ಪ್ರಾಚೀನ ಈಜಿಪ್ಟ್‌

ಪ್ರಾಚೀನ ಈಜಿಪ್ಟ್‌ ಪೌರಾತ್ಯ ಉತ್ತರ ಆಫ್ರಿಕಾದ ನೈಲ್ ನದಿ ದಂಡೆಯುದ್ದಕ್ಕೂ ಚಾಚಿಕೊಂಡಿದ್ದ ಒಂದು ಪುರಾತನ ನಾಗರಿಕತೆ, ಈ ಪ್ರದೇಶದಲ್ಲಿ ಈಗ ಆಧುನಿಕ ಈಜಿಪ್ಟ್ ಇದೆ.

ಈ ನಾಗರಿಕತೆಯು ಸುಮಾರು ಕ್ರಿ.ಪೂ 3150ರ ಸಂದರ್ಭದಲ್ಲಿ ಒಳನಾಡು ಮತ್ತು ಕೆಳ ಈಜಿಪ್ಟಿನ ರಾಜಕೀಯ ಸಂಘಟನೆಯೊಂದಿಗೆ ಮೊದಲ ಫೇರೋನಡಿಯಲ್ಲಿ ಏಕೀಭವಗೊಂಡು, ನಂತರದ ಸುಮಾರು ಮ‌ೂರು ಸಹಸ್ರವರ್ಷಗಳಷ್ಟು ಕಾಲ ಬೆಳವಣಿಗೆ ಹೊಂದಿತು. ಇದರ ಇತಿಹಾಸವು ಸುಭದ್ರ ರಾಜ್ಯ ಗಳ ಸಂದರ್ಭದಲ್ಲಿ ಉತ್ತಮವಾಗಿತ್ತು, ನಂತರ ಈ ರಾಜ್ಯಗಳು 'ಮಧ್ಯಕಾಲೀನ ಯುಗ' ಎಂದು ಕರೆಯುವ ಪರಸ್ಪರ ಅಭದ್ರತೆಯ ಅವಧಿಯಲ್ಲಿ ಬೇರ್ಪಟ್ಟವು. ಪ್ರಾಚೀನ ಈಜಿಪ್ಟ್‌ ಹೊಸ ರಾಜ್ಯಗಳ ಸಂದರ್ಭದಲ್ಲಿ ಪರಮೋತ್ಕರ್ಷ ಸ್ಥಿತಿ ತಲುಪಿತು, ಆನಂತರ ಅದು ನಿಧಾನವಾಗಿ ಅವನತಿಯ ಕಾಲವನ್ನು ಪ್ರವೇಶಿಸಿತು. ಈ ಅವಧಿಯಲ್ಲಿ ಈಜಿಪ್ಟ್‌ ವಿದೇಶಿ ಪ್ರಭಾವದ ಉತ್ತರಾಧಿಕಾರಿಗಳ ಅಧೀನಕ್ಕೊಳಪಟ್ಟಿತು. ಫೇರೋಗಳ ಆಳ್ವಿಕೆಯು ಕ್ರಿ.ಪೂ 31ರಲ್ಲಿ, ಪ್ರಾಚೀನ ರೋಮನ್ ಸಾಮ್ರಾಜ್ಯ ಈಜಿಪ್ಟ್‌ಅನ್ನು ವಶಪಡಿಸಿಕೊಂಡು ಒಂದು ಪ್ರಾಂತವಾಗಿ ಮಾಡಿಕೊಂಡಾಗ ಅಧಿಕೃತವಾಗಿ ಕೊನೆಗೊಂಡಿತು.

ಪ್ರಾಚೀನ ಈಜಿಪ್ಟ್‌
ಗಿಜಾದ ಪಿರಮಿಡ್‌‌ಗಳು, ಇವು ಪ್ರಾಚೀನ ಈಜಿಪ್ಟ್ ನಾಗರಿಕತೆಯ ಪ್ರಮುಖ ಗುರುತುಗಳಾಗಿವೆ‌.
ಪ್ರಾಚೀನ ಈಜಿಪ್ಟ್‌
ಪ್ರಾಚೀನ ಈಜಿಪ್ಟಿನ ನಕ್ಷೆ, ರಾಜವಂಶದ ಅವಧಿಯಲ್ಲಿನ ಪ್ರಮುಖ ನಗರ ಮತ್ತು ಪ್ರದೇಶಗಳನ್ನು ತೋರಿಸುತ್ತಿದೆ.ಕ್ರಿ.ಪೂ. 3150ರಿಂದ ಕ್ರಿ.ಪೂ. 30ರವರೆಗೆ)

ಪ್ರಾಚೀನ ಈಜಿಪ್ಟ್‌ ನಾಗರಿಕತೆಯ ಯಶಸ್ವಿಗೆ ಕಾರಣ ನೈಲ್‌ ನದಿ ಕಣಿವೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅದರ ಸಾಮರ್ಥ್ಯ. ಫಲವತ್ತಾದ ಕಣಿವೆಯಲ್ಲಿನ ಪ್ರವಾಹದ ಬಗ್ಗೆ ಭವಿಷ್ಯ ನುಡಿಯಬಹುದಾದ ಸ್ಥಿತಿ ಮತ್ತು ನಿಯಂತ್ರಿತ ನೀರಾವರಿ ವ್ಯವಸ್ಥೆಯು ಅಧಿಕ ಪ್ರಮಾಣದ ಬೆಳೆ ಬೆಳೆಯಲು ಸಹಾಯಕವಾಗಿತ್ತು. ಇವು ಸಾಮಾಜಿಕ ಅಭಿವೃದ್ಧಿ ಮತ್ತು ಸಂಸ್ಕೃತಿಯ ಬೆಳವಣಿಗೆಯನ್ನು ಉತ್ತೇಜಿಸಿದವು. ಸಂಪನ್ಮೂಲಗಳು ಸಾಕಷ್ಟಿಲ್ಲದಿದ್ದುದರಿಂದ ಆಡಳಿತವು ಕಣಿವೆ ಮತ್ತು ಸುತ್ತಲಿನ ನಿರ್ಜನ ಪ್ರದೇಶಗಳ ಖನಿಜ ಸಂಪತ್ತನ್ನು ಉಪಯೋಗಕ್ಕೆ ಬರುವಂತೆ ಮಾಡಿತು, ಸ್ವತಂತ್ರ ಬರವಣಿಗೆ ಪದ್ಧತಿಯನ್ನು ಅಭಿವೃದ್ಧಿಗೊಳಿಸಿತು, ಸಮಷ್ಟಿ ನಿರ್ಮಾಣಕಾರ್ಯಗಳನ್ನು ಮತ್ತು ಕೃಷಿ ಯೋಜನೆಗಳನ್ನು ರಚಿಸಿತು, ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ವ್ಯವಹಾರ ನಡೆಸಿತು, ವಿದೇಶಿ ಶತ್ರುಗಳನ್ನು ಸೋಲಿಸುವ ಮತ್ತು ಈಜಿಪ್ಟಿನ ಪ್ರಾಬಲ್ಯತೆಯನ್ನು ದೃಢಪಡಿಸುವ ಉದ್ಧೇಶವನ್ನು ಹೊಂದಿರುವ ಸೇನೆಯನ್ನು ರೂಪಿಸಿತು. ಈ ಚಟುವಟಿಕೆಗಳನ್ನು ಪ್ರೇರೇಪಿಸುವುದು ಮತ್ತು ಆಯೋಜಿಸುವುದು; ಗಣ್ಯ ಲೇಖಕರ, ಧಾರ್ಮಿಕ ಮುಖಂಡರ ಮತ್ತು ಆಡಳಿತಗಾರರ ಅಧಿಕಾರವಾಗಿತ್ತು. ಇದು ಧಾರ್ಮಿಕ ನಂಬಿಕೆಗಳನ್ನು ವಿಸ್ತಾರವಾಗಿ ಬೆಳೆಸುವ ನಿಟ್ಟಿನಲ್ಲಿ ಈಜಿಪ್ಟಿನ ಜನರ ಸಹಕಾರ ಮತ್ತು ಏಕತೆಯನ್ನು ಕಾಪಾಡುತ್ತಿದ್ದ ಫೇರೋಗಳ ನಿಯಂತ್ರಣದಡಿ ನಡೆಯುತ್ತಿತ್ತು.

ಪ್ರಾಚೀನ ಈಜಿಪ್ಟಿನವರ ಪ್ರಮುಖ ಸಾಧನೆಗಳೆಂದರೆ - ಶಾಶ್ವತ ಸ್ಮಾರಕವಾದ ಪಿರಮಿಡ್‌ಗಳು, ದೇವಾಲಯಗಳು ಮತ್ತು ಆಬಲಿಸ್ಕ್‌ಗಳು(ಚೌಕ ಸೂಜಿಯಂಥ ಕಂಬಗಳು) ಮೊದಲಾದವುಗಳ ನಿರ್ಮಾಣಕ್ಕೆ ಕಾರಣವಾದ ಅವರ ರಚನೆ, ಸ್ಥೂಲ ಸಮೀಕ್ಷೆ ಮತ್ತು ನಿರ್ಮಾಣದ ಕುಶಲತೆಗಳು; ಗಣಿತಶಾಸ್ತ್ರ ಪದ್ಧತಿ, ಔಷಧದ ಪ್ರಾಯೋಗಿಕ ಮತ್ತು ಪರಿಣಾಮಕಾರಿ ವ್ಯವಸ್ಥೆ, ನೀರಾವರಿ ವ್ಯವಸ್ಥೆ ಮತ್ತು ಕೃಷಿ ಉತ್ಪನ್ನ ಕೌಶಲಗಳು, ಮೊದಲು ಆವಿಷ್ಕರಿಸಿದ ಹಡಗು, ಈಜಿಪ್ಟಿನ ಪಿಂಗಾಣಿ ಮತ್ತು ಗಾಜಿನ ತಂತ್ರವಿದ್ಯೆಗಳು, ಸಾಹಿತ್ಯದ ಹೊಸ ಸ್ವರೂಪಗಳು ಮತ್ತು ಆರಂಭದ ಶಾಂತಿ ಒಪ್ಪಂದ. ಈಜಿಪ್ಟ್‌ ಶಾಶ್ವತ ಆಸ್ತಿಯನ್ನು ಉಳಿಸಿಹೋಗಿದೆ. ಅದರ ಕಲೆ ಮತ್ತು ವಾಸ್ತುಶಿಲ್ಪಗಳನ್ನು ಎಲ್ಲಾ ಕಡೆ ವಿಸ್ತಾರವಾಗಿ ಅನುಸರಿಸಲಾಗಿದೆ. ಅಲ್ಲದೇ ಅದರ ಪ್ರಾಚೀನತೆಯು ಪ್ರಪಂಚದ ಮ‌ೂಲೆಮ‌ೂಲೆಯಲ್ಲೂ ಕೀರ್ತಿಗಳಿಸಿಕೊಂಡಿದೆ. ಅದರ ಸ್ಮಾರಕಗಳ ಭಗ್ನಾವಶೇಷಗಳು ಶತಮಾನಗಳಿಂದಲೂ ಪ್ರವಾಸಿಗರಿಗೆ ಮತ್ತು ಬರಹಗಾರರ ಕಲ್ಪನೆಗಳಿಗೆ ಪ್ರೇರಣೆ ನೀಡಿವೆ. ಆರಂಭಿಕ ಆಧುನಿಕ ಯುಗದಲ್ಲಿ ಬೆಳಕಿಗೆ ಬಂದ ಪ್ರಾಚೀನಾವಶೇಷಗಳು ಮತ್ತು ಭೂಶೋಧನೆಗಳು ಈಜಿಪ್ಟ್‌ ನಾಗರಿಕತೆಯ ವೈಜ್ಞಾನಿಕ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟವು. ಅಲ್ಲದೇ ಅದರ ಸಾಂಸ್ಕೃತಿಕ ಆಸ್ತಿಗೆ ಈಜಿಪ್ಟ್‌ನಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲೇ ಶ್ರೇಷ್ಠ ಮನ್ನಣೆ ತಂದುಕೊಟ್ಟಿತು.

ಇತಿಹಾಸ

ಪ್ರಾಚೀನ ಶಿಲಾಯುಗದ ಕೊನೆಯಲ್ಲಿ ಉತ್ತರ ಆಫ್ರಿಕಾದ ಶುಷ್ಕ ಹವಾಗುಣವ ಹಾಗು ಅಧಿಕ ಬಿಸಿಯಾಗುವುದು ಆ ಪ್ರದೇಶದ ಜನರು ನೈಲ್‌ ಕಣಿವೆಯಲ್ಲಿ ವಾಸಿಸುವಂತೆ ಮಾಡಿತು. ಮಧ್ಯ ಪ್ಲೇಸ್ಟಸೀನ್‌ ಯುಗದ ಕೊನೆಯಿಂದ ಸುಮಾರು 120 ವರ್ಷಗಳ ಹಿಂದೆಯೇ ಅಲೆಮಾರಿ ಆಧುನಿಕ ಮಾನವ ಬೇಟೆಗಾರರು ಈ ಪ್ರದೇಶದಲ್ಲಿ ವಾಸಿಸಲು ಆರಂಭಿಸಿದರಿಂದ, ನೈಲ್‌ ನದಿಯು ಈಜಿಪ್ಟಿನ ಜೀವನಾಧಾರವಾಗಿತ್ತು. ನೈಲ್‌ನ ಫಲವತ್ತಾದ ಪ್ರವಾಹಪ್ರದೇಶವು ಮಾನವರಿಗೆ ಅಲ್ಲೇ ವಸತಿ ಹೂಡಿ ಕೃಷಿಯ ಆರ್ಥಿಕ ಸ್ಥಿತಿ ಮತ್ತು ಹೆಚ್ಚು ಸುಸಂಸ್ಕೃತ ಕೇಂದ್ರೀಕೃತ ಸಮಾಜವನ್ನು ಪ್ರೊತ್ಸಾಹಿಸಲು ಅವಕಾಶ ಮಾಡಿಕೊಟ್ಟಿತು. ಇದು ಮಾನವ ನಾಗರಿಕತೆಯ ಚರಿತ್ರೆಯಲ್ಲಿ ಅತ್ಯವಶ್ಯವಾಗಿ ಗಮನಿಸಬೇಕಾದ ಭಾಗವಾಗಿದೆ.

ಪೂರ್ವರಾಜವಂಶೀಯ ಅವಧಿ

ಪೂರ್ವರಾಜವಂಶೀಯ ಮತ್ತು ಆರಂಭಿಕ ರಾಜಪರಂಪರೆಯ ಅವಧಿಯಲ್ಲಿ, ಈಜಿಪ್ಟಿನ ಹವಾಗುಣವು ಈಗಿರುವುದಕ್ಕಿಂತ ತುಂಬಾ ಕಡಿಮೆ ಶುಷ್ಕತೆಯಿಂದ ಕೂಡಿತ್ತು. ಈಜಿಪ್ಟಿನ ಹೆಚ್ಚಿನ ಪ್ರದೇಶಗಳು ಕುರುಚಲು ಗಿಡಗಳಿರುವ ಸವನ್ನಾ ಹುಲ್ಲುಗಾವಲಿನಿಂದ ಆವೃತವಾಗಿದ್ದವು. ಅಲ್ಲಿ ಮೇಯುವ ಗೊರಸುಗಳುಳ್ಳ ಪ್ರಾಣಿಗಳ ಹಿಂಡುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಸುತ್ತಮುತ್ತಲಿನ ಪರಿಸರದಲ್ಲಿ ಸಸ್ಯ ಮತ್ತು ಪ್ರಾಣಿಸಂಕುಲಗಳು ಸಮೃದ್ಧವಾಗಿದ್ದವು. ಅಲ್ಲದೇ ನೈಲ್‌ ನದಿ ಪ್ರದೇಶವು ಹೆಚ್ಚಿನ ಜಲಚರಜೀವಿಗಳಿಗೆ ಆಶ್ರಯತಾಣವಾಗಿತ್ತು. ಬೇಟೆಯಾಡುವುದು ಈಜಿಪ್ಟಿನವರ ಸಾಮಾನ್ಯ ಹವ್ಯಾಸವಾಗಿತ್ತು. ಇದು ಅನೇಕ ಪ್ರಾಣಿಗಳನ್ನು ಮೊದಲು ಪಳಗಿಸಿದ ಅವಧಿಯ‌ೂ ಹೌದು.

ಪ್ರಾಚೀನ ಈಜಿಪ್ಟ್‌ 
ಒಂದು ಜಾತಿಯ ಜಿಂಕೆಗಳ ಚಿತ್ರ ಬಿಡಿಸಿರುವ ಸಾಂಕೇತಿಕ ನಕಾಡ II ಜಾಡಿ.(ಪೂರ್ವರಾಜವಂಶೀಯ ಅವಧಿ)

ಸುಮಾರು ಕ್ರಿ.ಪೂ 5500ರಲ್ಲಿ, ನೈಲ್‌ ಕಣಿವೆಯಲ್ಲಿ ಜೀವಿಸುತ್ತಿದ್ದ ಸಣ್ಣ ಬುಡಕಟ್ಟು ಜನಾಂಗದವರು ಕೃಷಿ ಮತ್ತು ಪಶುಸಂಗೋಪನೆಯ ಮ‌ೂಲಕ ಸಂಸ್ಕೃತಿಯನ್ನು ಪ್ರದರ್ಶಿಸುವ ಸಮುದಾಯಗಳನ್ನು ಅಭಿವೃದ್ಧಿಪಡಿಸಿಕೊಂಡರು. ಅವರ ಬಾಚಣಿಗೆ, ಕೈಬಳೆ ಮತ್ತು ಹಾಸಿಗೆಗಳಂತಹ ವೈಯಕ್ತಿಕ ನಿತ್ಯೋಪಯೋಗಿ ವಸ್ತುಗಳು ಮತ್ತು ಮಣ್ಣಿನ ಪಾತ್ರೆ ಮೊದಲಾದ ವಿಶಿಷ್ಟ ವಸ್ತುಗಳಿಂದಾಗಿ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಪುರಾತನ ಸಾಂಸ್ಕೃತಿಕ ಸಾಧನಗಳು ಹೆಚ್ಚಿದ್ದ ಈಜಿಪ್ಟಿನ ಒಳನಾಡು ಪ್ರದೇಶ ಬದರಿಯು ಅದರ ಉತ್ತಮ ಗುಣಮಟ್ಟದ ಪಿಂಗಾಣಿ ಸಾಮಾನುಗಳು, ಕಲ್ಲಿನ ಸಾಧನ ಸಲಕರಣೆಗಳು ಮತ್ತು ತಾಮ್ರದ ಬಳಕೆಗೆ ಹೆಚ್ಚು ಜನಪ್ರಿಯವಾಗಿತ್ತು.

ಉತ್ತರ ಈಜಿಪ್ಟಿನಲ್ಲಿ ಬದರಿಯು ಅನೇಕ ತಾಂತ್ರಿಕ ಬೆಳವಣಿಗೆಗಳನ್ನು ತೋರಿಸಿಕೊಟ್ಟ ಅಮ್ರತಿಯಾನ್ ಮತ್ತು ಗರ್ಜಿಯಾನ್ ಸಂಸ್ಕೃತಿಗಳನ್ನು ಅನುಸರಿಸಿದೆ. ಗರ್ಜಿಯಾನ್ ಅವಧಿಯಲ್ಲಿದ್ದ ಪುರಾತನ ಸಾಕ್ಷ್ಯಾಧಾರಗಳು ಕೇನನ್‌ ಮತ್ತು ಬೈಬ್ಲೋಸ್ ಕರಾವಳಿಯಲ್ಲಿ ಕಂಡುಬಂದಿವೆ.

ದಕ್ಷಿಣ ಈಜಿಪ್ಟಿನಲ್ಲಿ ಬದರಿಯಂತೆಯೇ ನಕಾಡ ಸಂಸ್ಕೃತಿಯ‌ೂ ಕ್ರಿ.ಪೂ 4000ರಲ್ಲಿ ನೈಲ್‌ ನದಿಯುದ್ದಕ್ಕೂ ಬೆಳೆಯಲು ಆರಂಭವಾಯಿತು. ನಕಾಡ I ಅವಧಿಯಲ್ಲಿ ಪೂರ್ವರಾಜವಂಶೀಯ ಈಜಿಪ್ಟ್‌ ಇಥಿಯೋಪಿಯಾದಿಂದ ಚಪ್ಪಟೆ ಎಲುಬುಗಳನ್ನು ಮತ್ತು ಕಲ್ಲಿನ ಚಕ್ಕೆಗಳನ್ನು ಹರಿತಗೊಳಿಸಲು ಕಾರ್ಗಲ್ಲುಗಳನ್ನು ಆಮದುಮಾಡಿಕೊಂಡಿತು. ಸುಮಾರು 1000 ವರ್ಷಗಳ ಅವಧಿಯಲ್ಲಿ ನಕಾಡ ಸಂಸ್ಕೃತಿಯು ಕೃಷಿ ಮಾಡುವ ಕೆಲವು ಸಣ್ಣ ಸಮುದಾಯಗಳಿಂದ ಪ್ರಬಲ ನಾಗರಿಕತೆಯಾಗಿ ಬೆಳವಣಿಗೆ ಹೊಂದಿತು. ಇದರ ಮುಖಂಡರು ಸಂಪೂರ್ಣವಾಗಿ ಜನರನ್ನು ಮತ್ತು ನೈಲ್‌ ಕಣಿವೆಯ ಸಂಪನ್ಮೂಲಗಳನ್ನು ಅವಲಂಬಿಸಿದ್ದರು. ಆಡಳಿತ ಕೇಂದ್ರವನ್ನು ಹೈರಕೋನ್ಪೊಲಿಸ್‌‌ನಲ್ಲಿ ನಂತರ ಅಬಿದೋಸ್‌‌ನಲ್ಲಿ ಸ್ಥಾಪಿಸುವುದರ ಮ‌ೂಲಕ ನಕಾಡ III ಮುಖಂಡರು ಅವರ ಈಜಿಪ್ಟಿನ ಮೇಲಿನ ನಿಯಂತ್ರಣವನ್ನು ಉತ್ತರ ದಿಕ್ಕಿಗೆ ನೈಲ್‌ ನದಿಯುದ್ದಕ್ಕೂ ವಿಸ್ತರಿಸಿದರು. ಅಲ್ಲದೆ ಅವರು ದಕ್ಷಿಣದಲ್ಲಿ ನುಬಿಯಾ, ಪಶ್ಚಿಮ ದಿಕ್ಕಿನಲ್ಲಿ ಪಾಶ್ಚಿಮಾತ್ಯ ಮರುಳುಭೂಮಿಯ ಓಯಸಿಸ್‌ಗಳನ್ನು ಹಾಗೂ ಪೂರ್ವಕ್ಕೆ ಪೌರಾತ್ಯ ಮೆಡಿಟರೇನಿಯನ್‌ನ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಂಡಿದ್ದರು.

ನಕಾಡ ಸಂಸ್ಕೃತಿಯು ಗಣ್ಯ ವ್ಯಕ್ತಿಗಳ ಪ್ರಾಬಲ್ಯತೆ ಮತ್ತು ಸಂಪತ್ತು ವರ್ಧಿಸುವುದನ್ನು ಪ್ರತಿಬಿಂಬಿಸುವ ವರ್ಣರಂಜಿತ ಪಿಂಗಾಣಿಗಳು, ಉತ್ತಮ ಗುಣಮಟ್ಟದ ಆಲಂಕಾರಿಕ ಕಲ್ಲಿನ ಹೂಕುಂಡಗಳು, ಅಂದಗೊಳಿಸುವ ವರ್ಣಫಲಕಗಳು ಹಾಗೂ ಚಿನ್ನ, ಲ್ಯಾಪಿಸ್(ನೀಲಿ ಬಣ್ಣದ ಶಿಲೆ) ಮತ್ತು ದಂತದಿಂದ ಮಾಡಿದ ಆಭರಣಗಳು ಮೊದಲಾದ ಭಿನ್ನ ಅಲಂಕಾರ ಸಾಮಾಗ್ರಿಗಳನ್ನು ತಯಾರು ಮಾಡಿದೆ. ಅಲ್ಲದೆ ಈ ಕಾಲದಲ್ಲಿ ನಕಾಸೆ ಪಿಂಗಾಣಿ ಎಂದು ಕರೆಯುವ ಪಿಂಗಾಣಿ ಗ್ಲೇಸುಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಇವನ್ನು ರೋಮನ್ ಅವಧಿಯಲ್ಲಿ ಕಪ್‌, ತಾಯಿತ ಮತ್ತು ಸಣ್ಣ ಪ್ರತಿಮೆಗಳನ್ನು ಅಲಂಕಾರಗೊಳಿಸಲು ಹೆಚ್ಚಾಗಿ ಬಳಸಲಾಗುತ್ತಿತ್ತು. ಪೂರ್ವರಾಜವಂಶೀಯ ಅವಧಿಯ ಕೊನೆಯಲ್ಲಿ ನಕಾಡ ಸಂಸ್ಕೃತಿಯು ಸಂಕೇತಗಳ ಮೂಲಕ ಬರೆಯುವುದನ್ನು ಆರಂಭಿಸಿತು. ಇದು ಅಂತಿಮವಾಗಿ ಪ್ರಾಚೀನ ಈಜಿಪ್ಟಿನ ಭಾಷೆಯನ್ನು ಬರೆಯಲು ಚಿತ್ರಪಿಲಿಗಳ ವ್ಯವಸ್ಥೆಯೊಂದನ್ನು ರೂಪಿಸಿಕೊಟ್ಟಿತು.

ಆರಂಭಿಕ ರಾಜವಂಶೀಯ ಅವಧಿ

ಪ್ರಾಚೀನ ಈಜಿಪ್ಟ್‌ 
ಎರಡು ಪ್ರದೇಶಗಳ ಏಕೀಕರಣವನ್ನು ಚಿತ್ರಿಸಿದ ನಾರ್ಮರ್‌ ವರ್ಣಫಲಕ.

ಕ್ರಿ.ಪೂ ಮ‌ೂರನೆ ಶತಮಾನದ ಈಜಿಪ್ಟಿನ ಕ್ರೈಸ್ತ ಪಾದ್ರಿ ಮನೆಥೊ ಮೆನೆಸ್‌ನ ಕಾಲದಿಂದ ಅವನ ಅವಧಿಯವರೆಗೆ ಇದ್ದ 30 ರಾಜವಂಶಗಳ ಫೇರೋಗಳನ್ನು ಗುರುತಿಸಿ ಗುಂಪುಗೂಡಿಸಿದನು, ಈ ವ್ಯವಸ್ಥೆಯು ಇಂದಿಗೂ ಪ್ರಚಲಿತದಲ್ಲಿದೆ. ಅವನು ತನ್ನ ಅಧಿಕೃತ ಆಡಳಿತವನ್ನು "ಮನಿ" (ಅಥವಾ ಗ್ರೀಕ್‌ನ ಮೆನೆಸ್) ಎಂಬ ಹೆಸರಿನ ರಾಜನೊಂದಿಗೆ ಆರಂಭಿಸಿದನು. ನಂತರ ಅವನು ಒಳನಾಡು ಈಜಿಪ್ಟ್ ಮತ್ತು ಕೆಳ ಈಜಿಪ್ಟಿನ‌ ಎರಡು ರಾಜಧಾನಿಗಳನ್ನು ಏಕೀಕರಿಸಿದನು; ಎಂದು ನಂಬಲಾಗಿದೆ. (ಸುಮಾರು 3200BC). ಒಂದು ಏಕೀಕೃತ ರಾಜ್ಯವಾಗಿ ಪರಿವರ್ತನೆಯಾದ ಕ್ರಿಯೆಯು ನಿಜವಾಗಿ ಪ್ರಾಚೀನ ಈಜಿಪ್ಟ್‌ ಲೇಖಕರು ಹೇಳಿದುದಕ್ಕಿಂತ ನಿಧಾನವಾಗಿ ಕ್ರಮೇಣ ಸಂಭವಿಸಿತು. ವಾಸ್ತವವಾಗಿ ಮೆನೆಸ್ ಬಗ್ಗೆ ಯಾವುದೇ ಸಮಕಾಲಿಕ ಸಾಕ್ಷ್ಯಾಧಾರಗಳಿಲ್ಲ. ಕಾಲ್ಪನಿಕ ಮೆನೆಸ್ ನಿಜವಾಗಿ ಏಕೀಕರಣದ ಸಂಕೇತವಾಗಿ ಔಪಚಾರಿಕ ನಾರ್ಮರ್‌ ವರ್ಣಫಲಕದಲ್ಲಿ ಭವ್ಯ ರಾಜಲಾಂಛನವನ್ನು ಧರಿಸಿರುವಂತೆ ಚಿತ್ರಿಸಲಾದ ಫೇರೋ ನಾರ್ಮರ್‌ ಆಗಿರಬಹುದು ಎಂದು ಕೆಲವು ಪರಿಣಿತರು ನಂಬಿದ್ದಾರೆ.

ಆರಂಭಿಕ ರಾಜವಂಶೀಯ ಅವಧಿ ಕ್ರಿ.ಪೂ 3150ರಲ್ಲಿ ಮೊದಲ ರಾಜವಂಶದ ಫೇರೋಗಳು ಮೆಂಫಿಸ್‌‌ನಲ್ಲಿ ರಾಜಧಾನಿಯನ್ನು ಸ್ಥಾಪಿಸಿ ಕೆಳ ಈಜಿಪ್ಟಿನ ಮೇಲಿನ ಅವರ ಅಧಿಕಾರವನ್ನು ದೃಢಗೊಳಿಸಿದರು. ಈ ರಾಜಧಾನಿಯ ಮ‌ೂಲಕ ಅವರು ಕಾರ್ಮಿಕ ಬಲ ಮತ್ತು ಫಲವತ್ತಾದ ನದಿ ಮುಖಜ(ಮೆಕ್ಕಲು ಮಣ್ಣಿನ ಪ್ರದೇಶ) ಭೂಮಿಯ ಕೃಷಿಯನ್ನು ಮಾತ್ರವಲ್ಲದೆ ಲಿವ್ಯಾಂಟ್‌ನ ಲಾಭದಾಯಕ ಮತ್ತು ಕ್ರಾಂತಿಕಾರಕ ವ್ಯಾಪಾರ ಮಾರ್ಗಗಳನ್ನೂ ನಿಯಂತ್ರಿಸಿದರು. ಆರಂಭಿಕ ರಾಜವಂಶೀಯ ಅವಧಿಯಲ್ಲಿದ್ದ ಫೇರೋಗಳ ಹೆಚ್ಚುತ್ತಿದ್ದ ಪ್ರಾಬಲ್ಯ ಮತ್ತು ಸಂಪತ್ತಿನ ಬಗ್ಗೆ ಅಬಿದೋಸ್‌ನಲ್ಲಿನ ವಿಸ್ತಾರವಾದ ಸ್ಮಾರಕ ಸಮಾಧಿಯಲ್ಲಿ ಮತ್ತು ಶವಸಂಸ್ಕಾರ ಕರ್ಮಾಚರಣೆಗಾಗಿ ನಿರ್ಮಿಸಿದ ರಚನೆಗಳಲ್ಲಿ ಕಾಣಬಹುದು. ಈ ರಚನೆಗಳನ್ನು ಫೇರೋನನ್ನು ಅವನ ಮರಣದ ನಂತರ ಪರಮಶ್ರೇಷ್ಠನೆಂದು ವರ್ಣಿಸಿ ಆರಾಧಿಸಲು ಬಳಸಲಾಗುತ್ತಿತ್ತು. ಫೇರೋಗಳಿಂದ ಅಭಿವೃದ್ಧಿಗೊಂಡ ರಾಜಪ್ರಭುತ್ವದ ಪ್ರಬಲ ವ್ಯವಸ್ಥೆಯು, ಪ್ರಾಚೀನ ಈಜಿಪ್ಟ್‌ ನಾಗರಿಕತೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಅವಶ್ಯವಾಗಿದ್ದ ಸಂಪನ್ಮೂಲಗಳು, ಭೂಮಿ ಮತ್ತು ಕಾರ್ಮಿಕರ ಮೇಲೆ ರಾಜ್ಯದ ನಿಯಂತ್ರಣವನ್ನು ಕಾನೂನು ಸಮ್ಮತಗೊಳಿಸಲು ಪ್ರಯತ್ನಿಸಿತು.

ಪುರಾತನ ರಾಜ್ಯ

ಪ್ರಾಚೀನ ಈಜಿಪ್ಟ್‌ 
ಬಾಸ್ಟನ್ ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್‌ನಲ್ಲಿನ ಮೆಂಕೌರಾದ ಅಲಬಾಸ್ಟರ್‌ನ ಪ್ರತಿಮೆ.

ಕಲೆ, ವಾಸ್ತುಶಿಲ್ಪ ಮತ್ತು ತಂತ್ರಜ್ಞಾನ ವಿದ್ಯೆಗಳ ಅತ್ಯದ್ಭುತ ಪ್ರಗತಿಯು ಪುರಾತನ ರಾಜ್ಯದ ಸಂದರ್ಭದಲ್ಲಿ ಆಯಿತು. ಉತ್ತಮವಾದ ಕೇಂದ್ರ ಆಡಳಿತದಿಂದ ಸಾಧ್ಯವಾದ ಕೃಷಿ ಉತ್ಪನ್ನ ಹೆಚ್ಚಳದಿಂದ ಇದು ಉತ್ತೇಜಿಸಲ್ಪಟ್ಟಿತು. ವಜೀರನ ನಿರ್ದೇಶನದಡಿಯಲ್ಲಿ ರಾಜ್ಯ ಅಧಿಕಾರಿಗಳು ತೆರಿಗೆಗಳನ್ನು ಸಂಗ್ರಹಿಸುತ್ತಿದ್ದರು, ಬೆಳೆ ಇಳುವರಿಯನ್ನು ಹೆಚ್ಚಿಸಲು ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಿದರು, ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡಲು ಸ್ಥಳೀಯರನ್ನು ಸೇರಿಸಿಕೊಳ್ಳುತ್ತಿದ್ದರು, ಅಲ್ಲದೇ ನ್ಯಾಯ ಮತ್ತು ಆಜ್ಞೆಗಳನ್ನು ಜಾರಿಗೊಳಿಸಿ ನಿರ್ವಹಿಸಲು ಒಂದು ನ್ಯಾಯ ವ್ಯವಸ್ಥೆಯನ್ನು ರಚಿಸಿದರು. ಸಮೃದ್ಧ ಸಂಪನ್ಮೂಲಗಳಿಂದಾಗಿ ಉತ್ಪನ್ನಕಾರಿ ಮತ್ತು ಸ್ಥಿರ ಆರ್ಥಿಕ ಸ್ಥಿತಿ ಇದ್ದುದರಿಂದ, ರಾಜ್ಯವು ಭಾರಿಗಾತ್ರದ ಅದ್ಭುತ ಸ್ಮಾರಕಗಳ ರಚನೆಯ ಜವಾಬ್ದಾರಿ ವಹಿಸಲು ಮತ್ತು ಉತ್ತಮ ದರ್ಜೆಯ ಸಂಘದ ವಿಶೇಷ ಕಲಾ ಕೆಲಸಕ್ಕೆ ನಿರ್ದೇಶನ ನೀಡಲು ಸಮರ್ಥವಾಗಿತ್ತು. ದ್ಜೋಸರ್‌, ಖುಫು ಮತ್ತು ಅವರ ವಂಶಜರು ನಿರ್ಮಿಸಿದ ಪಿರಮಿಡ್‌ಗಳು ಪ್ರಾಚೀನ ಈಜಿಪ್ಟ್‌ ನಾಗರಿಕತೆಯನ್ನು ಹಾಗೂ ಅಲ್ಲಿ ಆಡಳಿತ ನಡೆಸಿದ ಫೇರೋಗಳ ಪ್ರಾಬಲ್ಯ ಸೂಚಿಸುವ ಅವಿಸ್ಮರಣೀಯ ಸಂಕೇತಗಳಾಗಿವೆ.

ಅಭಿವೃದ್ಧಿ ಹೊಂದುವ ಪ್ರಾಮುಖ್ಯತೆಯೊಂದಿಗೆ ಕೇಂದ್ರಾಡಳಿತವು ಸುಶಿಕ್ಷಿತ ಲೇಖಕರು ಮತ್ತು ಅಧಿಕಾರಿಗಳ ಹೊಸ ವರ್ಗವೊಂದನ್ನು ರಚಿಸಿತು. ಅವರು ತಮ್ಮ ಸೇವೆಗಳಿಗೆ ಫೇರೋಗಳಿಂದ ಸಂಭಾವನೆ ಪಡೆಯುವ ಅಧಿಕೃತ ಜನರಾಗಿದ್ದರು. ಮರಣದ ನಂತರ ತನ್ನನ್ನು ಆರಾಧಿಸಬೇಕೆಂಬ ಉದ್ಧೇಶದಿಂದ ಫೇರೋಗಳು ಅವರ ಶವಸಂಸ್ಕಾರದ ಆರಾಧನೆ ವಿಧಿಗಳಿಗಾಗಿ ಮತ್ತು ಸ್ಥಳೀಯ ದೇವಾಲಯಗಳಿಗಾಗಿ ಭೂದತ್ತಿಗಳನ್ನೂ ನೀಡುತ್ತಿದ್ದರು. ಪುರಾತನ ರಾಜ್ಯದ ಕೊನೆಯಲ್ಲಿ ಐದು ಶತಮಾನಗಳ ಈ ಸೇವಾ ಉಂಬಳಿಯ ಪದ್ಧತಿಗಳು ಫೇರೋಗಳ ಆರ್ಥಿಕ ಪ್ರಾಬಲ್ಯತೆಯನ್ನು ನಿಧಾನವಾಗಿ ಸವೆಸಿದವು. ಅಲ್ಲದೇ ಅವರು ಮುಂದೆ ದೊಡ್ಡ ಕೇಂದ್ರೀಕೃತ ಆಡಳಿತ ನಡೆಸಲು ಪ್ರಯತ್ನಿಸದಂತೆ ಮಾಡಿಬಿಟ್ಟವು. ಫೇರೋಗಳ ಪ್ರಾಬಲ್ಯವು ಕಡಿಮೆಯಾದಂತೆ ನೊಮಾರ್ಕ್ ಎನ್ನುವ ಪ್ರಾದೇಶಿಕ ಆಡಳಿತಾಧಿಕಾರಿಗಳು ಫೇರೋಗಳ ಪರಮಾಧಿಪತ್ಯವನ್ನು ಆಕ್ಷೇಪಿಸಲು ಆರಂಭಿಸಿದರು. ಕ್ರಿ.ಪೂ 2200ರಿಂದ 2150ರವರೆಗಿನ ಸಂದರ್ಭದಲ್ಲಿ ತೀವ್ರ ಬರ ಕಾಣಿಸಿಕೊಳ್ಳುವುದರೊಂದಿಗೆ, ಅಂತಿಮವಾಗಿ ದೇಶವು ಆರಂಭಿಕ ಮಧ್ಯಕಾಲೀನ ಯುಗ ಎಂದು ಕರೆಯುವ 140-ವರ್ಷಗಳ ಅವಧಿಯ ಕ್ಷಾಮ ಮತ್ತು ಸಂಘರ್ಷಕ್ಕೆ ಗುರಿಯಾಯಿತು.

