ಪ್ರಜಾಪ್ರಭುತ್ವ ಎಂದರೆ ಯಾವುದೇ ವರ್ಗ, ಗುಂಪು ಅಥವಾ ವ್ಯಕ್ತಿಯ ಅಧೀನದಲ್ಲಿಲ್ಲದೆ ಜನತೆಯ ಅಧೀನದಲ್ಲಿರುವ ಸರ್ಕಾರ (ಡೆಮಾಕ್ರಸಿ).
ಪ್ರಜಾಪ್ರಭುತ್ವದ ವಿಚಾರ ಇಂದು ನಿನ್ನೆಯದಲ್ಲ. ಪ್ರಜಾಪ್ರಭುತ್ವ ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಲಾಗುತ್ತದೆ. ಹಾಗೂ ಪ್ರಜಾ ಪ್ರಭುತ್ವವನ್ನು ಅಬ್ರಹಾಂ ಲಿಂಕನ್ ರವರು ಹೇಳಿರುವಂತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಸರಕಾರವೇ ಪ್ರಜಾಪ್ರಭುತ್ವ.ಪುರಾತನ ಕಾಲದಲ್ಲಿ ಗ್ರೀಕ್ ನಗರ ರಾಜ್ಯವಾದ ಆತೆನ್ಸ್ನಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು. ಅಲ್ಲದೆ, ಪ್ರಾಚೀನ ಭಾರತದಲ್ಲಿದ್ದ ಗಣರಾಜ್ಯಗಳ ಬಗ್ಗೆ ಸಾಕಷ್ಟು ಸಂಶೋಧನೆಯಾಗಿದೆ. ಇತರ ಕೆಲವು ದೇಶಗಳಲ್ಲೂ ಇಂಥ ಪ್ರಜಾಪ್ರಭುತ್ವವಿದ್ದುದನ್ನು ಕಾಣಬಹುದಾಗಿದೆ.
ಪ್ರಜಾಪ್ರಭುತ್ವ ಸರ್ಕಾರದ ರಚನೆಯ ಪ್ರಶ್ನೆ ಮೊಟ್ಟಮೊದಲು ಉದ್ಭವವಾದದ್ದು 19ನೆಯ ಶತಮಾನದಲ್ಲಿ. 18ನೆಯ ಶತಮಾನದವರೆಗೆ ಇದರ ಪೂರ್ಣ ಪರಿಕಲ್ಪನೆಯಾಗಿರಲಿಲ್ಲ. ಸಾಮಾಜಿಕ ಜೀವನದಲ್ಲೂ ರಾಜಕೀಯ ಜೀವನದಲ್ಲೂ ಸಮಾನತೆಗಾಗಿ ಕಾರ್ಖಾನೆಗಳ ಮಾಲಿಕರಿಗೂ ಕಾರ್ಮಿಕರಿಗೂ ಘರ್ಷಣೆ ಮೊದಲಾಗಿ, ಸಮಾನತೆಯನ್ನು ಪ್ರಜಾಪ್ರಭುತ್ವದ ತತ್ವವಾಗಿ ಪರಿಗಣಿಸಲಾದ್ದು 18ನೆಯ ಶತಮಾನದಿಂದ ಈಚೆಗೆ. ಆ ಕಾಲದಲ್ಲಿ ಪ್ರಜಾಪ್ರಭುತ್ವ ಪ್ರಚಲಿತವಾಗಿರಲಿಲ್ಲ. ಆಧುನಿಕ ಕಾಲದವರೆಗೆ ಪ್ರಚಲಿತವಾಗಿದ್ದ ಪ್ರಮುಖ ರಾಜ್ಯ ಪದ್ಧತಿ ಎಂದರೆ ಅರಸೊತ್ತಿಗೆ. ಆದರೆ, ಇಂದಿನ ಪರಿಸ್ಥಿತಿಯೇ ಬೇರೆ. ಹದಿನಾರನೆಯ ಶತಮಾನದಿಂದೀಚೆಗೆ ಅರಸೊತ್ತಿಗೆ ಕ್ಷೀಣಿಸುತ್ತ ಬಂದಿದೆ. ಈಗ ಪ್ರಜಾಪ್ರಭುತ್ವದ ತತ್ವಗಳು, ಆದರ್ಶಗಳು ಆಳವಾಗಿ ಬೇರೂರಿಕೊಂಡಿವೆ. ಪ್ರಪಂಚದ ಕೆಲವು ಭಾಗಗಳನ್ನು ಬಿಟ್ಟರೆ ಎಲ್ಲೆಡೆಯಲ್ಲೂ ಸರ್ಕಾರಗಳನ್ನು ಪ್ರಜಾಪ್ರಭುತ್ವದ ಕೆಲವು ತತ್ವಗಳಿಗೆ ಅನುಕೂಲವಾಗಿ ರಚಿಸಲಾಗಿದೆ. ಅವುಗಳ ಸ್ವರೂಪದಲ್ಲಿ ಭಿನ್ನತೆಗಳಿದ್ದರೂ, ಕೆಲವು ತತ್ವಗಳೂ ಆಚರಣೆಗಳೂ ವಿವಾದಾಸ್ಪದವಾಗಿದ್ದರೂ ಪ್ರಜಾಪ್ರಭುತ್ವ ಪದ್ಧತಿಗೆ ಬಹುತೇಕ ಎಲ್ಲರೂ ನಿಷ್ಠೆ ತೋರಿಸುತ್ತಾರೆ.
