗಿದೆ. ಅಭಿನವ ಪಂಪನೆಂದು ಹೆಸರಾದ ನಾಗಚಂದ್ರನಿಂದ (ಸು.೧೧೦೦) ರಚಿತವಾದ ರಾಮಚಂದ್ರಚರಿತ ಪುರಾಣದಲ್ಲಿ ಕಿಷ್ಕಿಂಧೆಯ ರಾಜನೂ ಪ್ರಜೆಗಳೂ ವಾನರರಲ್ಲವೆಂದೂ ಅವರ ಧ್ವಜದ ಲಾಂಛನ ವಾನರಸಂಕೇತ ಹೊಂದಿದ್ದುದರಿಂದ ಅವರನ್ನು ಹಾಗೆಂದು ವರ್ಣಿಸಲಾಗಿದೆಯೆಂದೂ ಹೇಳಿದೆ.

ಇತಿಹಾಸ ದೃಷ್ಟಿಯಿಂದ ಕರ್ಣಾಟಕದ ಪ್ರಸ್ತಾಪ ಮೊಟ್ಟಮೊದಲಿಗೆ ಮಹಾಭಾರತದಲ್ಲಿ ಬಂದಿದೆ. ಮಹಿಷಕ, ವನವಾಸಕ ಮತ್ತು ಕುಂತಳಗಳು ಉಕ್ತವಾಗಿವೆ. ಮಹಿಷಕವೆಂದರೆ ಅನಂತರ ಕಾಲದ ಮಹಿಷಮಂಡಲ (ಈಗಿನ ಮೈಸೂರು); ಈಗಿನ ಬನವಾಸಿ ಪ್ರಾಂತ್ಯವೇ ವನವಾಸಕವೆಂದೂ ಅನಂತರ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿದ್ದ ರಾಜ್ಯವೇ ಕುಂತಳವೆಂದೂ ಗುರುತಿಸಬಹುದಾಗಿದೆ. ರಾಮಾಯಣ ಮಹಾಭಾರತಗಳ ಘಟನಾವಳಿಗಳ ಕಾಲ ಚರ್ಚಾಸ್ಪದವಾಗಿದ್ದರೂ ಈಗಿನ ರೂಪದಲ್ಲಿ ಅವನ್ನು ಪ್ರ.ಶ.ಪು. ೨೦ ರಿಂದ ೧೦ನೆಯ ಶತಮಾನಗಳ ಕಾಲಕ್ಕೆ ವಿದ್ವಾಂಸರು ನಿರ್ದೇಶಿಸಿರುತ್ತಾರೆ. ಆದುದರಿಂದ ಕ್ರಿಸ್ತಶಕೆಗೂ ಮುನ್ನವೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿತ್ತು.

ಮೌರ್ಯರು

ಪ್ರ.ಶ.ಪು. ನಾಲ್ಕನೆಯ ಶತಮಾನದಲ್ಲಿ ಮಗಧ ರಾಜ್ಯದ ನಂದ ಸಾರ್ವಭೌಮರ ಕಾಲದಲ್ಲಿ ಅವರ ಪ್ರಭಾವ ಕರ್ನಾಟಕದವರೆಗೂ ಹಬ್ಬಿತ್ತೆಂದು ತಿಳಿಸುವ ಐತಿಹಾಸಿಕ ಮಾಹಿತಿಗಳು ದೊರಕುತ್ತವೆ. ಮೌರ್ಯ ವಂಶದ ಸ್ಥಾಪಕನಾದ ಚಂದ್ರಗುಪ್ತ (ಪ್ರ.ಶ.ಪು.ಸು. ೩೨೪-೩೦೦) ಕರ್ನಾಟಕದ ಶ್ರವಣಬೆಳಗೊಳದಲ್ಲಿ ತನ್ನ ಗುರುವಿನೊಡನೆ ಬಂದು ನೆಲೆಸಿದುದಾಗಿ ಐತಿಹ್ಯಗಳೂ ಮಧ್ಯಕಾಲೀನ ಶಾಸನಗಳೂ ತಿಳಿಸುತ್ತವೆ. ಆತನ ಮೊಮ್ಮಗನಾದ ಅಶೋಕನ ಶಿಲಾಶಾಸನಗಳು ಈ ರಾಜ್ಯದ ಮಸ್ಕಿ, ಕೊಪ್ಪಳ, ಬ್ರಹ್ಮಗಿರಿ, ಸಿದ್ಧಾಪುರ ಮತ್ತು ಜಟಿಂಗ ರಾಮೇಶ್ವರಗಳಲ್ಲಿ ದೊರಕಿರುವುದಲ್ಲದೆ ಮಸ್ಕಿಯ ಬಳಿಯ ಸುವರ್ಣಗಿರಿ ಮತ್ತು ಬ್ರಹ್ಮಗಿರಿಯ ಬಳಿಯ ಇಸಿಲ ನಗರಗಳು ಆತನ ಪ್ರಾದೇಶಿಕ ಮುಖ್ಯ ನಗರಗಳಾಗಿದ್ದುವೆಂಬ ಅಂಶವನ್ನು ತಿಳಿಸುತ್ತವೆ. ಇದರಿಂದ ಕರ್ನಾಟಕದ ಬಹುಭಾಗ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದಿತೆಂದು ತಿಳಿದುಬರುತ್ತದೆ. ಅಶೋಕನ ರಾಜ್ಯ ಕಂಚಿಯವರೆಗೂ ಹಬ್ಬಿದ್ದು ಇಡೀ ಕರ್ನಾಟಕ ಅದರಲ್ಲಿ ಸೇರಿತ್ತೆಂಬುದು ನೀಲಕಂಠಶಾಸ್ತ್ರಿಯವರ ಅಭಿಪ್ರಾಯ.

ಶಾತವಾಹನರು

ಕರ್ನಾಟಕದ ಇತಿಹಾಸ 
ಸಾತವಾಹನ ಸಾಮ್ರಾಜ್ಯ

ಅನಂತರ ದಕ್ಷಿಣಾಪಥದ ಸಾರ್ವಭೌಮರಾಗಿದ್ದ ಶಾತವಾಹನರ ಆಡಳಿತಕ್ಕೆ ಕರ್ನಾಟಕದ ಬಹುಭಾಗ ಸೇರಿದ್ದಂತೆ ಕಾಣುತ್ತದೆ. ಶಾತವಾಹನರ ಮೂಲಪುರುಷನಾದ ಸೀಮುಕ (ಪ್ರ.ಶ.ಪು. ಸು.೬೦) ಕರ್ನಾಟಕದವನೆಂದೂ ಈತ ಬಳ್ಳಾರಿ ಜಿಲ್ಲೆಗೆ ಸೇರಿದವನೆಂದೂ ಹಲವಿದ್ವಾಂಸರು ಪ್ರತಿಪಾದಿಸಿದ್ದಾರೆ. ಈ ಪ್ರದೇಶದ ಮೇಲೆ ಅವರ ಆಳ್ವಿಕೆಯಿತ್ತೆಂಬುದಾಗಿ ಅನಂತರದ ಅನೇಕ ಶಾಸನಗಳು ಸೂಚಿಸುತ್ತವೆ. ಕರ್ನಾಟಕದ ಉತ್ತರಭಾಗ ಅವರ ಆಳ್ವಿಕೆಯಲ್ಲಿದ್ದರೆ ದಕ್ಷಿಣದಲ್ಲಿ ಪುನ್ನಾಟ ಮೊದಲಾದ ಹಲವು ಸಣ್ಣರಾಜ್ಯಗಳಿದ್ದುವು. ಈ ಕಾಲದಲ್ಲಿ ಸಾತವಾಹನರು ಮೆಡಿಟರೇನಿಯನ್ ಸಮುದ್ರದ ಪ್ರದೇಶಗಳೊಂದಿಗೂ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಪಡೆದಿದ್ದುದರಿಂದ ಕರ್ನಾಟಕದ ಜನರೂ ಅವುಗಳ ಪ್ರಯೋಜನ ಪಡೆಯುವಂತಾಯಿತು. ಇವರು ಪೂರ್ವದಿಕ್ಕಿನಲ್ಲಿ ಬಂಗಾಲ ಕೊಲ್ಲಿಯಿಂದಾಚೆಯಿದ್ದ ಪ್ರದೇಶಗಳೊಂದಿಗೂ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರೆಂಬುದಕ್ಕೆ ಅನೇಕ ಆಧಾರಗಳಿವೆ. ತತ್ಸಂಬಂಧವಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿದೆ. ಸಾತವಾಹನರ ವಂಶಕ್ಕೆ ಸೇರಿದ ಹಲವು ರಾಜರು ಕರ್ನಾಟಕದೊಡನೆ ಹೆಚ್ಚಿನ ಸಂಬಂಧ ಪಡೆದಿದ್ದರು. ಪುರಾಣಗಳಲ್ಲಿ ಈ ವಂಶದ ರಾಜನೊಬ್ಬನನ್ನು ಕುಂತಳ ಸಾತಕರ್ಣಿಯೆಂದು ಕರೆಯಲಾಗಿದೆ. ಸಾತವಾಹನ ವಂಶದ ೧೭ನೆಯ ದೊರೆಯೆಂದು ಹೇಳಲಾದ ಹಾಲ ಕುಂತಳದ ದೊರೆಯೆಂದು ವರ್ಣಿತನಾಗಿದ್ದಾನೆ. ಗಾಥಾ ಸಪ್ತಶತಿಯ ಕರ್ತೃ ಈತನೇ ಎಂದು ಹೇಳಲಾಗಿದೆ. ಸುಮಾರು ಈ ಕಾಲದಲ್ಲಿದ್ದ ಕೆಲವು ಪಾಶ್ಚಾತ್ಯ ಲೇಖಕರು ಕರ್ನಾಟಕದ ಕೆಲವು ಪ್ರದೇಶಗಳ ಪ್ರಸ್ತಾಪ ಮಾಡಿದ್ದಾರೆ. ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ ಎಂಬ ಗ್ರಂಥದಲ್ಲಿ (೧ನೆಯ ಶತಮಾನ) ಮತ್ತು ಪ್ಲಿನಿಯ (೭೭-೭೮), ಬರೆಹಗಳಲ್ಲಿ ಈ ಪ್ರಸ್ತಾಪಗಳಿವೆ. ಬಾದಾಮಿ (ಬಡಿಯಮಇಯೊಇ), ಮುದ್ಗಲ್ (ಮದೌಗೌಲ್ಯ), ಬನವಾಸಿ (ಬನಔಅಸೆಇ), ಹೂವಿನ ಹಿಪ್ಪರಗಿ (ಹಿಪ್ಪೊಕೌರ)ಗಳನ್ನೂ ಪುನ್ನಾಟದ (ಪೌನ್ನಾಟ) ವೈಡೂರ್ಯಗಳನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆಯನ್ನೂ (ಮಲಿಪ್ಪಲ) ಟಾಲೆಮಿ (ಸು. ೧೫೦) ಹೆಸರಿಸುತ್ತಾನೆ. ಸು. ೨೯೦ರಲ್ಲಿ ರಚಿತವಾದ ಗ್ರೀಕ್ ಪ್ರಹಸನವೊಂದರಲ್ಲಿ ಬರುವ ಕೆಲವು ಶಬ್ದಗಳು ಕನ್ನಡದವೆಂದು ವಿದ್ವಾಂಸರು ವಾದಿಸಿದ್ದಾರೆ. ಈ ಎಲ್ಲ ಆಧಾರಗಳಿಂದ ಆ ವೇಳೆಗಾಗಲೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿದ್ದುದಲ್ಲದೆ ತನ್ನದೇ ಆದ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದು ಪರಕೀಯರೊಂದಿಗೂ ಸಂಪರ್ಕ ಬೆಳೆಸಿಕೊಂಡಿತ್ತೆಂದು ಹೇಳಬಹುದು.

ಸಾತವಾಹನರ ಅನಂತರ ಚುಟುವಂಶದ ರಾಜರು ಬನವಾಸಿ ಪ್ರಾಂತ್ಯದಲ್ಲಿ ಪ್ರಬಲರಾದರು. ಸ್ವಲ್ಪಕಾಲಾನಂತರ ಈ ಪ್ರದೇಶದಲ್ಲಿ ಕದಂಬರೂ ದಕ್ಷಿಣ ಕರ್ನಾಟಕದಲ್ಲಿ ಗಂಗರೂ ಇತರ ಭಾಗಗಳಲ್ಲಿ ಬಾಣರೂ ಆಳುಪರೂ ಸೇಂದ್ರಕರೂ ನಳರೂ ಸಣ್ಣ ಸಣ್ಣ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದರೆಂದು ತಿಳಿದುಬರುತ್ತದೆ. ಚುಟುವಂಶದ ರಾಜರ ವಿಷಯ ಹೆಚ್ಚು ತಿಳಿಯದಿದ್ದರೂ ಬನವಾಸಿಯ ನಾಗಶಾಸನದಲ್ಲಿ ಉಕ್ತನಾಗಿರುವ ಹಾರೀತಿಪುತ್ರ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ಇವರಲ್ಲೊಬ್ಬ. ಈಗಿನ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ನಾಗಶಿಲೆಯ ಶಾಸನದಲ್ಲಿ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ, ಆತನ ಪುತ್ರಿ ಶಿವಸ್ಕಂಧನಾಗಶ್ರೀ- ಇವರ ಹೆಸರುಗಳು ಉಕ್ತವಾಗಿವೆ. ವಿಣ್ಹುಕಡ ಸಾತಕರ್ಣಿ ಬನವಾಸಿಯ ದೊರೆಯೆಂದು ಮಳವಳ್ಳಿ ಶಾಸನ ತಿಳಿಸುತ್ತದೆ. ಬಹುಶಃ ಮಳವಳ್ಳಿ ಶಾಸನದ ವಿಣ್ಹುಕಡ ಸಾತಕರ್ಣಿ ಅದೇ ಹೆಸರಿನ ೨ನೆಯ ವ್ಯಕ್ತಿಯಾಗಿದ್ದು ೧ನೆಯ ಸಾತಕರ್ಣಿಯ ಮೊಮ್ಮಗನೂ ಶಿವಸ್ಕಂಧ ನಾಗಶ್ರೀಯ ಮಗನೂ ಆಗಿದ್ದಿರಬಹುದು. ಶಿವಸ್ಕಂಧ ನಾಗಶ್ರೀ ಮತ್ತು ಸಮಕಾಲೀನ ಪಲ್ಲವದೊರೆ ಶಿವಸ್ಕಂಧವರ್ಮ- ಈ ಹೆಸರುಗಳಲ್ಲಿ ಹೋಲಿಕೆಯಿರುವುದರಿಂದಲೂ ಆ ಕಾಲದಲ್ಲಿ ಪಲ್ಲವರು ಬಳ್ಳಾರಿ ಪ್ರದೇಶದ ಮೇಲೆ ಅಧಿಕಾರ ಪಡೆದಿದ್ದುದರಿಂದಲೂ ಇವರುಗಳಲ್ಲಿ ಸಂಬಂಧವಿದ್ದಿರಬಹುದೆಂದು ಭಾವಿಸಲಾಗಿದೆ. ಕದಂಬ ಸಂತತಿಯ ಸ್ಥಾಪಕ ಮಯೂರಶರ್ಮ ಪಲ್ಲವರಿಂದ ತನ್ನ ರಾಜ್ಯಪ್ರದೇಶವನ್ನು ಗೆದ್ದನೆಂಬ ಅಂಶ ಈ ವಾದಕ್ಕೆ ಸಹಾಯಕವಾಗಿದೆ. ಬಾಣರು ಪ್ರಸಕ್ತ ಶಕೆಯ ಆರಂಭಕಾಲದಿಂದ ಸುಮಾರು ೧೦ನೆಯ ಶತಮಾನದವರೆಗೂ ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದರು. ಬಾಣರು ಪೂರ್ವಭಾಗದಲ್ಲಿದ್ದರೆ ಆಳುಪರು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಶಕೆಯ ಆರಂಭದಿಂದ ೧೫ನೆಯ ಶತಮಾನದವರೆಗೂ ರಾಜ್ಯಭಾರ ಮಾಡುತ್ತಿದ್ದರು. ಶಿವಮೊಗ್ಗ ಪ್ರದೇಶದಲ್ಲಿ ಸೇಂದ್ರಕರೂ ಬಳ್ಳಾರಿಯ ಸುತ್ತುಮುತ್ತಣ ನಳರೂ ಆಳುತ್ತಿದ್ದರು.

ಕದಂಬರು

ವರ್ತುಲವಾಗಿ ಕ್ರಿ.ಪೂ 230 ರಲ್ಲಿ ಶಾತವಾಹನ ರಾಜಮನೆತನದವರು ಅಧಿಕಾರಕ್ಕೆ ಬಂದರು ಹಾಗು ಅವರ ಆಳ್ವಿಕೆ ಸರಿ ಸುಮಾರು ನಾಲ್ಕು ಶತಮಾನಗಳವರೆಗೆ ನಡೆಯಿತು. 3ನೆಯ ಶತಮಾನದವರೆಗೆ ಶಾತವಾಹನ ರಾಜಮನೆತನದ ವಿಯೋಜನೆಯಿಂದಾಗಿ ಮೊಟ್ಟ ಮೊದಲ ಸ್ಥಳೀಯ ಸಾಮ್ರಾಜ್ಯ ಬನವಾಸಿಯ ಕದಂಬರ ರಾಜಮನೆತನವು ಆಧುನಿಕ ಉತ್ತರ ಕನ್ನಡ (ಕಾರವಾರ) ಜಿಲ್ಲೆಯಲ್ಲಿ ತಲೆದೋರಿತು. ಇದರ ಸ್ಥಾಪಕ ಇಂದಿನ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಸ್ಥಳೀಯ ಬ್ರಾಹ್ಮಣ ಮಯೂರಶರ್ಮ ಹಾಗು ಪಶ್ಚಿಮ ಗಂಗಾ ರಾಜಮನೆತನದ ರಾಜ್ಯವು ದಕ್ಷಿಣ ಕರ್ನಾಟಕದಲ್ಲಿ ಆರಂಭವಾಯಿತು. ಈ ಘಟನೆಗಳು ಇಲ್ಲಿಯ ಪ್ರದೇಶದ ಸ್ವಾಧಿಪತ್ಯ ರಾಜಕೀಯದ ಅಸ್ತಿತ್ವಕ್ಕೆ ನಾಂದಿ ಹಾಡಿದವು. ಇವುಗಳು ಕನ್ನಡ ಭಾಷೆಗೆ ಆಡಳಿತ ದರ್ಜೆ ಕೊಟ್ಟ ಮೊದಲ ಸಾಮ್ರಾಜ್ಯಗಳು. ಇದಕ್ಕೆ ಪುರಾವೆಯಾಗಿ ೪೫೦ರ ಹಲ್ಮಿಡಿ ಬರೆಹಗಳಿವೆ. ಇದನ್ನು ಕದಂಬ ರಾಜಮನೆತನದ ರಾಜ ಕಾಕುಸ್ಥವರ್ಮನಿಗೆ ಸಮರ್ಪಿಸಲಾಗಿದೆ. ಅಗೆಯೇ, ಇತೀಚೆಗೆ ೫ನೆಯ ಶತಮಾನದ ತಾಮ್ರದ ನಾಣ್ಯ ಕದಂಬರ ರಾಜಧಾನಿ ಬನವಾಸಿಯಲ್ಲಿ ಸಿಕ್ಕಿವೆ. ಇದರ ಮೇಲೆ ಕನ್ನಡ ಲಿಪಿ ಬರಹ ಇದೆ. ಇದು ಕನ್ನಡ ಭಾಷೆ ಆಡಳಿತವಾಗಿ ಬಳಸುತ್ತಿದ್ದುದಕ್ಕೆ ಪುರಾವೆಯಾಗಿವೆ.

ಕರ್ನಾಟಕದ ಇತಿಹಾಸ 
ಕದಂಬ ಸಾಮ್ರಾಜ್ಯದ ನಕ್ಷೆ

ಸಾತವಾಹನರ ಅನಂತರ ಪ್ರಾಮುಖ್ಯ ಗಳಿಸಿದ ಕದಂಬ ಸಂತತಿಯನ್ನು ೩೦೦ರ ಸುಮಾರಿನಲ್ಲಿ ಸ್ಥಾಪಿಸಿದಾತ ಬ್ರಾಹ್ಮಣ ಕುಲದ ಮಯೂರಶರ್ಮ. ಈಚೆಗೆ ಇವರ ರಾಜಧಾನಿ ಬನವಾಸಿ ಬಳಿಯ ಗುಡ್ನಾಪುರದಲ್ಲಿ ದೊರಕಿದ ರವಿವರ್ಮನ ಶಾಸನದಲ್ಲಿ ಈತನ ತಂದೆತಾತಂದಿರ ವಿಷಯವಾಗಿ ಕೆಲವು ಮಾಹಿತಿಗಳು ದೊರಕಿವೆ. ಪಲ್ಲವರಿಗೆ ಸೇರಿದ ಪ್ರದೇಶಗಳನ್ನು ಗೆದ್ದು ಕದಂಬ ರಾಜ್ಯ ಸ್ಥಾಪನೆ ಮಾಡಿದ ಅನಂತರ ಬಾಣರೇ ಮೊದಲಾದ ದೊರೆಗಳನ್ನು ಸೋಲಿಸಿದುದಾಗಿ ಇವನ ಚಂದ್ರವಳ್ಳಿಯ ಶಾಸನ ತಿಳಿಸುತ್ತದೆ. ಇವನು ಅರಸನಾದ ಮೇಲೆ ಶರ್ಮ ಹೆಸರಿನ ಸ್ಥಳದಲ್ಲಿ ‘ವರ್ಮ’ ಎಂಬ ಬಿರುದು ಧರಿಸಿ ಕ್ಷತ್ರಿಯನಾಗಿ ಕಾಣಿಸಿಕೊಂಡನು. ಇವನ ಅನಂತರ ಕಾಕುತ್ಸ್ಥವರ್ಮ, ಶಾಂತಿವರ್ಮ, ಮೃಗೇಶವರ್ಮ ಮುಂತಾದವರೂ ಸಿಂಹಾಸನವನ್ನೇರಿ ತಮ್ಮ ವಂಶದ ಗೌರವವನ್ನು ಹೆಚ್ಚಿಸಿದರು. ಇವರಲ್ಲಿ ಕಡೆಯವನಾದ ಹರಿವರ್ಮನನ್ನು ಇದೇ ವಂಶದ ಮತ್ತೊಂದು ಶಾಖೆಯ ೨ನೆಯ ಕೃಷ್ಣವರ್ಮ ಸೋಲಿಸಿ ರಾಜ್ಯವನ್ನು ಪುನರೇಕೀಕರಣಗೊಳಿಸಿದ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದ ಆದಿ ಕದಂಬರ ಹಲವಾರು ಶಾಸನಗಳು ಅವರ ರಾಜ್ಯ ವಿಸ್ತಾರ, ಯುದ್ಧ ವಿಜಯಗಳು ಮತ್ತಿತರ ಸಾಧನೆಗಳನ್ನು ತಿಳಿಸುತ್ತವೆ. ಕದಂಬ ರಾಜ್ಯ ಈಗಿನ ಬೆಳಗಾಂವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡಿದ್ದು ಅವರ ರಾಜಧಾನಿಗಳು ಕ್ರಮವಾಗಿ ಬೆಳಗಾಂವಿ ಜಿಲ್ಲೆಯ ಹಲಸಿ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಮತ್ತು ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗಗಳಲ್ಲಿದ್ದುವು. ಕರ್ನಾಟಕದ ಪ್ರಾಚೀನ ಅರಸುಮನೆತನಗಳಲ್ಲೊಂದಾದ ಕದಂಬ ವಂಶದ ದೊರೆಗಳು ಪ್ರಾಕೃತ ಭಾಷೆಯನ್ನು ತಮ್ಮ ಶಾಸನಗಳಿಗೆ ಬಳಸುತ್ತಿದ್ದರು. ಕ್ರಮೇಣ ಸಂಸ್ಕೃತ ರಾಜಭಾಷೆಯಾಯಿತು. ಐದನೆಯ ಶತಮಾನದ ಬೇಲೂರು ತಾಲ್ಲೂಕಿನ ಹಲ್ಮಡಿ ಶಾಸನವು ಇವರ ಕಾಲದ ಪ್ರಥಮ ಕನ್ನಡ ಶಾಸನವಾಗಿದೆ. ಕಾಳಿದಾಸ ಇವರ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನೆಂದು ಕುಂತಳೇಶ್ವರ ದೌತ್ಯಂ ಎಂಬ ಕೃತಿಯಿಂದ ತಿಳಿದುಬರುತ್ತದೆ. ಕದಂಬ ರಾಜಪುತ್ರಿಯನ್ನು ಸಮಕಾಲೀನ ಗುಪ್ತ ಚಕ್ರವರ್ತಿ ವಿವಾಹವಾಗಿದ್ದನೆಂದರೆ ಇವರ ಪ್ರಾಮುಖ್ಯ ಅರಿವಾಗುತ್ತದೆ. ಆ ಚಕ್ರವರ್ತಿ ೧ನೆಯ ಕುಮಾರಗುಪ್ತನಾಗಿರಬಹುದು. ೫೪೦ರಲ್ಲಿ ಚಾಳುಕ್ಯರ ಒಂದನೆಯ ಪುಲಕೇಶಿ ಇವರನ್ನು ಸೋಲಿಸಿದ ಅನಂತರ ಕೆಲಕಾಲ ಈ ವಂಶಜರು ಆಳುತ್ತಿದ್ದರೂ ಸ್ವತಂತ್ರ ಕದಂಬ ವಂಶದ ಅಂತ್ಯವಾಯಿತೆಂದು ಹೇಳಬಹುದು. ೧೪ನೆಯ ಶತಮಾನದವರೆಗೂ ಇವರು ಬೇರೆ ರಾಜರ ಸಾಮಂತರಾಗಿ ಕರ್ನಾಟಕದ ಕೆಲಭಾಗಗಳಲ್ಲಿ ಆಳುತ್ತಿದ್ದರು. ಕರ್ನಾಟಕ ಮತ್ತು ಹಿಂದೂ ಸಂಸ್ಕೃತಿಗಳಿಗೆ ಇವರ ಕೊಡುಗೆ ಗಮನಾರ್ಹ. ವೈದಿಕ ಧರ್ಮನಿರತರಾದ ಇವರ ಆಶ್ರಯದಲ್ಲಿ ವೇದಾಭ್ಯಾಸಕ್ಕೆ ಉತ್ತೇಜನ ದೊರೆಯಿತು. ವೈಷ್ಣವ-ಶೈವಧರ್ಮಗಳು ವೃದ್ಧಿಗೊಂಡುವು. ಜೈನ ಮತ್ತು ಬೌದ್ಧ ಧರ್ಮಗಳಿಗೂ ಪ್ರೋತ್ಸಾಹವಿತ್ತು. ಎಲ್ಲ ಧರ್ಮಗಳ ದೇವಮಂದಿರಗಳಿಗೂ ದಾನದತ್ತಿಗಳನ್ನು ನೀಡಿದ್ದರು. ಕೆಲಶಾಸನಗಳಲ್ಲಿ ಜೈನಾಚಾರ್ಯರಾದ ಪುಜ್ಯಪಾದ, ನಿರವದ್ಯಪಂಡಿತ ಮುಂತಾದವರ ಹೆಸರುಗಳಿವೆ. ಹಾನಗಲ್ ಮತ್ತು ಪುಲಿಗೆರೆಗಳು ಜೈನ ಕೇಂದ್ರಗಳಾಗಿದ್ದರೆ ಅಜಂತ ಮತ್ತು ಬನವಾಸಿಗಳು ಬೌದ್ಧ ಕೇಂದ್ರಗಳಾಗಿದ್ದು ಆ ಧರ್ಮದ ಉಚ್ಛ್ರಾಯಸ್ಥಿತಿಯನ್ನು ಸೂಚಿಸುತ್ತವೆ. ಸು.೬೩೬ರ ವೇಳೆಗೆ ಬನವಾಸಿಗೆ ಬಂದ ಚೀನ ದೇಶದ ಪ್ರವಾಸಿ ಯುವಾನ್ ಚಾಂಗ್ ಅಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೊರಡೂ ನೆಲೆಸಿದ್ದುವೆಂದೂ ಒಂದು ನೂರು ಬೌದ್ಧ ಸಂಘಾರಾಮಗಳೂ ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದೂ ತಿಳಿಸುತ್ತಾನೆ. ಅಶೋಕ ನಿರ್ಮಿತ ಸ್ತೂಪವೂ ಅಲ್ಲಿತ್ತೆಂಬುದೂ ಆತನಿಂದ ತಿಳಿದುಬರುವ ಅಂಶ. ವಾಸ್ತು ಮತ್ತು ಮೂರ್ತಿಶಿಲ್ಪಕಲೆಯ ವೃದ್ಧಿಗೂ ಪ್ರೋತ್ಸಾಹವಿದ್ದು ಅನಂತರಕಾಲದ ವೇಸರಶೈಲಿಗೆ ತಳಹದಿಯನ್ನೊದಗಿಸಿದ ಕೀರ್ತಿ ಇವರಿಗೆ ಸಲ್ಲಬೇಕು.