ಆರಂಭಿಕ ಮಧ್ಯಕಾಲೀನ ಯುಗ

ಈಜಿಪ್ಟಿನ ಕೇಂದ್ರಾಡಳಿತವು ಪುರಾತನ ರಾಜ್ಯದ ಕೊನೆಯಲ್ಲಿ ನಾಶಗೊಂಡ ನಂತರ, ಆಡಳಿತಕ್ಕೆ ದೇಶದ ಆರ್ಥಿಕ ಸ್ಥಿತಿ ಪ್ರೊತ್ಸಾಹಿಸಲು ಅಥವಾ ಸ್ಥಿರಗೊಳಿಸಲು ಸಾಧ್ಯವಾಗಲಿಲ್ಲ. ಪ್ರಾದೇಶಿಕ ಆಡಳಿತಾಧಿಕಾರಿಗಳು ವಿಷಮ ಸ್ಥಿತಿಯಲ್ಲಿ ಸಹಾಯಕ್ಕಾಗಿ ರಾಜನನ್ನು ಅವಲಂಬಿಸಲಿಲ್ಲ. ತರುವಾಯ ಸಂಭವಿಸಿದ ಆಹಾರ ಕೊರತೆ ಮತ್ತು ರಾಜಕೀಯ ವಿವಾದಗಳು ಕ್ಷಾಮ ಮತ್ತು ಸಣ್ಣ-ಪ್ರಮಾಣದ ಜನಾಂಗ ಕದನಗಳನ್ನು ಹೆಚ್ಚಿಸಿದವು. ಫೇರೋಗಳಿಗೆ ಗೌರವ ಕಾಣಿಕೆಗಳನ್ನು ನೀಡದಿರುವ ಕಾರಣದಿಂದ ಕ್ಲಿಷ್ಟ ಸಮಸ್ಯೆಗಳು ಎದ್ದರೂ, ಸ್ಥಳೀಯ ಮುಖಂಡರು ಅವರಿಗೆ ಸಿಕ್ಕಿದ ಹೊಸ ಸ್ವಾತಂತ್ರ್ಯವನ್ನು ಪ್ರಾಂತಗಳಲ್ಲಿ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸಲು ಬಳಸಿಕೊಂಡರು. ಸ್ವಂತ ಸಂಪನ್ಮೂಲಗಳ ಮೇಲೆ ಒಮ್ಮೆ ನಿಯಂತ್ರಣ ಸಾಧಿಸಿದ ನಂತರ ಪ್ರಾಂತಗಳು ಆರ್ಥಿಕವಾಗಿ ಸಬಲವಾದವು. ಈ ಅಂಶವು ಎಲ್ಲಾ ಸಾಮಾಜಿಕ ವರ್ಗಗಳಲ್ಲಿದ್ದ ಸಮಾಧಿಗಳ ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ. ಸೃಜನಶೀಲತೆಯ ಹಠಾತ್ ಅಭಿವ್ಯಕ್ತಿಯಲ್ಲಿ ಪ್ರಾಂತದ ಕುಶಲಕರ್ಮಿಗಳು, ಹಿಂದೆ ಪುರಾತನ ರಾಜ್ಯದ ರಾಜಾಧಿಕಾರದಲ್ಲಿ ನಿರ್ಬಂಧಿಸಲ್ಪಟ್ಟಿದ್ದ ಸಾಂಸ್ಕೃತಿಕ ವಿಶಿಷ್ಟ ಲಕ್ಷಣಗಳ ಅಭಿವೃದ್ಧಿಯ ಜವಾಬ್ದಾರಿ ವಹಿಸಿಕೊಂಡರು. ಅಲ್ಲದೇ ಹಲವಾರು ಮಾರ್ಪಾಡುಗಳನ್ನು ಮಾಡಿದರು. ಲೇಖಕರು ಯುಗದ ಆಶಾವಾದಿತ್ವ ಮತ್ತು ನಾವೀನ್ಯತೆ ಅಭಿವ್ಯಕ್ತಗೊಳಿಸುವ ಸಾಹಿತ್ಯಕ ಶೈಲಿಗಳನ್ನು ಅಭಿವೃದ್ಧಿಗೊಳಿಸಿದರು.

ಫೇರೋಗಳಿಗೆ ನೀಡುತ್ತಿದ್ದ ರಾಜಭಕ್ತಿಯಿಂದ ಸ್ವತಂತ್ರರಾಗಿ ಸ್ಥಳೀಯ ರಾಜರು ಸೀಮಾಪ್ರದೇಶಗಳ ನಿಯಂತ್ರಣಕ್ಕಾಗಿ ಮತ್ತು ರಾಜಕೀಯ ಅಧಿಕಾರಕ್ಕಾಗಿ ಪರಸ್ಪರ ಪೈಪೋಟಿ ಪ್ರಾರಂಭಿಸಿದರು. ಕ್ರಿ.ಪೂ. 2160ರಲ್ಲಿ ಹೆರಾಕ್ಲಿಯೊಪೊಲಿಸ್‌ನ ರಾಜರು ಕೆಳ ಈಜಿಪ್ಟನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಥೆಬೆಸ್‌ನಲ್ಲಿದ್ದ ಇಂಟೆಫ್ ಜನಾಂಗ ಎಂಬ ಒಂದು ಪ್ರತಿಸ್ಪರ್ಧಿ ಬುಡಕಟ್ಟು ಈಜಿಪ್ಟಿನ ಒಳನಾಡು ಪ್ರದೇಶವನ್ನು ಆಡಳಿತಕ್ಕೆ ತೆಗೆದುಕೊಂಡಿತು. ಇಂಟೆಫ್‌ ಜನಾಂಗದವರು ಹೆಚ್ಚು ಪ್ರಬಲರಾಗಿ ತಮ್ಮ ಆಡಳಿತವನ್ನು ಉತ್ತರ ದಿಕ್ಕಿಗೆ ವಿಸ್ತರಿಸಿದಾಗ ಎರಡು ಎದುರಾಳಿ ಸಂತತಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಸುಮಾರು ಕ್ರಿ.ಪೂ. 2055ರಲ್ಲಿ ನೆಭೆಪೆಟ್ರೆ ಮೆಂಟುಹೋಟೆಪ್‌ II ಮುಂದಾಳತ್ವದಲ್ಲಿ ಥೀಬ್ಸ್‌ನ ಸೈನ್ಯವು ಅಂತಿಮವಾಗಿ ಹೆರಾಕ್ಲಿಯೊಪೊಲಿಸ್‌ ರಾಜರನ್ನು ಸೋಲಿಸಿತು. ಇದರಿಂದ ಎರಡು ಪ್ರಾಂತಗಳು ಮತ್ತೆ ಒಂದುಗೂಡಿ, ಮಧ್ಯಕಾಲೀನ ರಾಜ್ಯ ಎನ್ನುವ ಆರ್ಥಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಅವಧಿ ಆರಂಭವಾಯಿತು.

ಮಧ್ಯಕಾಲೀನ ರಾಜ್ಯ

ಪ್ರಾಚೀನ ಈಜಿಪ್ಟ್‌ 
ಅಮೆನೆಮ್ಹಾಟ್‌ III, ಮಧ್ಯಕಾಲೀನ ರಾಜ್ಯದ ಕೊನೆಯ ಶ್ರೇಷ್ಠ ರಾಜ

ಮಧ್ಯಕಾಲೀನ ರಾಜ್ಯದ ಫೇರೋಗಳು ದೇಶದ ಏಳಿಗೆ ಮತ್ತು ಭದ್ರತೆಯನ್ನು ಪುನಃಸ್ಥಾಪಿಸಿದರು. ಈ ಮ‌ೂಲಕ ಕಲೆ, ಸಾಹಿತ್ಯ ಮತ್ತು ಸ್ಮಾರಕ ಕಟ್ಟಡಗಳ ರಚನೆಯ ಯೋಜನೆಗಳು ಮತ್ತೆ ತಲೆ ಎತ್ತಿದವು. ಮೆಂಟುಹೋಟೆಪ್‌ II ಮತ್ತು ಅವನ ರಾಜಪರಂಪರೆಯ 11ನೇ ಉತ್ತರಾಧಿಕಾರಿ ಥೆಬೆಸ್‌ನಲ್ಲಿದ್ದುಕೊಂಡೇ ಆಡಳಿತ ನಡೆಸಿದರು. ಆದರೆ ಸುಮಾರು ಕ್ರಿ.ಪೂ. 1985ರಲ್ಲಿ 12ನೇ ರಾಜಸಂತತಿಯ ಆರಂಭದ ರಾಜತ್ವವೆಂದು ಊಹಿಸಲಾದ ವಜೀರ ಅಮೆನೆಮ್ಹಾಟ್‌ I ದೇಶದ ರಾಜಧಾನಿಯನ್ನು ಫೈಯುಮ್‌‌ನ ಇಟ್ಜಟವಿ ನಗರಕ್ಕೆ ಸ್ಥಳಾಂತರಿಸಿದನು. ಇಟ್ಜಟವಿಯ 12ನೇ ರಾಜಸಂತತಿಯ ಫೇರೋಗಳು ಆ ಪ್ರದೇಶದ ಕೃಷಿ ಇಳುವರಿ ಹೆಚ್ಚಿಸುವುದಕ್ಕಾಗಿ ದೂರದೃಷ್ಟಿಕೋನದ ಭೂ ಸುಧಾರಣೆ ಮತ್ತು ನೀರಾವರಿ ಯೋಜನೆಗಳನ್ನು ಕೈಗೊಂಡರು. ಅಲ್ಲದೆ ಸೇನೆಯು ಬೆಲೆಬಾಳುವ ಕಲ್ಲುಗಣಿ ಮತ್ತು ಚಿನ್ನದ ಗಣಿಗಳು ಸಮೃದ್ಧವಾಗಿದ್ದ ನುಬಿಯಾದ ಪ್ರದೇಶವನ್ನು ಪುನರ್ವಶಪಡಿಸಿಕೊಂಡಿತು. ಕಾರ್ಮಿಕರು ಪೌರಾತ್ಯ ನದಿ ಮುಖಜ ಭೂಮಿಯಲ್ಲಿ ಹೊರನಾಡಿನವರ ದಾಳಿಯಿಂದ ರಕ್ಷಣೆ ಪಡೆಯಲು "ವಾಲ್ಸ್ ಆಫ್ ದ ರೂಲರ್" ಎನ್ನುವ ರಕ್ಷಣಾತ್ಮಕ ಕವಚದ ರಚನೆಯನ್ನು ನಿರ್ಮಿಸಿದರು.

ಸುಭದ್ರ ಸೇನಾವ್ಯವಸ್ಥೆ ಮತ್ತು ರಾಜಕೀಯ ಭದ್ರತೆಯನ್ನು ಹಾಗೂ ಸಮೃದ್ಧ ಕೃಷಿ ಮತ್ತು ಖನಿಜ ಸಂಪತ್ತನ್ನು ಹೊಂದಿದ್ದ ದೇಶದ ಜನತೆ, ಕಲೆ ಮತ್ತು ಧರ್ಮ ಅಭ್ಯುದಯ ಸ್ಥಿತಿಯಲ್ಲಿದ್ದವು. ಪ್ರಭುತ್ವವಾದಿ ಪುರಾತನ ರಾಜ್ಯದ ದೇವರ ಬಗೆಗಿನ ನಿಲುವಿಗೆ ವಿರುದ್ಧವಾಗಿ ಮಧ್ಯಕಾಲೀನ ರಾಜ್ಯದ ಸಂದರ್ಭದಲ್ಲಿ ವೈಯಕ್ತಿಕ ಭಕ್ತಿಶ್ರದ್ಧೆ ಮತ್ತು ಮರಣಾನಂತರ ಜನಪ್ರಿಯತೆ ಪಡೆಯುವ ಪ್ರಕಟಣೆಗಳು ಹೆಚ್ಚಾಗಿದ್ದವು. ಇದರಲ್ಲಿ ಪ್ರತಿಯೊಬ್ಬರೂ ಒಂದು ಆತ್ಮವನ್ನು ಹೊಂದಿದ್ದು, ಸತ್ತ ನಂತರ ಅವರು ದೇವರ ಸಾನಿಧ್ಯಕ್ಕೆ ಸ್ವಾಗಾತಾರ್ಹರು ಎಂದು ಹೇಳಲಾಗುತ್ತಿತ್ತು. ಮಧ್ಯಕಾಲೀನ ರಾಜ್ಯ ಸಾಹಿತ್ಯವು ದಿಟ್ಟತನದಲ್ಲಿ, ಸ್ಫುಟವಾಗಿ ವ್ಯಕ್ತಗೊಳಿಸುವ ಶೈಲಿಯಲ್ಲಿ ಬರೆದ ಒಳ್ಳೆಯ ಅಭಿರುಚಿಯ ಮತ್ತು ವಿಮರ್ಶನ ಶಕ್ತಿಗಳುಳ್ಳ ವಿಷಯ ಮತ್ತು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ಅವಧಿಯ ಉಬ್ಬು ಚಿತ್ರ ಮತ್ತು ಪ್ರತಿಕೃತಿ ಶಿಲ್ಪಗಳು ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಹೊಂದಿದ್ದು, ಅವು ತಾಂತ್ರಿಕ ಕುಶಲತೆಯನ್ನು ಎತ್ತಿತೋರಿಸುತ್ತವೆ.

ಮಧ್ಯಕಾಲೀನ ರಾಜ್ಯದ ಕೊನೆಯ ಶ್ರೇಷ್ಠ ರಾಜ ಅಮೆನೆಮ್ಹಾಟ್‌ III ಅವನ ಗಣಿಗಾರಿಕೆ ಮತ್ತು ನಿರ್ಮಾಣ ಕಾರ್ಯಾಚರಣೆಗೆ ಸಾಕಷ್ಟು ಕಾರ್ಮಿಕ ಬಲ ನೀಡಲು ಏಷ್ಯಾದ ವಸಾಹತುಗಾರರಿಗೆ ನದಿ ಮುಖಜ ಭೂಮಿ ಪ್ರದೇಶಕ್ಕೆ ಬರಲು ಅವಕಾಶ ಮಾಡಿಕೊಟ್ಟನು. ನಂತರ ಅವನ ಆಳ್ವಿಕೆಯಲ್ಲಿ ನೈಲ್‌ ಪ್ರವಾಹ ಕಾಣಿಸಿಕೊಂಡಿದರಿಂದ ಈ ನಿರ್ಮಾಣ ಮತ್ತು ಗಣಿಗಾರಿಕೆ ಚಟುವಟಿಕೆಗಳ ಅವನ ಮಹತ್ವಾಕಾಂಕ್ಷೆಯು ಅಸಮರ್ಥವಾಯಿತು. ಅಲ್ಲದೆ ಆರ್ಥಿಕ ಸ್ಥಿತಿ ಬಿಗಡಾಯಿಸಿ, ನಂತರದ 13ನೇ ಮತ್ತು 14ನೇ ರಾಜಸಂತತಿಯ ಸಂದರ್ಭದಲ್ಲಿ ಎರಡನೆ ಮಧ್ಯಕಾಲೀನ ಅವಧಿಯತ್ತ ನಿಧಾನ ಅವನತಿಗೆ ಕಾರಣವಾಯಿತು. ಈ ಅವನತಿಯ ಸಂದರ್ಭದಲ್ಲಿ ಹೊರನಾಡಿನ ಏಷ್ಯಾದ ವಸಾಹತುಗಾರರು ನದಿ ಮುಖಜ ಭೂಮಿ ಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಅಂತಿಮವಾಗಿ ಈಜಿಪ್ಟಿನಲ್ಲಿ ಹಿಕ್ಸೋಸ್‌‌ ಆಡಳಿತಕ್ಕೆ ಬಂದಿತು.

ಎರಡನೆ ಮಧ್ಯಕಾಲೀನ ಅವಧಿ ಮತ್ತು ಹಿಕ್ಸೋಸ್‌‌

ಸುಮಾರು ಕ್ರಿ.ಪೂ. 1650ರಲ್ಲಿ ಮಧ್ಯಕಾಲೀನ ರಾಜ್ಯದ ಫೇರೋಗಳ ಪ್ರಾಬಲ್ಯತೆಯು ಕ್ಷೀಣಿಸಿದ್ದರಿಂದ ಅವರಿಸ್‌ನ ಪೌರಾತ್ಯ ನದಿ ಮುಖಜ ಭೂಮಿಯಲ್ಲಿ ವಾಸಿಸುತ್ತಿದ್ದ ಏಷ್ಯಾದ ವಲಸಿಗರು ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡರು. ಅಲ್ಲದೇ ಥೆಬೆಸ್‌ಅನ್ನು ರಹಸ್ಯ ಸ್ಥಳವಾಗಿರಿಸುವಂತೆ ಕೇಂದ್ರಾಡಳಿತಕ್ಕೆ ಬಲವಂತಪಡಿಸಿದರು. ಈ ಸ್ಥಳದಲ್ಲಿ ಫೇರೋನನ್ನು ಊಳಿಗದವನಾಗಿ ದುಡಿಸಿ, ಕಪ್ಪಕಾಣಿಕೆ ನೀಡುವಂತೆ ಮಾಡಿದರು. ಹಿಕ್ಸೋಸ್‌‌ ಆಡಳಿತಗಾರರು ("ವಿದೇಶಿ ರಾಜರು") ಈಜಿಪ್ಟ್ ಆಡಳಿತ ಮಾದರಿಯನ್ನು ಅನುಸರಿಸಿದರು. ಅದೂ ಅಲ್ಲದೇ ತಮ್ಮನ್ನು ತಾವು ಫೇರೋಗಳಾಗಿ ಕಲ್ಪಿಸಿಕೊಳ್ಳುವ ಮ‌ೂಲಕ ಈಜಿಪ್ಟಿನ ಅಂಶಗಳನ್ನು ಅವರ ಮಧ್ಯ ಕಂಚಿನ ಯುಗ ಸಂಸ್ಕೃತಿಯೊಂದಿಗೆ ಸಂಯೋಜಿಸಿಕೊಂಡರು.

ಅವರು ಹಿಮ್ಮೆಟ್ಟಿದ ನಂತರ, ಉತ್ತರದ ಹಿಕ್ಸೋಸ್‌‌ ಮತ್ತು ದಕ್ಷಿಣದ ಕುಶೈಟ್ ಎಂಬ ಹಿಕ್ಸೋಸ್‌‌‌ನ ನುಬಿಯಾ ಮಿತ್ರರಾಜರ ನಡುವೆ ತಡೆಯಾಗಿ ಥೆಬಾನ್ ರಾಜರು ಮಧ್ಯಪ್ರವೇಶಿಸಿದರು. ಸರಿಸುಮಾರು 100 ವರ್ಷಗಳ ಅತಿಸೂಕ್ಷ್ಮ ನಿಷ್ಕ್ರಿಯತೆಯು ಮುಂದುವರಿದು ಕ್ರಿ.ಪೂ. 1555ರ ಸಂದರ್ಭದಲ್ಲಿ ಥೆಬಾನ್ ಬಲವು, ಹಿಕ್ಸೋಸ್‌‌ಗೆ ಸಂಘರ್ಷವೊಂದರಲ್ಲಿ ಸವಾಲೊಡ್ಡಲು ಸಾಕಾಗುವಷ್ಟು ಪ್ರಾಬಲ್ಯ ಗಳಿಸಿಕೊಂಡಿತು. ಆ ಸಂಘರ್ಷವು 30 ವರ್ಷಗಳಷ್ಟು ದೀರ್ಘಕಾಲ ನಡೆಯಿತು. ಫೇರೋಗಳಾದ ಸೀಕೆನೆನ್ರೆ ಟಾವೊ II ಮತ್ತು ಕಾಮೋಸೆ ಅಂತಿಮವಾಗಿ ನುಬಿಯಾದವರನ್ನು ಸೋಲಿಸಲು ಸಮರ್ಥರಾದರು. ಆದರೆ ಕಾಮೋಸೆನ ಉತ್ತರಾಧಿಕಾರಿ ಅಹ್ಮೋಸೆ I ಯಶಸ್ವಿ ಯುದ್ಧ ಕಾರ್ಯಾಚರಣೆಗಳ ಸರಣಿಯನ್ನು ನಡೆಸಿದರಿಂದ ಈಜಿಪ್ಟಿನಲ್ಲಿ ‌ಹಿಕ್ಸೋಸ್‌‌ ಅಸ್ತಿತ್ವವು ಶಾಶ್ವತವಾಗಿ ನಾಶವಾಯಿತು. ಹೊಸ ರಾಜ್ಯದಲ್ಲಿ ಫೇರೋಗಳು ಅವರ ಈಜಿಪ್ಟಿನ ಗಡಿಪ್ರದೇಶಗಳನ್ನು ವಿಸ್ತರಿಸಲು ಹಾಗೂ ಪೂರ್ವ ದಿಕ್ಕಿನ ಭೂಪ್ರದೇಶದ ಸಂಪೂರ್ಣ ಆಡಳಿತವನ್ನು ಭದ್ರಪಡಿಸಲು ಸೇನೆಯನ್ನು ಪ್ರಮುಖ ಸಾಧನವಾಗಿ ಬಳಸಿಕೊಂಡರು.

ಪ್ರಾಚೀನ ಈಜಿಪ್ಟ್‌ 
ಪ್ರಾಚೀನ ಈಜಿಪ್ಟಿನ ಗರಿಷ್ಠ ಭೂಪ್ರದೇಶದ ವಿಸ್ತಾರ (ಕ್ರಿ.ಪೂ. 15ನೇ ಶತಮಾನ)

ಹೊಸ ರಾಜ್ಯ

ಹೊಸ ರಾಜ್ಯದ ಫೇರೋಗಳು ಅವರ ಗಡಿಪ್ರದೇಶಗಳನ್ನು ಸುಭದ್ರಗೊಳಿಸುವ ಮೂಲಕ ಮತ್ತು ನೆರೆಯ ರಾಜರೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಬಲಗೊಳಿಸುವ ಮ‌ೂಲಕ ಒಂದು ಅಭೂತಪೂರ್ವ ಏಳಿಗೆಯ ಅವಧಿಯನ್ನು ಹುಟ್ಟುಹಾಕಿದರು. ಟುಥ್ಮೋಸಿಸ್‌ I ಮತ್ತು ಅವನ ಮೊಮ್ಮಗ ಟುಥ್ಮೋಸಿಸ್‌ III ನೇತೃತ್ವದ ಸೇನೆಯ ಕಾರ್ಯಾಚರಣೆಗಳು ರಾಜನಿಷ್ಟೆಯಿರುವವರನ್ನು ಒಂದುಗೂಡಿಸಿ, ಅಲ್ಲದೇ ಕಂಚು ಮತ್ತು ಮರ ಮೊದಲಾದ ವಿಷಮಸ್ಥಿತಿಯಲ್ಲಿದ್ದ ಆಮದುಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು, ಫೇರೋಗಳ ಪ್ರಭಾವವನ್ನು ಸಿರಿಯಾ ಮತ್ತು ನುಬಿಯಾದೆಡೆಗೆ ವಿಸ್ತರಿಸಿದವು. ಹೊಸ ರಾಜ್ಯದ ಫೇರೋಗಳು ಅಮುನ್‌ ದೇವರಿಗೆ ಉತ್ತೇಜನ ನೀಡುವಂಥ ದೊಡ್ಡ ಪ್ರಮಾಣದ ನಿರ್ಮಾಣ ಕಾರ್ಯವನ್ನು ಆರಂಭಿಸಿದರು, ಈ ಭಕ್ತಿಪಂಥ ಬೆಳೆಸುತ್ತಿದ್ದ ಆರಾಧನಾ ಕೇಂದ್ರವು ಕಾರ್ನಾಕ್‌‌ನಲ್ಲಿತ್ತು. ಅವರು ತಮ್ಮ ನೈಜ ಮತ್ತು ಕಲ್ಪಿತ ಸಾಧನೆಗಳೆರಡನ್ನು ವೈಭವೀಕರಿಸಲು ಸ್ಮಾರಕಗಳನ್ನೂ ನಿರ್ಮಿಸಿದರು. ಮಹಿಳಾ ಫೇರೋ ಹ್ಯಾಟ್ಶೆಪ್ಸುಟ್‌ ಅಂತಹ ಪ್ರಯತ್ನಗಳನ್ನು ಅಧಿಕಾರ ಪಟ್ಟದ ಆಕೆಯ ಹಕ್ಕನ್ನು ಕಾನೂನು ಸಮ್ಮತವಾಗಿಸಲು ಬಳಸಿಕೊಂಡಳು. ಅವಳ ಯಶಸ್ವಿ ಅಳ್ವಿಕೆಯು ಪುಂಟ್‌ಗೆ ವಿಶೇಷ ಕಾರ್ಯಯಾತ್ರೆಗಳ ವಿನಿಮಯ ಮಾಡಿದುದು, ಅಂದವಾದ ಶವಸಂಸ್ಕಾರದ ಗುಡಿ, ಭಾರಿ ಗಾತ್ರದ ಒಂದು ಜೊತೆ ಚೌಕ ಸೂಜಿಯಂಥ ಕಂಬಗಳು ಮತ್ತು ಕಾರ್ನಾಕ್‌ನಲ್ಲಿನ ‌ಪ್ರಾರ್ಥನಾ ಮಂದಿರ ಮೊದಲಾದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ. ಅವಳ ಸಾಧನೆಗಳ ಮಾತ್ಸರ್ಯದಿಂದ ಹ್ಯಾಟ್ಶೆಪ್ಸುಟ್‌‌ಳ ಸೋದರಳಿಯನ ಮಲಮಗ ಟುಥ್ಮೋಸಿಸ್‌ III ಅವನ ಆಡಳಿತದ ಕೊನೆಯಲ್ಲಿ ಅವನ ಅಧಿಕಾರವನ್ನು ಅತಿಕ್ರಮಿಸಿದ ಪ್ರತೀಕಾರಕ್ಕಾಗಿ ಅವಳ ಆಸ್ತಿಯನ್ನು ನಾಶಗೊಳಿಸಲು ಪ್ರಯತ್ನಿಸಿದನು.

ಪ್ರಾಚೀನ ಈಜಿಪ್ಟ್‌ 
ರಾಮೆಸ್ಸೆಸ್‌ IIನ ನಾಲ್ಕು ಬೃಹತ್ ಪ್ರತಿಮೆಗಳು, ಇವು ಅವನ ದೇವಾಲಯ ಅಬು ಸಿಂಬೆಲ್‌ನ ಪ್ರವೇಶದ್ವಾರದ ಮಗ್ಗುಲಿನಲ್ಲಿದೆ.

ಸರಿಸುಮಾರು ಕ್ರಿ.ಪೂ. 1350ರಲ್ಲಿ ಅಮೆನ್ಹೋತೆಪ್‌ IV ರಾಜನಾಗಿ ಅವನು ಆಮ‌ೂಲಾಗ್ರ ತೀವ್ರಗಾಮಿ ಮತ್ತು ಅಸ್ತವ್ಯಸ್ತಗಳನ್ನು ಸರಿಪಡಿಸುವ ಸುಧಾರಣೆಗಳನ್ನು ಆರಂಭಿಸಿದಾಗ ಹೊಸ ರಾಜ್ಯದ ಭದ್ರತೆಯು ಅಪಾಯದ ಸೂಚನೆಯನ್ನು ಕಂಡಿತು. ಹಿಂದೆ ಗಮನಕ್ಕೆ ಬಂದಿರದ ಸೂರ್ಯ ದೇವರು ಅತೆನ್ಅನ್ನು ಶ್ರೇಷ್ಠ ದೈವವೆಂದು ಹೇಳಿ ಅವನ ಹೆಸರನ್ನು ಅಖೆನಾತೆನ್‌ ಎಂದು ಬದಲಾಯಿಸಿಕೊಂಡು ಬೇರೆ ದೇವರನ್ನು ಪೂಜಿಸುವುದನ್ನು ವಿ(ನಿ)ರೋಧಿಸಿ, ಪೂಜೆ ಮಾಡುವ ಅರ್ಚಕವರ್ಗದ ತಾಣಗಳ ಮೇಲೆ ದಾಳಿನಡೆಸಿದನು. ರಾಜಧಾನಿಯನ್ನು ಹೊಸ ನಗರ ಅಖೆತಾತೆನ್‌ಗೆ (ಆಧುನಿಕ ಕಾಲದ ಅಮರ್ನ) ಬದಲಾಯಿಸಿ ಅಖೆನಾತೆನ್‌ ವಿದೇಶಿ ಸಂಬಂಧಗಳಿಗೆ ಕಿವಿಗೊಡದೆ ಅವನ ಹೊಸ ಧರ್ಮ ಮತ್ತು ಕಲಾತ್ಮಕ ಜೀವನ ಶೈಲಿಯಲ್ಲಿ ಮುಳುಗಿಹೋದನು. ಅವನ ಮರಣದ ನಂತರ ಅತೆನ್‌ನ ಆರಾಧನೆಯನ್ನು ಬಿಟ್ಟುಬಿಡಲಾಯಿತು. ಆನಂತರ ಬಂದ ಫೇರೋಗಳಾದ ಟುಟಾಂಖಮುನ್‌‌, ಅಯ್ ಮತ್ತು ಹಾರೆಮ್‌ಹೆಬ್‌ ಮೊದಲಾದವರು ಈಗ ಅಮರ್ನ ಅವಧಿ ಎಂದು ಕರೆಯುವ ಅಖೆನಾತೆನ್‌‌ನ ಸಂಪ್ರದಾಯ ವಿರೋಧಾಭಿಪ್ರಾಯವನ್ನು ಸೂಚಿಸುವವುಗಳೆಲ್ಲವನ್ನು ನಾಶಮಾಡಲಾಯಿತು.

ಸುಮಾರು ಕ್ರಿ.ಪೂ 1279ರಲ್ಲಿ ರಾಮೆಸ್ಸೆಸ್‌ ದ ಗ್ರೇಟ್ ಎಂದೂ ಕರೆಯುವ ರಾಮೆಸ್ಸೆಸ್‌ II ಪಟ್ಟಕ್ಕೇರಿ, ಅತಿಹೆಚ್ಚು ದೇವಾಲಯಗಳನ್ನು ನಿರ್ಮಿಸಲು, ಪ್ರತಿಮೆ ಮತ್ತು ಚೌಕ ಸೂಜಿಯಂಥ ಕಂಬಗಳನ್ನು ಸ್ಥಾಪಿಸಲು ಆರಂಭಿಸಿದನು. ಇವನು ಇತಿಹಾಸದಲ್ಲೇ ಇತರ ಫೇರೋಗಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾನೆ. ಸೈನ್ಯದ ದಿಟ್ಟ ಮುಖಂಡ ರಾಮೆಸ್ಸೆಸ್‌ II ಅವನ ಸೇನೆಯನ್ನು ಕಾದೇಶ್ ಯುದ್ಧದಲ್ಲಿ ಹಿಟೈಟ್‌ಗಳ ವಿರುದ್ಧ ಬಳಸಿದನು. ಯುದ್ಧದಲ್ಲಿ ಸಮಬಲದ ಸ್ಥಿತಿಯುಂಟಾದಾಗ ಕ್ರಿ.ಪೂ. 1258ರಲ್ಲಿ ಅಂತಿಮವಾಗಿ ಮೊದಲ ಶಾಂತಿ ಒಪ್ಪಂದಕ್ಕೆ ಬರಲಾಯಿತು. ಈಜಿಪ್ಟಿನಲ್ಲಿದ್ದ ಸಂಪತ್ತೇ ಅದರ ಆಕ್ರಮಣಕ್ಕೆ ಉತ್ತೇಜನ ನೀಡಿತು, ನಿರ್ದಿಷ್ಟವಾಗಿ ಲಿಬ್ಯಾದವರಿಂದ ಮತ್ತು ಸಮುದ್ರ ಪರಿಸರ ವಾಸಿಗಳಿಂದ . ಆರಂಭದಲ್ಲಿ ಸೈನ್ಯವು ಈ ದಾಳಿಗಳನ್ನು ಹಿಮ್ಮೆಟ್ಟಿಸಲು ಸಮರ್ಥವಾಗಿತ್ತು. ಆದರೆ ಈಜಿಪ್ಟ್‌ ಅಂತಿಮವಾಗಿ ಸಿರಿಯಾ ಮತ್ತು ಪ್ಯಾಲೆಸ್ಟೈನ್‌ನ ನಿಯಂತ್ರಣವನ್ನು ಕಳೆದುಕೊಂಡಿತು‌. ಹೊರಗಿನ ಬೆದರಿಕೆಗಳ ಪ್ರಭಾವವು ನೀತಿಭೃಷ್ಟತೆ, ಸ್ಮಾರಕಗಳ ದರೋಡೆ ಮತ್ತು ನಾಗರಿಕರ ಅಶಾಂತಿ ಮೊದಲಾದ ಆಂತರಿಕ ಸಮಸ್ಯೆಗಳಿಂದ ತೊಂದರೆ ಹೆಚ್ಚಾಯಿತು. ಥೆಬೆಸ್‌ನ ಅಮುನ್‌ ದೇವಾಲಯದ ಮುಖ್ಯ ಧಾರ್ಮಿಕ ಗುರುಗಳು ಅತಿಹೆಚ್ಚಿನ ಭೂಮಿ ಮತ್ತು ಸಂಪತ್ತನ್ನು ಗಳಿಸಿದರು. ಅಲ್ಲದೇ ಬೆಳೆಯತ್ತಿದ್ದ ಅವರ ಪ್ರಾಬಲ್ಯವು ದೇಶವನ್ನು ಮ‌ೂರನೆ ಮಧ್ಯಕಾಲೀನ ಅವಧಿಯಲ್ಲಿ ಚೂರುಚೂರು ಮಾಡಿತು.

ಪ್ರಾಚೀನ ಈಜಿಪ್ಟ್‌ 
ಪಶ್ಚಿಮದಿಂದ ದೇಶಕ್ಕೆ ರಾಜಕೀಯ ಕೇಂದ್ರವಾಗಿ ಪ್ರಭಾವ ಬೀರಿದ ಸುಮಾರು ಕ್ರಿ.ಪೂ. 730ರ ಲಿಬ್ಯಾ.

ಮ‌ೂರನೆ ಮಧ್ಯಕಾಲೀನ ಅವಧಿ

ರಾಮೆಸ್ಸೆಸ್‌ XI ಕ್ರಿ.ಪೂ. 1078ರಲ್ಲಿ ಸಾವನ್ನಪ್ಪಿದ ನಂತರ ಸ್ಮೆಂಡೆಸ್‌ ಟ್ಯಾನಿಸ್‌ ನಗರದಿಂದ ಆಡಳಿತ ನಡೆಸುವ ಮ‌ೂಲಕ ಈಜಿಪ್ಟಿನ ಉತ್ತರ ಭಾಗದ ಅಧಿಕಾರ ವಹಿಸಿಕೊಂಡನು. ದಕ್ಷಿಣ ಭಾಗವು ಸ್ಮೆಂಡೆಸ್‌ನ ಹೆಸರಿಗೆ ಮಾತ್ರ ಬೆಲೆಕೊಡುತ್ತಿದ್ದ ಥೆಬೆಸ್‌ನ ಅಮುನ್‌ ದೇವಾಲಯದ ಮುಖ್ಯ ಧಾರ್ಮಿಕ ಗುರುಗಳಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಲ್ಪಡುತ್ತಿತ್ತು. ಈ ಸಂದರ್ಭದಲ್ಲಿ ಲಿಬ್ಯಾನ್ನರು ಪಾಶ್ಚಿಮಾತ್ಯ ನದಿ ಮುಖಜ ಭೂಮಿಯಲ್ಲಿ ವಾಸಿಸುತ್ತಿದ್ದರು. ಈ ನಿವಾಸಿಗಳ ಮುಖಂಡರು ತಮ್ಮ ಸ್ವಯಮಾಧಿಪತ್ಯ ಹೆಚ್ಚಿಸಲು ಆರಂಭಿಸಿದರು. ಲಿಬ್ಯಾದ ಅಧೀನರಾಜರು ಶೋಶೆಂಕ್‌ Iನ ನೇತೃತ್ವದಲ್ಲಿ ಕ್ರಿ.ಪೂ. 945ರಲ್ಲಿ ನದಿ ಮುಖಜ ಭೂಮಿಯ ಒಡೆತನವನ್ನು ಪಡೆದುಕೊಂಡರು. ಆದ್ದರಿಂದ ಲಿಬ್ಯಾ ಅಥವಾ ಬುಬುಸ್ಟಿಟೆ ರಾಜವಂಶ ಎಂಬುದು ಹುಟ್ಟಿಕೊಂಡಿತು. ಅಲ್ಲದೇ ಇದು ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿತು. ಶೋಶೆಂಕ್‌ ಅವನ ಕುಟುಂಬ ಸದಸ್ಯರನ್ನು ಪ್ರಮುಖ ಧಾರ್ಮಿಕ ಗುರುಗಳ ಸ್ಥಾನಗಳಲ್ಲಿ ನೇಮಕ ಮಾಡುವುದರ ಮ‌ೂಲಕ ದಕ್ಷಿಣ ಈಜಿಪ್ಟಿನ ನಿಯಂತ್ರಣವನ್ನೂ ಪಡೆದನು. ನದಿ ಮುಖಜ ಭೂಮಿಯಲ್ಲಿನ ಪ್ರತಿಸ್ಪರ್ಧಿ ರಾಜಸಂತತಿಯು ಲಿಯೋಂಟೊಪೊಲಿಸ್‌‌ನಲ್ಲಿ ಜಾಗೃತವಾದುದರಿಂದ ಮತ್ತು ದಕ್ಷಿಣದಿಂದ ಕುಶೈಟ್‌ಗಳು ಬೆದರಿಕೆ ನೀಡಿದರಿಂದ ಲಿಬ್ಯಾದವರ ಆಡಳಿತ ಕುಸಿಯಲು ಆರಂಭವಾಯಿತು. ಸುಮಾರು ಕ್ರಿ.ಪೂ. 727ರಲ್ಲಿ ಕುಶೈಟ್ ರಾಜ ಪಿಯೆ ಉತ್ತರದಿಂದ ದಾಳಿಮಾಡಿ ಥೆಬೆಸ್ ಮತ್ತು ಅಂತಿಮವಾಗಿ ನದಿ ಮುಖಜ ಭೂಮಿಯನ್ನು ಸ್ವಾಧೀನಪಡಿಸಿಕೊಂಡನು.