ಪ್ರಜಾಪ್ರಭುತ್ವದ ಅರ್ಥವನ್ನು ಪ್ರಮುಖರನೇಕರು ಅನೇಕ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ಅಂತೆಯೇ ಅದರ ಬಗ್ಗೆ ವ್ಯಾಖ್ಯೆಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವು ಪ್ರಸಿದ್ಧ ವ್ಯಾಖ್ಯೆಗಳು ಹೀಗಾಗಿವೆ: ಪೆರಿಕ್ಲಿಸ್ : (ಕ್ರಿ.ಪೂ. 430) ನಮ್ಮದು ಪ್ರಜಾಪ್ರಭುತ್ವ. ಏಕೆಂದರೆ ಆಡಳಿತ ಕೆಲವೇ ಜನರ ಕೈಯ್ಯಲ್ಲಿರದೆ ಜನಸಾಮಾನ್ಯರ ಕೈಯ್ಯಲ್ಲಿದೆ. ಸೀಲಿ : ಪ್ರತಿಯೊಬ್ಬನೂ ಪಾಲ್ಗೊಳ್ಳಲು ಅವಕಾಶವಿರುವ ಸರ್ಕಾರವೇ ಪ್ರಜಾಪ್ರಭುತ್ವ. ಏಬ್ರಹಾಮ್ ಲಿಂಕನ್ : ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಯುವ ಪ್ರಜೆಗಳ ಸರ್ಕಾರ. ಲಾರ್ಡ್ ಬ್ರೈಸ್ : ಪ್ರಜಾಪ್ರಭುತ್ವ ಎಂದ ಮೇಲೆ ಪ್ರಜೆಗಳ ಇಚ್ಛೆಯಂತೆಯೇ ಎಲ್ಲ ಮುಖ್ಯ ವಿಷಯಗಳೂ ಇತ್ಯರ್ಥವಾಗಬೇಕು. ಜಾರ್ಜ್ ಬರ್ನಾಡ್ ಷಾ : ಪ್ರಜಾಪ್ರಭುತ್ವವೆಂದರೆ ಭೇದಭಾವವಿಲ್ಲದೆ ಪ್ರತಿಯೊಬ್ಬನ ಹಿತಕ್ಕೆ ಅನುಗುಣವಾದ ಸಮಾಜ ವ್ಯವಸ್ಥೆ, ಶ್ರೀಮಂತ ವರ್ಗದ ವಿಶೇಷ ಹಕ್ಕುಗಳನ್ನು ರಕ್ಷಿಸುವ ಸಮಾಜ ವ್ಯವಸ್ಥೆಯಲ್ಲ.
ಮೇಲಿನ ವ್ಯಾಖ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಪ್ರಜಾಪ್ರಭುತ್ವದ ಅರ್ಥ ಎಷ್ಟು ವ್ಯಾಪಕ ಹಾಗೂ ಎಷ್ಟು ಅನಿಶ್ಚಿತವಾದ್ದು ಎಂಬ ಅಂಶ ಸ್ಪಷ್ಟವಾಗುತ್ತದೆ. ಆದರೂ ಕೆಲವು ಸಾಮಾನ್ಯ ಸೂತ್ರಗಳನ್ನೂ ತತ್ತ್ವಗಳನ್ನೂ ಇಲ್ಲಿ ಗುರುತಿಸಬಹುದು.