ಗಂಗವಂಶ

ದಕ್ಷಿಣ ಕರ್ನಾಟಕದಲ್ಲಿ ಆಳಿದ ಗಂಗವಂಶವನ್ನು ೩೨೫ರಲ್ಲಿ ಕೊಂಗುಣಿ ವರ್ಮ ಸ್ಥಾಪಿಸಿದ. ಮೊದಲಿಗೆ ಇವನ ರಾಜಧಾನಿ ಕುವಲಾಲದಲ್ಲಿತ್ತು. ಈ ವಂಶಜರು ೧೦ನೆಯ ಶತಮಾನದ ಕೊನೆಯವರೆಗೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಕ್ರಮೇಣ ಕಾವೇರೀ ತೀರದಲ್ಲಿ ಪ್ರಬಲರಾದರು. ಹರಿವರ್ಮನ ಕಾಲದಲ್ಲಿ ತಲಕಾಡು (ಮೈಸೂರು ಜಿಲ್ಲೆ) ಇವರ ರಾಜಧಾನಿಯಾಯಿತು. ಈ ವಂಶದ ಪ್ರಮುಖ ದೊರೆಗಳಲ್ಲಿ ಅವಿನೀತ, ದುರ್ವಿನೀತ, ಭೂವಿಕ್ರಮ, ಶಿವಮಾರ ೧, ಶ್ರೀಪುರುಷ, ಪೃಥ್ವೀಪತಿ, ಎರಡನೆಯ ರಾಚಮಲ್ಲ ಮತ್ತು ಎರಡನೆಯ ಬೂತುಗರ ಹೆಸರುಗಳನ್ನು ಇಲ್ಲಿ ಸೂಚಿಸಬಹುದು. ಚಾಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇತಿಹಾಸದ ರೂಪರೇಷೆಗಳನ್ನು ನಿರ್ಮಿಸುವುದರಲ್ಲಿ ಈ ಅರಸರು ಪ್ರಮುಖಪಾತ್ರ ವಹಿಸಿದರು. ೨ನೆಯ ಪುಲಕೇಶಿ ೬೪೨ರಲ್ಲಿ ಯುದ್ಧದಲ್ಲಿ ಮಡಿದು ಆ ರಾಜ್ಯ ಪಲ್ಲವರ ಕೈಸೇರಿದಾಗ, ಅವರೊಂದಿಗೆ ವಿವಾಹಸಂಬಂಧ ಬೆಳೆಸಿದ ಈ ವಂಶದ ರಾಜರು ೧ನೆಯ ವಿಕ್ರಮಾದಿತ್ಯ ರಾಜ್ಯವನ್ನು ಪುನಃ ಗಳಿಸಲು ಹೆಚ್ಚಿನ ನೆರವು ನೀಡಿದರು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅವರ ಸಾಮಂತರಾಗಿದ್ದ ಗಂಗರಸರ ನೆರವು ವಿಶೇಷವಾಗಿತ್ತು. ೨ನೆಯ ಶಿವಮಾರ ರಾಷ್ಟ್ರಕೂಟರೊಂದಿಗೆ ಹೋರಾಟ ನಡೆಸಿ, ಹೆಚ್ಚುಕಾಲ ಸೆರೆಯಲ್ಲಿದ್ದು ಬಹುಶಃ ಅಲ್ಲೇ ಮೃತನಾದ. ೨ನೆಯ ಬೂತುಗ ತನ್ನ ಭಾವನಾದ ರಾಷ್ಟ್ರಕೂಟ ಮೂರನೆಯ ಕೃಷ್ಣನ ಪರವಾಗಿ ಅನೇಕ ಯುದ್ಧಗಳಲ್ಲಿ ಧೈರ್ಯಪರಾಕ್ರಮಗಳಿಂದ ಹೋರಾಡಿ ಕೀರ್ತಿಶಾಲಿಯಾದ. ಕನ್ನಡದ ಆದಿಕವಿಗಳಲ್ಲೊಬ್ಬನಾದ ನೃಪತುಂಗನ ಕವಿರಾಜಮಾರ್ಗದಲ್ಲಿ ಉಕ್ತನಾದ ದುರ್ವಿನೀತನೆಂಬಾತ ಈ ವಂಶದ ದೊರೆಯಾದ ದುರ್ವಿನೀತನೇ-ಎಂಬುದು ಕೆಲವರ ವಾದ. ಶಬ್ದಾವತಾರ, ಗುಣಾಢ್ಯನ ವಡ್ಡಕಥೆಯ ಸಂಸ್ಕೃತ ಭಾಷಾಂತರ, ಭಾರವಿಯ ಕಿರಾತಾರ್ಜುನೀಯದ ಮೇಲೆ ವ್ಯಾಖ್ಯಾನ - ಇವು ಈತನ ಮುಖ್ಯ ಸಾಹಿತ್ಯಕ ಕೊಡುಗೆಗಳು. ಈ ವಂಶದ ೨ನೆಯ ಮಾರಸಿಂಹ ಮತ್ತು ೪ನೆಯ ರಾಚಮಲ್ಲರ ಮಂತ್ರಿಯಾದ ಚಾವುಂಡರಾಯನೇ ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟಮೂರ್ತಿಯನ್ನು ಕಡೆಯಿಸಿದವ. ೧೦೦೪ರಲ್ಲಿ ಚೋಳರಿಂದ ಪರಾಜಿತರಾದಾಗ ಇವರ ಸ್ವತಂತ್ರ ಅಸ್ತಿತ್ವ ನಷ್ಟವಾದರೂ ೧೧೧೬ರಲ್ಲಿ ಹೊಯ್ಸಳರು ತಲಕಾಡನ್ನು ಗೆದ್ದುಕೊಂಡು ಇವರ ಧ್ಯೇಯವನ್ನು ಮುಂದುವರಿಸಿದರು.

ಗಂಗರ ರಾಜ್ಯಕ್ಕೆ ಗಂಗವಾಡಿ ಎಂಬ ಹೆಸರಿದ್ದು ಇತ್ತೀಚಿನವರೆಗೂ ಅದು ಬಳಕೆಯಲ್ಲಿತ್ತು. ಪಶ್ಚಿಮದಲ್ಲಿ ಕದಂಬರ ಮತ್ತು ಪೂರ್ವದಲ್ಲಿ ಪಲ್ಲವರ ರಾಜ್ಯಗಳ ನಡುವಣ ಈ ರಾಜ್ಯ ಮೊದಲಿಗೆ ಅನಂತಪುರ ಮತ್ತು ಕಡಪ ಜಿಲ್ಲೆಗಳನ್ನೊಳಗೊಂಡಿದ್ದು ಕುವಲಾಲಪುರವನ್ನು (ಕೋಲಾರ) ರಾಜಧಾನಿಯಾಗಿ ಪಡೆದಿತ್ತು. ಅನಂತರ ಕಾಲದಲ್ಲಿ ತುಮಕೂರು, ಬೆಂಗಳೂರು, ಕೊಡಗು, ಮೈಸೂರು ಪ್ರದೇಶಗಳೂ ಕೊಯಮತ್ತೂರು ಮತ್ತು ಸೇಲಂ ಜಿಲ್ಲೆಗಳೂ ಅವರ ವಶವಾದುವು. ಕದಂಬರು ೪ನೆಯ ಶತಮಾನದ ಪ್ರಾರಂಭಕ್ಕೆ ಬಾದಾಮಿ ಚಾಳುಕ್ಯ ರಾಜ್ಯದಿಂದ ಬಹುಪೂರ್ಣವಾಗಿ ಸೋತ ಮೇಲೆ ಹಿಂದಿನ ಹಳೆಯ ಮೈಸೂರು ರಾಜ್ಯದ ಬಹು ಭಾಗ ಗಂಗರ ಆಧಿಪತ್ಯಕ್ಕೆ ಒಳಪಟ್ಟು ಗಂಗವಾಡಿ ೧೬೦೦೦ವೆಂದು ಪ್ರಸಿದ್ಧವಾಯಿತು. ಕಾವೇರಿತೀರದ ತಲವನಪುರಕ್ಕೆ (ತಲಕಾಡು) ಅವರ ರಾಜಧಾನಿ ಬದಲಾಯಿತು. ಅನಂತರ ಏಳನೆಯ ಶತಮಾನದಲ್ಲಿ, ಚನ್ನಪಟ್ಟಣದ ಬಳಿಯ ಮಾನ್ಯಕುಂಡವನ್ನೂ ತದನಂತರ ಬೆಂಗಳೂರು ಜಿಲ್ಲೆಯ ಮಾನ್ಯಪುರವನ್ನೂ (ಮನ್ನೆ) ಇವರು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜ್ಯಸ್ಥಾಪನೆಗೆ ಸಹಾಯಕನಾದ ಜೈನಾಚಾರ್ಯ ಸಿಂಹನಂದಿಯ ಪ್ರಭಾವದಿಂದ ಜೈನಧರ್ಮ ಪ್ರಾಬಲ್ಯ ಪಡೆದು ಕೊನೆಯವರೆಗೂ ಅದು ಗಂಗರಸರ ಪ್ರೋತ್ಸಾಹ ಪಡೆದಿತ್ತು. ಆದರೂ ಸರ್ವಧರ್ಮಗಳಿಗೂ ಇವರು ಆಶ್ರಯದಾತರಾಗಿದ್ದರು. ವಿಷ್ಣುಗೋಪ ಇವರನ್ನು ನಾರಾಯಣನ ಪಾದಾರವಿಂದಗಳ ಪೂಜಾನಿರತರೆಂದು ವರ್ಣಿಸಿರುವುದೇ ಇವರು ವೈಷ್ಣವಧರ್ಮಕ್ಕೆ ಪ್ರೋತ್ಸಾಹ ನೀಡಿದುದಕ್ಕೆ ಸಾಕ್ಷಿ. ಗಂಗರಸ ಅವಿನೀತ ವಿದ್ಯಾಪಕ್ಷಪಾತಿ; ಗಜಶಾಸ್ತ್ರ, ಅಶ್ವವಿದ್ಯೆ ಮತ್ತು ಶರವಿದ್ಯೆಗಳಲ್ಲಿ ಪ್ರವೀಣ. ಶಾಸನಗಳ ಪ್ರಕಾರ ಈತ ಹರಚರಣಾರವಿಂದ ಪ್ರಣಿಪಾತ (ಶಿವಭಕ್ತ)ನಾಗಿದ್ದ. ಇವನ ಪುತ್ರ ದುರ್ವಿನೀತ ಸ್ವತಃ ವಿದ್ವಾಂಸನಾಗಿದ್ದುದಲ್ಲದೆ ವಿದ್ವಜ್ಜನಪಕ್ಷಪಾತಿಯಾಗಿದ್ದು ಭಾರವಿಗೆ ಆಶ್ರಯದಾತನೆಂದು ಕವಿ ದಂಡಿ ತಿಳಿಸುತ್ತಾನೆ. ಮತ್ತೊಬ್ಬ ದೊರೆ ಶ್ರೀಪುರುಷ ಗಜಶಾಸ್ತ್ರವೆಂಬ ವಿದ್ವತ್ಪೂರ್ಣ ಕೃತಿಯ ರಚನೆಮಾಡಿ ತನ್ನ ಪಾಂಡಿತ್ಯಪ್ರದರ್ಶನ ಮಾಡಿದ್ದಾನೆ. ಆತ ವಿದ್ವಾಂಸರಿಗೆ ಆಶ್ರಯದಾತನೂ ಆಗಿದ್ದ. ಎರಡನೆಯ ಶಿವಮಾರ ಆಗಿಂದಾಗ್ಗೆ ರಾಷ್ಟ್ರಕೂಟ ಸಾಮ್ರಾಜ್ಯದ ಕೋಪಕ್ಕೆ ಪಾತ್ರನಾಗಿ ಸೆರೆವಾಸ ಮಾಡುತ್ತಿದ್ದರೂ ಉಳಿದ ಕಾಲದ ಬಹುಭಾಗ ರಣರಂಗಗಳಲ್ಲಿದ್ದು ಭೀಮಕೋಪನೆಂಬ ಬಿರುದು ಧರಿಸಿದ್ದರೂ ಕೆಲವಾರು ಜೈನಬಸದಿಗಳನ್ನು ನಿರ್ಮಿಸಿದ. ಈತ ಮನ್ಮಥನನ್ನು ನಾಚಿಸುವಷ್ಟು ಸುಂದರ; ಇವನ ಜ್ಞಾಪಕಶಕ್ತಿ ಅಸಾಧಾರಣ ; ಈತ ಕುಶಾಗ್ರಮತಿ, ಸಕಲವಿದ್ಯಾಪ್ರವೀಣ-ಎಂದೆಲ್ಲ ಹೊಗಳಲಾಗಿದೆ. ಗಜಾಷ್ಟಕ ಮತ್ತು ಸೇತುಬಂಧನವೆಂಬ ಕೃತಿಗಳು ಈತನವೆಂದು ನಂಬಲಾಗಿದೆ. ಇಮ್ಮಡಿ ನೀತಿಮಾರ್ಗ ವೀರಸೇನಾನಿಯಾಗಿದ್ದುದಲ್ಲದೆ ಸಂಗೀತನೃತ್ಯಗಳಲ್ಲಿ ಭರತನೆಂದೂ ವ್ಯಾಕರಣ ರಾಜ ನೀತಿಶಾಸ್ತ್ರಪರಿಣತನೆಂಬುದೂ ಶಾಸನದ ಉಕ್ತಿ. ಗಂಗರ ಇತಿಹಾಸದಲ್ಲೇ ವೈಶಿಷ್ಟ್ಯ ಪೂರ್ಣನಾದ ಇಮ್ಮಡಿ ಬೂತುಗ ಜೈನಧರ್ಮ ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದ. ಮಂತ್ರಿಯಾಗಿ ಈ ವಂಶಕ್ಕೆ ಸೇವೆ ಸಲ್ಲಿಸಿದ ಚಾವುಂಡರಾಯ ಅಪ್ರತಿಮ ಸೇನಾನಿ, ಅದ್ವಿತೀಯ ರಾಜಕಾರಣಿ, ವಿದ್ಯಾಪಕ್ಷಪಾತಿ; ತರ್ಕ, ವ್ಯಾಕರಣ, ಗಣಿತ, ವೈದ್ಯಶಾಸ್ತ್ರ ಮತ್ತು ಸಾಹಿತ್ಯಗಳಲ್ಲಿ ಪಾರಂಗತ. ಚಾವುಂಡರಾಯಪುರಾಣವನ್ನು ರಚಿಸಿದವನೀತನೇ. ಈಗಿನ ಬಾಗಿಲಕೋಟೆ ಜಿಲ್ಲೆಯ ಬಾದಾಮಿ ಇವರ ಪ್ರಮುಖ ರಾಜಧಾನಿ.

ಬಾದಾಮಿ ಚಾಲುಕ್ಯರು

ಕದಂಬ-ಗಂಗರ ಅನಂತರ ಕರ್ಣಾಟಕದ ಪ್ರಮುಖ ರಾಜಮನೆತನವೆಂದರೆ ಬಾದಾಮಿ ಚಳುಕ್ಯವಂಶ. ಇವರ ಮೂಲ ಸರಿಯಾಗಿ ಗೊತ್ತಿಲ್ಲ. ಒಂದನೆಯ ಪುಲಕೇಶಿಯ ಕಾಲದಿಂದ (ಸು. ೫೪೦) ಪ್ರಾಬಲ್ಯ ಪಡೆದ ಈ ವಂಶ ಎರಡು ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿಯಿತು. ಕೀರ್ತಿವರ್ಮನಿಂದ ವಿಸ್ತೃತವಾದ ಈ ರಾಜ್ಯ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೀರ್ತಿಶಿಖಿರ ತಲುಪಿತು. ದಕ್ಷಿಣ ಭಾರತದ ರಾಜರುಗಳನ್ನು ಗೆದ್ದು ದಕ್ಷಿಣಾಪಥೇಶ್ವರನೆನಿಸಿಕೊಂಡ ಈತ ಉತ್ತರಭಾರತದ ಸಾಮ್ರಾಟ ಹರ್ಷನನ್ನು ನರ್ಮದಾ ತೀರದಲ್ಲಿ ಸೋಲಿಸಿ ತನ್ನ ಬಿರುದನ್ನು ಸಾರ್ಥಕಗೊಳಿಸಿಕೊಂಡ. ಹರ್ಷನ ಆಸ್ಥಾನ ಕವಿ ಬಾಣ ಮತ್ತು ಸಮಕಾಲೀನ ಚೀನೀ ಪ್ರವಾಸಿ ಯುವಾನ್ ಚಾಂಗ್ ಆ ಕಾಲದ ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಹೊಗಳಿದ್ದಾರೆ. ಆದರೆ ಈತ ೬೪೨ರಲ್ಲಿ ಪಲ್ಲವ ನರಸಿಂಹವರ್ಮನಿಂದ ಸೋತು ಮಡಿದ. ೧೩ ವರ್ಷಗಳ ಅನಂತರ ೬೫೫ರಲ್ಲಿ ಚಾಳುಕ್ಯ ರಾಜ್ಯ ಮೊದಲನೆಯ ವಿಕ್ರಮಾದಿತ್ಯನಿಂದ ಪುನಃ ಸ್ಥಾಪಿತವಾಯಿತು. ವಿಕ್ರಮಾದಿತ್ಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪಲ್ಲವ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅದರ ದಕ್ಷಿಣದ ಎಲ್ಲೆಯಾದ ಉರಗಪುರದ (ಈಗಿನ ಉರೈಯೂರು-ತಿರಚಿರಾಪಳ್ಳಿಯ ಸಮೀಪ) ವರೆಗಿನ ಪ್ರದೇಶವನ್ನೆಲ್ಲ ೬೭೪ರಲ್ಲಿ ಜಯಿಸಿದ. ನಾನಾ ವಿಜಯಗಳಿಂದಲೂ ಸುವ್ಯವಸ್ಥಿತ ಆಡಳಿತದಿಂದಲೂ ಆತ ಚಳುಕ್ಯ ರಾಜ್ಯವೈಭವವನ್ನು ಮೆರೆಸಿದ. ೨ನೆಯ ವಿಕ್ರಮಾದಿತ್ಯನೂ ಪಲ್ಲವರ ಮೇಲಿನ ದ್ವೇಷವನ್ನು ಮುಂದುವರಿಸಿ ತನ್ನ ಯುವರಾಜ್ಯಕಾಲದಲ್ಲೂ ಆಳ್ವಿಕೆಯ ಸಮಯದಲ್ಲೂ ಮೂರು ಬಾರಿ ಪಲ್ಲವ ರಾಜಧಾನಿಯಾದ ಕಂಚಿಯನ್ನು ವಶಪಡಿಸಿಕೊಂಡಿದ್ದ. ವಾಯುವ್ಯ ಗಡಿಯಲ್ಲಿ ಉಪಟಳ ಕೊಡುತ್ತಿದ್ದ ಅರಬರನ್ನು ಸೋಲಿಸಿ ಗುಜರಾತಿನಲ್ಲಿ ತನ್ನ ಅಧಿಕಾರವನ್ನು ನೆಲೆಗೊಳಿಸಿದ. ಉದಾರಚರಿತನಾದ ಈತ ಶತ್ರು ರಾಜಧಾನಿಯಾದ ಕಂಚಿಯ ಬ್ರಾಹ್ಮಣರಿಗೂ ದೇವಾಲಯಗಳಿಗೂ ಧನಕನಕಗಳನ್ನು ವಿಪುಲವಾಗಿ ಕೊಟ್ಟುದಾಗಿ ಶಾಸನಗಳು ತಿಳಿಸುತ್ತವೆ. ವಿನಯಾದಿತ್ಯ, ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ದೆಸೆಯಲ್ಲಿದ್ದ ಈ ವಂಶದ ಅರಸರು ೭೫೭ರ ಸುಮಾರಿನಲ್ಲಿ ಈ ವಂಶದ ಕೊನೆಯ ದೊರೆ ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರಿಗೆ ಸಾಮಂತರಾದರು.

ಬಾದಾಮಿ ಚಳುಕ್ಯರ ಕಾಲದಿಂದಲೇ ಕರ್ನಾಟಕದ ಪ್ರಾದುರ್ಭಾವವಾಯಿತೆಂದು ಅನೇಕ ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ. ಆ ಮೊದಲು ಇತರ ರಾಜಮನೆತನಗಳು ಅಲ್ಲಲ್ಲಿ ಆಳುತ್ತಿದ್ದರೂ ಕರ್ನಾಟಕದ ಹೆಚ್ಚು ಭಾಗ ಒಂದುಗೂಡಿ ಅದರ ಇತಿಹಾಸಕ್ಕೆ ಒಂದು ನಿರ್ದಿಷ್ಟರೂಪ ದೊರೆಕಿದ್ದು ಚಳುಕ್ಯರ ಕಾಲದಲ್ಲಿ. ಇವರು ಅದರ ಸಾಂಸ್ಕೃತಿಕ ಮೇರೆಗಳನ್ನು ವಿಸ್ತರಿಸಿದರು ; ರಾಜ್ಯದಲ್ಲಿ ಸುವ್ಯವಸ್ಥಿತ ಆಡಳಿತ ನಿರ್ಮಿಸಿದರು. ಬಾದಾಮಿ ಇವರ ರಾಜಧಾನಿ. ಎಲ್ಲ ದಿಕ್ಕುಗಳಿಗೂ ರಾಜ್ಯ ಹರಡಿತ್ತು. ಉತ್ತರದಲ್ಲಿ ನರ್ಮದಾ ಪೂರ್ವದಲ್ಲಿ ಕರ್ನೂಲು, ಗುಂಟೂರು ಮತ್ತು ನೆಲ್ಲೂರು ಪ್ರದೇಶಗಳು, ದಕ್ಷಿಣದಲ್ಲಿ ಕಾವೇರಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ- ಇವು ಈ ರಾಜ್ಯದ ಉಚ್ಛ್ರಾಯ ಕಾಲದಲ್ಲಿ ಎಲ್ಲೆಗಳಾಗಿದ್ದುವು. ಇದಲ್ಲದೆ ಈ ವಂಶಜರು ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲೂ ರಾಜ್ಯ ಸ್ಥಾಪನೆ ಮಾಡಿದರು. ಕ್ರಮೇಣ ಅವು ಸ್ವತಂತ್ರರಾಜ್ಯಗಳಾಗಿ ಕರ್ನಾಟಕ ಸಂಸ್ಕೃತಿಯ ಹೊರಕೇಂದ್ರಗಳಾದುವು. ಪುರಾತನ ಕಾಲದಲ್ಲಿ ನಡೆದ ಈ ಕರ್ನಾಟಕ ಏಕೀಕರಣದಿಂದ ಜನರಲ್ಲಿ ಭಾವೈಕ್ಯವುಂಟಾಯಿತು. ನಾಡಿನ ರಕ್ಷಣೆಗೆ ಸುಶಿಕ್ಷಿತವೂ ಶಿಸ್ತಿನಿಂದ ಕೂಡಿದ್ದೂ ಆದ ಕರ್ನಾಟಕಬಲದ ನಿರ್ಮಾಣವಾಯಿತು. ರಾಷ್ಟ್ರಕೂಟ ದಂತಿದುರ್ಗ ಕರ್ನಾಟಕ ಬಲದ ಪ್ರಸ್ತಾಪಮಾಡಿದ್ದಾನೆ. ಮತೀಯ, ಸಾಮಾಜಿಕ, ಭಾಷಾ, ಸಾಹಿತ್ಯ ಮತ್ತು ಕಲಾರಂಗಗಳ ಮೇಲೂ ಈ ಏಕೀಕರಣದ ಪ್ರಭಾವ ಅದ್ಭುತವಾಗಿತ್ತು. ಸಾಮಾಜಿಕ ಪಂಗಡಗಳ ಮೇಲೆ ಸಂಸ್ಥಾಜೀವನದ ಆದರ್ಶ ಪರಿಣಾಮ ಬೀರಿ ಆತ್ಮಗೌರವವನ್ನು ವೃದ್ಧಿಗೊಳಿಸಿತು. ಯುವಾನ್ಚಾಂಗ್ ತಿಳಿಸಿರುವಂತೆ ಕರ್ನಾಟಕದ ಜನತೆ ಧರ್ಮಭೀರುಗಳಾಗಿದ್ದು ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತ ನ್ಯಾಯಪರರಾಗಿದ್ದರು. ಅಭಿಮಾನಿಗಳು, ಉತ್ಸಾಹಿಗಳು, ವೀರರು, ಉಪಕಾರಿಗಳಿಗೆ ಪ್ರತ್ಯುಪಕಾರಿಗಳು, ಅನ್ಯಾಯದ ದ್ವೇಷಿಗಳು, ಶರಣಾಗತರಿಗಾಗಿ ಸ್ವಾರ್ಥ ತ್ಯಾಗ ಮಾಡಬಲ್ಲವರು- ಎಂದು ಇವರು ವರ್ಣಿತರಾಗಿದ್ದಾರೆ. ಸಾಧುಗೆ ಸಾಧು, ಮಾಧುರ್ಯಂಗೆ ಮಾಧರ್ಯಂ, ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ ಎಂದು ಆ ಕಾಲದ ಶಾಸನವೊಂದು ಆಗಿನ ಕಾಲದ ಜನರ ಮುಂದಿದ್ದ ಆದರ್ಶವನ್ನು ಹೇಳುತ್ತದೆ.

ಶೈವ, ವೈಷ್ಣವ, ಜೈನ ಮತ್ತು ಬೌದ್ಧಧರ್ಮಗಳಿಗೆ ಸಮಾನಾಶ್ರಯವಿತ್ತು. ಅತ್ಯಂತ ಪುರಾತನ ಧರ್ಮಗಳಲ್ಲೊಂದಾದ ಶೈವಧರ್ಮಕ್ಕೆ ಇವರ ಕಾಲದಲ್ಲಿ ಸಾಕಷ್ಟು ಪ್ರೋತ್ಸಾಹವಿತ್ತು. ಮಂಗಲೀಶನ ಕಾಲದಲ್ಲಿ ನಿರ್ಮಿತವಾದ ಮಹಾಕೂಟ ದೇವಾಲಯ ಶೈವ ಪುಣ್ಯಕ್ಷೇತ್ರವೆಂದು ೬೦೨ರ ಶಾಸನವೊಂದು ತಿಳಿಸುತ್ತದೆ. ೭೦೦ರ ಶಾಸನವೊಂದು ಕಿಗ್ಗದಲ್ಲಿ ದೊರಕಿದ್ದು ಪಾಶುಪತಮತದ ಪ್ರಸ್ತಾಪವನ್ನೊಳಗೊಂಡಿದೆ. ಚಾಳುಕ್ಯರ ಆಶ್ರಯದಲ್ಲಿ ಕಲ್ಲೇಶ್ವರ, ದುರ್ಗಾ, ಮಲ್ಲಿಕಾರ್ಜುನ, ವಿರೂಪಾಕ್ಷ, ಪಾಪನಾಥೇಶ್ವರ ಮುಂತಾದ ಅನೇಕ ದೇವಾಲಯಗಳು ನಿರ್ಮಿತವಾಗಿ ರಾಜರಿಂದ ಹಲವಾರು ದಾನ ದತ್ತಿಗಳನ್ನು ಪಡೆದಿದ್ದು ಈ ಮತದ ಜನಪ್ರಿಯತೆಗೆ ನಿದರ್ಶನವಾಗಿದೆ. ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಅಲ್ಲಿಯ ಮುಖ್ಯ ದೇಗುಲವಾದ ರಾಜಸಿಂಹೇಶ್ವರ (ಈಗಿನ ಕೈಲಾಸನಾಥ) ದೇವಾಲಯಕ್ಕೆ ಅನೇಕ ದತ್ತಿಗಳನ್ನು ಬಿಟ್ಟಿದ್ದ. ವೈಷ್ಣವ ಧರ್ಮ ಚಾಳುಕ್ಯರಾಜರ ಮುಖ್ಯಧರ್ಮವಾಗಿದ್ದಂತೆ ತಿಳಿದುಬರುತ್ತದೆ. ಮಂಗಲೀಶ ನಿರ್ಮಿತವಾದ ಬಾದಾಮಿಯ ವಿಷ್ಣುವಿನ ಗುಹಾಂತರ್ದೇವಾಲಯ ಇದಕ್ಕೆ ಮೊದಲ ನಿದರ್ಶನ. ಮಂಗಲೀಶ, ವಿಷ್ಣುವರ್ಧನ, ವಿಕ್ರಮಾದಿತ್ಯ, ವಿಜಯಾದಿತ್ಯ ಮುಂತಾದ ಈ ರಾಜರ ನಾಮಧೇಯಗಳೂ ಪರಮಭಾಗವತ, ಪರಮಭಟ್ಟಾರಕ, ಶ್ರೀಪೃಥ್ವೀವಲ್ಲಭ ಎಂಬ ಬಿರುದುಗಳೂ ಈ ಅಂಶವನ್ನು ಸ್ಥಿರೀಕರಿಸುತ್ತವೆ. ಚಾಳುಕ್ಯ ಯುಗದಲ್ಲಿ ತಮಿಳುನಾಡಿನಲ್ಲಿ ಆಳ್ವಾರುಗಳೆಂದು ಪ್ರಸಿದ್ಧರಾದ ಸಂತರಿಂದ ಶ್ರೀವೈಷ್ಣವಧರ್ಮದ ಪುನರುಜ್ಜೀವನ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅದರ ಪ್ರಭಾವ ಕನ್ನಡನಾಡಿನಲ್ಲೂ ಬಹುಮಟ್ಟಿಗೆ ಹರಡಿತು. ಜೈನಧರ್ಮದ ಪ್ರಭಾವವೂ ಸಾಕಷ್ಟು ಇತ್ತೆಂದು ಸಮಕಾಲೀನ ಗುಹಾಂತರ್ದೇವಾಲಯಗಳಿಂದಲೂ ಚಾಳುಕ್ಯರ ಪ್ರಮುಖ ಸಾಮಂತರಾದ ಗಂಗರಸರ ಇತಿಹಾಸದಿಂದಲೂ ತಿಳಿದುಬರುತ್ತದೆ. ಐಹೊಳೆ ಶಾಸನದ ಕರ್ತೃವಾದ ರವಿಕೀರ್ತಿ ಜೈನಮತೀಯ. ಈತ ತನ್ನ ಪ್ರತಿಭೆ ವಿದ್ವತ್ತುಗಳಿಂದ ೨ನೆಯ ಪುಲಕೇಶಿಯ ಮೆಚ್ಚುಗೆಗೆ ಪಾತ್ರನಾಗಿ ಆಸ್ಥಾನ ಕವಿಯಾಗಿದ್ದ. ಆ ಕಾಲದ ಪ್ರಸಿದ್ಧ ಜೈನಾಚಾರ್ಯರಲ್ಲಿ ದಂಡಿಕವಿಯ ಸ್ತುತಿಗೆ ಪಾತ್ರರಾದ ತುಂಬಲೂರಿನ ಶ್ರೀವರ್ಧದೇವ (ತುಂಬಲೂರಾಚಾರ್ಯ) ಮತ್ತು ಪುಜ್ಯಪಾದರು ಹೆಸರಾದವರು. ಅವರಿಂದ ಸಾಹಿತ್ಯಸೇವೆ ಅಧಿಕ ಪ್ರಮಾಣದಲ್ಲಿ ನಡೆದಿತ್ತು. ಬೌದ್ಧಧರ್ಮವೂ ಆ ಕಾಲದಲ್ಲಿ ಪ್ರಭಾವಯುತವಾಗಿತ್ತೆಂಬುದಕ್ಕೆ ಆಧಾರಗಳಿವೆ. ಬೌದ್ಧಯಾತ್ರಿಕ ಯುವಾನ್ ಚಾಂಗನ ಬರೆವಣಿಗೆಗಳಿಂದ ಕರ್ನಾಟಕದಲ್ಲಿ ಆ ಧರ್ಮ ಪ್ರಚಾರದಲ್ಲಿತ್ತೆಂದು ತಿಳಿದುಬರುತ್ತದೆ. ಚಳುಕ್ಯರಾಜ್ಯದ ಅಂಗವಾಗಿದ್ದ ಬನವಾಸಿ ಪ್ರದೇಶದಲ್ಲಿ ನೂರಾರು ಬೌದ್ಧವಿಹಾರಗಳು ಸ್ತೂಪಗಳೂ ಸಾವಿರಾರು ಭಿಕ್ಷುಭಿಕ್ಷುಣಿಯರೂ ಇದ್ದುದಾಗಿ ಈತ ವರ್ಣಿಸಿದ್ದಾನೆ. ಹೀನಯಾನ ಮಹಾಯಾನ ಪಂಥಗಳೆರಡಕ್ಕೂ ಸಮಾನಾವಕಾಶವಿತ್ತು. ಒಟ್ಟಿನಲ್ಲಿ ಎಲ್ಲ ಮತಧರ್ಮಗಳಿಗೂ ಸಮನಾದ ಪ್ರೋತ್ಸಾಹವಿದ್ದು ಕನ್ನಡಿಗರ ಮೂಲತತ್ತ್ವವಾದ ಸರ್ವಧರ್ಮ ಸಮನ್ವಯತೆ ರೂಢಿಯಲ್ಲಿತ್ತೆಂದು ಹೇಳಬಹುದು.