ಈಜಿಪ್ಟಿನ ಬಹು ವ್ಯಾಪಕ, ಪರಿಣಾಮಕಾರಿ ಘನತೆಯು ಮ‌ೂರನೆ ಮಧ್ಯಕಾಲೀನ ಅವಧಿಯ ಕೊನೆಯಲ್ಲಿ ಗಮನಾರ್ಹವಾಗಿ ಕ್ಷಯಿಸಿತು. ಅದರ ವಿದೇಶಿ ಮಿತ್ರರಾಷ್ಟ್ರಗಳು ಆಸ್ಸಿರಿಯಾ ಪ್ರಭಾವ ಕ್ಷೇತ್ರಕ್ಕೆ ಒಳಗಾದವು ಹಾಗೂ ಕ್ರಿ.ಪೂ. 700ರಲ್ಲಿ ಎರಡು ರಾಜ್ಯಗಳ ಮಧ್ಯೆ ಅನಿವಾರ್ಯ ಯುದ್ಧ ಸಂಭವಿಸಿತು. ಕ್ರಿ.ಪೂ. 671ರಿಂದ 667ರವರೆಗಿನ ಸಂದರ್ಭದಲ್ಲಿ ಆಸ್ಸಿರಿಯಾದವರು ಈಜಿಪ್ಟಿನ ಮೇಲೆ ದಾಳಿ ನಡೆಸಿದರು. ಕುಶೈಟ್ ರಾಜರಾದ ತಹಾರ್ಕ ಮತ್ತು ಅವನ ಉತ್ತರಾಧಿಕಾರಿ ತನುತಾಮುನ್‌ ಇಬ್ಬರ ಆಳ್ವಿಕೆಯ‌ಲ್ಲಿಯ‌ೂ ನುಬಿಯಾದ ರಾಜರು ಹಲವಾರು ಬಾರಿ ಜಯಗಳಿಸಿದ ಆಸ್ಸಿರಿಯಾದವರೊಂದಿಗೆ ನಿರಂತರ ಸಂಘರ್ಷ ನಡೆಯುತ್ತಿತ್ತು. ಅಂತಿಮವಾಗಿ ಆಸ್ಸಿರಿಯಾದವರು ಕುಶೈಟ್‌ಗಳನ್ನು ನುಬಿಯಾಕ್ಕೆ ಹಿಂದಕ್ಕೆ ಅಟ್ಟಿ; ಮೆಂಫಿಸ್ಅನ್ನು ಆಕ್ರಮಿಸಿ ಥೆಬೆಸ್‌ನ ದೇವಾಲಯಗಳನ್ನು ಲೂಟಿ ಮಾಡಿದರು.

ಗತಿಸಿದ ಕಾಲಾವವಧಿ

ಗೆದ್ದ ರಾಜ್ಯಗಳಿಗೆ ಯಾವುದೇ ಶಾಶ್ವತ ಯೋಜನೆಗಳು ಇಲ್ಲದ್ದರಿಂದ ಆಸ್ಸಿರಿಯಾದವರು ಈಜಿಪ್ಟಿನ ಮೇಲಿನ ನಿಯಂತ್ರಣವನ್ನು ಸಾಮಂತ ರಾಜರಿಗೆ ಬಿಟ್ಟುಕೊಟ್ಟರು. ಇವರು ಮುಂದೆ ಇಪ್ಪತ್ತಾರನೇ ರಾಜಸಂತತಿಯ ಸೈಟ್ ರಾಜರಾದರು. ಸುಮಾರು ಕ್ರಿ.ಪೂ. 653ರಲ್ಲಿ ಸೈಟ್ ರಾಜ, ಪ್ಸಾಮ್ಟಿಕ್‌ I ಗ್ರೀಕ್ ಕೂಲಿ ಸೈನಿಕರ ಸಹಾಯದಿಂದ ಆಸ್ಸಿರಿಯಾದವರನ್ನು ಉಚ್ಚಾಟನೆ ಮಾಡಲು ಸಮರ್ಥನಾದನು. ಈ ಸೈನಿಕರನ್ನು ಈಜಿಪ್ಟಿನ ಮೊದಲ ನೌಕಾಪಡೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಗ್ರೀಕ್‌ರ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಹರಡಿ, ನದಿ ಮುಖಜ ಭೂಮಿಯಲ್ಲಿ ನೌಕ್ರಾಟಿಸ್‌ ನಗರವು ಗ್ರೀಕ್‌ರ ಕೇಂದ್ರವಾಯಿತು. ಸೈಸ್‌ನ ಹೊಸ ರಾಜಧಾನಿಯಲ್ಲಿದ್ದ ಸೈಟ್ ರಾಜರು ಸ್ವಲ್ಪಕಾಲ ಮಾತ್ರ ಆಳ್ವಿಕೆ ನಡೆಸಿದರು, ಆದರೆ ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಚೈತನ್ಯವನ್ನು ಜಾಗೃತಗೊಳಿಸಿದ್ದಾರೆ. ಕ್ರಿ.ಪೂ. 525ರಲ್ಲಿ ಕ್ಯಾಂಬಿಸೆಸ್‌ II ನೇತೃತ್ವದ ಪ್ರಬಲ ಪರ್ಷಿಯನ್ನರು ಈಜಿಪ್ಟನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಅಂತಿಮವಾಗಿ ಪೆಲುಶಿಯಮ್ ಕದನದಲ್ಲಿ ಫೇರೋ ಪ್ಸಾಮ್ಟಿಕ್‌ IIIನನ್ನು ಸೆರೆಹಿಡಿದರು. ಆನಂತರ ಕ್ಯಾಂಬಿಸೆಸ್‌ II ಫೇರೋ ಎಂಬ ಅಧಿಕಾರ ಸೂಚಕ ನಾಮವನ್ನು ಔಪಚಾರಿಕವಾಗಿ ಮಾತ್ರ ಹೊಂದಿದ್ದನು, ಆದರೂ ಅವನು ಈಜಿಪ್ಟನ್ನು ಮಾಂಡಲಿಕರ(ಪಾಳೆಯಗಾರರ) ವಶಕ್ಕೆ ಬಿಟ್ಟು ತನ್ನ ನಿವಾಸ ಸುಸಾದಲ್ಲಿದ್ದ ಮನೆಯಿಂದ ಆಡಳಿತ ನಡೆಸಿದನು. ಕ್ರಿ.ಪೂ. 5ನೇ ಶತಮಾನದಲ್ಲಿ ಪರ್ಷಿಯನ್ನರ ವಿರುದ್ಧ ಕೆಲವು ಯಶಸ್ವಿ ದಂಗೆಗಳು ಎದ್ದರೂ, ಈಜಿಪ್ಟಿಗೆ ಪರ್ಷಿಯನ್ನರನ್ನು ಶಾಶ್ವತವಾಗಿ ನಾಶಮಾಡಲು ಸಾಧ್ಯವಾಗಲಿಲ್ಲ.

ಪರ್ಷಿಯಾದವರಿಂದ ಆಕ್ರಮಣಕ್ಕೊಳಗಾದ್ದರಿಂದ ಈಜಿಪ್ಟ್‌ ಅಕೇಮೆನಿಡ್‌ ಪರ್ಷಿಯಾ ಸಾಮ್ರಾಜ್ಯದ ಆರನೇ ಮಾಂಡಲಿಕರ ಕಾಲದಲ್ಲಿ ಸಿಪ್ರಸ್‌ ಮತ್ತು ಫೋಯನಿಶಿಯಾದೊಂದಿಗೆ ಸೇರಿಕೊಂಡಿತು. ಈಜಿಪ್ಟನಲ್ಲಿನ ಇಪ್ಪತ್ತೇಳನೇ ರಾಜಸಂತತಿ ಎಂದೂ ಕರೆಯುವ ಪರ್ಷಿಯನ್ನರ ಆಳ್ವಿಕೆಯ ಈ ಮೊದಲ ಅವಧಿಯು ಕ್ರಿ.ಪೂ. 402ರಲ್ಲಿ ಕೊನೆಗೊಂಡಿತು. ಕ್ರಿ.ಪೂ. 380–343ರಿಂದ ಮ‌ೂವತ್ತನೇ ರಾಜಸಂತತಿಯು ಈಜಿಪ್ಟಿನ ಕೊನೆಯ ಸ್ಥಳೀಯ ರಾಜಮನೆತನವಾಗಿ ಆಡಳಿತ ನಡೆಸಿತು. ಇದು ರಾಜ ನೆಕ್ಟಾನೆಬೊ II ಆಳ್ವಿಕೆಯೊಂದಿಗೆ ಅಂತ್ಯಗೊಂಡಿತು. ಕೆಲವೊಮ್ಮೆ ಮ‌ೂವತ್ತೊಂದನೇ ರಾಜವಂಶ ಎಂದೂ ಹೇಳುವ ಪರ್ಷಿಯನ್ನರ ಆಡಳಿತದ ಅಲ್ಪಾವಧಿಯುಳ್ಳ ರಾಜ್ಯದ ಪುನಃಸ್ಥಾಪನೆಯು ಕ್ರಿ.ಪೂ. 343ರಲ್ಲಿ ಆರಂಭವಾಯಿತು. ಆದರೆ ಸ್ವಲ್ಪಕಾಲದ ನಂತರ ಕ್ರಿ.ಪೂ. 332ರಲ್ಲಿ ಪರ್ಷಿಯಾ ರಾಜ ಮ್ಯಾಜಸೆಸ್‌ ಈಜಿಪ್ಟನ್ನು ಪ್ರಖ್ಯಾತ ಅಲೆಕ್ಸಾಂಡರ್‌‌ನಿಗೆ ಕಾದಾಡದೆಯೇ ಬಿಟ್ಟುಕೊಟ್ಟನು.

ಟಾಲೆಮಿಯ ರಾಜವಂಶ

ಕ್ರಿ.ಪೂ. 332ರಲ್ಲಿ ಪ್ರಖ್ಯಾತ ಅಲೆಕ್ಸಾಂಡರ್‌‌ನು ಪರ್ಷಿಯನ್ನರ ಸ್ವಲ್ಪಮಟ್ಟಿನ ವಿರೋಧದೊಂದಿಗೆ ಈಜಿಪ್ಟನ್ನು ಆಳಿದನು. ಈಜಿಪ್ಟಿನವರು ಅವನನ್ನು ವಿಮೋಚಕನೆಂದು ಸ್ವಾಗತಿಸಿದರು. ಅಲೆಕ್ಸಾಂಡರ್‌ನ ಉತ್ತರಾಧಿಕಾರಿಗಳಾದ ಟಾಲೆಮಿ ದೊರೆಗಳು ಈಜಿಪ್ಟ್‌ ಮಾದರಿಯಲ್ಲಿಯೇ ಆಡಳಿತ ನಡೆಸಿದರು. ಅಲ್ಲದೇ ಅಲೆಕ್ಸಾಂಡ್ರಿಯಾದಲ್ಲಿ ತಮ್ಮ ಹೊಸ ರಾಜಧಾನಿಯನ್ನು ಹೊಂದಿದ್ದರು. ಈ ನಗರವು ಗ್ರೀಕ್‌ ಆಡಳಿತದ ಪ್ರಾಬಲ್ಯ ಮತ್ತು ಪ್ರತಿಷ್ಠೆಯನ್ನು ಪ್ರದರ್ಶಿಸುವ ಸ್ಥಳವಾಗಿತ್ತು. ಪ್ರಸಿದ್ಧ ಅಲೆಕ್ಸಾಂಡ್ರಿಯಾ ಗ್ರಂಥಾಲಯವನ್ನು ಕೇಂದ್ರವಾಗಿ ಹೊಂದಿದ್ದ ಇದು ಸಾಂಸ್ಕೃತಿಕ ಮತ್ತು ಪಾಂಡಿತ್ಯ ಕ್ಷೇತ್ರವಾಯಿತು. ಟಾಲೆಮಿ ದೊರೆಗಳು ಪಪೈರಸ್ ಉತ್ಪಾದನೆಯಂತಹ ಆದಾಯ-ಹೆಚ್ಚಿಸುವ ಉದ್ಯಮ ಮತ್ತು ವ್ಯಾಪಾರವನ್ನು ಮೊದಲ ಪ್ರಾಮುಖ್ಯತೆ ಕೊಟ್ಟು ಮಾಡುತ್ತಿದ್ದುದರಿಂದ, ನಗರದೊಂದಿಗೆ ವ್ಯವಹಾರ ಸಂಪರ್ಕವನ್ನು ಹೊಂದಿದ್ದ ಅನೇಕ ಹಡಗುಗಳಿಗೆ ಅಲೆಕ್ಸಾಂಡ್ರಿಯಾದ ಲೈಟ್‌ಹೌಸ್‌ ಮಾರ್ಗದರ್ಶಿಯಾಗಿದೆ.

ಟಾಲೆಮಿಯರು ಜನಸಾಮಾನ್ಯರ ರಾಜಭಕ್ತಿಯನ್ನು ಭದ್ರಗೊಳಿಸುವ ಪ್ರಯತ್ನವಾಗಿ ಆ ಕಾಲದ ಗೌರವಸೂಚಕ ಸಂಪ್ರದಾಯಗಳನ್ನು ಬೆಂಬಲಿಸಿದರಿಂದ ಗ್ರೀಕ್‌ ಸಂಸ್ಕೃತಿಯು ಈಜಿಪ್ಟ್‌ ಸಂಸ್ಕೃತಿಯ ಸ್ಥಾನವನ್ನು ಆಕ್ರಮಿಸಿಕೊಳ್ಳಲಿಲ್ಲ. ಅವರು ಈಜಿಪ್ಟ್‌ ಶೈಲಿಯಲ್ಲಿ ಹೊಸ ದೇವಾಲಯಗಳನ್ನು ನಿರ್ಮಿಸಿದರು, ಸಾಂಪ್ರದಾಯಿಕ ಶವಾಗಾರಗಳಿಗೆ ಒತ್ತಾಸೆ ನೀಡಿದರು. ಅದೂ ಅಲ್ಲದೇ ತಮ್ಮನ್ನು ತಾವು ಫೇರೋಗಳಾಗಿ ಚಿತ್ರಿಸಿಕೊಂಡರು. ಗ್ರೀಕ್‌ ಮತ್ತು ಈಜಿಪ್ಟ್‌ ದೇವರು ಸೆರಾಪಿಸ್‌ನಂತಹ ಸಮ್ಮಿಶ್ರ ಆರಾಧನಾ ದೈವಗಳಾಗಿ ಒಂದುಗೂಡಿದಂತೆ ಕೆಲವು ಸಂಪ್ರದಾಯಗಳು ಸಮ್ಮಿಳನಗೊಂಡವು. ಪುರಾತನ ಗ್ರೀಕ್‌ ಶಿಲ್ಪಗಳ ರಚನೆಯು ಸಾಂಪ್ರದಾಯಿಕ ಈಜಿಪ್ಟಿನ ವಿಶಿಷ್ಟ ಲಕ್ಷಣಗಳ ಪ್ರಭಾವ ಪಡೆದಿದೆ. ಈಜಿಪ್ಟಿನವರನ್ನು ಸಮಾಧಾನಗೊಳಿಸುವ ಪ್ರಯತ್ನಗಳ ಹೊರತಾಗಿಯ‌ೂ ಟಾಲೆಮಿ ದೊರೆಗಳು ಸ್ಥಳೀಯ ದಂಗೆ, ತೀವ್ರ ಕೌಟುಂಬಿಕ ಪೈಪೋಟಿ ಮತ್ತು ಟಾಲೆಮಿ IVಯ ಸಾವಿನ ನಂತರ ಹುಟ್ಟಿಕೊಂಡ ಅಲೆಕ್ಸಾಂಡ್ರಿಯಾದ ಪ್ರಬಲ ದೊಂಬಿ ಮೊದಲಾದವುಗಳನ್ನು ಎದುರಿಸಿದರು. ಇದಕ್ಕೆ ಹೆಚ್ಚುವರಿಯಾಗಿ ರೋಮ್‌ ಈಜಿಪ್ಟಿನ ದವಸಧಾನ್ಯಗಳ ಆಮದನ್ನು ಹೆಚ್ಚಾಗಿ ಅವಲಂಬಿಸಿದರಿಂದ, ರೋಮನ್ನರು ದೇಶದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಅಧಿಕ ಆಸಕ್ತಿ ವಹಿಸಿದರು. ಮುಂದುವರಿದ ಈಜಿಪ್ಟಿನ ದಂಗೆಗಳು, ಮಹಾತ್ವಾಕಾಂಕ್ಷಿ ರಾಜಕೀಯ ವ್ಯಕ್ತಿಗಳು ಮತ್ತು ಪ್ರಬಲ ಸಿರಿಯಾದ ಪ್ರತಿಸ್ಪರ್ಧಿಗಳು ಈ ಸ್ಥಿತಿಯನ್ನು ಇನ್ನಷ್ಟು ಅಭದ್ರಗೊಳಿಸಿದವು. ಇದು ರೋಮ್‌, ಈಜಿಪ್ಟನ್ನು ಅದರ ಸಾಮ್ರಾಜ್ಯದ ಒಂದು ಪ್ರಾಂತವಾಗಿ ಭದ್ರಗೊಳಿಸಲು ಸೇನೆಗಳನ್ನು ಕಳುಹಿಸುವಂತೆ ಮಾಡಿತು.

ರೋಮನ್ ಪ್ರಾಬಲ್ಯ

ಪ್ರಾಚೀನ ಈಜಿಪ್ಟ್‌ 
ಈಜಿಪ್ಟ್‌ ಮತ್ತು ರೋಮನ್‌ ಸಂಸ್ಕೃತಿಗಳ ಸಂಯೋಜನೆಯನ್ನು ಪ್ರತಿಬಿಂಬಿಸುವ ಫೇಯಮ್ ಮಮ್ಮಿ ಭಾವಚಿತ್ರ.

ಆಕ್ಟಿಯಮ್ ಕದನದಲ್ಲಿ ಮಾರ್ಕ್ ಆಂಟೊನಿ ಮತ್ತು ಟಾಲೆಮಿಯ ರಾಣಿ ಕ್ಲಿಯೋಪಾಟ್ರ VII ಆಕ್ಟವಿಯನ್‌‌ನಿಂದ (ಆನಂತರ ಚಕ್ರವರ್ತಿ ಆಗಸ್ಟಸ್‌) ಸೋತ ನಂತರ ಕ್ರಿ.ಪೂ. 30ರಲ್ಲಿ ಈಜಿಪ್ಟ್‌ ರೋಮನ್ ಸಾಮ್ರಾಜ್ಯದ ಒಂದು ಪ್ರಾಂತವಾಯಿತು. ರೋಮನ್ನರು ಈಜಿಪ್ಟಿನ ದವಸಧಾನ್ಯಗಳ ಹಡಗುಸಾಗಣೆಯನ್ನು ಹೆಚ್ಚಾಗಿ ಅವಲಂಬಿಸಿದ್ದರು. ಚಕ್ರವರ್ತಿಯಿಂದ ನೇಮಕಗೊಂಡ ಹಿರಿಯ ಸೇನಾಧಿಪತಿ(ಪ್ರೀಫೆಕ್ಟ್)ಯ ನಿಯಂತ್ರಣದಡಿಯಲ್ಲಿ ರೋಮನ್‌ ಸೇನೆಯು ದಂಗೆಕೋರರನ್ನು ಶರಣಾಗುವಂತೆ ಮಾಡಿತು, ಭಾರಿ ತೆರಿಗೆಗಳ ಸಂಗ್ರಹಕ್ಕೆ ಒತ್ತಾಯಪಡಿಸಿತು. ಅಲ್ಲದೇ ಆ ಕಾಲದಲ್ಲಿ ಸರ್ವೆಸಾಮಾನ್ಯವಾಗಿದ್ದ ಸಮಸ್ಯೆಯಾದ ದರೋಡೆಗಾರರ ದಾಳಿಗಳನ್ನು ನಿರೋಧಿಸಿತು. ರೋಮ್‌ನಲ್ಲಿ ವಿದೇಶೀಯ ವಿಲಾಸಿವಸ್ತುಗಳಿಗೆ ಅತಿಹೆಚ್ಚಿನ ಬೇಡಿಕೆ ಇದ್ದುದರಿಂದ, ಪೂರ್ವ ದೇಶಗಳೊಂದಿಗಿನ ವ್ಯಾಪಾರ-ವಹಿವಾಟಿನಲ್ಲಿ ಅಲೆಕ್ಸಾಂಡ್ರಿಯಾ ಪ್ರಮುಖ ಕೇಂದ್ರವಾಯಿತು.

ರೋಮನ್ನರು ಈಜಿಪ್ಟಿನ ಬಗ್ಗೆ ಗ್ರೀಕ್‌ನವರಿಗಿಂತ ಹೆಚ್ಚು ಹಗೆತನದ ಭಾವನೆ ಹೊಂದಿದ್ದರೂ, ಮೃತದೇಹಗಳ ಸಂರಕ್ಷಣೆ(ಮಮ್ಮೀಕರಣ) ಮತ್ತು ಸಾಂಪ್ರದಾಯಿಕ ದೇವರ ಆರಾಧನೆ ಮಾಡುವಂತಹ ಕೆಲವು ಸಂಪ್ರದಾಯಗಳು ಹಾಗೆಯೇ ಮುಂದುವರಿದವು. ಮಮ್ಮಿ(ರಕ್ಷಿತ ಶವ) ಪ್ರತಿಕೃತಿ ರಚನೆ ಕಲೆಯು ಅಭಿವೃದ್ಧಿ ಕಂಡಿತು ಹಾಗೂ ಟಾಲೆಮಿ ದೊರೆಗಳು ಮಾಡಿದಷ್ಟು ಅಲ್ಲದಿದ್ದರೂ ಕೆಲವು ರೋಮನ್‌ ಚಕ್ರವರ್ತಿಗಳು ತಮ್ಮನ್ನು ತಾವು ಫೇರೋಗಳಾಗಿ ಚಿತ್ರಿಸಿಕೊಂಡರು. ಹಿಂದಿನವರು ಈಜಿಪ್ಟಿನ ಹೊರಭಾಗದಲ್ಲಿ ಜೀವಿಸಿದರು. ಅಲ್ಲದೇ ಈಜಿಪ್ಟಿನ ರಾಜಪ್ರಭುತ್ವದ ಔಪಚಾರಿಕ ಕಾರ್ಯಕ್ರಮಗಳನ್ನು ನಡೆಸಲಿಲ್ಲ. ಸ್ಥಳೀಯ ಆಡಳಿತವು ರೋಮನ್‌ ಶೈಲಿಯಾಗಿ ಪರಿವರ್ತನೆಗೊಂಡು, ಈಜಿಪ್ಟಿನ ನಿವಾಸಿಗಳಿಗೆ ಹತ್ತಿರವಾಯಿತು.

ಕ್ರಿ.ಶ. ಮಧ್ಯ-ಮೊದಲ ಶತಮಾನದಿಂದ ಸ್ವೀಕರಿಸಲೇಬೇಕಾದ ಮತ್ತೊಂದು ಆರಾಧನಾ ಪದ್ಧತಿಯಾಗಿ ಕಂಡುಬಂದುದರಿಂದ ಕ್ರೈಸ್ತ ಧರ್ಮವು ಅಲೆಕ್ಸಾಂಡ್ರಿಯಾದಲ್ಲಿ ಬೇರುಬಿಟ್ಟಿತು. ಇದು ಹೊಂದಿಕೆ ಮಾಡಿಕೊಳ್ಳದ ಧರ್ಮವಾಗಿದ್ದು ಪೇಗನಿಸಂನಿಂದ ಮತಾಂತರ ಹೊಂದುವಂತೆ ಮಾಡಿತು. ಅಲ್ಲದೇ ಪ್ರಖ್ಯಾತ ಧಾರ್ಮಿಕ ಸಂಪ್ರದಾಯಗಳಿಗೆ ಬೆದರಿಕೆ ಹಾಕಿತು. ಇದು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಉಪದ್ರವಕ್ಕೆ ಕಾರಣವಾಯಿತು. ಇದರ ಪರಾಕಾಷ್ಠೆಯಾಗಿ ಕ್ರಿ.ಶ. 303ರಲ್ಲಿ ದಿಯೋಕ್ಲೆಶಿಯನ್‌‌ನನ್ನು ಬಹಿಷ್ಕರಿಸಲಾಯಿತು. ಅಂತಿಮವಾಗಿ ಕ್ರೈಸ್ತ ಧರ್ಮವು ಗೆಲುವು ಸಾಧಿಸಿತು. ಕ್ರಿ.ಶ 391ರಲ್ಲಿ ಕ್ರೈಸ್ತ ಧರ್ಮದ ಚಕ್ರವರ್ತಿ ಥಿಯೋಡೊಸಿಸ್‌ ಜಾರಿಗೆ ತಂದ ಕಾನೂನು ಪೇಗನ್ ಮತಾಚರಣೆಯನ್ನು ನಿರ್ಬಂಧಿಸಿತು. ಅದೂ ಅಲ್ಲದೇ ದೇವಾಲಯಗಳನ್ನು ಮುಚ್ಚಿಸಿತು. ಸಾರ್ವಜನಿಕ ಮತ್ತು ಖಾಸಗಿ ಧಾರ್ಮಿಕ ಪ್ರತಿಮೆಗಳನ್ನು ನಾಶವಾಗುವುದರೊಂದಿಗೆ ಅಲೆಕ್ಸಾಂಡ್ರಿಯಾವು ಪೇಗನ್-ವಿರೋಧಿ ದಂಗೆಗಳಿಗೆ ತುತ್ತಾಯಿತು. ಅದರ ಪರಿಣಾಮವಾಗಿ ಈಜಿಪ್ಟಿನ ಪೇಗನ್‌ ಸಂಸ್ಕೃತಿಯು ನಿರಂತರವಾಗಿ ಅವನತಿಯಾಗುತ್ತಾ ಹೋಯಿತು. ಸ್ಥಳೀಯ ಜನರು ಅವರ ಭಾಷೆಯಲ್ಲಿ ಮಾತನಾಡುವುದನ್ನು ಮುಂದುವರಿಸಿದರಿಂದ ಮತ್ತು ಈಜಿಪ್ಟಿನ ದೇವಾಲಯಗಳ ಉಪಾಸಕ ಮತ್ತು ಉಪಾಸಕಿಯರ ಪ್ರಾಮುಖ್ಯತೆ ಕಡಿಮೆಯಾದುದರಿಂದ ಚಿತ್ರಲಿಪಿಯಲ್ಲಿ ಬರೆದಿರುವುದನ್ನು ಓದುವ ಸಾಮರ್ಥ್ಯ ಕೂಡಾ ನಿಧಾನವಾಗಿ ಮರೆಯಾಯಿತು. ಕೆಲವು ದೇವಾಲಯಗಳು ಅವುಗಳಾಗಿಯೇ ಚರ್ಚ್‌ಗಳಾಗಿ ಪರಿವರ್ತನೆಗೊಂಡವು ಅಥವಾ ಜನರಿಂದ ತ್ಯಜಿಸಲ್ಪಟ್ಟವು.

ಸರಕಾರ ಮತ್ತು ಆರ್ಥಿಕ ಸ್ಥಿತಿ

ಆಡಳಿತ ಮತ್ತು ವ್ಯವಹಾರ ಸಂಬಂಧ

ಪ್ರಾಚೀನ ಈಜಿಪ್ಟ್‌ 
ರಾಜಮರ್ಯಾದೆ ಮತ್ತು ಅಧಿಕಾರ ಬಲದ ಚಿಹ್ನೆಗಳನ್ನು ಧರಿಸಿರುವುದನ್ನು ತೋರಿಸುತ್ತಿರುವ ಫೇರೋನ ಚಿತ್ರ

ಫೇರೋಗಳು ದೇಶದ ನಿರಂಕುಶ ಪ್ರಭುಗಳಾಗಿದ್ದರು. ಆದರೆ ಇವರು ಭೂಮಿ ಮತ್ತು ಅದರ ಸಂಪನ್ಮೂಲಗಳ ಮೇಲೆ ಸಂಪೂರ್ಣ ಅಧಿಕಾರ ಚಲಾಯಿಸಿದರು ಎಂದು ಊಹೆ ಮಾಡಲಾಗಿದೆ. ರಾಜನು ಸರ್ವೋಚ್ಚ ಸೇನಾ ಮುಖಂಡನಾಗಿದ್ದನು. ಅಲ್ಲದೇ ಆಡಳಿತದ ಮುಖ್ಯ ನಾಯಕನಾಗಿದ್ದನು. ಅವನ ವಾಣಿಜ್ಯ ವ್ಯವಹಾರಗಳಿಗಾಗಿ ಅಧಿಕಾರಿ ವರ್ಗವನ್ನು ಅವಲಂಬಿಸಿದ್ದನು. ಆಡಳಿತ ನಿರ್ವಹಣೆಯಲ್ಲಿ ಅವನ ಎರಡನೆಯ ಅಧಿಪತಿಯಾದ ವಜೀರನು ರಾಜನ ಪ್ರತಿನಿಧಿಯಾಗಿದ್ದನು. ಅವನು ಭೂಸಮೀಕ್ಷೆ, ಸರ್ಕಾರದ ಖಜಾನೆ, ಯೋಜನೆಗಳ ರಚನೆ, ಕಾನೂನಿನ ವ್ಯವಸ್ಥೆ ಮತ್ತು ದಫ್ತರಗಳನ್ನು ಸರಿಯಾದ ಕ್ರಮದಲ್ಲಿ ಇರಿಸುತ್ತಿದ್ದನು. ಪ್ರಾದೇಶಿಕ ಮಟ್ಟದಲ್ಲಿ ದೇಶವು ನೋಮ್‌ಗಳೆಂಬ ಸುಮಾರು 42 ಆಡಳಿತಾತ್ಮಕ ಪ್ರಾಂತಗಳಾಗಿ ವಿಭಾಗಿಸಲ್ಪಟ್ಟಿತ್ತು. ಪ್ರತಿಯೊಂದು ಪ್ರಾಂತವು ಒಬ್ಬ ನೊಮಾರ್ಕ್‌ನಿಂದ ಆಳಲ್ಪಡುತ್ತಿತ್ತು. ಈತ ವಜೀರನ ನ್ಯಾಯಯುತ ಆಡಳಿತಕ್ಕೆ ಹೊಣೆಗಾರನಾಗಿದ್ದನು.(ನೋಮ್ಸ್ ಎಂದರೆ ಪಶ್ಚಿಮ ಅಲಾಸ್ಕಾದಲ್ಲಿರುವ ಪಟ್ಟಣ ಪ್ರದೇಶ) ದೇವಾಲಯಗಳು ಆರ್ಥಿಕ ಸ್ಥಿತಿಯ ಮ‌ೂಲಧಾರವಾಗಿದ್ದವು. ಅವು ಕೇವಲ ಆರಾಧನಾ ಕೇಂದ್ರಗಳಾಗಿರದೆ, ದೇಶದ ಸಂಪತ್ತನ್ನು ಕಣಜಗಳಲ್ಲಿ ಮತ್ತು ಖಜಾನೆಗಳಲ್ಲಿ ಸಂಗ್ರಹಿಸಿಡುವ ಸ್ಥಳಗಳಾಗಿದ್ದವು. ಇದು ಧಾನ್ಯ ಮತ್ತು ಸರಕು ಸಾಮಾಗ್ರಿಗಳನ್ನು ಹಂಚುತ್ತಿದ್ದ ಮೇಲ್ವಿಚಾರಕರಿಂದ ನಿರ್ವಹಿಸಲ್ಪಡುತ್ತಿತ್ತು.

ಹೆಚ್ಚಿನ ವ್ಯಾಪಾರ ವ್ಯವಹಾರಗಳನ್ನು ಕೇಂದ್ರೀಯವಾಗಿ ಯೋಜಿಸಲಾಗುತ್ತಿತ್ತಲ್ಲದೇ ಕಟ್ಟುನಿಟ್ಟಿನಲ್ಲಿ ನಿಯಂತ್ರಿಸಲಾಗುತ್ತಿತ್ತು. ಪ್ರಾಚೀನ ಈಜಿಪ್ಟಿನವರು ಕೊನೆಯ ಅವಧಿಯವರೆಗೆ ನಾಣ್ಯ ವ್ಯವಸ್ಥೆಯನ್ನು ಬಳಸದಿದ್ದರೂ, ಹಣ-ವಿನಿಮಯ ಪದ್ಧತಿಯ ಪ್ರಕಾರವೊಂದನ್ನು ಬಳಸಿದರು. ಇದರಲ್ಲಿ ಅವರು ಪ್ರಮಾಣಿತ ಧಾನ್ಯದ ಮ‌ೂಟೆಯನ್ನು ಮತ್ತು ದೆಬೆನ್ ಎಂದು ಕರೆಯುವ ತಾಮ್ರ ಅಥವಾ ಬೆಳ್ಳಿಯ ಸುಮಾರಾಗಿ 91 grams (3 oz) ಗ್ರಾಂ ಇರುವ ತೂಕವನ್ನು ಮಾನಕವಾಗಿ ಉಪಯೋಗಿಸುತ್ತಿದ್ದರು. ಕಾರ್ಮಿಕರಿಗೆ ಧಾನ್ಯದ ರೂಪದಲ್ಲಿ ಕೂಲಿ ನೀಡಲಾಗುತ್ತಿತ್ತು; ಸಾಧಾರಣ ಕಾರ್ಮಿಕ ಪ್ರತಿ ತಿಂಗಳು 5½ ಮ‌ೂಟೆ (200 ಕೆಜಿ ಅಥವಾ 400 ಪೌಂಡ್) ಧಾನ್ಯವನ್ನು ಸಂಪಾದಿಸಿದರೆ, ಮೇಲ್ವಿಚಾರಕ ಕೆಲಸಗಾರನು 7½ ಮ‌ೂಟೆ (250 ಕೆಜಿ ಅಥವಾ 550 ಪೌಂಡ್) ಗಳಿಸುತ್ತಿದ್ದನು. ಬೆಲೆಗಳು ದೇಶದಾದ್ಯಂತ ನಿಗದಿಯಾಗಿರುತ್ತಿದ್ದವು. ಅಲ್ಲದೇ ವ್ಯಾಪಾರಕ್ಕೆ ಸಹಾಯವಾಗಲು ಅವುಗಳನ್ನು ಪಟ್ಟಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿತ್ತು; ಉದಾಹರಣೆಗಾಗಿ, ಒಂದು ಮೇಲುಡುಪಿನ ಬೆಲೆ ಐದು ತಾಮ್ರ ದೆಬೆನ್, ಒಂದು ಹಸುವಿನ ಬೆಲೆ 140 ದೆಬೆನ್ ಆಗಿತ್ತು. ಧಾನ್ಯವನ್ನು ನಿಗದಿತ ಬೆಲೆಯಂತೆ ಇತರ ಸರಕು ಸಾಮಾಗ್ರಿಗಳ ವ್ಯಾಪಾರಕ್ಕೆ ಬಳಸಲಾಗುತ್ತಿತ್ತು. ಕ್ರಿ.ಪೂ. 5ನೇ ಶತಮಾನದ ಸಂದರ್ಭದಲ್ಲಿ ಈಜಿಪ್ಟಿನಲ್ಲಿ ಹೊರದೇಶದಿಂದ ನಾಣ್ಯವು ಪರಿಚಯಿಸಲ್ಪಟ್ಟಿತು. ಮೊದಲು ನಾಣ್ಯಗಳನ್ನು ನಿಜವಾದ ಹಣವಾಗಿ ಬಳಸದೆ ಬೆಲೆಬಾಳುವ ಲೋಹದ ಒಂದೇ ಆಕಾರದ ತುಣುಕುಗಳಾಗಿ ಉಪಯೋಗಿಸಲಾಗುತ್ತಿತ್ತು. ಆದರೆ ನಂತರದ ಶತಮಾನಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರಿಗಳು ನಾಣ್ಯ ಪದ್ಧತಿಯನ್ನೇ ಅವಲಂಬಿಸಿದರು.