ಪ್ರಜಾಪ್ರಭುತ್ವ ಅರಸೊತ್ತಿಗೆಯಂತೆ ನಿರಂಕುಶ ಪ್ರಭುತ್ವವಲ್ಲ, ಅಥವಾ ಶ್ರೀಮಂತ ವರ್ಗದ ರಾಜ್ಯವಲ್ಲ, ಇದು ಪ್ರಜೆಗಳ ರಾಜ್ಯ. ಲೋಕವಾಣಿಯೇ ದೇವವಾಣಿ ಎಂದು ಪ್ರತಿಪಾದಿಸುವ ಪದ್ಧತಿ ಇದು. ಇಂದಿನ ಪ್ರಜಾಪ್ರಭುತ್ವದಲ್ಲಿ ಆಳುವವರೂ ಆಳಲ್ಪಡುವವರೂ ಪ್ರಜೆಗಳೇ ಆಗಿರುವುದರಿಂದ ಹೆಚ್ಚು ಕಡಿಮೆ ಎಂಬ ತಾರತಮ್ಯವಿಲ್ಲ.
ಇಂದು ಜಾರಿಯಲ್ಲಿರುವ ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯೇ ಆಗಲಿ ಕೆಲವು ವ್ಯಕ್ತಿಗಳೇ ಆಗಲಿ ಸ್ವೇಚ್ಛೆಯಾಗಿ ಆಳಲು ಎಡೆಯಿಲ್ಲ. ಪ್ರಜೆಗಳ ಪ್ರತಿನಿಧಿಗಳು ಪ್ರಜೆಗಳ ಹತೋಟಿಯೊಳಗೆ ಇರಬೇಕಾಗುತ್ತದೆ. ಇಂಥ ಹತೋಟಿಗಳನ್ನು ಪರಿಣಾಮಕಾರಕವಾಗಿಸಲು ಸಂವಿಧಾನದಲ್ಲಿ ಮತ್ತು ಶಾಸನಗಳಲ್ಲಿ ಸೂಕ್ತ ನಿರ್ದೇಶನಗಳಿರುತ್ತವೆ. ಸಂವಿಧಾನ ಹಾಗೂ ಕಾನೂನುಗಳ ಆಚೆಗೂ ಹಲವಾರು ಹತೋಟಿಗಳಿವೆ.
ಪ್ರಜೆಗಳು ಅದರಲ್ಲೂ ಮತದಾರರು ತಮ್ಮ ಪ್ರತಿನಿಧಿಗಳ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನಿಟ್ಟುಕೊಳ್ಳಲು ಪ್ರಾತಿನಿಧಿಕ ಪ್ರಜಾಪ್ರಭುತ್ವ ಅನುವು ಮಾಡಿಕೊಡುತ್ತದೆ. ನಿಯಮಿತ ಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ. ಪ್ರತಿನಿಧಿಗಳು ನಿಶ್ಚಿತ ಅವಧಿಯಲ್ಲಿ ಮಾತ್ರ ಅಧಿಕಾರದಲ್ಲಿರುತ್ತಾರೆ. ಇಂದಿನ ಪ್ರತಿನಿಧಿಗಳು ಚೆನ್ನಾಗಿ ಕಾರ್ಯ ಮಾಡದಿದ್ದರೆ, ತಮ್ಮ ಕ್ಷೇತ್ರಗಳ ಬಗ್ಗೆ ಉಪೇಕ್ಷೆ ತೋರಿದರೆ ಮುಂದಿನ ಚುನಾವಣೆಗಳಲ್ಲಿ ಅವರ ಬದಲಾಗಿ ಬೇರೆ ಅಭ್ಯರ್ಥಿಗಳನ್ನು ಆರಿಸಬಹುದಾಗಿದೆ. ಅಯೋಗ್ಯನೆನಿಸಿದ ಪ್ರತಿನಿಧಿಯನ್ನು ಅವಧಿ ಮುಗಿಯುವ ಮುಂಚೆಯೇ ಕರೆಯಿಸಿಕೊಳ್ಳುವ ಅಧಿಕಾರ ಕೆಲವು ದೇಶಗಳಲ್ಲಿ ಮತದಾರರಿಗೆ ಇರುತ್ತದೆ. ಜಾಗೃತ ಶಾಸಕರು ಕಾರ್ಯಾಂಗದ ವಿವಿಧ ಚಟುವಟಿಕೆಗಳನ್ನು ಗಮನವಿಟ್ಟು ನೋಡುತ್ತಿರುತ್ತಾರೆ. ಲೋಪದೋಷಗಳು ಕಂಡುಬಂದರೆ ಶಾಸನ ಸಭೆಗಳಲ್ಲಿ ಟೀಕೆ, ಟಿಪ್ಪಣೆ ಮಾಡುತ್ತಾರೆ : ಸೂಚನೆಗಳನ್ನು ನೀಡುತ್ತಾರೆ. ಸರ್ಕಾರದ ಇಂಥ ಲೋಪದೋಷಗಳನ್ನು ಪತ್ರಿಕೆಗಳು ಪ್ರಕಟಿಸುವುದರಿಂದ ಅವು ಜನತೆಯ ಗಮನಕ್ಕೆ ಬರುವುದು ಸಹಜ.