ಸಮಾಜ ಚಾತುರ್ವರ್ಣಯುಕ್ತವಾಗಿದ್ದು ಅದರಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯರಿಗೆ ಹೆಚ್ಚಿನ ಪ್ರಾಧಾನ್ಯವಿತ್ತು. ೭ನೆಯ ಶತಮಾನದ ವಿಕ್ರಮಾದಿತ್ಯನ ಶಾಸನವೊಂದರಲ್ಲಿ ಒಟ್ಟು ಜನಸಮುದಾಯವನ್ನು ಹದಿನೆಂಟು ಪ್ರಕೃತಿಗಳಾಗಿ ವಿಭಾಗಿಸಲಾಗಿದೆ. ಆಯಾ ಪ್ರಕೃತಿಗಳಿಗೆ ಸಂಬಂಧಿಸಿದ ಶ್ರೇಣಿ ಅಥವಾ ಉದ್ಯೋಗ ಸಂಘಗಳ ಪ್ರಸ್ತಾಪವೂ ಇದೆ. ವರ್ಣಾಶ್ರಮದ ಹೊರಗಿದ್ದ ಅಗಸ, ಕಲ್ಕುಟಿಗ, ಉಪ್ಪಾರ ಮತ್ತು ಮಾಲೆಗಾರರ ಪ್ರಸ್ತಾಪವೂ ಕೆಲವು ಕಡೆ ಬರುತ್ತದೆ. ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸಾಂಘಿಕ ಚಟುವಟಿಕೆಗಳಿದ್ದುವು. ಬೌದ್ಧವಿಹಾರಗಳು, ಚತುರ್ವೇದಿ ಮಂಗಲಗಳು. ಅಯ್ಯಾವೊಳೆಯ (ಐಹೊಳೆ) ಐನೂರ್ವರು ಎಂಬ ವ್ಯಾಪಾರ ಸಂಘ, ಮಹಾಜನ ಹಾಗೂ ನಕರಗಳು ಮತ್ತು ವೃತ್ತಿವರ್ಗಗಳ ಶ್ರೇಣಿಗಳು ಇದಕ್ಕೆ ನಿದರ್ಶನಗಳು, ಸಮಾಜ ಪಿತೃಪ್ರಧಾನವಾಗಿದ್ದು ಆಸ್ತಿಯ ಹಕ್ಕು ಗಂಡುಮಕ್ಕಳ ಮುಖಾಂತರ ಬರುತ್ತಿದ್ದರೂ ಸ್ತ್ರೀಯರಿಗೆ ಹೆಚ್ಚಿನ ಸ್ಥಾನಮಾನಗಳಿದ್ದುವು. ಚಾಳುಕ್ಯವಂಶದ ಹಲವಾರು ರಾಜಸ್ತ್ರೀಯರು ವಿಖ್ಯಾತರಾಗಿದ್ದಾರೆ. ಇಮ್ಮಡಿ ಪುಲಕೇಶಿಯ ಸೊಸೆ ವಿಜಯ ಭಟ್ಟಾರಿಕೆ ಚಾಳುಕ್ಯವಂಶಭೂಷಣಳೆಂದು ವರ್ಣಿತಳಾಗಿದ್ದು, ವಿದ್ಯೆ ಮತ್ತು ಕಲೆಗಳಲ್ಲಿ ಪ್ರವೀಣೆಯೆಂದೂ ಕನ್ನಡ ಸಂಸ್ಕೃತಗಳೆರೆಡರಲ್ಲೂ ಸರಸ್ವತಿಯೆಂದೂ ಪ್ರಶಂಸಿತಳಾಗಿದ್ದಾಳೆ. ಈಕೆ ತನ್ನನ್ನು ಕರ್ಣಾಟೀ ಎಂದು ಕರೆದುಕೊಂಡಿದ್ದಾಳೆ. ವಿನಯಾದಿತ್ಯನ ರಾಣಿ ವಿನಯವತಿ ರಾಜಧಾನಿಯ ದೇವಾಲಯಗಳಿಗೆ ಕರತೆರಿಗೆಗಳ ಮೂಲಕ ಉತ್ಪನ್ನ ಬರುವ ಏರ್ಪಾಡು ಮಾಡಿದ್ದಳು. ಇಮ್ಮಡಿ ವಿಕ್ರಮಾದಿತ್ಯನ ಇಬ್ಬರು ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು ಎರಡು ಶಿವಾಲಯಗಳ (ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ) ನಿರ್ಮಾಪಕಿಯರಾಗಿದ್ದು ಕೆಲಶಾಸನಗಳನ್ನೂ ಹೊರಡಿಸಿದ್ದಾರೆ. ಚಂದ್ರಾದಿತ್ಯನ ರಾಣಿ ವಿಜಯಭಟ್ಟಾರಿಕೆಯೇ ಕೌಮುದೀಮಹೋತ್ಸವವೆಂಬ ಸಂಸ್ಕೃತಕಾವ್ಯದ ಕರ್ತೃವಾದ ವಿಜ್ಜಿಕಾ ಎಂಬುದು ಕೆಲವರ ಅಭಿಪ್ರಾಯ. ಆಡಳಿತ, ಸಮಾಜ, ಸಾಹಿತ್ಯ ಮತ್ತು ಕಲಾರಂಗಗಳಲ್ಲಿ ಸ್ತ್ರೀಯರು ಪ್ರಮುಖರಾಗಿದ್ದಂತೆ ನೃತ್ಯಸಂಗೀತ ಕಲಾವಿದರಾದ ವೇಶ್ಯಾ ಸ್ತ್ರೀಯರೂ ಸಮಾಜದ ಪ್ರಮುಖ ಅಂಗವಾಗಿದ್ದರು. ವಿಜಯಾದಿತ್ಯ ದೊರೆಯ ಪ್ರಿಯವಲ್ಲಭೆಯಾಗಿದ್ದವಳು ವಿನಾ ಪೋಟಿ ಎಂಬ ವೇಶ್ಯೆ. ಗೋವಿಂದ ಪೊಡ್ಡಿಯ ಪುತ್ರಿ ಬದಿ ಪೊಡ್ಡಿ ದೇವಾಲಯವೊಂದರ ದೇವದಾಸಿ. ಇವರಿಬ್ಬರೂ ಅನೇಕ ದಾನಕಾರ್ಯಗಳನ್ನು ಮಾಡಿದ್ದರು. ಚಾಲಬ್ಬೆಯೆಂಬ ಪಣ್ಯಾಂಗನೆ ವಿಜಯೇಶ್ವರ ದೇವಾಲಯದ ಕಂಬಗಳನ್ನು ಮಾಡಿಸಿಕೊಟ್ಟಿದ್ದಳು. ಈ ನಿದರ್ಶನಗಳಿಂದ ವೇಶ್ಯೆಯರಿಗೆ ಸಮಾಜದಲ್ಲಿದ್ದ ಸ್ಥಾನಮಾನಗಳ ಪರಿಚಯ ದೊರಕುತ್ತದೆ.

ಆರ್ಥಿಕವಾಗಿ ಜನ ಉತ್ತಮ ಸ್ಥಿತಿಯಲ್ಲಿದ್ದರು. ಅನೇಕ ರೀತಿಯ ಹಣ್ಣು ಹಂಪಲುಗಳೂ ಅಕ್ಕಿ, ಗೋಧಿ ಮುಂತಾದವೂ ಮುಖ್ಯ ಆಹಾರ ಪದಾರ್ಥಗಳಾಗಿದ್ದು ಈರುಳ್ಳಿ ಬೆಳ್ಳುಳ್ಳಿಗಳು ವಜರ್ಯ್‌ವಾಗಿದ್ದುವು. ಹಾಲು, ತುಪ್ಪ, ಬೆಲ್ಲ, ಸಕ್ಕರೆಗಳು ಸಾಮಾನ್ಯ ಆಹಾರವಾಗಿದ್ದರೆ ಮೀನು ಮಾಂಸಗಳು ಮೃಷ್ಟಾನ್ನಗಳೆಂದು ಪರಿಗಣಿತವಾಗಿದ್ದುವು. ರಾಗಿಯೂ ಬಳಕೆಯಲ್ಲಿತ್ತು. ಕುಡಿತ ಮನುಷ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ ; ಯುದ್ಧದಾನೆಗಳಿಗೂ ಕುಡಿಸುತ್ತಿದ್ದರೆಂದು ಯುವಾನ್ ಚಾಂಗ್ ಹೇಳಿದ್ದಾನೆ. ಸುರೆಯಲ್ಲದೆ ಇನ್ನೂ ಹನ್ನೊಂದು ಬಗೆಯ ಪಾನೀಯಗಳು ಬಳಕೆಯಲ್ಲಿದ್ದುವು. ದ್ರಾಕ್ಷಿ ಕಬ್ಬುಗಳಿಂದ ತಯಾರಿಸಲಾದ ಪಾನೀಯಗಳಲ್ಲದೆ ಉಗ್ರವಾದ ಭಟ್ಟಿಸೆರೆಯೂ ಉಪಯೋಗದಲ್ಲಿತ್ತು.

ರಾಜಪುರುಷರು ಅಮೂಲ್ಯ ಉಡುಗೆಗಳನ್ನೂ ಅನರ್ಘ್ಯ ಆಭರಣಗಳನ್ನೂ ಉಪಯೋಗಿಸುತ್ತಿದ್ದರೆ ಬ್ರಾಹ್ಮಣರ ಉಡುಗೆಗಳು ಸರಳವಾಗಿರುತ್ತಿದ್ದುವೆಂದು ಯುವಾನ್ ಚಾಂಗ್ ಹೇಳುತ್ತಾನೆ. ಶುಭ್ರವರ್ಣದ ಬಟ್ಟೆಗಳು ಪ್ರಿಯವಾಗಿದ್ದುವು. ಗಂಡಸರು ಸೊಂಟಕ್ಕೆ ಸುತ್ತಿದ ತುಂಡುವಸ್ತ್ರವನ್ನು ಎಡಭುಜದ ಮೇಲೆ ಹಾಕಿಕೊಳ್ಳುತ್ತಿದ್ದರೆ ಹೆಂಗಸರು ಉದ್ದವಾದ ವಸ್ತ್ರವನ್ನು ಸುತ್ತಿಕೊಂಡು ಎರಡು ಭುಜಗಳನ್ನೂ ಮುಚ್ಚಿಕೊಳ್ಳುತ್ತಿದ್ದರು. ಬಡವರು, ಕೆಳದರ್ಜೆಯವರು ನಾರುಬಟ್ಟೆಯ ಒಂದು ತುಂಡನ್ನು ಮಾತ್ರ ಬಳಸುತ್ತಿದ್ದರು. ಮೇಲಿನ ಹೇಳಿಕೆಗಳನ್ನು ಸಮಕಾಲೀನ ಶಿಲ್ಪಗಳಿಂದಲೂ ಸಮರ್ಥಿಸಬಹುದು. ಈ ಶಿಲ್ಪಗಳಿಂದ ಹೆಣ್ಣುಗಂಡುಗಳ ವಿವಿಧ ಆಭರಣಗಳ ವಿವರ ಮತ್ತು ಕಲೆ ಕೂದಲನ್ನು ಅಲಂಕರಿಸುತ್ತಿದ್ದ ವಿಧಾನಗಳು ತಿಳಿದುಬರುತ್ತವೆ. ಕರ್ಣಕುಂಡಲ, ಕಂಠಹಾರ, ತೋಳಬಂದಿ, ಕಂಕಣ, ಒಡ್ಯಾಣ, ಉಂಗುರಗಳು ಶ್ರೀಮಂತರ ಆಭರಣಗಳು, ನಡುಪಟ್ಟಿಗಳು ವಿಶೇಷವಾಗಿ ಬಳಕೆಯಲ್ಲಿದ್ದುವು.

ಪಾಶ್ಚಾತ್ಯ ಪೌರಸ್ತ್ಯ ದೇಶಗಳೊಂದಿಗೂ ಭಾರತದ ಇತರ ಪ್ರದೇಶಗಳೊಂದಿಗೂ ಕರ್ನಾಟಕದ ವ್ಯಾಪಾರ ನಡೆಯುತ್ತಿತ್ತು. ಪಶ್ಚಿಮತೀರದ ಕಲ್ಯಾಣ, ಮಾಂಗರೂರ್ (ಮಂಗಳೂರು), ಮಲ್ಪೆಗಳ ಮುಖಾಂತರ ಸರಕುಗಳನ್ನು ಸಾಗಿಸುತ್ತಿದ್ದರು. ರೋಮನ್ ಸಾಮ್ರಾಜ್ಯ ಕಾಲದಲ್ಲಿ ಕರ್ನಾಟಕದೊಡನೆಯ ಸಂಪರ್ಕದ ಬಗ್ಗೆ ಪ್ರವಾಸಿಗಳ ಕಥನಗಳು ತಿಳಿಸುತ್ತವೆ. ಇಮ್ಮಡಿ ಪುಲಕೇಶಿ ಈ ಸಂಬಂಧವಾಗಿ ಪರ್ಷಿಯದೊಡನೆ ಸಂಪರ್ಕ ಬೆಳೆಸಿದುದಕ್ಕೆ ಅಜಂತದ ೧ನೆಯ ಗುಹೆಯ ವರ್ಣಚಿತ್ರವೂ, ಪರ್ಷಿಯದ ಇತಿಹಾಸಕಾರ ಟಬರಿಯ ಬರವಣಿಗೆಯೂ ಆಧಾರಗಳಾಗಿವೆ. ಆ ದೇಶದ ಚಕ್ರವರ್ತಿ ಮೂರನೆಯ ಖುಸ್ರು ರಾಯಭಾರಿಯನ್ನು ಕಳಿಸಿದುದಾಗಿ ಈ ಆಧಾರಗಳಿಂದ ತಿಳಿದುಬರುತ್ತದೆ. ವ್ಯಾಪಾರದ ಸೌಕರ್ಯಕ್ಕಾಗಿ ತೂಕ ಮತ್ತು ಅಳತೆಯ ಸಾಧನಗಳೂ ಬಳಕೆಯಲ್ಲಿದ್ದುವು. ಮಣ, ಸೇರು, ವೀಶ, ಭಾಂಡಪೇರು, ಕುಳ, ಸೊಂಟಿಕೆ, ಸವುಟು ಮುಂತಾದ ಮಾಪಕಗಳ ಉಲ್ಲೇಖ ದೊರಕುತ್ತದೆ. ಮತ್ತರ ಅಥವಾ ಮತ್ತಲ ಮತ್ತು ನಿವರ್ತನಗಳು ಭೂಮಿಯನ್ನು ಅಳೆಯುವ ಸಾಧನಗಳು. ಖಜ್ಜನ ವಾಗುಲ ಕಚ್ಛಕ್ಷೇತ್ರ, ಗಱ್ದೆ__(ಗದ್ದೆ), ನೆಲ್ಲುಗೆ ಮುಂತಾದವು ಭೂಮಿಯ ವಿಂಗಡಣೆಯನ್ನು ಸೂಚಿಸುವ ಪದಗಳು.

ಕನ್ನಡ, ಸಂಸ್ಕೃತ ಭಾಷೆಗಳು ಬಳಕೆಯಲ್ಲಿದ್ದುವು. ಈ ಎರಡು ಭಾಷೆಗಳ ಶಾಸನಗಳೂ ದೊರಕಿವೆ. ಎರಡಕ್ಕೂ ಲಿಪಿ ಮಾತ್ರ ಕನ್ನಡದ್ದೇ ಆಗಿದ್ದಂತೆ ತಿಳಿದು ಬರುತ್ತದೆ. ಸಂಸ್ಕೃತ ಸಾಹಿತ್ಯ ಈ ಕಾಲದಲ್ಲಿ ಬಹುಶಃ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಮಹಾಕೂಟ ಸ್ತಂಭಶಾಸನದಲ್ಲಿ ವರ್ಣಿಸಲಾಗಿರುವ ಕೀರ್ತಿವರ್ಮನ ದಿಗ್ವಿಜಯವನ್ನು ಕಾಳಿದಾಸಕೃತ ರಘುವಿನ ದಿಗ್ವಿಜಯಕ್ಕೆ ಸಮವೆಂದು ಹೇಳಬಹುದು. ಶಾಸನಕಾವ್ಯದ ರವಿಕೀರ್ತಿ ಯಾರಿಗೂ ಕಡಿಮೆಯಲ್ಲ. ಈ ಮೊದಲೇ ಹೇಳಿದಂತೆ ವಿಜ್ಜಿಕಾನಿರ್ಮಿತ ಕೌಮುದೀಮಹೋತ್ಸವಕಾವ್ಯ ಪ್ರಸಿದ್ಧಕೃತಿ. ಕಾಳಿದಾಸನನ್ನು ಬಿಟ್ಟರೆ ವಿಜ್ಜಿಕೆಯಂತೆ ವೈದರ್ಭೀ ಶೈಲಿಯಲ್ಲಿ ಬರೆಯಬಲ್ಲವರಿಲ್ಲವೆಂದು ರಾಜಶೇಖರ ಈ ಕವಯಿತ್ರಿಯನ್ನು ಶ್ಲಾಘಿಸಿದ್ದಾನೆ. ಅಕಳಂಕ ಕವಿವಿರಚಿತ ತತ್ತ್ವಾರ್ಥ ರಾಜವಾರ್ತಿಕವೆಂಬ ಮೇರುಕೃತಿ ಈ ಕಾಲದ್ದು. ಇವಲ್ಲದೆ ಅನೇಕ ಉದ್ಗ್ರಂಥಗಳೂ ಚಾಳುಕ್ಯರ ಆಶ್ರಯದಲ್ಲಿ ರಚಿತವಾಗಿದ್ದುವು.

ರಾಷ್ಟ್ರಕೂಟರು

ರಾಷ್ಟ್ರಕೂಟ ವಂಶದವರು ಮೊದಲಿಗೆ ಬಾದಾಮಿ ಚಳುಕ್ಯರ ಮಾಂಡಲಿಕರಾಗಿದ್ದರು. ಚಳುಕ್ಯ ೨ನೆಯ ವಿಕ್ರಮಾದಿತ್ಯ ಮತ್ತು ಕೀರ್ತಿವರ್ಮರ ಕಾಲದಲ್ಲಿ ಈ ವಂಶದ ದಂತಿದುರ್ಗ ಪ್ರಬಲನಾಗಿ ಚಾಳುಕ್ಯರಿಂದ ಸಾರ್ವಭೌಮಾಧಿಕಾರವನ್ನು ವಶಪಡಿಸಿಕೊಂಡ. ೧ನೆಯ ಕೃಷ್ಣ, ಧ್ರುವ, ೩ನೆಯ ಗೋವಿಂದ, ಅಮೋಘವರ್ಷ ನೃಪತುಂಗ, ೨ನೆಯ ಕೃಷ್ಣ, ೩ನೆಯ ಕೃಷ್ಣ ಮುಂತಾದ ಪ್ರಮುಖ ರಾಷ್ಟ್ರಕೂಟ ದೊರೆಗಳ ಕಾಲದಲ್ಲಿ ಕರ್ನಾಟಕ ರಾಜ್ಯವೈಭವ ಅತ್ಯುಚ್ಚ ದೆಶೆ ತಲುಪಿತು. ಮಾನ್ಯಖೇಟ ಅಥವಾ ಈಗಿನ ಮಳಖೇಡ (ಗುಲ್ಬರ್ಗಾ ಜಿಲ್ಲೆ) ಇವರ ಪ್ರಧಾನ ರಾಜಧಾನಿಯಾಗಿತ್ತು. ೧ನೆಯ ಕೃಷ್ಣನ ಕಾಲದಲ್ಲಿ ಚಾಳುಕ್ಯರು ನಾಮಾವಶೇಷರಾದರು. ಆತ ಜೊತೆಗೆ ಕೊಂಕಣ, ಗಂಗ ಮತ್ತು ವೆಂಗಿ ರಾಜ್ಯಗಳನ್ನು ಗೆದ್ದು ತನ್ನ ಅಧಿಕಾರವನ್ನು ಬಲಗೊಳಿಸಿದ. ಉತ್ತರಭಾರತದಲ್ಲಿ ಅವ್ಯವಸ್ಥಿತವಾಗಿದ್ದ ಕನೌಜ್ ರಾಜ್ಯದ ಮೇಲೆ ಕಣ್ಣುಹಾಕಿದ್ದ ಮಾಳ್ವದ ಪ್ರತೀಹಾರ ವತ್ಸರಾಜ ಮತ್ತು ಬಂಗಾಲದ ಧರ್ಮಪಾಲನನ್ನು ಧ್ರುವ ಸೋಲಿಸಿ ಕನೌಜಿನಿಂದ ಕಾಶಿಯವರೆಗೂ ಕರ್ನಾಟಕದ ಪ್ರಭಾವವನ್ನು ಹಬ್ಬಿಸಿದ. ದಕ್ಷಿಣದಲ್ಲಿ ಗಂಗ ಮತ್ತು ಪಲ್ಲವರನ್ನೂ ಪರಾಜಯಗೊಳಿಸಿದ. ಮೂರನೆಯ ಗೋವಿಂದ ಉತ್ತರಭಾರತದಲ್ಲಿ ಪುನಃ ತಲೆದೋರಿದ್ದ ಪ್ರತೀಹಾರ-ಬಂಗಾಳಗಳ ವಿವಾದದಲ್ಲಿ ಪ್ರವೇಶಿಸಿ ಮೊದಲು ಪ್ರತೀಹಾರ ನಾಗಭಟನನ್ನು ಸೋಲಿಸಿ ಕನೌಜನ್ನು ವಶಪಡಿಸಿಕೊಂಡ. ಬಂಗಾಳದ ಧರ್ಮಪಾಲ ತಾನಾಗಿಯೇ ಶರಣಾಗತನಾದ. ವೆಂಗಿ ರಾಜ್ಯದಲ್ಲಿ ತನ್ನ ಹಸ್ತಕನಿಗೆ ರಾಜ್ಯ ಕೊಡಿಸಿ ಅನಂತರ ದಕ್ಷಿಣದಲ್ಲಿ ಗಂಗ, ಪಲ್ಲವ, ಪಾಂಡ್ಯ, ಕೇರಳಗಳ ಒಕ್ಕೂಟವನ್ನು ಎದುರಿಸಿ ಸದೆಬಡಿದು, ಕಂಚಿಯನ್ನು ವಶಪಡಿಸಿಕೊಂಡ. ರಾಜ್ಯಾಡಳಿತವೂ ಸುವ್ಯವಸ್ಥಿತವಾಯಿತು. ಮೂರನೆಯ ಕೃಷ್ಣನ ಕಾಲದಲ್ಲಿ ಚೋಳರು ಪ್ರಬಲರಾಗುತ್ತಿದ್ದರು. ಅವರ ಉಪಟಳ ತಪ್ಪಿಸಲು, ಆತ ಆ ವಂಶದ ಪರಾಂತಕನನ್ನು ತಕ್ಕೋಲದಲ್ಲಿ ಸೋಲಿಸಿ ಯುವರಾಜ ರಾಜಾದಿತ್ಯನನ್ನು ಕೊಂದುಹಾಕಿದ. ಕಂಚಿಯೂ ರಾಜಧಾನಿಯಾದ ತಂಜಾವೂರೂ ರಾಷ್ಟ್ರಕೂಟರ ವಶವಾಯಿತು. ಆತ ರಾಮೇಶ್ವರದವರೆಗೂ ಹೋಗಿ ಅಲ್ಲಿ ತನ್ನ ಜಯಸ್ತಂಭ ನೆಡಿಸಿದ. ಈ ದಂಡಯಾತ್ರೆಯಲ್ಲಿ ಅಮೋಘ ಸೇವೆ ಸಲ್ಲಿಸಿದ ಗಂಗರಸ ಭೂತುಗನಿಗೆ ಬನವಾಸಿ ಮುಂತಾದ ಪ್ರಾಂತ್ಯಗಳನ್ನು ಕೊಟ್ಟ. ಈ ವಿಜಯಗಳಿಂದ ಚೋಳರ ಕ್ಲೈಬ್ಯ ನೂರು ವರ್ಷಗಳವರೆಗೆ ಮುಂದುವರಿಯಿತು. ಮೂರನೆಯ ಕೃಷ್ಣ ಉತ್ತರ ಭಾರತದಲ್ಲೂ ಕೆಲವು ವಿಜಯಗಳನ್ನು ಗಳಿಸಿದ. ಈ ರೀತಿಯಾಗಿ ದಕ್ಷಿಣದಲ್ಲಿ ಚೋಳರನ್ನೂ ಉತ್ತರದ ಅನೇಕ ರಾಜರನ್ನೂ ಸೋಲಿಸಿ ಕನೌಜಿನಿಂದ ಕನ್ಯಾಕುಮಾರಿಯವರೆಗೂ ಗುಜರಾತಿನಿಂದ ಬಂಗಾಳದವರೆಗೂ ರಾಷ್ಟ್ರಕೂಟರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ೩ನೆಯ ಕೃಷ್ಣನ (೯೩೯-೯೬೮) ಕಾಲದಲ್ಲಿ ಪರಮಾವಧಿ ತಲಪಿದ್ದ ಇವರ ರಾಜಕೀಯ ಪ್ರಭಾವ ಅನಂತರ ಇಳಿಮುಖವಾಯಿತು. ಗಂಗವಂಶದ ಮಾರಸಿಂಹನ ಅಮಿತ ಪ್ರಯತ್ನವೂ ವಿಫಲವಾಗಿ ಕಲ್ಯಾಣ ಚಾಳುಕ್ಯ ಮನೆತನದ ಇಮ್ಮಡಿ ತೈಲಪನಿಂದ ರಾಷ್ಟ್ರಕೂಟ ಮನೆತನ ೯೭೩ರಲ್ಲಿ ಕೊನೆಗೊಂಡಿತು.