ಸಾಮಾಜಿಕ ಸ್ಥಿತಿ

ಈಜಿಪ್ಟಿನ ಸಮಾಜವು ಹೆಚ್ಚು ಶ್ರೇಣಿಕರಿಸಲ್ಪಟ್ಟಿತ್ತು. ಅಲ್ಲಿನ ಸಾಮಾಜಿಕ ಸ್ಥಿತಿಯು ಸ್ಪಷ್ಟವಾಗಿ ಆಡಂಬರದಿಂದ ಕೂಡಿತ್ತು. ಅಲ್ಲಿ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಕೃಷಿ ಉತ್ಪನ್ನವು ನೇರವಾಗಿ ರಾಜ್ಯದ, ದೇವಾಲಯದ ಅಥವಾ ಭೂಮಿಯನ್ನು ಹೊಂದಿದ್ದ ಶ್ರೀಮಂತ ವರ್ಗದವರ ವಶದಲ್ಲಿತ್ತು. ಕೃಷಿಕರು ಕಾರ್ಮಿಕ ತೆರಿಗೆಯನ್ನೂ ತೆರಬೇಕಾಗಿತ್ತು ಹಾಗೂ ನೀರಾವರಿ ಅಥವಾ ನಿರ್ಮಾಣ ಯೋಜನೆಗಳಲ್ಲಿ ಜೀತ ಪದ್ಥತಿಯಲ್ಲಿ ಕೆಲಸ ಮಾಡಬೇಕಾಗಿತ್ತು. ಕಲಾವಿದರು ಮತ್ತು ಕರಕುಶಲಿಗಳು ಕೃಷಿಕರಿಂದ ಉನ್ನತ ಸ್ಥಾನದಲ್ಲಿದ್ದರು. ಆದರೆ ಅವರೂ ಸಹ ರಾಜ್ಯಾಡಳಿತದಡಿಯಲ್ಲಿದ್ದರು, ದೇವಾಲಯಗಳಿಗೆ ಹೊಂದಿಕೊಂಡಿದ್ದ ಅಂಗಡಿಗಳಲ್ಲಿಯೇ ಕೆಲಸ ಮಾಡಬೇಕಿತ್ತು. ಅಲ್ಲದೇ ಅವರಿಗೆ ನೇರವಾಗಿ ರಾಜ್ಯದ ಖಜಾನೆಯಿಂದ ವೇತನ ನೀಡಲಾಗುತ್ತಿತ್ತು. ಪ್ರಾಚೀನ ಈಜಿಪ್ಟಿನಲ್ಲಿ ಲೇಖಕರು ಮತ್ತು ಅಧಿಕಾರಿಗಳು ಅತ್ಯುನ್ನತ ವರ್ಗಕ್ಕೆ ಸೇರಿದವರಾಗಿದ್ದರು. ಅವರಿಗೆ ಶ್ರೇಣಿಯನ್ನು ನೀಡಿದ ಸೊಂಟಕ್ಕೆ ಬಿಗಿದ ನಿಲುವಂಗಿಯ ಉಡುಪಿಗೆ ಸಂಬಂಧಿಸಿದಂತೆ ಈ ವರ್ಗವನ್ನು "ವೈಟ್ ಕಿಲ್ಟ್ ಕ್ಲಾಸ್‌" ಎಂದು ಕರೆಯಲಾಗುತ್ತಿತ್ತು. ಅತ್ಯುನ್ನತ ವರ್ಗದವರು ಅವರ ಸಾಮಾಜಿಕ ಸ್ಥಿತಿಯನ್ನು ಪ್ರಧಾನವಾಗಿ ಕಲೆ ಮತ್ತು ಸಾಹಿತ್ಯದಲ್ಲಿ ತೋರಿಸಿಕೊಂಡಿದ್ದಾರೆ. ಶ್ರೀಮಂತ ವರ್ಗದವರೆಂದರೆ ಧಾರ್ಮಿಕ ಗುರುಗಳು, ವೈದ್ಯರು ಮತ್ತು ಯಾವುದೇ ಒಂದು ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದಿರುವ ಎಂಜಿನಿಯರುಗಳು. ಜೀತಗಾರಿಕೆಯು ಪ್ರಾಚೀನ ಈಜಿಪ್ಟಿನಲ್ಲಿ ಹೆಸರುವಾಸಿಯಾಗಿತ್ತು. ಆದರೆ ಅದರ ವ್ಯಾಪ್ತಿ ಮತ್ತು ಹರಡಿದ್ದ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಪ್ರಾಚೀನ ಈಜಿಪ್ಟಿನವರು ಜೀತದಾರರನ್ನು ಹೊರತು ಪಡಿಸಿ ಎಲ್ಲಾ ಸಾಮಾಜಿಕ ವರ್ಗದವರನ್ನೂ ಒಳಗೊಂಡಂತೆ ಪುರುಷರು ಮತ್ತು ಮಹಿಳೆಯರನ್ನು ಕಾನೂನಿನಡಿಯಲ್ಲಿ ಸಮಾನವಾಗಿ ಕಾಣುತ್ತಿದ್ದರು. ಕೆಳಗಿನ ವರ್ಗದಲ್ಲಿರುವ ಕೃಷಿಕರೂ ಸಹ ಪರಿಹಾರಕ್ಕಾಗಿ ವಜೀರ ಮತ್ತು ಅವನ ನ್ಯಾಯಮಂಡಲಿಯಲ್ಲಿ ಅಹವಾಲು ಸಲ್ಲಿಸುವ ಅಧಿಕಾರವನ್ನು ಹೊಂದಿದ್ದರು. ಪುರುಷ ಮತ್ತು ಮಹಿಳೆಯರಿಬ್ಬರೂ ಸಂಪತ್ತನ್ನು ಹೊಂದುವ ಮತ್ತು ಮಾರಾಟ ಮಾಡುವ, ಒಪ್ಪಂದಗಳನ್ನು ಮಾಡಿಕೊಳ್ಳುವ, ವಿವಾಹವಾಗುವ ಮತ್ತು ವಿಚ್ಛೇದನ ನೀಡುವ, ಉತ್ತರಾಧಿಕಾರವನ್ನು ಪಡೆಯುವ ಮತ್ತು ನ್ಯಾಯಮಂಡಲಿಯಲ್ಲಿ ಕಾನೂನಿನ ಕಲಹಗಳನ್ನು ಮುಂದುವರಿಸುವ ಹಕ್ಕನ್ನು ಹೊಂದಿದ್ದರು. ಮದುವೆಯಾದ ದಂಪತಿಗಳು ಜೊತೆಯಾಗಿ ಸಂಪತ್ತನ್ನು ಹೊಂದಬಹುದಿತ್ತು. ಅವರು ವಿವಾಹ ಒಪ್ಪಂದಗಳಿಗೆ ಒಪ್ಪುವ ಮ‌ೂಲಕ ವಿಚ್ಛೇದನದಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದಿತ್ತು. ಈ ಒಪ್ಪಂದಗಳು ಪತಿಯು ಆತನ ಪತ್ನಿ ಮತ್ತು ಮಕ್ಕಳಿಗೆ ಹಣಕಾಸಿನ ನೆರವು ನೀಡಬೇಕೆಂಬ ಕರಾರಿನ ಷರತ್ತು ವಿಧಿಸುತ್ತಿದ್ದವು. ಪುರಾತನ ಗ್ರೀಸ್‌, ರೋಮ್ ಮತ್ತು ಪ್ರಪಂಚದಾದ್ಯಂತದ ಆಧುನಿಕ ಪ್ರದೇಶಗಳಿಗೆ ಹೋಲಿಸಿದರೂ, ಪ್ರಾಚೀನ ಈಜಿಪ್ಟಿನ ಮಹಿಳೆಯರು ಸಾಧನೆಗೆ ಅತಿಹೆಚ್ಚಿನ ವೈಯಕ್ತಿಕ ಆಯ್ಕೆ ಮತ್ತು ಅವಕಾಶಗಳನ್ನು ಹೊಂದಿದ್ದರು. ಹ್ಯಾಟ್ಶೆಪ್ಸುಟ್‌ ಮತ್ತು ಕ್ಲಿಯೋಪಾಟ್ರ ಮೊದಲಾದ ಮಹಿಳೆಯರು ಫೇರೋಗಳೂ ಆದರು. ಇತರರು ಅಮುನ್‌ನ ದೈವಿಕ ಪತ್ನಿಯರೆಂಬ ಹೆಸರಿನಲ್ಲಿ ಅಧಿಕಾರ ನಡೆಸಿದರು. ಈ ಸ್ವಾತಂತ್ರ್ಯಗಳ ಹೊರತಾಗಿ ಪ್ರಾಚೀನ ಈಜಿಪ್ಟಿನ ಮಹಿಳೆಯರು ಆಡಳಿತದಲ್ಲಿ ಅಧಿಕೃತ ಪಾತ್ರವಹಿಸಲಿಲ್ಲ. ದೇವಾಲಯಗಳಲ್ಲಿ ಮಾತ್ರ ಪರೋಕ್ಷವಾಗಿ ಸೇವೆಮಾಡಿದರು. ಅವರು ಪುರಷರಷ್ಟು ಶಿಕ್ಷಣವನ್ನೂ ಪಡೆದಿರಲಿಲ್ಲ.

ಪ್ರಾಚೀನ ಈಜಿಪ್ಟ್‌ 
ಹೆಚ್ಚು ಓದಿದ ಗಣ್ಯ ವ್ಯಕ್ತಿಗಳಾದ ಲೇಖಕರು.ಅವರು ತೆರಿಗೆಗಳನ್ನು ಸಂಗ್ರಹಿಸುತ್ತಿದ್ದರು, ದಾಖಲೆಗಳನ್ನು ನೋಡಿಕೊಳ್ಳುತ್ತಿದ್ದರು ಹಾಗೂ ಆಡಳಿತ ನಿರ್ವಹಣೆಗೆ ಜವಾಬ್ದಾರರಾಗಿದ್ದರು.

ಕಾನೂನು ವ್ಯವಸ್ಥೆ

ಕಾನೂನು ವ್ಯವಸ್ಥೆಯ ಅಧಿಕೃತ ಮುಖ್ಯಸ್ಥನಾಗಿದ್ದವನು ಫೇರೋ. ಅವನು ಕಾನೂನಿನ ಮ‌ೂಲಕ ಅಪ್ಪಣೆ ಮಾಡಲು, ನ್ಯಾಯ ನೀಡಲು ಹಾಗೂ ಕಾನೂನು ಮತ್ತು ಆದೇಶಗಳನ್ನು ನಿರ್ವಹಿಸಲು ಜವಾಬ್ದಾರಾಗಿದ್ದನು. ಇದನ್ನು ಪ್ರಾಚೀನ ಈಜಿಪ್ಟಿನವರು ಮಾಟ್ ಎಂದು ಕರೆಯುತ್ತಿದ್ದರು. ಪ್ರಾಚೀನ ಈಜಿಪ್ಟಿನಲ್ಲಿ ಯಾವುದೇ ಕಾನೂನು ನೀತಿನಿಯಮಗಳಿಲ್ಲದಿದ್ದರೂ, ಈಜಿಪ್ಟಿನ ಕಾನೂನು ಕಟ್ಟುನಿಟ್ಟಾದ ಜಟಿಲ ಶಾಸನಗಳಿಗೆ ಅಂಟಿಕೊಳ್ಳುವ ಬದಲು ಒಪ್ಪಂದಗಳನ್ನು ಪರಿಣಾಮಕಾರಿಯಾಗಿ ಪೂರೈಸುವುದಕ್ಕೆ ಮತ್ತು ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತಿತ್ತು. ಇದರಲ್ಲಿ ಸರಿ-ತಪ್ಪುಗಳ ಸಾಮಾನ್ಯ-ಜ್ಞಾನವನ್ನು ಆಧರಿಸಲಾಗುತಿತ್ತು, ಎಂದು ನ್ಯಾಯಮಂಡಲಿಯ ದಾಖಲೆಗಳು ತೋರಿಸಿಕೊಡುತ್ತವೆ. ಹೊಸ ರಾಜ್ಯದಲ್ಲಿ ಕೆನ್ಬೆಟ್‌ ಎಂದು ಕರೆಯುವ ಹಿರಿಯರ ಸ್ಥಳೀಯ ಸಲಹಾಸಮಿತಿಗಳು ಸಣ್ಣಪುಟ್ಟ ದೂರು ಮತ್ತು ಜಗಳಗಳನ್ನು ಒಳಗೊಂಡ ನ್ಯಾಯಮಂಡಲಿಯ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು. ಕೊಲೆ, ಪ್ರಮುಖ ಭೂ ವ್ಯವಹಾರ ಮತ್ತು ಸ್ಮಾರಕಗಳ ದರೋಡೆಯಂತಹ ಹೆಚ್ಚು ಗಂಭೀರ ಕೇಸುಗಳನ್ನು ವಜೀರ ಅಥವಾ ಫೇರೋ ವಶದಲ್ಲಿದ್ದ ಗ್ರೇಟ್ ಕೆನ್ಬೆಟ್‌ ಮೇಲ್ವಿಚಾರಣೆ ವಹಿಸುತ್ತಿತ್ತು. ಆಪಾದಿತರು ಮತ್ತು ಪ್ರತಿವಾದಿಗಳು ತಮ್ಮನ್ನು ತಾವು ಪ್ರತಿನಿಧಿಸಬೇಕಾಗಿತ್ತು. ಅಲ್ಲದೇ ತಾವು ಸತ್ಯವನ್ನೇ ನುಡಿಯುತ್ತಿದ್ದೇವೆ, ಎಂದು ಪ್ರತಿಜ್ಞೆ ಮಾಡಬೇಕಾಗಿತ್ತು. ಕೆಲವು ಸಂದರ್ಭಗಳಲ್ಲಿ, ಕೇಂದ್ರಾಡಳಿತವು ಕಾನೂನು ನಡೆಸುವ ಮತ್ತು ನ್ಯಾಯ ಒದಗಿಸುವ ಕೆಲಸಗಳೆರಡನ್ನೂ ಮಾಡುತ್ತಿತ್ತು. ಯಾವುದೇ ಸಹ-ಸಂಚುಗಾರರ ಬಗ್ಗೆ ಮಾಹಿತಿಯನ್ನು ಮತ್ತು ಒಪ್ಪಿಗೆಯನ್ನು ಪಡೆಯಲು ಆಪಾದಿತನನ್ನು ಥಳಿಸುವ ಮ‌ೂಲಕ ಹಿಂಸೆ ನೀಡುತ್ತಿತ್ತು. ಆಪಾದನೆಗಳು ಸಣ್ಣಪುಟ್ಟವಾಗಿದ್ದರೂ ಅಥವಾ ಗಂಭೀರವಾಗಿದ್ದರೂ, ನ್ಯಾಯಮಂಡಳಿಯ ದಾಖಲೆಗಾರರು ದೂರು, ಹೇಳಿಕೆ ಮತ್ತು ಕೇಸಿನ ತೀರ್ಪಿನ ವಿವರಗಳನ್ನು ಮುಂದಿನ ಉಲ್ಲೇಖಕ್ಕಾಗಿ ದಾಖಲಿಸಿಕೊಳ್ಳುತ್ತಿದ್ದರು.

ಸಣ್ಣಪುಟ್ಟ ಅಪರಾಧಗಳಿಗೆ ದಂಡ ವಿಧಿಸುವುದು, ಹೊಡೆಯುವುದು, ಮುಖಭಂಗ ಅಥವಾ ಗಡೀಪಾರು ಮಾಡುವುದು ಮೊದಲಾದ ಶಿಕ್ಷೆಗಳನ್ನು ಅಪರಾಧದ ತೀವ್ರತೆಯನ್ನು ಆಧರಿಸಿ ನೀಡಲಾಗುತ್ತಿತ್ತು. ಕೊಲೆ ಮತ್ತು ಸ್ಮಾರಕಗಳ ದರೋಡೆಯಂತಹ ಗಂಭೀರ ಅಪರಾಧಗಳಿಗೆ ಮರಣದಂಡನೆ, ಶಿರಚ್ಛೇದನ, ನೀರಿನಲ್ಲಿ ಮುಳುಗಿಸುವುದು ಅಥವಾ ಶೂಲಕ್ಕೇರಿಸುವುದು ಮೊದಲಾದ ಶಿಕ್ಷೆ ವಿಧಿಸಲಾಗುತ್ತಿತ್ತು. ಕೆಲವೊಮ್ಮೆ ಶಿಕ್ಷೆಯು ಅಪರಾಧಿಯ ಕುಟುಂಬದವರೆಗೂ ವಿಸ್ತರಿಸುತ್ತಿತ್ತು. ಹೊಸ ರಾಜ್ಯದ ಆರಂಭದಲ್ಲಿ ದೇವವಾಣಿಯ ಕ್ಷೇತ್ರಗಳು ಕಾನೂನು ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಇವು ಸಿವಿಲ್ ಮತ್ತು ಅಪರಾಧ ಕೇಸುಗಳೆರಡರಲ್ಲೂ ನ್ಯಾಯ ನೀಡುತ್ತಿದ್ದವು. ಈ ಕ್ರಿಯೆಯಲ್ಲಿ, ಸಮಸ್ಯೆಯ ಸರಿ ಅಥವಾ ತಪ್ಪಿಗೆ ಸಂಬಂಧಿಸಿದಂತೆ "ಹೌದು" ಅಥವಾ "ಅಲ್ಲ" ಪ್ರಶ್ನೆಯನ್ನು ದೇವರಲ್ಲಿ ಕೇಳಲಾಗುತ್ತಿತ್ತು. ಈ ದೇವರು ಅಂದರೆ ಧಾರ್ಮಿಕ ಗುರುಗಳು ಒಬ್ಬರನ್ನು ಅಥವಾ ಹೆಚ್ಚಿನವರನ್ನು ಆರಿಸುವ ಮ‌ೂಲಕ ತೀರ್ಪು ನೀಡುತ್ತಿದ್ದರು, ಕೇಸನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಹಾಕುತ್ತಿದ್ದರು, ಅಥವಾ ಪಪೈರಸ್‍‌ನಲ್ಲಿ ಅಥವಾ ಆಸ್ಟ್ರಕಾನ್‌‌ನಲ್ಲಿ ಬರೆದ ಉತ್ತರಗಳಲ್ಲಿ ಒಂದನ್ನು ಸೂಚಿಸುತ್ತಿದ್ದರು.

ಕೃಷಿ

ಪ್ರಾಚೀನ ಈಜಿಪ್ಟ್‌ 
ಒಂದು ಸಮಾಧಿಯ ಉಬ್ಬುಶಿಲ್ಪ, ಇದರಲ್ಲಿ ಭೂಮಿಯನ್ನು ಉಳುವ, ಬೆಳೆಗಳನ್ನು ಕೊಯ್ಯುವ ಮತ್ತು ಮೇಲ್ವಿಚಾರಕನ ನಿರ್ದೇಶನದಲ್ಲಿ ಬೀಜಗಳನ್ನು ಬಿತ್ತುವ ಕೆಲಸಗಾರರನ್ನು ಚಿತ್ರಿಸಲಾಗಿದೆ.

ಪ್ರಾಚೀನ ಈಜಿಪ್ಟ್‌ ಸಂಸ್ಕೃತಿಯ ಯಶಸ್ಸಿಗೆ ಕಾರಣವಾದ ಭೌಗೋಳಿಕ ಅಂಶಗಳಲ್ಲಿ ಪ್ರಮುಖವಾದುದು ನೈಲ್‌ ನದಿಯ ವಾರ್ಷಿಕ ಪ್ರವಾಹದಿಂದ ಉಂಟಾಗುತ್ತಿದ್ದ ಫಲವತ್ತಾದ ಮಣ್ಣು. ಆದ್ದರಿಂದ ಪ್ರಾಚೀನ ಈಜಿಪ್ಟಿನವರು ಭಾರಿ ಪ್ರಮಾಣದ ಆಹಾರ ಉತ್ಪಾದಿಸಲು ಸಮರ್ಥರಾಗಿದ್ದರು. ಇದರಿಂದಾಗಿ ಜನರು ಸಾಂಸ್ಕೃತಿಕ, ತಾಂತ್ರಿಕ ಮತ್ತು ಕಲಾತ್ಮಕ ಕಸುಬುಗಳಿಗೆ ಹೆಚ್ಚು ಸಮಯ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಲು ಸಾಧ್ಯವಾಗಿತ್ತು. ಒಬ್ಬ ವ್ಯಕ್ತಿ ಹೊಂದಿದ್ದ ಭೂ ಆಸ್ತಿಯ ಪ್ರಮಾಣದ ಆಧಾರದಲ್ಲಿ ತೆರಿಗೆಗಳನ್ನು ವಿಧಿಸಲಾಗುತ್ತಿದ್ದರಿಂದ ಭೂ ನಿರ್ವಹಣೆಯು ಪ್ರಾಚೀನ ಈಜಿಪ್ಟಿನಲ್ಲಿ ಕಷ್ಟಕರವಾಗಿತ್ತು.

ಈಜಿಪ್ಟಿನಲ್ಲಿನ ಕೃಷಿಕಾರಿಕೆಯು ನೈಲ್‌ ನದಿಯ ಹರಿಯುವಿಕೆಯ ಬದಲಾವಣೆಯನ್ನು ಅವಲಂಬಿಸಿತ್ತು. ಈಜಿಪ್ಟಿನವರು ಮ‌ೂರು ಕಾಲಗಳಾಗಿ ವಿಂಗಡಿಸಿದ್ದರು: ಅಖೆಟ್ (ಪ್ರವಾಹ/ಮಳೆಗಾಲ), ಪೆರೆಟ್ (ನಾಟಿ ಮಾಡುವಿಕೆ) ಮತ್ತು ಶೆಮು (ಕೊಯ್ಲು). ಪ್ರವಾಹ ಕಾಲವು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇರುತ್ತಿತ್ತು. ಈ ಕಾಲದಲ್ಲಿ ನದಿಯು ಬೆಳೆ ಬೆಳೆಯಲು ಅನುಕೂಲಕರವಾದ ಖನಿಜ-ಸಮೃದ್ಧಿಯಾದ ಮಣ್ಣಿನ ಪದರವೊಂದನ್ನು ದಡದಲ್ಲಿ ಶೇಖರಿಸುತ್ತಿತ್ತು. ಪ್ರವಾಹದ ನೀರು ಇಳಿದ ನಂತರದ ನಾಟಿ ಮಾಡುವ ಕಾಲವು ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ಇರುತ್ತಿತ್ತು. ಈ ಕಾಲದಲ್ಲಿ ಕೃಷಿಕರು ಭೂಮಿಯನ್ನು ಉತ್ತು ಹದಮಾಡಿ ಬೀಜಗಳನ್ನು ಹಾಕುತ್ತಿದ್ದರು. ಇದಕ್ಕೆ ಹಳ್ಳಗಳಿಂದ ಮತ್ತು ಕಾಲುವೆಗಳಿಂದ ನೀರು ಹಾಯಿಸುತ್ತಿದ್ದರು. ಈಜಿಪ್ಟಿನಲ್ಲಿ ಮಳೆ ಬರುತ್ತಿರಲಿಲ್ಲವಾದ್ದರಿಂದ ಕೃಷಿಕರು ಅವರ ಬೆಳೆಗಳಿಗೆ ನೀರುಣಿಸಲು ನೈಲ್‌ ನದಿಯನ್ನು ಅವಲಂಬಿಸಿದ್ದರು. ಮಾರ್ಚ್‌ನಿಂದ ಮೇಯವರೆಗಿನ ಕೊಯ್ಲಿನ ಸಂದರ್ಭದಲ್ಲಿ, ಕೃಷಿಕರು ಅವರ ಬೆಳೆಗಳ ಕೊಯ್ಲಿಗೆ ಕುಯಿಲುಗತ್ತಿಗಳನ್ನು ಬಳಸುತ್ತಿದ್ದರು. ನಂತರ ಅವುಗಳನ್ನು ಹುಲ್ಲಿನಿಂದ ಧಾನ್ಯಗಳನ್ನು ಬೇರ್ಪಡಿಸಲು ಬಡಿಗೋಲಿಗೆ ತೆನೆ ಬಡಿಯಾಗಿ ಉಪಯೋಗಿಸುತ್ತಿದ್ದುರು. ಧಾನ್ಯದಿಂದ ಹೊಟ್ಟನ್ನು ತೂರಿ ತೆಗೆದ ನಂತರ ಧಾನ್ಯವನ್ನು ಬೀಸಿ ಹಿಟ್ಟು ಮಾಡಲಾಗುತ್ತಿತ್ತು, ಬಿಯರ್ ತಯಾರಿಸಲು ಹುಳಿಸಲಾಗುತ್ತಿತ್ತು ಅಥವಾ ಮುಂದಿನ ಬಳಕೆಗಾಗಿ ಸಂಗ್ರಹಿಸಿಡಲಾಗುತ್ತಿತ್ತು.

ಪ್ರಾಚೀನ ಈಜಿಪ್ಟಿನವರು ಎಮರ್ ಗೋಧಿ ಮತ್ತು ಬಾರ್ಲಿ ಹಾಗೂ ಇನ್ನಿತರ ಅನೇಕ ಏಕದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ಎಲ್ಲವನ್ನು ಬ್ರೆಡ್ ಮತ್ತು ಬಿಯರ್‌ನ ಎರಡು ಪ್ರಮುಖ ಆಹಾರಾಂಶಗಳನ್ನು ಮಾಡಲು ಬಳಸಲಾಗುತ್ತಿತ್ತು. ಸೀಮೆ ಅಗಸೆ(ಫ್ಲ್ಯಾಕ್ಸ್) ಸಸ್ಯಗಳನ್ನು ಅವುಗಳ ಕಾಂಡಗಳ ನಾರುಗಳಿಗಾಗಿ ಬೆಳೆಯಲಾಗುತ್ತಿತ್ತು. ಇವನ್ನು ಹೂಬಿಡುವ ಮೊದಲೇ ಕಿತ್ತು ನಾರನ್ನು ಪಡೆಯಲಾಗುತ್ತಿತ್ತು. ಈ ನಾರುಗಳನ್ನು ಉದ್ದುದ್ದಕ್ಕೆ ಸೀಳಿ ನೂಲು ತೆಗೆದು, ಈ ನೂಲನ್ನು ನಾರಿನ ಹಾಳೆಗಳನ್ನು ಹೆಣೆಯಲು ಮತ್ತು ಬಟ್ಟೆಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ನೈಲ್‌ ನದಿಯ ತೀರದಲ್ಲಿ ಬೆಳೆಸುತ್ತಿದ್ದ ಪಪೈರಸ್‌ಗಳನ್ನು ಕಾಗದ ತಯಾರಿಕೆಗೆ ಉಪಯೋಗಿಸಲಾಗುತ್ತಿತ್ತು. ಹಣ್ಣು ಮತ್ತು ತರಕಾರಿಗಳನ್ನು ಮೈದಾನದಂತಹ ಜಾಗದಲ್ಲಿ, ವಾಸಸ್ಥಳಕ್ಕೆ ಹತ್ತಿರದಲ್ಲಿ, ಅಥವಾ ಎತ್ತರದ ಪ್ರದೇಶದಲ್ಲಿ ಬೆಳೆಸಿ, ಕೈಯಿಂದಲೇ ನೀರುಣಿಸುತ್ತಿದ್ದರು. ವೈನ್ ತಯಾರಿಸಲು ಬಳಸುತ್ತಿದ್ದ ದ್ರಾಕ್ಷಿಗಳೂ ಸೇರಿದಂತೆ ತರಕಾರಿಗಳಾದ(ಗೆಡ್ಡೆ) ಲೀಕ್, ಬೆಳ್ಳುಳ್ಳಿ, ಕಲ್ಲಂಗಡಿ, ಸ್ಕ್ವಾಶ್,(ಕುಂಬಳ) ದ್ವಿದಳಧಾನ್ಯ, ಲೆಟಿಸ್(ಸೊಪ್ಪು) ಮತ್ತು ಇತರ ಬೆಳೆಗಳನ್ನೂ ಬೆಳೆಸುತ್ತಿದ್ದರು.

ಪ್ರಾಚೀನ ಈಜಿಪ್ಟ್‌ 
ಭಾರ ಹೊರುವ ಪ್ರಾಣಿಯಾಗಿ ಮತ್ತು ಆಹಾರದ ಮ‌ೂಲವಾಗಿ ಬಳಸುತ್ತಿದ್ದ ಎತ್ತುಗಳ ಜೊತೆಯಿಂದ ಸೆನ್ನೆಡ್ಜೆಮ್ ಅವನ ಭೂಮಿಯನ್ನು ಉಳುತ್ತಿರುವುದು.

ಪ್ರಾಣಿ ವೈವಿಧ್ಯ

ಈಜಿಪ್ಟಿನವರು ಮಾನವ ಮತ್ತು ಪ್ರಾಣಿಗಳ ನಡುವಿನ ಸಮತೋಲನದ ಸಂಬಂಧವು ಈ ವಿಶ್ವದಲ್ಲಿ ಒಂದು ಅವಶ್ಯಕ ಅಂಶವಾಗಿದೆ, ಎಂದು ನಂಬಿದ್ದರು; ಆದ್ದರಿಂದ ಅವರು ಮಾನವರು, ಪ್ರಾಣಿಗಳು ಮತ್ತು ಸಸ್ಯಗಳು ಏಕ ಘಟಕದ ಸದಸ್ಯರೆಂದು ಭಾವಿಸುತ್ತಿದ್ದರು. ಅದರಿಂದಾಗಿ ಸಾಕುಪ್ರಾಣಿ ಮತ್ತು ಕಾಡುಪ್ರಾಣಿಗಳೆರಡೂ ಪ್ರಾಚೀನ ಈಜಿಪ್ಟಿನವರ ಆಧ್ಯಾತ್ಮಿಕತೆಗೆ, ಒಡನಾಟಕ್ಕೆ ಮತ್ತು ಜೀವನೋಪಾಯಕ್ಕೆ ಮ‌ೂಲಧಾರವಾಗಿತ್ತು. ಹಸುಗಳು ಪ್ರಮುಖ ಜಾನುವಾರುಗಳಾಗಿದ್ದವು; ಜಾನುವಾರುಗಳ ನಿಯತ ಗಣನೆಯ ಆಧಾರದಲ್ಲಿ ಆಡಳಿತವು ತೆರಿಗೆಗಳನ್ನು ಸಂಗ್ರಹಿಸುತ್ತಿತ್ತು. ಪ್ರಾಣಿಗಳ ಹಿಂಡಿನ ಗಾತ್ರವು ಅವರ ಪ್ರತಿಷ್ಠೆಯನ್ನು ಹಾಗೂ ಅವರು ಹೊಂದಿದ್ದ ಆಸ್ತಿ ಅಥವಾ ದೇವಾಲಯದ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತಿದ್ದವು. ಹಸುಗಳನ್ನು ಮಾತ್ರವಲ್ಲದೆ ಪ್ರಾಚೀನ ಈಜಿಪ್ಟಿನವರು ಕುರಿ, ಆಡು ಮತ್ತು ಹಂದಿಗಳನ್ನೂ ಸಾಕುತ್ತಿದ್ದರು. ಬಾತುಕೋಳಿ, ಹೆಬ್ಬಾತು ಮತ್ತು ಪಾರಿವಾಳ ಮೊದಲಾದವುಗಳನ್ನು ಬಲೆಯಿಂದ ಹಿಡಿದು ಪಂಜರದಲ್ಲಿಟ್ಟು, ಹೆಚ್ಚು ಮಾಂಸದಿಂದ ಕೂಡಿರುವಂತೆ ಬೆಳೆಸಲು ಹೆಚ್ಚುಹೆಚ್ಚು ತಿನ್ನಿಸಿ ಸಾಕಲಾಗುತ್ತಿತ್ತು. ನೈಲ್‌ ನದಿಯು ಮೀನಿನ ಸಮೃದ್ಧ ಮ‌ೂಲವಾಗಿತ್ತು. ಪುರಾತನ ರಾಜ್ಯದ ಕಾಲದಿಂದಲೇ ಜೇನ್ನೊಣಗಳನ್ನು ಸಾಕಿ ಅವುಗಳಿಂದ ಜೇನು ಮತ್ತು ಮೇಣವನ್ನು ಪಡೆಯುತ್ತಿದ್ದರು.

ಪ್ರಾಚೀನ ಈಜಿಪ್ಟಿನವರು ಕತ್ತೆ ಮತ್ತು ಎತ್ತುಗಳನ್ನು ಭಾರ ಹೊರುವ ಪ್ರಾಣಿಗಳಾಗಿ ಮಾತ್ರವಲ್ಲದೆ ಭೂಮಿಯನ್ನು ಉಳಲು ಮತ್ತು ಬೀಜ ಬಿತ್ತಲು ಬಳಸುತ್ತಿದ್ದರು. ಕೊಬ್ಬಿದ ಎತ್ತನ್ನು ಬಲಿಕೊಡುವುದೂ ಸಹ ಮತಾಚರಣೆಯ ಪ್ರಮುಖ ಭಾಗವಾಗಿತ್ತು. ಕುದುರೆಗಳು ಹಿಕ್ಸೋಸ್‌‌‌ನಿಂದ ಎರಡನೆ ಮಧ್ಯಕಾಲೀನ ಅವಧಿಯಲ್ಲಿ ಪರಿಚಯಿಸಲ್ಪಟ್ಟವು. ಹೊಸ ರಾಜ್ಯದ ಕಾಲದಿಂದಲೇ ಇದ್ದರೂ ಒಂಟೆಗಳು ಭಾರಹೊರುವ ಪ್ರಾಣಿಯಾಗಿ ಕೊನೆಯ ಅವಧಿಯವರೆಗೆ ಬಳಸಲ್ಪಡಲಿಲ್ಲ. ಕೊನೆಯ ಅವಧಿಯಲ್ಲಿ ಆನೆಗಳನ್ನೂ ಸ್ವಲ್ಪಮಟ್ಟಿಗೆ ಬಳಸಲಾಗುತ್ತಿತ್ತು, ಆದರೆ ಮೇಯುವ ಭೂಪ್ರದೇಶದ ಕೊರತೆಯಿಂದ ಅವುಗಳ ಬಳಕೆಯನ್ನು ಬಹುಮಟ್ಟಿಗೆ ಕೈಬಿಡಲಾಯಿತು, ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ನಾಯಿ, ಬೆಕ್ಕು ಮತ್ತು ಕೋತಿಗಳು ಸಾಮಾನ್ಯವಾಗಿ ಕುಟುಂಬದವರ ಅಚ್ಚುಮೆಚ್ಚಿನ ಪ್ರಾಣಿಗಳಾಗಿದ್ದವು. ಸಿಂಹಗಳಂತಹ ಪರದೇಶದ ಪಳಗಿಸಿದ ಪ್ರಾಣಿಗಳನ್ನು ಆಫ್ರಿಕಾದ ಹೃದಯಭಾಗದಿಂದ ಆಮದುಮಾಡಿಕೊಳ್ಳಲಾಗುತ್ತಿತ್ತು. ಅವುಗಳನ್ನು ರಾಜಮರ್ಯಾದೆಯ ಸಂಕೇತವಾಗಿ ಬಳಸಲಾಗುತ್ತಿತ್ತು. ಈಜಿಪ್ಟಿನವರು ಮಾತ್ರ ಅವರ ಪ್ರಾಣಿಗಳನ್ನು ಅವರ ಮನೆಗಳಲ್ಲಿ ತಮ್ಮೊಂದಿಗೇ ಇಟ್ಟುಕೊಳ್ಳುತ್ತಿದ್ದರು ಎಂಬುದನ್ನು ಹೆರೊಡೋಟಸ್‌ ಪತ್ತೆಹಚ್ಚಿದ್ದಾನೆ. ಪೂರ್ವರಾಜವಂಶೀಯ ಮತ್ತು ಕೊನೆಯ ಅವಧಿಗಳಲ್ಲಿ, ಬೆಕ್ಕು ದೇವತೆ ಬಾಸ್ಟೆಟ್ ಮತ್ತು ಐಬಿಸ್ ದೇವರು ಥೋತ್‌ನಂತೆ ದೇವರನ್ನು ಪ್ರಾಣಿಗಳ ರೂಪದಲ್ಲಿ ಪೂಜಿಸುವುದು ಹೆಚ್ಚು ಪ್ರಸಿದ್ಧವಾಗಿತ್ತು. ಮತಾಚರಣೆಯ ಬಲಿಗಾಗಿ ಈ ಪ್ರಾಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿತ್ತು.

ನೈಸರ್ಗಿಕ ಸಂಪನ್ಮೂಲಗಳು

ಈಜಿಪ್ಟಿನಲ್ಲಿ ನಿರ್ಮಾಣ ಮತ್ತು ಅಲಂಕಾರಿಕ ಶಿಲೆ, ತಾಮ್ರ ಮತ್ತು ಸೀಸದ ಅದಿರು, ಬಂಗಾರ ಮತ್ತು ಅಗ್ಗದ ಶಿಲೆಗಳು ಸಮೃದ್ಧವಾಗಿದ್ದವು. ಈ ನೈಸರ್ಗಿಕ ಸಂಪನ್ಮೂಲಗಳು ಪ್ರಾಚೀನ ಈಜಿಪ್ಟಿನವರಿಗೆ ಸ್ಮಾರಕ ನಿರ್ಮಾಣ, ಶಿಲ್ಪಕಲಾಕೃತಿ ಸೊಗಸಾದ ಆಭರಣ ಮತ್ತು ಆಯುಧಗಳನ್ನು ತಯಾರಿಸಲು ಅವಕಾಶ ಮಾಡಿಕೊಟ್ಟವು. ಶವಸಂರಕ್ಷಣೆ ಮಾಡುವವರು ಮೃತದೇಹದ ರಕ್ಷಣೆಗಾಗಿ ವಾದಿ ನ್ಯಾಟ್ರನ್‌ನಿಂದ ಉಪ್ಪನ್ನು ಬಳಸಿದರು. ಅದು ಪ್ಲಾಸ್ಟರ್ ಮಾಡಲು ಜಿಪ್ಸಮ್ಅನ್ನೂ ದೊರಕಿಸಿಕೊಟ್ಟಿತು. ಅದಿರುಗಳನ್ನು ಹೊಂದಿರುವ ಕಲ್ಲಿನ ರಚನೆಗಳು ದೂರದ ಪೌರಾತ್ಯ ಮರುಳುಗಾಡು ಮತ್ತು ಶಿನೈನಲ್ಲಿನ ನಿರಾಶ್ರಯ ಕಲ್ಲಿನ ನಾಲೆಯಲ್ಲಿ ಕಂಡುಬಂದಿವೆ. ಅಲ್ಲಿ ಕಂಡುಬಂದ ನೈಸರ್ಗಿಕ ಸಂಪನ್ಮೂಲಗಳನ್ನು ಪಡೆಯಲು ಕೇಂದ್ರಾಡಳಿತದ ವಿಶೇಷ ಕಾರ್ಯಾಚರಣೆಯ ಅಗತ್ಯ ಇತ್ತು. ನುಬಿಯಾದಲ್ಲಿ ವಿಸ್ತೃತವಾದ ಚಿನ್ನದ ಗಣಿಗಳಿದ್ದವು. ಚಿನ್ನದ ಗಣಿಯು ಮೊದಲು ಕಂಡುಬಂದುದು ಈ ಪ್ರದೇಶದಲ್ಲೇ. ವಾದಿ ಹಮ್ಮಾಮತ್ ಗ್ರ್ಯಾನೈಟ್, ಗ್ರೇವ್ಯಾಕ್ ಮತ್ತು ಬಂಗಾರದ ಒಂದು ಪ್ರಮುಖ ಮ‌ೂಲವಾಗಿತ್ತು. ಆಯುಧಗಳನ್ನು ಮಾಡಲು ಬಳಸಿದ ಮತ್ತು ಸಂಗ್ರಹಿಸಿದ ಮೊದಲ ಖನಿಜ ಫ್ಲಿಂಟ್. ಫ್ಲಿಂಟ್ ಕೈಕೊಡಲಿಗಳು ನೈಲ್‌ ಕಣಿವೆಯಲ್ಲಿ ವಾಸವಿದ್ದುದರ ಸಾಕ್ಷ್ಯಾಧಾರದ ಆರಂಭಿಕ ಅಂಶವಾಗಿದೆ. ಖನಿಜದ ಸಣ್ಣ ಗುಂಡುಗಳನ್ನು ಮಿತವಾದ ಗಡಸು ಮತ್ತು ಬಾಳಿಕೆ ಬರುವ ಕತ್ತಿ ಮತ್ತು ಬಾಣದ ತುದಿಗಳನ್ನು ಮಾಡಲು ಜಾಗರೂಕತೆಯಿಂದ ಅಲಗುಗಳಾಗಿ ಕತ್ತರಿಸಲಾಗುತ್ತಿತ್ತು. ಇದಕ್ಕೆ ತಾಮ್ರವನ್ನು ಬಳಸಲು ಆರಂಭಿಸಿದ ನಂತರವೂ ಈ ಖನಿಜಗಳ ಬಳಕೆ ಮಾತ್ರ ಹಾಗೆಯೇ ಇತ್ತು.