ಮತ ಎಂಬುದು ಪ್ರಜೆಗಳ ಕೈಯಲ್ಲಿಯ ಒಂದು ಪ್ರಬಲ ಅಸ್ತ್ರ. ಅದನ್ನು ಜಾಣತನದಿಂದ ಪರಿಣಾಮಕಾರಿಯಾಗಿ ಉಪಯೋಗಿಸದಿದ್ದರೆ ಜನತಂತ್ರ ಸರಿಯಾಗಿ ನಡೆಯಲಾರದು. ಪ್ರಜೆಗಳು ರಾಜಕೀಯ ವಿಷಯಗಳ ಬಗ್ಗೆ ಅನಾಸಕ್ತಿ ತೋರುವುದರಿಂದ ಅವರಿಗೆ ಹಾನಿ. ತಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಪ್ರಪಂಚದಲ್ಲಿ ಏನು ನಡೆದಿದೆ ಎಂಬುವುದರ ಅರಿವು ಅವರಿಗಿರಬೇಕಾಗುತ್ತದೆ.
ಚಿರಂತನ ಜಾಗೃತಿಯೇ ಪ್ರಜಾಪ್ರಭುತ್ವದ ಬೆಲೆ. ತಮಗೆ ಹಕ್ಕುಗಳೊಂದಿಗೆ ಕರ್ತವ್ಯಗಳೂ ಇವೆ ಅನ್ನುವುದರ ಪ್ರಜ್ಞೆ ಪ್ರಜೆಗಳಿಗಿರಬೇಕು. ಪ್ರಜೆಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿ ಉಳಿಸಿಕೊಳ್ಳುವುದರಲ್ಲಿ ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕೆಗಳ ಪಾತ್ರ ಹಿರಿಯದು. ರಾಜಕೀಯ ಪಕ್ಷಗಳು ಪತ್ರಿಕೆಗಳಂತೆ ಪ್ರಜಾಪ್ರಭುತ್ವದ ಜೀವಾಳವಾಗಿವೆ. ಅವು ಜನರ ಹಾಗೂ ಸರ್ಕಾರದ ನಡುವಣ ಸೇತುವೆಗಳು. ಚುನಾವಣೆಗೆ ಮುನ್ನ ನೀಡಿದ ಆಶ್ವಾಸನೆಗಳನ್ನು ಪೂರೈಸಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನದಲ್ಲಿ ತರುವ ಅತಿ ಮುಖ್ಯ ಕಾರ್ಯ ರಾಜಕೀಯ ಪಕ್ಷಗಳದ್ದಾಗಿದೆ. ಅಧಿಕಾರರೂಢ ಪಕ್ಷವಷ್ಟೇ ವಿರೋಧ ಪಕ್ಷವೂ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಇಂದಿನ ಪ್ರಜಾಪ್ರಭುತ್ವವನ್ನು ಬಹುಮತದ ಸರ್ಕಾರವೆಂದು ಕರೆಯಲಾಗಿದೆ. ಬಹುಮತ ಗಳಿಸಿದ ಪಕ್ಷ ಸರ್ಕಾರ ರಚಿಸಿದರೂ ಅಲ್ಪಸಂಖ್ಯಾತರಿಗೆ ಹಾಗೂ ರಾಜಕೀಯ ವಿರೋಧಿಗಳಿಗೆ ತೊಂದರೆ, ಅನಾನುಕೂಲತೆಗಳು ಒದಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯಗಳು ಪ್ರಜಾಪ್ರಭುತ್ವದ ಮುಖ್ಯ ಲಕ್ಷಣಗಳು.