ರಾಷ್ಟ್ರಕೂಟರು ಕದಂಬ, ಚಳುಕ್ಯರಂತೆ ಕರ್ನಾಟಕದವರು. ಅವರು ವಿದರ್ಭ ಪ್ರದೇಶದಲ್ಲಿ ಮೊದಲಿಗೆ ಇದ್ದುದರಿಂದ ಮತ್ತು ಆ ಪ್ರದೇಶ ಈಗ ಮಹಾರಾಷ್ಟ್ರಕ್ಕೆ ಸೇರಿರುವುದರಿಂದ ಅವರನ್ನು ಮರಾಠರ ಮೂಲಕ್ಕೆ ನಿರ್ದೇಶಿಸಲಾಗದು. ಆ ರಾಜರ ಹೆಸರುಗಳು, ಅವರ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳಿಗೆ ದೊರಕಿದ ಪ್ರೋತ್ಸಾಹ, ಆ ಕಾಲದ ಶಾಸನಗಳ ಭಾಷೆ ಮತ್ತು ಲಿಪಿ- ಈ ಆಧಾರಗಳಿಂದ ಅವರ ಕನ್ನಡ ಮೂಲ ಸಂದೇಹಾತೀತವಾಗಿದೆ. ವಿಷ್ಣುವಾಹನವಾದ ಗರುಡ ಅವರ ಲಾಂಛನ; ಅವರ ತಾಮ್ರ ಶಾಸನಗಳ ಮುದ್ರೆಯಲ್ಲೂ ಇದು ಕಾಣುತ್ತದೆ. ಈ ದೊರೆಗಳು ವಲ್ಲಭ, ಶ್ರೀಪೃಥ್ವೀವಲ್ಲಭ ಮುಂತಾದ ಚಾಳುಕ್ಯ ಬಿರುದುಗಳನ್ನು ಧರಿಸಲು ಚಾಳುಕ್ಯರಿಂದ ಅಧಿಕಾರ ಪಡೆದು, ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದದ್ದು ಸ್ಪಷ್ಟವಾಗಿದೆ. ಬಹುಶಃ ಲಟ್ಟಲೂರು (ಈಗಿನ ಹೈದರಾಬಾದ್ ಬಳಿಯ ಲಾಟೂರು) ಇವರ ಮೂಲಸ್ಥಾನವೂ ಮೊದಲ ರಾಜಧಾನಿಯೂ ಆಗಿತ್ತು. ಅನಂತರ ಅಚಲಾಪುರಕ್ಕೆ (ಈಗಿನ ಎಲಿಚ್ಪುರ್, ವಿದರ್ಭ ಪ್ರದೇಶ) ಇವರು ಸ್ಥಾನಾಂತರ ಹೊಂದಿದರು. ದಂತಿದುರ್ಗ ಎಲ್ಲೋರವನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡ. ನೃಪತುಂಗನ ಕಾಲದಲ್ಲಿ ಅನಂತರ ಮಾನ್ಯಖೇಟ (ಈಗಿನ ಮಾಲ್ಕೇಡ್) ರಾಷ್ಟ್ರಕೂಟರ ರಾಜಧಾನಿಯಾಯಿತು.

ಅನೇಕ ರೀತಿಗಳಲ್ಲಿ ರಾಷ್ಟ್ರಕೂಟರ ಕಾಲ ಬಹಳ ಮುಖ್ಯವಾದದ್ದು. ಬಾದಾಮಿ ಚಳುಕ್ಯ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಇವರು ತಮ್ಮ ಸಾಮ್ರಾಜ್ಯದ ಗಡಿಗಳನ್ನು ಬಹಳವಾಗಿ ವಿಸ್ತರಿಸಿದರು. ನರ್ಮದೆಯಿಂದ ಕಾವೇರಿಯವರೆಗಿನ ಭೂಭಾಗ ಇವರ ನೇರ ಆಳ್ವಿಕೆಗೆ ಸೇರಿತ್ತು. ಅಲ್ಲದೆ ದಕ್ಷಿಣ ಗುಜರಾತ್, ಮಾಳ್ವ, ಆಂಧ್ರದ ಬಹುಭಾಗ, ಕಂಚಿ ಮತ್ತು ತಂಜಾವೂರು ಪ್ರದೇಶಗಳ ಮೇಲೆ ಅನೇಕ ಬಾರಿ ತಮ್ಮ ಅಧಿಕಾರ ಸ್ಥಾಪಿಸಿದರು. ಮತ್ತೆ ಈ ವಂಶದ ಧೀರೋದಾತ್ತ ಸಮ್ರಾಟರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಸೌರಾಷ್ಟ್ರದಿಂದ ಕಾಮರೂಪದವರೆಗೂ ತಮ್ಮ ಅಸಮಾನವಾದ ಸೈನ್ಯಗಳೊಂದಿಗೆ ಯುದ್ಧವಿಜಯಿಗಳಾಗಿ ಹಲವಾರು ಬಾರಿ ಸಂಚರಿಸಿದರು. ಪಶ್ಚಿಮ-ಮಧ್ಯಭಾರತಗಳಲ್ಲಿ ಘೂರ್ಜರ ಪ್ರತೀಹಾರರೂ ಪೂರ್ವದಲ್ಲಿ ಪಾಲರೂ ದಕ್ಷಿಣದಲ್ಲಿ ಚೋಳರೂ ಆ ಕಾಲದ ಪ್ರಮುಖ ರಾಜವಂಶಗಳು. ಅವರೆಲ್ಲರನ್ನೂ ಹಲವಾರು ಬಾರಿ ಹತ್ತಿಕ್ಕಿದ ಸಾಹಸ ರಾಷ್ಟ್ರಕೂಟರಿಗೆ ಸೇರಿದ್ದು. ಈ ಮಹತ್ತರ ಸಾಹಸಗಳಿಗೆ ಸುಶಿಕ್ಷಿತವಾದ ಕರ್ನಾಟಕ ಬಲ ಮುಖ್ಯ ಕಾರಣವಾಗಿತ್ತು. ರಾಜಕೀಯ ಮತ್ತು ಸೇನಾಬಲಗಳ ಇತಿಹಾಸದಲ್ಲಿ ಸಮಕಾಲೀನ ಭಾರತದ ಅಪ್ರತಿಮ ರಾಷ್ಟ್ರವಾಗಿತ್ತು. ಅರಬ್ಬೀ ಇತಿಹಾಸಕಾರ ಸುಲೇಮಾನ ಆ ಕಾಲದ ವಿಶ್ವದ ನಾಲ್ಕು ಬೃಹದ್ರಾಷ್ಟ್ರಗಳಲ್ಲಿ ಇದೂ ಒಂದೆಂದು ಹೇಳಿರುವುದೇ ಇವರ ಮಹತ್ತ್ವಕ್ಕೆ ಸಾಕ್ಷಿ. ಕರ್ಣಾಟಕರು ಯುದ್ಧವಿದ್ಯೆಯಲ್ಲಿ ಪರಿಣತರೆಂದೂ, ಸೇನಾನಿರ್ವಹಣದಲ್ಲಿ ಚತುರರೆಂದು ಆ ಕಾಲದ ಲೇಖಕನಾದ ರಾಜಶೇಖರ ಹೊಗಳಿದ್ದಾನೆ. ರಾಜರು ಸ್ವತಃ ಯುದ್ಧಗಳಲ್ಲಿ ಭಾಗವಹಿಸಿ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದುದಲ್ಲದೆ ಶೌರ್ಯ ಧೈರ್ಯಗಳನ್ನು ಪ್ರದರ್ಶಿಸಿದ ಸಾಮಂತರಿಗೂ ದಳಪತಿಗಳಿಗೂ ಸೂಕ್ತ ಬಹುಮಾನಗಳನ್ನೂ ಐಶ್ವರ್ಯವನ್ನೂ ನೀಡುತ್ತಿದ್ದರು. ಇವರು ನಿರಂಕುಶಾಧಿಕಾರಿಗಳಾದಾಗ್ಯೂ ಅನೇಕ ಬಾರಿ ರಾಜಬಂಧುಗಳ ಮಂತ್ರಿ ಅಮಾತ್ಯರ ಸಲಹೆಗನುಗುಣವಾಗಿ ಯುದ್ಧ, ಆಡಳಿತಗಳನ್ನು ನಿರ್ವಹಿಸುತ್ತಿದ್ದರು. ಅವಿರತ ಯುದ್ಧಭಾಗಿಗಳಾಗಿದ್ದರೂ ಸಾಹಿತ್ಯ ಕಲಾಪ್ರೋತ್ಸಾಹರಾಗಿದ್ದು ದೇಶದ ಸರ್ವತೋಮುಖ ಪ್ರಗತಿಗೆ ಕಾರಣರಾದರು. ಸಾಮಾಜಿಕ ಜೀವನದಲ್ಲಿ ಬಾದಾಮಿ ಚಳುಕ್ಯರ ಕಾಲದಲ್ಲಿದ್ದ ಆಚಾರವ್ಯವಹಾರಗಳೇ ಬಹುವಾಗಿ ಮುಂದುವರಿದುವು. ಚಳುಕ್ಯರ ಸಾಮಂತರಾಗಿದ್ದು, ಅನಂತರ ಅವರ ಉತ್ತರಾಧಿಕಾರಿಗಳಾದ ರಾಷ್ಟ್ರಕೂಟರ ಕಾಲದಲ್ಲಿ ಯಾವುದೇ ರೀತಿಯ ಸಾಮಾಜಿಕ ಏರುಪೇರುಗಳಾದಂತೆ ಕಾಣುವುದಿಲ್ಲ. ಆದರೆ ಮತೀಯ, ಧಾರ್ಮಿಕರಂಗಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳೇರ್ಪಟ್ಟುವು. ಮತೀಯ ಭಾವನೆಗಳಲ್ಲಿ ವಿಶಾಲದೃಷ್ಟಿಯಿಂದ ಕೂಡಿದ್ದ ಈ ಸಮ್ರಾಟರು ಸರ್ವಧರ್ಮಸಮತೆಯನ್ನು ಆದರ್ಶವಾಗಿಟ್ಟುಕೊಂಡಿದ್ದರು. ಆದರೆ ಚಳುಕ್ಯರಾಶ್ರಯದಲ್ಲಿ ರೂಢಿಯಲ್ಲಿದ್ದ ಯಜ್ಞಯಾಗಾದಿಗಳು ಈ ಕಾಲದಲ್ಲಿ ಮುಂದುವರಿದುದಕ್ಕೆ ಸಾಕ್ಷ್ಯಗಳು ದೊರಕುವುದಿಲ್ಲ. ಅಹಿಂಸೆಯೇ ಮುಖ್ಯತತ್ತ್ವವಾಗುಳ್ಳ ಜೈನಧರ್ಮದ ಪ್ರಭಾವ ಇದಕ್ಕೆ ಕಾರಣವಾಗಿರಬಹುದು. ರಾಷ್ಟ್ರಕೂಟ ದೊರೆಗಳು ತಮ್ಮ ವೈಯಕ್ತಿಕ ನಂಬಿಕೆಗನುಸಾರವಾಗಿ ವೈಷ್ಣವ ಅಥವಾ ಶೈವಧರ್ಮದ ಅನುಯಾಯಿಗಳಾಗಿರುತ್ತಿದ್ದು ವೈಷ್ಣವಸಂಕೇತವಾದ ಗರುಡ ಮತ್ತು ಶೈವಸಂಕೇತವಾದ ಮಹಾಯೋಗಿ ಶಿವನ ಮೂರ್ತಿಗಳನ್ನು ತಮ್ಮ ಲಾಂಛನವಾಗಿ ಉಪಯೋಗಿಸುತ್ತಿದ್ದರು. ಇವರ ಶಾಸನಗಳ ಮಂಗಳಶ್ಲೋಕಗಳಲ್ಲಿ ವಿಷ್ಣುಶಿವರಿಬ್ಬರನ್ನೂ ಸ್ತುತಿಸುತ್ತಾರೆ. ಈ ವಂಶದ ಪ್ರಸಿದ್ಧ ದೊರೆಯಾದ ಅಮೋಘವರ್ಷ ನೃಪತುಂಗ ಜೈನದೀಕ್ಷೆ ವಹಿಸಿ ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದ; ಹಲವಾರು ಸಾಮಂತ ದಳಪತಿಗಳು ಜೈನಧರ್ಮೀಯರಾಗಿದ್ದರು. ಇವರ ಪೈಕಿ ಬಂಕೇಶ ಮತ್ತು ಲೋಕಾದಿತ್ಯರು ಪ್ರಮುಖರು. ವಿದ್ಯಾನಂದ, ಜಿನಸೇನ, ಗುಣಚಂದ್ರ, ಪಂಪ ಮುಂತಾದ ಅನೇಕ ಜೈನಯತಿಗಳು ಜೈನಶಾಸ್ತ್ರವೇತ್ತರೂ ವಿದ್ಯಾಪಕ್ಷಪಾತಿಗಳೂ ಸಾಹಿತಿಗಳೂ ಆಗಿದ್ದು ಜೈನಧರ್ಮದ ಪ್ರಾಬಲ್ಯಕ್ಕೆ ಕಾರಣರಾಗಿದ್ದರು. ಬೌದ್ಧಧರ್ಮ ಕೆಲವು ಕೇಂದ್ರಗಳಲ್ಲಿ (ಕನ್ಹೇರಿ, ಕಂಪಿಲ, ಡಂಬಳ) ಅಸ್ತಿತ್ವದಲ್ಲಿದ್ದು ಅದಕ್ಕೂ ರಾಜಾಶ್ರಯವಿದ್ದರೂ ಅದು ಅಷ್ಟು ಪ್ರವರ್ಧಮಾನವಾಗಿರಲಿಲ್ಲ. ಸಾಮಾನ್ಯಜನ ತಮ್ಮ ಸಹಜಪ್ರವೃತ್ತಿಗನುಗುಣವಾಗಿ ಯಾವುದಾದರೊಂದು ಧರ್ಮವನ್ನು ಅಥವಾ ಎಲ್ಲ ಧರ್ಮಗಳನ್ನೂ ಅನುಸರಿಸುತ್ತಿದ್ದರು. ನೃಪತುಂಗ ಜೈನಧರ್ಮೀಯನಾಗಿದ್ದೂ ಮಹಾಲಕ್ಷ್ಮಿಯ ಭಕ್ತನಾಗಿದ್ದ. ಒಮ್ಮೆ ಕ್ಷಾಮದ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ತನ್ನ ಕೈಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಪ್ರತೀತಿ. ಈ ರೀತಿ ವಿವಿಧ ಧರ್ಮಗಳ ಸಮಾಗಮದ ಫಲವಾಗಿ ಪರಸ್ಪರ ಗೌರವನಿಷ್ಠೆ ಸಾಮರಸ್ಯಗಳು ಬೆಳೆಯಲು ಸಾಧ್ಯವಾಯಿತು. ದೇವಾಲಯಗಳು ಸಾಮಾಜಿಕ ಜೀವನದ ಕೇಂದ್ರಗಳಾಗಿ, ಭಕ್ತಜನರ ದಾನದತ್ತಿಗಳನ್ನು ಪಡೆದು ಸಂಪದ್ಯುಕ್ತವಾಗಿದ್ದುವು. ದೇವಾಲಯಗಳ ಪ್ರಾಮುಖ್ಯ ಮತ್ತು ಜನರ ಧಾರ್ಮಿಕ ಪ್ರವೃತ್ತಿಗೆ ಉತ್ತಮ ನಿದರ್ಶನವೆಂದರೆ ಎಲ್ಲೋರ (ನೋಡಿ) ಕೈಲಾಸದೇವಾಲಯ. ಇದು ವಿಶ್ವದ ಅದ್ಭುತಗಳಲ್ಲೊಂದು. ಇದನ್ನು ನಿರ್ಮಿಸಲು ಆಶ್ರಯ ಕೊಟ್ಟ ದೊರೆಗೆ ಗೌರವ ತರುವಂತಿದೆ, ಯಾವ ದೇಶವೂ ಹೆಮ್ಮೆಪಟ್ಟುಕೊಳ್ಳಬಹುದಾದ ಸಾಧನೆಯಿದು- ಎಂದು ವಿನ್ಸೆಂಟ್ ಎ. ಸ್ಮಿತ್ ಈ ದೇವಾಲಯವನ್ನು ಹೊಗಳಿದ್ದಾನೆ.

ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಗಳಿಗೆ ಅದೊಂದು ಮಹತ್ತ್ವದ ಯುಗ. ಆ ಕಾಲದಲ್ಲಿದ್ದ ದುರ್ಗಸಿಂಹ ಕಾತಂತ್ರಸೂತ್ರಗಳ ಮೇಲೆ ತನ್ನ ವೃತ್ತಿಯನ್ನೂ ಅದರ ಮೇಲೊಂದು ವ್ಯಾಖ್ಯಾನವನ್ನೂ ರಚಿಸಿದ. ಶಾಕಟಾಯನ ವ್ಯಾಕರಣ ಪ್ರಸ್ಥಾನವೂ ಆ ಕಾಲಕ್ಕೆ ಸೇರಿದ್ದು, ಆತ ಶಬ್ದಾನುಶಾಸನವನ್ನೂ ಅದರ ಮೇಲಣ ವೃತ್ತಿಯನ್ನೂ ರಚಿಸಿ ಅದನ್ನು ಅಮೋಘವೃತ್ತಿಯೆಂದು ಕರೆದ. ಈ ಕಾಲದ ತಾಮ್ರ ಮತ್ತು ಶಿಲಾಶಾಸನಗಳು ಕೂಡ ಕಾವ್ಯಮಯವಾಗಿವೆ. ಇದುವರೆಗೆ ದೊರೆತಿರುವ ಚಂಪು ಕಾವ್ಯಗಳಲ್ಲಿ ಮೊದಲನೆಯದೆಂದು ಕಾಲನಿರ್ದಿಷ್ಟ ಮಾಡಬಹುದಾದ ನಳಚಂಪು ಕಾವ್ಯದ ನಿರ್ಮಾತೃವಾದ ತ್ರಿವಿಕ್ರಮನೇ ಬೇಗುಮ್ರಾ ತಾಮ್ರಶಾಸನವನ್ನೂ ಮದಾಲಸ ಚಂಪುವನ್ನೂ ರಚಿಸಿದ. ನೃಪತುಂಗ ಸಂಸ್ಕೃತದಲ್ಲಿ ಪ್ರಶ್ನೋತ್ತರಮಾಲಿಕ ಎಂಬ ಮಧುರ ವೈರಾಗ್ಯಗೀತೆಯ ಕರ್ತೃ. ಇವನ ಆಶ್ರಿತನಾಗಿದ್ದ ಮಹಾವೀರಾಚಾರ್ಯನ ಕೃತಿ ಗಣಿತಸಾರಸಂಗ್ರಹ. ಹಲಾಯುಧಕೋಳವೆಂಬ ನಿಘಂಟು, ಕವಿರಹಸ್ಯ ಮತ್ತು ಮೃತಸಂಜೀವಿನಿಗಳ ಲೇಖಕನಾದ ಹಲಾಯುಧ ೩ನೆಯ ಕೃಷ್ಣ ಸಮ್ರಾಟನ ಆಶ್ರಿತ. ಅದ್ವೈತಮತಸ್ಥಾಪಕರಾದ ಶಂಕರಾಚಾರ್ಯರೂ ಅವರ ಮುಖ್ಯ ಶಿಷ್ಯ ಸುರೇಶ್ವರಾಚಾರ್ಯರೂ ಈ ಕಾಲದವರಾಗಿದ್ದರು. ಇವರಿಬ್ಬರ ಅನೇಕ ಕೃತಿಗಳು ವಿದ್ವತ್ಪೂರ್ಣವಾಗಿಯೂ ಭಾರತೀಯ ದರ್ಶನದ ಅಮೂಲ್ಯ ಕೊಡುಗೆಗಳಾಗಿಯೂ ಇವೆ. ರಾಷ್ಟ್ರಕೂಟರ ಆಶ್ರಿತರಾದ ವೇಮುಲವಾಡ ಚಾಳುಕ್ಯರಾಜರ ಆಶ್ರಿತನಾದ ಜೈನ ಸೋಮದೇವಸೂರಿ, ಯಶಸ್ತಿಲಕವೆಂಬ ವಿಶ್ವಕೋಶಸದೃಶವಾದ ನೀತಿವಾಕ್ಯಾಮೃತವನ್ನೂ ರಚಿಸಿದ್ದಾನೆ. ವೀರಸೇನ ಜಿನಸೇನರ ಧವಳಾ ಮತ್ತು ಜಯಧವಳಾ ಎಂಬ ಬೃಹತ್ ಭಾಷ್ಯಾಗಳೂ ಆ ಕಾಲದವು. ಜಿನಸೇನ ಪ್ರಾರಂಭಿಸಿದ ಭರತ ಬಾಹುಬಲಿಗಳ ಚರಿತ್ರೆ ಆದಿಪುರಾಣವನ್ನು ಗುಣಭದ್ರ ತನ್ನ ಉತ್ತರ ಪುರಾಣದಲ್ಲಿ ಪೂರ್ಣಗೊಳಿಸಿದ. ಆದಿಪುರಾಣ ಕನ್ನಡ ಚಂಪುಕಾವ್ಯಗಳಿಗೆ ಪ್ರಚೋದನೆ ನೀಡಿದ ಗ್ರಂಥವೆಂದು ಪರಿಗಣಿತವಾಗಿದೆ. ಜಿನಸೇನನ ಮತ್ತೊಂದು ಕೃತಿ ಪಾಶಾರ್ವ್‌ಭ್ಯುದಯ (ಸಮಸ್ಯಾಪುರಣವೆಂಬ ಕಾವ್ಯತಂತ್ರದಲ್ಲಿ ಬರೆಯಲಾದ ಈ ಕೃತಿಯಲ್ಲಿ ಕಾಳಿದಾಸನ ಮೇಘದೂತದ ಪ್ರತಿ ಪಾದಕ್ಕೂ ಕವಿ ತನ್ನ ಮೂರು ಪಾದಗಳನ್ನು ಸೇರಿಸಿ ಪಾಶರ್ವ್‌ನಾಥನ ವರ್ಣನೆ ಬರುವಂತೆ ನಿರ್ಮಿಸಿದ್ದಾನೆ.) ಅಸಗನ ವರ್ಧಮಾನ ಪುರಾಣ ಈ ಕಾಲದ ಕೃತಿ. ಈತ ಕನ್ನಡದಲ್ಲೂ ಹೆಸರಾಂತ ಕವಿ. ವಿದ್ಯಾನಂದನೆಂಬ ಜೈನಯತಿ ಸಮಂತಭಧ್ರನ ಆಪ್ತಮೀಮಾಂಸಾ ಗ್ರಂಥದ ಮೇಲೆ ಅಷ್ಟಸಾಹಸ್ತ್ರೀ ಎಂದು ಪ್ರೌಢ ವ್ಯಾಖ್ಯಾನವನ್ನೂ ಆಪ್ತಪರೀಕ್ಷಾ ಎಂಬ ಕೃತಿಯನ್ನೂ ರಚಿಸಿದ್ದಾನೆ.

ರಾಷ್ಟ್ರಕೂಟರದು ಕನ್ನಡ ಸಾಹಿತ್ಯದ ಪರ್ವಕಾಲ. ಇದಕ್ಕೂ ಮೊದಲೇ ಕನ್ನಡ ನಾಡನುಡಿಯಾಗಿತ್ತು. ೫ನೆಯ ಶತಮಾನದಿಂದಲೇ ಶಾಸನ ಸಾಹಿತ್ಯವಾಗಿ ಕನ್ನಡ ಬಳಕೆಯಲ್ಲಿತ್ತು. ಆದರೆ ರಾಷ್ಟ್ರಕೂಟರ ಕಾಲಕ್ಕೆ ಮುಂಚಿನ ಯಾವುದೇ ಕನ್ನಡ ಕೃತಿಯೂ ಈವರೆಗೆ ದೊರೆತಿಲ್ಲ. ಆದರೂ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿತ್ತೆಂಬುದಕ್ಕೆ ಅನೇಕ ಆಧಾರಗಳಿವೆ. ನೃಪತುಂಗ ಕವಿರಾಜಮಾರ್ಗದಲ್ಲಿ ಪ್ರಸ್ತಾಪಿಸಿರುವ ಕವಿಗಳಲ್ಲಿ ಕೆಲವರಾದರೂ ರಾಷ್ಟ್ರಕೂಟರ ಕಾಲಕ್ಕೂ ಹಿಂದಿನವರು. ಚಾಳುಕ್ಯಕುಲತಿಕೆ ವಿಜ್ಜಿಕೆ ಅಥವಾ ವಿಜಯ ಭಟ್ಟಾರಿಕೆ ಕನ್ನಡ ಸರಸ್ವತಿಯೆಂದು ಹೆಸರಾದವಳು. ಕನ್ನಡ ಸಾಹಿತ್ಯದ ಅಗ್ರಮಾನ್ಯರಾದ ಪಂಪ, ಪೊನ್ನ, ಅಸಗ, ಚಾವುಂಡರಾಯರಂಥ ಶ್ರೇಷ್ಠ ಸಾಹಿತಿಗಳದೂ ವಡ್ಡಾರಾಧನೆಯಂಥ ಪ್ರೌಢಗದ್ಯದ ವಿಶಿಷ್ಟ ಕಥಾ ಸಾಹಿತ್ಯದ್ದೂ ರಾಷ್ಟ್ರಕೂಟರ ಕಾಲವೆಂಬುದರಿಂದ ಆ ಯುಗ ಎಷ್ಟೊಂದು ಮಹತ್ತ್ವದ್ದೆಂಬುದರ ಅರಿವುಂಟಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಈವರೆಗೆ ದೊರೆಕಿರುವುದರಲ್ಲಿ ಅತ್ಯಂತ ಪ್ರಾಚೀನವಾದ ಕವಿರಾಜಮಾರ್ಗದ ಕರ್ತೃ ರಾಷ್ಟ್ರಕೂಟ ಚಕ್ರವರ್ತಿಯಾದ ನೃಪತುಂಗ ಒಂದನೆಯ ಅಮೋಘವರ್ಷನೆಂದು ಹಲವು ವಿದ್ವಾಂಸರು ತರ್ಕಿಸಿದ್ದಾರೆ. ಅಥವಾ ಕವೀಶ್ವರ ಇದರ ಕರ್ತೃವಾಗಿದ್ದರೆ, ಅದಕ್ಕೆ ನೃಪತುಂಗನ ಅಭಿಮತವಿದೆ. ಕನ್ನಡಿಗರ ಜಾಣ್ಮೆಯ ಬಗೆಗೆ ಇಲ್ಲಿರುವ, ಪದನದು ನುಡಿಯಲುಂ | ನುಡಿದುದನದಾರಯಲು ಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ || ಎಂಬ ಪದ್ಯ ಉತ್ತಮನಿದರ್ಶನ. ಅಸಗ, ಗುಣನಂದಿ ಮತ್ತು ಗುಣವರ್ಮರು ಈ ಕಾಲದವರಾದರೂ ಅವರ ಕೃತಿಗಳು ದೊರಕಿಲ್ಲ. ಅನಂತರ ಕಾಲದ ಕವಿಗಳು ಇವರ ಕೃತಿಗಳಿಂದ ಉದ್ಧರಿಸುವ ಭಾಗಗಳು ಮಾತ್ರ ನಮಗೆ ಲಭ್ಯ. ವೇಮುಲವಾಡ ಚಾಳುಕ್ಯ ಅರಿಕೇಸರಿಯ ಬಾಲ್ಯದ ಗೆಳೆಯನೂ ಅನಂತರ ಆತನ ಮಂತ್ರಿ ಸೇನಾನಿಯೂ ಆಗಿದ್ದ ಪಂಪ ಕವಿಸಾರ್ವಭೌಮ, ಕನ್ನಡದ ಆದಿಕವಿ. ಈತ ಜೈನ. ಆತ್ಮೋದ್ಧಾರಕ್ಕಾಗಿ ಆದಿಪುರಾಣವೆಂಬ ಧರ್ಮಗ್ರಂಥವನ್ನೂ ಲೋಕವ್ಯವಹಾರ ಮತ್ತು ಆಶ್ರಯದಾತನ ಪ್ರೀತಿಗಾಗಿ ವಿಕ್ರಮಾರ್ಜುನ ವಿಜಯವೆಂಬ ಜನಪ್ರಿಯ ಭಾರತವನ್ನೂ ಬರೆದ. ೩ನೆಯ ಕೃಷ್ಣನ ಆಸ್ಥಾನದಲ್ಲಿ ವರಕವಿಯಾಗಿದ್ದ ಪಂಪನ ಸಮಕಾಲೀನ ಉಭಯಕವಿ ಚಕ್ರವರ್ತಿ ಪೊನ್ನ ಶಾಂತಿಪುರಾಣ, ಭುವನೈಕರಾಮಾಭ್ಯುದಯ ಎಂಬ ಗ್ರಂಥಗಳನ್ನೂ ಜಿನಾಕ್ಷರಮಾಲೆಯೆಂಬ ೩೯ ಕಂದಗಳ ಕಿರುಕೃತಿಯನ್ನೂ ರಚಿಸಿದ್ದಾನೆ. ೪ನೆಯ ರಾಚಮಲ್ಲ ಗಂಗರಾಜನ ಮಂತ್ರಿ, ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದ ನಿರ್ಮಾಪಕ ಚಾವುಂಡರಾಯ ಚಾವುಂಡರಾಯಪುರಾಣದ ಕರ್ತೃ. ಆ ಕಾಲದ ಅತ್ಯಂತ ವೈಭವಪೂರ್ಣ ಗ್ರಂಥ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ. ಸುಕುಮಾರಸ್ವಾಮಿ, ನಾಗಶ್ರೀ ಕಥೆಗಳು, ವಿದ್ಯಚ್ಚೋರನ ಕಥೆ, ಕಾರ್ತಿಕ ಋಷಿಯ ಕಥೆ, ಮಲಯಸುಂದರನ ಕಥೆ ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪರೂಪ ಕೊಡುಗೆಗಳು. ಆ ಕಾಲದ ಶಾಸನಗಳ ಕನ್ನಡ ಸಹ ವ್ಯಾಕರಣಬದ್ಧವಾಗಿದ್ದುದಲ್ಲದೆ ಭಾಷಾ ಬೆಳೆವಣಿಗೆ, ಸಾಹಿತ್ಯ ಪ್ರಗತಿಗಳ ಅಭ್ಯಾಸಕ್ಕೆ ಪ್ರಯೋಜನಕಾರಿಯಾಗಿದೆ.