ಈಜಿಪ್ಟಿನವರು ಗೆಬೆಲ್ ರೋಸಾಸ್‌ನಲ್ಲಿದ್ದ ಸೀಸದ ಅದಿರಿನ ನಿಕ್ಷೇಪ(ಸೀಸದ ಮೂಲವಸ್ತು) ಗಲಿನವನ್ನು ಬಲೆಯ ಮುಳುಗು ಗುಂಡು, ಆಳದ ಗುಂಡು ಮತ್ತು ಸಣ್ಣ ಪ್ರತಿಮೆಗಳನ್ನು ಮಾಡಲು ಬಳಸಿಕೊಂಡರು. ತಾಮ್ರವು ಪ್ರಾಚೀನ ಈಜಿಪ್ಟಿನಲ್ಲಿ ಆಯುಧಗಳನ್ನು ತಯಾರಿಸಲು ಬಳಸುತ್ತಿದ್ದ ಪ್ರಮುಖ ಲೋಹವಾಗಿದೆ. ಈ ಲೋಹವನ್ನು ಶಿನೈಯಲ್ಲಿನ ಗಣಿಯ ಮ್ಯಾಲಕೈಟ್ ಅದಿರನ್ನು ಕುಲುಮೆಯಲ್ಲಿ ಕರಗಿಸಿ ತೆಗೆಯಲಾಗುತ್ತಿತ್ತು. ಕೆಲಸಗಾರರು ಚಿನ್ನದ ಮೆಕ್ಕಲು ನಿಕ್ಷೇಪದ ಕೆಸರಿನಿಂದ ಒರಟು ಗಟ್ಟಿಯನ್ನು ತೊಳೆಯುವ ಮ‌ೂಲಕ ಅಥವಾ ಬಂಗಾರವನ್ನು ಹೊಂದಿದ್ದ ಕ್ವಾರ್ಟ್ಜೈಟ್ಅನ್ನು ಪುಡಿಮಾಡಿ ತೊಳೆಯುವ ಕಾರ್ಮಿಕರನ್ನು ಹೆಚ್ಚಾಗಿ ಬಳಸುವ ಕೈಗಾರಿಕೆಯಿಂದ ಚಿನ್ನವನ್ನು ಪಡೆಯುತ್ತಿದ್ದರು. ಈಜಿಪ್ಟಿನ ಒಳನಾಡಿನಲ್ಲಿ ಕಂಡುಬಂದ ಕಬ್ಬಿಣದ ನಿಕ್ಷೇಪಗಳು ಕೊನೆಯ ಅವಧಿಯಲ್ಲಿ ಬಳಸಲ್ಪಟ್ಟಿದ್ದವು. ಉತ್ತಮ ಗುಣಮಟ್ಟದ ನಿರ್ಮಾಣ ಕಲ್ಲುಗಳು ಈಜಿಪ್ಟಿನಲ್ಲಿ ಹೇರಳವಾಗಿದ್ದವು; ಪ್ರಾಚೀನ ಈಜಿಪ್ಟಿನವರು ನೈಲ್‌ ಕಣಿವೆಯಾದ್ಯಂತ ಸುಣ್ಣದ ಕಲ್ಲುಗಳನ್ನು, ಆಸ್ವಾನ್‌ನಿಂದ ಗ್ರ್ಯಾನೈಟ್ಅನ್ನು ಹಾಗೂ ಪೌರಾತ್ಯ ಮರುಳುಗಾಡಿನ ಕಲ್ಲಿನ ನಾಲೆಗಳಿಂದ ಬಸಾಲ್ಟು ಮತ್ತು ಮರಳುಶಿಲೆಗಳನ್ನು ಅಗೆದು ತೆಗೆದಿದ್ದಾರೆ. ಪಾರ್ಫಿರಿ, ಗ್ರೈವ್ಯಾಕ್, ಅಲಬಾಸ್ಟರ್(ಹಾಲುಗಲ್ಲು) ಮತ್ತು ಕಾರ್ನೆಲಿಯನ್ ಮೊದಲಾದ ಆಲಂಕಾರಿಕ ನಿಕ್ಷೇಪಗಳು ಪೌರಾತ್ಯ ಮರುಳುಗಾಡಿನಲ್ಲಿ ಹೆಚ್ಚಾಗಿ ಹರಡಿಕೊಂಡಿದ್ದವು. ಅವನ್ನು ಪ್ರಥಮ ರಾಜಸಂತತಿಯ ಮೊದಲೇ ಸಂಗ್ರಹಿಸಲಾಗಿತ್ತು. ಟಾಲೆಮಿಯ ಮತ್ತು ರೋಮನ್‌ ಅವಧಿಗಳಲ್ಲಿ ಗಣಿಗಾರರು ವಾದಿ ಸಿಕೈಟ್‌ನ ಪಚ್ಚೆಯ ನಿಕ್ಷೇಪ ಮತ್ತು ವಾದಿ ಎಲ್-ಹುದಿಯ ಕೆನ್ನೇರಳೆ ಬಣ್ಣದ ರತ್ನದ ನಿಕ್ಷೇಪಗಳನ್ನು ಅಗೆದಿದ್ದಾರೆ.

ವ್ಯಾಪಾರ

ಪ್ರಾಚೀನ ಈಜಿಪ್ಟಿನವರು ತಮ್ಮಲ್ಲಿ ದೊರಕದ ವಿರಳ, ವಿದೇಶಿ ಸರಕುಗಳನ್ನು ಪಡೆಯಲು ಪರದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು. ಪೂರ್ವರಾಜವಂಶೀಯ ಅವಧಿಯಲ್ಲಿ ಅವರು ಸುಗಂಧದ್ರವ್ಯ ಮತ್ತು ಚಿನ್ನವನ್ನು ಪಡೆಯಲು ನುಬಿಯಾದೊಂದಿಗೆ ವ್ಯವಹಾರ ಆರಂಭಿಸಿದರು. ಅವರು ಪ್ಯಾಲೆಸ್ಟೈನ್‌‌ನೊಂದಿಗೂ ವ್ಯಾಪಾರ ಸಂಬಂಧ ಬೆಳೆಸಿದರು. ಪ್ಯಾಲೆಸ್ಟೈನ್‌ ಶೈಲಿಯ ತೈಲದ ಹೂಜಿಗಳು ಮೊದಲ ರಾಜಸಂತತಿಯ ಫೇರೋಗಳ ಸಮಾಧಿಗಳಲ್ಲಿ ಕಂಡುಬಂದಿದುದರಿಂದ ಇದು ರುಜುವಾತಾಗಿದೆ. ದಕ್ಷಿಣದ ಕೇನನ್‌ನಲ್ಲಿದ್ದ ಈಜಿಪ್ಟಿನ ವಸಾಹತುವೊಂದು ಪ್ರಥಮ ರಾಜಸಂತತಿಯ ಸ್ವಲ್ಪ ಮೊದಲಿನ ಕಾಲನಿರ್ದೇಶನವನ್ನು ಸೂಚಿಸುತ್ತದೆ. ನಾರ್ಮರ್‌ ಕೇನನ್‌‌ನಲ್ಲಿ ತಯಾರಿಸಿ ಈಜಿಪ್ಟಿಗೆ ಮರಳಿ ಕೊಂಡೊಯ್ದ ಈಜಿಪ್ಟಿನ ಮಣ್ಣಿನ ಪಾತ್ರೆಯನ್ನು ಹೊಂದಿದ್ದನು.

ಎರಡನೆ ರಾಜವಂಶದ ಅವಧಿಯಲ್ಲಿ ಪ್ರಾಚೀನ ಈಜಿಪ್ಟಿನವರು ಬೈಬ್ಲೋಸ್‌ನೊಂದಿಗೆ ವ್ಯವಹಾರ ನಡೆಸಿದರು. ಇದರಿಂದಾಗಿ ಅವರು ಈಜಿಪ್ಟಿನಲ್ಲಿಲ್ಲದ ಉತ್ತಮ ಗುಣಮಟ್ಟದ ಮರಗಳನ್ನು ಪಡೆದರು. ಐದನೆ ರಾಜವಂಶದಲ್ಲಿ ಪುಂಟ್‌ನೊಂದಿಗಿನ ವ್ಯಾಪಾರ ಸಂಬಂಧವು ಬಂಗಾರ, ಪರಿಮಳಯುಕ್ತ ರಾಳ, ಎಬನಿ, ದಂತ ಹಾಗೂ ಕೋತಿ ಮತ್ತು ಬಬೂನುಗಳಂತಹ ಕಾಡು ಪ್ರಾಣಿಗಳನ್ನು ಒದಗಿಸಿತು. ಈಜಿಪ್ಟ್‌ ತವರದ ಮ‌ೂಲಭೂತ ಪರಿಮಾಣಗಳಿಗಾಗಿ ಮತ್ತು ತಾಮ್ರದ ಹೆಚ್ಚುವರಿ ಪೂರೈಕೆಗಾಗಿ ಅನಟೋಲಿಯಾವನ್ನು ಅವಲಂಬಿಸಿತ್ತು. ಈ ಎರಡೂ ಲೋಹಗಳು ಕಂಚಿನ ತಯಾರಿಕೆಗೆ ಅವಶ್ಯಕವಾದವುಗಳು. ಪ್ರಾಚೀನ ಈಜಿಪ್ಟಿನವರು ಅಫ್ಘಾನಿಸ್ತಾನದಿಂದ ಆಮದುಮಾಡಿಕೊಳ್ಳುತ್ತಿದ್ದ ನೀಲಿ ಬಣ್ಣದ ಶಿಲೆ ವೈಡೂರ್ಯಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ಈಜಿಪ್ಟಿನ ಮೆಡಿಟರೇನಿಯನ್ ವ್ಯಾಪಾರ ಪಾಲುದಾರರು ಗ್ರೀಸ್ ಮತ್ತು ಕ್ರೆಟೆಯೊಂದಿಗೂ ವ್ಯಾಪಾರ ಸಂಪರ್ಕ ಹೊಂದಿದ್ದರು. ಅಲ್ಲಿಂದ ಅವರು ಹೆಚ್ಚಾಗಿ ಆಲಿವ್ ಎಣ್ಣೆಯನ್ನು ಪಡೆಯುತ್ತಿದ್ದರು. ದುಬಾರಿ ಬೆಲೆಯ ಆಮದುಗಳ ಮತ್ತು ಕಚ್ಚಾ ಪದಾರ್ಥಗಳ ವಿನಿಮಯದೊಂದಿಗೆ ಈಜಿಪ್ಟ್‌ ಮುಖ್ಯವಾಗಿ ಧಾನ್ಯ, ಬಂಗಾರ, ನಾರುಬಟ್ಟೆ ಮತ್ತು ಪಪೈರಸ್‌ಗಳು ಮಾತ್ರವಲ್ಲದೆ ಗಾಜು ಮತ್ತು ಶಿಲೆಗಳ ವಸ್ತುಗಳನ್ನು ಒಳಗೊಂಡಂತೆ ಸಿದ್ದಪಡಿಸಿದ ಪದಾರ್ಥಗಳನ್ನೂ ರಫ್ತುಮಾಡಿದೆ.

ಭಾಷೆ

ಐತಿಹಾಸಿಕ ಬೆಳವಣಿಗೆ

r
Z1
nkmmt
O49
r n kmt
'Egyptian language'
in hieroglyphs

ಈಜಿಪ್ಟ್‌ ಭಾಷೆಯು ಉತ್ತರ ಆಫ್ರೋ-ಏಷ್ಯನ್ ಭಾಷೆಯಾಗಿದ್ದು ಬರ್ಬರ್ ಮತ್ತು ಸೆಮಿಟಿಕ್‌ ಭಾಷೆಗಳೊಂದಿಗೆ ಹತ್ತಿರದ ಸಂಬಂಧ ಹೊಂದಿದೆ. ಇದು ಬೇರೆ ಭಾಷೆಗಳಿಗಿಂತ ದೀರ್ಘಕಾಲದ ಇತಿಹಾಸ ಹೊಂದಿದೆ. ಇದನ್ನು ಕ್ರಿ.ಪೂ. 3200ರಿಂದ ಮಧ್ಯಮ ಅವಧಿಯವರೆಗೆ ಬರೆಯಲು ಬಳಸುತ್ತಿದ್ದು, ನಂತರ ಮಾತನಾಡುವ ಭಾಷೆಯಾಗಿ ಬಳಸಿದರು. ಪ್ರಾಚೀನ ಈಜಿಪ್ಟಿನ ಹಂತಗಳೆಂದರೆ - ಪುರಾತನ ಈಜಿಪ್ಟ್‌, ಮಧ್ಯಕಾಲೀನ ಈಜಿಪ್ಟ್‌ (ಸಾಂಪ್ರದಾಯಿಕ ಈಜಿಪ್ಟ್‌), ಕೊನೆಯ ಈಜಿಪ್ಟ್‌, ಡೆಮೋಟಿಕ್ ಮತ್ತು ಕಾಪ್ಟಿಕ್ ಭಾಷೆಯ ಕಾಲ. ಈಜಿಪ್ಟಿನ ಬರವಣಿಗೆ ಶೈಲಿಯು ಕಾಪ್ಟಿಕ್ ಭಾಷೆಗಿಂತ ಹೆಚ್ಚು ಭಿನ್ನವಾಗಿರಲಿಲ್ಲ. ಆದರೆ ಇದನ್ನು ಬಹುಶಃ ಮೆಂಫಿಸ್‌‌ನಲ್ಲಿ ಮತ್ತು ಆನಂತರ ಥೆಬೆಸ್‌ನಲ್ಲಿ ಮಾತ್ರ ಪ್ರಾಂತಭಾಷೆಯಾಗಿ ಮಾತನಾಡುತ್ತಿದ್ದರು.

ಪ್ರಾಚೀನ ಈಜಿಪ್ಟಿನವರದು ಅನುಕರಣಾ ಪದಪ್ರಯೋಗದ ಭಾಷೆಯಾಗಿತ್ತು. ಆದರೆ ನಂತರ ಹೆಚ್ಚು ವಿಶ್ಲೇಷಕ ಭಾಷೆಯಾಯಿತು. ಕೊನೆಯ ಈಜಿಪ್ಟಿನವರು ಪೂರ್ವಪ್ರತ್ಯಯ ನಿರ್ದೇಶಿತ ಮತ್ತು ಅನಿರ್ದೇಶಿತ ಗುಣವಾಚಕಗಳನ್ನು ಅಭಿವೃದ್ಧಿಗೊಳಿಸಿದರು. ಅದು ಹಿಂದೆ ಇದ್ದ ಉತ್ತರ-ಪ್ರತ್ಯಯಗಳನ್ನು ಬದಲಾಯಿಸಿತು. ಹಿಂದೆ ಕ್ರಿಯಾಪದ-ಕರ್ತೃಪದ-ಕರ್ಮಪದ ಕ್ರಮದಲ್ಲಿ ಬಳಸುತ್ತಿದ್ದ ಪದ-ಕ್ರಮವು ಕರ್ತೃಪದ-ಕ್ರಿಯಾಪದ-ಕರ್ಮಪದ ಆಗಿ ಪರಿವರ್ತನೆಗೊಂಡಿತು. ಈಜಿಪ್ಟಿನ ಚಿತ್ರಲಿಪಿಯಲ್ಲಿ ಬರೆದ, ಹೈರಾಟಿಕ್(ಕಲಾಗಾರಿಕೆಯನ್ನು ಸೂಚಿಸುವ ಲಿಪಿ)‌ ಮತ್ತು ಡೆಮೋಟಿಕ್(ಪ್ರಾದೇಶಿಕತೆಯನ್ನು ತೋರಿಸುವ ಲಿಪಿ)‍‌‌ ಲಿಪಿಗಳು, ಅಂತಿಮವಾಗಿ ಕಾಪ್ಟಿಕ್‌ ವರ್ಣಮಾಲೆಯಿಂದ ಸ್ಥಾನಪಲ್ಲಟಗೊಂಡವು. ಕಾಪ್ಟಿಕ್‌ಅನ್ನು ಈಜಿಪ್ಟಿನ ಸಾಂಪ್ರದಾಯಿಕ ಚರ್ಚಿನ ಸಾರ್ವಜನಿಕ ಪ್ರಾರ್ಥನಾ ವಿಧಿಯಲ್ಲಿ ಇನ್ನೂ ಬಳಸುತ್ತಿದ್ದಾರೆ. ಇದರ ಕುರುಹುಗಳು ಆಧುನಿಕ ಈಜಿಪ್ಟಿನ ಅರಬ್ಬಿ ಭಾಷೆಯಲ್ಲಿ ಕಂಡುಬಂದಿವೆ.

ಧ್ವನಿಗಳು ಮತ್ತು ವ್ಯಾಕರಣಗಳು

ಇತರ ಆಫ್ರೊ-ಏಷ್ಯನ್ ಭಾಷೆಗಳಂತೆ ಪ್ರಾಚೀನ ಈಜಿಪ್ಟ್‌ ಸಹ 25 ವ್ಯಂಜನಗಳನ್ನು ಹೊಂದಿದೆ. ಇವುಗಳೆಂದರೆ - ಹೃಸ್ವ(ಗಂಟಲ ಕುಳಿಯ) ಮತ್ತು ದೀರ್ಘ(ಒತ್ತಿ ಹೇಳುವ) ವ್ಯಂಜನಗಳು, ಘೋಷೋಚ್ಚಾರದ ಮತ್ತು ಅಘೋಷ ವಿರಾಮಗಳು, ಅಘೋಷ ಘೃಷ್ಟ(ವ್ಯಂಜನಾಕ್ಷರ)ಗಳು ಹಾಗೂ ಘೋಷೋಚ್ಚಾರದ ಮತ್ತು ಅಘೋಷ ಘೃಷ್ಟಧ್ವನಿಗಳು. ಇದು ಮ‌ೂರು ದೀರ್ಘ ಮತ್ತು ಮ‌ೂರು ಹೃಸ್ವ ಸ್ವರಗಳನ್ನು ಹೊಂದಿದೆ. ಇವು ಕೊನೆಯ ಈಜಿಪ್ಟಿನಲ್ಲಿ ಒಂಭತ್ತಾಗಿ ಹೆಚ್ಚಾಗಿವೆ. ಸೆಮಿಟಿಕ್‌ ಮತ್ತು ಬರ್ಬರ್‌ನಂತೆ ಈಜಿಪ್ಟಿನ ಮ‌ೂಲ ಪದವು ವ್ಯಂಜನಗಳ ಮತ್ತು ಅರೆವ್ಯಂಜನಗಳ ಮ‌ೂರಕ್ಷರದ ಅಥವಾ ಎರಡಕ್ಷರದ ಮ‌ೂಲವಾಗಿವೆ. ಪದಗಳ ರಚನೆಗೆ ಉತ್ತರ ಪ್ರತ್ಯಯಗಳನ್ನು ಸೇರಿಸಲಾಗುತ್ತಿತ್ತು. ಕ್ರಿಯಾಪದಗಳ ವರ್ಗೀಕರಣವು ಪುರುಷ(ಉತ್ತಮ, ಮಧ್ಯಮ, ಪ್ರಥಮ ಪುರುಷ) ಪ್ರಯೋಗದೊಂದಿಗೆ ಪರಸ್ಪರ ಸಂಬಂಧ ಹೊಂದಿತ್ತು. ಉದಾಹರಣೆಗಾಗಿ, S--M ಎಂಬ ಮೂರು ವ್ಯಂಜನಗಳ ರಚನೆಯು 'hear' ಪದದ ಶಬ್ಧಾರ್ಥವಾಗಿದೆ; ಇದರ ಮ‌ೂಲ ಆಖ್ಯಾತ ಪ್ರತ್ಯಯವೆಂದರೆ sm=f 'he hears'. ಕರ್ತೃಪದವು ನಾಮಪದವಾಗಿದ್ದರೆ, ಉತ್ತರ ಪ್ರತ್ಯಯಗಳು ಕ್ರಿಯಾಪದದೊಂದಿಗೆ ಸೇರಿಕೊಳ್ಳುವುದಿಲ್ಲ: sḏm ḥmt 'the woman hears'.

ಗುಣವಾಚಕಗಳನ್ನು ನಾಮಪದಗಳಿಂದ ಈಜಿಪ್ಟ್ ಶಾಸ್ತ್ರಜ್ಞರು ನಿಸ್ಬೇಶನ್ ಎಂದು ಕರೆಯುವ ಕ್ರಿಯೆಯ ಮ‌ೂಲಕ ಪಡೆದುಕೊಳ್ಳಲಾಗಿದೆ, ಏಕೆಂದರೆ ಇದು ಅರಬ್ಬಿ ಭಾಷೆಯೊಂದಿಗೆ ಹೋಲಿಕೆ ಹೊಂದಿದೆ. ಕ್ರಿಯಾಪದ ಮತ್ತು ಗುಣವಾಚಕದ ವಾಕ್ಯಗಳಲ್ಲಿ ಆಖ್ಯಾತ(ವಿಶೇಷಣ)-ಕರ್ತೃಪದ ಹಾಗೂ ನಾಮಪದ ಮತ್ತು ಕ್ರಿಯಾವಿಶೇಷಣದ ವಾಕ್ಯಗಳಲ್ಲಿ ಕರ್ತೃಪದ-ಆಖ್ಯಾತ(ವಿಶೇಷಣ) ರೀತಿಯಲ್ಲಿ ಪದ-ಕ್ರಮವಿದೆ. ಕರ್ತೃಪದವು ದೀರ್ಘವಾಗಿದ್ದರೆ ಅದು ವಾಕ್ಯಗಳ ಆರಂಭಕ್ಕೆ ಹೋಗಬಹುದು. ಅಲ್ಲದೇ ಸಂಕ್ಷಿಪ್ತ ಸರ್ವನಾಮದೊಂದಿಗೆ ವಾಕ್ಯ ಮುಂದುವರಿಯಬಹುದು. ಕ್ರಿಯಾಪದ ಮತ್ತು ನಾಮಪದಗಳನ್ನು n ಅವ್ಯಯದಿಂದ ನಕಾರಾತ್ಮಕಗೊಳಿಸಬಹುದು. ಆದರೆ ಕ್ರಿಯಾವಿಶೇಷಣದ ಮತ್ತು ಗುಣವಾಚಕದ ವಾಕ್ಯಗಳಿಗೆ nn ಅನ್ನು ಬಳಸಬೇಕಾಗುತ್ತದೆ. ಕಡೆಯ ಅಥವಾ ಕಡೆಯದರ ಹಿಂದಿನ ಅಕ್ಷರಕ್ಕೆ ಹೆಚ್ಚು, ತೆರೆದು (CV) ಅಥವಾ ಮುಚ್ಚಿ (CVC), ಒತ್ತು ಕೊಡುತ್ತಿದ್ದರು.

ಬರವಣಿಗೆ ಶೈಲಿ

ಪ್ರಾಚೀನ ಈಜಿಪ್ಟ್‌ 
ರೊಸೆಟ್ಟಾ ಸ್ಟೋನ್‌ (ಕ್ರಿ.ಪೂ. 196), ಇದು ಭಾಷಾತಜ್ಞರಿಗೆ ಚಿತ್ರಲಿಪಿಗಳನ್ನು ಅರ್ಥಮಾಡಿಕೊಳ್ಳುವ ಕ್ರಿಯೆಯನ್ನು ಆರಂಭಿಸುವಂತೆ ಮಾಡಿತು.

ಚಿತ್ರಲಿಪಿ ಬರವಣಿಗೆ ಶೈಲಿಯು ಕ್ರಿ.ಪೂ. 3200ರಷ್ಟು ಹಿಂದಿನದು ಹಾಗೂ ಇದು 500 ಚಿಹ್ನೆಗಳನ್ನು ಹೊಂದಿದೆ. ಒಂದು ಚಿತ್ರಲಿಪಿಯು ಒಂದು ಪದ, ಧ್ವನಿ ಅಥವಾ ನಿಶ್ಯಬ್ಧ ನಿರ್ಣಾಯಕವನ್ನು ನಿರೂಪಿಸುತ್ತದೆ; ಒಂದೇ ಚಿಹ್ನೆಯು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣವನ್ನು ಸೂಚಿಸಬಹುದು. ಚಿತ್ರಲಿಪಿಯು ಒಂದು ಸಾಂಪ್ರದಾಯಿಕ ಲಿಪಿ. ಇದನ್ನು ಕಲ್ಲಿನ ಸ್ಮಾರಕಗಳ ಮೇಲೆ ಮತ್ತು ಸಮಾಧಿಗಳಲ್ಲಿ ಬಳಸುತ್ತಿದ್ದರು. ವ್ಯಕ್ತಿಯೊಬ್ಬನ ಸಾಧನೆಗಳೆಲ್ಲವನ್ನೂ ಸವಿವರವಾಗಿ ಕೆತ್ತಲಾಗುತ್ತಿತ್ತು. ದಿನಂಪ್ರತಿಯ ಬರವಣಿಗೆಯಲ್ಲಿ ಬರಹಗಾರರು ಹೈರಾಟಿಕ್ ಎಂಬ ಬರವಣಿಗೆಯ ಕೈಬರಹದಂತಹ ರೂಪವೊಂದನ್ನು ಬಳಸಿದರು. ಇದು ವೇಗವುಳ್ಳದ್ದು ಮತ್ತು ಸುಲಭವಾಗಿತ್ತು. ಸಾಂಪ್ರದಾಯಿಕ ಚಿತ್ರಲಿಪಿಗಳನ್ನು ಅಡ್ಡ ಅಥವಾ ಉದ್ದ ಸಾಲುಗಳಲ್ಲಿ ಎರಡು ದಿಕ್ಕಿನಲ್ಲೂ ಓದಬಹುದು (ವಿಶಿಷ್ಟವಾಗಿ ಬಲದಿಂದ ಎಡಕ್ಕೆ ಬರೆದಿದ್ದರೂ). ಅದೇ ಹೈರಾಟಿಕ್‌ಅನ್ನು ಯಾವಾಗಲೂ ಬಲದಿಂದ ಎಡಕ್ಕೆ ಸಾಮಾನ್ಯವಾಗಿ ಸಮಾಂತರ ಅಡ್ಡ ಸಾಲಿನಲ್ಲಿ ಬರೆಯಲಾಗುತ್ತಿತ್ತು. ಬರವಣಿಗೆಯ ಹೊಸ ರೂಪ ಡೆಮೋಟಿಕ್‍‌‌ ಹೆಚ್ಚು ಪ್ರಾಧಾನ್ಯತೆ ಪಡೆದುಕೊಂಡ ಬರವಣಿಗೆ ಶೈಲಿಯಾಯಿತು. ಸಾಂಪ್ರದಾಯಿಕ ಚಿತ್ರಲಿಪಿಗಳೊಂದಿಗೆ ಈ ಶೈಲಿಯ ಬರವಣಿಗೆಯು ರೊಸೆಟ್ಟಾ ಸ್ಟೋನ್‌‌ನಲ್ಲಿ ಗ್ರೀಕ್‌ ಲಿಪಿಯೊಂದಿಗೆ ಜೊತೆಗೂಡಿದೆ.[ಸೂಕ್ತ ಉಲ್ಲೇಖನ ಬೇಕು]

ಸುಮಾರು ಕ್ರಿ.ಶ. 1ನೆ ಶತಮಾನದಲ್ಲಿ ಡೆಮೋಟಿಕ್‍‌‌ ಲಿಪಿಯಲ್ಲಿ ಕಾಪ್ಟಿಕ್‌ ವರ್ಣಮಾಲೆಯನ್ನು ಬಳಸಲು ಆರಂಭಿಸಿದರು. ಕಾಪ್ಟಿಕ್‌ ಕೆಲವು ಡೆಮೋಟಿಕ್‍‌‌ ಚಿಹ್ನೆಗಳನ್ನು ಸೇರಿಸಲ್ಪಟ್ಟ ಒಂದು ಮಾರ್ಪಾಡಿತ ಗ್ರೀಕ್‌ ವರ್ಣಮಾಲೆಯಾಗಿದೆ. ಸಾಂಪ್ರದಾಯಿಕ ಚಿತ್ರಲಿಪಿಗಳನ್ನು ಕ್ರಿ.ಶ. 4ನೆ ಶತಮಾನದವರೆಗೆ ಶಿಷ್ಟಾಚಾರದ ಶುಭ-ಅಶುಭ ಆಚರಣೆಯಲ್ಲಿ ಬಳಸುತ್ತಿದ್ದರೂ, ಕೊನೆಗೆ ಕೆಲವು ಮಂದಿ ಧಾರ್ಮಿಕ ಗುರುಗಳಿಗೆ ಮಾತ್ರ ಅದನ್ನು ಓದಲು ಸಾಧ್ಯವಾಯಿತು. ಸಾಂಪ್ರದಾಯಿಕ ಧಾರ್ಮಿಕ ಮೂಲಭೂತ ಸಂಘಟನೆಗಳು ಒಡೆದು ಚೆದುರಿಹೋದ ನಂತರ ಚಿತ್ರಲಿಪಿ ಬರವಣಿಗೆಯ ಅರಿವು ಹೆಚ್ಚುಕಡಿಮೆ ಕಳೆದುಹೋಯಿತು. ಈ ಚಿತ್ರಲಿಪಿಗಳ ಅರ್ಥ ಗ್ರಹಿಸುವ ಪ್ರಯತ್ನವು ಈಜಿಪ್ಟಿನ ಬೈಜಂಟೈನ್ ಮತ್ತು ಇಸ್ಲಾಮಿಕ್ ಅವಧಿಗಳಲ್ಲಿಯೇ ನಡೆಯಿತು. ಆದರೆ 1822ರಲ್ಲಿ ರೊಸೆಟ್ಟಾ ಸ್ಟೋನ್‌ ಪತ್ತೆ ಹಚ್ಚಿದ ನಂತರ ಮತ್ತು ಥೋಮಸ್ ಯಂಗ್ ಮತ್ತು ಜೀನ್-ಫ್ರ್ಯಾಂಕೋಯಿಸ್ ಚಾಂಪೋಲಿಯನ್ ಸಂಶೋಧನೆ ಮಾಡಿದ ನಂತರವೇ ಈ ಚಿತ್ರಲಿಪಿಗಳ ಗೂಡಾರ್ಥವನ್ನು ಸಂಪೂರ್ಣವಾಗಿ ಭೇದಿಸಲಾಯಿತು.

ಸಾಹಿತ್ಯ

ಪ್ರಾಚೀನ ಈಜಿಪ್ಟ್‌ 
ಹೈರಾಟಿಕ್‌ನಲ್ಲಿ ಬರೆದ ಅಂಗರಚನಾ ಶಾಸ್ತ್ರ ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ವಿವರಿಸುವ ಎಡ್ವಿನ್ ಸ್ಮಿತ್ ಚಿಕಿತ್ಸಾತ್ಮಕ ಪಪೈರಸ್‌ (ಕ್ರಿ.ಪೂ. 16ನೇ ಶತಮಾನ).

ಮೊದಲು ರಾಜವಂಶದ ಸಮಾಧಿಗಳ ಮೇಲೆ ರಾಜನಿಗೆ ಸಂಬಂಧಿಸಿದ ತಲೆಬರಹಗಳಲ್ಲಿ ಮತ್ತು ವಿವರಪಟ್ಟಿಗಳಲ್ಲಿ ಬರವಣಿಗೆ ಕಾಣಿಸಿಕೊಂಡಿತು. ಇದನ್ನು ಮೊದಲು ಬರಹಗಾರರು ಮಾಡುತ್ತಿದ್ದರು. ಇವರು ಪರ್ ಆಂಖ್ ಸಂಸ್ಥೆ ಅಥವಾ ಹೌಸ್ ಆಫ್ ಲೈಫ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹೌಸ್ ಆಫ್ ಲೈಫ್ ಕಛೇರಿ, ಗ್ರಂಥಾಲಯ(ಹೌಸ್ ಆಫ್ ಬುಕ್ ಎಂದು ಕರೆಯಲಾಗುತ್ತಿತ್ತು), ಪ್ರಯೋಗಾಲಯ ಮತ್ತು ವೀಕ್ಷಣಾಲಯಗಳನ್ನು ಒಳಗೊಂಡಿತ್ತು. ಪ್ರಾಚೀನ ಈಜಿಪ್ಟ್‌ ಸಾಹಿತ್ಯದ ಅತ್ಯಂತ ಹೆಸರುವಾಸಿಯಾದ ಅಂಶಗಳೆಂದರೆ - ಪಿರಮಿಡ್‌ ಮತ್ತು ಕಾಫಿನ್ ಟೆಕ್ಸ್ಟ್(ಹೆಣದ ಪೆಟ್ಟಿಗೆಯ ಮೇಲೆ ಬರೆದ ವಾಕ್ಯಗಳು). ಇವುಗಳನ್ನು ಸಾಂಪ್ರದಾಯಿಕ ಈಜಿಪ್ಟಿನ ಕಾಲದಲ್ಲಿ ಬರೆಯಲಾಗಿತ್ತು. ಅಲ್ಲದೇ ಇವು ಬರೆಯುವ ಭಾಷೆಯಾಗಿ ಸುಮಾರು ಕ್ರಿ.ಪೂ. 1300ರವರೆಗೆ ಮುಂದುವರೆದವು. ಕೊನೆಯ ಈಜಿಪ್ಟಿನವರ ಕಾಲದಿಂದಲೂ ಹೊಸ ರಾಜ್ಯದ ಕಾಲದವರೆಗೆ ಪ್ರಚಾರಪಡೆದರು. ಇವರ ಬಗ್ಗೆ ರ‌್ಯಾಮೆಸ್ಸೈಡ್‌ ಆಡಳಿತದ ಪ್ರೇಮ ಕವಿತೆ ಮತ್ತು ಕಥೆಗಳಂತಹ ದಾಖಲೆಗಳಲ್ಲಿ ಮಾತ್ರವಲ್ಲದೆ ಡೆಮೋಟಿಕ್‍‌‌ ಮತ್ತು ಕಾಪ್ಟಿಕ್‌ ಉಲ್ಲೇಖಗಳಲ್ಲಿ ನಿರೂಪಿಸಲ್ಪಟ್ಟಿದೆ. ಈ ಅವಧಿಯಲ್ಲಿ ಬರವಣಿಗೆಯ ರೂಢಿಯು ಹಾರ್ಖುಫ್‌ ಮತ್ತು ವೆನಿಯಂತಹ ಸಮಾಧಿಗಳಲ್ಲಿ ಸ್ವಚರಿತ್ರೆ ಬರೆಯುವುದರಲ್ಲಿ ತೊಡಗಿತು. ಸೆಬಾಯ್ತ್ (ಸೂಚನೆಗಳು ) ಎಂದು ಕರೆಯುವ ಈ ಶೈಲಿಯು ಪ್ರಸಿದ್ಧ ವ್ಯಕ್ತಿಗಳ ಸಲಹೆಗಳನ್ನು ಮತ್ತು ಬೋಧನೆಗಳನ್ನು ತಿಳಿಸುವಲ್ಲಿ ಅಭಿವೃದ್ಧಿ ಹೊಂದಿತು; ಐಪುವರ್ ಪಪೈರಸ್‌ ಎಂಬ ನೈಸರ್ಗಿಕ ವಿಪತ್ತು ಮತ್ತು ಸಾಮಾಜಿಕ ಕ್ರಾಂತಿಯನ್ನು ವಿವರಿಸುವ ಕೃತಿಯು ಇದಕ್ಕೆ ಪ್ರಸಿದ್ಧ ಉದಾಹರಣೆಯಾಗಿದೆ.

ಮಧ್ಯ ಈಜಿಪ್ಟ್ ಅವಧಿಯಲ್ಲಿ ಬರೆದ ಸಿನುಹೆಯ ಕಥೆಯು ಈಜಿಪ್ಟ್‌ ಸಾಹಿತ್ಯದ ಶ್ರೇಷ್ಠ ಆಧಾರಕೃತಿಯಾಗಿದೆ. ಅಲ್ಲದೆ ಆ ಕಾಲದಲ್ಲಿ ಬರೆದ ವೆಸ್ಟ್‌ಕಾರ್ ಪಪೈರಸ್‌. ಇದು ಖುಫುವಿಗೆ ಅವನ ಮಕ್ಕಳು ಹೇಳಿದ ಪಾದ್ರಿಗಳ ಅದ್ಭುತ ದೃಷ್ಟಾಂತಗಳಿಗೆ ಸಂಬಂಧಿಸಿದ ಕಥೆಗಳ ಸರಣಿಯಾಗಿದೆ. ಅಮೆನೆಮೋಪ್‌ನ ಭೋದನೆಗಳನ್ನು ಪೌರಾತ್ಯ ಸಾಹಿತ್ಯದಲ್ಲೇ ಅತ್ಯುತ್ತಮವಾದುದು ಎಂದು ಪರಿಗಣಿಸಲಾಗಿದೆ. ಹೊಸ ರಾಜ್ಯದ ಕೊನೆಯಲ್ಲಿ, ಸ್ಟೋರಿ ಆಫ್ ವೆನಾಮುನ್ ಮತ್ತು ಇನ್‌ಸ್ಟ್ರಕ್ಷನ್ ಆಫ್ ಆನಿ ಮೊದಲಾದ ಪ್ರಸಿದ್ಧ ಅಂಶಗಳನ್ನು ಬರೆಯಲು ದೇಶೀಯ ಭಾಷೆಯನ್ನು ಹೆಚ್ಚಾಗಿ ಬಳಸಿಕೊಳ್ಳಲಾಯಿತು. ಸ್ಟೋರಿ ಆಫ್ ವೆನಾಮುನ್, ಸೀಡರ್ ಮರವನ್ನು ಖರೀದಿಸಲು ಲೆಬನಾನ್‌ಗೆ ಹೋಗುತ್ತಿದ್ದ ದಾರಿಯಲ್ಲಿ ದರೋಡೆಗೊಳಗಾದ ಪ್ರಖ್ಯಾತ ವ್ಯಕ್ತಿಯ ಬಗ್ಗೆ ಮತ್ತು ಅವನು ಈಜಿಪ್ಟಿಗೆ ಹಿಂದಿರುಗಲು ಪಟ್ಟ ಪ್ರಯಾಸದ ಬಗ್ಗೆ ಹೇಳುತ್ತದೆ. ಸುಮಾರು ಕ್ರಿ.ಪೂ. 700ರ ಪ್ರಸಿದ್ಧ ಇನ್‌ಸ್ಟ್ರಕ್ಷನ್ಸ್ ಆಫ್ ಆಂಕ್‌ಶೆಶೋಂಕಿಯಂತಹ ನಿರೂಪಿತ ಕಥೆ ಮತ್ತು ಸೂಚನೆಗಳು ಮಾತ್ರವಲ್ಲದೆ ವೈಯಕ್ತಿಕ ಮತ್ತು ವ್ಯಾವಹಾರಿಕ ದಾಖಲೆಗಳನ್ನು ಈಜಿಪ್ಟಿನ ಡೆಮೋಟಿಕ್‍‌‌ ಲಿಪಿ ಮತ್ತು ಹಂತದಲ್ಲಿ ಬರೆಯಲಾಗಿತ್ತು. ಗ್ರೇಕೊ-ರೋಮನ್‌ ಅವಧಿಯಲ್ಲಿ ಡೆಮೋಟಿಕ್‍‌‌‌ನಲ್ಲಿ ಬರೆದ ಅನೇಕ ಕಥೆಗಳನ್ನು ಹಿಂದಿನ ಐತಿಹಾಸಿಕ ಯುಗಗಳಲ್ಲಿ ಅಂದರೆ ರಾಮೆಸ್ಸೆಸ್‌ IIರಂತಹ ಶ್ರೇಷ್ಠ ಫೇರೋಗಳು ಆಳುತ್ತಿದ್ದಾಗ ಈಜಿಪ್ಟ್‌ ಸ್ವತಂತ್ರ ದೇಶವಾಗಿದ್ದ ಸಂದರ್ಭದಲ್ಲಿ ಯೋಜಿಸಲಾಗಿತ್ತು.