ಕೊನೆಯದಾಗಿ ಪ್ರಜಾಪ್ರಭುತ್ವ ಒಂದು ಜೀವನ ವಿಧಾನವೇ ಆಗಿದೆ. ಆರ್ಥಿಕ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಿಕೊಡಲು ಅದು ಹೋರಾಡುತ್ತದೆ. ನಾಗರಿಕರಲ್ಲಿ ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ, ರಚನಾತ್ಮಕ ವಿಮರ್ಶೆ ಜೀವಂತ ಪ್ರಜಾಪ್ರಭುತ್ವದ ಲಕ್ಷಣಗಳಾಗಿರುತ್ತವೆ.
ಪ್ರಜಾಪ್ರಭುತ್ವದಲ್ಲಿ ಮುಖ್ಯವಾಗಿ ಎರಡು ಬಗೆಗಳಿವೆ. 1. ಪ್ರತ್ಯಕ್ಷ ಅಥವಾ ನೇರ ಪ್ರಜಾಪ್ರಭುತ್ವ 2. ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವ.
ನೇರ ಅಥವಾ ಪ್ರತ್ಯಕ್ಷ ಪ್ರಜಾಪ್ರಭುತ್ವ ಪ್ರಾಚೀನ ಕಾಲದಲ್ಲಿ ಗ್ರೀಸಿನ ನಗರ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿತ್ತು. ಈ ಪದ್ಧತಿಯಲ್ಲಿ ರಾಷ್ಟ್ರದ ಜನರೆಲ್ಲರೂ ಆಡಳಿತದಲ್ಲಿ ನೇರವಾಗಿ ಭಾಗವಹಿಸುತ್ತಿದ್ದರು. ಈ ಪದ್ಧತಿಯ ವೈಶಿಷ್ಟ್ಯವೆಂದರೆ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸದೆ ತಾವೇ ನೇರವಾಗಿ ತಮ್ಮ ರಾಜ್ಯಾಡಳಿತ ನಡೆಸುತ್ತಿದ್ದರು. ಅಂದಿನ ನಗರ ರಾಜ್ಯಗಳು ಕ್ಷೇತ್ರ ವಿಸ್ತಾರ ಹಾಗೂ ಜನಸಂಖ್ಯೆಯ ದೃಷ್ಟಿಯಿಂದ ಬಹಳ ಚಿಕ್ಕವಾಗಿದ್ದುದರಿಂದ ಪ್ರತ್ಯಕ್ಷ ಪ್ರಜಾಪ್ರಭುತ್ವ ಆಗ ಸಾಧ್ಯವಿತ್ತು ಅಲ್ಲದೆ ಅದು ಸೀಮಿತವೂ ಗುಲಾಮಗಿರಿಯ ಮೇಲೆ ನಿರ್ಮಿತವಾದ್ದು ಆಗಿತ್ತು. ಯಾವ ಗ್ರೀಕ್ ರಾಜ್ಯದಲ್ಲೇ ಆಗಲಿ ಸ್ವತಂತ್ರ ಪ್ರಜೆಗಳು ಬಹುಸಂಖ್ಯಾತರಾಗಿರಲಿಲ್ಲ. ಅದು ಅಲ್ಪಸಂಖ್ಯಾತರ ಪ್ರಭುತ್ವವಾಗಿತ್ತು.