ಕಲ್ಯಾಣ ಚಾಲುಕ್ಯರು

ರಾಷ್ಟ್ರಕೂಟರ ಅನಂತರ ಪ್ರವರ್ಧಮಾನಕ್ಕೆ ಬಂದ ಕಲ್ಯಾಣ ಚಾಳುಕ್ಯವಂಶ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದು ದಕ್ಷಿಣದಲ್ಲಿ ಅತಿ ಪ್ರಬಲರಾಗಿದ್ದ ಚೋಳರೊಡನೆ ಸತತ ಹೋರಾಟ ನಡೆಸಿದುದಲ್ಲದೆ ಮಧ್ಯ ಮತ್ತು ಪಶ್ಚಿಮ ಭಾರತಗಳಲ್ಲಿ ತನ್ನ ಬಲವನ್ನು ವಿಸ್ತರಿಸಿತು. ಸತ್ಯಾಶ್ರಯ ಇರಿವ ಬೆಡಂಗ, ಜಯಸಿಂಹ, ಸೋಮೇಶ್ವರ ಆಹವಮಲ್ಲ ಮತ್ತು ಇಮ್ಮಡಿ ಸೋಮೇಶ್ವರರಂಥ ಪ್ರಸಿದ್ಧ ದೊರೆಗಳ ಅನಂತರ ಸಿಂಹಾಸನವನ್ನೇರಿದ ಆರನೆಯ ವಿಕ್ರಮಾದಿತ್ಯ (೧೦೭೭-೧೧೨೭) ಕರ್ನಾಟಕದ ಅತ್ಯಂತ ಪ್ರಸಿದ್ಧ ದೊರೆ. ಚಾಳುಕ್ಯ ವಿಕ್ರಮಶಕೆಯ ಮೂಲಪುರಷನೀತನೇ. ಚೋಳ, ಲಾಟ ಮತ್ತು ಉಚ್ಚಂಗಿಯ ಪಾಂಡ್ಯರನ್ನು ಈತ ಸದೆಬಡಿದ. ತನ್ನಣ್ಣನಾದ ಎರಡನೆಯ ಸೋಮೇಶ್ವರನನ್ನು ಮೂಲೆಗೊತ್ತಿ ಸಿಂಹಾಸನವನ್ನಾಕ್ರಮಿಸಿದ ವಿಕ್ರಮಾದಿತ್ಯ ತನ್ನ ತಮ್ಮ ಜಯಸಿಂಹನ ದಂಗೆಯನ್ನೂ ಹತ್ತಿಕ್ಕಿದ. ಮಾಳ್ವವನ್ನು ಮೂರು ಭಾರಿ ಜಯಿಸಿ ನರ್ಮದೆಯ ದಕ್ಷಿಣಕ್ಕಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡ. ಅನಂತರ ತನ್ನ ಸಾಮಂತರ ಪೈಕಿ, ಪುಂಡರೆನಿಸಿದ್ದವರನ್ನು ಸದೆಬಡಿದ. ತನ್ನ ಬದ್ಧ ವೈರಿಯಾದ ಒಂದನೆಯ ಕುಲೋತ್ತುಂಗ ಚೋಳನ ವಿರುದ್ಧ ಸಂಚುಹೂಡಿ ವೆಂಗಿಯಲ್ಲಿ ಚೋಳರ ಪ್ರಾಬಲ್ಯ ಮುರಿದ. ಪೂರ್ವ ಪಶ್ಚಿಮ ಸಮುದ್ರಗಳವರೆಗೂ ಚಾಳುಕ್ಯ ರಾಜ್ಯ ವಿಸ್ತಾರಗೊಂಡಿತು. ಆದರೆ ಇವನ ಆಳ್ವಿಕೆಯ ಕಡೆಗಾಲದಲ್ಲೇ ಚಾಳುಕ್ಯ ರಾಜ್ಯದ ಅವನತಿಯೂ ಪ್ರಾರಂಭವಾಗಿ ಉತ್ತರಭಾಗದಲ್ಲಿ ಕಳಚುರ್ಯರೂ ದಕ್ಷಿಣದಲ್ಲಿ ಹೊಯ್ಸಳರೂ ಪ್ರಬಲರಾದರು. ಬಿಜ್ಜಳನಿಂದ ಪ್ರಾಮುಖ್ಯ ಪಡೆದ ಕಳಚುರ್ಯರು ೧೧೬೨ ರಿಂದ ೧೧೮೪ರವರೆಗೂ ಸಿಂಹಾಸನವನ್ನು ತಮ್ಮ ವಶಪಡಿಸಿಕೊಂಡಿದ್ದು ಪುನಃ ಚಾಳುಕ್ಯ ೪ನೆಯ ಸೋಮೇಶ್ವರನಿಂದ ಪರಾಭವಗೊಂಡರು. ಬಿಜ್ಜಳನ ಆಳ್ವಿಕೆಯ ಮಹತ್ತ್ವವೆಂದರೆ ಅವನ ಭಂಡಾರಿಯೂ ಅನಂತರ ಮಂತ್ರಿಯೂ ಆಗಿದ್ದರೆಂದು ಹೇಳಲಾದ ವೀರಶೈವ ಧರ್ಮ ಪ್ರವರ್ಧಕ ಬಸವೇಶ್ವರರು ಅವನ ಆಸ್ಥಾನದಲ್ಲಿದ್ದದು. ೪ನೆಯ ಸೋಮೇಶ್ವರ ೧೧೯೮ರವರೆಗೂ ಆಳುತ್ತಿದ್ದ.

ಹತ್ತನೆಯ ಶತಮಾನದ ಆದಿಭಾಗದಿಂದ ಹಲವು ಪ್ರದೇಶಗಳಲ್ಲಿ ಅಧಿಕಾರ ಪಡೆದಿದ್ದ ಸೇವುಣ ಅಥವಾ ದೇವಗಿರಿಯ ಯಾದವರು ಕಲ್ಯಾಣ ಚಾಳುಕ್ಯರ ಅನಂತರ ಉತ್ತರಭಾಗದಲ್ಲಿ ಪ್ರಬಲರಾದರು. ಆ ವಂಶದ ೪ನೆಯ ಸಿಂಘಣ, ೫ನೆಯ ಭಿಲ್ಲಮ, ೨ನೆಯ ಸಿಂಘಣ ಮುಂತಾದ ಶಕ್ತ ದೊರೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ, ದಕ್ಷಿಣದಲ್ಲಿ ಪ್ರಬಲರಾಗಿದ್ದ ಹೊಯ್ಸಳರೊಂದಿಗೆ ಕರ್ಣಾಟಕದ ಸ್ವಾಮ್ಯಕ್ಕಾಗಿ ಹೋರಾಡಿದರು. ಆ ವಂಶದ ಕೊನೆಯ ಪ್ರಸಿದ್ಧ ದೊರೆಯಾದ ರಾಮಚಂದ್ರ ಮಹಮ್ಮದೀಯ ಅಕ್ರಮಣಕಾರರ ವಿರುದ್ಧ ಹೋರಾಡಿದ. ಕೊನೆಗೆ ದಾಳಿಕೋರ ಅಲ್ಲಾವುದ್ದೀನನೊಂದಿಗೆ ಸಂಧಿ ಮಾಡಿಕೊಳ್ಳಬೇಕಾಯಿತು. ಪುನಃ ೧೩೦೭ರಲ್ಲಿ ಅಲ್ಲಾವುದ್ದೀನ ಸೇನಾನಿ ಮಲಿಕ್ ಕಾಫೂರನಿಂದ ದೇವಗಿರಿ ರಾಜ್ಯ ನಾಶ ಹೊಂದಿತು.

ಹೊಯ್ಸಳರು

ಹೊಯ್ಸಳರು ಇಂದಿನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹತ್ತನೆಯ ಶತಮಾನದಲ್ಲಿ ಪ್ರಥಮವಾಗಿ ರಾಜ್ಯ ಕಟ್ಟಿದರು. ಮುಂದೆ ದ್ವಾರಸಮುದ್ರ ಅಥವಾ ಇಂದಿನ ಬೇಲೂರು ತಾಲ್ಲೂಕಿನ ಹಳೇಬೀಡನ್ನು ಶಾಶ್ವತ ರಾಜಧಾನಿಯಾಗಿ ಮಾಡಿಕೊಂಡರು. ಹನ್ನೊಂದನೆಯ ಶತಮಾನದ ಅಂತ್ಯದಲ್ಲಿ ಕರ್ನಾಟಕದ ದಕ್ಷಿಣಭಾಗದಲ್ಲಿ ಪ್ರಬಲರಾಗುತ್ತಿದ್ದ ಹೊಯ್ಸಳರು ೧೨-೧೩ನೆಯ ಶತಮಾನಗಳಲ್ಲಿ ಕರ್ನಾಟಕದ ಅತ್ಯಂತ ಪ್ರಮುಖ ಶಕ್ತಿಯಾಗಿ ಬಾಳಿದರು. ವಿಷ್ಣುವರ್ಧನನ (೧೧೦೮-೧೧೫೨) ತಲಕಾಡು ವಿಜಯದೊಂದಿಗೆ (೧೧೧೬) ಈ ರಾಜವಂಶದ ಉಚ್ಛ್ರಾಯ ಕಾಲ ಆರಂಭವಾಯಿತು. ಈ ವಂಶದಲ್ಲಿ ನರಸಿಂಹ, ಇಮ್ಮಡಿ ಬಲ್ಲಾಳ, ಸೋಮೇಶ್ವರ, ರಾಮನಾಥ ಮತ್ತು ಮುಮ್ಮಡಿ ಬಲ್ಲಾಳರಂಥ ಮಹಾವ್ಯಕ್ತಿಗಳು ತಲೆದೋರಿ ಉತ್ತರದಲ್ಲಿ ಯಾದವರನ್ನೂ ದಕ್ಷಿಣದಲ್ಲಿ ಚೋಳ ಪಾಂಡ್ಯರನ್ನೂ ಹತೋಟಿಯಲ್ಲಿಟ್ಟುಕೊಂಡು ಕರ್ನಾಟಕದ ಪ್ರಸಿದ್ಧಿ ಹೆಚ್ಚಿಸಿದರು. ವಿಷ್ಣುವರ್ಧನ ಚೋಳರಿಂದ ತಲಕಾಡನ್ನು ಗೆದ್ದುಕೊಂಡ ಮೇಲೆ ಕೋಲಾರ ನಂಗಿಲಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಕಂಚಿಯನ್ನೂ ಗೆದ್ದು ರಾಮೇಶ್ವರದವರೆಗೂ ಹೋಗಿ ಪಾಂಡ್ಯರೊಡನೆ ಹೋರಾಡಿದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅನಂತರ ಕೊಂಗಾಳ್ವರನ್ನೂ ನಿಡುಗಲ್ಲಿನ ಚೋಳರನ್ನೂ ಜಯಿಸಿದ. ಕೊಂಗುದೇಶವನ್ನು ಗೆದ್ದು ರಾಜ್ಯ ವಿಸ್ತರಿಸಿದ. ಅನಂತರ ಉಚ್ಚಂಗಿಯ ಪಾಂಡ್ಯರನ್ನೂ ಕುಮ್ಮಟವನ್ನೂ ಗೆದ್ದ. ಬೆಳ್ವೊಲನಾಡನ್ನು ಆಕ್ರಮಿಸಿದಾಗ ಚಾಳುಕ್ಯ ಚಕ್ರವರ್ತಿ ೬ನೆಯ ವಿಕ್ರಮಾದಿತ್ಯ ತನ್ನ ಈ ದಂಗೆಕೋರ ಸಾಮಂತನನ್ನೆದುರಿಸಿ ಸೋತುದರ ಫಲವಾಗಿ ಹೊಯ್ಸಳರು ನಿಜಕ್ಕೂ ಸ್ವತಂತ್ರರಾದರು. ಅನಂತರ ಹಾನುಗಲ್ಲಿನ ಕದಂಬರೂ ಸೋತರು. ಆದರೆ ಚಾಳುಕ್ಯ ಸಾಮಂತ ಇಮ್ಮಡಿ ಆಚುಗಿ ೧೧೨೨ರಲ್ಲಿ ವಿಷ್ಣುವರ್ಧನನ್ನು ಸೋಲಿಸಿದ. ಹೊಯ್ಸಳರು ಹೆಸರಿಗೆ ಮಾತ್ರ ಸಾಮಂತರಾಗಿದ್ದರೂ, ವಾಸ್ತವವಾಗಿ ಸ್ವತಂತ್ರರಾಗಿಯೇ ಇದ್ದರು. ವಿಷ್ಣುವರ್ಧನ ೧೧೩೬ರ ಸಮಯಕ್ಕೆ ಬಳ್ಳಾರಿ ಪ್ರದೇಶದ ಅನೇಕ ಭಾಗಗಳನ್ನೂ ಬಂಕಾಪುರವನ್ನೂ ಚಾಳುಕ್ಯರಿಂದ ಗೆದ್ದುಕೊಂಡ. ಹಾನುಗಲ್ಲು ಪುನರ್ವಶವಾಯಿತು.

ಇಮ್ಮಡಿ ಬಲ್ಲಾಳನ (೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಅತ್ಯುನ್ನತ ವೈಭವವನ್ನು ತಲುಪಿತು. ಚೆಂಗಾಳ್ವ, ಕೊಂಗಾಳ್ವ, ಉಚ್ಚಂಗಿ ಪಾಂಡ್ಯರನ್ನೂ ಬನವಾಸಿ ಹಾನಗಲ್ಲುಗಳನ್ನೂ ಗೆದ್ದರೂ ಕಳಚುರಿ ಸಂಕಮನಿಂದ ಈತ ೧೧೭೯ರಲ್ಲಿ ಸೋತ. ಕೆಲಕಾಲನಂತರ ಬೆಳ್ವೊಲವನ್ನು ಗೆದ್ದ. ಸೇವುಣರೊಂದಿಗೆ ದೀರ್ಘಕಾಲ ಹೋರಾಡಿ ೧೧೯೦ ರಲ್ಲಿ ಸೊರಟೂರು ಕದನದಲ್ಲಿ ಅವರನ್ನು ಸೋಲಿಸಿದ. ರಾಯಚೂರು ಬಳ್ಳಾರಿ ಪ್ರದೇಶಗಳೂ ಇವನ ವಶವಾದುವು. ೧೨೧೫ರಲ್ಲಿ ಸೇವುಣ ಇಮ್ಮಡಿ ಸಿಂಘಣನಿಂದ ಸೋತು ಶಿವಮೊಗ್ಗೆಯಾಚೆಯ ಪ್ರದೇಶಗಳನ್ನು ಕಳೆದುಕೊಂಡ. ತನ್ನ ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ತನ್ನ ಬಂಧುವಾದ ಚೋಳರಾಜ ಮುಮ್ಮಡಿ ಕುಲೋತ್ತುಂಗನ ಸಹಾಯಾರ್ಥವಾಗಿ ಹೋಗಿ ಪಾಂಡ್ಯರನ್ನು ಸೋಲಿಸಿ ಚೋಳರಾಜ್ಯವನ್ನು ಭದ್ರಗೊಳಿಸಿದ. ಹೊಯ್ಸಳದೊರೆ ಎರಡನೆಯ ನರಸಿಂಹ ಚೋಳ ಚಕ್ರವರ್ತಿ ಮುಮ್ಮಡಿ ರಾಜನನ್ನು ಕಾಡವ ಕೋಪ್ಪೆರುಜಿಂಗನ ಸೆರೆಯಿಂದ ಬಿಡಿಸಿದುದಲ್ಲದೆ ತನ್ನ ಪ್ರಭುತ್ವವನ್ನು ತಮಿಳುದೇಶದಲ್ಲಿ ಸ್ಥಾಪಿಸಿ, ಕಣ್ಣಾನೂರನ್ನು (ತಿರುಚಿರಾಪಳ್ಳಿಯ ಬಳಿಯಿರುವ ಈಗಿನ ಸಮಯಪುರ) ಉಪರಾಜಧಾನಿಯಾಗಿ ಮಾಡಿಕೊಂಡ. ಹೊಯ್ಸಳರು ದಕ್ಷಿಣ ಭಾರತದ ಅತ್ಯಂತ ಪ್ರಬಲ ರಾಜರಾಗಿದ್ದ ಕಾಲವಿದು. ಇಮ್ಮಡಿ ಬಲ್ಲಾಳ ಈ ಕಾರ್ಯಗಳನ್ನು ಸಾಧಿಸುವುದರ ಜೊತೆಗೆ ಮುಸ್ಲಿಮರ ದಾಳಿಗಳಿಂದ ದಕ್ಷಿಣಭಾರತವನ್ನೂ ಹಿಂದೂ ಧರ್ಮವನ್ನೂ ರಕ್ಷಿಸುವ ಸಲುವಾಗಿ ಹೆಣಗಿದ. ಕರ್ನಾಟಕದ ರಾಜರಲ್ಲೆಲ್ಲ ಅತ್ಯಂತ ಪ್ರಮುಖರಲ್ಲೊಬ್ಬನೆಂದು ಕರೆಸಿಕೊಂಡಿರುವ ಈತ ತನ್ನ ರಾಜಧಾನಿಯನ್ನು ಬದಲಾಯಿಸುತ್ತ ಮುಸ್ಲಿಮರೊಂದಿಗೆ ಹೋರಾಡುತ್ತಿದ್ದು ಕಡೆಗೆ ತನ್ನ ೮೦ನೆಯ ವಯಸ್ಸಿನಲ್ಲಿ ೧೩೪೨ರಲ್ಲಿ ತಿರುಚಿರಾಪಳ್ಳಿಯಲ್ಲಿ ಮುಸ್ಲಿಮರ ಕುತಂತ್ರಕ್ಕೊಳಗಾಗಿ ಪ್ರಾಣ ತೆತ್ತ.

ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣ ಚಾಳುಕ್ಯರ, ದೇವಗಿರಿಯ ಯಾದವರ ಮತ್ತು ಹೊಯ್ಸಳರ ಕಾಲ ಅಮೋಘವಾದುದು. ಈ ಯುಗದಲ್ಲಿ ಸರ್ವತೋಮುಖ ಪ್ರಗತಿ ಕಂಡುಬಂದು ಕರ್ನಾಟಕದ ಘನತೆ ಹೆಚ್ಚಿತು. ರಾಜಕಾರಣ, ಯುದ್ಧನೀತಿ, ಪ್ರಜಾರಂಜಕ ಆಡಳಿತ, ಸಾಮಾಜಿಕ ಸಮಗ್ರತೆ, ಮತೀಯ ಸಮನ್ವಯ, ವಿದ್ಯಾ ಪ್ರಗತಿ, ಭಾಷಾ-ಸಾಹಿತ್ಯಗಳ ಅಭಿವೃದ್ಧಿ, ಕಲಾನೈಪುಣ್ಯಗಳು ಈ ಕಾಲದ ವೈಶಿಷ್ಟ್ಯಗಳು. ರಾಷ್ಟ್ರಕೂಟ ದಂತಿದುರ್ಗ ಯಾವ ಕರ್ನಾಟಕಬಲವನ್ನು ಹತ್ತಿಕ್ಕಿದುದಾಗಿ ಹೇಳಿಕೊಂಡನೋ ಅದೇ ಕರ್ನಾಟಕಬಲದ ಸಹಾಯದಿಂದ ಅದೇ ಚಾಳುಕ್ಯ ವಂಶೋದ್ಭವನಾದ ಇಮ್ಮಡಿ ತೈಲ, ರಾಷ್ಟ್ರಕೂಟರನ್ನು ಸೋಲಿಸಿ ಚಾಳುಕ್ಯ ರಾಜ್ಯವನ್ನು ಕರ್ನಾಟಕದಲ್ಲಿ ಪುನಃ ಸ್ಥಾಪಿಸಿದ. ಈ ವಂಶದ ವೀರ ಯೋಧರಾದ ಸತ್ಯಾಶ್ರಯ ಇರಿವಬೆಡಂಗ, ಜಯಸಿಂಹ ವಲ್ಲಭ, ೧ನೆಯ ಸೋಮೇಶ್ವರ ಆಹವಮಲ್ಲ ಮತ್ತು ೬ನೆಯ ವಿಕ್ರಮಾದಿತ್ಯರಂಥ ರಾಜರು ಕರ್ನಾಟಕದ ಹಿರಿಮೆಯನ್ನು ವೃದ್ಧಿಗೊಳಿಸಿದರು. ಇವರ ಯುದ್ಧ ವಿಜಯಗಳು ರಾಷ್ಟ್ರಕೂಟರ ವಿಜಯಗಳಷ್ಟು ವ್ಯಾಪ್ತವಾಗಿರಲಿಲ್ಲವೆಂಬುದೇನೋ ನಿಜ. ಭಾರತದ ಮಾರ್ಪಟ್ಟ ರಾಜಕೀಯ ಪರಿಸ್ಥಿತಿ ಇದಕ್ಕೆ ಕಾರಣ. ಪ್ರಬಲರೂ ಸಾರ್ವಭೌಮಾಧಿಕಾರಾಕಾಂಕ್ಷಿಗಳೂ ಆಗಿದ್ದ ಚೋಳರು ದಕ್ಷಿಣದಲ್ಲೂ ಪರಮಾರರು ಉತ್ತರದಲ್ಲೂ ಇವರ ರಾಜ್ಯ ವಿಸ್ತರಣಕ್ಕೆ ಪ್ರಮುಖ ಆಡಚಣೆಗಳಾಗಿದ್ದರೂ ಇವರು ತಮ್ಮ ರಾಜ್ಯದ ಸಮಗ್ರತೆಯನ್ನು ರಕ್ಷಿಸಿಕೊಂಡುದಲ್ಲದೆ ಪೂರ್ವದಲ್ಲಿ ವೆಂಗಿರಾಜ್ಯವನ್ನೂ ಪಶ್ಚಿಮದಲ್ಲಿ ಶಿಲಾಹಾರ ಮತ್ತು ಕದಂಬರನ್ನೂ ತರಿದು, ಪೂರ್ವ ಪಶ್ಚಿಮ ಸಮುದ್ರಗಳ ನಡುವಣ ಇಡೀ ಭೂಭಾಗಕ್ಕೆ ಒಡೆಯರಾಗಿದ್ದರು. ಉದಾರನೀತಿಯ ವಿಶಾಲ ಮನೋಭಾವದ ಇವರ ಆಡಳಿತದಲ್ಲಿ ಜನಜೀವನ ಪ್ರಗತಿದಾಯಕವಾಗಿತ್ತು. ಅವಿರತಯುದ್ಧಗಳಿದ್ದಾಗ್ಯೂ ಸಾಮಾನ್ಯಜನತೆ ತಮ್ಮ ವೃತ್ತಿಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿತ್ತು. ಆಡಳಿತದಲ್ಲಿ ಅನಾವಶ್ಯಕ ಕೇಂದ್ರೀಕರಣವಿಲ್ಲದಿದ್ದು, ಪ್ರದೇಶಾಧಿಕಾರಿಗಳೂ ಸಾಮಂತರೂ ತಂತಮ್ಮ ಕ್ಷೇತ್ರಗಳಲ್ಲಿ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಗ್ರಾಮಾಡಳಿತದಲ್ಲಿ ವಿಕೇಂದ್ರೀಕರಣದಿಂದ ಉತ್ತಮ ಪರಿಣಾಮವುಂಟಾಯಿತು. ತಮ್ಮ ನಿತ್ಯಜೀವನ ಕ್ರಮವನ್ನು ಆವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವಾಯಿತು. ಅಗ್ರಹಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಸೀಮಿತವಾಗಿಯಾದರೂ ಸ್ವಯಮಾಡಳಿತ ಪ್ರಜ್ಞೆ, ಪ್ರಜೆಗಳಲ್ಲಿ ವೃದ್ಧಿ ಹೊಂದಿ, ರಾಜ್ಯದ ಪ್ರಗತಿಗೆ ಸಾಧಕವಾಯಿತು. ಪರಸ್ಪರ ಸಹಕಾರೀ ಪ್ರಜ್ಞೆಯಿಂದ ಮೂಡಿದ ಸ್ವಯಮಾಡಳಿತ ಸಂಸ್ಥೆಗಳಿಗೆ ಈ ಮೊದಲೇ ಉಕ್ತವಾದ ಅಯ್ಯಾವೊಳೆಯ ಐನೂರ್ವರ ಸಂಘ ಉತ್ತಮ ನಿದರ್ಶನ. ಐಹೊಳೆಯಲ್ಲಿ ಐನೂರು ಮಂದಿ ಸದಸ್ಯರಿಂದ ಮೊದಲಿಗೆ ಸ್ಥಾಪಿತವಾದ ಇದು ವ್ಯಾಪಾರಿಗಳ, ವೃತ್ತಿಕಾರರ ಮತ್ತು ಕೆಲಸಗಾರರ ಸಂಸ್ಥೆಯಾಗಿದ್ದು ಇಡೀ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ದೇಶ ಗುಜರಾತುಗಳಲ್ಲೂ ಪ್ರಾಬಲ್ಯ ಪಡೆದಿತ್ತು. ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ರಕ್ಷಣೆ ನೀಡಿ ಉತ್ತೇಜನಗೊಳಿಸುವುದೇ ಈ ಸಂಘದ ಧ್ಯೇಯವಾಗಿತ್ತು. ದೇಶ ವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಾ ಭಾರತದ ಆರ್ಥಿಕ ಚಟುವಟಿಕೆಗೆ ಉತ್ತಮ ಉತ್ತೇಜನ ಕೊಡುವ ಸಂಸ್ಥೆ ಇದಾಗಿತ್ತು. ಯಾದವ ವಂಶದ ಆಳ್ವಿಕೆಯಲ್ಲಿ ಅಂಥ ಪ್ರಮುಖ ಘಟನೆಗಳಾವುವೂ ಸಂಭವಿಸಿಲ್ಲ. ೧೨ನೆಯ ಶತಮಾನದ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವತಂತ್ರರಾದ ಯಾದವರಲ್ಲಿ ೫ನೆಯ ಭಿಲ್ಲಮ ಮತ್ತು ೨ನೆಯ ಸಿಂಘಣರನ್ನುಳಿದರೆ ಇತರರು ದುರ್ಬಲರಾಗಿದ್ದರು. ಅವರ ಶಕ್ತಿಸಾಮರ್ಥ್ಯಮತ್ತು ಐಶ್ವರ್ಯಗಳೆಲ್ಲ ಹೊಯ್ಸಳ ರಾಜರೊಂದಿಗೆ ಹೋರಾಡುವುದರಲ್ಲೇ ವ್ಯಯವಾಯಿತು. ಅವರ ಪತನದಿಂದ ಉತ್ತರದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಯಾವ ತಡೆಯೂ ಇಲ್ಲದಂತಾಯಿತು.