ಸಂಸ್ಕೃತಿ

ದೈನಂದಿನ ಜೀವನ

ಪ್ರಾಚೀನ ಈಜಿಪ್ಟ್‌ 
ಪ್ರಾಚೀನ ಈಜಿಪ್ಟ್‌ ನ ಕೆಳವರ್ಗದ ಜನರನ್ನು ತೋರಿಸುವ ಪ್ರತಿಮೆಗಳು.
ಪ್ರಾಚೀನ ಈಜಿಪ್ಟ್‌ 
ಪ್ರಾಚೀನ ಈಜಿಪ್ಟಿನವರು ಹಬ್ಬದ ದಿನಗಳಲ್ಲಿ ಸಂಗೀತ ಮತ್ತು ನೃತ್ಯ ಮಾಡುವುದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆನಂದಿಸುತ್ತಿದ್ದರು.

ಹೆಚ್ಚಿನ ಪ್ರಾಚೀನ ಈಜಿಪ್ಟಿನವರು ಭೂ ಆಸ್ತಿ ಹೊಂದಿದ್ದ ಬೇಸಾಯಗಾರರಾಗಿದ್ದರು. ಅವರ ನಿವಾಸಗಳು ಕುಟುಂಬದ ನಂತರದ ಸದಸ್ಯರಿಗೇ ಸೀಮಿತವಾಗಿತ್ತು. ನಿವಾಸಗಳನ್ನು ದಿನದ ಬಿಸಿಯಲ್ಲಿ ತಣ್ಣಗೆ ಇರಿಸಲು ಮಣ್ಣಿನ-ಇಟ್ಟಿಗೆಗಳಿಂದ ಕಟ್ಟುತ್ತಿದ್ದರು. ಪ್ರತಿಯೊಂದು ಮನೆಯ‌ೂ ತೆರೆದ ಮಾಡಿನ ಒಂದು ಅಡಿಗೆ ಮನೆಯನ್ನು ಹೊಂದಿತ್ತು. ಇದರಲ್ಲಿ ಒಂದು ಹಿಟ್ಟು ಬೀಸುವ ಬೀಸುಕಲ್ಲು ಮತ್ತು ಬ್ರೆಡ್ ಸುಡುವ ಒಂದು ಸಣ್ಣ ಒಲೆಯಿದ್ದವು. ಗೋಡೆಗಳಿಗೆ ಬಿಳಿ ಬಣ್ಣ ಬಳಿಯಲಾಗಿತ್ತು. ಅಲ್ಲದೇ ಅವನ್ನು ಬಣ್ಣ ಬಳಿದ ನಾರು ಬಟ್ಟೆಯ ಗೋಡೆಯ ನೆರಿಗೆ ತೆರೆಗಳಿಂದ ಮುಚ್ಚಲಾಗಿತ್ತು. ನೆಲಕ್ಕೆ ಜೊಂಡು ಹುಲ್ಲಿನ ಹಾಸುಗಳನ್ನು ಹಾಸುತ್ತಿದ್ದರು. ಮರದ ಸ್ಟೂಲು, ಹಾಸಿಗೆ, ಮೇಜು ಮೊದಲಾದ ಪೀಠೋಪಕರಣಗಳಿದ್ದವು.

ಪ್ರಾಚೀನ ಈಜಿಪ್ಟಿನವರು ನೈರ್ಮಲ್ಯ ಮತ್ತು ಅಸ್ತಿತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಹೆಚ್ಚಾಗಿ ನೈಲ್‌ ನದಿಯಲ್ಲಿ ಸ್ನಾನಮಾಡುತ್ತಿದ್ದರು. ಅಲ್ಲದೇ ಪ್ರಾಣಿಗಳ ಕೊಬ್ಬು ಮತ್ತು ಸೀಮೆಸುಣ್ಣದಿಂದ ತಯಾರಿಸಿದ ಸಾಬೂನನ್ನು ಬಳಸುತ್ತಿದ್ದರು. ಪುರುಷರು ಸ್ವಚ್ಛತೆಗಾಗಿ ಸಂಪೂರ್ಣ ದೇಹವನ್ನು ಕ್ಷೌರ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಪರಿಮಳಭರಿತ ಸುಗಂಧ ದ್ರವ್ಯ ಮತ್ತು ಮುಲಾಮುಗಳನ್ನು ಕೆಟ್ಟ ವಾಸನೆಯಿಂದ ಮುಕ್ತಿಪಡೆಯಲು ಮತ್ತು ಚರ್ಮದ ನೋವನ್ನು ತಗ್ಗಿಸಲು ಬಳಸುತ್ತಿದ್ದರು. ಶ್ವೇತ ಬಣ್ಣದ ಉಡುಪುಗಳನ್ನು ಸರಳ ನಾರುಬಟ್ಟೆಗಳಿಂದ ತಯಾರಿಸುತ್ತಿದ್ದರು. ಉನ್ನತ ವರ್ಗದ ಮಹಿಳೆ ಮತ್ತು ಪುರುಷರಿಬ್ಬರೂ ವಿಗ್, ಆಭರಣ ಮತ್ತು ಸೌಂದರ್ಯ ಪ್ರಸಾಧನಗಳನ್ನು ಬಳಸುತ್ತಿದ್ದರು. ಮಕ್ಕಳು ಪ್ರಾಯಕ್ಕೆ ಬರುವವರೆಗೆ 12 ವರ್ಷ ವಯಸ್ಸಿನವರೆಗೆ ವಿವಸ್ತ್ರರಾಗಿರುತ್ತಿದ್ದರು. ಈ ವಯಸ್ಸಿನ ನಂತರ ಗಂಡುಮಕ್ಕಳ ಪರಿಶುದ್ಧತೆಗಾಗಿ ಸುನತಿ ಮಾಡಿ, ತಲೆ ಬೋಳಿಸುತ್ತಿದ್ದರು. ತಾಯಿಯು ಮಕ್ಕಳ ಆರೈಕೆ ಮಾಡಲು ಜವಾಬ್ದಾರಳಾಗಿದ್ದಳು. ಅಲ್ಲದೇ ತಂದೆ ಕುಟುಂಬದ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದನು..

ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತರಕಾರಿ ಹಾಗೂ ಖರ್ಜೂರ ಮತ್ತು ಅಂಜೂರದಂತಹ ಹಣ್ಣುಗಳೊಂದಿಗೆ ಬ್ರೆಡ್ ಮತ್ತು ಬಿಯರ್ ಅವರ ಪ್ರಮುಖ ಆಹಾರವಾಗಿತ್ತು. ವೈನ್ ಮತ್ತು ಮಾಂಸಗಳನ್ನು ಎಲ್ಲರೂ ಹಬ್ಬದ ದಿನಗಳಲ್ಲಿ ಆನಂದಿಸುತ್ತಿದ್ದರು. ಮೇಲ್ವರ್ಗದವರು ಹೆಚ್ಚಾಗಿ ಮಾಮೂಲಾಗಿಯೂ ಬಳಸುತ್ತಿದ್ದರು. ಮೀನು, ಪ್ರಾಣಿಮಾಂಸ ಮತ್ತು ಹಕ್ಕಿಮಾಂಸಗಳನ್ನು ಉಪ್ಪುಹಾಕಿ ಒಣಗಿಸಿ, ನಂತರ ಅವನ್ನು ಬೇಯಿಸುತ್ತಿದ್ದರು ಅಥವಾ ಗ್ರಿಲ್ಲಿನಲ್ಲಿಟ್ಟು ಹುರಿಯುತ್ತಿದ್ದರು. ಅನುಕೂಲ ಪಡೆದಿದ್ದವರಿಗೆ ಸಂಗೀತ ಮತ್ತು ನೃತ್ಯಗಳು ಜನಪ್ರಿಯ ಮನರಂಜನೆಗಳಾಗಿದ್ದವು. ಆರಂಭಿಕ ಸಂಗೀತ ವಾದ್ಯಗಳೆಂದರೆ ಕೊಳಲು ಮತ್ತು ಹಾರ್ಪ್ ವಾದ್ಯಗಳು. ಕಹಳೆ, ಒಬೋ ವಾದ್ಯ ಮತ್ತು ಒಂದೇ ಕೊಳವೆಯ ಗಾಳಿವಾದ್ಯಗಳಂತಹ ಸಾಧನಗಳು ನಂತರದ ಅವಧಿಯಲ್ಲಿ ಅಭಿವೃದ್ಧಿಯಾಗಿ ಬಹುಪ್ರಸಿದ್ಧವಾದವು. ಹೊಸ ರಾಜ್ಯದಲ್ಲಿ ಈಜಿಪ್ಟಿನವರು ಗಂಟೆ, ತಾಳ, ಖಂಜರಿ ಮತ್ತು ಡ್ರಮ್ಮು ಹಾಗೂ ಏಷ್ಯಾದಿಂದ ಆಮದು ಮಾಡಿಕೊಂಡ ಲೂಟ್ ವಾದ್ಯ ಮತ್ತು ಲೈರ್ ವಾದ್ಯ ಮೊದಲಾದವುಗಳನ್ನು ನುಡಿಸಿದರು. ಸಿಸ್ಟ್ರಮ್ ಒಂದು ಗಿರಗಟ್ಟೆ-ರೀತಿಯ ಸಂಗೀತ ವಾದ್ಯ. ಇದನ್ನು ಮುಖ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುತ್ತಿದ್ದರು.

ಪ್ರಾಚೀನ ಈಜಿಪ್ಟಿನವರು ಆಟ ಮತ್ತು ಸಂಗೀತವನ್ನೂ ಒಳಗೊಂಡಂತೆ ಅನೇಕ ತರದ ವಿರಾಮ ಚಟುವಟಿಕೆಗಳನ್ನು ಆನಂದಿಸುತ್ತಿದ್ದರು. ಸೆನೆಟ್ ಒಂದು ಹಲಗೆಯ ಆಟ, ಇದರಲ್ಲಿ ಬಿಲ್ಲೆಗಳನ್ನು ಮನಬಂದಂತೆ ವೇಗವಾಗಿ ತಳ್ಳಲಾಗುವ ಮೋಜಿನಾಟವಿತ್ತು. ಆ ಆಟವು ಆರಂಭದ ಕಾಲದಿಂದಲೂ ಹೆಚ್ಚು ಪ್ರಸಿದ್ಧವಾದುದು; ಅಂತಹುದೇ ಮತ್ತೊಂದು ಆಟ ಮೆಹೆನ್. ಇದು ವೃತ್ತಾಕಾರದ ಆಟದ ಹಲಗೆಯನ್ನು ಹೊಂದಿತ್ತು. ಕಣ್ಣಾಮುಚ್ಚಾಲೆ ಮತ್ತು ಚೆಂಡಿನಾಟಗಳು ಮಕ್ಕಳಿಗೆ ಪ್ರಿಯವಾಗಿದ್ದ ಆಟಗಳಾಗಿದ್ದವು. ಮಲ್ಲಯುದ್ಧವೂ ಇತ್ತು ಎಂಬುದರ ಬಗ್ಗೆ ಬೆನಿ ಹಾಸನ್‌ನ ಸಮಾಧಿ ಮೇಲಿನ ಸಾಕ್ಷ್ಯವನ್ನು ಗಮನಿಸಬಹುದಾಗಿದೆ. ಪ್ರಾಚೀನ ಈಜಿಪ್ಟ್ ಸಮಾಜದ ಶ್ರೀಮಂತರು ಬೇಟೆಗಾರಿಕೆ ಮತ್ತು ದೋಣಿ ವಿಹಾರವನ್ನೂ ಆನಂದಿಸುತ್ತಿದ್ದರು.

ಡೈಯರ್ ಎಲ್-ಮದಿನಾಹ್ ಎಂಬ ಕೆಲಸಗಾರರ ಊರಿನ ಭೂಶೋಧನೆಯು ಸುಮಾರು ನಾಲ್ಕು ನೂರು ವರ್ಷಗಳಷ್ಟು ಪುರಾತನ ಸಮುದಾಯ-ಜೀವನದ ಬಗ್ಗೆ ದಾಖಲೆಯನ್ನು ಒದಗಿಸಿಕೊಟ್ಟಿದೆ. ಸಮುದಾಯದ ಸಂಘಟನೆ, ಸಾಮಾಜಿಕ ಪರಸ್ಪರ ಸಂವಹನ, ಕೆಲಸ ಮಾಡುವ ಮತ್ತು ಜೀವನ ಸಾಗಿಸುವ ಪರಿಸರ, ವಿಧಾನದ ಬಗ್ಗೆ ಇಷ್ಟು ವಿವರವಾದ ಮಾಹಿತಿ ಒದಗಿಸುವ ಮತ್ತೊಂದು ತಾಣವಿಲ್ಲ.

ಪ್ರಾಚೀನ ಈಜಿಪ್ಟ್‌ 
ದಪ್ಪ ಕಂಬಗಳಿಂದ ನಿರ್ಮಿಸಿದ ಕಾರ್ನಾಕ್‌ ದೇವಾಲಯಗಳ ಕಂಬಸಾಲು ಕಟ್ಟಡದ ಹಜಾರ.

ವಾಸ್ತು ಶಿಲ್ಪ

ಪ್ರಾಚೀನ ಈಜಿಪ್ಟ್‌ 
ಎಡ್ಫುನಲ್ಲಿ ಹೋರಸ್‌ನ ದೇವಾಲಯ, ಇದು ಈಜಿಪ್ಟ್‌ ವಾಸ್ತುಶಿಲ್ಪಕ್ಕೆ ಒಂದು ಉತ್ತಮ ಉದಾಹರಣೆ.

ಪ್ರಾಚೀನ ಈಜಿಪ್ಟಿನ ವಾಸ್ತುಶಿಲ್ಪವು ಪ್ರಪಚಂದಲ್ಲೇ ಹೆಚ್ಚು ಪ್ರಸಿದ್ಧವಾದ ರಚನೆಗಳನ್ನು ಒಳಗೊಂಡಿದೆ: ಗಿಜಾದ ಪಿರಮಿಡ್‌ಗಳು ಮತ್ತು ಥೆಬೆಸ್‌ನಲ್ಲಿನ ದೇವಾಲಯಗಳು ಇತ್ಯಾದಿ. ನಿರ್ಮಾಣ ಯೋಜನೆಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಮತ್ತು ನೆನಪಿಗಾಗಿ ಕೇಂದ್ರಾಡಳಿತವು ಆಯೋಜಿಸುತ್ತಿತ್ತು. ಅಲ್ಲದೇ ಇದಕ್ಕಾಗಿ ಹಣ ವಿನಿಯೋಗಿಸುತ್ತಿತ್ತು. ಇದು ಫೇರೋನ ಪ್ರಾಬಲ್ಯವನ್ನು ಬಲಪಡಿಸುವ ಗುರಿಯನ್ನೂ ಹೊಂದಿತ್ತು. ಪ್ರಾಚೀನ ಈಜಿಪ್ಟಿನವರು ಕಟ್ಟಡಗಳ ಕುಶಲ ನಿರ್ಮಾಪಕರಾಗಿದ್ದಾರೆ; ವಾಸ್ತುಶಿಲ್ಪಿಗಳು ಸರಳವಾದರೂ ಪರಿಣಾಮಕಾರಿ ಪರಿಕರಗಳನ್ನು ಮತ್ತು ಸಾಧನಗಳನ್ನು ಬಳಸಿಕೊಂಡು ದೊಡ್ಡ ಶಿಲಾ ರಚನೆಗಳನ್ನು ನಿಖರವಾಗಿ ಮತ್ತು ಖಚಿತತೆಯಿಂದ ರಚಿಸಿದ್ದಾರೆ.

ಈಜಿಪ್ಟಿನ ಗಣ್ಯರ ಮತ್ತು ಸಾಮಾನ್ಯ ಜನರ ವಾಸಸ್ಥಾನಗಳನ್ನು ಸಾಮಾನ್ಯವಾಗಿ ಮಣ್ಣಿನ ಇಟ್ಟಿಗೆಗಳು ಮತ್ತು ಮರದಂತಹ ಬೇಗನೆ ಹಾಳಾಗುವ ವಸ್ತುಗಳಿಂದ ನಿರ್ಮಿಸಲಾಗುತ್ತಿತ್ತು, ಇವು ಹೆಚ್ಚು ಕಾಲ ಉಳಿಯುತ್ತಿರಲಿಲ್ಲ. ಕೃಷಿಕರು ಸಾಧಾರಣ ಮನೆಗಳಲ್ಲಿ ಜೀವಿಸುತ್ತಿದ್ದರು. ಗಣ್ಯ ವ್ಯಕ್ತಿಗಳ ಅರಮನೆಗಳು ಹೆಚ್ಚು ವಿಶಾಲವಾಗಿರುತ್ತಿದ್ದವು. ಮಾಲ್ಕಟ ಮತ್ತು ಅಮರ್ನ ಮೊದಲಾದ ಹೊಸ ರಾಜ್ಯದ ಅಸ್ತಿತ್ವದಲ್ಲಿರುವ ಕೆಲವು ಅರಮನೆಗಳು ಜನರ, ಹಕ್ಕಿಗಳ, ನೀರಿನ ಕೆರೆಗಳ, ದೇವರ ಮತ್ತು ಜ್ಯಾಮಿತೀಯ ವಿನ್ಯಾಸಗಳ ಚಿತ್ರಗಳೊಂದಿಗೆ ವೈಭವದಿಂದ ಅಲಂಕಾರ ಮಾಡಿದ ಗೋಡೆಗಳು ಮತ್ತು ನೆಲಹೊದಿಕೆಗಳನ್ನು ಹೊಂದಿರುವುದನ್ನು ತೋರಿಸುತ್ತವೆ. ದೇವಾಲಯ ಮತ್ತು ಸಮಾಧಿಗಳಂತಹ ಪ್ರಮುಖ ರಚನೆಗಳನ್ನು ಶಾಶ್ವತವಾಗಿರಬೇಕೆಂಬ ಉದ್ದೇಶದಿಂದ ಇಟ್ಟಿಗೆಯ ಬದಲಿಗೆ ಶಿಲೆಗಳಿಂದ ನಿರ್ಮಿಸಿದರು. ಪ್ರಪಂಚದ ಮೊದಲ ಅತಿದೊಡ್ಡ ಶಿಲಾ ರಚನೆಯಾದ ದ್ಜೋಸರ್‌‌ನ ಶವಸಂಸ್ಕಾರದ ಸಂಕೀರ್ಣದಲ್ಲಿ ಬಳಸಿದ ವಾಸ್ತುಶಿಲ್ಪೀಯ ಅಂಶಗಳು ಪಪೈರಸ್‌ ಮತ್ತು ತಾವರೆಯ ವಿಶಿಷ್ಟ ಲಕ್ಷಣದ ಕಂಬ ಮತ್ತು ಹಾಸುಗಲ್ಲುಗಳನ್ನು ಒಳಗೊಂಡಿದೆ.

ಗಿಜಾದಲ್ಲಿರುವಂತಹ ಪ್ರಾಚೀನ ಈಜಿಪ್ಟಿನ ಆರಂಭದ ಸಂರಕ್ಷಿತ ದೇವಾಲಯಗಳು ಎತ್ತರವಾದ ದುಂಡುಗಂಬದಿಂದ ಆಧಾರವನ್ನು ಪಡೆದಿರುವ ಚಾವಣಿ ಚಪ್ಪಡಿಗಳೊಂದಿಗೆ ಒಂದು ವಿಶಾಲವಾದ ಹಜಾರವನ್ನು ಹೊಂದಿವೆ. ಹೊಸ ರಾಜ್ಯದ ವಾಸ್ತುಶಿಲ್ಪಿಗಳು ದೇವಾಲಯಗಳ ಗರ್ಭಗುಡಿಯ ಮುಂಭಾಗದಲ್ಲಿ ತೆರೆದ ಅಂಗಳ ಮಹಾದ್ವಾರ ಮತ್ತು ಕಂಬಸಾಲಿನ ಹಜಾರವನ್ನು ಸೇರಿಸಿದರು. ಈ ಶೈಲಿಯು ಗ್ರೇಕೊ-ರೋಮನ್‌ ಅವಧಿಯವರೆಗೆ ಜನಪ್ರಿಯವಾಗಿತ್ತು. ಪುರಾತನ ರಾಜ್ಯದಲ್ಲಿದ್ದ ಬಹುಹಿಂದಿನ ಮತ್ತು ಹೆಚ್ಚು ಪ್ರಸಿದ್ಧ ಗೋರಿ ರಚನೆಯೆಂದರೆ ಸಮಾಧಿ. ಇದು ನೆಲದಡಿಯಲ್ಲಿ ಹೆಣವನ್ನು ಹೂತ ಗೋರಿಯ ಮೇಲೆ ಮಣ್ಣಿನ ಇಟ್ಟಿಗೆ ಅಥವಾ ಶಿಲೆಗಳಿಂದ ನಿರ್ಮಿಸಿದ ಸಮತಲವಾದ-ಚಾವಣಿ ಇರುವ ಒಂದು ಆಯತಾಕಾರದ ರಚನೆ. ದ್ಜೋಸರ್‌ನ ಮೆಟ್ಟಿಲು ಪಿರಮಿಡ್‌ ಒಂದರ ಮೇಲೊಂದರಂತೆ ಜೋಡಿಸಿದ ಕಲ್ಲಿನ ಸಮಾಧಿಗಳ ಒಂದು ಸರಣಿ. ಪಿರಮಿಡ್‌‌ಗಳು ಪುರಾತನ ಮತ್ತು ಮಧ್ಯಕಾಲೀನ ರಾಜ್ಯಗಳ ಅವಧಿಯಲ್ಲಿ ನಿರ್ಮಿಸಲ್ಪಟ್ಟವು. ಆದರೆ ನಂತರದ ರಾಜರು ಕಡಿಮೆ ಖರ್ಚಿನ ಬಂಡೆಗಲ್ಲ ಗೋರಿಗಳ ನಿರ್ಮಾಣದ ಹೆಸರಿನಲ್ಲಿ ಪಿರಮಿಡ್‌ಗಳ ರಚನೆಯನ್ನು ಕೈಬಿಟ್ಟರು.

ಕಲೆ

ಪ್ರಾಚೀನ ಈಜಿಪ್ಟ್‌ 
ಶಿಲ್ಪಿ ಥುಟ್ಮೋಸ್ ರಚಿಸಿದ ನೆಫೆರ್ಟಿಟಿಯ ಪ್ರತಿಮೆ, ಇದು ಪ್ರಾಚೀನ ಈಜಿಪ್ಟ್‌ ಕಲೆಯ ಒಂದು ಬಹುಪ್ರಸಿದ್ಧ ಕೆಲಸಗಾರಿಕೆ.

ಪ್ರಾಚೀನ ಈಜಿಪ್ಟಿನವರು ಕಲೆಯನ್ನು ಅಧಿಕಾರ ಸಂಬಂಧದ ಉದ್ದೇಶಗಳಿಗಾಗಿ ಬೆಳೆಸಿದರು. ಸುಮಾರು 3500 ವರ್ಷಗಳಷ್ಟು ಕಾಲ ಕಲಾವಿದರು ಪುರಾತನ ರಾಜ್ಯದ ಕಾಲದಲ್ಲಿ ಅಭಿವೃದ್ಧಿಗೊಂಡ ಕಲಾತ್ಮಕ ರೂಪಗಳಿಗೆ ಮತ್ತು ಪ್ರತಿಮಾಶಿಲ್ಪಗಳಿಗೆ ಅಂಟಿಕೊಂಡಿದ್ದರು. ಇವರು ವಿದೇಶಿ ಪ್ರಭಾವ ಮತ್ತು ಆಂತರಿಕ ಬದಲಾವಣೆಗಳನ್ನು ನಿರ್ಬಂಧಿಸುತ್ತಿದ್ದ ಕಟ್ಟಿನಿಟ್ಟಿನ ನಿಯಮಗಳನ್ನು ಅನುಸರಿಸುತ್ತಿದ್ದರು. ಯಾವುದೇ ಪ್ರಾದೇಶಿಕ ಹರವಿನ ಸೂಚನೆಯಿಲ್ಲದ ಚಿತ್ರಗಳ ಪರಿಕಲ್ಪನೆಯ ವಿಶಿಷ್ಟತೆ ಹೊಂದಿರುವ ಸರಳ ಗೆರೆ, ಆಕಾರ ಮತ್ತು ಬಣ್ಣಗಳಿಂದ ತುಂಬಿದ ಸಮತಟ್ಟಾದ ವ್ಯಾಪ್ತಿಯಂತಹ ಈ ಸರಳ ಕಲಾತ್ಮಕ ರಚನಾವಿನ್ಯಾಸಗಳು ಸಾಹಿತ್ಯರಚನಾಕಲೆಯಲ್ಲಿ ಒಂದು ಪ್ರಕಾರದ ಅರಿವು ಮತ್ತು ಸಮತೋಲನವನ್ನು ಸೃಷ್ಟಿಸಿದವು. ಚಿತ್ರಗಳು ಮತ್ತು ವಾಕ್ಯಗಳು ಸಮಾಧಿ ಮತ್ತು ದೇವಾಲಯಗಳ ಗೋಡೆಗಳಲ್ಲಿ, ಶವದ ಪೆಟ್ಟಿಗೆಗಳಲ್ಲಿ ಹಾಗೂ ಸ್ಮಾರಕ ಸ್ತಂಭಗಳಲ್ಲಿ ಮಾತ್ರವಲ್ಲದೆ ಪ್ರತಿಮೆಗಳಲ್ಲೂ ಹಾಸುಹೊಕ್ಕಾಗಿ ಗಾಢವಾಗಿ ಬೆಸೆದುಕೊಂಡಿವೆ. ಉದಾಹರಣೆಗಾಗಿ, ನಾರ್ಮರ್‌ ವರ್ಣಫಲಕವು ಚಿತ್ರಲಿಪಿಯಾಗಿಯೂ ಓದಬಹುದಾದ ರೇಖಾಚಿತ್ರಗಳನ್ನು ಪ್ರದರ್ಶಿಸುತ್ತದೆ. ಹೆಚ್ಚು ವಿಲಕ್ಷಣ ಮತ್ತು ಸಾಂಕೇತಿಕ ರೂಪದ ಕಟ್ಟುನಿಟ್ಟಿನ ಆಡಳಿತದಿಂದಾಗಿ, ಪ್ರಾಚೀನ ಈಜಿಪ್ಟಿನ ಕಲೆಯು ಹೆಚ್ಚು ಖಚಿತತೆ ಮತ್ತು ಸ್ಪಷ್ಟತೆಯೊಂದಿಗೆ ರಾಜಕೀಯ ಮತ್ತು ಧಾರ್ಮಿಕ ಉದ್ದೇಶಗಳನ್ನು ಪೂರೈಸಿತು.

ಪ್ರಾಚೀನ ಈಜಿಪ್ಟಿನ ಕುಶಲಕರ್ಮಿಗಳು ಪ್ರತಿಮೆಗಳನ್ನು ಕೆತ್ತಲು ಮತ್ತು ಉಬ್ಬುಶಿಲ್ಪಗಳನ್ನು ನಯವಾಗಿಸಲು ಶಿಲೆಗಳನ್ನು ಬಳಸಿಕೊಳ್ಳುತ್ತಿದ್ದರು. ಮರವನ್ನು ಅಗ್ಗದ ಮತ್ತು ಸುಲಭವಾಗಿ ಕೆತ್ತುವ ಬದಲಿಯಾಗಿ ಉಪಯೋಗಿಸುತ್ತಿದ್ದರು. ಬಣ್ಣಗಳನ್ನು ಕಬ್ಬಿಣದ ಅದಿರು (ಕೆಂಪು ಮತ್ತು ಹಳದಿ ಕಾವಿಬಣ್ಣ), ತಾಮ್ರದ ಅದಿರು (ನೀಲಿ ಮತ್ತು ಹಸಿರು), ಮಸಿ ಅಥವಾ ಇದ್ದಿಲು (ಕಪ್ಪು) ಮತ್ತು ಸುಣ್ಣದ ಕಲ್ಲು (ಬಿಳಿ) ಮೊದಲಾದ ಖನಿಜಗಳಿಂದ ಪಡೆಯುತ್ತಿದ್ದರು. ಬಣ್ಣಗಳಿಗೆ ಜಾಲಿ ಬಳಗದ ಗೋಂದನ್ನು ಬಂಧಕ ವಸ್ತುವಾಗಿ ಮಿಶ್ರಮಾಡಿ ಬಿಲ್ಲೆಯಾಗಿ ಒತ್ತುತ್ತಿದ್ದರು. ನಂತರ ಬೇಕಾದಾಗ ಅವುಗಳನ್ನು ನೀರಿನಿಂದ ನೆನೆಸಿ ಬಳಸುತ್ತಿದ್ದರು. ಫೇರೋಗಳು ಯುದ್ಧದಲ್ಲಿ ಜಯಗಳಿಸಿದುದನ್ನು, ರಾಜವಂಶದ ಕಟ್ಟಳೆಗಳನ್ನು ಮತ್ತು ಧಾರ್ಮಿಕ ಘಟನೆಗಳನ್ನು ದಾಖಲಿಸಲು ಉಬ್ಬುಶಿಲ್ಪಗಳನ್ನು ಬಳಸಿಕೊಳ್ಳುತ್ತಿದ್ದರು. ಸಾಮಾನ್ಯ ನಾಗರಿಕರು ಶಬ್ತಿ ಪ್ರತಿಮೆಗಳು ಮತ್ತು ಸಾವಿನ ಬಗೆಗಿನ ಬರಹಗಳು, ಶವಸಂಸ್ಕಾರಕ್ಕೆ ಸಂಬಂಧಿಸಿದ ಕಲೆಯ ಪ್ರಕಟನೆಗೆ ಅವಕಾಶ ಹೊಂದಿದ್ದರು. ಅವು ಅವರ ಸಾವಿನ ನಂತರದ ಜೀವನದಲ್ಲಿ ಅವರನ್ನು ರಕ್ಷಿಸುತ್ತವೆ ಎಂದು ನಂಬಿದ್ದರು. ಮಧ್ಯಕಾಲೀನ ರಾಜ್ಯದ ಅವಧಿಯಲ್ಲಿ ದಿನನಿತ್ಯ ಜೀವನದ ಘಟನೆಗಳನ್ನು ವರ್ಣಿಸುವ ಮರದ ಅಥವಾ ಜೇಡಿಮಣ್ಣಿನಲ್ಲಿ ಕೆತ್ತಿದ ಮಾದರಿಗಳು ಸಮಾಧಿಗಳಂತೆಯೇ ಹೆಚ್ಚು ಜನಪ್ರಿಯವಾದವು. ಸಾವಿನ ನಂತರದ ಜೀವನ ಚಕ್ರದ ವ್ಯವಸ್ಥೆಯನ್ನು ಬಿಂಬಿಸುವ ಒಂದು ಪ್ರಯತ್ನವಾದ ಈ ಮಾದರಿಗಳು ಕೆಲಸಗಾರ, ಕುದುರೆ, ಆಡುಗಳನ್ನು ಮತ್ತು ಸೈನ್ಯದ ರಚನೆಯನ್ನು ತೋರಿಸುತ್ತವೆ. ಇವು ಪ್ರಾಚೀನ ಈಜಿಪ್ಟಿನ ಸಾವಿನ ನಂತರದ ಜೀವನದ ಕಲ್ಪನೆಯನ್ನು ಪ್ರತಿಬಿಂಬಿಸುತ್ತವೆ.

ಪ್ರಾಚೀನ ಈಜಿಪ್ಟಿನ ಕಲೆಯು ಏಕರೂಪತೆಯಿಂದ ಕೂಡಿದ್ದರೂ, ನಿರ್ದಿಷ್ಟ ಅವಧಿ ಮತ್ತು ಪ್ರದೇಶಗಳ ಶೈಲಿಗಳು ಬದಲಾದ ಸಾಂಸ್ಕೃತಿಕ ಅಥವಾ ರಾಜಕೀಯ ರೀತಿಗಳನ್ನು ಬಿಂಬಿಸುತ್ತವೆ. ಎರಡನೆ ಮಧ್ಯಕಾಲೀನ ಅವಧಿಯಲ್ಲಿ ಹಿಕ್ಸೋಸ್‌‌‌ನ ಆಕ್ರಮಣದ ನಂತರ, ಅವಾರಿಸ್‌‌ನಲ್ಲಿ ಮಿನೋನ್‌-ಶೈಲಿಯ ಹಸಿಚಿತ್ರಗಳು (ವೆಟ್ ಪ್ಲಾಸ್ಟರ್ ಮೇಲೆ ಬಿಡಿಸಲಾದ ಜಲವರ್ಣದ ಪೇಂಟಿಂಗ್) ಕಂಡುಬಂದವು. ಕಲಾತ್ಮಕ ರೂಪಗಳಲ್ಲಿ ರಾಜಕೀಯತೆಯಿಂದ ಉಂಟಾದ ಹೆಚ್ಚಿನ ಬದಲಾವಣೆಗಳು ಅಮರ್ನನ ಅವಧಿಯಿಂದ ಆರಂಭವಾದವು. ಆ ಸಂದರ್ಭದಲ್ಲಿ ರೇಖಾಚಿತ್ರಗಳನ್ನು ಅಖೆನಾತೆನ್‌‌ನ ಕ್ರಾಂತಿಕಾರಕ ಧಾರ್ಮಿಕ ಆಲೋಚನೆಗಳನ್ನು ಅನುಸರಿಸಲು ಆಮ‌ೂಲಾಗ್ರವಾಗಿ ಪರಿವರ್ತಿಸಲಾಯಿತು. ಅಮರ್ನ ಕಲೆ ಎಂದು ಕರೆಯುವ ಈ ಶೈಲಿಯು ಅಖೆನಾತೆನ್‌‌ನ ಮರಣದ ನಂತರ ವೇಗವಾಗಿ ಮತ್ತು ಸಂಪೂರ್ಣವಾಗಿ ಅಳಿಸಿಹಾಕಲ್ಪಟ್ಟು, ಆ ಜಾಗವನ್ನು ಸಾಂಪ್ರದಾಯಿಕ ರೂಪಗಳು ಆಕ್ರಮಿಸಿಕೊಂಡವು.

ಧಾರ್ಮಿಕ ನಂಬಿಕೆಗಳು

ಪ್ರಾಚೀನ ಈಜಿಪ್ಟ್‌ 
ಸಾವಿನ ಬಗೆಗಿನ ಪುಸ್ತಕ, ಇದು ಸಾವಿನ ನಂತರ ಮೃತರ ಪ್ರಯಾಣಕ್ಕಿದ್ದ ಮಾರ್ಗದರ್ಶಿ.

ಪ್ರಾಚೀನ ಈಜಿಪ್ಟ್‌ ನಾಗರಿಕತೆಯಲ್ಲಿ ದೇವರ ಬಗೆಗಿನ ಮತ್ತು ಸಾವಿನ ನಂತರದ ನಂಬಿಕೆಗಳು, ಅವುಗಳ ತೊಡಗುವಿಕೆಯಿಂದ ಆಳವಾಗಿ ಬೇರೂರಿದ್ದವು; ಫೇರೋಗಳ ಆಡಳಿತವು 'ರಾಜರ ದೈವದತ್ತ ಹಕ್ಕು' ಎಂಬ ಅಂಶವನ್ನು ಆಧರಿಸಿತ್ತು. ಈಜಿಪ್ಟಿನ ಸ್ಮಾರಕ ಭವನಗಳು ಆಧ್ಯಾತ್ಮಿಕ ದೈವಶಕ್ತಿಯನ್ನು ಹೊಂದಿರುವ ಹಾಗೂ ಸಹಾಯಕ್ಕಾಗಿ ಅಥವಾ ರಕ್ಷಣೆಗಾಗಿ ಪ್ರಾರ್ಥಿಸುತ್ತಿದ್ದ ದೇವತೆಯಿಂದ ಪ್ರಸಿದ್ಧವಾಗಿತ್ತು. ಈಜಿಪ್ಟಿನವರು ದೇವರನ್ನು ಯಾವಾಗಲೂ ಸಹಾಯಾರ್ಥ ದೃಷ್ಟಿಯಿಂದ ನೋಡುತ್ತಿರಲಿಲ್ಲ. ಅಲ್ಲದೇ ಅರ್ಪಣೆ ಮತ್ತು ಬೇಡಿಕೆಗಳಿಂದ ತೃಪ್ತಿಗೊಳಿಸಬೇಕು ಎಂದು ನಂಬಿದ್ದರು. ದೇವತಾವರ್ಗದಲ್ಲಿ ಹೊಸ ದೇವರು ಬಂದ ಹಾಗೆ ಈ ಸ್ಮಾರಕ ಭವನಗಳ ರಚನೆಯು ನಿರಂತರವಾಗಿ ಬದಲಾಗುತ್ತಾ ಹೋಯಿತು. ಆದರೆ ಧಾರ್ಮಿಕ ಗುರುಗಳು ಈ ಮಾರ್ಪಾಡನ್ನು ಹಾಗೂ ಅಸಮಂಜಸ ಪುರಾಣ ಮತ್ತು ಕಥೆಗಳ ಸೃಷ್ಟಿಯನ್ನು ಸುಸಂಬದ್ಧ ವ್ಯವಸ್ಥೆಯಾಗಿ ಸಂಘಟಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ದೈವತ್ವದ ಈ ವಿಭಿನ್ನ ವಿಷಯಗಳನ್ನು ವಿವಾದಾತ್ಮಕವಾಗಿ ಪರಿಗಣಿಸಲಾಗಿಲ್ಲ. ಬದಲಿಗೆ ಇದು ನೈಜತೆಯಲ್ಲಿನ ಬಹುಮುಖ ಅಂಶಗಳನ್ನು ತೋರಿಸಿಕೊಟ್ಟಿದೆ.