ಆಧುನಿಕ ಕಾಲದಲ್ಲಿ ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಇಂದು ಪ್ರತ್ಯಕ್ಷ ಪ್ರಜಾಪ್ರಭುತ್ವದ ಪ್ರಯೋಗ ಯಶಸ್ವಿಯಾಗಲಾರದು. ಇಂದಿನ ರಾಷ್ಟ್ರ ವಿಶಾಲ ಭೂ ಪ್ರದೇಶವನ್ನೂ ಮತ್ತು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವುದರಿಂದ ಮತ್ತು ಅದು ನಿರ್ವಹಿಸಬೇಕಾದ ಕಾರ್ಯಗಳು ಅಸಂಖ್ಯವೂ ವೈವಿಧ್ಯಪೂರ್ಣವೂ ಆಗಿರುವುದರಿಂದ ನೇರ ಪ್ರಜಾಪ್ರಭುತ್ವ ಇಂದು ಸಾಧ್ಯವಿಲ್ಲ. ಎಲ್ಲ ನಾಗರಿಕರು ಒಂದೆಡೆ ಕೂಡುವುದಾಗಲಿ ಒಟ್ಟಿಗೆ ಅವರು ಆಡಳಿತದಲ್ಲಿ ಭಾಗವಹಿಸುವುದಾಗಲಿ ಕಲ್ಪನೆಗೆ ಮೀರಿದ ಮಾತು. ಇಂದು ಪ್ರಜಾಪ್ರಭುತ್ವ ಎಷ್ಟೊಂದು ಆಕರ್ಷಕವಾಗಿದೆಯೆಂದರೆ ಅದರಲ್ಲಿ ವಿಶ್ವಾಸವಿಲ್ಲದವರೂ ಅದರ ಹೆಸರನ್ನು ಬಳಸಿಕೊಳ್ಳುತ್ತಾರೆ.
ಪ್ರಜಾಪ್ರಭುತ್ವದಲ್ಲಿ ನಿರಂಕುಶ ಪ್ರಭುತ್ವಕ್ಕೆ ಎಡೆಯಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಬ್ಬನೂ ಒಂದಿಲ್ಲೊಂದು ರೀತಿಯಲ್ಲಿ ತನ್ನ ದೇಶದ ಮತ್ತು ಸರ್ಕಾರದ ವ್ಯವಹಾರಗಳಲ್ಲಿ ಭಾಗವಹಿಸಲು ಇಲ್ಲಿ ಸಾಧ್ಯವಿದೆ. ಹಕ್ಕುಗಳ ರೂಪದಲ್ಲಿ ಹಲವಾರು ಅವಕಾಶಗಳನ್ನು ಇಲ್ಲಿ ನೀಡಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಲೋಕವಾಣಿಯೇ ಪ್ರಭುವಾಣಿ.
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನತೆಗೆ ಹೊಣೆಯಾಗಿರುತ್ತದೆ. ಜನತಾ ಪ್ರತಿನಿಧಿಗಳಿಂದೊಡಗೂಡಿದ ಶಾಸನಾಂಗವನ್ನು ಧಿಕ್ಕರಿಸಿ ನಡೆದರೆ ಅಂಥ ಸರ್ಕಾರವನ್ನು ಅವಿಶ್ವಾಸದ ಗೊತ್ತುವಳಿಯ ಮೂಲಕ ಉರುಳಿಸಬಹುದು. ಮಂತ್ರಿಗಳು, ಅಧಿಕಾರಿಗಳು, ಶಾಸಕರು ಮನಬಂದಂತೆ ವರ್ತಿಸಲು ಅವಕಾಶವಿಲ್ಲ. ಹೊಣೆಗೆಟ್ಟ ಸರ್ಕಾರವನ್ನು ಜಾಗೃತ ಜನತೆಯೇ ದಾರಿಗೆ ತರಬೇಕಾಗುತ್ತದೆ.
ಪ್ರಜಾಪ್ರಭುತ್ವ ಯಾವುದೇ ವಿಶಿಷ್ಟ ವ್ಯಕ್ತಿ ಅಥವಾ ವರ್ಗಗಳ ಹಿತಕ್ಕಾಗಿ ಶ್ರಮಿಸುವುದಿಲ್ಲ. ಸರ್ವರಿಗೂ ಸಂವೈಧಾನಿಕ ರಕ್ಷಣೆ ಇದೆ. ಇಡೀ ಸಮಾಜದ ಕಲ್ಯಾಣವೇ ಪ್ರಜಾಪ್ರಭುತ್ವದ ಗುರಿಯಾಗಿದೆ. ಅದರಲ್ಲೂ ಸಾಮಾನ್ಯ ಜನರ ಏಳ್ಗೆಗಾಗಿ ಇದು ವಿಶೇಷವಾಗಿ ಗಮನ ನೀಡುತ್ತದೆ.