ಆದರೆ ದಕ್ಷಿಣ ಕರ್ನಾಟಕದಲ್ಲಿ ಕಲ್ಯಾಣ ಚಾಳುಕ್ಯರ ಉತ್ತರಾಧಿಕಾರಿಗಳಾದ ಹೊಯ್ಸಳರ ಕಾಲ ಸ್ಮರಣೀಯವಾದುದು. ಆರಂಭದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನನುಭವಿಸಿದರೂ ಕಲ್ಯಾಣ ಚಾಳುಕ್ಯರ ಸಾಮಂತರಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳಬೇಕಾಗಿದ್ದರೂ ವಿಷ್ಣುವರ್ಧನ, ಇಮ್ಮಡಿಬಲ್ಲಾಳ, ಸೋಮೇಶ್ವರ ಮತ್ತು ಮುಮ್ಮಡಿ ಬಲ್ಲಾಳರಂಥ ಧೀರೋದಾತ್ತ ಸುಸಂಸ್ಕೃತ ದೊರೆಗಳ ನೇತೃತ್ವದಲ್ಲಿ ಅಪೂರ್ವ ಪ್ರಗತಿ ಸಾಧಿಸಿ ಕರ್ನಾಟಕವೇ ಅಲ್ಲದೆ ಭಾರತದ ಇತಿಹಾಸದಲ್ಲೇ ಈ ವಂಶ ಮನ್ನಣೆಗೆ ಪಾತ್ರವಾಯಿತು. ಈ ಆಳ್ವಿಕೆಯ ಗಮನಾರ್ಹಸಾಧನೆಯೆಂದರೆ ದೇಶಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ. ಆಗಿಂದಾಗ್ಗೆ ಈ ವಂಶದಲ್ಲಿ ತಲೆದೋರಿದ ಅಪ್ರತಿಮವೀರರ ನಾಯಕತ್ವದಲ್ಲಿ ದಕ್ಷಿಣ ಕರ್ಣಾಟಕ ಅಥವಾ ಮೈಸೂರು ಪ್ರದೇಶದಲ್ಲಿ ನೆರೆನಿಂತ ಚೋಳರ ಆಳ್ವಿಕೆಯನ್ನು ಕೊನೆಗಾಣಿಸಿದುದೇ ಅಲ್ಲದೆ ಅನಂತರ ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಾಬಲ್ಯ ಪಡೆದು ದುಃಸ್ಥಿತಿಗೀಡಾದ ಚೋಳ ರಾಜರನ್ನು ರಕ್ಷಿಸಿ, ಚೋಳ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯರೆಂಬ ಬಿರುದಿಗೆ ಇವರು ಅರ್ಹರಾದರು. ಹೊಯ್ಸಳ ಬಾಹುಬಲದೆದುರು ಚೋಳ, ಪಾಂಡ್ಯ, ಯಾದವ, ಕಾಕತೀಯರಂಥ ಪ್ರಬಲರಾಜವಂಶಗಳೂ ಮತ್ತಿತರ ಸಣ್ಣಪುಟ್ಟ ರಾಜರೂ ತಲ್ಲಣಿಸಬೇಕಾಯಿತು. ಎರಡು ಶತಮಾನಗಳ ಅನಂತರ-೧೩ನೆಯ ಶತಕದಲ್ಲಿ-ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರವಾದ ದುರ್ಘಟನೆಯೊಂದು ಸಂಭವಿಸಿತು. ಉತ್ತರ ಭಾರತದಲ್ಲಿ ಆ ವೇಳೆಗೆ ಅಪ್ರತಿಹತವಾದ ಅಧಿಕಾರ ಪಡೆದಿದ್ದ ಮುಸ್ಲಿಮರ ದೃಷ್ಟಿ ದಕ್ಷಿಣದತ್ತ ಹೊರಳಿ ದಕ್ಷಿಣದ ಹಿಂದೂ ರಾಜ್ಯಗಳು ಒಂದೊಂದಾಗಿ ಅವರ ದಾಳಿಗಳಿಗೀಡಾಗಿ ನಿರ್ನಾಮವಾದುವು. ಯಾದವ, ಕಾಕತೀಯ ಮತ್ತು ಕಿರಿದಾದರೂ ಅಸಾಧಾರಣ ಶೌರ್ಯಪ್ರದರ್ಶಿಸಿದ ಕಂಪಿಲರಾಜ್ಯಗಳು ದೂಳೀಪಟವಾದರೂ ಮುಸ್ಲಿಮರ ಆಕ್ರಮಣ ಬಾಧೆಯನ್ನು ಸಮಯೋಚಿತವಾದ ಯುಕ್ತಿ ಶಕ್ತಿಗಳಿಂದ ಎದುರಿಸಿದ ಹಿಂದೂ ರಾಜನೆಂದರೆ ಆ ವಂಶದ ಕೊನೆಯ ದೊರೆಯಾದ ಮುಮ್ಮಡಿ ಬಲ್ಲಾಳ, ಕಾಲಕ್ರಮದಲ್ಲಿ ಈತ ಮುಸ್ಲಿಮರ ವಂಚನೆಗೀಡಾಗಿ ಅಳಿದರೂ ಈತನ ಯುಕ್ತಿಯುಕ್ತವಾದ ನೀತಿಯ ತಳಹದಿಯ ಮೇಲೆಯೇ ದಕ್ಷಿಣಭಾರತದ ಮಹೋನ್ನತ ಸಾಮ್ರಾಜ್ಯವೂ ಹಿಂದೂ ಧರ್ಮರಕ್ಷಣೆಗೆ ಬದ್ಧಕಂಕಣ ತೊಟ್ಟುದೂ ಆದ ವಿಜಯನಗರದ ಸ್ಥಾಪನೆಯಾಯಿತು.

ಗಂಗರಸರ ಉತ್ತರಾಧಿಕಾರಿಗಳೂ ಕೆಲಕಾಲ ಚಾಳುಕ್ಯರ ಸಾಮಂತರೂ ಆಗಿದ್ದ ಹೊಯ್ಸಳರು ಆ ರಾಜರುಗಳ ಆಡಳಿತ ಪದ್ಧತಿಯನ್ನೇ ಅನುಸರಿಸಿದರೂ ಸಮಯೋಚಿತವಾದ ಕೆಲವು ಮಾರ್ಪಾಡು ಮಾಡಿಕೊಂಡಿದ್ದರು. ಕೇಂದ್ರ, ಪ್ರಾಂತೀಯ ಮತ್ತು ಗ್ರಾಮೀಣ ಹಂತಗಳಲ್ಲಿ ಆಡಳಿತ ವ್ಯವಸ್ಥಿತವಾಗಿತ್ತು. ವಿವಿಧ ಅಧಿಕಾರಿಗಳ ಮೇಲೆ ಮಂತ್ರಿಮಂಡಳ, ರಾಣಿ, ರಾಜಬಂಧುಗಳು- ಇವರಿಂದ ರಾಜ ಸಲಹೆ ಪಡೆದು ಮುಕ್ತ ಉಸ್ತುವಾರಿ ವಹಿಸುತ್ತಿದ್ದ. ಪಂಚಪ್ರಧಾನರೆಂದು ಶಾಸನಗಳಲ್ಲಿರುವ ಉಲ್ಲೇಖದಿಂದ ಐದು ಮಂತ್ರಿಗಳಿದ್ದರೆಂಬುದು ವ್ಯಕ್ತವಾಗುತ್ತದೆ. ಸಂಧಿವಿಗ್ರಹಿ (ಒಳಾಡಳಿತ ಮತ್ತು ವಿದೇಶ ಸಚಿವ), ಶ್ರೀಕರಣಾಧಿಕಾರಿ (ರಾಜ್ಯಾಡಳಿತ ಸಚಿವ), ಹಿರಿಯ ಭಾಂಡಾರಿ (ಹಣಕಾಸಿನ ಸಚಿವ), ಸೇನಾಧಿಕಾರಿ (ರಕ್ಷಣಾ ಸಚಿವ) ಮತ್ತು ಮಹಾಪಸಾಯತ (ರಾಜಮನೆತನದ ವ್ಯವಹಾರ ಸಚಿವ) - ಇವರೇ ಪಂಚಪ್ರಧಾನರು. ರಾಜ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಪಾಲಕನಾಗಿದ್ದು ಪ್ರಜಾಕೋಟಿಯ ಇಹಪರಗಳೆರಡರ ಒಳಿತಿಗೂ ದುಡಿಯುತ್ತಿದ್ದ. ಆನೆ ಮತ್ತು ಅಶ್ವಬಲಗಳಿಂದ ಕೂಡಿದ್ದ ಸೇನೆಯ ಮುಖ್ಯ ಅಂಗ ಕಾಲ್ಬಲವಾಗಿತ್ತು. ರಾಜನನ್ನು ತಮ್ಮ ಪ್ರಾಣತ್ಯಾಗದಿಂದಲಾದರೂ ರಕ್ಷಿಸುವ ಪಣತೊಟ್ಟಿದ್ದ ಗರುಡರೆಂಬ ವಿಶಿಷ್ಟಯೋಧರು ತಮ್ಮ ಶಕ್ತಿ ಸಾಮರ್ಥ್ಯಗಳಿಗೆ ಹೆಸರಾದವರು. ಸಾಮಂತರು ರಾಜನ ಹತೋಟಿಗೊಳಪಟ್ಟಿದ್ದರೂ ತಮ್ಮ ಪ್ರದೇಶಗಳಲ್ಲಿ ಸ್ವಯಮಾಡಳಿತ ನಡೆಸುತ್ತಿದ್ದರು. ನಾಡ ಪ್ರಭು, ನಾಡ ಗೌಡ ಮತ್ತು ನಾಡ ಸೇನಬೋವರೆಂಬ ಇತರ ಅಧಿಕಾರಿಗಳು ಇದ್ದರು. ಗ್ರಾಮಪ್ರತಿನಿಧಿಗಳಾದ ಹಿರಿಯರ ನೇತೃತ್ವದಲ್ಲಿ ಗ್ರಾಮಾಡಳಿತ ನಡೆಯುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಕೆಳಗಿನ ಹಂತಗಳಲ್ಲಿ ವಿವಿಧ ಮಟ್ಟಗಳ ಅಧಿಕಾರಿಗಳು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.

ಒಂಬತ್ತನೆಯ ಶತಮಾನದಲ್ಲಿ ಅದ್ವೈತ ಪ್ರತಿಪಾದಕ ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದು ಮತ್ತು ಹತ್ತನೆಯ ಶತಮಾನದಲ್ಲಿ ಗಂಗ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹ ಸ್ಥಾಪಿಸಿದ್ದು ರಾಜ್ಯದ ಧಾರ್ಮಿಕ ವಿಕಾಸದಲ್ಲಿ ಮೈಲಿಗಲ್ಲುಗಳೆನ್ನಬಹುದು. ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ೧೧, ೧೨, ೧೩ನೆಯ ಶತಮಾನಗಳ ಅವಧಿ ಬಹಳ ಮಹತ್ತ್ವದ ಕಾಲ. ಶೈವಧರ್ಮದ ವಿಭಾಗವಾದ ಕಾಳಾಮುಖ ಪಂಥದ ಸ್ಥಾಪಕ ಲಕುಲೀಶನ ಉಲ್ಲೇಖಗಳು ಆ ಕಾಲದ ಶಾಸನಗಳಲ್ಲಿ ಕಂಡುಬರುತ್ತವೆ. ಕಲ್ಯಾಣ ಚಾಳುಕ್ಯರರಸ ೨ನೆಯ ಜಯಸಿಂಹ ಜೈನಧರ್ಮದಿಂದ ಶೈವಧರ್ಮಕ್ಕೆ ಪರಿವರ್ತಿತನಾದ. ಶೈವಗುರುಗಳು ತಪೋನಿಷ್ಠರೂ ವಿದ್ವಾಂಸರೂ ಆಗಿದ್ದು ಸಾರ್ವತ್ರಿಕವಾಗಿ ಗೌರವ ಪಡೆದಿದ್ದರು. ೧೨ನೆಯ ಶತಕದಲ್ಲಿ ಬಸವೇಶ್ವರರು ವೀರಶೈವ (ಲಿಂಗಾಯತ) ಧರ್ಮ ಸ್ಥಾಪನೆ ಮಾಡಿ ಧಾರ್ಮಿಕ ಕ್ರಾಂತಿಯನ್ನುಂಟುಮಾಡಿದರು. ಇವರ ಜೀವನ ಮತ್ತು ಭಕ್ತಿಮಾರ್ಗಗಳು ಸರಳವಾಗಿದ್ದು ಜನತೆಯನ್ನು ವೀರಶೈವ ಧರ್ಮದ ಕಡೆಗೆ ಆಕರ್ಷಿಸಿದುವು. ಜಾತಿ, ಮತ, ಲಿಂಗಭೇದಗಳನ್ನು ಲಕ್ಷಿಸಿದ, ಸಮಾಜದ ಸುಪ್ತ ಚೈತನ್ಯಗಳನ್ನು ಹೊರತರಬಲ್ಲ ಈ ಸಾಮಾಜಿಕ ಆಂದೋಳನದಿಂದ ಅದ್ಭುತ ಪರಿಣಾಮಗಳುಂಟಾದುವು. ಜನಸಾಮಾನ್ಯರ ಭಾಷೆಯಾದ ಕನ್ನಡವನ್ನು ತತ್ತ್ವಪ್ರಚಾರಕ್ಕೆ ಬಳಸಿದುದಿಂದ ಸರಳವೂ ಸತ್ತ್ವಪೂರ್ಣವೂ ಆದ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅನೇಕಾನೇಕ ಶರಣರೂ ವೀರಶೈವ ಧರ್ಮಪ್ರಚಾರಕರೂ ದೇಶಾದ್ಯಂತ ಸಂಚರಿಸಿ, ಸರಳವೂ ಜನಪ್ರಿಯವೂ ಆದ ವಚನಗಳಿಂದ ಜನರನ್ನು ಆಕರ್ಷಿಸಿದರು. ಈ ರೀತಿಯ ಮತ ಪ್ರಸಾರ ನಡೆಯುತ್ತಿದ್ದರೂ ಧರ್ಮಾಂಧತೆಯಿಲ್ಲದಿದ್ದು ಜನಸಾಮಾನ್ಯರಲ್ಲಿ ಪರಧರ್ಮಸಹನೆ ಪ್ರಧಾನವಾಗಿತ್ತೆನ್ನಬಹುದು.

ಶೈವಧರ್ಮಾವಲಂಬಿಗಳಾದ ರಾಜರೂ ಜೈನಧರ್ಮಕ್ಕೆ ಉತ್ತೇಜನ ನೀಡುತ್ತಿದ್ದರು. ಕ್ಷೀಣಗತಿಯಲ್ಲಿದ್ದ ಬೌದ್ಧಧರ್ಮದ ಬಗೆಗೂ ಸಹನೆ ತೋರುತ್ತಿದ್ದರು. ಚಾಳುಕ್ಯ ವಂಶದ ಜಯಸಿಂಹರಾಜನ ಆಸ್ಥಾನದಲ್ಲಿ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹವಿದ್ದು, ಶೈವ, ಜೈನ ಆಚಾರ್ಯರು ಸಮೃದ್ಧ ಧಾರ್ಮಿಕಜೀವನಕ್ಕೂ ದಾರ್ಶನಿಕಸಾಹಿತ್ಯಕ್ಕೂ ಕಾರಣರಾಗಿದ್ದರು. ಅನ್ಯಮತಸಹಿಷ್ಣುತೆಯೊಂದಿಗೆ ವಿವಿಧ ಮತಧರ್ಮಗಳಲ್ಲಿ ಶ್ರದ್ಧೆಯಿದ್ದ ವ್ಯಕ್ತಿಗಳೂ ಹಲವಾರು ಜನರಿದ್ದು ಎಲ್ಲ ಮತದ ದೇವರುಗಳನ್ನೂ ಪುಜಿಸಿ ಗೌರವಿಸುತ್ತಿದ್ದ ನಿದರ್ಶನಗಳು ಹಲವಾರಿವೆ. ೧೧೨೯ರ ಶಾಸನದ ವಾಕ್ಯವೊಂದು ಇದಕ್ಕೆ ಉತ್ತಮ ನಿದರ್ಶನ: ಹರಿ-ಹರ-ಕಮಲಾಸನ-ವೀತರಾಗ-ಬೌದ್ಧಾಲಯಂಗಳಂದಿನ ವಸುಂಧರೆಗೆಸೆವ ಪಂಚಶರದಂತಿರೆ ಪಂಚಮಠಂಗಳೆಸೆವುವಾಪಟ್ಟಣದೊಳ್ ಎಂದು ಅದು ಬಳ್ಳಿಗಾವೆಯನ್ನು ವರ್ಣಿಸುತ್ತದೆ.

ಹೊಯ್ಸಳರ ಆಶ್ರಯದಲ್ಲಿ ಈ ನೀತಿಗೆ ಹೆಚ್ಚಿನ ಪ್ರಾಧಾನ್ಯವಿತ್ತೆಂದು ತಿಳಿದುಬರುತ್ತದೆ. ಅವರ ಶಾಸನಗಳಲ್ಲಿ ವಿಶೇಷವಾಗಿ ಉಪಯೋಗಿಸಿರುವ ಧ್ಯಾನ ಶ್ಲೋಕ ಇದಕ್ಕೆ ನಿದರ್ಶನ. ಶಿವನೆಂಬ ಹೆಸರಿನಿಂದ ಶೈವರೂ, ಬ್ರಹ್ಮವೆಂದು ವೇದಾಂತಿಗಳೂ ಬುದ್ಧನೆಂದು ಬೌದ್ಧರೂ ಕರ್ತನೆಂದು ನೈಯಾಯಿಕರೂ ಅರ್ಹನೆಂದು ಜೈನರೂ ಕರ್ಮವೆಂದು ಮೀಮಾಂಸಕರೂ ಯಾರನ್ನು ಪುಜಿಸುವರೋ ಆ ಕೇಶವೇಶ ನಮ್ಮನ್ನು ರಕ್ಷಿಸಿಲೆಂಬುದು ಆ ಶ್ಲೋಕಾರ್ಥ. ಈ ತತ್ತ್ವದ ಅನುಷ್ಠಾನ ಎಷ್ಟುಮಟ್ಟಿಗೆ ಬಳಕೆಯಲ್ಲಿತ್ತೆಂಬುದನ್ನು ಸಮಕಾಲೀನ ಶಾಸನಗಳೂ ಸಾಹಿತ್ಯವೂ ತೋರಿಸುತ್ತವೆ. ಎಲ್ಲ ಧರ್ಮಗಳ ದೇವತೆಗಳಿಗೂ ಆಲಯಗಳನ್ನು ಕಟ್ಟಿ ದಾನದತ್ತಿಗಳನ್ನು ನೀಡಲಾಗಿತ್ತು. ಶೈವರಲ್ಲಿ ವೈದಿಕರು, ಲಕುಲೀಶ ಪಾಶುಪತ ಸಂಪ್ರದಾಯದವರು ಮತ್ತು ವೀರಶೈವರೆಂಬ ತ್ರಿವರ್ಗಗಳವರಿದ್ದರು. ವೈಷ್ಣವರಲ್ಲಿ ವಾಸುದೇವನ ಆರಾಧಕರಾದ ಭಾಗವತರು, ದಕ್ಷಿಣದೇಶದ ಆಳ್ವಾರುಗಳ ಪಂಥ ಮತ್ತು ಅದರಿಂದ ವಿಕಾಸಗೊಂಡ ರಾಮಾನುಜೀಯ ಶ್ರೀವೈಷ್ಣವಪಂಥ ಮತ್ತು ಹೊಯ್ಸಳಯುಗದ ಕೊನೆಯ ಭಾಗದಲ್ಲಿ ಮಧ್ವಮುನಿ ಸಂಚಾಲಿತ ವೈಷ್ಣವಪಂಥಗಳು ಪ್ರಧಾನವಾಗಿದ್ದುವು. ವಿಷ್ಣುವಿನ ವಿವಿಧ ಅವತಾರಗಳೂ ಸೂರ್ಯ, ಶಕ್ತಿ, ಸರಸ್ವತಿ, ಕಾರ್ತಿಕೇಯ, ಗಣಪತಿಗಳನ್ನು ಪುಜಿಸುತ್ತಿದ್ದ ಮತಪ್ರಭೇದಗಳೂ ರೂಢಿಯಲ್ಲಿದ್ದುವು. ಈ ಕಾಲದಲ್ಲಿ ಹಿಂದೂ ಧರ್ಮದ ಇಬ್ಬರು ಮಹಾನ್ ಆಚಾರ್ಯಪುರುಷರು ದಕ್ಷಿಣ ಕರ್ನಾಟಕದಲ್ಲಿ ಬಾಳಿ ತಮ್ಮ ಉಪದೇಶಾಮೃತದಿಂದ ಧಾರ್ಮಿಕ ಪ್ರವೃತ್ತಿಯ ಬೆಳೆವಣಿಗೆಗೆ ಕಾರಣರಾದರು. ತಮಿಳು ದೇಶದಲ್ಲಿ ೫ನೆಯ ಶತಮಾನದಿಂದ ಆಳ್ವಾರುಗಳು ಪ್ರಸಾರಮಾಡಿದ ತತ್ತ್ವಗಳನ್ನು ೧೧ನೆಯ ಶತಕದಲ್ಲಿ ನಾಥಮುನಿಯೂ ಆತನ ಮೊಮ್ಮಗ ಯಾಮುನಾಚಾರ್ಯರು ಜನಪ್ರಿಯಗೊಳಿಸಿದ್ದರು. ಅದೇ ಸಂಪ್ರದಾಯಕ್ಕೆ ಸೇರಿದ ರಾಮಾನುಜಾಚಾರ್ಯರು (೧೦೭೧-೧೧೩೭) ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ಜನಿಸಿದರಾದರೂ ತಮ್ಮ ಜೀವನದ ಸಂಧಿಕಾಲದಲ್ಲಿ ಇವರು ಕರ್ಣಾಟಕದಲ್ಲಿ ಆಶ್ರಯ ಪಡೆದರು. ಶ್ರೀವೈಷ್ಣವ ಅಥವಾ ವಿಶಿಷ್ಟಾದ್ವೈತ ಪಂಥವನ್ನು ಪ್ರತಿಷ್ಠಾಪಿಸಿದ ಆಚಾರ್ಯರು ಶೈವನಾಗಿದ್ದ ಚೋಳರಾಜನ ಹಿಂಸೆಗೊಳಗಾಗಿ ತಮಿಳುನಾಡಿನಿಂದ ಕರ್ನಾಟಕದ ಸಾಲಿಗ್ರಾಮ, ತೊಂಡನೂರು, ಮೇಲುಕೋಟೆಗಳಲ್ಲಿ ಬಹುಕಾಲ ನೆಲೆಸಿದ್ದರು. ಇವರು ತೊಂಡನೂರಿನಲ್ಲಿದ್ದಾಗ ಹೊಯ್ಸಳ ವಿಷ್ಣುವರ್ಧನ ಇವರ ಪ್ರಭಾವಕ್ಕೊಳಗಾದ. ರಾಮಾನುಜರು ಕರ್ನಾಟಕದಲ್ಲಿ ತಮ್ಮ ತತ್ತ್ವಗಳನ್ನು ಬೋಧಿಸಿ ವಿಶಿಷ್ಟಾದ್ವೈತ ಮತವನ್ನು ಇಲ್ಲೂ ನೆಲೆಗೊಳಿಸಿದರು. ಜಾತಿ ವೈಷಮ್ಯಗಳನ್ನು ಎದುರಿಸಿ ಎಲ್ಲ ಜಾತಿಗಳವರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರಲ್ಲದೆ ಅವುಗಳ ನಿರ್ಮೂಲಕ್ಕೂ ಶ್ರಮಿಸಿದರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಭಕ್ತಿಮಾರ್ಗವನ್ನು ಉತ್ತೇಜಿಸಿದರು. ಪ್ರಪತ್ತಿಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯವೆಂಬುದು ಇವರ ಬೋಧನೆ. ತಲಕಾಡು, ಬೇಲೂರು, ತೊಂಡನೂರು, ಮೇಲುಕೋಟೆ ಮತ್ತು ಗದಗಗಳಲ್ಲಿ ನಾರಾಯಣ ದೇಗುಲಗಳ ಸ್ಥಾಪನೆಯೂ ಇವರು ಕರ್ನಾಟಕದಲ್ಲಿ ಸಾಧಿಸಿದ ಕಾರ್ಯಗಳಲ್ಲೊಂದೆಂದು ಹೇಳಲಾಗಿದೆ. ಮುಂದಿನ ಶತಮಾನದಲ್ಲಿದ್ದ ಮಧ್ವಾಚಾರ್ಯರು (ಆನಂದತೀರ್ಥ, ಪೂರ್ಣಪ್ರಜ್ಞ-ಸು. ೧೨೩೮-೧೩೧೭) ಉಡುಪಿಯ ಬಳಿ ಪಾಜಕವೆಂಬಲ್ಲಿ ಜನಿಸಿ ಬಾಲ್ಯದಲ್ಲೇ ವೇದಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದರು. ಗುರುಗಳಾದ ಅಚ್ಯುತಪ್ರೇಕ್ಷರಿಂದ ಸನ್ಯಾಸ ಪಡೆದು ಅನಂತರ ಕಾಲದಲ್ಲಿ ವೈಷ್ಣವ ಅಥವಾ ದ್ವೈತಮತಸ್ಥಾಪಕರಾದರು. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದುದಲ್ಲದೆ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ತಮ್ಮ ಮತಪ್ರಸಾರ ಮಾಡಿದರು. ಈ ಧರ್ಮದ ಪ್ರಭಾವ ಉತ್ತರದಲ್ಲಿ ಬಂಗಾಲ ಗುಜರಾತುಗಳಿಗೂ ವ್ಯಾಪಿಸಿತ್ತು. ಎಂಟನೆಯ ಶತಮಾನದ ಶಂಕರಾಚಾರ್ಯರು, ಅನಂತರದ ರಾಮಾನುಜಾಚಾರ್ಯರು, ಮಧ್ವಾಚಾರ್ಯ, ಬಸವೇಶ್ವರ ಮುಂತಾದ ಮಹಾಪುರುಷರ ಉಪದೇಶದ ಫಲವಾಗಿ ಕರ್ನಾಟಕದ ಜನತೆಯಲ್ಲಿ ಕ್ರಾಂತಿಕಾರಿ ಸುಧಾರಣಾ ಮನೋಭಾವಗಳು ಬೆಳೆದುವಲ್ಲದೆ, ನೈತಿಕ, ಧಾರ್ಮಿಕ ಮತ್ತು ಸದಾಚಾರಯುಕ್ತ ಭಾವನೆಗಳು ಬೆಳೆದುವು. ಶಂಕರರು ಜ್ಞಾನಮಾರ್ಗ ಪ್ರತಿಪಾದಕರಾಗಿದ್ದರೆ ಉಳಿದ ಮೂವರೂ ಭಕ್ತಿಪಂಥದ ಪ್ರಸಾರಕರಾಗಿದ್ದರು. ರಾಮಾನುಜ, ಮಧ್ವರು ಸಂಪ್ರದಾಯವಾದಿಗಳಾಗಿದ್ದು ವೇದಶಾಸ್ತ್ರ ಪುರಾಣಗಳ ಮೂಲಕವೇ ಮೋಕ್ಷಸಾಧನೆಯ ಮಾರ್ಗ ತೋರಿಸಿದರೆ ಬಸವೇಶ್ವರರು ಸಾಮಾನ್ಯರಿಗೂ ಅರ್ಥವಾಗುವ ಆಡುನುಡಿಯಲ್ಲಿ ಕಾಯಕ, ಸತ್ಯ, ಸದಾಚಾರಗಳ ಉತ್ಕೃಷ್ಟತೆಯನ್ನು ಬೋಧಿಸಿದರು. ಮಧ್ವಾಚಾರ್ಯರ ಮುಖ್ಯಶಿಷ್ಯರೂ ಒರಿಸ್ಸರಾಜ್ಯದ ರಾಜಪ್ರತಿನಿಧಿಯೂ ಆಗಿದ್ದ, ಅನಂತರ ಸನ್ಯಾಸದೀಕ್ಷೆ ವಹಿಸಿದ ನರಹರಿತೀರ್ಥರು ಅನಂತರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾಬಲ್ಯಪಡೆದ ಹರಿದಾಸ ಸಂಪ್ರದಾಯದ ಅಸ್ತಿಭಾರವನ್ನು ನಿರ್ಮಿಸಿದರು. ಈ ರೀತಿಯಲ್ಲಿ ಈ ಮೂರು ಶತಕಗಳ ಕಾಲ ಕರ್ನಾಟಕದ ಮತ ಧರ್ಮಗಳ ಇತಿಹಾಸದಲ್ಲಿ ಬಹಳ ಮಹತ್ತ್ವಪೂರ್ಣಯುಗವಾಗಿತ್ತು.