ಪ್ರಾಚೀನ ಈಜಿಪ್ಟ್‌ 
ಕಾ ಎಂಬ ಪ್ರತಿಮೆ, ಇದು ಕಾನಿಗೆ ತನ್ನನ್ನು ಅಭಿವ್ಯಕ್ತಪಡಿಸಿಕೊಳ್ಳಲು ಒಂದು ಭೌತಿಕ ಸ್ಥಳವನ್ನು ಒದಗಿಸಿಕೊಟ್ಟಿತು.

ದೇವರನ್ನು ಆಯಾ ಭಕ್ತಿ ಪಂಥದ ದೇವಾಲಯಗಳಲ್ಲಿ ಪೂಜಿಸಲಾಗುತ್ತಿತ್ತು. ಇದನ್ನು ರಾಜರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಧಾರ್ಮಿಕ ಗುರುಗಳು ನಿರ್ವಹಿಸುತ್ತಿದ್ದರು. ಆರಾಧನಾ ಮ‌ೂರ್ತಿಯನ್ನು ದೇವಾಲಯದ ಕೇಂದ್ರ ಭಾಗದಲ್ಲಿ ಕಲಶದಲ್ಲಿ ಇರಿಸಲಾಗುತ್ತಿತ್ತು. ದೇವಾಲಯಗಳು ಸಾರ್ವಜನಿಕ ಪೂಜೆಯ ಅಥವಾ ಒಟ್ಟುಗೂಡುವಿಕೆಯ ಸ್ಥಳಗಳಾಗಿರಲಿಲ್ಲ. ಕೆಲವೇ ಕೆಲವು ಆಯ್ದ ಹಬ್ಬದ ದಿನಗಳಲ್ಲಿ ಮತ್ತು ಆಚರಣೆಗಳಲ್ಲಿ ಮಾತ್ರ ದೇವರ ಮ‌ೂರ್ತಿಯನ್ನು ಹೊಂದಿರುವ ಕಲಶವನ್ನು ಸಾರ್ವಜನಿಕ ಪೂಜೆಗಾಗಿ ಹೊರಗೆ ತರಲಾಗುತ್ತಿತ್ತು. ಸಾಮಾನ್ಯವಾಗಿ ದೇವರಿಗೆ ಸೇರಿದ ಭೂಸ್ವತ್ತನ್ನು ಹೊರಗಡೆ ಪ್ರಪಂಚಕ್ಕೆ ಸಿಗದೆ ಹಾಗೆ ತಡೆ ನಿರ್ಮಿಸಲಾಗಿತ್ತು. ಅಲ್ಲದೇ ದೇವಾಲಯದ ಅಧಿಕಾರಿಗಳಿಗೆ ಮಾತ್ರ ಪ್ರವೇಶಸಾಧ್ಯವಾಗುವಂತೆ ಮಾಡಲಾಗಿತ್ತು. ಸಾಮಾನ್ಯ ಜನರು ತಮ್ಮದೇ ಆದ ದೇವರ ಮ‌ೂರ್ತಿಗಳನ್ನು ಅವರ ಮನೆಗಳಲ್ಲಿ ಪೂಜಿಸಬಹುದಿತ್ತು. ಅವರು ಅವ್ಯಕ್ತ ದುಷ್ಟಶಕ್ತಿಗಳ ವಿರುದ್ಧ ರಕ್ಷಣೆಗಾಗಿ ತಾಯಿತಗಳನ್ನು ಕಟ್ಟಿಕೊಳ್ಳುತ್ತಿದ್ದರು. ಹೊಸ ರಾಜ್ಯದ ನಂತರ ಧಾರ್ಮಿಕ ಸಂಪ್ರದಾಯಗಳು ದೇವರನ್ನು ನೇರವಾಗಿ ಪೂಜಿಸುವುದಕ್ಕೆ ಬದಲಾದುದರಿಂದ ಫೇರೋಗಳ ದೈವಿಕ ಮಧ್ಯಸ್ಥಿಕೆಯ ಪಾತ್ರ ಕಡಿಮೆಯಾಯಿತು. ಆದ್ದರಿಂದ ಧಾರ್ಮಿಕ ಗುರುಗಳು ದೇವರ ಒಲವನ್ನು ನೇರವಾಗಿ ಜನರಿಗೆ ಸಾಗಿಸುವ ಸಲುವಾಗಿ ದೇವವಾಣಿಯ ವಲಯಗಳ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದರು.

ಪ್ರತಿಯೊಬ್ಬ ಮನುಷ್ಯನೂ ಭೌತಿಕ ಮತ್ತು ಆಧ್ಯಾತ್ಮಿಕ ಭಾಗಗಳಿಂದ ಅಥವಾ ಅಂಶ ಗಳಿಂದ ಸಂಯೋಜಿಸಲ್ಪಟ್ಟಿರುತ್ತಾರೆ ಎಂದು ಈಜಿಪ್ಟಿನವರು ನಂಬಿದ್ದರು. ದೇಹದೊಂದಿಗೆ ಪ್ರತಿ ಮನುಷ್ಯನೂ ಒಂದು šwt (ನೆರಳು), ಒಂದು ba (ವ್ಯಕ್ತಿತ್ವ ಅಥವಾ ಆತ್ಮ), ಒಂದು ka (ಜೀವನ-ಶಕ್ತಿ) ಮತ್ತು ಒಂದು ಹೆಸರು , ಮೊದಲಾದವುಗಳನ್ನು ಹೊಂದಿರುತ್ತಾನೆ. ಮಿದುಳಿನ ಬದಲು ಮನಸ್ಸನ್ನು ಆಲೋಚನೆ ಮತ್ತು ಭಾವನೆಗಳ ತಾಣ ಎಂದು ಭಾವಿಸಲಾಗಿತ್ತು. ಸಾವಿನ ನಂತರ ಆಧ್ಯಾತ್ಮಿಕ ಅಂಶಗಳು ದೇಹದಿಂದ ಬಿಡುಗಡೆ ಹೊಂದಿ, ಆಧ್ಯಾತ್ಮದೆಡೆಗೆ ಸಾಗುತ್ತವೆ. ಆದರೆ ಅವರಿಗೆ ಭೌತಿಕ ಅವಶೇಷಗಳು (ಅಥವಾ ಪ್ರತಿಮೆಯಂತಹ ಪರ್ಯಾಯವಾಗಿ) ಶಾಶ್ವತ ನೆಲೆಯಾಗಿ ಉಳಿಯುವುದು ಅವಶ್ಯಕವಾಗಿತ್ತು. ಮೃತರ ಅಂತಿಮ ಗುರಿಯೆಂದರೆ ಅವರ ka ಮತ್ತು ba ಒಂದಿಗೆ ಸೇರಿಕೊಳ್ಳುವುದು. ಅಲ್ಲದೇ akh ಅಥವಾ "ಪರಿಣಾಮಕಾರಿ ವ್ಯಕ್ತಿ"ಯಾಗಿ ಬದುಕಿ "ದೈವಾನುಗ್ರಹಕ್ಕೆ ಪಾತ್ರರಾದ ಸತ್ತವರಲ್ಲಿ" ಒಬ್ಬರಾಗುವುದು. ಇದಕ್ಕಾಗಿ ಮೃತರು ಸತ್ವ ಪರೀಕ್ಷೆವೊಂದರಲ್ಲಿ ಯೋಗ್ಯ ರೀತಿಯಲ್ಲಿ ವಿಚಾರಣೆಗೊಳಗಾಗುತ್ತಾರೆ. ಆಗ ಅವರ ಮನಸ್ಸನ್ನು "ಸತ್ಯದ ಗರಿ"ಯೊಂದಿಗೆ ತೂಕಮಾಡಲಾಗುತ್ತದೆ. ಯೋಗ್ಯರೆಂದು ಪರಿಗಣಿಸಲ್ಪಟ್ಟರೆ ಮೃತರು ಆಧ್ಯಾತ್ಮಿಕ ರೂಪದಲ್ಲಿ ಭೂಮಿಯ ಮೇಲೆ ಅವರ ಅಸ್ತಿತ್ವವನ್ನು ಮುಂದುವರಿಸಬಹುದು.

ಪ್ರಾಚೀನ ಈಜಿಪ್ಟ್‌ 
ಟುಟಾಂಖಮುನ್‌‌ನ ಮಮ್ಮಿಯಲ್ಲಿದ್ದ ಈ ಬಂಗಾರದ ಮುಖವಾಡದಂತೆ ಫೇರೋಗಳ ಸಮಾಧಿಗಳಲ್ಲಿ ಹೆಚ್ಚಿನ ಪ್ರಮಾಣದ ಸಂಪತ್ತುಗಳಿದ್ದವು.

ಶವಸಂಸ್ಕಾರದ ಸಂಪ್ರದಾಯಗಳು

ಪ್ರಾಚೀನ ಈಜಿಪ್ಟಿನವರು ಶವಸಂಸ್ಕಾರ ಸಂಪ್ರದಾಯಗಳ ಒಂದು ವಿಸ್ತೃತ ನಿಯಮಾವಳಿಯನ್ನೇ ಹೊಂದಿದ್ದರು. ಅವು ಸಾವಿನ ನಂತರ ಅಮರತ್ವ ಪಡೆಯಲು ಅವಶ್ಯಕ ಎಂದು ನಂಬಿದ್ದರು. ಈ ಸಂಪ್ರದಾಯಗಳೆಂದರೆ ಮಮ್ಮೀಕರಣದ ಮ‌ೂಲಕ ಮೃತದೇಹ ಸಂರಕ್ಷಿಸುವುದು, ಶವಸಂಸ್ಕಾರದ ಕರ್ಮಾಚರಣೆ ನಿರ್ವಹಿಸುವುದು, ದೇಹದೊಂದಿಗೆ ಸಾವಿನ ನಂತರ ಮೃತರು ಬಳಸುವ ವಸ್ತುಗಳನ್ನೂ ಹೂಳುವುದು. ಪುರಾತನ ರಾಜ್ಯದ ಮೊದಲು ಮೃತದೇಹಗಳನ್ನು ಮರಳಿನ ಗುಂಡಿಗಳಲ್ಲಿ ಹೂಳುತ್ತಿದ್ದರು. ಅವು ನಿರ್ಜಲೀಕರಣದಿಂದ ನೈಸರ್ಗಿಕವಾಗಿಯೇ ರಕ್ಷಿಸಲ್ಪಡುತ್ತಿದ್ದವು. ಶ್ರೀಮಂತ ವ್ಯಕ್ತಿಗಳಿಗೆ ಲಭ್ಯವಿದ್ದ ವೈಭವದಿಂದ ಅಂತ್ಯಕ್ರಿಯೆ ಮಾಡುವ ಸೌಕರ್ಯ ಪಡೆಯದಿರುವ ಬಡಜನರ ಶವಸಂಸ್ಕಾರಕ್ಕೆ ಮರುಳುಗಾಡಿನ ಶುಷ್ಕ ಸ್ಥಿತಿಯು ಪ್ರಾಚೀನ ಈಜಿಪ್ಟಿನ ಇತಿಹಾಸದಾದ್ಯಂತ ವರವಾಗಿ ಕಂಡುಬಂದಿದೆ. ಈಜಿಪ್ಟಿನ ಶ್ರೀಮಂತರ ಮೃತದೇಹಗಳನ್ನು ಕಲ್ಲಿನ ಸಮಾಧಿಗಳಲ್ಲಿ ಹೂಳಲು ಆರಂಭಿಸಿದರು. ಆದ್ದರಿಂದ ಅವರು ಕೃತಕ ಮಮ್ಮೀಕರಣವನ್ನು ಬಳಸಿದರು. ಇದರಲ್ಲಿ ಅವರು ಮೃತದೇಹದ ಒಳಾಂಗಗಳನ್ನು ತೆಗೆದು, ದೇಹವನ್ನು ನಾರುಬಟ್ಟೆಯಿಂದ ಸುತ್ತಿ, ಆಯತಾಕಾರದ ಕಲ್ಲಿನ ಶವಸಂಪುಟ ಅಥವಾ ಶವ ಪೆಟ್ಟಿಗೆಯಲ್ಲಿ ಹೂಳುತ್ತಿದ್ದರು. ನಾಲ್ಕನೆ ರಾಜವಂಶದ ಆರಂಭದಲ್ಲಿ ಕೆಲವು ಅಂಗಗಳನ್ನು ಪ್ರತ್ಯೇಕವಾಗಿ ಕ್ಯಾನೋಪಿಕ್ ಜಾರ್(ಜಾಡಿಯಂತಹ ಅಂತ್ರಪಾತ್ರೆ)‌ಗಳಲ್ಲಿ ಸಂರಕ್ಷಿಸುತ್ತಿದ್ದರು.

ಪ್ರಾಚೀನ ಈಜಿಪ್ಟ್‌ 
ಮಮ್ಮೀಕರಣ ಮತ್ತು ಹೂಳುವಿಕೆಯ ವಿಧಿವಿಧಾನಗಳಿಗೆ ಸಂಬಂಧಿಸಿದ ಪ್ರಾಚೀನ ಈಜಿಪ್ಟಿನ ದೇವರು ಅನುಬಿಸ್, ಇಲ್ಲಿರುವುದು ಮಮ್ಮಿಯೊಂದರಲ್ಲಿ ಕಾಣುತ್ತಿರುವ ಚಿತ್ರ.

ಹೊಸ ರಾಜ್ಯದ ಅವಧಿಯಲ್ಲಿ ಪ್ರಾಚೀನ ಈಜಿಪ್ಟಿನವರು ಮಮ್ಮೀಕರಣ ಕಲೆಯಲ್ಲಿ ಪರಿಪೂರ್ಣರಾದರು; ಅತ್ಯುತ್ತಮ ಪ್ರಯೋಗ ವಿಧಾನವು 70 ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಇದರಲ್ಲಿ ಮೃತದೇಹದ ಒಳಾಂಗಗಳನ್ನು ತೆಗೆದು, ಮಿದುಳನ್ನು ಮ‌ೂಗಿನ ಮ‌ೂಲಕ ತೆಗೆದು ದೇಹವನ್ನು ನ್ಯಾಟ್ರೋನ್ ಎಂಬ ಉಪ್ಪಿನ ಮಿಶ್ರಣದಲ್ಲಿ ಒಣಗಿಸಲಾಗುತ್ತಿತ್ತು. ನಂತರ ಆ ಮೃತದೇಹವನ್ನು ನಾರುಬಟ್ಟೆಯಲ್ಲಿ ಸುತ್ತಿ, ರಕ್ಷಣಾ ತಾಯಿತಗಳನ್ನು ಅದರ ಪದರಗಳಲ್ಲಿ ತುರುಕಿಸಿ, ಅಲಂಕೃತ ಮಾನವ ರೂಪಿ ಶವಪೆಟ್ಟಿಗೆಯಲ್ಲಿ ಇರಿಸಲಾಗುತ್ತಿತ್ತು. ಕೊನೆಯ ಅವಧಿಯ ಮಮ್ಮಿಗಳನ್ನು ಬಣ್ಣಬಳಿದ ಕಾರ್ಟೊನೇಜ್ ಮಮ್ಮಿ ಪೆಟ್ಟಿಗೆಗಳಲ್ಲೂ ಇರಿಸುತ್ತಿದ್ದರು. ನಿಜವಾದ ಸಂರಕ್ಷಣಾ ಪದ್ಧತಿಗಳು ಟಾಲೆಮಿಯ ಮತ್ತು ರೋಮನ್‌ ಯುಗಗಳಲ್ಲಿ ಕಡಿಮೆಯಾದವು. ಆ ಸಂದರ್ಭದಲ್ಲಿ ಅಲಂಕಾರಗೊಳಿಸುವ ಮ‌ೂಲಕ ಮಮ್ಮಿಯ ಹೊರಗಿನ ಅಸ್ತಿತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು.

ಈಜಿಪ್ಟಿನ ಶ್ರೀಮಂತರನ್ನು ಹೆಚ್ಚಿನ ಪ್ರಮಾಣದ ದುಬಾರಿ ವಸ್ತುಗಳೊಂದಿಗೆ ಹೂಳುತ್ತಿದ್ದರು. ಆದರೆ ಎಲ್ಲಾ ಶವಸಂಸ್ಕಾರಗಳು ಸಾಮಾಜಿಕ ಸ್ಥಿತಿಯನ್ನು ಲೆಕ್ಕಿಸದೆ ಮೃತರಿಗಾಗಿ ಅಗತ್ಯ ಸರಕು, ವಸ್ತುಗಳನ್ನು ಒದಗಿಸುತಿದ್ದವು. ಹೊಸ ರಾಜ್ಯದ ಆರಂಭದಲ್ಲಿ ಶವದ ಗುಂಡಿಯಲ್ಲಿ, ಸಾವಿನ ನಂತರದ ಅವಸ್ಥೆಯಲ್ಲಿ ಅವರಿಗೆ ದೈಹಿಕ ದುಡಿಮೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಿದ್ದ ಶಬ್ತಿ ಪ್ರತಿಮೆಗಳೊಂದಿಗೆ ಮೃತರ ಪುಸ್ತಕಗಳನ್ನೂ ಸೇರಿಸುತ್ತಿದ್ದರು. ಶವಸಂಸ್ಕಾರದ ನಂತರ ಮೃತರನ್ನು ಮಾಂತ್ರಿಕವಾಗಿ ಪುನಃಜೀವಂತಗೊಳಿಸುವ ಧಾರ್ಮಿಕ ಕ್ರಿಯಾವಿಧಿಗಳನ್ನು ನಡೆಸಲಾಗುತ್ತಿತ್ತು. ಸಮಾಧಿ ಮಾಡಿದ ನಂತರ ಸಂಬಂಧಿಕರು ಗೋರಿಗೆ ಸಂದರ್ಭಾನುಸಾರ ಆಹಾರವನ್ನು ತರಬೇಕಿತ್ತು ಹಾಗೂ ಮೃತರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಬೇಕಿತ್ತು.

ಸೇನೆ

ಪ್ರಾಚೀನ ಈಜಿಪ್ಟ್‌ 
ಒಂದು ಈಜಿಪ್ಟ್‌ ರಥ.

ಪ್ರಾಚೀನ ಈಜಿಪ್ಟಿನ ಸೇನೆಯು ವಿದೇಶಿ ದಾಳಿಯಿಂದ ಈಜಿಪ್ಟನ್ನು ರಕ್ಷಿಸುವ ಹಾಗೂ ಪೂರ್ವದಿಕ್ಕಿನ ಪುರಾತನ ಪ್ರದೇಶಗಳಲ್ಲಿ ಈಜಿಪ್ಟಿನ ಪ್ರಾಬಲ್ಯ ಕಾಯ್ದುಕೊಳ್ಳುವ ಜವಾಬ್ದಾರಿ ಹೊಂದಿತ್ತು. ಸೇನೆಯು ಪುರಾತನ ರಾಜ್ಯದ ಸಂದರ್ಭದಲ್ಲಿ ಶಿನೈನಲ್ಲಿನ ಗಣಿಗಾರಿಕೆಯ ಕಾರ್ಯಾಚರಣೆಗಳಿಗೆ ರಕ್ಷಣೆ ನೀಡಿತು. ಅದೂ ಅಲ್ಲದೇ ಮೊದಲ ಮತ್ತು ಎರಡನೆ ಮಧ್ಯಕಾಲೀನ ಯುಗದ ಸಮಯದಲ್ಲಿನ ಕದನಗಳಲ್ಲಿ ಸೆಣಸಿತು. ಸೇನೆಯು ಪ್ರಮುಖ ವ್ಯಾಪಾರ ಮಾರ್ಗಗಳಾದ್ಯಂತ ರಕ್ಷಣೋಪಾಯಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿತ್ತು. ನುಬಿಯಾಕ್ಕೆ ಹೋಗುವ ದಾರಿಯಲ್ಲಿನ ಬುಹೆನ್‌ ನಗರದಲ್ಲಿ ಈ ರೀತಿಯ ರಕ್ಷಣೆ ನೀಡಿದುದು ಕಂಡುಬಂದಿದೆ. ಸೇನೆಯ ಕೇಂದ್ರ ಸ್ಥಳಗಳಾಗಿ ಸೇವೆ ಸಲ್ಲಿಸಲು ಕೋಟೆಗಳನ್ನೂ ನಿರ್ಮಿಸಲಾಯಿತು. ಸೈಲ್‌ನಲ್ಲಿ ನಿರ್ಮಿಸಿದ ದುರ್ಗವು ಲೆವೆಂಟ್‌ನ ವಿಶೇಷ ಕಾರ್ಯಾಚರಣೆಗಳ ಮ‌ೂಲವಾಗಿತ್ತು. ಹೊಸ ರಾಜ್ಯದಲ್ಲಿ ಫೇರೋಗಳ ಸರಣಿಯೊಂದು ಕುಶ್ಅನ್ನು ಮತ್ತು ಲೆವೆಂಟ್‌ನ ಭಾಗಗಳನ್ನು ದಾಳಿ ಮಾಡಿ ವಶಪಡಿಸಿಕೊಳ್ಳಲು ಸುಸಜ್ಜಿತ ಈಜಿಪ್ಟ್‌ ಸೇನೆಯನ್ನು ಬಳಸಿದರು.

ಸೇನೆಯ ಸಾಮಾನ್ಯ ಮಾದರಿಯ ಶಸ್ತ್ರಾಸ್ತ್ರಗಳೆಂದರೆ- ಬಿಲ್ಲು ಮತ್ತು ಬಾಣಗಳು, ಭರ್ಜಿಗಳು ಹಾಗೂ ಮರದ ಹಲಗೆಗಳ ಮೇಲೆ ಪ್ರಾಣಿಗಳ ಚರ್ಮವನ್ನು ಅಂಟಿಸಿ ಮಾಡಿದ ಸುರುಳಿಯಾಕಾರದ ಮೇಲ್ತುದಿಯ ಗುರಾಣಿಗಳು. ಹೊಸ ರಾಜ್ಯದಲ್ಲಿ ಸೇನೆಯು, ಹಿಕ್ಸೋಸ್‌‌ ಆಕ್ರಮಿಗಳಿಂದ ಮೊದಲು ಬಳಸಲ್ಪಡುತ್ತಿದ್ದ ರಥಗಳನ್ನು ಉಪಯೋಗಿಸಲು ಆರಂಭಿಸಿತು. ಕಂಚಿನ ಬಳಕೆ ಆರಂಭವಾದ ನಂತರ ಆಯುಧ ಮತ್ತು ಯುದ್ಧ ಕವಚಗಳು ಅಭಿವೃದ್ಧಿಗೊಂಡವು. ಗುರಾಣಿಗಳನ್ನು ಕಂಚಿನ ಕೊಂಡಿಯೊಂದಿಗೆ ಪ್ರಬಲ ಮರದಿಂದ ತಯಾರಿಸುತ್ತಿದ್ದರು, ಭರ್ಜಿಗಳಿಗೆ ಕಂಚಿನ ತುದಿಯನ್ನು ಸಿಕ್ಕಿಸುತ್ತಿದ್ದರು. ಅದಕ್ಕಾಗಿ ಏಷ್ಯಾದ ಸೈನಿಕರಿಂದ ಸಲಿಕೆಯನ್ನು ಹೋಲುವ ಕತ್ತಿ, ಖೋಪೆಶ್ಅನ್ನು ತರಿಸಿಕೊಂಡರು. ಫೇರೋ ಸೇನೆಯ ಮುಖಂಡ ಸ್ಥಾನದಲ್ಲಿ ಸವಾರಿ ಮಾಡುವುದನ್ನು ಕಲೆ ಮತ್ತು ಸಾಹಿತ್ಯದಲ್ಲಿ ಸಾಮಾನ್ಯವಾಗಿ ಚಿತ್ರಿಸಲಾಗಿದೆ. ಸೀಕೆನೆನ್ರೆ ಟಾವೊ II ಮತ್ತು ಅವನ ಮಕ್ಕಳು ಮೊದಲಾದ ಕೆಲವು ಫೇರೋಗಳು ಹಾಗೆ ಮಾಡಿದ್ದಾರೆ, ಎಂಬುದಕ್ಕೆ ಸಾಕ್ಷ್ಯಾಧಾರವಿದೆ. ಸೈನಿಕರನ್ನು ಸಾಮಾನ್ಯ ನಾಗರಿಕ ಸಮೂಹದಿಂದ ನೇಮಕಮಾಡಿಕೊಳ್ಳಲಾಗುತ್ತಿತ್ತು. ಆದರೆ ವಿಶೇಷವಾಗಿ ಹೊಸ ರಾಜ್ಯದ ನಂತರ ನುಬಿಯಾ, ಕುಶ್ ಮತ್ತು ಲಿಬ್ಯಾದಿಂದ ಕೂಲಿ ಸೈನಿಕರನ್ನು ತರಿಸಿದಾಗ ಅವರು ಈಜಿಪ್ಟ್ ಪರವಾಗಿ ಕಾದಾಡಲು ಆರಂಭಿಸಿದರು‌.

ತಂತ್ರಜ್ಞಾನ, ಔಷಧ ವೈದ್ಯಶಾಸ್ತ್ರ ಮತ್ತು ಗಣಿತಶಾಸ್ತ್ರ

ತಂತ್ರಜ್ಞಾನ

ತಂತ್ರಜ್ಞಾನ, ಔಷಧ ಮತ್ತು ಗಣಿತಶಾಸ್ತ್ರದಲ್ಲಿ ಪ್ರಾಚೀನ ಈಜಿಪ್ಟ್‌ ತುಲನಾತ್ಮಕವಾಗಿ ಅತಿಹೆಚ್ಚಿನ ಪ್ರಮಾಣದ ಉತ್ಪಾದಕತೆ ಮತ್ತು ಬದಲಾವಣೆಯನ್ನು ಸಾಧಿಸಿತು. ಸಾಂಪ್ರದಾಯಿಕ ಪ್ರಾಯೋಗಿಕ ವಿಧಾನದಲ್ಲಿ, ಎಡ್ವಿನ್ ಸ್ಮಿತ್ ಮತ್ತು ಎಬರ್ಸ್ ಪಪೈರಿ (ಕ್ರಿ.ಪೂ. 1600) ಸಾಕ್ಷ್ಯಾಧಾರ ನೀಡಿದಂತೆ, ಈಜಿಪ್ಟ್‌ ಮೊದಲ ಮನ್ನಣೆಯನ್ನು ಪಡೆದುಕೊಂಡಿದೆ. ವೈಜ್ಞಾನಿಕ ವಿಧಾನಗಳ ಮ‌ೂಲವೂ ಪ್ರಾಚೀನ ಈಜಿಪ್ಟಿನವರಿಂದ ಆರಂಭವಾದುದೆಂದು ಹೇಳಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಈಜಿಪ್ಟಿನವರು ತಮ್ಮದೇ ಆದ ವರ್ಣಮಾಲೆ ಮತ್ತು ದಶಾಂಶ ಪದ್ಧತಿಯನ್ನು ಸೃಷ್ಟಿಸಿದರು.

ಪ್ರಾಚೀನ ಈಜಿಪ್ಟ್‌ 
ಗಾಜು ತಯಾರಿಸುವುದು ಹೆಚ್ಚು ಅಭಿವೃದ್ಧಿಗೊಂಡ ಒಂದು ಉನ್ನತ ಕಲೆಯಾಗಿತ್ತು.

ನಕಾಸೆ ಪಿಂಗಾಣಿ ಮತ್ತು ಗಾಜು

ಪುರಾತನ ರಾಜ್ಯಾಡಳಿತದ ಅವಧಿಯ ಮೊದಲೇ ಪ್ರಾಚೀನ ಈಜಿಪ್ಟಿನವರು ನಕಾಸೆ ಪಿಂಗಾಣಿ ಎನ್ನುವ ಗಾಜಿನ ತರದ ವಸ್ತುವನ್ನು ಬಳಕೆಗೆ ತಂದರು. ಅದನ್ನು ಅವರು ಕೃತಕ ಬೆಲೆಬಾಳುವ ಶಿಲೆಯ ಪ್ರಕಾರವೆಂದು ಭಾವಿಸುತ್ತಿದ್ದರು. ನಕಾಸೆ ಪಿಂಗಾಣಿಯು ಸಿಲಿಕ, ಸ್ವಲ್ಪ ಪ್ರಮಾಣದ ಸುಣ್ಣ ಮತ್ತು ಸೋಡ ಹಾಗೂ ತಾಮ್ರದಂತಹ ಬಣ್ಣ ನೀಡುವ ವಸ್ತು ಮೊದಲಾದವುಗಳಿಂದ ತಯಾರಿಸಿದ ಜೇಡಿಮಣ್ಣಿಲ್ಲದ ಒಂದು ಪಿಂಗಾಣಿ. ಇದನ್ನು ಮಣಿ, ಹಾಸು ಬಿಲ್ಲೆ, ಚಿಕ್ಕಬೊಂಬೆ ಮತ್ತು ಸಣ್ಣ ಸಾಮಾನುಗಳನ್ನು ತಯಾರಿಸಲು ಬಳಸುತ್ತಿದ್ದರು. ನಕಾಸೆ ಪಿಂಗಾಣಿಯನ್ನು ತಯಾರಿಸಲು ಅನೇಕ ವಿಧಾನಗಳನ್ನು ಬಳಸಲಾಗುತ್ತಿತ್ತು. ಆದರೆ ವಿವಿಧ ನಮೂನೆಯ ಉತ್ಪಾದನೆಯಲ್ಲಿ ಪುಡಿಮಾಡಿದ ವಸ್ತುಗಳನ್ನು ಪೇಸ್ಟಿನ ರೂಪದಲ್ಲಿ ಜೇಡಿಮಣ್ಣಿನ ಗಟ್ಟಿಭಾಗದ ಮೇಲೆ ಹಚ್ಚಿ ಸುಡಲಾಗುತ್ತಿತ್ತು. ಇದಕ್ಕೆ ಸಂಬಂಧಿತ ತಂತ್ರಜ್ಞಾನದಲ್ಲಿ ಪ್ರಾಚೀನ ಈಜಿಪ್ಟಿನವರು ಈಜಿಪ್ಟ್‌ ನೀಲಿ ಎನ್ನುವ ಬಣ್ಣವೊಂದನ್ನು ಕಂಡುಹಿಡಿದರು, ಇದನ್ನು ನೀಲಿ(ಸ್ರಾವಕ ದೃವಗಳ ಸಂಯುಕ್ತ)ಪ್ರಿಟ್ ಎಂದೂ ಕರೆಯಲಾಗುತ್ತಿತ್ತು. ಇದನ್ನು ಸಿಲಿಕ, ತಾಮ್ರ, ಸುಣ್ಣ ಮತ್ತು ನ್ಯಾಟ್ರೋನ್‌ನಂತಹ ಕ್ಷಾರ(ಅಲ್ಕಲೈ) ಮೊದಲಾದವುಗಳನ್ನು ಶಾಖದಿಂದ ಕರಗಿಸಿ (ಅಥವಾ ಹೆಪ್ಪುಗಟ್ಟಿಸಿ) ತಯಾರಿಸಲಾಗುತ್ತಿತ್ತು. ಈ ಉತ್ಪನ್ನವನ್ನು ಪುಡಿಮಾಡಿ ಬಣ್ಣವಾಗಿ ಬಳಸುತ್ತಿದ್ದರು.

ಪ್ರಾಚೀನ ಈಜಿಪ್ಟಿನವರು ಗಾಜಿನಿಂದ ವಿವಿಧ ರೀತಿಯ ಅತ್ಯುತ್ತಮ ವಸ್ತುಗಳನ್ನು ಚಾಣಾಕ್ಷತೆಯಿಂದ ನಿರ್ಮಿಸುತ್ತಿದ್ದರು. ಆದರೆ ಅವರು ಇದನ್ನು ಸ್ವತಂತ್ರವಾಗಿ ರಚಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವರು ಕಚ್ಚಾ ಗಾಜನ್ನು ಸ್ವತಃ ತಾವೇ ಮಾಡಿಕೊಳ್ಳುತ್ತಿದ್ದರೇ ಅಥವಾ ಎರಕ ಹೊಯ್ದ ಗಾಜಿನ ಗಟ್ಟಿಗಳನ್ನು ಆಮದುಮಾಡಿಕೊಂಡು ನಂತರ ಕರಗಿಸಿ ತಯಾರಿಸುತ್ತಿದ್ದರೇ ಎಂಬುದೂ ಸಹ ಅಸ್ಪಷ್ಟವಾಗಿದೆ. ಅದೇನೆ ಇದ್ದರೂ ಗಾಜಿನ ವಸ್ತುಗಳನ್ನು ತಯಾರಿಸುವಲ್ಲಿ ಹಾಗೂ ಉತ್ಪತ್ತಿ ಮಾಡಿದ ಗಾಜಿನ ಬಣ್ಣವನ್ನು ನಿಯಂತ್ರಿಸುವ ಲೋಹ ಧಾತುಗಳನ್ನು ಸೇರಿಸುವಲ್ಲಿ ಅವರು ತಾಂತ್ರಿಕ ಪರಿಣತಿ ಪಡೆದಿದ್ದರು. ಹಳದಿ, ಕೆಂಪು, ಹಸಿರು, ನೀಲಿ, ಬಿಳಿ ಮತ್ತು ನೇರಳೆ ಮೊದಲಾದವುಗಳನ್ನೂ ಒಳಗೊಂಡಂತೆ ಅನೇಕ ತರದ ಬಣ್ಣಗಳನ್ನು ಉತ್ಪಾದಿಸುತ್ತಿದ್ದರು. ಗಾಜನ್ನು ಪಾರದರ್ಶಕ ಅಥವಾ ಅಪಾರದರ್ಶಕವಾಗಿ ತಯಾರಿಸುತ್ತಿದ್ದರು.

ಔಷಧಿ

ಪ್ರಾಚೀನ ಈಜಿಪ್ಟ್‌ 
ಟಾಲೆಮಿಯ ಅವಧಿಯ ಬರಹದಲ್ಲಿ ಕೆತ್ತಿದ ಕೋಮ್ ಓಂಬೊದ ದೇವಾಲಯದಲ್ಲಿದ್ದ ಪ್ರಾಚೀನ ಈಜಿಪ್ಟ್‌ ವೈದ್ಯಕೀಯ ಸಾಧನ-ಸಲಕರಣೆಗಳು.

ಪ್ರಾಚೀನ ಈಜಿಪ್ಟಿನವರ ವೈದ್ಯಕೀಯ, ಆರೋಗ್ಯ ಕುರಿತಾದ ತೊಂದರೆಗಳು ಅವರ ಬದುಕಿನ ಪರಿಸರದಿಂದ ಉದ್ಭವಿಸುತ್ತಿದ್ದವು. ನೈಲ್‌ ನದಿಗೆ ಹತ್ತಿರದಲ್ಲಿಯೇ ಜನರು ಬದುಕು ಮತ್ತು ಕೆಲಸ ಮಾಡುತ್ತಿದುದರಿಂದ ಈಜಿಪ್ಟಿನವರಿಗೆ ಮಲೇರಿಯಾದ ಅಪಾಯ ಹೆಚ್ಚಾಗಿತ್ತು. ಅಲ್ಲದೇ ಚಪ್ಪಣೆ ಹುಳುವಿನಂತಹ ಆರೋಗ್ಯಕ್ಕೆ ಹಾನಿಕಾರಕ ಪರಾವಲಂಬಿಗಳು ಜನರನ್ನು ತೊಂದರೆಗೆ ಈಡು ಮಾಡುತ್ತಿದ್ದವು. ಇದು ಪಿತ್ತಜನಕಾಂಗ ಮತ್ತು ಕರುಳಿನ ಹಾನಿಗೆ ಕಾರಣವಾಯಿತು. ಮೊಸಳೆ ಮತ್ತು ನೀರ್ಗುದುರೆ ಮೊದಲಾದ ಅಪಾಯಕಾರಿ ವನ್ಯಜೀವಿಗಳ ಅಪಾಯವೂ ಸಾಮಾನ್ಯವಾಗಿತ್ತು. ಜೀವನ ಪೂರ್ತಿ ಬೇಸಾಯ ಮತ್ತು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮ‌ೂಳೆ ಮತ್ತು ಬೆನ್ನೆಲುಬಿನ ತೊಂದರೆಯಿಂದ ಬಳಲುತ್ತಿದ್ದರು. ನಿರ್ಮಾಣ ಕೆಲಸ ಮತ್ತು ಯುದ್ಧದಿಂದಲೂ ಜನರಿಗೆ ಮಾರಣಾಂತಿಕ ಗಾಯಗಳಾಗುತ್ತಿದ್ದವು. ಹಿಟ್ಟು ಬೀಸುವ ಕಲ್ಲಿನ ಗಿರಣಿಗಳಲ್ಲಿ ಹಿಟ್ಟಿನೊಂದಿಗೆ ಬರುತ್ತಿದ್ದ ಮರಳು ಮತ್ತು ಕಲ್ಲಿನ ಸಣ್ಣ ಕಣಗಳಿಂದಾಗಿ ಹಲ್ಲುಗಳು ಸವೆತಕ್ಕೊಳಗಾಗುತ್ತಿದ್ದವು. ಅದರಿಂದಾಗಿ ಬಾವು ವಸಡಿನ ಊತ ಉಂಟಾಗುತ್ತಿತ್ತು. (ಆದರೂ ಹಲ್ಲಿನ ಕ್ಷಯ ಅಪರೂಪವಾಗಿತ್ತು).