ವ್ಯಕ್ತಿತ್ವದ ಬೆಳವಣಿಗೆಗೆ ಅತ್ಯಂತ ಅವಶ್ಯವೆನಿಸುವ ಸ್ವಾತಂತ್ರ್ಯ ಸಮಾನತೆ ಮುಂತಾದ ಗುಣಗಳು ಪ್ರಜಾಪ್ರಭುತ್ವದಲ್ಲಿ ಅಡಗಿವೆ. ಇಂದು ಪೌರನಿಗೆ ಅನೇಕ ಬಗೆಯ ಸ್ವಾತಂತ್ರ್ಯಗಳು ಲಭ್ಯವಾಗಿವೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಚಾರ ಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ-ಹೀಗೆ ಹಲವಾರು ಬಗೆಯ ಸ್ವಾತಂತ್ರ್ಯಗಳನ್ನು ಪ್ರಜಾಪ್ರಭುತ್ವದಲ್ಲಿ ನಾಗರಿಕ ಪಡೆಯುತ್ತಾನೆ. ಎಲ್ಲರೂ ಕಾನೂನಿನ ಮುಂದೆ ಸಮಾನರು. ಉಚ್ಚ ನೀಚ ಎಂಬ ಭೇದ ಇಲ್ಲಿ ಕಾಣದು. ಜಾತಿ, ಧರ್ಮ, ಭಾಷೆ, ಲಿಂಗ ಹಾಗೂ ಪಕ್ಷ ಪಂಗಡಗಳ ಆಧಾರದ ಮೇಲೆ ಯಾವುದೇ ಪಕ್ಷಪಾತಕ್ಕೆ ಇಲ್ಲಿ ಎಡೆಯಿಲ್ಲ.
ಇಲ್ಲಿ ಹಿಂಸಾಚಾರ, ಬಲಪ್ರಯೋಗಗಳಿಗೆ ಸ್ಥಾನವಿಲ್ಲ. ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಬಂದೂಕುಗಳನ್ನು ಉಪಯೋಗಿಸದೆ ಮತದ ಪೆಟ್ಟಿಗೆಗಳನ್ನಿಲ್ಲಿ ಉಪಯೋಗಿಸಲಾಗುತ್ತದೆ. ಸರ್ಕಾರ ಜನತೆಯ ಮನವನ್ನು ಒಲಿಸುವುದರ ಮೂಲಕ, ಕಾರ್ಯಕ್ರಮಗಳನ್ನು ವಿವರಿಸಿ ಅವುಗಳನ್ನು ಅನುಷ್ಠಾನದಲ್ಲಿ ತರುವುದರ ಮೂಲಕ ಶಾಂತಿಯುತ ಪ್ರಗತಿಯನ್ನು ಸಾಧಿಸುತ್ತದೆ.
ಒತ್ತಾಯದ ಕೆಲಸ, ಗುಲಾಮಗಿರಿ, ಆರ್ಥಿಕ ಶೋಷಣೆಗಳಿಗೆ ಇಲ್ಲಿ ಆಸ್ಪದವಿಲ್ಲ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಚ್ಯುತಿ ಬರದಂತೆ ಜನತಾ ಕಲ್ಯಾಣವನ್ನು ಸಾಧಿಸಲಾಗುತ್ತದೆ.
ಪ್ರಜಾಪ್ರಭುತ್ವದ ಆದರ್ಶ ದೊಡ್ಡದಾದರೂ ಅನುಷ್ಠಾನದಲ್ಲಿ ಅದು ಪರಿಪೂರ್ಣ ರಾಜ್ಯ ವ್ಯವಸ್ಥೆಯಲ್ಲ. ಅದೂ ಅನೇಕ ನ್ಯೂನತೆಗಳನ್ನೊಳಗೊಂಡಿದೆ. ಇಂದಿನ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಎದ್ದು ಕಾಣುವ ಅವಗುಣಗಳನ್ನು ಹೀಗೆ ಪಟ್ಟಿ ಮಾಡಬಹುದು.
This article uses material from the Wikipedia ಕನ್ನಡ article ಪ್ರಜಾಪ್ರಭುತ್ವ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.