ಈ ಕಾಲದಲ್ಲಿ ಸಾಮಾಜಿಕ ಹಾಗೂ ಆರ್ಥಿಕರಂಗಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ. ಕರ್ನಾಟಕದಾದ್ಯಂತ ಆರನೆಯ ಶತಮಾನದಿಂದ ರೂಢಿಯಲ್ಲಿದ್ದ ಆಚಾರ ವ್ಯವಹಾರಗಳು ಮುಂದುವರಿದುಕೊಂಡು ಬರುತ್ತಿದ್ದುವು. ಆದರೂ ರಾಜಕೀಯ ಮತ್ತು ಮತೀಯ ಕ್ಷೇತ್ರಗಳಲ್ಲುಂಟಾದ ಮಹತ್ತ್ವಪುರಿತ ಮಾರ್ಪಾಟುಗಳ ಪ್ರಭಾವ ಅಲ್ಲಲ್ಲಿ ಕಾಣಬರುತ್ತವೆ. ಕುಟುಂಬಜೀವನ ಸಾಮಾಜಿಕ ವ್ಯವಸ್ಥೆಯನ್ನನುಸರಿಸಿಕೊಂಡು ಹೋಗಬೇಕಾಗಿದ್ದುದರಿಂದ ಇಂಥ ಬದಲಾವಣೆಗಳು ಕಂಡುಬರುತ್ತವೆ. ಪಿತೃಪ್ರಧಾನ ಸಮಾಜಪದ್ಧತಿ ಬಳಕೆಯಲ್ಲಿದ್ದರೂ ಕುಟುಂಬದ ಇತರ ಸದಸ್ಯರು ತಮ್ಮ ಮತ ಮತ್ತು ವೃತ್ತಿಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದರು. ಒಂದೇ ಕುಟುಂಬದಲ್ಲಿ ಬೇರೆ ಬೇರೆ ಧರ್ಮಗಳ ಅನುಯಾಯಿಗಳಿದ್ದ ಪ್ರತ್ಯೇಕವೃತ್ತಿಗಳನ್ನನುಸರಿಸುತ್ತಿದ್ದ ವ್ಯಕ್ತಿಗಳಿದ್ದುದಕ್ಕೆ ಹಲವಾರು ನಿದರ್ಶನಗಳಿವೆ. ದೊರೆಗಳು ವರ್ಣಾಶ್ರಮ ಧರ್ಮಗಳ ರಕ್ಷಕರಾಗಿದ್ದರೆಂದು ಶಾಸನಗಳು ತಿಳಿಸುತ್ತವೆ. ಆದರೆ ಯುದ್ಧವಿದ್ಯಾಪರಿಣತರಾದ ಬ್ರಾಹ್ಮಣರ ಮತ್ತು ವೈಶ್ಯರ ಉಲ್ಲೇಖಗಳು ಕಂಡುಬರುತ್ತವೆ. ಮಧ್ಯಮವರ್ಗದವರಲ್ಲಿ ವ್ಯಾಪಾರಿಗಳಾದ ಶೆಟ್ಟಿ ಎಂಬ ವರ್ಗದವರು ಮುಖ್ಯರಾಗಿದ್ದರು. ಇವರಲ್ಲದೆ ವೀರಪಾಂಚಾಲರೆಂದು ಹೆಸರಾದ ಶಿಲ್ಪಕಾರರೂ ಅಕ್ಕಸಾಲಿಗ, ಬಡಗಿ, ಕಮ್ಮಾರ, ಕಂಚುಗಾರ, ಕುಂಬಾರ ಮುಂತಾದ ವೃತ್ತಿಗಾರರೂ ಸಮಾಜದ ಮುಖ್ಯ ವರ್ಗಗಳಲ್ಲಿದ್ದರು. ವೈವಾಹಿಕ ಪದ್ದತಿಗಳ ವಿಷಯವಾಗಿ ಹೆಚ್ಚಿನ ಮಾಹಿತಿಗಳು ದೊರಕದಿದ್ದರೂ ಮೇಲ್ಜಾತಿಗಳವರು ಹಿಂದೂ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಂತೆ ಕಂಡುಬರುತ್ತದೆ. ಶ್ರೀಮಂತ-ರಾಜಪುರುಷರಲ್ಲಿ ಬಹುಪತ್ನೀತ್ವ ರೂಢಿಯಲ್ಲಿದ್ದರೂ ಜನಸಾಮಾನ್ಯರಲ್ಲಿ ಏಕಪತ್ನೀತ್ವ ಆದರ್ಶವಾಗಿತ್ತು. ಮಹಿಳೆಯರಿಗೆ ಗೌರವಾದರಗಳು ಹಿಂದಿನಂತೆ ದೊರೆಯುತ್ತಿದ್ದು, ರಾಜಕಾರಣ, ವಿದ್ಯೆ ಮತ್ತು ಕಲೆಗಳಲ್ಲಿ ಅವರು ಪ್ರಾವಿಣ್ಯಗಳಿಸಿದ್ದರು. ವಿಷ್ಣುವರ್ಧನನ ರಾಣಿ ಶಾಂತಲೆ, ಸಾಮಂತ ಬರಮಯ್ಯನ ಪತ್ನಿ ಬಾಗನಬ್ಬೆ, ಕುಂಜೇಶ್ವರ ದೇವಾಲಯದ ನಿರ್ಮಾತೃ ಕುಂಜುನಂಬಿಶೆಟ್ಟಿಯ ಪುತ್ರಿಯೂ ಆ ದೇವಾಲಯದ ಮೇಲ್ವಿಚಾರಕಳೂ ಆದ ಘನಕುಮಾರಿ ಚಂದವ್ವೆ- ಇವರು ಇಂಥ ಕೆಲವರು. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಅತ್ತಿಮಬ್ಬೆಯೊಬ್ಬ ಉಲ್ಲೇಖಾರ್ಹ ವ್ಯಕ್ತಿ. ಸಾಹಿತ್ಯಾಭಿರುಚಿಯಿಂದ ಆಕೆ ರನ್ನ ಕವಿಯ ಪೋಷಕಳೂ ಆಗಿದ್ದಳು. ಪೊನ್ನಕವಿಯ ಶಾಂತಿನಾಥಪುರಾಣದ ಒಂದು ಸಾವಿರ ಪ್ರತಿಗಳನ್ನು ಮಾಡಿಸಿ ವಿದ್ವಾಂಸರಿಗೆ ಹಂಚಿದ ಕೀರ್ತಿ ಆಕೆಯದು. ೧,೫೦೦ ಜೈನಬಸದಿಗಳನ್ನು ನಿರ್ಮಿಸಿ, ಅವುಗಳಲ್ಲಿ ಸ್ಥಾಪಿಸಲು ವಿಗ್ರಹಗಳನ್ನೂ ಆಕೆ ದಾನ ಮಾಡಿದಳು. ದಾನಚಿಂತಾಮಣಿಯೆಂಬ ಬಿರುದು ಆಕೆಗೆ ಅನ್ವರ್ಥವಾದುದೇ. ಇಮ್ಮಡಿ ಜಯಸಿಂಹ ದೊರೆಯ ಅಕ್ಕ ಅಕ್ಕಾದೇವಿ ಪ್ರಾಂತ್ಯಾಧಿಕಾರಿಣಿಯಾಗಿದ್ದುದಲ್ಲದೆ ಯುದ್ಧರಂಗದಲ್ಲಿ ಶೌರ್ಯ ತೋರಿ ಅಮರಳಾದಳು. ಆಕೆಯ ಬಿರುದು ರಣಭೈರವೀ. ಬಸವೇಶ್ವರರ ಪ್ರಭಾವದಿಂದ ಸ್ತ್ರೀಯರಿಗೆ ಹೆಚ್ಚು ಅವಕಾಶ ದೊರಕಿತು. ಅವರ ಪತ್ನಿಯರಾದ ಗಂಗಾಂಬಿಕೆ ನೀಲಾಂಬಿಕೆಯೂ ಅಕ್ಕನಾದ ಅಕ್ಕನಾಗಮ್ಮನೂ ಶಿವಶರಣೆಯರಾದ ಅಕ್ಕಮಹಾದೇವಿ ಮುಕ್ತಾಯಕ್ಕರೂ ಕರ್ನಾಟಕದ ನಾರೀಮಣಿಗಳಾಗಿ ಶೋಭಿಸಿದರು. ೩ನೆಯ ಭಿಲ್ಲಮನ ಬಾಲ್ಯದಲ್ಲಿ ಯಾದವವಂಶದ ರಾಣಿ ಲಚ್ಚಿಯವ್ವ ರಾಜಪ್ರತಿನಿಧಿಯಾಗಿದ್ದು ಉತ್ತಮ ಆಡಳಿತ ನಡೆಸಿದಳು.

ಆ ಕಾಲದ ಸಾಹಿತ್ಯದ ಬೆಳೆವಣಿಗೆ ಗಮನಾರ್ಹವಾದದ್ದು. ಸಂಸ್ಕೃತ ಕನ್ನಡ ಸಾಹಿತ್ಯಗಳು ಏಕಮುಖವಾಗಿ ಬೆಳೆದರೂ ಜನಸಾಮಾನ್ಯರ ಭಾಷೆಯಾಗಿ ಬಹುಮುಖವಾಗಿ ವಿಕಸಿಸುತ್ತಿದ್ದ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದುದು ನ್ಯಾಯವೇ. ಕಲ್ಯಾಣ ಚಾಳುಕ್ಯರ ಆಶ್ರಯದಲ್ಲಿ ಸಂಸ್ಕೃತ ಸಾಹಿತ್ಯಲೋಕದಲ್ಲಿ ಕೀರ್ತಿವೆತ್ತ ವಾದಿರಾಜ, ಬಿಲ್ಹಣ, ವಿಜ್ಞಾನೇಶ್ವರರಂಥ ಪ್ರಭೃತಿಗಳಿದ್ದರು. ಈ ವಂಶದ ಜಗದೇಕಮಲ್ಲನ ಆಸ್ಥಾನದಲ್ಲಿ ವಾದಿರಾಜನಿದ್ದ. ಆತ ಸತ್ತರ್ಕ ಷಣ್ಮುಖ, ಸ್ಯಾದ್ವಾದ ವಿದ್ಯಾಪತಿ, ಜಗದೇಕಮಲ್ಲವಾದಿ ಎಂಬ ಬಿರುದುಗಳನ್ನು ಪಡೆದಿದ್ದುದಲ್ಲದೆ ಸಮಕಾಲೀನ ಮತ್ತು ಅನಂತರಕಾಲದ ಶಾಸನಗಳಲ್ಲೂ ವಿಶೇಷವಾಗಿ ಕೀರ್ತಿತನಾಗಿದ್ದಾನೆ. ಆತನ ಹಲವಾರು ಕೃತಿಗಳ ಪೈಕಿ ಯಶೋಧರಚರಿತ, ಪಾಶರ್ವ್‌ನಾಥಚರಿತ, ನ್ಯಾಯವಿನಿಶ್ಚಯ ಟೀಕಾ, ಪ್ರಮಾಣ ನಿರ್ಣಯ- ಇವು ಮುಖ್ಯವಾದವು. ಇವುಗಳಲ್ಲಿ ನ್ಯಾಯ ವಿನಿಶ್ಚಯ ಟೀಕಾ ಆತನ ಆಳವಾದ ಪಾಂಡಿತ್ಯಕ್ಕೆ ಸಾಕ್ಷಿ ಮತ್ತು ಭಾರತೀಯ ದಾರ್ಶನಿಕ ಸಾಹಿತ್ಯದಲ್ಲೊಂದು ಅಪೂರ್ವಗ್ರಂಥ. ಬಳ್ಳಿಗಾವೆಯ ಲಕುಲೀಶ ಪಂಡಿತನೆಂಬ ಶೈವಗುರು ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದು ೧೦೩೬ರ ಶಾಸನವೊಂದರಲ್ಲಿ ಹೇಳಲಾಗಿದೆ. ಜಗದೇಕಮಲ್ಲನ ಆಸ್ಥಾನದಲ್ಲಿದ್ದ ಎರಡನೆಯ ನಾಗವರ್ಮ ಸುಪ್ರಸಿದ್ಧ; ಕನ್ನಡ ಮತ್ತು ಸಂಸ್ಕೃತ ಕವಿ. ಆತ ರಚಿಸಿದ ಕೋಶಗ್ರಂಥವೀಗ ಉಪಲಬ್ಧವಿಲ್ಲದಿದ್ದರೂ ಇತರ ಕೃತಿಗಳಲ್ಲಿ ಉದ್ಧೃತವಾದ ಕೆಲವು ಭಾಗಗಳು ದೊರಕಿವೆ. ಶಾಕಟಾಯನ ವ್ಯಾಕರಣವನ್ನೊಳಗೊಂಡ ರೂಪಸಿದ್ಧಿ ಗ್ರಂಥಕಾರ ದಯಾಪಾಲ ಈ ಕಾಲದ ಮತ್ತೊಬ್ಬ ಕವಿ. ೬ನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದು ಐತಿಹಾಸಿಕ ಕಾವ್ಯಗಳನ್ನು ರಚಿಸಿದವರಲ್ಲಿ ಪ್ರಮುಖ ಬಿಲ್ಹಣ. ಆತ ತನ್ನ ಆಶ್ರಯದಾತನ ಜೀವನ ಚರಿತ್ರೆಯನ್ನು ತಿಳಿಸುವ ವಿಕ್ರಮಾಂಕದೇವಚರಿತ ಮತ್ತು ಶೃಂಗಾರರಸಭರಿತವಾದ ಚಾರಪಂಚಾಶಿಕಾ ಅಥವಾ ಬಿಲ್ಹಣ ಕಾವ್ಯ- ಇವುಗಳ ಕರ್ತೃ. ಅದೇ ಕಾಲದ ವಿಜ್ಞಾನೇಶ್ವರನ ಮಿತಾಕ್ಷರ ಗ್ರಂಥ ಧರ್ಮಶಾಸ್ತ್ರಗಳ ಮತ್ತು ಯಾಜ್ಞವಲ್ಕ್ಯ ಸ್ಮೃತಿಯ ಸಾರಸಂಗ್ರಹವಾಗಿದ್ದು, ಅನಂತರ ಕಾಲದ ಅನೇಕ ವ್ಯಾಖ್ಯಾನ ವಿವರಗಳಿಗೆ ಮೂಲವಾಗಿತ್ತಲ್ಲದೆ ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಮುಖ ಪರಾಮರ್ಶನ ಗ್ರಂಥವಾಗಿತ್ತು. ೩ನೆಯ ಸೋಮೇಶ್ವರನ ಕೃತಿಯೆಂದು ಹೇಳಲಾದ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ವಿಶ್ವಕೋಶ ಸದೃಶ ಮಹದ್ಗ್ರಂಥ. ಇದು ಆತನ ಆಸ್ಥಾನದಲ್ಲಿದ್ದ ವಿದ್ವಾಂಸರೆಲ್ಲ ಸೇರಿ ಆತನ ನೇತೃತ್ವದಲ್ಲಿ ಸೃಷ್ಟಿಸಿದ್ದಿರಬಹುದು. ಇವಲ್ಲದೆ ಇನ್ನೂ ಹಲವಾರು ಕೃತಿಗಳು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಸಂಸ್ಕೃತದಲ್ಲಿ ರಚಿತವಾದುವು.

ಹೊಯ್ಸಳ ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯದ ಕೆಲವು ಗಮನಾರ್ಹ ಕೃತಿಗಳು ರಚಿತವಾದುವು. ರಾಮಾನುಜ, ಮಧ್ವ ಮತ್ತು ಅವರ ಶಿಷ್ಯಸಮುದಾಯದ ಅನೇಕ ಕೃತಿಗಳು ಶ್ರೀವೈಷ್ಣವ ಮತ್ತು ವೈಷ್ಣವ ತತ್ತ್ವಗಳನ್ನು ನಿರೂಪಿಸುತ್ತವೆ. ರಾಮಾನುಜರು ಭಗವದಾರಾಧನ ಕ್ರಮ, ಗದ್ಯತ್ರಯವೆಂಬ ಆಚಾರ ನಿತ್ಯಕರ್ಮಗಳಿಗೆ ಸಂಬಂಧಿಸಿದ ಕೃತಿಗಳನ್ನೂ ಬ್ರಹ್ಮ ಸೂತ್ರವನ್ನೂ ಪವಿತ್ರ ಶ್ರೀ ಭಾಷ್ಯವನ್ನೂ ಗೀತಾಭಾಷ್ಯವನ್ನೂ ವೇದಾಂತಸಂಗ್ರಹವೆಂಬ ಉಪನಿಷದ್ವಾಖ್ಯಾನವನ್ನೂ ವೇದಾಂತ ಸಾರ ಮತ್ತು ವೇದಾಂತ ದೀಪಿಕಾ ಎಂಬ ಗ್ರಂಥಗಳನ್ನೂ ರಚಿಸಿದರು. ಇವಲ್ಲದೆ ವಿಶಿಷ್ಟಾದ್ವೈತಕ್ಕೆ ಸಂಬಂಧಿಸಿದ ಹಲವಾರು ಕೃತಿಗಳು ಅವರ ಶಿಷ್ಯರಿಂದ ನಿರ್ಮಿತವಾದುವು. ಈ ಪರಂಪರೆಯ ಕೊನೆಯಲ್ಲಿ, ವಿಜಯನಗರ ಕಾಲದಲ್ಲಿ, ವೇದಾಂತದೇಶಿಕರ ಗ್ರಂಥಗಳು ಬಂದುವು. ಮಧ್ವಾಚಾರ್ಯರ ಋಗ್ಭಾಷ್ಯ, ಸದಾಚಾರಸ್ಮೃತಿ, ತಂತ್ರಸಾರ, ಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳು ವೇದಸಾಹಿತ್ಯ ಮತ್ತು ಆಚಾರಗಳಿಗೆ ಸಂಬಂಧಿಸಿದ್ದರೆ, ಬ್ರಹ್ಮ ಸೂತ್ರಗಳ ಮೇಲಣ ನಾಲ್ಕು ಗ್ರಂಥಗಳು, ಗೀತೆಯ ಮೇಲಣ ಎರಡು, ಉಪನಿಷತ್ತುಗಳ ವ್ಯಾಖ್ಯಾನ- ಇವು ದಾರ್ಶನಿಕ ಸಾಹಿತ್ಯಕ್ಕೆ ಸೇರುತ್ತವೆ. ಅವರ ಭಾರತ ಮತ್ತು ಭಾಗವತ ಸಂಗ್ರಹಗಳು ಉತ್ತಮ ಪೌರಾಣಿಕ ಸಾಹಿತ್ಯ. ಕರ್ಮನಿರ್ಣಯ ಮತ್ತು ಖಂಡನತ್ರಯಗಳು ಸ್ವಮತ ಸಮರ್ಥನೆ ಮತ್ತು ಇತರ ಮತಾಚಾರ್ಯರ ಸಿದ್ಧಾಂತಗಳ ಖಂಡನೆಗೆ ಮೀಸಲಾಗಿವೆ. ಇವರ ಶಿಷ್ಯವರ್ಗಕ್ಕೆ ಸೇರಿದ ತ್ರಿವಿಕ್ರಮಪಂಡಿತ, ನಾರಾಯಣಪಂಡಿತ, ಪದ್ಮನಾಭತೀರ್ಥ ಮತ್ತು ನರಹರಿತೀರ್ಥರ ಅನೇಕ ಕೃತಿಗಳು ತತ್ತ್ವಶಾಸ್ತ್ರ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳು. ಈ ಇಬ್ಬರು ಮಹಾನ್ ಆಚಾರ್ಯರ ಮತ್ತು ಅವರ ಶಿಷ್ಯಸಮೂಹದ ಅವಿರತ ಚಟುವಟಿಕೆಗಳಿಂದ ಜಾಗೃತರಾದ ಅನೇಕ ಪ್ರಸಿದ್ಧ ಅದ್ವೈತ ಗ್ರಂಥಕಾರರು ಕಾಣಬರುತ್ತಾರೆ. ಆನಂದಬೋಧಭಟ್ಟಾಚಾರ್ಯ, ವಾದೀಂದ್ರ, ಭುವನಸುಂದರಸೂರಿ ಮತ್ತು ಅಮಲಾನಂದ ವ್ಯಾಸಾಶ್ರಯರು ಇವರಲ್ಲಿ ಮುಖ್ಯರು. ಹೊಯ್ಸಳಯುಗದ ಅಂತ್ಯದಲ್ಲಿ ಬಾಳಿದ, ಅನಂತರ ವಿಜಯನಗರದ ಸ್ಥಾಪಕರೆಂದು ಹೆಸರಾದ, ವಿದ್ಯಾರಣ್ಯ-ಮಾಧವರು ಅದ್ವೈತ ಸಿದ್ಧಾಂತದ ಮಹಾಪುರುಷರಲ್ಲೊಬ್ಬರು. ಸಂಸ್ಕೃತಸಾಹಿತ್ಯಕ್ಕೆ ಸೇವೆ ಮಾಡಿದ ಜೈನ ವಿದ್ವಾಂಸರಲ್ಲಿ ಸಾರಚತುಷ್ಟಯದ ವ್ಯಾಖ್ಯಾನಕಾರ ಬಾಲಚಂದ್ರ, ಗುರುಪಂಚ ಸ್ಮೃತಿಯ ಕರ್ತೃ ರಾಮಚಂದ್ರ ಮಾಲಾಧಾರಿ ಮುಖ್ಯರು. ಹೊಯ್ಸಳ ರಾಜ್ಯ ಭಾಗಗಳಲ್ಲಿದ್ದ ಪಾಲ್ಕುರಿಕೆ ಸೂರಣ್ಣ, ಗುರು ಲಿಂಗಾರ್ಯ, ಬೊಬ್ಬೂರು ಸಂಗಣ, ಮಲ್ಲಿನಾಥ, ಚೆನ್ನರಾಮ ಮುಂತಾದವರು ಪ್ರಮುಖ ಶೈವಲೇಖಕರು. ಈ ಲೌಕಿಕ ಸಾಹಿತ್ಯರಂಗದಲ್ಲಿ ಗಮನಾರ್ಹವಾದುದು ಹೊಯ್ಸಳರ ಆಶ್ರಿತರಾಗಿದ್ದ ವಿದ್ಯಾಚಕ್ರವರ್ತಿಗಳೆಂಬ ಬಿರುದಿದ್ದ ಕವಿಗಳ ಮನೆತನ. ೧ನೆಯ ವಿದ್ಯಾ ಚಕ್ರವರ್ತಿ ಎರಡನೆಯ ಬಲ್ಲಾಳನ ಆಸ್ಥಾನದಲ್ಲಿದ್ದ. ಅವನ ಮೊಮ್ಮಗ ೨ನೆಯ ವಿದ್ಯಾಚಕ್ರವರ್ತಿ, ಗದ್ಯಕರ್ಣಾಮೃತದ ಕರ್ತೃ, ೨ನೆಯ ನರಸಿಂಹನ ಆಸ್ಥಾನಿಕ. ಅವನ ಮೊಮ್ಮಗ ಮೂರನೆಯ ವಿದ್ಯಾ ಚಕ್ರವರ್ತಿ ರುಕ್ಮಿಣೀ ಕಲ್ಯಾಣವೆಂಬ ಮಹಾಕಾವ್ಯದ ಕರ್ತೃ; ಕಾವ್ಯಪ್ರಕಾಶಕ್ಕೂ ಅಲಂಕಾರಸರ್ವಸ್ವಕ್ಕೂ ವ್ಯಾಖ್ಯಾನಕಾರ. ಈ ರೀತಿ ಈ ಯುಗದಲ್ಲಿ ಸಂಸ್ಕೃತಸಾಹಿತ್ಯ ಸಂಪದ್ಯುಕ್ತವಾಗಿಯೂ ಚೈತನ್ಯಪೂರ್ಣವಾಗಿಯೂ ಬೆಳೆಯಿತು.

ಕಲ್ಯಾಣ ಚಾಳುಕ್ಯ ಸಾಮ್ರಾಜ್ಯಕಾಲದ ವೇಳೆಗೆ ಕನ್ನಡಸಾಹಿತ್ಯ ಪ್ರಗತಿ ಸಾಧಿಸಿತ್ತು. ಕನ್ನಡದ ಆದಿಕವಿ ಪಂಪನ ಪ್ರಭಾವ ಈ ಕಾಲದ ಸಾಹಿತಿಗಳ ಮೇಲೆ ಅಮಿತವಾಗಿತ್ತು. ಚಾಳುಕ್ಯರ ಆಶ್ರಿತರಾಗಿದ್ದ ಕನ್ನಡ ಕವಿಗಳಲ್ಲಿ ಮೊದಲಿಗನೆಂದರೆ ಕವಿಚಕ್ರವರ್ತಿ, ಕವಿರತ್ನ ಎಂದು ಪ್ರಸಿದ್ಧನಾದ ರನ್ನ. ಮುಧೋಳದಲ್ಲಿ ಜನಿಸಿ ಅಜಿತಸೇನರ ಬಳಿ ಶಿಕ್ಷಣ ಪಡೆದ ರನ್ನ ಚಾವುಂಡರಾಯ ಮತ್ತು ಅತ್ತಿಮಬ್ಬೆ ಇವರ ಕೃಪಾಪೋಷಿತನಾಗಿ ಕೊನೆಗೆ ಸತ್ಯಾಶ್ರಯದ ಬೆಡಂಗನ ಆಶ್ರಯ ಪಡೆದ. ರನ್ನನ ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ ಮತ್ತು ರನ್ನ ಕಂದ- ಈ ಮೂರು ಕೃತಿಗಳು ಲಭ್ಯವಾಗಿವೆ. ರನ್ನನ ಸಮಕಾಲೀನನಾದ ಒಂದನೆಯ ನಾಗವರ್ಮ ಛಂದೋಂಬುಧಿ ಮತ್ತು ಕರ್ಣಾಟಕ ಕಾದಂಬರಿಗಳ ಕರ್ತೃ. ಅನಂತರಕಾಲದ ಎರಡನೆಯ ಜಯಸಿಂಹನ ಆಸ್ಥಾನದಲ್ಲಿದ್ದ ೨ನೆಯ ಚಾವುಂಡರಾಯ ಲೋಕೋಪಕಾರವೆಂಬ ಕೋಶಗ್ರಂಥ ರಚಿಸಿದ. ಆ ಕಾಲದ ಚಂದ್ರರಾಜ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಮದನತಿಲಕವೆಂಬ ಕೃತಿಯ ನಿರ್ಮಾಪಕ. ಜೈನಕವಿ ಶ್ರೀಧರಾಚಾರ್ಯ ಸೋಮೇಶ್ವರ ಒಂದನೆಯ ಆಹವಮಲ್ಲನ ಪೋಷಣೆಯಲ್ಲಿ ಜಾತಕತಿಲಕವೆಂಬ ಜ್ಯೋತಿಷಕಾವ್ಯ ರಚಿಸಿದ. ಚಾಳುಕ್ಯ ಯುವರಾಜ ಕೀರ್ತಿವರ್ಮನ (ವಿಕ್ರಮಾದಿತ್ಯನ ಸೋದರ) ಗೋವೈದ್ಯವೆಂಬ ಪಶುವೈದ್ಯಗ್ರಂಥ ಉಪಯುಕ್ತ ಕೃತಿ. ದುರ್ಗಸಿಂಹನ ಪಂಚತಂತ್ರ ಸಂಸ್ಕೃತ ಪಂಚತಂತ್ರದ ಆಧಾರದ ಮೇಲೆ ರಚಿಸಿದ ನೀತಿಗ್ರಂಥ. ಬನವಾಸಿಯ ಅಧಿಕಾರಿ ಲಕ್ಷ್ಮಣರಾಜನ ಆಶ್ರಿತನಾದ ಶಾಂತಿನಾಥನ ಚಂಪುಕಾವ್ಯ ಸುಕುಮಾರಚರಿತೆ ಪಂಪನ ಪ್ರಭಾವವನ್ನು ಪ್ರದರ್ಶಿಸಿದರೂ ಶಕ್ತಿಯುತವಾದ ಉತ್ತಮ ಕೃತಿ.

ಕಲ್ಯಾಣ ಚಾಳುಕ್ಯರ ಕೊನೆಗಾಲ ಮತ್ತು ಕಳಚುರಿಗಳ ಕಾಲವನ್ನು ಕರ್ನಾಟಕದ ವಚನ ಸಾಹಿತ್ಯಯುಗವೆಂದು ಹೇಳಬಹುದು. ವಚನಕಾರರಲ್ಲಿ ಮೊದಲಿಗನಾದ ದೇವರದಾಸಿಮಯ್ಯ (ಸು.೧೦೪೦) ನೇಕಾರ. ರಾಣಿ ಸುಗ್ಗಲೆಯನ್ನು ಶಿಷ್ಯಳಾಗಿ ಹೊಂದಿದ್ದ ಇವನ ವಚನಗಳು ಸರಳವೂ ಕಾವ್ಯಮಯವೂ ಆಗಿವೆ. ಬಸವೇಶ್ವರರು ವಚನಕಾರರಲ್ಲಿ ಅತ್ಯುನ್ನತಸ್ಥಾನ ಗಳಿಸಿದ್ದಾರೆ. ದೈಹಿಕಶ್ರಮ, ಸತ್ಯ, ಜಾತ್ಯಂಧತೆಯ ಖಂಡನೆ, ಪ್ರಾಣಿದಯೆ, ಸರ್ವಸಮತೆಗಳನ್ನು ಬೋಧಿಸಿದ ಇವರ ವಚನಸಾಹಿತ್ಯ ಭಾರತೀಯ ಸಾಹಿತ್ಯಕ್ಕೆ, ಧಾರ್ಮಿಕ ಸಿರಿಗೆ ಕರ್ನಾಟಕದ ಅನುಪಮ ಕೊಡುಗೆ. ಅನಂತರದ ವಚನಕಾರರಲ್ಲಿ ಅಲ್ಲಮಪ್ರಭು, ಚೆನ್ನಬಸವ, ಸಿದ್ಧರಾಮ, ಮಡಿವಾಳ ಮಾಚಯ್ಯ, ಅಂಬಿಗ ಚೌಡಯ್ಯ, ಉರಿಲಿಂಗದೇವ, ಗಜೇಶ ಮಸಣಯ್ಯ ಮೊದಲಾದವರು ಸ್ಮರಣೀಯರು. ವಚನಗಳನ್ನು ರಚಿಸಿದ ಸ್ತ್ರೀಯರಲ್ಲಿ ಅಗ್ರಸ್ಥಾನ ಅಕ್ಕಮಹಾದೇವಿಗೆ ಸಲ್ಲತಕ್ಕದ್ದು. ಈಕೆಯ ವಚನಗಳು ಭಾವಗೀತೆಗಳಂತಿವೆ. ಮುಕ್ತಾಯಕ್ಕ, ನೀಲಮ್ಮ ಮುಂತಾದವರೂ ಈ ಕ್ಷೇತ್ರದಲ್ಲಿ ಉನ್ನತವರ್ಗದ ವ್ಯಕ್ತಿಗಳು. ವಚನ ಸಾಹಿತ್ಯ ಕನ್ನಡ ಭಾಷಾಸಿರಿಯನ್ನು ಸುವ್ಯಕ್ತಪಡಿಸಿ ಹೊಸಜೀವನದ ಹೆದ್ದಾರಿ ನಿರ್ಮಿಸಿತು. ಕಲ್ಯಾಣ ಚಾಳುಕ್ಯಯುಗದ ಇತರ ಕೃತಿಗಳಲ್ಲಿ ನಯಸೇನನ ಧರ್ಮಾಮೃತ ಗಮನಾರ್ಹ. ೨ನೆಯ ನಾಗವರ್ಮ ಕವಿ ಜನ್ನನ ಗುರು. ಅಭಿನವ ಶರ್ವವರ್ಮನೆಂಬ ಬಿರುದಿದ್ದ ಈತನ ಕಾವ್ಯಾವಲೋಕನ, ಭಾಷಾಭೂಷಣ ಮತ್ತು ಅಭಿಧಾನ ವಸ್ತುಕೋಶ- ಈ ಮೂರು ಕೃತಿಗಳು ದೊರಕಿವೆ. ಬ್ರಹ್ಮಶಿವನ ಕೃತಿಯಾದ ಸಮಯ ಪರೀಕ್ಷೆ ವಿವಿಧ ಮತ ತತ್ತ್ವಗಳನ್ನು ಪರಿಶೀಲಿಸುತ್ತದೆ.