ಶ್ರೀಮಂತರ ಆಹಾರದಲ್ಲಿ ಸಕ್ಕರೆಯು ಹೆಚ್ಚಿನ ಪ್ರಮಾಣದಲ್ಲಿತ್ತು. ಅದು ಹಲ್ಲಿಗೆ ಸಂಬಂಧಿಸಿದ ರೋಗಗಳಿಗೆ ಕಾರಣವಾಯಿತು. ಸಮಾಧಿ ಗೋಡೆಗಳಲ್ಲಿ ಆತ್ಮಾಭಿಮಾನದ ದೇಹರಚನೆಗಳನ್ನು ಚಿತ್ರಿಸಲಾಗಿದ್ದರೂ, ಉನ್ನತ ವರ್ಗದವರ ಶ್ರೇಷ್ಠ ಮಮ್ಮಿಗಳು ಮಿತಿಮೀರಿದ ವ್ಯಾಮೋಹದ ಬದುಕಿನ ಪರಿಣಾಮಗಳನ್ನು ತೋರಿಸಿಕೊಟ್ಟಿವೆ. ವಯಸ್ಕರ ಆಯುಷ್ಯ ಪ್ರಮಾಣ ಅಥವಾ ಜೀವನದ ನಿರೀಕ್ಷೆಯು ಪುರುಷರಿಗೆ 35 ಮತ್ತು ಮಹಿಳೆಯರಿಗೆ 30 ಎಂದಿತ್ತು. ಆದರೆ ಸುಮಾರು ಮೂರನೇ ಒಂದರಷ್ಟು ಜನರು ಅಪ್ರಾಪ್ತ ವಯಸ್ಸಿನಲ್ಲೇ ಸಾವನ್ನಪ್ಪುತ್ತಿದುದರಿಂದ ಪ್ರೌಢಾವಸ್ಥೆ ತಲುಪುವುದು ಕಷ್ಟವಾಗಿತ್ತು.

ಪ್ರಾಚೀನ ಈಜಿಪ್ಟಿನ ವೈದ್ಯರು ರೋಗ ವಾಸಿಮಾಡುವ ತಮ್ಮ ಕೌಶಲದಿಂದ ಪುರಾತನ ಪೌರಾತ್ಯ ಪ್ರದೇಶಗಳಲ್ಲಿ ಖ್ಯಾತಿಗಳಿಸಿದ್ದರು. ಇಮ್ಹೋಟೆಪ್‌ನಂತಹ ಕೆಲವರು ಅವರ ಮರಣದ ನಂತರವೂ ಪ್ರಸಿದ್ಧರಾಗಿಯೇ ಉಳಿದರು. ಈಜಿಪ್ಟಿನ ವೈದ್ಯರಲ್ಲಿ ವಿಶೇಷ ಪಾಂಡಿತ್ಯ ಪಡೆದವರು ಹೆಚ್ಚಿನವರಿದ್ದರು, ಕೆಲವರು ತಲೆ ಮತ್ತು ಹೊಟ್ಟೆಯ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದರು, ಇನ್ನು ಕೆಲವರು ಕಣ್ಣಿನ ವೈದ್ಯರು ಮತ್ತು ಹಲ್ಲಿನ ತಜ್ಞರಾಗಿದ್ದರು ಎಂಬುದನ್ನು ಹೆರೊಡೋಟಸ್‌ ಗಮನಿಸಿದ್ದಾನೆ. ವೈದ್ಯರ ತರಬೇತಿಯು ಪರ್ ಆಂಖ್‌ ಅಥವಾ "ಹೌಸ್ ಆಫ್ ಲೈಫ್" ಸಂಸ್ಥೆಗಳಲ್ಲಿ ನಡೆಯುತ್ತಿತ್ತು. ವಿಶೇಷವಾಗಿ ಹೊಸ ರಾಜ್ಯದ ಭಾಗದಲ್ಲಿ ಪರ್-ಬಾಸ್ಟೆಟ್‌ನಲ್ಲಿ ಹಾಗೂ ಕೊನೆಯ ಅವಧಿಯಲ್ಲಿ ಅಬಿದೋಸ್‌ ಮತ್ತು ಸೈಸ್‌ನಲ್ಲಿ ನೆರವೇರಿತ್ತು. ವೈದ್ಯಕೀಯ ಪಪೈರಿಯು ಅಂಗರಚನಾಶಾಸ್ತ್ರ, ಗಾಯ ಮತ್ತು ಪ್ರಾಯೋಗಿಕ ಚಿಕಿತ್ಸೆಗಳ ಅನುಭವಜನಿತ ಮಾಹಿತಿಯನ್ನು ತೋರಿಸಿಕೊಡುತ್ತದೆ.

ಗಾಯಗಳಿಗೆ ಹಸಿ ಮಾಂಸ, ಬಿಳಿ ನಾರುಬಟ್ಟೆ, ಹೊಲಿಗೆ, ಬಲೆ, ಮೆತ್ತೆ ಮತ್ತು ಸೋಂಕನ್ನು ತಡೆಗಟ್ಟಲು ಜೇನಿನಲ್ಲಿ ಅದ್ದಿದ ಹೀರೊತ್ತಿಗೆಯಿಂದ ಬ್ಯಾಂಡೇಜು ಕಟ್ಟಿ ಚಿಕಿತ್ಸೆ ಮಾಡಲಾಗುತ್ತಿತ್ತು. ಅಫೀಮನ್ನು ನೋವು ಶಾಮಕವಾಗಿ ಬಳಸುತ್ತಿದ್ದರು. ಉತ್ತಮ ಆರೋಗ್ಯಕ್ಕಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿಗಳನ್ನು ನಿಯತವಾಗಿ ಉಪಯೋಗಿಸುತ್ತಿದ್ದರು. ಅಲ್ಲದೇ ಅವು ಅಸ್ತಮಾ ರೋಗಲಕ್ಷಣಗಳಿಂದ ಉಪಶಮನ ಕೊಡುತ್ತವೆ, ಎಂದು ನಂಬಿದ್ದರು. ಪ್ರಾಚೀನ ಈಜಿಪ್ಟಿನ ಶಸ್ತ್ರಚಿಕಿತ್ಸಾ ತಜ್ಞರು ಗಾಯಗಳಿಗೆ ಹೊಲಿಗೆ ಹಾಕುತ್ತಿದ್ದರು, ಮುರಿದ ಮೂಳೆಗಳನ್ನು ಸರಿಪಡಿಸಿ, ರೋಗಗ್ರಸ್ತ ಅಂಗಗಳ ಅಂಗಚ್ಛೇದನ ಮಾಡುತ್ತಿದ್ದರು. ಪೆಟ್ಟುಗಳು ತುಂಬಾ ಗಂಭೀರವಾಗಿದ್ದರೆ ಅಂತಹ ರೋಗಿಯನ್ನು ಅವನು ಸಾಯುವವರೆಗೆ ಹೇಗೆ ನೆಮ್ಮದಿಯಾಗಿರಿಸಬಹುದು ಎಂಬುದನ್ನು ಕಂಡುಕೊಳ್ಳುತ್ತಿದ್ದರು.

ಹಡಗು ನಿರ್ಮಾಣ

ಆರಂಭಿಕ ಈಜಿಪ್ಟಿನವರು ಮರದ ಹಲಗೆಗಳನ್ನು ಸೇರಿಸಿ ಹಡಗಿನ ಹೊರಭಾಗವನ್ನು ತಯಾರಿಸುವುದನ್ನು ಕ್ರಿ.ಪೂ. 3000ರಲ್ಲಿಯೇ ತಿಳಿದಿದ್ದರು. ಇದುವರೆಗೆ ಬೆಳಕಿಗೆ ಬಂದ ಹಳೆಯ ಹಡಗುಗಳನ್ನು, ಅಬಿದೋಸ್‌‌ನಲ್ಲಿ ಕಂಡುಬಂದ 14 ಹಡಗುಗಳು, ಮರದ ಹಲಗೆಗಳನ್ನು ಒಟ್ಟಿಗೆ ಸೇರಿಸಿ "ಹೊಲಿದು" ತಯಾರಿಸಲಾಗಿದೆ, ಎಂದು ಪ್ರಾಚ್ಯವಸ್ತು ಸಂಸ್ಥೆ,ಆರ್ಕಿಯಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಅಮೇರಿಕಾ ವರದಿಮಾಡಿದೆ. ಮರದ ಹಲಗೆಗಳನ್ನು ಒಟ್ಟಿಗೆ ಬಿಗಿಯಲು ಹೊಲಿದ ತೊಗಲಪಟ್ಟಿಗಳನ್ನು ಬಳಸುತ್ತಿದ್ದರು. ಅಲ್ಲದೇ ಜೋಡಿಸಿದ ಕೊಂಡಿ ಸಾಲುಗಳನ್ನು ಭದ್ರವಾಗಿಸಲು ಹಲಗೆಗಳ ಮಧ್ಯೆ ಜೊಂಡು ಅಥವಾ ಹುಲ್ಲನ್ನು ತುರುಕುತ್ತಿದ್ದರು, ಎಂಬುದನ್ನು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಈಜಿಪ್ಟ್‌ ಶಾಸ್ತ್ರಜ್ಞ ಡೇವಿಡ್ ಒಕಾನ್ನರ್ ಕಂಡುಕೊಂಡಿದ್ದಾರೆ. ಹಡಗುಗಳೆಲ್ಲವೂ ಫೇರೋ ಖಾಸೆಖೆಮ್ವಿಯ ಶವದ ಕಟ್ಟಡದ ಹತ್ತಿರ ಹೂಳಲ್ಪಟ್ಟಿದ್ದರಿಂದ, ಆರಂಭದಲ್ಲಿ ಅವು ಅವನಿಗೆ ಸೇರಿದವುಗಳೆಂದು ನಂಬಲಾಗಿತ್ತು. ಆದರೆ 14ರಲ್ಲಿ ಒಂದು ಹಡಗು ಕ್ರಿ.ಪೂ. 3000ರ ದಿನಾಂಕವನ್ನು ಸೂಚಿಸುತ್ತದೆ. ಅಲ್ಲದೇ ಪಾತ್ರೆಗಳೊಂದಿಗೆ ಹೂತ ಮಣ್ಣಿನ ಜಾಡಿಗಳೂ ಸಹ ಹಿಂದಿನ ಕಾಲವನ್ನು ನಿರೂಪಿಸುತ್ತವೆ. ಕ್ರಿ.ಪೂ. 3000ರ ದಿನಾಂಕವನ್ನು ಸೂಚಿಸುವ ಹಡಗು 75 ಅಡಿ ಉದ್ದ ಇತ್ತು. ಅದು ಬಹುಶಃ ಹಿಂದಿನ ಫೇರೋಗೆ ಸೇರಿದ್ದಾಗಿತ್ತು, ಎಂದು ಈಗ ತಿಳಿಯಲಾಗಿದೆ. ಪ್ರೊಫೆಸರ್ ಒಕಾನ್ನರ್ ಪ್ರಕಾರ, 5000 ವರ್ಷ-ಹಳೆಯ ಹಡಗು ಆಗಿನ ಆಡಳಿತಗಾರ ಫೇರೋ ಅಹಗೆ ಸೇರಿದ್ದೆಂದು ಎಂದು ಹೇಳಲಾಗಿದೆ.

ಆರಂಭಿಕ ಈಜಿಪ್ಟಿನವರು ಮರದ ಹಲಗೆಗಳ ಜೋಡಣೆಗಳ ಸಂದುಮುಚ್ಚಲು ಡಾಮರು ಮೇಣವನ್ನು ಬಳಸಿಕೊಂಡು ಅವುಗಳನ್ನು ಒಟ್ಟಿಗೆ ಕೂಡಿಸಿ ಮರದ ಗೂಟಗಳಿಂದ ಭದ್ರಪಡಿಸುವುದನ್ನು ತಿಳಿದಿದ್ದರು. ಸುಮಾರು ಕ್ರಿ.ಪೂ. 2500ರಲ್ಲಿ ನಾಲ್ಕನೆ ರಾಜವಂಶದ ಅವಧಿಯಲ್ಲಿ ಗ್ರೇಟ್ ಪಿರಮಿಡ್ ಆಫ್ ಗಿಜದ ಬುಡದಲ್ಲಿನ ಗಿಜ ಪಿರಮಿಡ್ ಸಂಕೀರ್ಣದ ಹೊಂಡದಲ್ಲಿದ್ದ "ಖುಫು ಹಡಗು" ಎಂಬ 43.6-ಮೀಟರ್ ಗಾತ್ರದ ಹಡಗಾಗಿದೆ. ಒಂದು ಸಂಪೂರ್ಣ ಹಡಗು ರಚನಾ ವಿಧಾನಕ್ಕೆ ಶಾಶ್ವತ ಉದಾಹರಣೆಯಾಗಿದೆ. ಇದು ಪುರಾತನ ಈಜಿಪ್ಟಿನಲ್ಲಿದ್ದ 'ಸೂರ್ಯನ ಹಡಗಿನ' ನಂಬಿಕೆಯ ಸಂಕೇತ ಎಂದು ನಂಬಲಾಗಿದೆ. ಹಿಂದಿನ ಈಜಿಪ್ಟಿನವರು ಮರದ ಹಲಗೆಯ ಚಡಿ ಮತ್ತು ಕೂರಂಚು ಸಂದುಗಳೊಂದಿಗೆ ಜೋಡಿಸಿ ಹಡಗಿನ ಹಲಗೆಗಳನ್ನು ಒಟ್ಟಿಗೆ ಬಿಗಿಯುವುದನ್ನೂ ತಿಳಿದಿದ್ದರು. ಪ್ರಾಚೀನ ಈಜಿಪ್ಟಿನವರು ನೌಕಾ ಸಂಚಾರ ಯೋಗ್ಯ ನೈಲ್ ನದಿಯಲ್ಲಿ ಸಂಚರಿಸುವ ಅತಿದೊಡ್ಡ ಹಡಗುಗಳನ್ನು ನಿರ್ಮಿಸಲು ಸಮರ್ಥರಾಗಿದ್ದರೂ, ಅವರು ಉತ್ತಮ ನಾವಿಕರಾಗಿರಲಿಲ್ಲ; ಅಲ್ಲದೇ ಮೆಡಿಟರೇನಿಯನ್ ಅಥವಾ ಕೆಂಪು ಸಮುದ್ರಗಳಲ್ಲಿ ನೌಕಾಯಾನ ಮಾಡುವುದರಲ್ಲಿ ಅಥವಾ ಹಡಗು ನಡೆಸುವುದರಲ್ಲಿ ಹೆಚ್ಚಾಗಿ ತೊಡಗುತ್ತಿರಲಿಲ್ಲ.

ಗಣಿತಶಾಸ್ತ್ರ

ಗಣಿತಶಾಸ್ತ್ರೀಯ ಲೆಕ್ಕಾಚಾರದ ಆರಂಭಿಕ ಉದಾಹರಣೆಗಳು ಪೂರ್ವರಾಜವಂಶೀಯ ನಕಾಡ ಅವಧಿಗೆ ಸೇರಿದ್ದವೆಂದು ಸೂಚಿಸುತ್ತವೆ. ಅಲ್ಲದೇ ಸಂಪೂರ್ಣವಾಗಿ ಅಭಿವೃದ್ಧಿಹೊಂದಿದ ಸಂಖ್ಯಾ ಪದ್ಧತಿಯೊಂದನ್ನು ತೋರಿಸುತ್ತವೆ. ಒಬ್ಬ ಶಿಕ್ಷಣ ಪಡೆದ ಈಜಿಪ್ಟಿನವನಿಗೆ ಗಣಿತಶಾಸ್ತ್ರದ ಪ್ರಾಮುಖ್ಯತೆಯನ್ನು ಹೊಸ ರಾಜ್ಯದ ಕಾಲ್ಪನಿಕ ಪತ್ರದಿಂದ ಸೂಚಿಸಲಾಗುತ್ತದೆ. ಇದರಲ್ಲಿ ಬರೆಯುವವನು ತನಗೆ ಮತ್ತು ಮತ್ತೊಬ್ಬ ಬರಹಗಾರನೊಂದಿಗೆ ಭೂಮಿ, ಕೆಲಸಗಾರರ ಮತ್ತು ಧಾನ್ಯಗಳ ಎಣಿಕೆಯಂತಹ ದಿನನಿತ್ಯದ ಲೆಕ್ಕಾಚಾರದ ಬಗ್ಗೆ ವಿದ್ವತ್ಪೂರ್ಣ ಸ್ಪರ್ಧೆಯೊಂದನ್ನು ಎದುರಿಸುತ್ತಾನೆ. ಪ್ರಾಚೀನ ಈಜಿಪ್ಟಿನವರು ನಾಲ್ಕು ಮ‌ೂಲ ಗಣಿತಶಾಸ್ತ್ರೀಯ ಕ್ರಿಯೆಗಳಾದ - ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ - ಮಾಡುತ್ತಿದ್ದರು, ಭಿನ್ನರಾಶಿಯನ್ನು ಬಳಸುತ್ತಿದ್ದರು, ಪೆಟ್ಟಿಗೆ ಮತ್ತು ಪಿರಮಿಡ್‌‌ಗಳ ಗಾತ್ರವನ್ನು ಲೆಕ್ಕ ಮಾಡುತ್ತಿದ್ದರು. ಅಲ್ಲದೇ ಆಯತ, ತ್ರಿಕೋನ, ವೃತ್ತ ಮತ್ತು ಗೋಲಗಳ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯುತ್ತಿದ್ದರು; ಎಂದು ರಿಂಡ್ ಮೆಥಮ್ಯಾಟಿಕಲ್ ಪಪೈರಸ್‌ ಮತ್ತು ಮೋಸ್ಕೊ ಮೆಥಮ್ಯಾಟಿಕಲ್ ಪಪೈರಸ್‌‌ನಂತಹ ಮ‌ೂಲಗ್ರಂಥಗಳು ತೋರಿಸುತ್ತವೆ[ಸೂಕ್ತ ಉಲ್ಲೇಖನ ಬೇಕು]. ಅವರು ಬೀಜಗಣಿತ ಮತ್ತು ರೇಖಾಗಣಿತದ ಮ‌ೂಲ ಅಂಶಗಳನ್ನು ತಿಳಿದಿದ್ದರು, ಹಾಗೂ ಸರಳ ಏಕಕಾಲಿಕ ಸಮೀಕರಣಗಳನ್ನು ಬಿಡಿಸುತ್ತಿದ್ದರು .

D22
23
in hieroglyphs

ಗಣಿತಶಾಸ್ತ್ರೀಯ ಸಂಖ್ಯಾಪದ್ಧತಿಯು ದಶಮಾನವಾಗಿತ್ತು. ಅದು ಚಿತ್ರಲಿಪಿ ಸಂಕೇತಗಳ ಆಧಾರದಲ್ಲಿ ಹತ್ತರ ಘಾತವು ಒಂದು ದಶಲಕ್ಷದವರೆಗೆ ಇರುತ್ತಿತ್ತು. ಪ್ರತಿಯೊಂದನ್ನೂ ಅಪೇಕ್ಷಿತ ಸಂಖ್ಯೆಯನ್ನಾಗಿ ಪಡೆಯಲು ಕೂಡಿಸಬೇಕಾದಷ್ಟು ಬಾರಿ ಬರೆಯಲಾಗುತ್ತಿತ್ತು; ಆದ್ದರಿಂದ ಎಂಬತ್ತು ಅಥವಾ ಎಂಟು ನೂರನ್ನು ಬರೆಯಲು ಹತ್ತರ ಅಥವಾ ನೂರರ ಚಿಹ್ನೆಯನ್ನು ಎಂಟು ಬಾರಿ ಅನುಕ್ರಮವಾಗಿ ಬರೆಯಲಾಗುತ್ತಿತ್ತು. ಅವರ ಲೆಕ್ಕಾಚಾರ ವಿಧಾನವು ಒಂದಕ್ಕಿಂತ ದೊಡ್ಡ ಅಂಶವನ್ನು ಹೊಂದಿರುವ ಹೆಚ್ಚಿನ ಭಿನ್ನರಾಶಿಗಳನ್ನು ನಿಭಾಯಿಸದಿದ್ದುದರಿಂದ, ಪ್ರಾಚೀನ ಈಜಿಪ್ಟ್‌ ಭಿನ್ನರಾಶಿಗಳು ಅನೇಕ ಭಿನ್ನರಾಶಿಗಳ ಮೊತ್ತವಾಗಿ ಬರೆಯಲ್ಪಡುತ್ತಿದ್ದವು. ಉದಾಹರಣೆಗಾಗಿ, ಭಿನ್ನರಾಶಿ ಐದನೇ ಎರಡನ್ನು(2/5) ಮ‌ೂರನೇ ಒಂದು(1/3) + ಹದಿನೈದನೇ ಒಂದು(1/15) ಎಂದು ಬರೆಯಲಾಗುತ್ತಿತ್ತು; ಇದನ್ನು ನಿಗದಿತ ಮೌಲ್ಯಗಳ ಕೋಷ್ಟಕವು ಸುಲಭಗೊಳಿಸುತ್ತಿತ್ತು. ಕೆಲವು ಸಾಮಾನ್ಯ ಭಿನ್ನರಾಶಿಗಳನ್ನು ವಿಶೇಷ ಉಬ್ಬುಚಿತ್ರಗಳಿಂದ ಬರೆಯಲಾಗುತ್ತಿತ್ತು. ಅದು ಆಧುನಿಕ ಮ‌ೂರನೇ ಎರಡನ್ನು ಬಲಭಾಗದಲ್ಲಿ ಕಾಣಿಸುವುದಕ್ಕೆ ಸಮನಾಗಿತ್ತು.

ಪ್ರಾಚೀನ ಈಜಿಪ್ಟ್‌ ಗಣಿತಶಾಸ್ತ್ರಜ್ಞರು ಪೈಥಾಗರಸ್ ಪ್ರಮೇಯ ಆಧಾರಿತ ನಿಯಮಗಳ ಬಗ್ಗೆ ತಿಳಿದಿದ್ದರು. ಉದಾಹರಣೆಗಾಗಿ, ಒಂದು ತ್ರಿಕೋನವು ಲಂಬಕೋನವನ್ನು ಹೊಂದಿದ್ದರೆ ಅದರ ವಿರುದ್ಧ ದಿಕ್ಕಿನಲ್ಲಿ ಕರ್ಣವನ್ನು ಹೊಂದಿರುತ್ತದೆ. ಅಲ್ಲದೇ ಅದರ ಪಾರ್ಶ್ವಗಳು 3–4–5 ಅನುಪಾತದಲ್ಲಿರುತ್ತವೆ. ಅವರು ವೃತ್ತದ ವ್ಯಾಸದಿಂದ ಒಂಭತ್ತನೆ ಒಂದನ್ನು ಕಳೆದು ನಂತರ ಬಂದ ಉತ್ತರವನ್ನು ವರ್ಗಮಾಡುವ ‌ಮೂಲಕ ವೃತ್ತದ ವಿಸ್ತೀರ್ಣವನ್ನು ಕಂಡುಹಿಡಿಯುತ್ತಿದ್ದರು:

    ವಿಸ್ತೀರ್ಣ ≈ [(89)D ] = (25681)r ≈ 3.16r  2,

ಇದು π r ಸಮೀಕರಣದ ತರ್ಕಬದ್ಧ ಅಂದಾಜು.

ರಚನೆಗಳಲ್ಲಿ ಸುವರ್ಣ ಅನುಪಾತವು ಪಿರಮಿಡ್‌‌ಗಳನ್ನೂ ಒಳಗೊಂಡಂತೆ ಈಜಿಪ್ಟಿನ ಅನೇಕ ನಿರ್ಮಾಣಗಳಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ. ಆದರೆ ಅದರ ಬಳಕೆಯು, ಸಾಮರಸ್ಯ ಮತ್ತು ಅನುಪಾತದ ಅಂತರ್ಬೋಧನೆಯ ಗ್ರಹಣಶಕ್ತಿಯೊಂದಿಗೆ ಕುಣಿಕೆಹಾಕಿದ ಹಗ್ಗದ ತುಂಡುಗಳ ಬಳಕೆಯಂತಹ ಪ್ರಾಚೀನ ಈಜಿಪ್ಟಿನ ರೂಢಿಗೆ ಉದ್ದೇಶಿಸಿರದ ಪರಿಣಾಮವಾಗಿರಬಹುದು.

ಪೂರ್ವಾರ್ಜಿತ(ಪರಂಪರೆ)

ಪ್ರಾಚೀನ ಈಜಿಪ್ಟ್‌ 
ಸುಪ್ರೀಮ್ ಕೌನ್ಸಿಲ್ ಆಫ್ ಆಂಟಿಕ್ವಿಟಿಯ ಪ್ರಸ್ತುತ ಮಹಾಕಾರ್ಯದರ್ಶಿ ಡಾ. ಜಾಹಿ ಹವಾಸ್.

ಪ್ರಾಚೀನ ಈಜಿಪ್ಟಿನ ಸಂಸ್ಕೃತಿ ಮತ್ತು ಸ್ಮಾರಕಗಳು ಪ್ರಪಂಚದಲ್ಲಿ ಶಾಶ್ವತ ಆಸ್ತಿಯನ್ನು ಬಿಟ್ಟುಹೋಗಿವೆ. ಉದಾಹರಣೆಗಾಗಿ, ಚೌಕ ಸೂಜಿಯಂಥ ಕಂಬ ಮತ್ತು ಇತರ ಸ್ಮಾರಕಗಳು ರೋಮ್‌ಗೆ ಸಾಗಿಸಲ್ಪಟ್ಟಿದ್ದರಿಂದ ಭಕ್ತಿ ಪಂಥದ ದೇವತೆ ಐಸಿಸ್‌ಳ ಆರಾಧನೆಯು ರೋಮನ್ ಸಾಮ್ರಾಜ್ಯದಲ್ಲಿ ಬಲುಪ್ರಸಿದ್ಧವಾಯಿತು‌. ರೋಮನ್ನರು ರಚನೆಗಳನ್ನು ಈಜಿಪ್ಟ್‌ ಶೈಲಿಯಲ್ಲಿ ನಿರ್ಮಿಸುವುದಕ್ಕಾಗಿ ನಿರ್ಮಾಣದ ವಸ್ತುಗಳನ್ನೂ ಈಜಿಪ್ಟಿನಿಂದ ಆಮದು ಮಾಡಿಕೊಂಡರು. ಹೆರೊಡೋಟಸ್‌, ಸ್ಟ್ರಾಬೊ ಮತ್ತು ಡಿಯೋಡರಸ್ ಸಿಕ್ಯೂಲಸ್ ಮೊದಲಾದ ಆರಂಭಿಕ ಇತಿಹಾಸಕಾರರು ಒಂದು ಪ್ರದೇಶದ ಬಗ್ಗೆ ಅಧ್ಯಯನ ಮಾಡಿ ಬರೆದಿದ್ದಾರೆ, ಅದನ್ನು ನಂತರ ರಹಸ್ಯ ತಾಣವೆಂದು ಹೇಳಲಾಗಿದೆ. ಮಧ್ಯ ಯುಗ ಮತ್ತು ಪುನರುಜ್ಜೀವನದ ಸಂದರ್ಭದಲ್ಲಿ ಕ್ರೈಸ್ತ ಧರ್ಮ ಮತ್ತು ನಂತರ ಇಸ್ಲಾಮ್ ಧರ್ಮಗಳು ಬೆಳೆದುದರಿಂದ ಈಜಿಪ್ಟ್‌ ಪೇಗನ್‌ ಸಂಸ್ಕೃತಿಯು ಅವನತಿ ಹೊಂದಲು ಆರಂಭವಾಯಿತು. ಆದರೆ ಈಜಿಪ್ಟ್‌ ಪ್ರಾಚೀನತೆಯ ಬಗೆಗಿನ ಆಸಕ್ತಿಯು ಧುಲ್-ನನ್ ಆಲ್-ಮಿಸ್ರಿ ಮತ್ತು ಆಲ್-ಮಾಕ್ರಿಜಿಯಂತಹ ಮಧ್ಯಕಾಲಿನ ಪಂಡಿತರ ಬರಹಗಳಲ್ಲಿ ಮುಂದುವರಿದಿದೆ.

ಅಂದರೆ 17 ಮತ್ತು 18ನೇ ಶತಮಾನದಲ್ಲಿ, ಯುರೋಪಿನ ದೇಶಪರ್ಯಟನೆ ಮಾಡುವವರು ಮತ್ತು ಪ್ರವಾಸಿಗರು ಅವರ ಅನುಭವದ ಬಗ್ಗೆ ಕಥೆಗಳನ್ನು ಬರೆಯುವ ಮ‌ೂಲಕ ಯುರೋಪಿನಾದ್ಯಂತ ಈಜಿಪ್ಟಿನ ಪ್ರಾಚೀನತೆಯ ಪ್ರಭಾವವನ್ನು ಪಸರಿಸಿದರು. ನವಚೈತನ್ಯವನ್ನುಂಟುಮಾಡಿದ ಈ ಆಸಕ್ತಿಯು ಪ್ರಮುಖ ಪ್ರಾಚೀನತೆಗಳ ಸಂಗ್ರಹಕ್ಕಾಗಿ ಈಜಿಪ್ಟಿಗೆ ಸಂಗ್ರಾಹಕರನ್ನು ಕಳುಹಿಸುವಂತೆ ಮಾಡಿತು. ಈಜಿಪ್ಟಿನಲ್ಲಿದ್ದ ಯುರೋಪಿನ ವಸಾಹತು ಆ ದೇಶದ ಐತಿಹಾಸಿಕ ಆಸ್ತಿಯನ್ನು ನಾಶ ಮಾಡಿದರೂ, ಕೆಲವು ವಿದೇಶಿಗರು ಹೆಚ್ಚು ಧನಾತ್ಮಕ ಫಲಿತಾಂಶಗಳನ್ನು ಹೊಂದಿದ್ದರು. ಉದಾಹರಣೆಗಾಗಿ, ನೆಪೋಲಿಯನ್ ಈಜಿಪ್ಟಿನ ನೈಸರ್ಗಿಕ ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ದಾಖಲಿಸಿಕೊಳ್ಳಲು ಸುಮಾರು 150 ವಿಜ್ಞಾನಿಗಳು ಮತ್ತು ಕಲಾವಿದರನ್ನು ಕರೆತಂದು ಈಜಿಪ್ಟ್‌ಶಾಸ್ತ್ರದಲ್ಲಿ ಮೊದಲ ಅಧ್ಯಯನಗಳನ್ನು ಮಾಡಿದನು. ಇದು ಡಿಸ್ಕ್ರಿಪ್ಶನ್ ದಿ ಐ'ಈಜಿಪ್ಟೆ ಯಲ್ಲಿ ಪ್ರಕಟವಾಗಿದೆ. 19ನೇ ಶತಮಾನದಲ್ಲಿ ಈಜಿಪ್ಟ್‌ ಸರಕಾರ ಮತ್ತು ಪುರಾತತ್ವಜ್ಞರು ಸಾಂಸ್ಕೃತಿಕ ಮಾನ್ಯತೆ ಮತ್ತು ಸಮಗ್ರತೆಯ ಪ್ರಾಮುಖ್ಯತೆಯನ್ನು ಭೂಶೋಧನೆಯಲ್ಲಿ ಕಂಡುಹಿಡಿದರು. ಸುಪ್ರೀಮ್ ಕೌನ್ಸಿಲ್ ಆಫ್ ಆಂಟಿಕ್ವಿಟೀಸ್ ಈಗ, ಸಂಪತ್ತಿನ ಬದಲು ಮಾಹಿತಿಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿರುವ ಎಲ್ಲಾ ಭೂಶೋಧನೆಗಳನ್ನು ಅಂಗೀಕರಿಸುತ್ತಿದೆ. ಅಲ್ಲದೇ ಮೇಲ್ವಿಚಾರಣೆಯನ್ನೂ ಮಾಡುತ್ತಿದೆ. ಈ ಕೌನ್ಸಿಲ್ ಈಜಿಪ್ಟಿನ ಐತಿಹಾಸಿಕ ಆಸ್ತಿಯನ್ನು ಸಂರಕ್ಷಿಸಲು ವಿನ್ಯಾಸಗೊಳಿಸಿದ ಮ್ಯೂಸಿಯಂ ಮತ್ತು ಸ್ಮಾರಕ ಮರುನಿರ್ಮಾಣ ಯೋಜನೆಗಳ ಮೇಲುಸ್ತುವಾರಿಯನ್ನೂ ನೋಡಿಕೊಳ್ಳುತ್ತಿದೆ‌.

ಟಿಪ್ಪಣಿಗಳು

Tags:

ಪ್ರಾಚೀನ ಈಜಿಪ್ಟ್‌ ಇತಿಹಾಸಪ್ರಾಚೀನ ಈಜಿಪ್ಟ್‌ ಸರಕಾರ ಮತ್ತು ಆರ್ಥಿಕ ಸ್ಥಿತಿಪ್ರಾಚೀನ ಈಜಿಪ್ಟ್‌ ಭಾಷೆಪ್ರಾಚೀನ ಈಜಿಪ್ಟ್‌ ಸಂಸ್ಕೃತಿಪ್ರಾಚೀನ ಈಜಿಪ್ಟ್‌ ತಂತ್ರಜ್ಞಾನ, ಔಷಧ ವೈದ್ಯಶಾಸ್ತ್ರ ಮತ್ತು ಗಣಿತಶಾಸ್ತ್ರಪ್ರಾಚೀನ ಈಜಿಪ್ಟ್‌ ಪೂರ್ವಾರ್ಜಿತ(ಪರಂಪರೆ)ಪ್ರಾಚೀನ ಈಜಿಪ್ಟ್‌ ಟಿಪ್ಪಣಿಗಳುಪ್ರಾಚೀನ ಈಜಿಪ್ಟ್‌ ಆಕರಗಳುಪ್ರಾಚೀನ ಈಜಿಪ್ಟ್‌ ಹೆಚ್ಚಿನ ಓದಿಗಾಗಿಪ್ರಾಚೀನ ಈಜಿಪ್ಟ್‌ ಹೊರಗಿನ ಕೊಂಡಿಗಳುಪ್ರಾಚೀನ ಈಜಿಪ್ಟ್‌ಇತಿಹಾಸಈಜಿಪ್ಟ್ಉತ್ತರ ಆಫ್ರಿಕಾರೋಮನ್ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಧರ್ಮ (ಭಾರತೀಯ ಪರಿಕಲ್ಪನೆ)೧೮೬೨ವಚನ ಸಾಹಿತ್ಯನಂಜನಗೂಡುವೃದ್ಧಿ ಸಂಧಿದೇವತಾರ್ಚನ ವಿಧಿಕರ್ನಾಟಕದ ವಾಸ್ತುಶಿಲ್ಪಹೈದರಾಲಿಗೂಬೆರಮೇಶ್ ಅರವಿಂದ್ಝಾನ್ಸಿ ರಾಣಿ ಲಕ್ಷ್ಮೀಬಾಯಿನಗೆಕೈಗಾರಿಕಾ ಕ್ರಾಂತಿಗೌತಮ ಬುದ್ಧಆಟಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪ್ರಬಂಧಭಾರತದಲ್ಲಿ ಕೃಷಿಕನ್ನಡ ಅಂಕಿ-ಸಂಖ್ಯೆಗಳುಭಾರತದ ಚುನಾವಣಾ ಆಯೋಗಜನರಲ್ ಕೆ ಎಸ್ ತಿಮ್ಮಯ್ಯಸುಧಾ ಮೂರ್ತಿಇಸ್ರೇಲ್ವೈ ಎಸ್. ಜಗನ್ಮೋಹನ್ ರೆಡ್ಡಿವಿಕ್ರಮಾದಿತ್ಯ ೬ಪ್ರಜಾವಾಣಿಕುಕ್ಕೆ ಸುಬ್ರಹ್ಮಣ್ಯ ದೇವಾಲಯತ್ರಿವೇಣಿಶಿಕ್ಷಕಶಬ್ದಕೇಂದ್ರ ಲೋಕ ಸೇವಾ ಆಯೋಗರತ್ನಾಕರ ವರ್ಣಿವಿಚ್ಛೇದನವಡ್ಡಾರಾಧನೆಆದಿ ಕರ್ನಾಟಕಚುನಾವಣೆಸಿದ್ಧಯ್ಯ ಪುರಾಣಿಕದಿಕ್ಕುಕನ್ನಡ ವ್ಯಾಕರಣಜಯಚಾಮರಾಜ ಒಡೆಯರ್ರಾಜ್‌ಕುಮಾರ್ಪೂರ್ಣಚಂದ್ರ ತೇಜಸ್ವಿಉಮಾಶ್ರೀಕಾವೇರಿ ನದಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಇತಿಹಾಸವಂದನಾ ಶಿವಚಾಮುಂಡರಾಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ನಾಟಕದ ಏಕೀಕರಣಬ್ಯಾಡ್ಮಿಂಟನ್‌ಸಂಚಿ ಹೊನ್ನಮ್ಮಭಾರತೀಯ ಧರ್ಮಗಳುಕರ್ನಾಟಕದ ಅಣೆಕಟ್ಟುಗಳುಜಾಗತೀಕರಣಉಳ್ಳಾಲಹಳೆಗನ್ನಡದಾಸ ಸಾಹಿತ್ಯಅದ್ವೈತಸತಿ ಪದ್ಧತಿಸಾರಾ ಅಬೂಬಕ್ಕರ್ಜೀವಕೋಶಶೃಂಗೇರಿಸ್ತನ್ಯಪಾನಮುಖ್ಯ ಪುಟಬೇಲೂರುಹಂಪೆಕೇಂದ್ರಾಡಳಿತ ಪ್ರದೇಶಗಳುತೆಲುಗುವಿಕ್ರಮಾರ್ಜುನ ವಿಜಯಭಾರತದ ಪ್ರಧಾನ ಮಂತ್ರಿಗ್ರಹನೈಸರ್ಗಿಕ ಸಂಪನ್ಮೂಲಕೇಶಿರಾಜಭಾರತದ ಬುಡಕಟ್ಟು ಜನಾಂಗಗಳುಕನ್ನಡ ರಂಗಭೂಮಿಭಾರತದಲ್ಲಿನ ಶಿಕ್ಷಣ🡆 More