ಹೊಯ್ಸಳರ ಕಾಲದಲ್ಲಿ ಒಂದನೆಯ ಬಲ್ಲಾಳನ ಆಸ್ಥಾನ ಕವಿಯಾದ ನಾಗಚಂದ್ರ ಪಂಪನಿಂದ ಪ್ರಭಾವಿತನಾಗಿ, ಅಭಿನವ ಪಂಪನೆಂದು ಹೇಳಿಕೊಂಡಿದ್ದಾನೆ. ಪಂಪರಾಮಾಯಣವೆಂಬ ಕೀರ್ತಿ ಪಡೆದಿರುವ ರಾಮಚಂದ್ರ ಚರಿತಪುರಾಣ ಮತ್ತು ಮಲ್ಲಿನಾಥಪುರಾಣ ಇವನ ಕೃತಿಗಳು. ಇವನ ಮತ್ತು ಸಮಕಾಲೀನಳಾದ ಕಂತಿಯ ನಡುವೆ ನಡೆದ ಸಮಸ್ಯಾಪುರಾಣ ಪರೀಕ್ಷೆ ಕಂತಿಹಂಪನ ಸಮಸ್ಯೆಗಳೆಂದು ಹೆಸರಾಗಿದೆ. ವಿಷ್ಣುವರ್ಧನನ ಆಸ್ಥಾನಕವಿ ರಾಜಾದಿತ್ಯ ಗಣಿತದಲ್ಲಿ ಪಾರಂಗತನಾಗಿದ್ದು, ಕ್ಷೇತ್ರಗಣಿತ, ವ್ಯವಹಾರಗಣಿತ ಮತ್ತು ಲೀಲಾವತಿಗಳೆಂಬ ಕೃತಿಗಳನ್ನು ಕಾವ್ಯರೂಪದಲ್ಲಿ ನಿರ್ಮಿಸಿದ. ಜನ್ನನ ತಂದೆ ಸುಮನೋಬಾಣ ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದು ಕೆಲವು ಕೃತಿಗಳನ್ನು ನಿರ್ಮಿಸಿದ. ಕೀತಿವರ್ಮನ ಗೋವೈದ್ಯದ ಅನಂತರ ರಚಿತವಾದ, ಜಗದ್ದಳ ಸೋಮನಾಥನ ಕರ್ಣಾಟಕ ಕಲ್ಯಾಣಕಾರಕವೆಂಬ ವೈದ್ಯಗ್ರಂಥದ ಪರಿಷ್ಕರಣವನ್ನು ಸುಮನೋಬಾಣ ಮಾಡಿದನೆಂದು ಹೇಳಲಾಗಿದೆ. ಆ ಕಾಲದ ಹರಿಹರನ ಗಿರಿಜಾಕಲ್ಯಾಣ ಕನ್ನಡ ಮಹಾಕಾವ್ಯಗಳಲ್ಲೊಂದಾಗಿದೆ. ರಗಳೆಯೆಂಬ ಪದ್ಯಜಾತಿ ಕನ್ನಡ ಸಾಹಿತ್ಯದ ಸುಪ್ರಸಿದ್ಧ ರೀತಿಯಾಗಿದ್ದು, ಈ ರೀತಿಗೆ ಈತನ ಕೊಡುಗೆ ಅಮೋಘವಾಗಿದೆ. ಭಕ್ತಿಪ್ರಚೋದಕವಾದ ನೂರಕ್ಕೂ ಹೆಚ್ಚಿನ ಹರಿಹರನ ರಗಳೆಗಳು ಶಿವಭಕ್ತರ ಕಥಾನಕಗಳು. ಅವನ ಸೋದರಳಿಯ ರಾಘವಾಂಕ. ಈತ ಕನ್ನಡದಲ್ಲಿ ಷಟ್ಪದೀಕಾವ್ಯ ಪ್ರವರ್ತಕ. ಹರಿಹರನ ಪ್ರಭಾವಕ್ಕೊಳಗಾದ ಈತನ ಹರಿಶ್ಚಂದ್ರಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ ಚರಿತೆ, ವೀರೇಶ ಚರಿತೆ, ಶರಭಸಾಹಿತ್ಯ ಈ ಕೃತಿಗಳು ಲಭ್ಯವಾಗಿವೆ. ಸಮಕಾಲೀನನೂ ಬೇಲೂರು ಕೆರೆಯ ನಿರ್ಮಾತನೂ ಆದ ಕೆರೆಯ ಪದ್ಮರಸ ಹರಿಹರನ ಅನುಸರಣೆ ಮಾಡಿ ರಗಳೆಯಲ್ಲಿ ದೀಕ್ಷಾಬೋಧೆಯನ್ನು ರಚಿಸಿದ. ಎರಡನೆಯ ಬಲ್ಲಾಳನ ಮಂತ್ರಿ ಬೂಚಿರಾಜ ಸಾಹಿತ್ಯಪ್ರಿಯ ಮತ್ತು ಸ್ವತಃ ಸಾಹಸಿ. ಈ ಕಾಲದ ಶಾಸನ ಕವಿಗಳಲ್ಲಿ ದೇವಪ್ರಿಯ, ವಿರೂಪಾಕ್ಷಪಂಡಿತ, ಕಲ್ಲಯ್ಯ, ಮಲೆಯ ಮುಂತಾದವರು ಮುಖ್ಯರು. ಮೊತ್ತಮೊದಲಿಗೆ ಬ್ರಾಹ್ಮಣ ಕವಿಗಳು ಕನ್ನಡ ಕೃತಿ ರಚನೆಗಿಳಿದಿದ್ದ ಕಾಲದಲ್ಲಿ ರುದ್ರಭಟ್ಟನ ಜಗನ್ನಾಥವಿಜಯ ರಚಿತವಾಯಿತು. ಇದೇ ಕಾಲದ ನೇಮಿಚಂದ್ರನ ನೇಮಿನಾಥಪುರಾಣ ಅಪೂರ್ಣಕೃತಿ. ಲೀಲಾವತಿ ಈತನ ಇನ್ನೊಂದು ಕೃತಿ. ವರ್ಧಮಾನಪುರಾಣವನ್ನು ಆಚಣ್ಣ ಕವಿ ಬರೆದ. ಈ ಕಾಲದ ಪ್ರಸಿದ್ಧ ಕವಿಯಾದ, ಕವಿಚಕ್ರವರ್ತಿಯೆನಿಸಿಕೊಂಡ ಜನ್ನನ ಅಮರಕೃತಿ ಯಶೋಧರ ಚರಿತೆ. ಅನಂತನಾಥಪುರಾಣ ಈತನ ಇನ್ನೊಂದು ಕೊಡುಗೆ. ಈತ ಅನೇಕ ಕಾವ್ಯಮಯ ಶಾಸನಗಳ ರಚಕ. ೨ನೆಯ ನರಸಿಂಹನ ಸೇನಾನಿ ಪೋಲಾಳ್ವ ದಂಡನಾಥ ಹರಿಹರದಲ್ಲಿ ಹರಿಹರೇಶ್ವರ ದೇವಾಲಯದ ನಿರ್ಮಾತೃವೂ ಹೌದು; ಹರಚಾರಿತ್ರದ ಕರ್ತೃವೂ ಹೌದು. ಸೋಮೇಶ್ವರನ ಆಶ್ರಯದಲ್ಲಿ ಜನ್ನನ ತಂಗಿಯ ಗಂಡ ಮಲ್ಲಿಕಾರ್ಜುನ ಹೊಯ್ಸಳವಂಶದ ಚಾರಿತ್ರಿಕ ಸಂಗತಿಗಳನ್ನರುಹುವ ಸೂಕ್ತಿಸುಧಾರ್ಣವವನ್ನು ರಚಿಸಿದ. ಈ ಕವಿಯ ಮಗನೂ ಕನ್ನಡದ ಉಚ್ಚ ವೈಯಾಕರಣೆಯೂ ಆದ ಕೇಶಿರಾಜನ ವಿದ್ವತ್ಪೂರ್ಣ ಶಬ್ದಮಣಿದರ್ಪಣದ ಅಧ್ಯಯನ ಮಾಡದವರ ಜ್ಞಾನ ಅಪೂರ್ಣವೆಂದು ಭಾವಿಸಲಾಗಿದೆ. ಸಂಸ್ಕೃತದ ಹಿಡಿತದಿಂದ ಕನ್ನಡವನ್ನು ತಪ್ಪಿಸುವ ಹೊಸಹಾದಿಯ ತೀವ್ರವಾದಿ ಆಂಡಯ್ಯನ ಕಬ್ಬಿಗರ ಕಾವ್ಯ ಈ ಕಾಲದ್ದು. ಈ ಕಾಲದ ಅನೇಕ ಶಾಸನಗಳು ಪ್ರೌಢಕಾವ್ಯ ಶೈಲಿಯಲ್ಲಿ ರಚಿಸಲ್ಪಟ್ಟಿವೆ. ಒಟ್ಟಿನಲ್ಲಿ ಈ ಕಾಲದ ಕನ್ನಡ ಸಾಹಿತ್ಯದಲ್ಲಿ ಸರ್ವತೋಮುಖ ಬೆಳೆವಣಿಗೆ ಕಂಡುಬರುತ್ತದೆ.

ಮಧ್ಯಯುಗದ ಇತಿಹಾಸ

ಕರ್ನಾಟಕದ ಇತಿಹಾಸ 
ಬೇಲೂರಿನಲ್ಲಿ ಹೊಯ್ಸಳ ಸಾಮ್ರಾಜ್ಯದ ವಾಸ್ತುಕಲೆ

ಚಾಲುಕ್ಯರು|ರಾಷ್ಟ್ರಕೂಟರು|ಪಶ್ಚಿಮ ಚಾಲುಕ್ಯರು|ಹೊಯ್ಸಳ|ಪಶ್ಚಿಮ ಗಂಗರು|ಸಾಮ್ರಾಜ್ಯ

ನಂತರ ದೊಡ್ಡ ಸಾರ್ವವಿಜಯನಗರ ಭೌಮ ಸಾಮ್ರಾಜ್ಯಗಳು ಆಳ್ವಿಕೆ ಮಾಡಿದವು. ಇದರಲ್ಲಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟ ರಾಜಮನೆತನ ಹಾಗು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯ ಸೇರಿವೆ. ಇವುಗಳ ವೈಭವದಿಂದ ಕೂಡಿದ ರಾಜಧಾನಿಗಳು ಆಧುನಿಕ ಕರ್ನಾಟಕ ಪ್ರದೇಶದಲ್ಲಿವೆ ಹಾಗು ಇವರು ಕನ್ನಡ ಭಾಷೆ ಹಾಗು ಸಾಹಿತ್ಯವನ್ನು ಪೋಷಿಸಿದರು.

ಕರ್ನಾಟಕದ ಮಲೆನಾಡುವಿನ ಸ್ಥಳೀಯರಾದ, ಹೊಯ್ಸಳರು ಹೊಯ್ಸಳ ಸಾಮ್ರಾಜ್ಯವನ್ನು ಸಹಸ್ರ ವರ್ಷದ ತಿರುವಿನಲ್ಲಿ ಸ್ತಾಪಿಸಿದರು. ಈ ಸಮಯದಲ್ಲಿ ಈ ಸ್ಥಳದಲ್ಲಿ ಕಲೆ ಹಾಗು ವಾಸ್ತುಕಲೆ ಪ್ರವರ್ಧಮಾನಕ್ಕೆ ಬಂದವು. ಇದರಿಂದಾಗಿ ಪ್ರತ್ಯೇಕವಾದ ಕನ್ನಡ ಸಾಹಿತ್ಯ ನಾಂದಿ ಹಾಡಿತು ಹಾಗು ವಿಶಿಷ್ಟವಾದ ವೇಸರ ಕನುಗುಣವಾದ ದೇವಸ್ಥಾನಗಳು ವಿನ್ಯಾಸಗಳು ಕಟ್ಟಲ್ಪಟವು. ಹೊಯ್ಸಳ ಸಾಮ್ರಾಜ್ಯದ ವಿಸ್ತರಣದಿಂದಾಗಿ ಅಧುನಿಕ ಆಂಧ್ರಪ್ರದೇಶ ಹಾಗು ತಮಿಳುನಾಡು ಹಲವು ಭಾಗಗಳು ಆವರ ಆಳ್ವಿಕೆಯಲ್ಲಿ ಬಂದವು.

೧೪ನೆಯ ಶತಮಾನ ಆರಂಭಿಕ ವರ್ಷಗಳಲ್ಲಿ, ವಿಜಯನಗರ ಸಾಮ್ರಾಜ್ಯ ಅದರ ರಾಜಧಾನಿ ಹೊಸಪಟ್ಟಣ (ನಂತರ ವಿಜಯನಗರ ಎಂದು ಕರೆಯಲ್ಪಟ್ಟ) ದಕ್ಷಿಣದಲ್ಲಿ ಮುಸ್ಲಿಮರ ಆಕ್ರಮಣ ಯಶಸ್ವಿಯಾಗಿ ಸದೆ ಬಡಿದರು. ಈ ಸಾಮ್ರಾಜ್ಯದ ಸ್ಥಾಪಕರಾದ ಬೇಡ ಸಮುದಾಯದ ಹರಿಹರ ಹಾಗು ಬುಕ್ಕರಾಯ ಇವರನ್ನು ಹಲವು ಚರಿತ್ರಕಾರರು ಕೊನೆಯ ಹೊಯ್ಸಳ ರಾಜನ ವೀರ ಬಲ್ಲಾಳ ೩ ಸೇನಾಧಿಪತಿಗಳು ಎನ್ನುತ್ತಾರೆ. ಈ ಸಾಮ್ರಾಜ್ಯ ಎರಡು ಶತಮಾನಗಳಿಗಿಂತ ಹೆಚ್ಚು ಸಮಯ ಇವರು ಆಳಿದರು. ಬೀದರ್ ನ ಬಹಮನಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯದ ಮುಖ್ಯ ಶತ್ರುಗಳಾಗಿದ್ದರು. ಹಾಗು ವಿಜಯನಗರ ಸಾಮ್ರಾಜ್ಯದ ನಂತರ ಅವರು ಮುಖ್ಯಸ್ಥಾನ ಗಳಿಸಿದರು. ಬಿಜಾಪುರದ ಸುಲ್ತಾನರು ದಕ್ಷಿಣ ಭಾರತದ ಆಳ್ವಿಕೆಗೆ ಹೊಡೆದಾಡಲು ಆರಂಭಿಸಿದರು. ಸುಲ್ತಾನರುಗಳ ಮೈತ್ರಿಯ ವಿರುದ್ದ ೧೫೬೫ನಲ್ಲಿ ತಾಳಿಕೋಟೆ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಸೋಲು ಹಾಗು ವಿಯೋಜನೆಯ ನಂತರ, ಬಿಜಾಪುರ ಸುಲ್ತಾನರು ಮುಖ್ಯಶಕ್ತಿಯಾಗಿ ಹೊಮ್ಮಿದರು. ಕೊನೆಗೆ ಅವರು ಮೊಗಲ್ ಸಾಮ್ರಾಜ್ಯಕ್ಕೆ ೧೭ನೆಯ ಶತಮಾನದಲ್ಲಿ ಸೋತರು. ಬಹುಮನಿ ಹಾಗು ಬಿಜಾಪುರ ಆಡಳಿತಗಾರರು ಉರ್ದು ಹಾಗು ಪರ್ಸಿಯನ್ ಸಾಹಿತ್ಯ ಹಾಗು ಭಾರತೀಯ ಹಾಗು ಅರಬ್ಬಿಯವನು ಯಾ ಮುಸಲ್ಮಾನರ ವಾಸ್ತುಶಾಸ್ತ್ರಕ್ಕೆ ಪ್ರೋತ್ಸಾಹಿಸಿದರು. ಗೋಲ್ ಗುಂಬಜ್ ಇದರ ಒಂದು ಮುಖ್ಯ ಕೊಡುಗೆ.

ಆಧುನಿಕ ಇತಿಹಾಸ

ಒಡೆಯರ್|ಟಿಪ್ಪು ಸುಲ್ತಾನ

ಕರ್ನಾಟಕದ ಇತಿಹಾಸ 
ಮೈಸೂರು ಅರಮನೆ

ಮೈಸೂರಿನ ಒಡೆಯರ್ಗಳು, ಹಿಂದಿನ ವಿಜಯನಗರ ಸಾಮ್ರಾಜ್ಯದ ಹಿಡುವಳಿದಾರರು. . ಇಮ್ಮಡಿ ಕೃಷ್ಣರಾಜ ಒಡೆಯರ್ ಮರಣದ ನಂತರ , ಹೈದೆರ್ ಅಲಿ, ಮೈಸೂರು ಸೇನೆಯ ಮಹಾದಂಡ ನಾಯಕ, ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ, ಹೈದರ್ ಅಲಿಯಾ ಮರಣದ ನಂತರ ಆಳ್ವಿಕೆ ಅವನ ಪುತ್ರ ಟೀಪು ಸುಲ್ತಾನ್ಗೆ ಸಿಕ್ಕಿತು. ಮೈಸೂರಿನ ಹುಲಿ ಎಂದೇ ಪ್ರಖ್ಯಾತನಾದ ಟೀಪು ಸುಲ್ತಾನ್, ದಕ್ಷಿಣ ಭಾರತದಲ್ಲಿ ಯುರೋಪಿಯನ್ ವಿಸ್ತರಣೆ ತಡೆಗಟ್ಟಲು, ನಾಲ್ಕು ಯುದ್ದಗಳನ್ನು ಮಾಡಿದನು. ಆಂಗ್ಲೋ-ಮೈಸೂರು ಯುದ್ಧಗಳು, ಕೊನೆಯದರಲ್ಲಿ ಅವನು ಮರಣವನ್ನಪ್ಪಿದ ಹಾಗು ಮೈಸೂರು ರಾಜ್ಯ ಬ್ರಿಟಿಷ್ ರಾಜ್ಯದೊಂದಿಗೆ ಏಕೀಕರಣವಾಯಿತು.(ನೋಡಿ:ಮೈಸೂರು ಸಂಸ್ಥಾನ|ಟಿಪ್ಪು ಸುಲ್ತಾನ್)

ಕರ್ನಾಟಕ ಏಕೀಕರಣ

ಕರ್ನಾಟಕದ ಏಕೀಕರಣ

ಸ್ವಾತಂತ್ರದ ನಂತರ, ಒಡೆಯರ್ ಭಾರತದ ಭಾಗವಾಗಲು ಸಮ್ಮತಿಸಿದರು. ೧೯೫೦ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಹಾಗು ಪೂರ್ವ ಮಹಾರಾಜ ೧೯೭೫ರ ವರೆಗೆ ಅದರ ರಾಜ ಪ್ರಮುಖ, ಅಥವಾ ರಾಜ್ಯಪಾಲರಾದರು. ''ಏಕೀಕರಣ'' ಚಳುವಳಿ ೧೯ನೆಯ ಶತಮಾನದ ಎರಡನೇ ಭಾಗದಲ್ಲಿ ಶುರುವಾಗಿ ೧೯೫೬ ರಾಜ್ಯ ಪುನಸ್ಸಂಘಟನೆ ಕಾಯಿದೆ ಯೊಂದಿಗೆ ಮುಕ್ತಾಯವಾಯಿತು. ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ೧೯೭೩ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಮೈಸೂರು ರಾಜ್ಯವನ್ನು ನವೆಂಬರ್ ೧, ೧೯೫೬ರಲ್ಲಿ ರಚನೆಯಾಯಿತು ಅಂದಿನಿಂದ ನವೆಂಬರ್ ೧ ನ್ನು ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಆಧುನಿಕತೆಯ-ನಂತರದ ಇತಿಹಾಸ

ಕೆ ಚಂಗಳರಾಯ ರೆಡ್ಡಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್ ಎಚ್ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು.

ಟಿಪ್ಪಣಿಗಳು

40-gi[೩]

ಪರಾಮರ್ಶನಗಳು

  • Dr. Suryanath U. Kamat, Concise history of ಕರ್ನಾಟಕ , 2001, MCC, Bangalore (Reprinted 2002) OCLC: 7796041
  • Nilakanta Sastri, K.A. (1955). A History of ದಕ್ಷಿಣ ಭಾರತದಲ್ಲಿ, From Prehistoric times to fall of Vijayanagar, OUP, New Delhi (Reprinted 2002) ISBN 0-19-560686-8..
  • Dr. Romila Thapar, The Penguin History of Early India From Origins to 1300 A.D., 2003, Penguin, New Delhi, ISBN 0-14-302989-4.
  • R. Narasimhacharya, History of ಕನ್ನಡ Literature, 1988, Asian Educational Services, New Delhi, Madras,1988, ISBN 81-206-0303-6.
  • Iyer, Panchapakesa A.S. (2006) [2006]. Karnataka Sangeeta Sastra. Chennai: Zion Printers.
  • Adiga, Malini (2006) [2006]. The Making of Southern Karnataka: Society, Polity and Culture in the early medieval period, AD 400–1030. Chennai: Orient Longman. ISBN 81 250 2912 5.
  • Altekar, Anant Sadashiv (1934) [1934]. The Rashtrakutas And Their Times; being a political, administrative, religious, social, economic and literary history of the Deccan during C. 750 A.D. to C. 1000 A.D. Poona: Oriental Book Agency. OCLC 3793499.
  • Foekema, Gerard. A Complete Guide To Hoysala Temples. New Delhi: Abhinav. ISBN 81-7017-345-0.
  • Moraes, George M. (1990) [1931]. The Kadamba Kula, A History of Ancient and Medieval Karnataka. New Delhi, Madras: Asian Educational Services. ISBN 81-206-0595-0.
  • Ramesh, K.V. Chalukyas of Vatapi. Delhi: Agam Kala Prakashan. ISBN 3987-10333.
  • John Keay, History of India, 2000, Grove publications, New York, ISBN 0-8021-3797-0, BINC: 6494766
  • Karmarkar, A.P. (1947), Cultural history of ಕರ್ನಾಟಕ  : ancient and medieval, ಕರ್ನಾಟಕ Vidyavardhaka Sangha, Dharwad OCLC 8221605

ಬಾಹ್ಯ ಕೊಂಡಿಗಳು

ಟೆಂಪ್ಲೇಟು:ಭಾರತದ ಇತಿಹಾಸ

Tags:

ಕರ್ನಾಟಕದ ಇತಿಹಾಸ ಇತಿಹಾಸ-ಪೂರ್ವಕರ್ನಾಟಕದ ಇತಿಹಾಸ ಮಧ್ಯ ಶಿಲಾಯುಗಕರ್ನಾಟಕದ ಇತಿಹಾಸ ನವಶಿಲಾಯುಗಕರ್ನಾಟಕದ ಇತಿಹಾಸ ಬೃಹತ್ ಶಿಲಾಯುಗಕರ್ನಾಟಕದ ಇತಿಹಾಸ ಕರ್ನಾಟಕದ ಹುತ್ರಿದುರ್ಗ ಕಬ್ಬಿಣದ ಯುಗದ ಅವಶೇಷಗಳುಕರ್ನಾಟಕದ ಇತಿಹಾಸ ಪುರಾಣೇತಿಹಾಸ ಕಾಲದಲ್ಲಿ ಕರ್ನಾಟಕಕರ್ನಾಟಕದ ಇತಿಹಾಸ ಮೌರ್ಯರುಕರ್ನಾಟಕದ ಇತಿಹಾಸ ಶಾತವಾಹನರುಕರ್ನಾಟಕದ ಇತಿಹಾಸ ಕದಂಬರುಕರ್ನಾಟಕದ ಇತಿಹಾಸ ಗಂಗವಂಶಕರ್ನಾಟಕದ ಇತಿಹಾಸ ಬಾದಾಮಿ ಚಾಲುಕ್ಯರುಕರ್ನಾಟಕದ ಇತಿಹಾಸ ರಾಷ್ಟ್ರಕೂಟರುಕರ್ನಾಟಕದ ಇತಿಹಾಸ ಕಲ್ಯಾಣ ಚಾಲುಕ್ಯರುಕರ್ನಾಟಕದ ಇತಿಹಾಸ ಹೊಯ್ಸಳರುಕರ್ನಾಟಕದ ಇತಿಹಾಸ ಮಧ್ಯಯುಗದ ಇತಿಹಾಸಕರ್ನಾಟಕದ ಇತಿಹಾಸ ಆಧುನಿಕ ಇತಿಹಾಸಕರ್ನಾಟಕದ ಇತಿಹಾಸ ಕರ್ನಾಟಕ ಏಕೀಕರಣಕರ್ನಾಟಕದ ಇತಿಹಾಸ ಆಧುನಿಕತೆಯ-ನಂತರದ ಇತಿಹಾಸಕರ್ನಾಟಕದ ಇತಿಹಾಸ ಟಿಪ್ಪಣಿಗಳುಕರ್ನಾಟಕದ ಇತಿಹಾಸ ಪರಾಮರ್ಶನಗಳುಕರ್ನಾಟಕದ ಇತಿಹಾಸ ಬಾಹ್ಯ ಕೊಂಡಿಗಳುಕರ್ನಾಟಕದ ಇತಿಹಾಸರಾಷ್ಟ್ರಕೂಟವೆಂಗಿನಾಡು

🔥 Trending searches on Wiki ಕನ್ನಡ:

ಶ್ಯೆಕ್ಷಣಿಕ ತಂತ್ರಜ್ಞಾನಕಿತ್ತೂರು ಚೆನ್ನಮ್ಮನಾರಾಯಣಿ ಸೇನಾದ್ವಾರಕೀಶ್ಮಂಜುಳಕುಮಾರವ್ಯಾಸವಿವಾಹಈರುಳ್ಳಿಭೂತಾರಾಧನೆರಾಯಲ್ ಚಾಲೆಂಜರ್ಸ್ ಬೆಂಗಳೂರುಕವನಹೈನುಗಾರಿಕೆಸಂಸದೀಯ ವ್ಯವಸ್ಥೆಸವರ್ಣದೀರ್ಘ ಸಂಧಿಸ್ವಾತಂತ್ರ್ಯಜೋಗಿ (ಚಲನಚಿತ್ರ)ಬಿದಿರುಪರಶುರಾಮವರ್ಗೀಯ ವ್ಯಂಜನಪಠ್ಯಪುಸ್ತಕಪಿರಿಯಾಪಟ್ಟಣತಾಳೀಕೋಟೆಯ ಯುದ್ಧಗಾದೆಚಂದ್ರಶೇಖರ ಕಂಬಾರರಾಜ್ಯಸಭೆಗರ್ಭಧಾರಣೆಚೋಮನ ದುಡಿಕೈಗಾರಿಕೆಗಳುಎಕರೆಕರ್ನಾಟಕದಲ್ಲಿ ಪಂಚಾಯತ್ ರಾಜ್ವಿರೂಪಾಕ್ಷ ದೇವಾಲಯಬಾವಲಿಚಂದ್ರಶೇಖರ ವೆಂಕಟರಾಮನ್ವೆಂಕಟೇಶ್ವರ ದೇವಸ್ಥಾನವಿಜ್ಞಾನಲೋಕಸಭೆಸಾವಿತ್ರಿಬಾಯಿ ಫುಲೆರನ್ನಸಂವಹನಜಾತ್ಯತೀತತೆಊಟಮಂಕುತಿಮ್ಮನ ಕಗ್ಗಕರಗ (ಹಬ್ಬ)ಹೊಯ್ಸಳ ವಾಸ್ತುಶಿಲ್ಪದಾಸವಾಳಕೆಂಪುವಿಶ್ವ ಪರಿಸರ ದಿನಶಾಂತಲಾ ದೇವಿಅಶ್ವತ್ಥಾಮವಿಕಿಪೀಡಿಯಅಕ್ಬರ್ನಾಮಪದಮೊದಲನೆಯ ಕೆಂಪೇಗೌಡನಾಲ್ವಡಿ ಕೃಷ್ಣರಾಜ ಒಡೆಯರುಋತುಗೋಲ ಗುಮ್ಮಟಮಾನವ ಸಂಪನ್ಮೂಲ ನಿರ್ವಹಣೆಹಸ್ತ ಮೈಥುನಆನೆಆರೋಗ್ಯವಿಭಕ್ತಿ ಪ್ರತ್ಯಯಗಳುಐಹೊಳೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಆವರ್ತ ಕೋಷ್ಟಕಗೋಕಾಕ್ ಚಳುವಳಿಕಂಸಾಳೆರೋಮನ್ ಸಾಮ್ರಾಜ್ಯಆಯುರ್ವೇದಪಂಜುರ್ಲಿಶುಂಠಿಸಿದ್ಧಯ್ಯ ಪುರಾಣಿಕಬಸವಲಿಂಗ ಪಟ್ಟದೇವರುಧರ್ಮಸಂಸ್ಕಾರ🡆 More